“”ಕೇಳಸ್ತ ಪಾರ್ವತಿ, ಬೇಗ ಒಂದಿಷ್ಟು ಕಾಫಿ ಕಷಾಯ ಮಾಡು ನೋಡುವ. ಸಂತೆ ಎಂದಾದರೂ ಅಬುಬ್ಯಾರಿ ಬಂದಾನಷ್ಟೆ. ದುಡ್ಡು ಪಾವತಿ ಮಾಡುವ ಯೋಚನೆ ಇಲ್ಲದಿದ್ದರೂ ಹಡಿಗೆ ಮಾತು ಆಡುವುದಕ್ಕೇನಂತೆ. ಈ ಬ್ಯಾರಿ, ಪರ್ಬುಗಳ ಸಹವಾಸವೇ ಬೇಡವಪ್ಪ – ಎಂದವನು ನಾನು. ಆದರೆ ಅಚ್ಚತಯ್ಯ ಬಿಟ್ಟರಷ್ಟೆ. ಮಧ್ಯಸ್ಥಿಕೆ ಮಾಡಿ ಹಣ ಕೊಡಿಸಿದ. ಈಗ ಅದೇ ಅಚ್ಚುತಯ್ಯ…”’’

ಅಜ್ಜ ಸಂತೆ ಮಾತೆತ್ತಿದ್ದನ್ನು ಕೇಳಿಯೇ ರಾಮ ತಕತಕ ಕುಣಿದಾಡಿದ. ಆಗಲೇ ಅವನ ವರಾತ ಪ್ರಾರಂಭವಾದದ್ದು. ಪಾರ್ವತಿಯ ಸೆರಗು ಹಿಡಿದೇ ಓಡಾಡಿದ. ‘ಅಮ್ಮ, ಅಮ್ಮ’ ಅಂತ ನಾಲ್ಕು ನಾಲ್ಕು ಸರ್ತಿ ಕೊರಳು ಉದ್ದಮಾಡಿ ಕೇಳಿದ. “”ಎಂಥದು ಮಾಣಿ ನಿಂದು ಬೆಳಗ್ಗಾತ ಎದ್ದು? ಇಶ್ಯಪ್ಪ”” ಎಂದು ಸಿಟ್ಟು ಮಾಡಿಕೊಂಡೇ ಅಗ್ಗಿಷ್ಟಿಕೆ ಮೇಲೆ ಕಾಫಿಗೆ ನೀರಿಟ್ಟಳು.

ಒಳಕೋಣೆಯಿಂದ ಪಾರ್ವತಿಯ ತಾಯಿ ಕಲ್ಯಾಣಿ ಉಬ್ಬುಸದ ದನಿಯಲ್ಲೇ “”ಹೌದ ಪಾರ್ವತಿ, ಏನಂತೆ ಮಾಣಿಯದು? ಯಾಕೆ ಬಯ್ಯುತ್ತಿದ್ದಿ, ಇವತ್ತು ಸಂತೆಯಲ್ಲವೆ ಕಳುಹಿಸಬಾರದ? ಶೆಣೈ ಮಕ್ಕಳು ಹೇಗೂ ಅಂಗಡಿಯಿಡಲು ಹೋಗುತ್ತಾರಷ್ಟೆ. ಅವರೊಟ್ಟಿಗೆ ಹೋಗಬಹುದಲ್ಲ. ಇವರೂ ಆ ಕಡೆ ಹೋಗುವವರು. ಬರುವಾಗ ಮಾಣಿಯನ್ನು ಕರೆತನ್ನಿ ಎಂದರೆ ಕೂಡದು ಎನ್ನಲಾರರಷ್ಟೆ”” ಎಂದಳು.

ರಾಮನಿಗೆ ಖುಷಿಯಾಯಿತು. ಚಂಗನೆ ಅಜ್ಜಿಯ ಕೋಣೆಗೆ ಓಡಿದ. ಅವಳು ಅವನನ್ನು ಸಂತೈಸುವುದು, ‘ಆಯಿತು ಮಗು. ಸುಮ್ಮನಿರಬಾರದೆ ಒಮ್ಮೆ. ಮೈಗೊಂದಿಷ್ಟು ನೀರು ಹಾಕಿ ಕಳುಹಿಸು ಎಂದು ಹೇಳುತ್ತಾನೆ ಅವಳಿಗೆ’ ಎನ್ನುವುದು ಪಾರ್ವತಿಗೂ ಕೇಳಿಸಿತು. ಅಲ್ಲಿಂದ ಮತ್ತೆ ಅಮ್ಮನ ಕಾಲುಬುಡಕ್ಕೆ ಓಡಿ ಬಂದ. ‘”ಅಮ್ಮ ಅಮ್ಮ”’ ಎಂದು ಗೊಣಗಿದ. “ಆಯಿತು ಮಾಣಿ, ನಂಗೆಕಾಫಿ ಮಾಡುವಷ್ಟಾದರೂ ಪುರುಸೊತ್ತು ಕೊಡುತ್ತೀಯಷ್ಟೆ. ಮತ್ತೆ ಅಪ್ಪಯ್ಯ ಹೊತ್ತಾಯಿತೆಂದು ಸಿಟ್ಟಾದಾರು”” ಎಂದಳು. ಸಿಟ್ಟಿನಲ್ಲಿ ರಾಮ ಮಲಗುವ ಕೋಣೆಗೆ ಚಿಮ್ಮಿದ. ಕಾಲುಮಣೆಯನ್ನು ಗೋಡೆಗೆ ತಳ್ಳಿ ಅದರ ಮೇಲೆ ನಿಂತು, ಕೈಕಾಲು, ಕೊರಳು ಉದ್ದಮಾಡಿ ತೂಗು ಮಣೆಯ ಮೇಲೆ ಇದ್ದ ತನ್ನ ವಸ್ತ್ರ ಎಳೆಯಲೆತ್ನಿಸಿದ. ಕಾಲುಮಣೆ ಜಾರಿ ಅಂಗಾತ ಬಿದ್ದ. ಮೇಲಿಂದ ಬಟ್ಟೆ ಬರೆಯಲ್ಲ ಮೈ ಮೇಲೆ ಮಗುಚಿಕೊಂಡುವು. “ಹೋ” ಎಂದು ಚೀರಿದ ಹೊಡೆತಕ್ಕೆ ಪಾರ್ವತಿ, ಮಂಜಯ್ಯ ಓಡಿಬಂದರು. ಕಲ್ಯಾಣಿ ಮಲಗಿದ್ದಲ್ಲಿಂದಲೇ “‘ಮಾಣಿಗೆ ಏನಾಯಿತು”’ ಎಂದು ನಾಲ್ಕು ಬಾರಿ ಸೊರಗಿದ ಸ್ವರದಲ್ಲೇ ವಿಚಾರಿಸಿದಳು. ““ನನಗೆ ಸಾವು ಆದರೂ ಏಕೆ ಬಾರದು. ಈ ಮಾಣಿಯಿಂದ ನನಗೆ ಆಗದು”” ಎನ್ನುತ್ತ ಕೂಗಿ ಕೊಂಡೇ ಪಾರ್ವತಿ “ಅವನನ್ನು ಯಾಕೆ ಹಾಗೆ ಜಪ್ಪುತ್ತಿ. ಅವಕ್ಕೆ ಏನು ತಿಳಿಯುತ್ತದೆ”” ಎಂದು ಅಜ್ಜ ಅಮ್ಮನಿಗೆ ಅಂದ ಮಾತಿಂದ ಉತ್ತೇಜನಗೊಂಡು ರಾಮ ಮತ್ತಷ್ಟು ಜೋರಾಗಿ ವಾಲಗ ಊದಿದ. ಕೋಣೆಯಿಂದ ಕಲ್ಯಾಣಿ “ಏನಾಯಿತು. ಏನಾಯಿತು” ಎಂದು ಕೇಳಿಯೇ ಕೇಳಿದಳು. “”ಎಂಥದೂ ಆಗಿಲ್ಲ. ನೀನು ಸಮ್ಮನೆ ಮಲಗಬಾರದೇ”” ಎಂದರು ಮಂಜಯ್ಯ.

ರಾಮಂದು ಲೆಕ್ಕಕ್ಕೊಂದು ಸ್ಥಾನವೂ ಆಯಿತು. ಹಸಿವು ಎಂದು ರಾಗಮಾಲಿಕೆಯೂ ಪ್ರಾರಂಭವಾಯಿತು. ಹಿಂದಿನ ದಿನ ಮಾಡಿದ್ದ ಮಡ್ಡಿ ಉಳಿದದ್ದು ತನ್ನ ಪುಣ್ಯವೆಂದು ಕೊಂಡಳು ಪಾರ್ವತಿ. ಎರಡು ಮೂರು ಹೋಳು ಅವನ ಕೈಗೆ ಇತ್ತಳು. ಪೂರ್ತಿ ತಿನ್ನುವಷ್ಟು ಪುರುಸೊತ್ತು ಅವನಿಗೆಲ್ಲಿದೆ? ಇಷ್ಟು ಹೊಟ್ಟೆಗಾದರೆ, ಅಷ್ಟು ಮುಖಕ್ಕೆ ಆಯಿತು. ಅಮ್ಮನಿಂದ ಬೈಯಿಸಿಕೊಂಡದ್ದೂ ಆಯಿತು.

ಊರಿನ ಗುಡ್ಡದ ಮೇಲಿನ ಶಾಲೆಗೆ ವಾರಕ್ಕೊಂದೇ ದಿನ ರಜೆಯಷ್ಟೆ. ಆದೂ ರವಿವಾರ. ಹಾಗಾಗಿ ಶಾಲೆಗೆ ಕರೆದೊಯ್ಯಲು ಬರುವ ಸುಟ್ಟ ಮೋರೆಯ ಸೀತುವಿನ ಕಾಟವೂ ಇಲ್ಲ. ಮತ್ತೆ ಅದೇ ದಿನ ಸಂತೆ ಮಾಳದಲ್ಲಿ ಸಂತೆ. ಶಾಲೆಯಲ್ಲಿ ಕಾಲುಮಣೆಯ ಮೇಲೆ ಕೂತು ಅ ಆ ಇ ಈ ತಿದ್ದುವುದಕ್ಕಿಂತ ಇದೆಷ್ಟು ಚೆಂದ ಎನಿಸದಿರುತ್ತದೆಯೇ ರಾಮನಿಗೆ.

“ಮಂಜಯ್ಯ, ಪಾರ್ವತಿ ಕೊಟ್ಟ ಕಷಾಯ ಕುಡಿದು ಕೆರವನ್ನು ಕಾಲಿಗೆ ಸಿಕ್ಕಿಸಿಕೊಂಡು ಅಂಗಳ ದಾಟಿದ್ದೂ ಆಯಿತು.

ಪಾರ್ವತಿ ಮತ್ತೆ ಮತ್ತೆ ರಾಮನ ದಿರಿಸನ್ನು ಸರಿಪಡಿಸಿದಳು. ರಾಮನಿಗೆ ಎಂಥದೋ ನೆನಪಾಗಿ ಅವಳಿಂದ ಬಿಡಿಸಿಕೊಂಡು ಅಜ್ಜಿಯ ಕೋಣೆಗೆ ಓಡಿದ. ““ಏನು ಮಗು, ಏನು ಎನ್ನುವುದು, ನನ್ನ ನನ್ನ  ದಿಂಬಿನಡಿ ಏನುಂಟು ಎಂದು ಕೈ ಹಾಕುತ್ತಿದ್ದಿ” ಎನ್ನುವುದು ಕೇಳುತ್ತಿದೆ. “ಬರುತ್ತೀಯೋ ಇಲ್ಲವೋ ಒಮ್ಮೆ ಆಕಳಿಗೆ ಕಲಗುಚ್ಚು ಕೊಡಬೇಕು ನಾನು. ಒಂದು ಸರ್ತಿ ನೀನು ಹೊರಡು ಮಾರಾಯ ಸಂತೆಗೋ ಪಂತೆಗೂ”” ಎಂದು ಪಾರ್ವತಿ ಕೂಗಿ ಕರೆದಳು. ಇಷ್ಟಗಲ ಮೋರೆ ಮಾಡಿಕೊಂಡು ಓಡಿಬಂದ. ಚಡ್ಡಿಯ ಕಿಸೆ ಬಾತುಕೊಂಡಿತ್ತು – ಸಣ್ಣ ಕಪ್ಪೆಯನ್ನು ನುಂಗಿದ ದೊಡ್ಡಕಪ್ಪೆಯ ಹೊಟ್ಟೆಯ ಹಾಗೆ. “ಕಿಸೆಯಲ್ಲಿ ಏನು” ಎಂದು ಕೈ ಹಾಕಿದಳು ಪಾರ್ವತಿ. ನಗುಬಂತು. ಒಂದೋ ಎಡರೋ ಗೋಲಿ, ಅಜ್ಜಯ್ಯನ ಖಾಲಿ ನಶ್ಯದ ಡಬ್ಬಿ. ಅದರೊಳಗೆ ಟೊಣ ಟೊಣ ಎನ್ನುವ ಬಳಪದ ತುಣುಕುಗಳು. ಮೊಳೆಯಿಲ್ಲದ ಬುಗುರಿ, ತಗಡಿನದೊಂದು ಪೀಪಿ. “”ಇದೆಲ್ಲಿದ್ದು”” ಎಂದಳು. ““ಅಪ್ಪು ಕೊಟ್ಟಿದ್ದು”” ಎಂದ. “”ಹೌದು ಅಪ್ಪು ಕೊಟ್ಟಾನಲ್ಲವೆ, ನೀನೆ ಎತ್ತಿ ಕೊಂಡು ಬಂದಿರಬೇಕು”” ಎಂದು ಬೈದಳು. “ಇಲ್ಲ ಅಮ್ಮ ಅವನೇ ಮತ್ತೆ ಕೊಟ್ಟಿದ್ದು”” ಎಂದು ಒಮ್ಮೆ ಊದಿ ಕಿಸೆಗೆ ಹಾಕಿದ. ಇಂಥ ಸುಡುಗಾಡೋ ಎಂದು ಗೊಣಗಿ ಹಣೆಯಿಂದ ಅವನ ಕೂದಲನ್ನು ಸರಿಮಾಡುವಷ್ಟರಲ್ಲಿ ಶೆಣೈ ಮನೆ ಅಪ್ಪು ಬಾಗಿಲಿಗೆ ಬಂದ. “”ಸಂತೆಗೆ ಕರೆದುಕೊಂಡು ಹೋಗುತ್ತೀಯಷ್ಟೆ”” ಎಂದು ಕೇಳಿದಲು. “”ಅದಕ್ಕೆ ಬಂದದ್ದು”” ಎಂದ ಅಪ್ಪು.

ಇಬ್ಬರೂ ಹೊರಟು ನಿಂತರು. ಪಾರ್ವತಿ ಸೊಂಟದ ಬಾಳೇಕಾಯಿಯಿಂದ ಕಾಸು ತೆಗೆದು ಒಬ್ಬೊಬ್ಬರ ಕೈಗೂ ಎರಡೆರಡು ಪಾವಣೆಯಿತ್ತಳು. “”ಕೌಂಟು ಪದಾರ್ಥ ಕೊಡಿಸಬೇಡ” ರಾಮನಿಗೆ” ಎಂದಳು. “”ಆಯಿತು”” ಎಂದ ಅಪ್ಪು. ರಾಮನ ಕೈಹಿಡಿದು ಜಗುಲಿಗೆ ಬಂದ.

ಅಂತೂ ಇಂತೂ ಸುಮಾರ ಹತ್ತು ತಾಸಿಗೆ ರಾಮನ ಸವಾರಿ ಸಂಗಡಿಗ ಅಪ್ಪುವಿನೊಟ್ಟಿಗೆ ಸಂತೆಗೆ ಹೊರಟಿತು. ಮೊನ್ನೆ ಮೊನ್ನೆಯಷ್ಟೆ ಪೆರಡೂರಿನಿಂದ ಬಂದಿದ್ದ ಮಂಜಯ್ಯನ ಅಕ್ಕ ಕಾವೇರಿ ಕೊಡಿಸಿದ್ದ ರಬ್ಬರಿನ ಷೂ ಕಾಲಿಗೆ. ಮೈಸೂರಿನ ಚಕ್ಕಿನ ಚಡ್ಡಿ, ಮಕಮಲ್ಲು ಕೋಟು. ಕೋಟಿನ ಕಾಲರು ಮುಚ್ಚಿ ಅಂಗಿಯ ಕಾಲರು. ಮಂಡೆಗೆ ನಕ್ಕಿ ಬಿಡಿಸಿದ ಮಕಮಲ್ಲಿನ ಟೊಪ್ಪಿಗೆ, ಕಿಸೆಯಲ್ಲಿ ಎರಡು ಪಾವಣೆ, ಇನ್ನೇನು ಬೇಕು ರಾಮನ ಸಂತಸಕ್ಕೆ?

ಸಂತೆಮಾಳ ಹತ್ತಿರಹತ್ತರ ಬರುತ್ತಿದ್ದಂತೆ ಇಬ್ಬರ ಉತ್ಸಾಹಕ್ಕೂ ಎಣೆ ಇಲ್ಲದಂತಾಯಿತು. “ರಾಮಾ, ಸಂತೆಯಲ್ಲಿ “ನಿನಗೆ ಏನೆಲ್ಲ ಬೇಕು ಎನ್ನುವುದು ಈಗಲೇ ಹೇಳು. ಮತ್ತೆ ಅಲ್ಲಿ ರಂಪ ಮಾಡುವುದು ಬೇಡ. ಕಳೆದ ಸರ್ತಿಯ ಹಾಗೆ”” ಎಂದು ಅಪ್ಪು ಎಚ್ಚರಿಸಿದ. ಏನು ಬೇಡ ರಾಮನಿಗೆ? ಬತ್ತಾಸು, ಸೀಖಾರದ ಕಡ್ಡಿ, ಬೆಂಡು – ಇವಂತೂ ಬೇಕೇ ಬೇಕಷ್ಟೆ. ಸಾಧ್ಯವಿದ್ದರೆ ಕಾಮತನ ಅಂಗಡಿಯಲ್ಲಿ ಗೋಲಿಬಜೆ. ಅಮ್ಮನಿಗೆ ತಿಳಿದರೆ? ಆದರೇನಂತೆ? ಅಪ್ಪು ಕೊಡಿಸಿಯೇ ಕೊಡಿಸುತ್ತಾನೆ. ಕಳೆದ ಸರ್ತಿಯೂ ಕೊಡಿಸಿದ್ದಾನಷ್ಟೆ. ಕಾಮತನ ಅಂಗಡಿಯಲ್ಲಿ ಮತ್ತೊಂದು ಆಕರ್ಷಣೆಯೂ ಉಂಟು ಅವನಿಗೆ. ದೊಡ್ಡದೊಂದು ಪಾತ್ರೆಯಲ್ಲಿ ಕೊಣ ಕೊಣ ಸದ್ದು ಬರುತ್ತದಲ್ಲ. ಅದನ್ನು ಕೇಳುವುದೇ ಚಂದ. ಆದರೆ ಆ ಪಾತ್ರೆ ಯಾಕೆ ಹಾಗೆ ಸದ್ದು ಮಾಡುತ್ತದೆ ಎಂಬ ಆಶ್ಚರ್ಯವೂ ಉಂಟು. ಒಮ್ಮೆ ಅಪ್ಪುಗೆ ಆ ಪ್ರಶ್ನೆಯನ್ನು ಹಾಕಿಯೂ ಹಾಕಿದ. ಪಾತ್ರೆಯೊಳಗೆ ನೀರು ಉಂಟಲ್ಲ, ಅದರೊಳಗೆ ಬಿಲ್ಲೆ ಹಾಕಿರುತ್ತಾರೆ” ಎಂದ ಅಪ್ಪು, ““ಬಿಲ್ಲೆ ಯಾಕೆ ಹಾಕುತ್ತಾರೆ”” ಎಂದು ಇವನದು ಮರುಪ್ರಶ್ನೆ. “”ಯಾಕೆ ಅಂದರೆ?” ಅದು ಅಪ್ಪುಗೂ ತಿಳಿಯದು. ಆದರೆ ರಾಮನ ಮುಂದೆ ತನ್ನ ಅಜ್ಞಾನವನ್ನು ಬಹಿರಂಗಪಡಿಸುವುದು ಉಚಿತವೆ? “ನೀನಿನ್ನೂ ಚಿಕ್ಕವ. ದೊಡ್ಡವನಾದ ಮೇಲೆ ನಿನಗೆ ಅರ್ಥವಾಗುತ್ತದೆ” ಎಂದು ಅವನು ತನಗಿಂತ ಚಿಕ್ಕವ ಎನ್ನುವುದನ್ನು ತೋರಿಸಿ ಅವನ ಬಾಯಿ ಮುಚ್ಚಲೆತ್ನಿಸಿದ್ದಾನೆ. ““ದೊಡ್ಡವ ಎಂದರೆ ನಿನ್ನಷ್ಟ?” ಎಂದು ಕೇಳಿದ ರಾಮ. “ಹೌದು, ನೀನು ಬಾಯಿಮುಚ್ಚು” ಎಂದು ಹಿರಿಯನಂತೆ ವರ್ತಿಸಿದ ಅಪ್ಪು. ಬಾಯಿ ಮುಚ್ಚಿದರೆ ಏನು? ಮನಸ್ಸು ಮುಚ್ಚಿರಲಾರದಷ್ಟೆ. ಸಂತೆಯಲ್ಲಿ ದೊರೆಯಬಹುದಾದ ಯಾವತ್ತೂ ವಸ್ತು ಒಡವೆಗಳ ಬಗ್ಗೆ ರಾಮನ ವಿಚಾರ ಲಹರಿ ಹರಿದಿದೆ. ಜೊತೆಯಲ್ಲೇ ಅದು ಏನು, ಇದು ಏನು, ಯಾಕೆ, ಎಲ್ಲಿಂದ, ಹೇಗೆ ಇತ್ಯಾದಿ ಪ್ರಶ್ನೆಗಳನ್ನೂ ಕೇಳುತ್ತಿದ್ದಾನೆ. ಅಪ್ಪು ಹಿರಿಯನಾದರೇನಂತೆ – ಅವನಿಗೆಲ್ಲಿದೆ ವ್ಯವಧಾನ ರಾಮನ ಕುತೂಹಲಗಳಿಗೆ ಸಮಜಾಯಿಸಿ ಕೊಡಲು. ಮತ್ತೊಮ್ಮೆ ಗದರಿಸಿಯೂ ಆಯಿತು. ಅದಕ್ಕೆ ಕಾರಣವೂ ಇಲ್ಲದಿಲ್ಲ. ರಾಮನ ತಾಯಿ ಎರಡು ಪಾವಣೆ ಕೊಟ್ಟದ್ದು ಸರಿಯಷ್ಟೆ. ಆದರೆ ರಾಮನಿಗಿಂತ ಹಿರಿಯನಾದ ಅವನಿಗೆ ಅದು ಯಾತಕ್ಕೆ ಬಂದೀತು? ಮನೆಯಿಂದ ಹೊರಡುವಾಗಲೇ ಅಕ್ಕನನ್ನು ಪುಸಲಾಯಿಸಿ ಅರ್ಧ ಆಣೆಯ ಎರಡು ಬಿಲ್ಲೆ ತೆಗೆದುಕೊಂಡಿದ್ದಾನೆ. ತಾಯಿಯ ಹತ್ತಿರ ಕೇಳಿ ಅರ್ಧ ಆಣೆಯಾದರೆ, ಕೇಳದೆಯೇ ಜೀರಿಗೆ ಡಬ್ಬದಿಂದ ಒಂದೆರಡು ನಾಣ್ಯ ಹಾರಿಸಿದ್ದಾನೆ. ಲೆಕ್ಕ ಮಾಡಿದವರು ಯಾರು? ಒಟ್ಟು ಅಷ್ಟು ಹಣ ಅವನ ಚಡ್ಡಿ ಕಿಸೆಯಲ್ಲಿ ಝಣ ಝಣ ಗುಟ್ಟುತ್ತಿದೆ. ಅದನ್ನು ಹೇಗೆ ಹೇಗೆ ವಿಲೇವಾರಿ ಮಾಡುವುದೆಂಬುದೇ ಅವನ ಚಿಂತೆ. ಒಂದು ಪಾವಣೆಯಲ್ಲಿ ಕಾಮತನ ಹೋಟೆಲಿನಲ್ಲಿ ಸಜ್ಜಿಗೆ ಬರುತ್ತದಷ್ಟೆ. ಒಂದಿಷ್ಟು ಹಲ್ಲು ಕಿಸಿದರೆ ನೆಂಚಿಕೊಳ್ಳಲು ಒಂದು ಪಕೋಡವೋ ಮತ್ತೊಂದೋ ಕೊಟ್ಟಾನು. ಕೊಡದೆ ಏನು? ತಮ್ಮ ಅಂಗಡಿಯಲ್ಲಿ ಬೆಲ್ಲ ಸಾಬೂನು ಎಂತ ಸಾಲ ಕೊಂಡೊಯ್ಯುವುದಿಲ್ಲವೆ ಅವನು? ಲಂಬಾಣಿ ಈ ಸರ್ತಿಯೂ ಅಂಗಡಿಯಿಟ್ಟಿದ್ದರೆ ಸಣ್ಣ ರಾಗಮಾಲಿಕೆಯನ್ನು ಕೊಳ್ಳಲಿಕ್ಕೇಬೇಕು. ಹೀಗವನ ವಿಚಾರಲಹರಿ ಹರಿಯುವಾಗ ಈ ಹಾಳು ರಾಮ ಅದೇನು, ಇದೇನು ಎಂದು ಕೇಳಿದರೆ ಅವನಿಗೆ ಸಿಟ್ಟು ಬಾರದೆ ಮತ್ತೇನು ಬಂದೀತು?

ಹಾಗೂ ಹೀಗೂ ಸಂತೆ ಮೈದಾನಕ್ಕೆ ಬಂದದ್ದೂ ಆಯಿತು – ಬಿಸಿಲು ನೆತ್ತಿಗೇರುವಾಗ ರಾಮನಿಗೆ ನೀರಡಿಕೆಯಾಗಿ, ಅಪ್ಪುಗೆ ಹಾಗೆಂದು ಹೇಳಿದ. “ಹಾಗಿದ್ದರೆ ಷರಬತ್ತು ಕುಡಿಯುವ” ಎಂದು ಷರಬತ್ತಿನ ಅಂಗಡಿಗೆ ರಾಮನನ್ನು ಒಯ್ದ. ಅಲ್ಲಿ ನೋಡಿದರೆ ಏನನ್ನುವುದು? ನಮುನಮೂನೆ ಬಣ್ಣದ ಷರಬತ್ತಿನ ಬಾಟಲುಗಳು ಸಾಲುಸಾಲು. ಮೇಲೆ ಲಿಂಬೆಹಣ್ಣು. ಆ ಬದಿಯಲ್ಲಿ ಕೊಯ್ ಟಸ್ ಎಂದು ಸದ್ದು ಮಾಡಿ ಸೋಡ ಕೊಡವಾತ, “ಯಾವುದಾದೀತು” ಎಂದು ಅಪ್ಪು ಕೇಳಿದ. ಯಾವ ಬಣ್ಣದ್ದೆಂದು ಹೇಳುವುದು? ಕೊಡುವುದಾದರೆ ಎಲ್ಲ ಬಣ್ಣದ್ದೂ ಚಂದವೆ. ““ಯಾವುದು ಬೇಗ ಹೇಳಿ”” ಎಂದಳು ಅಂಗಡಿಯಾಕೆ. ನೇರಳೆ ಬಣ್ಣದ ಕಡೆ ಬೆರಳು ಮಾಡಿದ ರಾಮ. ಆಕೆ ಗಾಜಿನ ಲೋಟ ಒಂದನ್ನು ಬಾನಿಯ ನೀರಿಗೆ ಅದ್ದಿ ತೆಗೆದು ಅದಕ್ಕೊಂದಿಷ್ಟು ಬೆಲ್ಲದ ಪಾಕ ಹುಯ್ದಳು. ನೇರಳೆಗಿಂತ ಕೆಂಪು ಚೆಂದವೆನಿಸಬೇಕೆ ರಾಮನಿಗೆ? “ಅದು ಆದೀತು” ಎಂದ “ಹೇ ಮಕ್ಕಳೇ ಆದೀತು ನೀವು” ಎಂದು ಗೊಣಗಿ ಕೆಂಪು ಬಣ್ಣದ ನೀರನ್ನು ಪಾಕಕ್ಕೆ ಹೊಯ್ದಳು. ತಂಪು ಬೀಜ ಒಂದು ಚಮಚ ಹಾಕಿದಳು. ಚಮಚದಿಂದ ಗ್ಲಾಸಿನೊಳಗೆ ಟೊಣ ಟೊಣ ಮಾಡಿ ಮುಂದೆ ಚಾಚಿದಳು. ಆ ಬದಿ ಥೋರದವನು ಎದೆಯ ಮೇಲೆ ಸೋಡಾ ಬಾಟಲನ್ನು ಇಟ್ಟು, ಹೆಬ್ಬೆರಳಿನಿಂದ ಗೋಲಿ ಅಮುಕಿ, ಟೊಂಯ್ ಎಂದು ಸದ್ದು ಮಾಡಿದಾಗ ರಾಮನ ಗಮನ ಅತ್ತ ಸೆಳೆಯಬೇಕೆ? ಬಾಟಲಿನಿಂದ ನೊರೆ ಉಕ್ಕಿ ಉಕ್ಕಿ ಬಂದಾಗ, ಇದ್ಯಾವುದೂ ಬೇಡ. ಅದೇ ಆದೀತು ಎನಿಸಿ ಹಟಮಾಡಿದ. “ಕುಡಿ ಮಹಾರಾಯ ಒಮ್ಮೆ. ನಿನ್ನನ್ನು ಕರೆದು ತಂದದ್ದೆ ಆಗಲಿಲ್ಲ ನೋಡು” ಎಂದೂ ಅಪ್ಪು ಏರುಸ್ವರದಲ್ಲಿ ಹೇಳಿದಾಗ, ವಿಧಿಯಿಲ್ಲದೆ ಆಕೆ ಕೊಟ್ಟಿದ್ದನ್ನು ಕುಡಿದ. ಕುಡಿದ ಎಂದರೆ ಏನು? ಅರ್ಧಕ್ಕರ್ಧ ಕೋಟಿನ ಮೇಲೆ ಚೆಲ್ಲಿತು. ಒಂದಿಷ್ಟು ಮಾತ್ರ ಹೊಟ್ಟೆಗೆ ಹೋಯಿತು. ಬಾಯಿ, ಗಲ್ಲ, ಕೋಟಿನ ಮುಂಭಾಗವೆಲ್ಲ ಕೆಂಪುಮಯ. “ಪಾವಣೆ ಬರಲಿ” ಎಂದಳು. “ಕೊಡು” ಎಂದ ಅಪ್ಪು. ರಾಮನಿಗೆ ಅಳುವೇ ಬಂದಿತು. ಅಪ್ಪುಗೆ ಕೋಪ ಬಾರದಿರುತ್ತದೆಯೇ? “ನೀನೊಂದು….” ಎಂದು ಏನೋ ಗೊಣಗಿ ತನ್ನ ಕಿಸೆಯಿಂದಲೇ ಹಣ ತೆತ್ತು ರಾಮನನ್ನು ದರದರ ಎಳೆದುಕೊಂಡು ಹೋದರೆ “ಬಾಟಲಿನಲ್ಲಿ ಗೋಲಿ ಹ್ಯಾಗೆ ಹಾಕುತ್ತಾರೆ” ಎಂದು ಕೇಳುವುದೇ ಈ ಹಾಳು ರಾಮ? “”ಒಮ್ಮೆ ಬಾಯಿ ಮುಚ್ಚಿಬಾ ನೀನು”” ಎಂದ ಅಪ್ಪು.

ಮುಂದೆ ಇನ್ನೊಂದು ಬೇರೆಯೇ ಪ್ರಪಂಚ ಎದುರಾಗಬೇಕೆ ಈ ಮಕ್ಕಳಿಗೆ? ‘ಮುಂಬಯಿ ಪಟ್ಣ ನೋಡು’, ಪಟ್ಟಣದ ಸೂಳೆ ನೋಡು ಎಂದು ಗೆಜ್ಜೆಯ ತಾಳಕ್ಕೆ ರಾಗವನ್ನು ಮೇಳೈಸಿ ಹಾಡುತ್ತಿದ್ದವನ ಸುತ್ತ ಹತ್ತಾರು ಮಕ್ಕಳು ನಿಂತಿದ್ದರು. ಮಕ್ಕಳೇ ಏನು – ಕೆಲವು ಗೌಡಗೌಡತಿಯರೂ ಅವನು ಹೇಳುತ್ತಿದ್ದ ಪದಕ್ಕೆ ನಾಚಿದವರಂತೆ ನಿಂತಿದ್ದರು. ಮತ್ತೆ ಇಂಥೆಲ್ಲ ಜಾತ್ರೆಯೇ ಅಲ್ಲಿರುವಾಗ ರಾಮನಿಗೆ ಅದೇನು ಎನ್ನುವ ಕುತೂಹಲ ಕೆರಳದಿರುತ್ತದೆಯೇ? ಕುತೂಹಲ ಹಟವಾಗಲು ಎಷ್ಟು ವೇಳೆ ಬೇಕಾದೀತು? ಹಟ ಸಾಧಿಸದೆ ಇದ್ದಾಗ ಇರುವುದು ಒಂದೇ ಒಂದು ಸಾಧನೆಯೆಂದರೆ ಅಳುವಷ್ಟೇ. ಅಪ್ಪು ರಾಮನನ್ನೇ ಏನು-ರಾಮನ ಸಂತಾನವನ್ನೇ ಶಪಿಸಿದ. ಹಾಗೆ ನೋಡಿದ್ದರೆ ಅವನಿಗೂ ಅದನ್ನು ನೋಡುವ ಆಸೆಯುಂಟು. ಹಿಂದೊಮ್ಮೆ ನೋಡಿಯೂ ನೋಡಿದ್ದಾನೆ. ಅಂದ ಮಾತ್ರಕ್ಕೆ ಇನ್ನೊಂದು ಬಾರಿ ನೋಡಬಾರದೆಂದೇನಿಲ್ಲವಲ್ಲ. “ಆದೀತು ಮಹಾರಾಯ ನೋಡು” ಎಂದ ರಾಮನಿಗೆ. ರಾಮ ಎರಡು ಕಣ್ಣಿಗೂ ಕೈಮರೆ ಮಾಡಿ ಇಣುಕಿ ಭೂತ ಕನ್ನಡಿಯಲ್ಲಿ ನೋಡಿದಾಗ, ಆ ಸಣ್ಣ ಡಬ್ಬದೊಳಗೆ ವಿಸ್ಮಯದ ಪ್ರಪಂಚವನ್ನೇ ಕಂಡ. ಓಹೋಹೋ ಎಂದು ನಕ್ಕ. ಮುಗಿಯಿತು. ಬಾ ಎಂದರೆ ಬರುತ್ತಾನೆಯೇ? “ಇನ್ನೊಂದು ಚೂರು, ಇನ್ನೊಂದು ಚೂರು” ಎಂದು ಕುಣಿದ. ನಡಿ ನಡಿ ಎನ್ನುತ್ತ ಅವನನ್ನು ಎಳೆದು, ತಾನೂ ಒಮ್ಮೆ ನೋಡಿದ ಅಪ್ಪು.

ಡಬ್ಬದೊಳಕ್ಕೆ ನೋಡಿದ ಮೇಲಂತೂ ಪ್ರಶ್ನೆಯ ಸುರಿಮಳೆಯೇ ಉದ್ದಕ್ಕೂ. ಡಬ್ಬದೊಳಗೆ ಹೆಂಗಸೊಂದು ಬಂತಲ್ಲ. ಹ್ಯಾಗೆ ಬಂತು. ಮುಂಬೈ ಎಂದರೇನು, ಸೂಳೆ ಎಂದರೆ ಎಂಥದು-ಇತ್ಯಾದಿ ಇತ್ಯಾದಿ. ಹಾಳು ಪಿರಿಪಿರಿ ಎನಿಸಿತು ಅಪ್ಪುಗೆ.

ಬತ್ತಾಸಿನ ಅಂಗಡಿ ದೂರದಿಂದಲೇ ನೋಡಿದ ಅಪ್ಪು. “ರಾಮ, ಈಗ ನನ್ನ ಮಾತು ಕೇಳಲಿಕ್ಕೇ ಬೇಕು, ನೀನು. ನಿನ್ನ ಅಮ್ಮ ಕೊಟ್ಟ ಪಾವಣೆಯುಂಟಲ್ಲ ಅದನ್ನು ಇಲ್ಲಿ ಕೊಡು. ನಿನಗೆಂಥದು ಬೇಕೊ ಬತ್ತಸೊ, ಬೆಂಡೊ ಕೊಡಿಸುತ್ತೇನೆ. ನೀನು ಪಾವಣೆ ಕೊಡದಿದ್ದರೆ ನಿನಗೆ ಯಾವುದೂ ಇಲ್ಲ. ತಿಳಿಯತಷ್ಟೆ” ಎಂದು ಎಚ್ಚರಿಸಿದ. “ಆಯಿತು” ಎಂದು ರಾಮ, ಕಿಸಿಗೆ ಕೈ ಹಾಕಿದ. ಅಲ್ಲಿ ಇಡಿ ವಿಶ್ವವೇ ತುಂಬಿದೆಯಷ್ಟೇ – ಗೋಲಿ ಗುಜ್ಜುಗ ಎಂದು ಆ ವಿಶ್ವದಲ್ಲಿ ಪಾವಣೆ ಸುಲಭವಾಗಿ ಸಿಕ್ಕುವುದೇ? ರಸ್ತೆಯ ಬದಿಯಲ್ಲೇ ಹಾಸು ಗಲ್ಲಿನ ಪಕ್ಕ ನಿಂತರು. ರಾಮ ಶತಪ್ರಯತ್ನ ಮಾಡಿದ ಪಾವಣೆ ತೆಗೆಯಲು. ಅದು ಸಿಗದಿರಲು “ಬಿಲ್ಲೆ ಇಲ್ಲ” ಎಂದು ಘೋಷಿಸಿದ. “ಪಡ್ಜ ಆಯಿತ ಮಹಾರಾಯ. ಇಷ್ಟು ಬೇಗ ಅದು ಹೋಗುವುದಾದರೂ ಎಲ್ಲಿಗೆ” ಎಂದು ತಲೆಗೆ ಕೈ ಹೊತ್ತ ಅಪ್ಪು ಒಂದು ಉಪಾಯ ಸೂಚಿಸಿದ – “ಕಿಸೆಯಲ್ಲಿ ಏನೇನೋ ಉಂಟಲ್ಲ, ಅವೆಲ್ಲ ತೆಗೆದರೆ ಬಿಲ್ಲೆ ಸಿಕ್ಕೀತು” ರಾಮನಿಗೆ ಸರಿಯೆನಿಸಿತು. ಒಂದೊಂದಾಗಿ ಕಿಸೆಯೊಳಗಿನ ಸರಕನ್ನು ಹೊರಗೆ ತೆಗೆದು ಕಲ್ಲಿನ ಮೇಲೆ ಹರಡಿದ. ಮೊಳೆಯಿಲ್ಲದ ಬಗುರಿ ಮಹಾಪ್ರಯಾಸದಿಂದ ಹೊರಕ್ಕೆ ಬಂತು ಮೊದಲು, ನಂತರ ಬಂದದ್ದು ನಶ್ಯದ ಡಬ್ಬಿ ಟೊಣಟೊಣ ಎನ್ನುತ್ತ. ಆದಾದ ಮೇಲೆ ಬಂದದ್ದು…

ಮೋಸವಾದದ್ದು ಇಲ್ಲಿಯೇ. ಗಳಿಗೆಯಲ್ಲಿ ಗುಟ್ಟು ರಟ್ಟಾಗಿಯೇ ಹೋಗಬೇಕೆ? “ಹೋ, ನನ್ನದನ್ನು ಕದ್ದಿಲ್ಲವೇ ನೀನು” ಎನ್ನುತ್ತ ಅಪ್ಪು ಗಬಕ್ಕನೆ ಕಿತ್ತುಕೊಂಡ ಪೀಪೆಯನ್ನು ರಾಮನಿಂದ. “ಅಯ್ಯೋ ಅದು ನಂದು” ಎಂದು ಒದರಿದ ರಾಮ. “ಹ್ಯಾಗೆ ನಿಂದು ಆದೀತು. ನಿನ್ನೆ ನಮ್ಮ ಮನೆಗೆ ಬಂದವನು ಒಮ್ಮೆ ಊದುವೆ ಎಂದು ತೆಗೆದುಕೊಂಡವನು ಕೊಟ್ಟೆಯ ಮತ್ತೆ” ಎಂದು ಅಪ್ಪುವಿನ ಸವಾಲು. “ಅಯ್ಯೋ ಅದು ನಂದು. ಅಮ್ಮ ಕೊಡಿಸಿದ್ದು” ಎನ್ನುವುದು ರಾಮನ ಉತ್ತರ ಅಳುವಿನೊಂದಿಗೆ. “ಅದು ನಂದೇ” ಎಂದು ಕಿಸೆಗೆ ಸೇರಿಸಿದ ಅಪ್ಪು, ದುಃಖ ಉಕ್ಕಿ ಬಂದು ಕೈಕಾಲು ಒದರಿದ ರಾಮ, ನಾಲ್ಕು ಮಕ್ಕಳು ಸೇರಿದರು. ಒಂದಿಬ್ಬರು ಹಿರಿಯರೂ ಬಂದರು. ಹಿರಿಯನಿಗೆ ಬೈದರು ಒಬ್ಬರು. ಕಿರಿಯನಿಗೆ ಹೆದರಿಸಿದರು ಇನ್ನೊಬ್ಬರು. ರಾಮ ಅಪ್ಪುವಿನ ಕೈ ಹಿಡಿದು ಜಗ್ಗಿಸಿದ್ದಾನೆ. ಅಪ್ಪು ಕೋಪದಿಂದ ಕೈ ಝೂಡಿಸಿದ್ದಾನೆ. ಈ ಗೊಂದಲವನ್ನು ಅಪ್ಪುಗೆ ಹೇಗೋ ಒಂದು ಪೆಟ್ಟು ಬಿತ್ತು. ಕೋಪದಲ್ಲಿ ಅವನು ರಾಮನ ಬೆನ್ನಿಗೆ ಗುದ್ದಿದ. ರಾಮ ದಪ್ಪದೊಂದು ಕಲ್ಲೆತ್ತಿಕೊಂಡ. ಅಷ್ಟರಲ್ಲಿ ಯಾರೊ ಪುಣ್ಯಾತ್ಮರು ಅವನ ಕೈ ಹಿಡಿದು ಕಲ್ಲನ್ನು ಕೆಳಕ್ಕೆ ಹಾಕಿಸಿದರು. ಜಗಳಕ್ಕೆ ಕಾರಣವೇನೆಂದು ಕೇಳಿದರು. ಅಪ್ಪು ಸವಿವರವಾಗಿ ಪೀಪಿಯ ಕಥೆ ಹೇಳಿದ. “ಅಲ್ಲ ಅದು ನಂದು” ಎಂದು ನಡುನಡುವೆ ರಾಮ ಬಾಯಿ ಹಾಕಿದ. ಅತ್ತ. ಮಕ್ಕಳ ಜಗಳಕ್ಕೆ ಪುರಾವೆ ತರುವುದು ಎಲ್ಲಿಂದ? ಅತ್ತವರು ಗೆಲ್ಲುವುದು ನ್ಯಾಯವಷ್ಟೆ. ಹಿರಿ ಕಿರಿಯರ ಜಗಳದಲ್ಲಿ ಕಿರಿಯರ ಕಡೆಗೇ ಮತವಷ್ಟೆ. ಗಂಡಸು ಹೆಂಗಸು ಜಗಳ ವಾಡಿದರೆ ಹೆಂಗಸಿಗಲ್ಲದೆ ಗಂಡಸಿಗೆ ಯಾರು ನ್ಯಾಯ ಕೊಡುತ್ತಾರಂತೆ? ಅಪ್ಪುವಿನ ಮಾತೇ ಸುಳ್ಳು ಎಂದು ತೀರ್ಮಾನಿಸಿದರು ಆ ಹಿರಿಯರು. ರಾಮನಿಗೆ ಪೀಪಿ ದೊರೆಯಿತು. ಅಪ್ಪುಗೇ ನಾಲ್ಕು ಬೈಗಳದ ಮಾತೂ ಆಯಿತು. ಸತ್ಯವೇ ಸುಳ್ಳಾದಾಗ ಮೈ ಪರಚಿಕೊಳ್ಳುವುದಲ್ಲದೆ ಮತ್ತೇನುಂಟು? ಹಿರಿಯರು ಕೇಸು ಪೈಸಲ್ಲು ಮಾಡಿ ಮುಂದೆ ಹೊರಟರು. ಅಪ್ಪುವಿನ ಮುಖಕ್ಕೆ ರಾಮ ಪೀಪಿ ಊದಿದ. ಮತ್ತೆ ಕದನ ಪ್ರಾರಂಭ. “ಮನೆಗೆ ಬಾ ಅಪ್ಪಯ್ಯನ ಹತ್ತಿರ ಹೇಳುವೆ ಎಂದ ಅಪ್ಪು. ರಾಮ ಸುಮ್ಮನಿರುತ್ತಾನೆಯೇ? “ನಾನೂ ನನ್ನ ಅಪ್ಪಯ್ಯನೊಟ್ಟಿಗೆ ಹೇಳುವೆ” ಎಂದ ಅವನಿಗೆ ಅಣಕಿಸುತ್ತ. ಅಪ್ಪುಗೆ ತಮಾಷೆಯೆನಿಸಿತು. “ನಿನಗೆ  ಅಪ್ಪಯ್ಯ ಎಲ್ಲುಂಟೋ” ಎಂದು ಗಟ್ಟಿಯಾಗಿ ನಕ್ಕ.

ಅದೇ ಸಮಯಕ್ಕೆ-

“”ನಿಮ್ಮ ಅಪ್ಪಯ್ಯ ಕೂಗುತ್ತಿದ್ದಾರೆ ಒಡೆಯರೆ”’’ ಎಂದು ಹೆಗ್ಗಡತಿಯೊಬ್ಬಳು ಅವನ ತೋಳು ಹಿಡಿದು ಕರೆದಳು. ತಿರುಗಿ ತಲೆಯತ್ತಿ ನೋಡಿದ ರಾಮ. ಆ ಅಪರಿಚಿತ ಹೆಂಗಸಿನ ಕಡೆ. ಒಂದು ಘಳಿಗೆ ಕಂಗಾಲಾದ. “”ನಿಮ್ಮ ಹೆಸರು ರಾಮ ಅಲ್ಲವೆ”” ಎಂದು ಕೇಳಿ ಖಚಿತಪಡಿಸಿಕೊಂಡಳು. ‘”ಎಲ್ಲಿ’ ಎಂದು” ಕೇಳಿದ ರಾಮ. “”ಓ ಅಲ್ಲಿ ಬಟ್ಟೆಯಂಗಡಿಯಲ್ಲಿ”” ಎಂದಳು. “”ಯಾವ ಬಟ್ಟೆ ಅಂಗಡಿ”” ಎಂದ. “”ಓ ಅಲ್ಲಿ ಬನ್ನಿ ಹೋಗುವ”” ಎಂದಳು. ಬಟ್ಟೆಯಂಗಡಿ ಎಂದ ಮೇಲೆ ಅಲ್ಲಿ ತನಗೆ ಲಾಭ ಉಂಟಷ್ಟೆ. ಅಪ್ಪು ಒಟ್ಟಿಗೆ ಕಾದ ಜಗಳ ಮರತೇ ಹೋಯಿತು. ಅಷ್ಟೇ ಏನು? ಅಪ್ಪು ಅಲ್ಲಿ ನಿಂತಿದ್ದಾನೆಂಬುದನ್ನು ಮರೆತು ಹೋಗಿರಲಿಕ್ಕೆ ಸಾಕು. ಅವಳ ಸೆರಗಿಗೆ ಅಂಟಿಕೊಂಡು ಹೊರಟ. ‘ತೊಲಗಿತು ಶನಿ ಮಹಾರಾಯ, ಇನ್ನು ಅವನುಂಟು, ಅವನ ಅಜ್ಜ ಉಂಟು’ ಎಂದು ಅಪ್ಪು ತನ್ನ ತಂದೆಯ ಅಂಗಡಿ ಕಡೆ ಓಡಿದ.

“”ಎಲ್ಲಿ ಮತ್ತೆ ಅಪ್ಪಯ್ಯ”” ಎಂದು ಪದೇಪದೇ ಕೇಳಿದ ರಾಮ. “”ಓ, ಇಲ್ಲೇ, ಇಲ್ಲೆ ಬನ್ನಿ ಒಡೆಯರೇ”” ಎನ್ನುತ್ತ ಅವನ ತೋಳು ಹಿಡಿದುಕೊಂಡೇ ಮುಂದೆ ನಡೆದಳು ಹೆಗ್ಗಡತಿ. ಅವಳು ಇಲ್ಲೇ ಇಲ್ಲೇ ಎಂದು ತೋರಿಸಿದ ಅಂಗಡಿಯೂ ಸಿಕ್ಕಿತ್ತು. ಅಂಗಡಿಯೊಳಕ್ಕೆ ಕಾಲಿಟ್ಟ ಕೂಡಲೇ ರಾಮನ ಕಣ್ಣು ಅಪ್ಪಯ್ಯನನ್ನು ಹುಡುಕಿತು. ಹತ್ತಾರು ಗಿರಾಕಿಗಳ ನಡುವೆ. ಆದರೆ ಅವರೆಲ್ಲಿದ್ದಾರೆ ಅಲ್ಲಿ? ಅಂಗಡಿಯದೊಂದು ಮುರುಕು ಖರ್ಚಿಯಲ್ಲಿ ಕೂತಿದ್ದವನ ಕಡೆ ತೋರಿಸಿ “ನೋಡಲ್ಲಿ – “ನಿನ್ನ ಅಪ್ಪಯ್ಯ” ಎಂದಳು”ಹೆಗ್ಗಡತಿ. ಅದು ಹೇಗೆ ಅಪ್ಪಯ್ಯ ಆದೀತು? ಒಂದು ಘಳಿಗೆ ಯಾಕೋ ಗೊಂದಲಮಯವಾಯಿತು. ಹೆದರಿಕೆ ನಗು “”ಅಯ್ಯೋ, ಅಪ್ಪಯ್ಯ ಅವರಲ್ಲ, ಥೂ”” ಎಂದ ಮುದ್ದಾಗಿ ನಗುತ್ತ. ಹೆಗ್ಗಡಿತಿಗೆ ಎಂಥದೂ ತಿಳಿಯದು ಎನ್ನುವ ಧಾಟಿಯಲ್ಲಿ. ಅವನು ಹಾಗಂದದ್ದು ಕೇಳಿಯೇ ಕುರ್ಚಿಯಲ್ಲಿ ಕೂತಿದ್ದ ಆಸಾಮಿ ಧಡಕ್ಕನೆ ಎದ್ದ. ತಲೆಯಲೊಂದು ಮಸಿ ಹಿಡಿದಿದ್ದ ಬಿಳಿ ಟೊಪ್ಪಿಗೆ. ಅದರ ಹಿಂದೆ ಕಾಣುವ ಕುಚ್ಚಿನ ಗಂಟು. ಕಿವಿಯಲ್ಲಿ ಒಂಟಿ. ಕಿವಿಯ ಮೇಲೆ ಗೊಂಡೆ ಹೂವು. ಕೈಯಲ್ಲೊಂದು ಕೊಡೆ. ಮೊಣಕಾಲಿನವರೆಗೆ ಮಾತ್ರವಿದ್ದ ಕಚ್ಚೆ ಬಿಗಿದ ಪಾಣಿಪಂಚೆಯಂತಿದ್ದ ಧೋತ್ರ. ಒಂದು ಕಾಲಿಗೆ ಬೆಳ್ಳಿ ಬಳೆ. ದಪ್ಪ ಚರ್ಮದ ಚಡಾವು. “”ಬಾ ಮಗು”” ಎಂದು ಅವನು ಕೂಗಿದ. ರಾಮ, ಅವನ ಪಕ್ಕದಲ್ಲಿದ್ದ ಹೊಸ ವಸ್ತ್ರಗಳ ರಾಶಿಯನ್ನು ನೋಡಿದ. “”ಇದು ನಿಂಗೆ” ಎಂದ ಅವನು “ಬಾ” ಎಂದು ಮೂರು ಮೂರೂ ಬಾರಿ ಕೂಗಿದ. “”ಹೋಗಿ ಒಡೆಯರೇ”” ಎಂದು ಹೆಗ್ಗಡತಿ ಬೆನ್ನು ಹಿಂದಿಂದ ನೂಕಿದಳು. ಮಂತ್ರಮುಗ್ಧನಾದಂತೆ, ಆಮೆ ಹೆಜ್ಜೆಯಿಡುತ್ತ ಮುಂದು ಮುಂದಕ್ಕೆ ಹೋದ ರಾಮ. ಕಣ್ಣು ಪಿಳಿಪಿಳಿ ಬಿಡುತ್ತ ಅವನ ಮುಂದೆ ನಿಂತ. ಆತನೇ ಮುಂದೆ ಬಂದು ಅವನ ಕೈ ಹಿಡಿದು ನಡೆಸಿಕೊಂಡ ಹೋಗಿ ಕುರ್ಚಿಯಲ್ಲಿ ಕೂರಿಸಿದ. “”ಈ ಬಟ್ಟೆಯಲ್ಲ ನಿಂಗೆ ಗೊತ್ತುಂಟ”” ಅಂದ. “”ಚೆನ್ನಗುಂಟ“ ಎಂದು ಕೇಳಿದ. “ಹೂಂ” ಎನ್ನುವಂತೆ ತಲೆಯಾಡಿಸಿದ ರಾಮ. “”ನನ್ನ ಮಗನೇ”” ಎಂದು ತಬ್ಬಿಕೊಂಡ ಅವನು. ರಾಮನ ಗಲ್ಲವೆತ್ತಿ ಅವನ ಕಣ್ಣನ್ನೇ ದೃಷ್ಟಿಸಿದ. ಒರಟು ಕೈ ಎನಿಸಿದರೂ ರಾಮನಿಗೆ  ಏಕೋ ಖುಷಿಯಾಯಿತು. ಮತ್ತೆ ಯಾಕೆ ಅಷ್ಟು ದೊಡ್ಡವರ ಕಣ್ಣಲ್ಲಿ ನೀರು ಬರುತ್ತಿದ್ದೆಯಲ್ಲ ಎಂದು ವಿಸ್ಮಯವೂ ಆಯಿತು. ಅಳುವೂ ಬಂತು. ದೂರ ನಿಂತಿದ್ದ ಹೆಗ್ಗಡತಿಯ ಕಣ್ಣಲ್ಲೂ ನೀರೂರಬೇಕೆ?

ಇವೆಲ್ಲ ಐದು ಹತ್ತ ಮಿನಿಟುಗಳಲ್ಲ ನಡೆದುಹೋದ ವ್ಯಾಪಾರವಷ್ಟೆ. ಹೆಗ್ಗಡತಿ ವಸ್ತ್ರದ ಗಂಟು ಕಟ್ಟಿಕೊಳ್ಳವಂತೆ ಹೇಳಿಯೂ ಆಯಿತು. ರಾಮನನ್ನು ಎತ್ತಿ, ಹೆಗಲ ಮೇಲೆ ಹೇರಿಕೊಂಡು ಅಂಗಡಿಯಿಂದ ಹೊರಕ್ಕೆ ನಡೆದೂ ಆಯಿತು. ಆಚೆಕಡೆಯಿರುವ ಬತ್ತಾಸು ಅಂಗಡಿಯಲ್ಲಿ ಬೆಂಡು ಅದು ಇದು ಎಂದು ದೊಡ್ಡ ಪೊಟ್ಟಣವೇ ಸಿದ್ಧವಾಯಿತು. ರಾಮನ ಹಾಲು ಮುಖ ಇಷ್ಟಗಲ್ಲವಾಗದಿರುತ್ತದೆಯೇ? ‘ನಂಗೆ’ ಎಂದು ಹೆಗಲ ಮೇಲಿಂದಳೇ ಹಿರಿಯನ ಮುಖಕ್ಕೆ ಕೈಚಾಚಿದ. “ಇದು ನಿನಗಲ್ಲದೆ ಮತ್ಯಾರಿಗೆ ಮಾಣಿ” ಎನ್ನುತ್ತ ಪೊಟ್ಟಣದ ಒಂದು ಬದಿಯಲ್ಲಿ ತೂತುಮಾಡಿ ಎರಡೆರಡು ಸೀಖಾರದ ಕಡ್ಡಿಯನ್ನು ಎಳೆದು ಅವನ ಕೈ ಕೊಟ್ಟ. ಒಂದು ಕಾಲು ಎದೆಯ ಕಡೆ, ಒಂದು ಕಾಲು ಬೆನ್ನು ಕಡೆ ಹಾಕಿ ಹಿರಿಯನ ತಲೆ ಹಿಡಿದುಕೊಂಡು ಹೊರಟ ರಾಮನಿಗೆ ಕುದುರೆ ಸವಾರಿ ಮಾಡುತ್ತಿದ್ದಂತೆ ಅನಿಸದಿರುತ್ತದೆಯೇ? ಹೇಳಿಯೂ ಹೇಳಿದ – “ನೀನು ಕುದುರೆಯಂತೆ, ನಾನು ಮೇಲೆ ಕೂತಿದ್ದೇನಂತೆ” ಎಂದು ಹೈ ಹೈ ಎಂದು ನಡು ನಡುವೆ ಕಾಲಿಂದ ಬೆನ್ನನ್ನು ಎದೆಯನ್ನು ಒದೆಯುತ್ತಲೂ ಇದ್ದಾನೆ. ಸಣಕಲು ಮುದ್ದು ಕಾಲಿನ ಒತ್ತುವಿಕೆ ಹಿರಿಯನಿಗೆ ಹಿತವಾಗಿ ಕಂಡಿತು. ಅಷ್ಟುದೂರ ಹೋದಮೇಲೆ, ಹಿರಿಯ ಹೆಗ್ಗಡತಿಗೆ ಏನೋ ಹೇಳಿದ. ಅವಳು “ಆಯಿತು” ಎಂದು ಬೇಗ ಬೇಗ ಮುಂದೆ ನಡೆದಳು. ತನ್ನ ಮನೆ ಇರುವುದು ಅಚಕಡೆ ಅಲ್ಲವೆ. ಮತ್ತೆ ಹೋಗುತ್ತಿರುವುದು ಎಲ್ಲಿಗೆ ಎನಿಸಿತು ರಾಮನಿಗೆ. “ಮನೆಗೆ ಹೋಗುವ” ಎಂದ. ಮನೆಗೇ ಹೋಗುತ್ತಿರುವುದಲ್ಲವೆ?” ಎಂದ ಹಿರಿಯ. ಸಂತೆ ಮಾಳದ ಸೆರಗಿನಂಚಿಗೆ ಹೋಗಿ ಗಣಪೆಕಾಯಿ ವರದಡಿಯಲ್ಲಿ ರಾಮನನ್ನು ಇಳಿಸುವುದಕ್ಕೂ, ಅವನಿದ್ದಲ್ಲಿಗೆ ಜೋಡು ಎತ್ತಿನ ಕಮಾನು ಗಾಡಿ ಬರುವುದಕ್ಕೂ ಒಂದೇ ಆಯಿತು. ಹಿರಿಯ ರಾಮನನ್ನು ಎತ್ತಿ ಗಾಡಿಯ ಹಿಂದಿನಿಂದ ಒಳಕ್ಕೆ ಚಾಚಿದ. ಹೆಗ್ಗಡತಿ ಒಳಕ್ಕೆ ಎಳೆದುಕೊಂಡಳು. ರಾಮನಿಗೆ ಈಗ ನಿಜಕ್ಕೂ ಭಾರಿ ಆಳು ಬಂತು. ಹಿರಿಯ ಗಾಡಿ ಹತ್ತಿ “ಬೇಗ” ಎಂದ. ಎತ್ತುಕೊರಳ ಗಂಟೆ ಝಣಿಝಣಿಸುತ್ತ ಮುಸುರೆ ಹಳ್ಳದ ಮೂಲಕ ಸೀತೂರು ಕಡೆ ಧಾವಿಸಿತು. ಕೆಂಪು ಧೂಳೆಬ್ಬಿಸುತ್ತ.

ಗಾಡಿಯಲ್ಲಿ ಕೂರುವುದು ಖುಷಿಯಾದರೂ, ಪರಕೀಯರೊಟ್ಟಿಗೆ ಎಲ್ಲಿಗೆ ಹೋಗುತ್ತಿರುವುದೆಂದು ಎಣಿಸಿಯೇ ರಾಮನು ಬಿಕ್ಕಿ ಬಿಕ್ಕಿ ಅತ್ತ-ಅಮ್ಮ, ಅಪ್ಪಯ್ಯ ಎನ್ನುತ್ತ. ಹೆಗ್ಗಡತಿ ತನ್ನ ತೊಡೆಯ ಮೇಲೆ ಅವನನ್ನು ಕೂರಿಸಿಕೊಂಡು “ಆಳುವುದು ಬೇಡ ಒಡೆಯರೆ” ಎಂದು ಸಂತೈಸುತ್ತ ಪೊಟ್ಟಣದಿಂದ ತಿನಿಸನ್ನು ತೆಗೆದುಕೊಟ್ಟಳು. ಬತ್ತಾಸು ಕಂಡ ಕೂಡಲೇ ಅವನ ಆಳು ನಿಂತರೂ, ಬಿಕ್ಕುವುದು ನಿಲ್ಲಲಿಲ್ಲ. ಅವನ ಕೋಟಿನ ಮೇಲೆ ತುಟಿಯ ಬದಿಯಲ್ಲಿ ಕೆಂಪು ನೋಡಿ “ಇದೆಂಥದು” ಎಂದಳು. “ಅಲ್ಲಿ ಷರಬತ್ತು ಕುಡಿದದ್ದು” ಎಂದು ರಾಮ. “”ಎಷ್ಟು ಚಂದ ಗೊತ್ತ ಅದು. ನೀನೂ ಕುಡಿದಿದ್ದೀಯಾ”” ಎಂದು ಕೇಳಿದ. ಅವಳು ನಕ್ಕಳು, ಹಿರಿಯನೂ ನಕ್ಕ. ಗಾಡಿಯ ಓಲಾಟದಿಂದ ಬೆನ್ನಿಗೆ ಕಮಾನು ಹಾಕಿ ನೋವಾಯಿತು. ಘಳಿಗೆಯಲ್ಲಿ ಸುಖವೆಲ್ಲಾ ಮಾಯವಾಗಿ “”ನಂಗೆ ಪೆಟ್ಟು ಬಿತ್ತು”” ಎಂದು ಬೊಬ್ಬೆ ಹಾಕಿದ. ““ಎಲ್ಲಿಗೆ ಹೋಗುತ್ತಿರುವುದು”” ಎಂದು ಕೇಳಿದ. ““ನಮ್ಮ ಮನೆ ಇಲ್ಲಿ ಅಲ್ಲ”” ಎಂದೂ ಹೇಳಿ‌ದ. “’ನಿಮ್ಮ ಮನೆಗೇ ಹೋಗುತ್ತಿರುವುದು ಒಡೆಯರೆ. ಇವರು ಯಾರು ಗೊತ್ತುಂಟಲ್ಲ ನಿಮ್ಮ ಅಪ್ಪಯ್ಯ ಅಲ್ಲವೆ?” ಎಂದಳು. ಹಿರಿಯನ ಮುಖ ನೋಡಿದ ರಾಮ. “’ಇದು ನನ್ನ ಅಪ್ಪಯ್ಯ ಅಲ್ಲವೇ ಅಲ್ಲ” ಎಂದ ರಾಮು. “’ನಾನೇ ನಿನ್ನ ಅಪ್ಪಯ್ಯ” ಎಂದ ಹಿರಿಯ. “’ಉಹುಂ, ಮನೆಯಲ್ಲುಂಟು ನನ್ನ ಅಪ್ಪಯ್ಯ. ಮನೆಗೆ ಹೋಗೋಣ ಮತ್ತೆ”” ಎಂದು ಹಟಹಿಡಿದ. ““ಅಳುವುದೇಕೆ ಮಾಣಿ, ನಾನೆ ನಿನ್ನ ಅಪ್ಪಯ್ಯ, ಅಲ್ಲಿರುವುದು ನಿನ್ನ ಅಮ್ಮ ಉಂಟಲ್ಲ, ಅವಳ ಅಪ್ಪಯ್ಯ”” ಎಂದ ಹಿರಿಯ. ರಾಮನಿಗೆ ಮತ್ತೆ ಗೊಂದಲವಾಯಿತು. “”ಮತ್ತೆ ನಂಗೆ ಅಪ್ಪಯ್ಯ ಇಲ್ಲಾಂತೆ, ಅಪ್ಪು’ ಹೇಳಿದ” ಎಂದ. ಹಿರಿಯ ಹೆಗ್ಗಡತಿಯನ್ನು ಹೆಗ್ಗಡತಿ ಹಿರಿಯನನ್ನು ನೋಡಿದರು. ““ಅವನಿಗೆ ಹೊಡೆಯುವ ಸುಮ್ಮನಿರು.” ರಾಮನಿಗೆ ಖುಷಿಯಾಯಿತು.

ಹೆಗ್ಗಡತಿ ಹಿರಿಯ ಏನೇನೋ ಮಾತಾಡಿದರು. ನಡುನಡುವೆ ಪಾರ್ವತಿ, ಮಂಜಯ್ಯ, ಅಜ್ಜಿ ಮುಂತಾದ ಪದಗಳೆಲ್ಲ ಬಂದುದರಿಂದ ಅದು ತನ್ನ ಮನೆಯವರಿಗೇ ಕುರಿತದ್ದು ಎನಿಸಿದರೂ ಒಟ್ಟು ಮಾತಿನ ತಲೆಬುಡ ಅರ್ಥವಾಗುತ್ತದೆಯೇ? ಕಣ್ಣು ಪಿಳಿಪಿಳಿ ಬಿಡುತ್ತ ಒಮ್ಮೆ ಹಿರಿಯನ ಕಡೆ, ಮತ್ತೊಮ್ಮೆ ಹೆಗ್ಗಡತಿಯ ಕಡೆ ಹೊರಳಿ ನೋಡುತ್ತಿದ್ದಾನೆ. ಜೊತೆ ಜೊತೆಯಲ್ಲೇ ತಿನಿಸಿದ ಪೊಟ್ಟಣದ ಕಡೆಯೂ ದೃಷ್ಟಿಯಿಟ್ಟಿದ್ದಾನೆ.

ಬಾಲ್ಗಡಿ ದಾಟಿ ಎಡಕ್ಕೆ ಗಾಡಿ ತಿರುಗಿತು. ಗಾಡಿಯ ಜೋಲಾಟದಿಂದ ರಾಮನಿಗೆ ನಿದ್ದೆಯೂ ಬಂತು. ಹೆಗ್ಗಡತಿಯ ತೊಡೆಯ ಮೇಲೆ ಮಲಗಿದ. ಬತ್ತಾಸಿನ ತುಣುಕು ಬಾಯಿಯಲ್ಲೇ ಇದ್ದಿತ್ತಾದರೂ ಒಂದು ಬದಿಯಿಂದ ಜೊಲ್ಲೂ ಲೋಳಿ ಲೋಳಿಯಾಗಿ ಹರಿಯಿತು. ಅವನಿಗೆ ಎಚ್ಚರಿಕೆಯಾದೀತೆಂಬ ಹೆದರಿಕೆಯಿಂದ ಹೆಗ್ಗಡತಿ ಅದನ್ನು ಒರಸದೇ ಬಿಟ್ಟಳು. ಜೊಲ್ಲು ತುಟಿಯಿಂದ ಹರಿದು ಅವಳ ಸೀರೆಯೂ ತೇವವಾಯಿತು. “ಎಷ್ಟು ಚೆಂದದ ಮಗು ಒಡೆಯರೆ” ಎಂದಳು ಹಿರಿಯನಿಗೆ – ರಾಮನ ತಲೆಯನ್ನು ಮೃದುವಾಗಿ ನೇವರಿಸುತ್ತ. ಬಂಡಿ ಹಾಗೊಮ್ಮೆ ಹೀಗೊಮ್ಮೆ ಜೋಲಾಡುತ್ತ ಹೋಗುತ್ತಿದ್ದರೆ. ಎತ್ತುಗಳು ಕೊರಳ ಮಣಿಗಳು ಗಿಲಿಕಿಯಾಡಿಸುತ್ತಿವೆ.

ಗಾಡಿಯೊಮ್ಮೆ ದಪ್ಪ ಕಲ್ಲೊಂದರ ಮೇಲೆ ಏರಿ ಇಳಿದಿದ್ದರಿಂದ ರಾಮನಿಗೆ ಎಬ್ಬಿಸಿದಂತಾಯಿತು. ತಟಕ್ಕನೆ ಕಣ್ಣುಬಿಟ್ಟು “ಅಮ್ಮ” ಎಂದು ಚೀರಿ ಹೆಗ್ಗಡತಿಯ ಮುಖ ನೋಡಿದ. ಹಿರಿಯನ ಮುಖ ನೋಡಿದ. ಯಾವುದೋ ಹೊಸ ಲೋಕದಲ್ಲಿರುವಂತೆನಿಸಿ “”ಅಮ್ಮ, ಎಲ್ಲಿ, ಅಮ್ಮ”” ಎಂದು ಅತ್ತ. ಅವನಿಗೆ ಮತ್ತಷ್ಟು ತಿನಿಸು ಕೊಟ್ಟು ಅಳು ನಿಲ್ಲಿಸಬೇಕಾದರೆ ಇಬ್ಬರಿಗೂ ಸಾಕುಸಾಕಾಯಿತು. “”ನನಗೆ ಭಯವಾಗುತ್ತದೆ ಒಡೆಯರೆ”” ಎಂದಳು ಹೆಗ್ಗಡತಿ ಹಿರಿಯನನ್ನು ಕುರಿತು.

ರಾಮನಿಗೆ ಎಚ್ಚರವಾದ ಮೇಲೆ ಒಂದೋ ಎರಡೋ ಫರ್ಲಾಂಗು ಹೋಗಿರಬಹುದು ಗಾಡಿ. ಹಿಂದಿಂದ ಪಾಂಪಾಂ ಎನ್ನುತ್ತ ಮೋಟಾರು ಕಾರೊಂದು ಬಂತು. ರಾಮ ಅದನ್ನೇ ನೋಡುತ್ತಿದ್ದಾನೆ. ಮೋಟಾರು ಬಂಡಿಯನ್ನು ಹಾಯ್ದು ರಸ್ತೆಗೆ ಅಡ್ಡವಾಗಿ ನಿಂತಿತು. ಗಾಡಿಯ ಹಗ್ಗವನ್ನು ಬಲವಾಗಿ ಎಳೆದ. ಎತ್ತುಗಳು ನಿಂತವು – ಬುಸ್ ಬುಸ್ ಉಸಿರಾಡುತ್ತ, ಕೊರಳಿನ ಘಂಟೆಗಳು ಕೊಣಕೊಣ ಎಂದುವು. ರಾಮನಿಗೆ ಅಜ್ಜನ ಮೋರೆ ಕಂಡಿತು. ಚಂಗನೆ ಎದ್ದು ನಿಂತು. “”ಅಪ್ಪಯ್ಯ ನಾನು ಇಲ್ಲಿ”” ಎಂದು ಕೂಗಿದ ಜಂಭದಿಂದ. “”ಏನು ಮಾಡುತ್ತೀರಿ ಒಡೆಯರೆ ಈಗ” ಎಂದಳು ಹೆಗ್ಗಡತಿ. ಹಿರಿಯನಿಗೆ ಈ ಸಮಯದಲ್ಲಿ ಕೋಪ ಬಾರದಿರುತ್ತದೆಯೆ? “”ನಿನ್ನ ಬಾಯಿ ಒಮ್ಮೆ ಮುಚ್ಚಲಿ ಮಹಾರಾಯಗಿತ್ತಿ”” ಎಂದು ಕೆರಳಿ ಅಲ್ಲಾಡದೇ ಕೂತ. “ರಾಮ “ನಾನು ಇಳಿಯುತ್ತೇನೆ”” ಎಂದು ಗಾಡಿಯ ತುದಿಗೆ ಓಡಿದ, ಹೆಗ್ಗಡತಿ ಎಳೆದುಕೊಂಡಳು ಅವನನ್ನು.

ಮಂಜಯ್ಯ, ಸೀತಾರಾಮು, ಅಂಗಡಿಯ ಸದಾನಂದ ಭಟ್ಟರು, ಮೋಟಾರಿನ ಒಡೆಯ ಶೀನಪ್ಪ ಭಟ್ಟರ ಆಳು ಶಂಭು – ಎಲ್ಲ ಪರಿಚಯದ ಮುಖಗಳು. ರಾಮನಿಗೆ ಖುಷಿಯೋ ಖುಷಿ. “ಅಪ್ಪಯ್ಯ, “ನಾನು ಇಲ್ಲಿದ್ದೀನಿ”” ಎಂದು ಕೂಗಿದ ಬತ್ತಾಸು ಕಚ್ಚುತ್ತ.

“ಇಳಿಸು ಅವನನ್ನು” ಎಂದು ಘರ್ಜಿಸಿದರು ಮಂಜಯ್ಯ.

“”ಅದು ಎಷ್ಟಕ್ಕೂ ಆಗದು”” ಗಾಡಿಯೊಳಗಿಂದಲೇ ಉತ್ತರಿಸಿದ ಹಿರಿಯ.

“”ಅಬ್ಬಾ ನಿನ್ನ ಸೊಕ್ಕೆ! ನಿನ್ನ ಕೊರಳು ಕಿಂವ್ಚಿಯೇನು ತಿಳಿಯಿತಾ. ಇಳಿಸು ಅವನನ್ನು ಮೊದಲು”.”

”’ನೋಡುವಾ – ಹೇಗೆ ಅವನನ್ನು ಕೊಂಡೊಯ್ಯುತ್ತೀರೆಂದು” ಎಂದವನೇ ಹಿರಿಯ ಗಾಡಿಯಿಂದ ತಮ್ಮ ಕೆಳಕ್ಕೆ ನೆಗೆದ.

“”ಏನು ನನ್ನನ್ನು ಹೊಡೆಯಲು ಬರುತ್ತೀಯಾ? ನನ್ನನ್ನು ಮುಟ್ಟಿದ್ದೇ ಆದರೆ ನಿನ್ನ ಹೆಣ ಇಲ್ಲಿ ಬೀಳುವುದೇ ಸಮ”” ಎಂದರು ಮಂಜಯ್ಯ.

ಇಬ್ಬರೂ ಒಬ್ಬರಿಗೊಬ್ಬರು ಇದಿರಾದರು. ಸದಾನಂದಭಟ್ಟರು ಕೂಡಲೇ ಇಬ್ಬರ ನಡುವೆ ನಿಂತರು.

“”ಅಪ್ಪಯ್ಯ ನಾನು ಬರುವೆ” ಎಂದು ರಾಮ ಹೆಗ್ಗಡತಿಯ ಹಿಡಿತದಿಂದ ಬಿಡಿಸಿ ಕೊಳ್ಳಲೆತ್ನಿಸಿದ. ಅವಳಿಗೆ ಏನು ಮಾಡಬೇಕೆಂದು ತೋಚಿದ್ದರಲ್ಲವೆ. ಕಂಡ ಕಂಡ ದೈವಗಳನ್ನು ಸ್ಮರಿಸುತ್ತ ಅವನನ್ನು ಗಟ್ಟಿಯಾಗಿ ಹಿಡಿದುಕೊಂಡಳು. ರಾಮ ವಿಲಿವಿಲಿ ಒದ್ದಾಡಿದ. “”ಬಿಡು ನಂಗೆ ಬಿಡು. ನಾನು ಹೋಗುತ್ತೇನೆ”” ಎಂದು ಕೂಗಿದ ಅವಳು ಸಮಾಧಾನ ಮಾಡಲೆತ್ತಿಸುತ್ತಿದ್ದಾಳೆ. ಪೊಟ್ಟಣದಿಂದ ಎರಡೆರಡು ನಮೂನೆ ತಿನಿಸು ಅವನ ಮೂತಿಗೆ ಒಡ್ಡಿದ್ದಾಳೆ. ಅವನು ಅದನ್ನು ಕಿತ್ತುಕೊಂಡಿದ್ದೂ ಆಯಿತು. “ಬಿಡು ನಾನು ಹೋಗುವೆ” ಎನ್ನುವ ರಾಗ ಮಾತ್ರ ನಿಲ್ಲಲಿಲ್ಲ.

“”ರಸ್ತೆಯಲ್ಲಿ ನಿಂತು ನಿಮ್ಮ ಪಂಚಾಯಿತಿ ಬೇಡ. ಹೇಳಿ ಕೇಳಿ ನಿಮ್ಮ ಮಾವ ಅಲ್ಲವೆ ಅವರು. ನಿನಗೆ ಹೇಳುತ್ತಿರುವುದು ಶಿವರಾಮ”” ಎಂದರು ಸದಾನಂಧಬಟ್ಟರು.

““ಯಾರು? ಇವರೇ ನನ್ನ ಮಾವ? ಛೆ”” ಎನ್ನುತ್ತ ಹಲ್ಲು ಮುಡಿಕಟ್ಟಿದ ಶಿವರಾಮ. ”ಇವರು ಆ ಬೇವಾರ್ಸಿ ಪಾರ್ವತಿಯ ಅಪ್ಪ. ಅದಕ್ಕೆಂದೇ ಅಲ್ಲವೆ ಅವಳನ್ನು ಇಟ್ಟು ಕೊಂಡದ್ದು ಮನೆಯಲ್ಲಿ. ಆಯಿತು ಅವಳು ನಿಮ್ಮ ಮಗಳಷ್ಟೆ. ಇವನು ನನ್ನ ಮಗ. ಅವನ ಮೇಲೆ ನಿನಗೇನು ಹಕ್ಕುಂಟು? ನನ್ನ ನೆತ್ತರು ಚೆಲ್ಲಿಯಾದರೂ ಸರಿಯೇ. ಅವ ಹೇಗೆ ನಿಮ್ಮೊಟ್ಟಿಗೆ ಹೋದಾನು ನಾನು ನೋಡುವೆ.”

ರಾಮನಿಗೆ ಈ ಹಿರಿಯರ ಕದನದ ತುದಿಬುಡ ಅರ್ಥವಾಗಲಿಲ್ಲ. ಕಿಸೆಯಲ್ಲಿ ಬುಗುರಿ ಹಿಂಸೆ ಕೊಟ್ಟಿದ್ದರಿಂದ ಅದನ್ನು ತೆಗೆಯಲು ಕೈಹಾಕಿದ. ಪೀಪಿ ಕೈಗೆ ಸಿಕ್ಕಿತು. ಮುಖವರಿಳಿತು. ““ಇಲ್ಲಿ ನೋಡು ಪೀಪಿ, ನಂದು ಇದು – ಗೊತ್ತುಂಟ”” ಎನ್ನುತ್ತ ಹೆಗ್ಗಡತಿಯ ಮೂತಿಗೆ ಚಾಚಿದ. “ಊದು” ಎಂದು ಬಲವಂತ ಮಾಡಿದ. ಹೆದರಿಕೆಯಲ್ಲೂ ನಗುಬಾರದಿರುತ್ತದೆಯೇ ಅವಳಿಗೆ. ““ನನ್ನಿಂದಾಗದು. ನೀವೇ ಊದಿಯಪ್ಪ” ಎಂದಳು.

“”ಅಯ್ಯೋ, ನಿಂಗೆ ಬರುವುದಿಲ್ಲ. ನೋಡು ನಾನು ಊದುತ್ತೇನೆ”” ಎನ್ನುತ್ತ ಕೊರಳಿನ ನರ ಉಬ್ಬಿಸಿ ಕೆನ್ನೆ ಉಬ್ಬಿಸಿ ಗಟ್ಟಿಯಾಗಿ ಊದಿದ. “ಪೀ ಪೀ ಪೀ” ಎಂದು. ಹಾಗೆ ಮಾಡುವಾಗಲೇ ಜಿಂಕೆಯ ಹಿಂಡೊಂದು ಗುಡ್ಡ ಇಳಿದು ರಸ್ತೆಯ ಮೇಲೆ ಕಿವಿ ನೇರಮಾಡಿಕೊಂಡು ಶಿಲೆಯಂತೆ ನಿಂತು ರಾಮನ ಗಮನ ಸೆಳೆದವು. ““ಅಯ್ಯೋ, ಅಲ್ಲಿ ನೋಡು, ಅಲ್ಲಿ ನೋಡು”” ಎನ್ನುತ್ತ ಹೆಗ್ಗಡತಿಯ ಮೂತಿ ತಿವಿದು ತೋರಿಸಿದ. ಒಂದೇ ಒಂದು ಮಿನಿಟು. ಮರುಗಳಿಗೆಯಲ್ಲಿ ಅವು ಮಾಯವಾದವು. ಆಚೆ ಬದಿಯ ಇಳಿಜಾರಿನ ಬಿದಿರು ಕಾಡಿನೊಳಕ್ಕೆ ಹೊಕ್ಕವು. ““ಜಿಂಕೆ ನಿಮ್ಮಲ್ಲುಂಟ?”” ಎಂದ. ಅವಳ ಎದೆಯಲ್ಲಿ ಅವಲಕ್ಕಿ ಕುಟ್ಟುತ್ತಿರುವಾಗ ಅವನ ಮುಗ್ಧ ಪ್ರಶ್ನೆಗಳಿಗೆ ಏನುತ್ತರ ಕೊಟ್ಟಾಳು.

ಒಮ್ಮೆ ಸ್ವರವೇರಿಸಿ “ಬೊಬ್ಬೆಯಿಟ್ಟ ಶಿವರಾಮ – “ನನ್ನ ಹೆಣ ಇಲ್ಲಿ ಬಿದ್ದ ನಂತರವೇ ಅವನನ್ನು ಕೊಂಡೊಯ್ಯುವುದು ನೀವು””. ಮತ್ತೆ ಸದಾನಂದಭಟ್ಟರು, ಶೀನಪ್ಪ ಎಲ್ಲ ಮುಂದಾದರು. ಮಂಜಯ್ಯ ದಡದಡ ಗಾಡಿಯ ಹಿಂದಕ್ಕೆ ಬಂದರು. “”ಅವನನ್ನು ಇಲ್ಲಿ ಕೊಡು ಇವಳೇ”” ಎಂದು ಅಧಿಕಾರವಾಣಿಯಿಂದ. “”ನೀನು ಕೊಟ್ಟಿದ್ದೇ ಆದರೆ ನಿನ್ನ ಹೆಣ ಬಿದ್ದೀತು. ತಿಳಿಯಿತಾ”” ಎಂದ ಶಿವರಾಮ. ಪಾಪದ ಹೆಂಗಸು ಮಾಡುವುದಾದರೂ ಏನು ಈ ಗೊಂದಲದ ನಡುವೆ? ರಾಮ ಚಂಗನೆ ಹಾರಿದ. ಅವಳು ಸರಕ್ಕ ತಿರುಗಿ ಅವನ ಕೈ ಹಿಡಿದಳು. ಕೆಳಗಿಂದ ಮಂಜಯ್ಯ ಅವನ ಮತ್ತೊಂದು ರಟ್ಟೆ ಹಿಡಿದು ಜಗ್ಗಿಸಿದರು. ಈಗ ನಿಜಕ್ಕೂ ರಾಮನಿಗೆ ನೋವಾಯಿತು. ““ಅಪ್ಪಯ್ಯ ನೋವಾಗುತ್ತೆ””ಎಂದು ಅತ್ತ. ಶಿವರಾಮ ಓಡಿಬಂದು ಮಾವನ ಕೈಹಿಡಿದು ಎಳೆದ. ಮಿಕ್ಕವರೂ ಓಡಿಬಂದರು. ಯಾರು ಇಳಿಸಿದರೋ ಏನು ಆಯಿತೋ ಒಂದೂ ಅರ್ಥವಾಗಲಿಲ್ಲ ರಾಮನಿಗೆ. ಅಂತೂ ಅವನು ನೆಲದಲ್ಲಿ ಹಿರಿಯರ ಕಾಲು ಸಂದಿಯಲ್ಲಿ ಸಿಕ್ಕಿ ಹಾಕಿಕೊಂಡ. ತಲೆ ಎತ್ತಿ ನೋಡಿದರೆ ಥೋರ ಥೋರ ತೊಡೆಗಳು, ಗಲ್ಲಗಳು- ಕಾಣುತ್ತಿವೆ ಅವನಿಗೆ. ಅಮ್ಮ ಹೇಳುತ್ತಿದ್ದ ರಾಕ್ಷಸರ ತುಣುಕು ತುಣುಕಾಗಿ ಹೆದರಿಸಿದವು. “ಅಮ್ಮ ಅಮ್ಮ” ಎಂದು ನರಳಿದ. “ಅಪ್ಪಯ್ಯ” ಎಂದು ನಡುಗಿದ. ಶಂಭು ಅವನನ್ನು ಹೊರಕ್ಕೆಳೆದು ದೂರಕೊಂಡೊಯ್ದು ಸಂತೈಸಲು ಯತ್ನಿಸುತ್ತಿದ್ದಾನೆ. ರಾಮ ನಿಜಕ್ಕೂ ಗಡಗಡ ನಡುಗುತ್ತಿದ್ದಾನೆ. “ಅವರು ಯಾಕೆ ಹಾಗೆ ಮಾಡುತ್ತಿದ್ದಾರೆ” ಎಂದು ಕೇಳುತ್ತಿದ್ದಾನೆ.

ಹತ್ತಾರು ಮಿನಿಟುಗಳೇ ಸಂದಿರಬಹುದು. ಮಂಜಯ್ಯ ಬಂದವರೇ ಶಂಭುವಿನ ಹೆಗಲಿನಿಂದ ರಾಮನನ್ನು ಕಸಿದುಕೊಂಡು ನೇರ ಮೋಟಾರಿನತ್ತ ಸಾಗಿದರು. ಅವನನ್ನು ಒಳಕ್ಕೆ ಹೊತ್ತು ಹಾಕಿದರು. ಗಾಡಿಯ ಪಕ್ಕದಿಂದ ಶಿವರಾಮ ಏನೇನೋ ಕೂಗಾಡಿದ. ಸ್ಥಾನ ಪಲ್ಲಟದಿಂದ ರಾಮ ಗಾಬರಿಕೊಂಡ.

ಮೋಟಾರಿನಲ್ಲಿ ಎಲ್ಲರೂ ಕೂತರು. ಮೋಟಾರು ಮರಳಿ ಊರಿನ ಕಡೆ ಹೊರಟಿತು. ಮೋಟಾರು ಕಾರಿನ ಮೆತ್ತನೆಯ ದಿಂಬು ಗಾಡಿಯ ಹುಲ್ಲಿನ ಹಾಸಿಗೆಗಿಂತ ಹಿತವಾಗಿ ಕಂಡಿತು ರಾಮನಿಗೆ. ರಾಮ ಹಿಂದುಗಡೆ ಗಾಜಿಂದ ನೋಡಿದ. ಗಾಡಿ, ಹೆಂಗಸು, ಹಿರಿಯ ಎಲ್ಲ ದೂರ ದೂರವಾದರು ಸಣ್ಣ ಸಣ್ಣಗಾದರು. ಒಂದು ತಿರುವಿನಲ್ಲಿ ಎಲ್ಲರೂ ಮಾಯವಾದರು. ಗಾಡಿ ಮರೆಯಾದ ಕೂಡಲೇ ರಾಮನಿಗೆ ಬತ್ತಾಸು ಬೆಂಡಿನ ಪೊಟ್ಟಣ ನೆನಪಿಗೆ ಬರುವುದೇ? “”ಅಯ್ಯೋ ಅಲ್ಲಿ, ಬತ್ತಾಸು ಉಂಟು”” ಎಂದ ““ಸುಮ್ಮನೆ ಕೂರು ಒಮ್ಮೆ”” ಎಂದರು ಅಜ್ಜ. ““ಸಂತೆಯಲ್ಲಿ ಕೊಡಿಸುತೀಯಾ”” ಎಂದು ಕೇಳಿದ. “”ಆಯಿತಪ್ಪ ನೀನು ಜಾಣ, ಸುಮ್ಮನಿರು“ ಎಂದರು ಸದಾನಂದಭಟ್ಟರು. “”ನಾವು ಹೋಗುವುದೆಲ್ಲಿಗೆ”” ಎಂದು ಕೇಳಿದ. ““ಮನೆಗೆ”” ಎಂದುತ್ತರ ಬಂದಿತು ಯಾರಿಂದಲೋ. ““ಅಪ್ಪಯ್ಯ, ಅಪ್ಪಯ್ಯ ಅವರ ಮನೆಯಲ್ಲಿ ಜಿಂಕೆಯುಂಟಂತೆ ಅಪ್ಪಯ್ಯ ನಂಗೂ ಕೊಡಿಸುತ್ತೀಯಾ”” ಎಂದು ಕೇಳಿದ. ಅವರ ಗಲ್ಲ ಹಿಡಿದು. “”ಸುಮ್ಮನೆ ಕೂರು ಮಾಣಿ”” ಎಂದರು ಮಂಜಯ್ಯ ಸಿಟ್ಟಿನಿಂದ. ಸೆಪ್ಪೆಯಾದ ರಾಮ “”ಗಾಡಿಗಿಂತ ಇದೇ ಚೆಂದವಪ್ಪ”” ಎಂದ. ಇನ್ನೂ ಏನೇನೋ ಹೇಳಿದ. ಯಾರ ಮನಸ್ಸಿಗೆ ಶಾಂತಿಯುಂಟು ಅವನ ಮಾತು ಕೇಳಲು?

“ಹೌದ ಮಂಜಯ್ಯ. ಈಗೊಮ್ಮೆಯೇನೋ ಗೆದ್ದುದಾಯಿತು ನೀನು, ಮುಂದೇನು” ಎಂದರು ಭಟ್ಟರು. ಬೆಳಗ್ಗಿನಿಂದ ನಡೆದ ಘಟನೆಗಳು, ಅದರ ಬೆನ್ನಿಗೇ ಹಿಂದೆ ನಡೆದದ್ದು, ಮುಂದೆ ನಡೆಯಬಹುದಾದ್ದು – ಈ ಯಾವತ್ತೂ ಸಂಗತಿಗಳು ಮಂಜಯ್ಯನನ್ನು ಒಂದೇ ಮಿನಿಟಿನಲ್ಲಿ ಕುಗ್ಗಿಸಿಬಿಟ್ಟಿವೆ. ಜೊತೆಯಲ್ಲಿ “ಲಗ್ನ ಮಾಡಿಕೊಟ್ಟ ಮಗಳನ್ನು ಮನೆಯಲ್ಲಿ ಇರಿಸಿಕೊಂಡಿರುವುದು ನಮಗೆ ಚೆಂದವಾಗಿ ಕಾಣುತ್ತಿದೆಯಲ್ಲವೆ. ಅಬ್ಬ ಆ ಹೆಣ್ಣಿನ ಸೊಕ್ಕೆ” ಎಂದರು. ಅಪ್ಪಯ್ಯ ಅಪ್ಪಯ್ಯ ಎಂದು ಏನೋ ಹೊಸ ವಿಷಯವೇ ಹೇಳಲು ಹೊರಟ ರಾಮು. ಅವರು ಅದಕ್ಕೆ ಗಮನ ಕೊಟ್ಟರಲ್ಲವೇ? ಅವನ ಮನಸ್ಸು ಚಂಚಲವಾಗಿ ಓಡಿಯಾಡಿತು. ಪೀಪಿ ನೆನಪಿಗೆ ಬಂತು. ಕಿಸೆಯಿಂದ ಪೀಪಿ ತೆಗೆದು ಜೋರಾಗಿ ಊದಿದ. “ಎಂಥದು ಮಾಣಿ ನಿಂದು ಕರೆಕರೆ” ಎಂದರು ಮಂಜಯ್ಯ. ಅವನು ಪೆಚ್ಚಾದ. ಆದರೆ ಹೇಳಿದ ಮಾತು ಕೇಳುವ ವಯಸ್ಸೆ? ಸಣ್ಣಗೆ ಊದೇ ಊದಿದ. ಶಿವರಾಮ ತಮ್ಮ ಅಂಗಡಿಗೆ ಬಂದದ್ದು, ರಾಮನನ್ನು ಹೊತ್ತುಗೊಂಡು ಹೋದದ್ದು, ತಾವು ಅವನನ್ನು ಹಿಂಬಾಲಿಸಿದ್ದು ಮೊದಲುಗೊಂಡು ಎಲ್ಲವನ್ನೂ ಹೇಳಿದರು ಸದಾನಂದಭಟ್ಟರು. “ಅಷ್ಟು ಉಪಕಾರ ಮಾಡಿದೆಯಲ್ಲ ಸದಾನಂದ ನೀನು” ಎಂದರು ಮಂಜಯ್ಯ. ಮೋಟಾರು ಸಂತೆ ಹಾದುಹೋದಾಗ ರಾಮ, ಅಪ್ಪಯ್ಯ ಅಪ್ಪಯ್ಯ ಎಂದು ಕುಸು ಕುಸು ಮಾಡಿದ. ಅದು ದಾಟಿತಲ್ಲ ಎಂಬ ವ್ಯಥೆಯಿಂದ.

ಮೋಟಾರು ಪಾಂ ಪಾಂ ಎನ್ನುತ್ತ ಮನೆಯ ಮುಂದೆ ನಿಂತಿತು. ರಾಮ ನೋಡಿದ. ಮುಂದೆ ಜಾತ್ರೆಯೇ ಸೇರಿದೆ. ಎಲ್ಲರೂ ಒಟ್ಟಿಗೆ “ಬಂದರು ಬಂದರು” ಎಂದರು. ಮೋಟಾರಿನಿಂದ ಒಬ್ಬೊಬ್ಬರಾಗಿ ಇಳಿದರು. “ಇಳಿ ಮಾಣಿ” ಎಂದರು ಮಂಜಯ್ಯ. ಅಷ್ಟು ಚೆಂದದ ಮೋಟಾರು ತ್ಯಜಿಸಲು ಮನಸ್ಸು ಬಂದೀತೆ? ಆದರೆ ಅಷ್ಟೊಂದು ಜನ ತನ್ನ ಕಡೆಗೇ ನೋಡುತ್ತಿದ್ದುದರಿಂದ ಹೆಮ್ಮೆಯುಂಟಾಗಿ ಮೆಲ್ಲನೆ ಇಳಿದ. ಗುಂಪೊಡೆದು ಪಾರ್ವತಿ ಓಡಿಬಂದು ಅವನನ್ನು ಎತ್ತಿ ಮುದ್ದಾಡಿ ಹಿಸುಕಿ ಅತ್ತಳು – “ಎಲ್ಲಿ ಹೋದದ್ದು ಚಿನ್ನ ನೀನು. ನನ್ನ ಜೀವ ನಿಂತದ್ದೇ ಹೆಚ್ಚಲ್ಲವೆ” ಎನ್ನುತ್ತ. ಅಮ್ಮನನ್ನು ಕಂಡು ಮನಸ್ಸು ಅರಳಿದರೂ ದೇಹಕ್ಕೆ ಅವಳು ಕೊಡುತ್ತಿದ್ದ ಹಿಂಸೆಯಿಂದ ನೋವಾಗಿ ಬಿಡು ಬಿಡು ಎಂದು ಮಿಸುಕಾಡಿದ. ತಾಯಿ ಮಕ್ಕಳು ಮುಂದಾಗಿ, ಮಿಕ್ಕವರೆಲ್ಲಾ ಹಿಂದಾಗಿ ಮನೆಯೊಳಕ್ಕೆ ಹೋದರು. ಒಳಕೋಣೆಯಿಂದ ಕಲ್ಯಾಣಿ “ಬಂದಿತೆ? ಮಗು ಬಂದಿತೆ?” ಅವರು ಬಂದರೆ ಎಂದು ಏನೇನೋ ಒದರಿದಳು. ಜನಗಳ ನಡುವೆ ನಿಂತಿದ್ದ ಅಪ್ಪು ರಾಮನನ್ನು ಕೂಗಿದ. ಅವನೊಟ್ಟಿಗೆ ಹೋಗಬೇಕೆನ್ನಿಸಿತು. ಆದರೆ ಪೀಪಿಯ ಪ್ರಕರಣ ನೆನಪಾಗಿ “ಹೋಗೋ, ನೀನೊಬ್ಬ” ಎಂದ – ಮುಖ ಕಡುಬು ಮಾಡಿಕೊಂಡು, ತಾಯಿಯ ಸೊಂಟದಿಂದ.

‘‘ಅಪ್ಪಯ್ಯ, ಎಲ್ಲಿ ಸಿಕ್ಕಿದ ಇವನು? ನೀನು ಹೋದಾದ್ದಾರೂ ಎಲ್ಲಿಗೆ?” ಹತ್ತಾರು ಪ್ರಶ್ನೆ ಹಾಕಿದಳು ಪಾರ್ವತಿ – ಗೋಡೆಗೆ ಒರಗಿ ಕೂರುತ್ತ.

“ಹೋಗಿದ್ದೆ ಸುಡುಗಾಡಿಗೆ” ಎಂದರು ಮಂಜಯ್ಯ ಧೋತರವನ್ನು ಬಿಸಾಟು. ತೂಗು ಮಂಚದ ಮೇಲೆ ಕೂರುತ್ತ.

ನಿಂತಿದ್ದವರು ಒಬ್ಬೊಬ್ಬರಾಗಿ ತಮ್ಮ ತಮ್ಮ ಕಾರ್ಯಭಾರದ ನೆನಪಾಗಿ ಕಾಲ್ತೆಗೆದರು ಅಲ್ಲಿಂದ. ಉಳಿದವರೆಂದರೆ ಸದಾನಂದಭಟ್ಟರೊಬ್ಬರೇ. ನಡೆದಿದ್ದೆಲ್ಲವನ್ನೂ ಒಂದೆರಡು ಮಾತಿನಲ್ಲಿ ಹೇಳಿದರು ಅವರು. ತೊಡೆಯ ಮೇಲೆ ಕೌಂಚಿ ಮಲಗಿದ್ದ ಮಗನ ಕಂಗಾಲಾದ ಮುಖವನ್ನು ನೋಡಿ ನೋಡಿ “ಅಯ್ಯೋ ಮಗುವೇ” ಎಂದು ಅತ್ತಳು. ರಾಮನೂ ಬಿಕ್ಕಿದ.

ತಾಯಿ ಮಕ್ಕಳ ಅಳುವು ಸ್ವಲ್ಪ ಕಮ್ಮಿಯಾದಾಗ ಸದಾನಂದಭಟ್ಟರು ಹೇಳಿದರು: “ಒಮ್ಮೆ ಹೀಗೆ ಮಾಡಿದವರು ಮುಂದೆ ಏನೂ ಮಾಡಿಯಾನು ನಿನ್ನ ಅಳಿಯ. ಅದಕ್ಕೆಂದೇ ಹೇಳುವುದು – ನಿಮ್ಮ ನಿಮ್ಮ ಹಟದಲ್ಲಿ..” ಮಂಜಯ್ಯ ನಡುವೆ ಬಾಯಿ ಹಾಕಿದರು. “ಹೌದು, ಬೇವರ್ಸಿ ಹೆಗ್ಗಡತಿಯೂ ಅದೇ ಮಾತಲ್ಲವೇ ಅಂದದ್ದು. ಈಗ ನೀನು ಅದೇ ಧಾಟಿಯಲ್ಲಿ ಮಾತನಾಡುತ್ತಿ, ನಾನು ಮಾಡಬೇಕು ಏನು-ಅದಾದರೂ ಹೇಳಬಹುದಲ್ಲ” ಅವರ ಸ್ವರದಲ್ಲಿ ಬೇಸರಿಕೆಯಿತ್ತು, ಸಿಟ್ಟಿತ್ತು. ಆದರೆ ಅದರಿಂದ ಭಟ್ಟರಿಗೆ ಬೇಸರಿಕೆಯೂ ಆಗಲಿಲ್ಲ. ಸಿಟ್ಟೂ ಬರಲಿಲ್ಲ. ಬದಲು, ಹೇಗೂ ಪಾರ್ವತಿ ಎದುರಿಗೇ ಇದ್ದಾಳೆ. ಮಲಗುವ ಕೋಣೆಯಲ್ಲಿ ಅವಳ ತಾಯಿಯೂ ಇದ್ದಾಳೆ. ತನ್ನ ಮಾತು ಅವಳಿಗೂ ಕೇಳಿಸೀತು. ಕೇಳಿಸುವುದೊಳಿತು ಎನಿಸಿ-

“ನಿನ್ನದೇ ತಪ್ಪೆಂದು ನಾನು ಹೇಳಿದ್ದೆ ಮಂಜಯ್ಯ? ನಿನ್ನ ಸಂಸಾರದ ಬಗ್ಗೆ ಎಂದೂ ಪಾರ್ವತಿಯ ಎದುರು ನಾನು ಮಾತನಾಡಿದವನಲ್ಲ. ಈ ಹೊತ್ತು ಎಲ್ಲ ಅನಿಷ್ಟಗಳೂ ಆಗಿವೆಯಷ್ಟೆ. ಅದರಿಂದಾಗಿ ನಾಲ್ಕು ಮಾತನಾಡುವ ಎಂದು ಎಣಿಸಿದೆ. ಪಾರ್ವತಿ ನನ್ನನ್ನು ತಪ್ಪು ಎಣಿಸಲಾರಳು. ಎಷ್ಟೆಂದರೂ ನಾನು ಆಡಿಸಿದ ಕೂಸಲ್ಲವೇ ಅವಳು. ನಿಜ ಹೇಳಬೇಕೆಂದರೆ ಅವಳ ಲಗ್ನದ ನಂತರ ಅವಳನ್ನು ಸಮವಾಗಿ ನೋಡಿದ್ದೆಂದರೆ ಇಂದೇ ಅಲ್ಲವೇ? ಎಷ್ಟು ಥೋರ ಇದ್ದವಳು ಹೀಗೆ ಆಗಿದ್ದಾಳಲ್ಲ ಎಂದು ನನಗೆ ನಿಜಕ್ಕೂ ನೋವಾಗುತ್ತಿದೆ ನೋಡು” ಎನ್ನುವಾಗ ನಿಜಕ್ಕೂ ಪಾರ್ವತಿ ಬಿಕ್ಕಿ ಬಿಕ್ಕಿ ಅತ್ತಳು. “ನನ್ನ ಕರ್ಮ, ನನ್ನ ಕರ್ಮ” ಎಂದು. ಯಾಕಮ್ಮ ಎನ್ನುತ್ತ ಪಾರ್ವತಿ ಗಾಬರಿಯಿಂದ ರಾಮನೂ ಅತ್ತ.

“ಬಾ ಮಗು – ಒಮ್ಮೆ ನೋಡುತ್ತೇನೆ ನಿನ್ನನ್ನು” ಎಂದು ಒಳಗಿಂದ ಅಜ್ಜಿ ಕೂಗುತ್ತಲೇ ಇದ್ದಾಳೆ. ಆದರೆ ರಾಮನಿಗೆ ಈಗ ಆ ಕತ್ತಲು ಕೋಣೆಯೆಂದರೆ ಏಕೋ ಹೆದರಿಕೆಯಾಗಿ ‘ಉಹು’ ಎನ್ನುತ್ತ ತಾಯಿಯ ತೊಡೆಯ ಮೇಲೆ ಗಟ್ಟಿಯಾಗಿ ಕೂತಿದ್ದಾನೆ. ಸದಾನಂದಭಟ್ಟರು ತಮ್ಮ ಮಾತಿನ ಸರಣಿಯನ್ನು ಬಿಡದೆ ಹೇಳಿದರು. “ಅಲ್ಲ ಮಂಜಯ್ಯ ನಿನ್ನ ಈ ಮನೆಯಲ್ಲಿ ಯಾರು ಸುಖಿಗಳಾಗಿದ್ದಾರೆ ಇವತ್ತು. ಹೇಳು ನೋಡುವ. ನಿನ್ನ ಹೆಂಡತಿ ಹಾಸಿಗೆ ಹಿಡಿದವಳು. ಇನ್ನು ಪಾರ್ವತಿಯ ಗತಿ ಹೀಗೆ. ಇವೆಲ್ಲ ನೋಡುತ್ತ ನಿನ್ನ ಮನಸ್ಸು ಏನು ಮರವೇ, ಖುಷಿಪಡಲು? ಬೇಡ, ನಮ್ಮಗಳ ಮಾತೇ ಬೇಡ. ನನಗೂ ನಿನಗೂ ತ್ರಾಣ ಬರುತ್ತಿಲ್ಲವಷ್ಟೆ. ಯಮರಾಯ ಬಾ ಎಂದಾಗ ನಾವು ಹೊರಡಲು ಸಿದ್ಧರಾಗಬೇಕಷ್ಟೆ. ನಂತರದ ಮಾತು ಯೋಚಿಸು. ಪಾರ್ವತಿಯ ಗತಿ ಏನು? ಈ ರಾಮನ ಭವಿಷ್ಯವೇನಾದಿತು? ನಾಳೆ ರಾಮನ ಕಡೆಗೆ ಬೆರಳು ಮಾಡಿ ಈ ಮಾತೆಲ್ಲ ಆಡುವಾಗ, ಅವನಿಗೆ ತನ್ನನ್ನೇ ಕುರಿತು ಅವರೆಲ್ಲ ಏನೋ ಮಾತನಾಡುತ್ತಿದ್ದಾರೆನಿಸಿ ಗಂಭೀರವಾಗಿ ಭಟ್ಟರಿಂದ ಅಜ್ಜಯ್ಯ, ಅಜ್ಜನಿಂದ ಅಮ್ಮನ ಕಡೆ ದೃಷ್ಟಿ ಹೊರಳಿಸುತ್ತಿದ್ದಾನೆ.

ಒಳಗಿನಿಂದ ರಾಮನ ಅಜ್ಜಿ ಗೊರಲು ಸ್ವರದಲ್ಲೇ ನಡುವೆ ಬಾಯಿ ಹಾಕಿ “ಯಾರದು- ಸದಾನಂದನೆ? ಸ್ವರ ಕೇಳಿ ಹಾಗೆಯೇ ಎಣಿಸಿದೆ. ಹೌದ ಸದಾನಂದ – ನಿನ್ನ ತಮ್ಮ ವೆಂಕಟೇಶನು ಮಗಳು ಆ ಹೋಟಲಿನ ಮಾಣಿಯೊಟ್ಟಿಗೆ ಘಟ್ಟದ ಕೆಳಕ್ಕೆ ಓಡಿಹೋದಳೆಂದು ಸುದ್ದಿ. ನಿಜವಾ” ಎನ್ನಬೇಕೆ?

ಅಮ್ಮ ಹೇಳಿದ್ದು ಸಮಾ ಆಯಿತು ಎಂದು ಸಂತೋಷವಾಗಿ ಹಲ್ಲು ಕಡಿದಳು ಪಾರ್ವತಿ.

ಮಂಜಯ್ಯನ ತಲೆ ಬಿಸಿಯಾಯಿತು. “ನೀನು ಸಮ್ಮನೆ ಬಿದ್ದಿರಬಾರದೆ ಅಲ್ಲಿ. ನಿನ್ನ ಮಾತು ಕೇಳಿಯೇ ನಾನು ಸೋತದ್ದು” ಎಂದರು.

“ನನ್ನ ಮಾತು ಕೇಳಿ ಆದದ್ದಾದರೂ ಏನು” ಎಂದು ಕಲ್ಯಾಣಿ ಒಳಗಿಂದ ಸಿಟ್ಟಿನಲ್ಲಿ.

“ನಾಲಿಗೆ ಸಡಿಲ ಬಿಡಬೇಡ ತಿಳಿಯತಾ?” ಎಂದು ಅಬ್ಬರಿಸಿದರು ಮಂಜಯ್ಯ. “ಏ ಅಜ್ಜಿ, ಸುಮ್ಮನಿರು ಓಹೋ” ಎಂದು ರಾಮ – ದೊಡ್ಡ ಗಂಡಸಿನ ಹಾಗೆ ನಟಿಸುತ್ತ, ತಾಯಿ ಮುಖ ನೋಡಿ ನಗುತ್ತ.

ಅಜ್ಜಿ ಒಳಗಿಂದ ಇನ್ನೇನೋ ಅಂದಳು. ಮಂಜಯ್ಯ ಹೌಹಾರಿದರು. ಅವರಿಬ್ಬರೂ ಹೀಗೆ ಕಚ್ಚಾಡುವಾಗ ತಾಯಿಯಷ್ಟೇ ಆಸರೆ. ರಾಮನಿಗೆ. ಏಕೋ ಹೆದರಿಕೆಯಾಗಿ ಮತ್ತಷ್ಟು ಮೈ ಮಡಚಿಕೊಂಡು ಕೂತ – ತಾಯಿಯ ತೊಡೆಯಲ್ಲಿ ಕಿಸೆಯಲ್ಲಿ ಇನ್ನೂ ಉಳಿದಿದ್ದ ಬೆಂಡು ತೊಡೆಗೆ ಒತ್ತಿದಾಗ, ಅದರ ನೆನಪು ಬಂದು, ದಡಕ್ಕ ಎದ್ದು ಕಿಸೆಯಿಂದ ಅದನ್ನು ತೆಗೆದು “ಅಮ್ಮ ನೋಡು ಇಲ್ಲಿ, ಯಾರು ಕೊಡಿಸಿದ್ದು ಗೊತ್ತುಂಟ” ಎನ್ನುತ್ತ ಅವಳಿಗೆ ತೋರಿಸಿದ. “ನಿಂಗೆ ಬೇಕಾ” ಎಂದು ಕೇಳಿದ. ಸೇಳೆಯಿಂದ ಅವಳ ಬಾಯಿಗೆ ಬೇಡ ಬೇಡವೆಂದರೂ ಚೂರು ಬೆಂಡನ್ನು ತುರುಕಿದ. “ಎಂಥದೋ ನಿಂದು ಹಾಳು ಪಿರಿಪಿರಿ” ಎನ್ನುತ್ತ ಅವಳು ಅದನ್ನು ನುಂಗಿದಳು ವಿಧಿಯಿಲ್ಲದೆ.

ಮಂಜಯ್ಯ ಗುಡುಗಿದರು – “ಇಗೋ ನೋಡು ಸದಾನಂದ ನನಗೆ ಇವೆಲ್ಲ ಇಷ್ಟವೆಂದು ತಿಳಿದೆಯಾ? ಇವೆಲ್ಲ ಗೊತ್ತಿಲ್ಲವೆಂದು ತಿಳಿದಿಯಾ? ಇವಳು ಬೇವರ್ಸಿ, ಲಗ್ನವಾದ ಮೂರೇ ದಿನಕ್ಕೆ ನನ್ನಿಂದಾಗದು ಎಂದು ಅವನ ಮನೆಯಿಂದ ಓಡಿ ಬಂದವಳಲ್ಲವೆ? ನಾನು ಸಾವಿರ ಸರ್ತಿ ಹೇಳಿದೆ – ಇದು ಆಗದು. ಇದು ಕೂಡದು ಎಂದು. ಯಾರಿದ್ದಾರಂತೆ ಇಲ್ಲಿ ನನ್ನ ಮಾತು ಕೇಳಲು. ಅಮ್ಮ ಅಮ್ಮ ಎಂದು ಅವಳು ಅತ್ತಳು. ಅವಳು – ಅಲ್ಲಿ ಮಲಗಿದ್ದಾಳಲ್ಲ ಇವಳ ಅಮ್ಮ ಇವಳು ಆಡಿದ್ದಕ್ಕೆಲ್ಲ ಸೈ ಅಂದು ತಕಪಕ ಕುಣಿದಳು. ಒಮ್ಮೆ ಹೀಗಾದದ್ದು ಉದ್ದಕ್ಕೂ ಆಯಿತಷ್ಟೆ. ರಾಮನ ಬಸುರಲ್ಲಿ ಬಂದೇ ಬಿಟ್ಟಳು. ಮತ್ತೆ ಅಲ್ಲಿಗೆ ಹೋಗುವುದಿಲ್ಲವೆಂದು. ನನ್ನ ಮಗಳು ನನಗೆ ಹೊರೆಯಲ್ಲ ಎಂದಳು ಅವಳು. ಬೀದಿಯಲ್ಲಿ ಓಡಿಯಾಡಬೇಕಾದವನು ನಾನಷ್ಟೆ. ಈ ಮೂರು ಕಾಸಿನ ಹೆಂಗಸರಿಗೆ ಏನು?”

ರಾಮನನ್ನು ಧಡಕ್ಕ ಪಕ್ಕಕ್ಕೆ ಉರುಳಿಸಿ, ಎದ್ದಳು ಪಾರ್ವತಿ. “ಅಪ್ಪಯ್ಯ ನೀವು ಹಾಗೆಲ್ಲ ಯಾಕೆ ಮಾತಾಡುತ್ತೀರಿ? ಅವರೊಟ್ಟಿಗೆ ಇರುವುದು ಬೇಡವೆಂದು ಬಂದೆನೆ?” ಅವರು ಕೊಟ್ಟ ಕಿರುಕುಳ ಒಂದೇ ಎರಡೇ? ನಾನೇ ಏನು – ಯಾವ ಹೆಣ್ಣಾದರೂ ಅದರೊಟ್ಟಿಗೆ ಇರುವುದಕ್ಕೆ ಬಂದೀತೆ?” ಗಳಗಳ ಅತ್ತಳು. ಇನ್ನು ಅವಳಿಗೆ ಅಲ್ಲಿರಲು ಸಾಧ್ಯವಾಗಲಿಲ್ಲ. “ಬಾರೋ ಏ ಮಾರಿ” ಎಂದು ರಾಮನನ್ನು ದರದರ ಎಳೆದುಕೊಂಡು ತಾಯಿಯ ಕೋಣೆಗೆ ಹೊರಟಳು. “ಯಾರಿಗೂ ನಾವು ಹೊರೆಯಾಗುವುದು ಬೇಡ. ಹೋಗುವ – ಎಲ್ಲಾದರೂ ಹಾಳಾಗಿ” ಎನ್ನುತ್ತ. “ಅಯ್ಯೋ ಬಿಡಮ್ಮ, ಬಿಡಮ್ಮ” ಎನ್ನುತ್ತಲೇ ಇದ್ದರಾಮ. ತಾಯಿ, ಮಗಳು ಏನೇನೋ ಮಾತಾಡುತ್ತಿದ್ದರು ಒಳಗೆ ಒಮ್ಮೆ ಪಾರ್ವತಿ ಎತ್ತರದ ಸ್ಥರದಲ್ಲಿ ತಾಯಿಗೆ ಏನೇನೋ ಅಂದಳು. ಕಲ್ಯಾಣಿ ಅಳುವುದೂ ಕೇಳಿಸುತ್ತಿತ್ತು. ರಾಮ ಗಾಬರಿಯಿಂದ ಹೊರಕ್ಕೋಡಿ ಬಂದು ಅಜ್ಜಯ್ಯನ ತೊಡೆಯೇರಿದ.

“ಏನೇ ಅನ್ನು ಮಂಜಯ್ಯ ನಿನ್ನ ಅಳಿಯ ನೀವೆಲ್ಲ ಭಾವಿಸುವಷ್ಟು ಕೆಟ್ಟವ, ಕ್ರೂರಿ ಎಂದು ನಾನಂತೂ ಎಣಿಸಲಾರೆ. ಇವತ್ತು ನಾನೇ ನೋಡಿದೆನಲ್ಲ. ಯಾಕೆ – ನೀನೂ ನೋಡಿದೆಯಷ್ಟೆ. ಮಗನ ಮೇಲಿನ ಮೋಹವೊಂದಿಲ್ಲದಿದ್ದಲ್ಲಿ ಅವನು ಹಾಗೆ ಮಾಡುತ್ತಿದ್ದನೇ ಎನಿಸುತ್ತದೆ ನನಗೆ. ರಾಮನನ್ನು ಮರಳಿ ಕೊಡಲು ಹೆಣವೇ ಬೀಳಬೇಕು ಅಂದವಲ್ಲವೆ? ಹೆಂಡತಿ, ಮಕ್ಕಳು ಎನ್ನುವ ಮೋಹವಿಲ್ಲದೆ ಆ ಮಾತು ಅವನ ಬಾಯಿಂದ ಹೊರಟಿತೆ? ಯಾಕೆ? ಅವನ ಹಣ ನೋಡಿ ಯಾರೂ ಮತ್ತೊಂದು ಹೆಣ್ಣು ಕೊಡಲಾರರು ಎಂದೇನಿಲ್ಲವಷ್ಟೆ.”

ಯಾವುದು ನೆನಪಿಗೆ ಬಾರದಿದ್ದರೂ, ತನಗಾಗಿ ಆ ಹಿರಿಯ ಮತ್ತೆ ಅಜ್ಜ ಕೈ ಹಿಡಿದು ಬಾ ಎಂದು ಜಗ್ಗಾಡಿದ್ದು ಇನ್ನೂ ರಾಮನ ಮನಸ್ಸಿನಲ್ಲಿ ಹಸಿರು ಹಸಿರಾಗಿಯೇ ಉಳಿದಿದ್ದರಿಂದ ಹಿರಿಯರ ನೆನಪು, ಹೆಂಗಸಿನ ನೆನಪು. ಜಿಂಕೆಯ ನೆನಪು, ಗಾಡಿಯ ನೆನಪು – ಎಲ್ಲಾ ಒಟ್ಟೊಟ್ಟಾಗಿ ಬಂದವು. “ಹೌದು ಅಪ್ಪಯ್ಯ, ಆ ಗಾಡಿ ಎಷ್ಟು ಚಂದವೆನ್ನುತ್ತಿ, ಅಪ್ಪಯ್ಯ ಅಪ್ಪಯ್ಯ ಇಲ್ಲಿ ನೋಡು. ಅಲ್ಲಿ, ಅವರ ಮನೆಯಲ್ಲಿ ಜಿಂಕೆಯುಂಟಂತೆ ಅಪ್ಪಯ್ಯ ನಂಗೆ ಜಿಂಕೆ ಕೊಡಿಸುತ್ತೀಯಾ” ಎಂದು ಅವನ ಗಲ್ಲ ಚುಚ್ಚಿ ಹೇಳಿದ. ಆ ಹೊತ್ತಿಗೇ ಪಾರ್ವತಿ ತಾಯಿಯ ಕೋಣೆಯಿಂದ ಹೊರಕ್ಕೆ ಬಂದು “ಮಗು ಮಾತ್ರ ಬೇಕು. ಅವರಿಗೆ ನಾನು ಬೇಡವಾದೆ ಅಲ್ಲವೆ?” ಎಂದಳು ಸಿಟ್ಟಿನಲ್ಲಿ.

“ಈಗ ನೀವು ಹಾಗೆಲ್ಲ ಹೇಳುವವರು, ಅವನು ನಾಲ್ಕು ನಾಲ್ಕು ಸರ್ತಿ ಬಂದು ನಿನ್ನ ಅಪ್ಪನನ್ನು ಕೇಳಿದಾಗ, ಇವನೇನು ಉತ್ತರ ಕೊಟ್ಟನಂತೆ ಹೇಳು ನೋಡುವ. ನೀನಾದರೂ ಏನು ಬಾಗಿಲಿಗೆ ಬಂದ ಗಂಡನನ್ನು ‘ನೀ ಯಾವ ಊರಿನವ’ ಎಂದು ಕೇಳಿದೆಯಾ? ಇದೇ ನಿನ್ನ ಅಮ್ಮ ಅವನ ಮುಖಕ್ಕೆ ಏನೆಲ್ಲ ಅಂದಳು? ಶಿವರಾಮ ನನ್ನಲ್ಲಿ ಎಲ್ಲವನ್ನೂ ಹೇಳಿದ್ದಾನೆ. ಕಣ್ಣೀರು ಸುರಿಸಿದ್ದಾನೆ” ಎಂದು ಸದಾನಂದಭಟ್ಟರು ಹೇಳುವಾ‌ಗ ಪಾರ್ವತಿಗೆ ಅವಮಾನವಾಯಿತು.

“ನೋಡಿ ಇವರೇ, ನೀವು ನನಗೆ ಏನೂ ಅನ್ನಿ ಆದರೆ ತ್ರಾಣವಿಲ್ಲದೆ ಮಲಗಿರುವ ನನ್ನ ಅಮ್ಮನಿಗೆ ಏನಾದರೂ ಅಂದರೆ ನಾನು ಸುಮ್ಮನಿರುವುದಿಲ್ಲ” ಎನ್ನುತ್ತ ಅಪ್ಪನ ತೊಡೆಯಿಂದ ಮಗನನ್ನು ಎಳೆದು ಸೊಂಟಕ್ಕೆ ಹೇರಿಕೊಂಡು ಅಮ್ಮನ ಕೋಣೆಗೆ ಹೊರಟಳು. ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಚಂಡಿನ ಹಾಗೆ ತನ್ನನ್ನು ಹಿಡಿದಾಡಿಸುವ ಹಿರಿಯರ ಬಗ್ಗೆ ಹೆದರಿಕೆಯಾಯಿತು ರಾಮನಿಗೆ. “ಬಾಯಿಮುಚ್ಚು ಪಾರ್ವತಿ, ಹಿರಿಯರು ಎನ್ನುವ ಗೌರವವನ್ನಾದರೂ ಕೊಡುವುದಕ್ಕೆ ಕಲಿ” ಎಂದು ಘರ್ಜಿಸಿದರು ಮಂಜಯ್ಯ. “ಹಿರಿಯರು ಹಿರಿಯರಾಗಿದ್ದಾರೆ ಸಲ್ಲುವ ಗೌರವ ಸಲ್ಲೇಸಲುತ್ತದೆ” ಎಂದಳು ಅಪ್ಪನ ಮುಖಕ್ಕೇ. “ನಿನ್ನ ಸೊಕ್ಕಿಗೆ” ಎಂದು ಕೂಗಿದರು ಮಂಜಯ್ಯ. ಅವಳಿಗೆ ಆಳು ಬಂತು. “ಹೌದು ನನಗೆ ಸೊಕ್ಕು. ಯಾಕೆ? ನನಗೆ ಬೇಕಾದ್ದು ಎಲ್ಲ ಇಲ್ಲುಂಟು ಎಂದಲ್ಲವೆ? ಅಯ್ಯೋ ಯಾವ ಸುಖಕ್ಕೆ ಬದುಕಬೇಕೋ” ಎಂದು ರಾಮನನ್ನು ನೆಲಕ್ಕೆಸೆದು ತಲೆ ಚಚ್ಚಿಕೊಂಡಳು ಬಾಗಿಲಿಗೆ, ಸದಾನಂದಭಟ್ಟರು ಓಡಿಹೋಗಿ ಅವಳನ್ನು ತಡೆಯಲೆತ್ತಿಸಿದರು. “ಬಿಡಿ ಮುಟ್ಟಬೇಡಿ. ನಾನು ಸಾಯುತ್ತೇನೆ. ನನ್ನಿಂದಲ್ಲವೆ ಇವೆಲ್ಲ” ಎನ್ನುತ್ತ ಮಿಸುಕಾಡಿದಳು. ರಾಮ ಗಡ ಗಡ ನಡುಗಿದ. “ಅಮ್ಮ ಅಮ್ಮ” ಎಂದು ರೋದಿಸಿದ. ಆದರೆ ಅವಳ ಹತ್ತಿರ ಹೋಗುವ ಧೈರ್ಯ ಮಾತ್ರ ಬರಲಿಲ್ಲ. ಮಂಜಯ್ಯನಿಗೆ ಒಟ್ಟಾರೆ ದೃಶ್ಯವೇ ಹೇಸಿಗೆಯಾಯಿತು. ತಲೆ ಬಿಸಿಯಾಯಿತು. “ಸಾಯುತ್ತೀಯಾ ರಂಡೆ, ಸಾಯುತ್ತೀಯಾ” ಎನ್ನುತ್ತ ಚಟಾರನೆ ಅವಳ ಕೆನ್ನೆಗೆರಡು ಬಿಗಿದರು. “ಅಯ್ಯೋ ನಾನು ಸತ್ತೆ” ಎಂದು ಬೊಬ್ಬೆಹೊಡೆದಳು. ಮಂಜಯ್ಯ ಎಂಥದು ಮಾಡುವುದು ನೀನು ಎಂದು ಸದಾನಂದಭಟ್ಟರು ರೇಗಿದರು. ಎಲ್ಲರೂ ರಾಕ್ಷಸರಂತೆ ಕಂಡರು ರಾಮನಿಗೆ “ಅಪ್ಪಯ್ಯ” ಎನ್ನುತ್ತಿದ್ದಾನೆ. ಆದರೆ ಯಾರ ಬಳಿಯೂ ಹೋಗುವ ತ್ರಾಣವಿಲ್ಲದಂತಾಗಿದೆ. “ಸಾಲದು ಎಂತ ನೀನೊಬ್ಬ ನನ್ನ ಕೊರಳಿಗೆ. ನಡಿಯೋ ಕೆರೆಗೋ ಬಾವಿಗೋ ಬಿದ್ದು ಸಾಯುವ. ಈ ನರಕ ಯಾರಿಕೆ ಬೇಕು” ಎಂದು ರಾಮನನ್ನು ಹಿಡಿಯಲು ಹೋದಳು. ರಾಮನಿಗೆ ಎಲ್ಲ ಸಂಗತಿ  ಭಯಂಕರವಾಗಿ ಕಂಡಿತು. ಹೊಸದೊಂದು ರಾಜ್ಯದಲ್ಲಿ ಇರುವಂತೆ ಅನಿಸಿತು. ಅಮ್ಮ ಥೇಟು ಕತೆಯಲ್ಲಿ ಬರುವ ರಾಕ್ಷಸಿಯಂತೆ ಕಂಡಳು- ಆ ಬಿಚ್ಚಿದ ತಲೆಯಲ್ಲಿ, ಸೆರಗಿಲ್ಲದ ಮೈಯಲ್ಲಿ, ಹಿಂದಕ್ಕೆ ಹಿಂದಕ್ಕೆ ಹೋದ, ಅಳುತ್ತ ಬಾಗಿಲವರೆಗೆ ಬಂದ. ಹೊಸಿಲು ದಾಟಿದ, ಕಿಸಿಗೆ ಕೈಹಾಕಿದ. ಪೀಪಿ ಸಿಗಬೇಕೆ ಅಲ್ಲಿ ಅಪ್ಪುವಿನ ನೆನಪಾಯಿತು. ಕದ್ದರೆ ರಾಕ್ಷಸರು ಬಂದು… ತಾಯಿ ಹೇಳಿದ ಕತೆ ನೆನಪಿಗೆ ಬಂದು. ಅವನಿಗೆ ಪೀಪಿ ಹಿಂತಿರುಗಿಸುವುದೇ ಸಮ ಎನಿಸಿ, ಅಲ್ಲಿ ನಿಲ್ಲದೆ ಅಪ್ಪುವಿನ ಮನೆ ಕಡೆಗೆ ಓಡಿದ ರಾಮ.

ಲೇಖಕರು

ತಮ್ಮ ನಲವತ್ತನಾಲ್ಕನೇ ವಯಸ್ಸಿನಲ್ಲಿಯೇ ಕಾಲವಾದ ಕೆ. ಸದಾಶಿವ (೧೯೩೩-೧೯೭೭) ಅವರು ಚಿಕ್ಕಮಗಳೂರಿನ ಕೊಪ್ಪದಲ್ಲಿ ಜನಿಸಿದರು. ಎಂ.ಎಸ್ಸಿ. ಪದವಿಧರರಾಗಿ ಸೇವೆಯಲ್ಲಿದ್ದರು. ನಲ್ಲಿಯಲ್ಲಿ ನೀರು ಬಂದಿತು (೧೯೫೮) ಮತ್ತು ಅಪರಿಚಿತರು (೧೯೭೧) ಎಂಬ ಎರಡು ಕಥಾಸಂಕಲನಗಳನ್ನು ಹೊರತಂದಿದ್ದಾರೆ. ಇವರ ಅನೇಕ ಕಥೆಗಳು ಬೇರೆ ಭಾಷೆಗಳಿಗೆ ಅನುವಾದಗೊಂಡಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದಿರುವರು.

ಆಶಯ

ಈ ಕಥೆಯನ್ನು ಕೆ.ಸದಾಶಿವರ ಸಮಗ್ರ ಕಥೆಗಳು ಸಂಕಲನದಿಂದ ಆಯ್ದುಕೊಳ್ಳಳಾಗಿದೆ. ದೊಡ್ಡವರ ನಡುವಿನ ವಿರಸದ ಮತ್ತು ಮಕ್ಕಳ ನಡುವಿನ ವಿರಸದ ಚಿತ್ರಣ ಇಲ್ಲಿದೆ. ದೊಡ್ಡವರ ವಿರಸ ಸರಳವಾಗಿ ಬಗೆಹರಿಯುವುದಿಲ್ಲ. ಮಕ್ಕಳ ವಿರಸ ತಾತ್ಕಾಲಿಕವಾದದ್ದು. ಮಕ್ಕಳಂತೆ ದೊಡ್ಡವರ ವಿರಸವೂ ತಾತ್ಕಾಲಿಕವಾಗಿದ್ದರೆ ಜೀವನ ಸರಳವಾಗಿರುತ್ತದೆ ಎಂಬುದು ಈ ಕಥೆಯಿಂದ ವ್ಯಕ್ತವಾಗುತ್ತದೆ.

ಶಬ್ದಕೋಶ

ದಿರಿಸು=ಬಟ್ಟೆ. ಅರ್ಧಆಣೆ=ಮೂರು ಪೈಸೆ. ವಿಲೇವಾರಿ=ಕರ್ಚು ಮಾಡು. ಪೈಸಲ್ಲು=ಬಗೆಹರಿಸು.

ಪ್ರಶ್ನೆಗಳು

೧.         ರಾಮನು ಹೇಗೆ ಸಿದ್ಧನಾಗಿ ಸಂತೆಗೆ ಹೋದನು?

೨.         ರಾಮನು ಅಪ್ಪುವಿನ ಜತೆ ಸಂತೆಯಲ್ಲಿ ಕಂಡ ಸ್ವಾರಸ್ಯಕರ ದೃಶ್ಯಗಳು ಯಾವುವು?

೩.         ರಾಮ ಮತ್ತು ಅಪ್ಪು ಸಂತೆಯಲ್ಲಿ ಯಾಕೆ ಜಗಳವಾಡಿದರು? ವಿವರಿಸಿರಿ.

೪.         ರಾಮನ ಹತ್ತಿರವಿದ್ದ ಪೀಪಿ ಯಾರದು? ಅದು ರಾಮನಲ್ಲಿ ಇದ್ದದ್ದು ಯಾಕೆ? ವಿವರಿಸಿರಿ.

೫.         ಸಂತೆಯಲ್ಲಿದ್ದ ರಾಮನನ್ನು ಯಾರು, ಯಾಕೆ ಕರೆದುಕೊಂಡು ಹೋದರು?

೬.         ರಾಮನು ಹೆಗ್ಗಡಿತಿಯ ಜೊತೆಯಲ್ಲಿ ಕುಳಿತು ಬಂಡಿಯಲ್ಲಿ ಪ್ರಯಾಣಿಸುವಾಗ ಅವನ ಅನುಭವಗಳನ್ನು ವಿವರಿಸಿರಿ.

೭.         ಅಪರಹಣಗೊಂಡಿದ್ದ ರಾಮನು ಬಿಡುಗಡೆಯಾದ ಪ್ರಸಂಗವನ್ನು ವರ್ಣಿಸಿರಿ.

೮.         ಸದಾನಂದ ಭಟ್ಟರು ಹದಗೆಟ್ಟ ಪಾರ್ವತಿಯ ಸಂಸಾರವನ್ನು ಸರಿಪಡಿಸಲು ಪ್ರಯತ್ನಿಸುವ ಸಂದರ್ಭವನ್ನು ಬರೆಯಿರಿ.

೯.         ಮಂಜಯ್ಯನ ಸಂಕಟಕ್ಕೆ ಕಾರಣಗಳೇನು? ವಿವರಿಸಿರಿ.

೧೦.       ಈ ಕಥೆಯಲ್ಲಿ ಕಾಣುವ ಮಕ್ಕಳ ವಿರಸಕ್ಕೂ, ದೊಡ್ಡವರ ವಿರಸಕ್ಕೂ ಇರುವ ವ್ಯತ್ಯಾಸವನ್ನು ವಿವರಿಸಿರಿ.

 

ಹೆಚ್ಚಿನ ಓದು

ಶ್ರೀಕೃಷ್ಣ ಆಲನಹಳ್ಳಿ : ಕಾಡು – ಕಾದಂಬರಿ

ಯು.ಆರ್.ಅನಂತಮೂರ್ತಿ : ಘಟಾಶ್ರಾದ್ಧ – ಕಥೆ

ರಾಘವೇಂದ್ರ ಖಾಸನೀಸ : ಅಲ್ಲಾವುದ್ದೀನನ ಅಧ್ಭುತ ದೀಪ – ಕಥೆ

ಕೆ.ಪಿ.ಪೂರ್ಣಚಂದ್ರ ತೇಜಸ್ವಿ : ಲಿಂಗಬಂದ – ಕಥೆ

ಎಚ್.ನಾಗವೇಣಿ : ಮೌನದಾಚೀನ ಗಹನ – ಕಥೆ