ದೇವರು ರುಜು ಮಾಡಿದನು;
ರಸವಶನಾಗುತ ಕವಿ ಅ‌ದ ನೋಡಿದನು!

ಬಿತ್ತರದಾಗಸ ಹಿನ್ನೆಲೆಯಾಗಿರೆ
ಪರ್ವತದೆತ್ತರ ಸಾಲಾಗೆಸೆದಿರೆ
ಕಿಕ್ಕಿರಿದಡವಿಗಳಂಚಿನ ನಡುವೆ

ಮೆರೆದರೆ ಜಲಸುಂದರಿ ತುಂಗೆ
ದೇವರು ರುಜು ಮಾಡಿದನು,
ರಸವಶನಾಗುತ ಕವಿ ಅದ ನೋಡಿದನು!

ನದಿ ಹರಿದಿತ್ತು; ಬನ ನಿಂತಿತ್ತು;
ಬಾನ್ ನೀಲಿಯ ನಗೆ ಬೀರಿತ್ತು.
ನಿರ್ಜನ ದೇಶದ ನೀರವ ಕಾಲಕೆ

ಖಗರವ ಪುಲಕಂ ತೋರಿತ್ತು.
ಹೂಬಿಸಿಲಲಿ ಮಿರುಗಿರಿ ನಿರಿವೊನಲು
ಮೊರದಿರೆ ಬಂಡೆಗಳಾಲಿ ನೀರ‍್ತೊದಲು
ರಂಜಿಸಿ ಇಕ್ಕೆಲದಲಿ ಹೊಮ್ಮಳಲು
ಸಿಬ್ಬಲುಗುಡ್ಡೆಯ ಹೊಳೆಯಲಿ ಮೀಯುತ
ಕವಿಮನ ನಾಕದಿ ನೆಲೆಸಿತ್ತು;
ಮಧು ಸೌಂದರ್ಯದ ಮಧುರ ಜಗತ್ತು
ಹೃದಯ ಜಿಹ್ವೆಗೆ ಜೇನಾಗಿತ್ತು!

ದೃಶ್ಯದಿಗಂತದಿನೊಮ್ಮೆಯೆ ಹೊಮ್ಮಿ
ಗಿರಿವನ ಪಟದಾಕಾಶದಲಿ
ತೇಲುತ ಬರಲ್ಕೆ ಬಲಾಕಪಂಕ್ತಿ
ಲೇಖನ ರೇಖಾವಿನ್ಯಾಸದಲಿ,
ಅವಾಙ್ಞಯ ಛಂದಃ ಪ್ರಾಸದಲಿ
ಸೃಷ್ಟಿಯ ರಚನೆಯ ಕುಶಲಕೆ ಚಂದಕೆ
ಜಗದಚ್ಚರಿಯಂದದ ಒಪ್ಪಂದಕೆ
ಚಿರಚೇತನ ತಾನಿಹೆನೆಂಬಂದದಿ
ಬೆಳ್ಳಕ್ಕಿಯ ಹಂತಿಯ ಆ ನೆವದಿ
ದೇವರು ರುಜು ಮಾಡಿದನು;
ರಸವಶನಾಗುತ ಕವಿ ಅದ ನೋಡಿದನು!

ಲೇಖಕರು

ಆಧುನಿಕ ಕನ್ನಡ ಸಾಹಿತ್ಯಕ್ಕೆ ಅನನ್ಯವಾದ ಕೊಡುಗೆ ನೀಡಿದ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ (೧೯೦೪-೧೯೯೪) ಅವರು ತಾಯಿ ಸೀತಮ್ಮ ಅವರ ಊರಾದ ಚಿಕ್ಕಮಗಳೂರು ಜಿಲ್ಲೆಯ ಹಿರೇಕೊಡಿಗೆಯಲ್ಲಿ ಜನಿಸಿದರು. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಪ್ಪಳಿ ಕುವೆಂಪು ಅವರ ತಂದೆ ಊರು. ಕುವೆಂಪು ವೈಸೂರಿನಲ್ಲಿ ವ್ಯಾಸಂಗ ಮಾಡಿ ಕನ್ನಡದಲ್ಲಿ ಎಂ.ಎ. ಪದವಿಯನ್ನು ಪಡೆದರು. ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕ ವೃತ್ತಿ ಆರಂಭಿಸಿ, ಮೈಸೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದರು. ನಿಸರ್ಗದ ಮಡಿಲಲ್ಲಿ ಹುಟ್ಟಿ ಬೆಳೆದ ಕುವೆಂಪು ಚಿಕ್ಕಂದಿನಿಂದಲೇ ಕವಿತೆ ಬರೆಯತೊಡಗಿದರು. ಮಕ್ಕಳನ್ನು ರಂಜಿಸುವ ಬೊಮ್ಮನಹಳ್ಳಿಯ ಕಿಂದರ ಜೋಗಿ, ಮೊದಲುಗೊಂಡು ಕೊಳಲು, ಅಗ್ನಿಹಂಸ, ಪಕ್ಷಿಕಾಶಿ, ಪ್ರೇಮಕಾಶ್ಮೀರ, ಕೋಗಿಲೆ ಮತ್ತು ಸೋವಿಯತ್ ರಷ್ಯಾ, ಕನ್ನಡ ಡಿಂಡಿಮ ಮುಂತಾದ ಅನೇಕ ಕವನ ಸಂಕಲಗಳನ್ನು ಮತ್ತು ಶ್ರೀ ರಾಮಾಯಣ ದರ್ಶನಂ ಎಂಬ ಮಹಾಕಾವ್ಯವನ್ನು ರಚಿಸಿದರು. ಕಾನೂರು ಹೆಗ್ಗಡಿತಿ, ಮಲೆಗಳಲ್ಲಿ ಮದುಮಗಳು ಎಂಬ ಶ್ರೇಷ್ಠ ಕಾದಂಬರಿಗಳನ್ನು ಬರೆದರು. ನಾಟಕ, ಪ್ರಬಂದ, ವಿಮರ್ಶೆ, ಜೀವನ ಚರಿತ್ರೆ ಹೀಗೆ ಕನ್ನಡ ಸಾಹಿತ್ಯದ ಅನೇಕ ಪ್ರಕಾರಗಳಲ್ಲಿ ಅಪಾರ ಸಾಹಿತ್ಯವನ್ನು ಸೃಷ್ಟಿಸಿದರು. ನೆನಪಿನ ದೋಣಿಯಲ್ಲಿ ಎಂಬ ಬೃಹತ್ ಆತ್ಮಕಥನವನ್ನು ಬರೆದರು. ಕುವೆಂಪು ಅವರ ಸಾಧನೆಗೆ ಮೈಸೂರು, ಬೆಂಗಳೂರು, ಕರ್ನಾಟಕ, ಗುಲಬರ್ಗಾ ವಿಶ್ವವಿದ್ಯಾಲಯಗಳು ಗೌರವ ಡಿ.ಲಿಟ್. ಪದವಿ ನೀಡಿವೆ. ಕನ್ನಡ ವಿಶ್ವವಿದ್ಯಾಲಯವು ನಾಡೋಜ ಎಂಬ ಗೌರವ ಪದವಿಯನ್ನು ನೀಡಿದೆ. ದೇಶದ ಅತ್ಯುನ್ನತ ಪುರಸ್ಕಾರಗಳಾದ ಪದ್ಮಭೂಷಣ, ಜ್ಞಾನಪೀಠ, ರಾಷ್ಟ್ರಕವಿ ಮತ್ತು ಪಂಪ ಪ್ರಶಸ್ತಿಗಳನ್ನು ಪಡೆದಿರುವರು.

ಆಶಯ

ಈ ಕವಿತೆಯನ್ನು ಕುವೆಂಪು ಅವರ ಪಕ್ಷಕಾಶಿ ಸಂಕಲನದಿಂದ ಆಯ್ಕೆ ಮಾಡಿಕೊಳ್ಳಲಾಗಿದೆ. ಕವಿಯ ಈ ಕಲ್ಪನೆಯೇ ಬೆರಗಾಗುವಂತಿದೆ. ಮಲೆನಾಡಿನ ಕವಿ ಪ್ರಕೃತಿಯ ರಮ್ಯ ದೃಶ್ಯಗಳನ್ನು ನೋಡಿ, ಆ ಸುಂದರ ಪರಿಸರವನ್ನು ದೇವರೇ ಸೃಷ್ಟಿಸಿ ಇದು ಸತ್ಯವೆಂದು ಸಾರಿದ ಹಾಗೆ ರುಜು ಮಾಡಿದ್ದಾನೆ. ಅದನ್ನು ಕವಿ ನೋಡಿ ಮೂಕವಿಸ್ಮಿತನಾಗಿದ್ದಾನೆ.

ಶಬ್ದಕೋಶ

ರುಜು=ಸಹಿ, ರಸವಶ=ಭಾವಾವೇಶ, ಬಿತ್ತರ=ವಿಸ್ತಾರ, ನೀರವ=ನಿಶ್ಯಬ್ದ, ಖಗರವ=ಪಕ್ಷಿಗಳ ದನಿ, ಹೊಂಬಿಸಲು=ತಂಪನೆಯ ಬಿಸಿಲು, ಇಕ್ಕೆಲ್ಲ=ಎರಡು ಕಡೆ, ನಾಕ=ಸ್ವರ್ಗ, ಜಿಹ್ವೆ=ನಾಲಗೆ, ಬಲಾಕಪಂಕ್ತಿ=ಬೆಳ್ಳಕ್ಕಿಸಾಲು, ಅವಾಙ್ಞಯ=ಅಸಾಹಿತ್ಯ.

ಪ್ರಶ್ನೆಗಳು

೧.         ಪ್ರಕೃತಿಯಲ್ಲಿ ಕವಿ ಕಂಡ ದೃಶ್ಯಗಳ ವೈಶಿಷ್ಟ್ಯವೇನು?

೨.         ಕವಿ ನಿಸರ್ಗ ಸೌಂದರ್ಯವನ್ನು ಹೇಗೆ ವರ್ಣಿಸಿದ್ದಾನೆ?

೩.         ನಿಸರ್ಗ ನಿರ್ಮಿತ ಸೌಂದರ್ಯವನ್ನು ಕಂಡ ಕವಿಯ ಅಭಿಪ್ರಾಯಗಳೇನು?

೪.         ದೇವರು ಯಾವುದಕ್ಕೆ ರುಜು ಮಾಡಿದನೆಂದು ಕವಿ ಭಾವಿಸುತ್ತಾನೆ?

 

ಹೆಚ್ಚಿನ ಓದು

ಪು.ತಿ.ನ. : ರಂಗವಲ್ಲಿ – ಕವನ

ಕುವೆಂಪು : ಹೂವು-ದೇವರು-ಕವನ