ನಮ್ಮ ಟ್ರಕ್ಕಿಂಗ್ ಗುಂಪು ದಕ್ಷಿಣ ಕನ್ನಡದ ಉಜಿರೆಯಲ್ಲಿ ಬಸ್ಸಿಳಿದಾಗ ಮಂಜು ಕವಿದ ಬೆಳಗಿನ ಮಬ್ಬು. ಜಿಟಿ ಜಿಟಿ ಮಳೆ, ಸೆಕೆಯ ನೆಲದಲ್ಲೂ ಚಳಿ. ಉಜಿರೆಯಿಂದ ೨೫ ಕಿ.ಮೀ. ದೂರದ ನಾವೂರಿಗೆ ಜೀಪುಗಳಲ್ಲಿ ಪ್ರಯಾಣ. ಕುದುರೆಮುಖ ಪರ್ವತಸಾಲುಗಳ ತಪ್ಪಿಲಿನಲ್ಲಿರುವ ನಾವೂರು ನಿಜವಾದ ಅರ್ಥದಲ್ಲಿ ಊರೇ ಅಲ್ಲ. ಅಲ್ಲಲ್ಲಿರುವ ಮನೆ – ಮಠಗಳ ಗುಂಪಿನ ಒಂದು ಪ್ರದೇಶ ಅದು. ನಾವೂರಿನಿಂದ ಎತ್ತರ ಕೋಡಿನ ಕುದುರೆಮುಖದ ದರ್ಶನವಾಗಬಹುದೆಂದು ನಿರೀಕ್ಷಿಸಿದ್ದ ನಮಗೆ ದಟ್ಟ ಮಂಜು ಅಡ್ಡಿಯಾಯಿತು. ಎಲ್ಲೆಲ್ಲೂ ಮಂಜು, ನಮ್ಮ ಜೊತೆಯಲ್ಲಿದ್ದವರೇ ಐದಾರು ಅಡಿ ಆಚೆ ಹೋದರೆ ಮಂಜಿನ ಲೋಕದ ಅಸ್ಪಷ್ಟ ಆಕೃತಿಗಳಾಗಿ ಬಿಡುತ್ತಿದ್ದರು.

ನಾವೂರಿನ ‘ಧಮಪೂಜಾರಿ’ ಅಂಗಡಿ ಮುಂದೆ ಒಂದೆಡೆ ಸೇರಿದ ನಮಗೆ ನಮ್ಮ ನಾಯಕರುಗಳಿಂದ ಪರ್ವತ ಹೇಗೆ ಹತ್ತಬೇಕು, ಹಳ್ಳ ಹೇಗೆ ದಾಟಬೇಕು, ಒಂದು ವೇಳೆ ಗುಂಪಿನಿಂದ ಅಗಲಿದರೆ ಯಾವ ಸಿಳ್ಳೆ-ಸಂಜ್ಞೆ ಮಾಡಬೇಕು, ಅಲ್ಲದೆ ಅನುಸರಿಸಬೇಕಾದ ನೀತಿ-ನಿಯಮಗಳೇನು ಇತ್ಯಾದಿಗಳ ಬಗ್ಗೆ ಉಪದೇಶವಾಯಿತು. ಧೂಮಪಾನ ಮತ್ತು ಮಧ್ಯಪಾನಗಳಿಗೆ ಅವಕಾಶವೇ ಇಲ್ಲ ಎಂದು ಖಡಾಖಂಡಿತವಾಗಿ ಹೇಳುವಾಗ ತಮ್ಮ ರೆಗ್ಸಿನ್ ಬೆನ್ನು ಬ್ಯಾಗಿನಲ್ಲಿ ಮುಚ್ಚಿಟ್ಟು ತಂದಿದ್ದ ಕೆಲವರ ಮುಖಗಳು ಆರಂಭದಲ್ಲೇ ಪೆಚ್ಚಾದವು. ಪ್ರತಿಯೊಬ್ಬರೂ ಅವರವರ ಲಗೇಜುಗಳಲ್ಲದೆ ನಾಲ್ಕು ದಿನಕ್ಕೆ ಬೇಕಾಗಬಹುದಾದ ಅಡಿಗೆ ತಿಂಡಿ ಪದಾರ್ಥಗಳನ್ನು ಸಮನಾಗಿ ಹಂಚಲಾಯಿತು. ಬ್ರೆಡ್ಡು-ಬನ್ನುಗಳ ಬ್ರೇಕ್ ಫಾಸ್ಟ್ ನಂತರ ತಮ್ಮ ಸಾಹಸ ಯಾತ್ರೆ ಧೂಮ ಪುಜಾರಿ ಅಂಗಡಿಯಿಂದ ಆರಂಭವಾಯಿತು.

ಹಸಿರು ವನರಾಶಿಯ ನಡುವೆ ಸೀಳು ಹಾದಿಯಲ್ಲಿ ಒಂದೊಂದೇ ಹೆಜ್ಜೆ ಇಕ್ಕುತ್ತಾ ಮುಂಬರಿಯತೊಡಗಿದಂತೆ ಹೊಸಬರಿಗಂತೂ ಯಾವ ಲೋಕಕ್ಕೆ ಹೋಗುತ್ತಿದ್ದೇವೋ ಎಂಬ ಕುತೂಹಲ. ಬಾನೊಡನೆ ನಂಟು ಬೆಳೆಸಿದ ಬೃಹದಾಕಾರದ ಮರಗಳ ನಡುವೆ, ಕಾಲಿಗೆ ತೊಡರುವ ಸೊಪ್ಪುಸೆದೆ ಬಳ್ಳಿಗಳನ್ನು ದಾಟುತ್ತಾ ಇಷ್ಟಿಷ್ಟೇ ಮೇಲೇರತೊಡಗಿದಂತೆ ಮಂಜು ಕೂಡ ಕರಗತೊಡಗಿತ್ತು. ಅಷ್ಟರಲ್ಲಿ ಯಾರೋ ಒಬ್ಬ ಕೂಗಿಕೊಂಡ. ‘ಅದೋ ನೋಡಿರಲ್ಲಿ ಕುದ್ರೆಮುಖ ಪೀಕ್’. ಅರಳೆರಾಶಿಗಳ ನಡುವಿನಿಂದ ತನ್ನ ಶಿರಭಾಗವನ್ನು ಮಾತ್ರ ಹೊರಹಾಕಿ ನಮ್ಮನ್ನೇ ದಿಟ್ಟಿಸುತ್ತಿದ್ದ ಆ ಶಿಖರ ಯಾವುದೋ ಒಂದು ಅದ್ಭುತದಂತೆ ಕಾಣತೊಡಗಿತ್ತು. ಅಷ್ಟೆತ್ತರದಲ್ಲಿ ಶಿಖಿರವಿದೆಯೇ? ಅಯ್ಯೋ ದೇವರೆ, ಹತ್ತುವುದಾದರೂ ಹೇಗೆ? ಕೆಲವರು ಇಲ್ಲೇ ಉದ್ಗಾರವೆತ್ತತೊಡಗಿದರು. ನಿಂತಲ್ಲೇ ನಿಂತು ವಿಸ್ಮಯದಿಂದ ನೋಡುತ್ತಿದ್ದಂತೆ ಮಂಜು ಮತ್ತೆ ಮುತ್ತಿಗೆ ಹಾಕಿ ಏನೂ ಕಾಣದಾಯಿತು.

ಜಡಿಮಳೆಯಲ್ಲಿ ತೊಯ್ಯುತ್ತಾ ತಂಗಾಳಿಗೆ ಮೈಯೊಡ್ಡಿದ್ದೆವಾದರೂ ನಾವು ಏರುತ್ತಿದ್ದ ಕಾಲುಹಾದಿ ಕಡಿದಾಗಿತ್ತಾದ್ದರಿಂದ ಎಲ್ಲರ ಮೈಯಲ್ಲೂ ತೊಟ್ಟಿಕ್ಕುವ ಬೆವರು. ಉಸಿರು, ನಿಟ್ಟಿಸಿರು. ಮಾತೇ ಇಲ್ಲದ ಬರೀ ಮೌನ. ಆ ಮೌನವನ್ನು ಸೀಳುವಂತೆ ಆಗಾಗ ಜೀರುಂಡೆಗಳ ಶಬ್ದ. ಆಕಾಶಕ್ಕೆ ಚಾಚಿಕೊಂಡ ಘೋರಾರಣ್ಯದ ಆ ಅನಿರ್ವಚಣಿಯ ಮೌನಕ್ಕೂ, ಆ ಮೌನವನ್ನು ಸೀಳುತಿದ್ದ ಜೀರುಂಡೆಗಳ ಜೀತ್ಕಾರಕ್ಕೂ, ದೂರದಲ್ಲೇಲ್ಲೋ ಬೀಳುವ ಝುರಿಯ ನೀರಿನ ಭೋರ್ಗೆರೆತಕ್ಕೂ ಒಗ್ಗಿಕೊಳ್ಳದ ನಮ್ಮ ಬಯಲುಸೀಮೆಯವರ ಮನಸ್ಸಿನಲ್ಲಿ ಭಯದ ಅಲೆಗಳೇ ಏಳತೊಡಗಿದ್ದವು.

ಸುಮಾರು ೫ ಕಿ.ಮೀ. ಮೇಲೇರಿದ್ದವೆಂದು ಕಾಣುತ್ತದೆ. ಅಲ್ಲೊಂದು ಕಡೆ ವಿಶ್ರಾಂತಿ. ಆದರೆ ಹೆಸರಿಗೆ ಮಾತ್ರ ವಿಶ್ರಾಂತಿ. ಆದರೆ ಹೆಸರಿಗೆ ಮಾತ್ರ ವಿಶ್ರಾಂತಿ. ಏಕೆಂದರೆ ಇದುವರೆಗೆ ನಾವು ಮಲೆನಾಡಿನ ಇಂಬಳಗಳ ಬಗ್ಗೆ ಯೋಚಿಸಿಯೇ ಇರಲಿಲ್ಲ. ರಕ್ತ ಹೀರುವ ಜಿಗಣೆಗಳ ಅನುಭವ ಪಡೆಯಲಿ ಎಂಬ ಕಾರಣಕ್ಕಾಗಿಯೇ ನಮ್ಮ ನಾಯಕರುಗಳು ಈ ಜಿಗಣೆಗಳ ಸುದ್ದಿಯನ್ನೇ ನಮಗೆ ಹೇಳಿರಲಿಲ್ಲ. ವಿಶ್ರಾಂತಿಗೆಂದು ಕೂರುತ್ತಿದ್ದಂತೇ ಬೂಟಿನೊಳಗಡೆ, ಕಾಲುಚೀಲದೊಳಗೆ, ಹಿಮ್ಮಡಿ, ಮೊಣಕಾಲು ಅಲ್ಲದೆ ವಿಚಿತ್ರ ಪ್ರಾಣಿಗಳೆಂದರೆ, ಕಚ್ಚುವಾಗ ಏನೇನೂ ಗೊತ್ತಾಗುವುದಿಲ್ಲ. ಹೊಟ್ಟೆಯೊಡೆಯುವಂತೆ ರಕ್ತ ಹೀರಿದ ಮೇಲೆ ಒಂದಿಷ್ಟು ಕೆರೆತ. ಆಗ ನೋಡಿಕೊಂಡು ಕಿತ್ತರೆ ಚೆಳ್ಳೆನೆ ಹಾರುವ ರಕ್ತದ ಜೊತೆ ಈಚೆ ಬರುತ್ತವೆ. ಈ ಜಿಗಣೆಗಳ ಧಾಳಿಗೆ ನಮ್ಮ ಇಡೀ ಗುಂಪು ಪ್ರಕ್ಷುಬ್ಧವಾಯಿತು. ಪ್ಯಾಂಟು ಬಿಚ್ಚಿ ನೋಡಿಕೊಳ್ಳುವವರೆಷ್ಟು ಜನ. ಕೂಗಾಡುವವರೆಷ್ಟು ಜನ. ನಮ್ಮ ಮುಂದಾಳು ಹೇಳುತ್ತಿದ್ದರು ಮಳೆಗಾಲದ ಮನೆನಾಡೆಂದರೆ ಇದೇ ವಿಶೇಷ. ಹಿಡಿಯಿರಿ ಚಟ್ನಿ ಮಾಡೋಣ! ಇಲ್ಲಿಂದ ಮುಂದಕ್ಕೆ ನಮ್ಮ ದಾರಿ ಪೂರ್ತಾ ಜಿಗಣೆಗಳ ಸುದ್ದಿಯೇ ಆಯಿತು. ಕೆಲವರು ಕಾಲಿಗೆ ಹೊಗೆಸೊಪ್ಪು ಲೇಪಿಸಿದರು. ಅದರ ಈ ಕುದ್ರೆಮುಖದ ಕುದ್ರೆಯಂಥಾ ಜಿಗಣೆಗಳು ಯಾರಿಗೂ ರಿಯಾಯಿತಿ ತೋರಿಸಲಿಲ್ಲ. ನಮ್ಮನ್ನೇ ಕುದ್ರೆಗಳಾಗಿಸಿ ಸವಾರಿ ಮಾಡಿಯೇ ಮಾಡಿದವು.

ಮಧ್ಯಾಹ್ನ ೨ ಗಂಟೆಯ ವೇಳೆಗೆ ಹತ್ತಾರು ಕಣಿವೆ-ಕಂದರ ಹಾಯ್ದು, ಹತ್ತಿ ಇಳಿದು ಸುತ್ತಿ ಬಳಸುವ ಮೂಲಕ ಸುಮಾರು ೧೦ ಕಿ.ಮೀ. ನಡೆದು ಕೇವಲ ಎರಡೂವರೆ ಸಾವಿರ ಅಡಿ ಮಾತ್ರ ಮೇಲೇರಿದ್ದವು. ಏದುಸಿರು, ತಾಳ ಹೊಡೆಯುವ ಹೊಟ್ಟೆ. ಆದರೆ ಕ್ಷಣಾರ್ಧದಲ್ಲಿ ನಮ್ಮೆಲ್ಲ ಹಸಿವು ಆಯಾಸ ಮಾಯವಾಗಿಸುವಂಥ ವಿಸ್ಮಯ ಲೋಕಕ್ಕೆ ನಾವು ಕಾಲಿಡುತ್ತಿದ್ದೆವು. ಅದೊಂದು ಹೆಬ್ಬಂಡೆ. ಬಂಡೆಯ ಮೇಲೆ ಬರುತ್ತಿದ್ದಂತೆ ನಮ್ಮನ್ನು ಮುಚ್ಚಿಡುವ ಕಾಡಿಲ್ಲ. ಕಾಟ ಕೊಡುವ ಜಿಗಣೆಗಳಿಲ್ಲ. ಕಣ್ಮುಂದೆ ಮನಮೋಹಕ ಕಣಿವೆ, ಕಣಿವೆಯುದ್ದಕ್ಕೂ ಹಾಲ್ನೊರೆಯಂತೆ ಉಕ್ಕಿ ತುಂಬಿಕೊಂಡಿರುವ ಬೆಳ್ಮೋಡ. ದೂರದೂರದಲ್ಲಿ ತೆರೆತೆರೆ ಬೆಟ್ಟ ಸಾಲುಗಳು. ಆ ಸಾಲಿನ ಉದ್ದಕ್ಕೂ ಕೊರೆದಿಟ್ಟಂತೆ ಕಟ್ಟಿಕೊಂಡ ಮೋಡರಾಶಿಗಳು. ಮತ್ತೆಲ್ಲೋ ದೂರದಲ್ಲಿ ಮಸುಕಾಗಿ ದುಮ್ಮಿಕ್ಕುತ್ತಿರುವ ಜಲಪಾತ ದೃಶ್ಯ. ಬೆನ್ನ ಹಿಂದೆ ನಮ್ಮನ್ನೇ ಬಾಚಿ ತಬ್ಬಿಕೊಳ್ಳುತ್ತಿರುವ ಮಹಾನ್ ಪರ್ವತ. ಮೇಲಿಂದ ಉದುರುವ ಹೂಮಳೆ. ನಮ್ಮ ಗುಂಪಿನಲ್ಲಿದ್ದ ಆಶು ಕವಿಯೊಬ್ಬ ಪದ್ಯ ಬರೆದು ಹಾಡತೊಡಗಿದ್ದ. ಇದೇ, ಇದೇ, ನಿಜಕ್ಕೂ ಭಗವಂತನ ಶಿಖರ ಸಾನಿಧ್ಯ. ಈಗಾಗಲೇ ಶಿಖರವೇರಿ ಬಂದಿದ್ದ ಮತ್ತೊಬ್ಬ ಹೇಳುತ್ತಿದ್ದ, ಅಯ್ಯೋ ಹುಚ್ಚೇ, ಇದಿನ್ನೂ ಭಗವಂತನ ಪಾದ; ಮೇಲಿದೆ ಶಿಖರ ಸಾನಿಧ್ಯ. ಆ ಸಾನಿಧ್ಯಕ್ಕೆ ನೀ ಸೇರುವುದಿನ್ನೂ ನಾಳೆ ಸೂರ್ಯಾಸ್ಥಕ್ಕೇ. ಕವಿ ತನ್ನ ಬೆನ್ನ ಹಿಂದಿನ ಪರ್ವತ ದಿಟ್ಟಿಸುತ್ತಾ ದೀರ್ಘ ನಿಟ್ಟುಸಿರುಬಿಟ್ಟ. ಅಷ್ಟರಲ್ಲಿ ಬ್ರೆಡ್ಡು ಜಾಮು, ಬಿಸ್ಕೆಟ್ಸ್, ಬತ್ತಾಸುಗಳು ಬಂದು ನಮ್ಮ ಏಕಾಗ್ರತೆಯನ್ನು ಭಂಗಗೊಳಿಸಿದವು. ನಾವು ಮತ್ತೆ ಮೇಲೇರತೊಡಗಿದಂತೆ ಮಂಜು ಮತ್ತು ಮಳೆಯ ಚದುರಂಗದಾಟ ನಡೆದೇ ಇತ್ತು. ಆಗಾಗ ಮಳೆ, ಹಿಂದೆಯೇ ದಟ್ಟ ಮಂಜು, ಮತ್ತೆ ಮಂದ ಬೆಳಕು, ಒಂದಿಷ್ಟು ಬಿಸಿಲು ಇಣುಕಿದರಂತೂ ನಮ್ಮ ಕಣ್ಮುಂದೆ ಕಿನ್ನರ ಲೋಕವೇ ತೆರೆದುಕೊಳ್ಳುತ್ತಿತ್ತು. ಬೃಹದಾಕಾರದ ಬೆಟ್ಟ ಸಾಲುಗಳ ಮೇಲೆ ಉದುರುವ ಏಳುವ ಅಂಟುಪುರಲೆಗಳಂಥ ತಿಳಿ ಮೋಡಗಳು. ಅದಾಗ ಬಿದ್ದ ಮಳೆಯಿಂದ ಮೈತೊಳೆದುಕೊಂಡು ನಳನಳಿಸುವ ಹಸಿರಸಿರು ಕಾಡು. ದೃಷ್ಟಿ ಹಾಯಿಸುವವರೆಗೆ ಅದೇ ಕಾಡು, ಅದೇ ಗುಡ್ಡ, ಅದೇ ಬೆಟ್ಟಗಳ ವರ್ಣಮಯ ಮಾಲೆ, ಮೇಲೇರುತ್ತಾ ಹೋದಂತೆ ಹಿಂದೆ ನೋಡಿದ ಬೃಹತ್ ಬೆಟ್ಟಗಳು ಮರಿಗಳಾಗಿ ಬಿಡುತ್ತಿದ್ದವು. ಅದರ ಮೇಲೆ ಇನ್ನೊಂದು ಬೆಟ್ಟ ತಲೆಯೆತ್ತಿ ನಿಂತು ನಮ್ಮನ್ನು ಅಣಕಿಸುತ್ತಿತ್ತು. ಒಂದು ಹಂತದಲ್ಲಿ ಅಗಾಧವಾಗಿ ಕಾಣುವ ಬೆಟ್ಟ ಇನ್ನೊಂದು ಹಂತದಲ್ಲಿ ಅಲ್ಪ. ಹೀಗೇ ದಾರಿ ಸವೆಸಿ ಬೆಟ್ಟದಿಂದ ಬೆಟ್ಟಕ್ಕೆ ಹಾರಿ ಹಳ್ಳ, ಝರಿ ಮತ್ತು ಕಣಿವೆಗಳನ್ನು ದಾಟಿ ಮೊದಲ ದಿನದ ನಮ್ಮ ಪ್ರಯಾಣದ ೧೫ ಕಿ.ಮೀ. ದೂರದ ಗುರಿಯನ್ನು ಮುಟ್ಟಿ ‘ಹೆವಳ’ ಎಂಬ ಆಕರ್ಷಕ ಪ್ರದೇಶವನ್ನು ಬಂದು ತಲುಪಿದೆವು. ಬಹುಶಃ ಹವಳ ‘ಹೆವಳ’ವಾಗಿ ಮಾರ್ಪಟ್ಟಿರಬಹುದು. ಕರಿಮಣಿಗಳ ನಡುವೆ ಶೋಭಿಸುವ ಹವಳದಂತೆ ಈ ಇಡೀ ಬೆಟ್ಟ ಸಾಲುಗಳಲ್ಲಿ ನಾವು ಕಂಡ ತುಂಬ ಶೋಭಾಯಮಾನ ಪ್ರದೇಶ ಇದು. ಕುದ್ರೆಮುಖ ಶಿಖರ ಮತ್ತು ಬಲ್ಲಾಳರಾಯನದುರ್ಗ ಪರ್ವತಗಳ ನಡುವಿನ ಕಣಿವೆಯೇ ಹೆವಳ. ಎರಡೂ ಕಡೆಯೂ ಸ್ವರ್ಗದ ಕಡೆ ತಲೆಯತ್ತಿ ನಿಂತಿರುವ ಆ ಸುಂದರ, ೫,೦೦೦ ಅಡಿಗಳ ಎತ್ತರದಲ್ಲಿರುವ ಈ ಕಣಿವೆಯಲ್ಲಿ ಜನರಿದ್ದಾರೆ ಎಂಬುದೇ ಆಶ್ಚರ್ಯ, ಮನೆ ಮಠ ಜನಗಳಾದಿಯಾಗಿ ವ್ಯವಹಾರಿಕ ಮರೆತಿದ್ದ ನಮಗೆ ಆ ಸುಂದರ ಹಸಿರು ಚಿಮ್ಮುವ ಕಣಿವೆ ಪ್ರವೇಶಿಸುತ್ತಿದ್ದಂತೆ ಎದುರಾದ ಮೋಟು ದನಗಳು, ಮೇಕೆಗಳು ಮತ್ತು ನಾಲ್ಕು ಹುಲ್ಲಿನ ಮನೆಗಳನ್ನು ಕಂಡು ವಿಸ್ಮಯವೋ ವಿಸ್ಮಯ. ಇಲ್ಲಿ ಜನವಸತಿ ಆರಂಭವಾದದ್ದೇ ಒಂದು ರೋಮಾಂಚಕ ಕಥೆ. ಆ ಕಥೆಯನ್ನು ತಿಳಿಯಬೇಕಾದರೆ ಹೆವಳದ ೯೮ ವರ್ಷದ ‘ಸೈಮನ್ ಲೋಬೋ’ ಅವರನ್ನು ಭೇಟಿ ಮಾಡಲೇಬೇಕು.

ಸೈಮನ್ ಲೋಬೋ ಈವತ್ತಿಗೂ ಅತ್ಯಂತ ಆರೋಗ್ಯಪೂರ್ಣ ಮನುಷ್ಯ, ತುಂಬಿದ ಕಳೆಯ ಸಮೃದ್ಧ ದೇಹ. ನಿಷ್ಕಳಂಕ ಮನಸ್ಸಿನ ಲೋಬೋ ಎತ್ತರದ ಧ್ವನಿಯಲ್ಲಿ ಮಾತನಾಡುತ್ತಾ ನಿರರ್ಗಳವಾದ ಹರಟೆಗೂ ತೊಡಗುವ ಉತ್ಸಾಹಿ. ೧೮೯೩ರ ಜೂನ್ ೨೩ರಂದು ಮಂಗಳೂರು ಹತ್ತಿರದ ಮಡೆಂತಾರ್ ನಲ್ಲಿ ಹುಟ್ಟಿದ ಲೋಬೋನನ್ನು ೧೯೧೯ರಲ್ಲಿ ಇಟಾಲಿಯನ್ ಧರ್ಮಗುರು ಮರಿಯಾನ್ ಲೂನಾಜಿ ಈ ಪರ್ವತಕ್ಕೆ ಕರೆತಂದರು ಕುದ್ರೆಮುಖದ ಪರ್ವತ ಶಿಖರದಲ್ಲಿ ಕಟ್ಟಿದ್ದ ಚರ್ಚನ್ನು, ಬೇಸಿಗೆಯಲ್ಲಿ ಜವಾಬ್ದಾರಿ ಲೋಬೋನದಾಗಿತ್ತು. ಗುರು ಮರಿಯನ್ ಲೂನಾಜಿ ಲೋಬೋನನ್ನು ಕೇವಲ ಕೆಲಸಗಾರನನ್ನಾಗಿ ಕಾಣಲಿಲ್ಲ. ಹೆವಳದ ಸುಂದರ ಕಣಿವೆಯ ಫಲವತ್ತಾದ ಚಿನ್ನದಂಥ ಭೂಮಿಯನ್ನು ಅವನ ಹೆಸರಿಗೆ ಮಂಜೂರು ಮಾಡಿಸಿದರು. ಆರಂಭದಲ್ಲಿ ಹತ್ತು ಎಕರೆ ಮಂಜೂರಾಗಿದ್ದನ್ನು ಲೋಬೋ ತನ್ನ ಶ್ರಮದಿಂದ ವಿಸ್ತರಿಸಿಕೊಂಡ. ಜಮೀನೇನೋ ಸುಲಭವಾಗಿ ಮಂಜೂರಾಯಿತು. ನಿಜ. ಆದರೆ ಆ ದಟ್ಟರಾಣ್ಯವನ್ನು ಕಡಿದು, ಅಗೆದು ಬೆಳೆಯ ಹಸಿರು ತುಂಬಿದ್ದು ಮಾತ್ರ ಲೋಬೋನ ಜೀವಮಾನದ ಸಾಹಸಗಳಲ್ಲಿ ಒಂದು. ಲೋಬೋ ಇವತ್ತಿಗೂ ನೆನಸಿಕೊಳ್ಳುತ್ತಾನೆ- “‘ಎಂಥಾ ಮಳೆ ಆಗ? ಗೊರಬಿನ ಕೆಳಗಿನ ಮೊಣಕಾಲಿಗೆ ಮಳೆ ಹೊಡೆದೂ ಹೊಡೆದೂ ರೋಮಗಳೇ ಉದುರಿಹೋಗುತ್ತಿದ್ದವು. ಮತ್ತೆ ಬ್ಯಾಸಿಗೆಗೆ ರೋಮ ಚಿಗುರುತ್ತಿದ್ದವು”’. ಇನ್ನು ಕೆಳಗಿನ ಸಂಸೆ ಮತ್ತು ಕಳಸದಿಂದ ತಂದ ಜಾನುವಾರುಗಳನ್ನು ಬೆಟ್ಟದ ಮೇಲಿನ ಹವೆಗೆ ಒಗ್ಗಿಸಿಕೊಳ್ಳಲು ವರ್ಷಗಳೇ ಬೇಕಾದವಂತೆ. ಅಷ್ಟೇ ಅಲ್ಲ, ಆ ಕಾಲದಲ್ಲಿದ್ದ ಹುಲಿಗಳಿಂದ ಜಾನುವಾರು ರಕ್ಷಿಸುವುದೇ ದೊಡ್ಡ ಕಷ್ಟವಾಗುತ್ತಿತ್ತು. ಲೋಬೋ ಅಪ್ರತಿಮ ಬೇಟೆಗಾರನೂ ಹೌದು. ಲೋಬೋನ ಹತ್ತಿರ ೪ ಲೈಸೆನ್ಸ್ ಪಡೆದ ಬಂದೂಕಗಳಿದ್ದವಂತೆ. ಒಮ್ಮೆ ಬ್ರಿಟಿಷ್ ದೊರೆಗಳು ಲೋಬೋನನ್ನು ಜೊತೆಗಿಟ್ಟುಕೊಂಡು ಬೇಟೆಗೆ ಹೊರಟರು. ಕ್ರೂರ ಮುಖದ ಬಲಾಢ್ಯ ಕಾಟಿಯೊಂದು ಎದುರಾಯಿತು. ದೊರೆ ರೈಫಲ್ ನಿಂದ ಎಷ್ಟು ಹೊಡೆದರೂ ಅದಕ್ಕೆ ಏಟೇ ಬೀಳಲಿಲ್ಲ. ಪ್ರತಿಯಾಗಿ ದೊರೆಗಳ ಎದುರಾಗಿ ಅದು ಕೋಪದಿಂದ ನುಗ್ಗತೊಡಗಿತು. ನುರಿತ ಬೇಟೆಗಾರ ಲೋಬೋ ತನ್ನ ಉದ್ದನೆಯ ಬಂದೂಕದಿಂದ ಕಾಟಿಯ ಬುರುಡೆಗೇ ಗುರಿಯಿಟ್ಟು, ಕ್ಷಣಮಾತ್ರಲ್ಲಿ ಕಾಟಿ ಉರುಳಿ ದೊರೆಗಳ ರಕ್ಷಣೆಯಾಯಿತು. ಆಗ ದೊರೆ ತಮ್ಮ ರೈಫಲನ್ನು ಲೋಬೋಗೆ ಬಹುಮಾನವಾಗಿ ಕೊಟ್ಟರು. ಬೇಟೆಯ ನೆನಪುಗಳನ್ನು ಹೇಳುವಾಗ ಲೋಬೋ ಭಾವುಕನಾಗುತ್ತಾನೆ. ಅವನ ಕಣ್ಣಂಚಿನಲ್ಲಿ ಆ ಪರಾಕ್ರಮ ಈಗ ಯಾರಿಗಿದೆ ಎಂಬ ಅಣಕ ತುಂಬಿರುತ್ತದೆ. ತನ್ನ ಜೀವನದಲ್ಲಿ ನಾಲ್ಕು ಹುಲಿಗಳನ್ನು ನೇರ ಗುರಿಯಿಟ್ಟು ಹೊಡೆದ ಲೋಬೋಗೆ ಬ್ರಿಟಿಷ್ ದೊರೆಗಳಿಂದ ವಿವಿಧ ಬಹುಮಾನಗಳು ಲಭಿಸಿವೆಯಂತೆ!

ಲೋಬೋನ ಸಾಂಸಾರಿಕ ಜೀವನ ಕಡಿಮೆಯೇನಲ್ಲ. ಲೋಬೋಗೆ ೪ ಜನ ಹೆಂಡತಿಯರು. ಒಟ್ಟು ೩೨ ಮಕ್ಕಳು. ಚಿಕ್ಕ ವಯಸ್ಸಿನಲ್ಲಿಯೇ ಅನೇಕ ಮಕ್ಕಳು ತೀರಿಕೊಂಡು ಕೇವಲ ೯ ಮಕ್ಕಳು ಉಳಿದವು. ಅದರಲ್ಲಿ ಹಿರಿಯ ಮತ್ತು ಎರಡನೇ ಪತ್ನಿಯ ಮಕ್ಕಳು ಈಗ ಎಲ್ಲಿದ್ದಾರೆಂಬುದೇ ಲೋಬೋಗೆ ಗೊತ್ತಿಲ್ಲ ‘ಘಟ್ಟದ ಕೆಳಗೆ ಎಲ್ಲೋ ಇದ್ದಾರಂತೆ’ ಎಂದು ಲೋಬೋ ತುಂಬಾ ನಿರ್ಲಿಪ್ತವಾಗಿ ನುಡಿಯುತ್ತಾ ಹತ್ತಾರು ವರ್ಷದಿಂದ ಅವರ ಮುಖವನ್ನೇ ನೋಡಿಲ್ಲ ಎನ್ನುತ್ತಾನೆ. ಮೂರನೆಯ ಹೆಂಡತಿಗೆ ಮಕ್ಕಳಿಲ್ಲ, ಹಾಗೆ ಸತ್ತಳು. ನಾಲ್ಕನೇ ಹೆಂಡತಿಯ ನಾಲ್ಕು ಜನ ಮಕ್ಕಳಲ್ಲಿ ಇಬ್ಬರು ಜೊತೆಗಿದ್ದಾರೆ. ಒಬ್ಬ ಮಗ ಬಿ.ಎ. ಪಾಸು ಮಾಡಿ ಕೊಪ್ಪ ಹತ್ತಿರದ ಒಂದು ಎಸ್ಟೇಟ್ ನಲ್ಲಿದ್ದಾನೆ. ಪತ್ನಿಯರು ಯಾರೂ ಉಳಿದಿಲ್ಲ. ಐದು ತಮ್ಮಂದಿರಲ್ಲಿ ಮೂರು ಜನ ಲೋಬೋನ ಜೊತೆಗೇ ಇದ್ದವರು ಈಗ ಬೇರೆ ಬೇರೆಯಾಗಿದ್ದಾರೆ. ಲೋಬೋ ತಾನೇ ಕಷ್ಟಪಟ್ಟು ಸಂಪಾದಿಸಿದ ಜಮೀನನ್ನು ಪ್ರಾಮಾಣಿಕವಾಗಿ ಎಲ್ಲ ತಮ್ಮಂದಿರಿಗೂ ಹಂಚಿದ್ದಾನೆ.

ಇಡೀ ಶತಮಾನ ಕಂಡ ಈ ಘಾಟಿ ಮುದುಕನನ್ನು ಕುರಿತು “‘ಕಾಲ ಈಗ ಹೇಗೆ ಅನ್ನಿಸುತ್ತೇ’ ಎಂದು ಪ್ರಶ್ನಿಸಿದಾಗ ಕೊಂಚ ಬೇಸರಗೊಂಡಂತೆ ಕಂಡ ಲೋಬೋ “ಈಗೇನು ಇದೆ? ಎಲ್ಲಾ ಉರುಟಿ, ಬೇಟೆ ಮಾಡಲು ಪ್ರಾಣಿಗಳೇ ಇಲ್ಲ. ಆಗಿನ ಬ್ರಿಟಿಷ್ ದೊರೆಗಳು ವರ್ಷ ವರ್ಷ ಪ್ರೆಸೆಂಟ್ ಮಾಡುತ್ತಿದ್ದರು. ಆಗ ನಾನು ಹೇಗೆ ಮಾತನಾಡುತ್ತಿದ್ದೆ, ಪ್ರತಿವರ್ಷ ಬೇಸಿಗೆಯ ಸುಖಕ್ಕಾಗಿ ಅದೆಷ್ಟು ಆಫೀಸರುಗಳು ಬರುತ್ತಿದ್ದರು. ಮಂಗಳೂರಿನ ದೊರೆಗಳು ತನ್ನನ್ನು ಅದೆಷ್ಟು ಪ್ರೀತಿಸುತ್ತಿದ್ದರು? ಈಗೇನಿದೆ… ಏನೂ ಉಳಿದಿಲ್ಲ”’ ಲೋಬೋ ತನ್ಮಯನಾದ, ಅವನ ಪ್ರಕಾಶವಾದ ಕಣ್ಣುಗಳು ಅದೆಲ್ಲಿಯೇ ನೆಟ್ಟು ಚಿಂತಿಸತೊಡಗಿದವು. ಅಷ್ಟರಲ್ಲಿ ಲೋಬೋನ ಮಗ ಅಲ್ಲಿಗೆ ಬಂದುವನ್ನು ಕಂಡು ಉಳಿದೆಲ್ಲಾ ವಿಚಾರವಾಗಿ ನನ್ನ ಮಗನನ್ನು ಕೇಳಿ, ಹೇಳ್ತಾನೆ ಎಂದು ಹೇಳಿ ‘ನಾನು ದೇವರ ಪುಸ್ತಕ ಓದಬೇಕು’ ಎನ್ನುತ್ತಾ ತುಳುಭಾಷೆಯ ಕನ್ನಡ ಲಿಪಿಯಲ್ಲಿ ಬರೆದ ಬೈಬಲ್ ಪುಸ್ತಕವನ್ನು ಕೈಗೆತ್ತಿಕೊಂಡ, ಕಣ್ಣು, ಕಿವಿ, ಮೂಗಿನಾದಿಯಾಗಿ ಎಲ್ಲಾ ಪಂಚೇಂದ್ರಿಯಗಳೂ ಸುಷ್ಪಷ್ಟವಾಗಿ ಕೆಲಸ ಮಾಡುತ್ತಿರುವ ಈ ೯೮ ವರ್ಷದ ಪಿತಾಮಹನ ಆರೋಗ್ಯ ಮತ್ತು ನಿಷ್ಕಲ್ಮಶ ಮನಸ್ಸು ಆಶ್ಚರ್ಯವನ್ನುಂಟು ಮಾಡಿತು. ಬಹುಶಂ ಲೋಬೋ ಬೆಳೆದ ಹಸನಾದ ಪ್ರಕೃತಿ ಆತನನ್ನು ಹಾಗಿಟ್ಟಿರಬಹುದಲ್ಲವೆ?

ಅಂದು ರಾತ್ರಿಗೆ ಸೈಮನ್ ಲೋಬೋನ ತಮ್ಮನ ಮಗನಾದ ಬರ್ನಾಡ್ ಲೋಬೋ ಮನೆಯಲ್ಲಿ ನಮ್ಮ ವಿಚಾರ. ಬರ್ನಾಡ್ ಲೋಬೋ ಮನೆಯ ಪಕ್ಕಕ್ಕೇ ಅಂಟಿಕೊಂಡಿರುವ ಸಾಮಾನ್ಯವಾದ ಕೊಟ್ಟಿಗೆಯೊಂದನ್ನು ಸ್ವಚ್ಛಗೊಳಿಸಿ ನಮ್ಮಲ್ಲಿದ್ದ ಪ್ಲಾಸ್ಟಿಕ್ ಚೀಲಗಳನ್ನು ಹಾಸಿ ಕುಂತಾಗ ಹೋದ ಜೀವ ಬಂದಂತಾಯಿತು. ಪದ ಹಾಡತೊಡಗಿದ್ದ ಕಾಲುಗಳಿಗೆ ಒಂದಿಷ್ಟು ವಿಶ್ರಾಂತಿ ದೊರೆಯಿತು. ಅದರೇನು, ನಮ್ಮ ಮುಖಂಡರು ಸುಮ್ಮನಿರುತ್ತಾರೆಯೇ? ‘ಏಳಿ ಏಳಿ ಅಡುಗೆ ತಯಾರಿ ನಡೆಸಿ’ ಎನ್ನುವ ಉಪಟಳದಿಂದ ಯಾರಿಗೂ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಬರ್ನರ್ಡ್‌ರ ಮನೆಯಲ್ಲಿ ಒಣಸೌದೆ ಪಡೆದು ಒಲೆ ಹೊತ್ತಿಸಿ, ಬಿಸಿ ಬೇಳೆಭಾತ್ ತಯಾರಿಸಿ ಕಾಟಾಚಾರಕ್ಕೆ ಅಂದರೆ ಪ್ರಾಣ ಉಳಿಸಿಕೊಳ್ಳುವುದಕ್ಕಾಗಿ ಇಷ್ಟು ತಿಂದು, ನೆಲಕ್ಕೆ ತಲೆಕೊಟ್ಟೆವೋ ಇಲ್ಲವೋ, ಕ್ಷಣದಲ್ಲೇ ನಿದ್ರಾದೇವಿ ನಮ್ಮನ್ನು ಅಲಂಗಿಸಿಕೊಂಡಿದ್ದಳು.

ಬೆಳಗ್ಗೆ ೬ಕ್ಕೆ ಎದ್ದಾಗ ಹೆವಳ ಅದೇ ಮಂಜಿನ ಮಂಪರಿನಲ್ಲಿ ತೂಕಡಿಸುತ್ತಿತ್ತು. ಅಗಾಧವಾಗಿ ಕವಿದ ಮಂಜಿನ ನಡುವೆ ನಮಗೆ ನಾವೇ ಇಲ್ಲವಾಗಿದ್ದೆವು. ಈ ಹಾಳು ಮಂಜಿನ ಕಾಟ ಸಾಕಪ್ಪಾ ಎಂದು ಗೊಣಗಿಕೊಂಡು ಹೆವಳದ ಸೌಂದರ್ಯವನ್ನು ಸವಿಯಲಾಗದೇ ಚಡಪಡಿಸುತ್ತಿದ್ದ ನಮಗೆ ನಿನ್ನಿನ ಮಾಯಾಲೋಕದ ನೆನಪಾಗಿ ಇಷ್ಟರಲ್ಲೇ ಮಂಜು ಕರಗಿದರೂ ಕರಗಬಹುದು ಎಂಬ ಆಶಾಭಾವನೆಯೂ ಮೂಡಿತು. ಸುಮಾರು ೯ ಗಂಟೆಗೆ ನಿಜಕ್ಕೂ ಕರಗತೊಡಗಿತು. ಹೆವಳದ ಹಸಿನೆಲದಿಂದ ಬುಗ್ಗೆಬುಗ್ಗೆಯಾಗಿ ಮೇಲೇಳತೊಡಗಿದ ಮಂಜು ಸುತ್ತಲಿನ ಪರ್ವತಗಳ ಬುಡ ಸೇರತೊಡಗಿತು. ಇನ್ನೂ ಕೊಂಚ ಹೊತ್ತಿನಲ್ಲಿ ಪರ್ವತಗಳ ತಳವೂ ಅಲುಗತೊಡಗಿ ಇಡೀ ಮಂಜು ಶಿಖರಗಳಲ್ಲಿ ಸಂಚಯಿಸತೊಡಗಿತು. ಅಷ್ಟೇ ಅಲ್ಲ. ಅಲ್ಲೆಲ್ಲೋ ಮೂಡಲಲ್ಲಿ ಸೂರ್ಯನಿರಬಹುದು ಎಂಬ ಅನುಮಾನ ಬರುವಂಥ ಮಂದ ಬೆಳಕಿನ ಆಕೃತಿಯೊಂದು ಇಣುಕತೊಡಗಿತು. ಅನುಮಾನವಿಲ್ಲ. ಅವನು ಸೂರ್ಯನೇ ಹೌದು ಎಂದು ಖಚಿತಪಡಿಸಿಕೊಳ್ಳಲೂ ಕೊಂಚ ಸಮಯ ಹಿಡಿಸಿತು.

ಈಗ ನೋಡಬೇಕು ಹೆವಳನ್ನು. ಸುತ್ತಲೂ ಬೆಟ್ಟದ ಕೋಟೆ, ಆ ಕೋಟೆಗಳ ಮೇಲಿಂದ ಅಲ್ಲಲ್ಲಿ ಜಿನುಗುವ ಬಿಳಿ ದಾರದಂಥ ಜರಿಗಳು, ಆದರೆ ಹೆವಳದಿಂದ ಮೇಲಕ್ಕೆ ಈ ಯಾವ ಬೆಟ್ಟಗಳೂ ದಟ್ಟ ಕಾಡಿನ ಬೆಟ್ಟಗಳಲ್ಲ. ಬೆಟ್ಟ ಬೆಟ್ಟಗಳ ನಡುವಿನ ಕೊರಕಲಿನಲ್ಲಿ ನೀರು ಸರಿಯುವ, ಹರಿಯುವ ಸಂದುಗಳಲ್ಲಿ ಮಾತ್ರ ಖಡು. ಉಳಿದಂತೆ ಹಸಿರು ಹುಲ್ಲಿನ ಬರೀ ಗುಡ್ಡಗಳು. ಎತ್ತ ನೋಡಿದರೂ ಹಸಿರು ಕಣ್ತುಂಬಿಕೊಳ್ಳುವ ಆ ಹಸಿರನ್ನು ಆಸ್ವಾದಿಸುತ್ತಾ ಹೆವಳದ ಕಣಿವೆಗೆ ದೃಷ್ಟಿ ಹಾಯಿಸಿದರೆ, ತಿಳಿ ನೀರು ತುಂಬಿದ ಗದ್ದೆಗಳು. ಆ ಗದ್ದೆಗಳು ತಿಳಿ ನೀರಿನಲ್ಲಿ ಅದಾಗ ನಾಟಿ ಮಾಡಿದ ಭತ್ತದ ಪೈರುಗಳ ಪ್ರತಿಬಿಂಬ. ಗದ್ದೆಯ ಅಂಚಿಗೆ ಆ ಕಡೆ ಈ ಕಡೆಯಿಂದ ಒತ್ತರಿಸಿ ಹರಿಯುವ ನೊರೆನೀರ ಹಳ್ಳ. ಹಳ್ಳದ ನೀರು ಅಲ್ಲಲ್ಲಿ ತಡೆ ನಿಂತು ಉಂಟಾದ ಸುಂದರ ಕೊಳ. ಹಳ್ಳದ ದಂಡೆಗೆ ಬೆಳೆದು ನಿಂತ ಹುಲ್ಲು ಎಳೆಗಾಲಿಗೆ ಬಳಕುವ ಪರಿ, ಆ ಹುಲ್ಲಿನೊಡಲಿಂದ ಹುಟ್ಟಿ ಬೆಳೆದು ನಿಂತ ಹಲಸು, ಮಾವು ಮುಂತಾದ ಫಲಭರಿತ ಮರ-ಗಿಡಗಳು. ಅದರಾಚೆಗೆ ಮುಗಿಲನ್ನೇ ಮುತ್ತಿಕ್ಕುವ ಹಸಿರಸಿರು ಶಿಖರಗಳು. ಇಡೀ ಪರಿಸರದಲ್ಲಿ ಗಿಜಗುಟ್ಟುವ ನಾನಾ ರೀತಿಯ ಮೋಹಕ ಪಕ್ಷಿಗಳು. ಬೃಹತ್ ಮದಗಳಿಗೆ ಕಟ್ಟಿಕೊಂಡ ಜೇನು ಹೆಜ್ಜೇನುಗಳ ಕೊಡ. ಬಾಳೆ, ಹಲಸು, ಸೀಬೆ ಹಣ್ಣುಗಳನ್ನು ಸ್ವಚ್ಛಂದವಾಗಿ ಅಡ್ಡಾಡುತ್ತಾ ತಿಂದ ನಮಗೆ ಅಲ್ಲಿ ಯಾರ ಅಡ್ಡಿ ಆತಂಕವೂ ಇರಲಿಲ್ಲ. ಬರ್ನಾರ್ಡ್ ಲೋಬೋ ಅವರ ಮನೆಯಲ್ಲಿ ನಾವೇ ತಯಾರಿಸಿದ ತಿಂಡಿ ತಿಂದು, ಬರ್ನಾರ್ಡ್ ಕೊಟ್ಟ ಸಿಹಿ ಜೇನನ್ನು ನೆಕ್ಕುತ್ತಾ ಹೆವಳದ ಪಿತಾಮಹ ಸೈಮನ್ ಲೋಬೋ ಅವರ ಮನೆಯನ್ನು ಮತ್ತೊಮ್ಮೆ ತಲುಪಿದಾಗ ನಮಗಾಗಿ ಕಾಫಿ ತಯಾರಾಗಿತ್ತು. ನಮ್ಮ ಹುಡುಗ ಹುಡುಗಿಯರು ಸೈಮ್ನ ಲೋಬೋ ತಾತನ ಸುತ್ತ ನಿಂತು ಫೋಟೋ ತೆಗೆಸಿಕೊಂಡರು. ಮಾತನಾಡಿಸಿ ಖುಷಿಪಟ್ಟರು. ಹೆವಳವನ್ನು ಅಗಲಲಾರದೆ ಅಗಲಿ ಕುದ್ರೆಮುಖದ ಶಿಖರ ಕಡೆ ಮುಖ ಮಾಡಿದ ನಮಗೆ ಈ ದಿನ ಮಳೆ ಮತ್ತು ಮಂಜಿನ ಕಾಟವಿಲ್ಲ ಅನ್ನಿಸತೊಡಗಿತ್ತು. ಹುಲ್ಲು ಬೆಳೆದ ಸೌಂದರ್ಯ ಮೇಲಿಂದ ಮತ್ತಷ್ಟು ಮನಮೋಹಕವಾಗಿತ್ತು. ಆದರೆ ನಾಲ್ಕಾರು ಗುಡ್ಡಗಳನ್ನು ಸುತ್ತಿ ಬಳಸಿದ ನಂತರ ಹೆವಳ ಕಾಣದಾಗಿ ನಾವು ಬೇರೊಂದು ಭೂಮಿಗೆ ಬಂದಿದ್ದೆವು. ಎಲ್ಲಿ ನೋಡಿದರೂ ಹಸಿರು ತುಂಬಿದ ಕಣಿವೆಗಳು. ಕಣಿವೆಗಳಲ್ಲಿ ಮಾತ್ರ ಚಿತ್ರ ಬರೆದಂತೆ ಬಿಡಿಸಿಟ್ಟ ಕಾಡು. ಉಳಿದಂತೆ ಹಸಿರು ಮುಕ್ಕಳಿಸುವ ಗುಡ್ಡದ ರಾಶಿ. ಸುಮಾರು ಮಧ್ಯಾಹ್ನ ೧೨ ಗಂಟೆಯಿರಬೇಕು. ಮತ್ತೆ ಮೋಡಗಳು ದಟ್ಟೆಸ ತೊಡಗಿದವು. ಅಲ್ಲಲ್ಲಿ ಹನಿಗಳು ಉದುರತೊಡಗಿದವು. ಹಾಗೇ ಮೇಲೇರುತ್ತಾ ಹೋದಂತೆ ಬಂದೇ ಬಂತು ಮಳೆ. ಕೇವಲ ೧೫ ನಿಮಿಷ ಮಾತ್ರ ಬಿದ್ದ ರಭಸದ ಮಳೆ ನಮ್ಮನ್ನು ಹಣ್ಣುಗಾಯಿ ನೀರುಗಾಯಿ ಮಾಡಿ ಸೇಡು ತೀರಿಸಿಕೊಂಡಿತು. ಏರುತ್ತಿದ್ದೇವೆ ಏರುತ್ತಲೇ ಇದ್ದೇವೆ. ಮೇಲೆ ಹೋದಷ್ಟೂ ರುದ್ರ ರಮಣೀಯ ದೃಶ್ಯ. ಕೆಲವು ಕಡೆಯಂತೂ ಅಂಗೈ ಅಗಲದ ಕಾಲುದಾರಿ. ಬಲಕ್ಕೆ ಜಾರಿದರೆ ಸಾವಿರಾರು ಅಡಿ ಉರುಳಬೇಕು. ಭಯಂಕರ ಪ್ರಪಾತಗಳು. ಒಬ್ಬರ ಹಿಂದೆ ಒಬ್ಬರು ಇರುವೆ ಸಾಲಿನಂತೆ ಉಸಿರು ಬಿಗಿಹಿಡಿದು ನಡೆಯತೊಡಗಿದೆವು. ಇನ್ನು ಶಿಖರ ತಲಪುವವರೆಗೂ ಇದೇ ರೀತಿಯ ಕಿರುದಾರಿ ಎಂಬುದನ್ನು ಕೇಳಿದಾಗ ಮಾತ್ರ ಎಲ್ಲರ ಮನದಲ್ಲೂ ಅವ್ಯಕ್ತ ಭಯ. ಸಾಲದ್ದಕ್ಕೆ ಮಳೆ, ಜಾರಬಹುದಾದ ಮಣ್ಣು, ಆದರೂ ಬೆಳೆದು ಪಸರಿಸಿದ ಹುಲ್ಲು ಹೆಜ್ಜೆ ಬಿಗಿಹಿಡಿದು ಊರಲು ಸಹಾಯಕವಾಗಿತ್ತು. ಒಬ್ಬೊಬ್ಬರ ಉಸಿರೂ, ಢಮಗುಟ್ಟುವ ಎದೆಯ ಮಿಡಿತವೂ ಮತ್ತೊಬ್ಬರಿಗೆ ಕೇಳಿಸು ಮೌನ. ಮೌನ ಹೆಚ್ಚಾದಷ್ಟು ಭಯ ಮೈತುಂಬುತ್ತದೆ. ಇಂಥ ಸಂದರ್ಭದಲ್ಲಿ ನಿಜಕ್ಕೂ ಪ್ರಯೋಜನಕ್ಕೆ ಬರುತ್ತಿದ್ದನೆಂದರೆ ನಮ್ಮ ಅಸುಕವಿ. ಮೌನ ಮುರಿದು ಯಾವುದಾದರೂ ಪದ್ಯವನ್ನು ಅಂದೇ ಬಿಡುತ್ತಿದ್ದ. ನಂತರ ಗುಂಪಿನ ಜನರೂ ಒಂದಿಷ್ಟು ಪಿಸುಗುಟ್ಟುತ್ತಿದ್ದರು.

ಈ ಪ್ರದೇಶದ ಚಿರ ಪರಿಚಯವಿರುವ  ನಮ್ಮ ಚಾರಣಪ್ರಿಯ ಸಾಹಸಗಳು ಇಲ್ಲಿನ ಒಂದೊಂದು ಹೆಸರಿಟ್ಟಿದ್ದಾರೆ. ‘ಲೋನ್ ಟ್ರೀ ಪಾಯಿಂಟ್’, ‘ಹೈ ಲೀಚ್ ಪಾಯಿಂಟ್’, ‘ವರ್ಟಿಕಲ್ ಪಾಯಿಂಟ್’, ‘ಸ್ಟೋನ್ ವಾಟರ್ ಪಾಯಿಂಟ್’ ಇತ್ಯಾದಿ. ಇನ್ನು ಮುಂದೆ ಕಾಡೂ ಇಲ್ಲ. ಜಿಗಣೆಗಳೂ ಇಲ್ಲ ಎನ್ನುವ ಸಮಾಧಾನದಿಂದ ಮುಂದುವರಿಯುತ್ತಿದ್ದ ನಮಗೆ ಒಂದು ಕಡೆ ಏಕಾಏಕಿ ದಟ್ಟಕಾಡು ಎದುರಾಯಿತು. ಬಹುಶಃ ಕಳೆದ ಶತಮಾನಗಳಲ್ಲಿ ಕಾಡು ಹೇಗಿರುತ್ತಿತ್ತು ಎಂಬುದನ್ನು ಮನಗಾಣಬೇಕಾದರೆ ಈ ಕಾಡಿಗೆ ಬರಬೇಕು. ಅಡ್ಡಬಿದ್ದ ಭಾರಿ ಗಾತ್ರದ ಮರಗಳು. ಆ ಮರವನ್ನು ಹತ್ತಿಯೋ, ಇಲ್ಲ ಮರದ ಕೆಳಗಡೆ ಭೂಮಿಗೂ, ಮರದ ರೆಂಬೆಗೂ ಬಿಟ್ಟ ಅಲ್ಪ ಸ್ಥಳದಲ್ಲಿ ನುಗ್ಗಿಯೋ ಮೂಂದುವರಿಯಬೇಕು. ಜಾರಿದರೆ, ಆಯ ತಪ್ಪಿದರೆ ಕೆಳಗೆಲ್ಲೋ ಪಾತಾಳದಲ್ಲಿ ಹರಿಯುವ ನದಿಗೇ ನೇರವಾಗಿ ಬೀಳಬೇಕು. ಅಲ್ಲದೆ ಇದು ಹೈ ಲೀಚ್ ಪಾಯಿಂಟ್! ಅಂದರೆ ಕೆಳಗೆ ಬಿದ್ದ ಪ್ರತಿ ರಲೆಯ ಮೇಲೂ ಜಿಗಣೆಗಳು. ನಾವು ಕಾಲಿಡುವುದನ್ನೇ ಕಾಯುತ್ತಾ ಕುಳಿತಿರುತ್ತಿದ್ದವು. ಅವುಗಳನ್ನು ಕೀಳುತ್ತಾ ನಿಂತೆ ಮತ್ತಷ್ಟು ಅಂಟುವುದು ಖಚಿತ. ನಮ್ಮ ಅಶುಕವಿ ಬಡಬಡಿಸುತ್ತಿದ್ದ “ಇತ್ತ ಪುಲಿ ಅತ್ತ ದರಿ’ ಯಾವುದರಿಂದ ತಪ್ಪಿಸಿಕೊಂಡು ಯಾವುದರ ಬಾಯಿಗೆ ಹೋಗುವುದು? ಅಂತೂ ಸಾಹಸ ಮಾಡಿ, ಸತ್ತು ಸುಣ್ಣವಾಗಿ ಶಿಖರದಲ್ಲಿರುವ ಹಳೇ ಹಾಳುಬಿದ್ದ ಚರ್ಚ್ ತಲುಪಿದಾಗ ಸಂಜೆ ಐದು ಗಂಟೆ.

ಸಾಮಾನ್ಯವಾಗಿ ಬೆಟ್ಟಗಾಡಿನಲ್ಲಿ ಟ್ರಕ್ಕಿಂಕ್ ಎಂದಾಗ ‘ಕ್ಯಾಂಪ್ ಫೈರ್’ ಇದ್ದೇ ಇರುತ್ತದೆ. ಅದರಲ್ಲೂ ಇಂಥ ಚಳಿಯಲ್ಲಿ ಬೆಂಕಿ ಹಾಕಿ ಸುತ್ತ ಕೊಡುವುದೆಂದರೆ ಅಪ್ಯಾಯಮಾನವೇ. ಆದರೆ ನಮ್ಮ ದುರಾದೃಷ್ಟಕ್ಕೆ ಹಿಡಿದ ಜಡಿಮಳೆಯಲ್ಲಿ ಒಣ ಸೌದೆ ಎಲ್ಲಿ ತರುವುದು? ಸಮುದ್ರ ಮಟ್ಟದಿಂದ ಆರು ಸಾವಿರದ ಎರಡು ನೂರು ಅಡಿ ಎತ್ತರದಲ್ಲಿದ್ದೇವೆ. ಹಿಡಿದ ಸಂಜೆಯ ಮಳೆ ಬಿಡುತ್ತಿಲ್ಲ. ಬರೋ ಎಂದು ಬೀಸುವ ರಭಸದ ಗಾಳಿಗೆ ಇಡೀ ಮೈ ಕೊರಡಾಗುತ್ತಿದೆ. ಅದೂ ಹೋಗಲಿ ನಾಲ್ಕು ಗೋಡೆಗಳ ನಡುವಿನ ಗಾಳಿಗೆ ತಡೆಯೊಡ್ಡುವ ಜಾಗವಾದರೂ ಇದೆಯೇ ಎಂದರೆ ಇಲ್ಲ. ಮೋಟು ಗೋಡೆಗಳ ಅವಶೇಷವಾದ ಈ ಚರ್ಚಿನ ಗೋಡೆಗಳೆಲ್ಲಾ ಬಿರುಕು. ಇತ್ತೀಚೆಗೆ ತಾನೇ ಯಾರೋ ಕೆಲವರು ಹೊದೆಸಿರುವ ನಾಲ್ಕಾರು ಹೆಂಚುಗಳು ಮಾತ್ರ ಮಳೆಯ ಹನಿಯಿಂದ ನಮ್ಮನ್ನು ರಕ್ಷಿಸಿದ್ದವು. ಬಯಲುಸೀಮೆಯ ನಾವು ಬಹುಶಃ ಜೀವಮಾನದಲ್ಲೇ ಕಾಣದ ಕೊರೆವ ಚಳಿಗೆ ಮೈಯೊಡ್ಡಿ, ಕೈಕಾಲು ಕೊಕ್ಕರಿಸಿ ಪಾಪದ ಪ್ರಾಣಿಗಳಂತೆ ಬಿದ್ದು ಕೊಂಡೆವು. ಕಡಲೆಬೀಜ, ಹುರಿಗಾಳು ಮತ್ತು ಒಣ ಚಪಾತಿ ಕೂಡ ನಮ್ಮ ಹಸಿವನ್ನು ತಣಿಸುವಲ್ಲಿ ವಿಫಲವಾದವು ಎಂದು ಬೇರೆ ಹೇಳಬೇಕಾಗಿಲ್ಲ.

ಆದರೆ ಕಷ್ಟಪಟ್ಟವನಿಗೆ ಸುಖ ತಾನೇ? ರಾತ್ರಿಯ ಆ ಹಾಳುಬಿದ್ದ ಚರ್ಚ್ ಎಷ್ಟು ನರಕಸದೃಶವಾಗಿತ್ತೋ ಹಾಗೇ ಬೆಳಕಿನ ಆ ಶಿಖರ ಅಷ್ಟೇ ಸ್ವರ್ಗ ಸದೃಶ. ಬೆಳಕರಿಯುತ್ತಿದ್ದಂತೆ ಚರ್ಚಿನ ಸುತ್ತ ಇದ್ದ ಕುರುಚಲು ಕಾಡು ಹೊಗೆಯ ನಡುವೆ ನಳನಳಿಸತೊಡಗಿತ್ತು. ಕಾಡೊಳಗಿನ ಪ್ರತಿ ಗಿಡ. ಮರ, ಬಳ್ಳಿಯೂ ಮಳೆಯಲ್ಲಿ ನೆಂದೂ ನೆಂದೂ ಪಾಚಿಕಟ್ಟಿ ಕೊಂಡಿದೆ. ಎಳೆಎಳೆಯಂಥ ಪಾಚಿ ಸಸ್ಯಗಳು, ಪ್ರಾಣಿಗಳು ಮರದಿಂದ ಮರಕ್ಕೆ ವೈವಿಧ್ಯವಾಗಿವೆ. ಸಾವಿರಾರು ತರಹದ ಗಿಡಮರ ಬಳ್ಳಿಗಳುಳ್ಳ ಸಾವಿರಾರು ವೈವಿಧ್ಯ. ಈ ಕಾಡನ್ನು ಬಳಸುತ್ತಾ ಇಷ್ಟಿಷ್ಟೇ ಮುಂಬರಿದು ಒಂದು ಕಿ.ಮೀ. ಸಾಗಿದರೆ, ಕೆಳಗಿನ ಲೋಕಕ್ಕೆ ಕುದುರೆಯ ತಲೆಯಾಕಾರದಲ್ಲಿ ಕಾಣುತ್ತಿದ್ದ ಶಿರಭಾಗಕ್ಕೇ ಬಂದು ತಲುಪುತ್ತೇವೆ. ಇದು ನಿಜವಾದ ಭಗವಂತನ ಸಾನಿಧ್ಯ. ‘ಅನಂತ ತಾನ್ ಅನಂತವಾಗಿ’ ಕಾಣುವ ಈ ಶಿಖರದಿಂದ ನೋಡುವವರೆಗೆ ಮಂಜಿನ ಸಾಗರ, ಸ್ವಲ್ಪ ಸೂರ್ಯ ಕಣ್ಣುಬಿಟ್ಟನೆಂದರೆ ನೋಡುವವರಿಗೆ ತಮ್ಮ ಕಣ್ಣಿನ ಅಕ್ಷಿಪಟಲಕ್ಕೆ ಇರಬಹುದಾದ ಶಕ್ತಿಯವರೆಗೆ ಜಗತ್ತು ತುಂಬಿಕೊಳ್ಳುತ್ತದೆ. ಕೆಳಗಿನ ಭೂಮಿಯೆಲ್ಲ ಇಲ್ಲಿಂದ ಅಲ್ಪ. ನನ್ನ ಮುಂದೆ ನೀವ್ಯಾರೂ ಅಲ್ಲ ನಾನೇ, ನಾನೇ ಎಂದು ಕೂಗುವ ಈ ಪರ್ವತ ಶಿಖರಕ್ಕೆ ಸವಾಲೆಸೆಯುವ ಯಾವ ಭಗವತ್ ಕೃತಿಯೂ ಅಲ್ಲಿಲ್ಲ. ದೂರದಲ್ಲಿ ಪಶ್ಚಿಮಕ್ಕೆ ಮುಸುಕಾಗಿ ಕಾಣುತ್ತಿದ್ದ ಅರಬ್ಬೀ ಸಮುದ್ರ ಮಾತ್ರ ನಾನೂ ನಿನ್ನಷ್ಟೇ ಅನಂತ ಎನ್ನುವಂತೆ ತನ್ನ ವಿಸ್ತಾರತೆಯನ್ನು ಪಸರಿಸಿಕೊಂಡಿತು. ಶಿಖರ ಸಾನ್ನಿಧ್ಯದಲ್ಲಿರುವ ಹಸಿರುಹುಲ್ಲಿನ ಕಿರು ಬಯಲಲ್ಲಿ ಕುಣಿದು, ಕುಪ್ಪಳಿಸಿ ಪರ್ವತವೇರಿದ ಹೆಮ್ಮೆಯಿಂದ ಪ್ರಕಟಿಸಿಕೊಂಡ ನಮಗೆ ಕೆಳಗಿಳಿಯಲು ಮನಸ್ಸೇ ಬಾರದು. ಇಲ್ಲೂ ಇಷ್ಟೇ. ಇದ್ದಕ್ಕಿದ್ದ ಹಾಗೆ ದಟ್ಟ ಮಂಜು, ಮತ್ತದೇ ಕ್ಷಣದಲ್ಲೇ ಬಿರುಗಾಳಿಗೆ ಮಂಜು ಕರಗಿ ವಿಸ್ತಾರ ಜಗತ್ತನ್ನು ನೋಡುವ ಅವಕಾಶ. ಕ್ಷಣದಲ್ಲಿ ಬಿಸಿಲು. ಪ್ರಕೃತಿಯನ್ನು ನೋಡುವ ನಮ್ಮ ಬಯಕೆಗೆ ಇಲ್ಲಿ ಪೂರ್ಣವಿರಾಮ. ಅಲ್ಲಿಂದ ಪಶ್ಚಿಮಕ್ಕೆ ಸಾವಿರಾರು ಅಡಿಗಳ ಕೆಳಗೆ ಕರಾವಳಿಯ ನೆಲ. ಇಲ್ಲಿ ಬಿದ್ದ ಪ್ರತಿ ಹನಿಯೂ ಎರಡಾಗುತ್ತದೆ. ಅಲ್ಲೊಂದು ಪುಟ್ಟ ಹಳ್ಳ ಎರಡಾಗಿ ಹರಿದು ಬಂದು ದಕ್ಷಿಣ ಕನ್ನಡದ ಕಡೆಗೂ ಮತ್ತೊಂದು ಚಿಕ್ಕಮಗಳೂರು ಕಡೆಗೂ ಹರಿಯುವ ಚೋದ್ಯ ನಡೆಯುತ್ತದೆ. ಇದೇ ಜಿಲ್ಲೆಗಳನ್ನು ವಿಂಗಡಿಸುವ ಜಾಗ. ಅಲ್ಲಿ ಬಿದ್ದ ಪ್ರತಿಹಬಿಯೂ ಪೂರ್ವ ಮತ್ತು ಪಶ್ಚಿಮಕ್ಕೆ ಹರಿದು ಈ ಕಡೆ ತುಂಗಭದ್ರೆಯರಾಗಿ ಆ ಕಡೆ ನೇತ್ರಾವತಿಯಾಗಿ ಬಂಗಾಳಕೊಲ್ಲಿ ಮತ್ತು ಅರಬ್ಬಿ ಸಮುದ್ರದ ಮಧ್ಯೆ ಸಂಬಂಧ ಕಲ್ಪಿಸುತ್ತವೆ. ತುತ್ತ ತುದಿಯಲ್ಲಿ ಒಂದಿಷ್ಟು ಕಲ್ಲು ಜೋಡಿಸಿ ಸ್ತಂಭವೊಂದನ್ನು ನಿರ್ಮಿಸಲಾಗಿದೆ. ಅದರ ತುದಿಗೆ ನಮ್ಮ ‘ಅಡ್ವೆಂಚರರ‍್ಸ’ ಸಂಸ್ಥೆಯ ಬಾವುಟವನ್ನು ಸಿಕ್ಕಿಸಿ ಅದು ಗಾಳಿಗೆ ಪಟಪಟನೆ ಬಡಿಯುವ ಖುಷಿಯಲ್ಲಿಯೇ ರಾಷ್ಟ್ರಗೀತೆ ಹಾಡಿದಾಗ ಎಲ್ಲರ ಮನದಲ್ಲಿಯೂ ಅನಂತತೆಯ ಭಾವ. ಪ್ರಾರ್ಥನೆ ಮುಗಿಯುವಷ್ಟರಲ್ಲಿಯೇ ಕ್ಷಣಾರ್ಧದಲ್ಲಿ ಕವಿದ ಮಂಜು ಮುಖ ಮೀಸೆ ಗಡ್ಡದ ಮೇಲೆಲ್ಲ ತುಂತುರು ಹನಿಗಳನ್ನು ಸಂಚಯಿಸಿತು.

ಶಿಖರದಿಂದ ಹಿಂತಿರುಗಿ ಹೊರಟಾಗ ಪರ್ವತ ಶ್ರೇಣಿಯ ಪಕ್ಕದ ಕಾಲ್ದಾರಿಯಲ್ಲೇ ಪಯಣ ದಾರಿಯನ್ನೇ ನೋಡುತ್ತಿದ್ದರೆ ಸಮ. ನಮ್ಮ ಪಕ್ಕಕ್ಕೆ ಕಣ್ಣು ತಿರುಗಿಸಿದರೆ ಮೈ ಝುಂ ಎನ್ನಿಸುವ ಆ ಕಂದರ ತಲೆತಿರುಗಿಸುತ್ತಿತ್ತು. ಮತ್ತೆ ಚರ್ಚಿಗೆ ಬಂದು ಒಂದಿಷ್ಟು ಖರ್ಜೂರ ಮತ್ತು ಚಿಪ್ಸ್ ತಿಂದು ವಿಶ್ರಾಂತಿ ಪಡೆದೆವು.

ಈ ಪಾಳುಬಿದ್ದ ಚರ್ಚ್ ನಿಜಕ್ಕೂ ತುಂಬಾ ದೊಡ್ಡದ್ದು. ಇದು ಹೇಗಿತ್ತು ಎಂಬುದಕ್ಕೆ ಪುರಾವೆಯಾಗಿ ಸೈಮನ್ ಲೋಬೋ ನಮಗೆ ಹಳೇ ಫೋಟೋವೊಂದನ್ನು ತೋರಿಸಿದ್ದರು. ಮೇಲಿಂದ ಸಹಜವಾಗಿ ಬರುವ ನೀರನ್ನು ಉಲಯೋಗಿಸಿಕೊಂಡು ಕೃತಕ ನೀರಿನ ಚಿಲುಮೆಯನ್ನು ಸೃಷ್ಟಿಸಿ ಬ್ರಿಟಿಷರು ಒಂದು ಸೌಂದರ್ಯವನ್ನು ತಂದುಕೊಟ್ಟಿದ್ದರು. ೧೯೩೬ರಲ್ಲಿ ಬೆಂಕಿ ಬಿದ್ದ ನಂತರ ಈ ಚರ್ಚ್ ಹಾಳುಕೊಂಪೆಯಾಯಿತಂತೆ. ಚರ್ಚಿನ ಸಮೀಪದಲ್ಲಿ ಸ್ವಲ್ಪ ಕೆಳಗಡೆ ಸಣ್ಣ ನದಿಯೊಂದಿದೆ. ಸದಾ ಹರಿಯುವ ನೀರಿನಿಂದಾಗಿ ಪಾಚಿ ಕಟ್ಟಿದ ಬಂಡೆಗಳು ಹೆಚ್ಚಿರುವುದರಿಂದ ಕಾಲಿಟ್ಟಲ್ಲಿ ಜಾರುತ್ತದೆ. ಇದೇ ನದಿ ಒಂದು ಅರ್ಧ ಫರ್ಲಾಂಗ್ ಹರಿದು ಮುಂದೆ ಸಣ್ಣ ಜಲಪಾತವಾಗಿ ಬಂಡೆಗಳ ಒಡಲಿಂದ ಧುಮ್ಮಿಕ್ಕುತ್ತದೆ. ಅತ್ಯಂತ ಸುಂದರ ಹಾಗೂ ಅಪ್ಯಾಯಮಾನವಾದ ಈ ತಾಣವನ್ನು ಯಾರಾದರೂ ನೋಡಲೇಬೇಕು.

ದುಮ್ಮಿಕ್ಕುವ ಜಲಪಾತದ ಶಬ್ದ ಕ್ರಮೇಣ ಕಿವಿಯಿಂದ ದೂರವಾಗ ತೊಡಗಿದಂತೆ ನಮ್ಮ ಬೆಟ್ಟ ಇಳಿಯುವ ಕಾರ್ಯಕ್ರಮ ಆರಂಭವಾಗಿ ೩೦ ನಿಮಿಷಗಳೇ ಕಳೆದಿದ್ದವು. ನಾವು ಹತ್ತಿದ ವಿರುದ್ಧ ದಿಕ್ಕಿನಲ್ಲಿ ಇಳಿಯುತ್ತಿದ್ದ ಮನೆಗೆ ಮತ್ತದೇ ಹಿಂದಿನ ಶತಮಾನದ ಕಾಡಿನ ಸಾಲು ಇದಿರಾಯಿತು. ಮಳೆಗಾಳಿಯ ರಭಸಕ್ಕೆ ಸಿಕ್ಕಿ ನಲುಗಿಹೋದ ಗಿಡಮರಗಳು ಅತಿ ಎತ್ತರಕ್ಕೆ ಬೆಳೆಯಲಾರದೆ ಕುಬ್ಜವಾಗಿದ್ದವು. ಮರಮರದ ತೊಗಟೆಯೂ ಪಾಚಿಕಟ್ಟಿ ಹಚ್ಚ ಹಸಿರಾಗಿ ಮುನುಗುತ್ತಿತ್ತು. ಹೀಗಾಗಿ ಯಾವುದೇ ಮರವೂ ತಾನಿಂಥ ಜಾತಿಯ ಮರ ಎಂದು ಹೇಳಿಕೊಳ್ಳುವಷ್ಟು ಭಿನ್ನವಾಗಿರಲಿಲ್ಲ. ಪ್ರತಿ ಮರವನ್ನು ಅಪ್ಪಿಕೊಂಡ ಬಳ್ಳಿ, ಬಿಳಲು ಯಾವ ಮರದಿಂದ ಯಾವ ಮರದ ತೆಕ್ಕೆಗೋ ಸೇರಿಕೊಂಡಿದ್ದವು. ಆಕಾಶವೇ ಕಾಣದಂತೆ ಚತ್ರಿಯೋಪಾದಿಯಲ್ಲಿ ಹಣೆದುಕೊಂಡಿದ್ದ ಕಾಡಿನಲ್ಲಿ ತೊಟ್ಟಿಕ್ಕುವ ಹನಿಗಳು ಮಳೆಗಾಲದಲ್ಲಿ ಸೋರುವ ನಮ್ಮ ಬಯಲು ಸೀಮೆಯ ಮಾಳಿಗೆ ಮನೆಯನ್ನು ನೆನಪಿಗೆ ತರುವಂತಿತ್ತು. ಮತ್ತದೇ ಜಿಗಣಿಗಳಿಗೆ ರಕ್ತ ಅವರಸರದಲ್ಲಿಯೇ ಆ ಕಾಡನ್ನು ದಾಟಿದ ನಾವು ಮತ್ತೊಂದು ಇಳಿಜಾರಿನ ತುಟ್ಟ ತುದಿಯಲ್ಲಿ ಬಂದು ನಿಂತಿದ್ದೆವು. ಎದುರುಗಡೆ ಭಯಂಕರ ಪ್ರಪಾತ, ಏನೂ ಕಾಣಿಸುತ್ತಿರಲಿಲ್ಲ. ನಾಲ್ಕೆಜ್ಜೆ ಜೋರಾಗಿ ಓಡಿದ್ದರೆ ಒಂದೇ ಸಲಕ್ಕೆ ಬೆಟ್ಟದ ಬುಡದಲ್ಲಿರುತ್ತಿದ್ದೆವು. ಇಂಥ ರಮ್ಯ ಸ್ಥಳದ ಒಂದು ಪಾರ್ಶ್ವದಲ್ಲಿ ಒಂದಿಷ್ಟು ಮನೆಯ ಅವಶೇಷಗಳು, ಬಹುಶಃ ಇವೇ ಇರಬೇಕು. ಲೋಬೋ ಇಂಗ್ಲಿಷ್ ದೊರೆಗಳ ಬೇಸಿಗೆಯ ಬಿಡಾರಗಳು, ಕೇವಲ ಮೋಟುಗೋಡೆಗಳು ಮಾತ್ರ ಅವಶೇಷಗಳಾಗಿರುವ ಈ ಬಿಡಾರಗಳು ಕೂಡ ಬೆಂಕಿ ಆಕಸ್ಮಿಕದಲ್ಲಿ ಹಾಳಾದವೆಂದು ಲೋಬೋ ಹೇಳುತ್ತಾನೆ.

ಮುಂದೆ ಹಸಿರಸಿರು ಗುಡ್ಡಗಳನ್ನು ಇಳಿಯುತ್ತಾ, ಇಳಿಜಾರುಗಳಲ್ಲಿ ಒಂದಲ್ಲ ನೂರು ಸಲ ಜಾರುತ್ತಾ ಇಳಿಯುತ್ತಿದ್ದ ನಮಗೆ ಇಷ್ಟೊತ್ತಿಗಾಗಲೇ ಮಳೆ, ಗಾಳಿ, ಮಂಜು, ಏಳು ಬೀಳುಗಳೆಲ್ಲ ತೀರಾ ಮಾಮೂಲಿ ವಿಷಯಗಳಾಗಿದ್ದವು. ಪರ್ವತ ಹತ್ತುವಾಗ ಏದುಸಿರು ಬಿಡುತ್ತಿದ್ದ  ನಾವು ಈಗ ಇದು ಇಳಿಯುವ ಕಾಯಕವಾದ್ದರಿಂದ ಅಂಥ ಆಯಾಸವಿಲ್ಲದೆ ಲೋಕಾಭಿರಾಮದ ಮಾತಿಗೆ ತೊಡಗಿದ್ದೆವು. ನಮ್ಮೆಲ್ಲಾ ಪಕ್ಷಿ ತಜ್ಞರು, ಸಂಶೋಧಕರು, ಕ್ಯಾಮರಾಮನ್ ಗಳೆಲ್ಲಾ ಇದೀಗ ಜೀವ ಬಂದವರಂತೆ ತಮ್ಮ ತಮ್ಮ ಆಸಕ್ತಿಯ ವಿಷಯಗಳಲ್ಲಿ ತೊಡಗಿದ್ದರು.

ಬೆಳೆದು ಬಳುಕುವ ಪ್ರತಿ ಹುಲ್ಲಿನ ಗರಿಗರಿಗಳಲ್ಲೂ ಮುತ್ತಿನ ಬಿಂದುಗಳು. ಕಾಲಿಗೆ ತೊಡರುವ ಪ್ರತಿ ಬಳ್ಳಿಯ ಎಲೆಯೂ ವೈವಿಧ್ಯವಾದುದು. ಅಲ್ಲಿ ಅರಳಿದ ಸುಂದರ ಸುಕೋಮಲ ಕಾಡು ಕುಸುಮಗಳು, ನಾನಾ ರೀತಿಯ ಗೆಡ್ಡೆ, ಗೆಣಸಿನ ಗಿಡಬಳ್ಳಿಗಳು, ತೇವಕ್ಕೂ, ಹಸಿರಿನ ವಾಸನೆಗೂ ಪುಳಕಗೊಂಡು ಮೈ ಬಿಚ್ಚಿ ಹರಿಯುವ ಬಸವನ ಹುಳುಗಳು, ಅಲ್ಲಲ್ಲಿ ಎದುರಾಗುತ್ತಿದ್ದ ಬಾನಾಡಿಗಳು, ಏಕಾಏಕಿ ಎದುರಾಗುತ್ತಿದ್ದ ಸುಂದರ ಕಣಿವೆಗಳು ಇವೆಲ್ಲವೂ ನಮ್ಮ ಗುಂಪಿಗೆ ಆಸಕ್ತಿಯ ವಿಷಯಗಳಾಗಿದ್ದವು. ನಾವು ಇಳಿದು ಬಿಡಾರ ಹೂಡಬೇಕಾಗಿದ್ದ ದಾರಿ ಈ ದಿನ ಕೇವಲ ಹನ್ನೆರಡು ಕಿ,ಮೀ, ಆದ್ದರಿಂದ ಸ್ವಲ್ಪ ನೀಧಾನಕ್ಕೆ ಎಲ್ಲವನ್ನೂ ಅರುಸುತ್ತಾ, ಕಣ್ತುಂಬಿಕೊಳ್ಳುತ್ತಾ, ಅನುಭವಿಸುತ್ತ ಮುನ್ನಡೆಯುತ್ತಿದ್ದೆವು. ಕೆಲವೊಮ್ಮೆ ಮಾತ್ರ ತೀರಾ ಆಳವಾದ ಕಂದರಗಳ ಅಂಚಿನಲ್ಲಿ ಕಿರುದಾರಿಯಲ್ಲಿ ನಡೆಯುವಾಗ ಸ್ವಲ್ಪ ಅಧೀರರಾಗಿ ಕುಗ್ಗುತ್ತಿದ್ದೆವು. ಬಹಳ ಆಶ್ಚರ್ಯದ ಸಂಗತಿಯೆಂದರೆ ನಮ್ಮ ಗುಂಪಿನಲ್ಲಿದ್ದ ಏಳು ವರ್ಷದ ಹಸುಳೆ ದೀಪ್ತಿ ಮತ್ತು ಹತ್ತರಿಂದ ಹದಿನೈದು ವರ್ಷದೊಳಗಿನ ನಾಲ್ಕೈದು ಮಕ್ಕಳ ತಂಡ ಅಧೀರರಾಗದೆ ದಾರಿ ಸಾಗಿಸುತ್ತಿದ್ದರು. ಪಾಪಣ್ಣ ಎನ್ನುವ ಐವತ್ತರ ಹರೆಯದ ಛಾಯಾಗ್ರಾಹಕರು ನಮ್ಮೆಲ್ಲರಿಗೂ ಮುಂದಿರುತ್ತಿದ್ದರು. ಗುಡ್ಡದಿಂದ ಗುಡ್ಡ ಇಳಿದೂ, ಇಳಿದೂ ಸುಮಾರು ಅರ್ಧ ಪರ್ವತ ಇಳಿದಾಗ ಕುದ್ರೆಮುಖ ಪ್ರಾಜೆಕ್ಟ್ ಪ್ರದೇಶ ಗೋಚರಿಸಿತು. ದೂರದಲ್ಲಿ ಪರ್ವತಗಳ ನೆತ್ತಿಯನ್ನೇ ಕುಕ್ಕಿ ಅದರ ಮೆದುಳನ್ನೇ ಹೊರ ಚೆಲ್ಲಿದಂತೆ ಕಬ್ಬಿಣದ ಅದಿರು ತೆಗೆಯುವ ಕೆಲಸ ನಿರಂತರವಾಗಿ ನಡೆದೇ ಇತ್ತು. ಭಾರಿ ಭಾರಿ ಯಂತ್ರಗಳ ಸದ್ದು ಕೂಡ ಆಗಾಗ ಕಿವಿಗೆ ಕರ್ಕಶವಾಗಿ ಬೀಳತೊಡಗಿತು. ೧೨ ಕಿ.ಮೀ. ಕೆಳಗೆ ಇಳಿಯುವಷ್ಟರಲ್ಲಿ ನಮಗೂ ಸಾಕಾಗಿತ್ತು. ಇಳಿಯುವುದು ಹತ್ತುವುದಕ್ಕಿಂತ ಸುಲಭ ಎನ್ನಿಸಿದರೂ ಇಡೀ ನಮ್ಮ ಮೈಬಾರವನ್ನೇ ಹೆಜ್ಜೆಯ ಮೇಲಿರಿಸಿ ತಡೆದೂ ತಡೆದೂ ಇಳಿಯಬೇಕಾದ್ದರಿಂದ ನಡು, ಬೆನ್ನುಗಳು ಆಗಲೇ ಸೋಲತೊಡಗಿದ್ದವು.

ಅಲ್ಲೊಂದು ಕಣಿವೆ. ಕಣಿವೆ ನಡುವೆ ಮೊರೆಯುವ ತೊರೆ, ತೊರೆಯಂಚಿಗೆ ನಿರ್ಬಿಡೆಯಿಂದ ಬೆಳೆದ ನೇರಳೆ ಮತ್ತು ಹೊಂಗೆ ಮರಗಳು. ಆ ಮರಗಳ ತಪ್ಪಲಲ್ಲಿ ಒಂದು ಸಣ್ಣ ಗುಡಿಸಲು. ಗುಡಿಸಲು ನೋಡಿದ ನಮಗೆ ಆಶ್ಚರ್ಯವಾಯಿತು. ಇದೇನಿದು ಒಂಟಿ ಗುಡಿಸಲು? ಯಾರು ಹಾಕಿದರು? ಕಣಿವೆಗೆ ಇಳಿದು ನೋಡಿದರೆ ಖಾಲಿ ಗುಡಿಸಲು. ವಾಸ್ತವವಾಗಿ ಅದು ಗಿರಿಜನರಾದ ಗೌಳಿಗರು ವಾಸಿಸುವ ಗುಡಿಸಲು. ಹೈನುಗಾರಿಕೆಯೇ ಮುಖ್ಯ ಕಸುಬಾದ ಗೌಳಿಗರು ಬೇಸಿಗೆ ಕಾಲದಲ್ಲಿ ತಮ್ಮ ಎಮ್ಮೆಗಳಿಗೆ ನೀರು ಮತ್ತು ಮೇವು ಸಿಗದಿದ್ದಾಗ ನೀರು ಮತ್ತು ಮೇವಿನ ವಸತಿಯನ್ನು ಹುಡುಕಿ ಎಮ್ಮೆಗಳ ಜೊತೆ ಬರುತ್ತಾರೆ. ಇಂಥ ಕಣಿವೆಗಳಲ್ಲಿ ಮೂರು ತಿಂಗಳು ತಳವೂರಿ ಎಮ್ಮೆಗಳನ್ನು ಮೇಯಿಸಿ ಮತ್ತೆ ಮಳೆಗಾಲಕ್ಕೆ ಹೊರಡುತ್ತಾರೆ. ಇದು ಮಳೆಗಾಲವಾದ್ದರಿಂದ ಗುಡಿಸಲು ಮತ್ತು ಎಮ್ಮೆ ಕೂಡಿಹಾಕಲು ಕಟ್ಟಿದ್ದ ಮರದ ಕಟಕಟೆಗಳು ಹಾಗೇ ಅನಾಥವಾಗಿದ್ದವು. ಆ ಗುಡಿಸಲ ಒಳಗೆ ಒಣ ಸೌದೆಗಳು ನೋಡಿದ ನಾವು ರಾತ್ರಿ ತಂಗಲು ಇದೇ ಸೂಕ್ತ ಸ್ಥಳವೆಂದು ನಿಶ್ಚಯಿಸಿ ಒಂದು ರಾತ್ರಿಯ ಮಟ್ಟಿಗೆ ಗುಡಿಸಲ ಗೌಳಿಗರೇ ಆದೆವು. ಆ ಗುಡಿಸಲ ಜೊತೆಗೆ ನಮ್ಮ ಮೂರು ಕೃತಕ ಟೆಂಟ್ ಗಳನ್ನು ನಿರ್ಮಿಸಿದೆವು. ಅನ್ನ ತಿಂದು ಎಷ್ಟೋ ದಿನಗಳಾಗಿತ್ತು. ಒಲೆ ಹೂಡಿ ಅನ್ನ ಬಿಸಿಬೇಳೆಬಾತ್ ತಯಾರಿಸಿದೆವು. ಎಷ್ಟೋ ದಿನದಿಂದ ಅನ್ನ ಕಾಣದವರಂತೆ ತಿಂದು ತೃಪ್ತರಾದೆವು. ರಾತ್ರಿಗೆ ಕ್ಯಾಂಪ್ ಫೈರ್ ಮಾಡಿ ಪರಸ್ಪರ ತಮಾಷೆ, ಹಾಡು, ನಾಟ್ಯ, ಕುಣಿತಗಳ ನಮ್ಮೆಲ್ಲ ತೆವಲನ್ನು ತೀರಿಸಿಕೊಂಡೆವು. ರಾತ್ರಿಗೆ ತೊಟ್ಟಿಕ್ಕುವ ನಮ್ಮ ಟೆಂಟ್ ಗಳಲ್ಲಿಯೇ ಸಂತೃಪ್ತಿಯಿಂದ ನಿದ್ದೆಯನ್ನು ಮಾಡಿದೆವು. ಮಾರನೇಯ ದಿನ ಸುಮಾರು ೧೩ ಕಿ.ಮೀ. ನಡೆದು ಅದೇ ಬೆಟ್ಟಗುಡ್ಡ, ಕಾಡು, ಹಳ್ಳ, ಝುರಿಗಳನ್ನು ಇಳಿದು ಚಿಕ್ಕಮಗಳೂರು ಜಿಲ್ಲೆಯ ಕುದ್ರೆಮುಖ ಪ್ರಾಜೆಕ್ಟ್ ಪ್ರದೇಶದ ಟೌನ್ ತಲುಪುವಷ್ಟರಲ್ಲಿ ಆಯಾಸ ಮಿತಿಮೀರಿತ್ತು. ಕುದುರೆಮುಖ ಪ್ರಾಜೆಕ್ಟ್ ಪ್ರದೇಶವನ್ನು ಬಳಸಿ ಹರಿಯುವ ನದಿಯೊಂದಕ್ಕೆ ಬಿದ್ದು ಬೆವರನ್ನು ತೊಳೆದುಕೊಂಡೆವು. ಟೌನಿನಲ್ಲಿರುವ ಹೋಟೆಲ್ ಒಂದರಲ್ಲಿ ಸೊಗಸಾದ ಊಟ ಮಾಡಿ, ಬೆಂಗಳೂರಿನ ಕಡೆ ಹೊರಡುವ ನಮ್ಮ ಸಂಜೆ ಬಸ್‌ಗೆ ಇನ್ನೂ ಸಮಯವಿದ್ದುದರಿಂದ ಊರೆಲ್ಲಾ ಸುತ್ತಾಡಿದೆವು. ಅನೇಕಾನೇಕ ಸಣ್ಣಪುಟ್ಟ ಪರ್ವತಗಳ ನಡುವೆ ಬೆಚ್ಚಗೆ ಮಲಗಿ ನಿದ್ರಿಸುವ ಈ ಮಲ್ಲೇಶ್ವರ ನಿಜಕ್ಕೂ ರಮಣೀಯವಾಗಿತ್ತು. ಎದುರಿಗಿದ್ದ ಕುದುರೆಮುಖ ಪರ್ವತ ಸಾಲುಗಳು ಆನೆಗಳ ಮೇಲೆ ಆನೆಗಳನ್ನಿಟ್ಟಂತೆ ಬೃಹದಾಕಾರವಾಗಿ ನಿಂತು ಮೋಡಗಳ ಮುತ್ತು ಪಡೆಯುತ್ತಿದ್ದವು. ಆ ಪರ್ವತಗಳ ತುಟ್ಟ ತುದಿಗೆ ಏರಿ ಸಾಹಸಂ ಆಡಿ ಬಂದಿದ್ದ ನಾವು ಕೂಡ ಆ ಬೆಟ್ಟಗಳಷ್ಟೇ ಠೀವಿಯಿಂದ ನಾವೇನು ಕಡಿಮೆ ಎನ್ನುವ ಮನೋಭಾವದಲ್ಲಿ ಆ ಪರ್ವತಗಳನ್ನು ಮತ್ತೆ ಮತ್ತೆ ನೋಡಿ ಧನ್ಯರಾಗುತ್ತಿದ್ದೆವು. ಇಷ್ಟೆಲ್ಲ ಹೇಳುವ ಭರದಲ್ಲಿ ನಮ್ಮ ತಂಡದ ನಾಯಕರನ್ನು ಪರಿಚಯಿಸಲೇ ಇಲ್ಲ. ಬೆಂಗಳೂರಿನ ದಿ ಅಡ್ವೆಂಚರರ‍್ಸ ಸಾಹಸಿ ಶಿಕ್ಷಣ ಶಾಲೆಯ ಮುಖ್ಯಸ್ಥರಾದ ಶ್ರೀ ಎಸ್.ಎಲ್.ಎನ್. ಸ್ವಾಮಿ, ಶ್ರೀ ವೆಂಕಟೇಶ್ ಮತ್ತು ಕುಮಾರಿ ನೊಮಿಟೋ ಅವರುಗಳೇ ನಮ್ಮ ನಾಯಕರು. ಬಹುತೇಕ ಎಲ್ಲ ಕ್ಷೇತ್ರಗಳಿಂದ ಪ್ರಾತಿನಿಧಿವಾಗಿ ಬಂದಿದ್ದ ಈ ಟ್ರಕ್ಕಿಂಗ್ ಗುಂಪಿನಲ್ಲಿ ಮಹಿಳೆಯರು ಮಕ್ಕಳು ಮತ್ತು ಪುರುಷರಾದಿಯಾಗಿ ೪೦ ಜನ ಸಾಹಸಿಗಳು ಭಾಗವಹಿಸಿದ್ದರು. ನನ್ನ ಕ್ಷೇತ್ರಕಾರ್ಯಕ್ಕಾಗಿ ಪಶ್ಚಿಮ ಘಟ್ಟಗಳನ್ನು ಆಯ್ಕೆ ಮಾಡಿಕೊಂಡು ಪರ್ಯಟನೆ ನಡೆಸುತ್ತಿರುವ ನಾನು ಆಗಾಗ ಈ ಗೆಳೆಯರ ಜೊತೆಯಲ್ಲಿ ಇಂಥ ಸಾಹಸಕ್ಕೂ ಹೋಗುತ್ತೇನೆ.

ನಮ್ಮ ಈ ಟ್ರಕ್ಕಿಂಗ್ ಯಶಸ್ವಿಯಾಗಿ ಮುಗಿದಿತ್ತಾದರೂ ಕುದ್ರೆಮುಖ ಪರ್ವತದ ಸುತ್ತಣ ತಪ್ಪಲಲ್ಲಿ ಅನಾದಿ ಕಾಲದಿಂದಲೂ ಬಾಳಿ ಬದುಕಿದ ಗಿರಿಜನ ಸಮೂಹವನ್ನು ಮತ್ತು ಅವರ ಜೀವನ ವಿಧಾನಗಳನ್ನು ನೋಡದೆ ಹಾಗೇ ಹಿಂತಿರುಗುವುದು ನನಗೆ ಸಾಧ್ಯವಿರಲಿಲ್ಲ. ಮಂಗಳೂರ ವಿಶ್ವವಿದ್ಯಾನಿಲಯದ ಡಾ.ಕೆ. ಚಿನ್ನಪ್ಪಗೌಡರು ಬೆಳ್ತಂಗಡಿ, ಬಂಟ್ವಾಳ ತಾಲ್ಲೂಕುಗಳೂ ಸೇರಿದಂತೆ ಆ ಪ್ರದೇಶದ ಗಿರಿಜನರನ್ನು ಮತ್ತು ಅವರ ಆರಾಧನೆ ಆಚರಣೆಗಳನ್ನು ಅಧ್ಯಯನ ಮಾಡಿದವರು. ನನ್ನ ಆಪ್ತ ಸ್ನೇಹಿತರೂ ಆದ ಅವರ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ತಾಲ್ಲೂಕಿನಲ್ಲಿ ಸುತ್ತಾಡಬೇಕೆಂದು ನಿರ್ಧರಿಸಿದೆ. ಗೌಡರಿಗೆ ಪತ್ರ ಬರೆದು ದಿನಾಂಕವೊಂದು ಗೊತ್ತುಪಡಿಸಿಕೊಂಡು ಮಂಗಳೂರಿಗೆ ಪ್ರಯಾಣ ಮಾಡಿದೆ. ಚಿನ್ನಪ್ಪಗೌಡರು ತುರ್ತು ಕೆಲಸದಲ್ಲಿದ್ದರು. ಅವರು ಒಂದು ದಿನದ ಮಟ್ಟಿಗೆ ಮಾತ್ರ ನಮ್ಮ ಜೊತೆ ಬರಲು ಸಾಧ್ಯವಿತ್ತು. ಹಾಗಾಗಿ ಮಲೆಕುಡಿಯರು, ಕೊರಗರು, ಮರಾಠಿಯವರನ್ನು ನೋಡಲು ಸಾಧ್ಯವಾಗದೆ ಉಜಿರೆಗೆ ಹತ್ತಿರವಿರುವ ‘ಮೇರ’ ಮತ್ತು ‘ಮನ್ಸ’ ಜನಾಂಗದವರನ್ನು ನೋಡುವುದೇ ಒಳ್ಳೆಯದೆಂದು ತೀರ್ಮಾನಿಸಿದೆವು.

ದೂರದಲ್ಲಿ ಸಹಸ್ರ ಆನೆಗಳನ್ನ ಜೋಡಿಸಿಟ್ಟಂತೆ ಕಾಣುವ ಕುದ್ರಮುಖದ ಮಹೋನ್ನತ ಬೆಟ್ಟ ಸಾಲು. ಕುದ್ರೆಮುಖದ ಮುಂದೆ ತಾಯಿ ಕೋಳಿ ಇಟ್ಟ ಮೊಟ್ಟೆಯಂತೆ ಕಾಣುವ ಜಮಾಲಬಾದ್ ಬಂಡೆಬೆಟ್ಟ.

ಈ ಸಿರಿಯ ಹಿನ್ನೆಲೆಯಲ್ಲಿ ಕಾಡುಗಳ ಒಡಲಲ್ಲಿ ತೋಟಗಳ ನಡುವೆ ಕಂಡೂ ಕಾಣದಂತಿರುವ ಮೇರ ಮತ್ತು ಮನ್ಸ ಜನಾಂಗಗಳ ಪುಟ್ಟ ಗುಡಿಸಲುಗಳು, ಬಹುತೇಕ ತುಳು ಮಾತನಾಡುವ ಈ ಜನ ಬಡತನವನ್ನೇ ಹಾಸಿದೊದ್ದವರು. ಗದ್ದೆ ತೋಟ ತುಡಿಕೆಗಳಲ್ಲಿ ಜೀತ ಮಾಡುವ, ಜೀತವೇ ಜೀವನವಾದ ಶಾಪಗ್ರಸ್ಥರು. ಸದಾ ಮೈಮುರಿದು ದುಡಿಯುವ ಈ ಭೂತ ಪ್ರೇತಗಳ ಆರಾಧನೆಯಲ್ಲಿಯೂ ಅಷ್ಟೇ ನಿಷ್ಠೆ.

ಉಜಿರೆ ಹತ್ತಿರದ ಮುಂಡತೋಡಿಯಲ್ಲಿನ ಮೇರ ಜನಾಂಗದ ಶಂಕರ, ಕರಿಯ, ಈರಪ್ಪ ಮತ್ತು ಬಾಬು ಎಂಬ ಕಲಾವಿದರು ಆಟಿಕಳಂಜ ಕಲೆಯ ಪ್ರದರ್ಶನಕ್ಕೆ ಸಿದ್ಧವಾಗಿದ್ದರು. ಇಬ್ಬರು ಕಲಾವಿದರು ಆಟಿಕಳಂಜದ ವೇಷಗಾರರಾದರೆ ಮತ್ತಿಬ್ಬರು ದುಡಿ ಬಡಿಯುವವರು. ಮೈತುಂಬ ಜೇಡಿಮಣ್ಣಿನ ಲೇಪನ. ಅದರ ಮೇಲೆ ಕೈಬೆರಳಿನ ಗೆರೆಗಳು, ಕೆಂಪು ಕಲ್ಲಿನ ರಸದಿಂದ ತಯಾರಿಸಿದ ಕೆಂಪು ಬಣ್ಣದಿಂದ ಅಲ್ಲಲ್ಲಿ ಕೆಂಪು ಚುಕ್ಕೆಗಳು, ಇದೇ ಬಣ್ಣಗಳಿಂದ ಮುಖವರ್ಣಿಕೆಯ ತಯಾರಿಕೆ. ತಲೆಗೆ ಪೇಟ, ಅದರ ಮೇಲೆ ಹುಲ್ಲಿನ ಕಳಂಜ. ಕಳಂಜ ಎಂದರೆ ವಿವಿಧ ನಾರುಗಳಿಂದ ಹಾಗೂ ಕಳಂಜೆ ಮರದ ಗರಿಗಳಿಂದ ತಯಾರಿಸಿದ ಅತ್ಯಂತ ಕಲಾತ್ಮಕ ಆಕೃತಿ. ಕಳಂಜ ಎಂಬ ಕರದ ನಾರುಗಳಿಂದಲೇ ಇದನ್ನು ತಯಾರಿಸುವುದರಿಂದ ಇದನ್ನು ಕಳಂಜ ಎಂದೇ ಕರೆಯುತ್ತಾರೆ. ನಮ್ಮ ಬಯಲು ಸೀಮೆಯಲ್ಲಿ ಊರ ಹಬ್ಬಗಳಲ್ಲಿ ದೇವರಿಗೆ ಹಿಡಿಯುವ ದೊಡ್ಡ ಛತ್ರಿಯಂತೆ ಕಾಣುವ ಕಳಂಜದ ಛತ್ರಿಯನ್ನು ಕೈಯಲ್ಲಿ ಹಿಡಿದು, ಸೊಂಟದಿಂದ ಕೆಳಕ್ಕೆ ಎಳೆಯ ತೆಂಗಿನ ನಾರಿನ ಪಟ್ಟೆಗಳನ್ನು ಕಟ್ಟಿಕೊಂಡು ದುಡಿಯ ಲಯಬದ್ಧ ಬಡಿತಕ್ಕೆ ತಕ್ಕಂತೆ ಲಘುವಾಗಿ ಕುಣಿಯುತ್ತಾ ಪ್ರತಿ ಮನೆಯ ಮುಂದೆ ಪ್ರದಕ್ಷಿಣೆ ಹಾಕಿ ಧವಸಧಾನ್ಯ ಸಂಗ್ರಹಿಸುವ ಈ ಕಲಾವಿದರು ದೇವಸ್ಥಾನಗಳ ಮುಂದೆಯೂ ಮದುವೆಯ ಸಂದರ್ಭಗಳಲ್ಲಿಯೂ ಹಾಡುತ್ತಾರೆ.

ಹಾಲು ಚೆಲ್ಲಿದ ಬೆಳದಿಂಗಳ ರಾತ್ರಿ, ಅಲ್ಲಲ್ಲಿ ಮುದುರಿ ಮುದುರಿ ಕುಳಿತಂತೆ ಕಾಣುವ ಪಟ್ಟ ಗುಡಿಸಲುಗಳು. ಗುಡಿಸಲ ಮುಂದಿನ ಸ್ವಚ್ಛ ಹಾಗೂ ವಿಶಾಲ ಅಂಗಳದಲ್ಲಿ “‘ಡುಂ ಡುಂ ಡುಮಕ್… ಡುಂ ಡುಂ ಡುಮಕ್… ಡುಮುಕು ಡುಮುಕು ಡುಮುಕು”’ ಎಂಬ ದುಡಿಯ ಆಕರ್ಷಕ ಶಬ್ಧ. ಹೆಂಗಸರು ಗಂಡಸರಾದಿಯಾಗಿ ದುಡಿಯ ನಾದಕ್ಕೆ ಹೆಜ್ಜೆ ಹಾಕುತ್ತಾ ಸೊಂಟ ಬಳುಕಿಸುತ್ತ ಕುಣಿಯತೊಡಗುತ್ತಾರೆ. ಹಿನ್ನೆಲೆಗೆ ಸುಂದರ ತುಳು ಪಡ್ದನಗಳ ಹಾಡುಗಾರಿಕೆ. ಕೆಲವು ಸಲ ವಯಸ್ಸಾದವರು ಹೆಚ್ಚು ಸೆರೆ ಕುಡಿದು ಅದರ ಗಮ್ಮತ್ತಿನಲ್ಲಿ ಕುಣಿಯುತ್ತಾ ಕಿರಿಯರಿಗೆ ಹುರಿದುಂಬಿಸುತ್ತಾರೆ. ಇದನ್ನು ನೋಡಲು ಆಯಾ ಪ್ರದೇಶ ಎಲ್ಲರೂ ಒಟ್ಟಿಗೇ ನೆರೆಯುವುದುಂಟು. ಹಗಲಿಡೀ ದುಡಿದ ಜೀವಗಳು ನಾಳೆಯನ್ನು, ನಾಳೆಯ ಪಡಿಪಾಟಲನ್ನು ಮರೆತು ಕುಡಿದು ತಿಂದು ಸುಖಪಡುತ್ತವೆ. ಅವರಿಗೆ ಅದಷ್ಟೇ ಸ್ವರ್ಗ.

ಮುಂಡತ್ತೋಡಿಯಿಂದ ಪೆರ್ಲ ಪ್ರದೇಶಕ್ಕೆ ನಮ್ಮ ಮುಂದಿನ ಪಯಣ. ಅಲ್ಲಿನ ‘ಮನ್ಸ’ ಜನಾಂಗದ ‘ಕರಂಗೋಲು’ ನೃತ್ಯ ನೋಡುವುದು ನಮ್ಮ ಉದ್ದೇಶ. ಮೇರ ಜನಾಂಗವಾಗಲಿ ಮನ್ಸ ಜನಾಂಗವಾಗಲಿ ದಕ್ಷಿಣ ಕನ್ನಡದಲ್ಲಿ ಮಾತ್ರ ಸಿಗುವಂಥವು. ಇವರುಗಳು ಸಂಖ್ಯೆ ಕೆಲವು ನೂರುಗಳು ಮಾತ್ರ. ಆದರೂ ಅವರದೇ ಆದ ವಿಶಿಷ್ಟತೆ ಹಾಗೂ ಸ್ವಂತಿಕೆ ಉಳಿಸಿಕೊಂಡಿರುವುದು ಈ ಜನಾಂಗಗಳ ವೈಶಿಷ್ಟ್ಯ. ಈ ಮನ್ಸ ಜನಾಂಗದವರು ಭೂತಗಳ ಪೂಜೆ ಮಾಡುತ್ತಾರೆ. ಇವರ ಭೂತದ ಹೆಸರು ‘ಸಾರ ಮುಪ್ಪನ್ನೇರು’. ಈ ಜನಾಂಗದ ಸಾಂಸ್ಕೃತಿಕ ವೀರರೆಂದು ಹೇಳಬಹುದಾದ ‘ಕಾಣದ ಮತ್ತು ಕಾಟದ’ ಇವರ ಬಗ್ಗೆ ಅನೇಕ ಐತಿಹ್ಯಗಳೂ ಉಂಟು. ಇವರನ್ನು ಭೂತಗಳ ರೂಪದಲ್ಲಿಯೇ ಆರಾಧಿಸಲಾಗುತ್ತದೆ.

ಇವರ ಕರಂಗೋಲು ಕುಣಿತ ಮುಖ್ಯವಾಗಿ ಸುಗ್ಗಿಯ ಕಾಲದಲ್ಲಿ ಪ್ರದರ್ಶಿಸುವ ಆಚರಣಾತ್ಮಕ ಕಲೆ. ಜೇಡಿಮಣ್ಣನ್ನು ಬಿದಿರು ಕೊಳವೆಗಳಿಗೆ ಹಚ್ಚಿ ಅದನ್ನು ಮೈಗೆ ಅಂಟಿಸಿಕೊಳ್ಳುವ ಮೂಲಕ ಉಂಗುರ ಉಂಗುರದ ರೀತಿ ಇಡೀ ಮೈ ಮತ್ತು ಮುಖಕ್ಕೆ ಹಚ್ಚಿಕೊಳ್ಳುತ್ತಾರೆ. ತಲೆಗೆ ಬಿಳಿ ಬಟ್ಟೆ ಅಥವಾ ಅಡಿಕೆ ಟೋಪಿ. ನಡುವಿನಿಂದ ಕೆಳಕ್ಕೆ ಬಿಳಿಯ ಪಂಚೆ. ಹೀಗೆ ಬಣ್ಣ ಹಚ್ಚಕೊಂಡ ಇಬ್ಬರು ಕಲಾವಿದರಲ್ಲದೆ ಮತ್ತಿಬ್ಬರು ಕೈಲಿ ಗಂಟೆ ಹಿಡಿದು ನಿಯತವಾಗಿ ಅಲ್ಲಾಡಿಸುತ್ತಾ ಹಾಡುತ್ತಾರೆ. ಇವರನ್ನು ನೋಡಿದರೆ ದಕ್ಷಿಣ ಕರ್ನಾಟಕದ ವೃತ್ತಿಗಾಯಕರಾದ ಹೆಳವರ ನೆನಪು ಬರುತ್ತದೆ. ಬಣ್ಣ ಬಚ್ಚಿಕೊಂಡ ಕಲಾವಿದರು ಕೈಲಿ ಲಕ್ಕಿ ಸೊಪ್ಪು ಹಿಡಿದು ವ್ಯಾಯಾಮ ಮಾಡುವ ರೀತಿಯಲ್ಲಿ ಸೊಂಟ ಬಗ್ಗಿಸಿ ಕುಣಿಯುತ್ತಾರೆ. ಇವರು ಹಾಡುವ ಹಾಡಿನಲ್ಲಿ ಕೃಷಿಗೆ ಸಂಬಂಧಿಸಿದ ವಿಚಾರಗಳು, ಬತ್ತ ಬೆಳೆಸುವ ವಿಧಾನ ಮತ್ತು ಬತ್ತದ ತೆನೆಗೆ ಸಂಬಂಧಿಸಿದಂತೆ ಅನೇಕ ವಿಚಾರಗಳಿರುತ್ತವೆ. ಹಬ್ಬದ ಸಮಯದಲ್ಲಿ ಈ ಕಲಾವಿದರು ಬೇರೆ ಬೇರೆ ಜಾತಿಯ ರೈತರ ಮನೆಗಳಿಗೆ ಹೋಗಿ ಹಾಡುತ್ತ ಧಾನ್ಯ ಸಂಗ್ರಹಿಸುತ್ತಾರೆ. ಹೀಗೆ ಸಂಗ್ರಹಿಸಿದ ಧವಸ ಧಾಮ್ಯಗಳನ್ನು ಬಳಸಿ ತಮ್ಮ ಹಬ್ಬ ಮಾಡುತ್ತಾರೆ. ಹಬ್ಬದ ದಿನ ಈ ಜನಾಂಗದ ಎಲ್ಲರೂ ಸಾಮೂಹಿಕವಾಗಿ ಸೇರಿ ಕಡುಬು ಮತ್ತು ಕೋಳಿ ಮಾಡಿ ಸಾಮೂಹಿಕ ಭೋಜನ ಏರ್ಪಡಿಸಿ ಅವರ ‘ಸಾರ ಮುಪ್ಪನ್ನೇರು’ ಭೂತಕ್ಕೆ ಅರ್ಪಿಸಿದ ನಂತರ ಎಲ್ಲರ ಭೋಜನವಾಗುತ್ತದೆ.

ಬಹುತೇಕ ಕೂಲಿ ಮತ್ತು ಜೀತದಲ್ಲಿ ಬದುಕುವ ಈ ಜನರ ಹೆಣ್ಣು ಮಕ್ಕಳು ಬೋಡಿ ಕಟ್ಟುವ ಕೆಲಸ ಮಾಡುತ್ತಾರೆ. ಸದ್ಯಕ್ಕೆ ಇವರಿಗೆ ಆದಾಯದ ಮೂಲ. ದಕ್ಷಿಣ ಕನ್ನಡ ನಮ್ಮ ರಾಜ್ಯದ ಅಚ್ಚ ಹಸುರಿನ ನಾಡು, ಸಂಮೃದ್ಧತೆಯೇ ಮೈವೆತ್ತ ಸಿರಿಭೂಮಿ. ಹೆಚ್ಚಿನ ವಿದ್ಯಾವಂತರು, ಬುದ್ಧಿವಂತರನ್ನು ರಾಜ್ಯಕ್ಕೆ ಕೊಟ್ಟಿರುವ ಜಿಲ್ಲೆ ಇದು. ಇಂಥ ಮುಂದುವರಿದ ಪ್ರದೇಶದಲ್ಲಿ ಅಷ್ಟೇ ಹಿಂದುಳಿದ ಜನರಿದ್ದಾರೆ. ದಕ್ಷಿಣ ಕನ್ನಡದ ಆ ನಾಗರಿಕ ಜಗತ್ತಿನ ಲವಶೇಶ ಆರ್ಥಿಕ ಪ್ರಯೋಜನವೂ ಸಿಗದ ಮೇರ, ಮನ್ಸ, ಬೈರ, ಕೊರಗ ಮುಂತಾದ ಜನರು ಇತರರಿಗಿಂತ ಒಂದು ಶತಮಾನದ ಅಂತರದಲ್ಲಿ ಬದುಕು ದೂಡುತ್ತಿದ್ದಾರೆ. ಜಡವಾಗಿ ಬಿದ್ದಿರುವ ಕುದ್ರೆಮುಖದ ಅಗಾಧ ಸಾಲಿನಂತೆಯೇ ಅದರ ತಪ್ಪಲಿನ ಈ ಮಕ್ಕಳು ಕೂಡ ಇನ್ನೂ ಜಡತ್ವದಲ್ಲಿಯೇ ಇದ್ದಾರೆ. ಈ ಜಡತ್ವಕ್ಕೆ ಮದ್ದು ಕೊಡಬಲ್ಲ ಶಕ್ತಿ ನಮ್ಮ ವ್ಯವಸ್ಥೆಗಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

ಲೇಖಕರು

ಬುಡಕಟ್ಟು ಜನಾಂಗಗಳ ಸಂಸ್ಕೃತಿಯನ್ನು ಕುರಿತು ಅಧ್ಯಯನ ನಡೆಸಿರುವ ಪ್ರಮುಖರಲ್ಲಿ ಒಬ್ಬರಾದ ಹಿ.ಚಿ. ಬೋರಲಿಂಗಯ್ಯ (ಜ. ೧೯೫೫) ಅವರು ತುಮಕೂರು ಜಿಲ್ಲೆಯ, ಕುಣಿಗಲ್ ತಾಲ್ಲೂಕಿನ ಹಿತ್ತಲಪುರ ಎಂಬ ಹಳ್ಳಿಯಲ್ಲಿ ಜನಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ. (ಕನ್ನಡ) ಪದವಿಯನ್ನು, ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ. ಈಗ ಕನ್ನಡ ವಿಶ್ವವಿದ್ಯಾಲಯದಿಂದ ಬುಡಕಟ್ಟು ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಗಿರಿಜನರ ವಾಸಸ್ಥಳಗಳಿಗೆ ಪ್ರವಾಸ ಮಾಡಿ, ಗಿರಿಜನ ನಾಡಿಗೆ ಪಯಣ ಎಂಬ ಪ್ರವಾಸ ಕಥನವನ್ನು ಬರೆದಿದ್ದಾರೆ. ಬುಡಕಟ್ಟು ಜನಾಂಗದವರ ಮಹಾಕಾವ್ಯಗಳನ್ನು ಸಂಗ್ರಹಿಸಿ ಪ್ರಕಟಿಸುವ ಯೋಜನೆಯ ಗೌರವ ಸಂಪಾದಕರಾಗಿದ್ದಾರೆ. ಉಜ್ಜನಿ ಚೌಡಮ್ಮ, ದಾಸಪ್ಪ-ಜೋಗಪ್ಪ, ವಿಸ್ಮೃತಿ ಮತ್ತು ಸಂಸ್ಕೃತಿ, ಕಾಡು, ಕಾಂಕ್ರಿಟ್ ಮತ್ತು ಜಾನಪದ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಇಟಲಿ, ಫ್ರಾನ್ಸ್, ಹಾಲೆಂಡ್ ಮತ್ತು ಇರಾನ್ ನ ರಾಜಧಾನಿ ಟೆಹರಾನ್ ನಲ್ಲಿ ನಡದ ಅಂತರಾಷ್ಟ್ರೀಯ ಗೊಂಬೆಯಾಟ ಉತ್ಸವದಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿದ್ದರು. ಮಂಟೇಸ್ವಾಮಿ ಟ್ರಸ್ಟ್ ಸಾಹಿತ್ಯ ಪ್ರಶಸ್ತಿಯನ್ನು, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯು ಹಿ.ಚಿ. ಬೋರಲಿಂಗಯ್ಯ ಅವರು ಜಾನಪದ ಸಲ್ಲಿಸಿದ ಸೇವೆಗಾಗಿ ಗೌರವ ಪ್ರಶಸ್ತಿಯಲ್ಲಿ ನೀಡಿ ಸನ್ಮಾನಿಸಿವೆ.

ಆಶಯ

ಈ ಪ್ರವಾಸ ಕಥನದ ಭಾಗವನ್ನು ಗಿರಿಜನ ನಾಡಿಗೆ ಪಯಣ ಎನ್ನುವ ಕೃತಿಯಿಂದ ಆಯ್ಕೆ ಮಾಡಲಾಗಿದೆ. ಬೆಟ್ಟಗುಡ್ಡಗಳ ನಡುವೆ ಬೆಳೆದ ಕಾಡು, ಹರಿವ ನದಿಗಳಿಂದ ಕೂಡಿದ ಈ ಪ್ರದೇಶ ಸಸ್ಯ. ಖನಿಜ ಸಂಪತ್ತುಗಳುಳ್ಳದ್ದು. ಬುಡಕಟ್ಟು ಜನಾಂಗಗಳು ಈ ಪ್ರದೇಶದಲ್ಲಿ ವಾಸವಾಗಿದ್ದಾರೆ. ಸೌಂದರ್ಯದಿಂದಲೂ ಕೂಡಿದ ಈ ಪ್ರದೇಶ ಕನ್ನಡ ನಾಡಿನಲಿದ್ದುದ್ದನ್ನು ಕಣ್ಣಾರೆ ಕಂಡು ಅದನ್ನು ಅನುಭವಿಸುತ್ತ, ಅಲ್ಲಿರುವ ಗಿರಿಜನರ ಬದುಕನ್ನು ಅರಿಯುವ ಆಸಕ್ತಿಯನ್ನು ಹೊಂದಿದ್ದಾರೆ. ಈ ಪ್ರದೇಶದ ಗಿರಿಜನರು ಇನ್ನೂ ಆಧುನಿಕತೆಯ ಯಾವ ಸೌಲಭ್ಯವನ್ನು ಪಡೆಯದೇ ಇರುವುದನ್ನು ಮನಗಂಡಿದ್ದಾರೆ.

ಶಬ್ದಕೋಶ

ಪ್ರಕ್ಷುಬ್ಧ=ಬಿಕ್ಕಟ್ಟು. ಏಕಾಗ್ರತೆ=ಸ್ಥಿರ ಮನಸ್ಸು. ನಿಷ್ಕಳಂಕ=ಕಳಂಕವಿಲ್ಲದ, ದೋಷವಿಲ್ಲದ. ನಿರರ್ಗಳ=ತಡೆಯಿಲ್ಲದ. ನಿಷ್ಕಲ್ಮಶ=ಶುದ್ಧವಾದ. ಆಲಂಗಿಸು=ಅಪ್ಪುವುದು. ಸ್ಥಂಭ=ಕಂಬ. ಅವಶೇಷ=ಅಳಿದುಳಿದ.

ಪ್ರಶ್ನೆಗಳು

೧.         ಕುದ್ರೆಮುಖ ಪರ್ವತ ಏರುವಾಗ ಲೇಖಕರಿಗಾದ ಅನುಭವಗಳನ್ನು ಬರೆಯಿರಿ.

೨.         ಸೈಮನ್ ಲೋಬೋ ಯಾರು? ಅವನ ವಿಶಿಷ್ಟ ಜೀವನ ಕ್ರಮವನ್ನು ಬರೆಯಿರಿ.

೩.         ಹವಳ ಪ್ರದೇಶದ ಸೃಷ್ಟಿ ಸೌಂದರ್ಯವನ್ನು ವರ್ಣಿಸಿರಿ.

೪.         ಕುದ್ರೆಮುಖ ಪರ್ವತದ ಮೇಲಿನ ಹಳೆಯ ಚರ್ಚಿನಲ್ಲಿ ಲೇಖಕರಿಗಾದ ಅನುಭವಗಳನ್ನು ಬರೆಯಿರಿ.

೫.         ಮೇರು ಜನಾಂಗದಲ್ಲಿ ಕಾಣುವ ಅಟಕಳಂಜ ಕಲೆಯನ್ನು ವಿವರಿಸಿರಿ.

೬.         ಮನ್ಸ ಜನಾಂಗದ ಕರಂಗೋಲ ಕುಣಿತದ ಬಗ್ಗೆ ಬರೆಯಿರಿ.

೭.         ಗಿರಿಜನರ ಬಗ್ಗೆ ಲೇಖಕರಿಗಿರುವ ಆಸಕ್ತಿಯ ಸ್ವರೂಪವನ್ನು ವಿವರಿಸಿರಿ.

ಹೆಚ್ಚಿನ ಓದು

ದೇನಾಶ್ರೀ : ಗಿರಿಕಂದರಗಳ ನಾಡಿನಲ್ಲಿ – ಪ್ರವಾಸ

ಜಿ.ಪಿ. ಬಸವರಾಜು : ನಾಲಾಚಲಗಳ ನಾಡಿನಲ್ಲಿ – ಪ್ರವಾಸ

ಕೃಷ್ಣಾನಂದ ಕಾಮತ : ಬಸ್ತರ ನಾಡಿನಲ್ಲಿ – ಪ್ರವಾಸ