ನಾನು ಸ್ಕೂಲಿಗೆ ಸೇರಿ ಎರಡು ತಿಂಗಳಾಗಿತ್ತು, ನಮ್ಮ ಮನೆ ಹಳ್ಳಿಯಲ್ಲಿ, ಹಾಗಾಗಿ ನಾನು ಬೋರ್ಡಿಂಗಿನಲ್ಲಿರಬೇಕಾಯಿತು. ನಾನು ಹಳ್ಳಿಯವಳಾದುದರಿಂದ ಪಟ್ಟಣದವರ ಆಚಾರ-ವ್ಯವಹಾರಗಳು ನನಗೆ ತಿಳಿಯದು. ನನ್ನ ಸಹಪಾಠಿಗಳೆಲ್ಲರೂ ಸೊಗಸಾಗಿ ತಲೆ ಬಾಚಿಕೊಂಡು ಒಳ್ಳೆಯ ಬಟ್ಟೆಯನ್ನು ಹಾಕಿಕೊಳ್ಳುತ್ತಿದ್ದರು. ನನಗೂ ಒಳ್ಳೆಯ ಬಟ್ಟೆ ಇರಲಿಲ್ಲವೆಂದಲ್ಲ; ಆದರೆ ಅವೆಲ್ಲ ಹಳೆಯ ಮಾದರಿ. ತಲೆಬಾಚಿಕೊಳ್ಳಲು ನನಗೆ ಗೊತ್ತಿರಲಿಲ್ಲ. ಆದುದರಿಂದ ಹುಡುಗಿಯರೆಲ್ಲರೂ ಹಳ್ಳಿಹುಡುಗಿ, ಗೊಗ್ಗು ಎಂದು ಚೇಷ್ಟೆ ಮಾಡುತ್ತಿದ್ದರು. ಹೊಸಬಳಾದ ನನ್ನೊಡನೆ ಅವರಾರೂ ಸ್ನೇಹ ಮಾಡುತ್ತಿರಲಿಲ್ಲ. ಹಳ್ಳಿಯ ಶಾಲೆಯಲ್ಲಿ ಇಂಗ್ಲಿಷ್ ಸ್ವಲ್ಪ ಕಡಿಮೆಯಾದುದರಿಂದ ಕ್ಲಾಸಿನಲ್ಲಿ ಇಂಗ್ಲಿಷಿನಲ್ಲಿ ಪ್ರಶ್ನೆ ಮಾಡಿದರೆ ನನಗೆ ಪ್ರತ್ಯುತರ ಕೊಡಲು ತಿಳಿಯುತ್ತಿರಲಿಲ್ಲ. ‘ಕೇಳಿದುದಕ್ಕೆ ಜವಾಬು ಕೊಡುವುದಿಲ್ಲ’ವೆಂದು ಉಪಾಧ್ಯಾಯಿನಿ ಗದರಿಸಿದರೆ ನನಗೆ ಅಳು ಬರುತ್ತಿತ್ತು. ನನ್ನ ಅಳುವನ್ನು ನೋಡಿ ಹುಡುಗಿಯರು ಗಟ್ಡಿಯಾಗಿ ನಗುತ್ತಿದ್ದರು. ಅವರ ನಗು ನನ್ನನ್ನು ನಾಚಿಕೆಯನ್ನು ಮುಳುಗಿಸುತ್ತಿತ್ತು. ನಮ್ಮ ಹಳ್ಳಿಯನ್ನು ಬಿಟ್ಟಂದಿನಿಂದ ನನಗೆ ಒಂದು ದಿನವಾದರೂ ಸಂತೋಷವಿರಲಿಲ್ಲ. ಅಮ್ಮನನ್ನು ಕಾಣದೆ ಬೇಸರ. ಹುಡುಗಿಯರ ಹಾಸ್ಯ, ಸಾಲದುದಕ್ಕೆ ಇಂಗ್ಲಿಷ್ ತಿಳಿಯದಿದ್ದದಕ್ಕಾಗಿ ಶಿಕ್ಷೆ. ಮನೆಯಿಂದ ಹೊರಡುವಾಗಿದ್ದ ಉತ್ಸಾಹವೆಲ್ಲವೂ ಮಾಯವಾಗಿತ್ತು. ಅಣ್ಣ ಯಾಕೆ ಬಂದು ನನ್ನನ್ನು ಕರೆದುಕೊಂಡು ಹೋಗುವುದಿಲ್ಲ – ಎಂದೆನಿಸುತ್ತಿತ್ತು. ಕಾಗದ ಬರೆಯೋಣವೆಂದರೆ ನಾವು ಬರೆದ ಕಾಗದಗಳನ್ನು ಮದರ್ ಓದುತ್ತಿದ್ದರು. ಇವೆಲ್ಲಾ ನೋಡುವಾಗ ಶಾಲೆಗೆ ನಮಸ್ಕಾರ ಹೇಳಿ ಹೊರಟುಹೋಗುವುದೇ ಉತ್ತಮವೆಂದು ತೋರಿತು. ಇನ್ನೊಂದು ಸಾರಿ ಅಣ್ಣ ನನ್ನನ್ನು ನೋಡುವುದಕ್ಕೆ ಬಂದಾಗ ಅವನೊಡನೆ ಹೊರಟು ಹೋಗಬೇಕೆಂದು ನಿಶ್ಚಯಿಸಿಕೊಂಡೆ.

ಒಂದು ದಿನ ಇಂಗ್ಲಿಷ್ ಕ್ಲಾಸಿಗೆ ನಾನು ಹೋಗದೆ ತಲೆನೋವೆಂದು ಸುಳ್ಳು ಹೇಳಿ ನನ್ನ ರೂಮಿನಲ್ಲಿ ಕೂತಿದ್ದೆ, ಬೇರೆ ಹುಡುಗಿಯರ ವರ್ತನದಿಂದ ನನಗೆ ಬಲು ದುಃಖವಾಗಿತ್ತು. ಅಲ್ಲಿ ಯಾರೂ ಇರಲಿಲ್ಲವಾದುದರಿಂದ ನನ್ನಷ್ಟಕ್ಕೆ ನಾನೇ ಅಳುತ್ತಿದ್ದೆನು. ಬಾಗಿಲ ತೆರೆದ ಶಬ್ದವಾಯಿತು. ಬಾಗಿಲನ್ನು ಮುಚ್ಚಿದ್ದೆನಾದರೂ ಚಿಲಕವನ್ನು ಹಾಕಿಕೊಂಡಿರಲಿಲ್ಲ. ತಿರುಗಿ ನೋಡಿದೆ: ಬಾಗಿಲು ತೆರೆದವಳು ಶೈಲಾ, ಅವಳೂ ನಾನೂ ಒಂದೇ ತರಗತಿ. ಪಾಠದಲ್ಲಿ ಅವಳು ಹಿಂದಾದರೂ ಆಟದಲ್ಲಿಯೂ, ತಂಟೆ ಮಾಡುವುದರಲ್ಲಿಯೂ ಮುಂದಾಳು. ಅವಳನ್ನು ಹುಡುಗಿಯರು ಕ್ಲಾಸಿನಲ್ಲಿ ಹಾಸ್ಯ ಮಾಡುತ್ತಿದ್ದರೂ ಹೊರಗೆ ಹೊರಟ ಮೇಲೆ ಅವಳಿಗೆ ಎಲ್ಲರೂ ಹೆದರುತ್ತಿದ್ದರು. ಅವಳು ಬಂದುದನ್ನು ನೋಡಿ ನಾನು ಕಣ್ಣೊರಿಸಿಕೊಂಡೆ. ಅವಳು ಒಳಗೆ ಬಂದು ನನ್ನ ಮಂಚದ ಮೇಲೆ ಕುಳಿತುಕೊಂಡಳು. ನಾನು ಸ್ಕೂಲಿಗೆ ಸೇರಿ ಎರಡು ತಿಂಗಳಾಗಿದ್ದರೂ ಅಂದಿನವರೆಗೆ ನನ್ನೊಡನವಳು ಮಾತಾಡಿರಲಿಲ್ಲ. ಆದುದರಿಂದ ಅವಳು ನನ್ನ ರೂಮಿಗೆ ಬಂದುದನ್ನು ನೋಡಿ ಅತ್ಯಾಶ್ಚರ್ಯವಾಯಿತು. ನನ್ನ ಮುಖವನ್ನು ನೋಡಿದೊಡನೆಯ ಅವಳಿಗೆ ನಾನತ್ತದ್ದು ತಿಳಿಯಿತು. ‘ಅಳುವಿಯೇಕೆ ಸೀತೆ?’ ಎಂದು ಕೇಳಿದಳು. ನಾನು ಮಾತನಾಡಲಿಲ್ಲ. ಅವಳು ಕುಳಿತಲ್ಲಿಂದ ಎದ್ದು ಬಂದು ನನ್ನೆರಡು ಭುಜದ ಮೇಲೆ ಕೈಯಿಟ್ಟು ‘ಏಕಳುವುದೆಂದು ಹೇಳಬಾರದೆ?’ ಎಂದು ತಿರುಗಿ ಕೇಳಿದಳು. ನನಗಿನ್ನೂ ಜೋರಿನಿಂದ ಅಳು ಬಂದು ಬಿಟ್ಟಿತು. ಆಗ ಅವಳು ವಾತ್ಸಲ್ಯದಿಂದ ನನ್ನ ಕೈಹಿಡಿದುಕೊಂಡು ‘ನಿನ್ನ ಗೆಳತಿಯೊಡನೆಯೂ ಹೇಳಬಾರದ ವಿಷಯವೇನು? ನಿನಗೇನಾದರೂ ಸಹಾಯವಾಗಬೇಕಾದರೆ ನನ್ನೊಡನೆ ಹೇಳು’ ಎಂದಳು. ಅವಳ ಸ್ನೇಹವನ್ನು ನೋಡಿ ನನ್ನ ದುಃಖವು ಇನ್ನಿಷ್ಟು ಹೆಚ್ಚಾಯಿತು. ಕೊನೆಗೆ ಸಮಾಧಾನ ಮಾಡಿಕೊಂಡು ನನ್ನ ಮನಸ್ಸಿನಲ್ಲಾಗುತ್ತಿದ್ದುದನ್ನೆಲ್ಲ ಅವಳೊಡನೆ ಹೇಳಿಬಿಟ್ಟೆ: ‘ಇಷ್ಟೊಂದಕ್ಕಾಗಿ  ಅಳಬೇಕೆಂದು? ನಿನ್ನ ಬೇಸರವನ್ನೆಲ್ಲ ನಾನು ಪರಿಹಾರ ಮಾಡುತ್ತೇನೆ. ಇಂಗ್ಲಿಷ್ ತಿಳಿಯದಿದ್ದರೇನಾಯಿತು? ನಾನೇನು ಬಹಳ ಕಲಿತಿರುವೆನೇನು? ಈಗ ಸಹ ನಾನು ಪಾಠ ಕಲಿಯದಿದ್ದುಕ್ಕಾಗಿ ಹೊರಗೆ ಹೋಗಲು ಹೇಳಿದ್ದರಿಂದ ಇಲ್ಲಿಗೆ ಬಂದೆ. ನೀನಳುವ ಶಬ್ದ ಕೇಳಿ ಒಳಗೆ ಇಣಿಕಿದೆ. ಸ್ವಲ್ಪ ಕಷ್ಟಪಟ್ಟು ಪಾಠ ಕಲಿಯುವುದು ಬಲು ದೊಡ್ಡದೆ? ಇಂದಿನಿಂದ ನಾನೂ ನೀನು ಗೆಳತಿಯರು. ಇನ್ನು ಮುಂದೆ ನಿನಗೆ ಯಾರಾದರೂ ಏನಾದರೂ ಅಂದರೆ ನನ್ನೊಡನೆ ಹೇಳು ಎಂದಳು. ಕೃಜ್ಞತೆಯಿಂದ ನಾನವಳ ಕೈಗಳನ್ನು ಹಿಡಿದುಕೊಂಡೆ. ಬಾಯಿಂದ ಮಾತೇ ಹೊರಡಲಿಲ್ಲ. ಅಷ್ಟರಲ್ಲಿಯೇ ಎರಡನೆಯ ಗಂಟೆ ಹೊಡೆಯಿತು. ನಾವಿಬ್ಬರೂ ಕನ್ನಡ ಕ್ಲಾಸಿಗೆ ಹೊರಟೆವು.

ಶೈಲೆ ಬಾಲಬೋಧೆಯಿಂದಲೂ ಅದೇ ಶಾಲೆಯಲ್ಲಿ ಕಲಿತವಳು. ಎಲ್ಲರೂ ಅವಳಿಗೆ ಸ್ನೇಹಿತರು. ಹುಡುಗಿಯರು ಅವಳು ಹೇಳಿದಂತೆ ಕೇಳುತ್ತಿದ್ದರು. ಅವಳು ಎಲ್ಲರ ಎದುರಿನಲ್ಲೇ ಉಪಾಧ್ಯಾಯಿನಿ ಕೂಡುವ ಕುರ್ಚಿಯ ಮೇಲೆ ಸೂಜಿಗಳನ್ನಿಟ್ಟರೂ ಶೈಲೆ ಹಾಗೆ ಮಾಡಿದಳೆಂದು ಯಾರೂ ಹೇಳುತ್ತಿರಲಿಲ್ಲ. ಮನಸ್ಸು ಮಾಡಿದರೆ ಅವಳು ಕ್ಲಾಸಿನಲ್ಲಿ ಮೊದಲನೆಯವಳಾಗಬಹುದಿತ್ತು. ಅವಳೇನು ದಡ್ಡಳಲ್ಲ. ನಮಗಾರಿಗೂ ತಿಳಿಯುವ ಲೆಕ್ಕವನ್ನು ಅವಳು ಒಂದೇ ನಿಮಿಷದಲ್ಲಿ ಮಾಡಿಬಿಡುತ್ತಿದ್ದಳು. ಆದರವಳಿಗೆ ಪಾಠಕ್ಕಿಂತ ಆಟದಲ್ಲಿ ಮನಸ್ಸು ಹೆಚ್ಚು. ಮಾಡಬೇಡವೆಂಬುದನ್ನು ಮಾಡುವುದಕ್ಕೆ ಬಯಕೆ ಬಹಳ. ತನ್ನ ಸ್ನೇಹಿತರಿಗಾಗಿ ಅವಳು ಏನು ಬೇಕಾದರೂ ಮಾಡುತ್ತಿದ್ದಳು. ಆದ್ದರಿಂದ ಹುಡುಗಿಯರೆಲ್ಲರಿಗೂ ಬೇಕಾದವಳಾಗಿದ್ದಳು. ನನ್ನನ್ನಂತೂ ಅವಳು ಸಹೋದರಿಗಿಂತಲೂ ಹೆಚ್ಚಾಗಿ ಪ್ರೀತಿಸುತ್ತಿದ್ದಳು. ಮೊದಲಿನಂತೀಗ ನನಗೆ ಬೇಸರವಾಗುತ್ತಿರಲಿಲ್ಲ. ಶೈಲೆಯ ಸ್ನೇಹವಾದ ಬಳಿಕ ಹುಡುಗಿಯರು ನನ್ನಲ್ಲಿ ಪ್ರೀತಿಯಿಂದ ವರ್ತಿಸುತ್ತಿದ್ರು, ಕಷ್ಟಪಟ್ಟು ಇಂಗ್ಲಿಷಿನಲ್ಲೂ ಹೆಚ್ಚಿನ ಜ್ಞಾನವನ್ನು ಪಡೆದೆ. ಶಾಲೆ ಸುಖಮಯವಾಗಿ ತೋರಿತು.

ಒಂದು ದಿನ ಉಪಾಧ್ಯಾಯಿನಿ ಹೊರಗೆ ಹೋದಾಗ ನಾವೆಲ್ಲರೂ ಓದುವುದನ್ನು ಬಿಟ್ಟು ಮಾತನಾಡತೊಡಗಿದವು. ಅವರು ಬಂದು ನಮ್ಮ ಗಲಾಟೆಯನ್ನು ನೋಡಿ ಕೋಪದಿಂದ ಆ ದಿನ ನಾವು ಉಪವಾಸವಿರಬೇಕೆಂದು ಹೇಳಿದರು. ಸಾಯಂಕಾಲದವರೆಗೆ ಹಸಿದಿದ್ದೆವು. ಮತ್ತೆ ತಡೆಯಲಾಗಲಿಲ್ಲ. ಆದರೆ ಮಾಡುವುದೇನು? ಶಾಲೆಯ ನಿಯಮಕ್ಕೆ ವಿರೋಧವಾಗಿ ನಡೆದವರು ಉಪವಾಸವಿದ್ದೇ ತೀರಬೇಕಾಗುತ್ತಿತ್ತು. ಊಟದ ಮನೆಗೆ ಅಂದು ನಮ್ಮನ್ನು ಬಿಡುತ್ತಿರಲಿಲ್ಲ. ಹಸಿವನ್ನು ಸಹಿಸಲಾರದೆ ನಾವೆಲ್ಲರೂ ಅಳುಮೋರೆಯಿಂದಿರುವುದನ್ನು ನೋಡಿ ಶೈಲೆಗೆ ಬಹಳ ವ್ಯಸನವಾಯಿತು ಅವಳೇ ಅಂದು ಗಲಾಟೇ ಎಬ್ಬಿಸಿದವಳು. ತನಗಾಗಿ ಹುಡುಗಿಯರು ಉಪವಾಸ ಮಾಡುವುದು ನೋಡಿ ಅವಳಿಗೂ ಅಳು ಬಂತು. ಅವಳಳುವುವನ್ನು ನೋಡಿ ನಾವು ಅವಳನ್ನು ಸಮಧಾನಪಡಿಸತೊಡಗಿದೆವು. ಏನಾದರೂ ಮಾಡಿ ಹಸಿವನ್ನು ಪರಿಹರಿಸಬೇಕೆಂದು ನಿಶ್ಚರ್ಯವಾಯಿತು. ಶೈಲೆ ಕೇಳಿದಳು: ‘ನಿಮ್ಮೆಲ್ಲರ ಹತ್ತಿರ ದುಡ್ಡಿದೆಯೆ?’ ಎಂದು ದುಡ್ಡೋನೋ ಇತ್ತು. ‘ಆದರೆ ದುಡ್ಡ ತಿನ್ನುವುದಕ್ಕಾಗುತ್ತದೆಯೆ?’ ವಿನೋದ ಹಾಗೆ ಕೇಳಿಬಿಟ್ಟಳು. ಆಗ ಶೈಲೆ ’ದುಡ್ಡು ತಿನ್ನುವುದಕ್ಕಾಗದಿದ್ದರೂ ತಿನ್ನುವ ವಸ್ತುವನ್ನು ದುಡ್ಡಿನಿಂದ ತರಬಹುದಲ್ಲ’ ಎಂದಳು. ಆಗ ರಾತ್ರಿ ಒಂಭತ್ತು ಗಂಟೆಯಾಗಿತ್ತು. ಶಾಲೆಯಿಂದ ಪೇಟೆಗೆ ಅರ್ಧಮೈಲು. ಅಲ್ಲಿಂದ ತಿಂಡಿಯನ್ನು ತರುವವರು ಯಾರು? ಜವಾನರೆಲ್ಲರೂ ಮಲಗಿದ್ದರು. ಎಚ್ಚರದಲ್ಲಿದ್ದರೂ ಶಿಕ್ಷೆಯನ್ನು ಅನುಭವಿಸುವವರಿಗೆ ತಿಂಡಿ ತಂದುಕೊಡುವುದು ನಿಯಮಕ್ಕೆ ವಿರುದ್ಧ. ಶೈಲೆ ‘ನಾನು ಪೇಟೆಗೆ ಹೋಗಿ ತಿಂಡಿ ತರುತ್ತೇನೆಂದು ಹೇಳಿದಳು. ನಮ್ಮ ಶೈಲೆಯನ್ನು ರಾತ್ರಿಯಲ್ಲಿ ಪೇಟೆಗೆ ಕಳಿಸುವುದಕ್ಕೆ ನಾವು ಒಪ್ಪಲಿಲ್ಲ. ಸ್ಕೂಲಿನ ಕಂಪೌಂಡಿನಿಂದ ಹಗಲು ಸಹ ಹೊರಗೆ ಹೋಗುವುದಕ್ಕೆ ನಮಗೆ ಅನುಮತಿ ಇರಲಿಲ್ಲ. ಇನ್ನು ರಾತ್ರಿ ಶೈಲೆಯೊಬ್ಬಳು ಹೊರಗೆ ಹೋಗುವುದು ಹೇಗೆ? ಉಪವಾಸದವರನ್ನು ಹಾಲಿಗೆ ಸೇರಿಸಿ ಬೀಗ ಹಾಕಿದ್ದರು. ಬೀಗವನ್ನು ತೆಗೆದುಕೊಂಡು ಹೊರಗೆ ಬರುವುದು ತಾನೆ ಹೇಗೆ? ಆದರೆ ಶೈಲೆಗದು ಅಷ್ಟೇನು ಕಷ್ಟವಾಗಿ ತೋರಲಿಲ್ಲ. ಕಿಟಕಿಯಿಂದ ಹೊರಗೆ ಹಾರಿದರಾಯಿತೆಂದಳು. ಕಿಟಕಿಯು ನೆಲದಿಂದ ಹನ್ನೆರಡು ಅಡಿ ಎತ್ತರದಲ್ಲಿತ್ತು. ಹಾರುವುದು ಸುಲಭವಾಗಿರಲಿಲ್ಲ. ಶೈಲೆ ‘ಹಾರಿ ತೋರಿಸುತ್ತೇನೆಂದಳು’. ‘ಹೋಗುವುದಾದರೆ ನಾವಿಬ್ಬರೂ ಹೋಗೋಣ’ ನಾನಂದೆ. ನನಗೀಸ್ಕರವಾಗಿ ನೀವೆಲ್ಲರೂ ಹಸಿದಿದ್ದೀರಿ. ಆದುದರಿಂದ ನಾನೊಬ್ಬಳೆ ಹೋಗುತ್ತೇನೆ ಎಂದು ಹೇಳಿದಳು. ಕಡೆಗೆ ಅವಳ ಹಠವೇ ಗೆದ್ದಿತು. ನನ್ನ ಸೀರೆಯನ್ನು ಕಿಟಕಿಯ ಕಂಬಕ್ಕೆ ಕಟ್ಟಿ ಅದರ ತುದಿಯನ್ನೇ ಹಿಡಿದುಕೊಂಡು ಕೆಳಗಿಳಿದಳು. ‘ಅರ್ಧ ಗಂಟೆ ಹಸಿವನ್ನು ಸಹಿಸಿಕೊಂಡಿರಿ. ಅಷ್ಟರಲ್ಲಿ ತಿಂಡಿಯನ್ನು ತರುತ್ತೇನೆ’ ಎಂದು ಹೇಳಿ ಕತ್ತಲೆಯನ್ನು ಕಣ್ಮರೆಯಾದಳು.

ಒಂಭತ್ತೂವರೆಯಾಯಿತು; ಶೈಲೆ ಬರಲಿಲ್ಲ. ಹತ್ತಾಯಿತು; ಶೈಲೆಯ ಸುಳುವಿಲ್ಲ. ಹತ್ತೂವರೆಯಾಯಿತು; ಶೈಲೆ ಸದ್ದಿಲ್ಲ. ಅವಳು ಹೋದೊಡನೆಯ ನಮ್ಮ ಮನಸ್ಸಿನಲ್ಲಿ ‘ಹಸಿದಿದ್ದರೂ ಚಿಂತೆಯಿರಲಿಲ್ಲ. ಅವಳನ್ನು ಹೋಗಗೊಡಬಾರದಾಗಿತ್ತು’ ಎಂದೆನಿಸಿತು. ಅವಳು ಬಾರದಿರುವುದನ್ನು ನೋಡಿದ ಮೇಲಂತೂ ನಮಗೆ ಬಲು ಹೆದರಿಕೆಯಾಯಿತು. ಇನ್ನೂ ಬರಲಿಲ್ಲವೇಕೆ? ಅವಳಿಗೇನಾಯಿತು? ನಾವೆಲ್ಲರೂ ಸೇರಿ ಅವಳೊಬ್ಬಳನ್ನೆ ಹೊರಗೆ ಹೋಗಗೊಟ್ಟೆವಲ್ಲ! ಎಂದು ನಮ್ಮನ್ನು ನಾವೆ ತಿರಸ್ಕರಿಸಿಕೊಳ್ಳಲಾರಂಭಿಸಿದೆವು. ತಿಂಡಿಯಿಲ್ಲದಿದ್ದರೂ ಚಿಂತೆಯಿಲ್ಲ. ಹಸಿದರೂ ಸರಿ. ಶೈಲೆ ಬಂದರೆ ಸಾಕೆಂದು ದೇವರನ್ನು ಬೇಡಿಕೊಳ್ಳತೊಡಗಿದವು. ದೇವರು ನಮ್ಮ ಪ್ರಾರ್ಥನೆಯನ್ನು ಕೇಳಿದನೋ ಎಂಬಂತೆ ಶೈಲೆಯು ಕಿಟಕಿಯನ್ನು ಹತ್ತಿ ನಮ್ಮಿದಿರಿನಲ್ಲಿ ಬಂದು ನಿಂತಳು. ಅವಳ ಬಟ್ಟೆಯೆಲ್ಲ ಕೆಸರಾಗಿತ್ತು, ತಲೆಗೂದಲು ಹರಡಿತ್ತು. ಮುಖವೆಲ್ಲ ಬೆವತ್ತಿತ್ತು. ಆದರೆ, ಅವಳ ಕಣ್ಣುಗಳು ನಗುತ್ತಿದ್ದವು. ಶೈಲೆಯ ನಗುಮುಖವನ್ನು ನೋಡಿ ನಮ್ಮ ಗಾಬರಿ ಮಾಯವಾಯಿತು. ‘ಇಷ್ಟೊಂದು ಹೊತ್ತೇಕೆ ಆಯಿತು ಶೈಲಾ?’ ಎಂದು ಕೇಳಿದೆ. ಅದಕ್ಕವಳು ‘ಮುಂಚೆ ತಿಂಡಿ ತಿನ್ನಿ, ಆ ಮೇಲೆ ಕತೆ ಹೇಳುತ್ತೇನೆ’ ಎಂದಳು. ನಾವೆಲ್ಲರೂ ಅವಳು ತಂದ ತಿಂಡಿಯನ್ನು ಬೇಗ ಬೇಗ ತಿಂದೆವು. ತಿಂದಾದ ಮೇಲೆ ಅವಳು ಹೇಳಿದಳು. “ನಾನು ಇಲ್ಲಿಂದ ಪೇಟೆಗೆ ಹೋಗಿ ತಿಂಡಿಯನ್ನು ತೆಗೆದುಕೊಂಡು ಸ್ಕೂಲಿನ ಹತ್ತಿರದವರೆಗೆ ಬಂದಿದ್ದೆ. ಅಷ್ಟರಲ್ಲಿ ಇದಿರಿನಿಂದ ಇಬ್ಬರು ಹೆಂಡಗುಡುಕರು ಜಗಳವಾಡುತ್ತ ನನ್ನ ಕಡೆಗೇ ಬರುತ್ತಿದ್ದರು. ನಾನು ಮರೆಯಾಗಬೇಕೆಂದು ಪ್ರಯತ್ನಿಸುವಷ್ಟರಲ್ಲೇ ಅವರು ನನ್ನನ್ನು ಕಂಡರು. ಅಲ್ಲಿ ಇನ್ನು ಯಾರೂ ಇರಲಿಲ್ಲ. ಅವರು ನಾನು ಭೂತವೆಂದು ತಿಳಿದುಕೊಂಡು ನನ್ನಟ್ಟಿಕೊಂಡು ಬಂದರು. ನಾನು ಓಡತೊಡಗಿದೆ. ಪೇಟೆಯ ಹತ್ತಿರ ತಲುಪುವಷ್ಟರಲ್ಲಿ ಇದಿರಿನಿಂದ ಯಾರೋ ಬರುವುದು ಕಾಣಿಸಿತು. ನಾನು ನಿಂತುದನ್ನು ನೋಡಿ ಕುಡುಕರೂ ನಿಂತುಬಿಟ್ಟರು. ಇದರಿಂದ ಬಂದಾತನು ‘ಯಾರಮ್ಮ ನೀನು? ರಾತ್ರಿ ಎಲ್ಲಿಗೆ ಹೋಗುತ್ತಿರುವೆ?’ ಎಂದು ಕೇಳಿದ. ನಾನೇನೂ ಹೇಳಲಿಲ್ಲ. ಕುಡುಕರ ಕಡೆಗೆ ಕೈ ತೋರಿಸಿದೆ. ಅವನನ್ನು ನೋಡಿ ಕುಡುಕರು ಪಲಾಯನ ಮಾಡಿದರು. ನಾನು ಮತ್ತೇನೂ ಹೇಳದೆ ಸ್ಕೂಲಿನ ಕಡೆಗೆ ಹೊರಟೆ. ಆಗ ಅವನು ‘ರಾತ್ರಿ ಒಬ್ಬಳೆ ಎಲ್ಲಿಗೆ  ಹೋಗುತ್ತಿರುವೆ? ಎಂದು ಕೇಳಿದ, ಸುಳ್ಳನ್ನು ಯೋಚಿಸುವುದಕ್ಕೆ ಸಮಯವಿರಲಿಲ್ಲ. ಸತ್ಯವನ್ನೇ ಹೇಳಿದೆ. ಆಗ ಅವನು ‘ನಿನ್ನ ಹೆಸರೇನು?’ ಎಂದು ಕೇಳಿದ. ಹೇಳಿಬಿಟ್ಟೆ. ಗಂಡು ಬೀರಿಯಂತೆ ರಾತ್ರಿ ನೀನು ಹೊರಗೆ ಬಂದುದು ತಪ್ಪು. ಕುಡುಕರು ನಿನಗೇನಾದರೂ ತೊಂದರೆ ಮಾಡಿದ್ದರೆ ನೀನೇನು ಮಾಡುತ್ತಿದ್ದೆ? ನನಗೆ ನಿನ್ನ ತಂದೆಯು ಗೊತ್ತಿದೆ. ಶಾಲೆಗೆ ತಲುಪಿಸಿ ಬರುತ್ತೇನೆ. ಹೋಗೋಣ’ ಎಂದ. ಅವರು ನನ್ನನ್ನು ‘ಗಂಡುಬೀರಿ’ ಎಂಬುದಕ್ಕೆ ನನಗೆ ಕೋಪ ಬಂತು. ಆದರೆ ನನ್ನ ತಂದೆಯು ಗೊತ್ತಿದೆಯೆಂದ ಮೇಲೆ ಅವರಿಗೆಲ್ಲಾದರೂ ‘ಈ ವಿಷಯವನ್ನು ಹೇಳಬಹುದೆಂದು ಸುಮ್ಮನಿದ್ದೆ. ಸ್ಕೂಲಿನ ಗೇಟಿನ ಹತ್ತಿರ ಬಂದಾಗ ಈ ವಿಷಯವನ್ನು ನನ್ನ ತಂದೆಗೆ ಹೇಳಬೇಡಿ’ ಎಂದು ಕೇಳಿಕೊಂಡೆ. ‘ಆಲೋಚಿಸುತ್ತೇನೆ’ ಎಂದು ಹೇಳಿಕೊಂಡು ಹೊರಟುಹೋದ, ನಾನು ಇಲ್ಲಿಗೆ ಬಂದೆ ಇದೇ ನನ್ನ ಕತೆ.

ಆಗ ವಿನೋದ ಕೇಳಿದಳು: ’ಸೀರೆಯ ಕೆಸರು ಹೇಗಾಯಿತು?’ ಎಂದು, ಓಡುವಾಗ ಬಿದ್ದೆ. ಎಂದು ಶೈಲೆ ಹೇಳಿದಳು. ನಮಗಾಗಿ ಶೈಲೆ ಪಟ್ಟ ಕಷ್ಟ ನಮಗವಳ ಮೇಲೆ ಪ್ರೀತಿ ಇನ್ನಷ್ಟು ಹೆಚ್ಚಾಯಿತು. ‘ನಿನ್ನನ್ನು ಕುಡುಕನ ಕೈಯಿಂದ ಬಿಡಿಸಿದವರು ಯಾರು?’ ಎಂದು ನಾನು ಕೇಳಿದೆ. ಶೈಲೆ ‘ನನಗವನು ಗೊತ್ತಿಲ್ಲ’ ಎಂದು ಹೇಳಿದಳು. ವಿನೋದ ‘ಅವನು ನೋಡುವುದಕ್ಕೆ ಹೇಗಿದ್ದನು? ಮುದುಕನೋ ಹುಡುಗನೋ?’ ಎಂದು ಕೇಳಿದಳು. ಶೈಲೆಗೆ ಅವಳ ಪ್ರಶ್ನೆಯಿಂದ ಸ್ವಲ್ಪ ಸಿಟ್ಟು ಬಂತೆಂದು ತೋರುತ್ತೆ. ‘ಕತ್ತಲೆಯಲ್ಲಿ ಅವನು ಹೇಗಿದ್ದನೆಂದು ನೋಡುವುದು ಹೇಗೆ? ಮುದುಕನೋ, ಮೋಟನೋ ನನಗೆ ಗೊತ್ತಿಲ್ಲ’ ಎಂದಳು.

ಆದರೂ ವಿನೋದ ‘ಅವನ ಸ್ವರವು ಹೇಗಿತ್ತು? ತಿರುಗಿ ಅವನನ್ನು ನೋಡಿದರೆ ಗುರುತಿಸಲಾರೆಯಾ?’ ಎಂದು ಕೇಳಿದಳು. ವಿನೋದಳ ಕುತೂಹಲವನ್ನು ನೋಡಿ ಶೈಲೆಗೆ ಸಿಟ್ಟು ಹೋಗಿ ನಗು ಬಂತು. ‘ಅವನ ಸ್ವರದಿಂದ ಗುರುತಿಸಬಲ್ಲೆನು. ಆದರೆ ನಿನಗೆ ಅವನ ಸ್ವರ ಹೇಗಿತ್ತೆಂದು ಹೇಳಲಿ? ಮೃದುವಾಗಿತ್ತೆಂದು ಹೇಳಬಹುದು’ ಎಂದು ಹೇಳಿದಳು. ‘ಕುಡುಕರ ಕೈಯಿಂದ ಬಿಡಿಸಿದ ಧೀರವನ್ನೇ ನೀನು ಮದುವೆಯಾಗಬೇಕು. ಅದೀಗ ರೋಮನ್ಸ್’ ಎಂದು ವಿನೋದ ವಿನೋದ ಮಾಡಿದಳು. ‘ಅವನನ್ನು ನೀನು ಪತ್ತೆ ಮಾಡು ಮುದುವೆಯಾಗುತ್ತೇನೆ’ ಎಂದು ನಗುತ್ತ ಶೈಲೆ ಹೇಳಿದಳು. ನಾವೆಲ್ಲರೂ ಅವಳ ಮಾತು ಕೇಳಿ ಗಟ್ಟಿಯಾಗಿ ನಕ್ಕೆವು. ಹೊಟ್ಟೆ ತುಂಬಿದ್ದರಿಂದ ಸ್ವಲ್ಪ ಹೊತ್ತಿನಲ್ಲಿ ನಮಗೆ ನಿದ್ದೆ ಬರಲು ಸುರುವಾಯಿತು. ಬೆಂಚುಗಳ ಮೇಲೆ ಮಲಗಿಕೊಂಡೆವು.

ನಮಗೆ ಲೆಕ್ಕವನ್ನೂ, ಕನ್ನಡವನ್ನೂ ಕಲಿಸುವುದಕ್ಕೆ ಒಬ್ಬ ಉಪಾಧ್ಯಾಯರು ಬರುತ್ತಿದ್ರು. ಅವರಿಗೆ ಪೆನ್ ಶನ್ ಆದುದರಿಂದ ಅವರ ಬದಲಿಗೆ ಇನ್ನೊಬ್ಬರು ನೇಮಕವಾಗಿದ್ದರು. ಅವರಿನ್ನೂ ಚಾರ್ಜು ವಹಿಸಿಕೊಂಡಿರಲಿಲ್ಲವಾದುದರಿಂದ ನಾನವರನ್ನು ನೋಡಿರಲಿಲ್ಲ. ಹಿಂದಿನವರು ಮುದುಕರಾಗಿದ್ದರಿಂದ ಶೈಲೆ ಅವರಿಗೆ ‘ಅಜ್ಜಯ್ಯ’ ಎಂದು ಹೆಸರಿಟ್ಟಿದ್ದಳು. ಈಗಿನವರಿಗೆ ಹೆಸರಿಡುವುದೇನೆಂದು ನಮ್ಮದೊಂದು ಸಭೆಯಾಯಿತು. ಶೈಲೆ ಅದಕ್ಕೆ ಅಧ್ಯಕ್ಷಳು, ಎಷ್ಟೆಷ್ಟೋ ಹೆಸರುಗಳು ಸೂಚಿಸಲ್ಪಟ್ಟವು. ಯಾವುದೂ ಸರಿ ತೋರಲಿಲ್ಲ. ಅವರನ್ನು ನೋಡದೆ ಹೆಸರಿಡುವುದು ಸಾಧ್ಯವಿಲ್ಲ. ಒಳ್ಳೆಯವನೋ, ಕೆಟ್ಟವನೋ, ಮುದುಕನೋ, ಹುಡುಗನೋ ಎಂದು ನೋಡಿಕೊಂಡು ಅವನ ಸ್ವಭಾವಕ್ಕೆ ತಕ್ಕಂತೆ ಹೆಸರಿಡಬಹುದು ಎಂದು ಅಧ್ಯಕ್ಷ ಭಾಷಣ ಮಾಡಿ ಸಭೆಯನ್ನು ಮುಗಿಸಿದಳು. ಅಷ್ಟರಲ್ಲಿ ಪಾಠಕ್ಕೆ ಸಮಯವಾಯಿತು. ಆಗ ಲೆಕ್ಕದ ಸಮಯ. ಟೀಚರ್ ಇಲ್ಲದ್ದರಿಂದ ಲೆಕ್ಕ ಮಾಡುವುದು ತಪ್ಪಿತೆಂದು ಸಂತೋಷದಿಂದಿದ್ದೆವು. ಸುಮ್ಮನೆ ಕೂಗುವುದು ಶೈಲೆಗೆ ಹಿತವಾಗಲಿಲ್ಲ. ಏನಾದರೂ ತಂಟೆ ಮಾಡಬೇಕೆಂದು ಅವಳ ಬಯಕೆ. ಏನು ಮಾಡುವುದೆಂದು ನಮ್ಮೆಲ್ಲರನ್ನು ಕೇಳಿದಳು. ಏನಾದರೂ ಒಂದನ್ನು ಮಾಡಬೇಕಾದರೆ ಅದನ್ನು ಆ ಕೂಡಲೇ ಮಾಡುವುದು ಅವಳ ಸ್ವಭಾವ. ಹಾಗೆಯೇ ಈಗಲೂ ಡ್ರೆಸಿಂಗ್ ರೂಮಿಗೆ ಹೋಗಿ, ಸಿಸ್ಟರ್ ಮಾರ್ಗರೇಟಿನ ತಲೆಯ ಟೊಪ್ಪಿಗೆಯನ್ನು ತಂದು ತನ್ನ ತಲೆಯ ಮೇಲಿಟ್ಟುಕೊಂಡು ಟೀಚರ್ ಕೂರುವ ಕುರ್ಚಿಯ ಮೇಲೆ ಕೂತುಕೊಂಡಳು. ಆ ಉದ್ದವಾದ ಟೊಪ್ಪಿಗೆಯನ್ನಿಟ್ಟು ಸಿಸ್ಟರ್ ಮುಖದಂತೆಯೇ ಮುಖ ಮಾಡಿಕೊಂಡು ಕೂತಿದ್ದ ಅವಳನ್ನು ನೋಡಿದಾಗ ನಮಗೆ ನಗೆಯನ್ನು ತಡೆಯಲಾಗಲಿಲ್ಲ. ನಕ್ಕುಬಿಟ್ಟೆವು. ಆಗವಳು ‘ನಾನು ಹೊಸ ಟೀಚರ್, ನೀವು ನಾನು ಹೇಳಿದಂತೆ ಕೇಳಬೇಕು. ಈಗ ಸಿಸ್ಟರ್ ಕ್ಲಾಸಿನಲ್ಲಿ ನಿದ್ದೆ ಮಾಡುತ್ತಿದ್ದಾಗ ರೆವ್ಹರೆಂಡ ಮದರ್ ಕ್ಲಾಸಿಗೆ ಬಂದು ಅವರನ್ನೆಚ್ಚರಿಸಿದ ಸಂಗತಿಯನ್ನು ಕುರಿತು ಒಂದು ಉಪನ್ಯಾಸವನ್ನು ಬರೆಯಿರಿ’ ಎಂದಳು. ನಾವೆಲ್ಲರೂ ಅವಳ ಮೆಚ್ಚುಕೆಯನ್ನು ಪಡೆಯಬೇಕೆಂದು ಬೇಗಬೇಗನೆ ಬರೆಯತೊಡಗಿದೆವು. ಬರೆದುದೂ ಆಯಿತು. ಒಬ್ಬೊಬ್ಬರಾಗಿ ಶೈಲೆಗೆ ತೋರಿಸಹತ್ತಿದೆವು. ಉಪನ್ಯಾಸಕ್ಕೆ ತಕ್ಕಂತೆ ಗುಡ್, ಫೇರ್ ಮುಂತಾದ ಬಿರುದುಗಳು ಸಿಕ್ಕಿದವು. ಎಲ್ಲರದೂ ನೋಡಿಯಾಯಿತು. ನನ್ನದು ಮಾತ್ರ ಉಳಿದಿತ್ತು. ನಾನು ತೆಗೆದುಕೊಂಡು ಹೋಗಿ ತೋರಿಸುತ್ತಿದೆ. ‘ಬಹಳ ಚೆನ್ನಾಗಿದೆ. ಇಡಿ ಕ್ಲಾಸು ಇದನ್ನು ಕಾಪಿ ಮಾಡಬೇಕು’ ಎಂದು ಹೇಳಿ, ಶೈಲೆ ಅದನ್ನು ಗಟ್ಟಿಯಾಗಿ ಓದತೊಡಗಿದಳು: ‘ಕುರ್ಚಿಯ ಮೇಲೆ ಕುಳಿತು ಗೊರಕೆ ಹೊಡೆಯುತ್ತಿದ್ದ ನಮ್ಮ ಸಿಸ್ಟರ್….’ ವಾಕ್ಯವು ಪೂರೈಸಲಿಲ್ಲ.  ರೆವ್ಹರೆಂಡ ಮದರ್ ಹೊಸಬನೊಬ್ಬನೊಡನೆ ಕ್ಲಾಸಿಗೆ ಒಳಗೆ ಬಂದುಬಿಟ್ಟರು. ಅಲ್ಲಲ್ಲಿ ಮಾತನಾಡುತ್ತ ಹುಡುಗಿಯರು ಬೇಗಬೇಗನೆ ಅವರವರ ಸ್ಥಳಗಳಲ್ಲಿ ಕುಳಿತುಕೊಂಡರು. ನಾನು ಮೇಜಿನ ಹತ್ತಿರ ನಿಂತಿದ್ದೆ, ನನ್ನ ಸ್ಥಳಕ್ಕೆ ಹೋಗಲಾಗಲಿಲ್ಲ. ಶೈಲಾ ಕುರ್ಚಿಯ ಮೇಲೆ ಕುಳಿತಿದ್ದಳು. ಮದರ್ ಅವಳನ್ನು ಸಿಸ್ಟರ್ ಎಂದೇ ಭಾವಿಸಿ ಅವಳ ಹತ್ತಿರ – ‘ಸಿಸ್ಟರ್, ಇವರು…’ ಅಷ್ಟರಲ್ಲೇ ತಾವು ಸಂಬೋಧಿಸುತ್ತಿರುವುದು ಸಿಸ್ಟರ್ ಅಲ್ಲವೆಂದು ತಿಳಿಯಿತು ಹತ್ತಿರ ಬಂದರು. ಅವಳನ್ನು ನೋಡಿ ಅವರಿಗೆ ನಗು ಬಂದುಬಿಟ್ಟಿತು; ಆದರೂ ಕೋಪ ಬಂದವರಂತೆ ನಟಿಸುತ್ತಾ ‘ಇದೇನು ಶೈಲಾ’ ಎಂದರು. ಅದಕ್ಕವಳು ‘ಟೀಚರ್ ಇಲ್ಲದ್ದರಿಂದ ಹುಡುಗಿಯರಿಗೆ ಪಾಠ ಹೇಳುತ್ತಿದ್ದೆ’ ಎಂದಳು. ಅವರು ‘ನೀನು ಓದುತ್ತಿರುವುದೇನು?’ ಎಂದು ಕೇಳಿದಳು. ‘ಸೀತೆಯು ಬರೆದ ಉಪನ್ಯಾಸ’ ಎಂದು ಶೈಲೆ ಪ್ರತ್ಯುತ್ತರವಿತ್ತಳು. ಮದರ್ ಗೆ ಕನ್ನಡ ಬರುತ್ತಿರಲಿಲ್ಲ. ಪುಸ್ತಕವನ್ನು ತೆಗೆದುಕೊಂಡು ‘ಇವಳು ಬರೆಸಿದುದನ್ನು ಓದಿರಿ; ಹೇಗಿದೆಯೆಂದು ನೋಡಿ’ ಎಂದು ಹೊಸಬರ ಕೈಲದನ್ನು ಕೊಟ್ಟರು. ಅವನದನ್ನು ಮನಸ್ಸಿನಲ್ಲೇ ಓದತೊಡಗಿದ. ಪರಿಣಾಮವನ್ನು ನೆನೆಸಿಕೊಂಡು ನಮಗೆಲ್ಲರಿಗೂ ಭಯವಾಯಿತು. ಶೈಲೆಯ ಮುಖದಲ್ಲಿ ಮಾತ್ರ ಎಳೆ ನಗುವು ನಾಟ್ಯವಾಡುತ್ತಿತ್ತು. ಓದಿ ಆದಮೇಲೆ ಅವನು ಶೈಲೆಯ ಮುಖವನ್ನು ನೋಡಿ. ‘ಬಹಳ ಚೆನ್ನಾಗಿದೆ’ ಎಂದ. ಅವನ ಮಾತನ್ನು ಕೇಳಿ ನಮಗೆಲ್ಲ ಆಶ್ವರ್ಯವಾಯಿತು. ಶೈಲೆಗೆ ಹೇಗಾಯಿತೆಂದು ಅವಳ ಮುಖ ನೋಡಿದೆ. ಮತ್ತಷ್ಟೂ ಆಶ್ವರ್ಯವಾಯಿತು. ಶೈಲೆಯು ತನ್ನ ಭಾವನೆಗಳನ್ನು ಇತರರಿಗೆ ತೋರಗೊಡುತ್ತಿರಲಿಲ್ಲ. ಆದರೆ, ಇಂದು ಅವಳ ಮುಖವು ಅವಳ ಅಂತರಂಗದ ಕನ್ನಡಿಯಂತೆ ಕಾಣಿಸುತ್ತಿತ್ತು. ಅವಳೆರಡೂ ಕಣ್ಣುಗಳಲ್ಲಿ ಆಶ್ವರ್ಯವೂ ಪ್ರತಿಬಿಂಬಿಸಿತ್ತು. ಅವಳಿಗೆ ಅಷ್ಟರಮಟ್ಟಿಗೆ ಆಶ್ವರ್ಯವಾಗಬೇಕಾದರೆ ಏನಾದರೂ ಬಲವಾದ ಕಾರಣವಿರಬೇಕೆಂದು ನಮಗೆ ಗೊತ್ತು. ರಾತ್ರಿ ಆ ವಿಷಯ ಕೇಳಬೇಕೆಂದು ಸುಮ್ಮನಾದೆ. ಶೈಲೆ ಬರೆಯಿಸಿದ್ದು ಚೆನ್ನಾಗಿದೆ ಎಂದು ಹೊಸಬನು ಹೇಳಿದುದನ್ನು ಕೇಳಿ ಮದರ್ ಗೆ ಸಂತೋಷವಾಯಿತು. ಪಾಪ! ಸಿಸ್ಟರಿನ ಮರಳುತನವೇ ಆ ಉಪನ್ಯಾಸದಲ್ಲಿ ಪ್ರತಿಬಿಂಬಿತವಾಗಿದೆಯೆಂದು ಅವರಿಗೇನು ಗೊತ್ತು? ಅವರಿಗೆ ಗೊತ್ತಾಗಿದ್ದರೆ ಶೈಲೆ ಅಂದು ಉಪವಾಸ ಇರಬೇಕಾಗಿತ್ತು. ಆದರದು ಅವರಿಗೆ ತಿಳಿಯದಿದ್ದುದರಿಂದ ಶೈಲೆಯ ಬೆನ್ನು ತಟ್ಟಿ ‘ಬೇರೆಯವರ ವಸ್ತುಗಳನ್ನು ಮುಟ್ಟಬಾರದು, ಟೊಪ್ಪಿಗೆಯನ್ನು ತೆಗೆದಿರಿಸಿ ಬಾ’ ಎಂದರು. ಶೈಲೆಯ ಟೊಪ್ಪಿಗೆಯನ್ನಿಟ್ಟು ಬಂದು ತನ್ನ ಸ್ಥಳದಲ್ಲಿ ಕುಳಿತುಕೊಂಡ ಬಳಿಕ ಆ ಹೊಸಬನಿಗೆ ನಮ್ಮೆಲ್ಲರ ಪರಿಚಯ ಮಾಡಿಸಿದರು. ಅವನು ನಮ್ಮ ಹೊಸ ಉಪಾಧ್ಯಾಯ ಕೃಷ್ಣಮೂರ್ತಿ, ಇಷ್ಟೆಲ್ಲಾ ಆಗುವಾಗ ಗಂಟೆಯಾದುದರಿಂದ ಹೊಸ ಉಪಾಧ್ಯಾಯನು ಅಂದು ಲೆಕ್ಕ ಮಾಡಿಸಲಿಲ್ಲ. ಅವನ ವಿಷಯವನ್ನು ಮಾತಾಡುತ್ತಾ ನಾವು ಕ್ಲಾಸಿನಿಂದ ಹೊರಗೆ ಬಂದೆವು. ಅಂದಿನ ರಾತ್ರಿ ಶೈಲೆಯೊಡನೆ ಅವಳ ಆಶ್ಚರ‍್ಯದ ಕಾರಣ ಕೇಳಿದೆ: ‘ನಿಮ್ಮೆಲ್ಲರಂತೆಯೇ ನನಗೂ ಅವನು ಹೇಳಿದುದನ್ನು ಕೇಳಿ ಆಶ್ಚರ‍್ಯವಾಯಿತು. ಕಾರಣವಿನ್ನೇನು?’ ಎಂದಳವಳು. ಎಂದೂ ನನ್ನೊಡನೆ ಸುಳ್ಳು ಹೇಳದ ಅವಳು ನನ್ನಿಂದ ಏನನ್ನೋ ಬಚ್ಚಿಡುವುದನ್ನು ನೋಡಿ ನನಗೆ ಮತ್ತಷ್ಟು ಕುತೂಹಲವಾಯಿತು. ಅವಳನ್ನು ಒತ್ತಾಯಪಡಿಸಿದೆ. ಕಡೆಗೆ ಹೇಳಿದಳು: ‘ನಿನ್ನೆ ರಾತ್ರಿ ನಾನು ರಸ್ತೆಯಲ್ಲಿ ಕಂಡ ಮನುಷ್ಯನೇ ಇವನು. ಈ ಮಾತು ಯಾರಿಗೂ ಹೇಳಬೇಡ’ ಎಂದಳು. ನಾನೂ ಹೇಳುವುದಿಲ್ಲವೆಂದು ಮಾತು ಕೊಟ್ಟೆ.

***

ನಮ್ಮ ಹೊಸ ಉಪಾಧ್ಯಾಯನ ಹೆಸರು ಕೃಷ್ಣಮೂರ್ತಿ. ಅವನು ಬಿ.ಎ. ಡಿಗ್ರಿಯನ್ನು ಸಂಪಾದಿಸಿದ್ದು ಅದೇ ವರ್ಷವಂತೆ, ಮುಂದೆ ಲಾ ಕಲಿಯುವ ಯೋಜನೆಯಿದ್ದರೂ ಹಣದ ಅಡಚಣೆಯ ದೆಸೆಯಿಂದ ಮದರಾಸಿಗೆ ಹೋಗಲು ಸಾಧ್ಯವಾಗಲಿಲ್ಲವಂತೆ. ಒಂದು ವರ್ಷ ನಮ್ಮ ಸ್ಕೂಲಿನಲ್ಲಿ ಟೀಚರಾಗಿದ್ದು ಮುಂದಿನ ವರ್ಷ ಮದರಾಸಿಗೆ ಹೋಗುವುದೆಂದು ನಿಶ್ಚಯವಾಗಿತ್ತಂತೆ. ಅವನ ಮನೆಯ ಪಕ್ಕದಲ್ಲೇ ನಮ್ಮ ಸಹಪಾಠಿ ಶಕುಂತಲೆಯ ಮನೆ. ಚಿಕ್ಕಂದಿನಿಂದಲೂ ಅವಳು ಅವನನ್ನು ಬಲ್ಲಳಂತೆ. ಅವಳೇ ಅವನ ವಿಷಯಗಳನ್ನು ನಮಗೆ ಹೇಳಿದ್ದು.

ನಮಗೆ ವಾರಕ್ಕೆ ಐದು ಗಂಟೆ ಲೆಕ್ಕ, ಮೂರು ಗಂಟೆ ಕನ್ನಡ ಪಾಠಕ್ಕೆ ಕೃಷ್ಣಮೂರ್ತಿ ಬರುತ್ತಿದ್ದ. ಬಂದೊಡನೆಯೇ ಬೋರ್ಡಿನ ಮೇಲೆ ಒಂದೆರೆಡು ಲೆಕ್ಕಗಳನ್ನು ಬರೆದು ಅವುಗಳನ್ನು ಮಾಡುವ ಕ್ರಮವನ್ನು ವರ್ಣಿಸುತ್ತಿದ್ದ. ಲೆಕ್ಕ ಮಾಡುವಾಗ ಬೋರ್ಡನ್ನೇ ನೋಡುತ್ತಾ ಅದರ ವಿಷಯ ಹೇಳುತ್ತಿದ್ದನಲ್ಲದೆ ಕ್ಲಾಸಿನ ಕಡೆ ತಿರುಗಿ ನಮಗೆ ಗೊತ್ತಾಯಿತೋ ಇಲ್ಲವೋ ಎಂದು ಸಹ ಪ್ರಶ್ನೆ ಮಾಡುತ್ತಿರಲಿಲ್ಲ. ಆ ಮೇಲೆ ಅದೇ ರೀತಿಯ ಲೆಕ್ಕಗಳನ್ನು ಬೋರ್ಡಿನ ಮೇಲೆ ಬರೆದು ಅವುಗಳನ್ನು ನಾವು ಮಾಡುವಂತೆ ಹೇಳುತ್ತಿದ್ದನು. ನಾವು ಲೆಕ್ಕ ಮಾಡುವಾಗ ಅವನು ಕುರ್ಚಿಯ ಮೇಲೆ ಮುಖ ತಗ್ಗಿಸಿಕೊಂಡು ಕುಳಿತುಕೊಳ್ಳುತ್ತಿದ್ದನು. ಕೆಲವು ಸಾರಿ ಯಾವುದಾದರೊಂದು ಪುಸ್ತಕ ನೋಡುತ್ತಿರುತ್ತಿದ್ದನು. ಆದರೆ ಒಂದು ಸಾರಿಯಾದರೂ ನಮ್ಮ ಕಡೆ ನೋಡುತ್ತಿರಲಿಲ್ಲ. ಪ್ರತಿದಿನವೂ ಇದೇ ಕ್ರಮ. ಕನ್ನಡ ಕ್ಲಾಸಿನಲ್ಲಿ ಪ್ರಶ್ನೆ ಕೇಳುವಾಗಲೂ ನಮ್ಮ ಮುಖ ನೋಡಿ ಕೇಳುತ್ತಿರಲಿಲ್ಲ. ಅವನು ಕೇಳಿದಾಗ ಗೊತ್ತಿದ್ದವರು ಉತ್ತರ ಹೇಳುತ್ತಿದ್ದರೇ ಹೊರತು ಇಂಥವರು ಹೇಳಿ ಎಂದು ಸಹ ಅವನು ಹೇಳುತ್ತಿರಲಿಲ್ಲ. ಒಂದು ದಿನ ಅವನು ಯಾವುದೋ ಒಂದು ವಿಷಯ ಪ್ರಶ್ನೆ ಮಾಡಿದನು. ಶೈಲೆಯು ಮೊದಲೇ ಹೇಳಿಕೊಟ್ಟಂತೆ ನಮಗದರ ಉತ್ತರವು ಗೊತ್ತಿದ್ದರೂ ನಾವಾರೂ ಜವಾಬು ಕೊಡಲಿಲ್ಲ. ಆಗವನು ‘”ಇಷ್ಟು ಜನರಲ್ಲಿ ಯಾರಿಗೂ ಇದರ ಉತ್ತರವು ಗೊತ್ತಿಲ್ಲವೇ? ಎಂತಹ ನಾಚಿಕೆಗೇಡು?” ಎಂದನು.

ಆಗ ಶೈಲೆಯು ಎದ್ದುನಿಂತು ‘”ಗೊತ್ತಿಲ್ಲ ಎಂದವರಾರು?’” ಎಂದು ಕೇಳಿದಳು. ಅದಕ್ಕವನು ‘ಜವಾಬು ಕೊಡದಿದ್ದುದರ ಅರ್ಥವೇನು? ಎಂದು ಕೇಳಿದ. ‘ಕೇಳದೆ ಉತ್ತರ ಕೊಡಕೂಡದೆಂದು ರೆವರಂಡ್ ಮದರ್ ಹೇಳಿದ್ದಾರೆ’ ಎಂದು ಶೈಲೆ ಹೇಳಿದಳು. ಶೈಲೆಯ ಮಾತಿನಿಂದ ಅವನಿಗೆ ಕೋಪ ಬಂತು. ‘ನಿಮಗಾರಿಗೂ ಕಿವಿ ಕೇಳಿಸುವುದಿಲ್ಲವೇ? ಈಗ ತಾನೆ ಪ್ರಶ್ನೆ ಕೇಳಿದೆನಲ್ಲ? ಎಂದು ಕೃಷ್ಣಮೂರ್ತಿ ಹೇಳಿದ. ಅದಕ್ಕೆ ಶೈಲೆ “‘ಹೌದು, ಪ್ರಶ್ನೆ ಕೇಳಿದ್ದು ನಿಜ’ ಆದರೆ ಯಾರೊಡನೆ? ನಮ್ಮಗೆಲ್ಲರಿಗೂ ಅದರ ಉತ್ತರವು ಗೊತ್ತಿದೆ; ಎಲ್ಲರೂ ಎದ್ದುನಿಂತು ಹೇಳಬೇಕೇನು?’” ಎಂದು ಕೇಳಿದಳು. ಕೃಷ್ಣಮೂರ್ತಿಯ ಮುಖವು ಸಿಟ್ಟನಿಂದ ಕೃಷ್ಣವರ್ಣವಾಯಿತು. “‘ನಿಮ್ಮಲ್ಲಿ ಒಬ್ಬರು ಜವಾಬು ಕೊಡಬಾರದೇ?”’ ಎಂದು ಕೇಳಿದ. “‘ನಮಗೆಲ್ಲರಿಗೂ ಹೆಸರಿದೆ. ಒಬ್ಬರು ಎಂದರೆ ಗೋಡೆಯೇ?’” ಎಂದು ಶೈಲೆ ಜವಾಬು ಹೇಳಿದಳು. ಅದಕ್ಕವನು ‘”ಹಾಗಾದರೆ ಅದರ ಉತ್ತರವನ್ನು ನೀನೇ ಹೇಳು ಅಧಿಕ ಪ್ರಸಂಗಿ’” ಎಂದ. “‘ನನ್ನ ಹೆಸರಾ ಶೈಲಾ”’ ಎಂದು ಹೇಳಿ, ಶೈಲೆಯು ಆ ಪ್ರಶ್ನೆಗೆ ಪ್ರತ್ಯುತ್ತರವಿತ್ತಳು.

ಅಂದಿನ ಸಾಯಂಕಾಲ ನಾವೆಲ್ಲರೂ ಸಭೆ ಸೇರಿದಾಗ ಶೈಲೆ ಅಂದು ಕ್ಲಾಸಿನಲ್ಲಿ ಯಾರೊಡನೆಯೂ ಮಾತನಾಡುದಿದ್ದ ಕೃಷ್ಣಮೂರ್ತಿಯ ಬಾಯಿಂದ ಮಾತು ಹೊರಡಿಸಿದುದಕ್ಕಾಗಿ ಅವಳನ್ನು ಹೊಗಳಿದೆವು. ಅಂದಿನ ಸಭೆಯಲ್ಲಿ ಅಧ್ಯಕ್ಷಳಾದ ಶೈಲೆಯು ಅವನಿಗೆ ‘ಮರದ ಬೊಂಬೆ’ ಎಂದು ನಾಮಕರಣ ಮಾಡಿದಳು.

ಅವನು ಕ್ಲಾಸಿನಲ್ಲಿ ಮರದ ಬೊಂಬೆಯಂತೆಯೇ ವರ್ತಿಸುತ್ತಿದ್ದುದರಿಂದ ನಾವೂ ಆ ಹೆಸರನ್ನು ಅನುಮೋದಿಸಿದೆವು. ‘ಮರದ ಬೊಂಬೆಗೆ ಮನುಷ್ಯರ ನಡೆವಳಿಕೆ ಕಲಿಸುವವರಾರು?’ ಎಂದು ಶಕುಂತಳೆ ಹಾಸ್ಯ ಮಾಡಿದ ಳು. ‘ಆ ಕೆಲಸ ಶೈಲೆಗೆ ಸೇರಿದ್ದು’ ಎಂದು ವಿನೋದ ಹೇಳಿದಳು. ಅದಕ್ಕೆ ಶೈಲೆ ಮಾತಿಗೆ ಶಕುಂತಳೆ ‘ಮನೆ ಹತ್ತಿರವಾದರೇನಾಯಿತು? ಅವನೆಲ್ಲಾದರೂ ಹೊರಗೆ ಬರುವಾಗ ನನ್ನನ್ನು ಕಂಡರೆ ಮುಖವನ್ನು ತಿರುಗಿಸಿಕೊಂಡು ಹೋಗುತ್ತಾನೆ. ಚಿಕ್ಕಂದಿನಿಂದಲೂ ನನ್ನ ಪರಿಚಯವಿದ್ದರೂ ನನ್ನ ಕಡೆ ನೋಡುವುದಕ್ಕೂ ಸಹ ಅವನಿಗೆ ನಾಚಿಕೆ. ಇನ್ನವನಿಗೆ ಸಭ್ಯತನ ಕಲಿಸುವುದು ನನ್ನಿಂದ ಸಾಧ್ಯವೇ? ಎಂದಳು. ಇಲಿಗಳ ಸಭೆಯಲ್ಲಿ ಬೆಕ್ಕಿನ ಹೊರಳಿಗೆ ಗಂಟೆ ಕಟ್ಟುವವರಾರು ಎಂದು ಚರ್ಚೆಯಾದಂತೆ. ಅವನನ್ನು ಮದುವೆಯಾದ ಹೆಂಡತಿ ಇತರರಿಗಾರಿಗೂ ಆ ಕೆಲಸವು ಸುಲಭವಾಗಿರಲಿಲ್ಲ; ಹೆಂಗಸರ ಕಡೆ ಸಹ ನೋಡದ ಅವನು ಮದುವೆಯಾಗುವನೇ? ಹೇಗಾದರೂ ಸರಿ. ಅವನು ಮದುವೆಯಾಗುವಂತೆ ಮಾಡಿ ಹೆಂಡತಿಯಿಂದವನಿಗೆ ಬುದ್ಧಿ ಕಲಿಸಬೇಕೆಂದು ನಿಶ್ಚಯವಾಯಿತು. ಆದರೆ ಅವನನ್ನು ಮದುವೆಯಾಗುವವರಾರು? ನಮ್ಮಲ್ಲಿ ಬುದ್ಧಿವಂತೆಯಾದ ಶೈಲೆಯನ್ನೇ ಅವನನ್ನು ಮದುವೆಯಾಗುವುದಕ್ಕೆ ಚುನಾಯಿಸಿದೆವು. ಆಗ ನಾನು ‘ಶೈಲಾ ಗಂಡುಬೀರಿ, ಅಧಿಕ ಪ್ರಸಂಗಿ, ಎಂದುದರ ಸೇಡನ್ನು ತೀರಿಸುವುದಕ್ಕೆ ಇದೀಗ ತಕ್ಕ ಸಮಯ. ಈ ಸುಸಮಯವನ್ನು ಕಳೆದುಕೊಳ್ಳಬೇಡ’ ಎಂದು ಹೇಳಿ ನಕ್ಕುಬಿಟ್ಟೆ. ನನ್ನ ಮಾತಿನಿಂದ ಹುಡುಗಿಯರೆಲ್ಲರೂ ‘ಮರದ ಬೊಂಬೆಯೆ ಅಂದು ಶೈಲೆಯನ್ನು ಗಂಡುಬೀರಿ’ ಎಂದವನು ಎಂದು ತಿಳಿಯಿತು. ವಿನೋದಳಂತೂ ಕೈ ಚಪ್ಪಾಳೆ ತಟ್ಟಿಕೊಂಡು ’ರೋಮಾನ್ಸ-ರೋಮಾನ್ಸ’ ಎಂದು ಕುಣಿದುಬಿಟ್ಟಳು. ವಿನೋದಳ ವಿನೋದಕ್ಕೆ ಶೈಲೆ ನಗುತ್ತಾ ಅಲ್ಲಿಂದೆದ್ದು ಹೊರಟೆ ಹೋದಳು. ಅಂದಿನ ಸಭೆಯೂ ಮುಗಿಯಿತು.

***

ಮರದ ಬೊಂಬೆಯನ್ನು ಮದುವೆಯಾಗಲು ಒಪ್ಪಿದರೂ ಮಾಡಿ ತೋರಿಸುವುದು ಬುದ್ಧಿವಂತೆಯಾದ ಶೈಲೆಗೂ ಸುಲಭವಾಗಿ ಕಾಣಲಿಲ್ಲ. ಶೈಲೆಯು ಕ್ಲಾಸಿನಲ್ಲವನನ್ನು ಕೆಣಕದಂದಿನಿಂದ ಬೋರ್ಡಿನ ಮೇಲೆ ಪ್ರಶ್ನೆಗಳನ್ನು ಬರೆದು ಅದಕ್ಕೆ ಪ್ರತ್ಯುತ್ತರಗಳನ್ನು ನಮ್ಮ ನಮ್ಮ ಪುಸ್ತಕಗಳಲ್ಲಿ ಬರೆಯಲು ಹೇಳುತ್ತಿದ್ದನು. ಬರೆದಾದ ಮೇಲೆ ಓದಿ ನೋಡಿ, ಬರಹಕ್ಕೆ ತಕ್ಕಂತೆ ಮಾರ್ಕ್ಸ್ ಕೊಡುತ್ತಿದ್ದನು. ಅವನನ್ನು ಹಿಂದಿನಿಂದ ‘ಮರದ ಬೊಂಬೆ’ ಎಂದು ನಾವನ್ನುತ್ತಿದ್ದರೂ ಅವನು ಕ್ಲಾಸಿಗೆ ಬಂದೊಡನೆಯೆ ಅವನ ಹೇಳಿಕೆಯ ವಿರುದ್ಧವಾಗಿ ನಡೆಯಲು ಶೈಲೆಯಿಂದಲೂ ಸಾಧ್ಯವಾಗುತ್ತಿರಲಿಲ್ಲ. ಒಂದು ದಿನ ನಾವೆಲ್ಲರೂ ಅವನು ಬರೆದ ಕೆಲವು ಪ್ರಶ್ನೆಗಳಿಗೆ ಉತ್ತರ ಬರೆಯುವಷ್ಟರಲ್ಲಿ ಗಂಟೆಯಾಯಿತು. ಆಗವನು ನಮ್ಮೆಲ್ಲರ ಪುಸ್ತಕಗಳನ್ನು ತಿದ್ದಿ ಮರುದಿನ ಕೊಡುವುದಾಗಿ ಹೇಳಿ ತೆಗೆದುಕೊಂಡು ಹೋದನು. ಮರುದಿನ ನಮ್ಮೆಲ್ಲರ ಪುಸ್ತಕಗಳು ಸಿಕ್ಕಿದವು. ಕ್ಲಾಸಿನಲ್ಲಿ ನಾವೆಲ್ಲರೂ ಬರೆಯುತ್ತಿರುವಾಗ ‘ಮರದ ಬೊಂಬೆ’ ಒಂದು ಪುಸ್ತಕ ನೋಡುತ್ತಿದ್ದನು. ಅದರ ರಟ್ಟು ಹಸಿರು. ಯಾವಾಗಲೂ ಅದು ಅವನ ಕಿಸೆಯಲ್ಲಿರುತ್ತಿತ್ತು. ನಮ್ಮ ಶಾಲೆಗೆ ಬರಲು ಸುರುವಾಗಿ ಆರು ತಿಂಗಳಾದರೂ ಅವನು ಆ ಪುಸ್ತಕವನ್ನು ಓದಿ ಮುಗಿಸಿರಲಿಲ್ಲ. ಯಾವಾಗ ನೋಡಿದರೂ ಅವನು ಅದೇ ಪುಸ್ತಕವನ್ನು ನೋಡುತ್ತಿರುತ್ತಿದ್ದನು. ಅಷ್ಟೊಂದು ನಿಷ್ಠೆಯಿಂದ ಓದುವುದಕ್ಕೆ ಆ ಪುಸ್ತಕದಲ್ಲಿ ಏನಿರಬಹುದು? ಎಂದು ಶೈಲೆಗೆ ಬಹು ಕುತೂಹಲ. ಹೇಗಾದರೂ ಮಾಡಿ ಆ ಪುಸ್ತಕವನ್ನು ಒಂದು ಬಾರಿ ನೋಡಬೇಕೆಂದವಳಿಗೆ ತವಕ. ಯಾವತ್ತೂ ಅವನ ಕೈಯಲ್ಲೇ ಇರುವ ಪುಸ್ತಕವನ್ನು ನೋಡುವುದು ಹೇಗೆ? ಆದರೆ ಶೈಲೆ ನೋಡಿಯೇ ತೀರಬೇಕೆಂದು ಹಠ ತೊಟ್ಟ ಮೇಲೆ ಕಷ್ಟ ಯಾವುದು? ಅವಳೊಂದು ಉಪಾಯವನ್ನು ಕಂಡುಹಿಡಿದಳು.

ನಾವೆಲ್ಲರೂ ಲೆಕ್ಕ ಮಾಡುತ್ತಿದ್ದೆವು. ಅವನು ಎಂದಿನಂತೆ ಹಸಿರು ಪುಸ್ತಕವನ್ನು ಓದುತ್ತಿದ್ದನು. ಶೈಲೆ ಸದ್ದಾಗದಂತೆ ತನ್ನ ಸ್ಥಳದಿಂದೆದ್ದು ಲೆಕ್ಕದ ಪುಸ್ತಕವನ್ನು ತೆಗೆದುಕೊಂಡು ಅವನು ಕುಳಿತಿದ್ದೆಡೆಗೆ ಹೋದಳು. ನಾವಾರೂ ಅವನು ಕುಳಿತಲ್ಲಿಗೆ ಹೋಗುತ್ತಿರಲಿಲ್ಲವಾದುದರಿಂದ ಶೈಲೆಯು ಅಲ್ಲಿಗೆ ಹೋದುದನ್ನು ನೋಡಿ ಓದುತ್ತಿದ್ದ ಪುಸ್ತಕವನ್ನು ಮೇಜಿನ ಮೇಲಿಟ್ಟು ಅವಳ ಮುಖವನ್ನು ಆಶ್ವರ್ಯದಿಂದ ನೋಡಿದನು. ಶೈಲೆಯು ತನ್ನ ಕೈಲಿದ್ದ ಪುಸ್ತಕವನ್ನು ಮೇಜಿನ ಮೇಲಿಟ್ಟು ‘ನನಗೆ ಈ ಲೆಕ್ಕ ಗೊತ್ತಾಗುವುದಿಲ್ಲ’ ಎಂದಳು. ‘ಯಾವ ಲೆಕ್ಕ’ ಎಂದು ಹೇಳುತ್ತ ಅವನು ಪುಸ್ತಕವನ್ನು ಕೈಯಲ್ಲಿ ತೆಗೆದುಕೊಂಡನು. ಶೈಲೆಯ ಪುಸ್ತಕವನ್ನು ಅವನು ನೋಡುತ್ತಿರುವಾಗ ಶೈಲೆ ಅವನ ಪುಸ್ತಕವನ್ನು ಮೇಜಿನ ಮೇಲಿಂದ ತೆಗೆದುನೋಡಿದಳು. (ನಾನವಳ ಮುಖವನ್ನು ನೋಡುತ್ತಿದ್ದೆ). ನೋಡಿದೊಡನೆಯೆ ಅವಳ ಮುಖವು ಕೆಂಪಾಯಿತು. ಪುಸ್ತಕವನ್ನು ಮೇಜಿನ ಮೇಲಿಟ್ಟಳು. ಮರದ ಬೊಂಬೆಯು ಅದನ್ನು ಕಂಡು ಬೇಗನೆ ಕಿಸೆಯಲ್ಲಿ ತೆಗೆದಿಟ್ಟುಕೊಂಡು ಶೈಲೆಯ ಮುಖವನ್ನು ನೋಡಿದನು. ಕೆಂಪಾದ ಅವಳ ಮುಖಕ್ಕಿಂತಲೂ ಹೆಚ್ಚಾಗಿ ಮರದ ಬೊಂಬೆಯ ಮುಖವು ಕೆಂಪಾಯಿತು. ಮರುಕ್ಷಣದಲ್ಲಿಯೇ ಮುಖವನ್ನು ತಗ್ಗಿಸಿಕೊಂಡು ಶೈಲೆಗೆ ಲೆಕ್ಕ ಮಾಡುವ ವಿಧಾನವನ್ನು ತೋರಿಸಿಕೊಟ್ಟನು. ಲೆಕ್ಕವಾದ ಮೇಲೆ ಶೈಲೆ ಬಂದು ತನ್ನ ಸ್ಥಳದಲ್ಲಿ ಕೂತುಕೊಂಡಳು. ಗಂಟೆಯಾದ ಮೇಲೆ ‘ಪುಸ್ತಕದಲ್ಲಿ ಏನಿತ್ತೆ’ ಎಂದು ಶೈಲೆಯನ್ನು ಕೇಳಿದೆ. ‘ಅದು ಹಿಂದೀ ಪುಸ್ತಕ. ಏನಿತ್ತೆಂದು ಗೊತ್ತಿಲ್ಲ’ ಎಂದು ಅವಳೆಂದಳು. ಅವಳು ಹೇಳುವುದೂ ನಿಜವನ್ನು ನಾನೇ ಊಹಿಸಿದ್ದೆ. ಮರುದಿನ ಶೈಲೆ ತಲೆನೋವೆಂದು ಲೆಕ್ಕದ ಕ್ಲಾಸಿಗೆ ಬರಲಿಲ್ಲ. ಎಂದಿನಂತೆಯೇ ಮರದ ಬೊಂಬೆ ತಲೆತಗ್ಗಿಸಿಕೊಂಡು ಕ್ಲಾಸಿಗೆ ಬಂದ ಬೋರ್ಡಿನ ಮೇಲೆ ಲೆಕ್ಕ ಬರೆದುದೂ ಆಯಿತು. ತನ್ನ ಕುರ್ಚಿಯ ಮೇಲೆ ಕುಳಿತು ಹಸಿರು ಪುಸ್ತಕ ಓದುವ ಮೊದಲು ಕ್ಲಾಸಿನ ಕಡೆ ನೋಡಿದ. ಶೈಲೆ ಇಲ್ಲದಿರುವುದು ಮರದ ಬೊಂಬೆಯ ಕಣ್ಣುಗಳು ಇಂದು ಹಸಿರು ಪುಸ್ತಕವನ್ನು ನೋಡುವುದರಲ್ಲಿ ಅಷ್ಟೊಂದು ಉತ್ಸುಕತೆಯಿಂದಿರಲಿಲ್ಲ. ಶೈಲೆಯ ಸ್ಥಳದ ಕಡೆಗೆ ಆಗಾಗ ಅವನ ದೃಷ್ಟಿಯು ಚಲಿಸುತ್ತಿತ್ತು. ಅವನ ಪ್ರತಿಯೊಂದು ಕಾರ್ಯವನ್ನು ನೋಡುತ್ತಿದ್ದ ನನಗೆ ಅಂದು ಅವನೇನೋ ಬೇಸರದಲ್ಲಿರುವಂತೆ ತೋರಿತು. ಅವನ ಬೇಸರಕ್ಕೆ ಕಾರಣವೇನಿರಬಹುದೆಂದು ತಿಳಿದುಕೊಳ್ಳಲು ಶಕುಂತಳೆಯೊಡನೆ ‘ಅವನ ಮನೆಯಲ್ಲಿ ಏನಾದರೂ ವಿಶೇಷ ನಡೆಯಿತೆ?’ ಎಂದು ಕೇಳಿದೆ. ‘ಸ್ಕೂಲಿಗೆ ಬರುವ ಸ್ವಲ್ಪ ಮೊದಲೆ ಅವನ ಅಕ್ಕನೊಡನೆ ಮಾತಾಡಿದೆ. ವಿಶೇಷವಿದ್ದರವಳು ಹೇಳುತ್ತಿದ್ದಳು’ ಎಂದು ಶಕುಂತಲೆ ಹೇಳಿದಳು. ಆಗ ನನ್ನ ಅಲ್ಪ ಬುದ್ಧಿಗೆ ಹೊಳೆಯಿತು. ‘ಮರದ ಬೊಂಬೆಯ ಬೇಸರಕ್ಕೆ ಶೈಲೆಯ ಸ್ಥಳ ಖಾಲಿಯಾಗಿರುವುದೇ ಕಾರಣ’ವೆಂದು ಆ ದಿನ ಮಧ್ಯಾಹ್ನದ ಮೇಲೆ ಕನ್ನಡ ಪಾಠವಿತ್ತು. ಆಗ ಶೈಲೆಗೆ ತಲೆನೋವು ಬಿಟ್ಟಿತು. ಅವಳ ಗಂಟೆ ಹೊಡೆಯುವ ಮೊದಲೆ ಕ್ಲಾಸಿಗೆ ಹೋಗಿ ಕುಳಿತಿದ್ದಳು. ನಾವೆಲ್ಲರೂ ಹೋಗುವಾಗ ಅವಳು ತನ್ನ ಸ್ಥಳದಲ್ಲಿ ಕೂತು ಏನೋ ಓದುತ್ತಿದ್ದಳು. ಓದುವಂತೆ ತೋರುತ್ತಿದ್ದರೂ ಅವಳು ನಿಜವಾಗಿ ಓದುತ್ತಿರಲಿಲ್ಲ. ನಾನು ಅವಳ ಹತ್ತಿರ ಹೋದಾಗ ಪುಸ್ತಕವನ್ನು ತಲೆಕೆಳಗಾಗಿ ಹಿಡಿದು ನಗುತ್ತಿದ್ದಳು. ಶೈಲೆಯ ನಗುವಿಗೆ ಕಾರಣವು ತಿಳಿಯಲಿಲ್ಲ. ಕೇಳುವ ಮೊದಲೇ ‘ಮರದ ಬೊಂಬೆ’ಯು ಬಂದುಬಿಟ್ಟಿದ್ದರಿಂದ ಕೇಳಲು ಸಾಧ್ಯವಾಗಲಿಲ್ಲ. ಬಂದೊಡನೆಯೆ ಕೃಷ್ಣಮೂರ್ತಿಯ ಕಣ್ಣುಗಳು ಶೈಲೆಯ ಸ್ಥಳಕ್ಕೆ ಹೋದವು. ಶೈಲೆಯನ್ನು ಕಂಡಕೂಡಲೆ ನೆಲವನ್ನು ನೋಡತೊಡಗಿದವು.

ತರುವಾಯ ಕ್ರಮವಾಗಿ ಪ್ರಶ್ನೆಗಳನ್ನು ಬರೆದು ಕುರ್ಚಿಯ ಮೇಲೆ ಕುಳಿತುಕೊಳ್ಳುವುದಕ್ಕೆ ಹೋದ. ನಾವು ಪ್ರಶ್ನೆಗಳಿಗೆ ಪ್ರತ್ಯುತ್ತರಗಳನ್ನು ಬರೆಯತೊಡಗಿದೆವು. ನಾನು ಒಂದು ವಾಕ್ಯವನ್ನು ಬರೆದು ಪೂರೈಸಿರಲಿಲ್ಲ. ಅಷ್ಟರಲ್ಲಿ ಏನೋ ದೊಪ್ಪನೆ ಬಿದ್ದ ಸಪ್ಪಳವಾಯಿತು. ಗಾಬರಿಯಿಂದ ನಾವೆಲ್ಲರೂ ತಲೆಯಿತ್ತಿ ನೋಡಿದೆವು.

ತನ್ನ ಮೇಲೆ ಬಿದ್ದಿದ್ದ ಕುರ್ಚಿಯನ್ನು ಎತ್ತಿಕೊಂಡು ಮರದ ಬೊಂಬೆಯ ನೆಲದಿಂದ ಮೇಲೇಳುತ್ತಿದ್ದನು. ನಮ್ಮೆಲ್ಲರೆದುರಿನಲ್ಲಿ ಬಿದ್ದುದರಿಂದ ನಾಚಿಕೆಯಿಂದ ಅವನ ಮುಖವು ಕೆಂಪಾಗಿತ್ತು. ನಾಚಿಕೆಯೊಡನೆಯೆ ಸಿಟ್ಟೂ ಬಂದಿತು. ‘ಕುರ್ಚಿಯ ಕಾಲಡಿಯಲ್ಲಿ ಅಡಿಕೆಯನ್ನಿಟ್ಟವರು ಯಾರು?’ ಎಂದು ಕೋಪದಿಂದ ನಮ್ಮನ್ನು ಕೇಳಿದ. ನಾವಾರೂ ಅಡಿಕೆಯನ್ನು ಇಟ್ಟಿರಲಿಲ್ಲವಾದುದರಿಂದ ಮಾತನಾಡಲಿಲ್ಲ. ಶೈಲೆ ಗಂಟೆಯಾಗುವ ಮೊದಲೆ ಕ್ಲಾಸಿಗೆ ಬಂದ ಕಾರಣವು ನನಗೆ ತಿಳಿಯಿತು. ನಾವು ಜವಾಬು ಹೇಳದಿರುವುದನ್ನು ನೋಡಿ ‘ನಿಜವನ್ನು ಹೇಳುವವರೆಗೂ ನೀವು ಕ್ಲಾಸಿನಿಂದ ಹೊರಗೆ ಹೋಗಕೂಡದು’ ಎಂದು ಹೇಳಿದ. ಆಗ ಶೈಲೆ ಎದ್ದು ನಿಂತು ‘ಅಡಿಕೆಯನ್ನಿಟ್ಟವಳು ನಾನು ಎಂದಳು’. ‘ನೀನು ಗಂಟೆಯಾದ ಮೇಲೆ ಮಾಡಿದ್ದು ತಪ್ಪು ಎಂದು ಸಾವಿರ ಸಾರಿ ಬರೆದು ಹೋಗಬೇಕು’ ಎಂದು ಹೇಳಿ ಮರದ ಬೊಂಬೆಯು ಕುಳಿತುಕೊಂಡನು.

ಗಂಟೆಯಾಯಿತು. ನಾವೆಲ್ಲರೂ ಹೊರಗೆ ಬಂದೆವು. ಶೈಲೆಯೊಬ್ಬಳೆ ಕ್ಲಾಸಿನಲ್ಲಿ. ಅವಳು ಹೊರಗೆ ಹೋಗದಂತೆ ನೋಡಿಕೊಳ್ಳುವುದಕ್ಕೆ ಮರದ ಬೊಂಬೆಯು ಕುರ್ಚಿಯ ಮೇಲೆ ಕಾವಲು ಕೂತಿದ್ದ.

ನಾವೆಲ್ಲರೂ ಕಾಫಿ ಕುಡಿದಾಯಿತು. ಆದರೂ ಶೈಲೆ ಬರಲಿಲ್ಲ. ನಾನು ಶೈಲೆಯು ಏನು ಮಾಡುತ್ತಿರುವಳೆಂದು ಮೆಲ್ಲನೆ ಕಿಟಕಿಯ ಮರೆಯಲ್ಲಿ ನಿಂತು ನೋಡಿದೆ. ಶೈಲೆ ಅವಳ ಸ್ಥಳದಲ್ಲಿ ಕುಳಿತು ಬರೆಯುತ್ತಿದ್ದಳು. ಮರದ ಬೊಂಬೆ ಕ್ಲಾಸಿನ ಒಂದು ಕೊನೆಯಿಂದ ಇನ್ನೊಂದು ಕಡೆಗೆ ನಡೆದಾಡುತ್ತಿದ್ದನು. ಸ್ವಲ್ಪ ಹೊತ್ತಿನ ಮೇಲೆ ಶೈಲೆ – ‘ಬರೆದಾಯಿತು’ ಎಂದು ಹೇಳಿ ನಿಂತಳು. ಮರದ ಬೊಂಬೆ ಅವಳ ಹತ್ತಿರ ಹೋಗಿ ಅವಳು ಬರೆದುದನ್ನು ಓದಿ ‘ಇದೇನೆಂದು ಬರೆದಿರುವೆ? ಎಂದು’ ಕೇಳಿದನು. ‘ಓದಲು ಬರುವುದಿಲ್ಲವೆ?’ ಎಂದು ಶೈಲೆ ಪ್ರತ್ಯುತ್ತರವಿತ್ತಳು. ‘ಮರದ ಬೊಂಬೆಗೆ ಮನುಷ್ಯ ವ್ಯವಹಾರವನ್ನು ಕಲಿಸುವುದು ಕಷ್ಟವೆಂದು ಬರೆದಿರುವಿಯಲ್ಲ – ಹಾಗೆಂದರೇನು?’ ಎಂದು ಕೋಪದಿಂದಲೇ ಅವನು ಕೇಳಿದ. ಅದಕ್ಕೆ ಶೈಲೆ ‘ಹಾಗೆಂದರೆ ಮರದ ಬೊಂಬೆಯನ್ನು ಮದುವೆಯಾಗುವುದು ಸುಲಭವಲ್ಲವೆಂದರ್ಥ’ ಎಂದಳು. ‘ಮರದ ಬೊಂಬೆಯನ್ನೇಕೆ ಮದುವೆಯಾಗಬೇಕು?’ ಎಂದು ಅವನು ಕೇಳಿದ. ‘ಮನುಷ್ಯ ವ್ಯವಹಾರ ಕಲಿಸುವುದಕ್ಕೆ’ ಎಂದಳು ಶೈಲೆ. ಆಗವನು ಕೇಳಿದ ‘ಮನುಷ್ಯ ವ್ಯವಹಾರ ತಿಳಿಯದ ಮರದ ಬೊಂಬೆ ಯಾರು? ಅದನ್ನು ಮದುವೆಯಾಗುವವರು ಯಾರು? ಎಂದು. ಶೈಲೆ ಹೇಳಿದಳು ‘ಬೇರೆಯವರ ಚಿತ್ರವನ್ನು ಕೇಳದೆಯೇ ತೆಗೆದಿಟ್ಟುಕೊಂಡು ನೋಡುವಾತನು ಮರದ ಬೊಂಬೆ. ಅವನನ್ನು ಮದುವೆಯಾಗಿ ಮನುಷ್ಯ ವ್ಯವಹಾರವನ್ನು ಕಲಿಸುವವಳು ನಾನು.’

ಮುಂದೇನಾಯಿತು ಎಂದು ನೋಡಲು ನಾನಲ್ಲಿ ನಿಲ್ಲಲಿಲ್ಲ. ನಾವೆಲ್ಲರೂ ನೇರಳೆಯ ಮರದಡಿಯಲ್ಲಿ ಒಟ್ಟುಗೂಡಿ ಅವಳ ಬರವನ್ನೇ ಎದುರುನೋಡುತ್ತಿದ್ದೆವು. ಅರ್ಧ ಗಂಟೆಯ ಮೇಲೆ ಶೈಲೆ ನಾವು ಕುಳಿತಲ್ಲಿಗೆ ಬಂದಳು. ಶೈಲೆ ಅಷ್ಟೊಂದು ಸುಂದರಿಯಲ್ಲ; ಆದರೆ ಹಿಂದೆಂದೂ ತೋರದ, ಎಷ್ಟು ನೋಡಿದರೂ ಸಾಲದೆನ್ನುಂವಂಥ ಅದೊಂದು ತರದ ಅಪೂರ್ವ ಸೌಂದರ್ಯವು ಆಗವಳ ಮುಖದಲ್ಲಿ ಹೊಳೆಯುತ್ತಿತ್ತು. ನಗುವು ಅವಳ ಕಣ್ಣುಗಳಿಂದ ಉಕ್ಕಿ ತುಟಿಗಳನ್ನು ಬಿಡಿಸಿ ಎರಡು ಸಾಲು ಮುತ್ತಿನಂತಹ ಹಲ್ಲುಗಳನ್ನೂ ತೋರಿಸುತ್ತಿತ್ತು. ಗುಂಗುರುಗುಂಗುರಾದ ಅವಳ ಮುಂಗುರುಳುಗಳು ಅವಳ ಕೆಂಪಾದ ಕೆನ್ನೆಗಳನ್ನು ಮುತ್ತಿಡುತ್ತಿದ್ದವು. ‘ಬರೆದುದಾಯಿತು, ಕೆಲಸವೂ ಸಿಕ್ಕಿತು’ ಎಂದಳು ಶೈಲೆ. ಗೊತ್ತಿಲ್ಲದವಳಂತೆ ನಾನು, ‘ಯಾವ ಕೆಲಸ’ ಎಂದು ಕೇಳಿದೆ? ‘ಮರದ ಬೊಂಬೆಗೆ ಮನುಷ್ಯ ವ್ಯವಹಾರವನ್ನು ಕಲಿಸುವ ಕೆಲಸ’ ಎಂದಳು ಅವಳು. ಎಂದಿನಂತೆ ಶೈಲೆ ಕೈಗೊಂಡ ಕೆಲಸವನ್ನು ಇಂದೂ ನಮ್ಮ ಇಷ್ಟದಂತೆ ಕೊನೆಗಾಣಿಸಿದ್ದರಿಂದ ನಮ್ಮೆಲ್ಲರಿಗೂ ಸಂತೋಷವಾಯಿತು. ಚರ್ಚಿಸತೊಡಗಿದೆವು. ಆದರೆ ಹಿಂದಿನಂತೆ ಶೈಲೆ ಇಂದಿನ ಸಭೆಯು ಅಧ್ಯಕ್ಷಳಾಗಿರಲಿಲ್ಲ.

***

ಮೊನ್ನೆ ದಿನ ನನ್ನ ಮಗು ವಸಂತನನ್ನು ಕರೆದುಕೊಂಡು ಶೈಲೆಯ ಮನೆಗೆ ಹೋಗಿದ್ದೆ. ಮರದ ಬೊಂಬೆ ಈಗ ಗಣ್ಯನಾದೊಬ್ಬ ಕ್ರಿಮಿನಲ್ ಲಾಯರು. ನಾನು ಹೋಗುವಾಗ ಶೈಲಾ-ಕೃಷ್ಣಮೂರ್ತಿಯರ ಮೂರು ವರುಷದ ಮಗ ಪ್ರಭಾತ ಜಗುಲಿಯ ಮೇಲೆ ನಿಂತಿದ್ದ. ನನ್ನನ್ನು ಕಂಡು ‘ಅಮ್ಮಾ ಅತ್ತೆ ಬಂದ್ಲು’ ಎನ್ನುತ್ತ ಒಳಗೆ ಹೋದ. ಅವನನ್ನೆತ್ತಿಕೊಂಡು ಶೈಲೆ ಹೊರಗೆ ಬಂದಳು. ನಾವಿಬ್ಬರೂ ಅವರ ಮನೆಯ ಮುಂದಿನ ದ್ರಾಕ್ಷಿ ಚಪ್ಪರದಡಿಯಲ್ಲಿ ಕುಳಿತು ಮಾತನಾಡುತ್ತಿದ್ದೆವು. ವಸಂತ. ಪ್ರಭಾತರು ಅಂಗಳದಲ್ಲಿ ಆಡುತ್ತಿದ್ದರು. ಕೋರ್ಟಿಗೆ ಹೋಗಿದ್ದ ಕೃಷ್ಣಮೂರ್ತಿ ಐದು ಗಂಟೆಗೆ ಬಂದಾಗಲೂ ನಮ್ಮ ಹರಟೆ ಮುಗಿದಿರಲಿಲ್ಲ. ನಾವಿನ್ನೂ ಅಲ್ಲೇ ಕೂತಿದ್ದೆವು. ಮಕ್ಕಳಿಬ್ಬರೂ ಅಲ್ಲೇ ಆಡುತ್ತಿದ್ದರು. ಅವನು ಬರುವುದನ್ನು ನೋಡಿ ಶೈಲೆ ‘ಕಾಫಿ ತರುತ್ತೇನೆ’ ಎಂದು ಒಳಗೆ ಹೋದಳು. ಕೃಷ್ಣಮೂರ್ತಿ ಬರುವಾಗ ನಾನೊಬ್ಬಳೇ ಅಲ್ಲಿದ್ದೆ. ನನ್ನನ್ನು ನೋಡಿ ‘ಯಾವಾಗ ಬಂದೆ ಸೀತೆ? ಚೆನ್ನಾಗಿರುವೆಯಾ? ಎಂದು ಹೇಳಿ ವಸಂತನನ್ನೆತ್ತಿಕೊಂಡು ‘ಹೆಸರೇನು?’ ಎಂದು ಕೇಳಿದ. ಶೈಲೆ ಸೂಚಿಸಿದ ಹೆಸರು – ‘ವಸಂತ’ ನಾನು ಹೇಳಿದೆ. ಶೈಲೆ ಕಾಫಿ ತೆಗೆದುಕೊಂಡು ಬರುವಾಗ ಅರ್ಧಗಂಟೆಯಾಯಿತು. ಅಷ್ಟವರೆಗೂ ಕೃಷ್ಣಮೂರ್ತಿ ನನ್ನೊಡನೆ ಮಾತನಾಡುತ್ತ ಕುಳಿತಿದ್ದ. ಕಾಫಿ ಕುಡಿಯುತ್ತ ನಾನು ನನ್ನ ಹತ್ತಿರವೇ ಕುಳಿತಿದ್ದ ಶೈಲೆಯನ್ನು ನೋಡಿ ನಕ್ಕೆ. ನಗುವುದೇಕೆ ಎಂದವಳು ಕೇಳಿದಳು. ‘ಶೈಲೆ ನೀನು ನಿಜವಾಗಿಯೂ ಜಾಣೆ. ಮರದ ಬೊಂಬೆಗೆ ಚೆನ್ನಾಗಿ ಮನುಷ್ಯ ವ್ಯವಹಾರವನ್ನು ಕಲಿಸಿರುವೆ. ಹಿಂದೆ ನಮ್ಮನ್ನು ಕಂಡರೆ ತಲೆ ತಗ್ಗಿಸಿಕೊಳ್ಳುತ್ತಿದ್ದ ಮರದ ಬೊಂಬೆ, ಈಗ ಅರ್ಧ ಗಂಟೆಯಿಂದಲೂ ನನ್ನೊಡನೆ ಅಳುಕಿಲ್ಲದೆ ಮಾತನಾಡಿದ’ ಎಂದು ಹೇಳುತ್ತ ನಾನು ನಗತೊಡಗಿದೆ, ‘ಗಂಡುಬೀರಿ, ಅಧಿಕ ಪ್ರಸಂಗಿಯನ್ನು ಮದುವೆಯಾದ ಮೇಲೆ ಅವಳಿಷ್ಟದಂತೆ ನಡೆಯದಿದ್ದರಾಗುತ್ತದೆಯೇ?’ ಎಂದು ಹೇಳುತ್ತ ಶೈಲೆ ಕೃಷ್ಣಮೂರ್ತಿಯನ್ನು ಪ್ರೇಮಪೂರ್ಣ ದೃಷ್ಟಿಯಿಂದ ನೋಡಿದಳು.

‘ಹೌದು ಸೀತೆ, ಈ ಗಂಡುಬೀರಿ ನನಗೆ ತೊಂದರೆ ಮಾಡುತ್ತಾಳೆ. ಸ್ವಲ್ಪ ಬುದ್ಧಿ ಹೇಳು’ ಎಂದು ಹೇಳಿ ಶೈಲೆಯ ಬೆನ್ನಿಗೆ ಮೆಲ್ಲನೆ ಒಂದು ಗುದ್ದು ಕೊಟ್ಟನು. ‘ಅಣ್ಣ ಹೊಡೆಯುವುದು ನೋಡಿಲ್ಲಿ’ ಎಂದು ಶೈಲೆ ಕೃಷ್ಣಮೂರ್ತಿಯ ಮೇಲೆ ಪ್ರಭಾತನ ಹತ್ತಿರ ದೂರು ಹೇಳಿದಳು. ‘ಅಮ್ಮನಿಗೆ ಹೊಡೆಯಬೇಡ’ ಎನ್ನುತ್ತ ಪ್ರಭಾತ ತಂದೆಗೊಂದು ಪುಟ್ಟ ಗುದ್ದು ಕೊಟ್ಟು ತಾಯಿಯ ತೊಡೆಯ ಮೇಲೆ ಕುಳಿತುಕೊಂಡನು.

ನಮ್ಮೆಲ್ಲರ ಎಳೆತನದ ಚೇಷ್ಟೆಯು ಇದು ಪ್ರೇಮಮಯವಾದ ಕುಟುಂಬವಾಗಿ ಪರಿಣಮಿಸಿದುದನ್ನು ನೋಡಿ ನನ್ನ ಕಣ್ಣುಗಳಿಂದ ಆನಂದಬಾಷ್ಪಗಳುದುರಿದವು.

ಲೇಖಕರು

೨೦ನೇ ಶತಮಾನದ ಮೊದಲ ಭಾಗದಲ್ಲಿ ಸಾಹಿತ್ಯ ರಚನೆಗೆ ತೊಡಗಿದ ಅಪರೂಪದ ಬರಹಗಾರ್ತಿ ಕೊಡಗಿನ ಗೌರಮ್ಮ (೧೯೧೨-೧೯೩೯) ಹುಟ್ಟಿದ್ದು ಮಡಕೇರಿಯಲ್ಲಿ. ಹೈಸ್ಕೂಲ್ ವರೆಗೆ ವಿದ್ಯಾಭ್ಯಾಸ ಮಾಡಿದ ಗೌರಮ್ಮನವರು ಹಿಂದೀ ವಿಶಾರದ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದರು. ಇಪ್ಪತ್ತೇಳು ವರ್ಷಗಳ ಕಾಲ ಮಾತ್ರ ಬದುಕಿದ್ದರು. ಹೊಳೆಯಲ್ಲಿ ಈಜಲು ಹೋಗಿ ಅಕಾಲ ಮರಣಕ್ಕೆ ತುತ್ತಾದರು. ಚಿಕ್ಕ ವಯಸ್ಸಿನಲ್ಲೇ ಅತ್ಯುತ್ತಮ ಕಥೆಗಳನ್ನು ಬರೆದರು. ಕಂಬನಿ (೧೯೩೯), ಚಿಗುರು (೧೯೪೨) ಎರಡು ಕಥಾಸಂಕಲನಗಳು ಪ್ರಕಟವಾಗಿವೆ. ಕನ್ನಡ ಪುಸ್ತಕ ಪ್ರಾಧಿಕಾರವು ಜೀವನ ಪ್ರೀತಿ (೨೦೦೨) ಎಂಬ ಹೆಸರಿನಲ್ಲಿ ಗೌರಮ್ಮನವರ ಸಮಗ್ರ ಕಥೆಗಳನ್ನು ಪ್ರಕಟಿಸಿದೆ.

ಆಶಯ

ಈ ಕಥೆಯನ್ನು ಜೀವನ ಪ್ರೀತಿ (ಸಂ: ಕಾಳೇಗೌಡ ನಾಗವಾರ) ಸಂಕಲನದಿಂದ ಆಯ್ದುಕೊಂಡಿದೆ. ತುಂಟತನದ ಹುಡುಗಿಯೊಬ್ಬಳು ತನ್ನ ಹುಡುಗಾಟದಿಂದಲೇ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಂಡು. ಗಂಡನ ಸ್ವಭಾವವನ್ನು ಪರಿವರ್ತಿಸಿ ಒಳ್ಳೆ ಸಂಸಾರವನ್ನು ರೂಪಿಸಿಕೊಂಡ ಹುಡುಗಿಯೂ ಚಿತ್ರಣ ಈ ಕಥೆಯಲ್ಲಿದೆ.

ಶಬ್ದಕೋಶ

ಗೊಗ್ಗು=ದಡ್ಡ ಸ್ವಭಾವ. ಗಂಡುಬೀರು=ಗಂಡು ಸ್ವಭಾವದ ಹೆಣ್ಣು. ಅಧಿಕಪ್ರಸಂಗ=ಎಲ್ಲದರಲ್ಲೂ ಕೈ ಹಾಕುವ ಸ್ವಭಾವ. ಚೇಷ್ಟೆ=ತಮಾಷೆ. ಜವಾಬು=ಉತ್ತರ. ಕೃತಜ್ಞತೆ=ಉಪಕಾರ ಸ್ಮರಿಸು.

ಪ್ರಶ್ನೆಗಳು

೧.    ಸೀತೆಗೆ ಶಾಲೆಯಲ್ಲಿ ಎದುರಾದ ಸಮಸ್ಯೆಗಳು ಯಾವುವು? ಅವು ಪರಿಹಾರವಾದದ್ದು ಹೇಗೆ?

೨.    ಶೈಲಾಳ ತುಂಟು ಸ್ವಭಾವವನ್ನು ಉದಾಹರಣೆ ಮೂಲಕ ವಿವರಿಸಿರಿ?

೩.    ವಿದ್ಯಾರ್ಥಿನಿಯರು ಯಾಕೆ ಉಪವಾಸ ಇರಬೇಕಾಯಿತು? ಅವರು ತಮ್ಮ ಹಸಿವನ್ನು ದೂರ ಮಾಡಿಕೊಂಡದ್ದು ಯಾರಿಂದ? ವಿವರಿಸಿ.

೪.    ಶೈಲಾ ಉಪವಾಸವಿದ್ದ ತನ್ನ ಗೆಳತಿಯರಿಗೆ ಹೇಗೆ ತಿಂಡಿಯನ್ನು ತಂದುಕೊಟ್ಟಳು? ಅದಕ್ಕಾಗಿ ಶೈಲಾ ಅನುಭವಿಸಿದ ಪಾಡನ್ನು ಬರೆಯಿರಿ.

೫.    ಕೃಷ್ಣಮೂರ್ತಿ ಎಂಬ ಶಿಕ್ಷಕನಿಗೆ ಮರದ ಬೊಂಬೆ ಎಂದು ಯಾರು ನಾಮಕರಣ ಮಾಡಿದ್ದರು? ವಿವರಿಸಿರಿ.

೬.    ಕೃಷ್ಣಮೂರ್ತಿ ಶಿಕ್ಷಕರನ್ನು ಮಾತಾಡುವಂತೆ ಶೈಲಾ ಮಾಡಿದ ಉಪಾಯವೇನು?

೭.    ಮರದ ಬೊಂಬೆಯಂತಿದ್ದ ಶಿಕ್ಷಕ ಕೃಷ್ಣಮೂರ್ತಿಯನ್ನು ಶೈಲಾ ಮದುವೆ ಮಾಡಿಕೊಳ್ಳಲು ಒಪ್ಪಿದುದೇಕೆ? ವಿವರಿಸಿರಿ.

೮.    ‘ನಾನು ಮಾಡಿದ್ದು ತಪ್ಪು’ ಎಂದು ಸಾವಿರ ಸಲ ಬರೆಯಲು ಶೈಲಾಗೆ ಶಿಕ್ಷಕ ಒಪ್ಪಿಸಿದುದೇಕೆ? ವಿವರಿಸಿರಿ.

೯.    ಕೃಷ್ಣಮೂರ್ತಿ ತರಗತಿಯಲ್ಲಿ ಹಸಿರು ಪುಸ್ತಕವನ್ನು ಯಾಕೆ ನೋಡುತ್ತಿದ್ದ? ಅದರಲ್ಲಿ ಏನಿತ್ತು? ವಿವರಿಸಿರಿ.

೧೦.  ಶೈಲಾ ಮರದ ಬೊಂಬೆಯಂತಿದ್ದ ಕೃಷ್ಣಮೂರ್ತಿಯನ್ನು ಪರಿವರ್ತಿಸಿದ್ದು ಹೇಗೆ? ವಿವರಿಸಿರಿ.