ಸಾಹಿತ್ಯವು ಜನಜೀವನದ ಪಡಿನೆಳಲೆಂದು ತಿಳಿದವರು ಹೇಳುವುದುಂಟು. ಈ ಮಾತನ್ನೇ ಇನ್ನೂ ಸ್ವಲ್ಪ ಹಿಂಜಿ ನೋಡಿದರೆ, ಇಡೀ ಜೀವನವೇ ಸಾಹಿತ್ಯಕ್ಕೆ ಮೂಲಬಿಂಬವಾಗಬಹುದೆಂಬುದು ತೋರುವುದು. ಮಾನವ ಜೀವನದಲ್ಲಿ ಹೇಗೋ ಹಾಗೆಯೇ ಇನ್ನುಳಿದ ಪ್ರಾಣಿಕೋಟಿಗಳ ಜೀವನದಲ್ಲಿಯೂ ಒಂದೊಂದು ಬಗೆಯ ರಸಸಂವಿಧಾನವಿದೆ. ಆದರೆ ಮಾನವನು ತನ್ನ ಸಂಸಾರದ ಸುಖದುಃಖಗಳ ಸಂಕೋಲೆಯಲ್ಲಿ ಸಿಕ್ಕಿಬಿದ್ದು ಅದರಿಂದ ಪಾರುಗಾಣದೆ ನರಳುತ್ತಿರುವಾಗ, ಆತನಿಗೆ ತನ್ನ ಜೀವನದ ರಸನಿಮಿಷಗಳ ಆನಂದವನ್ನೇ ಅನುಭವಿಸುವುದು ಆಗದು. ಅಂತಹದರಲ್ಲಿ ಆತ ಇನ್ನುಳಿದ ಜೀವಿಗಳ ಸುಖದುಃಖಗಳಿಗಾಗಿ ಹಿಗ್ಗಿ-ಕುಗ್ಗುವ ಗೋಜಿಗೆ ಹೋಗಲಾರ.

ಆದರೆ ಸಂಸಾರದ ಅನಂತ ಯಾತನೆಗಳಿಂದ ನೊಂದು ಬೆಂದು, ತಾಪ ಪರಿಪೂತವಾದ ರಸಜೀವಗಳಿಗೆ ವಿಶ್ವವೆಲ್ಲವೂ ತಮ್ಮದೇ ಒಂದು ಬಳಗವಾಗಿ ತೋರದಿರದು. ಅಂಥವರಿಗೆ ವಿಶ್ವಶಕ್ತಿಯ ಕೈತಾಲದೊಂದಿಗೆ ಕುಣಿಯುವ ಚಿಕ್ಕೆ-ಚಂದ್ರಮರಿಂದ ಹುಲ್ಲು-ಹಣಜಿಯವರಿಗೆ ಈ ಸೃಷ್ಟಿಯ ಅಣುರೇಣುಗಳಲ್ಲಿಯೂ ಮನುಷ್ಯ ಜೀವನದಷ್ಟೇ ಮಹತ್ತರವಾದ ಒಂದೊಂದು ಚರಿತ್ರಾಂಶವು ಕಂಡುಬರುವುದು.

ನನ್ನ ಮದುವೆ ಶಿರೂರಿನಲ್ಲಿ ನಡೆಯಿತು. ನಮ್ಮ ಬಳಗ ದೊಡ್ಡದು. ಅಂತೆಯೇ ನಮ್ಮನ್ನೆಲ್ಲ ಒಂದು ದೊಡ್ಡ ಮನೆಯಲ್ಲಿ ಇಳಿಸಿದ್ದರು. ಅದಕ್ಕೆ ಮನೆಯೆನ್ನುವುದಕ್ಕಿಂತ, ಒಂದು ವಠಾರ, ಇಲ್ಲವೆ ವಾಡೆ ಎಂದರೆ ಹೆಚ್ಚು ಒಪ್ಪೀತು. ಅದೇನು ಅಂಥಿಂಥ ಮನೆಯಲ್ಲ. ಈಗಿನ ಪಟ್ಟಣಿಗರ ಲೆಕ್ಕದಂತೆ ಹತ್ತುಹನ್ನೆರಡು ಸಂಸಾರಗಳು ಅಲ್ಲಿ ನೆಮ್ಮದಿಯಾಗಿ ಇರಬಹುದು. ಸಾಮಾನ್ಯವಾಗಿ ಆ ಮನೆಯಲ್ಲಿ ಒಬ್ಬಿಬ್ಬರೇಕೆ? – ಹತ್ತುಹನ್ನೆರಡು ಜನರು ಸಹ ಇರಬಹುದು. ಮೇಲುಪ್ಪರಿಗೆಗೆ ಹೋಗುವಾಗ ಜೋಡಿಲ್ಲದೆ ಯಾರೂ ಹೋಗುವವಂತಿರಲಿಲ್ಲ.

ಮನೆ ಬಹಳ ಹಳೆಯ ಕಾಲದ್ದು. ಹಳೆಯದಾಗಿ ಇಲ್ಲಣ ಹತ್ತಿ ಕಪ್ಪುಗಟ್ಟಿದ ತೊಲೆಜಂತೆಗಳು, ಒಬ್ಬೊಬ್ಬರ ತೆಕ್ಕೆಗೂ ಅಮರದಂಥ ಕಂಬಗಳು, ಮಾರು ಮಾರು ದಪ್ಪವಾದ ಗೋಡೆಗಳು, ಗುದ್ದು-ಮೊಳದಾಳದ ಗೂಡುಗಳು, ಜೇಡರ ಹುಳುಗಳ ಜಾಳಿಗೆಗಳಿಂದೊಪ್ಪುವ ಮೂಲೆಗಳು, ಮುಸುಕುಗತ್ತಲೆಯ ಕೋಣೆಗಳು, ಇವೆಲ್ಲ ಆ ಮನೆಗೆ ಒಂದು ಬಗೆಯ ಭೀಕರತೆಯನ್ನುಂಟು ಮಾಡಿದ್ದವು. ಅಲ್ಲದೆ, ಭವ್ಯವಾದ ಅಂಗಳ, ವಿಶಾಲವಾದ ಹಿತ್ತಲ, ಆ ಹಿತ್ತಲ ತುಂಬಾ ತರೆಗೆಲೆಗಳು ತಳಿಹಾಕುವ ಒಂದೆರಡು ಹುಣಿಸೆ ಬೇವಿನ ಮರಗಳು. ಹಿತ್ತಲ ಗೋಡೆಯಾಚೆಗಿನ ಅಗಳತ, ಅದಕ್ಕೆ ಹೊಂದಿ ಅರ್ಧ ಹಾಳಾಗಿ ನಿಂತ ಹೂಡೆ – ಇವುಗಳೆಲ್ಲ ಆ ಮನೆಯ ಭೀಷಣತೆಗೆ ರಂಗು ಹೊಯಿದಂತೆ ಇದ್ದುವು. ಇರುಳು ಮಲಗಿಕೊಂಡರೆ, ಜಂತೆಗಳಲ್ಲೋಡಾಡುವ ಇಲಿಗಳ ಕಿರಿಚಾಟದಿಂದಲೂ, ಅವುಗಳ ಓಡಾಟಕ್ಕೆ ಉದುರುವ ಮಾಳಿಗೆಯ ಮಣ್ಣಿನ ಸಪ್ಪಳದಿಂದಲೂ, ಮೂಲೆ ಮುಲೆಗಳಲ್ಲೆಲ್ಲ ಮನೆಮಾಡಿಕೊಂಡಿದ್ದ ಹಲ್ಲಿಗಳ ಲೊಚಲೊಚ ಶಬ್ದದಿಂದಲೂ, ಹಿತ್ತಲ ಗಿಡಗಳಲ್ಲಿ ನೆಲೆನಿಂತ ತೊಗಲು ಬಾವುಲಿಗಳ ಚೀರಾಟದಿಂದಲೂ, ಅಲ್ಲಿ ಇದ್ದಷ್ಟು ದಿನವೆಲ್ಲ ನಿದ್ದೆಗೇಡಾದ ನಮ್ಮೆದೆಗಳು ಬರೀ ಡವಡವಿಸುತ್ತಿರುವದೇ? ಇಂಥ ರೌದ್ರನಿವಾಸವು ನಮಗೆ ಮದುವೆಯ ಮನೆಯಾಗಿತ್ತು!

ನಾವು ಇಳುಕೊಂಡ ಆ ಮನೆಗೆ ಒಂದು ಮೇಲುಪ್ಪರಿಗೆ. ಅದರ ಮೊಗಸಾಲೆಯ ಮುಂಬದಿಗೆ ಒಂದು ಲೋವಿ. ಅದರ ಚೆಟ್ಟಿನ ಒಳಮಗ್ಗಲು ಒಂದು ಬಿರುಕಿನಲ್ಲಿ ಒಂದು ಗುಬ್ಬಿಯ ಜೋಡು ಮನೆಮಾಡಿಕೊಂಡಿದ್ದಿತು. ಆ ಗುಬ್ಬಿಗಳಿಗೆ ಅದೇ ಹೊಸದಾಗಿ ಹುಟ್ಟಿದ ಎರಡು ಮಕ್ಕಳು ಅವುಗಳಾಗಿ ಆ ಗುಬ್ಬಿಗಳೆರಡೂ ಮೆತ್ತನ್ನ ಹುಲ್ಲು ಕಡ್ಡಿಗಳಿಂದ ಸೊಗಸಾದ ಗೂಡನ್ನೊಂದು ಕಟ್ಟಿದ್ದವು.

ಆ ಮನೆಗೆ ಹೋದ ದಿನವೇ ಆ ಗುಬ್ಬಿಗಳ ಸಂಸಾರವು ನನ್ನ ಮನವನ್ನೆಳೆಯಿತು. ನನ್ನ ಬಾಳುವೆಯ ಗಾಳಿಗೋಪುರಕ್ಕೆ ಕಳಸವನ್ನಿಡುತ್ತಲಿದ್ದ ನನಗೆ ಆಗ ಎಲ್ಲ ಬಗೆಯ ಸಂಸಾರವೂ ಒಂದೊಂದು ಸೊಬಗಿನ ಬೀಡೆಂಬಂತೆ ಎನಿಸುತ್ತಿದ್ದಿತು. ಆ ಗುಬ್ಬಿಗಳ ಸಂಸಾರವೂ ನನ್ನ ಹರೆಯದ ಸವಿಗನಸುಗಳಿಗೆ ಬಣ್ಣ ಬರೆಯುವಂತೆ ತೋರಲು ನಾನು ಅವುಗಳ ಕಾರ್ಯಕಲಾಪಗಳನ್ನು ಕಣ್ಮನಗಳು ತಣಿಯುವಂತೆ ನೋಡಿ ನೋಡಿ ನಲಿಯುತ್ತಿದ್ದೆ. ಹಿರಿಯ ಗುಬ್ಬಿಗಳು ತಮ್ಮ ಮರಿಗಳನ್ನು ಲಲ್ಲೆಗೈಯುವುದು, ಅವಕ್ಕೆ ಗುಟುಕು ಕೊಡುವುದು. ಅವನ್ನು ಮುಂಡಾಡಿ ಸಂತೈಸುವುದು, ಅವುಗಳಿಗಾಗಿ ಹೊಸ ಹೊಸ ತಿನಿಸನ್ನು ತಂದುಕೊಡುವುದು ಮೊದಲಾದ್ದನ್ನೆಲ್ಲ ನೋಡುತ್ತಿದ್ದ ನನಗೆ, ಅವುಗಳ ಸಂಸಾರವು ಒಂದು ಮನುಷ್ಯ ಸಂಸಾರದಂತೆಯೇ ತೋರತೊಡಗಿತು.

ಹಿರಿಯ ಗುಬ್ಬಿಗಳೆರಡೂ ತಮ್ಮತಮ್ಮೊಳಗೆ ಚಿಲಿಪಿಲಿಗುಟ್ಟುತ್ತಿರುವಾಗ, ಗಂಡ ಹೆಂಡಿರಾದ ಮನುಷ್ಯರಿಬ್ಬರು, “ನಾನು ಕಛೇರಿಗೆ ಹೋಗಬೇಕು; ಬೇಗ ಅಡಿಗೆ ಮಾಡು.” “ಸರಿ, ಪೇಟೆಯಿಂದ ಕಾಯಿಪಲ್ಯವನ್ನೇ ತರದಿದ್ದರೆ ಅಡಿಗೆ ಏನು ಮಾಡಲಿ, ನನ್ನ ತಲೆ”. “ಆಗಲಿ; ಹಾಗಾದರೆ ಪೇಟೆಯಿಂದ ಬರುವಾಗ ಮಗುವಿಗೆ ಏನು ತರಲಿ.” “ಹೌದು, ನನ್ನ ಕೂಸಿಗೆ ಮೊನ್ನೆ ನೋಡಿದ್ದ ಚೇನು ತೆಗೆದುಕೊಂಡು ಬರ‍್ರಿ”… ಎಂದು ಮುಂತಾಗಿ ಮುದ್ದು ಮಾತಾಡುತ್ತಿರುವಂತೆ ನನಗೆ ಎನಿಸುತ್ತಿತ್ತು. ನೋಡುತ್ತ ನಿಂತಿರುವಂತೆ, ಅದಾವುದೋ ಒಂದು ತನ್ಮಯತೆಯ ನನ್ನ ತನುವಿನಲ್ಲಿಳಿಯಲು, ನಾನೆ ಆ ಗಂಡು ಗುಬ್ಬಿಯಂತೆಯೂ  ನನ್ನ ಕನಸುಗಳ ರಾಣಿಯಾಗಿ ಬೆಳಗಾದರೆ ನನ್ನ ಕೈಹಿಡಿಯಲಿರುವವಳೇ ಆ ಹೆಣ್ಣು ಗುಬ್ಬಿಯಂತೆಯೂ, ನಮ್ಮಿಬ್ಬರ ಭಾಗ್ಯದ ಬೆಳಕಿನಂತೆ ಮುಂದೆ ಹುಟ್ಟಿ ಬರಲಿರುವ ನಮ್ಮ ಮಕ್ಕಳೇ ಆ ಚಿಕ್ಕ ಗುಬ್ಬಿಮರಿಗಳಂತೆಯೂ ಭಾವನೆಯಾಗಲು, ನನ್ನ ಹೃದಯವು ತನ್ನಲ್ಲಿ ತಾನೇ ನಲಿದಾಡುವುದು.

ನಾವು ಶಿರೂರಿಗೆ ಹೋದ ಮರುದಿನ ನಾನು, ಅಪ್ಪಣ್ಣ, ಅನಂತ, ನಮ್ಮ ಅಬಚಿಯ ಗಂಡ ಶೇಷಪ್ಪ, ನನ್ನ ಕಕ್ಕನ ಮಗ ಲಕ್ಷ್ಮಣ, ನನ್ನ ಹಿರಿಯ ಭಾವ ವೆಂಕಟರಾಯ ಇಷ್ಟು ಜನವೆಲ್ಲ ಸೇರಿ ಮೇಲಟ್ಟದ ಮೊಗಸಾಲೆಯಲ್ಲಿ ಮಲಗಿಕೊಂಡಿದ್ದೆವು. ವಾಡಿಕೆಯಂತೆ ಇಲ್ಲಿ, ಹಲ್ಲಿ, ತೊಗಲಬಾವುಲಿಗಳ ತೊಂದರೆಯೆಲ್ಲವೂ ಸಾಗಿಯೇ ಇತ್ತು. ಆದರೂ ಹತ್ತು ತರದ ಗಡಿಬಿಡಿಯಿಂದ ದಣಿದ ಕಾರಣ ಎಲ್ಲರಿಗೂ ಗಾಢನಿದ್ರೆ. ಜಿದ್ದು ಕಟ್ಟಿದಂತೆ ಒಬ್ಬರಿಗಿಂತ ಒಬ್ಬರು ಹೆಚ್ಚಾಗಿ ಗೊರಕೆ ಹೊಡೆಯುವವರೇ. ಆದರೆ ನನ್ನ ಸಂಸಾರ ಸ್ವರ್ಗದ ಶಚೀದೇವಿಯಾಗಬೇಕಾದವಳ ಚಿಂತನೆಯಲ್ಲಿ ತೊಡಗಿದ ನನಗೆ ಮಾತ್ರ ಉಳಿದವರಷ್ಟು ಬೇಗ ನಿದ್ದೆ ಬಾರದಿದ್ದುದು ಸ್ವಾಭಾವಿಕವೇ ಸರಿ. ಆದರೂ ಸರಿರಾತ್ರಿಗೆ ಹಾಯಾಗಿ ತನ್ನಷ್ಟೇ ತಾನೇ ನಿದ್ದೆ ಹತ್ತಿಬಿಟ್ಟಿತು. ನಡುವೆ ಅಕಸ್ಮಾತ್ತಾಗಿ ಎಚ್ಚರಿಯುವ ಹೊತ್ತಿಗೆ ನನ್ನ ಹಗಲುಗನಸುಗಳ ಅಧಿಷ್ಠಾರತೃದೇವಿಯಾದ ನನ್ನ ಭಾವೀ ರಾಜ್ಞಿಯು ನನ್ನ ನಿದ್ದೆ ಗನಸುಗಳನ್ನು ಸವಿಗೊಳಿಸುತ್ತಿದ್ದಳು. ಆಗ ಈ ಲೋಕದ ಬಂಧನವನ್ನೆಲ್ಲ ಮೀರಿ ನಿಂತ ಅಮರನಂತೆ ನಾನು ಅದಾವುದೋ ಒಂದು ಆನಂದಕೇತನದಲ್ಲಿ ವಿಹರಿಸುತ್ತಿದ್ದೆ; ಅಂತೆ ತಿರುಗಿ ಬೇಗ ನಿದ್ದೆ ಹತ್ತದಾಗಿತ್ತು.

ಚಾವಡಿಯಲ್ಲಿ ಎರಡು ಹೊಡೆಯಿತು. ಲೋವಿಯ ಚಪ್ಪರದಲ್ಲಿ ಆರ್ತ ಚೀತ್ಕಾರವೊಂದು ಕೇಳಿಬಂತು, ಕನಸಿನಲ್ಲಿ ಹೆದರಿಸಿಕೊಂಡವರಂತೆ ಎಚ್ಚತ್ತು ಗಡಬಡಿಸುವಾಗ ನನಗೆ ಎಲ್ಲವೂ ಒಂದು ಕಲಸುಮಲಸಿನ ಹಳವಂಡದಂತೆ ತೋರಿತು. ನಿಚ್ಚಳವಾಗಿ ಎಚ್ಚರಿಯುವ ಹೊತ್ತಿಗೆ ಆ ಆರ್ತಸ್ವರವೂ ಕರುಳೊಡೆಯುವಂತೆ ಡಬಡಬಯೆನ್ನುತ್ತಿದ್ದ ನನ್ನ ಎದೆಯನ್ನು ಇನ್ನೂ ಹೆಚ್ಚಾಗಿ ತಟ್ಟ ಹತ್ತಿತು. ಚಟ್ಟನೆದ್ದು ಕುಳಿತು ತಲೆದಿಂಬುದೆಸೆಯ ದೀಪವನ್ನು ದೊಡ್ಡದು ಮಾಡಿ ನೋಡಿದೆ. ಆ ಚೀತ್ಕಾರವು ಆ ಗುಬ್ಬಿಗಳ ಗೂಡಿನಿಂದ ಬರುತ್ತಿದ್ದಿತು. ಆಗ ನನ್ನ ನಾಡಿಗಳಲ್ಲೆಲ್ಲ ಒಂದು ತೆರದ ಗಾಬರಿಯ ತುಂಬಿಹರಿಯುತ್ತಿರುವಂತೆ ತೋರಿತು. ಅಂತಹದರಲ್ಲಿಯೇ, ನಡುಗುವ ಕೈಗಳಿಂದ ದೀಪವನ್ನು ಎತ್ತಿ ಹಿಡಿದು ನೋಡಿದೆ; ಕಾಲಕರಾಲವಾದ ಘಟಸರ್ಪವೊಂದು, ಅಖಂಡವಾಗಿ ಕಿರುಚುತ್ತಿರುವ ಗಂಡು ಗುಬ್ಬಿಯನ್ನು ಬಾಯಲ್ಲಿ ಕಚ್ಚಿಕೊಂಡು ಲೋವಿಯ ದುಂಡು ಕಟ್ಟಿನ ಗುಂಟ ಮೆಲ್ಲನೆ ಹಿಂದಕ್ಕೆ ಸರಿದು ಹೋಗುತ್ತಲಿತ್ತು. ಹಾವು ಅಂಥಿಂಥದಲ್ಲ; ನಾಗರಹಾವು. ಒಂದು ಒಂದೂವರೆ ಮಾರು ಉದ್ದವಾಗಿತ್ತು. ಒನಕೆಯಂತೆ ದಪ್ಪವಾಗಿ ಕರ‍್ರೆಗೆ ಮಿರಿಮಿರಿ ಮಿಂಚುತ್ತಿತ್ತು. ಮೈಮೇಲೆ ಬೆರಳುದ್ದದ ಬಿರುಸಾದ ನಿಡುಗೂದಲು. ಬೊಗಸೆಯಗಲದ ಹೆಡೆ. ದೀಪದ ಬೆಳಕಿಗೆ ಥಳಥಳ ಹೊಳೆಯುವ ಕಣ್ಣಿನ ವಕ್ರವಾದ ಉಗ್ರ ದೃಷ್ಟಿಯು ನನ್ನ ಕೈಕಾಲುಗಳನ್ನು ಇದ್ದಲ್ಲಿಯೇ ತಣ್ಣಗೆ ಮಾಡಿತು. ನಡುಗುವ ಕೈಯಿಂದ ದೀಪವು ಒಮ್ಮಿಂದೊಮ್ಮೆ ಜಾರಿಬಿದ್ದು ಆರಿಹೋಯಿತು; ಆದರೂ ಇದ್ದುದರಲ್ಲಿಯೇ ಸಾವರಿಸಿ ಕೊಂಡು ನಾನು ಬದಿಯಲ್ಲಿ ಮಲಗಿದವರನ್ನೆಲ್ಲ ಬಡಿದೆಬ್ಬಿಸಿದೆ.

ಗಂಡುಗುಬ್ಬಿಯನ್ನು ಹಾವು ಕಚ್ಚಿಕೊಂಡು ಹೋದದ್ದರಿಂದ, ಹೆಣ್ಣುಗುಬ್ಬಿಯ ಸಂತಾಪಕ್ಕೆ ಸೀಮೆಯಿಲ್ಲದಾಗಿತ್ತು. ಅದು ತೆರಪಿಲ್ಲದೆ ಹಾಹಾಕಾರ ಮಾಡುತ್ತ ದಿಕ್ಕು ದಿಕ್ಕು ಹಾಯುತ್ತಿತ್ತು. ಹಾವಿನ ಬಾಯಲ್ಲಿ ಜೀವನದ ಜೊತೆಗಾರ ಕಿರಿಚುತ್ತಿದ್ದಾನೆ. ಗೂಡಿನಲ್ಲಿ ತನ್ನಕ್ಕರೆಯ ಚಿಕ್ಕಮಕ್ಕಳೆರಡು ಚಿಲಿಪಿಲಿಗುಟ್ಟುತ್ತಿವೆ. ಮೇಲೆ ತನ್ನ ಪ್ರಾಣಸಂಕಟವೊಂದು. ಹೀಗೆ ಕಂಗೆಟ್ಟು ಕತ್ತಲಲ್ಲಿ ಅತ್ತಿತ್ತ ಸುತ್ತಾಡುವಾಗ ಆ ಹೆಣ್ಣು ಗುಬ್ಬಿಯ ಎಷ್ಟೋ ಸಲ ಹೌಹಾರಿ ಕುಳಿತ ನಮ್ಮ ಮೈ-ಕೈಗೆ ತಾಕಿ ತಡವರಿಸುತ್ತಿತ್ತು. ಆ ಗಲಭೆಯನ್ನು ನೋಡಿ ನಮ್ಮೆಲ್ಲರಿಗೂ ಗಾಬರಿ ಇಮ್ಮಡಿಸಿಬಿಟ್ಟಿತು. ಆಗೀಗೊಮ್ಮೆ ಬೆಂಕಿಯ ಕಡ್ಡಿಗಳನ್ನ ಕೊರೆದು ಬೆಳಕು ಮಾಡಿಕೊಳ್ಳುತ್ತ ನಾವೆಲ್ಲರೂ ನಮ್ಮ ಜೀವರಕ್ಷಣೆಯ ಹವಣಿಕೆಯಲ್ಲಿದ್ದೆವು.

ಇಷ್ಟರಲ್ಲಿ ಮೇಲಿನವರ ಗದ್ದಲವನ್ನು ಕೇಳಿ ಕೆಳಗಿನವರು ದೀಪ ಹಚ್ಚಿಕೊಂಡು ಮೇಲೆ ಬರುವುದರಲ್ಲಿದ್ದರು. ಆದರೆ ಅದಕ್ಕೂ ಮೊದಲೇ ನಮ್ಮ ಕಾಮಿ (ಬೆಕ್ಕು) ಯಾವ ಮಾಯದಿಂದಲೋ ಅಲ್ಲಿಗೆ ಬಂದು ದಿಕ್ಕೆಟ್ಟು ಆಲ್ಪರಿಯುತ್ತ ಮೊಗಸಾಲೆಯ ತುಂಬೆಲ್ಲ ಸುತ್ತಾಡುತ್ತಿದ್ದ ಹೆಣ್ಣು ಗುಬ್ಬಿಯನ್ನು ಹಾರಿ ಹಿಡಿದುಬಿಟ್ಟಿತು. ಕೆಳಗಿನವರು ದೀಪ ತೆಗೆದುಕೊಂಡು ಮೇಲೆ ಬರುವುದಕ್ಕೂ, ಹೆಣ್ಣುಗುಬ್ಬಿಯನ್ನು ಬಾಯಲ್ಲಿ ಕಚ್ಚಿಕೊಂಡು ಕಾಮಿ ಕೆಳಗೋಡುವುದಕ್ಕೂ ಗಂಟೇ ಬಿತ್ತು. ಎಲ್ಲರೂ ಸೇರಿ ಕಾಮಿಯನ್ನು ಹಿಡಿದು, ಬಡಿದು ಗುಬ್ಬಿಯನ್ನು ಬಿಡಿಸಿಕೊಳ್ಳುವ ಹೊತ್ತಿಗೆ ಅದು ಗುಬ್ಬಿಯನ್ನು ಅರ್ಧಕ್ಕರ್ಧ ತಿಂದೇಬಿಟ್ಟಿತು. ಇತ್ತ ನಾವೆಲ್ಲ ನೋಡುತ್ತಿರುವಂತೆಯೇ, ಗಂಡುಗುಬ್ಬಿಯನ್ನು ಹಿಡಿದುಕೊಂಡು ಹೊರಟ ಹಾವು. ಗುಬ್ಬಿಯ ಗೂಡಿನಿಂದ ಹತ್ತೆಂಟು ಮೊಳ ದೂರದಲ್ಲಿದ್ದ ಗುದ್ದಿನಲ್ಲಿ ಹೊಕ್ಕು ಬಿಟ್ಟಿತು. ಹಾವು ಗುದ್ದಿನ ಒಳವೊಳಗೆ ಸೇರಿ ಹೋದಂತೆ, ಅದರ ಬಾಯಲ್ಲಿದ್ದ ಗುಬ್ಬಿಯ ಕರುಣಾಸ್ವರವು ಮಂದಮಂದವಾಗಿ ಕುಂದುತ್ತ ಕೊನೆಗೊಮ್ಮೆ ನಿಂತುಹೋಯಿತು.

ಇತ್ತ ಆ ಗುಬ್ಬಿಗಳ ಚಿಕ್ಕಮಕ್ಕಳೆರಡೂ ಹುಟ್ಟುಹುಟ್ಟುತ್ತಲೇ ಅನಾಥವಾಗಿ, ತಮ್ಮ ಪ್ರೇಮಕ್ಕೆ ಊರುಗೋಲೇ ಇಲ್ಲದಾಗಲು, ಅದೆಷ್ಟೋ ಹೊತ್ತು ಹಲುಬಿ, ಅತ್ತತ್ತು ದಣಿದು, ಸುಮ್ಮನೆ ಬಿದ್ದುಕೊಂಡೆವು.

ನಮಗೆಲ್ಲ ನಮ್ಮ ನಮ್ಮ ಜೀವದ ಭಯ, ಆಗ ಆ ಮರಿಗಳನ್ನಾರು ಕೇಳಬೇಕು! ಬಿಟ್ಟ ಕೆಲಸವನ್ನೆಲ್ಲ ಬಿಟ್ಟು ಅಪ್ಪಣ್ಣನೂ, ವೆಂಕಟರಾಯನೂ ಹೋಗಿ, ಆ ಅಪರಾತ್ರಿಯಲ್ಲಿ ಒಬ್ಬ ಮಾಂತ್ರಿಕನನ್ನು ಹುಡುಕಿಕೊಂಡು ಬಂದರು. ಮಾಂತ್ರಿಕನು ಮನೆತನಕ ಬಂದಮೇಲೆ ಅದು ದೇವರ ಹಾವೆಂದೂ, ಅದನ್ನು ತಾನು ಹಿಡಿಯಲಾಗದೆಂದೂ, ಅದು ಇನ್ನೊಮ್ಮೆ ಯಾರ ಕಣ್ಣಿಗೂ ಬೀಳದಂತೆ ತಾನು ಮಂತ್ರ ಬಂಧನವನ್ನು ಮಾಡಬಲ್ಲೆನೆಂದೂ ಹೇಳಿ, ಏನೇನೋ ಒಟಗುಟ್ಟುತ್ತ, ಅತ್ತಿತ್ತ ನಾಲ್ಕೆಂಟು ಗೆರೆ ಹಾಕಿದಂತೆ ಮಾಡಿ, ನಮ್ಮ ನಾಲ್ಕೈದು ಹಿಡಿ ಅಕ್ಕಿಯ ಕಾಳು ಹಾಳುಮಾಡಿ, ಮೇಲೆ ಒಂದು ರೂಪಾಯಿ ಕಿತ್ತುಕೊಂಡು ಹೊರಟು ಹೋದನು. ಆದರೆ ನಮ್ಮದು ಮನುಷ್ಯಜೀವ! ಸುಮ್ಮನೆ ಹೇಗೆ ಕುಳಿತಿತು? ನಮ್ಮ ಹೆದರಿಕೆ ನಮಗೆ, ಆ ಮಾಂತ್ರಿಕನು ಬಂದು ಹೋದಮೇಲೆಯೂ ನಮಗೆ ಜೀವನದಲ್ಲಿ ಜೀವವಿಲ್ಲ. ಆಗಿನಿಂದಲೇ ಎರಡು ಮೂರು ಕಂದೀಲು ಹಚ್ಚಿಕೊಂಡು, ಎಲ್ಲರೂ ಇಸ್ಪೇಟು ಆಡುತ್ತ ಬೆಳಗಿನ ತವಕ ಕುಳಿತುಬಿಟ್ಟೆವು.

ನಸುಕು ಹರಿಯುವ ಸಮಯ ತನ್ನ ತಾಯಿ ಬಂದು “ಸುರಗಿ ಎರಕೊಳ್ಳಲು ತಡವಾಯಿತು. ಈಗ ಬೀಗರು ಬಂದು ಬಿಡುತ್ತಾರೆ; ಎಲ್ಲದಕ್ಕೂ ನಾನೇ ಬಡಕೊಳ್ಳಬೇಕು; ಒಬ್ಬರೂ ಕಿವಿಯ ಮೇಲೆ ಹಾಕಿಕೊಳ್ಳುವುದಿಲ್ಲ. ಹೀಗಾದರೆ ನಾನೇ ಎಷ್ಟೆಂತ ಸಾಯಲಿ” ಎಂದು ಮೊದಲಾಗಿ ಎಲ್ಲರ ಮೇಲೆಯೂ ಹರಿ ಹಾಯ್ದುಹೋದರು. ಅಕ್ಕ ಬಂದು ‘ಆರತಿಗೆ ತಡವಾಗುವುದು ಬೇಗನೇಳು’ ಎಂದು ಒಲುಮೆ ಮಾಡದಳು. ಆದರೆ ಹೊತ್ತು ಹರೆಯುತ್ತ ಬಂದಂತೆ ಇಸ್ಪೇಟಿನಲ್ಲಿ ಹೆಚ್ಚು ಹೆಚ್ಚು ತಲ್ಲೀನರಾಗುತ್ತಲಿದ್ದ ನಾವು. ಅವರಿಬ್ಬರನ್ನೂ ಹೂ ಹೂ ಎಂದು ಹಿಂದಕ್ಕಟ್ಟಿ ಬಿಟ್ಟೆವು. ನನಗಂತೂ ಅಂದಿನ ಆಟದಲ್ಲಿ ಇಲ್ಲದ ಹುರುಪು. ಏಕೆಂದರೆ ನಾನೇ ಮುಂದಾಳಾಗಿ ಅಪ್ಪಣ್ಣನ ಪಾರ್ಟಿಯ ಮೇಲೆ ನಾಲ್ವತ್ತೆರಡು ಹೊರಿಸಿಬಿಟ್ಟಿದ್ದೆ.

ಹೀಗೆ ನಾವೆಲ್ಲರೂ ನಮ್ಮಾಟದ ರಂಗಿನಲ್ಲಿಯೇ ಗುಂಗಾಗಿ ಕುಳಿತಾಗ ಗುಬ್ಬಿಯ ಗೂಡಿನಿಂದ ಮತ್ತೆ ಚೀತ್ಕಾರ! ಎಲ್ಲರೂ ತಟ್ಟನೆ ಮೆಟ್ಟಿಬಿದ್ದೆವು. ಮತ್ತೆ ಅದೇ ಹಾವು! ಅದೇ ಭಯಾನಕ ದೃಶ್ಯ! ಹಾವು ಮೆಲ್ಲನೆ ಲೋವಿಯ ಗುಂಟ ಹರಿದುಬಂದು ಆ ಗುಬ್ಬಿಯ ಗೂಡಿನಲ್ಲಿ ಹೆಡೆಯನ್ನು ಸೇರಿಸಿ, ಮರಿಗಳನ್ನು ಹಿಡಿದುಕೊಳ್ಳುವುದರಲ್ಲಿತ್ತು. ಅದನ್ನು ಕಂಡು ಎಲ್ಲರ ಆಟವು ಮುಗಿದೇಹೋಯಿತು. ಎಲ್ಲರಿಗೂ ದಿಗ್ಭ್ರಮೆ. ನೀ ಹೊಡಿ, ನಾ ಹೊಡಿ ಎನ್ನವುದರೊಳಗೆ ಹಾವು ಒಂದು ಮರಿಯನ್ನು ಹಿಡಿದುಕೊಂಡು ಮತ್ತೆ ತನ್ನ ಹೋರನ್ನು ಸೇರಿಕೊಂಡಿತು. ಎಲ್ಲರೂ ಬರೀ ಮಾತನಾಡಿದೆವೇ ಹೊರ್ತು ಎದ್ದುಹೋಗಿ ಹಾವನ್ನು ಹೊಡೆಯುವಷ್ಟು ನೀರು ಒಬ್ಬನಲ್ಲಿಯೂ ಇರಲಿಲ್ಲ. ಕೊನೆಗೆ ‘ಮಾಂತ್ರಿಕ ದೇವರ ಹಾವೆಂದು ಹೇಳಲಿಲ್ಲವೇ; ಅದನ್ನು ಹೇಗೆ ಹೊಡೆಯುವುದು?” ಎಂದು ಒಬ್ಬರಿಗೊಬ್ಬರು ಸಮಾಧಾನ ಹೇಳಿಕೊಂಡು ಸುಮ್ಮನಾದೆವು.

ಹಾವು ಗೂಡಿನೊಳಗಿಂದ ಒಂದು ಮರಿಯನ್ನು ಹಿಡಿಯುವಾಗ, ಇನ್ನೊಂದು ಮರಿಯೂ ಗೂಡಿನಿಂದ ಜಾರಿ ಹೊರಗೆ ಬಿದ್ದು ಪ್ರಾಣಸಂಕಟದಿಂದ ಒಡೆದಾಟ ಹತ್ತಿತ್ತು. ಮೂರು ಜೀವಿಗಳ ಸಾವನ್ನು ಕಂಡು ಬೇವಸಗೊಂಡ ನನ್ನ ಕರುಳು ಆ ಮರಿಯ ತೊಳಲಾಟದಿಂದ ಮತ್ತೂ ಕಳವಳಿಸಿತು. ಒಂದು ಬಾಳೆಯ ದೊನ್ನೆಯಲ್ಲಿ ಆ ಮರಿಯನ್ನು ಮೆಲ್ಲನೆ ಎತ್ತಿ ಸ್ವಲ್ಪ ಹಾಲನ್ನು ಇಟ್ಟೆವು. ಪಾಪ! ತನ್ನ ಕರುಳು ಬಳ್ಳಿಯೇ ಕತ್ತರಿಸಿ ಹೋಗಿರಲು, ಕಮರುವ ಹೀಚಿನಂತಿದ್ದ ಆ ಮರಿಗೆ ನಮ್ಮ ಆರೈಕೆಯು ವಿಷವಾಯಿತೋ ಅಮೃತವಾಯಿತೊ – ಯಾರು ಹೇಳಬೇಕು?

ಅಷ್ಟೊತ್ತಿಗೆ ತಾಯಿ ಅಕ್ಕ ಮತ್ತೊಮ್ಮೆ ಬಂದು ಬಲವಂತದಿಂದ ಎಬ್ಬಿಸಿಕೊಂಡು ಹೋದರು. ಮುಂದೆ ಸುರಗಿ-ಪುಣ್ಯಾವಾಚನ-ಆರತಿ-ಅಕ್ಷತೆಗಳೆಲ್ಲ ಯಥಾಕ್ರಮವಾಗಿ ಸಾಂಗವಾದವು. ಮದುವೆಯ ಪ್ರಮೋದವು ಮೈತುಂಬಿದಂತಿದ್ದ ನಾವೆಲ್ಲರು ನಮ್ಮ ನಮ್ಮ ಸಂತೋಷದಲ್ಲಿ ಈಸುತ್ತಿದ್ದೆವು. ಆದರೆ ಸರಿಯಾಗಿ ಅಕ್ಕಿಯ ಕಾಳು ಬೀಳುವ ಹೊತ್ತಿಗೆ ಬಂತು ಸುದ್ದಿ – ಅದೂ ಒಂದು ಮರಿಯು ಹಾಲಿನ ದೊನ್ನೆಯಲ್ಲಿಯೇ ಪ್ರಾಣನೀಗಿತೆಂದು.

ಅಂತೂ, ಹೀಗೆ ಹನ್ನೆರಡು ತಾಸಿನ ಅವಧಿಯಲ್ಲಿ ಆ ಗುಬ್ಬಿಯ ಸಂಸಾರದ ಮೂಲೋತ್ಪಾಟನವಾಗಿ ಬಿಟ್ಟಿತೆಂದು ಹೇಳಿದರೆ, ಇದೂ ಒಂದು ಕಟ್ಟಿದ ಕತೆಯಂತೆ ತೋರುವುದು, ಆದರೂ ಆ ಸಂಗತಿಯಲ್ಲಿ ನನ್ನ ಮದುವೆಯ ಕಾಲದಲ್ಲಿ ನಡೆದ ಪ್ರತಿಯೊಂದು ಸಂಗತಿಯಂತೆ ನಿತ್ಯ ಸತ್ಯವಾದ ಮಾತಾಗಿತ್ತು.

***

ಹೊಸ ಸಂಸಾರ ಹೊಸ್ತಿಲಲ್ಲಿ ಕಾಲಿಡುತ್ತಿದ್ದ ನನ್ನ ಮನೆಯಲ್ಲಿ ಅಂದು ಮದುವೆಯ ಮಾಂಗಲ್ಯ ನಡೆದಾಗ ಆ ಗುಬ್ಬಿಗಳ ಸಂಸಾರದಲ್ಲಿ ಅಂತಕನ ಕೋಲಾಹಲವು ನಡೆದು ಹೋಯಿತು.

ಈದೀಗ ನನಗೆ ಚಿನ್ನ ರನ್ನದಂತಹ ಎರಡು ಮಕ್ಕಳಿವೆ. ನಮ್ಮಿಬ್ಬರಿಗೂ ಆ ಮಕ್ಕಳೆಂದರೆ ಹೆಚ್ಚಿನ ವ್ಯಾಮೋಹ. ಅವುಗಳಿಂದಲೇ ನಮ್ಮ ಸಂಸಾರದಲ್ಲೆಲ್ಲಿಯೂ ಸುಖ ಸಂತೋಷಗಳು ಓಲಾಡುತ್ತಿವೆ. ನಮ್ಮ ಬಾಳ್ವೆಗೆ ಇಂಥದು ಕಡಿಮೆ ಎಂಬ ಮಾತೇ ಇಲ್ಲ. ದುಃಖವೆಂದರೆ ಏನೋ? – ಎಂಬಂತೆ ನಾವಿದ್ದೇವೆ. ಈ ಜಗತ್ತಿನಲ್ಲಿ ನಮ್ಮಂಥ ಸಂಸಾರ ಸುಖಿಗಳು ಇನ್ನಾರೂ ಇರಲಾರರೆಂದೇ ನನ್ನ ಭಾವನೆಯಾಗುತ್ತಲಿದೆ.

ನಾವು ಗಂಡ-ಹೆಂಡತಿ, ಮಕ್ಕಳೊಂದಿಗೆ ಒಟ್ಟಿಗೆ ಕೂಡಿ ಕುಳಿತೆವೆಂದರೆ ನನ್ನ ಹರೆಯದ ಕನಸು ಕೈಯಲ್ಲಿಳಿದು ಕುಣಿಯುವಂತೆ ಭಾಸವಾಗುವುದು… ಆದರೆ ಹೀಗಿರುವಾಗಲೇ ಎಂದಾದರೊಮ್ಮೆಮ್ಮೆ ಆ ಗುಬ್ಬಿಗಳ ಸಂಸಾರದ ನೆನಪು ಒಮ್ಮಿಂದೊಮ್ಮೆ ನನ್ನ ತಲೆಯಲ್ಲಿ ತೋರಿಬಿಡುವುದು. ಆಗ ಹಿಂದಿನಂತೆಯೆ ಈಗಲೂ ಆ ಗುಬ್ಬಿಗಳ ಸಂಸಾರದೊಂದಿಗೆ ಒಂದು ಬಗೆಯ ತನ್ಮಯತೆಯು ಎನ್ನಿಸುವುದು. ಆದರೆ ಅಂದಿನ ಸೊಗಸಿನ ಬದಲು, ಇಂದು ನನ್ನೆದೆಯು ಒಂದು ಬಗೆಯ ವೇದನೆಯಿಂದ ಗದಗದ ನಡುಗುವದು… ಮನುಷ್ಯನ ಬುದ್ಧಿ ಭಾವನೆಗಳನ್ನು ಲೆಕ್ಕಿಸದೆ, ಆತನ ಕಲ್ಪನೆಯ ಕಣ್ಮರೆಯಾಗಿ, ಎಲ್ಲಿಯೋ ಯಾವುದೋ ಒಂದು ಹೋರಿನಲ್ಲಿ ಹೊಂಚಿ ಕುಳಿತ ಸಾವೆಂಬ ಹಾವು ಎಲ್ಲಿ ನನ್ನ ಸಂಸಾರವನ್ನು ಸೂರೆಗೊಂಡೀತೋ ಎಂದು ನನಗೆ ಇಲ್ಲದ ಭಯವುಂಟಾಗಿ ದಿಗ್ಭ್ರಮೇಯಾದಂತೆನಿಸುವುದು. ಹೀಗೆ ಬೇಡಬೇಡವೆಂದರೂ ಒಲುಮೆಯಿಂದ ಆ ಹಿಂದಿನ ನೆನಪು ನನ್ನ ಮನದಲ್ಲಿ ಮೂಡಿಕೊಂಡಾಗೆಲ್ಲ ನನ್ನ ಕಣ್ಮನಗಳೂ ಬುದ್ಧಿಭಾವನೆಗಳೂ ಕುರುಡಾದಂತೆನಿಸಿ ನಾನು ಯಾವುದೋ ಒಂದು ಲೋಕಾಂತರದಲ್ಲಿ ಹವಣು ತಪ್ಪಿ ಅಲೆಯುತ್ತಿರುವಂತೆ ಭಾಸವಾಗುವುದು.

ಲೇಖಕರು

ಧಾರವಾಡದಲ್ಲಿ ಹುಟ್ಟಿದ್ದ ಕೃಷ್ಣಕುಮಾರ ಕಲ್ಲೂರರು (೧೯೦೯-೧೯೮೨) ಅರ್ಥಶಾಸ್ತ್ರದಲ್ಲಿ ಎಂ.ಎ ಪದವೀಧರರು. ಅವರ ಆಸಕ್ತಿ ಸಾಹಿತ್ಯ ರಚನೆಯನ್ನು ಬೆಳೆಯಿತು. ರಾಯರ ಮದುವೆ, ಮಿಂಚಿನ ಹುಡಿ, ನೆರಳು ಬಿಸಿಲು ಎಂಬ ನಾಟಕಗಳನ್ನು, ಜೀವನ ಎಂಬ ಕಥಾಸಂಕಲನವನ್ನು ಪ್ರಕಟಿಸುದರು. ಕನ್ನಡ ನಾಡಿನ ಸಂಚಾರ-ಸಂಪರ್ಕ ಎಂಬ ಪುಸ್ತಕವನ್ನು ಬರೆದಿರುವರು.

ಆಶಯ

ಈ ಕಥೆಯನ್ನು ಜೀವನ ಎಂಬ ಕಥಾಸಂಕಲನದಿಂದ ಆಯ್ದುಕೊಳ್ಳಲಾಗಿದೆ. ಸಂಸಾರದಲ್ಲಿ ಆರಂಭಿಸುವ ಸಂಭ್ರಮದ ಸಮಯದಲ್ಲಿ ವ್ಯಕ್ತಿಯೊಬ್ಬ ತನ್ನ ಕಣ್ಣೆದುರಿಗೆ ಸುಖಸಂಸಾರ ನಡೆಸುತ್ತಿದ್ದ ಗುಬ್ಬಿ ಸಂಸಾರವು ಛಿದ್ರವಾಗುವುದನ್ನು ಕಂಡು ಭಯಭೀತನಾಗುತ್ತಾನೆ. ಅದು ವ್ಯಕ್ತಿಯ ಮೇಲೆ ಯಾವ ರೀತಿಯಲ್ಲಿ ಪರಿಣಾಮ ಬೀರಿದೆಯೆಂದರೆ ಸಾವು ಎನ್ನುವುದು ಮನುಷ್ಯ ಬದುಕಿನ ಮೇಲೆ ಯಾವ ಕ್ಷಣದಲ್ಲಾದರೂ ಎರಗಬಹುದೆಂಬ ಆತಂಕ ಈ ಕಥೆಯಲ್ಲಿ ವ್ಯಕ್ತವಾಗಿದೆ.

ಶಬ್ದಕೋಶ

ಪಡಿನೆರಳು=ಪ್ರತಿಬಿಂಬ. ಮೇಲುಪ್ಪರಿಗೆ=ಮನೆಯ ಮೇಲಿನ ಮನೆ. ಇಲ್ಲಣ=ಜಂತೆಗೆ ಮೆತ್ತಿಕೊಂಡಿರುವ ಕಪ್ಪುಬಣ್ಣದ ಧೂಳು. ಭೀಷಣ-ಭೀಕರ. ಆರ್ತಸ್ವರ=ಕರುಣಾಜನಕದನಿ. ಮೂಲೋತ್ಪಾಟನ=ಬೇರು ಸಹಿತ ಕಿತ್ತು ಹಾಕುವುದು. ವ್ಯಾಮೋಹ=ಅತಿಯಾದ ಪ್ರೀತಿ. ಇಮ್ಮಡಿಸು=ಹೆಚ್ಚಾಗು, ಎರಡರಷ್ಟು ಹೆಚ್ಚಾಗು.

ಪ್ರಶ್ನೆಗಳು

೧.      ತನ್ನ ಮದುವೆಗಾಗಿ ಹೋಗಿದ್ದ ನಿರೂಪಕನ ಬಳಗವು ಉಳಿದುಕೊಂಡಿದ್ದ ಮನೆಯ ಸ್ವರೂಪವನ್ನು ವರ್ಣಿಸಿರಿ.

೨.      ಗುಬ್ಬಿಗಳ ಸಂಸಾರವನ್ನು ಕಂಡ ನಿರೂಪಕನು ಭಾವಿಸಿಕೊಂಡಿದ್ದೇನು? ವಿವರಿಸಿರಿ.

೩.      ನಿರೂಪಕ ಮಲಗಿದ್ದಾಗ ಯಾವ ಆರ್ತ ಚೀತ್ಕಾರ ಕೇಳಿ ಎಚ್ಚೆತ್ತನು? ಅದರ ಪರಿಣಾಮವನ್ನು ವಿವರಿಸಿರಿ.

೪.      ಗುಬ್ಬಿಯ ಸಂಸಾರದಲ್ಲಿ ಬಂದೊದಗಿದ ಆಪತ್ತನ್ನು ವಿವರಿಸಿರಿ.

೫.      ಗುಬ್ಬಿಯ ಸಂಸಾರ ಛಿದ್ರವಾದ್ದು ಯಾಕೆ? ಅದು ನಿರೂಪಕನ ಮೇಲೆ ಬೀರಿದ ಪರಿಣಾಮವೇನು? ವಿವರಿಸಿರಿ.

೬.      ಈ ಕಥೆಯಲ್ಲಿ ಸಾವಿನ ಭೀತಿ ನಿರೂಪಕನನ್ನು ಕಾಡುವ ರೀತಿಯನ್ನು ವಿವರಿಸಿರಿ.

 

ಹೆಚ್ಚಿನ ಓದು

ಕುವೆಂಪು : ಕಾನೂರು ಹೆಗ್ಗಡಿತಿ – ಕಾದಂಬರಿಯ ಎಂಟನೆಯ ಅಧ್ಯಾಯ

ಸಲೀಮಲಿ : ಗುಬ್ಬಚ್ಚಿಯ ಸಾವು – ಆತ್ಮ ಚರಿತ್ರೆ

ಕರೀಗೌಡ ಬೀಚನಹಳ್ಳಿ : ಹಕ್ಕಿ ಬೆಂದೊ ಹಕ್ಕಿ ಮರಿ ಬೆಂದೊ – ಕಥೆ