ಯಾವ ಮೋಹನಮುರಲಿ ಕರೆಯಿತು ದೂರ ತೀರಕೆ ನಿನ್ನದು?
ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು?

ಹೂವುಹಾಸಿಗೆ, ಚಂದ್ರ, ಚಂದನ, ಬಾಹುಬಂಧನ, ಚುಂಬನ;
ಬಯಕೆತೋಟದ ಬೇಲಿಯೊಳಗೆ ಕರಣಗಣದೀ ರಿಂಗಣ;

ಒಲಿದ ಮಿದುವೆದೆ, ರಕ್ತಮಾಂಸದ ಬಿಸಿದುಸೋಂಕಿನ ಪಂಜರ
ಇಷ್ಟೆ ಸಾಕೆಂದಿದ್ದೆಯಲ್ಲೊ! ಇಂದು ಏನಿದು ಬೇಸರ?

ಏನಿದೇನಿದು ಹೊರಳುಗಣ್ಣಿನ ತೇಲುನೋಟದ ಸೂಚನೆ?
ಯಾವ ಸುಮಧುರ ಯಾತನೆ? ಯಾವ ದಿವ್ಯದ ಯಾಚನೆ?

ಮರದೊಳಡಗಿದ ಬೆಂಕಿಯಂತೆ ಎಲ್ಲೊ ಮಲಗಿದೆ ಬೇಸರ;
ಏನೊ ತೀಡಲು ಏನೊ ತಾಗಲು ಹೊತ್ತಿ ಉರಿವುದು ಕಾತರ.

ಸಪ್ತಸಾಗರದಾಚೆಯೆಲ್ಲೋ ಸುಪ್ತ ಸಾಗರ ಕಾದಿದೆ,
ಮೊಳೆಯದಲೆಗಳ ಮೂಕ ಮರ್ಮರ ಇಂದು ಇಲ್ಲಿಗು ಹಾಯಿತೆ?

ವಿವಶವಾಯಿತು ಪ್ರಾಣ; ಹಾ! ಪರವಶವು ನಿನ್ನೀ ಚೇತನ;
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ?

ಯಾವ ಮೋಹನಮುರಲಿ ಕೆರೆಯಿತು ಇದ್ದಕಿದ್ದೊಲೆ ನಿನ್ನನು?
ಯಾವ ಬೃಂದಾವನವು ಚಾಚಿತು ತನ್ನ ಮಿಂಚಿದ ಕೈಯನು?

ಯಾವ ಮೋಹನಮುರಲಿ ಕರೆಯಿತೊ ದೂರತೀರಕೆ ನಿನ್ನದು
ಲೇಖಕರು

ತಮ್ಮ ಕಾವ್ಯಶಕ್ತಿಯಿಂದ ಆಧುನಿಕ ಕನ್ನಡ ಕಾವ್ಯ ಪರಂಪರೆಗೆ ವಿಶಿಷ್ಟ ಆಯಾಮ ನೀಡಿದ ಎಂ. ಗೋಪಾಲಕೃಷ್ಣ ಅಡಿಗರು (೧೯೧೮-೧೯೯೨) ಕುಂದಾಪುರ ತಾಲ್ಲೂಕಿನ ಮೊಗೇರಿಯಲ್ಲಿ ಜನಿಸಿದರು. ಮೈಸೂರಿನಲ್ಲಿ ವ್ಯಾಸಂಗ ಮಾಡಿ ಇಂಗ್ಲಿಷ್‌ನಲ್ಲಿ ಎಂ.ಎ. ಪದವಿಯನ್ನು ಪಡೆದರು. ಮೈಸೂರಿನ ಶಾರದ ವಿಲಾಸ ಕಾಲೇಜಿನಲ್ಲಿ ಅಧ್ಯಾಪಕವಾಗಿ ವೃತ್ತಿ ಆರಂಭಿಸಿದರು. ಅನಂತರ ಅಡಿಗರು ಕುಮಟಾದ ಕೆನರಾ ಕಾಲೇಜ್, ಮೈಸೂರಿನ ಸೈಂಟ್ ಫಿಲೋಮಿನ ಕಾಲೇಜು, ಸಾಗರದ ಲಾಲ್ ಬಹದ್ದೂರ್ ಕಾಲೇಜು, ಉಡುಪಿ ಪೂರ್ಣಪ್ರಜ್ಞ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ದುಡಿದರು. ಸಿಮ್ಲಾದ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಅಡ್ವಾನ್ಸಡ್ ಸ್ಟಡೀಸ್ ನಲ್ಲಿ ವಿಸಿಟಿಂಗ್ ಫೆಲೋ ಆಗಿ ಕೆಲಸ ಮಾಡಿ ನಿವೃತ್ತಿ ಹೊಂದಿದರು. ಕಟ್ಟುವೆವು ನಾವು, ಚಂಡಮದ್ದಳೆ, ಭೂಮಿಗೀತ, ವರ್ಧಮಾನ, ಮೂಲಕ ಮಹಾಶಯರು, ಸುವರ್ಣಪುತ್ಥಳಿ ಮುಂತಾದ ಕವನ ಸಂಕಲನಗಳನ್ನು ರಚಿಸಿದರು. ವಿಮರ್ಶಕರಾಗಿ, ಅನುವಾದಕರಾಗಿ ಹತ್ತಾರು ಕೃತಿಗಳನ್ನು ಬರೆದಿರುವ ಅಡಿಗರಿಗೆ ಕುಮಾರನ್ ಆಶಾನ್ ಪ್ರಶಸ್ತಿ, ಕಬೀರ್ ಸಮ್ಮಾನ ಪ್ರಶಸ್ತಿ, ರಾಜ್ಯ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಮತ್ತು ಪಂಪ ಪ್ರಶಸ್ತಿ ದೊರೆತಿವೆ. ೧೯೭೯ರಲ್ಲಿ ಧರ್ಮಸ್ಥಳದಲ್ಲಿ ನಡೆದ ೫೧ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಆಶಯ

ಈ ಕವಿತೆಯನ್ನು ಅಡಿಗರ ಸಮಗ್ರ ಕಾವ್ಯದಿಂದ ಆಯ್ದುಕೊಳ್ಳಲಾಗಿದೆ. ಕವಿ ಸಂವಾದಿಸುವ ‘ನಿನ್ನನು’ ಅಂದರೆ ಅದು ಪ್ರತಿ ವ್ಯಕ್ತಿಗೂ ಅನ್ವಯಿಸುವುದು. ಬದುಕಿನಲ್ಲಿ ವ್ಯಕ್ತಿಗೆ ಎರಡು ಹಂತಗಳಿವೆ. ಒಂದು ಲೌಕಿಕ, ಇನ್ನೊಂದು ಆಧ್ಯಾತ್ಮ. ಹಾಗೆ ನೋಡಿದರೆ ಇವೆರಡನ್ನೂ ಪ್ರತ್ಯೇಕಿಸಿಲು ಅವಕಾಶ ಇರಬಾರದು. ಆದರೂ ಇಹದ ಭೌತಿಕ ಬದುಕನ್ನೇನಂಬುದಕ್ಕಿಂತ ಕಣ್ಣಿಗೆ ಕಾಣದ, ಮನಕ್ಕೆ ಅರಿವಾಗುವ ಬದುಕಿನೆಡೆಗೆ ಸಾಗುವುದು ಪ್ರತಿವ್ಯಕ್ತಿಯ ಗುರಿಯಾಗಬೇಕು ಎಂದು ಕವಿ ಈ ಕವಿತೆಯಲ್ಲಿ ತಿಳಿಸಿದ್ದಾನೆ.

ಶಬ್ದಕೋಶ

ಕರಣಗಣ=ಇಂದ್ರಿಯಗಳ ಸಮೂಹ. ವಿವಶ=ನಿಯಂತ್ರಣ ಕಳೆದುಕೊಳ್ಳು. ಪರವಶ=ಅನ್ಯರ ಅಧೀನವಾಗು.

ಪ್ರಶ್ನೆಗಳು

೧.         ಕವಿ ಕರೆದಿರುವ ‘ನಿನ್ನನು’ ಅಂದರೆ ಯಾರು? ವಿವರಿಸಿರಿ.

೨.         ಮುರಲಿಯ ನಾದ ಕೇಳಿದ ಜೀವಕ್ಕೆ ಆಗುವ ತಳಮಳವನ್ನು ಬರೆಯಿರಿ.

೩.         ‘ಇಷ್ಟೆ ಸಾಕೆಂದಿದ್ದೆಯಲ್ಲೋ’ ಎಂದು ಕವಿ ಯಾವ ಅರ್ಥದಲ್ಲಿ ಹೇಳುತ್ತಾನೆ?

೪.         ದೂರ ತೀರಕೆ ಕರೆಯುವ ಮುರಲಿಯ ದನಿ ಕೇಳಿ ವ್ಯಕ್ತಿ ಆಗುವ ತಳಮಳವನ್ನು ವಿವರಿಸಿರಿ.

೫.         ಕರೆ ಎಲ್ಲಿಂದ ಬರುತ್ತದೆ? ಅದು ಏನನ್ನು ಧ್ವನಿಸುತ್ತದೆ?

ಹೆಚ್ಚಿನ ಓದು

ದ.ರಾ. ಬೇಂದ್ರೆ : ಜೋಗಿ – ಕವನ

ದ.ರಾ. ಬೇಂದ್ರೆ : ನಾದಲೀಲೆ – ಕವನ

ಪು.ತಿ.ನ : ಕೃಷ್ಣನ ಕೊಳಲಿನ ಕರೆ – ಕವನ