ಐನೋರ ಹೊಲ

ಕೇರಿಯಲ್ಲಿ ಕೊನೆಯ ಮನೆ ನಮ್ಮದು. ನಮ್ಮ ಮನೆಗೂ ಕೊನೆಯಲ್ಲಿ ಇನ್ನೊಂದು ಮನೆ ಇತ್ತೇನೊ? ಅದರ ಛಾವಣಿ ಕುಸಿದು ಕೇವಲ ಮೂರು ನಾಲ್ಕು ಅಡಿ ಎತ್ತರದ ಮಣ್ಣಿನ ಗೋಡೆ ಮಾತ್ರ ಇದ್ದವು. ನಾನಲ್ಲದೆ ಬೇರೆ ಮನೆಗಳ ಹುಡುಗರು ಆ ಮೋಟುಗೋಡೆಗಳ ಮೇಲೆ ನಿಂತು ಕೆಲಸಕ್ಕೆ ಹೋಗಿರುವ ಅಪ್ಪ ಅವ್ವರನ್ನು ದೂರಕ್ಕೆ ಕಣ್ಣು ಹಾಯಿಸಿ ಹುಡುಕುತ್ತಿದ್ದೆವು. ಕೆಲವು ಸಲ ಮನೆಗೆ ಬೇಗ ಬರಬೇಕೆಂದು ಹೆತ್ತವರಿಗೆ ಕೂಗಿ ಹೇಳುತ್ತಿದ್ದೆವು. ಆ ಕೂಗು ಅವರಿಗೆ ಕೇಳಿಸುತ್ತಿತ್ತೊ ಇಲ್ಲವೊ, ನಾವು ಅವರಿಗೆ ಕಾಣಿಸುತ್ತಿದ್ದೆವೊ ಇಲ್ಲವೊ? ಅದೊಂದೂ ನಮಗೆ ಗೊತ್ತಿರಲಿಲ್ಲ. ಈ ಮೋಟುಗೋಡೆಗಳಿಗೆ ಐನೂರು ಆರುನೂರು ಅಡಿ ಅಂತರದಿಂದ ಐನೋರ ಜಮೀನು ಪ್ರಾರಂಭವಾಗುತ್ತಿತ್ತು. ಆ ಜಮೀನಿನಲ್ಲಿ ಐನೋರ ಚಂದವಾದ ಮನೆ, ದೊಡ್ಡದಾದ ಬಾವಿ, ಪಂಪ್‌ಸೆಟ್ ಮನೆ ಇದ್ದವು. ಈ ಬಾವಿಯಿಂದ ಅವರ ಹೊಲಗದ್ದೆಗಳಿಗೆ ನೀರು ಹರಿಯುತ್ತಿತ್ತು. ನಮ್ಮ ಕೇರಿಯ ಜನಕ್ಕೆ ಕುಡಿಯಲು ನೀರು ಸಿಕ್ಕರೆ ಅದೇ ದೊಡ್ಡ ಸಂಗತಿ. ನಮ್ಮ ಜನ ಸ್ವಲ್ಪ ದೂರದಲ್ಲಿದ್ದ ಹೂವಿನ ತೋಟದ ಪಕ್ಕದ ಬಾವಿಯಿಂದ ನೀರು ತರುತ್ತಿದ್ದರು. ದಲಿತರನ್ನು ಬಿಟ್ಟರೆ ಉಳಿದವರು ಆ ಬಾವಿಯಿಂದ ನೀರು ತರುವುದನ್ನು ನಾನು ನೋಡಲಿಲ್ಲ.

ಎಂದಿನಂತೆ ಹುಡುಗರೆಲ್ಲ ನಮ್ಮ ಮನೆಯ ಪಕ್ಕದ ಮೋಟುಗೋಡೆಯ ಮೇಲೆ ನಿಂತು ಅಪ್ಪ ಅವ್ವಂದಿರನ್ನು ಕೂಗುತ್ತಿದ್ದಾಗ ನಮಗೆ ಒಂದು ನೋಟ ಕಾಣಿಸಿತು. ಐನೋರು ಹೊಲದಲ್ಲಿ ಇಬ್ಬರು ಮನುಷ್ಯರ ಹೆಗಲ ಮೇಲೆ ನೊಗ ಹೂಡಿ ಇನ್ನಿಬ್ಬರು ಹೊಲ ಊಳುತ್ತಿದ್ದರು. ನೊಗ ಹೊತ್ತ ಆ ಇಬ್ಬರು ಮನುಷ್ಯರು ಎತ್ತುಗಳಂತೆ ಮುಂದೆ ಹೋಗುತ್ತಿದ್ದರೆ ಇನ್ನೊಬ್ಬ ಹಿಂದಿನಿಂದ ಚಾಟಿ ತಿರುಗಿಸುತ್ತಾ ಉಳುಮೆ ಮಾಡುತ್ತಿದ್ದ ದೃಶ್ಯ ಮೋಜಿನಂತೆ ಕಂಡರೂ ನೊಗ ಹೊತ್ತಿದ್ದ ಇಬ್ಬರು ವ್ಯಕ್ತಿಗಳಲ್ಲಿ ಒಬ್ಬ ನನ್ನ ಅಪ್ಪ ಎಂದು ಗೊತ್ತಾದ ಕ್ಷಣದಿಂದ ನನ್ನಲ್ಲಿ ವಿಚಿತ್ರವಾದ ಸಂಕಟ ಶುರುವಾಯಿತು. ಹುಡುಗರಿದ್ದ ಜಾಗಕ್ಕೆ ಬಂದ ಕೆಲವು ಹೆಂಗಸರು ‘ಪಾಪ ದ್ಯಾವಣ್ಣನಿಗೆ ಎಂಥ ಕಷ್ಟ ಬಂತು’ ಎಂದದ್ದು ನನ್ನ ಕಿವಿಗೆ ಬಿದ್ದು ಮನಸ್ಸಿನ ನೋವು ಇಮ್ಮಡಿಯಾಯಿತು. ಗದ್ದೆಯಲ್ಲಿ ಎತ್ತಾಗಿ ದುಡಿದ ನಮ್ಮಪ್ಪ ಸಂಜೆ ಮನೆಗೆ ಬಂದಾಗ ಅವ್ವ ಅವನ ಭುಜಕ್ಕೆ ಎಣ್ಣೆ ಕಾಯಿಸಿ ಹಚ್ಚುತ್ತಿದ್ದಳು.

ಅಪ್ಪನಿಗೆ ಮೂರು ಕಡೆ ಚೂರು ಚೂರು ಭೂಮಿಯಿತ್ತು. ಮನೆಗೆ ಹತ್ತಿರದಲ್ಲಿದ್ದ ಹೊಲ ಪಾಲಿಗೆ ಮಾಡುತ್ತಿದ್ದ ಹೊಲ. ಅದರ ಒಡೆಯರು ಮಾಗಡಿ ಪೇಟೆಯಲ್ಲಿದ್ದ ಬ್ರಾಹ್ಮಣರು. ಅವರನ್ನು ನಾವು ಐನೋರು ಎನ್ನುತ್ತಿದ್ದೆವು. ಈ ಹೊಲವನ್ನು ಮಾವಿನ ಮರದ ಹೊಲ ಎನ್ನುತ್ತಿದ್ದರು. ಆ ಹೊಲದಲ್ಲಿ ಬಹುಕಾಲದ ಒಂದು ಮಾವಿನ ಮರವಿತ್ತು. ಈ ಹೊಲಕ್ಕೆ ಹೋಗಬೇಕಾದರೆ ಮನೆಯ ಹಿಂಬಾಗದಲ್ಲಿದ್ದ ದೊಡ್ಡ ಹುಣಸೇ ಮರವನ್ನು ದಾಟಿ ಹೋಗಬೇಕಾಗಿತ್ತು. ಹುಣಸೇ ಮರದ ಕೆಳಗೆ ವಿಶಾಲವಾದ ಅರೆಕಲ್ಲು ಬಂಡೆಯಿತ್ತು. ಹೊಲಕ್ಕೆ ಹೋಗುವಾಗ, ಬರುವಾಗ ಹುಣಸೇ ಮರದ ಬಳಿ ಬಂದ ಕೂಡಲೇ ನಮಗೆ ಭಯವಾಗುತ್ತಿತ್ತು. ಹುಣಸೇ ಮರದಲ್ಲಿ ದೆವ್ವ ಇದೆಯೆಂದೂ, ಅದು ದಾರಿಹೋಕರನ್ನು ಚಪ್ಪಾಳೆ ತಟ್ಟಿ ಕರೆಯುತ್ತದೆ ಎಂದೂ ಜನ ಹೇಳುತ್ತಿದ್ದರು. ಹುಣಸೇಮರದ ಕಡೆಯಿಂದ ಟಪ್‌ಟಪ್ ಎಂಬ ಸದ್ದು ಆಗಾಗ ಕೇಳಿ ಬರುತ್ತಿದ್ದರಿಂದ ಜನ ಈ ದೆವ್ವದ ಬಗ್ಗೆ ಗಾಬರಿಗೊಂಡಿದ್ದರು. ಒಂದು ಸಲ ಸಂಜೆ ನಾನ್ನೊಬ್ಬನೇ ಈ ಮರದ ಕಡೆಯಿಂದ ಮನೆಗೆ ಹೋಗುತ್ತಿದ್ದಾಗ ಚಪ್ಪಾಳೆಯ ಸದ್ದು ಕೇಳಿ ದಂಗುಬಡಿದಂತಾಗಿ ಬಿದ್ದಂಬೀಳ ಓಟ ಹೊಡೆದು ಮನೆ ತಲುಪಿ, ಸುಧಾರಿಸಿಕೊಂಡೆ.

ಬ್ರಾಹ್ಮಣರ ಮನೆ ರುಚಿ ರುಚಿ ತಂಗಳು

ಮಾವಿನ ಮರದ ಹೊಲದ ಒಡೆಯರು ಬಹು ಉದಾರಿಗಳು. ಪೇಟೆಯಲ್ಲಿದ್ದ ಅವರ ಮನೆಗೆ ಹೋಗಿ ಅಪ್ಪ, ಅವ್ವ, ನಾನು ಅವರ ಬಾಗಿಲ ಮುಂದೆ ನಿಂತಾಗ ಅವರು ಮನೆಯಲ್ಲಿ ಉಳಿದಿದ್ದ ಚಿತ್ರಾನ್ನ, ಪೂರಿ ಇತ್ಯಾದಿಗಳನ್ನು ಕೊಡುತ್ತಿದ್ದರು. ಈ ತಿಂಡಿಗಳನ್ನು ನಾನು ಎಂದೂ ತಿಂದಿರಲಿಲ್ಲ. ಅವುಗಳ ರುಚಿಯೋ ರುಚಿ. ನಮ್ಮಲ್ಲಿ ವಿಚಿತ್ರವಾದ ಕೃತಜ್ಞತಾಭಾವ ಮೂಡುತ್ತಿತ್ತು. ಇದಲ್ಲದೆ ಐನೋರು ಹಳೆಯದಾದ, ಸ್ವಲ್ಪ ಹರಿದುಹೋದ ತಮ್ಮ ಮಗನ ಷರಾಯಿ, ಅಂಗಿಯನ್ನು ನನಗೆ ಕೊಡುತ್ತಿದ್ದರು. ಅವರ ಮಗ ನನಗಿಂತ ದೊಡ್ಡವನಾದುದುರಿಂದ ಅವು ನನಗೆ ದೊಗಳೆ ಆಗುತ್ತಿದ್ದವು. ಆದರೂ ಅವುಗಳನ್ನು ಮಡಿಚಿಕೊಂಡು ನಾನು ಧರಿಸುತ್ತಿದ್ದೆ. ಈ ಬಟ್ಟೆಗಳನ್ನು ಧರಿಸುತ್ತಿದ್ದರಿಂದ ನಾನು ನನ್ನ ಓರಗೆಯ ಇತರ ಹುಡುಗರಿಗಿಂತ ವಿಚಿತ್ರವಾಗಿ ಕಾಣುತ್ತಿದ್ದೆ.

ಪೂರಿ, ಚಿತ್ರಾನ್ನದ ಸಂಬಂಧದಲ್ಲಿ ಇನ್ನೊಂದು ಪ್ರಸಂಗ ನನ್ನ ಮನಸ್ಸಿನಲ್ಲಿದೆ. ನನ್ನ ತಂದೆ ಅತಿ ಚಿಕ್ಕದಾದ ಒಂದು ಜಾಗದಲ್ಲಿ, ಹೂವು, ತರಕಾರಿ ಬೆಳೆಯುತ್ತಿದ್ದನು. ಇದನ್ನು ಸಂಜೀವಯ್ಯನ ತೋಟ ಎನ್ನುತ್ತಿದ್ದರು. ಈ ತೋಟ ಕೆರೆಯ ಏರಿಯ ಮೇಲಿತ್ತು. ಇಲ್ಲಿ ಬೆಳೆದ ಹೂವುಗಳನ್ನು ಮಾಗಡಿ ಸಂತೆಯಲ್ಲಿ ಮಾರಿ ನಾನು ಎರಡಾಣೆ ಸಂಪಾದಿಸಿದ್ದೆ. ಆದಿನ ನಾನು ತೋಟದಿಂದ ಬಂದು ಕೆರೆಯ ಏರಿಯ ಮೇಲೆ ನಿಂತಿದ್ದೆ. ಕೆರೆಯ ಅಕ್ಕಪಕ್ಕ ಕೆಲವು ಜನ ಕೆಲಸ ಮಾಡುತ್ತಿದ್ದರು. ಯಾರೋ ಒಂದು ಕೂಗು ಹಾಕಿದ್ದೇ ತಡ ಹೆಂಗಸರು, ಗಂಡಸರು, ಮಕ್ಕಳು ಪಂಪ್‌ಸೆಟ್ ಇದ್ದ ಬ್ರಾಹ್ಮಣರ ಮನೆಯ ಕಡೆ ಶರವೇಗದಲ್ಲಿ ಓಡ ತೊಡಗಿದರು. ನನಗೆ ಗಾಬರಿಯಾದರೂ ಓಡಲಾರದೆ ಕೊಂಚ ತಡವಾಗಿಯೇ ಬ್ರಾಹ್ಮಣರ ಮನೆ ತಲುಪಿದೆ. ಅವರ ಮನೆಯ ಮುಂದೆ ಕೊಂಚ ದೂರದಲ್ಲಿ ದಲಿತರು ಸಾಲುಗಟ್ಟಿ ಕುಳಿತಿದ್ದರು. ಐನೋರ ಮನೆಯವರು ಅವರ ಮನೆಯಲ್ಲಿ ಉಳಿದಿದ್ದ ಪೂರಿ, ಚಿತ್ರಾನ್ನವನ್ನು ಇವರಿಗೆ ಹಂಚುತ್ತಿದ್ದರು. ನಾನು ಕೊನೆಯಲ್ಲಿ ಹೋದದ್ದರಿಂದ ನಿರಾಶೆ ಮೂಡಿತು. ಆದರೆ ಎಲ್ಲರಿಗಿಂತ ಮೊದಲೇ ನನ್ನ ತಂದೆ ತಾಯಿ ತಿಂಡಿಯನ್ನು ಪಡೆದು ಬರುತ್ತಿದ್ದುದನ್ನು ನೋಡಿ ಅಪಾರ ಸಂತೋಷವಾಯಿತು.

ನೊರನೊರ ಹಲ್ಲು ಕಡಿಯುವ ಜಲ್ದಗೆರೆ ಅಮ್ಮ

ಕೇರಿಯಲ್ಲಿ ನಮ್ಮದೇ ಆದ ಒಂದು ಮಾರಿಗುಡಿ ಇತ್ತು. ಪೂಜಾರಿಣಿ ಒಬ್ಬ ಮುದುಕಿ. ಆಕೆ ನನಗೆ ದೂರದಿಂದ ಅಜ್ಜಿಯಾಗಬೇಕಾಗಿತ್ತು. ಮಾರಿಯ ಹಬ್ಬವನ್ನು ಬಹಳ ಆಸ್ಥೆಯಿಂದ ಮಾಡುತ್ತಿದ್ದರು. ಮಾರಮ್ಮ ಅಜ್ಜಿಯ ಮೈದುಂಬಿ ಬರುತ್ತಿದ್ದಳು. ಆಗ ನಮಗೆಲ್ಲಾ ಬಹಳ ಭಯ, ಗಾಬರಿ. ಪೂಜಾರಿಣಿ ನಮ್ಮ ಸಂಬಂಧಿಕಳಾಗಿದ್ದರಿಂದ ನನಗೆ ನನ್ನ ಬಗ್ಗೆಯೇ ಬಹಳ ಅಭಿಮಾನ. ಅಲ್ಲದೆ ದೇವತೆ ನಮಗೇನು ಕೆಟ್ಟದ್ದು ಮಾಡಲಾರಳು ಎಂಬ ಧೈರ್ಯ ಮೂಡುತ್ತಿತ್ತು.

 

ಮೇಗಳ ಹಟ್ಟಿಯಲ್ಲಿ ಇನ್ನೊಂದು ದೇವತೆ ಮೈದುಂಬಿ ಬರುತ್ತಿತ್ತು. ಆ ದೇವತೆಯ ಹೆಸರು ಜಲ್ದಗೆರೆ ಅಮ್ಮ. ನನ್ನ ತಾಯಿಯು ದೇವತೆಯ ಭಕ್ತೆಯರೆಲ್ಲಿ ಒಬ್ಬಳು. ಮೈದುಂಬುವ ಸಮಯಕ್ಕೆ ಮೊದಲೇ ನಾವೆಲ್ಲ ಹೋಗಿ ಕೂರುತ್ತಿದ್ದೆವು. ಆಕೆಯ ಹಾವಭಾವ ಭಯ ಹುಟ್ಟಿಸುತ್ತಿತ್ತು. ಆಕೆ ಒಮ್ಮೆ ನೊರನೊರ ಹಲ್ಲು ಕಡಿದರೆ ಜನ ಗಡಗಡ ನಡುಗಿ ಬೆವೆತು ಹೋಗುತ್ತಿದ್ದರು. ಅವ್ವ ದೇವತೆ ಮೈದುಂಬುವ ಹೆಂಗಸನ್ನು ಅಕ್ಕ ಎಂದು ಕರೆಯುತ್ತಿದ್ದರು. ನಾನು ದೊಡ್ಡಮ್ಮ ಎಂದು ಕರೆಯುತ್ತಿದ್ದೆ. ಆಕೆಯೂ ನಮ್ಮನ್ನು ಅಕ್ಕರೆಯಿಂದ ಕಾಣುತ್ತಿದ್ದಳು. ಆದ್ದರಿಂದ ದೇವರು ಮೈದುಂಬಿದ ಸಂದರ್ಭದಲ್ಲಿ ನನಗೆ ಅಷ್ಟೊಂದು ಭಯವಾಗುತ್ತಿರಲಿಲ್ಲ. ದೇವತೆ ಮೈದುಂಬುತ್ತಿದ್ದ ಹೆಂಗಸು ಬಹಳ ಒಳ್ಳೆಯವಳು. ನೋಡಲು ಮೈಕೈ ತುಂಬಿಕೊಂಡು ಸುಂದರವಾಗಿದ್ದಳು. ಈಕೆಯ ಗಂಡ ಇವಳನ್ನು ತೊರೆದು ಇನ್ನೊಬ್ಬ ಹೆಣ್ಣಿನೊಂದಿಗೆ ಹೊರಟು ಹೋದ ಮೇಲೆ ದೇವತೆ ಮೈದುಂಬುವುದು ಪ್ರಾರಂಭವಾಗಿತ್ತು.

ಕೇರಿಯ ಜನ ನಾನಾ ರೀತಿಯ ಕನಸುಗಳನ್ನು ಕಾಣುತ್ತಿದ್ದರು. ಸತ್ತು ಹೋಗಿರುವ ಅಜ್ಜ ಅಜ್ಜಿಯರು, ತಂದೆತಾಯಂದಿರು, ಸೋದರ ಸೋದರಿಯರು ಇವರ ಕನಸಿನಲ್ಲಿ ಬಂದು ಕಾಡುತ್ತಿದ್ದರು. ಸತ್ತು ಹೋಗಿರುವ ಗೆಳತಿ ಬದುಕಿರುವ ಗೆಳತಿಯ ಕನಸಿನಲ್ಲಿ ಕಾಣಿಸಿಕೊಂಡು ಮರವೊಂದರ ಮೇಲೆ ಕುಳಿತು ನನ್ನ ಜೊತೆ ಬಾ ಎಂದು ಕೈಬೀಸಿ ಕರೆಯುತ್ತಿದ್ದಳು. ಇದರ ಜೊತೆ ಜಡೆಮುನಿ ಸಂಚಾರ ಬೇರೆ. ನಡುರಾತ್ರಿಯಲ್ಲಿ ಮನೆಗೆ ಬರುವ ಗಂಡಸರು ಸರೊತ್ತಿನಲ್ಲಿ ಜಡೆಮುನಿಯನ್ನು ಕಂಡುದಾಗಿಯೂ, ಅವನ ಮುಖವೂ ನೋಡಿದ್ದರೆ ರಕ್ತ ಕಾರಿಕೊಂಡು ಸಾಯಬೇಕಾಗಿತ್ತೆಂದೂ, ಹೇಗೊ ಪಾರಾಗಿ ಬಂದುದಾಗಿ ಹೇಳುತ್ತಿದ್ದರು. ಇದನ್ನು ಕೇಳಿದ ಹೆಂಗಸರು, ಮಕ್ಕಳು ಭೀತರಾಗುತ್ತಿದ್ದರು. ದಾರಿಯಲ್ಲಿ ಒಬ್ಬರೇ ಹೋಗುವಾಗ ಪಿಶಾಚಿಗಳು ಚಪ್ಪಾಳೆ ತಟ್ಟುವುದು, ಕೇಕೆ ಹಾಕುವುದು ಮಾಡುತ್ತಿದ್ದವು. ಧೈರ್ಯವಾಗಿ ಮುಂದೆ ಹೋದರೆ ‘ಈ ಸಲ ಬದುಕಿದೇ ಹೋಗು’ ಎಂದು ಹೇಳುತ್ತಿದ್ದವು. ಜನ ಈ ಸಂಗತಿಗಳನ್ನು ಗಂಭೀರವಾಗಿ ನಂಬಿದ್ದರು. ಈ ತೊಂದರೆಗಳಿಂದ ಪಾರಾಗಲೂ ದೇವರುಗಳನ್ನು ಅವಲಂಬಿಸಿದ್ದರು.

ಈ ಸಂದರ್ಭದಲ್ಲೇ ಊರಿನಲ್ಲಿ ಕೂಗುಮಾರಿಯ ಗಲಾಟೆ ಶುರುವಾಯಿತು. ರಾತ್ರಿ ಹೊತ್ತು ಕೂಗುಮಾರಿ ಮನೆಯ ಮುಂದೆ ನಿಂತು ಮನೆಯೊಳಗಿರುವ ಒಬ್ಬರ ಹೆಸರನ್ನು ಕೂಗುತ್ತಾಳೆ. ಅವರು ಮುಗ್ಧತೆಯಿಂದ ‘ಓ’ ಎಂದರೆ ಸ್ಥಳದಲ್ಲೇ ರಕ್ತಕಾರಿ ಸಾಯುತ್ತಾರೆ ಎಂಬ ವಿಚಾರ ಹಬ್ಬಿತು. ರಾತ್ರಿ ನಮ್ಮ ಮನೆಯ ಹತ್ತಿರ ಕೂಗಿದ ಹಾಗಾಯಿತು. ನನಗೆ ಮೊದಲೇ ವಿಷಯ ಗೊತ್ತಿದ್ದರಿಂದ ನಾನು ‘ಓ’ ಎನ್ನಲಿಲ್ಲ ಎಂದು ಬಹಳ ಜನ ಹೇಳಲು ಶುರು ಮಾಡಿದರು. ಅಂಥವರು ನಮ್ಮ ಕಣ್ಣಿಗೆ ಬಹಳ ಬುದ್ಧಿವಂತರಂತೆ ಕಂಡರು. ಎಲ್ಲರೂ ಮನೆ ಬಾಗಿಲ ಮುಂದೆ ‘ನಾಳೆ ಬಾ’ ಎಂದು ಬರೆಸತೊಡಗಿದರು. ಆಕಾಶದಲ್ಲಿ ಬೆಳಗಿನ ಜಾವ ಧೂಮಕೇತು ಕಾಣಿಸಿಕೊಂಡಿರುವುದೇ ಇದಕ್ಕೆಲ್ಲ ಕಾರಣವೆಂದು ಕೆಲವರು ಹೇಳಿದ್ದರಿಂದ ಜನರೆಲ್ಲ ಬೆಳಗಿನ ಜಾವ ಎದ್ದು ಧೂಮಕೇತುವನ್ನು ನೋಡಿ ಇನ್ನೂ ಭಯಪಟ್ಟರು.

ಈ ಸಂದರ್ಭದಲ್ಲಿ ಊರಿಗೆ ಒಬ್ಬ ಗುರುಗಳು ಬಂದು ಇನ್ನು ಹದಿನಾಲ್ಕು ದಿನಕ್ಕೆ ಭೂಮಿಯ ಮೇಲೆ ಬೆಂಕಿಮಳೆ ಸುರೊಯುವುದೆಂದು, ಪ್ರಳಯವಾಗುವುದೆಂದು ಹೇಳಿ ಹೋದರು. ಇಂಥ ಸಮಯವನ್ನೇ ಕಾಯುತ್ತಿದ್ದ ಕೆಲವು ಕಿಲಾಡಿಗಳು ಜನವೆಲ್ಲ ಬೇಕಾದ ಅಡಿಗೆಯನ್ನು ಮಾಡಿಕೊಂಡು ಊಟಮಾಡಿ ಆಸೆ ತೀರಿಸಿಕೊಳ್ಳಬೇಕೆಂದೂ, ಬಂಧುಬಳಗದವರನ್ನು ಕರೆಸಿ ಕೊನೆಯ ಸಲ ಮುಖ ನೋಡಿಕೊಳ್ಳಬೇಕೆಂದೂ ಸಲಹೆ ಮಾಡಿದರು. ಸಾವಿನ ಭಯದಿಂದ ಬಡವರೂ ಹಬ್ಬ ಮಾಡಿದರು. ಶ್ರೀಮಂತರಂತೂ ಅನ್ನ ಸಂತರ್ಪಣೆ ಏರ್ಪಡಿಸಿದರು. ಇದರ ಪ್ರಯೋಜನವನ್ನು ನಮ್ಮ ಕೇರಿಯ ಜನ ಚೆನ್ನಾಗಿಯೇ ಪಡೆದರು.

ಊರು ಧೂಮಕೇತುವಿನ ಗೊಂದಲದಲ್ಲಿರುವಾಗಲೇ ಮಾಗಡಿಗೆ ಮೈಸೂರು ಮಹಾರಾಜರು ದಯಮಾಡಿಸಿದರು. ಅವರು ಯಾಕೆ ಬಂದರು ಎಂಬುದು ನನಗೆ ನೆನಪಿಲ್ಲ. ಆಗಲೂ ಬಹಳ ಜನಕ್ಕೆ ಗೊತ್ತಿರಲಿಲ್ಲ. ಅವರನ್ನು ನೋಡಲು ದೊಡ್ಡ ಜಾತ್ರೆಯೇ ನೆರೆಯಿತು. ನಮ್ಮಂಥ ಪುಟ್ಟ ಹುಡುಗರೆಲ್ಲ ತಂದೆ ತಾಯಂದಿರ ಹೆಗಲೇರಿ ಮಹಾರಾಜರನ್ನು ಬಹುದೂರದಿಂದ ಮಂಕಾಗಿ ನೋಡಿದೆವು.

ತಂದೆ ತಾಯಿ ಇಬ್ಬರೂ ಕೆಲಸಕ್ಕೆ ಹೋದಾಗ ನಾನೊಬ್ಬನೇ ಮನೆ ಕಾಯುತ್ತಿದ್ದೆ. ಸಂಜೆ ಆದ ಕೂಡಲೇ ಕೋಳಿಗಳನ್ನು ಹುಡುಕಿ ಕಿವುಚುತ್ತಿದ್ದೆ. ಪುಟ್ಟದಾದ ಸೀಮೆಎಣ್ಣೆ ದೀಪ ಹಚ್ಚಿಡುತ್ತಿದ್ದೆ. ತಂದೆ ತಾಯಿ ಬಂದವರೇ ಅಡುಗೆಗೆ ಸಿದ್ಧತೆ ಮಾಡುತ್ತಿದ್ದರು. ಕೆಲ ದಿವಸ ಗೆಣಸನ್ನು ಬೇಯಿಸಿ ತಿನ್ನುತ್ತಿದ್ದೆವು. ಕೆಲವು ದಿನಗಳು ಕಡಲೆ ಪುರಿ ತಿಂದು ನೀರು ಕುಡಿದು ಮಲಗುತ್ತಿದ್ದೆವು. ಚೂರು ಹೊಲದಲ್ಲಿ ಬೆಳೆದದ್ದು ತಂದೆಯ ಮೇಲಿದ್ದ ಸಾಲದ ಬಡ್ಡಿಗೆ ಸಾಕಾಗುತ್ತಿತ್ತು. ಕೂಲಿಯ ಹಣ ಕುಟುಂಬದ ನಿರ್ವಹಣೆಗೆ ಸಾಕಾಗುತ್ತಿರಲಿಲ್ಲ. ಕೆಲವು ದಿನ ನನ್ನ ತಾಯಿ ಸಾವನ ದುರ್ಗಕ್ಕೆ ಕಾಡಿನಲ್ಲಿ ಸೌದೆ ತರಲು ಹೋಗುತ್ತಿದ್ದಳು. ಸಂತೆಯಲ್ಲಿ ಈ ಸೌದೆ ಹೊರೆಯನ್ನು ಮಾರುತ್ತಿದ್ದಳು. ಸೌದೆ ಹೊರೆಯನ್ನು ಮನೆಯ ಮುಂದೆ ಎಸೆದವಳೇ ಒಂದಕ್ಕೆ ಹೋಗಬೇಕೆಂದು ಓಡುತ್ತಿದ್ದಳು. ನಂತರ ಹೊರೆಯೊಳಗಿದ್ದ ಕಬ್ಬಿನ ಜಲ್ಲೆಯನ್ನು ತೆಗೆದು ನಮಗೆ ಕೊಡುತ್ತಿದ್ದಳು. ಸಾವನದುರ್ಗದಿಂದ ಕೆಲವೇ ಮೈಲು ದೂರದಲ್ಲಿರುವ ಮಂಚನಬೆಲೆಯೇ ನನ್ನ ತಾಯಿಯಿ ತೌರು. ಬೆಟ್ಟ ಹತ್ತಿ ಊರನ್ನು ನೋಡಿದೆನೆಂದೂ, ನಿಮ್ಮ ಅಜ್ಜಿ ತಾತನ ನೆನಪಾಯಿತೆಂದೂ ಹೇಳಿ ಕಣ್ಣೀರು ಒರಿಸಿಕೊಳ್ಳುತ್ತಿದ್ದಳು. ಆಗ ಕೊಂಚ ಕಾಲ ಮಂಚನಬೆಲೆಯ ಮೋಹಕ್ಕೆ ನಾನು ಒಳಗಾಗುತ್ತಿದ್ದೆ.

ಗಂಧರ್ವ ಲೋಕದ ಬಂಜಾರರು

ನಮ್ಮ ಹೊಲದ ಒಂದು ಅಂಚಿನಲ್ಲಿ ಕಾಲುದಾರಿಯಿತ್ತು. ಆ ದಾರಿಯಲ್ಲಿ ಬಂಜಾರ ಮಹಿಳೆಯರು ಕಾಡಿನಿಂದ ಸೌದೆ ಹೊತ್ತು ಸಾಗುತ್ತಿದ್ದರು. ಕಪ್ಪಗಿದ್ದ ಹೊಲೆಯರ ಪಾಲಿಗೆ ಅವರೇ ವಿದೇಶೀ ಮಹಿಳೆಯರು. ನಮ್ಮ ಕೇರಿಯ ಕೆಲವು ತುಂಟ ಹುಡುಗರು ದೂರದಿಂದ ಅವರನ್ನು ಕೆಣಕುತ್ತಿದ್ದರು. ಆ ಮಹಿಳೆಯರು ಇವರನ್ನು ಬಯ್ಯುತ್ತಿದ್ದರು. ಪುಟ್ಟನರಸ ಎಂಬ ಯುವಕ ತಾನೊಮ್ಮೆ ಅವರನ್ನು ಕೆಣಕಿದುದಾಗಿಯೂ, ಹೊರೆ ಹೊತ್ತು ಹೋಗುತ್ತಿದ್ದ ಒಬ್ಬ ಬಂಜಾರ ಮುದುಕಿ ಹೊರೆಯನ್ನು ಹೊಲಕ್ಕೆಸೆದು ಅವಳ ಸೀರೆಯನ್ನು ಎತ್ತಿ ತನ್ನ ಮೇಲೆ ಕವುಚು ಹಾಕಿದಳೆಂದೂ, ತಾನು ಬಹು ಪ್ರಯಾಸದಿಂದ ಪಾರಾಗಿ ಬಂದೆನೆಂದೂ ಜಂಭದಿಂದ ಹೇಳಿಕೊಳ್ಳುತ್ತಿದ್ದ. ಇದನ್ನು ಕಂಡವರಿಲ್ಲ. ಆದರೆ ಕೇಳಿದವರೆಲ್ಲ ನಂಬಿದ್ದರು. ಇದರಿಂದ ಉಳಿದ ಪುರುಷರಲ್ಲಿ ಅವನ ಬಗ್ಗೆ ವಿಚಿತ್ರವಾದ ಅಸೂಯೆ ಮೂಡಿತ್ತು.

ನಮ್ಮ ಎದುರಿಗಿದ್ದ ಸಂಸಾರ ನಮ್ಮಂತೆ ಬಡವರದು. ಗಂಡ ಕುಳ್ಳಗೆ ಸಣ್ಣಗಿದ್ದ. ಸದಾ ಬೀಡಿ ಸೇದುತ್ತಿದ್ದ. ಅವನ ಹೆಂಡತಿ ಭಾರಿ ಗಟ್ಟಿಮುಟ್ಟಾದ ಹೆಂಗಸು. ದಿನವೂ ಅವನನ್ನು ಹೊಡೆಯುತ್ತಿದ್ದಳು. ಗಂಡ ಒಂದು ದಿನವೂ ತಿರುಗೇಟು ಕೊಟ್ಟವನಲ್ಲ. ಎದುರು ನಿಂತು ಮಾತನಾಡಿದವನೂ ಅಲ್ಲ. ಈತನ ಜೀವದ ಗೆಳೆಯ ಮೇಗಳ ಹಟ್ಟಿಯಲ್ಲಿದ್ದ. ಇಬ್ಬರೂ ಸದಾ ಜೊತೆಯಲ್ಲಿರುತ್ತಿದ್ದರು. ಇವರ ಗೆಳೆತನ ಯಾವ ಮಟ್ಟಕ್ಕೆ ಹೋಯಿತೆಂದರೆ ಇಬ್ಬರೂ ಪೇಟೆಯ ಫೋಟೋ ಸ್ಟುಡಿಯೋಗೆ ಹೋಗಿ ಜೊತೆಯಾಗಿ ನಿಂತು ಫೋಟೋ ತೆಗೆಸಿಕೊಂಡರು. ಇದನ್ನು ಮನೆಯಲ್ಲಿ ನೇತು ಹಾಕಿದರು. ಈ ಫೋಟೋವನ್ನು ಜನ ಚಕಿತರಾಗಿ ನೋಡುತ್ತಿದ್ದರು. ಆದರೆ ಅವರಲ್ಲಿ ಇದ್ದಕ್ಕಿದಂತೆ ಜಗಳವಾಗಿ ಅವರ ಸ್ನೇಹ ಕಡಿದು ಹೋಯಿತು. ಅಂದೇ ಇಬ್ಬರು ತಮ್ಮ ಮನೆಗಳಲ್ಲಿದ್ದ ಫೋಟೋದ ಗಾಜು ತೆಗೆದು ಒಂದಾಗಿದ್ದ ಇಬ್ಬರ ಭಾವಚಿತ್ರವನ್ನು ಕತ್ತರಿಸಿ ಅರ್ಧಕ್ಕೆ ಮಾತ್ರ ಗಾಜು ಹಾಕಿಸಿಕೊಂಡರು. ಅಂದಿನಿಂದ ಅವರ ಮನೆಯಲ್ಲಿ ಪೂರ್ಣ ಫ್ರೇಮಿದ್ದರೂ ಅರ್ಧ ಫೋಟೋ ವಿಲಕ್ಷಣವಾಗಿತ್ತು. ಒಡೆದ ಸ್ನೇಹದ ಸಂಕೇತವಾಗಿತ್ತು.

ಆಗ ಎಲ್ಲೆಲ್ಲೂ ಬರಗಾಲ ಬಂದು ಅನ್ನಕ್ಕಾಗಿ ಜನ ಕಣ್ಣು ಬಾಯಿ ಬಿಡುವಂತಾಯಿತು. ಮಳೆ ಬರಲೆಂದು ಜನ ಅಲ್ಲಲ್ಲಿ ಪರ ಮಾಡತೊಡಗಿದರು. ಪರಕ್ಕೆ ಹೋದರೆ ಹೊಲೆಯರನ್ನು ಒಂದು ಮೂಲೆಯಲ್ಲಿ ಕೂರಿಸುತ್ತಿದ್ದರು. ಮೇಲು ಜಾತಿಯ ಪಂಕ್ತಿಗಳ ಊಟ ಆದ ಮೇಲೆ ನಮ್ಮ ಕಡೆ ಗಮನ ಹರಿಯುತ್ತಿತ್ತು. ಅನ್ನ ಸಿಕ್ಕಿದರೆ ಸಾಕೆಂಬ ಭಾವನೆ ಇದ್ದುದರಿಂದ ಈ ತಾರತಮ್ಮವನ್ನು ನಾನು ಆಗ ತಲೆಗೆ ಹಚ್ಚಿಕೊಳ್ಳುವುದು ಸಾಧ್ಯವಿರಲಿಲ್ಲ. ಅಂದಿಗಾಗಲೇ ನನ್ನ ಇಬ್ಬರು ತಂಗಿಯರು ಶಿವಲಿಂಗಮ್ಮ, ಪುಟ್ಟಮ್ಮ ಹುಟ್ಟಿದ್ದರು. ಮೊದಲೇ ಸಾಲಗಾರನಾಗಿದ್ದ ತಂದೆಗೆ ನಮ್ಮನ್ನು ಸಲಹುವುದು ಕಷ್ಟವಾಯಿತು. ದೂರ ದೂರದ ಊರುಗಳಿಗೆ ಕೆಲಸ ಹುಡುಕುತ್ತ ಹೋಗಿ ಮೂರು ತಿಂಗಳಿಗೊಮ್ಮೆ, ಆರು ತಿಂಗಳಿಗೊಮ್ಮೆ ಮನೆಗೆ ಬರುತ್ತಿದ್ದನು. ಆಗ ನಾವು ರಾತ್ರಿ ಹೊತ್ತು ಭಯದಿಂದ ಮನೆಯಲ್ಲಿ ಮಲಗುತ್ತಿರಲಿಲ್ಲ. ಹೆಚ್ಚು ಸಮಯ ಮಾಗಡಮ್ಮನವರ ಮನೆಯಲ್ಲಿ ಮಲಗುತ್ತಿದ್ದೆವು. ನಮ್ಮ ತಾಯಿ ಅವರನ್ನು ಅಕ್ಕ ಎನ್ನುತ್ತಿದ್ದರಿಂದ ನಾವು ದೊಡ್ಡಮ್ಮ ಎನ್ನುತ್ತಿದ್ದೆವು. ಅವರ ಮಗ ರಾತ್ರಿ ಹೊತ್ತು ಮೆದೆ ಕಾಯಲು ಹೋಗುತ್ತಿದ್ದರು. ನನ್ನನ್ನು ಜೊತೆ ಕರೆದುಕೊಂಡು ಹೋಗುತ್ತಿದ್ದರು. ಮೆದೆಯ ಹುಲ್ಲನ್ನು ಹಿರಿದು ಅದನ್ನು ಹಾಸಿ, ಅದನ್ನೇ ಹೊದ್ದು ಮಲಗುವುದೇ ಒಂದು ಆನಂದವಾಗಿತ್ತು. ಕೆಲವು ಸಲ ಮೆದೆಯ ನಡುವೆ ಸ್ವಲ್ಪ ಹುಲ್ಲನ್ನು ಹಿರಿದು ಒಳತೂರಿ ಮಲಗುತ್ತಿದ್ದೆವು.

ಒಂದು ದಿನ ತಾಯಿ ಕೋಣೆಯಲ್ಲಿ ರೊಟ್ಟಿ ಸುಡುತ್ತಿದ್ದಳು. ಮೂರು ಜನ ಮಕ್ಕಳೂ ಒಲೆಯ ಮುಂದೆ ಕುಳಿತು ಅದನ್ನು ನೋಡುತ್ತಿದ್ದೆವು. ಒಲೆಯ ಮೇಲೆ ಅಟ್ಟದಂತೆ ಮಾಡಿ ಪೆಟ್ಟಿಗೆ ಇಟ್ಟಿದ್ದೆವು. ಆ ಪೆಟ್ಟಿಗೆ ಮೇಲೆ ಎರಡು ನಾಗರ ಹಾವುಗಳು ಜಗಳವಾಡುತ್ತಿದ್ದು, ಇದ್ದಕ್ಕಿದಂತೆ ರೊಟ್ಟಿಯ ಮೇಲೆ ಬಿದ್ದುಬಿಟ್ಟವು. ಅವು ಅರಿದಾಡುತ್ತಿದ್ದಂತೆ ನಾವೆಲ್ಲ ಪರಾರಿಯಾಗಿ ಬದುಕಿದ್ದೇ ಹೆಚ್ಚು. ಬೀದಿಯ ಜನವೆಲ್ಲ ಸೇರಿ ಹಾವುಗಳನ್ನು ಹುಡುಕಿದರೂ ಸಿಗಲಿಲ್ಲ. ಅಂದಿನಿಂದ ಮನೆಯೊಳಗೆ ಹಗಲು ಹೊತ್ತು ಇರುವುದಕ್ಕೂ ಭಯವಾಗುತ್ತಿತ್ತು.

ಕೆಲವು ದಿನಗಳ ನಂತರ ತಂದೆ ಮನೆಗೆ ಬಂದಾಗ ಸಹಜವಾಗಿಯೇ ನಮಗೆ ಸಂತೋಷವಾಯಿತು. ಆದರೆ ನಮ್ಮ ಪಕ್ಕದ ಮನೆಯಲ್ಲೇ ಇದ್ದ ನಮ್ಮ ದೊಡ್ಡಪ್ಪ, ನಮ್ಮ ಅಜ್ಜಿ ಕಣ್ಣೀರು ಹಾಕುತ್ತಿದ್ದರು. ಅವರ ಮುಂದೆ ನಮ್ಮ ತಾಯಿಯೂ ಗಾಬರಿಯಾಗಿ ಅಳುತ್ತಿದ್ದಳು. ತಂದೆ ಮಂಕಾಗಿ ಕುಳಿತಿದ್ದನು. ಈ ವ್ಯಥೆಗೆ ಕಾರಣ ಸರಳವೂ, ವಿಚಿತ್ರವೂ ಆಗಿತ್ತು. ಯಾವುದೋ ಊರಿನಲ್ಲಿ ತಂದೆ ಕೂಲಿ ಕೆಲಸ ಮಾಡುತ್ತಿದ್ದಾಗ ಅವೆರಡು ಗುಂಪಿನ ನಡುವೆ ಹೊಡೆದಾಟವಾಗಿತ್ತು. ಪೊಲೀಸರು ಪ್ರವೇಶಿಸಿ ಕೆಲವರನ್ನು ಬಂಧಿಸಿದರು. ಆ ಸಂದರ್ಭದಲ್ಲಿ ನಮ್ಮ ತಂದೆ ಅಲ್ಲಿದ್ದುದರಿಂದ ಆತನನ್ನು ಸಾಕ್ಷಿ ಎಂದು ಗುರುತಿಸಿದ್ದರು. ಇದನ್ನು ತಂದೆಯ ಬಾಯಿಂದ ಕೇಳಿದ್ದೇ ಉಳಿದವರೆಲ್ಲ ಗಾಬರಿಗೊಂಡು ದುಃಖಿಸುತ್ತಿದ್ದರು. “ನಾವೆಂದೂ ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತಿದೋರಲ್ಲ. ನಿಮ್ಮಪ್ಪ ಈಗ ಹೋಗ್ತಾನಲ್ಲಪ್ಪಾ” ಎಂದು ದೊಡ್ಡಪ್ಪ ಹೇಳಿದಾಗ ನನಗೂ ಅಳು ಉಕ್ಕಿ ಬಂತು.

ಮಂಟೇಸ್ವಾಮಿಯ ಪರಂಪರೆ

ನಮಗೆ ಒಬ್ಬ ದೇವರಿದ್ದಾನೆ, ನಮಗೊಬ್ಬ ಗುರುಗಳಿದ್ದಾರೆ ಎಂದು ತಿಳಿದದ್ದು ಆಗಲೇ. ಮನೆಯಿಂದ ಮೇಲಕ್ಕಿದ್ದ ಇಪ್ಪೆ ಮರದ ಕೆಳಗೆ ಗುರುಗಳು ಬಂದು ನಿಂತಿದ್ದಾರೆ ಎಂದು ದೊಡ್ಡಪ್ಪ, ಅಜ್ಜಿ, ತಂದೆ, ತಾಯಿ ಎಲ್ಲರೂ ಹೋಗಿ ಅವರಿಗೆ ನಮಸ್ಕರಿಸಿ, ಕಾಣಿಕೆ ಅರ್ಪಿಸಿದರು. ಅವರು ಮಂಟೇಸ್ವಾಮಿಯ ಶಿಷ್ಯ ಪರಂಪರೆ. ಮಂಟೇಸ್ವಾಮಿ ನಮ್ಮ ಮನೆಯ ದೇವರು. ನಾವೆಲ್ಲ ಆ ದೇವರ ಒಕ್ಕಲು. ಈ ಗುರುಗಳು ಬಂದರೆ ಸಾಕ್ಷಾತ್ ಮಂಟೇಸ್ವಾಮಿಯೇ ಬಂದಂತೆ. ಮಾಗಡಿ ಸುತ್ತಮುತ್ತ ಈ ಸಂಪ್ರದಾಯ ವಿರಳ. ಇದು ಮಂಡ್ಯ ಮೈಸೂರು ಜಿಲ್ಲೆಗಳಲ್ಲಿ ಹೆಚ್ಚು. ನಮ್ಮ ಪೂರ್ವಿಕರು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಆತಗೂರಿನಿಂದ ಇಲ್ಲಿಗೆ ವಲಸೆ ಬಂದವರಂತೆ. ಈ ಗುರುಗಳು ಆ ಭಾಗದವರೇ. ಇಷ್ಟೊಂದು ದೂರ ಬಂದದ್ದು ನಮ್ಮ ಭಾಗ್ಯ. ನಮ್ಮ ದೇವರು ಹೊಲೆಯವರನೆಂದು ಹೇಳುತ್ತಾರೆ. ಆದರೆ ಈ ಗುರುಗಳು ಸವರ್ಣೀಯರು. ಆದ್ದರಿಂದಲೋ ಏನೋ ಹೊಲೆಯರ ಕೇರಿಗೆ ಹೆಜ್ಜೆ ಇಡಲಿಲ್ಲ. ಸದ್ಯ ಇಪ್ಪೆ ಮರದ ಕೆಳಕ್ಕಾದರೂ ಬಂದರಲ್ಲ. ಆ ದಿನವೆಲ್ಲ ನಮಗೆ ಪುಣ್ಯ ಲಭಿಸಿದ ಸಂತೋಷ. ನಮಗೆ ಆಶೀರ್ವಾದ ಮಾಡಲು ಒಬ್ಬ ಗುರುಗಳಿದ್ದಾರೆ ಎಂಬ ಹೆಮ್ಮೆ. ನಮ್ಮಲ್ಲಿ ಯಾರಾದರೂ ತಪ್ಪು ಮಾಡಿದ ಆರೋಪಕ್ಕೆ ಒಳಗಾದರೆ ‘ಮಂಟ್ಕೇಸ್ವಾಮಿ ಆಣೆ ನಾನು ಅದನ್ನು ಮಾಡಿಲ್ಲ’ ಎಂದು ಪ್ರಮಾಣ ಮಾಡುತ್ತಿದ್ದರು. ಇದರ ಅರ್ಥ ಈಗ ಮನವರಿಕೆಯಾಯಿತು.

ದಲಿತರೇ ಇದ್ದ ಮೇಗಳ ಹಟ್ಟಿಯಲ್ಲಿ ಒಂದು ದಿನ ಬೆಳಿಗ್ಗೆ ಸಂಭ್ರಮವೋ ಸಂಭ್ರಮ. ಚಪ್ಪರ ಹಾಕಿ ಕೆಲವು ಕುರ್ಚಿಗಳನ್ನು ತಂದು ಇಟ್ಟಿದ್ದರು. ಬೀದಿಗಳಲ್ಲಿ ತೋರಣ ಕಟ್ಟಿದ್ದರು. ಮನೆಮನೆಗೂ ವಂತಿಕೆ ಎತ್ತಿ ಒಂದು ಸಮಾರಂಭವನ್ನು ಮಾಡಿದ್ದರು. ಎಲ್ಲರ ಬಾಯಲ್ಲೂ “ಇಲ್ಲಿಗೆ ಈವೊತ್ತು ಮಂತ್ರಿಗಳು ಬರುತ್ತಾರೆ” ಎಂಬ ಮಾತು. ಹುಡುಗರೆಲ್ಲ ಕುತೂಹಲದಿಂದ ಎಲ್ಲೂ ಹೋಗದೆ ಅಲ್ಲೇ ಸುತ್ತಾಡುತ್ತಿದ್ದವು. ನಮಗೆಲ್ಲ ಮಂತ್ರಿ ಅಂದರೆ ಹೇಗಿರುತ್ತಾರೆ ನೋಡಬೇಕೆಂಬ ಆಸೆ. ದೊಡ್ಡವರಿಗೋ ಮಂತ್ರಿಗಳು ಇನ್ನೇನು ಬರುತ್ತಾರೆ ಎಂಬ ಆತಂಕ. ಹಟ್ಟಿಯ ಹೆಂಗಸರು ಒಂದು ಕಡೆ ಗುಂಪಾಗಿ ನಿಂತು ಆಶ್ಚರ್ಯದಿಂದ ನೋಡುತ್ತಿದ್ದಾರೆ. ಹಿರಿಯರ ಕೈಯಲ್ಲಿ ಸುಮಾರಾದ ಅಳತೆಯ ಹಾರಗಳನ್ನು ಹಿಡಿದು ಭಕ್ತಿಯಿಂದ ನಿಂತಿದ್ದರು. ಹೊತ್ತು ನೆತ್ತಿಗೇರಿದರೂ ಮಂತ್ರಿ ಬರಲಿಲ್ಲ. ದನಕರುಗಳು ಮನೆಗೆ ಬಂದರೂ ಮಂತ್ರಿಗಳು ಬರಲಿಲ್ಲ. ಹೊತ್ತು ಮುಳುಗಿ ಕತ್ತಲಾಗಿ ಜನ ಕಂಗಾಲಾದರು. ಮನೆ ಮನೆಗೂ ದುಡ್ಡು ಎತ್ತಿ ಮಾಡಿದ ಸಮಾರಂಭ ಶುರುವಾಗಲೇ ಇಲ್ಲ. ತಂದಿದ್ದ ಬಾಡಿಗೆ ಕುರ್ಚಿಗಳನ್ನು ಹಿಂದಕ್ಕೆ ಕಳುಹಿಸಿದರು. ಆ ನಿಜಲಿಂಗಪ್ಪನವರ ಸರ್ಕಾರದಲ್ಲಿದ್ದ ಕೆ. ಪ್ರಭಾಕರ್ ಎಂಬ ದಲಿತರೇ ಆ ಮಂತ್ರಿ ಎಂದು ನನಗೆ ಮುಸುಕಾಗಿ ನೆನಪು.

ನಮ್ಮ ಕೇರಿಯನ್ನು ದಾಟುತ್ತಿದ್ದಂತೆ ಸರ್ಕಾರದ ಟಾರು ರಸ್ತೆ. ಈ ರಸ್ತೆ ಊರು ಮತ್ತು ಹೊಲಗೇರಿಯನ್ನು ವಿಭಾಗಿಸುವ ಗೆರೆ. ಆ ಕಡೆ ಸವರ್ಣೀಯರ ಮನೆಗಳು. ಈ ರಸ್ತೆಯಲ್ಲಿ ಬಸ್ಸುಗಳು ಓಡಾಡುತ್ತಿದ್ದವು. ಅವುಗಳ ಬಣ್ಣ, ಓಟ, ಬಸ್ಸಿನ ಕಿಟಕಿಯಲ್ಲಿ ಕಾಣುವ ಜನ, ಪೋಂ ಪೋಂ ಸದ್ದು ಇವೆಲ್ಲ ನಮಗೆ ಆಕರ್ಷಕವಾಗಿದ್ದವು. ಬಹಳ ಹೊತ್ತು ಹಾಗೇ ನಿಂತು ಬಸ್ಸು ನೋಡುವುದೇ ಒಂದು ಚಂದ. ಒಮ್ಮೆ ಹೀಗೆ ನಿಂತ ಬಸ್ಸನ್ನು ಹೊಲಗೇರಿಯ ಹುಡುಗರು ಆ ಕಡೆಯಿಂದ ನೋಡುತ್ತಿದ್ದರೆ, ಸವರ್ಣೀಯರ ಹುಡುಗರು ಈ ಕಡೆಯಿಂದ ನೋಡುತ್ತಿದ್ದರು. ಈ ಹುಡುಗರಿಗೆ ನಮಗಿಂತ ಹುಮ್ಮಸ್ಸು ಜಾಸ್ತಿ. ನಿಂತ ಬಸ್ಸಿನ ಹಿಂಭಾಗದ ಕಂಬಿ ಏಣಿಯನ್ನು ಅವರು ಹತ್ತುತ್ತಿದ್ದರು. ಆ ದಿನ ಬಸ್ಸು ಇದ್ದಕ್ಕಿದ್ದಂತೆ ಹಿಂದಕ್ಕೆ ಚಲಿಸಿತು. ಹತ್ತಿದ್ದ ಹುಡುಗರು ದೊಪ್ಪನೆ ಕೆಳಕ್ಕೆ ಬಿದ್ದು, ಒಂದು ಹುಡುಗಿಯ ದೇಹದ ಮೇಲೆ ಬಸ್ಸು ಹರಿಯಿತು. ಅವಳು ಅಪ್ಪಚ್ಚಿಯ್ಕಾಗ್ಕಿದ್ದಳು. ನಮ್ಮ ಓರೆಗೆಯ ಆ ಹುಡುಗಿಯನ್ನು ಮೊದಲು ನಾನು ನೋಡಿದ್ದೆ. ಅವಳು ತೆಳ್ಳಗೆ ಬೆಳ್ಳಗಿದ್ದಳು. ಅವಳ ಲನಲವಿಕೆಯೇ ಅವಳನ್ನು ಬಲಿ ತೆಗೆದುಕೊಂಡಿತ್ತು. ರಸ್ತೆ ರಕ್ತಮಯವಾಗಿತ್ತು. ಕ್ಷಣಾರ್ಧದಲ್ಲಿ ಜನ ಜಯಾಯಿಸಿದರು. ಹುಡುಗಿಯ ಸಂಬಂಧಿಕರು ಕೈಗೆ ಸಿಕ್ಕಿದ ಮಚ್ಚು, ದೊಣ್ಣೆ, ಸೌದೆ ಹೊಳಕೆಗಳೊಂದಿಗೆ ಡ್ರೈವರ್, ಕಂಡಕ್ಟರ್‌ಗಳನ್ನು ಹುಡುಕಾಡುತ್ತಿದ್ದರು. ಡ್ರೈವರ್ ಹೇಗೋ ಪರಾರಿಯಾಗಿದ್ದ. ಕಂಡಕ್ಟರ್‌ನನ್ನು ಹಿಡಿದ ಜನ ಹಿಗ್ಗಾ ಮುಗ್ಗಾ ಚಚ್ಚಿದ್ದರು. ಹುಡುಗಿಯ ಬಂಧುಗಳ ಚೀರಾಟದೊಂದಿಗೆ ಕಂಡಕ್ಟರನ ಚೀರಾಟವೂ ಸೇರಿ ಸನ್ನಿವೇಶ ದಾರುಣಮಯವಾಯಿತು. ಜನ ಕಂಡಕ್ಟರ್ ನನ್ನು ಇತ್ತ ಕಡೆಯಿಂದ ಓಡಿಸಿಕೊಂಡು ಹೋಗಿ ಹೊಡೆಯುತ್ತಿದ್ದರೆ, ಇನ್ನೊಮ್ಮೆ ಅತ್ತ ಕಡೆಯಿಂದ ಓಡಿಸಿಕೊಂಡು ಬಂದು ಹೊಡೆಯುತ್ತಿದ್ದರು. ಅವನು ಕ್ಯಾಷ್‌ಬ್ಯಾಗನ್ನು ಜೀವಕ್ಕಿಂತ ಹೆಚ್ಚು ಎನ್ನುವಂತೆ ಎದೆಗವಚಿಕೊಂಡು ಕೆಳಕ್ಕೆ ಬಿದ್ದ ದೃಶ್ಯ ಅಯ್ಯೊ ಎನ್ನುವಂತಿತ್ತು. ‘ಕಂಡಕ್ಟರ್ ನೂ ಸತ್ತು ಹೋದ’ ಎಂದು ಜನ ಮಾತನಾಡಿಕೊಳ್ಳುತ್ತಿದ್ದರು. ಜನಜಂಗುಳಿಯಲ್ಲಿ ಏನೂ ಕಾಣದೆ ಭೀತನಾಗಿ ಮನೆ ಸೇರಿದ ನನಗೆ ಈ ದುರ್ಘಟನೆಯ ಅಂತ್ಯ ಹೇಗಾಯಿತೆಂದು ಗೊತ್ತಾಗಲೇ ಇಲ್ಲ. ಅಂದಿನಿಂದ ಬಸ್ಸುಗಳೆಂದರೆ ಮನಸ್ಸಿನಲ್ಲಿ ಭಯ ಮನೆಮಾಡಿತು.

ನನ್ನ ಕೈಯಲ್ಲಿ ಈದ ಕುರಿ

ನಮ್ಮ ದೊಡ್ಡಪ್ಪನ ಇಬ್ಬರು ಮಕ್ಕಳು-ನನ್ನ ಅಕ್ಕಂದಿರು-ಶಾಲೆಗೆ ಹೋಗುತ್ತಿರಲಿಲ್ಲ. ಅವರು ದನ ಕುರಿ ಮೇಯಿಸುತ್ತಿದ್ದರು. ಅವರ ಜೊತೆ ನಾನು ನಮ್ಮ ದನ ಕುರಿಗಳನ್ನು ಕಾಯಲು ಹೋಗುತ್ತಿದ್ದೆ. ಒಂದು ಕುರಿಯನ್ನು ಕಂಡರೆ ನನಗೆ ಪ್ರಾಣ. ಅದೂ ನನ್ನನ್ನು ಹಚ್ಚಿಕೊಂಡಿತ್ತು. ಫಲಕ್ಕೆ ಬಂದಿದ್ದ ಆ ಕುರಿಯನ್ನು ಒಂದು ಸಲ ಹಳ್ಳದಲ್ಲಿ ಮೇಯಿಸುತ್ತಿದ್ದೆ. ನನ್ನ ಆಶ್ಚರ್ಯಕ್ಕೆ ಅದು ಅಲ್ಲೇ ಈದುಬಿಟ್ಟಿತು. ಹೊಸ ಕುರಿಮರಿ ಹುಟ್ಟಿ ಕುಣಿದಾಡಲು ಶುರುಮಾಡಿತು. ನಾನು ಕೂಡಲೇ ದೂರ ಇದ್ದವರನ್ನು ಕೂಗಿದೆ. ಮರಿಯನ್ನು ತಾಯಿಯ ಕೆಚ್ಚಲ ಹಾಲು ಕುಡಿಯುವಂತೆ ಮಾಡಿದೆವು. ಮರಿಗೆ ತೊಂದರೆ ಮಾಡದಿರಲೆಂದು ಕುರಿಯ ಬಾಯಿಗೆ ನನ್ನ ಬಲಗೈಯ ಬೆರಳಿಟ್ಟು ಸಮಾಧಾನ ಮಾಡುತ್ತಿದ್ದೆ. ಕುರಿಗೆ ಏನಾಯಿತೋ ಆ ಬೆರಳನ್ನು ಕಚ್ಚಿಬಿಟ್ಟಿತು. ರಕ್ತ ಸುರಿಯಲಾರಂಭಿಸಿತು. ಗಿಡದ ಸೊಪ್ಪು ಕಟ್ಟಿ ಅದನ್ನು ವಾಸಿಮಾಡಿಕೊಂಡೆ. ಈಗಲೂ ಬೆರಳಲ್ಲಿ ಆ ಮಚ್ಚೆ ಎದ್ದು ಕಾಣುವಂತಿದೆ.

ನನ್ನ ತಂದೆಗೆ ನನ್ನನ್ನು ಕಂಡರೆ ಬಹಳ ಪ್ರೀತಿ. ಕೆಲವು ಸಲ ಹೊರಗೆ ಹೋದಾಗ ನನ್ನನ್ನೂ ಕರೆದುಕೊಂಡು ಹೋಗುತ್ತಿದ್ದರು. ತಂದೆಗೆ ಬೇರೆ ಬೇರೆ ಜಾತಿಯ ಗೆಳೆಯರಿದ್ದರು. ಸವರ್ಣೀಯ ಕೇರಿಗೆ ಹೋಗಿ ಆ ಗೆಳೆಯರ ಮನೆ ಮುಂದೆ ನಿಲ್ಲುತ್ತಿದ್ದರು. ಒಮ್ಮೊಮ್ಮೆ ಅವರು ಪಕ್ಕದ ಕಲ್ಲಿನ ಮೇಲೆ ಕೂರಿಸಿ ನನಗೆ ಏನಾದರೂ ತಿನ್ನಲು ಕೊಡುತ್ತಿದ್ದರು. ತಂದೆ ಕೆಲವು ಸಲ ಊರ ಹೋಟೆಲಿಗೂ ಕರೆದುಕೊಂಡು ಹೋಗುತ್ತಿದ್ದರು. ಹೋಟೆಲಿನವರು ಇತರರಿಗಿಂತ ದೂರದಲ್ಲಿ ನಮ್ಮಿಬ್ಬರನ್ನು ಕೂರಿಸುತ್ತಿದ್ದರು. ಅವರು ಕೊಡುತ್ತಿದ್ದ ಇಡ್ಲಿಯನ್ನು ತಿನ್ನಲು ಪರಮಾನಂದವಾಗುತ್ತಿತ್ತು. ಇಡ್ಲಿಯ ರೂಪ ಮೃದುತ್ವ ರುಚಿಯಲ್ಲಿ ಮುಳುಗಿ ಹೋಗಿರುತ್ತಿದ್ದ ನಮಗೆ ಬೇರೆ ವಿಚಾರಗಳು ಅನವಶ್ಯಕವಾಗಿದ್ದವು.

ಒಮ್ಮೊಮ್ಮೆ ನನ್ನ ತಂದೆ ಕೆಲವು ಗೆಳೆಯರೊಂದಿಗೆ ಹೆಂಡ ಕುಡಿಯಲು ಹೋಗುತ್ತಿದ್ದರು. ಬಹಳ ದೂರದ ಹೆಂಡದ ಅಂಗಡಿಗೆ ಹೋಗುವ ಗುಂಪಿಗೆ ನನ್ನ ತಂದೆಯ ಇನ್ನೊಬ್ಬ ಅಣ್ಣನೇ ನಾಯಕ. ಆತ ತಪ್ಪದೆ ನನ್ನನ್ನು ತನ್ನ ಹೆಗಲ ಮೇಲೆ ಕೂರಿಸಿಕೊಂಡು ಹೋಗುತ್ತಿದ್ದನು. ನನ್ನಂತೆಯೇ ಅಪ್ಪಂದಿರ ಹೆಗಲ ಮೇಲೆ ಕುಳಿತು ಉಳಿದ ಮಕ್ಕಳೂ ಬರುತ್ತಿದ್ದರು. ದೊಡ್ಡವರು ಕುಡಿದು ಅಮಲೇರುತ್ತಿದ್ದಂತೆ ಮಕ್ಕಳ ಬಗ್ಗೆ ಕರುಣಾಭಾವ ತಾಳುತ್ತಿದ್ದರು. ನಮಗೂ ಆಗ ಹೆಂಡ, ರುಚಿಯಾದ ಚಾಕಣ ದೊರೆಯುತ್ತಿತ್ತು. ಹೀಗೆ ರಾತ್ರಿ ಬಹಳ ಹೊತ್ತಾದ ಮೇಲೆ ಮನೆಗೆ ಬರುತ್ತಿದ್ದರು.

ಹೊಸ ಹೊಲ ಮತ್ತು ಹಾಳೂರು ಹೊಲ ಎಂಬ ಹೊಲಗಳಲ್ಲಿ ತಂದೆಗೆ ಪಾಲಿತ್ತು. ಇದು ಪಿತ್ರಾರ್ಜಿತವಾಗಿ ಬಂದದ್ದು. ತಂದೆ ತಾಯಿ ಇಬ್ಬರೂ ಬಹದೂರ ನಡೆದು ಹೋಗಿ ಹೊಸ ಹೊಲದಲ್ಲಿ ದುಡಿಯುತ್ತಿದ್ದರು. ನನ್ನನ್ನು ಮರ ಅಥವಾ ಗಿಡವೊಂದರ ಕೆಳಗೆ ಕೂರಿಸಿ ಅವರು ದುಡಿಮೆ ಮಾಡುತ್ತಿದ್ದರು. ಮಧ್ಯಾಹ್ನ ಊಟಕ್ಕೆ ಬಂದರೆ ಮತ್ತೆ ಸಂಜೆಯ ತನಕ ದುಡಿಮೆ. ನನ್ನ ತಾಯಿ ಒಂದು ದಿನ ನನ್ನ ಮಗನನ್ನು ಓದಿಸಬೇಕು. ಅವನಿಗೆ ನೆಂಟರು ಬರೆದ ಕಾಗದ ಓದಲು ಬಂದರೆ ಸಾಕು. ಆಮೇಲೆ ಬಿಡಿಸಿ ಬಿಡುತ್ತೇವೆ ಎಂದು ಯಾರಿಗೋ ಹೇಳುತ್ತಿದ್ದುದು ನನ್ನ ಕಿವಿಗೆ ಬಿತ್ತು.

ನನ್ನನ್ನು ಒಂದು ದಿನ ನಮ್ಮ ದೊಡ್ಡಪ್ಪ ಮತ್ತಿತರರು ಹಿಡಿಯುವ ಯತ್ನ ಮಾಡಿದರು. ನಾನು ತಪ್ಪಿಸಿಕೊಳ್ಳಲು ಎಷ್ಟು ಪ್ರಯತ್ನಿಸಿದರೂ ಅವರು ಬಿಡಲಿಲ್ಲ. ಹೇಗೋ ಅರಚಾಡುತ್ತಿದ್ದ ನನ್ನನ್ನು ಹೊತ್ತುಕೊಂಡು ಹೋಗಿ ಶಾಲೆಗೆ ಬಿಟ್ಟರು. ನಾನು ಗೊಳೋ ಎಂದು ಅಳುತ್ತಿದ್ದೆ. ಮನೆ, ತಂದೆ, ತಾಯಿ, ಕುರಿ, ದನಗಳ ನೆನಪಾದರಂತೂ ಕಣ್ಣೀರು ಒತ್ತರಿಸಿಕೊಂಡು ಬರುತ್ತಿತ್ತು. ಶಾಲೆಯ ಒಳಗೆ ನನಗಿಂತ ಚಿಂತಾಕ್ರಾಂತರಾದ ಹಲವು ಹುಡುಗರು ಕುಳಿತಿದ್ದರು. ಮಾಸ್ತರು ಬೆತ್ತದಿಂದ ಒಂದು ಏಟು ಕೊಟ್ಟ ಕೂಡಲೇ ನಾನು ಒಮ್ಮೆ ಜೋರಾಗಿ ಅತ್ತು ಸುಮ್ಮನೆ ಕುಳಿತುಕೊಂಡೆ.

ಶಾಲೆಯ ಉಪಾಧ್ಯಾಯರ ಹೆಸರು ನಾಗಪ್ಪಾಚಾರ್. ಕಚ್ಚೆಪಂಚೆ ಹಾಕಿ ಕಪ್ಪುಕೋಟು ತೊಟ್ಟ, ಬೆಳ್ಳಗಿನ ಎತ್ತರದ ವ್ಯಕ್ತಿ. ಬಹಳ ಕಟ್ಟುನಿಟ್ಟು. ಕೆಲ ದಿನಗಳ ನಂತರ ಶಾಲೆಗೆ ಇನ್ಸ್‌ಪೆಕ್ಟರ್ ಬಂದರು. ನಮ್ಮಗೆಲ್ಲ ಭಯ ಇಮ್ಮಡಿ ಆಯಿತು. ಬಂದವರು ಬಹಳ ಹೊತ್ತು ಶಾಲೆಯಲ್ಲಿದ್ದು ಮಕ್ಕಳಿಂದ ಪಾಠ ಓದಿಸಿ, ಬರೆಸಿ ಪರೀಕ್ಷೆ ಮಾಡಿದರು. ಅವರ ತುಟಿ ಎಲ್ಲರ ತುಟ್ಟಿಯಂತಿರದೆ ಬಿರುಚಿಕೊಂಡಿತ್ತು. ಇದನ್ನು ನಾನು ಬಹಳ ಗಮನಿಸಿದ್ದೆ. ಆಗಾಗ ನನ್ನ ಸಹಪಾಠಿಗಳಿಗೆ ನನ್ನ ತುಟ್ಟಿಯನ್ನು ಇನ್ಸ್‌ಪೆಕ್ಟರ್ ತುಟ್ಟಿಯಂತೆ ಮಾಡಿ ತೋರಿಸುತ್ತಿದ್ದೆ. ಹುಡುಗರಿಗೆ ಇನ್ಸ್‌ಪೆಕ್ಟರ್ ನೆನಪಾಗಿ ಬಿದ್ದು ಬಿದ್ದು ನಗುತ್ತಿದ್ದರು. ಆಟಕ್ಕೆ ಬಿಟ್ಟಾಗ ನನಗೆ ಎಲ್ಲರೂ ಮಿಠಾಯಿ ಕೊಟ್ಟು ಇನ್ಸ್‌ಪೆಕ್ಟರ್ ತುಟಿ ಅನುಕರಿಸಲು ಕೇಳುತ್ತಿದ್ದರು. ಇದ್ದರಿಂದ ನಾನು ಹುಡುಗರಿಗೆಲ್ಲಾ ಬೇಕಾದವನಾದೆ.

ಅಭಿನಯ ಕಲೆಯಲ್ಲಿ ಮೊದಲ ಪಾಠ

ಒಂದು ದಿನ ಮಧ್ಯಾಹ್ನದ ತರಗತಿಯಲ್ಲಿ ಮಾಸ್ತರಿಗೆ ಬೇಜಾರಾಗಿ ವಿದ್ಯಾರ್ಥಿಗಳನ್ನು ಹಾಡು ಹೇಳುವಂತೆ ಕೇಳಿದರು. ಯಾರೋ ಒಬ್ಬ ‘ಸಾರ್ ಇವನು ಇನ್ಸ್‌ಪೆಕ್ಟರ್’ ತುಟಿ ತೋರಿಸುತ್ತಾನೆ ಎಂದು ಬಿಟ್ಟ. ಮಾಸ್ತರರಿಗೆ ಕುತೂಹಲವಾಗಿ ‘ಅದೇನು ಮಾಡಿ ತೋರಿಸೋ’ ಎಂದರು. ನಾನು ಹಾಗೆಯೇ ಮಾಡಿದೆ. ಮಾಸ್ತರು, ಹುಡುಗರು ಕೊಟ್ಟ ಪ್ರೋತ್ಸಾಹದಿಂದ ಉತ್ತೇಜಿತನಾಗಿ ಇನ್ಸ್‌ಪೆಕ್ಟರ್ ಮುಖಭಾವ, ನಡಿಗೆ, ಮಾತುಗಳನ್ನೆಲ್ಲ ಅನುಕರಿಸಿದೆ. ಮಾಸ್ತರರಿಗೆ ನಗು ತಡೆಯಲಾರದೆ ಕಣ್ಣೀರು ಬರುವಂತಾಯಿತು. ಅಂದಿನಿಂದ ಕೊನೆ ಪಿರಿಡ್ಡಿನಲ್ಲಿ ಮಾಸ್ತರು ನನ್ನನ್ನು ನಿಲ್ಲಿಸಿ ಏನಾದರೂ ಮಾಡಯ್ಯ ಎನ್ನುತ್ತಿದ್ದರು. ನನಗೆ ಇನ್ಸ್‌ಪೆಕ್ಟರ್ ಹಾವಭಾವ ಬಿಟ್ಟು ಇನ್ನೇನು ಗೊತ್ತಿರಲಿಲ್ಲ. ಮಾಸ್ತರರನ್ನು ಅನುಕರಿಸಿದರೆ ಏಟಿನ ಭಯ. ಆದ್ದರಿಂದ ಕಣ್ಣು ಮೆಡ್ಡರಿಸುವುದು, ಹುಚ್ಚನಂತೆ ಮುಖ ತಿರುಗಿಸುವುದು, ಹಲ್ಲು ಗಿಂಜುವುದು ಇತ್ಯಾದಿಗಳನ್ನು ಮಾಡಿ ರಂಜಿಸ್ಕುತ್ತಿದ್ದೆ. ಕೆಲದಿನಗಳಲ್ಲೇ ತರಗತಿಯಲ್ಲಿ ಬಹು ಮುಖ್ಯನಾದ ವಿದ್ಯಾರ್ಥಿಯಾದೆ.

ನಾಗಪ್ಪಾಚಾರ್ ಒಳ್ಳೆಯ ಗುರುಗಳು. ಆಗಾಗ ವಿದ್ಯಾರ್ಥಿಗಳನ್ನು ಸಾಲಾಗಿ ನಿಲ್ಲಿಸಿ ಊರನೆಲ್ಲಾ ಮೆರವಣಿಗೆ ಮಾಡಿಸುತ್ತಿದ್ದರು. ಅವರು ಮುಂದೆ ನಾವೆಲ್ಲ ಹಿಂದೆ. ಅವರು ‘ಕಡ್ಡಾಯ ಶಿಕ್ಷಣ’ ಎಂದು ಘೋಷಣೆ ಮಾಡಿದ ಕೂಡಲೇ ನಾವು ‘ಜಾರಿಯಲ್ಲಿದೆ’ ಎನ್ನುತ್ತಿದ್ದೆವು. ಅವರು ‘ಆರು ವರ್ಷದ ಮಕ್ಕಳನ್ನು’ ಎಂದರೆ ನಾವೆಲ್ಲ ‘ಶಾಲೆಗೆ ಸೇರಿಸಿ’ ಎನ್ನುತ್ತಿದ್ದೆವು. ಊರಿನವರಿಗೆಲ್ಲಾ ಈ ಮೆರವಣಿಗೆ ಒಂದು ಮನರಂಜನೆ. ಈ ಮೆರವಣಿಗೆ ದಲಿತರ ಕೇರಿಗೂ ಹೋಗುತ್ತಿತ್ತು. ಮೆರವಣಿಗೆ ಆದ ಮೇಲೆ ಗುರ‍್ಕುಗಳು ಎಲ್ಲರಿಗೂ ಪೆಪ್ಪರಮೆಂಟ್ ಹಂಚುತ್ತಿದ್ದರು.

ಒಂದು ದಿನ ಸಂಜೆ ನಾನು ಹಟ್ಟಿಯಲ್ಲಿ ನಿಂತಿದ್ದೆ. ನೂರಾರು ಜನ ಮೆರವಣಿಗೆಯಲ್ಲಿ ನಮ್ಮ ಮನೆಯ ಕಡೆಗೆ ಬರುತ್ತಿದ್ದರು. ಮೆರವಣೆಗೆಯ ಮುಂದೆ ಒಂದು ಕುದುರೆ, ಕುದುರೆಯ ಮೇಲೆ ದೊಡ್ಡಪ್ಪ. ನನ್ನ ದೊಡ್ಡಪ್ಪ ಆಲಯ್ಯ ಮಾಗಡಿ ಪುರಸಭೆಗೆ ಚುನಾವಣೆಯಲ್ಲಿ ಗೆದ್ದಿದ್ದರು. ವಿಜಯೋತ್ಸವದ ಮೆರವಣಿಗೆ ಬರುತ್ತಿತ್ತು. ದೊಡ್ಡಪ್ಪ ಕುದುರೆಯಿಂದ ಇಳಿದು ನಮ್ಮ ಅಜ್ಜಿಯ ಕಾಲಿಗೆ ನಮಸ್ಕರಿಸಿದರು. ಮೆರವಣಿಗೆ ಮರಳಿತು. ನಮ್ಮ ದೊಡ್ಡಪ್ಪ ದಲಿತರಲ್ಲೇ ವಿದ್ಯಾವಂತರಾದ, ಧೈರ್ಯವಂತರಾದ ವ್ಯಕ್ತಿ. ನೇಗಿಲ ಗುರುತನ್ನು ಕೊಟ್ಟು ಚುನಾವಣೆಗೆ ನಿಲ್ಲಿಸಿ ಒಂದು ಪೈಸೆ ಖರ್ಚಿಲ್ಲದಂತೆ ಜನ ಇವರನ್ನು ಪುರಸಭೆಗೆ ಆರಿಸಿದರು. ಪ್ರಾಮಾಣಿಕತೆಯಿಂದ ದುಡಿದ ದೊಡ್ಡಪ್ಪ ಒಳ್ಳೆಯ ಹೆಸರು ಪಡೆದರು.

ಈ ದೊಡ್ಡಪ್ಪ ಬಹಳ ಕಟ್ಟುನಿಟ್ಟು. ಇವರ ಹೆಂಡತಿ ತೀರಿ ಹೋಗಿ ಬಹು ವರ್ಷಗಳಾಗಿದ್ದವು. ಮತ್ತೆ ಮದುವೆಯಾಗಲಿಲ್ಲ. ಜೈಮಿನಿ ಭಾರತ ಓದುವುದು ಅವರ ಹವ್ಯಾಸವಾಗಿತ್ತು. ಮುಂದೆ ಇವರ ಜೀವನ ದುರಂತದಲ್ಲಿ ಮುಗಿಯಿತು. ಊರಿನ ಲೇವಾದೇವಿ ಹೆಂಗಸೊಬ್ಬಳಿಂದ ಇವರು ಸಾಲ ಪಡೆದು ಮರಳಿಸಲಾಗಲಿಲ್ಲ. ಆಕೆ ಒತ್ತಾಯ ಮಾಡಿದಳು. ಇದರಿಂದ ಅಪಮಾನಗೊಂಡ ದೊಡ್ಡಪ್ಪ ಬಾವಿಯೊಂದರ ಬಳಿ ಹೋಗಿ ಅದನ್ನು ಹೂ ಗಂಧದ ಕಡ್ಡಿ ಇಟ್ಟು ಪೂಜಿಸಿ, ನಂತರ ಹಾರಿ ಪ್ರಾಣಬಿಟ್ಟರು.

ಹೋಟೆಲ್ ಇಟ್ಟ ದೊಡ್ಡಪ್ಪ

ಇನ್ನೊಬ್ಬ ದೊಡ್ಡಪ್ಪ ಮೇಗಳ ಹಟ್ಟಿಯಲ್ಲಿ ಒಂದು ಹೋಟೆಲ್ ಇಟ್ಟಿದ್ದರು. ದಲಿತರು ಮಾತ್ರ ಆ ಹೋಟಲಿಗೆ ಬರುತ್ತಿದ್ದರು. ನಾನು ಆಗಾಗ ಇಡ್ಲಿ ತರಲು ಆ ಹೋಟೆಲಿಗೆ ಹೋಗುತ್ತಿದ್ದೆ. ಆಗ ನನ್ನನ್ನು ತುಂಬ ಆದರದಿಂದ ಕಂಡು ಕಾಫಿ ಕುಡಿಸಿ ಇಡ್ಲಿ ಕೊಟ್ಟು ಕಳುಹಿಸುತ್ತಿದ್ದರು. ಮುಂದೆ ಇವರು ಬೆಂಗಳೂರಿಗೆ ವಲಸೆ ಹೋದಾಗ ಅಲ್ಲಿಯೂ ಹೋಟೆಲನ್ನು ಪ್ರಾರಂಭಿಸುವ ಆಸೆಯಿಂದ ಎಲ್ಲಾ ಸಾಮಾನುಗಳನ್ನು ಮೂಟೆಕಟ್ಟಿ ಬಸ್ಸಿನ ಮೇಲೆ ಹಾಕಿದ್ದರು. ಬೆಂಗಳೂರಿನಲ್ಲಿ ಇಳಿದು ನೋಡುವ ವೇಳೆಗೆ ಹಿಂದಿನ ಸ್ಟಾಪಿನಲ್ಲಿ ಇಳಿದ ಯಾರೋ ಮೂಟೆಯನ್ನು ಇಳಿಸಿ ಅಪಹರಿಸಿದ್ದರು. ಹೀಗಾಗಿ ಬೆಂಗಳೂರಿನಲ್ಲಿ ಹೋಟೆಲ್ ತೆಗೆಯುವ ಅವರ ಉತ್ಸಾಹಕ್ಕೆ ತಣ್ಣೀರು ಬಿತ್ತು.

ಈ ನಡುವೆ ಊರಿನಲ್ಲಿ ಜೀವನ ಕಷ್ಟವಾಗಿ ತಂದೆ ಮಹಾ ಸಾಲಗಾರನಾಗಿ ಒಂದು ದಿನ ಬೆಂಗಳೂರು ಸೇರಿದನು. ಬಹಳ ಜನಕ್ಕೆ ಇದು ಗೊತ್ತಿಲ್ಲದೆ ಇದ್ದುದರಿಂದ ನಿಧಾನವಾಗಿ ಸುದ್ದಿ ಹಬ್ಬುತ್ತಿತ್ತು. ನಮ್ಮನ್ನೆಲ್ಲ ಬಿಟ್ಟು ಹೋಗಿರುವುದು ಹಲವು ಚಿಂತನೆಗಳಿಗೆ ಎಡೆಮಾಡಿಕೊಟ್ಟಿತ್ತು. ಶಾಲೆಯಲ್ಲಿ ಉಪಾಧ್ಯಾಯರು ನನ್ನನ್ನು ನಿಲ್ಲುವಂತೆ ಹೇಳಿ ಮನೆಯಲ್ಲಿ ಅಡುಗೆ ಆಗಿತ್ತೋ, ಇಲ್ಲವೋ ನಾನು ಊಟ ಮಾಡಿದ್ದೆನೋ, ಇಲ್ಲವೋ ಎಂಬುದನ್ನು ದಿನವೂ ಖಚಿತ ಮಾಡಿಕೊಳ್ಳುತ್ತಿದ್ದರು. ಧೈರ್ಯ ಕೊಡುವ ಮಾತುಗಳನ್ನು ಆಡುತ್ತಿದ್ದರು. ನಾನು ನನ್ನ ತಾಯಿ ಮತ್ತು ಇಬ್ಬರು ತಂಗಿಯರು ಆ ದಿನಗಳನ್ನು ಕಷ್ಟದಲ್ಲಿ, ಭಯದಲ್ಲಿ ತಳ್ಳಿದೆವು.

ಆ ವೇಳೆಯಲ್ಲಿ ತಾಯಿಯ ತೌರಿನವರು ನಮ್ಮ ನೆರವಿಗೆ ಧಾವಿಸಿದರು. ನಮ್ಮ ಮಾವ ಬಂದು ನಮ್ಮನ್ನೆಲ್ಲ ಮಂಚನಬೆಲೆಗೆ ಕರೆದುಕೊಂಡು ಹೋದನು. ನಾವು ಮಾಗಡಿಯ ಮನೆಯನ್ನು ಖಾಲಿ ಮಾಡಿ ಮಂಚನಬೆಲೆಗೆ ಸ್ಥಳಾಂತರಗೊಂಡೆವು. ತಂದೆಯ ಕಡೆಯವರಿಗೆ ಹೋಲಿಸಿದರೆ ತಾಯಿ ಕಡೆಯವರು ಸ್ಥಿತಿವಂತರು. ತಾತನ ಮನೆ ದೊಡ್ಡದಾಗಿತ್ತು. ಒಳ್ಳೆಯ ಹಟ್ಟಿಯಿತ್ತು. ಕೊಟ್ಟಿಗೆಯಿತ್ತು. ಊರಿನಲ್ಲಿ ಹೊಲೆಯರು ಮತ್ತು ಮುಸಲ್ಮಾನರು ಮಾತ್ರ ವಾಸ ಮಾಡುತ್ತಿದ್ದರು. ಬೆಟ್ಟಗಳಿಂದ ಸುತ್ತುವರಿದ ಮಂಚನಬೆಲೆಯ ಮುಂದೆ ಅರ್ಕಾವತಿ ನದಿ ತುಂಬಿ ಹರಿಯುತ್ತಿತ್ತು. ಪಕ್ಕದಲ್ಲೇ ತಾತನ ತೋಟ ಜಮೀನು ಇದ್ದುದರಿಂದ ನಾನಾ ಕಾರಣಕ್ಕೆ ಹೆಚ್ಚು ಹೊತ್ತು ನದೀ ಸಮೀಪದಲ್ಲೇ ಇರಬೇಕಾಗಿತ್ತು.

ಮಹಾತ್ಮ ಗಾಂಧಿಯರ ಮಾತು ಕೇಳಿದ್ದ ಮಂಚನಬೆಲೆ ತಾತ

ಮಾಗಡಿಗಿಂತ ಮಂಚನಬೆಲೆ ವರ್ಣಮಯವಾಗಿತ್ತು. ಊರಿನ ಎಲ್ಲ ಹೆಂಗಸರೂ, ಗಂಡಸರೂ ನಮ್ಮನ್ನು ಅಕ್ಕರೆಯಿಂದ ಮಾತನಾಡಿಸುತ್ತಿದ್ದರು. ಹುಡುಗರು ಸಾಹಸಿಗಳಂತೆ ಕಂಡರು. ಅಂಗಡಿ ಇಟ್ಟಿದ್ದ ಮುಸಲ್ಮಾನರು ಗುರುತು ಹಿಡಿದು ಕರೆದು ಏನನ್ನಾದರೂ ಕೊಡುತ್ತಿದ್ದರು. ನಮ್ಮ ತಾತನ ಹೆಸರು ಪೂರಯ್ಯ. ಬಹಳ ಜೋರಿನ ಮನುಷ್ಯ. ಈತನ ಧ್ವನಿ ಕೇಳಿ ಮನೆಯ ಹೆಂಗಸರು ಗಡಗಡ ನಡುಗುತ್ತಿದ್ದರು. ಬೆಳಗ್ಗೆ ಎದ್ದು ಕೈ ಕಾಲು ಮುಖ ತೊಳೆದು ನಾಮ ಧರಿಸುವುದರಲ್ಲಿ ಬಹಳ ಸಮಯ ಕಳೆಯುತ್ತಿದ್ದ. ಆಮೇಲೆ ಕಚ್ಚೆ ಪೇಟ ಧರಿಸಿ ಪಡಸಾಲೆಯಲ್ಲಿ ಕೂತರೆ ಆತನಿಗೆ ಬೆಳಗಿನ ಟೀ. ನಮಗೆಲ್ಲರಿಗೂ ಬೆಳಗಿನ ಟೀ, ಬೆಳ್ಳಿಲೋಟದಂತೆ ಕಾಣುವ ಹಿತ್ತಾಳೆಯ ಲೋಟಗಳಲ್ಲಿ ನಮಗೆಲ್ಲ ಟೀ ಕೊಡುತ್ತಿದ್ದರು. ಇಂಥ ರುಚಿಯಾದ ಟೀಯನ್ನು ಆಮೇಲೆ ನಾನು ಕುಡಿದದ್ದು ಬಹಳ ಅಪರೂಪ.

ತಾತ ಮಹಾತ್ಮ ಗಾಂಧಿಯವರ ಭಾಷಣ ಕೇಳಿದ್ದ. ಅವರನ್ನು ದೂರದಿಂದ ನೋಡಿದ್ದನ್ನು ಹೇಳುತ್ತಿದ್ದ. ಗಾಂಧಿಜೀಯವರು ಆದಿನ ತಮ್ಮ ಭಾಷಣದಲ್ಲಿ ಯಾರು ಕುಡಿಯುವುದಿಲ್ಲವೋ ಅವರು ಕೈಯೆತ್ತಿ ಎಂದಾಗ ತಾತನೂ ಕೈ ಎತ್ತಿದ್ದ. ಆದ್ದರಿಂದ ಆ ಮನೆಯಲ್ಲಿ ಮಧ್ಯಪಾನವಿರಲಿಲ್ಲ.

ಅಜ್ಜಿ ಜಾನಪದ ಕಥೆಗಳ ಆಗರವಾಗಿದ್ದಳು. ಬೇರೆ ಊರಿನಲ್ಲಿ ನಡೆಯುವ ಹಬ್ಬ, ಮದುವೆಗಳಿಗೆ ಅಜ್ಜಿ ನನ್ನನ್ನು ಕರೆದುಕೊಂಡು ಹೋಗುತ್ತಿದ್ದಳು. ಒಂದು ದಿನ ಬೀದಿಯಲ್ಲಿ ನಾನು ಜೋರಾಗಿ ಓಡುತ್ತಿದ್ದೆ. ಎದುರಿಗೆ ಬರುತ್ತಿದ್ದವರ ಬಟ್ಟೆಗೆ ನನ್ನ ಕೈ ಸೋಂಕಿತು. ಆ ವ್ಯಕ್ತಿ ಕೋಪಗೊಂಡು ನಿಂತು ಬಿಟ್ಟ. ನಾನೂ ಗಾಬರಿಗೊಂಡು ನಿಂತುಬಿಟ್ಟೆ. ಅಜ್ಜಿ ಆ ವ್ಯಕ್ತಿಯನ್ನು ಪರಿಪರಿಯಾಗಿ ಕ್ಷಮೆ ಕೇಳಿದ ಮೇಲೆ ಆತ ಹೊರಟು ಹೋದ. ಆತ ಕೋಪಗೊಂಡದ್ದು ಸವರ್ಣೀಯನಾದ ಆತನನ್ನು ನಾನು ಮುಟ್ಟಿದೆ ಎಂಬ ಕಾರಣಕ್ಕೆ. ನನ್ನ ಅಚಾತುರ‍್ಯದಿಂದ ಮೇಲುಜಾತಿಯವರ ಕೋಪಕ್ಕೆ ತುತ್ತಾಗಬಹುದೆಂದು ಅಜ್ಜಿ ಹೆದರಿದಳು. ಅಂದಿನಿಂದ ನನಗೆ ಓಡಬಾರದೆಂದು ತಾಕೀತು ಮಾಡಿದಳು. ದೊಡ್ಡವರು ಯಾರೇ ಕಾಣಲಿ ಅವರಿಗೆ ಕೈ ಜೋಡಿಸಿ ‘ನಮಸ್ಕಾರ ಸ್ವಾಮಿ’ ಎಂದು ಹೇಳಬೇಕೆಂದು ಕಡ್ಡಾಯ ಮಾಡಿದಳು. ನಾನು ಈ ಪದ್ಧತಿಯನ್ನು ಕಟ್ಟುನಿಟ್ಟಾಗಿ ಪಾಲಿಸಿ ಎಲ್ಲರ ಹೊಗಳಿಕೆಗೆ ಪಾತ್ರನಾದೆ.

ಪಕ್ಕದ ಊರಿಗೆ ಅಜ್ಜಿಯ ಜೊತೆಯಲ್ಲಿ ಒಂದು ಮದುವೆಗೆ ಹೋಗಿದ್ದೆ. ಗಂಡಿಗೆ ಬಹಳ ವಯಸ್ಸಾಗಿತ್ತು. ಇದು ಎರಡನೇ ಮದುವೆ. ಮದುವೆಯ ಕೆಲಸ ಕಾರ್ಯಗಳಲ್ಲಿ ಸಹಕರಿಸುತ್ತಿದ್ದ ದೊಡ್ಡ ಹುಡುಗ ಮೊದಲ ಹೆಂಡತಿಯ ಮಗ. ಬೆಂಗಳೂರಿನ ಈ ವೃದ್ಧ ವರ ಬಹಳ ಲವಲವಿಕೆಯಿಂದ ಇದ್ದ. ಊರಿನಲ್ಲಿ ನಡೆಯುವ ಬಹಳ ಮದುವೆಗಳಲ್ಲಿ ನಮ್ಮನ್ನು ಗಂಡು ಹೆಣ್ಣಿನ ಜೊತೆಯಲ್ಲೇ ಕೂರಿಸಿ ಊಟ ಮಾಡಿಸುತ್ತಿದ್ದರು.

ಅಜ್ಜಿ, ತಾಯಿ ಮತ್ತು ಅತ್ತೆ ಮೀನು ಹಿಡಿಯಲು ಹೋಗುತ್ತಿದ್ದರು. ಇವರು ಮೀನು ಹಿಡಿಯುವುದರಲ್ಲಿ ನಿಷ್ಣಾತರು. ನದಿಯಲ್ಲಿ ಓಡುತ್ತಾ ಮೀನು, ಕೊರವ, ಹಾವು ಮೀನುಗಳನ್ನು ಹಿಡಿಯುತ್ತಿದ್ದರು. ನಾವು ಚೀಲಗಳನ್ನು ಹಿಡಿದು ಅವರ ಹಿಂದೆಯೇ ಓಡುತ್ತಿದ್ದೆವು. ಅವರು ಹಿಡಿದ ಮೀನುಗಳು ನಮ್ಮ ಚೀಲ ಸೇರುತ್ತಿದ್ದವು. ಅದರ ಬಾಯನ್ನು ಮುಚ್ಚಿ ಬಿಗಿಯಾಗಿ ಹಿಡಿದುಕೊಳ್ಳಲು ನಮ್ಮ ಶಕ್ತಿಯೆಲ್ಲ ಬಳಕೆಯಾಗುತ್ತಿತ್ತು. ಮೀನುಗಳನ್ನು ಮನೆಗೆ ತಂದು ಅವುಗಳನ್ನು ಕಲ್ಲಮೇಲೆ ಬೂದಿ ಹಾಕಿ ಉಜ್ಜುವುದು ಒಂದು ದೊಡ್ಡ ಆಚರಣೆಯಂತೆ ಸಾಗುತ್ತಿತ್ತು. ಪಾತ್ರೆಗಳಲ್ಲಿ ನೀರು ಹಿಡಿದು ನಿಂತುಕೊಂಡಿದ್ದು ಅವರು ಹೇಳಿದಾಗ ಹೊಯ್ಯುವುದು ನಮ್ಮ ಕೆಲಸ. ರಾತ್ರಿ ಮೀನಿನ ಸಾರಿನ ರುಚಿಯಾದ ಊಟ.

ತಾತನ ಮನೆಯಲ್ಲಿ ಬಹಳ ದನಗಳಿದ್ದವು. ಮಾಗಡಿಯಿಂದ ತಂದ ನಮ್ಮ ದನವೂ ಈ ಗುಂಪಿಗೆ ಹೊಸದಾಗಿ ಸೇರಿಕೊಂಡಿತು. ಈ ದನಕ್ಕೆ ಮಾಗಡಿ ಎಂದೇ ಹೆಸರಿಟ್ಟಿದ್ದರು. ನಮ್ಮ ದನವಾದ್ದರಿಂದ ಇದರ ಬಗ್ಗೆ ನನಗೆ ವಿಶೇಷ ಮಮತೆ. ನಾನು ಸದಾ ಇದರ ಬಳಿಯೇ ಇರುತ್ತಿದ್ದೆ. ಅದರ ಮೈಯನ್ನು ನೇವರಿಸುತ್ತಿದ್ದೆ. ಈ ದನಕ್ಕೆ ನನ್ನ ಬಳಕೆಯಾಗಿ ಆತ್ಮೀಯ ನೋಟದಿಂದ ನೋಡುತ್ತಿತ್ತು. ಇದರ ಬಳಿ ಇದ್ದಾಗಲೆಲ್ಲಾ ಮಾಗಡಿಯ ನೆನಪುಗಳು ಮನಸ್ಸಿನಲ್ಲಿ ತೇಲಿ ತೇಲಿ ಬರುತ್ತಿದ್ದವು. ಬೆಂಗಳೂರಿನಲ್ಲಿರುವ ತಂದೆಯ ನೆನಪಾಗುತ್ತಿತ್ತು.

ಊರಿನಲ್ಲಿ ಎಂದೂ ಕಳ್ಳತನವಾಗಿಲ್ಲ. ಸಂಜೆಯಾಗುತ್ತಲೇ ಬುಡ್ಡಿ ದೀಪ ಹಚ್ಚಿ ಅದರ ಬೆಳಕಲ್ಲೇ ಕಥೆ, ಹಾಡು, ಹಾಸ್ಯದಲ್ಲಿ ತೊಡಗುತ್ತಿದ್ದರು. ಒಂದು ದಿನ ಮಂಚನಬೆಲೆಯ ಸುತ್ತಮುತ್ತ ಎಲ್ಲೋ ಇದ್ದ ಚಿಕ್ಕನಹಳ್ಳಿಗೆ ನೆನ್ನೆ ರಾತ್ರಿ ಕಳ್ಳರು ಬಂದಿದ್ದರು ಎಂದು ಯಾರೋ ಹೇಳಿದರು. ಮನೆ ಬಾಗಿಲು ಒಡೆದು ಒಳನುಗ್ಗಿದ ಕಳ್ಳರು ಎಂಥದೋ ಪೌಡರನ್ನು ಮಲಗಿದ್ದವರ ಮುಖಕ್ಕೆ ಚೆಲ್ಲಿದರು. ಇದರಿಂದ ಮನೆಯವರು ಬಿಟ್ಟ ಕಣ್ಣು ಬಿಟ್ಟಂತೆ ಹಾಗೆ ಮಲಗಿಕೊಂಡು ಎಲ್ಲವನ್ನು ನೋಡುತ್ತಿದ್ದರೇ ವಿನಾ ಮೇಲೇಳಲಿಲ್ಲ. ಕಳ್ಳರು ಮನೆಯಲ್ಲಿದ್ದ ಎಲ್ಲವನ್ನು ಸಾಗಿಸಿಕೊಂಡು ಹೋದ ಸುಮಾರು ಹೊತ್ತಿಗೆ ಮನೆಯವರಿಗೆ ಪ್ರಜ್ಞೆ ಬಂದಂತಾಗಿ ಅವರು ಎದ್ದರು. ಈ ವಿವರಗಳನ್ನು ಕೇಳಿ ಮಂಚನಬೆಲೆಯ ಜನ ಹೆದರಿಬಿಟ್ಟರು. ಎಲ್ಲಿ ಹೋದರೂ ಈ ಕಳ್ಳರ ವಿಷಯವನ್ನೇ ಮಾತನಾಡುತ್ತಿದ್ದರು. ಮಾರನೆಯ ದಿನ ಬೆಳಿಗ್ಗೆ ಮನೆಯ ಮುಂದಲ ತಿಪ್ಪೆ ಗುಂಡಿಯಲ್ಲಿ ಒಬ್ಬ ವ್ಯಕ್ತಿ ಏನನ್ನೋ ಹುಡುಕುತ್ತಿದ್ದ. ವಿಚಿತ್ರ ವಸ್ತುಗಳನ್ನು ಆಯ್ದು ಗೋಣಿಚೀಲಕ್ಕೆ ತುಂಬಿ ಕೊಳ್ಳುತ್ತಿದ್ದ. ನಾವು ಹೆದರಿಕೊಂಡಿದ್ದನ್ನು ಕಂಡ ತಾಯಿ ಅವನು ಮೂಳೆ ಆಯುವವನೆಂದೂ, ನಮ್ಮ ಸಂಬಂಧಿಯೆಂದೂ ಹೇಳಿದ ಮೇಲೆ ಸುಮ್ಮನಾದೆವು.

ನಾವೆಲ್ಲ ಅವ್ವೇರಹಳ್ಳಿಗೆ ಹೋದೆವು. ಆ ಊರಿನ ಪಕ್ಕದ ಪಾಳ್ಯದಲ್ಲಿ ನನ್ನ ತಾಯಿಯ ಅಕ್ಕ, ನಮ್ಮ ದೊಡ್ಡಮ್ಮ ಇದ್ದರು. ನಾವು ಹೊಳೆ ದಾಟಿ ಹೋಗುವ ವೇಳೆಗೆ ಸಂಜೆ ಆಗುತ್ತಿತ್ತು. ಎಮ್ಮೆಯ ಮೇಲೆ ಕೂತು ಸವಾರಿ ಮಾಡುತ್ತಿದ್ದ ನನ್ನ ಅಣ್ಣ, ಅಕ್ಕಂದಿರನ್ನು ನೋಡಿ ಸೋಜಿಗವಾಯಿತು. ಬೆಳಗ್ಗೆ ಹೊತ್ತು ಅವರ ಮನೆಯ ಎದುರಿನ ಬೆಟ್ಟದ ಬುಡದಲ್ಲಿ ನವಿಲುಗಳು ಹಿಂಡು ಹಿಂಡಾಗಿ ಕುಣಿಯುತ್ತಿದ್ದವು. ಕೆಳಕ್ಕೆ ಹೋದರೆ ಜುಳುಜುಳು ಶಬ್ದ ಮಾಡುತ್ತ ಹರಿಯುವ ಅರ್ಕಾವತಿ; ಬೆಟ್ಟಗುಡ್ಡ, ಮರಗಳ ನಡುವೆ ಬಳಸು ಹಾಕಿ ಮಂಚನಬೆಲೆ ಕಡೆಗೆ ಓಡುತ್ತಿತ್ತು. ನಮ್ಮ ದೊಡ್ಡಪ್ಪ ಕಾಳಿಂಗಯ್ಯ. ಸುತ್ತಮುತ್ತ ಪ್ರಸಿದ್ಧನಾದ ವ್ಯಕ್ತಿ. ರಾತ್ರಿ ಹೊತ್ತು ಬಂದೂಕು ಹಿಡಿದು ಬೇಟೆಗೆ ಹೋಗುತ್ತಿದ್ದರು. ಮೊಲಗಳ ಮಾಂಸದ ರುಚಿ ನೋಡಿದ್ದು ಇಲ್ಲಿಯೇ.

ಇಲ್ಲಿಯ ಗ್ರಾಮದೇವತೆಯ ಹಬ್ಬ ಸ್ವಾರಸ್ಯಕರ. ಹಬ್ಬದಲ್ಲಿ ದೇವರು ಮೈದುಂಬಿ ಬಹಳ ದೂರ ಓಡುತ್ತಿತ್ತು. ಜನರೂ ಅದರ ಹಿಂದೆ ಓಡುತ್ತಿದ್ದರು. ದೇವರು ಓಡಿ ಓಡಿ ಸುಸ್ತಾದ ಮೇಲೆ ಗಕ್ಕನೆ ನಿಂತು ಬಿಡುತ್ತಿತ್ತು. ಜನರೂ ನಿಂತು ಬಿಡುತ್ತಿದ್ದರು. ಯಜಮಾನ – ಈತ ಒಬ್ಬ ಸಣಕಲ ಮುದುಕ ದೇವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದ. ಯಜಮಾನ (ದೇವರನ್ನು ಕುರಿತು) : ಇಷ್ಟು ದಿನ ಎಲ್ಲೋಗಿದ್ದೆ. ದೇವತೆ : ನಿಮ್ಮೂರೊಂದೇನಾ ನನಗೆ ಇರೋದು, ಮೂರು ಲೋಕಾನು ನೋಡ್ಕೋಬೇಕಲ್ಲ. ಯಜಮಾನ : ನಾವೆಷ್ಟು ಕಷ್ಟ ಪಡ್ತಾ ಇದ್ದೀವಿ ಗೊತ್ತಾ? ದೇವತೆ : ನಾನೇನು ಸುಖವಾಗಿದ್ದೀನಾ. ಈ ರೀತಿ ದೈವ ಮತ್ತು ಮನುಷ್ಯರ ನಡುವೆ ಸಂಭಾಷಣೆ ಮುಂದುವರೆಯುತ್ತಿತ್ತು. ನಂತರ ದೇವತೆ ಕುಣಿಯಲು ತೊಡಗುತ್ತಿತ್ತು. ಜನರೂ ಕುಣಿಯುತ್ತಿದ್ದರು. ವಾದ್ಯಗಳ ಅಬ್ಬರದಲ್ಲಿ ಯಾರ ಮಾತು ಯಾರಿಗೂ ಕೇಳಿಸುತ್ತಿರಲಿಲ್ಲ.

ಗಂಡ ಹೆಂಡಿರ ಜಗಳದ ಪ್ರಥಮ ಪಾಠ

ಊರುಗಳನ್ನು ಸುತ್ತುತ್ತಾ ಆರಾಮವಾಗಿದ್ದ ಸಮಯದಲ್ಲಿ ನನ್ನ ಮಾವ ನನ್ನನ್ನು ಶಾಲೆಗೆ ಸೇರಿಸುವ ಯೋಚನೆ ಮಾಡಿದರು. ಮಂಚನಬೆಲೆಯಲ್ಲಿ ಶಾಲೆ ಇರಲಿಲ್ಲ. ಪಕ್ಕದ ಅಣೆಕೆಂಪಯ್ಯನ ದೊಡ್ಡಿಯಲ್ಲಿ ಒಂದು ಶಾಲೆ ನಡೆಯುತ್ತಿತ್ತು. ಈ ಶಾಲೆಗೆ ಸೇರಿದ ಒಂದೆರಡು ದಿನದಲ್ಲೇ ಹುಡುಗರ ಜೊತೆ ಹೊಂದಿಕೊಂಡೆ. ಶಾಲೆಯಲ್ಲಿ ಒಬ್ಬರು ಮಾಸ್ತರು, ಒಬ್ಬರು ಮೇಡಂ ಇದ್ದರು. ನಾವು ಇಬ್ಬರನ್ನೂ ಸರ್ ಎನ್ನುತ್ತಿದ್ದೆವು. ಒಂದೇ ಕೊಠಡಿ. ನಾಲ್ಕು ತರಗತಿಗಳು. ಇಬ್ಬರೂ ಕುರ್ಚಿಗಳಲ್ಲಿ ಕೂತು ಪಾಠ ಹೇಳಿಕೊಡುತ್ತಿದ್ದರು. ಏನಾಯಿತೋ, ನಾವು ನೋಡು ನೋಡುತ್ತಿದ್ದಂತೆ ಮಾಸ್ತರು ಮೇಡಮ್ಮನಿಗೆ ಒಂದು ಏಟು ಬಾರಿಸಿದರು. ಆಕೆ ಗೊಳೋ ಎಂದು ಅಳುತ್ತಾ ಹೀನಾಮಾನಾ ಬಯ್ಯತೊಡಗಿದಳು. ‘ಓಲೆ ಮಾಡುಸ್ತೀನಿ ಅಂದ್ರಿ ಮಾಡುಸ್ಲಿಲ್ಲಾ’ ಎಂದು ಹೇಳುತ್ತಿದ್ದುದು ಅಷ್ಪಷ್ಟವಾಗಿ ಕೇಳಿಸಿತು. ಮಾಸ್ತರು ‘ನಿನಗೆ ಅದೊಂದು ಕೇಡು’ ಎಂದು ಹೇಳುತ್ತಿದ್ದುದೂ ಕೇಳಿಸಿತು. ಮೇಡಮ್ಮನ ಗೋಳಾಟ ಅತಿಯಾಗಿ ಪಾಠ ಇಲ್ಲವಾಯಿತು. ಮಾಸ್ತರು ಮಂಕಾಗಿ ಕುಳಿತುಬಿಡುತ್ತಿದ್ದರು. ಮತ್ತೆ ಇದ್ದಕ್ಕಿದ್ದಂತೆ ಒಂದೇಟು ಹಾಕುತ್ತಿದ್ದರು. ಮೇಡಂ ಶಾಪ ಹಾಕುತ್ತಿದ್ದರು. ಕೆಲವು ದಿನವಂತೂ ಮಾಸ್ತರರು ಮೇಡಂಗೆ ಹೊಡೆದು ಹಣ್ಣುಗಾಯಿ, ನೀರುಗಾಯಿ ಮಾಡುತ್ತಿದ್ದರು. ಇದು ನಮಗೆಲ್ಲ ಒಳ್ಳೆಯ ಮನರಂಜನೆ. ಒಳಗಿನ ಖುಷಿಯನ್ನು ತೋರಿಸಿಕೊಳ್ಳದೆ ಗಾಬರಿಯನ್ನು ನಟಿಸುತ್ತಾ ಜಗಳವನ್ನೇ ನೋಡುತ್ತಿದ್ದೆವು.

ಈ ಮಾಸ್ತರು ಮತ್ತು ಮೇಡಂ ಗಂಡ ಹೆಂಡತಿ ಎಂಬುದು ತಿಳಿದ ಮೇಲೆ ಅವರ ಜಗಳದಲ್ಲಿ ನನಗೆ ಆಸಕ್ತಿ ಕಡಿಮೆ ಆಯಿತು. ಶಾಲಾ ಮಕ್ಕಳು ತಮ್ಮ ಜಗಳವನ್ನು ಆನಂದಿಸುತ್ತಿದ್ದಾರೆ ಎಂಬುದು ಗುರುಗಳಿಗೆ ಹೊಳೆಯುವುದು ತಡವಾಗಲಿಲ್ಲ. ಅವರು ನಮ್ಮನ್ನೆಲ್ಲ ಪಕ್ಕದ ಕಾಡುಗಳಲ್ಲಿ ಮನೆಗೆ ಸೌದೆ ತರಬೇಕೆಂದು ಅಟ್ಟುತ್ತಿದ್ದರು. ಮಾಸ್ತರರ ಮನೆಗೆ ಸೌದೆ ಪುಳ್ಳೆ ಆಯುವುದೇ ನಮ್ಮ ಕೆಲಸವಾಯಿತು. ಬಿಸಿಲಿನಲ್ಲಿ ಅಲೆದು ಸೌದೆ ತರುವುದು ನನಗಂತೂ ಕಷ್ಟಕರವಾಗಿ ಕಂಡಿತು. ನಾನು ಶಾಲೆಗೆ ಹೋಗುವವನಂತೆ ಮನೆಯಿಂದ ಹೊರಟವನು ನದಿಯ ದಡಕ್ಕೆ ಬರುತ್ತಿದ್ದೆ. ಸ್ಲೇಟು ಪುಸ್ತಕವನ್ನು ದಡದಲ್ಲಿಟ್ಟು ಬಟ್ಟೆ ಕಳಚಿ ಎಸೆದು ನೀರಿಗೆ ಬೀಳುತ್ತಿದ್ದೆ. ತಲೆ ಮಾತ್ರ ನೀರಿನಿಂದ ಹೊರಗೆ. ಸುಡುವ ಬಿಸಿಲಿನಲ್ಲಿ ನದಿಯಲ್ಲಿರುವುದೇ ಒಂದು ಭಾಗ್ಯ. ಶಾಲೆ ಬಿಡುವ ಸಮಯದ ತನಕ ನೀರಿನಲ್ಲೇ ಇರುತ್ತಿದ್ದೆ. ಸೌದೆ ಹುಡುಕುತ್ತಾ ಸಹಪಾಠಿಗಳು ನದಿಯ ಈ ಕಡೆಗೂ ಬಂದದ್ದುಂಟು. ಹೇಗೋ ಅವರಿಗೆ ಕಾಣದಂತೆ ಮರೆಯಾಗುತ್ತಿದ್ದೆ. ಶಾಲೆಗೆಂದು ಹೋಗಿ ಸೌದೆ ಆಯುವುದಕ್ಕಿಂತ ನೀರಿನಲ್ಲಿ ಇರುವುದೇ ಸಂತೋಷದಾಯಕವೆನಿಸಿತು.

ಲೇಖಕರು

ಕಳೆದ ಕಾಲು ಶತಮಾನದ ಹಿಂದೆ ನಮ್ಮ ಕವಿತೆಗಳಿಂದ ಕನ್ನಡ ಸಾಹಿತ್ಯಕ್ಕೆ ಹೊಸ ಆಯಾಮ ನೀಡಿದ ಕವಿ ಸಿದ್ಧಲಿಂಗಯ್ಯ (ಜ.೧೯೫೪) ಬೆಂಗಳೂರು ಜಿಲ್ಲೆಯ ಮಂಚನಬೆಲೆ ಎಂಬ ಊರಲ್ಲಿ ಜನಿಸಿದರು. ಬೆಂಗಳೂರಲ್ಲಿ ವ್ಯಾಸಾಂಗ ಮಾಡಿದ ಅವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಎಂ.ಎ. ಮತ್ತು ಪಿಎಚ್.ಡಿ ಪದವಿಗಳನ್ನು ಪಡೆದರು. ಹೊಲೆ ಮಾದಿಗರ ಹಾಡು, ಸಾವಿರಾರು ನದಿಗಳು, ಕಪ್ಪು ಕಾಡಿನ ಹಾಡು ಮತ್ತು ಮೆರವಣಿಗೆ ಎಂಬ ಕವನ ಸಂಕಲನಗಳನ್ನು, ಪಂಚಮ ಮತ್ತು ಏಕಲವ್ಯ ನಾಟಕಗಳನ್ನು ರಚಿಸಿದ್ದಾರೆ. ಅವತಾರಗಳು. ಹಕ್ಕಿನೋಟ ಹಾಗೂ ಗ್ರಾಮ ದೇವತೆಗಳು ಎಂಬ ಜಾನಪದ ಸಾಹಿತ್ಯ ಕುರಿತ ಅಧ್ಯಯನ ಗ್ರಂಥಗಳನ್ನು ಬರೆದಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ. ಡಾ.ಅಂಬೇಡ್ಕರ ಶತಮಾನೋತ್ಸವ ವಿಶೇಷ ಪ್ರಶಸ್ತಿ, ಸಂದೇಶ ಪ್ರಶಸ್ತಿಗಳನ್ನು ಪಡೆದಿರುವ ಸಿದ್ಧಲಿಂಗಯ್ಯ ಅವರು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ.

ಆಶಯ

ಸಿದ್ಧಲಿಂಗಯ್ಯನವರ ಆತ್ಮಚರಿತ್ರೆ ಊರುಕೇರಿ ಎಂಬ ಕೃತಿಯಿಂದ ಈ ಭಾಗವನ್ನು ಆಯ್ಕೆ ಮಾಡಲಾಗಿದೆ. ಸಮಾಜದ ಅಂಚಿನಲ್ಲಿ ಬದುಕಿನ ಹಸಿವು, ಕುತೂಹಲ, ಆಸೆ-ಆಕ್ಷಾಂಶೆಗಳು ಹೇಗಿರುತ್ತವೆ ಎಂಬುದು ಇಲ್ಲಿ ಆತ್ಮಚರಿತ್ರೆಯ ರೂಪದಲ್ಲಿ ಪ್ರಕಟವಾಗಿದೆ.

ಶಬ್ದಕೋಶ

ಐನೋರು=ಜಂಗಮರು, ಸ್ವಾಮಿಗಳು. ಮೋಟುಗೋಡೆ=ಬಿದ್ದು ಹಾಳಾದ ಅರೆ ಗೋಡೆ. ಜಮೀನು=ಭೂಮಿ, ಹೊಲ. ಮೋಜು-ತಮಾಷೆ. ದಾರಿಹೋಕರು=ದಾರಿ ಹಿಡಿದು ಹೋಗುವವರು. ಕೃತಜ್ಞತಾಭಾವ=ಉಪಕಾರ ನೆನೆಯುವುದು. ವಿಲಕ್ಷಣ=ಸಹಜವಲ್ಲದ್ದು. ದಾರುಣ=ಕೆಟ್ಟ. ಭೀತಿ=ಭಯ. ಪಿತ್ರಾರ್ಜಿತ=ತಂದೆಯಿಂದ ಬಂದದ್ದು (ಆಸ್ತಿ). ಕಟ್ಟುನಿಟ್ಟು=ಶಿಸ್ತು. ಅಚಾತುರ‍್ಯ=ಗಮನಕ್ಕೆ ಬಾರದ.

ಪ್ರಶ್ನೆಗಳು

೧.         ಬಾಲಕ ಸಿದ್ಧಲಿಂಗಯ್ಯ ಮೋಟುಗೋಡೆಯ ಮೇಲೆ ನಿಂತು ಕಾಣುತ್ತಿದ್ದ ದೃಶ್ಯಗಳು ಯಾವುವು?

೨.         ಬಾಲಕ ಸಿದ್ಧಲಿಂಗಯ್ಯ ಅವರಿಗೆ ಬ್ರಾಹ್ಮಣರ ಮನೆಯಿಂದ ಯಾವ ನೆರವುಸಿಗುತ್ತಿತ್ತು?

೩.         ಜಲ್ದಗೆರೆ ಅಮ್ಮ ಯಾರು? ಆಕೆಯನ್ನು ಹೇಗೆ ವರ್ಣಿಸಲಾಗಿದೆ?

೪.         ‘ನಾಳೆ ಬಾ’ ಎಂದು ಮನೆಬಾಗಿಲಿಗೆ ಯಾಕೆ ಬರೆಯಲಾಗುತ್ತಿತ್ತು?

೫.         ಊರಿಗೆ ಗುರುಗಳೊಬ್ಬರು ಬಂದು ಏನು ಹೇಳಿದರು? ಅದರ ಪರಿಣಾಮವೇನಾಯಿತು?

೬.         ಬಂಜಾರ ಮಹಿಳೆಯ ವಿಶೇಷತೆ ಏನು?

೭.         ಬಾಲಕ ಸಿದ್ಧಲಿಂಗಯ್ಯನವರ ತಂದೆ ಯಾಕೆ ಪೋಲೀಸ್ ಸ್ಟೇಷನ್ನಿಗೆ ಹೋಗಬೇಕಾಯಿತು?

೮.         ಬಾಲಕ ಸಿದ್ಧಲಿಂಗಯ್ಯನವರಿಗೆ ಬಸ್ಸುಗಳೆಂದರೆ ಯಾಕೆ ಭಯ ಪಡುವಂತಾಯಿತು?

೯.         ಬಾಲಕ ಸಿದ್ಧಲಿಂಗಯ್ಯನವರು ಶಾಲೆಗೆ ಹೇಗೆ ಸೇರಿದರು? ವಿವರಿಸಿ.

೧೦.      ಶಾಲೆಯಲ್ಲಿ ಬಾಲಕ ಸಿದ್ಧಲಿಂಗಯ್ಯನವರು ಯಾವುದಕ್ಕೆ ಹೆಸರಾಗಿದ್ದರು? ವಿವರಿಸಿರಿ.

೧೧.      ಶಾಲೆಯಲ್ಲಿ ಬಾಲಕ ಸಿದ್ಧಲಿಂಗಯ್ಯನವರಿಗೆ ಆದ ಅನುಭವಗಳನ್ನು ಬರೆಯಿರಿ.

೧೨.      ಬಾಲಕ ಸಿದ್ಧಲಿಂಗಯ್ಯನವರು ಮಾಗಡಿ ಬಿಟ್ಟು ಮಂಚನಬೆಲೆಗೆ ಯಾಕೆ ಹೋಗಿ ನೆಲೆಸಿದರು?

೧೩.       ಬಾಲಕ ಸಿದ್ಧಲಿಂಗಯ್ಯನವರ ತಾತನ ಮನೆಯಲ್ಲಿ ಮದ್ಯಪಾನ ಯಾಕೆ? ಮಾಡುತ್ತಿರಲಿಲ್ಲ?

೧೪.       ಅವ್ವೇರಹಳ್ಳಿಯಲ್ಲಿ ಬಾಲಕ ಸಿದ್ಧಲಿಂಗಯ್ಯನವರ ಅನುಭವಗಳನ್ನು ಬರೆಯಿರಿ.

೧೫. ಆಣೆ ಕೆಂಪಯ್ಯನ ದೊಡ್ಡಿ ಎಂಬ ಊರಿನಲ್ಲಿ ಬಾಲಕ ಸಿದ್ಧಲಿಂಗಯ್ಯನವರಿಗಾದ ಅನುಭವಗಳನ್ನು ಬರೆಯಿರಿ.

ಹೆಚ್ಚಿನ ಓದು

ಡಾ.ಸಿದ್ಧಲಿಂಗಯ್ಯ : ಊರುಕೇರಿ – ಆತ್ಮಚರಿತ್ರೆ

ಡಾ. ಅರವಿಂದ ಮಾಲಗತ್ತಿ : ಗೌರ್ಮೆಂಟ್ ಬ್ರಾಹ್ಮಣ – ಆತ್ಮಚರಿತ್ರೆ

ಶಿವರುದ್ರ ಕಲ್ಲೋಳಿಕರ್ : ಹೊಲಗೇರಿ ರಾಜಕುಮಾರ – ಆತ್ಮಚರಿತ್ರೆ