ದೇವರ ಬೆಲೆ

ಎಲ್ಲ ಸಂಪ್ರದಾಯವಾದಿಗಳಂತೆ ನಾನೂ ಒಮ್ಮೆ ಬದುಕಿನ ಬೆಲೆಯನ್ನು ತಗ್ಗಿಸಿ ದೇವರ ಬೆಲೆಯನ್ನು ಏರಿಸಿ ತಿಳಿದವನು. ಕೊನೆಗೆ ನನ್ನ ಅನುಭವಗಳು, ಈ ನನ್ನ ರೂಢಿಯ ನಂಬಿಕೆಗಳನ್ನು ಕುಲುಕಿಸುವ ಕಾಲ ಬಂದಿತು. ನಮ್ಮ ಬದುಕಿಗಿಂತ ಹಿರಿದಾದ ದೇವರು ನಮಗೆ ನಿಲುಕಲಾರನೆಂಬುದೇ ನನ್ನ ನಂಬಿಕೆ. ಈ ನಿರ್ಣಯಕ್ಕೆ ಕಾರಣವಾದ ವಿಚಾರಸರಣೆಯನ್ನು ಮುಂದಿಡುತ್ತೇನೆ. ಮೊದಲಿಗೇನೆ – ನಾನು ಸಂಪ್ರದಾಯವಾದಿಗಳ ಕುಟುಂಬದಲ್ಲಿ ಜನಿಸಿದವನು – ಎಂದೆ. ನಮ್ಮ ಮನೆಯವರು ಸ್ಮಾರ್ತ ಬ್ರಾಹ್ಮಣರು. ಅದ್ವೈತಿಗಳಮತೆ ನಾವು ವಿಭೂತಿ ಧರಿಸುವವರು. ಇತ್ತ ಶಿವನಲ್ಲೂ ಭಕ್ತಿಯಿದೆ ಅತ್ತ ವಿಷ್ಣುವಿನಲ್ಲೂ ಭಕ್ತಿಯಿದೆ. ಶಿವರಾತ್ರಿಗೂ ಉಪವಾಸ, ಕೃಷ್ಣಾಷ್ಟಮಿಗೂ ಉಪವಾಸ. ನಮಗೆ ಕುಲದೇವರು ವಿಷ್ಣುವಿನ ಒಂದು ರೂಪ-ಲಕ್ಷ್ಮೀನರಸಿಂಹ. ಹೆಸರಿಗೇನೋ ನಾವು ಅದ್ವೈತಿಗಳು. ಆದರೆ ಅವರಂತೆ ಜ್ಞಾನಪ್ರಧಾನವಾದ ತರ್ಕ ಸರಣಿ ನಮ್ಮವರದ್ದಲ್ಲ. ದೇವರನ್ನು ಕಾಣುವ ನಮ್ಮ ಬಗೆ ಭಕ್ತಿ ಮಾರ್ಗದ್ದು. ಸೋಹಂ ಬ್ರಹ್ಮನೆಂಬ ದಿಟ್ಟತನ ನಮ್ಮ ಜನಗಳಲ್ಲಿ ಬೆಳೆದು ಬಂದುದೇ ಕಾಣುವುದಿಲ್ಲ.

ಗಾಂಧಿ, ರಾಮಕೃಷ್ಣರು

ನನ್ನ ಹುಡುಗತನದಲ್ಲಿ ಮತದ ಇಲ್ಲವೆ ಭಕ್ತಿಯ ಯಾವ ವರ್ಚಸ್ಸೂ ನನ್ನ ಮೇಲಿರಲಿಲ್ಲ. ಎಲ್ಲ ಶಾಲೆಯ ಹುಡುಗರಂತೆ ನಾನೂ ಒಬ್ಬ. ಮುಂದೆ ತಾರುಣ್ಯದ ಎಳೆತನದಲ್ಲಿ ಕಾಲೇಜನ್ನು ಬಿಡುವ ಕಾಲ ಬಂದಿತು. ಗಾಂಧೀಜಿಯವರ ರಾಜಕೀಯ ಕರೆ ಅದಕ್ಕೆ ಕಾರಣವಾಯಿತು. ಆ ಕರೆಯ ಬಲ ರಾಜಕೀಯದಾಗಿದ್ದರೂ, ಅವರ ಆದರ್ಶಗಳ ವರ್ಚಸ್ಸು ನನ್ನ ಮೇಲೆ ಬಿದ್ದಿತ್ತು. ನನ್ನಲ್ಲಿ ಸುಳಿವು ಬಲವಾಗಿತ್ತು. ಅದರಿಂದ ಗೀತೆಯ ಅಧ್ಯಯನ ನನಗೆ ಪ್ರಿಯವಾಗುತ್ತ ಬಂದಿತು. ಆ ಗೀತೆ ಎಷ್ಟು ಅರ್ಥವಾಯಿತೋ, ಅದರಿಂದೇನು ತಿಳಿಯಿತೋ ಹೇಳಲಾರೆ; ಅಂತು ಅದನ್ನು ಕನ್ನಡಿಸುವ, ಕಂಠಪಾಠ ಮಾಡುವ ಪ್ರಯತ್ನ ಮಾಡಿದ್ದೆ. ಇದೇ ವೇಳೆಯಲ್ಲಿ ರಾಮಕೃಷ್ಣ ಪರಮಹಂಸರ ಬರವಣಿಗೆಗಳ ಮೇಲೆ ನನ್ನ ದೃಷ್ಟಿ ಹರಿಯಿತು. ಅವರ ಭಕ್ತಿ ಜೀವನ ನನ್ನ ಮನಸ್ಸಿನ ಮೇಲೆ ತುಂಬ ಪರಿಣಾಮ ಮಾಡಿತು. ಇತ್ತ ಗಾಂಧಿತನ, ಅತ್ತ ರಾಮಕೃಷ್ಣರ ವರ್ಚಸ್ಸು – ಇವುಗಳು ನನ್ನಲ್ಲಿದ್ದ ನಂಬುಗೆಗಳ ಮೇಲೆ ಬಿದ್ದುದರ ಪರಿಣಾಮವಾಗಿ ‘ದೇವರನ್ನು ಕಾಣುವುದೇ ಮಾನವೀ ಜೀವನದ ಗುರಿಯೆಂದೂ, ಅದಕ್ಕೆ ಸಂಸಾರವು ವಿಘ್ನವೆಂದೂ, ಬ್ರಹ್ಮಚರ್ಯ ಜೀವನ, ಧ್ಯಾನ, ತಪಸ್ಸುಗಳು ಮುಖ್ಯ’ವೆಂದೂ ಒಮ್ಮೆಗೆ ನಿರ್ಣಯಿಸಿಬಿಟ್ಟೆ. ಇದು ನನ್ನ ತೀರ್ಮಾನವೆನ್ನುವ ಬದಲು, ನನ್ನ ಮನಸ್ಸು ತನ್ನ ಹಿಂದಿನ ರೂಢಿಯ ನಂಬಿಕೆಗಳಿಗೆ ಕೊಟ್ಟಿದ್ದ ಒಪ್ಪಿತವೆಂದರೂ ಸರಿಯೆ.

ಹಲವು ದೇವರುಗಳು

ಭಕ್ತಿ ಪಂಥದಲ್ಲಿ ಸವಿಯದ ನನಗೆ, ಯಾವ ದೇವರು ಬೇಕು? ಕುಲ ದೇವತೆಯಾದ ಲಕ್ಷ್ಮೀನರಸಿಂಹ ಮನಸ್ಸಿಗೆ ಎಂದೂ ಹಿಡಿದಿರಲಿಲ್ಲ ಆ ಉಗ್ರ ರೂಪವಾಗಲಿ, ಲಕ್ಷ್ಮೀ ಸಂಜ್ಞಾರ್ಥವಾದ ಸಿರಿತನವಾಗಲಿ ನನಗೆ ಅಂದು ರುಚಿಸುವ ಸ್ಥಿತಿಯಲ್ಲಿರಲಿಲ್ಲ. ನಾನು ಶೈವನಾದರೂ ಶಿವನ ಯಾವುದೇ ರೂಪ. ಅವತಾರಗಳು ಮೋಹಕವಾಗಿ ಮನಸ್ಸಿನ ಮೇಲೆ ಮೂಡಿರಲಿಲ್ಲ. ನನ್ನ ಎಳೆತದಲ್ಲಿ ಕೇಳಿದ ವಿಷ್ಣುವಿನ ಕತೆಗಳೇ ರಮಣೀಯವೆನಿಸಿದ್ದವು. ಬಯಲಾಟಗಳಲ್ಲಿ ಬರುವ ರಾಮ, ಕೃಷ್ಣರು ಮನಸ್ಸಿನ ಮೇಲೆ ಮುದ್ರೆಯೊತ್ತಿದ್ದರು. ಮೇಲೆ ನಮ್ಮ ಮನೆಯಲ್ಲಿ ಮಳೆಗಾಲದಲ್ಲಿ. ಭಾಗವತ ವಾಚನದ ಪರಿಪಾಠವಿರುತ್ತಿತ್ತು. ಹೀಗಾಗಿ ಕೃಷ್ಣನ ಕತೆಗಳು ಆಕರ್ಷಿಸಿದ್ದವು. ಅದರಿಂದ ಮನಸ್ಸು ದೇವರನ್ನು ನೆನೆಯುವಾಗ ರಾಮ ಇಲ್ಲವೇ ಕೃಷ್ಣ ಇವರಲ್ಲಿ ಒಬ್ಬರ ಕಲ್ಪನೆಯನ್ನು ತರುತ್ತಿತ್ತು. ಈ ವೇಳೆಯಲ್ಲೇ ಕೆಲವು ಸಾಮಾಜಿಕ ಪ್ರಶ್ನೆಗಳ ವಿಷಯದಲ್ಲಿ ನನ್ನಲ್ಲಿ ಕ್ರಾಂತಿಗಳು ತಲೆಯೆತ್ತಿದುದರ ಫಲವಾಗಿ ಏಕಾಗ್ರಚಿತ್ತತೆ ಬೆಳಸಲು ಪ್ರಾಣಾಯಾಮ ಸಾಧನ ಮಾಡಿದ್ದೆ; ಗಾಂಧೀಜಿಯವರ ಸಾಬರ್ಮತಿ ಆಶ್ರಮದಲ್ಲಿ ಕೆಲದಿನ ಇದ್ದುದರ ಫಲವಾಗಿ, ಅಲ್ಲಿನ ಭಜನೆಯ ರೀತಿ ಹಿತಕರವಾಗಿ ಕಂಡಿತ್ತು. ಆದರೂ ದೇವರನ್ನು ಗುಲ್ಲೆಬ್ಬಿಸಿ ಎಚ್ಚರಿಸುವ ‘ಸಪ್ತಾಹ ಮಾರ್ಗ’ ಎಂದೂ ನನಗೆ ರುಚಿಸಿರಲಿಲ್ಲ.

ಧ್ಯಾನ, ಭಜನೆ

ಇವೆರಡರ ಸಹಾಯದಿಂದ ನಾನು ದೇವರನ್ನು ಕುರಿತು ಚಿಂತಿಸಲು ಕಲಿತೆ, ನಿರ್ಜನ ಮಸಣ, ಅರಣ್ಯಗಳಲ್ಲಿ ಅಲೆದಾಡುತ್ತ ಎಷ್ಟು ಮಿತ, ಶಾಂತ ಜೀವನ ಮಾಡಬಹುದೋ ಅದನ್ನು ಮಾಡುತ್ತ ಮಿತವಾದ ಅನ್ನಪಾನ, ಆಹಾರಗಳಿಂದ ಸಾಧನ ತೊಡಗಿದೆ. ಹತ್ತು ವರ್ಷಗಳ ಕಾಲವದರೂ ನಾನು ಹೀಗೆ ಮಾಡಿದ್ದಿರಬೇಕು. ನನ್ನ ಬಹುಮಂದಿ ಗೆಳೆಯರಿಗೆ ಈ ನನ್ನ ಜೀವನ ಅಪರಿಚಿತವಾದುದು. ಏಕೆಂದರೆ – ಅಪರಿಚಿತ ಜನ, ನಾಡು, ನಗರಗಳಲ್ಲೇ ನಾನು ಈ ಕಾಲದಲ್ಲಿ ಬಹುವಾಗಿ ವಾಸಮಾಡುತ್ತಿದ್ದೆ. ಈ ಸಾಧನೆಯ ಪ್ರತಿಫಲವಾಗಿಯೇ ನನಗೆ ದೇವರ ಹುಚ್ಚು ಬಿಟ್ಟಿತು. ಅದರ ತೀರ್ಮಾನವನ್ನು ನನ್ನ ಗೆಳೆಯರ ಮುಂದಿರಿಸಿದಲ್ಲಿ, ನನ್ನ ಮುಂದಿನ ವಾದ ಸರಣಿ ಸ್ಪಷ್ಟವಾದೀತು.

ಯಾವ ದೇವರು

ತಾಸು ತಾಸುಗಳ ತನಕ ನಾನು ಚಿಂತಿಸಿದ ದೇವರು ಯಾರು? ಕೆಲವೊಮ್ಮೆ ಭಾವನೆ ಉಕ್ಕಿ ‘ದೇವರೇ ಕಾಣಿಸು’ ಎಂದು ಕಣ್ಣೀರು ಕರೆದುದು ಯಾರ ಸಲವಾಗಿ? ಅವನನ್ನು ಚಿಂತಿಸುವ ಗಳಿಗೆಯಲ್ಲೆಲ್ಲ ‘ರಾಮ’ ಎಂಬುವಾಗಲೆಲ್ಲ. ಮನಸ್ಸಿನ ಮುಂದೆ ಏನು ನಿಲ್ಲುತ್ತಿತ್ತು? ನನ್ನ ದೇವರ ಔದರ್ಯವನ್ನು ಕುರಿತು ಗಾನ ಮಾಡುವಾಗ, ಯಾವ ಹುಣಗಳ ಕಲ್ಪನೆ ಆಗುತ್ತಿತ್ತು? ಇವನ್ನೆಲ್ಲ ನಾನು ಯೋಚಿಸದೆ ಇರಲಿಲ್ಲ.

ನಾನು ಎಷ್ಟೇ ಚಿಂತಿಸಲಿ, ಹೇಗೂ ಚಿಂತಿಸಲಿ – ನನ್ನ ದೇವರು ನನ್ನ ಮಿತಿಯನ್ನೂ, ನನ್ನ ಜೀವನದ ಅನುಭವಗಳ ಮಿತಿಯನ್ನೂ ಹೊರಗೆಡಹುವುದಾಗಿತ್ತು. ದೇವರ ಚೆಲುವು, ದೊಡ್ಡಸ್ತಿಕೆ, ಗುಣಗಳು ನಮ್ಮ ನಮ್ಮ ಅನುಭವಗಳ ಮಿತಿಯನ್ನು ದಾಟಲಾರವೆಂಬುವ ತಿಳಿವಿಗೆ ನಾನು ಬರಬೇಕಾಯಿತು.

ಬಿಂಬ, ಶಬ್ದ

ನಾವು ಚಿಂತಿಸಲಿ, ಯೋಚಿಸಲಿ – ಅವೆಲ್ಲ ಗುಣಗಳು ಬೆಳೆಯಲು, ಕೆಲಸ ಮಾಡಲು ಎರಡು ಮುಖ್ಯ ಸಾಧನಗಳಿಂದಾಗಿ ಆ ಕೆಲಸ ನಡೆಯಬೇಕಾಗುತ್ತದೆ. ಮೊದಲನೆಯ ಬಿಂಬ, ಎರಡನೆಯ ಶಬ್ದ, ನಮ್ಮ ಯಾವತ್ತು ನೆನಪುಗಳು ಕಟ್ಟಕಡೆಗೆ ಈ ಆಕಾರಗಳನ್ನು ತಾಳುತ್ತವೆ. ವ್ಯಕ್ತ ವಸ್ತುಗಳೆಲ್ಲ – ಬಿಂಬಗಳ ರೂಪದಲ್ಲಿ ನಮ್ಮ ಮುಂದೆ ಹೊರಳುತ್ತವೆ. ಅವ್ಯಕ್ತ ವಿಷಯಗಳು (Abstract) ಶಬ್ದಗಳ ರೂಪದಲ್ಲಿ ಮನಸ್ಸಿನಲ್ಲಿ ನಲಿಯುತ್ತದೆ; ಕೆಲಕೆಲವು ವಸ್ತುಗಳು ನಾದ, ಗಂಧ, ರಸ, ಸ್ಪರ್ಶಗಳ ಪ್ರತೀಕಗಳಾಗಿ ಬರಬಹುದು. ತೀರ ಹೆಚ್ಚಿನ ಕೆಲಸ, ವಿಸ್ತರವಾದ ಕೆಲಸ ಬಿಂಬ ಮತ್ತು ಶಬ್ದಗಳಿಂದ ನಡೆಯಬೇಕು. ದೈವದ ವಿಚಾರವಾಗಿಯಾದರೂ ಸರಿಯೆ, ಬೇರೆ ಇನ್ನಾವ ವಿಚಾರವಾಗಿಯಾದರೂ ಸರಿಯೆ. ತಾಯಿಯ ಕಲ್ಪನೆ ಮಾಡಲು ಮನಸ್ಸು ಹೊರಳಿದರೆ ಆಗ ಮನೆ, ತಾಯಿಯ ರೂಪ, ಅವಳ ಪ್ರೀತಿಯ ನಡಿಗೆ ಕಾಣಿಸಬಹುದು. ತಾಯ್ತನದ ವಿಚಾರವನ್ನು ನೆನೆಯುವಾಗ, ನಮ್ಮ ತಾಯಿಯ ಬಿಂಬದ ಜತೆಗೆ, ಇನ್ನೂ ಕಂಡ ಕೇಳಿದ ಅನೇಕ ಮಾತೆಯರ ಬಿಂಬಗಳು ಮಾಲೆಯಾಗಿ ಮನಸ್ಸಿನ ಮುಂದೆ ಬರಬಹುದು. ಆ ಮಾತೆಯರಾರು? ಅವರು ಪರಿಚಿತವಾದ ಸ್ತ್ರೀ ರೂಪದಿಂದಲೇ ನಮ್ಮ ಕಣ್ಮುಂದೆ ನಿಲ್ಲುತ್ತಾರೆ. ಮನಸ್ಸಿನ ಮೇಲೆ ಮೂಡುವ ವಿಷಯಗಳು, ಬಿಂಬಕ್ಕೆ ಸಂಕೇತವಾದ, ಇಲ್ಲವೇ ಅನುಭವಕ್ಕೆ ಸಂಕೇತವಾದ ಶಬ್ದಗಳ ಮುಖಾಂತರ ಕಾಣಿಸುವುದು ಸಹಜ. ಪ್ರೀತಿಯ ಒಮದು ಕೃತಿಯ ಬಿಂಬವು ಮನಸ್ಸಿನಲ್ಲಿ ಮೂಡುತ್ತದೆ; ಅದು ಇಲ್ಲದಾಗ ಪ್ರೀತಿ ಸಂಬಂಧದ ಒಂದು ಮಾತೋ, ವಾಕ್ಯವೋ ಮನಸ್ಸಿನಲ್ಲಿ ಓಡಾಡುತ್ತದೆ.

ನಮ್ಮ ಈಶ ಚಿಂತನೆಯ ಪ್ರಯತ್ನದಲ್ಲಿ, ಬೇರೆಯ ರೀತಿ ಮನಸ್ಸಿಗೆ ಇದಿರಾಗುವುದಿಲ್ಲ. ದೇವರ ರೂಪು, ಕೃತಿಗಳು, ಅವನ ಗುಣಗಳು – ನಮ್ಮ ಚಿಂತನೆಗೆ ಗುರಿಯಾಗುವಾಗ, ಅನೇಕ ಬಿಂಬಮಾಲೆಗಳೂ, ಅವನ್ನು ಪುಷ್ಟಿಗೊಳಿಸುವ ಮಾತುಗಳೂ, ಮನಸ್ಸಿನಲ್ಲಿ ಓಡಾಡುತ್ತವೆ. ದೇವರ ರೂಪವನ್ನು ನಾವು ನೆನೆಯಲು ಯತ್ನಿಸುತ್ತೇವೆಂದು ತಿಳಿಯಿರಿ. ಮನಸ್ಸು ಅವನಿಗೊಂದು ಚೆಲುವಿನ ಆಕೃತಿಯನ್ನು ಹೆಣೆಯುತ್ತದೆ. ಅವನ ವಿಷಯವಾದ ನಮ್ಮ ಕೇಳಿಕೆಗಳಲ್ಲಿ, ‘ಅವನು ಮನುಷ್ಯ ರೂಪಿ’ಯಾಗಿದ್ದರೆ. ಸುಂದರ ಮನುಷ್ಯ ಆಕೃತಿ ನಮಗೆ ಇದಿರಾಗುತ್ತದೆ. ಎಷ್ಟು ಸುಂದರನವನು? ಆಗ ರವಿವರ್ಮನ ಒಂದು ಚಿತ್ರ ಬಿಂಬವೋ ನಾಟಕ ಮಂಡಲದಲ್ಲಿ ಕೃಷ್ಣನ ಭೂಮಿಕೆಯನ್ನು ಊಹಿಸಿದ ಹುಡುಗನ ಬಿಂಬವೋ ಬಂದೀತು. ದೇವರ ಉಡುಪು ತೊಡಪುಗಳು, ನಮ್ಮ ಪರಿಚಿತ ಆವರಣದಿಂದಲೇ ಅಲ್ಲಿಗೆ ಬಂದು ಸೇರುತ್ತವೆ. ಅವನ ವರ್ಣನೆಯಲ್ಲಿ ನಾವು ಕಂಡಿರುವ ಆಭರಣದ ಹೆಸರಿದ್ದರೆ, ‘ವತ್ಸ ಲಾಂಛನ’ ಎಂದಿದ್ದಾರೆ ಅದು ಹೊಳೆಯುವುದಿಲ್ಲ. ಬದಲು ನಮಗೆ ನಿತ್ಯ ಜೀವನದಲ್ಲಿ ಪರಿಚಿತವಾದ ತೋಡಾ, ವಂಕಿ, ಸರಿಗೆ, ಸರ, ಕಿರೀಟ – ಇವುಗಳು ಬಂದು ಸೇರುತ್ತವೆ. ಇವನ್ನು ಕಾಣದಿರುವಲ್ಲಿ, ಇವುಗಳ ನಕಲಿಗಳು ಬೇರೊಂದು ಚಿತ್ರದಿಂದಲೋ, ಶಿಲ್ಪದಿಂದಲೋ, ನಟರ ತೊಡುಗೆಯಿಂದಲೋ ಬಂದು ಸೇರುತ್ತವೆ.

ಅನುಭವದ ಮಿತಿ

ನನ್ನ ನಿತ್ಯ ಜೀವನದ ನೋಟದಲ್ಲಿ – ರವಿವರ್ಮನ ಕೃಷ್ಣ, ನಾಟಕ ಮಂಡಲದ ಕೃಷ್ಣರು ಮಾತ್ರ ಪರಿಚಿತರಾಗಿದ್ದರೆ. ಆಗ ಅವರು ಮಾತ್ರವೇ ಧ್ಯಾನದ ಎಟುಕಿಗೆ ಸಿಗುವಂಥ ಕೃಷ್ಣರಾದರು. ಒಂದೆರಡು ಶಿಲ್ಪಗಳನ್ನೋ, ನಂದಲಾಲರ ಚಿತ್ರಗಳನ್ನೋ ನಾವು ಕಂಡಿದ್ದರೆ ಅವುಗಳಾದರೂ ಬಂದಾವು. ಬದಲು, ನಾನೇ ನಂದಲಾಲರಂತೆ ಕೃಷ್ಣನನ್ನು ರಚಿಸಿದರೆ ಒಂದಿಲ್ಲೊಂದು ಮನುಷ್ಯ ವಿಗ್ರಹ, ನನ್ನ ಹಳೆಯ ಅನುಭವಗಳ ವಿಶೇಷ ಪಾಕದಿಂದ ಉದ್ಭವಿಸಬಹುದು. ನಿತ್ಯ ಜೀವನದಲ್ಲಿ ನಾನು ಎಷ್ಟೆಷ್ಟು ಸುಂದರಕಾಯರನ್ನು ಕಂಡಿರುತ್ತೇನೆಯೋ, ಅಷ್ಟುಷ್ಟು ಸುಂದರ ರಾಮ, ರಾಧಾಕೃಷ್ಣರನ್ನು ಮಾತ್ರ ಕಾಣಲು ಶಕ್ಯ. ನನ್ನ ಊಹಾ ಬಲವನ್ನು ನಾನು ಆದರಿಸುವೆನಾದರೆ, ಈ ಅನುಭವಕ್ಕಿಂತ ಬರಿಯ ಒಂದು ಹೆಜ್ಜೆ ಮುಂದುವರಿದು – ಒಂದು ವಿಗ್ರಹದ ಕೈ ಒಂದರ ಮುಖ, ಒಂದರ ಅರಿವೆ, ಮತ್ತೊಂದರ ಒಡವೆಗಳನ್ನು ಸೇರಿಸಬಹುದು. ಒಟ್ಟಿನಿಂದ ನನ್ನ ರೂಪಾನುಭವಗಳ ಮಿತಿಯಿಂದ ನನ್ನ ದೇವರ ರೂಪವೂ ಮಿತಿಗೊಳ್ಳಬೇಕಾಗುತ್ತದೆ.

ಗುಣ ಚಿಂತನೆ

ಇನ್ನು ಭಜನೆಯಿಂದಲೋ, ಕೇಳಿಕೆಯಿಂದಲೋ ಪರಿಣಾಮಗೊಂಡ ಮನಸ್ಸು, ದೇವರ ಗುಣಾತಿಶಯವನ್ನು ಎಣಿಸಹೋದರೆ ಅದರ ಚಳಕ ಮತ್ತಷ್ಟು ಕಡಿಮೆ. ಬಿಂಬಗಳು ಮಾಡಲಾರದ ಹಲವು ಕೆಲಸಗಳಿವೆ; ಶಬ್ದಗಳು ಅವನ್ನು ಪೂರೈಸಬಹುದಾಗುತ್ತದೆ. ದೇವರ ಗುಣಾತಿಶಯಗಳನ್ನು ಕುರಿತು ಚಿಂತಿಸುತ್ತೇವೆ – ಎಂದು ತಿಳಿಯಿರಿ. ಆಗ ಔದಾರ್ಯ, ಪ್ರೇಮ ಮೊದಲಾದ ಶಬ್ದಗಳು ನಮಗೆದುರಾಗುತ್ತವೆ. ಅವುಗಳನ್ನು ಕುರಿತು ಇನ್ನಷ್ಟು ವಿಚಾರ ಮಾಡಿದಲ್ಲಿ – ಪ್ರೀತಿಸುವ ಜನಗಳ, ಇಲ್ಲವೆ ತಾಯ್ತಂದೆಗಳ ಚಿತ್ರವೋ, ಉದಾರಿಗಳ ಕೃತಿ ಬಿಂಬವೋ ನಮಗೆ ಎದುರಾಗುತ್ತವೆ. ಹೀಗೆ ಯಾವ ಬಗೆಯಿಂದ ನಾವು ಚಿಂತಿಸುತ್ತ ಹೋದರೂ ಆಗ ನಮ್ಮ ನಿತ್ಯ ಜೀವನದ ಒಂದೊಂದು ಅನುಭವವೂ ಈ ಬಿಂಬಗಳ ರಚನೆಗೆ ಕಾರಣವಾಗುತ್ತದೆ. ನಾವು ಕಂಡ ಉದಾರಿಗಳ ಮೇಲಿಂದ, ದೇವರ ಔದಾರ್ಯದ ಕಲ್ಪನೆ ಹುಟ್ಟಬೇಕು. ನಾವು ಸವಿದ, ಕಂಡ ಪ್ರೇಮದ ನೋಟಗಳಿಂದ, ದೇವರ ಪ್ರೇಮದ ನೋಟ ಕೆರಳಬೇಕು. ಈ ರೀತಿ ಅನುಭವಗಳಿಂದ ನಿಲ್ಲಲಾರದ ಯಾವತ್ತು ಗುಣ ನಿರೂಪಣೆಗಳು ಬರಿಯ ಶಬ್ದಗಳಾಗಿಯೇ ಉಳಿಯುತ್ತವೆ. ಕೇವಲ ಅರ್ಥವಿಲ್ಲದ ಶಬ್ದಗಳವು.

ವಿಸ್ತೃತ ಜೀವನದಿಂದ

ನಾವು ಕೃಷ್ಣನ ಮಧುರ ಭಾವವನ್ನು ಧ್ಯಾನಿಸುವಾಗ, ಅದರ ನೆಲೆಗಟ್ಟು ನಾವು ಕೇಳಿದ ಕತೆಗಳ ಮೇಲೆ ನಿಲ್ಲಬೇಕಾಗುತ್ತದೆ. ರಾಧಾಕೃಷ್ಣರ ಕತೆ ನಮಗೆ ತಿಳಿದಿದೆಯಾದರೂ, ಅವರ ಮಧುರಭಾವವೆಂದು ಕಲ್ಪಿಸುವಾಗ, ನಾವು ಕಂಡ ಉತ್ತಮ ದಾಂಪತ್ಯ ಜೀವನದ ನೆನಪೇ ಅದನ್ನು ಸೂಚಿಸಬೇಕು. ರಾಮನ ಶೌರ್ಯ ನಾವು ಜೀವನದಲ್ಲಿ ಕಂಡ ಜೀವನದ ಯಾವುದಾದರೂ ಒಂದು ಶೂರಕೃತಿಯಿಂದ ಬಿಂಬಿತವಾಗಬೇಕು. ಆದರೆ ನಾವು ಮೂಲತಃ ಸುಂದರ ದಾಂಪತ್ಯವನ್ನೂ, ಶೂರತನದ ಕೃತಿಗಳನ್ನೂ ಕಾಣದವರಾಗಿದ್ದರೆ – ಆಗ ಕೃಷ್ಣನ ಮಧುರ ಭಾವ, ರಾಮನ ಶೌರ್ಯಗಳು ಬರಿಯ ಸದ್ದುಗಳಾಗಿಯೇ ಉಳಿದಾವು. ಹುಟ್ಟು ಕಿವುಡನೊಬ್ಬನು ಕೃಷ್ಣನ ಕೊಳಲ ಸವಿಯನ್ನು ನೆನೆಯಲು ಹೋದರೆ, ಜೀವನದಲ್ಲಿ ಕೇಳಿದ ಏನಾದರೊಂದು ಕೊಳಲಗಾನದಿಂದಲೇ ಅದು ಪ್ರೇರಿತವಾಗಬೇಕಗುತ್ತದೆ. ಹೀಗೆ ನಮ್ಮ ಜೀವನದ ಅನುಭವಗಳು ಎಷ್ಟೆಷ್ಟು ವಿಸ್ತೃತವಾಗುತ್ತವೋ ಅಷ್ಟಷ್ಟು ಹೆಚ್ಚಿಗೆ ನಮ್ಮ ಭಾವನೆಗಳು ಕೆರಳಲು, ಬೆಳೆಯಲು, ಸಫಲವಾಗಲು ಅನುಕೂಲವಾಗುತ್ತದೆ.

ಜೀವನ ಮುಖ್ಯ

ಇದರಿಂದ ನನಗೆ ಹೊಳೆದ ಮುಖ್ಯ ವಿಷಯವೆಂದರೆ – ನಮ್ಮ ಬದುಕೇ ನಮ್ಮ ಭಾವನೆಗಳಿಗೆ ಅಡಿಗಲ್ಲು. ನಮ್ಮ ದೇವರು ಭಾವನೆಗಳಲ್ಲಿ ದೊಡ್ಡವನಾಗಲು, ಜೀವನ ದೊಡ್ಡದಾಗಬೇಕೆಂದು. ಎಷ್ಟು ಸವಿಯಾದ, ವಿಸ್ತಾರವಾದ ಜೀವನದ  ಹಿನ್ನೆಲೆಯು ನಮಗಿರುತ್ತದೋ ಅಷ್ಟು ವಿಸ್ತಾರ ದೇವನು ನಮಗೆ ಇದಿರಾಗುತ್ತಾನೆ. ದೇವರು ನಮ್ಮ ಅನುಭವಗಳ ಮಿತಿಗೆ ಒಳಗಾಗಿರಲು, ಅನುಭವಗಳನ್ನು ನಿರಾಕರಿಸುವ ಸಿದ್ಧಾಂತ ನನಗೆ ಸಲ್ಲದೆನಿಸಿತು. ಜೀವನದಿಂದಲೇ ದೇವರು ಉದ್ಭವಿಸಬೇಕು, ಬೆಳೆಯಬೇಕು, ಹಿರಿಯವನಾಗಬೇಕು, ಎಷ್ಟು ಎಷ್ಟು ನಮ್ಮ ಜೀವನ ಹಿರಿದೋ, ಅಷ್ಟು ಅಷ್ಟು ದೇವರೂ ಹಿರಿದು ಆದುದರಿಂದ ದೇವರಿಗಿಂತ ಜೀವನವೇ ದೊಡ್ಡದು. ಅದರಿಂದಲೇ ದೇವರ ಮೂಲ.

ಈ ತನಕ ಸೃಷ್ಟಿಸಿದ ಸಾಕಾರ ನಿರಾಕಾರ ದೇವರುಗಳನ್ನು ಕುರಿತು ವಿಚಾರಿಸುವ, ಇದರಲ್ಲಿ ಎರಡನೆಯ ವರ್ಗದ ದೇವರನ್ನು ಶಬ್ದದಿಂದ ನಿಲ್ಲಿಸಬೇಕಾಗಿದೆ. ತರ್ಕದಿಂದ ಅದರ ನೆಲೆ. ಅನೇಕ ‘ನಿರ್’ಗಳ ಮೇಲೆ ದೇವರ ಗುಣ ನಿಂತಿದೆ. ನಮ್ಮ ಮನಸ್ಸು ‘ಗುಣ’ಗಳ ಒಂದೊಂದು ರೂಪವನ್ನು ಕಲ್ಪಿಸಬಲ್ಲದು. ಮನಸ್ಸಿನ ಸ್ವಭಾವವೇ ಹಾಗಿದೆ. ಹೀಗಿರಲು ‘ನಿರ್’ ವರ್ಗದ ನೂರು ಗುಣಗಳಿರಲಿ, ಸಾವಿರವಿರಲಿ, ನಮ್ಮ ಎಟುಕಿಗೆ ಸಿಲುಕಿದ ವಸ್ತುಗಳಾಗುತ್ತವೆ. ಆದುದರಿಂದ ಸಗುಣ ದೇವರೇ ನಮಗೆ ಪ್ರಿಯನಾಗುತ್ತಾನೆ. ಆದರೆ ಜನತೆ ಎಂಥ ಸಗುಣ ದೇವರನ್ನು ನಿರ್ಮಿಸಿದೆ ಎಂದು ವಿಚಾರ ಮಾಡಿದಲ್ಲಿಯಾವವ ಜನರಲ್ಲಿ, ಯಾವವ ನೆಲೆಯಲ್ಲಿ, ಯಾವವ ಕಾಲದಲ್ಲಿ, ಅವನ ಕಲ್ಪನೆ ತೊಡಗಿತೋ ಅವೆಲ್ಲವುಗಳ ಮಿತಿಯನ್ನು ತೊಟ್ಟು ನಿರ್ಮಿತರಾಗಿದ್ದಾರೆ. ಯಹೂದಿಯರ ದೇವರು ಅವರಿಗೂ, ಇರಾನಿಯರ ದೇವರು ಅವರಿಗೂ ಮಾತ್ರ ಅನ್ವಯಿಸಲು ಇದೇ ಕಾರಣ. ನಮ್ಮ ದೇವರುಗಳು ಭರತಖಂಡದ ಹೊರಗೆ ಕಾಲಿಡದಿರಲಿಕ್ಕೆ ಅದೇ ಕಾರಣ. ಹಾಗೆಯೇ ಸೂರ್ಯ, ಚಂದ್ರ, ನರಕ, ಸೃಷ್ಟಿ ಇವೆಲ್ಲಗಳು ಆಯಾಮ ಕಾಲದ ಜನಗಳ ತಿಳುವಳಿಕೆಯ ಮಿತಿಯನ್ನು ತಾಳಿವೆ.

ಅನುಭವ, ಊಹೆ

ವಿಷ್ಣುವಿನ ಪೀತಾಂಬರ, ಒಂಕಿ, ಸರಿಗೆ, ಕಿರೀಟಗಳು ಅವನ ಜನ್ಮ ಭೂಮಿ, ಜನ್ಮಕಾಲದ ಒಡವೆಗಳಾಗಿವೆ. ಅವನನ್ನು ನಿರ್ಮಿಸಿದ ಜನರುಗಳು ದೇವರನ್ನು ಎಣಿಸಿದಾಗಲೆಲ್ಲ – ಬರಿಯ ಮನುಷ್ಯ ಕುಟುಂಬದ ಸುಖದುಃಖ ಚಿಂತಿಸಿದವರಾದುದರಿಂದ, ವಿಶ್ವಪಾಲಕನಿಗೂ – ತಮಗೆ ತಿಳಿದ, ಉತ್ತಮ ಶರೀರವೆಂಬ ಮನುಷ್ಯ ಶರೀರವನ್ನೇ ಒದಗಿಸಿದರು. ಹೆಚ್ಚೆಂದರೆ – ಕಲ್ಪನೆಯನ್ನು ಹೊಸೆದು ನಾಲ್ಕು ತಲೆಗಳನ್ನೋ ಮೂರು ಕಣ್ಣನ್ನೋ ಸೇರಿಸಿದ್ದುಂಟು. ಆ ದೇವರಿಗೆ ಈಜಾಡಲು ಬಾರದಾಗ ಆತ ಮೀನಾಗ ಬೇಕಾಯಿತು. ತೀರ ಕ್ರೂರಿಯಾಗಬೇಕಾದಾಗ ಸಿಂಹನಾಗಬೇಕಾಯಿತು. ಈ ಎಲ್ಲ ದೇವರುಗಳ ಕಲ್ಪನೆಯನ್ನು ಮಾಡಿದ ಜನರು ವಿಶ್ವ ದೈವವನ್ನು ಕಲ್ಪಿಸಲು ಅನುಭವ ಸಾಲದವರೆಂದು ತರ್ಕಿಸಬೇಕಾಗುತ್ತದೆ.

ನಮ್ಮಿಂದಾದ ದೇವರು

ನಮ್ಮ ಭಾವನೆಗಳಿಂದಲೇ ಉಗಮವಾಗುವ ದೇವರದೇ ಚಿಂತನೆ ನಮ್ಮನ್ನು ಉದ್ಧರಿಸೀತೆ ಎಂಬ ಪ್ರಶ್ನೆ ಇದರಿಂದ ಹೊರಡುವುದು ಸಹಜ. ನಮ್ಮ ಮಿತಿಯಿಂದ ನಮ್ಮ ದೇವರಿಗೂ ಮಿತಿ, ನಮ್ಮ ದೇವರಿಂದ ನಮಗೂ ಮಿತಿ. ಆದರೆ ಇಲ್ಲೊಂದು ವ್ಯತ್ಯಾಸವಿದೆ. ನಮ್ಮಿಂದ ನಮ್ಮ ದೇವರ ಮಿತಿ ಎನ್ನುವಾಗ ನಮ್ಮ ಅನುಭವ, ಊಹೆಗಳಿಂದಾಗಿ ಆ ದೇವರು ನಿರ್ಮಾಣಗೊಳ್ಳುವುದರಿಂದ, ಮಾನವನ ಊಹೆ ವಿಸ್ತರಿಸುವಷ್ಟರ ಮಟ್ಟಿಗೆ ಅವನ ಜೀವನ ಹಿರಿದಾಗಲೂಬಹುದು. ಮನುಷ್ಯ ಜೀವನ ಬೆಳೆಯುತ್ತಿರುವ ರೀತಿಯಾದರೂ ಹಾಗೇನೆ. ಅದರಡೆಯಲ್ಲಿ ದೇವರು ದೊರೆತೇನೆ ಈ ಕೆಲಸ ಆಗಲೇಕೆಂಬ ನಿಯಮವಿಲ್ಲ. ಇನ್ನು ದೇವನೊಬ್ಬನಿದ್ದಾನೆ ಎಂದು ಒಪ್ಪಿದಲ್ಲಿ, ಆತಗೆ ಅಂಜಿ ನಡೆಯುತ್ತೇವೆ ಎನ್ನುವುದರಿಂದ ಅಂಥ ಭಾವನೆ ನಮಗೆ ಸಹಾಯ ಮಾಡಲಾರದೇ ಎನ್ನುವವರುಂಟು. ದೇವರು, ಅವನನ್ನು ಕುರಿತು ಭಕ್ತಿ, ಆರಾಧನೆ ಇವೆಲ್ಲ ಯಾವ ತನಕ ನಿತ್ಯ ಜೀವನದ ನಡುವಳಿಕೆಗೆ ಬಾರದೆ, ಕೇವಲ ನಮ್ಮ ಅವನ ಮನೋಸಂಬಂಧವಾಗಿರುತ್ತವೋ, ಅಲ್ಲಿಯ ತನಕ ನಮ್ಮ ಬಾಳು ಅದರಿಂದ ವಿಸ್ತರಿಸುವಂತೆ ನನಗೆ ಕಾಣಿಸದು. ದೇವರಿದ್ದಾನೆ ಎನ್ನುವವನು ಬದುಕಿನಲ್ಲೆಲ್ಲ ಅದನ್ನು ಕಾಣದೆ, ತಿಳಿಯದೆ, ಮಾಡುವ ಬರಿಯ ಪೂಜೆಗಳಿಂದ ಏನೂ ಸಾಧಿಸುವಂತಿಲ್ಲ.

ದರ್ಶನ

ನನ್ನ ಕೆಲವು ತೀರ ಆಪ್ತ ಗೆಳೆಯರಿದ್ದಾರೆ. ಅವರು ತಮಗೆ ದೇವರ ದರ್ಶನವಾಗಿದೆಯೆಂದೂ ಅಂದುದುಂಟು. ನನಗೆ ಆ ಮಾತು ಸೋಜಿಗವೆನಿಸುವುದಿಲ್ಲ. ನಮ್ಮ ಯಾವುದೇ ಕಟುವಾದ ಚಿಂತನೆಯ ವಿಷಯ ನಮಗೆ ದರ್ಶನವಾಗಬಲ್ಲದು. ನನಗೆ ‘ಬೇನೆಯಿದೆ’ ಎಂಬುದೇ ಮನಸ್ಸಿಗೆ ತೀರ ಹೊಳೆದಲ್ಲಿ, ಅದೇ ನಿಜವೆನಿಸಿ, ನಾವು ಬೇನೆಯಿಂದ ನರಳಬಹುದು. ಬೇನೆಯಲ್ಲಿರುವಾತ ಬೇನೆಯಿಲ್ಲವೆಂದು ಮನಸ್ಸನ್ನು ಬೋಧಿಸುವ ಹಟ ತೊಟ್ಟರೆ ಬೇನೆ ಹೋಗಬಹುದು. ಅದರಂತೆ ಅನೇಕ ಸುಂದರ ಕೃತಿ, ಕವನ, ಗಾನಗಳು – ಭಾವದಲ್ಲಿ ಮುಳುಗಿದಾಗ, ‘ದರ್ಶನ’ಗಳೆನಿಸಿ ಬಿಡುತ್ತವೆ. ಈ ಭಾವನೆಗಳ ಮಟ್ಟ, ಭವ್ಯತೆಗಳು – ಭಾವುಕನ ಅನುಭವದ ಮಿತಿಯನ್ನು, ಕಲ್ಪನೆಯ ಮಿರುಗನ್ನು ದಾಟಲಾರವು. ಜೀವನದ ಉಳಿದುವೆಲ್ಲವನ್ನು ಅಲ್ಲಗಳೆದು “ದೇವನೊಬ್ಬನೇ” ನಿಜವೆಂದು ಅಡಿಗಡಿಗೆ ಚಿಂತಿಸುವ ವ್ಯಕ್ತಿಯ ಮುಂದೆ ದೈವ ದರ್ಶನ ಸಿಗಲೂಬಹುದು. ರಾಮಕೃಷ್ಣ ಪರಮಹಂಸರಿಗಾದಂತೆ, ಇದೇ ದರ್ಶನ ಮೇಲಿಂದ ಮೇಲೆ ಆಗಲೂಬಹುದು. ಆದರೆ ಈ ದರ್ಶನ ಬಿಂಬಿತರಾದ ರಾಮ, ಕೃಷ್ಣ, ಸೀತೆಯರು ಯಾರೆಂದರೆ – ಅವರ ಅನುಭವದಿಂದ ಉಂಟಾದವರು. ಅವರು ಕೇಳಿದ ರಾಮಾಯಣದ ಕತೆಯಿಂದ ಕಲ್ಪಿತರಾದವರು. ಈ ಕಲ್ಪನೆಯ ಮಿತಿಯೇ ಜನರ ಜೀವನದ ಅನುಭವದ ಮಿತಿ. ಇಂಥ ದರ್ಶನ ದೊರೆತ ನನ್ನ ಗೆಳೆಯರೂ ಇದ್ದಾರೆ. ಆದರೆ ಇಷ್ಟೇ ಸೋಜಿಗ – ಅವರ ಧರ್ಮ, ದೇವರ ಮೇಲಿನ ಖಾಸಗಿ ಪ್ರೇಮವಾಗಿದೆ. ಅವರ ಜೀವನದಲ್ಲಿ ಕೇವಲ ಸ್ವಜಾತಿಯ ಜನರೇ ಅವರ ಗೆಳೆಯರು. ಆದುದರಿಂದ ದರ್ಶನವಾದ ಬಳಿಕವೂ ಅವರ ಗುಣ, ನಡತೆ, ವಾತ್ಸಲ್ಯ ಅವರ ಜನ, ಮನಗಳಿಗಿಂತ ಮೀರಿ ಹೋಗಿಲ್ಲ. ಇಸ್ರೇಯಲರನ್ನು ಉದ್ಧರಿಸಿ, ಈಜಿಪ್ತಿನವರನ್ನು ದಂಡಿಸುವ ದೇವರು, ಕೇವಲ ನಂಬಿಗಸ್ತರನ್ನು ಕಾಪಾಡುವ ದೇವರು, ಕೇವಲ ಭೂಸುರರ ಸಲುವಾಗಿ ಅವತರಿಸಿದ ದೇವರು – ಇಂಥೆಲ್ಲ ನಿರ್ಮಾಣಗಳಾಗಿಲ್ಲವೇ? ಅಂಥ ದೇವರುಗಳ ಸ್ವರ್ಗದಲ್ಲಿ ಇತರ ಜಾತಿಯ ಜನರು ನಿಂತಿರುವ ಬಣ್ಣನೆಗಳು ಅವರ ಪುರಾಣಗಳಲ್ಲಿ ಕೇಳಿಸುವುದಿಲ್ಲ. ಶ್ರೀರಾಮಕೃಷ್ಣರ ಜೀವನದಲ್ಲಿ – ನಾವು ಕಾಣುವ ಜೀವನದ ಇನ್ನೊಂದು ಸೆರಗಿದೆ. ಆರಂಭದಿಂದ ಬಡವರು, ದುಃಖಿಗಳು ಎಂದರೆ ಅವರಿಗೆ ಕನಿಕರ. ಅವರ ಆರಂಭದ ನಡತೆಗಳೂ – ದೇವರು ಎಲ್ಲೆಂದರಲ್ಲಿರುವ ಎಂಬ ನಂಬಿಕೆ ಯಿಂದ ಬಂದವು. ವ್ಯಕ್ತಿ ತನ್ನ ಸುತ್ತಲಿನ ಪ್ರಪಂಚದೊಡನೆ ಹೇಗೆ ತನ್ನನ್ನು ಬಿಗಿದು ಕೊಳ್ಳುತ್ತಾನೆಯೇ, ಅದರ ಮೇಲಿಂದ ಅವನ ಅನುಭವಗಳು ಹಿರಿದಾಗುತ್ತವೆ. ಹಿರಿಯ ಅನುಭವಗಳಿಂದ ತುಂಬಿರುವುದೇ ದೊಡ್ಡ ಜೀವನ. ಅಂಥ ಭಕ್ತರ ದೇವರೂ ದೊಡ್ಡವನಾಗುತ್ತಾನೆ.

ದರ್ಶನ ಮಿತಿ

ನಾವು ನಮ್ಮ ಚಿಂತನೆಯಿಂದ, ಚಿಂತನೆಗೆ ಗುರಿಯಾದ ವಸ್ತುವಿನ ದರ್ಶನ ಹೊಂದಬಹುದು. ಅದುದರಿಂದ ಜೀವನಕ್ಕೆ ಸೊಗಸನ್ನು ತರಬಹುದು. ವಿಜ್ಞಾನಿಯಾದವನು ತನ್ನ ದರ್ಶನಗಳಿಂದ ತನಗೂ ಇತರಿಗೂ ಜ್ಞಾನ ದೊರಕಿಸಿ. ಅಂಥ ಸೊಗಸನ್ನು ಉಣಿಸಬಹುದು. ಆದರೆ ಈ ದರ್ಶನದಿಂದ, ನಮ್ಮ ಮುಂದಣ ಜನ್ಮ ತಪ್ಪಿತೇ ಎಂದರೆ, ಅದು ಉಳಿದವರಿಗಿದ್ದರೆ, ನಮಗೂ ಇರಬಹುದು, ಇತರ ಜೀವಿಗಳಿಗಿಲ್ಲದ್ದು ನಮಗೆ ಬರಲಾರದು. ಆ ಪ್ರಶ್ನೆ ಇಂಥ ‘ದರ್ಶನ’ವನ್ನು ಅವಲಂಬಿಸಿಲ್ಲ.

ನಿರಾಕರಣೆ ತಪ್ಪು

ಬದುಕು ವಿಸ್ತರಿಸಲು ಯಾವುದು ಅವಶ್ಯ? ನಮ್ಮೆಲ್ಲ ಶಕ್ತಿಗಳು ಸುತ್ತಲಿನ ಪ್ರಪಂಚದಲ್ಲಿ ಅವನ್ನು ನಾವೆಷ್ಟು ಎಷ್ಟು ನಿರಾಕರಿಸುತ್ತೇವೆಯೋ, ಅಷ್ಟು ನಮ್ಮ ಅನುಭವಗಳು ಮಿತಗೊಳ್ಳುತ್ತವೆ. ಅನುಭವ – ಎಂದರೆ ಒಳಿತೂ ಇದೆ; ಕೆಟ್ಟುದೂ ಇದೆ. ಎಚ್ಚರದಿಂದ ಪ್ರತಿಯೊಂದನ್ನೂ ಯೋಚಿಸಿ ಮುಂದುವರಿಯುವ ಜೀವ, ಯಾವ ಅನುಭವದಿಂದ ಬದುಕು ಸುಖಮಯವಾದೀತೆಂದು ತಿಳಿಯುತ್ತಾನೆ, ಯಾವ ದೃಷ್ಟಿಯಿಂದ ಬದುಕು ಹಿಗ್ಗುವುದು ಎಂಬುವನ್ನು ತಿಳಿಯುತ್ತಾನೆ. ಈ ವಿಷಯವಾಗಿ ಇನ್ನೊಮ್ಮೆ ಚರ್ಚಿಸುವ. ಈಗ ಅನುಭವದಿಂದ ಬದುಕು ಬೆಳೆಯಲು ನಾವು ಜೀವನ ನಿರಾಕರಿಸವುದಾಗಲಿ, ಬಾಳ್ವೆಯು ಅರ್ಥವಿಲ್ಲದ್ದು – ಎಂದು ತಿಳಿಯುವುದಾಗಲಿ ಸಮನಾದ ಮಾರ್ಗವಲ್ಲ ಎಂದಂತಾಯಿತು. ಇಳೆಯ ಬಣ್ಣ, ಬೆಡಗುಗಳು ಮಾಯವೆಂದೋ, ಅರ್ಥವಿಲ್ಲದೆಂದೋ ತಿಳಿದು, ಕಣ್ಣಿಗೆ ಅದನ್ನೇ ಕಲಿಸಿ, ಮನಸ್ಸಿಗೂ ಬೋಧಿಸಿದ್ದಾದರೆ ಆಗ ನಾವು ನಮ್ಮ ಕಣ್ಮುಂದೆ ನಿಲ್ಲಿಸುವ ದೈವ ಬಿಂಬದ ನೀಲ ಮೇಘ ಬಣ್ಣಕ್ಕೆ ಯಾವ ಮೋಹಕತೆಯೂ ಬರಲಾರದು. ಇಳೆಯ ಅರಿವೆ, ಆಭರಣಗಳಲ್ಲಿ ಚೆಲುವನ್ನು ಕಾಣಲಾರದೆ ಹೋದರೆ, ಇಲ್ಲಿನ ಹೂವುಗಳಲ್ಲಿ ಮೋಹಕತೆ ಇಲ್ಲವೆಂದು ನಮ್ಮ ಮನಸ್ಸು ಹೇಳುವಲ್ಲಿ, ಅವೇ ನಿರುಪಯೋಗಿ ವಸ್ತುಗಳ ಕಂತೆಯನ್ನು ನಮ್ಮ ದೇವರ ಬಿಂಬ ಹೊತ್ತು ನಿಂತರೆ ಅಸಹ್ಯವೆನಿಸೀತು. ಇಲ್ಲಿ ಚೆಲವು ಮಾಯೆಯಾದರೆ, ನಮ್ಮನ್ನು ದುರ್ಬಲಗೊಳಿಸುವುದಾದರೆ – ಈ ಚೆಲುವಿನ ಅನುಭವಗಳಿಂದಲೇ ಹೊರಡುವ ದೇವರ ಚೆಲುವು, ಅದೇ ಕೆಲಸ ಮಾಡಿತು. ಲೋಕದಲ್ಲಿ ಬದುಕಿರುವ ಮನುಷ್ಯ ತನ್ನ ಕಣ್ಣು, ಕಿವಿ, ರಸನೆ, ಮೂಗು, ತ್ವಚೆಗಳನ್ನು ಬರಡಾಗಿಸಿದುದರಿಂದ, ಏನನ್ನೂ ಸಾಧಿಸಿದಂತಾಗುವುದಿಲ್ಲ. ಇಂದ್ರಿಯಗಳೇ ನಮ್ಮ ಬಂಧನಕ್ಕೆ ಕಾರಣವಾಗುವುದಾದರೆ, ಭಕ್ತರು ಕುರುಡರೂ, ಕಿವುಡರೂ, ಮೂಗು ಹರಕರೂ ಆಗುವುದು ತಮ್ಮ ಸಾಧನೆಗೆ ಪ್ರಥಮ ಮೆಟ್ಟಲೆನಿಸಬಹುದು. ಹಾಗಿಲ್ಲ; ಪ್ರೇಕ್ಷಕನ ನೋಟದ ರೀತಿಯಲ್ಲೇ ಕೊರತೆ ಹುದುಗಿರಬಹುದು. ಅದನ್ನು ತಿಳಿದು ನಿವಾರಿಸುವ ಗುರಿ ನಮಗಿರಲಿ.

ಗುರಿ, ಸಂತೋಷ

ಮನುಷ್ಯರು “ಈಶ ಚಿಂತನೆಯೊಂದೇ ಸುಖ, ಉಳಿದೆಲ್ಲವೂ ದುಃಖಮಯ” ಎಂಬ ತೀರ್ಮಾನವನ್ನು ತಂದುಕೊಂಡು, ತಾನು ನಂಬಿದುದನ್ನು ಸಾಧಿಸಿ ಸಂತೋಷಪಡಬಹುದು. ಅತೀ ಸಾಧನೆಯಿಂದ ಬರುವ ಯಾವ ಬಗೆಯ ಯಶಸ್ಸೂ, ಹೆಚ್ಚಿನ ನೆಮ್ಮದಿಯನ್ನು ಕೊಡಬಹುದು. ಕೆಲವರು ತಮ್ಮ ಸಾಧನೆಯ ಗುರಿಯನ್ನು ಪದವಿಯನ್ನಾಗಿಯೋ, ಹಣವನ್ನಾಗಿಯೋ ಇರಿಸಿಕೊಳ್ಳುತ್ತಾರೆ. ಇನ್ನು ಕೆಲವರ ಗುರಿ ದೇವರೋ, ಇನ್ನಾವುದೋ ಒಂದು ಸತ್ಯ ಶೋಧನೆಯೇ ಆಗಿರಬಹುದು. ಆ ಗುರಿಯನ್ನೇರುವ ತನಕ ಮನುಷ್ಯನಿಗೆ ತಾಳ್ಮೆಯಿಲ್ಲ; ಸಂತೋಷವಿಲ್ಲ; ಗುರಿಯನ್ನೇರಿದಲ್ಲಿ ಆನಂದವುಂಟಾಗುತ್ತದೆ. ಈಶನನ್ನು ಹೊಂದುವೆವು. ಎಂಬ ಅಭಿಲಾಷೆಯಲ್ಲಿಯೂ ಹಾಗೇನೆ. ದರ್ಶನವಾಗದೆ ಹೋದರೆ ದುಃಖ; ದರ್ಶನವಾಯಿತೆಂದರೆ ಸಂತೋಷ. ಈ ದರ್ಶನವು ತನ್ನಲ್ಲೇ, ತನ್ನಿಂದಲೇ ಕಾಣುವ ದರ್ಶನ. ಅನೇಕ ಬಗೆಯ ಸತ್ಯಾನ್ವೇಷಣೆಗಳೆಂಬುವು ಈ ರೀತಿಯ ದರ್ಶನದಲ್ಲಿ ಪರಿಣಿಮಿಸಬಹುದು. ಬರಿಯ ರೂಪವೊಂದರ ಕಲ್ಪನೆಯನ್ನು ಅತಿಕರಿಸಿ, ಅದನ್ನು ದರ್ಶನವಾಗಿ ಮಾಡಿಕೊಳ್ಳುವುದಕ್ಕಿಂತ, ಜೀವನದ ಸತ್ಯ, ಸೊಗಸುಗಳ ಕಿಂಚಿತ್ತಾದರೂ ಅರಿವು ತಂದುಕೊಡುವ ಅನ್ವೇಷಣೆಯು ಇನ್ನೂ ಸೊಗಸಿನದು. ಅದಕ್ಕಿಂತಲೂ ಸೊಗಸಿನದು. ಈ ಸೊಗಸಿನ ದರ್ಶನವಾಗಲು ಬುಡದಲ್ಲಿಯೇ ವಿಸ್ತಾರ ಜೀವನ ಬೇಕಾಗುತ್ತದೆ, ಬರಿಯ ‘ಈಶ’ನ ರೂಪಸಿದ್ಧಿಗೆ ಇಷ್ಟು ಬೇಕಿಲ್ಲ. ವಿಸ್ತೃತವಾ‌ದ ಜೀವನವಿಲ್ಲದವನ ಈಶನ ದರ್ಶನವು ಸಹ ಸಂಕುಚಿತ ದರ್ಶನವಾದೀತು.

ಶಾಂತಿ

ಈತನಕ ದೈವವನ್ನು ಗುರಿಯಾಗಿರಿಸಿಕೊಳ್ಳುವ ವಿಚಾರ ಹೇಳಿದೆ. ಈಶನ ದರ್ಶನವಾಗಲಿ, ಆಗದಿರಲಿ ಆ ರೀತಿಯ ಚಿಂತನೆ, ಭಜನೆಗಳು ಮನಸ್ಸಿಗೆ ನೆಮ್ಮದಿಯನ್ನು ಕೊಡುವುದಿಲ್ಲವೆ? ಮನುಷ್ಯನಿಗೆ ಬೇಕಾದುದು ಶಾಂತಿ; ಅದು ದೊರೆತರಾಯಿತಲ್ಲ ಎನ್ನುವವರುಂಟು. ಶಾಂತಿಯನ್ನು ದೊರಕಿಸಲು ಯಾವುದು ಬೇಕು, ಯಾವುದು ಬೇಕಿಲ್ಲ ಎಂಬುದನ್ನು ಈಗ ವಿಚಾರಿಸೋಣ, ಮನಸ್ಸು ಬಹುಮುಖವಾಗಿ ಓಡುವುದರಿಂದ ಅಶಾಂತಿ ಬರಬಹುದು. ಅದನ್ನು ಯಾವುದಾದರೊಂದು ಉದ್ದೇಶದ ಕಡೆಗೆ ಹರಿಯಗೊಟ್ಟರೆ ಶಾಂತಿ ಉಂಟಾಗಬಹುದು. ಆ ಗುರಿಯನ್ನು ಸೇರುವ ತನಕ ಮನಸ್ಸು ತಳಮಳಿತವಾಗಿಯೇ ಇರುತ್ತದೆ. ಆದರೂ ಗುರಿಯ ಅನ್ವೇಷಣದಲ್ಲಿ ಅನೇಕ ಜ್ಞಾನಗಳು ಉಂಟಾಗಿ, ಅವುಗಳಿಂದಲೂ ವಿಶೇಷವಾದ ತಿಳಿವು ಪ್ರಾಪ್ತಿಸಿ, ಶಾಂತಿ ದೊರೆಯಬಹುದು. ಇದು ಈಶ ಚಿಂತನೆಯೊಂದಕ್ಕೇ ಅಲ್ಲ, ವೈಜ್ಞಾನಿಕ ಶೋಧೆಗಳೂ, ಯಾವುದೇ ಕಲಾಸೃಷ್ಟಿಗೂ ಅನ್ವಯಿಸುವಂತಹ ಮಾತು. ಗಣಿತಜ್ಞನಿಗೆ ಗಣಿತದಿಂದ ಶಾಂತಿ ದೊರೆಯಬಲ್ಲದು, ಎಡಿಸನ್ನಿಗೆ ತನ್ನ ಪರಿಶೋಧನೆಗಳಿಂದ ಹೆಚ್ಚಿನ ಶಾಂತಿ ದೊರೆತಿರಬಹುದು. ಮನಸ್ಸು ಯಶಸ್ಸುನ್ನು ಗಳಿಸಿದಲ್ಲಿ ಶಾಂತಿ ಆಹ್ಲಾದವಾಗಬಹುದು. ಆದರೆ ಈ ಬಗೆಯ ಶಾಂತಿ ಬಂದರೂ ಜೀವನವೇನೆಂಬ ಪ್ರಶ್ನೆ ಉಳಿಯುತ್ತದೆ. ಬದುಕುವುದು ಗಣಿತಕ್ಕಾಗಿ, ಬದುಕುವುದು ಜ್ಞಾನಕ್ಕಾಗಿ, ಇಲ್ಲವೆ ಬದುಕುವುದು ದೇವರಿಗಾಗಿ ಎಂಬ ತೀರ್ಮಾನ ಇದರಿಂದ ಸಿದ್ಧವಾಗದಷ್ಟೆ.

ಎಲ್ಲಿಂದ ಶಾಂತಿ?

ಈಗ ನಾನು ಚಿಂತನೆಯ ನನ್ನ ಸಾಧನವನ್ನು ಪರಿಶೀಲಿಸುತ್ತೇನೆ. ಈ ಸಾಧನೆಗಳಲ್ಲಿ ಏಕಾಗ್ರ ಚಿತ್ತತೆಯು ಒಂದು ಅಂಶ. ಅದನ್ನು ಕುರಿತೇ ಮೇಲೆ ಹೇಳಿದ್ದು; ಇನ್ನೊಂದು ಭಾವಪ್ರಕಟಣೆಯ ಸಾಧನವಾದ ‘ಗೀತ’ ಭಜನೆಗಳಿಂದಲೇ ಶಾಂತಿ ದೊರೆಯಬಹುದು. ಹಾಡಿನ ಒಂದು ಶಬ್ದವನ್ನೂ ತಿಳಿಯದೆ, ಗೀತೆಯ ಅರ್ಥ ತಿಳಿಯದೆ, ಬರಿಯ ಯಾಂತ್ರಿಕ ‘ರಾಮ ರಾಮ’ಗಳಿಂದಲೂ ಶಾಂತಿ ಬರಬಹುದು. ಕೆಲವು ಬಾರಿ ಅದು ಬರುತ್ತದೆ. ಅದಕ್ಕೆ ಎರಡು ಕಾರಣಗಳು ಸೇರಿವೆ. ಒಕ್ಕೊರಲ ಗೀತೆ, ಶ್ರುತಿಬದ್ಧವಾದ ಲಹರಿಗಳು ಮನಸ್ಸನ್ನು ಒಂದೇ ಕಡೆಗೆ ಸೆಳೆಯುವುದರಿಂದ ಶಾಂತಿ ಬರುತ್ತದೆ; ಲಾಲಿಯ ಅರ್ಥ ತಿಳಿಯದೆ ಕೂಸಿಗೆ ನಿದ್ರೆ ತರುವ ಶಾಂತಿಯತೆ, ಇನ್ನೊಂದು – ಗೀತದಿಂದ ಪ್ರೇರಿತವಾಗುವ ಶಾಂತಿ, ಆ ಗೀತದಿಂದ ನೀವು ರಾಮ, ಕೃಷ್ಣರನ್ನು ಕಿತ್ತರೂ ಆ ಶಾಂತಿ ಬರುತ್ತದೆ. ಅದನ್ನು ಮಾತಿನ ಬದಲು ವಾದ್ಯದಲ್ಲಿ ನುಡಿಸಿದರೂ ಆಗಲೂ ಶಾಂತಿ ಬಂದೀತು. ಅದಕ್ಕೆ ಕಾರಣವಾದದ್ದು ಆ ಗೀತದ ರೂಪ. ಆ ಗೀತದ ರೂಪಕ್ಕೆ ಕಿವಿಯೊಡ್ಡಿ ಸುಖಿಸಬಲ್ಲ ಕಿವಿಯ ಸಂಸ್ಕಾರ.

ಭಜಕನು ‘ಅಮಲ ಮುಖ ರಾಮ ಭಜನಕೋ ದಿಯಾ’ ಎಂದು ಆಲಾಪಿಸುವಾಗ, ಆ ಮಾತುಗಳ ನೆನವರಿಕೆ, ನಮ್ಮ ಅನುಭವಗಳು, ರಾಮನ ವಿಷಯದಲ್ಲಿ ಮನಸ್ಸೋಡಿಸಲು ಸಹಾಯ ಮಾಡಬಹುದು. ಬರಿಯ ರಾಗ ಲಹರಿಯೂ ತನ್ನ ಸ್ವಭಾವ ಶಕ್ತಿಯಿಂದ ನಮ್ಮ ತಲೆದೂಗಬಹುದು. ಆದುದರಿಂದ ನಮಗೆ ಭಜನೆಯಿಂದ ದೊರೆಯುವ ಶಾಂತಿಯು ‘ರಾಮ’ನಿಂದ ದೊರೆಯಿತೇ, ರಾಮನಾಮಕ್ಕೆ ಬಳಸಿದ ನಾದದಿಂದ ದೊರೆಯತೇ ಎಂದು ಮೊದಲು ನಿರ್ಣಯಿಸುವುದು ಲೇಸು.

 

ಮುಂಜಾನೆಯ ಹಕ್ಕಿಗಳ ಹುಲಿ, ಹರಳುಗಲ್ಲಿನ ಮೇಲೆ ಓಡುವ ನದಿಯೊಂದರನಾದ, ಸಂಜೆಯ ಗಾಳಿಗೆ ಮಿದುವಾದ ಉರುಳುವ ಕಡಲಿನ ಮೊರೆತ, ಅಲೆಗಳು ಮರಳ ದಿನ್ನೇಯನ್ನೇರಿ ತಿರುಗಿ ಕಡಲನ್ನು ಸೇರುವ ಜೋಗುಳ – ಇವೆಲ್ಲ ನಮ್ಮ ಅನಂತ ಜೀವನದ ಕಲ್ಪನೆಯಿಂದ ಸಂಸ್ಕಾರಗೊಂಡ ಕಿವಿಯ ಮೇಲೆ, ಭಜನೆ ಕೀರ್ತನೆಗಳು ಮಾಡುವುದರ ಇಮ್ಮಡಿ ಕೆಲಸವನ್ನು ಮಾಡಬಹುದು. ಏನಿಲ್ಲವಾದರೆ – ತಾಯಿ ಮಗುವಿನ ಮುಂದೆ ಮಾಡುವ ಜೋಗುಳದ ಶಾಂತಿಯನ್ನಾದರೂ ಅವು ನಮಗೆ ಉಣಿಸಬಹುದು.

ಇಂದ್ರಿಯಾನುಭವ

ಶಾಂತಿ ಸಾಧನವು ಮೂಲತಃ ನಮ್ಮ ಗುರಿಯಾದಲ್ಲಿ – ಇಂದ್ರಿಯ ಗಮ್ಯವಾದ ಶಕ್ತಿಗಳು – ಕಿವಿ, ಕಣ್ಣು, ನಾಲಿಗೆ ಮೂಗು, ತ್ವಚೆಗಳೇ ಅದನ್ನು ತಂದುಕೊಡಬಲ್ಲುವು. ಇವುಗಳ ಅನುಭವವು ನಮಗೆ ಎಷ್ಟೆಷ್ಟು ಸೂಕ್ಷ್ಮವಾಗಿ ಉಂಟಾಗುತ್ತದೋ ಅಷ್ಟಷ್ಟು ತೀಕ್ಷ್ಣ, ಸವಿಸ್ತಾರ, ಸೂಕ್ಷ್ಮವಾದ ಸುಖಗಳ ಕಲ್ಪನೆಯಾಗುತ್ತದೆ. ನಮ್ಮ ಇಂದ್ರಿಯಗಳಿಗೆ ದೊರೆತ ಅನುಭವ, ನಮ್ಮನ್ನು ಜಗತ್ತಿನ ಒಡವೆಗಳ, ಎಷ್ಟೆಷ್ಟು ಹೆಚ್ಚಿನ ಪರಿಚಯ ಮಾಡಿ ಕೊಟ್ಟಿವೆಯೇ, ಅಷ್ಟಷ್ಟು ಭಾವನೆಗಳೂ ಕೆದರುವುದು. ಇವೆರಡರ ಮೇಳದಿಂದ ಶಾಂತಿ, ಆಹ್ಲಾದ, ತೃಪ್ತಿ ಇವುಗಳ ವಿವಿಧ ಪಾಕಗಳನ್ನು ನಾವು ಪಡೆಯಬಹುದು.

ಇಲ್ಲಿಂದ ತಪೋರಾಜ್ಯಕ್ಕೆ

ಅಮಾವಾಸ್ಯಕ್ಕೆ ಕಗ್ಗತ್ತಲಲ್ಲಿ, ಬಾನಿಗೆ ಮುಖಮಾಡಿಕೊಂಡು ಮಲಗಿದ್ದು ಚುಕ್ಕಿಗಳ ವಿಸ್ತಾರ ರಾಜ್ಯವನ್ನು ನೋಡುತ್ತಿರಲು ಭವ್ಯಶಾಂತಿಯ ಅನುಭವವಾಗುವುದಿಲ್ಲವೆ? ಕಡಲಿನ ಮಳಲದಂಡೆಯ ಮೇಲೆ ಕುಳಿತು ದಿಗಂತದ ಹರಹನ್ನೆಲ್ಲ ತುಂಬುವ ಸಾಗರದ ನೀಲಿಮೆಯನ್ನು ಕಂಡರೆ ಎದೆ ತುಂಬುವುದಿಲ್ಲವೆ? ಬಾನನ್ನು ಮುಟ್ಟುವ ಬೆಟ್ಟದ ಇದರಿನಲ್ಲಿ ನಿಂತು. ಅದರ ಉನ್ನತಿಯನ್ನು ನೆನೆಯುತ್ತಿದ್ದರೆ ಮನಸ್ಸಿಗೆ ಯಾವುದೋ ಒಂದು ಗಂಭೀರ ಶಾಂತಿಯ ಬೋಧೆಯಾಗುವುದಿಲ್ಲವೆ? ಸೃಷ್ಟಿಯ ಅಪಾರತೆಯನ್ನು ನೋಡಬಲ್ಲ ಕಣ್ಣನ್ನು ಬೆಳೆಯಿಸಿಕೊಂಡಲ್ಲಿ, ನಾವು ಶಾಂತಿಯನ್ನು ಹೊಂದಲಾರೆವೇ? ಒಮ್ಮೆ ನೋಡಿದ ಅಂಥ ಅನುಭವಗಳನ್ನು ನೆನದಾಗಲೆಲ್ಲ, ಅದೇ ಭವ್ಯತೆಯ ಪುನರ್ ಸೃಷ್ಟಿ ಮನದ ಎದುರಿಗೆ ನಿಂತು ಆನಂದವನ್ನುಂಟು ಮಾಡುತ್ತದೆ; ಶಾಂತಿಯನ್ನು ಕೊಡುತ್ತದೆ. ಜೀವನದ ವಿಸ್ತಾರವಾದ ಯಾವುದೊಂದು ನೋಟವೂ ಪುಟ್ಟ ವಿಷಯಗಳಿಂದ ನಮ್ಮ ಮನಸ್ಸನ್ನು ಸೆಳೆದು, ಇನ್ನಾವುದೋ ಭವ್ಯತೆಯ ದರ್ಶನ ಮಾಡಿಸಿಕೊಡಬಲ್ಲದು. ಈ ಬಗೆಯ ಸೊಗಸು, ಆನಂದ, ಶಾಂತಿಗಳ-ಗೀತ, ಭಜನೆಗಳಿಂದ ದೊರಕುವ ಶಾಂತಿಗೆ ಕಡಿಮೆಯಾದುದಲ್ಲ. ದೈವ ಚಿಂತನೆಯಿಂದಲೂ ಮನಸ್ಸು ಹೆಚ್ಚಿನ ಶಾಂತಿಯನ್ನು ಪಡೆಯಲು ಪ್ರಕೃತಿಯ ಅಣೇಕ ಭವ್ಯವಸ್ತುಗಳ ಅನುಪಮ ಸೊಗಸುಗಳ ಪರಿಚಯ ನಮಗಿರಬೇಕು. ಬರಿಯ ಚಂದನದ ಗೊಂಬೆಗಿಂತ ಹೆಚ್ಚಿನ ಸುಂದರ ಒಡವೆಗಳನ್ನು ಕಾಣದವನು, ದೈವಮೂರ್ತಿಯ ಭವ್ಯ ಸೊಗಸಿನ ಕಲ್ಪನೆಯನ್ನು ತಂದುಕೊಳ್ಳಲು ಅಶಕ್ತನಾವುತ್ತಾನೆ ಸೃಷ್ಟಿಯ ಸಮಿಯುಲಿಗಳ, ಇಂಚರಗಳ ಪರಿಚಯ ಪಡೆಯದವನು ದೈವವಾಣಿಯ ಸವಿಯನ್ನು ತಂದುಕೊಳ್ಳಲಾರನು ಅಲ್ಲಿ ಬೆಳೆದ ಬದುಕಿನ ಮೇಲಿಂದಲೇ, ನಮ್ಮ ತಪೋರಾಜ್ಯದ ಬದುಕು ಬೆಳೆಯಬೇಕು. ಇಲ್ಲಿಯ ಬದುಕು ನಿರಸತೆ, ನಿರ್ಗಂಧತೆಗಳ ಮೇಲೆ ಕಟ್ಟಲ್ಪಟ್ಟುದಾದರೆ ತಪೋ ರಾಜ್ಯದ ಸವಿ ಮಸಣದ ಪ್ರತೀಕವಾಗಬಹುದು.

ವಿಸ್ತೃತವಾದ ಬದುಕಿನ ಪರಿಚಯವು ಜೀವನಕ್ಕೆ ತಂದುಕೊಂಡಲಾರದ ಸುಖವನ್ನು, ಬದುಕಿನಿಂದ ಹಿಂದೆಗೆದ ಮನಸ್ಸಿನ ತಪಸ್ಸು ಸಹ ಕಂಡುಕೊಡಲಾರದು. ಇಹದಲ್ಲಿ ರೂಪ ರಸ ಗಂಧಗಳು ಅಡಿಗಲ್ಲಾಗಿ ದೊರೆಯದೆ ಹೋದರೆ, ಅದರ ಮೇಲೆ ಯಾವೊಂದು ಸೊಗಡ, ಸವಿಯ ಪರವನ್ನು ನಾವು ಕಟ್ಟಲಾರೆವು.

ಲೇಖಕರು

ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯವನ್ನು ಬಲಪಡಿಸಿದ ಶಿವರಾಮ ಕಾರಂತ (೧೯೦೨-೧೯೯೭) ಅವರು ದಕ್ಷಿಣ ಜಿಲ್ಲೆಯ (ಈಗ ಉಡುಪಿ) ಕುಂದಾಪುರ ತಾಲ್ಲೂಕಿನ ಸಾಲಿಗ್ರಾಮದಲ್ಲಿ ಜನಿಸಿದರು. ಮಂಗಳೂರಿನಲ್ಲಿ ವ್ಯಾಸಂಗ ಮಾಡಿದ ಕಾರಂತರು ಬೆರಗಾಗುವಷ್ಟು ಕ್ರಿಯಾಶೀಲರಾಗಿದ್ದರು. ಸಾಹಿತ್ಯ, ಕಲೆ, ವಿಜ್ಞಾನ, ಪ್ರವಾಸ ಮುಂತಾದ ಅನೇಕ ಕ್ಷೇತ್ರಗಳಲ್ಲಿ ಅಪಾರ ಸಂಖ್ಯೆಯ ಮಾಲಿಕ ಕೃತಿಗಳನ್ನು ರಚಿಸಿದರು. ಮರಳಿ ಮಣ್ಣಿಗೆ, ಚೋಮನದುಡಿ, ಮೂಕಜ್ಜಿಯ ಕನಸು, ಸರಸಮ್ಮನ ಸಮಾಧಿ, ಬೆಟ್ಟದ ಜೀವ, ಅಳಿದ ಮೇಲೆ, ಮೈಮನಗಳ ಸುಳಿಯಲ್ಲಿ ಮುಂತಾದ ಸುಮಾರು ನಲವತ್ತು ಕಾದಂಬರಿಗಳನ್ನು, ಹುಚ್ಚು ಮನಸ್ಸಿನ ಹತ್ತು ಮುಖಗಳು ಎಂಬ ಆತ್ಮಕತೆಯನ್ನು ಬರೆದರು. ಯಕ್ಷಗಾನ ಬಯಲಾಟ, ಬಾಳ್ವೆಯೇ ಬೆಳಕು, ಅಪೂರ್ವ ಪಶ್ವಿಮ ಮುಂತಾದ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಅನೇಕ ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದರು. ಕೇಂಸ್ರ ಸರ್ಕಾರದ ಪದ್ಮಭೂಷಣ, ಜ್ಞಾನಪೀಠ ಪ್ರಶಸ್ತಿಗಳನ್ನು, ಕರ್ನಾಟಕ ಸರಕಾರದ ಪಂಪ ಪ್ರಶಸ್ತಿ, ಕನ್ನಡ ವಿಶ್ವವಿದ್ಯಾಲಯದ ನಾಡೋಜ ಗೌರವ ಪ್ರಶಸ್ತಿಯನ್ನು ಪಡೆದಿದ್ದಾರೆ. ಮೈಸೂರು, ಬೆಂಗಳೂರು, ಮಂಗಳೂರು, ಜಬ್ಬಲ್ಪುರ, ಮುಂತಾದ ವಿಶ್ವವಿದ್ಯಾಲಯಗಳು ಗೌರವ ಡಿ.ಲಿಟ್. ಪದವಿಗಳನ್ನು ನೀಡಿ ಶಿವರಾಮ ಕಾರಂತರನ್ನು ಸನ್ಮಾನಿಸಿವೆ.

ಆಶಯ

ದೇವರ ಕಲ್ಪನೆಯನ್ನು, ದೇವರ ಅಸ್ತಿತ್ವವನ್ನು ಸಂಪ್ರದಾಯಸ್ಥ ಧರ್ಮಗಳು, ವ್ಯಕ್ತಿಗಳು, ಸಮುದಾಯಗಳು ಅನೇಕ ರೀತಿಯಲ್ಲಿ ಸೃಷ್ಟಿಸಿವೆ. ಆದರೂ ದೇವರ ಸ್ವರೂಪವನ್ನು ಅರಿಯುವುದು ಯಾರಿಗೂ ಸುಲಭ, ಸರಳವಾದ ಸಂಗತಿಯಾಗಿಲ್ಲ. ಮನುಷ್ಯನ ಅಸ್ತಿತ್ವದ ಜೊತೆ ಜೊತೆಗೇ ದೇವರ ಅಸ್ತಿತ್ವವೂ ಬೆಳೆದಿದೆ. ಆದರೂ ಮನುಷ್ಯನ ಭೌದ್ಧಿಕ ಸಾಮರ್ಥ್ಯದ ಮಿತಿಯಲ್ಲಿ ದೇವರನ್ನು ಅರಿಯಬಹುದೇ ಹೊರತು ಅದರಾಚೆ ಕಲ್ಪಿಸಲು ಸಾಧ್ಯವಾಗುವುದಿಲ್ಲ ಎಂಬ ವಿಚಾರವನ್ನು ಇಲ್ಲಿ ಅನೇಕ ನಿದರ್ಶನಗಳ ಮೂಲಕ ಸ್ವಾನುಭವದ ಹಿನ್ನೆಲೆಯಲ್ಲಿಯೂ ನಿರೂಪಿಸಲಾಗಿದೆ.

ಶಬ್ದಕೋಶ

ಕಲಕು=ಕದಡು. ಅದ್ವೈತ=ಎರಡಲ್ಲದ್ದು. ವರ್ಚಸ್ಸು=ಪ್ರಭಾವ, ಸಂಙ್ಞಾರ್ಥ=ಸನ್ನೆಗಳಲ್ಲಿ ಸೂಚಿಸುವ ಅರ್ಥ. ನಿರ್ಜನ=ಜನರಿಲ್ಲದ. ಸಂಕೇತ=ನಿರ್ದಿಷ್ಟ ಮಾಹಿತಿಯನ್ನು ಸೂಚಿಸುವ ವಸ್ತು. ವಿಸ್ತೃತ=ವಿಸ್ತರಿಸಿದ. ಸಾಕಾರ=ಕಣ್ಣಿಗೆ ಕಾಣುವ ಆಕಾರ. ನಿರಾಕಾರ=ಯಾವ ಆಕಾರವೂ ಇಲ್ಲದ. ಏಕಾಗ್ರಚಿತ್ತ=ಮನಸ್ಸಿನ ಸ್ಥಿರತೆ.

ಪ್ರಶ್ನೆಗಳು

೧.      ಶಿವರಾಮ ಕಾರಂತರು ದೇವರನ್ನು ಒಲಿಸಿಕೊಳ್ಳಲು ಯಾವ ಬಗೆಯ ಪ್ರಯತ್ನವನ್ನು ಮಾಡಿದರು?

೨.      ಬಿಂಬ, ಶಬ್ದ ಕುರಿತು ಶಿವರಾಮ ಕಾರಂತರ ವಿಚಾರಗಳೇನು?

೩.      ಅನುಭವದ  ಮಿತಿಗಳು ದೇವರನ್ನು ಕುರಿತ ಕಲ್ಪನೆಯನ್ನು ಮಿತಿಗೊಳಿಸುತ್ತವೆ ಎಂದು ಹೇಳುವ ಶಿವರಾಮ ಕಾರಂತರು ಕೊಡುವ ನಿದರ್ಶನಗಳು ಯಾವುವು?

೪.      ಲೇಖಕರು ‘ನಮ್ಮ ಬದುಕೇ ನಮ್ಮ ಭಾವನೆಗಳಿಗೆ ಅಡಿಗಲ್ಲು’ ಎಂಬುದನ್ನು ಯಾವ ಹಿನ್ನೆಲೆಯಲ್ಲಿ ಹೇಳಿದ್ದಾರೆ.

೫.      ಶಾಂತಿ ಕುರಿತು ಶಿವರಾಮ ಕಾರಂತರ ವಿಚಾರಗಳನ್ನು ಬರೆಯಿರಿ.

೬.      ದೇವರನ್ನು ಸಾಕ್ಷಾತ್ಕರಿಸುವ ದಾರಿಗಳು ಯಾವವೆಂದು ಹೇಳಲಾಗಿದೆ?

ಹೆಚ್ಚಿನ ಓದು

ಎ,ಎನ್. ಮೂರ್ತಿರಾವ್ : ದೇವರು – ವೈಚಾರಿಕ

ರಾಮ ಮನೋಹರ ಲೋಹಿಯಾ : ರಾಮ, ಕೃಷ್ಣ, ಶಿವ – ವೈಚಾರಿಕ

ಪಿ. ಲಂಕೇಶ್ : ದೇವರನ್ನು ಕುರಿತು – ಟೀಕೆ-ಟಿಪ್ಪಣಿ