ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು.
ಒಳಗೆ ಬರಲಪ್ಪಣೆಯೆ ದೊರೆಯೇ?
ನವಿಲೂರ ಮನೆಯಿಂದ ನುಡಿಯೊಂದ ತಂದಿಹೆನು-
ಬಳೆಯ ತೊಡಿಸುವುದಿಲ್ಲ ನಿಮಗೆ.

ಮುಡಿದ ಮಲ್ಲಿಗೆಯರಳು ಬಾಡಿಲ್ಲ, ರಾಯರೇ,
ತೌರಿನಲಿ ತಾಯಿ ನಗುತಿಹರು.
ಕುಡಿದ ನೀರಲುಗಿಲ್ಲ, ಕೊರಗದಿರಿ, ರಾಯರೇ-
ಅಮ್ಮನಿಗೆ ಬಳೆಯ ತೊಡಿಸಿದರು.

ಅಂದು ಮಂಗಳವಾರ ನವಿಲೂರ ಕೇರಿಯಲಿ
ಓಲಗದ ಸದ್ದು ತುಂಬಿತ್ತು;
ಬಳೆಯ ತೊಡಿಸಿದರಂದು ಅಮ್ಮನಿಗೆ ತೌರಿನಲಿ
ಅಂಗಳದ ತುಂಬ ಜನವಿತ್ತು.

ಹಬ್ಬದೂಟವನುಂಡು ಹಸೆಗೆ ಬಂದರು ತಾಯಿ,
ಹೊಳೆದಿತ್ತು ಕೊರಳಿನ ಪದಕ.
ಒಬ್ಬರೇ ಹಸೆಗೆ ಬಂದರು ತಾಯಿ ಬಿಂಕದಲಿ
ಕಣ್ತುಂಬ ನೋಡಿದೆನು ಮುದುಕ.

ಸಿರಿಗೌರಿಯಂತೆ ಬಂದರು ತಾಯಿ ಹಸೆಮಣೆಗೆ,
ಸೆರಗಿನಲಿ ಕಣ್ಣೇರನೊರಸಿ;
ಸುಖದೊಳಗೆ ನಿಮ್ಮ ನೆನೆದರು ತಾಯಿ ಗುಣವಂತೆ,
ದೀಪದಲಿ ಬಿಡುಗಣ್ಣ ನಿಲಿಸಿ.

ಬೇಕಾದ ಹಣ್ಣಿಹುದು, ಹೂವಿಹುದು ತೌರಿನಲಿ
ಹೊಸಸೀರೆ, ರತ್ನದಾಭಾರಣ.
ತಾಯಿ ಕೊರಗುವರಲ್ಲಿ ನೀವಿಲ್ಲದೂರಿನಲಿ
ನಿಮಗಿಲ್ಲ ಒಂದು ದನಿ ಕರುಣ.

ದಿನವಾದ ಬಸುರಿ ಉಸ್ಸೆಂದು ನಿಟ್ಟುಸಿರೆಳೆದು
ಕುದಿಯಬಾರದು, ನನ್ನ ದೊರೆಯೇ;
ಹಿಂಡಬಾರದು ದುಂಡುಮಲ್ಲಿಗೆಯ ದಂಡೆಯನು;
ಒಣಗಬಾರದು ಒಡಲ ಚಿಲುಮೆ.

ಮುಳಿಸು ಮಾವನ ಮೇಲೆ; ಮಗಳೇನ ಮಾಡಿದಳು?
ನಿಮಗೇತಕೀ ಕಲ್ಲುಮನಸು?
ಹೋಗಿ ಬನ್ನಿರಿ, ಒಮ್ಮೆ, ಕೈ ಮುಗಿದು ಬೇಡುವೆನು-
ಅಮ್ಮನಿಗೆ ನಿಮ್ಮದೇ ಕನಸು.

ಲೇಖಕರು

ಆಧುನಿಕ ಕನ್ನಡ ಕಾವ್ಯ ಸಂದರ್ಭದ ಮುಖ್ಯ ಕವಿಗಳಲ್ಲಿ ಒಬ್ಬರಾದ ಕೆ.ಎಸ್. ನರಸಿಂಹಸ್ವಾಮಿ (೧೯೧೫-೨೦೦೪) ಮಂಡ್ಯ ಜಿಲ್ಲೆಯ, ಕಿಕ್ಕೇರಿಯಲ್ಲಿ ಜನಿಸಿದರು. ಮೈಸೂರು ಮತ್ತು ಬೆಂಗಳೂರಲ್ಲಿ ವ್ಯಾಸಂಗ ಮಾಡಿ ಸರಕಾರಿ ಹುದ್ದೆಯೊಂದರಲ್ಲಿ ಸೇವೆ ಸಲ್ಲಿಸಿ, ೧೯೭೦ರಲ್ಲಿ ನಿವೃತ್ತರಾದರು. ಕೆ.ಎಸ್. ನರಸಿಂಹಸ್ವಾಮಿ ಅವರ ಮೊದಲ ಕವನ ಸಂಕಲನ ಮೈಸೂರ ಮಲ್ಲಿಗೆ ೧೯೪೩ ರಲ್ಲಿ ಪ್ರಕಟವಾಯಿತು. ಈ ಸಂಕಲನದ ಕವಿತೆಗಳು ಜನಪ್ರಿಯವಾದವು. ಒಂದಾದ ಮೇಲೆ ಒಂದರಂತೆ ಸುಮಾರು ೧೬ ಕವನ ಸಂಕಲನಗಳು ಪ್ರಕಟವಾಗಿವೆ. ೨೦೦೪ ರಲ್ಲಿ ಅವರ ಸಮಗ್ರಕಾವ್ಯ ಪ್ರಕಟವಾಗಿದೆ. ಕೆ.ಎಸ್. ನರಸಿಂಹಸ್ವಾಮಿ ಅವರು ತಮ್ಮ ತೆರೆದ ಬಾಗಿಲು ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಪಂಪ ಪ್ರಶಸ್ತಿ ಸೇರಿದಂತೆ ಹಲವಾರು ಗೌರವಗಳನ್ನು ಪಡೆದಿದ್ದಾರೆ.

ಆಶಯ

ಈ ಕವನವನ್ನು ಮಲ್ಲಿಗೆಯ ಮಾಲೆ ಸಂಗ್ರಹದಿಂದ ಆರಿಸಿಕೊಳ್ಳಲಾಗಿದೆ. ಕನ್ನಡ ಸಂಸ್ಕೃತಿಯಲ್ಲಿ ಬಳೆಗಾರನಿಗೆ ಮಹತ್ವದ ಸ್ಥಾನವಿದೆ. ವೃತ್ತಿಯಿಂದ ಬಳೆಗಾರನಾದರೂ ಅವನು ಸಮಾಜದಲ್ಲಿ ಮನುಷ್ಯ ಸಂಬಂಧಗಳನ್ನು ಬೆಸೆವ ಮಾಧ್ಯಮವಾಗಿ ಸೇವೆ ನಿರ್ವಹಿಸುವವನೂ ಆಗಿದ್ದಾನೆ. ಈ ಕವಿತೆಯಲ್ಲಿ ವ್ಯಕ್ತಿಯೊಬ್ಬ ಮಾನವ ಮೇಲಿನ ಕೋಪದಿಂದ ತವರಿನಲ್ಲಿರುವ ಹೆಂಡತಿಯ ಮೇಲೆಯೂ ಮುನಿಸಿಕೊಂಡಿದ್ದಾನೆ. ಹೆಂಡತಿಯು ತವರಿನಲ್ಲಿ ಒಂದು ಸಂಭ್ರಮದ ವಾತಾವರಣದಲ್ಲಿರುವಾಗ ಗಂಡನನ್ನು ನೆನೆದು ಅನುಭವಿಸುವ ನೋವನ್ನು ಕಂಡುಬಂದ ಬಳೆಗಾರನು ರಾಯರಿಗೆ ನಿವೇದಿಸುತ್ತಾನೆ.

ಪದಕೋಶ

ನುಡಿ=ಮಾತು, ಸುದ್ದಿ. ಹೆರಳು=ಜಡೆ. ಹಸೆ=ಮುದುಮಕ್ಕಳು ಕೂಡುವ ಹಾಸಿಗೆ, ಮಣೆ. ಪದಕ=ತಾಳಿ. ಕರುಣ=ಕುರುಣೆ, ದಯೆ. ದಂಡೆ=ಮಾಲೆ, ಸರ. ಮುಳಿಸು=ಮನಿಸು.

ಪ್ರಶ್ನೆಗಳು

೧.         ಬಳೆಗಾರ ಚೆನ್ನಯ್ಯ ಯಾರಿಗೆ ಯಾವ ನುಡಿಯನ್ನು ತಂದಿರುವನು?

೨.         ತವರೂರಿನಲ್ಲಿರುವ ರಾಯರ ಹೆಂಡತಿಯ ಚಿತ್ರಣವನ್ನು ಕವಿ ಹೇಗೆ ವರ್ಣಿಸಿರುವನು?

೩.         ರಾಯರ ಹೆಂಡತಿ ಹಸೆಮಣಿಗೆ ಹೇಗೆ ಬಂದಳು?

೪.         ತವರೂರಿನಲ್ಲಿರುವ ರಾಯರ ಹೆಂಡತಿ ಯಾರ ನಿರೀಕ್ಷೆಯಲ್ಲಿ ಕೊರಗುವಳು? ಕವಿ ಮಾತಿನಲ್ಲಿ ವರ್ಣಿಸಿರಿ.

೫.         ಬಳೆಗಾರ ಚೆನ್ನಯ್ಯನ ನಿವೇದನೆ ಏನು? ವಿವರಿಸಿರಿ.

 

ಹೆಚ್ಚಿನ ಓದು

ಅಂಟಿಕೆ – ಪಂಟಿಕೆ ಪದಗಳು
ಭಾಗವಂತಿಕೆ ಪದಗಳು