ಕನ್ನಡ ವಿಶ್ವವಿದ್ಯಾಲಯ ಕನ್ನಡ ಸಂಸ್ಕೃತಿಯ ಬಹುತ್ವದ ನೆಲೆಗಳನ್ನು ಹುಡುಕುವ ಗಟ್ಟಿಗೊಳಿಸುವ ಹರಡುವ ಕಾಯಕವನ್ನು ಕಳೆದ ಹನ್ನೆರಡು ವರುಷಗಳಲ್ಲಿ ನೋಂಪಿಯಂತೆ ನಡೆಸಿಕೊಂಡು ಬಂದಿದೆ. ಕನ್ನಡ ಸಂಸ್ಕೃತಿಯನ್ನು ಮತ್ತೆ ಮತ್ತೆ ನಿರ್ವಚನ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ಕನ್ನಡ ವಿಶ್ವವಿದ್ಯಾಲಯವು ಒಂದು ಆಡುಂಬೊಲವಾಗಿ ಕಾರ್ಯ ನಿರ್ವಹಿಸಿದೆ. ನಮಗೆ ಗೊತ್ತಿರುವ ಸಂಸ್ಕೃತಿಯ ಅರ್ಥಗಳ ಆಚೆಗೆ ಅನೂಹ್ಯ ಲೋಕಗಳ ಕಡೆಗೆ ತನ್ನನ್ನು ಮತ್ತು ಕನ್ನಡಿಗರನ್ನು ಒಯ್ಯುವ ಪಯಣದ ದಾರಿಗಳನ್ನು ರೂಪಿಸುವ ಮಹತ್ವದ ಸಾಹಸದ ಹೆಜ್ಜೆಗಳು ಮೂಡಿಬಂದಿವೆ. ಇದು ನಿರಂತರ ನಡೆಯಬೇಕಾದ ಬಹುದಾರಿಗಳ ಮಹಾಯಾನ.

ಕನ್ನಡ ವಿಶ್ವವಿದ್ಯಾಲಯವು ಕರ್ನಾಟಕ ರಾಜ್ಯದ ಕಲಾಶಾಲೆಗಳನ್ನು ತನ್ನ ತೆಕ್ಕೆಗೆ ಒಗ್ಗಿಸಿಕೊಂಡದ್ದು ಅಂತಹ ಒಂದು ಮಹತ್ವದ ಹೆಜ್ಜೆ. ಬಣ್ಣಗಳಲ್ಲಿ ಮತ್ತು ಕುಂಚಗಳಲ್ಲಿ ಮಾತನಾಡುವ ಈ ಕಲೆ ಅಷ್ಟಕ್ಕೆ ತೃಪ್ತವಾಗದೆ ಸಂವಹನದ ಇತರ ಸಾಧ್ಯತೆಗಳನ್ನು ಸೂರೆಗೊಂಡಾಗ ಮಾತ್ರ ಹೊಸ ಆಯಾಮಗಳನ್ನು ಪಡೆಯಬಲ್ಲವು, ಹೊಸ ಅರ್ಥದ ಬಣ್ಣಗಳು ಮೂಡಬಲ್ಲವು. ಈ ದೃಷ್ಟಿಯಿಂದಲೆ ಕಲಾಶಾಲೆಯ ವಿದ್ಯಾರ್ಥಿಗಳಿಗೆ ಕನ್ನಡ ವಿಶ್ವವಿದ್ಯಾಲಯ ರೂಪಿಸಿದ ಕನ್ನಡ ಪಠ್ಯ ನುಡಿದೀಪ-೧ ಮಹತ್ವದ ಸಂಕಲನ. ಬಣ್ಣಗಳ ಜೊತೆಗೆ ಭಾಷೆಯಲ್ಲಿ ಮಾತನಾಡಲು ಕಲಿತಾಗ ಬಣ್ಣಗಳಿಗೆ ಮಾತುಬರುತ್ತದೆ, ಮಾತುಗಳು ಹೊಸ ಬಣ್ಣವನ್ನು ತಾಳುತ್ತವೆ.

ಕುವೆಂಪು, ಅಡಿಗ, ಕೆ.ಎಸ್.ನ ಅವರ ಕವನಗಳು, ಕೆ. ಸದಾಶಿವ, ಕೃಷ್ಣಕುಮಾರ ಕಲ್ಲೂರ, ಕೊಡಗಿನ ಗೌರಮ್ಮ ಅವರ ಕತೆಗಳು, ಗೊರೂರು ಅವರ ಲಲಿತ ಪ್ರಬಂಧ, ಬೋರಲಿಂಗಯ್ಯ ಅವರ ಪ್ರವಾಸ ಕಥನ, ಶಿವರಾಮ ಕಾರಂತರ ವೈಚಾರಿಕ ಲೇಖನ ಮತ್ತು ಸಿದ್ದಲಿಂಗಯ್ಯನವರ ಆತ್ಮಚರಿತ್ರೆ – ಹೀಗೆ ನುಡಿದೀಪ ೧ರ ಒಟ್ಟು ಆಯ್ಕೆಯಲ್ಲಿ ಕನ್ನಡ ಸಂಸ್ಕೃತಿಯ ವಿಶಿಷ್ಟವಾದ ನೆಲೆಗಳು ಮತ್ತು ನೋಟಗಳು ದೊರೆಯುತ್ತವೆ. ನಿಸರ್ಗದ ಅದ್ಭುತ ರಮ್ಯ ನೋಟವನ್ನು ಲೌಕಿಕದಲ್ಲಿ ಅಲೌಕಿಕಗೊಳಿಸುವ ಕುವೆಂಪು ಅವರ ‘ದೇವರು ರುಜು ಮಾಡಿದನು’ ಕವನದ ಜೊತೆಗೆ, ‘ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ?’ ಎಂದು ಹಾತೊರೆಯುವ ಅಡಿಗರ ‘ಮೋಹನ ಮುರಳಿ’ ಕವನಗಳನ್ನು ಮುಖಾಮುಖಿಯಾಗಿಸಿದಾಗ ಕನ್ನಡದ ಕವಿಮನಸ್ಸುಗಳು ಧ್ಯಾನಿಸಿದ ಬಗೆಗಳನ್ನು ಗಮನಿಸಬಹುದು. ಇವುಗಳ ನಡುವೆಯೆ ಕೆ.ಎಸ್. ನರಸಿಂಹಸ್ವಾಮಿ ಅವರ ತೀರಾ ಗ್ರಾಮೀಣ ಕುಟುಂಬದ ಲೌಕಿಕ ಬದುಕಿನ ‘ಬಳೆಗಾರನ ಹಾಡು’ ಕಳೆದು ಹೋದ ಕನ್ನಡ ಬದುಕಿನ ಒಂದು ಪುಟವನ್ನು ತೆರೆದು ತೋರಿಸುತ್ತದೆ. ಕನ್ನಡ ಕಥಾ ಸಾಹಿತ್ಯದ ಮೂರು ಮಾದರಿಗಳನ್ನು ಇಲ್ಲಿ ಕೊಡಲಾಗಿದೆ. ದೊಡ್ಡವರ ವಿರಸ ಮತ್ತು ಮಕ್ಕಳ ವಿರಸದ ಅಂತರವನ್ನು ಸೂಚಿಸುತ್ತಲೇ ನಮ್ಮ ವಯಸ್ಕ ಬದುಕು ಕಳೆದುಕೊಳ್ಳುತ್ತಿರುವ ಮುಗ್ಧತೆಯ ಬಾಲ್ಯದ ನೆನಪುಗಳ ಚಿತ್ರ ಕೆ.ಸದಾಶಿವರ ಕತೆ ‘ರಾಮನ ಸವಾರಿ ಸಂತೆಗೆ ಹೋದದ್ದು’. ‘ಗುಬ್ಬಿಗಳ ಸಂಸಾರ’ ಕತೆ ಮನುಷ್ಯ ಬದುಕಿನ ನಶ್ವರದ ರೂಪಕವಾಗಿ ಕಾಣಿಸಿಕೊಂಡು ಸಾವಿನ ಭೀತಿಯ ಜೊತೆಗೆ ಛಿದ್ರೀಕರಣಗೊಳ್ಳುವ ನಮ್ಮ ಆಧುನಿಕ ಬದುಕಿನ ಕಡೆಗೆ ವಿಶೇಷ ಬೆಳಕನ್ನು ಚೆಲ್ಲುತ್ತದೆ. ಸರಳವಾಗಿ ಕಥೆ ಹೇಳುತ್ತಲೇ ಎಳೆತನದ ಚೇಷ್ಟೆ, ಗಂಭೀರ ಬದುಕಾಗಿ ರೂಪಾಂತರಗೊಂಡಾಗ ಅದರಲ್ಲಿ ಪಾಲುಗೊಳ್ಳುವ ಹೆಣ್ಣಿನ ಸಂಭ್ರಮ ತಲ್ಲಣಗಳು ಕೊಡಗಿನ ಗೌರಮ್ಮನವರ ‘ಮರದ ಬೊಂಬೆ’ ಕತೆಯಲ್ಲಿದೆ. ಅನೇಕ ಬಾರಿ ಹೆಣ್ಣೇ ಮರದ ಬೊಂಬೆಯಂತಿರುವ ಗಂಡನ್ನು ಮನುಷ್ಯನನ್ನಾಗಿ ಪರಿವರ್ತಿಸುವ ಜವಾಬ್ದಾರಿಯ ಹೆಣ್ಣಿನ ಸ್ಥಿತಿಯನ್ನು ಧ್ವನಿಸುತ್ತದೆ. ಗೊರೂರು ಅವರ ‘ನಮ್ಮ ಎಮ್ಮೆಗೆ ಮಾತು ತಿಳಿಯುವುದೇ’ ಪ್ರಬಂಧ ಅದ್ಭುತ ವ್ಯಂಗ್ಯಗುಣವುಳ್ಳ ಬರಹ. ಎಲ್ಲ ರೀತಿಯ ಸಂವೇದನೆಗಳನ್ನು ಕಳೆದುಕೊಳ್ಳುತ್ತಿರುವ ಆಧುನಿಕ ಜಗತ್ತಿನ ಮನುಷ್ಯರ ಪಾಲಿಗಂತೂ ಇದೊಂದು ವ್ಯಂಗ್ಯರೂಪಕ. ಗಾಂಧಿ ಯುಗದ ಸರಳತೆ, ಸೂಕ್ಷ್ಮತೆ ಮತ್ತು ಪ್ರೀತಿ ಗುಣಗಳನ್ನುಳ್ಳ ಗೊರೂರು ಕನ್ನಡ ಸಂಸ್ಕೃತಿಯ ಒಂದು ಅಪೂರ್ವ ಸನ್ನಿವೇಶವನ್ನು ಇಲ್ಲಿ ಪ್ರಬಂಧವನ್ನಾಗಿಸಿದ್ದಾರೆ. ಹಿ.ಚಿ. ಬೋರಲಿಂಗಯ್ಯನವರ ‘ಕುದರಮುಖದ ಹಾದಿಯಲ್ಲಿ’ ಪ್ರವಾಸ ಕಥನವು ನಿಸರ್ಗ ಮತ್ತು ಮನುಷ್ಯರ ಸಂಬಂಧವನ್ನು ಮತ್ತೆ ಹೊಸದಾಗಿ ಅರ್ಥೈಸುವ ಕಥನ. ಬುಡಕಟ್ಟು ಜನರ ಸಂಸ್ಕೃತಿ ನಿಸರ್ಗದೊಂದಿಗೆ ಹೊಂದಿರುವ ಅವಿನಾಭಾವ ಸಂಬಂಧವನ್ನು ಒಡೆಯಲು ಪ್ರಯತ್ನಿಸಿದಾಗಲೆಲ್ಲ ಕರ್ನಾಟಕ ತಲ್ಲಣಗೊಳ್ಳುತ್ತ ಬಂದಿದೆ. ಸಾಂಸ್ಕೃತಿಕ ಮಾನವ ವಿಜ್ಞಾನದ ಓದು, ಗ್ರಾಮೀಣ ಜಾನಪದದ ನೇರ ಅನುಭವಗಳ ಹಿನ್ನೆಲೆಯಲ್ಲಿ ಶಿವರಾಮ ಕಾರಂತರ ‘ನಮ್ಮ ಅಳತೆಯನ್ನು ಮೀರಲಾರದ ದೇವರು’ ಎಲ್ಲ ಕಾಲಕ್ಕೂ ಒಂದು ಮಹತ್ವದ ಬರಹ. ದೇವರ ಕುರಿತ ವೈಚಾರಿಕ ಲೇಖನಗಳಲ್ಲಿ ಇದು ತನ್ನ ಅನುಭವ ಪ್ರಮಾಣ ಮತ್ತು ಚಿಂತನೆಯ ಬಲಗಳ ಕಾರಣಕ್ಕಾಗಿ ಅಪೂರ್ವವಾದುದು. ಜನಪದರು ತಮ್ಮ ತಮ್ಮ ಅಳವು ಮತ್ತು ಅಳತೆಗಳಿಗೆ ಅನುಗುಣವಾಗಿ ಕಟ್ಟಿಕೊಂಡ ದೇವರುಗಳ ಆಕಾರ ಮತ್ತು ಪ್ರಮಾಣಗಳನ್ನು ಇಲ್ಲಿ ಕಾರಂತರು ವಿವರಿಸಿದ್ದಾರೆ. ಚಿತ್ರ ಕಲಾವಿದರಿಗೆ ದೇವರನ್ನು ಬಹುಬಗೆಗಳಲ್ಲಿ ಕಲ್ಪಿಸಿಕೊಳ್ಳಲು ಇದು ನೆರವಾಗಬಲ್ಲದು. ಸಿದ್ಧಲಿಂಗಯ್ಯನವರ ’ಊರುಕೇರಿ’ ಸಹಜ ಹಾಸ್ಯ, ವ್ಯವಸ್ಥೆಯ ಗೇಲಿ ಮತ್ತು ಪ್ರಾಮಾಣಿಕ ನಿರೂಪಣೆಯಿಂದ ಕನ್ನಡದಲ್ಲಿ ವಿಶಿಷ್ಟ ಆತ್ಮಕಥನವಾಗಿ ಜನಪ್ರಿಯವಾಗಿದೆ. ತಮ್ಮ ಸೂಕ್ಷ್ಮಕಣ್ಣಿನಿಂದ ಮತ್ತು ತುಂಟ ಮಾತುಗಳಿಂದ ಕವಿ ಸಿದ್ಧಲಿಂಗಯ್ಯನವರು ಬಾಲ್ಯದ ಬೆಳವಣಿಗೆಯನ್ನು ಚಿತ್ರಿಸುವ ಬಗೆ ಕನ್ನಡ ಸಂಸ್ಕೃತಿಯ ಅಧ್ಯಯನ ದೃಷ್ಟಿಯಿಂದಲೂ ಮುಖ್ಯವಾದುದು, ಚಿತ್ರಗಾರರ ಬಣ್ಣರೇಖೆಗಳಂತೆ ಸಿದ್ಧಲಿಂಗಯ್ಯನವರ ಆತ್ಮ ಕಥನದ ರೇಖೆಗಳು ಹೊಸ ಅರ್ಥಗಳನ್ನು ಕೊಡುತ್ತವೆ.

ಇಂತಹ ಸಂಸ್ಕತಿನಿಷ್ಠ ಮತ್ತು ವಿಶಿಷ್ಟ ನುಡಿದೀಪವನ್ನು ಕನ್ನಡದ ಮಹತ್ವದ ಕಥೆಗಾರರಾದ ಕನ್ನಡ ವಿಶ್ವವಿದ್ಯಾಲಯದ ಡಾ. ಕರೀಗೌಡ ಬೀಚನಹಳ್ಳಿ ಮತ್ತು ಡಾ. ಅಮರೇಶ ನುಗಡೋಣಿ ಅವರು ತಮ್ಮ ಸೃಜನಶೀಲ ಮನಸ್ಸಿನಿಂದ ಆಯ್ಕೆ ಮಾಡಿ ಸಂಪಾದಿಸಿ ಕೊಟ್ಟಿದ್ದಾರೆ. ಅವರಿಗೆ ಕನ್ನಡ ವಿಶ್ವವಿದ್ಯಾಲಯದ ಪ್ರೀತಿಯ ಕೃತಜ್ಞತೆಗಳು. ಈ ಕನ್ನಡ ಪಠ್ಯವನ್ನು ಅಂದವಾಗಿ ಕಲಾತ್ಮಕವಾಗಿ ಮುದ್ರಿಸಿ ಪ್ರಕಟಿಸಿರುವ ಪ್ರಸಾರಾಂಗದ ನಿರ್ದೇಶಕ ಡಾ.ಹಿ.ಜಿ. ಬೋರಲಿಂಗಯ್ಯ, ಸಹಾಯಕ ನಿರ್ದೇಶಕ ಸುಜ್ಞಾನಮೂರ್ತಿ ಅವರಿಗೆ ಮತ್ತು ಕಲಾವಿದ ಕೆ.ಕೆ. ಮಕಾಳಿ ಅವರಿಗೆ ಅಭಿನಂದನೆಗಳು.

ಬಿ.ಎ. ವಿವೇಕ ರೈ
ಕುಲಪತಿ