ತಂದೆಯು ಕುಳಿತ ಅಲ್ಲಿಂದ ಉತ್ತರ ಭಾಗದ ಬಿಳಿಯ ಗೋಡೆ ಕಾಣಿಸುತ್ತಿತ್ತು. ಗೋಡೆಯ ಒಳಗೆ ಕಿಟಕಿಯ ಆಕಾರದ ಒಂದು ಸಣ್ಣ ಬಾಗಿಲಿದೆ. ನದಿಯಲ್ಲಿ ಸ್ನಾನ ಮಾಡಿ ಒಬ್ಬೊಬ್ಬರಾಗಿ ಆ ಬಾಗಿಲಿನಿಂದ ಒಳಗೆ ಬರುತ್ತಿದ್ದಾರೆ. ಬಾಗಿಲ ಹೊರಗೆ ದೊಡ್ಡ ಬೇವಿನ ಗಿಡವಿದೆ. ಸಣ್ಣವರಿದ್ದಾಗಲೆ ತಂದೆ ಕೇಳಿದ್ದರು, ಆ ಬೇವಿನಗಿಡದಲ್ಲಿ ಬ್ರಹ್ಮ ರಾಕ್ಷಸಗಳಿವೆಯೆಂದು. ಗೋಡೆಯನ್ನು ಬಿರಿದು ಬಂದ ಆ ಗಿಡದ ಟೊಂಗೆಯನ್ನು ದಿಟ್ಟಿಸುತ್ತ ತಂದೆಯು ಕುಳಿತಿದ್ದರು. ಒಮ್ಮೆ ಒಂದು ರಾತ್ರಿ ಭಕ್ತನೊಬ್ಬ ಆ ಬಾಗಿಲಿನಿಂದ ಹೊರಬಿದ್ದಾಗ ಬ್ರಹ್ಮರಾಕ್ಷಸವು ಅವನನ್ನು ಹಿಡಿಯಿತು. ಹೆದರಿದ್ದರೂ ಧೈರ್ಯವಾಗಿ ಆ ಭಕ್ತನು ರಾಯರ ಸ್ತೋತ್ರ ಪಠಿಸಲು ಆ ಬ್ರಹ್ಮರಾಕ್ಷಸವು ಕೈಬಿಟ್ಟಿತಂತೆ.

ಎದುರಿಗೆ ತಾಯಿ ತಂಗಿ ಕಾಣಿಸಿದರು. ಇಬ್ಬರೂ ಪ್ರದಕ್ಷಿಣೆ  ಹಾಕುತ್ತಿದ್ದಾರೆ. ತಂಗಿಯ ಹಣೆಗೆಲ್ಲ ಉಸುಕು ಹತ್ತಿದೆ. ಅವಳ ಕಣ್ಣು-ರೆಪ್ಪೆಗಳೆಲ್ಲ ಒದ್ದೆಯಾಗಿವೆ. ತಾಯಿ ಒಂದೇ ಸವನೆ ತೇಕುತ್ತಿದ್ದಾಳೆ. ಅವರನ್ನು ನೋಡಿದಾಗ ತಂದೆಗೆ ಎಂದೂ ಇಲ್ಲದ ವಿಚಿತ್ರ ಭಾವನೆ ಬಂತು. ಅವರಿಬ್ಬರೂ ಪೂರ್ಣ ಅಪರಿಚಿತರಂತೆ, ಜನಜಂಗುಳಿಯಲ್ಲಿಯ ಎರಡು ಕಣಗಳಂತೆ ಅವರಿಗೆ ಕಂಡರು. ಯಾರು ಅವರು? ಇಷ್ಟು ದಿವಸ ನಾವು ಕೂಡಿ ಇರದಿದ್ದರೆ, ಅವರಿಬ್ಬರಿಗೂ ನನಗೂ ಏನು ಸಂಬಂಧವಿಲ್ಲ ಎಂದು ನಾನು ಅನ್ನಬಹುದಿತ್ತೆ? – ಇಷ್ಟು ದಿವಸ ನಾವು ಯಾಕೆ ಕೂಡಿದ್ದೆವು? ತಂದೆಗೆ ಯಾವ ಪ್ರಶ್ನೆಯ ಉತ್ತರವೂ ಹೊಳೆಯಲಿಲ್ಲ.

ಮಠದಲ್ಲಿ ಊಟ ಬಹಳ ತಡವಾಗುತ್ತದೆ. ಊಟದ ಸಮಯ ಸಮೀಪಿಸತೊಡಗಿದಂತೆ ಮಠದ ಜನಜಂಗುಳಿ ಹೆಚ್ಚುತ್ತದೆ. ತಂದೆಗೆ ಈಗಿನಿಂದಲೇ ಹಸಿವೆಯಾಗಿದೆ. ಎಂದಿನಿಂದಲೂ ಅವರಿಗೆ ಹಸಿವೆಯನ್ನು ತಡೆಯಲಿಕ್ಕಾಗುವುದಿಲ್ಲ. ಹಸಿವೆಯಾದರೆ ಮನಸ್ಸು ಉದ್ವಿಗ್ನವಾಗಿ ಬಿಡುತ್ತದೆ. ಏನೂ ಸುಚಾಸುವದೇ ಇಲ್ಲ. ಸೊಸೆಯು ತೀರಿಕೊಂಡಾಗ ಹೀಗೇ ಆಗಿತ್ತು. ತಮ್ಮ ವಿರುದ್ಧ ಯಾರೋ ದೂರು ಕೊಟ್ಟಿದ್ದರೆಂದು ಆ ದಿವಸ ಆಕಸ್ಮಾತ್ತಾಗಿ ಸ್ಟೆಶಲ್ ಇನ್ ಸ್ಪೆಕ್ಷನ್ ಬಂದಿತ್ತು. ಗಡಿಬಿಡಿಯಲ್ಲಿ ಊಟದ ಶಾಸ್ತ್ರ ಮಾಡಿ ಅವರು ಗುಡ್ಡ ಶೆಡ್ಡಿಗೆ ಓಡಿದರು. ಮುಂದೆ ರಾತ್ರಿ ಸರಿಯಾಗಿ ಊಟಕ್ಕೆ ಕೂಡುವ ವೇಳೆಗೆ ಇದೆಲ್ಲ ಆಯಿತು. ಭಯಾನಕವಾದ ಸಾವು ಇಷ್ಟು ಸಹಜವಾಗಿ ಎರಗಿ ಸೊಸೆಯನ್ನು ಹೆಕ್ಕಿಕೊಂಡು ಹೋದೀತೆನ್ನುವುದು ಕಲ್ಪನೆಗೂ ಅಸಾಧ್ಯವಾದ ಮಾತಿತ್ತು. ಸೊಸೆ ಉಳ್ಳೇಗಡ್ಡಿಯನ್ನು ಹೆಚ್ಚುತ್ತ ಈಳಿಗೆಯ ಮಣಿಯ ಮೇಲೆ ಕುಳಿತಿದ್ದಳು. ಎದುರಿಗೆ ಒಲೆಯ ಮೇಲಿಟ್ಟು ಹಾಲು ಉಕ್ಕುವದರ ಕಡೆಗೆ ಕೂಡ ಲಕ್ಷವಿಲ್ಲದೆ ಅವಳು ಕುಳಿತಿದ್ದಕ್ಕಾಗಿ ತಾಯಿ ಬೈದರು. ಒಮ್ಮೆಲೆ ಎದ್ದು ಹೊರಗೆ ಹೋಗಿ ಬಿಟ್ಟಳು. ತಿರುಗಿ ಬರಲೇ ಇಲ್ಲ. ಓಡುತ್ತ ಓಡುತ್ತ ಎಕ್ಸಪ್ರೆಸ್ಸಿನ ಧಡಧಡ ಸಪ್ಪಳದಲ್ಲಿ ನೋಡು ನೋಡುವದರಲ್ಲಿಯೇ ಕಾಣದಾಗಿ ಬಿಟ್ಟಿದ್ದಳು. ಎಲ್ಲರಗಳೆ ಮುಗಿದು ಮನೆ ಕಾಣಬೇಕಾದರೆ ರಾತ್ರಿ ನಾಲ್ಕು ಗಂಟೆಯಾಗಿ ಹೋಗಿತ್ತು. ಆ ದಿನವೂ ಅವರಿಗೆ ಹೀಗೆಯೇ ಹಸಿವೆಯಾಗಿತ್ತು.

ತಂದೆಗೆ ತಮ್ಮನನ್ನು ನೋಡಿ ಆಶ್ಚರ್ಯವೆನಿಸಿತು. ಒಮ್ಮೆಲೆ ಎಂದಿನಿಂದ ಅವನಿಗೆ ದೇವರಲ್ಲಿ ಭಕ್ತಿ ಹುಟ್ಟಿತು ತಿಳಿಯಲಿಲ್ಲ. ಹೆಂಡತಿಯ ಸಾವು ಅವನಿಗೆ ದೇವರಲ್ಲಿ ಶ್ರದ್ಧೆ ಹುಟ್ಟಿಸಿರಬಹುದೇನೋ? ತಮ್ಮನು ಕಣ್ಣುಮುಚ್ಚಿ ಭಕ್ತಿಪೂರ್ವಕವಾಗಿ ಪ್ರದಕ್ಷಿಣೆ ಹಾಕಹತ್ತಿದ್ದಾನೆ. ಅಪೂರ್ಣವಾದ ಯಾವ ಆಕಾಂಕ್ಷೆಯ ಪೂರ್ತಿಗಾಗಿ ಅವನು ಪ್ರಾರ್ಥನೆ ಮಾಡುತ್ತಿರಬಹುದು?

ಪ್ರದಕ್ಷಿಣೆ ಹಾಕಿ ಹಾಕಿ ತಮ್ಮನಿಗೆ ಬೇಸರ ಬಂತು. ಇಷ್ಟಕ್ಕೆ ಕಾಲು ನೋಯತ್ತಿವೆ. ಹೆಂಡತಿ ಇದ್ದರೆ ಈಗ ಅವಳು ಬೈದುಬಿಡಬಹುದಿತ್ತು: “ಊರಾಗ ಇದ್ದಾಗ ಊರೆಲ್ಲ ಕಾಲು ಬಿಟ್ಟ ಕತ್ತೀ ಹಂಗ ಫಿರೋ ಅಂತ ತಿರುಗ್ಯಾಡಿ ಬರ್ತೀರಿ. ದೇವರ ಪ್ರದಕ್ಷಿಣೀಂದ್ರ ಕಾಲು ನೋಯಿಸತಾವೇನು ನಿಮ್ದು? ದೇವರ ಸೇವಾಕ್ಕ ಹಾಂಗ ಬ್ಯಾಸರೀಬಾರದು.” ಅದು ನೆನಪಾಗಿ ಅವನಿಗೆ ಪ್ರದಕ್ಷಿಣೆಯನ್ನ ಮತೆ ಮುಂದುವರಿಸಬೇಕೆನಿಸಿತು. ತನಗೆ ಸ್ವತಃಕ್ಕೆ ಮಾತ್ರ ದೇವರಲ್ಲಿ ಎಂದೂ ವಿಶ್ವಾಸವಿರಲಿಲ್ಲ. ಈಗಲೂ ಇಲ್ಲ. ಹಾಗಾದರೆ ತಾನು ಈಗ ಪ್ರದಕ್ಷಿಣೆ ಹಾಕುತ್ತಿದ್ದೇನೆ. ಇದರಿಂದ ಅವಳಿಗೆ ಸಂತೋಷವಾಗಬಹುದೆಂದೆ? ಇದ್ದಾಗ ಅವಳನ್ನು ಸುಖವಾಗಿಡಲು ಪ್ರಯತ್ನಿಸಬೇಕು ಎನ್ನುವ ಮಾತು ಅವನ ಗಮನಕ್ಕೇ ಬಂದಿರಲಿಲ್ಲ. ಈಗ ಅವಳಿಗೆ ಯಾವದರಿಂದ ಸಂತೋಷವಾಗಬೇಕಾಗಿದೆ? ಇದ್ದಾಗ ಅವಳ ತೀರ ಒಂದು ಸಣ್ಣ ಇಚ್ಛೆಯನ್ನು ಕೂಡ ಪೂರ್ಣಗೊಳಿಸುವದಾಗಲಿಲ್ಲ. ಲಗ್ನವಾದ ಹೊಸತಲ್ಲಿ ಒಮ್ಮೆ ಮಂತ್ರಾಲಯಕ್ಕೆ ಹೋಗಿಬರುವದು ಅವಳ ಮನಸ್ಸಿನಲ್ಲಿ ಬಹಳವಿತ್ತು. ಅವ್ವನೇ ಇದಕ್ಕೆ ಕಲ್ಲು ಹಾಕಿದಳು. “ಈಗೇನು ಬಹಾಳ ವಯಸ್ಸಾಗ್ಯಾವ ಆಕೀಗೆ? ಇಂದಿಲ್ಲ ನಾಳೆ ಹೋಗಿಯೇ ಹೋಗತಾಳಲ್ಲ. ಲಗ್ನದ ಖರ್ಚೆ ಬಹಾಳ ಆಗೇದ. ಮತ್ತೆಲ್ಲಿ ಹೊಸ ಖರ್ಚು ತಂದಿರಿ?” ಅದು ಉಳಿದದ್ದು ಉಳಿದೇ ಹೋಯಿತು. ಅವಳೇನು ಮಂತ್ರಾಲಯ ಕಾಣಲಿಲ್ಲ. ಈಗ ಅವಳು ತೀರಿಕೊಂಡು ಆರು ತಿಂಗಳು ಕೂಡ ಆಗಿಲ್ಲ. ತಾವು ಎಲ್ಲರೂ ಮಂತ್ರಾಲಯದಲ್ಲಿ ನೆರೆದಿದ್ದಾರೆ.

ನಡೆಯುವಾಗ ತಮ್ಮನ ಧೋತರ ಕಾಲಲ್ಲಿ ಸಿಕ್ಕಿತು. ಎಡವಿ ಇನ್ನೇನು ಕೆಳಗೆ ಬೀಳುವವ ಆದರೆ ಮಗ್ಗಲಿಗಿದ್ದ ಪೌಳಿಯ ಗೋಡೆ ಹಿಡಿದು ನಿಂತ. ದೂರದಲ್ಲಿ ತಾಯಿ ಯಾರೊಡನೆಯೋ ಮಾತಾಡುತ್ತಿದ್ದಂತೆ ಕಾಣಿಸಿತು. ಪ್ರದಕ್ಷಿಣೆಯನ್ನು ಅರ್ಧಕ್ಕೆ ನಿಲ್ಲಿಸಿ ಅವ್ವನು ಏನೋ ಕೈಮಾಡಿ ಮಾಡಿ ಅವರಿಗೆ ಹೇಳುತ್ತಿದ್ದಾಳೆ. ಅವಳು ಏನು ಹೇಳುತ್ತಿದ್ದಾಳೆ ಎಂಬುದು ತಮ್ಮನಿಗೆ ನಿಶ್ಚಿತ ಗೊತ್ತಿತ್ತು. ಹೆಂಡತಿಗೆ ದುರ್ಮರಣ ಬಂತೆಂದು ಅವಳು ದೆವ್ವವಾಗಿ ತಂಗಿಗೆ ಬಡಿದುಕೊಂಡು ಕಾಡುತ್ತಿದ್ದಾಳೆ ಎಂದು ಎಲ್ಲರಿಗೂ ಹೇಳುತ್ತ ತಿರುಗಾಡುತ್ತಾಳೆ. “ಇದ್ದಾಗ ಸೊಸೆಗೆ ಇಷ್ಟು ಪರಿ ಮಾಡಿ ಮಟ್ಟಿದರೂ ನನಗೆ ಕೆಟ್ಟ ಹೆಸರು ಕೊಟ್ಟು ಹೋದಳು” ಎಂದು ಎಲ್ಲರ ಇದಿರಿನಲ್ಲೂ ಅಬ್ಬರ ಮಾಡಿ ಅಳುತ್ತಾಳೆ.

ಅವ್ವನ ವಿಕ್ಷಪ್ತ ಸ್ವಭಾವದಿಂದ ಮನೆಯಲ್ಲಿ ಎಲ್ಲರು ಬೇಸತ್ತಿದ್ದರು. ತಂದೆಯಂತೂ ಸಾಂಸಾರಿಕ-ಜೀವನಕ್ಕೆ ಎಂದೋ ತಿಲಾರ್ಪಣೆ ಮಾಡಿದ್ದರೆಂಬುದು ತಮ್ಮನಿಗೆ ವಯಸ್ಸಿಗೆ ಬಂದ ಮೇಲೆ ತಿಳಿದಿತ್ತು. ಮೊದಲಿನಿಂದಲೂ ಅವ್ವನ ವರ್ತನೆ ವಿಚಿತ್ರವಾಗಿಯೇ ಇತ್ತು. ತಂದೆ ಬಹಳ ಊಟ ಮಾಡಿದರೆ ಸಂಶಯ ಪಟ್ಟುಕೊಳ್ಳುವುದು, ಊಟ ಮಾಡದಿದ್ದರೂ ಸಂಶಯ ಪಟ್ಟುಕೊಳ್ಳುವದು. ಅದರಲ್ಲಿ ತಂದೆ ತಪ್ಪಿ ಯಾರಾದರೂ ಹೆಂಗಸರ ಕೂದ ನಗುನಗುತ್ತ ಮಾತಾಡಿದರೋ ಮುಗಿದುಹೋಯಿತು, ಆಗ ಅವ್ವನ ಅವತಾರ ನೋಡಲಿಕ್ಕೆ ಆಗುತ್ತಿರಲಿಲ್ಲ. ಇದೆಲ್ಲ ತಮ್ಮ ಬೆಳೆದು ದೊಡ್ಡವನಾದ ಮೇಲೆ ತಿಳಿಯತೊಡಗಿದ್ದು. ಯಾವುದಾದರೂ ಮಾತು ಅಪ್ಪನ ಮನಸಿನ ವಿರುದ್ಧವಾದರೆ ತೀರಿತು, ಅವ್ವ ಮೈ ಮೈ ಪರಚಿಕೊಳ್ಳುತ್ತಿದ್ದಳು. ಮಾತು ಮಾತಿಗೆ ಸಿಟ್ಟು, ಸೆಡವು, ರಂದಿ ರಸಕಸಿ. ತಾನು ಸಣ್ಣವನಿದ್ದಾಗ ಏನೋ ಒಂದು ಕ್ಷುಲ್ಲಕ ಕಾರಣಕ್ಕಾಗಿ ತಂದೆಯವರೋಡನೆ ಜಗಳವಾಡಿ ದಿನವೆಲ್ಲ ಹಣಮಪ್ಪನ ಗುಡಿಯ ಕಟ್ಟೆಯ ಮೇಲೆ ಕುಳಿತು ಸಂಜೆಯಾದ ಕೂಡಲೆ ಮನೆಗೆ ಬಂದಿದ್ದಳು. ಮತ್ತೊಮ್ಮೆ ಇನ್ನೊಂದು ಕಾರಣಕಾಗಿ ಜೀವ ಕೊಡುತ್ತೇನೆ ಬಾವಿಯ ಕಟ್ಟೆಯ ಮೇಲೆ ಕುಳಿತು ಬಂದಿದ್ದಳು.

ಅವ್ವನ ಬಾಯಲ್ಲಿ ಸಾವು ದಿನ ಬಳಕೆಯ ಮಾತಾಗಿದೆ. ಸಿಟ್ಟು ಬಂತೆಂದರೆ ಸಾಯುವೆನೆಂದು ಹೊರಟು ಸಿಟ್ಟು ಇಳಿದ ಕೂಡಲೆ ಮನೆಗೆ ತಿರುಗುತ್ತಾಳೆ.

ತಮ್ಮನಿಗೆ ಈಗ ಬಹಳೇ ಕಾಲು ನೋಯತೊಡಗಿದ್ದವು. ಬಹಳ ನಿತ್ರಾಣವಾಗಿದೆ. ಪ್ರದಕ್ಷಿಣೆ ಹಾಕಿ ಬೇಸರ ಬಂತು. ಬಿಸಿಲು ಏರಿ ಕಾಲಲ್ಲಿಯ ಉಸುಕು ಕಾಯ್ದು ಹೋಗಿದೆ. ಅವನಿಗೆ ತಾನು ನೀರಡಿಸಿದ್ದೇನೆ ಎಂಬುದರ ನೆನಪಾಯಿತು. ನದಿಯಿಂದ ತುಂಬಿ ತಂದಿಟ್ಟ ತಂಬಿಗೆಯನ್ನು ನೆನೆದು ಕಟ್ಟೆಯ ಕಡೆಗೆ ಹೋದ.

ತಮ್ಮನು ಕುಳಿತ ಆ ಕಟ್ಟೆಯಿಂದ ರಾಯರ ವೃಂದಾವನವು ಕಾಣಿಸುತ್ತಿತ್ತು. ಕೆಳಗಡೆ ಕಂಬಕ್ಕಾನಿಸಿಕೊಂಡು ಅಚ್ಚೆ ಕೆಂಪು ಬಣ್ಣದ ಪೀತಾಂಬರ ಉಟ್ಟುಕೊಂಡು ಒಬ್ಬ ಮುದುಕರು ಕುಳಿತಿದ್ದಾರೆ. ಅವರ ದೇಹದ ಅರ್ಧಭಾಗದ ಚಲನೆ ನಿಂತುಬಿಟ್ಟಂತಿದೆ. ಅವರ ರಟ್ಟೆ ಹಿಡಿದು ಮಗ್ಗಲಿಗೆ ಕುಳಿತ ಆ ಹೆಂಗಸು ಅವರ ಹೆಂಡತಿಯಿರಬೇಕು. ಅವರ ಹತ್ತಿರ ಇಬ್ಬರು ಹುಡಿಗೆಯರು ಮಲ್ಲಿಗೆಯ ಹಾರ ಮಾಡುತ್ತ ಕುಳಿತಿದ್ದಾರೆ. ಒಬ್ಬಳದು ಹಸಿರು ಹಣೆಯಿದೆ. ಮೈಮೇಲೆ ಚೂರೂ ಶೃಂಗಾರವಿಲ್ಲ. ಶುಭ್ರವಾಗಿದ್ದ ಬಿಳಿಯ ಸೀರೆಯುಟ್ಟುಕೊಂಡಿದ್ದಾಳೆ. ಇನ್ನೊಬ್ಬಳ ಹಣೆಯ ಮೆಲೆ ಕುಂಕುಮವಿದೆ. ಅವಳದು ಇನ್ನೂ ಲಗ್ನವಾಗಿಲ್ಲ. ತಮ್ಮನದು ಅವಳ ಕಡೆಗೆ ವಿಶೇಷ ಲಕ್ಷ್ಯ ಹೋಗಲಿಲ್ಲ.

ಹಸಿರು ಹಣೆಯವಳನ್ನೇ ನೋಡುತ್ತ ಕುಳಿತ. ಎಷ್ಟೋ ಹೊತ್ತಿನ ನಂತರ ಅವನ ಲಕ್ಷ್ಯಕ್ಕೆ ಬಂತು, ತನಗೆ ಯಾಕೆ ಅವಳನ್ನು ನಿರೀಕ್ಷಿಸುತ್ತ ಕೊಡಬೇಕೆನಿಸುವದೆಂಬುದು. ಮಗ್ಗಲಿನಿಂದ ನೋಡಿದರೆ ಅವಳು ಥೇಟ್ ತನ್ನ ಹೆಂಡತಿಯಂತೇ ಕಾಣಿಸುತ್ತಿದಳು. ಎಷ್ಟು ಹೊತ್ತಿನಿಂದ ನೋಡುತ್ತಿದ್ದಾಳೆ, ಅವಳು ನಗುವ “ಧರತಿ” ಪೂರ್ಣ ಹಾಗೆಯೇ ಇದೆ. ಮುಂದೆ ಇವನು ನೋಡುವದು ಅವಳ ಲಕ್ಷ್ಯಕ್ಕೆ ಬಂದು ಅವಳು ಆ ಕಡೆ ಮುಖ ತಿರುಗಿಸಿದಳು. ತಮ್ಮ ಒಮ್ಮೆಲೆ ಹೌಹಾರಿ ಆ ಕಡೆ ಈ ಕಡೆ ನೋಡಿ, ಕೊನೆಗೆ ಹತ್ತಿರವಿದ್ದ ಅಶ್ವತ್ಥವೃಕ್ಷದ ಕೆಳಗೆ ದೃಷ್ಟಿಯನ್ನು ಸ್ಥಿರಗೊಳಿಸಲು ಪ್ರಯತ್ನಿಸಿದ.

ಅವನ ಮೈ ಜುಮ್ಮೆಂದಿತು. ಎಷ್ಟೊತ್ತಿನಿಂದ ಅವರು ಅಲ್ಲಿ ನಿಂತಿದ್ದರೋ ಯಾರಿಗೆ ಗೊತ್ತು? ಭಾವನಾರಹಿತವೆಂಬ ಭ್ರಮೆ ಹುಟ್ಟಿಸುವ ನಿಶ್ಚಲದೃಷ್ಟಿಯಿಂದ ತಾಯಿ ಅವನನ್ನು ನೋಡುತ್ತ ನಿಂತಿದ್ದರು. ತಮ್ಮನಿಗೆ ಅಂಜಿಕೆ ಬಂತು. ತಮ್ಮನು ಯೋಚಿಸಿದ: ಅವ್ವನೆಂದರೆ ಅಷ್ಟೇಕೆ ಹೆದರಿಕೆ ಬರಬೇಕು? ಆ ಹೆಂಗಸನ್ನು ತಾನು ನೋಡಿದರೇನು ತಪ್ಪಾಯಿತು? ಅವ್ವನೇನು ಯಾವ ಗಂಡಸರ ಕಡೆಗೂ ನೋಡುವದೇ ಇಲ್ಲವೇ? ಆದರೆ… ಆದರೆ? ಅವನನ್ನು ಕಂಡರೆ ನಾವೆಲ್ಲರೂ ಯಾಕೆ ಅಂಜುತ್ತೇವೆ? ಸ್ವತಃ ಅಪ್ಪ ಹೆದರುತ್ತಾರೆ. ತಂಗಿಯಂತೂ ಅವ್ವನ ಹೆದರಿಕೆಯ ಝಳಕ್ಕೆ ಹುರಪಳಿಸಿ ಬೆಳೆಯದೆ ಕ್ರಮಶಃ ಕಮುರಿ ಹೋಗುತ್ತಿದ್ದಾಳೆ. ತನಗೂ ಅವ್ವನೆಂದರೆ ಭೀತಿ ಆದರೆ ಈ ಅಂಜಿಕೆಗೆ ಸ್ವಲ್ಪವೂ ಅಳುಕದೆ ಒಂದೇ ಒಂದು ಜೀವ ನಾಲ್ಕೊಪ್ಪತ್ತು ಬದುಕಿ ಹೋಯಿತು. ತಮ್ಮನಿಗೆ ತನ್ನ ಹೆಂಡತಿಯ ಬಗೆಗೆ ಅಭಿಮಾನವೆನಿಸಿತು. ಅವ್ವನ ಉಪದ್ರಕ್ಕೆ ಬೇಸತ್ತಳು. ಅತ್ತಳು. ಬದುಕಿನುದ್ದಕ್ಕೂ ಎಲ್ಲವನ್ನೂ ಮೂಕವಾಗಿ ಸಹಿಸಿದಳು. ಆದರೆ ಅವಳು ಅವ್ವನಿಗೆ ಎಂದೂ ಅಂಜಲಿಲ್ಲ. ಲಗ್ನವಾದ ಹೊಸದರಲ್ಲಿ ಅವ್ವನಿಗೆ ಗೊತ್ತಾಗದಂತೆ, ಗೆಳೆಯನ ಮನೆಗೆ ಹೋಗಿಬರುತ್ತೇವೆಂದು ಸುಳ್ಳು ಹೇಳಿ ಅವರಿಬ್ಬರೂ ಸರ್ಕಸ್ಸಿಗೆ ಹೋಗಿದ್ದರು. ಮರುದಿವಸವೇ ಅದು ಹೇಗೋ ಅವ್ವನಿಗೆ ಗೊತ್ತಾಗಿಹೋಯಿತು. ಸಿಟ್ಟಿನಿಂದ ಕಂಗಾಲಾಗಿ ಹೋಗಿದ್ದಳು. ತಂಗಿಯನ್ನು ತಪ್ಪಿಸಿ ಹೋಗಲು ಈ ಆಟ ಹೂಡಿದರೆಂದು ಚೀರಾಡಿ, ಹಟಕ್ಕೆ ಬಿದ್ದು ಅದೇ ದಿವಸ ನೆರೆಮನೆಯ ಹುಡುಗಿಯನ್ನು ಜೋಡುಮಾಡಿ, ತಂಗಿಯನ್ನು ಸರ್ಕಸ್ಸಿಗೆ ಕಳಿಸಿದ್ದಳು. ಆಗ ಇಷ್ಟೆಲ್ಲ ರಗಳೆಯಾದರೂ ಹೆಂಡತಿಯು ಪಿಟ್ಟೆನ್ನದೆ, ಶಾಂತವಾಗಿ ತನ್ನ ಪಾಡಿಗೆ ತಾನಿದ್ದಳು. ಮುತ್ತೊಮ್ಮೆ ಅವ್ವನಿಗೆ ಹೇಳದೆ ಕೇಳದೆ ತಾವಿಬ್ಬರೂ ಕೂಡಿ ಫೋಟೋ ತೆಗೆಯಿಸಿಕೊಂಡು ಬಂದಾಗ ಅವ್ವನ ಅಬ್ಬರಕ್ಕೆ ಮಿತಿಯೇ ಇರಲಿಲ್ಲ. ಮಾತಿಗೆ ಮಾತು ಬೆಳೆದು ಅವ್ವ ಎಲ್ಲರನ್ನೂ ಬಾಯಿಗೆ ಬಂದಂತೆ ಬೈದು ತಾನು ಬಾವಿ ಬೀಳುತ್ತೇನೆಂದು ಹೊರಟಾಗ ಅಷ್ಟೇ ಸಿಟ್ಟಿನಿಂದ ಹೆಂಡತಿ ಧೈರ್ಯವಾಗಿ ಅಂದಿದ್ದಳು: “ಹೋಗಿ ಬೀಳಿರಲ್ಲ ಧೈರ್ಯ ಅದ ಏನು, ನೋಡೋಣ? ಸಾಯುವವರೇನ ಢಾಣಾಡಂಗರಾ ಹೊಡೆದು ಸಾಯತಿರತಾರೇನು?” ಕಡೆಗೆ ಅವಳು ತನ್ನ ಮಾತನ್ನು ಸಿದ್ಧಮಾಡಿ ಹೋಗಿದ್ದಳು. ಅಥವಾ ಆ ಮಾತನ್ನು ಸಿದ್ಧ ಮಾಡಲು ಅವಳು ಆ ದಿವಸ ಹಾಗೆ ಓಡಿದಳೋ?… ತಾಯಿಯ ಕೈಯಲ್ಲಿ ಸಾವು ಹಾಸ್ಯಾಸ್ಪದವಾದ ಅಗ್ಗದ ಸರಕಾಗಿತ್ತು. ಬದುಕಿದಾಗಲ್ಲ ಸಾವಿನ ನೆನಪಿಗೆ ಜೋತುಬಿದ್ದ ಅವಳಿಗೆ ವದುಕಿನ ಸುಖವೂ ಸಿಗಲಿಲ್ಲ. ಸಾವಿನ ಸಮಾಧಾನವೂ ಲಭಿಸಲಿಲ್ಲ. ಇದ್ದಾಗ ಸಾವು ಸಾವು ಎಂದು ಬಡಬಡಿಸುವ ಅವ್ವ ಸಾಯುವ ದಿವಸ ಬದುಕಿಗಾಗಿ ಹಂಬಲಿಸುವಳು.

ತಮ್ಮನು ಕುಳಿತಲ್ಲೇ ಎಣಿಕೆ ಹಾಕತೊಡಗಿದ. ಸ್ಟೇಶನ್ನಿನ ತಮ್ಮ ಮನೆಯಿಂದ ರಾತ್ರಿ ಓಡುತ್ತ ರೇಲ್ವ-ಹಳಿಯವರೆಗೆ ಹೋಗಲು ಎಷ್ಟು ವೇಳೆ ಹಿಡಿಯುತ್ತದೆ? ಆ ದಿವಸ ಅವಳು ಓಡುವುದಕ್ಕೂ ಗಾಡಿ ಬರುವದಕ್ಕೂ ವೇಳೆ ಹೇಗೆ ಸರಿಹೋಯಿತು? ಅವ್ವ ಬೈದಾಗ ಅವಳ ಕಣ್ಣಲ್ಲಿ ನೀರಾಡಿರಬೇಕು. ಕಣ್ಣು ಮಂಜಾಗಿ ಆ ದಿವಸ ದಾರಿ ಏಕೆ ತಪ್ಪಲಿಲ್ಲ? ಹಗಲು ಹೊತ್ತಿನಲ್ಲಿ ಸಹಿತ ಹಳಿ ದಾಟಲು ಹೋದಾಗ ತಾನು ಸಿಗ್ನಲ್ಲಿನ ತಂತಿ ಎಷ್ಟು ಸಲ ಎಡವಿ ಮುಗ್ಗರಿಸಿಲ್ಲ? ಆ ತಂತಿ ಆ ದಿವಸ ಅವಳ ವೇಗವನ್ನು ಯಾಕೆ ಕಡಿಮೆ ಮಾಡಲಿಲ್ಲ? ಕತ್ತಲೆಯೆಂದರೆ ಹೆದರುವವಳು ಅಂದು ಒಬ್ಬಳೇ ಹೇಗೆ ಹೋಗುವ ಧೈರ್ಯ ಮಾಡಿದಳು?… ಯಾವ ಪ್ರಶ್ನೆಗೂ ಉತ್ತರವಿರಲಿಲ್ಲ. ಆದರೆ ಎಲ್ಲವೂ ನಡೆದುಹೋಗಿತ್ತು.

ಹೆಂಡತಿಯ ನೆನಪಿನಿಂದ ತಮ್ಮನಿಗೆ ಕಳವಳವಾಯಿತು. ಆದರೆ ಅಳುವು ಬರಲಿಲ್ಲ. ಸುಟ್ಟು ಹೋದ ಹೆಂಡತಿಯ ಚಿತೆಯಲ್ಲಿ ಅವನ ಅಳುವೂ ಬೂದಿಯಾಗಿ ಹೋದಂತೆನಿಸಿತು. ತಂದೆ, ತಾಯಿ, ತಂಗಿ ಹಾಗು ತಾನೂ. ಇವರಲ್ಲಿ ಯಾರಿಗೂ ಪರಸ್ಪರ ಸಂಬಂಧವೇ ಇಲ್ಲ. ಅನಿವಾರ್ಯವಾಗಿ ಒಬ್ಬರು ಇನ್ನೊಬ್ಬರನ್ನು ನಂಬಿ, ಅವಲಂಬಿಸಿ ಒತ್ತಟ್ಟಿಗೆ ಇದ್ದೇವೆ. ಅವನಿಗೆ, ಸರ್ಕಸ್ಸಿನಲ್ಲಿ ಅಂತರಾಳದಲ್ಲಿ ತೂಗಾಡುವ, ಜೋಕಾಲಿಯಿಂದ ಜೋಕಾಲಿಗೆ ಜಿಗಿಯುವ ಆಟಗಾರರ ಗುಂಪು ನೆನಪಾಯಿತು. ಅವರಂತೆ ತಾವೂ ಒಬ್ಬರನ್ನೊಬ್ಬರು ನಂಬಿಕೊಂಡಿರುವದು ಅಗತ್ಯವಾಗಿದೆ. ಒಬ್ಬರ ಬದುಕು ಇನ್ನೊಬ್ಬರ ಮೇಲೆ, ಹಾಗೂ ಎಲ್ಲರ ಬದುಕೂ ಒಬ್ಬರ ಮೇಲೆ ಅವಲಂಬಿಸಿದೆ. ಈ ಸೂಕ್ಷವನ್ನು ನಿರ್ಲಕ್ಷಿಸಿ ಒಂದು ಕ್ಷಣ ಸ್ವತಂತ್ರಗಳಾಗ ಬಯಸಿದ ಹೆಂಡತಿ ಝೋಲಿ ತಪ್ಪಿ ಕೆಳಗೆ ಬಿದ್ದು ಬಿಟ್ಟಳು. ಈಗ ತಂಗಿ ಜೋತಾಡುತ್ತಿದ್ದಾಳೆ. ಅವಳೂ ಕೈಬಿಟ್ಟುಬಿಟ್ಟರೆ ಒಬ್ಬೊಬ್ಬರಾಗಿ ಎಲ್ಲರೂ ನೆಲಕ್ಕಪ್ಪಳಿಸುತ್ತೇವೆ. ಆದರೆ ತಂಗಿಗೆ ಗೊತ್ತೇ ಇಲ್ಲ. ಎಲ್ಲರ ಜೀವನಸೂತ್ರವೂ ಈಗ ತನ್ನ ಕೈಯಲ್ಲಿಯೇ ಇದೆಯೆಂಬುದು. ಅವಳಿಗೆ ಈಗ ವಿಚಾರ ಮಾಡುವ ಶಕ್ತಿಯಾದರೂ ಎಲ್ಲಿದೆ? ನಾಳೆ ಅವಳು ಮತ್ತೆ ಮೊದಲಿನಂತಾದರೆ, ಎಲ್ಲರೂ ತಮ್ಮ ತಮ್ಮ ಹಾದಿ ಹಿಡಿದು ಹೋಗುವರು. ತಂದೆ ಇನ್ನು ಬಹಳ ದಿವಸ ಮನೆ ನಂಬಿ ಇರಲಿಕ್ಕಿಲ್ಲ. ತನಗಾದರೂ ಮನೆಯಲ್ಲಿ ಯಾವ ಆಕರ್ಷಣೆಯಿದೆ? ಅವಳ ಜಡ್ಡು ಕಡಿಮೆಯಾಗದೇ ಇರುವುದರಲ್ಲೇ ಮನೆತನದ ಮಾನವಿದೆ. ಅವಳಿಗೆ ಕಡಿಮೆಯಾದರೆ ಅದು ನುಚ್ಚುನೂರಾಗುವದು. ಎಲ್ಲರೂ ಚದುರಿ ಹೋಗುವರು.

ಬಿಸಿಲಿನ ಝಳ ವಿಪರೀತವಾಗಿದೆ. ಮೈಮೇಲೆ ನೀರಿಳಿಯುತ್ತಿದೆ. ಹಸಿವೆಯಿಂದ ನಿತ್ರಾಣನಾದ ತಮ್ಮನಿಗೆ ನಿದ್ದೆ ಬಂದಂತೆನಿಸಿತು. ಆದರೆ ನಿಜವಾಗಿ ನಿದ್ದೆ ಬಂದಿರಲಿಲ್ಲ. ಕುಳಿತವನು ಹಾಗೆಯೇ ಹಿಂದಿದ್ದ ಗೋಡೆಗೆ ತಲೆ ಆನಿಸಿದ. ಹತ್ತಿರ ಕುಳಿತವರು ತಮ್ಮ ತಮ್ಮೊಳಗೆ ಮಾತಾಡುತ್ತಿದ್ದರು:

“ರಾಯರ, ನೀವು ಏನೇ ಅನ್ನಿರಿ. ಹಿಂದಿನ ಮಠದ ವೈಭವ ಈಗ ಉಳಿದಿಲ್ಲ. ಮಠದ ಪ್ರತಿಷ್ಠೆ ಬರಬರುತ್ತ ಕಡಿಮೆಯಾಗುತ್ತ ನಡೆದಿದೆ.”

“ಇದೇನು ಸ್ವಾಮಿ ಹೀಗೆನ್ನುತ್ತೀರಿ ನೀವು? ಶ್ರೀಗಳವರ ಮಹಿಮೆ ಈಗ ಸರ್ವವ್ಯಾಪಿಯಾಗಿ ಹೋಗಿದೆ. ನಾನಾ ಪ್ರಾಂತಗಳಿಂದ ಭಿನ್ನಭಾಷಿಗಳಾದ ಭಕ್ತರು ಬಹುಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.”

“ರಾಯರ ಮಹಿಮೆಯ ಬಗೆಗೆ ಹೇಳಲಿಲ್ಲ ನಾನು. ರಾಯರೇ, ಮಠದ ಮಹಿಮೆಯ ಬಗ್ಗೆ ಹೇಳಿದೆ. ಸ್ವಾಮಿಗಳವರು ಇಲ್ಲಿದ್ದಾಗ ಬಹುಶಃ ನೀವು ಬಂದಿರಲಿಕ್ಕಿಲ್ಲ ಆಗ. ಏನು ಅನ್ನಸಂತರ್ಪಣೆ ಆ ಮಹಾನುಭಾವರದು? ತಿಂಗಳುಗಟ್ಟಲೆ ಮಠದಲ್ಲಿ ಊಟ ಮಾದಿದರೂ ಒಬ್ಬರಿಗೂ ಚಕಾರವೆತ್ತುವ ಧೈರ್ಯವಾಗುತ್ತಿರಲಿಲ್ಲ ಆಗ. ಈಗೇನು ನಾಲ್ಕು ದಿವಸ ಊಟ ಮಾಡಿದರೆ, ಬಡಿಸುವವರು ಕೂಡ ನಿಮ್ಮ ಕಡೆಗೆ ದಿಟ್ಟಿಸಿ ನೋಡಲಿಕ್ಕೆ ಸುರು ಮಾಡಿಬಿಡುತ್ತಾರೆ. ಆಗಿನ ಅಡಿಗೆಯ ರುಚಿಯೇನು, ರಾಯರೆ? ರಾಯರ ಮಠದ ಹುಳಿಯೆಂದರೆ ನಮ್ಮ ಕಡೆಗೆ ಮನೆಮಾತಾಗಿಬಿಟ್ಟಿದೆ. ಮುಂಜಾನೆ ಊಟಮಾಡಿ ಹೋದರೆ ಸಂಜೆಯವರೆಗೂ ಮಸಾಲೆಯ ವಾಸನೆ ಹೋಗುತ್ತಿರಲಿಲ್ಲ. ಈಗೆಲ್ಲ ಆ ಮಾನದಿಂದ ಮಠದ ಆಡಳಿತ ಕೆಟ್ಟುಹೋಗಿದೆ. ಮುಖ್ಯವಾಗಿ ಹುಳಿಯೇ ಮೊದಲಿನಂತೆ ಸರಿಯಾಗಿ ಆಗುವುದಿಲ್ಲ.”

“ಆದರೆ ರಾಯರ ಮಹಿಮೆಗೂ ಹಾಗೂ ಊಟಕ್ಕೂ ಏನು ಸಂಬಂಧ, ಸ್ವಾಮಿ?”

“ನಾನು ಹೇಳುವದು ನಿಮಗೆ ಅಷ್ಟು ಸರಿಯಾಗಿ ಅರ್ಥವಾದಂತಿಲ್ಲ. ಜನರು ಒಂದು ಮಠದ ಯೋಗ್ಯತೆಯನ್ನು ಕಟ್ಟುವದು ಆ ಮಠದ ಅನ್ನಸಂತರ್ಪಣೆ ಮೇಲಿಂದ. ಉಡುಪಿಯ ಶ್ರೀಕೃಷ್ಣನ ಸನ್ನಿಧಾನದಲ್ಲಿ ಎರಡೂ ಹೊತ್ತೂ ಊಟವಿರುತ್ತದಂತೆ. ಏನು ಪುಣ್ಯವಂತರು ಅವರು! ಮುಖ್ಯ ಕಲಿಕಾಲ ಬಂತು. ಎಲ್ಲ ಕಡೆಗೂ ಅನ್ನಸಂತರ್ಪಣೆ ಕಡಿಮೆಯಾಯಿತು.

ಮಂಗಳಾರತಿಯ ಸಪ್ಪಳ ಎಲ್ಲರನ್ನೂ ಹೊಡೆದೆಬ್ಬಿಸಿತು. ತಮ್ಮನು ಅಲ್ಲಿಯೇ ಎದ್ದು ನಿಂತ. ದೂರದಲ್ಲಿ ತಂದೆ ಓಡಿ ಬಂದು ಜನಸಮುದಾಯವನ್ನು ಕೂಡಿದ್ದು ಅವನಿಗೆ ಅಲ್ಲಿಂದ ಕಾಣಿಸಿತು. ಆಚಾರ್ಯರ ಮಂತ್ರಘೋಷಣೆ ಗುಡಿಯಲ್ಲಿ ಪ್ರತಿಧ್ವನಿಸುತ್ತಿದೆ. ಮಂಗಳಾರತಿಯ ಅಜಸ್ರ ಜ್ಯೋತಿಗಳ ಬೆಳಕಿನಲ್ಲಿ ಕಣ್ಣು ಘಕ್ಕನೆ ಮಂಜಾದಂತಾಗಿ ಆ ಬೆಳಕಿನ ಝಳಕ್ಕೆ ತಮ್ಮನ ಮೈ ಜೋರನೆ ಬೆವತಿತು. ಹೆಂಡತಿಯ ಚಿತೆಯ ಹತ್ತಿರ ನಿಂತಾಗ ಗಾಳಿಯ ಸೆಳಕಿಗೆ ಝಳವು ತೂರಿ ಹೀಗೆಯೇ ಮೈಮೇಲೆ ಬರುತ್ತಿತ್ತು. ಮಂಗಳಾರತಿಯ ಬತ್ತಿಗಳೆಲ್ಲ ಸುಟ್ಟು ಕರಕಾದ ವಾಸನೆ ಬರುತ್ತಿದೆ. ಬೆಂಕಿಗೆ ದರ್ಭ ತುಪ್ಪ ಹಾಗೂ ಅನ್ನವನ್ನು ಹಾಕಿದರೆ ಇಂಥದೇ ವಾಸನೆ ಬರುತ್ತದೆ. ತಮ್ಮನು ಕಣ್ಣು ಅರಳಿಸಿ ವೃಂದಾವನದ ಇದಿರು ವರ್ತುಳಾಕಾರವಾಗಿ ಚಲಿಸುವ ಜ್ಯೋತಿಗಳನ್ನು ನಿಶ್ಚಲವಾಗಿ ದಿಟ್ಟಿಸುತ್ತಿದ್ದಾನೆ. ಜಾಗಟೆಗಳು ಕರ್ಕಶವಾದ ಸಪ್ಪಳ ಮಾಡುತ್ತಿವೆ. ಜನ ಮುಂದೆ ಮುಂದೆ ನುಗ್ಗುತ್ತಿದ್ದರು. ವೃಂದಾವನದ ಮೇಲೆ ಸಾಗರ ಬೇಳುತ್ತಿದ್ದರು. ತಮ್ಮನು ನಿಶ್ಚಲನಾಗಿ ಹಾಗೆಯೇ ನಿಂತಿದ್ದಾನೆ.

ಮಂಗಳಾರತಿಯ ವೇಳೆಗೆ ಹೆಂಗಸರ ಗುಂಪಿನಲ್ಲಿ ತಾಯಿ ಸಿಕ್ಕುಬಿದ್ದಿದ್ದರು. ವಿಪರೀತ ಗದ್ದಲ. ಈ ತಿಕ್ಕಾಟದಲ್ಲಿ ಯಾರೋ ಕಾಲು ತುಳಿದರು. ವೈಶ್ಯರ ಹೆಂಗಸೊಬ್ಬಳು ಧಿಗ್ಗನೆ ಹಾಯ್ದು ಅವರನ್ನು ಮುಟ್ಟಿಬಿಟ್ಟಳು. ಇದೂವರೆಗೂ ಮಡಿಯಲ್ಲಿದ್ದು ತೀರ್ಥದ ವೇಳೆಗೆ ಸರಿಯಾಗಿ ಮೈಲಿಗೆಯಾಗುವದೆಂದರೆ ಎಂಥ ಪ್ರಾರಬ್ಧ. ತಲೆಗೆ ತಲೆ ತಾಕಲಾಡುತ್ತಿದೆ. ತಾಯಿ ಗೋಣು ಮುರಿಯುವಂತೆ ಮುಖ ಮೇಲೆತ್ತಿದರು. ಆದರೆ ರಾಯರ ದರ್ಶನವೇ ಆಗಲೊಲ್ಲದು. ಕಪ್ಪಾದ ತಲೆಗಳು ಕಣ್ಣಿದಿರು ಬಂದು ಕಣ್ಣು ಕತ್ತಲೆಗುಡಿಸುತ್ತಿವೆ. ಗಂಟೆಯ ಸಪ್ಪಳ ಕೇಳಿಸುತ್ತಿದೆ. ದೂರದಿಂದಲೇ ಮಸುಕುಮಸುಕಾಗಿ ಬೆಳಕು ಸುಳಿದ ಭಾಸವಾಗುತ್ತಿದೆ. ಆದರೆ ವೃಂದಾವನವೇ ಕಾಣಿಸಲೊಲ್ಲದು.

ಈ ಗೊಂದಲದಲ್ಲಿ ತಂಗಿಯು ಯಾವಾಗಲೋ ಅವ್ವನ ಕೈಕೊಸರಿಕೊಂಡು ಹೋಗಿಬಿಟ್ಟಿದ್ದಳು. ಹೊರಗೆ ಬಂದ ಬೇವಿನ ಗಿಡದ ಕೆಳಗೆ ರಾಶಿರಾಶಿಯಾಗಿ ಹೋಗಿ ಒಣಗಿದೆಲೆಗಳನ್ನು ಚೆಲ್ಲಾಪಿಲ್ಲಿ ಮಾಡುತ್ತ ಕುಳಿತಳು. ಚೂರೂ ಮೋಡವಿಲ್ಲದ ಮುಗಿಲು ಬಿಸಿಲಿನ ಬೇಗೆಗೆ ಕಾಯ್ದು ಹೋಗಿದೆ. ಇದರ ಪರಿವೆ ಇಲ್ಲದೆ ತಂಗಿ ಆಕಾಶವನ್ನು ನಿರ್ವಿಕಾರವಾಗಿ ನೋಡುತ್ತ ಕುಳಿತಿದ್ದಾಳೆ. ಎದುರಿಗೆ, ಕಾಯ್ದುಹೋಗಿದ್ದ ಬಂಡೆಗಲ್ಲುಗಳ ಕೊರಕಲೊಳಗಿನ ಆ ರಸ್ತೆ ನೇರವಾಗಿ ನದಿಗೆ ಹೋಗಿದೆ. ಗಾಳಿಯ ಸುಳಿವಿಲ್ಲದೆ, ಬಿಸಿಲಿನಿಂದ ಕಾಯ್ದು ನದಿಯು ಉಗಿಯಾಡುತ್ತಿದೆ. ತಂಗಿಯು ಝಗ್ಗನೆ ಎದ್ದಳು. ಹತ್ತಿರವೇ ಬಿದ್ದಿದ್ದ ಒಣಗಿದ ಬಾಳೆಯ ಹಣ್ಣಿನ ಸಿಪ್ಪೆಗಳನ್ನೆತ್ತಿಕೊಂಡು ತುಸು ದೂರ ನೆರಳಲ್ಲಿ ಮಲಗಿದ್ದ ನಾಯಿಗೆ ತಿನಿಸಲು ಹೋದಳು. ನಾಯಿಯು ಅದರ ವಾಸನೆ ನೋಡಿ, ಸೀನಿ, ಅಲ್ಲಿಂದ ಹೊರಟು ಹೋಯಿತು. ಆಗ ತಂಗಿಗೆ ಅಕಸ್ಮಾತ್ತಾಗಿ ಹೊಳೆದಂತಾಯಿತು. ತನಗೂ ಹಸಿವೆಯಾಗಿದೆಯೆಂಬುದು. ಸಿಪ್ಪೆಯನ್ನೆತ್ತಿ ತಾನು ತಿನ್ನಬೇಕು ಎಂದು ಯೋಚನೆ ಮಾಡಿ ನಿರ್ಧರಿಸುವುದರಲ್ಲಿಯೇ ಮರೆತುಬಿಟ್ಟಳು.

ತಂಗಿಗೆ ಇತ್ತೀಚೆಗೆ ಏನೂ ನೆನಪಿರುವುದಿಲ್ಲ. ಒಂದೇ ವೇಳೆಗೆ ಎರಡು ಜಗತ್ತಿನಲ್ಲಿದ್ದು ವ್ಯವಹರಿಸುತ್ತಿದ್ದಂತೆ ಅವಳಿಗನಿಸುತ್ತದೆ. ಸುತ್ತಲಿನ ವಾಸ್ತವಿಕ ಜಗತ್ತಿನ ವ್ಯಾಪಾರ ಒಮ್ಮೆ ನೀರಸವೆನಿಸಿದರೆ, ಇನ್ನೊಮ್ಮೆ ವಿಲಕ್ಷಣವೆನಿಸುತ್ತಿತ್ತು. ಈ ಜಗತ್ತಿನಲ್ಲಿದ್ದೂ ಇನ್ನೊಂದು ಜಗತ್ತಿಗೆ ತಾನು ತೇಲಿ ಹೋಗಿ ತುಟ್ಟತುದಿಯಲಿ ಅಂತರಾಳದಲ್ಲಿ ಲಟಪಟ ವದ್ದಾಡುತ್ತಿದ್ದಂತೆ ಭಯಾನಕ ಕಲ್ಪನೆ ಬರುತ್ತಿತ್ತು. ಕಗ್ಗತ್ತಲೆಯಲ್ಲಿ ಚಿಲ್ಲೆ ತೂಗಾಡಿದ ರೀತಿಯಲ್ಲಿ ಕಣ್ಣಿದಿರಿ ಕತ್ತಲೆ ಪಸರಿಸಿ ಅದರಲ್ಲಿ ಬೆಳಕಿನ ಅಣುಗಳು ಹಲವಾರು ಆಕಾರ ಪಡೆದು ಸಾಲಾಗಿ ಸರಿದು ತೂಗಾಡಿ ಮಾಯವಾಗುತ್ತಿದ್ದವು. ಸಾವಿರ ಘಟನೆಗಳು, ಸಾವಿರ ಮುಖಗಳು ನೂಕುನುಗ್ಗಲಲ್ಲಿ ಎಡವುತ್ತ ಬೇಳುತ್ತ ಅಸಂಬದ್ಧವಾಗಿ ನೆರೆದು ಅವಳನ್ನು ಗೊಂದಲಗೆಡಿಸಿ ಬಿಡುತ್ತಿದ್ದವು. ಹಾಗೆ ಒಮ್ಮೆಲೇ ಎಂದಿನಿಂದ ಆಯಿತು, ಯಾಕೆ ಆಯಿತು ಎನ್ನುವದು ಅವಳಿಗೆ ಗೊತ್ತಿಲ್ಲ. ವಿಚಾರಶಕ್ತಿ ಈಗ ಅವಳ ಅಧೀನದಲ್ಲಿಲ್ಲ. ಕಣ್ಣೆದುರು ಸುಳಿಯುವದನ್ನೆಲ್ಲ, ಮನಃಪಟಲದ ಮೇಲೆ ಮೂಡಿ ಹೋಗುವದನ್ನೆಲ್ಲ ಚಿಕ್ಕ ಮಕ್ಕಳು ಚಲನಚಿತ್ರ ನೋಡುತ್ತ ಕುಳಿತಂತೆ ಅರ್ಥವಾಗದಿದ್ದರೂ ಅಸಹಾಯಕಳಾಗಿ ನೋಡುತ್ತ ಕುಳಿತುಬಿಡುತ್ತಿದ್ದಳು.

ಅತ್ತಿಗೆ ಸತ್ತಾಗ ಅವ್ವ ಅಪ್ಪ ಅಣ್ಣ ಎಲ್ಲರೂ ಅತ್ತರು. ಅದು ನೆನಪಾದರೆ ಅವಳಿಗೆ ಈಗಲೂ ನೆಗೆ ಬರುತ್ತದೆ. ದೊಡ್ಡವರು ಅಳುವದು ಇಷ್ಟು ವಿಚಿತ್ರ ಕಾಣಿಸುವದೆನ್ನುವದು ಅವಳ ಅನುಭವಕ್ಕೆ ಬಂದದ್ದು ಅದೇ ಮೊದಲನೆಯ ಸಲ. ತಾಯಿಗೆ ಧ್ವನಿ ಹೊರಡದೆ ಉಬ್ಬಸಪಡುತ್ತ ಕುಳಿತಿದ್ದರು. ಅಪ್ಪನ ಧ್ವನಿ ಅಳುವಿಗೆ ಸರಿಹೋಗುವುದಿಲ್ಲ. ಹಾಗೂ ಅತ್ತಾಗ ಮುಖ ಬಹಳೇ ವಿದ್ರೂಪವಾಗಿ ಕಾಣಿಸುತ್ತದೆ. ಆ ದಿವಸ ಅಪ್ಪನಿಗೆ ಅಳಬೇಡವೆಂದು ಸ್ಪಷ್ಟವಾಗಿ ಹೇಳಬೇಕೆನಿಸಿತ್ತು. ಆದರೆ ತುಣುಕು ತುಣುಕಾಗಿ ಬಿದ್ದಿದ್ದ ಅತ್ತಿಗೆಯ ದೇಹದ ಹತ್ತಿರ ಹೋಗುವ ಧೈರ್ಯವಾಗಿರಲಿಲ್ಲ. ಗಾರ್ಡನ ಕೈದೀಪದ ಮಿಂಚಿತ್ತು. ಸಾಯುವ ನಿಸ್ಸಹಾಯಕ ಕ್ಷಣದಲ್ಲಿ ಅತ್ತಿಗೆಯು ವೇಗವಾಗಿ ತಿರುಗುವ ಆ ಗಾಲಿಯನ್ನು ಅಪ್ಪಿಕೊಳ್ಳುವ ಆಸೆಪಟ್ಟಿರಬೇಕು.

ತಂತಿಯ ಮೇಲೆ ಅಂತರಾಳದಲ್ಲಿ ಬೇತಿನಲ್ಲಿ ಸರಿಯುವ ದೊಡ್ಡ ಗಾಲಿ ತಂಗಿಯ ಸೈಕಲ್ಲನ್ನು ನಡಿಸುವ ಹೆಂಗಸು ಸ್ವಲ್ಪ ಝೋಲಿ ತಪ್ಪಿದರೆ ತಂತಿಯಿಂದ ಜರೆದು ನೆಲಕ್ಕಪ್ಪಳಿಸುತ್ತಿದ್ದಳು. ಬಣ್ಣಬಣ್ಣದ ಬೆಳಕಿನಲ್ಲಿ, ಬ್ಯಾಂಡಿನ ಉನ್ಮಾದಕಾರಿಯಾದ ಸಂಗೀತದ ತಾಳಕ್ಕೆ ತಕ್ಕಂತೆ ಕುದುರೆಗಳು ಚಕ್ರಾಕಾರವಾಗಿ ಆಸ್ಥೆಯಿಲ್ಲದೆ, ಬೇಸರವೂ ಇಲ್ಲದೆ-ಸುತ್ತುತ್ತಿದ್ದವು. ಸರ್ಕಸ್ಸಿನಲ್ಲಿ ಸಿಂಹವನ್ನು ನೋಡಿದಾಗ ತಂಗಿಗೆ ಅಂಜಿಕೆ ಬಂದಿರಲಿಲ್ಲ. ಆಟದ ನೆವದಲ್ಲಿ ಅದಕ್ಕೆ ಕೊಟ್ಟ ಚಿತ್ರಹಿಂಸೆಯಿಂದ ಸಿಂಹವು ಸಿಟ್ಟಿಗೆದ್ದಿತ್ತು. ಆದರೆ, ಚಾಬೂಕಿನ ಹೊಡೆತಕ್ಕೆ ತಳಮಳಿಸಿ, ಪಂಜರದ ಕಡೆಗೆ ಹೊರಟದ್ದು ಪುನಃ ತಿರುಗಿ ಪ್ರೇಕ್ಷಕರ ನಡುವೆ ಬಂದಾಗ ಮಾತ್ರ ಅವಳು ಅಂಜಿ ತಣ್ಣಗಾಗಿದ್ದಳು.

ಹೀಗೆ ಘಟನೆಗಳೆಲ್ಲ ಯದ್ವಾ-ತದ್ವಾ ನೆರೆದು, ಮುಟ್ಟಾಟದಲ್ಲಿ ಹುಡುಗರು ದುಂಡಗೆ  ನಿಂತು ಮುಟ್ಟಲು ಆಹ್ವಾನಿಸಿದಂತೆ-ನಾಲ್ಕೂ ಕಡೆಯಿಂದ ಅವಳನ್ನು ಆಹ್ವಾನಿಸಿದವು. ಮಠ ದೂರ ಹಿಂದೆ ಉಳಿದುಬಿಟ್ಟಿತ್ತು. ಮಂತ್ರಿಸಿದ ಬೂದಿಯನ್ನು ಕೊಟ್ಟು ಹೊರಟ ಸನ್ಯಾಸಿಯನ್ನು ಹಿಂಬಾಲಿಸಿದಂತೆ ತಂಗಿಯು ಘಟನೆಗಳ ಬೆನ್ನು ಹತ್ತಿ ಹೊರಟಳು. ಅರ್ಧದಾರಿ ದಾಟಿ ಬಂದು, ನದಿಯ ಸಮೀಪಕ್ಕೆ ಬಂದಿದ್ದಾಳೆ. ಬಂಡೆಗಲ್ಲುಗಳ ಹಂಚಿನಂತೆ ಕಾಯ್ದುಹೋಗಿದ್ದವು. ತಂಗಿಯು ಕಾಲಿಡಲಿಕ್ಕಾಗದೆ ಥಕಥಕ ಕುಣಿದು ಖೊಳ್ಳೆಂದು ನಕ್ಕಳು. ಆದರೆ ಕಾಲು ಸುಡುವದನ್ನು ಸಹಿಸಲಿಕ್ಕಾಗದೆ ಧ್ವನಿ ತೆಗೆದು ಸಣ್ಣ ಹುಡುಗರಂತೆ ಗಳಗಳ ಅಳತೊಡಗಿದಳು. ತಾನು ಮುಂದೆ ಎಲ್ಲಿ ಹೋಗಬೇಕೆಂಬುದು ಅವಳಿಗೆ ತಿಳಿಯಲಿಲ್ಲ. ಎದುರಿಗೆ ನದಿ ಅಡ್ಡಗಟ್ಟಿ ನಿಂತಿತ್ತು. ಹಿಂದೆ ದೂರದಲ್ಲಿ ಮಠದ ಗೋಡೆಗಳು ಭವ್ಯವಾಗಿ ಎತ್ತರವಾಗಿ ನಿಂತು ಜೇಲಿನ ಗೋಡೆಗಳಾಗಿ ಅವಳನ್ನು ಹಿಂದೆ ಹೋಗಗೊಡಲೊಲ್ಲವು. ಈ ನೀರವತೆಯಲ್ಲಿ ಅಸ್ತವ್ಯಸ್ತವಾಗಿ ಬಿದ್ದ ಕರಾಳವಾದ ಕಲ್ಲುಗಳು ದಂಡುಗಟ್ಟಿ ಒಮ್ಮೆಲೆ ಅವಳ ಮೇಲೆ ಏರಿ ಬಂದಂತೆನಿಸಿತು. ಚಿಟಿಚಿಟಿ ಚೀರುತ್ತ ನೀರಿನ ಕಡೆಗೆ ಓಡಿದಳು. ಹಿಂದೆ ನಾಲ್ಕೂ ಕಡೆಗೆ ಬಂಡೆಗಲ್ಲುಗಳು ಕೈಕಟ್ಟಿಕೊಂಡು ಅವಳನ್ನು ಸುತ್ತಗಟ್ಟುವ ಹವಣಿಕೆಯಿಂದ ನಿಂತಿವೆ. ಅವುಗಳನ್ನು ತಪ್ಪಿಸಿಕೊಂಡು ಮುಂದೆ ಹೋಗಬೇಕೆಂದರೆ ನೀರು. ತಂಗಿಯು ಹೌಹಾರಿದಳು. ಎರಡೂ ಕೈಗಳಿಂದ ತಲೆಯನ್ನು ಗಟ್ಟಿಯಾಗಿ ಹಿಡಿದು ಆಕಾಶದ ಕಡೆಗೆ ಮುಖ ಮಾಡಿ ಆಕ್ರಂದನ ಮಾಡಿದಳು.

ಮಠದಲ್ಲಿ ತೀರ್ಥ ಪ್ರಸಾದವಾಗಿ ಊಟದ ಸಿದ್ಧತೆ ನಡೆದಿದೆ. ಹೆಂಗಸರು, ಹುಡುಗರು ತಮ್ಮ ತಮ್ಮ ಎಲೆ ಹಿಡಿದಿಡಲು ಧಾವಿಸುತ್ತಿದ್ದಾರೆ. ಹುಳಿಯ ವಾಸನೆ ಕಮ್ಮಗೆ ಮಠದಲ್ಲೆಲ್ಲ ಇಡುಗಿದೆ. ಸಾಲುವಾಗಲು ಪತ್ರಾವಳಿಗಳನ್ನು ಹಾಕಿದ್ದಾರೆ. ಎಲೆಯಲ್ಲಿ ಅನ್ನ-ಪಾಯಸ-ಹುಳಿ ಹಾಗೂ ಕಂಬಳಕಾಯಿಯ ಪಲ್ಲೆ ಬಡಿಸಿದೆ.

ಅಪ್ಪ-ತಮ್ಮ ಗಂಡಸರ ಪಂಕ್ತಿಯಲ್ಲಿ ಕುಳಿತಿದ್ದರು. ಅಪ್ಪ ಗಂಧ ಹಚ್ಚಿಕೊಂಡಾಗಿದೆ. ಇನ್ನು ಊಟ ಸುರುವಾಗಲು ಆಚಾರ್ಯರು “ಕೃಷ್ಣಾಪರ್ಣಮಸ್ತು” ಎನ್ನುವದೊಂದೇ ಬಾಕಿ ಉಳಿದಿದೆ. ಅಕ್ಷತೆ ಹಚ್ಚಿಕೊಳ್ಳಲು ತಂದೆಯು ಮುಖ ಮೇಲೆತ್ತಿದರೆ, ಎದುರಿನಲ್ಲಿ ತಾಯಿ ಬಂದು ನಿಂತಿದ್ದಾರೆ. ಮುಖ ಬಿಳುಪಿಟ್ಟಿದೆ. ಮಾತಾಡಲಿಕ್ಕಾಗದೆ ಒಂದೇ ಸಮನೆ ತೇಕುತ್ತಿದ್ದಾರೆ. ಉಸುರು ಹಿಡಿದು ತಾಯಿ ಮೆಲ್ಲಗೆ ಹೇಳಿದರು: “ತಂಗಿಯು ಮಠದಲ್ಲಿಲ್ಲ. ಎಲ್ಲಿಗೋ ಹೋಗಿಬಿಟ್ಟಿದ್ದಾಳೆ.”

ತಂದೆ ಊಟ ಬಿಟ್ಟಿದರು. ತಮ್ಮ ತಾಯಿ ಇಬ್ಬರೂ ಅವರನ್ನು ಹಿಂಬಾಲಿಸಿದರು. ಎಲ್ಲರೂ ಓಡುತ್ತ ಓಡುತ್ತ ನದಿಗೆ ಬಂದರು. ನೋಡುತ್ತಾರೆ, ತಂಗಿಯು ಬಂಡೆಗಲ್ಲಿಗೆ ತಲೆ ಜಜ್ಜಿಕೊಂಡು ನಿಶ್ಚೇಷ್ಟಿತಳಾಗಿ ಬಿದ್ದುಬಿಟ್ಟಿದ್ದಾಳೆ.

ಬಿಸಿಲು ರಣಗುಡುತ್ತಿದೆ.
ಗಾಳಿಗೂ ಉಸಿರುಗಟ್ಟಿಹೋಗಿದೆ.
ಆದರೆ ತಂಗಿಯು ಇನ್ನೂ ಉಸಿರಾಡಿಸುತ್ತಿದ್ದಾಳೆ.
ಏನೋ ಬಿಟ್ಟುಹೋದಂತಿದೆ

“ತಂಗೀ, ಕೈಬಿಡಬ್ಯಾಡ. ಘಟ್ಟಿಯಾಗಿ ಹಿಡಿ. ಗದ್ದಲದಾಗ ಎಲ್ಲ್ಯಾರೆ ತಪ್ಪಿಸಿಕೊಂಡೀ” ಮಗಳ ಕೈಯ ಹಿಡಿತವನ್ನು ಇನ್ನೂ ಬಿಗಿಯಾಗಿ ಮಾಡುತ್ತ ತಾಯಿ ಹೇಳಿದರು. ತಂಗಿಯು ಉತ್ಸವಕ್ಕೆಂದು ನೆರೆದಿದ್ದ ಜನಜಂಗುಳಿಯನ್ನು ಬೆರೆಗುಬಿಟ್ಟು ನೋಡುತ್ತಿದ್ದಾಳೆ. ಮಠದ ಇದಿರಿನ ಬಯಲಲ್ಲಿ ಸಾಲಾಗಿ ಅಂಗಡಿಗಳನ್ನು ಹಚ್ಚಿದ್ದಾರೆ. ಕೊಳ್ಳುವದು ಏನೂ ಇರದಿದ್ದರೂ ಸುಮ್ಮನೆ ಯಾವುದಾದರೂ ಒಂದು ಅಂಗಡಿಯ ಮುಂದೆ ಹೋಗಿ ನಿಲ್ಲಬೇಕೆಂದು ಅವಳಿಗೆನಿಸಿತು. ತಂಗಿ ಇಂದು ಹುರುಪಿನಲ್ಲಿದ್ದಾಳೆ. ಹಿಂದಿದ್ದ ಮ್ಲಾನತೆ ಕಡಿಮೆಯಾಗಿ ಮೈಯೆಲ್ಲ ಅಪರಿಮಿತ ಉತ್ಸಾಹದಿಂದ ತುಳುಕುತ್ತಿದೆ. ತಂದೆ-ತಮ್ಮ ಇವರ ಹಿಂದಿನಿಂದ ನಡೆದಿದ್ದರು. ತಂದೆಗೆ ತಾವೆಲ್ಲರೂ ಹೊರಟ ರೀತಿ ಹೊಸದೆನಿಸಿತು. ತುಸು ಸಂಕೋಚವೂ ಹುಟ್ಟಿತು. ಇಷ್ಟು ಸನಿಹದಿಂದ ಒಬ್ಬರೊಬ್ಬರಿಗೆ ಮೈಹಚ್ಚಿಕೊಂಡು ಇಡೀ ಸಂಸಾರದೊಂದಿಗೆ ತಾವು ಹಾಗೆ ಹೊರಗೆ ಹೋದದ್ದು ಬಹಳ ಅಪರೂಪ. ಒಂದು ಕ್ಷಣ ತಂದೆಗೆ ಅಭಿಮಾನವೆನಿಸಿತು, ತೃಪ್ತಿಯಾಯಿತು. ನಾವೆಲ್ಲರೂ ಬದುಕಿನಲ್ಲಿ ಹೀಗೆ ಕೂಡಿದ್ದರೆ ನಮ್ಮೆಲ್ಲರ ಬಾಳು ಹೇಗಾಗಬಹುದಿತ್ತು ಎಂಬುದರ ಕನಸು ಕಾಣುತ್ತ ಅವರು ಮುಂದೆ ನಡೆದರು. ತಮ್ಮ ಗದ್ದಲದಲ್ಲಿ ಹಿಂದೆ ಬೀಳುತ್ತಿದ್ದಾನೆ. ಅವನು ಬರುವವರೆಗೆ ನಿಂತು ಅವನ ಕೈಯನ್ನು ಗಟ್ಟಿಯಾಗಿ ಹಿಡಿದು ತಂದೆಯು ಮುಂದೆ ನಡೆದರು. ಆದರೆ ಬಹಳ ಅಶಕ್ತತನ ಬಂದಿದೆ. ಗದ್ದಲದಲ್ಲಿ ಸಮತೂಕವಾಗಿ ಉಳಿಯುವ ಶಕ್ತಿ ಈಗ ತಮ್ಮಲ್ಲಿ ಉಳಿದಿಲ್ಲವೆಂಬುದು ಅವರಿಗೆ ಮನದಟ್ಟಾಯಿತು. ಯಾಕೆಂದರೆ ಜನರು ಪ್ರವಾಹದಂತೆ ಕೊಚ್ಚಿ ಬಂದು ಅವರನ್ನು ಮುಂದೆ ಮುಂದೆ ನೂಕುತ್ತಿದ್ದರು. ತಾಯಿಯ ಮುಖವು ಸಿಟ್ಟಿನಿಂದಲೋ ಏನು ತಾತ್ಸಾರದಿಂದಲೋ ಮುದುಡಿಕೊಂಡಿತ್ತು. ಗದ್ದಲದಲ್ಲಿ ಜನರು ಬಂದು ಧಿಗ್ಗನೆ ಹಾಯುವದು ಅವರಿಗೆ ಬಗೆಹರಿದಿರಲಿಲ್ಲ. ಮುದ್ದೆಯಾಗಿ ಮಗಳನ್ನು ಕರೆದುಕೊಂಡು ಎಷ್ಟು ಜಪ್ಪಿಸಿ ನಡೆದರೂ ಜನರು ಹಾಯುತ್ತಿದ್ದರು.

ಆಕಾಶದಲ್ಲೆಲ್ಲ ಮೋಡ ಕವಿದಿದೆ. ಸಾವಿರಾರು ಜನರು ಉಂಡೆದ್ದ  ಎಲೆಗಳು ತೆಗೆಯುವವರಿಲ್ಲದೆ ನದಿಯ ದಂಡೆಯ ಹಾದಿಯ ಮೇಲೆ ಹಾಗೆಯೇ ಬಿದ್ದಿವೆ. ರಥೋತ್ಸವದ ದರ್ಶನಕ್ಕೆ ಹಾತೊರೆದು ಜನರೆಲ್ಲರೂ ಮಠದ ಆವಾರದಲ್ಲಿ ಕಿಕ್ಕಿರಿಯ ತೊಡಗಿದ್ದಾರೆ.

ಆ ನಾಲ್ವರೂ ನುಗಿಸುತ್ತ ನುಗಿಸುತ್ತ ದಾರಿ ಮಾಡಿಕೊಂಡು ಹಾಗೂ ಹೀಗೂ ಗುಡಿಯ ಮಹಾದ್ವಾರದವರೆಗೆ ಬಂದು ಮುಟ್ಟಿದರು. ತಮ್ಮನಿಗೆ ಎರಡು ದಿನಗಳಿಂದಲೂ ಈ ಗದ್ದಲ ಸಹಿಸಿ ಕಡೆಗೆ ಈಗ ಬೇಸರ ಬಂದಿತ್ತು. ಹೆರವರ ಮೈ-ಬೆವರಿನ ವಾಸನೆ ಹೇಸಿಗೆ ಹುಟ್ಟಿಸುತ್ತಿತ್ತು. ಮಹಾದ್ವಾರದ ಪಾವಟಿಗೆಯ ಮೇಲಿಂದ ನೋಡಿದರೆ ತಮ್ಮನಿಗೆ ಸುತ್ತಲೂ ಬರೀ ತಲೆಗಳೇ ಕಂಡವು. ಈ ಕೋಲಾಹಲದಲ್ಲಿ ಕೈಕೊಸರಿಕೊಂಡು ಅಪ್ಪನನ್ನು ತನ್ನ ಪಾಡಿಗೆ ಬಿಟ್ಟು ಹೊರಗೆ ಓಡಿ ಹೋಗಬೇಕೆಂದು ತಮ್ಮನಿಗೆ ಉತ್ಕಟೇಚ್ಛೆಯಾಯಿತು. ಮುಂದೆ ಹೋದಂತೆಲ್ಲ ಆವಾರದಲ್ಲಿ ಸ್ಥಳ ಕಿರಿದಾಗುತ್ತ ನಡೆದಿತ್ತು. ಇನ್ನೂ ಸರಿದು ಹಾಗೇ ಮುಂದೆ ಹೋದರೆ ಇಕ್ಕಟ್ಟಿನಲ್ಲಿ ಸಿಕ್ಕು ಜನಸಮುದ್ರದ ಗಲಭೆಯಲ್ಲಿ ತಾನು ಹಿಚುಕಿ ಹೋಗಬಹುದೆಂದು ಅವನಿಗೆ ಹೆದರಿಕೆಯಾಯಿತು. ತಿರುಗಿ ನೋಡಿದರೆ ಅಲ್ಲಿಂದ ಹಿಂದಿದ್ದ ಅಂಗಡಿಗಳ ಸಾಲು ಕಾಣಿಸುತ್ತದೆ. ಜನರೆಲ್ಲರೂ ಅಂಗಡಿಗಳನ್ನು ತೆರವು ಮಾಡಿ ಈ ಗದ್ದಲವನ್ನು ಸೇರುತ್ತಿದ್ದಾರೆ. ತಮ್ಮನಿಗೆ ಈ ಉತ್ಸವದಲ್ಲಿ ಏನೂ ಆಸ್ಥೆ ಇರಲಿಲ್ಲ. ಅವನಿಗೆ ಈಗ ಹೆಂಡತಿ ನೆನಪಾದಳು. ಅವಳಿಗೆ ಸಾದಾ ಹಬ್ಬ-ಹುಣ್ಣಿಮೆಯೆಂದರೂ ಕೂಡ ಸಂಭ್ರಮವೇ ಸಂಭ್ರಮ. ಆ ಸಂಭ್ರಮದಲ್ಲಿ ಅವಳಿಗೆ ಎನೂ ಲಕ್ಷ್ಯದಲ್ಲಿರುತ್ತಿರಲಿಲ್ಲ. ಒಮ್ಮೆ ನವರಾತ್ರಿಯಲ್ಲಿ ವೆಂಕಟೇಶದೇವರ ಗುಡಿಗೆ ಹೋದಾಗ ಗದ್ದಲದಲ್ಲಿ ಒಂದು ಭೆಂಡೋಲೆಯನ್ನೇ ಕಳೆದುಕೊಂಡು ಬಂದಿದ್ದಳು. ಅದು ಅವ್ವನ ಗಮನಕ್ಕೆ ಬರಲು ತಡವಾಗಲಿಲ್ಲ. ಇದರ ಪರಿಣಾಮವಾಗಿ ಅವಳ ಮೈಮೇಲಿನ ಆಭರಣಗಳೆಲ್ಲ ಮಾಯವಾಗಿ ಬಿಟ್ಟವು. ಆದರೆ ಅವಳ ಕೈಯಲ್ಲಿಯ ಉಂಗುರವೊಂದು ಮಾತ್ರ ಕಡೆಯವರೆಗೂ ಅವಳ ಹತ್ತಿರ ಉಳಿದಿತ್ತು. ಅವಳು ಸತ್ತ ದಿವಸ  ಅವ್ವನು ಒಂದೇ ಸವನೆ ಸೊಸೆಯ ಕೈ ಹಿಡಿದು ಹಿಡಿದು ಅತ್ತಿದ್ದಳು. ಅವಳು ಕಿರುಬೆರಳಿನ ಉಂಗುರವನ್ನು ದೊಡ್ಡ ಬೆರಳಿಗೆ ಹಾಕಿದ್ದರಿಂದ ಅದು ಬಿಗಿಯಾಗಿ ಬಿಟ್ಟು ಅವ್ವನ ಚಾತುರ್ಯವೆಲ್ಲ ನಿಷ್ಟಲವಾಗಿಬಿಟ್ಟಿತ್ತು. ಕಡೆಗೆ ನಿರುಪಾಯಳಾಗಿ ನೆರೆದವರ ಕಣ್ಣಿದಿರಿನಲ್ಲಿಯೇ ಆ ಉಂಗುರವನ್ನು ಜಗ್ಗಿ ತೆಗೆದಿದ್ದಳು.

ಮೋಡ ಕವಿದ ಆಕಾಶದಿಂದ ಎಲ್ಲಿಯೇ ಅಪ್ಪಿ ಸೂರ್ಯಕಿರಣ ತೂರಿ ಬಂದು ಬಿದ್ದಿದೆ. ಅದರ ಬೆಳಕಿನಲ್ಲಿ ಮೊದಲೇ ಶೃಂಗಾರಾಗಿ ನಿಂತಿದ್ದ ರಥ ಇನ್ನೂ ಥಳಥಳಿಸುತ್ತಿದೆ. ರಥದ ಮುಂದೆ ಹಿಲಾಲು ಉರಿಯುತ್ತಿದೆ. ಕೆಂಪು ಬಣ್ಣದ ಸತ್ತಿಗೆಗೆ ಹಸಿರು ದಂಡೆಯನ್ನು ಕೂಡಿಸಿದ್ದಾರೆ.

ನೆರೆದಿದ್ದ ಸಹಸ್ರಾರು ಕಂಠಗಳು ನೆಲ ನಡುಗುವಂತೆ ಜಯಜಯಕಾರ ಮಾಡಿದವು. ರಥದ ಮೆರವಣಿಗೆ ಹೊರಟಿತು. ರಥ ಎಳೆದು ಪುಣ್ಯ ಪಡೆಯಲಿಕ್ಕೆ ಜನರು ನುಗಿಸಿ ರಥದ ಕಡೆಗೆ ಧಾವಿಸಿದರು. ಮತ್ತೊಮ್ಮೆ ಜಯಜಯಕಾರ.

ಇಷ್ಟರಲ್ಲಿಯೇ ತಮ್ಮನ ಕೈ ತಂದೆಯ ಕೈಯಿಂದ ಬಿಡುಗಡೆಯಾಗಿತ್ತು. ಜನಜಂಗುಳಿ ಒಮ್ಮೆಲೆ ಅಸ್ಥಿರವಾಯಿತು. ನೂಕು-ನುಗ್ಗಲಲ್ಲಿ ಕ್ರಮೇಣ ತಂದೆ ಹಾಗೂ ತಮ್ಮ ದೂರ ದೂರ ಸಾಗಿಸಲ್ಪಟ್ಟು ಕಡೆಗೆ ಒಬ್ಬರನ್ನೊಬ್ಬರು ಕಳೆದುಕೊಂಡು ಬಿಟ್ಟರು. ತಾಯಿ-ತಂಗಿಯರಂತೂ ಯಾವಾಗಲೋ ಆ ಪ್ರಕ್ಷುಬ್ಧ ಜನಪ್ರವಾಹದಲ್ಲಿ ಬೆರತುಹೋಗಿದ್ದರು. ತಂದೆ ನಿಸ್ಸಹಾಯಕ ಸ್ಥಿತಿಯಲ್ಲಿ ತಮ್ಮನನ್ನು ಹುಡುಕತೊಡಗಿದ್ದರು. ಆದರೆ ತಮ್ಮನನ್ನು ಜನಪ್ರವಾಹದ ತೆರೆ, ಎತ್ತಿ ದೂರ ಚೆಲ್ಲಿತ್ತು. ತಂದೆ ಹೌಹಾರಿದರು. ಅವರಿಗೆ ಕಾಲೇ ಹೋದಂತಾದವು. ದೇಹದ ಮೇಲಿನ ಅದ್ಧೀನ ತಪ್ಪಿ ತಮ್ಮನು ತಾವೇ ಪೂರ್ಣವಾಗಿ ಆ ಜನ ಪ್ರವಾಹದ ಸೆಳವಿಗೆ ಒಪ್ಪಿಸಿ ಹತಾಶರಾಗಿ ನಿಂತುಬಿಟ್ಟಿದ್ದರು. ತಮ್ಮ ಇನ್ನು ಬಹುಶಃ ನನ್ನನ್ನು ಹುಡುಕಿಕೊಂಡು ಬರಲಿಕ್ಕಿಲ್ಲ. ಈ ಚಕ್ರವೂ ಹದಿಂದ ಪಾರಾಗುವ ದಾರಿ ನನಗೆಗೊತ್ತಿಲ್ಲ. ತಮ್ಮನಿಗಾದರೂ ಇಲಿಂದ ಹೊರಬೀಳುವ ಗುಟ್ಟು ಗೊತ್ತಿತ್ತೇನೋ? ಆದರೆ ತಮ್ಮನು ಇಷ್ಟೊತ್ತಿನವರೆಗೆ ನನ್ನ ಕೂಡ ಇದ್ದರೂ ಅದನ್ನು ಕೇಳುವದಕ್ಕೆ ನೆನಪೇ ಆಗಲಿಲ್ಲ. ಈ ಗದ್ದಲದಲ್ಲಿ ಇವರಿಬ್ಬರೂ ಎಲ್ಲಿ ಕರಗಿ ಹೋದರೋ ಯಾರಿಗೆ ಗೊತ್ತು? ತಂಗಿಯ ಆವೇಶ ಈ ದಿವಸ ಮತ್ತೆ ಹೆಚ್ಚಾಗಿದೆ. ಕೈ ಕೊಸರಿಕೊಂಡು ಹೋದರೆ ಅವಳು ಈ ಸಲ ಖಂಡಿತ ಮರಳಿ ಬರುವ ಆಸೆಯಿಲ್ಲ. ಆ ದಿನದಂತೆ ಅವಳು ಮತ್ತೆ ನದಿಗೆ ಓಡಿದರೆ….

ಧಮಧಮಧಮ ನಗಾರಿಯ ಸಪ್ಪಳ ಕೇಳಿಸುತ್ತಿದೆ. ರಥ ಮುಂದೆ ಸಾಗಿದೆ. ತಮ್ಮನಿಗೆ ಹರಿಯುವ ಜನಪ್ರವಾಹದ ವಿರುದ್ಧ ಸೆಣಸಿ ಹೊರಗೆ ಬರಬೇಕಾಗಿತ್ತು. ಹೊರಬೀಳುವದು ಕೂಡ ಅಷ್ಟೇ ಅಸಾಧ್ಯವಾದ ಮಾತಾಗಿತ್ತು ಎಂಬುದು ತಮ್ಮನಿಗೆ ಗೊತ್ತಿತ್ತು. ತಾಯಿ-ತಂಗಿ ತಿರುಗಣಿಯಲ್ಲಿ ಸಿಕ್ಕುಬಿಟ್ಟಿದ್ದರು. ತಂದೆ ನಡು-ನೀರನ್ನು ಮುಟ್ಟಿದಾಗ ಕೈ ಸಾಗದ ದುರ್ಬಲರಾಗಿ ಅಲ್ಲಿಯೇ ದೈವದ ಮೇಲೆ ಭಾರ ಹಾಕಿ ಉಳಿದುಬಿಟ್ಟರು. ಇವರೆಲ್ಲರನ್ನೂ ಈ ಸ್ಥಿತಿಯಲ್ಲಿ ಬಿಟ್ಟು ತಾನು ಹೊರಬೀಳುವದು ಯೋಗ್ಯವೇ ಎಂದು ಸಾಶಂಕನಾದ. ಜನರ ಪದಹತಿ ಪ್ರಬಲವಾಗುತ್ತ ನಡೆದಿತ್ತು. ಈ ಸೆಳವಿನಿಂದ ಯಾರು ಯಾರನ್ನೂ ಹೊರಗೆ ತೆಗೆಯಲು ಸಾಧ್ಯವಿಲ್ಲವೆಂಬ ನಿರ್ಣಯಕ್ಕೆ ಬಂದು, ತಮ್ಮ ಎಲ್ಲರನ್ನೂ ಅವರ ಪಾಡಿಗೆ ಬಿಟ್ಟು ತಾನು ಅಲ್ಲಿಂದ ಹೊರಬಿದ್ದ.

ಮೋಡ ದಟ್ಟವಾಗಿ ಕವಿದು, ಎಲ್ಲಿಂದಲೋ ಸುಂಟರಗಾಳಿಯು ಸುತ್ತಿ ಸುತ್ತಿ ಬಂದು ಬೈಲಿನ ಧೂಳನ್ನೆಲ್ಲ ತಂದು ಅದು ಮಠದ ಮೇಲೆ ತೂರುತ್ತಿದೆ. ರಥವನ್ನು ಎಲ್ಲರೂ ಕಸುವು ಹಾಕಿ ವೇಗವಾಗಿ ಎಳೆಯುತ್ತಿದ್ದಾರೆ. ಜನರೆಲ್ಲ ದಿಕ್ಕುಗೆಟ್ಟು ಕಣ್ಣು ತಿಕ್ಕಿಕೊಳ್ಳುತ್ತ ಚೆಲ್ಲಾಪಿಲ್ಲಿ ಯಾಗುವ ಬೇತಿನಲ್ಲಿದ್ದಾರೆ.

ರಥವು ಸಮೀಪಿಸಿದ ಕೂಡಲೆ ತಾಯಿಯು ತಂಗಿಯನ್ನೆಳೆದುಕೊಂಡು ಮುಂದೆ ನುಗ್ಗಿದರು. ತಂಗಿಯ ಹಣೆಯ ಮೇಲೆಲ್ಲ ಬೆವರು ಹನಿಹನಿಯಾಗಿ ಪೋಣಿಸಿದಂತೆ ನಿಂತಿದೆ. ಅವಳ ದೊಡ್ಡವಾದ ಕಣ್ಣುಗಳು ಮಂತ್ರಿಸಿದಂತೆ ರಥದಲ್ಲಿ ನೆಟ್ಟಿವೆ. ಮೈ ಥರಥರ ಕಂಪಿಸುತ್ತಿದೆ. ಯಾವುದೋ ಅಮಲಿನಲ್ಲಿ, ಭಯಭೀತಳಾಗಿ ಎಲ್ಲವನ್ನೂ ಮರೆತು ರಥವನ್ನು ನೋಡುತ್ತ ನಿಂತುಬಿಟ್ಟಿದ್ದಾಳೆ. ರಥದ ಪ್ರದಕ್ಷಿಣೆ ಮುಗಿಯುತ್ತ ಬಂದಿತು. ಜನರು ನಿಂತಲ್ಲಿಯೇ ತಲೆ ಬಾಗಿಸಿ ನಮಸ್ಕಾರ ಮಾಡುತ್ತಿದ್ದಾರೆ. ಸಿಂಗರಿಸಿಟ್ಟ ಉತ್ಸವ ವಿಗ್ರಹಗಳೆಲ್ಲ ರಥದ ಎಳೆದಾಟದಲ್ಲಿ ಹೊಯ್ದಾಡುತ್ತಿವೆ.

ತಂಗಿಯು ರಥದ ಕಡೆಗೆ ಕೈಮಾಡಿ ಒಮ್ಮಿಂದೊಮ್ಮೆಲೇ ಚಿಟ್ಟನೆ ಚೀರಿದಳು: “ಅಯ್ಯೋ, ಬೆಂಕೀ. ಬೆಂಕೀ. ಅವ್ವಾ, ರಥಕ್ಕೆಲ್ಲಾ ಬೆಂಕಿ ಹತ್ತೇದ. ಅಲ್ಲೆ ನೋಡು. ರಥಾ ಹ್ಯಾಂಗ ಧನ್ ಧನ್ ಉರೀತದ. ಅವ್ವಾ, ಬೆಂಕಿ!…” ತಂಗಿಯ ತಾಯಿಯ ಕೈ ಬಿಡಿಸಿ ಕೊಂಡು ರಥದ ಕಡೆಗೆ ಧಾವಿಸಿದಳು. ಅವಳ ಕಾಲ ನರಗಳೆಲ್ಲ ಛಟ ಛಟ ಹರಿದು ನಿರ್ಜೀವವಾದಂತೆನಿಸಿತು. ರಥದಂತೆ ತಾನೂ ಏಕಶಿಖಿಯಾಗಿ ತಪ್ತವಾಗಿ ಅಖಂಡವಾಗಿ ಉರಿಯುತ್ತಿರುವಂತೆ ಅವಳಿಗೆ ವೇದನೆಯಾಯಿತು. ನಿಂತ ನೆಲವೆಲ್ಲ ಎಡೆಬಿಡದೆ ಅವಳ ಸುತ್ತಲೂ ದಿಮಿದಿಮಿ ತಿರುಗುತ್ತಿದೆ. ಝೋಲಿ ಹಿಡಿಯಲಿಕ್ಕಾಗದೆ ಬೀಳುತ್ತ ಏಳುತ್ತ ಮುಂದೆ ಧಾವಿಸುತ್ತಿದ್ದಾಳೆ. ಎದುರು ರಥ ಜ್ವಲಿಸುತ್ತಿದೆ. ಬೆಳಕಿಗೆ ಕಣ್ಣು ಕುಕ್ಕುತ್ತಿವೆ. ಅದರ ಝಳಕ್ಕೆ ಮೈಯೆಲ್ಲ ಕರಗಿ ಕ್ರಮೇಣ ತಾನು ಇಲ್ಲದಂತಾಗುತ್ತಿದ್ದೇನೆ. ಹವೆಯಂತೆ ವಿರಲವಾಗುತ್ತಿದ್ದೇನೆ. ನಿರ್ಲಿಪ್ತಳಾಗಿ ಎಲ್ಲರನ್ನೂ ನುಗಿಸುತ್ತ ರಥದ ಕಡೆಗೆ ಓಡಿದಳು.

ತಾಯಿ ಏನೂ ತೋಚದೆ ಹಾಗೇ ನಿಂತುಬಿಟ್ಟಿದ್ದಾರೆ. ಹತ್ತಿರವಿದ್ದ ಹೆಂಗಸರೆಲ್ಲ ಅವರನ್ನು ಮನಸ್ವಿಯಾಗಿ ಬೈದರು. ಹುಚ್ಚಮಗಳು ಅವಲಕ್ಷಣವಾಗಿ ಮಾತಾಡುತ್ತ ರಥವನ್ನು ಮುಟ್ಟಿ ಮೈಲಿಗೆ ಮಾಡುತ್ತಿದ್ದರೆ ತಾಯಿಯಾದವಳು ಅದನ್ನು ತಡೆಯಬಾರದೇನು? ಹುಚ್ಚಮಗಳನ್ನು ಕಟ್ಟಿಕೊಂಡು ಇಲ್ಲೇಕೆ ಬರಬೇಕು?…. ಮಠದ ಆಚಾರ್ಯರಿಗೂ ಇದರಿಂದ ಬಹಳ ಅಸಮಾಧಾನವಾಯಿತು. ರಥೋತ್ಸವದ ವೇಳೆಯಲ್ಲಿ ಎಂಥ ಅಶುಭ ಮಾತು? ಹುಚ್ಚಿಯಾದರೇನಾಯಿತು, ಇಂಥ ಶುಭ ಗಳಿಗೆಯಲ್ಲಿ ರಥಕ್ಕೆ ಬೆಂಕಿ ಹತ್ತಿದೆಯೆಂದು ಕೂಗುವದೆಂದರೆ? ಆ ಹುಚ್ಚಿಯನ್ನು ತಡೆಯಿರಿ ಎಂದು ಅವರಿವರು ಒದರಿ ಹೇಳುವಷ್ಟರಲ್ಲಿಯೇ ತಂಗಿಯು ಹೋಗಿ ರಥದ ಗಾಲಿಯನ್ನು ಅಪ್ಪಿಕೊಂಡು ನಿಂತುಬಿಟ್ಟಿದ್ದಳು.

ಸುತ್ತಲೂ ಧೂಳುಧೂಳಾದಂತಿದೆ. ಒಬ್ಬರ ಮುಖ ಇನ್ನೊಬ್ಬರಿಗೆ ಕಾಣಿಸುವುದಿಲ್ಲ. ಆಕಾಶವೇ ಹರಿದು ಬಿದ್ದಂತೆ ಧಾರೆಧಾರೆಯಾಗಿ ಮಳೆ ಸುರಿಯತೊಡಗಿದೆ. ಜನರೆಲ್ಲರೂ ಚೆಲ್ಲಾಪಿಲ್ಲಿಯಾಗುತ್ತಿದ್ದಾರೆ. ಇನ್ನು ಸ್ವಲ್ಪ ಅಂತರ ಸಾಗಿದರೆ ರಥವು ತನ್ನ ಕಟ್ಟೆಯನ್ನು ಮುಟ್ಟುವದು.

ತಂಗಿಯು ಗಾಲಿಯನ್ನು ಗಟ್ಟಿಯಾಗಿ ಅಮುಕಿಕೊಂಡು ಸ್ಮೃತಿ ತಪ್ಪಿದ್ದಂತಿದ್ದಾಳೆ. ಕಣ್ಣಲ್ಲಿ ಒಂದೇ ಸವನೆ ನೀರು ಹರಿಯುತ್ತಿದೆ. ಉಳಿದ ಜನರು ಜಯಜಯಕಾರವನ್ನು ಬೊಬ್ಬಿಟ್ಟರು. ರಥವನ್ನು ಎಳೆಯಲು ಮತ್ತೆ ಅಣಿಯಾದರು.

ತಾಯಿಯು ತಂಗಿಯನ್ನು ಹುಡುಕುತ್ತಿದ್ದರು. ತಮ್ಮ, ತಂದೆ, ಅವರಲ್ಲಿ ಈಗ ಯಾರು ಸಿಕ್ಕರೂ ಅವರಿಗೆ ಅಪರಿಮಿತ ಸಮಾಧಾನವಾಗಬಹುದಾಗಿತ್ತು. ಆದರೆ ಎಲ್ಲರೂ ಎಲ್ಲೆಲ್ಲಿಯೋ ತಪ್ಪಿಸಿಕೊಂಡು ಹೋಗಿದಾರೆ. ಇನ್ನು ಯಾರನ್ನು ಎಲ್ಲೆಂದು ಹುಡುಕ ಬೇಕು?… ರಥದ ಗಾಲಿಯ ಕೆಳಗೆ ಸಿಕ್ಕರೆ ತಂಗಿಯು ನುಚ್ಚು ನೂರಾಗಿ ಹೋಗುವಳು….ಮಳೆಯಲ್ಲಿ, ಈ ಧೂಳಿನಲ್ಲಿ ಏನೂ ಕಾಣಿಸುವದೇ ಇಲ್ಲ.

ತಂದೆಯು ಆ ವಾರದ ಗೋಡೆಯನ್ನು ಗಟ್ಟಿಯಾಗಿ ಹಿಡಿದು ನಿಂತಿದ್ದರು. ಮಳೆಯು ಧಾರೆಧಾರೆಯಾಗಿ ತಲೆಯ ಮೇಲೆ ಇಳಿಯುತ್ತಿದ್ದರೂ ಅವರು ಅಲ್ಲಿಂದ ಚಲಿಸುವ ಯೋಚನೆ ಮಾಡಲಿಲ್ಲ. ಗೋಡೆಗೆ ತಲೆಯಾನಿಸಿ, ಮುಖ ಹಚ್ಚಿ, ಗೋಡೆಗುಂಟ ಆಕಾಶದೆಡೆಗೆ ನೋಡಿದರು. ಭವ್ಯವಾದ ಗೋಡೆ ಎತ್ತರವಾಗುತ್ತ ಚೂಪಾಗುತ್ತ ನಡೆದು, ಆಕಾಶದಲ್ಲಿ ಇರಿದು ಚುಚ್ಚಿಟಂತೆ ಕಾಣಿಸುತ್ತದೆ. ಗೋಡೆ ಗುಂಟ ಕೆಳಗಿಳಿಯುವ ಮಳೆ ನೀರಿನಲ್ಲಿ ಗೋಡೆಯ  ಹುರಿಮಂಜು ಬೆರೆತು ಕೆಂಪಾಗಿ ರಕ್ತದಂತೆ ಹನಿಹನಿಯಾಗಿ ಒಸರುತ್ತಿದೆ. ಗೋಡೆಯ ತಪತಪ ತೊಯ್ದು ಹಸಿಮಣ್ಣಿನ ವಾಸನೆ ಬರುತ್ತದೆ. ತಂದೆಯು ಪುನಃ ಪುನಃ ನಾಲಿಗೆಯಿಂದ ಗೋಡೆಯನ್ನು ನೆಕ್ಕತೊಡಗಿದರು.

ಹಸಿವೆಯಾಗಿದೆ. ಗಂಟಲೊಣಗಿ ಬಂದಿದೆ. ಓತಪ್ರೋತವಾಗಿ ನೀರು ತಲೆಯ ಮೇಲೆ ಸುರಿಯುತ್ತಿದೆ. ಗೋಡೆಯ ಆಚೆಗೆ ಹಾದಿಯಲ್ಲಿ ಸಾವಿರಾರು ಅರ್ಧ ಉಂಡೆದ್ದ ಎಲೆಗಳು ಉಣ್ಣುವವರಿಲ್ಲದೆ ತೆರೆದು ಬಿದ್ದಿವೆ. ತಂದೆಗೆ ಆಯಾಸದಿಂದಲೋ ಬೇಸರದಿಂದಲೋ ಕಣ್ಣ ರೆಪ್ಪೆಗಳು ಮೆಲ್ಲನೆ ಮುಚ್ಚತೊಡಗಿದವು. ಸಾವಕಾಶವಾಗಿ, ಅನಿಸಿ ನಿಂತ ಗೋಡೆಗುಂಟ ಜರೆದು, ಅವರು ಕೆಳಗೆ ಕುಸಿದು ಬಿದ್ದರು.

ರಥ ಎಳೆಯುವವರ ಕೈ ಜರೆಯುತ್ತಿವೆ. ಹೊರಟ ರಥ ಒಮ್ಮೆಲೆ ಕೆಸರಿನಲ್ಲಿ ಸಿಕ್ಕಂತೆ ನಿಂತುಬಿಟ್ಟಿತು. ಎಲ್ಲರೂ ಜಯಜಯಕಾರ ಮಾಡಿ ಮತ್ತೆ ಸನ್ನದ್ದರಾದರು. ಇದಿರುಮಳೆ ರಭಸವಾಗಿ ಮುಖದಲ್ಲಿ, ಕಣ್ಣಲ್ಲಿ  ಗೊಜ್ಜುತ್ತಿದೆ. ಹುಟ್ಟುಗುರುಡರಂತೆ ಜನರು ರಥವನ್ನು ನೇರವಾಗಿ ಜಗ್ಗಿಯೇ ಜಗ್ಗುತ್ತಿದ್ದಾರೆ. ಪ್ರಾಣಿಗಳಂತೆ ಸರ್ವಶಕ್ತಿಯನ್ನೂ ಪಣಕ್ಕಿಟ್ಟು ಹೆಣಗುತ್ತಾರೆ. ಆದರೆ ರಥ ಸ್ವಲ್ಪವೂ ಸರಿಯಲೊಲ್ಲದು. ಗಾಲಿಯ ಕೆಳಗೆ ಏನಾದರೂ ಸಿಕ್ಕಿರಬೇಕು ಅಥವಾ ಗಾಲಿಯೇ ನೆಲದಲ್ಲಿ ಹೂತು ಹೋಗಿರಬೇಕು.

ತಾಯಿಯ ಮೈ ತೊಯ್ದು ತಪ್ಪಂಡಿಯಾಗಿದೆ. ಬಹಳ ಹೊತ್ತು ಅವರು ಸುತ್ತೂ ನೋಡಿದರು. ಆದರೆ ತಂಗಿಯು ಎಲ್ಲಿಯೂ ಕಾಣಿಸಲಿಲ್ಲ. ರಥವು ಯಾವಾಗಲೋ ದಾರಿ ಸಾಗದೆ ನಿಂತುಬಿಟ್ಟಿದೆ. ಒಂದೇ ಸವನೆ ಎಡೆಬಿಡದೆ ಸುರಿಯುವ ಮಳೆಯಿಂದ ನದಿಯ ಪಾತ್ರವು ತುಂಬಿ ಬಂದಿರಬೇಕು. ತಾಯಿ ನದಿಗೆ ಓಡಿದರು.

ಅರಿವೆಯೆಲ್ಲ ಮೈಗೆ ತಪತಪ ಅಂಟಿಕೊಂದಿದೆ. ನಿರ್ಜನವಾದ ಬೀದಿಯಲ್ಲಿ ಅದು ಬಹುಶಃ ಯಾರ ಲಕ್ಷಕ್ಕೂ ಬರಲಿಕ್ಕಿಲ್ಲ. ಬೇಗ ಬೇಗ ನಡೆಯಬೇಕೆಂದು ಕಾಲು ಕ್ಷಣ ಕ್ಷಣಕ್ಕೆ ಜರೆಯುತ್ತಿವೆ. ಬೀದಿಗುಂಟ ಹರಿದು ನೀರು ನದಿಯ ಕಡೆಗೆ ನುಗ್ಗುತ್ತಿದೆ. ಉಂಡಿದ್ದ ಎಲೆಗಳೆಲ್ಲ ಅಸ್ತವ್ಯಸ್ತವಾಗಿ ಬಿದ್ದುಬಿಟ್ಟಿವೆ. ದೊನ್ನೆಗಳು ದೋಣಿಗಳಂತೆ ತೇಲುತ್ತ ನದಿಯ ಕಡೆಗೆ ಸಾಗಿವೆ.

ಎಂಜಲು-ಮುಸುರೆಯನ್ನು ತುಳಿಯುತ್ತ ತಾಯಿಯು ನದಿಯ ಕಡೆಗೆ ಓಡುತ್ತಿದ್ದರು.

ಲೇಖಕರು

ಕೇವಲ ಕೆಲವೇ ಕಥೆಗಳನ್ನು ಬರೆದು ಕನ್ನಡ ಕಥಾಲೋಕದಲ್ಲಿ ಶಾಶ್ವತ ಸ್ಥಾನ ಪಡೆದಿರುವ ರಾಘವೇಂದ್ರ ಖಾಸನೀಸ (ಜ. ೧೯೩೩) ವಿಜಾಪುರ ಜಿಲ್ಲೆಯವರು. ಎಂ.ಎ ಹಾಗೂ ಡಿ.ಲಿಟ್. ಪದವಿಗಳನ್ನು ಪಡೆದಿರುವ ಅವರು ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಗ್ರಂಥಪಾಲಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವರು. ಖಾಸನೀಸರ ಕಥೆಗಳು ಎಂಬ ಸಂಗ್ರಹದಲ್ಲಿ ಅವರ ಕಥೆಗಳಿವೆ. ಬೇಡಿಕೊಂಡವರು ಎಂಬ ನೀಳ್ಗತೆಯೊಂದನ್ನು ಬರೆದಿರುವರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿಯನ್ನು ಪಡೆದಿರುವರು.

 

ಆಶಯ

ಈ ಕಥೆಯನ್ನು ಖಾಸನೀಸರ ಕಥೆಗಳು ಎಂಬ ಸಂಕಲನದಿಂದ ಆಯ್ದುಕೊಳ್ಳಲಾಗಿದೆ. ಯಾವುದೇ ಕುಟುಂಬದ ಬದುಕಿನ ಅದರದೇ ಆದ ಬದುಕಿನ ಲಯಗಳಿರುತ್ತವೆ. ಈ ಲಯ ಸರಿಯಾಗಿದ್ದರೆ ಜೀವನ ಕ್ರಮ ಸುಸಂಬದ್ಧವಾಗಿರುತ್ತದೆ. ತಪ್ಪಿದರೆ ಮನುಷ್ಯ ಸಂಬಂಧಗಳು ಹದಗೆಡುತ್ತದೆ. ಈ ಕಥೆಯಲ್ಲಿ ಕಳ್ಳುಬಳ್ಳಿಯ ಮನುಷ್ಯ ಸಂಬಂಧಗಳಲ್ಲಿ ತಿಳುವಳಿಕೆಯ ಅಭಾವದಿಂದ ಬಿರುಕು ಕಾಣಿಸಿಕೊಂಡು, ಅದು ದುರಂತಕ್ಕೆ ಕಾರಣವಾಗಿದೆ ಎಂಬುದು ಇಲ್ಲಿ ವ್ಯಕ್ತವಾಗಿದೆ.

ಪದಕೋಶ

ನಿರೂಪಾಯ = ಉಪಾಯವಿಲ್ಲದೆ, ನಿಸ್ತೇಜ = ಕಳೆಗುಂದಿದ.    ಆಜ್ಞಾಧಾರಕ = ಹೇಳುವ ಮಾತನ್ನು ಪಾಲಿಸುವವ. ಖಜೀಲ = ನಾಚಿಕೆ. ಮ್ಲಾನ = ಬಾಡಿದ. ವಿಸ್ಮೃತಿ = ಮರೆವು. ಉದ್ವಿಗ್ನ = ಆವೇಶ. ವಿಕ್ಷಿಪ್ತ = ಚಂಚಲ. ನಿರ್ವಿಕಾರ = ವಿಕಾರವಲ್ಲದ. ವಿಚ್ಛಿನ್ನ = ಛಿದ್ರ. ಉತ್ಕಟೇಚ್ಛೆ = ತೀವ್ರವಾದ ಹಂಬಲ. ಓತಪ್ರೋ = ಎಡೆಬಿಡದೆ, ನಿರಂತರ.

ಪ್ರಶ್ನೆಗಳು

೧. ಮಂತ್ರಾಲಯ ತಲುಪುವ ಮುನ್ನ ಬಸ್ಸಿನಲ್ಲಿದ್ದ ಹೆಂಗಸರ ನಡುವೆ ಮಾತುಕಥೆಗಳ ಸ್ವಾರಸ್ಯವನ್ನು ಬರೆಯಿರಿ.

೨. ಮಂತ್ರಾಲಯದ ನದಿ ದಂಡೆಯ ಮೇಲೆ ತಾಯಿ, ತಂದೆಗೆ ಆದ ಅನುಭವಗಳನ್ನು ಬರೆಯಿರಿ.

೩. ಕುಟುಂಬದ ಯಜಮಾನನಾಗಿ ತಂದೆಯ ಮನಸ್ಥಿತಿಯನ್ನು ವಿವರಿಸಿರಿ.

೪. ತಾಯಿಯ ವಿಕ್ಷಿಪ್ತತೆಯು ಕುಟುಂಬದ ಮೇಲಾದ ಪರಿಣಾಮಗಳನ್ನು ಬರೆಯಿರಿ?

೫. ತಮ್ಮನ ಸಂಕಟಕ್ಕೆ ಕಾರಣಗಳೇನು? ವಿವರಿಸಿರಿ.

೬. ತಾಯಿಯ ಸ್ವಭಾವವನ್ನು ತಮ್ಮ, ತಂದೆ ಹೇಗೆ ಪರಿಭಾವಿಸುತ್ತಾರೆ? ವಿವರಿಸಿರಿ.

೭. ತಂಗಿಯ ಮನಸ್ಥಿತಿಯನ್ನು ವಿವರಿಸಿರಿ.

೮. ತಬ್ಬಲಿಗಳು ಕಥೆಯ ಶೀರ್ಷಿಕೆಯ ಜೌಚಿತ್ಯವನ್ನು ವಿವರಿಸಿರಿ.

ಹೆಚ್ಚಿನ ಓದು

ರಾಜಶೇಖರ ನೀರಮಾನ್ವಿ: ಹಂಗಿನರಮನೆಯ ಹೊರಗೆ-ಕಥೆ

ಆಲನಹಳ್ಳಿ ಶ್ರೀಕೃಷ್ಣ: ಪರಸಂಗದ ಗೆಂಡೆತಿಮ್ಮ- ಕಾದಂಬರಿ

ರಾಘವೇಂದ್ರ ಖಾಸನೀಸ: ಖಾಸನೀಸರ ಕಥೆಗಳು-ಕಥೆಗಳು.