ನಮ್ಮ ನಾಡು ಎಮ್ಮೆಯ ನಾಡು. ಮಹಿಷಮಂಡಲವೆಂಬುದು ನಾವು ಹೆಮ್ಮೆಯಿಂದ ಹೇಳಿಕೊಳ್ಳುವ ಹೆಸರು. ನಮ್ಮ ರಾಜರಿಗೆ ಮಹಿಷಾಸುರಮರ್ದಿನಿ ದೇವರು. ನಾವೆಲ್ಲಾ ಎಮ್ಮೆಯ ಹಾಲಿನಿಂದಲೇ ಬೆಳೆದವರು. ಎಮ್ಮೆ ಹೀಗೆ ನಮಗೆ ದೇವರಾದುದರಿಂದಲೇ ನಮ್ಮ ದೇಶದಲ್ಲಿ ಇತರ ದೇಶಗಳಿಗಿಂತ ಎಮ್ಮೆ ಪ್ರಾಬಲ್ಯ ಹೆಚ್ಚು.

ಇನ್ನು ನಮ್ಮ ಮನೆಯ ಮಾತು. ನಮಗೆ ಎಮ್ಮೆ ಪ್ರಕೃತಿಯಂತೆ ಶಾಶ್ವತ. ಎಮ್ಮೆ ಇಲ್ಲದ ಕಾಲ ನಮ್ಮಲ್ಲಿ ಇಲ್ಲವೇ ಇಲ್ಲ. ಮನೆಯ ಯಜಮಾನರ ವಂಶವನ್ನೂ ಹಿರಿಯರನ್ನೂ ಮೂರು ತಲೆ ನಾಲ್ಕು ತಲೆಗಳಿಂದ ಗುರುತಿಸುವಂತೆ ನಮ್ಮ ಮನೆಯ ಎಮ್ಮೆಯ ಮೂಲವನ್ನೂ ನಾಲ್ಕು ತಲೆಗಳಿಂದ ಗುರುತಿಸಬಹುದು. ಇದು ಹೀರೇಗೌಡ ಹಳ್ಳಿ ಎಮ್ಮೆ. ಇದರ ಹೆಸರು ದೊಡ್ಡಿ. ಇದು ಒಂಭತ್ತು ಕರು ಹಾಕಿದೆ. ಇದರ ನಾಲ್ಕನೆಯ ಕರು ಬಿಳಿಕೋಡಿನ ಎಮ್ಮೆ. ಅದರ ಮೂರನೆಯ ಕರು ಸಣ್ಣ ಎಮ್ಮೆ. ಅದರ ಎರಡನೆಯ ಕರು ಕಡಸು. ಸಣ್ಣೆಮ್ಮೆಯ ಮೊದಲನೆ ಕರು ಈಗಾಗಲೇ ಎರಡು ಕರು ಹಾಕಿದೆ. ಹೀಗೆ ನಮ್ಮ ಮನೆಯ ಎಮ್ಮೆಯ ವಂಶವೃಕ್ಷ ರಾಜಮಹಾರಾಜರ ವಂಶವೃಕ್ಷಗಳಿಗಿಂತ ಹೆಚ್ಚು ಸ್ಪಷ್ಟವೂ ಶುದ್ಧವೂ ನೇರವೂ ಆಗಿದೆ. ಸಣ್ಣ ಎಮ್ಮೆಯ ಸಾಧು ಸ್ವಭಾವವನ್ನೂ ಅಂದವಾದ ಕೋಡುಗಳನ್ನೂ, ಅಷ್ಟು ಸಣ್ಣ ಕೆಚ್ಚಲಿಗೆ ಅಷ್ಟೊಂದು ಹಾಲನ್ನೂ ನೋಡಿ ಅನೇಕರು, ಅದರ ಅಪ್ಪ, ಅಮ್ಮ. ತಳಿ ಯಾವುದೆಂದು ಪದೇ ಪದೇ ವಿಚಾರಿಸಿಕೊಂಡು ಹೋಗುತ್ತಾರೆ. ಈ ಕಾರಣಗಳಿಗಾಗಿ ನಮ್ಮ ಎಮ್ಮೆಯ ವಂಶವೃಕ್ಷವನ್ನಿಡುವುದು ನನಗೆ ಅವಶ್ಯಕ.

ನಮ್ಮ ಮನೆಗೆ ಎಮ್ಮೆ ಪ್ರಕೃತಿಯಂತೆ ಶಾಶ್ವತ ಎಂದು ಹೇಳಿದೆ. ನಮ್ಮ ಮನೆಯಲ್ಲಿ ಯಾವಾಗಲೂ ಎಮ್ಮೆಗಳು ಇದ್ದೇ ಇರುತ್ತವೆ. ಆದರೆ ಈ ಎಲ್ಲಾ ಎಮ್ಮೆಗಳೂ ಹಿರೇಗೌಡ್ನ ಹಳ್ಳಿಯ ದೊಡ್ಡ ಎಮ್ಮೆಯ ತಳಿಗಳೇ ಎಂದು ನಮ್ಮ ಹಿರಿಯರು ಹಟದಿಂದ ವಾದಿಸುತ್ತಾರೆ. ಹಿರೇಗೌಡ್ನ ಹಳ್ಳಿಯ ಆ ದೊಡ್ಡ ಎಮ್ಮೆಗೆ ಈಗಾಗಲೇ ಮುವತ್ತು ನಲವತ್ತು ವರುಷಗಳಾಗಿರಬೇಕು. ಆದರೆ ಅದರ ತಳಿಗಳ ಸಂಖ್ಯೆ ಹೆಚ್ಚಾಗಿ ಬೆಳೆದಿರುವುದರಿಂದ ಯಾವುದರ ಅಪ್ಪ ಅಜ್ಜಿ ಯಾರು ಎಂದು ಗುರುತಿಸುವುದು ಅಸಾಧ್ಯವಾಗುತ್ತಿದೆ. ಆದರೆ ಇಷ್ಟು ಖಂಡಿತ. ನಮಗೆ ಗಾಳಿ, ನೀರು, ನದಿ, ಮರ, ಕೆರೆ, ಹೂವು, ಕಾಡು ಹೇಗೆ ಪ್ರಕೃತಿಯೇ ಹಾಗೆಯೇ ಎಮ್ಮೆಯೂ ಪ್ರಕೃತಿ. ಜನ ಬರಬಹುದು; ಜನ ಹೋಗಬಹುದು; ಜನ ಹುಟ್ಟಬಹುದು; ಜನ ಸಾಯಬಹುದು; ರಾಜ ಬದಲಾಯಿಸಬಹುದು; ರಾಜ್ಯದಲ್ಲಿ ಕ್ರಾಂತಿಯಾಗಬಹುದು; ಆದರೆ ನಮ್ಮ ಕೊಟ್ಟಿಗೆಯಲ್ಲಿ ಮಾತ್ರ ಎಮ್ಮೆ ನಿತ್ಯ; ಪುರಾತನ; ಅಚಲ.

ಪ್ರಕೃತಿಯನ್ನು ಅರ್ಥ ಮಾಡಿಕೊಳ್ಳುವುದು ಬಹಳ ಕಷ್ಟ. ಅದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಸುಮ್ಮನೆ ನೋಡಬೇಕು. ಸಾಧ್ಯವಾದರೆ ಅನುಸರಿಸಬೇಕು. ನಮ್ಮ ಪೂರ್ವದ ಋಷಿಗಳು ಪ್ರಕೃತಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಲಿಲ್ಲ. ಅದನ್ನು ಅನುಸರಿಸಿದರು. ಅದರ ಪೂಜಾರಿಗಳಾದರು. ಎಮ್ಮೆ ಪ್ರಕೃತಿಯಂತೆ; ಅದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಅದನ್ನು ಸುಮ್ಮನೆ ಅನುಸರಿಸಬೇಕು. ಮಹಾತ್ಮಗಾಂಧಿಯಂತಹ ಭಾರತ ಭಾಗ್ಯವಿಧಾತರಿಗೆ ಸಹ ಎಮ್ಮೆ ಅರ್ಥವಾಗಿಲ್ಲ. “ಎಮ್ಮೆ ಗೋಜಾತಿಗೆ ಸೇರಿದುದಲ್ಲ. ಇದರ ಬೆಳವಣಿಗೆಯಿಂದ ಭಾರತದಲ್ಲಿ ಗೋವುಗಳ ಪ್ರಾಬಲ್ಯ ಕಡಿಮೆಯಾಗಿದೆ. ಸಾಧ್ಯವಾದಷ್ಟು, ಬೇಗ ಎಮ್ಮೆಗಳನ್ನು ಇಲ್ಲದಂತೆ ಮಾಡಬೇಕು. ಇದರ ಹಾಲೂ ಜನಕ್ಕೆ ಆರೋಗ್ಯವಲ್ಲ. ಹಸುವಿನ ಹಾಲಿನಲ್ಲಿರುವ ತ್ರಾಣಪುಷ್ಟಿ ಎಮ್ಮೆಯ ಹಾಲಿನಲ್ಲಿ ಇಲ್ಲ. ಆದುದರಿಂದ ಎಮ್ಮೆಗಳನ್ನು ಇಲ್ಲದಂತೆ ಮಾಡಿ ಒಳ್ಳೆಯ ಜಾತಿಯ ಗೋವುಗಳನ್ನು ವೃದ್ಧಿ ಪಡಿಸುವುದೇ ಗೋಸೇವೆ” ಎಂದು ಮಹಾತ್ಮ ಗಾಂಧಿಯವರು ಸಾರಿ ಸಾರಿ ಹೇಳಿದ್ದಾರೆ. ನಮ್ಮ ಮನೆಯ ಎಮ್ಮೆಯ ಮುಖವನ್ನು ನೋಡಿದರೆ ಅದು ನನ್ನನ್ನು ನೋಡಿ ಕನಿಕರದಿಂದ “ಪಾಪ, ಋಷಿಗಳಿಗೆ ಪ್ರಕೃತಿ ಅರ್ಥವಾಗಲಿಲ್ಲ. ಹಾಗೆಯೇ ಗಾಂಧಿಗೂ ನಾವು ಅರ್ಥವಾಗಿಲ್ಲ. ನಮ್ಮನ್ನು ಇಲ್ಲದಂತೆ ಮಾಡಬೇಕಂತೆ; ಹೇಗೆ ಮಾಡುತ್ತೀರಿ? ಬೆಟ್ಟಗಳನ್ನು ಇಲ್ಲದಂತೆ ಮಾಡುತ್ತೀರಾ? ನದಿಗಳನ್ನು ಕಾಡುಗಳನ್ನು ಇಲ್ಲದಂತೆ ಮಾಡುತ್ತೀರಾ? ಪಾಪ, ಗಾಂಧಿಗೆ ಏನು ಗೊತ್ತು?” ಎಂದು ಹೇಳುವಂತೆ ತೋರುತ್ತದೆ. ಗಾಂಧಿಯವರ ತತ್ವವನ್ನು ಜ್ಞಾಪಕದಲ್ಲಿಟ್ಟುಕೊಂಡಿರುವ ನಾನು ಆ ಎಮ್ಮೆಯ ಮುಂದೆ ಹೋದಾಗ ನಮ್ಮ ಮನಸ್ಸಿನಲ್ಲಿರುವುದನ್ನು ಅದು ತಿಳಿದಿರುವಂತೆ “ನನಗೆ ಎಲ್ಲಾ ಗೊತ್ತು” ಎಂಬದಾಗಿ ತಲೆಯಲ್ಲಾಡಿಸುತ್ತದೆ. ಗಾಂಧಿಯವರ ತತ್ವವನ್ನು ತಿಳಿದುದೇ ನನ್ನ ತಪ್ಪು ಎಂಬ ಭಾವ ನನ್ನಲ್ಲಿ ಮೂಡಿ ನಾನು ಈ ಎಮ್ಮೆಗೆ ಅಪರಾಧಿ ಎಂದುಕೊಳ್ಳುತ್ತೇನೆ.

ನಮ್ಮ ದೇಶದ ಜನಗಳಂತೆಯೇ ನಮ್ಮ ದೇಶ ರಾಸುಗಳೂ. ಈಗಾಗಲೇ, ಪುಷ್ಟರಾದ ಜನ ನಮ್ಮಲ್ಲಿ ಎಲ್ಲಿಯೂ ಕಣ್ಣಿಗೆ ಬೀಳುವುದಿಲ್ಲ. ಎಲ್ಲರೂ ಗುಜ್ಜಾರಿಗಳೇ ವಾಮನರೇ ಇನ್ನೂ ಕೆಲವು ಕಾಲ ಕಳೆದರೆ ಇವರು ಮನುಷ್ಯರೋ ಎಂಬುದನ್ನು ಕುರಿತು ನೋಡಬೇಕಾಗುತ್ತದೆ. ಹೊಟ್ಟೆ ತುಂಬ ಆಹಾರವಿಲ್ಲದವನು ಬೆಳೆಯುವುದು ಹೇಗೆ? ಜನಕ್ಕೆ ಹೊಟ್ಟೆಗಿಲ್ಲದೆ ತಿರುಗುವಾಗ ದನಕ್ಕೆ ಏನು ಸಿಕ್ಕೀತು? ನಮ್ಮ ಹಸುಗಳು ಆಡು ಕುರಿಗಳಂತೆ ಆಗುತ್ತಿವೆ. ಆಹಾರ ನಿಪುಣರ ಸಲಹೆ ಪ್ರಕಾರ ನಮ್ಮಲ್ಲಿ ಪ್ರತಿಯೊಬ್ಬರೂ ಪ್ರತಿದಿನವೂ ಹತ್ತು ಔನ್ಸ್ ಹಾಲನ್ನಾದರೂ ಕುಡಿಯಬೇಕಂತೆ. ಇಲ್ಲದಿದ್ದರೆ ನಮ್ಮ ಆರೋಗ್ಯ ಸರಿಯಾಗಿರುವುದಿಲ್ಲವಂತೆ. ಹಾಲು ಇರಲಿ. ಈ ನಲವತ್ತು ಕೋಟಿ ಜನಕ್ಕೆ ನಿತ್ಯಾ ಹತ್ತು ಔನ್ಸ್ ಗಂಜಲ ಸಹ ದೊರೆಯುವಷ್ಟು ಒಳ್ಳೆಯ ಹಸುಗಳು ನಮ್ಮ ದೇಶದಲ್ಲಿ ಇಲ್ಲ. ಎಮ್ಮೆ ವಿಶ್ವಾಮಿತ್ರನ ಸೃಷ್ಟಿಯೆಂದು ಹೇಳುತ್ತಾರೆ. ವಿಶ್ವಾಮಿತ್ರ ಕಾರುಣ್ಯ, ಸೇಡು, ಛಲ, ಮನುಷ್ಯತ್ವ, ಮಾನರಸಿಕತೆಗಳ ಪ್ರತಿಬಿಂಬ. ವಸಿಷ್ಠನಂತೆ ಅವನು ಬರಿಯ ಒಣಕಾಷ್ಠವಲ್ಲ. ಅವನು ಅಂತಹ ಕರುಣಾಮಯಮೂರ್ತಿ ಯಾದುದರಿಂದಲೇ ತಾಯಿ ತಂದೆಗಳಿಬ್ಬರಿಗೂ ಬೇಡವಾದ ಶುನಶ್ಯೇಫನನ್ನು ಯಜ್ಞಬಲಿಯಿಂದ ಉಳಿಸಿದನು. ಅವನು ಕರುಣಾಮಯ ಮೂರ್ತಿಯಾದುದರಿಂದಲೇ ವಸಿಷ್ಠನ ಮತ್ತು ಅವನ ಮಕ್ಕಳ ಕ್ರೋಧಕ್ಕೆ ತುತ್ತಾಗಿ ಚಂಡಾಲನಾಗೆಂದು ಶಪಿಸಲ್ಪಟ್ಟ ತ್ರಿಶಂಕುವಿನಿಂದ ಯಜ್ಞ ಮಾಡಿಸಿ ಅವನನ್ನು ಸ್ವರ್ಗಕ್ಕೆ ಕಳುಹಿಸಿದನು. ಹೀಗೆ ಸಂಪ್ರದಾಯಗಳಿಗೆಲ್ಲಾ ವಿರೋಧವಾಗಿ ಕ್ರಾಂತಿಯನ್ನೆಬ್ಬಿಸಿದ ವಿಶ್ವಾಮಿತ್ರನ ಶಿಷ್ಯ ತ್ರಿಶಂಕುವಿಗೆ, ಈ ಸಂಪ್ರದಾಯ ಶರಣನಾದ ಇಂದ್ರ, ತನ್ನ ಸಂಸ್ಥಾನದಲ್ಲಿ ಸ್ಥಳ ಕೊಡಲಿಲ್ಲ. ತ್ರಿಶಂಕು ತಲೆಕೆಳಗಾಗಿ ಭೋ ಎಂದು ಕೂಗುತ್ತ ಭೂಮಿಗೆ ಬಿದ್ದನು. ಆ ಆರ್ತನಾದವನ್ನು ಕೇಳಿ ಕರುಣಾಮಯನಾದ ವಿಶ್ವಾಮಿತ್ರ ಅವನಿಗೆ ಒಂದು “ಪಾಕೀಸ್ತಾನ”ವನ್ನೇ ನಿರ್ಮಿಸಿದನು. ಹೊಸ ಜಗತ್ತನ್ನೇ ಸೃಷ್ಟಿಮಾಡಿದನು. ತೆಂಗಿನ ಮರಕ್ಕೆ ಬದಲು ಈಚಲು ಮರವನ್ನು ಸೃಷ್ಟಿಸಿದನು. ಹಸುವಿಗೆ ಬದಲು ಎಮ್ಮೆಯನ್ನು ಸೃಷ್ಟಿಸಿದನು. ವಿಶ್ವಾಮಿತ್ರ ಮಾಡಿದುದೇ ಸರಿ ಎಂಬಂತೆ ತೆಂಗಿನಮರದಿಂದಲೂ ಹೆಂಡವನ್ನೇ ತೆಗೆಯುತ್ತಿದ್ದಾರೆ. ವಿಶ್ವಾಮಿತ್ರ ಎಮ್ಮೆಯನ್ನು ಸೃಷ್ಟಿಸಲು ಅವನಿಗೆ ಹಸುವಿನ ಮೇಲೆ ಉಂಟಾದ ಒಂದು ತಿರಸ್ಕಾರವೂ ಕಾರಣ. ವಸಿಷ್ಠ ಋಷಿ ತನ್ನಲ್ಲಿದ್ದ ನಂದಿನೀಧೇನುವನ್ನು ವಿಶ್ವಾಮಿತ್ರನಿಗೆ ಕೊಡಲಿಲ್ಲ. ವಿಶ್ವಾಮಿತ್ರ ಕೋಪದಿಂದ ಹಸುವಿಗಿಂತ ಹೆಚ್ಚು ಹಾಲು ಕೊಡುವ ಎಮ್ಮೆಯನ್ನೇ ಸೃಷ್ಟಿಸಿದನು. ವಿಶ್ವಾಮಿತ್ರ ಮೈಸೂರಿನವನೇ ಆಗಿರಬೇಕು. ಆದುದರಿಂದಲೇ ಇಲ್ಲಿ ಎಮ್ಮೆಗಳು ಹೆಚ್ಚು. ಈ ದೇಶಕ್ಕೂ ಎಮ್ಮೆಯ ದೇಶವೆಂದು ಹೆಸರು.

ನಮ್ಮಲ್ಲಿ ಸ್ಪಲ್ಪ ಬುದ್ಧಿ ಮಂಕಾಗಿರುವವರನ್ನು “ಎಮ್ಮೆಯ ಹಾಲು ಕುಡಿದವನು” ಎಂದು ಹಾಸ್ಯ ಮಾಡುತ್ತಾರೆ. ಹಾಲು ಬೆಳ್ಳಗಿದೆಯೇ, ಕಪ್ಪಾಗಿದೆಯೇ ಎಂಬುದನ್ನು ನಮ್ಮ ದೇಶದ ಅನೇಕ ಹಳ್ಳಿಗಳವರು ಕಾಣರು. ಹಾಲು ಹಸುವಿನಿಂದ ಬರುತ್ತದೆ. ಎಂಬುದೇ ಅನೇಕರಿಗೆ ಗೊತ್ತಿಲ್ಲ. ನಮ್ಮೂರಿನಿಂದ ಕೊಡಗಿಗೆ ಒಂದು ಸಲ ಬಸ್ ನಲ್ಲಿ ಹೋಗುತ್ತಿದ್ದೆ. ಬಸ್ಸಿನ ಪ್ರಯಾಣಿಕರ ಪೈಕಿ ಒಬ್ಬ ಹೆಂಗಸು ಒಂದು ಚಿಕ್ಕ ಮಗುವನ್ನು ಎತ್ತಿಕೊಂಡು ಕುಳಿತಿದ್ದಳು. ಮಗು ಸಾಯುವಂತೆ ಇತ್ತು. ಹತ್ತು ಹದಿನೈದು ದಿನಗಳಿಂದ ಜ್ವರ ಬರುತ್ತಿದೆ ಎಂದು ಆಕೆ ಮತ್ತೊಬ್ಬರೊಂದಿಗೆ ಹೇಳುತ್ತಿದ್ದಳು. ಮಧ್ಯಾಹ್ನ ಒಂದು ಗಂಟೆಯ ಉರಿಬಿಸಿಲಿನಲ್ಲಿ ಬಸ್ಸು ಒಂದು ಹಳ್ಳಿಯ ಮುಂದೆ ನಿಂತಿತು. ತಾಯಿ ಎತ್ತಿ ಕೊಂಡಿದ್ದ ಮಗು ಮೆತ್ತಗೆ ಸಣ್ಣದನಿಯಲ್ಲಿ ಅಳಲು ಪ್ರಾರಂಭಿಸಿತು. ಅದರ ಗಂಟಲಿನಿಂದ ಧ್ವನಿ ಹೊರಡುವುದೇ ಕಷ್ಟವಾಗಿತ್ತು. ತಾಯಿ ಸ್ವಲ್ಪ ಹಾಲು ಕುಡಿಸಬೇಕು ಎಂದುಕೊಂಡು ಮೇಲೆ ಬುಟ್ಟಿಯನ್ನು ಕೆಳಗೆ ತೆಗೆಸಿಕೊಂಡಳು. ಬುಟ್ಟಿಯಲ್ಲಿ ಒಂದು ಸೀಸೆಯಲ್ಲಿ ಇಟ್ಟಿದ್ದ ಹಾಲು ಚೆಲ್ಲಿ ಬುಟ್ಟಿಯ ಬಟ್ಟೆ ನೆನೆದಿದ್ದಿತು ಹಾಲು ಇರಲಿಲ್ಲ. ಮಗು ಹಸುವಿನಿಂದ ಸಾಯುವಂತೆ ಅರಚುತ್ತಾ ಕೈಕಾಲು ಬಡಿಯುತ್ತಿದ್ದಿತು. ನಮಗೆಲ್ಲಾ ಅದು ಹಾಲಿಲ್ಲದಿದ್ದರೆ ಸಾಯುವುದೆಂದು ಖಂಡಿತವಾಗಿದ್ದಿತು. ಆ ಹಳ್ಳಿಯಲ್ಲಿ ಮುವ್ವತ್ತು ಮನೆಗಳನ್ನೂ ವಿಚಾರಿಸಿದೆವು. ಸೇರಿಗೆ ಒಂದು ರೂಪಾಯಿ ಕೊಡುವುದಾಗಿ ಹೇಳಿದೆವು. ಆದರೆ ಹಾಲು ಸಿಕ್ಕಲಿಲ್ಲ. ಒಂದು ಮನೆಯಲ್ಲಿಯೂ ಕರೆಯುವ ಹಸುವಾಗಲಿ ಎಮ್ಮೆಯಾಗಲಿ ಇರಲಿಲ್ಲ. ಹಳ್ಳಿಗರು ತಿಂಗಳಿಗೆ ಒಂದು ದಿನವೂ ಮಜ್ಜಿಗೆ ಕುಡಿಯುತ್ತಿರಲಿಲ್ಲ.

ಇಂತಹ ದೇಶದಲ್ಲಿ – “ಎಮ್ಮೆಯ ಹಾಲು ಕುಡಿದರೆ ಬುದ್ಧಿ ಬಂದ, ಹಸುವಿನ ಹಾಲು ಕುಡಿ” ಎಂದು ಹೇಳುವುದು ಹೊಟ್ಟೆಗೆ ಅನ್ನ ಒದಗಿಸಲು ಚೈತನ್ಯವಿಲ್ಲದವನ ಮಗುವಿಗೆ ಶಕ್ತಿ ಬರುವುದಕ್ಕಾಗಿ ಗ್ಲೂಕೋಸ್ ಓವಲ್ಟೀನ್ ಸೇವಿಸು” ಎಂದಂತೆ. ವಸಿಷ್ಠ ಶ್ರೀಮಂತ (ಅರಿಸ್ಟೋಕ್ರಾಟ್) ಪಂಗಡಕ್ಕೆ ಸೇರಿದವನು. ಈತನ ನೋವು ನಂದಿನೀಧೇನು ಯಜ್ಞಕ್ಕೆ ಹಾಲನ್ನೂ ಘೃತವನ್ನೂ ಒದಗಿಸುವುದು. ದೇವತಾರಾಧನೆಗೆ ಅಮೃತವನ್ನು ಒದಗಿಸುವುದು. ಆದರೆ ಅದರ ಹಾಲು ಎಲ್ಲರಿಗೂ ಸಾಲದು; ಗೋವಿನ ಹಾಲು ಅತಿ ಸಾತ್ವಿಕ, ವಸಿಷ್ಠ ಋಷಿಗಳಂತೆಯೇ ಮೇನಕೆಯ ನರ್ತನವನ್ನು ನೋಡಿ ಮುಗ್ಧನಾಗಿ ಇಂದ್ರಿಯಗಳ ಮೇಲಿನ ಹಿಡಿತವನ್ನು ಸಡಲಿಸಿ ಆಕೆಯೊಂದಿಗೆ ಹತ್ತು ವರುಷ ವಿಲಾಸಿಯಾಗಿ, -ನೀನು ಇಲ್ಲಿ ಬಂದುದು ನೆನ್ನೆ ಅಲ್ಲವೇ ಎಂದು ಆಕೆಯನ್ನು ಕೇಳಿದ ರಸಿಕತೆ, ಕಾವು, ರಾಜಸಗುಣಗಳುಳ್ಳ ರಾಜಋಷಿಯ ಸೃಷ್ಟಿ ಎಮ್ಮೆಯ ಹಾಲು. ವಸಿಷ್ಠನ ಎದುರಿಗೆ ನೂರು ಮೇನಕೆಯರು ನೂರು ಭಾವಭಂಗಿಗಳಲ್ಲಿ ನೂರು ವರುಷ ಕುಣಿದಿದ್ದರೂ ಆ ಕಾಷ್ಠ ಚಿಗುರುತ್ತಿರಲಿಲ್ಲ. ಆದರೆ ಮನುಷ್ಯನೇ ಆಗಿದ್ದ ವಿಶ್ವಾಮಿತ್ರ ಮೇನಕೆಗೆ ಮನಸೋತನು. ಅದೇ ರಾಜಸಗುಣ. ಈ ಕಲಿಯುಗದಲ್ಲಿ ಬೇಕಾದುದು ಶುದ್ಧ ಸಾತ್ವಿಕವಲ್ಲ. ಅದು ಅತಿ ಬಿಳುಪು; ಶುದ್ಧ ತಾಮಸವೂ ಅಲ್ಲ; ಅದು ಅತಿ ಕಪ್ಪು, ಬೇಕಾದುದು ಕೆಂಪು ರಾಜಸಗುಣ. ಕಲಿಯುಗದಲ್ಲಿ ಧರ್ಮಕ್ಕೆ ಮೂರು ಕಾಲು ಇಲ್ಲವೆಂಬಂತೆ, ಸಾತ್ವಿಕಗುಣಕ್ಕೆ ಸ್ಥಾನವೇ ಇಲ್ಲ. ಅದು ರಸ ಆದರ ತಾಮಸ ಗುಣ ಬೇಕಾಗಿಲ್ಲ; ಅದು ವಿರಸ, ಬೇಕಾದುದು ಸಮರಸ, ಅದೇ ರಾಜಸ. ಕಾಫಿ ಈ ರಾಜಸ ಗುಣದ ಗುರುತು. ಅದು ಕೃತಯುಗದ ಅಮೃತದಂತಹ ಸಾತ್ವಿಕ ವಸ್ತೂವೂ ಅಲ್ಲ. ಕಲಿಯುಗದ ಕಳ್ಳು ಸಾರಾಯಿನಂತಹ ತಾಮಸ ವಸ್ತುವೂ ಅಲ್ಲ. ಕಲಿಯುಗದ ನಾಗರಿಕತೆಯ ಶಿಖರ ಕಾಫಿ. ಸ್ವಭಾವದಿಂದ ಋಷಿಯಾದ ವಿಶ್ವಾಮಿತ್ರನಿಗೆ ಈ ರಹಸ್ಯ ಭವಿಷ್ಯ ತಿಳಿಯಿತು. ಆತ ರಾಜಸ ಕಾಫಿಗೆ ಅನುಗುಣವಾದ ರಾಜಸ ಎಮ್ಮೆಗಳನ್ನು ಸೃಷ್ಟಿ ಮಾಡಿದ. ಎಮ್ಮೆಯ ಹಾಲು ಸೇರದ ಕಾಫಿ ಕಾಫಿಯೇ ಅಲ್ಲ; ಸ್ವರ್ಗಲೋಕದಲ್ಲಿ ಕಾಂಗ್ರೆಸ್ ಮಂತ್ರಮಂಡಲಗಳು ಬಂದು ಎಲ್ಲೆಲ್ಲೋ ಪಾನನಿರೋಧದ ಕಾನೂನು ಜಾರಿಯಾಯಿತಷ್ಟೆ. ಅಮೃತವನ್ನೆಲ್ಲಾ ಉಗ್ರಾಣಗಳಲ್ಲಿ ಹಾಕಿ “ಸೀಲು” ಮಾಡಿಬಿಟ್ಟರು. ಅಮೃತಪಾನದಿಂದ ಮತ್ತರಾಗುವುದರಲ್ಲಿ ನಿರತನಾಗುತ್ತಿದ್ದ ಇಂದ್ರಾದಿಗಳು ಸಹ ಗುಟ್ಟಿನಲ್ಲಿ ಎಮ್ಮೆಯ ಹಾಲು ತರಿಸಿ ಕಾಫಿ ಮಾಡಿಕೊಂಡು ಕುಡಿದು ಸ್ವಲ್ಪ ತುಷ್ಟರಾದರಂತೆ!

ಇಂತಹ ಪೂರ್ಣಪುರುಷ ವಿಶ್ವಾಮಿತ್ರನಿಂದ ಪ್ರತಿ ಜಗತ್ತಾಗಿ ಸೃಷ್ಟಿಯಾದುದರಿಂದಲೇ ಎಮ್ಮೆ ಮೂಲ ಜಗತ್ತಿನ ಹಸುವಿಗಿಂತ ಹೆಚ್ಚು ಬಲವಾಗಿದೆ. ಹೆಚ್ಚು ಒರಟಾಗಿದೆ, ಹೆಚ್ಚು ಕಪ್ಪಾಗಿದೆ; ಹೆಚ್ಚು ದಪ್ಪನಾಗಿದೆ. ಎಮ್ಮೆಯಲ್ಲಿ ಹಾಲೂ ಹೆಚ್ಚು. ಬೆಣ್ಣೆಯೂ ಹೆಚ್ಚು. ಇಂತಹ ಪ್ರಾಣಿಯ ಹಾಲನ್ನು ತೆಗೆದುಕೊಳ್ಳುವವರಿಗೆ ಬುದ್ಧಿ ಮಂಕೆ? ಇವರನ್ನು ನೋಡಿದ ಕೂಡಲೇ ಇವರು ಎಮ್ಮೆಯ ಹಾಲನ್ನು ಕುಡಿದವರೆಂಬುದು ಗೊತ್ತಾಗುವುದಿಲ್ಲವೆ? ಎಮ್ಮೆಯ ಹಾಲನ್ನು ಕುಡಿಯುವವರ ಬುದ್ಧಿ ಇರಲಿ. ಸ್ವತಃ ಎಮ್ಮೆಯೇ ಬಹು ಚುರುಕಾದ ತೀಕ್ಷ್ಣ ಬುದ್ಧಿಯ ಪ್ರಾಣಿ. ಎಮ್ಮೆಯನ್ನು ಅನುಸರಿಸಿಕೊಂಡು ಅದರ ಜೊತೆಯಲ್ಲಿ ಓಡಾಡುತ್ತಿರುವವರಿಗೆ ಇದು ಗೊತ್ತಾಗುವುದೇ ಹೊರತು ಎಲ್ಲಿಯೋ ದೂರದಿಂದ ಅದರ ಕಪ್ಪು ಮೈಯನ್ನು ನೋಡುವವರಿಗೆ ಖಂಡಿತ ಗೊತ್ತಾಗುವುದಿಲ್ಲ. ಬುದ್ಧಿಯ ವಿಷಯ ಒಂದೇ ಅಲ್ಲ. ಎಮ್ಮೆಗೆ ಮಾತು ಸಹ ತಿಳಿಯುವುದು. ಒಂದು ಉದಾಹರಣೆ ಕೇಳಿ.

ನಮ್ಮ ಮನೆಯ ಎಮ್ಮೆ-ಇದು ಸಾಧಾರಣವಾಗಿ ಕರು ಹಾಕಬೇಕಾದರೆ ನಿಂತಿಕೊಂಡೇ ಕರುವನ್ನು ಎಸೆದುಬಿಡುತ್ತಿದ್ದಿತು. ಅಂತಹ ಒರಟು ಪ್ರಾಣಿ! ಹೊಟ್ಟೆಯಿಂದ ಹೊರಕ್ಕೆ ಬರುವಾಗಲೇ ಅಂತಹ ಒದೆತದೊಂದಿಗೆ ರಭಸದಿಂದ ಭೂಮಿಗೆ ಬಿದ್ದ ಹೊಸ ಎಳೆಗರು ಪಾಪ, ಚೇತರಿಸಿಕೊಳ್ಳುವುದಕ್ಕೇ ಎರಡು ಮೂರು ಗಂಟೆ ಬೇಕಾಗುತ್ತಿದ್ದಿತು. ಪ್ರಪಂಚ ಏನು ಸುಖವಿಲ್ಲ. ಇಲ್ಲಿ ಒದೆತಗಳೇ ಜಾಸ್ತಿ. ತಾಯಿ ತಂದೆ ಅಣ್ಣ ತಮ್ಮ ಹೆಂಡತಿ ಅಪ್ಪ ಮಗ ಎಲ್ಲರೂ ಒಬ್ಬರನ್ನೊಬ್ಬರು ಒದೆಯುತ್ತಾರೆ. ಬಡಿಯುತ್ತಾರೆ. ಜಗತ್ತಿಗೆ ಬರುವುದು ಸುಖಕ್ಕಲ್ಲ ಎಂಬುದು ಆ ಬಡಪಾಯಿಗಳು ಎಳಗರುವಿಗೆ ಜಗತ್ತಿಗೆ ಬರುವಾಗಲೇ ಗೊತ್ತಾಗುತ್ತದೆ. ಹೋಗು ನಿನ್ನ ಪಾಪಗಳಿಗೆ ಅಲ್ಲಿ ಅನುಭವಿಸು ಎಂದು ತನ್ನನ್ನು ತಂದು ಹೊರಕ್ಕೆ ದೂಡಿದಂತಾಗಿ ಕರು ಭೂಮಿಯ ಮೇಲೆ ಎರಡು ಗಂಟೆ ಬಿದ್ದಿದ್ದು ಮುಂದಿನ ಕಷ್ಟಗಳಿಗೆ ಸಿದ್ಧವಾಗುತ್ತದೆ. ಹೀಗೆ ಎಮ್ಮೆ ಎರಡು ಮೂರು ಸಲ, ಕರುವನ್ನು ಎಸೆದುದನ್ನು ನೋಡಿ ನನ್ನ ಆಳು ತೂರ “ಮುಂದಿನ ಸಲ ಎಸೆಯೋದಕ್ಕೆ ಬಿಡಕೂಡದು. ಗೋಣಿಚೀಲ ಹಿಡಿದುಕೊಂಡು ಕರ ಆತುಕೋ ಬೇಕು” ಎಂದ. ಎಮ್ಮೆ ಮುಂದಿನ ಸಲ ಗಬ್ಬವಾಗಿ ಯುವ ಕಾಲವೂ ಬಂದಿತು.

ಆ ಬೆಳಗ್ಗೆ ತೂರ ನನ್ನೊಂದಿಗೆ “ಇವತ್ತು ಸಾಯಂಕಾಲ ಎಮ್ಮೆ ಕರ ಹಾಕುತ್ತೆ” ಎಂದ, ಆ ವಿಷಯ ಅವನಿಗೆ ಚೆನ್ನಾಗಿ ಅನುಭವ, ಈ ವಿಚಾರಗಳು ಇವನಿಗೆ ಇಷ್ಟು ಖಂಡಿತವಾಗಿ ಹೇಗೆ ಗೊತ್ತಾಗುವುದೆಂದು ನಾನು ಅನೇಕ ಬಾರಿ ಆಶ್ಚರ‍್ಯಪಟ್ಟಿದ್ದೇನೆ. ತೂರ ಎಮ್ಮೆಗೆ ಕೇಳಿಸುವಂತೆ “ಇರಲಿ, ನಿಮಗೆ ಮಾಡುತ್ತೇವೆ. ಕರ ಎಸೀತೀಯ” ಎಂದ. ನನ್ನೊಂದಿಗೆ “ಗೋಣೀಚೀಲ ಹಿಡಿದುಕೊಂಡು ಆತುಕೋಬೇಕು” ಎಂದ. ಆ ಮಾತನ್ನು ಕೇಳಿ ಎಮ್ಮೆ ಸರ‍್ರನೆ ಒಂದು ಸಲ ನನ್ನ ಕಡೆ ತಿರುಗಿತು. ಆ ನೋಟವನ್ನು ನೋಡಿ ನಾನು ಬೆಚ್ಚಿಬಿದ್ದೆ. ಒಬ್ಬನನ್ನು ನೀವು ಮನಸ್ಸಿನಲ್ಲಿಯೇ ಬೈದುಕೊಂಡು ಹೋಗುತ್ತಿರುವಾಗ ಆತ ನಿಮ್ಮೆದುರಿಗೆ ಬಂದು ನಿಂತರೆ ಹೇಗಾಗುವುದೋ ಹಾಗೇ ಆಯಿತು. ಆ ಕ್ಷಣದಲ್ಲಿ “ಇದಕ್ಕೆ ಬುದ್ಧಿ ಇದೆ. ಮಾತೂ ತಿಳಿಯುತ್ತದೆ; ಕಿವಿಯೂ ಕೇಳಿಸುತ್ತದೆ” ಎಂಬ ಭಾವವುಂಟಾಯಿತು. ಇದರಿಂದ ನನ್ನ ಮನಸ್ಸಿನಲ್ಲಿ ಹೇಗೆ ಹೇಗೋ ಆಯಿತು. ಹಿಂದೆ ಹಾಲಿವುಡ್ ಸಿನಿಮಾ ತಾರೆಯರು, ನಿಗ್ರೋ ಪುರುಷರನ್ನು ಪುರುಷರಾಗಿಯೇ ಪರಿಗಣಿಸದೆ ಅವರ ಎದುರಿಗೆ ಅಸ್ತವ್ಯಸ್ತವಾಗಿ ಉಡುಪುಗಳನ್ನು ಧರಿಸಿ, ಅಂತಃಪುರದಲ್ಲಿ ತಿರುಗಾಡುತ್ತಿದ್ದರಂತೆ, ನೀಗ್ರೋಗಳು ನಾಗರಿಕ ಜನಾಂಗ ಎಂದು ಆದ ಮೇಲೆ ಅವರಿಗೆ ಬಹಳ ಬೇಜಾರಾಯಿತಂತೆ. ನನ್ನ ವಿಷಯವೂ ಹಾಗೆಯೇ ಆಯಿತು. ಎಮ್ಮೆಗೆ ಮಾತು ತಿಳಿಯುವುದಿಲ್ಲ ಎಂದು ಅದರ ಎದುರಿಗೆ ಮನಸ್ಸಿಗೆ ಬಂದುದನ್ನು ಹರಟುತ್ತಿದ್ದ ನನಗೆ ನಮ್ಮ ಎಮ್ಮೆಯ ಆ ನೋಟಗಳನ್ನು ನೋಡಿ ಗಾಬರಿಯಾಯಿತು. ಎಮ್ಮೆ “ಆಗಲಿ” ಎನ್ನುವಂತೆ ನನ್ನ ಕಡೆ ನೋಡಿತು. ಆ ನೋಟ ಅದರ ಮುಖದಲ್ಲಿ ಕಂಡುದು ಒಂದೇ ಕ್ಷಣ. ಮರುಕ್ಷಣ ಎಮ್ಮೆ ಮುಖವನ್ನು ಬೇರೆ ಕಡೆ ತಿರುಗಿಸಿಕೊಂಡಿತು. ಆದರ ಕಣ್ಣಿನಲ್ಲಿ ನನಗೆ ಆ ಮೊದಲಿನ ತಿಳಿವಿನ ನೋಟ ಈಗ ಕಾಣಲಿಲ್ಲ.

ಸಾಯಂಕಾಲವಾಯಿತು. ಎಮ್ಮೆಗೆ ಪ್ರಸವ ವೇದನೆ ಪ್ರಾರಂಭವಾಗಿದೆ ಎಂದು ತೂರ ಸೂಚಿಸಿದ. ಎಮ್ಮೆ ನಿಂತುಕೊಂಡೇ ಇದ್ದಿತು. “ಇದು ಮಲಗಿಕೊಂಡು ಕರ ಹಾಕುವುದಿಲ್ಲ. ಅದೇ ಇದರ ಕೆಟ್ಟ ಚಾಳಿ” ಎಂದ ತೂರ. ನಾವು ಅಂದಾಜು ಮಾಡಿ ಎಮ್ಮೆ ನಿಂತಿದ್ದ ನೇರದಿಂದ ಒಂದು ಮಾರು ಆಚೆಗೆ, ಪ್ರಾಯಶಃ ಕರುವನ್ನು ಇಲ್ಲಿಗೆ ಎಸೆಯಬಹುದು ಎಂದುಕೊಂಡು, ಗೋಣಿಚೀಲದ ಆಚೆ ಈಚೆ ಹಿಡಿದುಕೊಂಡು ನಿಂತುಕೊಂಡೆವು. ಎಮ್ಮೆ ಒಂದು ಮಾರು ಬಲಗಡೆಗೆ ತನ್ನ ಹಿಂಭಾಗವನ್ನು ತಿರುಗಿಸಿಕೊಂಡು ನಿಂತಿತು. ನಾವೂ ಸರ‍್ರನೆ ಚೀಲದೊಂದಿಗೆ ಅದರ ನೇರಕ್ಕೆ ಹಾರಿ ನಿಂತುಕೊಂಡೆವು. ಎಮ್ಮೆ ಕೂಡಲೆ ಎರಡು ಮಾರು ಎಡಗಡೆಗೆ ತನ್ನ ಹಿಂಭಾಗವನ್ನು ತಿರುಗಿಸಿತು. ನಾವೂ ಗೋಣಿಚೀಲದೊಂದಿಗೆ ಹಾರಿದೆವು. ಎಮ್ಮೆ ನಿಮಿಷ ನಿಮಿಷಕ್ಕೂ ತಿರುಗತೊಡಗಿತು. ನಾವು ನಿಮಿಷ ನಿಮಿಷಕ್ಕೂ ಕೊಕ್ಕಿನ ಆಟದಲ್ಲಿಯಂತೆ ಹಾರತೊಡಗಿದೆವು. ಸರ್ಕಸ್ ನಲ್ಲಿ ಮೇಲುಗಡೆ ಒಬ್ಬ ಆಟಗಾರ ಸಾಧನೆ ಮಾಡುತ್ತಿರುವಾಗ ಅವನ ಕೈಕಾಲು ಜಾರೀತೆಂಬ ಭಯದಿಂದ ಕೆಳಗಡೆ ಹತ್ತಾರು ಜನ ಬಂದು ಜಮಖಾನ ಹಿಡಿದುಕೊಂಡು ಅವನ ನೇರದಲ್ಲಿ ತಿರುಗುವುದನ್ನು ನೀವು ಕಂಡಿದ್ದೀರಿ. ನಮಗೂ ಎಮ್ಮೆಗೂ ಉಂಟಾದ ಸ್ಪರ್ಧೆ ಈ ಬಗೆಯದಾಯಿತು. ಬರುಬರುತ್ತಾ ಎಮ್ಮೆ ನಿಮಿಷಕ್ಕೆ ಎರಡು ಸಲ ತಿರುಗಲು ಪ್ರಾರಂಭಿಸಿತು. ಅದು ಈ ವಿನೋದದಲ್ಲಿ, ಕರು ಹಾಕಬೇಕೆಂಬುದನ್ನೇ ಪೂರ್ಣವಾಗಿ ಮರೆತಂತೆ ತೋರಿತು. ಈ ಓಡಾಟದಲ್ಲಿ, ಎಮ್ಮೆಗಿಂತ ನಮಗೇ ಹೆಚ್ಚು ಸುಸ್ತಾಗಿ ನಮ್ಮ ಅಳ್ಳೆಗಳು ಹೊಡೆದುಕೊಳ್ಳ ತೊಡಗಿದವು! ಎಮ್ಮೆ ಮಾತ್ರ ಹಿಂದಿನ ಚೇಷ್ಟೆಯ ನಗುವಿನಿಂದ ಮತ್ತೆ ನನ್ನ ಕಡೆ ನೋಡಿತು. ಇದು ಸದ್ಯಕ್ಕೆ ಕರು ಹಾಕುವುದಿಲ್ಲ. ಇನ್ನು ಒಂದು ಗಂಟೆ ಬಿಟ್ಟು ಬರೋಣವೆಂದು ನಾನೂ ತೂರನೂ ಚೀಲವನ್ನು ಒಂದು ಮೂಲೆಗಿಟ್ಟು ಒಳಕ್ಕೆ ಹೋದೆವು. ಒಂದು ನಿಮಿಷದೊಳಗಾಗಿ ಕೊಟ್ಟಿಗೆಯಲ್ಲಿ ದೊಪ್ಪೆಂದು ಸದ್ದಾಯಿತು. ಹೋಗಿ ನೋಡಿದರೆ ಎಮ್ಮೆ ಪದ್ಧತಿಯಂತೆ ನಿಂತುಕೊಂಡೇ ಎರಡು ಮಾರು ಆಚೆ ಕರುವನ್ನು ಎಸೆದಿದ್ದಿತು.

ಹೀಗೆ ತನ್ನನ್ನು ಅವಮಾನ ಮಾಡಿದುದರಿಂದಲೋ ಎಂಬಂತೆ ಪ್ರತಿ ಸಲವೂ ಸರಾಗವಾಗಿ ಹಾಲು ಕೊಡುತ್ತಿದ್ದ ಎಮ್ಮೆ ಈ ಕರು ಹಾಕಿದ ಮೇಲೆ, ಹಾಲು ಕರೆಯುವುದಕ್ಕೆ ಹೋದರೆ ಒದೆಯುವುದನ್ನು ಪ್ರಾರಂಭಿಸಿತು. ಆಗ ಅದಕ್ಕೆ ತವುಡು, ಹಿಂಡಿ, ಹತ್ತಿಯ ಬೀಜ ಮುಂತಾದ  ತಿಂಡಿಗಳನ್ನು ಎರಡು ಹೊತ್ತೂ ಕರೆಯುವ ವೇಳೆಯಲ್ಲಿ ಇಡತೊಡಗಿದೆವು. ತಿಂಡಿಯನ್ನು ತನ್ನ ಮುಂದೆ ಇಟ್ಟಾಗ ಎಮ್ಮೆ “ತನ್ನಿ, ನೀವೇನೂ ಪರೋಪಖಾರ ದೃಷ್ಟಿಯಿಂಲೂ ಗೋಸೇವಾ ಬುದ್ಧಿಯಿಂದಲೂ ತರುತ್ತಿಲ್ಲ. ನನ್ನ ಹಾಲು ಬೇಕಾಗಿದೆ. ಅದಕ್ಕಾಗಿ ತರುತ್ತಿದ್ದೀರಿ” ಎನ್ನುವಂತೆ ನಮ್ಮ ಕಡೆ ನೋಡುತ್ತಿದ್ದಿತು. ಬೆಳಗಿನ ಕಾಫಿ ನಮಗೆ ಹೇಗೆ ಸಕಾಲಕ್ಕೆ ಆಗಬೇಕೋ ಹಾಗೆ ಎಮ್ಮೆಗೆ ತಿಂಡಿ ಸಕಾಲಕ್ಕೆ ಆಗಬೇಕಾಗಿದ್ದಿತು. ಒಂದು ದಿವಸ ತಿಂಡಿ ಇಟ್ಟು ಹಾಲು ಕರೆಯುವುದಕ್ಕೆ ನನ್ನ ಹೆಂಡತಿ ಬರುವುದು ಬೆಳಗ್ಗೆ ಹತ್ತು ಗಂಟೆಯಾಯಿತು. “ಇಷ್ಟು ಹೊತ್ತು ಯಾಕೆ? ಹೊತ್ತಿಗೆ ಮುಂಚೆ ಕರೆಯುವುದಕ್ಕೇನು? ಈಗ ಕೊಡುತ್ತದೆಯೆ?”  ಎಂದೆ. ನನ್ನ ಹೆಂಡತಿ “ಕೊಡದೆ ಅದಕ್ಕೇನು ರೋಗ? ಹೊಟ್ಟೆ ಬಿರಿಯುವ ಹಾಗೆ ತಿಂಡಿ ತಿನ್ನುತ್ತಿಲ್ಲವೆ?” ಎಂದಳು. ಒಮ್ಮೆ ಒಂದು ಸಲ ಸರ‍್ರನೆ ಅವಳ ಕಡೆ ನೋಡಿತು. ಆ ನೋಟದಲ್ಲಿ ಆ ಹಿಂದಿನ ತಿಳಿವು ಕಾಣುತ್ತಿದ್ದಿತು. ಎಮ್ಮೆಯ ಭಾಷೆ ನನಗೆ ಅರ್ಥವಾಯಿತು. ನನ್ನ ಹೆಂಡತಿ ಅದರ ಮೊಲೆಯನ್ನು ಎಷ್ಟು ಈಜಿದರೂ ಎಮ್ಮೆ ಸೋರು ಬಿಡಲಿಲ್ಲ. ಬಾಂಡಲೆಯಲ್ಲಿದ್ದ ತಿಂಡಿಯೆಲ್ಲಾ ಮುಗಿಯಿತು. “ತಿಂಡಿ ಹೊಡೆಯುವುದಕ್ಕೆ ಇದೊಳ್ಳೆ ಅಭ್ಯಾಸ ಮಾಡಿಕೊಂಡಿತು. ಹಾಳು ಮುಂಡೇನು” ಎಂದುಕೊಂಡು ನನ್ನ ಹೆಂಡತಿ ಮತ್ತೊಂದು ಬಾಂಡಲೆ ತಿಂಡಿ ತರಲು ಒಳಕ್ಕೆ ಹೋದಳು. ಅವಳು ಒಳಗಿನಿಂದ ತಿಂಡಿ ತರುತ್ತಿರುವಾಗ ಎಮ್ಮೆ ಮತ್ತೆ ದುರ ದುರನೆ ನೋಡಿತು. “ತನ್ನಿ ತನ್ನಿ, ಇಲ್ಲದಿದ್ದರೆ ನೀವು ತರುತ್ತೀರಾ” ಎಂಬಂತೆ ಕಣ್ಣು ಮಿಟುಕಿಸಿತು. “ಇದು ಈ ಉಪಾಯ ಮಾಡಿಕೊಳ್ಳದೆ ಸುಮ್ಮನೆ ಸಾಧುವಾಗಿ ಹಾಲು ಕೊಟ್ಟಿದ್ದರೆ ನೀವು ಹೀಗೆ ನಿತ್ಯಾ ಇದಕ್ಕೆ ಎರಡು ಹೊತ್ತೂ ತಿಂಡಿ ಇಡುತ್ತಿದ್ದಿರಾ” ಎಂದು ನಾನು ನಕ್ಕೆ, ಹೀಗೆ ಅಂದು ಎಮ್ಮೆಗೆ ತಿಂಡಿ ಎರಡು ಸಲ ಇಡಬೇಕಾಗಿ ಬಂದುದರಿಂದ ಅಲ್ಲಿಂದ ಮುಂದೆ ನನ್ನ ಹೆಂಡತಿ ಎಮ್ಮೆಗೆ ಸಕಾಲದಲ್ಲಿ ಇಟ್ಟು ಹಾಲು ಕರೆದುಕೊಳ್ಳುತ್ತಿದ್ದಳು.

ಈ ಎಮ್ಮೆಯನ್ನು ಸಾಧಾರಣವಾಗಿ ನನ್ನ ಹೆಂಡತಿಯೇ ಕರೆಯುವ ಅಭ್ಯಾಸವಿದ್ದಿತು. ಒಂದು ಸಲ ಎಂಟು ದಿವಸ ಅವಳು ನರಸೀಪುರದ ತೇರಿಗೆ ಹೋದಳು. ನಾನೇ ತಿಂಡಿ ಕಲಸಿ ಎಮ್ಮೆಗೆ ತೆಗೆದುಕೊಂಡು ಹೊರಟೆ. ತೂರ “ಹಿಂಡಿ ಸಾಲದು. ಇನ್ನೊಂದು ಹಿಡಿ ರಾಗಿ ಹಿಟ್ಟು ಹಾಕಿ” ಎಂದ. ನಾನು “ಸರಿ ಸರಿ. ಜನರಿಗೆ ತಿನ್ನುವುದಕ್ಕೆ ರಾಗಿ ಇಲ್ಲ; ಹನುಮಂತ ರಾಯ ಹಗ್ಗ ಮೇಯ್ತಿರೋವಾಗ ಪೂಜಾರಿ ಶಾವಿಗೆ ಬೇಡಿದ ಹಾಗೆ ಆಯಿತು. ನಡಿ ಸಾಕು” ಎಂದೆ, ತಿಂಡಿಯನ್ನು ತೆಗೆದುಕೊಂಡು ಹೋಗಿ ಎಮ್ಮೆಯ ಮುಂದೆ ಇಟ್ಟು ನಾನೇ ಹಾಲು ಕರೆಯಲು ಕುಳಿತೆ. ಎಮ್ಮೆ ಒಂದು ಸಲ ತಿಂಡಿ ಮೂಸಿ ನೋಡಿತು. ನಾನು ಹಾಲು ಕರೆಯಲು ಕೈಯಲ್ಲಿ ಹಿಡಿದಿದ್ದ ಪಾತ್ರೆ ಕೆಳಕ್ಕೆ ಬೀಳುವಂತೆ ಪಟಾರನೆ ಒದೆಯಿತು. ನಾನು ತೂರನಿಗೆ ನಿನ್ನ ಮಾತಿ ನಿಜ. ಇದಕ್ಕೆ ರಾಗಿ ಹಸಿಹಿಟ್ಟಿನ ರಸ ಹಲ್ಲಿಗೆ ಇಳಿದು ಅಭ್ಯಾಸವಾಗಿದೆ. ಇನ್ನಷ್ಟು ಹಸಿಹಿಟ್ಟು ಹಾಕಿಕೊಂಡು ಇನ್ನೊಂದು ಗಳಿಗೆ ಬಿಟ್ಟು ಬರೋಣ. ಎಲ್ಲಾ ಕೆಟ್ಟಭ್ಯಾಸ” ಎಂದು ಒಳಕ್ಕೆ ಬಂದೆ. ಮತ್ತೆ ತಿಂಡಿ ಸರಿಮಾಡಿಕೊಂಡು ಹೋಗುವುದಕ್ಕೆ ಮುಂಚೆ ತೂರ “ಇದಕ್ಕೆ ಅಮ್ನೋರು ಕರ ಬಿಟ್ಟೆ ಪಾಠ. ನಿಮಗೆ ಕೊಡೋಕಿಲ್ಲ. ಖಂಡಿತ ಒದೀತದೆ” ಎಂದ. ಆಗ ನಾನು ಒಂದು ಉಪಾಯವನ್ನು ಮಾಡಿದೆ. ಇದನ್ನು ಓದುವ ವಾಚಕರು ನಗಬೇಕಾಗಿಲ್ಲ. ನನ್ನ ಹೆಂಡತಿಯ ಒಂದು ಸೀರೆಯನ್ನು ಮೈತುಂಬ ಹೊದೆದು ಕೊಂಡು ಎಮ್ಮೆಯ ಮುಂದೆ ಕುಳಿತೆ. ಎಮ್ಮೆ ಈ ಮೋಸಕ್ಕೆ ಬಿದ್ದಿತು. ಹಾಲು ಕೊಟ್ಟಿತು. ಹೀಗೆ ನಾನು ಐದು ಆರು ದಿನ ಅಭಿವನಸೈರಂಧ್ರಿಯಾಗಿ ರಾಗಿಹಿಟ್ಟು ಹಿಂಡಿಗಳನ್ನು ಪೂರಾ ಹಾಕಿ ಹಾಲು ಕರೆದುಕೊಳ್ಳುತ್ತಿದ್ದೆ. ನನ್ನ ಹೆಂಡತಿ ಹಿಂತಿರುಗುವುದು ನಾಳೆ ಎನ್ನುವಾಗ, ನಾನು ಎಮ್ಮೆಯ ಮುಂದೆ ಹಾಲು ಕರೆಯುತ್ತಾ ಕುಳಿತಿದ್ದೆ. ತೂರ “ಹಸು ಆಗಿದ್ರೆ ವಾಸನೆ ಮೇಲೆ ಹಿಡಿದು ಒದ್ದುಬಿಡೋದು. ಇದು ಎಮ್ಮೆ ಜಾತಿ. ದೆಯ್ಯದಂತ ಮುಂಡೇದು, ಬುದ್ಧಿ ಇಲ್ಲ” ಎಂದ. ನಾನು ನನ್ನ ಹೆಂಡತಿಯ ದನಿಯಂತೆ ದನಿಮಾಡಿಕೊಂಡು “ಇದಕ್ಕೆ ಬುದ್ಧಿ ಇದೆ” ಎಂದೆ. ಒಮ್ಮೆ ಒದ್ದೇಬಿಟ್ಟಿತು.

ಈ ಎಮ್ಮೆಗೆ ಒಂದು ಸಲ ಕಾಲುಜ್ವರ ಬಾಯಿಜ್ವರದ ಆಯಿತು. ಆಳು ತೂರ ಎಲ್ಲಾ ಹಸುಗಳನ್ನೂ ಬೋರೆಗೆ ಬಿಡುತ್ತಿದ್ದ. “ಎಮ್ಮೆ ಬಿಡಬೇಡ. ದನದ ಆಸ್ಪತ್ರೆಯಿಂದ ಔಷಧಿ ತರಿಸಿ ಹುಯ್ಯಿಸುತ್ತೇನೆ” ಎಂದೆ. ಆ ಮಾತು ಅಲ್ಲೇ ನಿಂತಿದ್ದ ಎಮ್ಮೆಗೆ ಕೇಳಿಸಿರಬೇಕು. ನಾವು ಒಳಕ್ಕೆ ಹೋದಾಗ ಎಮ್ಮೆ ಕಿತ್ತುಕೊಂಡು ಬೋರೆಗೆ ಓಡಿಬಿಟ್ಟಿತು. ಈ ಎಮ್ಮೆಗೆ ರಾಗಿಯ ಅಂಬಲಿ ಬಹಳ ಇಷ್ಟ. ಕಾಯಿಲೆಯಾದಾಗಲೂ ಬೇರೆ ಹುಲ್ಲು ತಿಂಡಿಗಳನ್ನು ಮುಟ್ಟದಿದ್ದರೂ, ಇದು ರಾಗಿಯ ಅಂಬಲಿಯನ್ನು ಮಾತ್ರ ಯಾವಾಗಲೂ ಕುಡಿಯುತ್ತದೆ. ಇದಕ್ಕೆ ಕಾಲುಜ್ವರ ಬಾಯಿಜ್ವರವಾದಾಗ “ಇದನ್ನು ಹಿಡಿದುಕೊಂಡು ಗಂಟಲಿಗೆ ಗೊಟ್ಟ ಹಾಕಿ ಔಷಧಿ ಹುಯ್ಯುವುದು ಕಷ್ಟ. ಅಂಬಲಿಗೆ ಸೇರಿಸಿಕೊಟ್ಟುಬಿಡೋಣ” ಎಂದಳು ನನ್ನ ಹೆಂಡತಿ. ಮೊದಲನೆಯ ಸಲ ಹಾಗೆ ಮಾಡಿ ಎಮ್ಮೆಯ ಮುಂದೆ ಇಟ್ಟೆವು. ಅದು ಏನೂ ತಿಳಿಯದ ಪ್ರಾಣಿಯಂತೆ ಸುಮ್ಮನೆ ಅಂಬಲಿ ಕುಡಿಯಿತು. ಆ ಸಾಯಂಕಾಲ, ದನದ ವೈದ್ಯರು ಮನೆಗೆ ಬಂದು ಎಮ್ಮೆ ನೋಡಿದರು. ‘ಇದಕ್ಕೆ ಔಷಧಿ ಹೇಗೆ ಕುಡಿಸುತ್ತೀರಿ’ ಎಂದರು. ಆಳು ತೂರ ‘ಅಂಬಲಿ ಒಳಗೆ ಕುಡೀತದೆ’ ಎಂದ. ಆ ಮಾತು ಎಮ್ಮೆಗೆ ಕೇಳಿಸಿತು. ಆ ಸಂಧ್ಯಾಕಾಲದಿಂದಲೇ ಅದು ಅಂಬಲಿ ಕುಡಿಯುವುದನ್ನು ಬಿಟ್ಟಿತು. ಮರುದಿನ ಬೆಳಿಗ್ಗೆ ಬಂದ ವೈದ್ಯರು “ಇದಕ್ಕೆ ಔಷಧಿ ಕುಡಿಸಲೇಬೇಕು” ಎಂದರು. ಆಗ ಎಮ್ಮೆ ಮಲಗಿದ್ದಿತು. ಆಳೂ ತೂರ “ಮಲಗಿರುವಾಗ ಕಾಲುಕಟ್ಟಿ ಗೊಟ್ಟದಲ್ಲಿ ಹುಯ್ಯಬೇಕು” ಎಂದನು. ಎಮ್ಮೆ ಎದ್ದು ನಿಂತುಕೊಂಡಿತು. ತೂರ ಮನೆಯಲ್ಲಿರುವವರೆಗೆ ಅದು ಮಲಗುತ್ತಲೇ ಇರಲಿಲ್ಲ. ಹುಷಾರಿಲ್ಲದಿದ್ದರೂ ನಿಂತೇ ಇರುತ್ತಿದ್ದಿತು. ತೂರ ಹನ್ನೊಂದು ಗಂಟೆಗೆ ದನಗಳನ್ನು ಬೋರೆಗೆ ಹೊಡೆದುಕೊಂಡು ಹೋದಮೇಲೆಯೇ ಅದು ಮಲಗುತ್ತಿದ್ದಿತು. ಅನಂತರ ತೂರ ಬೋರೆಯಿಂದ ಸಾಯಂಕಾಲ ಬಂದ ನಂತರ ಉಳಿದ ದನಗಳೆಲ್ಲಾ ಒಳಕ್ಕೆ ಬಂದ ಕೂಡಲೇ ಎದ್ದು ನಿಂತುಕೊಂಡು ಬಿಡುತ್ತಿದ್ದಿತು. ರಾತ್ರಿ ನಾವೆಲ್ಲಾ ಮಲಗಿದ ಮೇಲೆ ಮಲಗುತ್ತಿದ್ದಿತು. ಬೆಳಗ್ಗೆ ನಮ್ಮ ಮುಖ ಕಂಡ ಕೂಡಲೇ ಎದ್ದು ನಿಂತು ಬಿಡುತ್ತಿದ್ದಿತು.

ಹೀಗೆ ನಮ್ಮ ಎಮ್ಮೆ ನಮ್ಮ ಮನೆಯಲ್ಲಿ ಒಂದು ಅದೃಶ್ಯ ವ್ಯಕ್ತಿಯಾಗಿದೆ. ಭಗವಂತ ಕಣ್ಣಿಗೆ ಕಾಣದಿದ್ದರೂ ನಮ್ಮ ಕಾರ್ಯಗಳ ಮೇಲೆ ತನ್ನ ಪ್ರಭಾವವನ್ನು ಬೀರುವಂತೆ ಎಮ್ಮೆ ಮೂಕಪ್ರಾಣಿಯಾದರೂ ನಮ್ಮ ಆಚರಣೆ ಮಾತಿಗಳಿಗೆ ಒಂದು ವಿಧವಾದ ಅಂಕುಶವಾಗಿದೆ. ಈ ಎಮ್ಮೆ ಮಾತ್ರವೇ ಅಲ್ಲ. ಯಾವ ಮೂಕ ಪ್ರಾಣಿಯ ಎದುರಿಗೂ ಮನಸ್ಸಿಗೆ ಬಂದಂತೆ ಮಾತನಾಡಲು ನಮಗೆ ಭಯವಾಗಿದೆ. ಯಾಕೆಂದರೆ ಯಾವ ಪ್ರಾಣಿಗೆ ಯಾವ ಶಕ್ತಿ ಇದೆಯೋ ಬಲ್ಲವರಾರು? ಹೀಗಿರುವಲ್ಲಿ ಎಮ್ಮೆಗೆ ಬುದ್ಧಿ ಇಲ್ಲ ಎಂದು ಹೇಳಿದರೆ ನಂಬುವುದಕ್ಕೆ ಆಗುತ್ತದೆಯೋ? ಆ ಎಮ್ಮೆಯ ಹಾಲನ್ನು ಕುಡಿದ ನಮ್ಮನೇ ನೋಡಿ!

ಲೇಖಕರು

ಗೊರೂರು ರಾಮಸ್ವಾಮಿ ಅಯ್ಯಂಗಾಗರು (೧೯೦೪-೧೯೯೧) ಕನ್ನಡದಲ್ಲಿ ಹಾಸ್ಯಭರಿತ ಬರವಣಿಗೆ ಮಾಡಿದ ಲೇಖಕರಲ್ಲಿ ಒಬ್ಬರು. ಗಾಂಧಿವಾದಿಯಾಗಿದ್ದ ಗೊರೂರರು ಸ್ವಾತಂತ್ಯ್ರ ಚಳುವಳಿಯಲ್ಲಿ ಪಾಲುಗೊಂಡವರು. ಹೇಮಾವತಿ ತೀರದಲ್ಲಿ ಮತ್ತು ಇತರ ಪ್ರಬಂಧಗಳು, ಹಳ್ಳಿಯ ಚಿತ್ರಗಳು, ನಮ್ಮ ಊರಿನ ರಸಿಕರು, ಬೈಲುಹಳ್ಳಿಯ ಸರ್ವೆ, ಮುಂತಾದವು ಇವರ ಪ್ರಬಂಧ ಸಂಕಲನಗಳು. ಅಮೆರಿಕದಲ್ಲಿ ಗೊರೂರು ಅವರ ಪ್ರವಾಸ ಕಥನ, ವಿನೋದ ಶೈಲಿಯಲ್ಲಿ ಬರೆಯುವ ಗೊರೂರರು ಕನ್ನಡದಲ್ಲಿ ಬಹಳ ಜನಪ್ರಿಯತೆಯನ್ನು ಪಡೆದ ಲೇಖಕರು. ಅವರ ಅಮೆರಿಕದಲ್ಲಿ ಗೊರೂರು ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೧೯೮೦) ಬಂದಿದೆ. ಗೊರೂರರು ೧೯೮೨ರಲ್ಲಿ ಶಿರಸಿಯಲ್ಲಿ ನಡೆದ ೫೫ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿದ್ದರು.

ಆಶಯ

ಪ್ರಸ್ತುತ ಪ್ರಬಂಧವನ್ನು ‘ಹೇಮಾವತಿ ತೀರದಲ್ಲಿ ಮತ್ತು ಇತರ ಪ್ರಬಂಧಗಳು’ ಸಂಕಲನದಿಂದ ಆರಿಸಿಕೊಳ್ಳಲಾಗಿದೆ. ಸ್ವತಃ ಗಾಂಧಿವಾದಿಯಾಗಿದ್ದರೂ ಎಮ್ಮೆಯನ್ನು ಕುರಿತ ಗಾಂಧಿಯ ಅಭಿಪ್ರಾಯವನ್ನು ಒಪ್ಪದ ಗೊರೂರರು, ಎಮ್ಮೆಯ ಪರವಾಗಿ ವಾದ ಮಾಡುತ್ತಾರೆ. ಪ್ರಾಣಿಗೆ ಬುದ್ಧಿಯಿಲ್ಲ ಎಂಬುದು ಮನುಷ್ಯರ ಅಹಂಕಾರದ ನಿಲುವು. ಆದರೆ ಪ್ರಾಣಿಗಳಿಗೂ ಮನಸ್ಸು ಇದೆ; ಭಾವನೆ ಇದೆ. ನಮ್ಮ ಅಹಂಕಾರ ಬಿಟ್ಟು ವಿನಯದಿಂದ ನೋಡಿದರೆ ಇದರ ಸತ್ಯ ದರ್ಶನವಾಗುತ್ತದೆ ಎಂಬುದು ಲೇಖಕರ ಅಭಿಪ್ರಾಯವಾಗಿದೆ. ಲೇಖನವು ಹಾಸ್ಯಬರಹವಾಗಿದ್ದರೂ, ಆಳದಲ್ಲಿ ನಮ್ಮ ಸಂಸ್ಕೃತಿಯ ಅನೇಕ ವೈರುಧ್ಯಗಳನ್ನು ನಿರೂಪಿಸುತ್ತದೆ.

ಪದಕೋಶ

ಕಾಷ್ಠ=ಕಟ್ಟಿಗೆ. ತಾಮಸ=ಉಗ್ರಗುಣವುಳ್ಳ. ರಾಜಸ=ಕ್ಷಾತ್ರಗುಣವುಳ್ಳ, ಸಾತ್ವಿಕ=ಸೌಮ್ಯವಾದ. ತುಷ್ಟ=ಸಂತೃಪ್ತ. ಸೂರು=ಧಾರೆ. ಕೊಕ್ಕಿನ ಆಟ=ಖೋಖೋ ಆಟ. ಅಳ್ಳೆ=ಪಕ್ಕೆಲುಬು.

ಟಿಪ್ಪಣಿ

ಕಡಸು=ಇನ್ನೂ ಕರು ಹಾಕದ ಪ್ರಾಯದ ಎಮ್ಮೆ, ಮಣಕ, ಕಾಲುಬಾಯಿಜ್ವರ=ದನಗಳ ಕಾಲಿನ ಗೊರಸಿಗೆ ಬರುವ ಒಂದು ಕಾಯಿಲೆ, ಗೊಟ್ಟ=ದನಗಳಿಗೆ ಔಷಧಿ ಕುಡಿಸಲು ಬಳಸುವ ಬಿದಿರಕೊಳವೆ, ಬೋರೆ=ಹುಲ್ಲು ಮೇಯಿಸುವ ದಿಬ್ಬ

ಪ್ರಶ್ನೆಗಳು

೧.      ನಮಗೆ ಎಮ್ಮೆ ಪ್ರಕೃತಿಯಂತೆ ಶಾಶ್ವತ ಎಂದು ಹೇಗೆ ಲೇಖಕರು ಭಾವಿಸುತ್ತಾರೆ?

೨.      ಮಹಾತ್ಮ ಗಾಂಧಿಯವರು ಯಾಕೆ ಎಮ್ಮೆಯ ವಿರೋಧಿಯಾಗಿದ್ದರು?

೩.      ವಿಶ್ವಾಮಿತ್ರನನ್ನು ಯಾಕೆ ಕ್ರಾಂತಿಕಾರ ಎಂದು ಲೇಖಕರು ವರ್ಣಿಸುತ್ತಾರೆ?

೪.      ಎಮ್ಮೆಯ ಹಾಲು ರಾಜಸವೆಂದು ಮೆಚ್ಚಲು ಕಾರಣವೇನು?

೫.      ಎಮ್ಮೆ ಕರುವನ್ನು ಹೇಗೆ ಹಾಕುತ್ತಿತ್ತು ಮತ್ತು ಅದನ್ನು ತಪ್ಪಿಸಲು ಮಾಡಿದ ಉಪಾಯ ಹೇಗೆ ವ್ಯರ್ಥವಾಯಿತು?

೬.      ಲೇಖಕರು ತಮ್ಮ ಹೆಂಡತಿ ಊರಿಗೆ ಹೋದಾಗ ಎಮ್ಮೆಗೆ ಮಾಡಿದ ಮೋಸ ಎಂತಹುದು?

೭.      ಎಮ್ಮೆಯು ಕಾಯಿಲೆ ಬಿದ್ದಾಗ ಯಾವ ರೀತಿ ವರ್ತಿಸಿತು?

ಹೆಚ್ಚಿನ ಓದು

ಪುತಿನ : ಧೇನುಕ ಪುರಾಣ – ಪ್ರಬಂಧ

ಕುಂ. ವೀರಭದ್ರಪ್ಪ : ಎಲುಗನೆಂಬ ಕೊರಚನೂ ಚವುಡನೆಂಬ ಹಂದಿಯೂ – ಕಥೆ

ಸಿದ್ಧಲಿಂಗಯ್ಯ : ಕತ್ತೆ ಮತ್ತು ಧರ್ಮ – ಕವನ

ಅಜ್ಞಾತ ಕವಿ : ಗೋವಿನಹಾಡು – ಜನಪದ ಹಾಡು

ಫಕೀರ್ ಮಹಮ್ಮದ್ ಕಟ್ಪಾಡಿ : ಹತ್ಯೆ – ಕಥೆ