ನಮ್ಮ ಊರಿನ ಹಳೇ ಮುದುಕರಲ್ಲಿ ಬಹಳ ಹಳಬ ಜೋಗ್ಯೋರ ಅಂಜಪ್ಪ. ಯಾವುದಾದರೂ ಮಾತಿಗೆ ಬಂದರೆ ಅಂಜಪ್ಪ, ತಾನು ಹೈದನಾಗಿದ್ದಾಗ ಅದು ಇದು ಆಯಿತು, ಎಂದು ಹೇಳುತ್ತಾನೆ. ಅಂಥ ಸಮಾಚಾರವನ್ನು ನೋಡಿದವರು ಇನ್ನು ಯಾರೂ ಈಗ ಜೀವಂತವಾಗಿಲ್ಲ. ಶಿಪಾಯಿ ದಂಗೆ ಆದ ಕಾಲಕ್ಕೆ ಅಂಜಪ್ಪ ಹುಡುಗನಂತೆ. ಈಗವನ ವಯಸ್ಸು ಕೇಳಿದರೆ ಅವನು ನೂರು ವರುಷ ಇರಬೇಕು ಎನ್ನುತ್ತಾನೆ. ಈಗ ಹತ್ತು ವರುಷದಿಂದ ಅವನಿಗೆ  ನೂರು ವರುಷ ವಯಸ್ಸು. ಮುಖ್ಯವಾಗಿ ಈ ಕಾರಣದಿಂದ ಅಂಜಪ್ಪ ಎಲ್ಲಾ ಸಂದರ್ಭದಲ್ಲಿಯೂ ಎಂಥವರಿಗಾದರೂ ಬುದ್ಧಿ ಹೇಳುವ ಅಧಿಕಾರವನ್ನು ಪಡೆದಿದ್ದಾನೆ. ಈ ವಿಚಾರದಲ್ಲಿ ಇತರರಿಗೆ ಏನಾದರೂ ಸಂದೇಹವಿದ್ದರೂ ಅಂಜಪ್ಪನಿಗೆ ಲೇಶವಾದರೂ ಇಲ್ಲ. ಹೀಗೆ ಮಾಡು, ಹಾಗೆ ಮಾಡು ಎಂದು ಅಂಜಪ್ಪ ಹೇಳಿದಾಗ ಯಾರಾದರೂ ಒಡನೆಯೇ ಒಪ್ಪದೇ ಇದ್ದರೆ ಅವನು “ಏನಯ್ಯಾ ಇದು? ನಿಮ್ಮಪ್ಪ ಮಗುವಾಗಿದ್ದಾಗ್ಗೆ ನನ್ನ ಗಡ್ಡ ನರೆತಿತ್ತು. ನನ್ಮಾತು ನಿನಗೆ ಹಗುರಾಯಿತೆ” ಎಂದು ಕೇಳುವನು. ಪ್ರಾಯಶಃ ವಿಸ್ತಾರವಾದ ಅವನ ಅನುಭವದ ಫಲವಾಗಿ ಅವನು ಕೊಡುವ ಬುದ್ಧಿವಾದ ಒಳ್ಳೆಯದಾಗಿಯೇ ಇರುತ್ತದೆ. ವಯಸ್ಸಿನಲ್ಲಿ ಜಾಂಬವಂತನಾಗಿದ್ದ ಹಾಗೆ ಅಂಜಪ್ಪ ಬುದ್ಧಿಯಲ್ಲಿ ಹನುಮಂತ.

ಮೂರು ದಿವಸದ ಹಿಂದೆ ಅಂಜಪ್ಪ ರಂಗಪ್ಪನ ಮನೆಗೆ ಬಂದಿದ್ದ. ರಂಗಪ್ಪನಿಗೆ ನಮ್ಮ ತಾಲೂಕಿನಲ್ಲಿ ಬೆಂಚು ಮ್ಯಾಜಿಸ್ಟ್ರೇಟು ಕೆಲಸಕ್ಕೆ ನಿಯಮಿಸಿ ಈಗ ಕೆಲವು ದಿನಗಳ ಹಿಂದೆ ಆರ್ಡರು ಬಂದಿತು. ನಮ್ಮ ಊರಿನ ಜನಕ್ಕೆಲ್ಲಾ ಇದು ಬಹಳ ಸಂತೋಷ. ನಮ್ಮ ಶಾನುಭೋಗರು ಸಜಾ ಕೊಡುವ ಅಧಿಕಾರನ ಪಡೆದಿದ್ದಾರೆ ಎಂತ. ಹಳ್ಳಿಯ ಜನರಿಗೆ ಈ ಸಜಾ ಕೊಡುವುದು ಎನ್ನುವುದು ಬಹು ದರ್ಪದ ಶಕ್ತಿ ಎಂದು ಭಾವನೆ. ಏನಿಲ್ಲ ಎಂದರೂ ಈ ಅಧಿಕಾರ ಬಂದವನು ಒಬ್ಬ ಸುಬೇದಾರನಿಗೆ ಹಾಗೆ ಲೆಕ್ಕ. ಪೂರ್ವದಲ್ಲಿ ಸುಬೇದಾರ್ರಿಗೆ ಮತ್ತು ಅವರಿಗೆ ಮೇಲ್ಪಟ್ಟವರಿಗೆ ಮಾತ್ರ ಈ ಅಧಿಕಾರವಿರಿತ್ತಿತ್ತು. ಈಗ ಸರ್ಕಾರದವರು ಅದನ್ನು ಸುಬೇದಾರರಿಂದಲೂ ಕಿತ್ತು ಕೊಂಡಿದ್ದಾರೆ ಎಂದು ಜನರ ಎಣಿಕೆ. ಆದರಿಂದ ಹಾಗೇನೆ ನೋಡಿದರೆ ಈ ಅಧಿಕಾರ ಬಂದ ಮನುಷ್ಯ ಸುಬೇದಾರರಿಂದ ಒಂದು ಗುಲುಗುಂಜಿಯಷ್ಟು ಮೇಲಿನ ಹುದ್ದೆ ಪಡೆದ ಹಾಗೆಯೇ. ಗ್ರಾಮದ ಮುಖ್ಯ ವೃದ್ದನಾದ ಅಂಜಪ್ಪ ತನ್ನೂರ ಶಾನುಭೋಗರಿಗೆ ಬಂದ ಈ ಮರ್ಯಾದೆಯ ಸಮಾಚಾರವನ್ನು ಕೇಳಿ ಅವರನ್ನು ಮಾತನಾಡಿಸುವುದಕ್ಕೆ ಮತ್ತು ಸ್ವಲ್ಪ ಬುದ್ಧಿ ಹೇಳುವುದಕ್ಕೆ ಎಂದು ಬಂದ.

ಅಂಜಪ್ಪ ಬಂದದ್ದನ್ನು ನೋಡಿ ರಂಗಪ್ಪ “ಬಾ, ಅಂಜಪ್ಪ ಕುಳಿತುಕೋ” ಎಂದ.

ಅಂಜಪ್ಪ : ಏನಪ್ನು ನಿನ್ಗೆ ಮೇಸ್ಟ್ರೀಟು ಕೆಲಸ ಬಂತಂತಲ್ಲ. ಬಾಳಾ ಸಂತೋಸ.

ರಂಗಪ್ಪ : ಸಂತೋಸ ಏನೋ ಸರಿ ಅಂಜಪ್ಪ. ಆದರೇನು? ಬಿಟ್ಟಿ ದುಡಿಯೋದು. ದುಡಿಲ್ಲ, ಕಾಸಿಲ್ಲ.

ಅಂಜಪ್ಪ : ದುಡಿಲ್ಲ? ಯಾಕೆ ದುಡಿಲ್ಲ?

ರಂಗಪ್ಪ : ಇದು ಬೆಂಚು ಮೇಸ್ಟ್ರೀಟು ಎಂತ ಮರ್ಯಾದೆಗೆ ಕೆಲ್ಸಾ ಮಾಡೋದು. ಇದಕ್ಕೆ ಸರ್ಕಾರದವರು ಸಂಬಳ ಕೊಡೋದಿಲ್ಲ.

ಅಂಜಪ್ಪ : ಸಂಬ್ಳಾ ಇಲ್ಲದೀರ ಇದ್ದರೂ ದುಡ್ಡು ಯಾಕಿಲ್ಲ? ಸಂಬ್ಳಾ ತಕ್ಕೋಳ್ಳೋರು ಸಂಬ್ಳಾನ ಮೇಲ್ಕರ್ಚಿನ ದುಡ್ಡು ಅಂತ ಮಾಡ್ತಿರಲ್ಲಿಲ್ಲವಾ? ಸಂಬ್ಳಾ ಒಂದಾದರೆ ಸಂಪಾದನೆ ಹತ್ತು.

ರಂಗಪ್ಪ : ಅದೆಲ್ಲಾ ಪೂರ್ವ ಕಾಲದ ಮಾತು. ಈಗ ಲಂಚಾ ಗಿಂಚಾ ನಡೆಯೋದಿಲ್ಲ.

ಅಂಜಪ್ಪ : ನಡೆಯೋರಿಗೆ ನಡೀತದೆ. ಇಲ್ಲದೇ ಇದ್ದೋರಿಗೆ ಇಲ್ಲಾತಾನೆ. ಹೋಗ್ಲಿ. ಈಗ ನೀನು ಕೋಪ ಬಂದ್ರೆ ಸುಬೇದಾರ್ನ ನಿಲ್ಲಿಸಿ ಜುಲ್ಮಾನೆ ಹಾಕಬಹುದೋ ಇಲ್ಲೋ?

ರಂಗಪ್ಪ : ನೀನು ಮೇಸ್ಟ್ರೀಟಾಗಿದ್ದರೆ ಹಾಗೆ ಮಾಡಬಹುದಾಗಿತ್ತು. ನಾನು ಶಾನುಭೋಗ, ಸುಬೇದಾರ್ರಿಗೆ ಜುಲ್ಮಾನೆ ಹಾಕಿದರೆ ಖಾತೇ ಬರಲಿಲ್ಲ ಅಂತ ಅವರು ನನ್ನ ಕೆಲಸದಿಂದ ತೆಗೀತಾರೆ.

ಅಂಜಪ್ಪನಿಗೆ ಇದು ನ್ಯಾಯ ಎಂದು ತೋರಿತು. ಓ ಹೌದು ಎನ್ನುತ್ತಾ ಅವನು ಸಂಚಿಯಲ್ಲಿ ತೆಗೆದು ಅಡಕೆ ಎಲೆಯನ್ನು ಆರಿಸುವುದರಲ್ಲಿ ತೊಡಗಿದನು. ಅಂಜಪ್ಪನ ಸಂಚಿಯಲ್ಲಿ ಎಲೆಯು ಅಡಕೆಯೂ ಮೂರು ಪಾಲು ಅವನ ಹಾಗೆಯೇ ವಯಸ್ಸಾದವು. ಅವನು ಆಗಾಗ ಎಲೆ ತೆಗೆದುಕೊಳ್ಳುವುದಾದರೂ ಅಯ್ಯೋ ಇದು ಹೋಗುತ್ತದಲ್ಲಾ ಎಂದು ಬಹಳ ಬಾಡಿರುವ ಎಲೆಯನ್ನೇ ಹಾಕಿಕೊಳ್ಳುವನು. ಅದನ್ನು ಎಸೆಯುವುದಕ್ಕೆ ಇಷ್ಟವಿಲ್ಲ. ಬಾಡಿರುವ ಎಲೆ ಮುಗಿಯುವ ವೇಳೆಗೆ ಹೊಸದಾಗಿ ತೆಗೆದುಕೊಂಡ ಎಲೆಯೂ ಬಾಡುತ್ತಾ ಬಂದಿರುವುದು. ಅಂತು ಸಂಚಿಯಲ್ಲಿ ನಾಲ್ಕು ಹಸುರು ಎಲೆ ಇದ್ದರೂ ಅವನು ಹಾಕಿಕೊಳ್ಳುವುದು ಬಾಡಿದ ಎಲೆಯನ್ನೇ. ಅವನ ಸಂಚಿಯ ಅಡಕೆಯೂ ಪ್ರಸಿದ್ಧ. ಅಡಕೆ ಎನ್ನುವುದು ಎಲೆಯೊಡನೆ ಅಗಿದು ನುಂಗುವ ಪದಾರ್ಥ ಎಂದು ತಿಳುವಳಿಕೆಯಿಲ್ಲದವರ ಭಾವನೆ. ಅಡಕೆಯ ಉದ್ದೇಶ ಮುಖ್ಯವಾಗಿ ಬಾಯಲ್ಲಿ ನೀರೂರಿಸುವುದು ಮಾತ್ರ. ತಾನು ನೀರಾಗುವುದಲ್ಲ. ಬಹಳ ಹೊತ್ತು ಬಾಯಲ್ಲಿಟ್ಟುಕೊಂಡು ನೀರೂರಿ ನೆನೆದ ಮೇಲೆ ಅದು ಎಲೆಯೊಂದಿಗೆ ಚೂರ್ಣವಾಗಬೇಕು. ಬಾಯಿಗೆ ಹಾಕಿಕೊಂಡು ಸ್ವಲ್ಪ ಹೊತ್ತಿಗೆ ಮೆದುವಾಗಿಬಿಟ್ಟರೆ ಅರವತ್ತು ಗಳಿಗೆಯೂ ಎಲೆ ಅಡಕೆ ಹಾಕೊದಕ್ಕೆ ಎಷ್ಟು ಅಡಕೆ ಆದರೆ ಸಾಕಾದೀತು? ಅಂಜಪ್ಪ, ಬಾಡಿದ ಒಂದು ಎಲೆಯನ್ನೂ ಸಣ್ಣ ಒಂದು ಅಡಕೆಯನ್ನೂ ಬಾಯಿಗೆ ಹಾಕಿಕೊಂಡು ಸುಣ್ಣದ ಕಾಯಿಂದ ಸ್ವಲ್ಪ ಸುಣ್ಣವನ್ನು ತೆಗೆದುಕೊಂಡು ’ಅದಿರಲಿ, ನಾನು ನಿನಗೆ ಒಂದು ಮಾತು ಹೇಳಬೇಕು ಅಂತ ಬಂದೆ’ ಎಂದ.

ರಂಗಪ್ಪ : ಏನು ಮಾತು ಅಂಜಪ್ಪ ಹೇಳು, ನೀನು ಅನುಭವಸ್ಥ, ನಮ್ಮಂತವರಿಗೆ ತಿಳಿಯಬೇಕಾದ್ದು ನಿನಗೆ ನೂರು ಮಾತು ಗೊತ್ತಿದೆ.

ಅಂಜಪ್ಪ: ಅದಕ್ಕಾಗಿಯೇ ನಾ ಬಂದದ್ದು. ನೀನು ಮೇಸ್ಟ್ರಿಟಾಗಿದ್ದೀಯಲ್ಲಾ, ಜನರು ಎದುರಿಗೆ ಬಂದಾಗ ಇವರು ಸತ್ಯವಂತ್ರು, ಇವರು ಕಳ್ರು, ಅಂತ ಸರಿಯಾಗಿ ತಿಳಿದು ಶಿಕ್ಷೆ ಕೊಡಬೇಕು. ಈ ಪೋಲೀಸೋರು ಲಾಯರೀಗಳೂ ಹೇಳೋ ಮಾತು ಕೇಳಿಬಿಟ್ಟು ಶಿಕ್ಷೆ ಕೊಡಬಾರದು. ಅದನ್ನು ನಿನಗೆ ಹೇಳೋಕೆ ಬಂದೆ.

ರಂಗಪ್ಪ: ಅದೇನೋ ಸರಿ. ಆದರೆ ಸತ್ಯವಂತ್ರೂ ಕಳ್ರು ಅನ್ನೋದು ಅವರ ಮಾತು, ಇವರ ಮಾತಿನಿಂದ ತಿಳಿಯಬೇಕು. ಮೇಸ್ಟ್ರೀಟು ಇನ್ನೇನು ಮಾಡೋಕೆ ಆಗ್ತದೆ.

ಅಂಜಪ್ಪ: ಮೇಸ್ಟ್ರೀಟು ಅಂದ ಮೇಲೆ ನಿಜ ಹೇಗಿರಬಹುದು ಎಂಥ ಯೋಚನೆ ಮಾಡಬೇಕು. ಎದುರಿಗೆ ಬಂದಿರೋ ಮನುಷ್ಯನನ್ನು ಏನು ಅಂತ ಕೇಳಬೇಕು.

ರಂಗಪ್ಪ: ಅಂಜಪ್ಪಾ, ನೀನು ಕೋಪಿಸಿಕೋ ಬೇಡ. ನಿನ್ನ ಒಂದು ಮಾತು ಕೇಳ್ತೇನೆ.

ಅಂಜಪ್ಪ: ಏನು ಕೇಳಪ್ನು, ಕೋಪ ಯಾಕೆ?

ರಂಗಪ್ಪ: ನಿನ್ಮೇಲೆ ಯಾವಾಗಲಾದರೂ ಮೇಸ್ಟ್ರೀಟು ಫಿರ್ಯಾದಾಗಿತ್ತೇ?

ಅಂಜಪ್ಪ: ಸೈ, ನನ್ನ ವಂತಕಾರಿ, ಅದ್ನೇ ಅಣ್ಣ ನಾನು ಹೇಳೋಕೆ ಬಂದಿದ್ದು ನಿನ್ಗೆ. ಒಂದು ಕೋಳಿ ಕದ್ದೆ ಅಂತ ಫಿರ್ಯಾದು ಮಾಡಿದರು. ಕದೀಲಿಲ್ಲ ಅಂತ ನಾನು. ಕದ್ದ ಅಂತ ಅವರು. ಇಪ್ಪತ್ತು ರೂಪಾಯಿ ಜುಲ್ಮಾನೆ ಕೊಟ್ಟರೆ ಹಾಗೆ ಬಿಡುತ್ತೀವಣ್ಣಾ, ಆಗದಿದ್ದರೆ ಜೈಲು ಅಂದರು. ಜುಲ್ಮಾನೆ ಕೊಟ್ಟು ಮೌನವಾಗಿ ಬಂದೆ.

ರಂಗಪ್ಪ: ನೀನು ಕೋಳಿ ಕದ್ದೆ ಅಂತ ಅವರು ಹ್ಯಾಗೆ ಹೇಳಿದರು? ಕೋಳಿ ನಿನ್ನ ಹತ್ತಿರ ಇತ್ತೇನು?

ಅಂಜಪ್ಪ: ಇತ್ತು ನನ್ನಪ್ನು. ಹಾಳು ಮುಂಡೇ ಕೋಳಿ ನನ್ನ ತಾವ ಇರೋವತ್ತಿಗೇ ಅಲ್ಲವಾ ನಾನು ಸಿಕ್ಕೊಂಡದ್ದು.

ರಂಗಪ್ಪ: ಇನ್ನು ನೀನು ಕದ್ದ ಹಂಗಾಯಿತಲ್ಲ.

ಅಂಜಪ್ಪ: ಅದ್ನೇ ಅಪ್ನು ನಾನು ಹೇಳೋದು, ಕೋಳಿ ನನ್ನ ತಾವಿತ್ತು, ಆದ್ರೆ ನಾನು ಅದನ್ನು ಕದೀಲಿಲ್ಲ.

ರಂಗಪ್ಪ: ಹಾಗಾದ ಮೇಲೆ ಏನು ಸಮಾಚಾರ ಸರಿಯಾಗಿ ಹೇಳಿ ಬಿಡು ಕೇಳೋಣಾಂತೆ’ ಎಂದ. ಅಂಜಪ್ಪ ಹೇಳಿದ.

ಇದು ನಡೆದದ್ದು ಸುಮಾರು ನಲವತ್ತು ವರುಷದ ಹಿಂದೆ ಇರಬಹುದು. ಆಗ್ಗೆ ಅಂಜಪ್ಪನಿಗೆ ಮಧ್ಯದ ವಯಸ್ಸು. ಆಗಿನ ದಿವಸಕ್ಕೆ ಅವನು ತನ್ನ ಕಸಬಿಗಾಗಿ ಊರು ಊರು ಸುತ್ತುತ್ತಾ ಇದ್ದ. ಜೋಗಿಯರ ಕಸಬು ಅಂದರೆ ಸೊಗಸಾಗಿ ವೇಷ ಹಾಕಿಕೊಂಡು ಎಡೆಹೆಗಲಿಗೆ ಜೋಳಿಗೆ ಬಲಹೆಗಲಿಗೆ ಕಿಂದರಿ ತೂಗುಹಾಕಿಕೊಂಡು ತಾತನ ಕಾಲದಿಂದ ಬಂದ ಪದಗಳನ್ನು ಹಾಡುತ್ತಾ ಊರೆಲ್ಲಾ ಭಿಕ್ಷೆ ಎತ್ತುವುದು. ಅಂಜಪ್ಪನ ತಾತ ಮುತ್ತಾತನ ಕಾಲಕ್ಕೆ ಜೋಗಿಗಳು ಭಿಕ್ಷೆ ಎತ್ತುವುದು ಹೊರತು ನೆಲ ಉತ್ತದ್ದಿಲ್ಲ. ಈಚೆಗೆ ಕಾಲ ಕೆಟ್ಟು ಹೋಗಿ ಜೋಗಿಗಳೂನೂ ಸಾಗುವಳೀ ಕೆಲಸ ಮಾಡುತ್ತಾ  ಇದಾರೆ. ಅಂಜಪ್ಪ ಇದನ್ನು ’ಬ್ಯಾಮಣರು ಪ್ಯಾಟೆಗಳಾಗೆ ಜೋಡಿನ ಅಂಗಡಿ ಇಟ್ಟಿರೋ ಹಂಗೆ’ ಅಂತ ವರ್ಣಿಸುತ್ತಾನೆ. ಭಿಕ್ಷೆ ಬೇಡಬೇಕು ಅಂದರೆ ನೀಚವೃತ್ತಿ ಎಂದು ನಾವು ತಿಳಿಯಬಹುದು. ಅಂಜಪ್ಪ ಈ ಮಾತನ್ನು ಒಪ್ಪುವವನಲ್ಲ. ’ಜೋಗಿ ಅಂದ್ರೆ ಏನು ಸುಮ್ಮನೆ ಆಯಿತ? ಇಪ್ಪತ್ತು ವರ್ಷ ಅಪ್ನ ಜೊತೆಗೋ ಮಾವನ ಜೊತೆಗೋ ಕಿಂದ್ರಿ ಹೊತ್ತುಕೊಂಡು ತಿರುಗಿ, ಹಾಡೋ ಪದಾನ ಜೊತೆಗೆ ಹಾಡ್ತಾ, ಕಸಬು ಕಲಿಯೋದು ಅಂದ್ರೆ ಬಿಟ್ಟಿಯಾಯ್ತೇನಪ್ಪ? ಯಾವ ಹೈದಾ ಬೇಕಾದ್ರೂ ನೇಗಿಲ ಹಿಂದೆ ನಿಂತುಕೊಂಡು ಎತ್ತಿನ ಬಾಲಾ ತಿರುವಿ ಚೋ ಚೋ ಎನ್ನಬಹುದು. ಪದಾ ಕಲಿಯೋದ್ಯೆ ನಾಲ್ಗೆ ಬೇಡಾ? ಬುದ್ಧಿ ಬೇಡಾ? ಉಂ ಅಂದ್ರೆ ಬಂದು ಬಿಡ್ತದೆಯಾ? ಲಕ್ಷ್ಮೀ ಅಂತಾ ಅನ್ನೋದಕ್ಕೆ ಎಲ್ಲಾರಿಗೂ ಬರ್ತಾದೆಯಾ? ಅನ್ನು ಅಂತ ಕೇಳು ಕ್ಸ್ಮೀ ಕ್ಸ್ಮೀ ಅಂತ ಸೀನುತಾರೆ. ದ್ರೌಪದದೇವಿ ಅನ್ನೋಕೆ ಬಾಯಿ ತಿರುಗೋದು ಸುಲಬಾಯ್ತಾ? ನಾನು ಕಸಬು ಕಲ್ತೇ ಅನ್ಬೇಕಾದ್ರೆ ನನಗೆ ಇಪ್ಪತ್ತೈದು ವಸ್ಸ ಆಗಿತ್ತು. ಆಮೇಲೆ ನಮ್ಮಪ್ಪ “ಈಗ ಪರವಾ ಇಲ್ಲ. ನೀನೊಬ್ಬನೇ ಹೋಗಬಹುದು’ ಅಂತ ಬಿಟ್ಟ’ ಎನ್ನುವನು, ಎಂದರೆ ಜೋಗಿಯಾಗಬೇಕಾದರೆ ಈಗ ನಾವು ಬಿ.ಎ. ಡಿಗ್ರಿ ಪಡೆಯಬೇಕಾದರೆ ಹೇಗೋ ಹಾಗೆ ಕಷ್ಟ. ಅಂಜಪ್ಪ ನಮ್ಮ ಸುತ್ತಿನ ಅರವತ್ತು ಎಪ್ಪತ್ತು ಗ್ರಾಮಗಳಲ್ಲಿ ಓಡಿಯಾಡುತ್ತಿದ್ದನೆಂದು ನನಗೆ ತೋರುತ್ತದೆ. ಜೋಗಿಯಾದವನು ಮನೆ ಬಿಟ್ಟು ಹೊರಡಬೇಕಾದರೆ ಎಲ್ಲಾ ಭಿಕ್ಷುಕರ ಹಾಗೆ ಹೊರಡುವುದಕ್ಕಿಲ್ಲ. ನಾಟಕದಲ್ಲಿ ರಾಜನ ಪಾತ್ರವನ್ನು ವಹಿಸುವವನು ಹೇಗೆ ಮುಖಕ್ಕೆ ಹುಬ್ಬಿಗೆ ಕೆನ್ನೆ ಮೀಸೆ ತುಟಿಗೆ ಬಣ್ಣಗಳನ್ನು ಹಾಕಿಕೊಳ್ಳುವನೋ ಹಾಗೆ ಹಾಡುವುದಕ್ಕೆ ಹೋಗುವ ಜೋಗಿ ಸಂಪ್ರದಾಯದ ಪ್ರಕಾರ ಅಲಂಕಾರ ಮಾಡಿಕೊಳ್ಳಬೇಕು. ಜೋಗಿ ಶೈವನೂ ಅಲ್ಲ ವೈಷ್ಣವನೂ ಅಲ್ಲ; ಕ್ಷುದ್ರ ದೇವತೆಗಳನ್ನು ಪೂಜಿಸುವವನೂ ಅಲ್ಲ; ಇದಷ್ಟರಲ್ಲಿ ಯಾವುದನ್ನೂ ಬಿಟ್ಟವನೂ ಅಲ್ಲ. ಆದರಿಂದ ಅವನ ಮುಖದ ಮೇಲೆ ವಿಭೂತಿ ಕುಂಕುಮ ಅರಿಶಿನ ಈ ಮೂರು ಬೆರೆತಿರುವುವು. ಜೊತೆಗೆ ಕಾಡಿಗದೆ ಇರುವುದಕ್ಕೆ ಅವನು ಕಣ್ಣಿಗೆ ಕಾಡಿಗೆ ಹಚ್ಚಿಕೊಂಡೇ ತಿರುಗುವನು. ಅದರಲ್ಲಿಯೂ ಆ ಪದಗಳನ್ನು ಹೇಳುವ ಹೊತ್ತಿನಲ್ಲಿ ಭೀಮ ಹನುಮಂತರ ಪಾತ್ರಗಳ ಮಾತನ್ನು ಹೇಳುವಾಗ ಕಣ್ಣಿಗೆ ಕಾಡಿಗೆ ಇದ್ದರೆ ಆ ತೀಕ್ಷ್ಣವಾದ ದೃಷ್ಟಿ ಏನಾದರೂ ಜನಕ್ಕೆ ಸೋಕಿದರೆ ಅವರು ಅಲ್ಲಿಯೇ ಮೂರ್ಛೆ ಹೋದಾರು. ಮುಖಕ್ಕೆ ಒಂದು ಅಲಂಕಾರವಿರುವ ಹಾಗೆ ಆ ಬಟ್ಟೆಯೂ ಒಂದು ರೀತಿಯದಾಗಿರಬೇಕು. ರುಮಾಲು ಮೂರು ಬಣ್ಣಕ್ಕೆ ಕಡಿಮೆ ಇಲ್ಲದೆ ಬಣ್ಣಗಳ ಚಿಂದಿಗಳಿಂದ ಮಾಡಿದ್ದಾಗಿರಬೇಕು. ಅಂಜಪ್ಪ ಪ್ರಾಯದಲ್ಲಿ ನೋಡುವುದಕ್ಕೆ ಚೆನ್ನಾಗಿದ್ದ. ಈ ವೇಷವನ್ನು ಹಾಕಿಕೊಂಡು ಅವನು ಪದ ಹೇಳುತ್ತಾ ಬಂದರೆ ಊರಿನ ಹೆಂಗಸರು ಮಕ್ಕಳು ಅವನನ್ನು ಸುಮ್ಮನೆ ಸುತ್ತಿ ಕೊಳ್ಳುವರು. ದೊಡ್ಡ ಗೌಡರ ಮನೇ ಮುಂದೆಯೆಲ್ಲ ಹೆಂಗಸರು ಅವನನ್ನು ಕೊರಿಸಿ ಪದವನ್ನು ಹೇಳಿಸಿ ಕಳುಹಿಸುವರು. “ನಾನು ಬಹಳ ಪದಾ ಹೇಳಿವ್ನಿ ಬಹಳ ಜನಕ್ಕೆ ಸಂತೋಷ ಪಡಿಸಿವ್ನಿ” ಎಂತ ಅಂಜಪ್ಪ ಆಗಾಗ ಹೇಳುತ್ತಾನೆ. ಈ ನಲವತ್ತು ವರ್ಷದ ಹಿಂದೆ ಅಂತ ಅನೋ ಕಾಲದಲ್ಲಿ ಇವನ ಜೋಗಿ ಕಸುಬು ಬಹಳ ಉಚ್ಛ್ರಾಯ ಸ್ಥಿತಿಯಲ್ಲಿದ್ದಿತು. ಇವನು ಬಹಳ ಜನಕ್ಕೆ ಬೇಕಾಗಿದ್ದನು.

ಇವನು ಹೋಗುತ್ತಿದ್ದ ಊರುಗಳಲ್ಲಿ ಕಾಳಾಪುರ ಒಂದು. ನಾನು ಊರಿನ ಹೆಸರನ್ನು ನಿಜವಾಗಿ ಹೇಳುತ್ತಿಲ್ಲ. ಕಾಳಾಪುರ ಎಂದು ಒಂದು ಊರು ಇದ್ದರೆ ನಾನು ಹೇಳುತ್ತಿರುವುದು ಆ ಊರನ್ನು ಅಲ್ಲವೆಂದು ತಿಳಿಯಬೇಕು. ನಾನು ಹೇಳುವುದು ಒಂದು ಊಹೆಯ ಹೆಸರು. ಕಾಳಾಪುರ ತಕ್ಕಮಟ್ಟಿಗೆ ದೊಡ್ಡ ಊರು. ಆದ್ದರಿಂದ ಅಂಜಪ್ಪ ಅಲ್ಲಿ ಹೋದಾಗ ಎರಡು ದಿವಸ ಮೂರು ದಿವಸ ಇದ್ದು ಬೇಡುವುದೂ ಉಂಟು. ಅಂಜಪ್ಪ ನೋಡುವುದಕ್ಕೆ ಚೆನ್ನಾಗಿದ್ದನೆಂದು ಹೇಳಿದೆನಷ್ಟೆ. ಅದು ನಾವು ಜ್ಞಾಪಕದಲ್ಲಿಟ್ಟುಕೊಳ್ಳಬೇಕಾದ ಮಾತು. ಇದರ ಜೊತೆಗೆ ಇವನು ಅಲಂಕಾರ ಬೇರೆ ಮಾಡಿಕೊಂದು ಹಳ್ಳಿಗೆ ಹೋದರೆ ಇವನ ರೂಪಕ್ಕೆ ಮೆಚ್ಚುವ ಹಳಿಯ ಹೆಂಗಸರು ಇರುತ್ತಿದ್ದದ್ದು ನಾಟಕದಲ್ಲಿ ಸುಂದರ ನಾದ ನಟನನ್ನು ಮೆಚ್ಚುವ ಸ್ತ್ರೀಯರಿರುವಂತೆ ಸಹಜವಾದದ್ದೇ. ಸ್ವಲ್ಪ ವಯಸ್ಸಾದ ಹೆಂಗಸಾದರೆ ಅವರ ಜೊತೆಗೆ ಕೂತು ಮಾತನಾಡುವುದಕ್ಕೆ ಅಂಜಪ್ಪ ಹಿಂತೆಗೆಯುತ್ತಿರಲಿಲ್ಲ. ಯಾಕೆಂದರೆ ಇವನ ಸಂಗಡ ಮಾತನಾಡಿದ್ದಕ್ಕಾಗೆ ಅವರನ್ನು ಗದರಿಸುವವರು ಇರುತ್ತಿರಲಿಲ್ಲ. ಸ್ವಲ್ಪ ಚಿಕ್ಕ ವಯಸ್ಸಿನವರಾದರೆ ಅಂಜಪ್ಪ ಹಿಂತೆಗೆಯುತ್ತಿದ್ದ. ಮನೆಯ ಗಂಡಸರು ನೋಡಿದರು: “ಏನಯ್ಯಾ ಜೋಗಿ, ಭಿಕ್ಷೆ ತೆಗೆದುಕೊಂಡು ಹೋಗುವುದು ಬಿಟ್ಟು ಮನೆ ಹೆಂಗಸರ ಕೂಡ ಸರಸವಾಡುತ್ತಾ ಇದ್ದೀಯಾ? ನಡಿ ಆಚೆಗೆ” ಎನ್ನುವರು. ಹೊರಗಿನವರು ಕಂಡರು: “ಏನು ಜೋಗಪ್ಪಾ ಪರವಾಯಿಲ್ಲ” ಎಂದು ನಗುವರು. ಭಿಕ್ಷೆಯಿಂದ ಜೀವಿಸುವ ಮನುಷ್ಯನಿಗೆ ಈ ಎರಡು ಮಾತೂ ಕಷ್ಟವೇ. ಕಾಳಾಪುರದಲ್ಲಿ ಒಂದು ಸಲ ಇವನು ಹೋಗಿದ್ದಾಗ ಆ ಊರಿನ ಗೌಡನ ಹೆಂಡತಿ ಇವನನ್ನು ಕೂರಿಸಿಕೊಂಡು ಪದ ಕೇಳಿದಳಂತೆ. ಗೌಡನಿಗೆ ಅವಳು ಮೂರನೆಯ ಹೆಂಡತಿ. ಪದ ಹೇಳಿದ ಮೇಲೆ ಅವಳು ಇವನಿಗೆ ಸ್ವಲ್ಪ ಎಲೆ ಅಡಕೆ ಕೊಟ್ಟಳು. ಇವನು ಹಾಕಿಕೊಂಡು ಸ್ವಲ್ಪ ಹೊತ್ತು ಕುಳಿತ. ಮಧ್ಯೆ ಗೌಡ ಬಂದು ಇವನ ಮೇಲೆ ಬಹಳ ಕೋಪಿಸಿಕೊಂಡ. ಅಂಜಪ್ಪ ಸಾಮಾನ್ಯವಾಗಿ ಬದಲು ಹೇಳುವವನಲ್ಲ. ಗೌಡ ಸ್ವಲ್ಪ ಕೆಟ್ಟ ಮಾತು ಹೇಳಿದ್ದರಿಂದ ಇವನಿಗೂ ರೇಗಿತು. “ನನ್ನ ಏನೋ ಮಾತನಾಡಿಬಿಟ್ಟಿರಿ, ಗೌಡರೇ. ನೀವು ನಿಮ್ಮ ಹೆಂಡಿರನ್ನು ಏನೆಂದು ತಿಳಿದುಕೊಂಡಿದ್ದೀರ? ನೀವು ಮಾನವಂತರಾದರೆ ನಿಮ್ಮ ಹೆಂಡರಿಗೆ ಹೇಳಿರ, ನನ್ಯಾಕೆ ಬಯ್ತೀರ” ಎಂದು. ಗೌಡ ಎಚ್ಚರಿಕೆಯಿಂದ ಇರು ಜೋಗಿ, ಯಾವಾಗಲೂದರೂ ಬಲಿಹಾಕಿ ಬಿಟ್ಟೇನು ಎಂದ. ಅಂಜಪ್ಪ ತಾನು ಬದಲಿಗೆರಡು ಮಾತು ಹೇಳಿ ಜೋಳಿಗೆ ತೆಗೆದುಕೊಂಡು ಹೊರಟು ಹೋದ.

ಇದಾದ ಮೇಲೆ ಅಂಜಪ್ಪ ಕಾಳಾಪುರಕ್ಕೆ ಒಂದು ಸಲವೋ ಎರಡು ಸಲವೋ ಹೋಗಿದ್ದ. ಏನೂ ವಿಶೇಷ ನಡೆಯಲಿಲ್ಲ. ಮೂರನೆಯ ಸಲ ಹೋಗಿದ್ದಾಗ ಆ ಊರಿನ ಎಂಥದೋ ಕೇರಿಯಲ್ಲಿ ಒಂದು ಜಗಲಿಯ ಮೇಲೆ ಕೂತು ಪದ ಹೇಳುತ್ತಿರಬೇಕಾದರೆ ಪಕ್ಕದ ಮನೆ ಹೆಣ್ಣು ಒಬ್ಬಳು ಪದವನ್ನು ಕೇಳುತ್ತಾ ಅವರ ಬಾಗಿಲಲ್ಲಿ ನಿಂತುಕೊಂಡಳು. ಪದವನ್ನು ಮುಗಿಸಿ ಜೋಗಿ ಹೊರಡುವುದರಲ್ಲಿ ಇದ್ದನು. ಅವಳು ಅವನನ್ನು ಕರೆದು ಅವನಿಗೆ ಸ್ವಲ್ಪ ಭಿಕ್ಷೆ ಹಾಕಿದಳು. ಮಾರನೆಯ ದಿವಸ ಅಂಜಪ್ಪ ಅಲ್ಲಿಗೆ ಹೋಗಿ ಪದ ಹೇಳಿದ. ಆ ಹೆಣ್ಣು ಅವನನ್ನು ಕರೆದು ತನ್ನ ಮನೆಯ ಹತ್ತಿರ ಕೂರಿಸಿ ಪದ ಹೇಳಿಸಿ ಭಿಕ್ಷೆ ಹಾಕಿದಳು. ಅದು ಹಳ್ಳಿಗೆ ತಕ್ಕಮಟ್ಟಿಗೆ ದೊಡ್ಡ ಮನೆ. ಅಂಜಪ್ಪ ಅದು ಯಾರ ಮನೆ ಎಂದು ವಿಚಾರಿಸಿದ. ಆ ಹುಡುಗಿ ಯಾರ ಮಗಳೆಂದು ವಿಚಾರಿಸಿದ. ಯಾರದೋ ಮನೆ. ಅದರ ಹೆಸರು ನನಗೆ ಈಗ ಜ್ಞಾಪಕವಿಲ್ಲ. ಅವರು ಪುಣ್ಯವಂತರು. ಆ ಹುಡುಗಿಯ ಗಂಡ ಪೋಲೀ ಬಿದ್ದಿದ್ದ. ಹುಡುಗಿ ಅಷ್ಟೇನೋ ಒಳ್ಳೆಯವಳಲ್ಲವಂತೆ. ಅದು ಅಂಜಪ್ಪನಿಗೆ ಆಗ ತಿಳಿಯದು. ಮನೆಯಲ್ಲಿ ಆ ಹುಡುಗಿ, ಅವಳ ಅತ್ತೆ, ಮೂರೇ ಜನ. ಅವರು ಕೋಳಿ ಸಾಕುತ್ತಾ ಇದ್ದರು. ಕೋಳೀ ವ್ಯಾಪಾರವನ್ನೂ ಮಾಡುತ್ತಾ ಇದ್ದರಂತೆ. ಅಂಜಪ್ಪ ಆಮೇಲೆ ಕಾಳಾಪುರಕ್ಕೆ ಹೋದಾಗ ಪುನಃ ಅವರ ಮನೆಗೆ ಹೋದ. ಹುಡುಗಿ ಬಹಳ ಚೆನ್ನಾಗಿರುವಳು. ಅಂಜಪ್ಪನಿಗೆ ಕೆಟ್ಟ ಉದ್ದೇಶವೇನೂ ಇಲ್ಲ. ಆದರೆ ಅವಳು ಬಹಳ ಮೆಚ್ಚುವುದರಿಂದ ಅವಳಿಗೆ ಪದ ಹೇಳಬೇಕು. ಅವಳು ಸಂತೋಷಪಡುವುದನ್ನು ನೋಡಬೇಕು ಎಂದು ಇಪನಿಗೆ ಚಪಲ. ಕೇರಿಯ ಜನಕ್ಕೆ ಪದ ಹೇಳಿ ಅವರೆಲ್ಲ ಹೊರಟುಹೋದ ಮೇಲೆ ಅಂಜಪ್ಪ ಈ ಹುಡುಗಿಯ ಮನೆ ಬಾಗಿಲಿನ ಮುಂದೆ ಕುಳಿತು ಎಲೆ ಅಡಕೆ ಹಾಕಿಕೊಳ್ಳುತ್ತಿದ್ದ. ಸ್ವಲ್ಪ ಹೊತ್ತಿನ ಮೇಲೆ ಹುಡುಗಿ ಬಾಗಿಲ ಬಳಿ ಬಂದು : ಜೋಗ್ಯಪ್ಪ ನೀನು ಈ ಊರಿಂದ ಕಡೆದು ಹೀಗೇ ಬಂದು ಹೋಗು” ಎಂದಳು. ಅಂಜಪ್ಪ “ಯಾಕಮ್ಮಾ ನಾನು ಈಗ ಹೊರಡುವನೆ” ಎಂದ. ಅವಳು “ನಿನ್ನ ಪದ ಕೇಳಿ ಬಹಳ ಸಂತೋಷ ಆಯ್ತು. ನಿನಗೇನಾದರೂ ಕೊಡೋಣಾಂತ ಬಹಳ ಸಲಾ ಅಂದುಕೊಂಡೆ. ಅಂದರೆ ನೀನು ಅದನ್ನು ತಕ್ಕೊಂಡು ಬೇಗನೆ ಹೊರಟು ಬಿಡಬೇಕು. ನಮ್ಮತ್ತೇಗೆ ತಿಳಿದರೆ ತಂಟೆ ಮಾಡ್ತಾಳೆ” ಎಂದಳು. ಅಂಜಪ್ಪನಿಗೆ ತೆಗೆದುಕೊಳ್ಳುವುದಕ್ಕೆ ಭಯ. ಒಲ್ಲೆ ಎನ್ನುವುದಕ್ಕೆ ಇಷ್ಟವಿಲ್ಲ. ಆದರೆ ಇವನು ಏನು ಹೇಳುವುದಕ್ಕೂ ಮುಂದಾಗಿ ಹುಡುಗಿ ಒಳಗೆ ಹೋಗಿ ಅಲ್ಲಿಂದ “ಜೋಗ್ಯಪ್ಪಾ, ಇಲ್ಲಿ ಬಾ” ಎಂದಳು. ಇವನು ಒಳಗೆ ಹೋದ. ಹುಡುಗಿ ಒಂದು ಕೋಳಿಯನ್ನು ಇವನ ಜೋಳಿಗೆ ಒಳಕ್ಕೆ ಹಾಕಿದಳು. “ಹೊರಟೋಗು, ಹೊರಟೋಗು” ಎಂದಳು. ಏನು ಎತ್ತ ಎಂದು ಬಹಳ ಯೋಚನೆ ಮಾಡದೆ ಅಂಜಪ್ಪ ಹೊರಟುಹೋದ. ಈಗ ಯಾರಾದರೂ ಹಿಡಿದರೆ ಏನು ಗತಿ ಅಂತ ಅವನಿಗೆ ಎದೆ ಡವಡವ ಬಡಿದುಕೊಳ್ಳುತ್ತಿತ್ತು. ಹುಡುಗಿ ಒಳಗಿಂದ “ಭದ್ರ, ಜೋಗ್ಯಪ್ಪಾ, ನಾನು ಕೊಟ್ಟೆ ಎಂತ ಯಾರಿಗಾದರೂ ಹೇಳೀಯ?” ಎಂದು ಹೇಳಿದಳು. ಅಂಜಪ್ಪ ಏನೂ ಮಾತಾಡದೆ ಬೇಗನೇ ಹೊರಟುಬಿಟ್ಟ. ಊರಿನ ಹೊರಗಡೆ ಅರ್ಧ ಮೈಲಿ ದೂರದಲ್ಲಿ ಒಂದು ಭಾವಿ. ಅಲ್ಲಿಯವರೆಗೆ ಒಂದೇ ಸಮ ನಡೆದು ಒಂದು ಮರದ ನೆರಳಲ್ಲಿ ಕುಳಿತುಕೊಂಡು ಈ ನಡೆದ ಸಮಾಚಾರವನ್ನು ನೆನೆಯುತ್ತಾ ಎಲೆ ಅಡಕೆ ಮೆಲ್ಲುತ್ತಿದ್ದ.

ಅಂಜಪ್ಪನಿಗೆ ಇದರ ಹಾಗೆ ಆ ಮೊದಲು ಆಗಿರಲಿಲ್ಲ. ಅವನಿಗೆ ತಿರುಗಿ ಹಾಗಾಗಬಾರದು ಎನ್ನಿಸಿತು. ಕೋಳಿ ಎನೋ ಒಳ್ಳೇ ಪದಾರ್ಥವೇ. ಅದನ್ನು ಜೋಗಿಗೆ ಸುಮ್ಮನೆ ಯಾರು ಕೊಡಬೇಕು? ಆದರೆ ಕಂಡು ಹಾಗೆ ಕೊಡೋ ಭಿಕ್ಷೆ ಒಂದು ಮಾದರಿ. ಅದರಲ್ಲಿ ಮೋಸ ಇಲ್ಲ. ಇದರಲ್ಲಿ ಮೋಸ ಸೇರಿ ಹೋಯಿತು. ಅಂಜಪ್ಪನಿಗೆ ಆ ಹುಡುಗಿಯ ವಿಷಯದಲ್ಲಿ ಅಚ್ಚುಮೆಚ್ಚಾಗಿತ್ತು. ಎಂಥ ಒಳ್ಳೆಯ ಹುಡುಗಿ. ಎಂಥ ಚೆನ್ನಾದ ಹುಡುಗಿ. ಒಳೇ ಮಾಗಿದ ನಿಂಬೆಹಣ್ಣಿನ ಹಾಗೆ ಇದ್ದಳು. ಇಂಥ ಹೆಂಡತೀನ ಮನೇಲಿಟ್ಟುಕೊಂಡು ಅದೇಕೆ ಅವಳ ಗಂಡ ಪೋಲಿ ತಿರುಗುತ ಇದ್ದಾನೆ ಎಂದು ಅವನಿಗೆ ಯೋಚನೆ ಬಂತು. ಪ್ರಪಂಚವೇ ಹೀಗೆ. ಪುಣ್ಯವಂತರಾದರೆ ಕಳ್ಳತನ.

ಅಂಜಪ್ಪ ಈ ವಿಷಯವನ್ನೆಲ್ಲಾ ಮನಸಿನಲ್ಲಿ ತಿರುವಿ ಹಾಕುವುದರಲ್ಲಿ ತಾನು ಅಲ್ಲಿರುವುದು ಕ್ಷೇಮವಲ್ಲವೆನ್ನುವುದನ್ನು ಮರೆತನು. ಸ್ವಲ್ಪ ಹೊತ್ತಿನ ಮೇಲೆ ಯಾರೋ ಒಬ್ಬ ಊರಿನ ಕಡೆಯಿಂದ ಬಂದು ಇವನ ಬಳಿ ನಿಂತು “ಏನು ಜ್ಯೋಗಪ್ಪ ಕುಂತುಕೊಂಡೆ” ಎಂದನು. ಅಂಜಪ್ಪ “ಕುಂತುಕೊಂಡೆ ಅಪ್ಪ” ಎಂದ. ಹಳ್ಳಿಯವನು “ಜೋಳಿಗೆ ತುಂಬಿತೋ” ಎಂದು. ಅಂಜಪ್ಪ “ಸಾಮಾನ್ಯ” ಎಂದ. ಹಳ್ಳಿಯವನು ಇದೇನು ರಾಗಿನೋ ಎಂತ ಜೋಳಿಗೆ ಬಾಯಿ ತೆರೆದು ಅದನ್ನು ಇಣಿಕಿ ನೋಡಿದ. ಅದರಲ್ಲಿ ಕೋಳಿ. ಬಂದವನು “ಇದೇನು ಜ್ಯೋಗಪ್ಪ ಕೋಳಿ ಅದೆ” ಎಂದ. ಜೋಗಿಗೆ ಎದೆ ಝುಗ್ಗೆಂದಿತು. ಅವನು “ಹೌದಪ್ಪ ಅಲ್ಲೊಬ್ಬರ ಮನೆಯಲ್ಲಿ ಕೊಟ್ರು” ಎಂದ. ಇನ್ನು ಮಾತನಾಡುತ್ತಾ ಕುಳಿತರೆ ಯಾರು ಎತ್ತ ಎಂತ ಚರ್ಚೆ ಬರುವುದೆಂದು ಎದ್ದು ಜೋಳಿಗೆಯನ್ನು ಹೆಗಲ ಮೇಲೆ ಹಾಕಿಕೊಂಡು ಹೊರಡಲು ಸನ್ನದ್ದನಾದ. ಈ ಹೊತ್ತಿಗೆ ಊರ ಕಡೆಯಿಂದ ಒಬ್ಬ ವಯಸ್ಸಾದ ಹೆಂಗಸು ಜೊತೆಯಲ್ಲಿ ಯಾವನೋ ಒಬ್ಬನನ್ನು ಕರೆದುಕೊಂಡು ಬೇಗ ಬೇಗನೇ ಇವರ ಕಡೆಗೆ ಬರುತ್ತಿರುವುದು ಕಂಡಿತು. ಅವರ ಹಿಂದೆ ಸ್ವಲ್ಪ ದೂರದಲ್ಲಿ ಇವನಿಗೆ ಕೋಳಿಯನ್ನು ಕೊಟ್ಟ ಆ ಹೆಣ್ಣು ಬರುತ್ತಿದ್ದಳು. ಅಂಜಪ್ಪನೆಗೆ ಮೊಣಕಾಲು ಹಂಜಿಯ ಹಾಗಾಯಿತು. ಮುಂದೆ ಇಡುವುದಕ್ಕೆ ಹೆಜ್ಜೆಯೇ ಬರಲಿಲ್ಲ. ಇದು ಯಾಕೋ ಅನಾಹುತಕ್ಕೆ ಬಂತು ಎಂದು ಅವನಿಗೆ ಒಳಗೇತಿಳಿದುಹೋಯಿತು. ಹಾಗೆಯೇ ಬರುತ್ತಿದ್ದವರ ಕಡೆ ನೋಡುತ್ತ ನಿಲ್ಲಲಾಗಿ ಆ ಹೆಣ್ಣು ದೂರದಿಂದಲೇ ಇವನಿಗೆ ತಾನು ಕೊಟ್ಟ ಮಾತನ್ನು ಹೇಳಬಾರದೆಂದು ಕೈಯಾಡಿಸುತ್ತ ಸನ್ನೆ ಮಾಡಿದಳು. ಆ ಮುದುಕಿ ಹತ್ತಿರಕ್ಕೆ ಬಂದು “ಇವನೇ ಏನೇ ಜೋಗಪ್ಪ” ಎಂದು ಕೇಳಿದಳು. ಅವಳ ಜೊತೆಗೆ ಬರುತ್ತಿದ್ದ ಮನುಷ್ಯ ಆ ಊರಿನ ತಳಾರಿ. ಹೌದು ಎಂದು ಅವನು ಹೇಳಿದ. ಮುದುಕಿ ಇವನನ್ನು “ಜೋಗಪ್ಪಾ ನಮ್ಮದೊಂದು  ಕೋಳಿ ಏನಾದರೂ ಕಂಡ್ಯಾ ನೀನು” ಎಂದು ಕೇಳಿದಳು. ಅಂಜಪ್ಪ “ಅದ್ಯಾವುದೋ ಹಾಳು ಕೋಳಿ ಜೋಳಿಗೆಯೊಳಕ್ಕೆ ಬಂದು ಬಿಟ್ಟಿದೆ! ನನಗೆ  ತಿಳಿಯಲೇ ಇಲ್ಲ. ಈಗ ಈ ಅಯ್ಯ ಹೇಳ್ದ” ಎಂದ. ಮೊದಲು ಬಂದಿದ್ದವನು “ಯಾರೋ ಕೊಟ್ಟ್ರು ಅಂದಲ್ಲಪ್ಪೋ” ಎಂದ. “ಅಯ್ಯೋ ನಮಪ್ಪ, ಜೋಗಿಗೆ ಒಂದು ಹಿಡಿ ಅಕ್ಕಿ ಹಾಕೋದು ಕಷ್ಟ. ಕೋಳಿ ಕೊಡೋಕೆ ಬರ್ತಾರ” ಎಂದ ಅಂಜಪ್ಪ. ತಳಾರಿ ಬಂದವನು ಜೋಳಿಗೇನ ತೆಗೆದ. ಒಳಗೆ ಕೋಳಿ ಮೂರ್ಛೆಯ ಸ್ಥಿತಿಯಲ್ಲಿ ಬಿದ್ದಿದೆ. ಮುದುಕಿ “ಪರವಾಯಿಲ್ಲ. ಪದ ಹೇಳ್ತಾನೆ ಅಂತ ಮನೆ ಹತ್ರ ಬಿಟ್ಟರೆ ಕೋಳಿ ಹಾರ್ಸೋಕೆ ಮೊದಲು ಮಾಡಿದ” ಎಂದಳು. “ನಡೆ ಊರಿಗೆ ಗೌಡನಿಗೆ ಹೇಳೋಣ. ಚೆನ್ನಾಯ್ತು ಜೋಗೀತನ” ಎಂದು ಇವನನ್ನು ಚೆನ್ನಾಗಿ ಬೈದಳು. ಅಂಜಪ್ಪ “ಅಮ್ಮ ಕೋಳೀನ ನಾನು ಕದೀಲಿಲ್ಲ. ನಿನ್ನ ಕೋಳಿ ಆದರೆ ನೀನು ತಕ್ಕೊಂಡು ಹೋಗು. ನನ್ನ ತಂಟೆಗೆ ಬರಬೇಡ” ಎಂದ “ಏನಯ್ಯ ಬಹಳ ಸಂಪನ್ನನ ಹಂಗೆ ಮಾತನಾಡ್ತೀಯ. ಕದಿಯದ ಹಂಗಿದ್ದರೆ ಕೋಳಿ ನಿನ್ನ ತಾವು ಹೆಂಗೆ ಬಂತು?” ಎಂದು ಮುದುಕಿ ಹುಡುಗಿಯ ಕಡೆ ತಿರುಗಿ “ಇದು ನಮ್ದಲ್ಲವೇನೇ ಕೋಳಿ” ಎಂದಳು. ಹುಡುಗಿ “ಏನೋ ನಮ್ಮದು ಅಲ್ಲ ಅನ್ನೋ ಹಂಗದೆ, ಹೌದು ಅನ್ನೋ ಹಂಗದೆ. ಜೋಗಪ್ಪ ಎಲ್ಲಾದರೂ ಕೊಂಡುಕೊಂಡಿರಬಹುದು” ಎಂದಳು. ತಳಾರಿ “ಇದೆಲ್ಲಾ ಯಾವ ಮಾತು. ಊರ ಗೌಡರ ತಾವ ಹೋಗೋಣ. ಸಮಾಚಾರ ಎಲ್ಲಾ ಹೇಳೋಣ. ಅವರು ನ್ಯಾಯ ಅಂದದನ್ನು ಮಾಡ್ಲಿ” ಎಂದ. ಅಂಜಪ್ಪನಿಗೆ ತಪ್ಪಿಸಿಕೊಂಡು ಹೋಗುವುದಕ್ಕೆ ದಾರಿ ತೋರಲಿಲ್ಲ. ಗೌಡನಿಗೋ ತನ್ನ ಮೇಲೆ ಕೋಪ ಇದೆ ಅಂತ ಬಲ್ಲ. ಇದೇನೋ ಗ್ರಹಚಾರ ಬಂತು ಎಂತ ಅವನು ಜೋಳಿಗೇನೂ ಹೊತ್ತುಕೊಂಡು ಅವರ ಜೊತೆಗೆ ಮರಳಿ ಊರಿಗೆ ಹೋದ.

ಅಲ್ಲಿ ಆದದ್ದನ್ನೆಲ್ಲ ಹೇಳಿ ಪ್ರಯೋಜನವಿಲ್ಲ. ಊರಿನಲ್ಲಿ ಅದಕ್ಕೆ ಹಿಂದೆ ಕೋಳಿಗಳನ್ನು ಕಳೆದುಕೊಂಡಿದ್ದವರು, ಕಳೆದುಕೊಳ್ಳದೇ ಇದ್ದವರು, ಎಲ್ಲರೂ ಜೋಗಪ್ಪ ಹಿಂದೆ ಬಂದಿದ್ದ ದಿವಸ ತಮ್ಮದೊಂದು ಕೋಳಿ ಹೋದ ಹಾಗೆ ನೆನಪು ಎಂದರು. ಗೌಡ ಬಂದ; “ಏನೋ ಜೋಗಿ, ಇಷ್ಟು ದಿನ ಹೇಳಿದ್ದು ಪದ ಅಲ್ಲ, ಈಗ ಲಾಕಾಪಿಗೆ ಕಳಿಸ್ತೀನಿ. ಆಗ ಹೇಳಿ ಪದಾನ” ಎಂದ. ಪೋಲೀಸ್ ಸ್ಟೇಶನ್ ಬಹಳ ದೂರವಿರಲಿಲ್ಲ. ಅಲ್ಲಿಗೆ ಅಪರಾಧಿಯನ್ನು ದಾಗೀನಾ ಸಮೇತ ರಿಪೋರ್ಟ್ ನೊಂದಿಗೆ ಕಳುಹಿಸಿ ಕೊಟ್ಟದ್ದಾಯಿತು. ಅಲ್ಲಿ ಹೇಳಿಕೆ ಕೇಳಿಕೆಗಳೆಲ್ಲಾ ಆದವು. ಅಂಜಪ್ಪ ವಿಚಾರಣೆಯ ದಿನ ಕೋರ್ಟಿಗೆ ಹಾಜರಾಗುತ್ತೇನೆ ಅಂತ ಜಾಮೀನಿನ ಮೇಲೆ ಊರಿಗೆ ಬಂದ.

ವಿಚಾರಣೆ ಆಯಿತು. ವಿಚಾರಣೆಗೆ  ಏನಿದೆ? ಮುದುಕಿ ಮನೆಯಿಂದ ಕೋಳಿ ಹೋದದ್ದು ನಿಜ. ಆ ಕೋಳಿಯನ್ನು ಅವಳು ಗುರುತಿಸಿದ್ದಳು. ಅದು ಜೋಗ್ಯಪ್ಪನ ಹತ್ತಿರ ಇದದ್ದು ನಿಜ. ಅದನ್ನು ಮೂರು ಜನ ನೋಡಿದ್ದರು. ಮ್ಯಾಜಿಸ್ಟ್ರೇಟರು ಅಂಜಪ್ಪನನ್ನು ನೀನು ಏನು ಹೇಳುತೀಯಾ ಎಂತ ಕೇಳಿದರು.

ಅಂಜಪ್ಪ : ಎಲ್ಲೋ ಬುದ್ಧಿ ನಾನು ಪದ ಹೇಳ್ತಾ ಇರಬೇಕಾದ್ರೆ ಕೋಳಿ ಬಂದು ಬೆಚ್ಚಗೆ ಅದೆ ಅಂತ ಜೋಳಿಗೆ ಒಳಗೆ ಸೇರಿಕೊಂಡಿರಬೇಕು. ನನಗೆ ತಿಳೀಲಿಲ್ಲ. ನಾನು ತಂದುಬಿಟ್ಟೆ.

 ಮ್ಯಾಜಿಸ್ಟ್ರೇಟರು : ಏನು ಪುರಾಣ ಹೇಳ್ತೀ ನೀನು. ಕೋಳಿ ಬಂದು ನಿನ್ನ ಜೋಳಿಗೆ ಒಳಗೆ ಕುಳಿತುಕೊಳ್ಳುತ್ತದೆಯಾ? ಸತ್ಯಾ ಹೇಳು.

 ಜೋಗಪ್ಪ : ಮಹಾಸ್ವಾಮಿ ಸತ್ಯ ಹೇಳ್ತೀನಿ. ನೀವು ಹೇಳಿದ ದೇವರ ಮೇಲೆ ಆಣೆ ಮಾಡ್ತೀನಿ. ನಾನು ಕೋಳೀ ಕದಿಲಿಲ್ಲ.

ಮ್ಯಾಜಿಸ್ಟ್ರೇಟರು : ನೀನು ಕೋಳೀ ಕದೀಲಿಲ್ಲ ಅನ್ನು. ಕೋಳಿ ಏನೋ ಜೋಳಿಗೆಗೆ ತಾನೇ ಬರಲಿಲ್ಲ. ಯಾರಾದರೂ ಕೊಟ್ರೇನೋ.

ಅಂಜಪ್ಪನಿಗೆ ಆ ಹುಡುಗಿ ಕೊಟ್ಟಳು ಅಂತ ಹೇಳಿ ಬಿಡಬೇಕು ಎಂತ ನಾಲಗೆ ಕೊನೆಗೆ ಬಂದಿತ್ತು. ಆದರೆ ಅವಳು ಯಾರಿಗೂ ಹೇಳಬೇಡ ಎಂತ ಹೇಳಿದ್ದದ್ದು, ಆಮೇಲೆ ತನಗೆ ಸನ್ನೆ ಮಾಡಿದ್ದದ್ದು, ಎಲ್ಲಾ ಜ್ಞಾಪಕ ಬಂತು. ಏನೋ ಪಾಪ, ಭ್ರಮೆಯಿಂದ ಒಂದು ಕೋಳಿ ಕೊಟ್ಟಳು, ಅವಳನ್ನು ಯಾಕೆ ಬಿಟ್ಟುಕೊಡಬೇಕು, ಎಂತ ಯೋಚನೆ ಬಂದು ಆ ಮಾತು ತಡೆಯಿತು. ಏನೂ ಹೇಳದೆ ಸುಮ್ಮನೆ ಇದ್ದನು. ಏನು ಹೇಳ್ತೀಯ ಎಂತ ಮ್ಯಾಜಿಸ್ಟ್ರೇಟರು ಪುನಃ ಕೇಳಿದರು.

ಅಂಜಪ್ಪ: ಏನು ಹೇಳ್ಲೀ ಬುದ್ಧಿ. ಧರ್ಮದ ಧಣಿ. ನಿಜ ಏನು ಅಂತ ನಿಮಗೆ ದೇವರು ತಿಳಿಸಬೇಕು. ನಾನು ಕದಿಯಲಿಲ್ಲ.

ಮ್ಯಾಜಿಸ್ಟ್ರೇಟರು ಇವನ ಮೇಲೆ ಒಂದು ಚಾರ್ಜು ಅಂತ ಬರೆದು ನಿನ್ನ ಕಡೆ ಸಾಕ್ಷಿಗಳಿದ್ದಾರೆಯೇ ಅಂತ ಕೇಳಿದರು. ಅಂಜಪ್ಪ “ಅಯ್ಯೋ ಮಾಸ್ವಾಮಿ, ನನಗ್ಯಾರು ಸಾಕ್ಷಿ ದೇವರು ಸಾಕ್ಷಿ” ಎಂದ. ಮ್ಯಾಜಿಸ್ಟ್ರೇಟರು ಕಳ್ಳನಾದರೂ ಎಷ್ಟು ನಯವಾಗಿ ಮಾತನಾಡ್ತಾನೆ. ಎಂತ ಹೇಳಿ ಇಪ್ಪತ್ತು ರೂಪಾಯಿ ಜುಲ್ಮಾನೆ ತಪ್ಪಿದರೆ ಹದಿನೈದು ದಿನ ಸಜಾ ಎಂದು ಶಿಕ್ಷೆ ವಿಧಿಸಿದರು. ಅಂಜಪ್ಪ ಜುಲ್ಮಾನೆ ತೆತ್ತು ಪೆಚ್ಚು ಮುಖ ಹಾಕಿಕೊಂಡು ಊರಿಗೆ ಬಂದ.

ಇದಾಗಿ ನಾನು ಹೇಳಿದಂತೆ ನಲವತ್ತು ವರ್ಷದ ಮೇಲೆ ಆಗಿದೆ. ಅಂಜಪ್ಪ ಇದನ್ನು ಹೇಳಿ “ಸುಮ್ಮನೆ ಮೇಸ್ಟ್ರೀಟ್ ಅಂದ್ರೆ ಏನಾಯ್ತಪ್ಪ. ತಪ್ಪಿಗೆ ಶಿಕ್ಷೆ ಮಾಡುವುದು, ಸತ್ಯವಂತ್ನ ಕಾಪಾಡೋದು, ದೇವರ ಕೆಲ್ಸ. ಆ ಕೆಲ್ಸ ಮನುಷ್ಯನ ಕೈಗೆ ಬಂದಾಗ ಮನುಷ್ಯ ದೇವರ ಹಾಗೆ ನಡಕೋಬೇಕು. ಹೆಚ್ಚು ಕಡಿಮೆ ಆದೀತು ಎಂತ ಭಯದಲ್ಲಿರಬೇಕು. ಇಲ್ದೀರಾ ಇದ್ರೆ ಆ ಮೇಸ್ಟ್ರೇಟು ಬೇಡಿಹಾಕತೇನಂದರಲ್ಲಾ ಹಂಗೆ ಅನ್ಯಾಯ ಆದಾತು” ಎಂದ.

ನಾನು : ನೀನು ಹೇಳೋದು ಸರಿ ಅಂಜಪ್ಪ. ಆದರೆ ಏನಾಯ್ತು ಅಂತ ನೀನು ಹೇಳ್ದೀರಾ ಇದ್ರೆ ಮೇಸ್ಟ್ರೀಟರಿಗೆ ತಿಳಿಬೇಕು?

ಅಂಜಪ್ಪ : ಹೇಳೋ ಅಷ್ಟಕ್ಕೆ ನ್ಯಾಯ ಮಾಡೋದಾದ್ರೆ ನಿಮ್ಮಂಥ ಬುದ್ಧಿವಂತ್ರು ಯಾಕೆ ಬೇಕು? ಸತ್ಯಾವು ಏನು ಎಂತ ತಿಳಕೊಳ್ಳೋದು ಮೇಸ್ಟ್ರೀಟ್ರ ಕೆಲ್ಸ.

ನಾನು : ಹುಡುಗಿ ಮುರ್ಯಾದೆ ಉಳಿಸಬೇಕೂ ಅಂತ ನೀನೇ ಜುಲ್ಮಾನೆ ಕೊಟ್ಟ ಹಂಗಾಯ್ತು. ಒಳ್ಳೆಯದಾಯ್ತು ಬಿಡು.

ಅಂಜಪ್ಪ : ಅಯ್ಯೋ ಅದೇನ ಕೇಳ್ತೀಯಾ? ಅವಳು ಒಬ್ಬವನ ಕೂಡ ನ್ಯಾಸ್ತ ಮಾಡಿಕೊಂಡಿದ್ದಳಂತೆ. ಎರಡು ಮೂರು ಸಲ ಅವನಿಗೆ ಕೋಳಿ ಕೊಟ್ಟಿದ್ದಳಂತೆ. ಅವರತ್ತೆ ಕೋಳಿ ಏನಾದವು, ಎಂತ ಕೇಳ್ತಾ ಇದ್ಲಂತೆ. ಯಾರೋ ಕದ್ದಿರಬೇಕು ಅಂತ ಹುಡುಗಿ ಹೇಳ್ತಾ ಇದ್ಲು. ಆ ಅತ್ತೇಗೆ ನಂಬಕಾ ಇಲ್ಲ. ಒಂದು ಸಲ ಕೋಳಿ ಹೋದ ಹೊತ್ನ್ಯಾಗೆ ಇಂಥಾವರ ಕೈಯಾಗೆ ಇದೆ ಅಂತ ತೋರಿಸಿಕೊಟ್ರೆ ತನ್ನ ಮೋಸ ಮುಚ್ತಾದೇ ಅಂತ ಇದೆಲ್ಲಾ ಹುಡುಗೀನೇ ಮಾಡಿದಳೂ ಅಂತ ನನಗೆ ಆಮೇಲೆ ತಿಳಿಯಿತು.

ರಂಗಪ್ಪ : ಏನು? ಹುಡುಗಿ ನಿನಗೆ ಕೋಳಿ ಕೊಟ್ಟು ಅತ್ತೆಗೆ ತಾನೇ ಹೇಳಿಬಿಟ್ಲೆ?

ಅಂಜಪ್ಪ : ಊಂ, ಹಂಗೇ ಆಯ್ತು ಅಂತನ್ನು. ಅತ್ತೆ ಬಂದ್ಲು, ಕೋಳಿ ಎಲ್ಲಿ ಅಂದ್ಲು, ಸೊಸೆ ನನಗೆ ಗೊತ್ತಿಲ್ಲ ಅಂದಳು. ಅತ್ತೆ, ಹಾಗಾದ್ರೆ ಏನಾಗಿರಬೇಕು, ಇಲ್ಲಿ ಯಾರಾದರೂ ಬಂದಿದ್ರಾ, ಅಂತ ಕೇಳಿದಳು. ಸೊಸೆ ನನಗೆ ಗೊತಿಲ್ಲಾ ಅಂದ್ಲು; ಆಮೇಲೆ ಯಾರೋ ಜೋಗಪ್ಪ ಬಂದಿದ್ದ ಅಂದ್ಲು. ಪಕ್ಕದ ಮನೆಯವನು, ಹೌದು ಜೋಗೆ ಇತ್ಲಾಗಿಂದ ಬಹು ಬಿರ್ನೆ ಹೋಗ್ತಾ ಇದ್ದ. ಅಂದ. ಸರಿ, ಕಾಲ ಎಲ್ಲ ಸೇರ್ತು, ನಾನು ಸಿಕ್ಕಿಬಿದ್ದೆ.

ರಂಗಪ್ಪ : “ಆಮೇಲೆ ಹೋಗಿ ಹುಡುಗೀನ ಹೀಗೆ ಮಾಡಬಹುದೇ ಅಂತ ಕೇಳಲಿಲ್ಲವೇ?” ಅಂದ. ಅಂಜಪ್ಪ “ಅಪ್ನ, ನೀವೆಲ್ಲಾ ಹೈಕ್ಳು, ನಾನು ಮುದುಕ್ನಾದಿ. ನನ್ನ ಪ್ರಾಯದ ಮಾತು ಈಗ ಯಾಕೆ ಕೇಳೀಯಾ? ಹೋದ್ನಿ, ಕೇಳಿದ್ನಿ, ಎಲ್ಲ ಆಯಿತು” ಎಂದ. ನಾವು ವಿವರವನ್ನು ಕೇಳಲಿಲ್ಲ. ಕೊನೆಗೆ ರಂಗಪ್ಪ, “ಸರಿ ಬಿಡು, ನಿನ್ನ ನನ್ನ ಹತ್ತಿರೇನಾದರೂ ತಪ್ಪಿತಸ್ಥ ಅಂತ ತಂದ್ರೆ ಸತ್ಯ ಏನು ಅಂತ ಸರಿಯಾಗಿ ತಿಳಿದುಕೊಂಡು ನಿನ್ನ ಬಿಟ್ಟುಬಿಡ್ತೀನಿ” ಅಂದ. ಅಂಜಪ್ಪ “ಇನ್ನ ನಾನು ನರಮನುಸನ ಮುಂದೆ ಏನು ಬಂದೇನು, ಬಿಡಪ್ನು. ಇನ್ನು ನನ್ನ ಮೇಸ್ಟ್ರೀಟು ನಮ್ಮಪ್ಪ ತಿರುಪತಿ ವೆಂಕಟರಮಣಸ್ವಾಮಿ. ಹೋಗ್ಬೇಕು, ನಿಲ್ಲಬೇಕು; ಏನೋ ಅನೋ ಹೊತ್ಗೆ ತಪ್ಪಾಯ್ತು ಅಂತ ಕಾಲಿಗೆ ಬೇಳಬೇಕು. ನಮ್ಮಪ್ನು ಕಾಪಾಡ್ತಾನೆ” ಏಂದ. ನಾವು ಸುಮ್ಮನೆ ಇದ್ದೆವು. ಅಂಜಪ್ಪ ಇನ್ನೂ ಸ್ವಲ್ಪ ಹೊತ್ತು ಕುಳಿತಿದ್ದು “ಅಪ್ನೂ ನೀನು ಮೇಸ್ಟ್ರೀಟಾದಕ್ಕೆ ನನ್ಗೆ ಒಸಿ ಎಲೆ ಅಡಕೆ ಕೊಡಲೊಲ್ಲೆಯಾ?” ಅಂದ. ರಂಗಪ್ಪ ಹುಡುಗರನ್ನು ಕರೆದು ಅವನಿಗೆ ಸ್ವಲ್ಪ ಎಲೆ ಅಡಕೆ ಕೊಡಿಸಿದ. ಅಂಜಪ್ಪ ಅದನ್ನು ತೆಗೆದುಕೊಂಡು, “ನಾನು ಹೇಳಿದ್ದು ಜ್ಞಾಪಕ ಇರ್ಲಿ. ಇನ್ನ ಬರೋಣಾ” ಎಂದು ಹೇಳಿ ಹೊರಟುಹೋದ.

ಲೇಖಕರು

ಸಣ್ಣ ಕಥೆಗಳ ಜನಕ ಎಂದು ಕರೆಸಿಕೊಂಡಿರುವ ಮಾಸ್ತಿ ವೆಂಕಟೇಶ ಅಯ್ಯಂಗಾರ್ (೧೮೯೧-೧೯೮೫) ಅವರು ಕೋಲಾರ ಜಿಲ್ಲೆಯ, ಮಾಲೂರು ತಾಲ್ಲೂಕಿನ ಮಾಸ್ತಿ ಎಂಬ ಹಳ್ಳಿಯಲ್ಲಿ ಜನಿಸಿದರು. ಇಂಗ್ಲಿಶ್ ನಲ್ಲಿ ಎಂ.ಎ. ಪದವಿಯನ್ನು ಪಡೆದ ಮಾಸ್ತಿಯವರು ಸರ್ಕಾರದ ಸೇವೆಯಲ್ಲಿದ್ದು ಡೆಪ್ಯೂಟಿ ಕಮೀಷನರ್ ಆಗಿ ದುಡಿದರು. ೨೦ನೇ ಶತಮಾನದ ಆದಿ ಭಾಗದಿಂದಲೇ ಕನ್ನಡ ಕಥೆಗಳನ್ನು ಬರೆಯಲಾರಂಭಿಸಿದರು. ಮನುಷ್ಯ ಬದುಕಿನ ದರ್ಶನವನ್ನು ಅಭಿವ್ಯಕ್ತಿಸಲು ಸುಮಾರು ೧೦೦ ಕಥೆಗಳನ್ನು ಬರೆದು ಕನ್ನಡ ಕಥಾಲೋಕವನ್ನು ಬಲಪಡಿಸಿದರು. ಮಾಸ್ತಿಯವರು ಜೀವನ ಎಂಬ ಪತ್ರಿಕೆಯ ಸಂಪಾದಕರಾಗಿ ನಾಡು-ನುಡಿ-ಸಂಸ್ಕೃತಿಯ ಸಮಸ್ಯೆಗಳನ್ನು ಕುರಿತು ಗಂಭೀರವಾಗಿ ಚಿಂತಿಸಿ ಸಂಪಾದಕೀಯ ಲೇಖನಗಳನ್ನು ಬರೆದಿರುವರು. ಕಾದಂಬರಿ, ಕವಿತೆ, ನಾಟಕ, ಪ್ರಬಂಧ, ಅನುವಾದ ಮುಂತಾದ ಅನೇಕ ಪ್ರಕಾರಗಳಲ್ಲಿ ಸಾಹಿತ್ಯವನ್ನು ರಚಿಸಿ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಮೈಸೂರು ವಿಶ್ವವಿದ್ಯಾಲಯವು ಮಾಸ್ತಿ ಅವರಿಗೆ ಹೌರವ ಡಾಕ್ಟರೇಟ್ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಮಾಸ್ತಿ ತಮ್ಮ ಅಪಾರ ಸಾಹಿತ್ಯ ಸೇವೆಗೆ ೧೯೮೩ ರಲ್ಲಿ ಅತ್ಯುನ್ನತ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದರು.

ಆಶಯ

ಈ ಕಥೆಯನ್ನು ಮಾಸ್ತಿ ಮೂವತ್ತು ಕಥೆಗಳು (ಸಂ. ಯಶವಂತ ಚಿತ್ತಾಲ) ಪುಸ್ತಕದಿಂದ ಆರಿಸಿಕೊಳ್ಳಲಾಗಿದೆ. ಈ ಕಥೆಯನ್ನು ಓದಿದರೆ ’ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು’ ಎಂಬ ಗಾದೆ ನೆನಪಾಗಬಹುದು. ಜೋಗ್ಯೋರ ಅಂಜಪ್ಪ ಕೋಳಿಯನ್ನು ಕದಿಯದಿದ್ದರೂ ನ್ಯಾಯಾಲಯದ ದೃಷ್ಟಿಯಲ್ಲಿ ತಪ್ಪಿತಸ್ಥನಾಗಿ ಶಿಕ್ಷೆಗೆ ಗುರಿಯಾಗಿದ್ದಾನೆ. ಕೋಳಿ ಕೊಟ್ಟ ಹೆಂಗಸಿನ ಬಗ್ಗೆ ಅಂಜಪ್ಪನು ತಾಳುವ ಉದಾರ ಧೋರಣೆಯಿಂದಲೇ ಶಿಕ್ಷೆಗೆ ಗುರಿಯಾದನೋ? ಅಥವಾ ವಸಾಹತುಕಾಲದ ಆಧುನಿಕ ನ್ಯಾಯಲಯದ ವ್ಯವಸ್ಥೆಯಿಂದ ಆತನಿಗೆ ಶಿಕ್ಷೆಯಾಯಿತೋ? ಪರಂಪರಾಗತವಾದ ನ್ಯಾಯ ವ್ಯವಸ್ಥೆಯೇ ಇರಲಿ, ಆಧುನಿಕ ನ್ಯಾಯ ವ್ಯವಸ್ಥೆಯೇ ಇರಲಿ ಇವು ಯಾವುವೂ ಪರಿಪೂರ್ಣವಲ್ಲ. ’ವ್ಯವಸ್ಥೆ’ ಅಂದರೇನೇ ದೋಷಗಳು ಇದ್ದೇ ಇರುತ್ತವೆ ಎಂಬ ಆಶಯ ಈ ಕಥೆಯಲ್ಲಿ ವ್ಯಕ್ತವಾಗಿದೆ.

ಪದಕೋಶ

ಹೈದ = ಚಿಕ್ಕವನು. ಸಜಾ = ಶಿಕ್ಷೆ. ಜುಲ್ಮಾನೆ = ದಂಡ. ಸಂಚಿ = ಚಿಕ್ಕ ಚೀಲ. ಫಿರ್ಯಾದು = ದೂರು. ಕಸುಬು = ವೃತ್ತಿ. ತಳಾರಿ = ತಳವಾರ.

ಪ್ರಶ್ನೆಗಳು

೧. ಜೋಗ್ಯೋರ ಅಂಜಪ್ಪನು ರಂಗಪ್ಪನನ್ನು ಭೇಟಿಯಾಗಲು ಯಾಕೆ ಹೋದನು?

೨. ಜೋಗಿ ಕಸಬಿನ ಬಗ್ಗೆ ಜೋಗ್ಯೋರ ಅಂಜಪ್ಪನ ಅಭಿಪ್ರಾಯವೇನು?

೩. ಜೋಗಿಯ ವೇಷಭೂಷಣವನ್ನು ವರ್ಣಿಸಿರಿ.

೪. ಕಾಳಾಪುರದ ಗೌಡನ ಜೊತೆ ಅಂಜಪ್ಪನಿಗೆ ಜಗಳವಾದುದ್ದು ಯಾಕೆ? ವಿವರಿಸಿರಿ.

೫. ಜೋಗ್ಯೋರ ಅಂಜಪ್ಪನಿಗೆ ಕೋಳಿಯನ್ನು ಯಾರು, ಯಾಕೆ ಕೊಟ್ಟರು? ವಿವರಿಸಿರಿ.

೬. ಜೋಗ್ಯೋರ ಅಂಜಪ್ಪ ನ್ಯಾಯಾಲಯದ ಪ್ರಕಾರ ತಪ್ಪಿತಸ್ಥನಾದದ್ದು ಹೇಗೆ?

೭. ಜೋಗ್ಯೋರ ಅಂಜಪ್ಪನ ದೃಷ್ಟಿಯಲ್ಲಿ ಮೇಜಿಸ್ಟ್ರೇಟ್ ಆದವನು ನ್ಯಾಯ ನಿರ್ಣಯವನ್ನು ಹೇಗೆ ಮಾಡಬೇಕೆಂದು ಸೂಚಿಸುತ್ತಾನೆ?

 

ಹೆಚ್ಚಿನ ಓದು

ಕೆ.ಪಿ. ಪೂರ್ಣಚಂದ್ರ ತೇಜಸ್ವಿ: ತಬರನ ಕಥೆ

ಬೆಸಗರಹಳ್ಳಿ ರಾಮಣ್ಣ: ಗಾಂಧಿ – ಕಥೆ

ಕುಂ. ವೀರಭದ್ರಪ್ಪ: ದೇವರ ಹಣ – ಕಥೆ

ದೇವನೂರು ಮಹಾದೇವ: ಒಡಲಾಳ – ಕಥೆ