ಬಹಳವಾದರೆ ಇಡೀ ಪಾದವು ಮುಳುಗುವಷ್ಟು ನೀರಿರಬೇಕು ಆ ಹಳ್ಳದಲ್ಲಿ. ಇಳಿಜಾರಿನಲ್ಲಿ ಸ್ವಲ್ಪ ಮುಂದಕ್ಕೆ ಹರಿದು ನದಿಗೆ ಕೂಡಿದ್ದರಿಂದ ನೀರಿಗೆ ಸಾಕಷ್ಟು ಸೆಳವೂ ಇತ್ತು. ಆದರೆ ನಡು ನೀರಲ್ಲಿ ಬಸ್ಸಿನ ಗಾಲಿಗಳು ಸಿಕ್ಕುಬೇಳುವಷ್ಟು ಕೆಸರು ಕಲೆತಿರುವ ಅಂದಾಜು ಸ್ವತಃ ಡ್ರಾಯವ್ಹರನಿಗೇ ಇರಲಿಲ್ಲ. ಯಂತ್ರವನ್ನು ಪೂರ್ಣವೇಗದಲ್ಲಿ ಪುನಃ ಪುನಃ ಸುರುಮಾಡಿ “ಸ್ಟಿಯರಿಂಗ್ ವ್ಹೀಲನ್ನು ತಿರುವಿ ತಿರುವಿ ಡ್ರಾಯವ್ಹರ್ ಬೇಸತ್ತರೂ ಬಸ್ಸು ಮುಂದೆ ಹೋಗಲೊಲ್ಲದು, ಹಿಂದೆ ಸರಿಯಾಲೊಲ್ಲದು. ಹೊರಗೆ ನೀರು ನಿಮಿಷ ನಿಮಿಷಕ್ಕೆ ಏರತೊಡಗಿದೆ. ಡ್ರಾಯವ್ಹರನ್ನು ಹತಾಶನಾಗಿ ಸಿಟ್ಟನಿಂದ “ಸ್ಟಿಯರಿಂಗ್ ವ್ಹೀಲ”ನ್ನು ಒಮ್ಮೆ ಪುರ್ಣ ತಿರುವಿ ಕೈಬಿಟ್ಟುಬಿಟ್ಟು. ಬಸ್ಸು ಒಮ್ಮೆಲೆ ವೇಗದಿಂದ ಮುಂದೆ ಹಾರಿ ಗಕ್ಕನೆ ನಿಂತುಬಿಟ್ಟಿತು.

ತಂಗಿಯು ಚಿಟ್ಟನೆ ಚೀರಿದಳು. ತಲೆಯು ಹಿಂದೆ ಸೀಟಿನ ಸಳಿಗೆ ಜಜ್ಜಿತ್ತು. ಅರ್ಧ ತೆರೆದು ನಿಂತ ಬಾಗಿಲಿನಿಂದ ನೀರು ಒಳಗೆ ನುಗ್ಗಿತು. ಒಳಗೆ ನಿಂತವರೆಲ್ಲ ಝೋಲಿ ತಪ್ಪಿ ಒಬ್ಬರ ಮೇಲೊಬ್ಬರು ಬಿದ್ದುಬಿಟ್ಟರು. ತಂಗಿಗೆ ಈ ಎಲ್ಲ ಗೊಂದಲದ ಅರ್ಥವೇ ಆಗಲಿಲ್ಲ. ಕಿಟಕಿಯಿಂದ ದೂರದಲ್ಲಿ ದೊಡ್ಡ ದೊಡ್ಡ ಬಂಡೆಗಲ್ಲುಗಳು ಕಾಣಿಸಿದವು. ನೋಡು ನೋಡುತ್ತಲೇ ನೀರು ಏರಿ ಬಂದು ಬಸ್ಸನ್ನೆಲ್ಲ ಸುತ್ತಿಕೊಂಡಂತೆ ಅವಳಿಗೆನಿಸಿತು. ತಂಗಿ ಮುಖ ಮುಚ್ಚಿಕೊಂಡು ಮತ್ತೊಮ್ಮೆ ಚೀರಿದಳು.

ತಂದೆ ಹಿಂದಿನ ಸಾಲಿನಲ್ಲಿ ತೂಕಡಿಸುತ್ತ ಕುಳಿತವರು, ಒಮ್ಮೆಲೆ ಬಸ್ಸು ನಿಂತು ರಭಸಕ್ಕೆ ಎಚ್ಚೆತ್ತರು. ಎಚ್ಚೆತ್ತು ಸುತ್ತಲೂ ಒಮ್ಮೆ ದೃಷ್ಟಿ ಹಾಯಿಸಿ ಮತ್ತೆ ಮಲಗಿಕೊಂಡರು. ತಂಗಿಯು ಎರಡನೇ ಸಲ ಚೀರಿದ್ದನ್ನು ಕೇಳಿ ಗಡಬಡಿಸಿಕೊಂಡು ಮತ್ತೆ ಎದ್ದು ಕುಳಿತರು. ಸುತ್ತಲೂ ಏನೋ ಅನಾಹುತ ನಡೆದಿದೆ ಎನ್ನುವುದು ಅವರಿಗೆ ಕ್ರಮೇಣವಾಗಿ ಅರ್ಥವಾಗ ತೊಡಗಿತು.

ತಾಯಿ ಬಹಳ ಗಾಬರಿಯಾಗಿರಲಿಲ್ಲ. ತಂಗಿಯ ಮಗ್ಗಲಿಗೆ ಕುಳಿತವರು, ಅವಳು ಚೀರಿದನ್ನು ನೋಡಿ ಅವಳ ಭುಜವನ್ನು ಗಟ್ಟಿಯಾಗಿ ಹಿಡಿದಿಡಲು ಪ್ರಯತ್ನಿಸಿದರು. ಅವರು ಹೊಟ್ಟೆಯಲ್ಲಿ ತಣ್ಣೀರು ಸುರುವಿದಂತಾಯಿತು. ಅವರಿಗೆನಿಸಿತು, ತಂಗಿಯ ಹುಚ್ಚು ಮತ್ತೆ ಮರುಕಳಿಸಿದೆಯೆಂದು. ಇಲ್ಲವಾದರೆ ಅವಳು ಹಾಗೇಕೆ ಅಷ್ಟು ಅಸಹ್ಯವಾಗಿ ಚೀರಿದಳು?

ಪ್ರಯತ್ನ ಪೂರ್ಣಕವಾಗಿ ಇವರನ್ನೆಲ್ಲ ತಪ್ಪಿಸಿ ಮುಂದಿನ ಸೀಟಿನಲ್ಲಿ ಹೋಗಿ ಕುಳಿತಿದ್ದ ತಮ್ಮನಿಗೆ ತಂಗಿಯು ಚೀರಿದ್ದು ಕೇಳಿಸಿರಲಿಲ್ಲ. ಅವನ ಮಗ್ಗುಲಲ್ಲಿ ಮರೆಬಿಟ್ಟು ಕುಳಿತಿದ್ದ ಹೆಂಗಸು ಅವನ ಮೈಮೇಲೆ ಬಿದ್ದುಬಿಟ್ಟಿದ್ದಳು. ಅವಳು ಮುಡಿದಿದ್ದ ಮಲ್ಲಿಗೆಯ ವಾಸನೆ ಅವನಿಗೆ ಆ ಅಪಘಾತವನ್ನು ಮರೆಯಿಸಿಬಿಟ್ಟಿತ್ತು. ಎಷ್ಟೋ ದಿವಸಗಳ ನಂತರ ಹೆಣ್ಣಿನ ಮೈ ಅವನ ಮೈಗೆ ಅಷ್ಟು ರಭಸವಾಗಿ ತಾಕಿತ್ತು. ಸ್ಪರ್ಶ ಹಾಗೂ ವಾಸನೆ ಇವೆರಡರ ಅನುಭವವು ಒಂದರಲ್ಲೊಂದು ಬೆರೆತು ಅವಳ ಸ್ಪರ್ಶಕ್ಕೇನೇ ಮಲ್ಲಿಗೆಯ ಪರಿಮಳವಿದ್ದಂತೆ ಅವನಿಗೆನಿಸಿತು. ಮರುಕ್ಷಣವೇ, ತಾಯಿಯು ಹಿಂದಿನ ಸೀಟಿನಿಂದ ದುರಗುಟ್ಟಿ ನೋಡುತ್ತಿರಬಹುದೆಂದು ಹೆದರಿಕೆಯಾಯಿತು. ನಿರುಪಾಯನಾಗಿ ದೂರ ಸರಿದು ಕುಳಿತುಕೊಂಡ.

ಬಸ್ಸು ನಿಂತಲ್ಲೇ ನಿಂತಿತ್ತು. ಡ್ರಾಯವ್ಹರನ್ನು ಬೇಸತ್ತು, ಬೀಡಿಯನ್ನು ಬಾಯಲ್ಲಿ ಇಟ್ಟು, ಕಡ್ಡಿಕೊರೆದು, ಮೇಲೆ ಮುಖ ಮಾಡಿ ಪುಕ್ಕೆಂದು ಹೊಗೆ ಬಿಟ್ಟ. ಮುಂದಿನ ಬಾಗಿಲ ಹತ್ತಿರ ನಿಂತಿದ್ದ ಕಂಡಕ್ಟರ್, ಈ ಅಪಘಾತವೆಲ್ಲ ಒಂದು “ರುಟೇನ್” ಎನ್ನುವಂತೆ ಒಮ್ಮೆ ಬಸ್ಸಿನಲ್ಲಿದ್ದವರ ಕಡೆಗೆಲ್ಲ ಕಣ್ಣು ಹಾಯಿಸಿ ನಕ್ಕ.

“ಬಸ್ಸನ್ನ ನೀರಿನಲ್ಲಿ ಹಾಕಿ ನಮ್ಮನ್ನೆಲ್ಲ ಇಲ್ಲಿಯೆ ಅಪರ್ಣ ಮಾಡಬೇಕಂತೀಯೇನಯ್ಯಾ. ಮಹಾರಾಯಾ? ಸಮೀಪದಲ್ಲಿ ಕುಳಿತಿದ್ದ ವೃದ್ದ ವಿಧವೆಯ ಕಂಡಕ್ಟರನ ಕಡೆಗೆ ಮುಖ ಮಾಡಿ ಡ್ರಾಯವ್ಹರನ ಕಡೆಗೆ ಕಣ್ಣು ಮಾಡಿ ಸಿಡಿಮಿಡಿಗೊಂಡಳು. ಕೈಯಲ್ಲಿ ಗಂಟನ್ನು, ಅದು ಒಂದು ಕೂಸು ಎನ್ನುವಂತೆ ಅವಚಿಕೊಂಡು ಹಿಡಿದು ಅತ್ತಿತ್ತು ನೋಡಿದಳು, ತನ್ನ ತಕರಾರನ್ನು ಯಾರಾದರೂ ಅನುಮೋದಿಸುತ್ತಾರೆಯೋ ಎಂದು. ಆದರೆ ಎಲ್ಲರೂ ಸುಮ್ಮನಿದ್ದುದನ್ನು ನೋಡಿ ಕಡೆಗೆ ತಾನೇ ಮುಂದುವರಿಸಿದಳು: “ಕಾಶಿಯಿಂದ ರಾಮೇಶ್ವರದವರೆಗೆ ಎಲ್ಲ ತೀರ್ಥಯಾತ್ರೆ ಮುಗಿಸಿ ಬಂದಿದ್ದೇನೆ. ತಿರುಪತಿ ಬೆಟ್ಟ ಬಸ್ಸಿನಲ್ಲಿ ಹತ್ತಿದ್ದೇನೆ. ಬದರಿಗೆ ಕೂಡ ಬಸ್ಸಿನಲ್ಲಿಯೇ ಹೋಗಿ ಬಂದಿದ್ದೇನೆ. ಆದರೆ ಇಂಥ ಅನಾಹುತ ಎಲ್ಲಿಯೂ ಕಾಣಲಿಲ್ಲಮ್ಮಾ. ಈ ಪ್ರಾಯಿವ್ಹೆಟ್ ಬಸ್ ಸರ್ವೀಸಗಳ ಹಣೆಬರಹೇ ಇಷ್ಟು. ಜಟಕಾ ನಡಿಸೋ ಪೋಲಿಗಳನ್ನು ಬಸ್ ನಡಿಸೋಕೆ ನೇಮಿಸ್ತಾರೆ.” ಹಾಗೂ ತಾನು ಅಂದದ್ದನ್ನು ಸಮರ್ಥಿಸಿಕೊಳ್ಳಲು ಅವಳು ಕೈಗಂಟಿನಲ್ಲಿದ್ದ ಜಪಮಾಲೆಯನ್ನು ತೆಗೆದುಕೊಂಡು ಎಣಿಸತೊಡಗಿದಳು. ಉತ್ತರ ಕೊಡುವದಂತೂ ದೂರವೇ ಉಳಿಯಿತು, ಅವಳ ಮಾತು ಮುಗಿಯುವವರೆಗೆ ಕೂಡ ಕಂಡಕ್ಟರ್ ಅಲ್ಲಿ ನಿಂತಿರಲಿಲ್ಲ. ಯಾವಾಗಲೋ ದೂರ ಸರಿದು ಹೋಗಿದ್ದ. ಡ್ರಾಯವ್ಹರನ ಹಿಂದಿನ ಸೀಟಿನಲ್ಲಿಂದ ಕಪ್ಪು ಬಣ್ಣದ ವೈಶ್ಯನೊಬ್ಬ ದೊಡ್ಡ ದನಿಯಲ್ಲಿ ಕಂಠಶೋಷಣೆ ನಡೆಸಿದ್ದ.

ಕಡೆಯ ಪ್ರಯತ್ನವೆಂದು ಕಂಡಕ್ಟರನು ಕೆಳಗಿಳಿದು ಬಸ್ಸಿನಲ್ಲಿದ್ದವರ ಸಹಾಯದಿಂದ ಬಸ್ಸನ್ನು ನೂಕಿ ದಣ್ಡೆಗೆ ತರಲು ಪ್ರಯತ್ನಿಸಿದ. ಕೆಸರಿನಲ್ಲಿ ಹೂತ ಗಾಲಿಗಳು ಕಿತ್ತುಕೊಂಡಿದ್ದವು. ಬುರುಗು ಬುರುಗಾಗಿ ನೀರು ಗಾಲಿಯ ಹತ್ತಿರ ಇಬ್ಬದಿಯಾಗುವುದನ್ನು ತಂಗಿ ಕಿಟಕಿಯಿಂದ ದಿಟ್ಟಿಸುತ್ತ ಕುಳಿತಿದ್ದಳು. ನೀರಿನಲ್ಲಿ ತೇಲುತ್ತ ಹೊರಟ ಬಸ್ಸು, ತಿರುಗಣಿಯ ಮಡುವಿನಲ್ಲಿ ಸಿಕ್ಕು ಬೊಗರಿಯಂತೆ ಗಿರಿಗಿರಿ ತಿರುಗಿದಂತೆ ಅವಳಿಗೆ ಭಾಸವಾಯಿತು.

ಬಸ್ಸನ್ನು ದಂಡೆಗೆ ಮುಟ್ಟಿಸಿ ಕಂಡಕ್ಟರನ್ನು ಹಿಡಿದು ಎಲ್ಲರೂ ಒಬ್ಬೊಬ್ಬರಾಗಿ ಬಸ್ಸನ್ನೇರುವಷ್ಟರಲಿಯೇ ಬಹಳ ಹೊತ್ತಾಗಿತ್ತು. ಬಸ್ಸು ವೇಗವಾಗಿ ಮುಂದೆ ಹೊರಟಿತು.

“ಎಷ್ಟೆಲ್ಲ ತೀರ್ಥಯಾತ್ರೆ ಮುಗಿಸಿ ಬಂದಿದ್ದೀರಿ. ನೀವು ತುಂಬ ಪುಣ್ಯವಂತರು, ತಾಯೆ. ಈಗೇನು ನೀವೂ ಮಂತ್ರಾಲಯಕ್ಕೇನಾ ಹೊರಟಿದ್ದು?” ಜಪಮಾಲೆಯ ಎಣಿಕೆಯಲ್ಲಿ ಗರ್ಕಾಗಿದ್ದ ವೃದ್ಧವಿಧವೆಯನ್ನು ನೋಡುತ್ತ ಕೌತುಕದಿಂದ ಆ ಹೆಂಗಸು ಕೇಳಿದಳು. ಅವಳ ಮುಖ ನಿಸ್ತೇಜವಿತ್ತು. ಹಣೆಯ ಮೇಲೆ ಬಹಳ ದೊಡ್ಡ ಕುಂಕುಮವಿದೆ. ಅವಳಿಗೆ ಏನಾದರೂ ರೋಗವಿರಬೇಕು. ಮೈಯೊಣಗಿ ಕೈಯ ಮೇಲಿನ ನರಗಳೆಲ್ಲ ಉಬ್ಬಿ ನಿಂತಿವೆ. ಕಣ್ಣುಗಳು ಒಳನಟ್ಟು ಕೆಳಗೆಲ್ಲ ಕಪ್ಪು ಗೆರೆಗಳು ಬಿದ್ದಿವೆ. ಅವಳ ಮೈಗೆ ಮೈ ಹಚ್ಚಿ, ಅಶಕ್ತರಾಗಿದ್ದ ಇಬ್ಬರು ಹುಡುಗರು ಕುಳಿತಿದ್ದರು.

ವಿಧವೆ ಹೇಳಿದಳು:”ಎರಡು ವರ್ಷದಿಂದ ಮನೆಯನ್ನೇ ಕಂಡಿಲ್ಲ. ತೀರ್ಥ ಯಾತ್ರೆಯಲ್ಲೇ ಇದ್ದೇನೆ. ಆದರೆ ಹೋಗಿ ನೋಡಬೇಕಾದದ್ದು ಇನ್ನೂ ಬಹಳ ಇದೆ. ನೀವೇನು ಈಗ…” ಅಷ್ಟರಲ್ಲಿಯೇ ನಡುರಸ್ತೆಯಲ್ಲಿ ನಿರಂಕುಶವಾಗಿ ಹೊರಟಿದ್ದ ಚಕ್ಕಡಿಯನ್ನು ಬದಿಗೆ ಸರಿಸಲು ಡ್ರಾಯವ್ಹರನು ಕಕರ್ಶವಾಗಿ ಒಂದೇ ಸವನೆ ಹಾರ್ನ ಬಾರಿಸಿದ್ದರಿಂದ, ಹಾರ್ನಿನ ಆ ಧ್ವನಿಯಲ್ಲಿ ಅವಳ ಶಬ್ದಗಳೆಲ್ಲ ಮುಳುಗಿ ಹೋದವು. ಹಾರ್ನಿನ ಸಪ್ಪಳವ್ಯ್ ನಿಂತಾಗ ಹೆಂಗಸು ವಿಧವೆಗೆ ಹೇಳುತ್ತಿದ್ದಳು: “….ಎಂಥೆಂಥ ಡಾಕ್ಟರರಿಗೆಲ್ಲ ತೋರಿಸಿದ್ದಾಯಿತು. ಪಥ್ಯ-ಉಪಚಾರವನ್ನು ಮಾಡಿದ್ದಾಯಿತು. ದೇವರು-ದಿಂಡರಿಗೆ ನಡಕೊಂಡದ್ದಾಯಿತು. ಏನೂ ಉಪಯೋಗವಾಗಲಿಲ್ಲ. ಯಾರೋ ಪುಣ್ಯಾತ್ಮರು ಹೇಳಿದರು, ಮಂತ್ರಾಲಯಕ್ಕೆ ಹೋಗಿ ರಾಯರ ಸೇವೆ ಮಾಡಿ ಬರ್ರಿ, ಖಂಡಿತ ಗುಣವಾಗುತ್ತದೆ ಎಂದು. ಅದಕ್ಕೆ ಮಂತ್ರಾಲಯಕ್ಕೆ ಹೊರಟಿದ್ದೇನೆ. ಏನು ಕಡಿಮೆಯಾಗುವುದು, ಏನು ಕತೆ? ಮತ್ತೇನೂ ಅಂಜಿಕೆಯಿಲ್ಲ ನನಗೆ. ಆದರೆ, ಪಾಪ, ಇಷ್ಟೇ ಎಳೇ ಹುಡುಗರು. ನಾಳೆನಾ ಹೋದರೆ ಈ ಹುಡುಗರ ಗತಿ ಏನು?” ತಾಯಿಯು ಅವರಿಬ್ಬರ ಕಡೆಗೆ ನೋಡಿದಳು. ತಾಯಿಯ ಕೈಯನ್ನು ಗಟ್ಟಿಯಾಗಿ ಹಿಡಿದು, ಆ ಹುಡುಗರಿಬ್ಬರು ಆಜ್ಞಾಧಾರಕರಾಗಿ ತಾಯಿಯ ಕಣ್ಣಲ್ಲಿ ನೋಡಿದರು.

“ಶ್ರದ್ಧೆ ಇಡಿರಮ್ಮ, ರಾಯರ ಮಹಾಮಹಿಮರು. ಎಲ್ಲಾ ಒಳ್ಳೆಯದಾಗುತ್ತದೆ. ಇಂಥ ಎಷ್ಟೋ ಘಟನೆಗಳನ್ನು ನಾನು ಸ್ವತಃ ನೋಡಿದವಳಿದ್ದೇನೆ.” ಯಾರು ಹಾಗೆ ಹೇಳಿದರೆಂಬುದನ್ನು ನೋಡಲು ಆ ಹೆಂಗಸು ತಿರುಗಿದಳು. ಮಧ್ಯಮ ವಯಸ್ಸಿನ ಒಬ್ಬ ಮುತೈದೆಯಿದ್ದಳು. ಅವಳ ಗಲ್ಲದ ತುಂಬೆಲ್ಲ ಅರಿಷಿಣ ಮೆತ್ತಿದೆ. ಅವಳ ಸಣ್ಣ ಮೂಗಿನ ಮಾನದಿಂದ, “ಮೂಗ್ಬೊಟ್ಟು” ಬಹಳೇ ದೊಡ್ಡದಿದೆ. ಮುತೈದೆ ಹೆಂಗಸನ್ನು ನೋಡಿ ನಕ್ಕಳು. ಹೆಂಗಸು ಏನೋ ಮಾತಾಡಬೇಕೆಂದು ಮನಸ್ಸಿನಲ್ಲಿ ಎಣಿಕೆ ಹಾಕುವಷ್ಟರಲ್ಲಿಯೇ, ಆ ಮುತೈದೆಯೇ ಮಾತಿಗೆ ಆರಂಭಿಸಿದಳು:

“ಮಂತ್ರಾಲಯ ಮಹಾ ಪುಣ್ಯಕ್ಷೇತ್ರವಮ್ಮ. ಎಂಥೆಂಥ ಅದ್ಭುತ ಇಲ್ಲಿ ನಡೆದು ಹೋಗಿದೆ. ಮಠದಲ್ಲಿ, ರಾಯರ ಮಂಗಳಾರತಿ ಕೊಡಲಿಕ್ಕೆ ಒಬ್ಬ ಹುಡುಗನಿದ್ದಾನೆ. ಅವನನ್ನು ನೀವು ಹೋದ ಮೇಲೆ ನೋಡಿಯೇ ನೋಡುತೀರಿ. ಆ ಹುಡುಗ ನಾಲ್ಕು ವರ್ಷಗಳ ಹಿಂದೆ ಇಲ್ಲಿ ಬಂದಾಗ ಅವನಿಗೆ ನಾಲಿಗೆ ಸರಿಸಲು ಕೂಡ ಬರುತ್ತಿರಲಿಲ್ಲ. ಹುಟ್ಟುಮೂಕ. ಆದರೆ ಈಗ “ಸೇವೆ” ಮಾಡಿ, ತೊದಲು ತೊದಲಾಗಿ ಮಾತಾಡುತ್ತಾನೆ. ಒಂದೇ, ಎರಡೇ. ಇಂಥ ಎಷ್ಟೋ ಘಟನೆಗಳನ್ನು ನಾನು ಕಣ್ಣಾರೆ ಕಂಡವಳಿದ್ದೇನೆ. ಒಂದು ತಿಂಗಳ ಹಿಂದೆಯಂತೂ ಅದ್ಭುತ ಘಟನೆ ನಡೆಯಿತು. ತಲೆ ಕೆಟ್ಟಿದೆಯೆಂದು ಒಬ್ಬ ಗಂಡಸನ್ನು ಸೇವೆಗೆ ಕರೆದುಕೊಂಡು ಬಂದಿದ್ದರು. ಆತ ದಿನಾಲು ಪೂಜೆಯ ವೇಳೆಗೆ ರಾಯರ ಮುಂದೆ ದಳದಳ ಕಣ್ಣೀರು ಸುರಿಸುತ್ತ ನಿಂತುಬಿಡುತ್ತಿದ್ದ. ಒಂದು ದಿವಸ ಏನೆನಿಸಿತೋ ಅವನಿಗೆ, ಯಾರಿಗೆ ಗೊತ್ತು, ರಾತ್ರಿ ನದಿಗೆ ಹೋದ. ಬಹುಶಃ ಜೀವ ಕೊಡಲಿಕ್ಕೆ ಇರಬೇಕು. ನೀರಲ್ಲಿ ಇಳಿಯುತ್ತಿದ್ದಾಗ ಅವನನ್ನು ಯಾರೋ ಕರೆದಂತಾಯಿತು. ಹಿಂದೆ ನೋಡಿದ. ಒಬ್ಬ ತೇಜಸ್ವಿಯಾದ ಆಚಾರ್ಯರು ನಿಂತಿದ್ದರು. ’ಸ್ನಾನ ಮುಗಿಯಿತು. ಶುಚಿಯಾದಿ. ಮೇಲೆ ಬಾ ಇನ್ನು’ ಎಂದು ಅವನನ್ನು ಮೇಲೆ ಕರೆದು ಹೇಳಿದರು: “ಇದೋ ಈ ಗೋಪಿಚಂದನ ಹಚ್ಚಿಕೋ. ಇಳಗೆ ಮಾರುತಿಯ ದರ್ಶನ ತೆಗೆದುಕೊಂಡು ಮನೆಗೆ ಹೋಗು.” ಮಂತ್ರಿಸಿದವನಂತೆ ಮೇಲೆ ಬಂದು ಗೋಪೀಚಂದನ ತೆಗೆದುಕೊಂಡು ಅವನು ಗುಡಿಯ ಕಡೆಗೆ ಹೊರಟ. ಅವನಿಗೆ ಆಗ ಏನೂ ಅನಿಸಿಯೇ ಇರಲಿಲ್ಲ. ಯಾರೋ ಒಬ್ಬ ಆಚಾರ್ಯರಿರಬೇಕು ಎಂದಿಷ್ಟೇ ಅನಿಸಿತ್ತು. ಆದರೆ ಮುಂದೆ ಹೋದವನು ಅಕಸ್ಮಾತ್ತಾಗಿ ಹಿಂದೆ ತಿರುಗಿ ನೋಡಿದ. ಅವರು ಅಲ್ಲಿರಲಿಲ್ಲ. ಅದೂ ಆಗ ಅವನ ಲಕ್ಷ್ಯಕ್ಕೆ ಬರಲಿಲ್ಲ. ನಡುರಾತ್ರಿಯಲ್ಲಿ ನೇರವಾಗಿ ಗುಡಿಯ ಆವಾರದೊಳಗೆ ಹೊಕ್ಕು ಮಾರುತಿಯ ದರ್ಶನ ತೆಗೆದುಕೊಂಡು, ರಾಯರ ವೃಂದಾವನದ ದರ್ಶನಕ್ಕೆ ಹೋದವ, ಅಲ್ಲೇ ಎಚ್ಚರತಪ್ಪಿ ಹೊಸ್ತಿಲ ಹತ್ತಿರ ಬಿದ್ದುಬಿಟ್ಟ. ಅವನಿಗೆ ಎಚ್ಚರವಾದಾಗ ಬೆಳಗಾಗಿತ್ತು. ಮಠದ ಪೂಜಾರಿಗಳೆಲ್ಲ ಬೆರಗುಬಿಟ್ಟು ನಿಂತು ಬಿಟ್ಟಿದ್ದರು. ಯಾಕೆಂದರೆ ರಾತ್ರಿ ಹತ್ತಕ್ಕೆ ಗುಡಿಯ ಬಾಗಿಲುಗಳನ್ನೆಲ್ಲ ಭದ್ರವಾಗಿ ಹಾಕಿ, ಬೀಗ ಹಾಕುತ್ತಾರೆ. ಒಳಗೆ ಹೋಗಲು ಬೇರೆ ಹಾದಿಯೇ ಇಲ್ಲ. ನೋಡಿದರೆ ಬಾಗಿಲುಗಳೆಲ್ಲ ಭದ್ರವಾಗಿ ಇದ್ದಂತೇ ಇವೆ. ಅವನನ್ನು ಕೇಳಿದರೆ ಅವನು ಆಗ ಏನೂ ಹೇಳುವ ಸ್ಥಿತಿಯಲ್ಲಿರಲಿಲ್ಲ. ಮುಂದೆ ಮೂರು ನಾಲ್ಕು ದಿವಸ ಒಂದೇ ಸವನೆ, ರಾತ್ರಿ ಭೆಟ್ಟಿಯಾದ ಆಚಾರ್ಯರನ್ನು ಅವನು ಊರಲ್ಲೆಲ್ಲ ಹುಡುಕಾಡಿದ. ಅವರೆಲ್ಲಿ ಬರಬೇಕು? ರಾಯರೇ ಪ್ರತ್ಯಕ್ಷ “ಫಲ” ಕೊಟ್ಟು ಹೋಗಿದ್ದರು. ಆ ಗಂಡಸು ಈಗ ಎಲ್ಲವನ್ನೂ ಬಿಟ್ಟು ದಾಸನಾಗಿದ್ದಾನೆ.”

ಮಂತ್ರಾಲಯವು ಸಮೀಪಿಸಿತ್ತು. ಬಸ್ಸಿನ ಹೊರಗೆ ನೋಡಿದರೆ ಮಗ್ಗುಲಲ್ಲೇ ತುಂಗಭದ್ರಾನದಿಯು ಮೌನವಾಗಿ ಟಿಸಿಲು-ಟಿಸಿಲಾಗಿ ಹರಿಯುವದು ಕಾಣಿಸುತ್ತಿತ್ತು. ಸುಣ್ಣ ಬಳೆದ ಮಠದ ದೊಡ್ಡ ದೊಡ್ಡ ಗೋಡೆಗಳು ಸರಿದು ಸಮೀಪಕ್ಕೆ ಬರುವಂತೆನಿಸುತ್ತಿತ್ತು.

ರೋಗಿಷ್ಠ ಹೆಂಗಸಿನ ಮುಖ ತುಸುವೇ ಅರಳಿತು. ಕಂಪಿಸುವ ಧ್ವನಿಯಲ್ಲಿ ಅವಳೆಂದಳು: “ಹಾಗಾದರೆ ನನಗೂ ಕಡಿಮೆಯಾದೀತೇನಮ್ಮ? ಯಾರು ತಾಯೇ, ನೀವು? ಇಷ್ಟೆಲ್ಲ ಕಣ್ಣಾರೆ ನೋಡಿದ್ದೀರಿ. ನೀವೂ ಇಲ್ಲಿ ಸೇವೆಗೆ ಬಂದಿದ್ದೀರಾ?

ಮುತ್ತೈದೆಯು ನಕ್ಕಳು, ಕಾರಣವಿಲ್ಲದೆ. ಹಾಗೂ ಕೆಳಗಿಟ್ಟಿದ್ದ ಚೀಲವನ್ನು ಕೈಯಲ್ಲಿ ತೆಗೆದುಕೊಳ್ಳುತ್ತ ಹೇಳಿದಳು: “ನಾನು ಹೊರಗಿನವಳಲ್ಲ. ಇಲ್ಲಿಯವಳೇ. ನಮ್ಮ ಮನೆಯವರು ಇಲ್ಲಿಯೇ “ವೈದಿಕೀ” ಮಾಡುತ್ತಾರೆ. ನೀವು ಇಲ್ಲಿ ಬರುವದು ಇದು ಮೊದಲನೇ ಸಲವೆಂದು ಕಾಣುತ್ತದೆ. ಅದೋ, ಬಂದೇ ಬಿಟ್ಟಿತು ಮಂತ್ರಾಲಯ. ನೀವು ಅಲ್ಲೆ ಇಲ್ಲೆ ಇಳಿಯಬೇಡಿರಿ. ಮಠದ ಛತ್ರದಲ್ಲಿಯೇ ತಂಗಿರಿ. ಬೇರೆ ಕಡೆಗೆ ಹೋದರೆ ಸುಮ್ಮನೇ ದುಡ್ಡು ತೆತ್ತಬೇಕಾಗುತ್ತದೆ.”

ಬಸ್ಸು ಗರಕ್ಕನೆ ಹೊರಳಿತು. ಏಳಬೇಕೆಂದ ಆ ಮುತ್ತೈದೆಯು ಮತ್ತೆ ಸೀಟಿನಲ್ಲಿಯೇ ಕುಕ್ಕರಿಸಿದಳು. “ಬರುತ್ತೇನಮ್ಮ. ನಾಳೆ ನಿಮ್ಮನ್ನು ನದಿಯ ಮೇಲೆ ಭೆಟ್ಟಿಯಾಗುತ್ತೇನೆ. ಮರದ ಬಾಗಿಣ ಕೊಡುವವರಿದ್ದರೆ ನನಗೆ ಕೊಟ್ಟುಬಿಡಿರಿ. ಬೇರೆ ಯಾರಿಗೂ ಕೊಡಬೇಡಿರಿ. ನನ್ನ ಹೆಸರು ಕಲಾವತಿ. ಇಲ್ಲಿ ಎಲ್ಲರೂ ನನಗೆ ಕಲ್ಪವ್ವ ಎನ್ನುತ್ತಾರೆ. ಮತ್ತೆ ಯಾರಾದರೂ ಕೇಳಿದರೆ, ಕಲ್ಪವ್ವನಿಗೆ ಕೊಡುತ್ತೇನೆಂದು ಹೇಳಿಬಿಡಿರಿ.” ಹೆಂಗಸಿಗೆ ವಿಚಾರ ಮಾಡಲಿಕ್ಕೂ ಆಸ್ಪದ ಕೊಡದೆ, ಕಲ್ಪವ್ವನು ಅವಳಿಂದ ವಾಗ್ದಾನ ತೆಗೆದುಕೊಂಡು ಬಿಟ್ಟಿದ್ದಳು.

ಹೊರಗೆ ದೂರದಲ್ಲಿ ನದಿಯ ನೀರು, ಸಣ್ಣ ಹುಡುಗರು ಬಿಸಿಲಲ್ಲಿ ಹಿಡಿದು ನಿಂತ ಕನ್ನಡಿಯ ತುಣುಕಿನಂತೆ, ಥಕಪಕ ಹೊಳೆಯುತ್ತಿತ್ತು. ಪ್ರವಾಸದಿಂದ ದಣಿದುಹೋಗಿದ್ದ ಜನರ ಮ್ಲಾನ ಮುಖಗಳು ಹೊರಗಿನ ನೋಟಕ್ಕಾಗಿ ಹಾತೊರೆದು ಕಿಟಕಿಯ ಹತ್ತಿರ ನೆರೆದವು.

ಬಸ್ಸು ಸ್ಟ್ಯಾಂಡನ್ನು ಮುಟ್ಟಿದಾಗ ತಮ್ಮನು, ಮಲ್ಲಿಗೆಯ ವಾಸನೆಯ ತಪ್ಪುದಾರಿ ಹಿಡಿದು ಗತಜೀವನದ ನೆನಪುಗಳ ಘೋರಾರಣ್ಯದಲ್ಲಿ ಕಳೆದುಕೊಂಡು ಹೋಗಿದ್ದ. ತಂಗಿಯು ಗಾಲಿಯ ಕೆಳಗೆ ಬುರುಗು ಬುರುಗಾಗಿ ಮೇಲೇರಿ ಬರುತ್ತಿದ್ದ ನೀರನ್ನು ನೆನೆದು ಥರಥರ ನಡುಗುತ್ತಿದ್ದಳು. ತಾಯಿಯು ಎರಡೂ ಕೈಯಿಂದ ಅವಳನ್ನು ಗಟ್ಟಿಯಾಗಿ ಹಿಡಿದುಕೊಂಡು ಶೂನ್ಯಮನಸ್ಕರಾಗಿ ಕುಳಿತಿದ್ದರು. ತಂದೆಯು ಇನ್ನೂ ಅರೆನಿದ್ದೆಯಲ್ಲಿ ತೂಕಡಿಸುತ್ತಿದ್ದರು.

 

******

ಬೆಳಗಾಗಲು ಇನ್ನೂ ಒಂದು ತಾಸಿದ್ದರೂ ಜನರು ನದಿಯ ದಂಡೆಯಲ್ಲಿ ನೆರೆದಿದ್ದಾರೆ. ಹಾಗೆ ನೋಡಿದರೆ ನಸುಕು ಹರಿಯುವುದರಲ್ಲಿಯೇ ಸ್ನಾನವಾಗಿ ಸೇವೆ ಸುರುವಾಗಬೇಕು.

ಬಂಡೆಗಲ್ಲುಗಳ ಮೇಲೆ ಕಾಳಜೀಪೂರ್ವಕವಾಗಿ ನಡೆಯುತ್ತ ಆ ನಾಲ್ಕೂ ಜನರು ನೀರನ್ನು ಸಮೀಪಿಸಿದರು. ತಂದೆಗೆ ನಿಜವಾಗಿಯೂ ಬಹಳ ಸಿಟ್ಟು ಬಂದಿತ್ತು. ಇಂಥ ಚಳಿಯಲ್ಲಿ ಹೋಗಿ ನದಿಯಲ್ಲಿ ಮುಳುಗು ಹಾಕಿ ಊರ ಮುಂಜಾನೆ ದೇವರ ಮುಂದೆ ಹೋಗಿ ನಿಲ್ಲಬೇಕೆಂದೆಲ್ಲಿದೆ? ಬಿಸಿಲೇರಿದ ಮೇಲೆ ಸ್ನಾನ ಮಾಡಿ ಹೋದರಾಗುವುದಿಲ್ಲವೆ? ಎದ್ದ ಕೂಡಲೆ ಛತ್ರದಲ್ಲಿಯೇ ತಮ್ಮನಿಗೆ ಖಡಾಖಂಡಿತವಾಗಿ ಹೇಳಿಬಿಟ್ಟಿದ್ದರು: ನೀವೆಲ್ಲ ಮುಂದೆ ಹೋಗಿರಿ. ನಾನು ಆಮೇಲೆ ಬರುತ್ತೇನೆ ಎಂದು. ಇದು ತಾಯಿಯ ಕಿವಿಗೆ ಬಿದ್ದಿತ್ತು. ಆ ಮಾತು ತಾಯಿಗೆ ಸರಿಬಿದ್ದಿದ್ದಿಲ್ಲವೆನ್ನುವುದು ಅವರ ಮುಖ ನೋಡಿದಾಗಲೇ ತಂದೆಗೆ ಗೊತ್ತಾಗಿತ್ತು. “ಯಾವಾಗಲೂ ಇವರ್ದು ಹಿಂಗೇ. ಇಲ್ಲೇನು ನನ್ನ ಸಲುವಾಗಿ ಬಂಧಾಂಗ ಮಾಡತಾರೆ. ಮಗಳ ಜಡ್ಡು ನೆಟ್ಟಗಾಗಬೇಕೂಂತ…” ಇನ್ನೂ ಏನೆನ್ನುವವರಿದ್ದರೋ, ಅಷ್ಟರಲ್ಲಿ ತಂಗಿ ಓಡುತ್ತ ಬಂದಿದ್ದರಿಂದ ಮಾತು ಅರ್ಧಕ್ಕೆ ನಿಂತುಹೋಗಿತ್ತು.

“ಓ ರಾಯರ, ಆ ಕಡೆಗೆ ಹೋಗಬ್ಯಾಡ್ರಿ, ನೀರಿನ ಸೆಳವು ಭಾಳ ಆದ ಅಲ್ಲೇ. ಹಾಂ, ತುಸು ಈ ಕಡೆ ಬರ್ರಿ. ಹೌದು, ಮತ್ತು ಅಲ್ಲಿಯೂ ಈಸ ಬೀಳಬ್ಯಾಡ್ರಿ ಮತ್ತ. ನೀರಾಗ ಎಲ್ಲಾ ಕಡೆ ಬಂಡಿಗಲ್ಲು ಬಹಾಳ ಮುಣಗ್ಯಾವ.” ಹಾಗೆ ಒದರಿ ಹೇಳುತ್ತಿದ್ದವರು ಯಾರೆನ್ನುವುದು ತಂದೆಗೆ ತಿಳಿಯಲಿಲ್ಲ. ಯಾರಿಗೆ ಅವರು ಹೇಳಿದರು ಎನ್ನುವುದೂ ಅರ್ಥವಾಗಲಿಲ್ಲ. ನದಿಯ ಮೇಲೆಲ್ಲ ಒಂದು ಮೇಳವೇ ನೆರೆದಿದೆ. ಗದ್ದಲದಲ್ಲಿ ಒಬ್ಬರ ಮಾತು ಇನ್ನೊಬ್ಬರಿಗೆ ಸಹಜವಾಗಿ ಕೇಳಿಸುವಂತಿಲ್ಲ. ತಂಗಿಯ ಮೈ ಮುಗಿಸಿ ತಾಯಿ ಬರುವವರೆಗೆ ಅವರು ಅಲ್ಲಿಯೇ ಬಂಡೆಗಲ್ಲ ಮೇಲೆ ಕುಳಿತರು.

“ಸ್ವಲ್ಪ ಹಾದೀ ಬಿಟ್ಟು ಕೂಡ್ರೆಪ್ಪ. ಹೆಂಗಸರು, ಹುಡುಗರು ಹೋಗಿ ಬರೂ ಹಾದಿ ಇದು. ಮಡೀ ಹೆಂಗಸರು ಹೋಗುವ ಹಾದ್ಯಾಗ ಹೀಂಗ ಕೂತರ…..” ತಂದೆಯು ತಿರುಗಿ ನೋಡಿದರು. ಅದೇ ಹೆಂಗಸು. ಇನ್ನೂ ಅಷ್ಟೇ ಡೂಗಾಗಿ ಬಿಲ್ಲಿನಂತೆ ಬಾಗಿ ನಡೆಯುತ್ತಿದ್ದಾಳೆ. ಇಷ್ಟು ವರುಷವಾದರೂ ಏನೂ ಬದಲಾವಣೆಯಿಲ್ಲ. ಆಗಿನಕ್ಕಿಂತ ಸ್ವಲ್ಪ ಸೊರಗಿ, ಕಪ್ಪಾಗಿದ್ದಾಳೆ. ಅಷ್ಟೇ. ಕೈಯಲ್ಲಿ ತಂಬಿಗೆಯಿದೆ- ನೆಗ್ಗಿ ಸವಕಳಿಯಾದ್ದದು. ಬಹುಶಃ ಅದೇ ತಂಬಿಗೆಯಿರಬೇಕು; ಹನ್ನೆರಡು ವರ್ಷಗಳ ಹಿಂದಿನದು.

…ಆಗ ತಮ್ಮ ಹೈಸ್ಕೂಲಿಗೆ ಹೋಗುತ್ತಿದ್ದ. ತಂಗಿ ಅದೇ ಶಾಲೆ ಬಿಟ್ಟಾಗಿತ್ತು. ಹೆಂಡತಿ ಜಗಳವಾಡಿ ತವರೂರಿಗೆ ಹೋಗಿದ್ದಳೆಂದು ಆಗ ಇಬ್ಬರೂ ಮಕ್ಕಳನ್ನು ಕರೆದುಕೊಂಡು ಅವರು ಮಂತ್ರಾಲಯಕ್ಕೆ ಬಂದಿದ್ದರು. ಅವರು ಆಗ ಬಂದದ್ದು ಮುಖ್ಯ ರೇಲ್ವೆ ಪಾಸಿತ್ತೆಂದು ಹಾಗೂ ಅನಾಯಾಸ ಹುಡುಗರಿಗೂ ಸೂಟಿಯಿತ್ತು. ಆದರೆ ಹೆಂಡತಿ ತಿರುಗಿ ಬರಲಿ ಎಂದು  ಹರಕೆ ಹೊರಲು ಮಾತ್ರ ಸರ್ವಥಾ ಅವರು ಬಂದಿರಲಿಲ್ಲ. ಅವಳ ಸ್ವಭಾವವೇ ಹಾಗೆ. ಅವರು ಅವಳಿಗೆ ಯಾವುದಕ್ಕೂ ಎಂದೂ ಕಡಿಮೆ ಮಾಡಿರಲಿಲ್ಲ. ಆದರೂ ತುಡುಗಿನಿಂದ ಎಲ್ಲೆಲ್ಲಿಂದಲೋ ರೊಕ್ಕ ಕೂಡಿಸಿ ನೂರು ರೂಪಾಯಿಯಷ್ಟು ಕಳ್ಳಗಂಟು ಮಾಡಿಕೊಂಡಿದ್ದಳು. ಊರಿಗೆ ಹೋಗುವಾಗ ಸೀರೆಯ ಗಂಟಿನಲ್ಲಿ ಮುಚ್ಚಿಟ್ಟು ಟ್ರಂಕಿನಲ್ಲಿ ಹಾಕಿಕೊಂಡು ಹೊರಟಿದ್ದಳು. ಇದು ಆಗ ಅವರ ಲಕ್ಷ್ಯಕ್ಕೆ ಬಂದಿತ್ತು. ಹಾಗೆ ಗಂಡನಿಂದ ಮುಚ್ಚಿ ರೊಕ್ಕ ಒಯ್ಯುವುದು ಒಳ್ಳೇಯದಲ್ಲ ಎಂದಿಷ್ಟು ಅವರು ಹೇಳಿದ್ದಕ್ಕೆ ಅವಳು ಸಿಟ್ಟಿಗೆದ್ದು ತವರು ಮನೆಗೆ ಹೋಗಿದ್ದಳು.

…ಆಗ ಅವರು ಮಂತ್ರಾಲಯಕ್ಕೆ ಬಂದಿದ್ದರು.

ಆ ಡೂಗ ಹೆಂಗಸು ಅಂದಿನಿಂದಲೂ ಇಲ್ಲಿಯೇ ಇದ್ದಾಳೆ. ತಂಗಿ ಅವಳನ್ನು ಆಗ ನೋಡಿದಾಗ ಭಯ ನೆರೆದ ತಾತ್ಸಾರದಿಂದ ಅವಳಿಂದ ಸರಿದು ದೂರ ಹೋಗಿ ನಿಂತಿದ್ದಳು. ತಮ್ಮ, ಅವಳ ಕೈಯಲ್ಲಿ ಯಾವಾಗಲೂ ಇರುವ ತಂಬಿಗೆಯನ್ನು ನೋಡಿ, ಅವಳಿಗೆ “ತಂಬಿಯ ಡೂಗವ್ವ” ಎಂದು ಕರೆಯುತ್ತಿದ್ದ.

…ತಂಗಿಗಂತೂ ಈಗ ಅದನ್ನು ನೆನಪಿಡಲು ಸಾಧ್ಯವಿಲ್ಲ.
…ಆದರೆ ತಮ್ಮನೂ ಅದನ್ನು ಮರೆತುಬಿಟ್ಟನೆಂದರೆ….

ತಮ್ಮನಿಗೆ ನೆನಪು ಮಾಡಿಕೊಡಲೆಂದು ತಂದೆಯು ಸುತ್ತಮುತ್ತಲೂ ನೋಡಿದರು. ಆದರೆ ತಮ್ಮನೆಲ್ಲಿದ್ದಾನೆ? ಆ ಕಡೆ ನೀಲಿಯಾದ ಆಕಾಶ. ಈ ಕಡೆ ಅಸ್ತವ್ಯಸ್ತವಾಗಿ ಬಿದ್ದ ಕಪ್ಪು ಬಂಡೆಗಳು. ತಮ್ಮನೆಲ್ಲಿಯೂ ಕಾಣಿಸಲಿಲ್ಲ. ದೂರದ ಇನ್ನೊಂದು ಬಂಡೆಗೆ ಅಡ್ಡಾಗಿ ಹೆಂಗಸರು ಮೈತೊಳೆದುಕೊಳ್ಳುತ್ತಿದ್ದರು. ಬಂಡೆಯ ಮೇಲೆ ಅರಿವೆಗಳನ್ನು ಹರವಿದ್ದರು, ಒಣಗಿಸಲಿಕ್ಕೆಂದು.

ತಂದೆ ದಿಟ್ಟಿಸಿ ಪುನಃ ಸುತ್ತೂ ಕಡೆಗೆ ನೋಡಿದರು. ಆದರೆ ತಮ್ಮನೆಲ್ಲಿಯೂ ಸಿಗಲಿಲ್ಲ. ತಮ್ಮನ ಬಗೆಗೆ ಅವರಿಗೆ ಅಪಾರ ಕರುಣೆ ಹುಟ್ಟಿತು. ಕನಿಕರ ಬಂತು. ಅವನನ್ನು ಕರೆದು ಮಗ್ಗಲಿಗೆ ಕೂಡಿಸಿಕೊಂಡು, ಬೆನ್ನಮೇಲೆ ಕೈಯಾಡಿಸಿ ಮತ್ತೆ ಮತ್ತೆ ರಮಿಸಬೇಕು ಎಂದೆನಿಸಿತು. ಅವನ ವಯಸ್ಸಿನಲ್ಲಿ ತಮ್ಮದು ಲಗ್ನ ಕೂಡ ಆಗಿರಲಿಲ್ಲ. ಆದರೆ ತಮ್ಮನು ಈಗ ಹೆಂಡತಿಯನ್ನು ಕಳೆದುಕೊಂಡು ವಿಧುರನಾಗಿದ್ದಾನೆ.

ತಂದೆಗೆ ತಮ್ಮನ ಹೆಂಡತಿ ನೆನಪಾದಳು. ತಾವಿದ್ದ ಸ್ಟೇಶನ್ನು ನೆನಪಾಯಿತು. ರೈಲ್ವೆ ಹಳಿ ನೆನಪಾದವು. ಮೊನ್ನೆ ಮೊನ್ನೆ ತಮ್ಮ ಕಣ್ಣರಕೆಯಲ್ಲಿಯೇ ಬೆಳೆದು ಹುಡುಗಿ, ಹೆಂಡತಿಯಾಗಿ ಈಗ ಕತೆಯಾಗಿ ಹೋಗಿಬಿಟ್ಟಿದ್ದಾಳೆ. ಸಾವಿನ ಅರ್ಥ ಕೂಡ ಗೊತ್ತಿರದ ಹಸುಳೆ-ವಯಸ್ಸಿನಲ್ಲಿ ಅವಳು ಸತ್ತುಹೋದಳು. ಸತ್ತ ದಿನವೇ ಪುನಃ ಅವಳನ್ನು ಯಾರಾದರೂ ಎಚ್ಚರಿಸಿದರೆ, ಕಣ್ಣು ತಿಕ್ಕುತ್ತ ನೇರವಾಗಿ ಅವಳು ಮನೆಗೆ ನಡೆದು ಬಂದು ಬಿಡಬಹುದಾಗಿತ್ತು.

ಕ್ರಮೇಣ ತಂದೆಯವರಿಗೆ ಅನಿಸತೊಡಗಿತ್ತು: ಬಿಸಿಲಿಗೆ ತಮ್ಮ ತಲೆ ಕಾಯ ಹತ್ತಿದೆ, ಎಂಬುದು. ಕೆಳಗಿಟ್ಟ ಒದ್ದೆಯಾಗಿದ್ದ ಪಂಚೆಯನ್ನು ತಲೆಯ ಮೇಲೆ ಹೊತ್ತುಕೊಂಡರು.

ಕಪ್ಪಾದ ದೊಡ್ಡ ದೊಡ್ಡ ಬಂಡೆಗಳಿಗೆ ಕಬ್ಬಿಣದ ತುಂಡುಗಳಂತೆ ಬಿದ್ದಿವೆ. ನದಿಯಿಂದ ಮಠಕ್ಕೆ ಹೋಗುವ ದಾರಿಯು ಆ ಬಂಡೆಗಳ ಮೇಲೆ ಹಾಯ್ದು ಹೋಗಿದೆ. ದಾರಿ  ಮುಗಿಯುವಲ್ಲಿ ಎತ್ತರವಾದ ಭವ್ಯವಾದ ಗೋಡೆಯಿದೆ. ಗೋಡೆಯನ್ನು ದಾಟಿದರಾಯಿತು ಮಠ ಬಂತು. ಗೋಡೆಗೆಲ್ಲ ಸುಣ್ಣ ಬಡೆದು ಪಟ್ಟಿಯಾಗಿ ಹುರಿಮಂಜನ್ನು ಇಳಿಬಿಟ್ಟಿದ್ದಾರೆ.

ತಾಯಿ-ತಂಗಿ ಮೈ ಮುಗಿಸಿ ಒದ್ದೆಯಲ್ಲಿ ದಂಡೆಗೆ ನಡೆದು ಬರುತ್ತಿದ್ದರು. ತಾಯಿಗೆ ಹಾಗೆ ಬರಲು ಸಂಕೋಚವೆನಿಸಿತು. ನೀರಿನಿಂದ ಒಮ್ಮೆಲೆ ಎದ್ದು ಹೊರಗೆ ಬರುವದೆಂದರೆ ಎಷ್ಟು ಖಜೀಲಾಗುತ್ತದೆ ಮನಸ್ಸಿಗೆ. ಅರೊವೆಯಲ್ಲ ಮೈಗೆ ತಪತಪ ಅಂಟಿಕೊಂಡಿರುತ್ತವೆ. ತಾವು ದೊಡ್ಡ ಹೆಂಗಸರು. ತಮಗೆ ಇನ್ನೂ ನಾಚಿಕೆಯಾಗುತ್ತದೆ. ಆದರೆ ತಂಗಿಗೆ ಇದರ ಜ್ಞಾನವೆಲ್ಲಿದೆ? ಸ್ನಾನ ಮಾಡಿ ಬಚ್ಚಲದಿಂದ ಓಡಿಹೋಗುವ ಸಣ್ಣ ಹುಡುಗರಂತೆ, ಧುಡುಧುಡು ದಂಡೆಗೆ ಓಡುತ್ತಿದ್ದಾಳೆ.

ನದಿಯ ಗದ್ದಲ ಬರುಬರುತ್ತ ಕಡಿಮೆಯಾಗತೊಡಗಿತ್ತು. ಜನರೆಲ್ಲ ಗಡಬಡಿಸಿಕೊಂಡು ಮಠದ ಕಡೆಗೆ ಹೋಗುವ ಸಿಧ್ಧತೆ ನಡೆಸಿದ್ದರು. ಒಣಗ ಹಾಕಲು ಬಂಡೆಯ ಮೇಲೆ ಹಾಸಿದ ಅರಿವೆಗಳೆಲ್ಲ ಕ್ರಮೇಣ ಇಲ್ಲವಾಗುತ್ತಿವೆ.

ಅಲ್ಲಿಯೇ ಅರಿವೆಯೊಗೆಯುತ್ತ ಕುಳಿತ ಕೊಮಟರ ಹೆಂಗಸರು ಅಂದಳು: “ಸಾವಕಾಶ ಬಾರಮ್ಮ. ಕಲ್ಲು ಹಾವಸೆಗಟ್ಟಿರುತ್ತದೆ. ಕಾಲು ಜರೆದೀತು. ಮೊನ್ನೆ ನಾನು ಇಷ್ಟು ಹೇಳಿದ್ದಕ್ಕೆ ಒಬ್ಬ ಅಮ್ಮ ಎಷ್ಟು ರೇಗಿಬಿಟ್ಟಳು ಏನು ಕತೆ? ನಾನೇನು ಕೆಡಕು ಹೇಳಿದೆ? ಕಡೆಗೆ ನಾನು ಹೇಳಿದಂತೇ ಆಯಿತು. ಸಿಡಿಮಿಡಿಗೊಂಡು ಮುಂದೆ ಹೊರಟಾಗ ಆ ಅಮ್ಮ ಜರೆದುಬಿದ್ದು ತನ್ನ ಕಾಲು ಮುರಿದುಕೊಂಡಳು.”

ತಾಯಿಗೂ ಬಹಳ ಸಿಟ್ಟು ಬಂತು. ಮಂದಿಯ ಉಸಾಬರಿಯ ಬಿಟ್ಟು ತನ್ನ ಕೆಲಸ ತಾನು ಮಾಡಿಕೊಂಡು ಹೋಗು ಎಂದು ಹೇಳಬೇಕೆನಿಸಿತು. ಆದರೆ ಮುಂಜಾನೆಯೆದ್ದು ಇಲ್ಲದ ನ್ಯಾಯ ತೆಗೆದುಕೊಂಡು ಕೂಡುವುದರಲ್ಲಿ ಏನು ಅರ್ಥವಿದೆಯೆಂದು ಸುಮ್ಮನಾದರು. ಮೆಲ್ಲಮೆಲ್ಲನೆ ಕಾಲಿಡುತ್ತ ತಂಗಿಯನ್ನು ಮೇಲೆ ಮುಟ್ಟಿಸಿ ಆಳವಾಗಿ ಉಸಿರುಬಿಟ್ಟರು.

ತಂಗಿಯು ಇಲ್ಲಿ ಬಂದ ಕೂಡಲೇ ಬಹಳ ಸಮಾಧಾನಿಯಾಗಿದ್ದಾಳೆ. ಮುಖದ ಮೇಲೆಲ್ಲ ಮ್ಲಾನತೆ ಬಂದಿದೆ. ಯಾವಾಗಲೂ ಯಾವುದೋ ತಂದ್ರಿಯಲ್ಲಿ ಮುಳುಗಿ, ಅಮಲೇರಿದಂತಿರುತ್ತಾಳೆ. ಅದೇ, ಸ್ಟೇಶನ್ನಿನಲ್ಲಿದ್ದಾಗ ಎಷ್ಟು ಅಬ್ಬರ ಮಾಡುತ್ತಿದ್ದಳು. ಗಾಡಿಯ ಸಪ್ಪಳ ಕೇಳಿಸಿದಂತಾಗಲು ರೇಲ್ವೆ ಹಳಿಯ ಕಡೆಗೆ ಮತ್ತೆ ಮತ್ತೆ ದಿಕ್ಕುಗೆಟ್ಟು ಓಡುತ್ತಿದ್ದಳು. ಆಗ ಅವಳನ್ನು ಹಿಡಿದಿಡುವುದೇ ಎಲ್ಲರಿಗೂ ಒಂದು ಕೆಲಸವಾಗುತ್ತಿತ್ತು. ಹಳ್ಳಿಯ ಮೇಲೆ ಯಾವಾಗಲೂ ಗಾಡಿ ಬರದಿದ್ದರೇನಾಯಿತು, ಹಳಿಯೇರಿ ಇಳುಕಲು ಇಳಿದರೆ ತೀರಿತು, ಅಲ್ಲಿ ಹಾಳು ಬಾವಿಯಿದೆ.

ತಾಯಿ ಸೀರೆಯುಟ್ಟುಕೊಳ್ಳುತ್ತ ಒಂದು ಸಲ ಎಲ್ಲ ಕಡೆಗೂ ಕಣ್ಣು ಹರಿಸಿದರು, ತಮ್ಮ ಕಡೆಗೆ ಯಾರಾದರೂ ನೋಡುತ್ತಿದ್ದಾರೆಯೇ ಎಂದು. ಅದೇ ವೇಳೆಗೆ ಗಾಳಿಯ ಸೆಳಕು ಪ್ರಬಲವಾಗಿ ಬೀಸಿತು. ಕೈಯಲ್ಲಿ ಗಟ್ಟಿಯಾಗಿ ಹಿಡಿದಿದ್ದ ಸೆರಗಿನಲ್ಲಿ ಗಾಳಿ ತುಂಬಿ, ಹಡಗಿನ ಹಾಯಿಯಂತೆ ಉಬ್ಬಿ ಫಡಫಡಿಸಿತು. ತಾಯಿ ಒಮ್ಮೆಲೆ ಗೊಂದಲಿಸಿದರು. ಸೀರೆಯನ್ನೆಲ್ಲ ಮುದ್ದೆ ಮಾಡಿ ಅವಚಿ ಹಿಡಿದರು. ಆದರೆ ತಂಗಿ ಕುಳಿತಲ್ಲಿ ಇನ್ನಾರೂದರೂ ಕಾಣಿಸಬಹುದಿತ್ತು.

ದೂರದಲ್ಲಿ ತಂದೆ ಯಾರೋ ಇಬ್ಬರೊಡನೆ ಮಾತಾಡುತ್ತಿದ್ದಾರೆ. ಕೈ ಮಾಡಿ ಏನೋ ತಿಳಿಸಿ ಹೇಳುವಂತಿದೆ. ಯಾರ ಮುಖವೂ ಅಲ್ಲಿಂದ ಸ್ಪಷ್ಟವಾಗಿ ಕಾಣಿಸುವುದಿಲ್ಲ. ತಾಯಿಗೆ ಒಮ್ಮೆಲೆ ನೆನಪಾಯಿತು. ಸುತ್ತಮುತ್ತಲು ಗಾಬರಿಯಿಂದ ನೋಡಿದರು; ತಂಗಿ ಇದುವರೆಗೆ ಇಲ್ಲೇ ಕುಳಿತಿದ್ದವಳು ಇಷ್ಟರಲಿಯೇ ಎಲ್ಲಿ ಹೋದಳು?

ನಿಜವಾಗಿಯೂ ತಂದೆಗೆ ಅವರನ್ನು ಎಲ್ಲಿಯೂ ನೋಡಿದ ನೆನಪಿರಲಿಲ್ಲ. ಆ ಗೃಹಸ್ಥರು ಕಪ್ಪಾಗಿ, ಕುಳ್ಳಗಿದ್ದರು. ಐವತ್ತೈದು ದಾಟಿರಬೇಕು. ಅವರು ನಕ್ಕ ಕೂಡಲೇ ಆ ಗೃಹಸ್ಥರ ಹರೆಯದ ಹಲ್ಲು ಹೊಳೆದವು. ಬಹುಶಃ ಅವು ಅವರವಿರಲಿಕ್ಕಿಲ್ಲ. ಅವರ ಕೂಡ ಬಂದ ಇನ್ನೊಬ್ಬರ ಪರಿಚಯವಂತೂ ಅವರಿಗೆ ಇಲ್ಲವೇ ಇಲ್ಲ. ಆ ಕಪ್ಪು ಮುದುಕರೆಂದರು: “ಏನು ರಾಯರ ಗುರುತೇ ಹತ್ತಲಿಲ್ಲ ಮೊದಲ ನನಗೆ. ಈಗ ಎಷ್ಟು ಬದಲಾಗೀರಿ?” ತಂದೆಗೆ ಅವರ ಮಾತಿನ ರೀತಿಯೇ ಗೂಢವೆನಿಸಿತು. ನಾನೆಲ್ಲಿ ಬದಲಾಗಿದ್ದೇನೆ? ಜೀವಮಾನವೆಲ್ಲ ಕಳೆದರೂ ತಾವು ಹಾಗೇ ಉಳಿದರು. ಯಾವ ಬದಲಾವಣೆಯೂ ಆಗಲಿಲ್ಲ. ಇನ್ನು ಮೇಲೆಯಾದರೂ ಏನಾದರು ಬದಲಾಗಬೇಕು. ನನ್ನ ಗುರುತನ್ನು ನಾನೇ ಮರೆಯಬೇಕು. ಎಲ್ಲರಿಗೂ ಮರಿಸಬೇಕು… ಯಾರೂ ಗುರುತಿಸದಿದ್ದ ಸ್ಥಳವನ್ನು ಹುಡುಕಿಕೊಂಡು ಒಬ್ಬನೇ ದೂರ ದೂರ ಹೋಗಬೇಕು… ತಂದೆಯು ಹಾಗೆಯೇ ಮಾತಾಡದೆ ಮೌನವಾಗಿರುವುದನ್ನು ನೋಡಿ ಮುದುಕರು ಗಟ್ಟಿಸಿ ನುಡಿದರು:

“ನೀವು ಹಿಂದೊಮ್ಮೆ ಸೊಲ್ಲಾಪುರದಲ್ಲಿ ಗೂಡ್ಸ ಕ್ಲಾರ್ಕ ಇದ್ದಾಗ ನಾನು ಅಲ್ಲಿ ಸಿಗ್ನಲರ್ ಎಂದು, ಬಂದಿದ್ದೆ. ಆ ಮಾತಿಗೆ ಈಗ ಮೂವತ್ತು ವರ್ಷವಾಗಿರಬೇಕು. ಮೊನ್ನೆ ಮೊನ್ನೆ “ತಕಾರಿ” ಯ ಸ್ಟೇಶನ್ ಮಾಸ್ತರನಾಗಿ ರಿಟಾಯರ್ ಆದೆ. ಈಗ ಬಹಳ ಸೊರಗಿ ಬಿಟ್ಟೀರಿ ನೀವು.”

“ವಯಸ್ಸಾಗುತ್ತ ಬಂತು. ಮನುಷ್ಯ ಹೇಗೆ ಹಾಗೆಯೇ ಉಳಿಯುತ್ತಾನೆ, ನೋಡಿರಿ? ನನಗೂ ಈಗ ನಿಮ್ಮದು ಸ್ವಲ್ಪ ಗುರುತು ಹತ್ತಿದಂತಾಯಿತು. ನೀವೂ ಈಗ ಆಗಿನಂತೆ ಉಳಿದಿಲ್ಲ.” ತಂದೆಗೆ ಇನ್ನೂ ಗುರುತು ಹತ್ತಿರಲಿಲ್ಲ. ಹತ್ತುವಂತೆಯೂ ಇರಲಿಲ್ಲ. ಔಪಚಾರಿಕವಾಗಿ ಅಂದರು, ಅಷ್ಟೇ.

ಮುದುಕರು ಕೇಳಿದರು: “ಈಗೇನು ಒಬ್ಬರೇ ಬಂದಿದ್ದೀರೋ ಅಥವಾ…?”

“ಎಲ್ಲರೂ ಕೂಡಿ ಬಂದಿದ್ದೇವೆ. ಮಗಳ ಪ್ರಕೃತಿ ನೆಟ್ಟಗಿಲ್ಲ. ರಾಯರ ಸೇವೆಗೆಂದು…”

“ಯಾಕೆ ಏನಾಗಿದೆ?”

“ಹಾಗೆ ವಿಶೇಷವೇನೂ ಇಲ್ಲ. ಏನೋ ನಡುನಡುವೆ ಸ್ವಲ್ಪ ವಿಸ್ಮೃತಿ ಬಂದ ಹಾಗೆ ಮಾಡುತ್ತಾಳೆ. ಅಷ್ಟೇ”

ತಾಯಿ, ನೀರಿನ ಕಡೆಗೆ ಧಾವಿಸಿದ ತಂಗಿಯನ್ನು ಹಿಡಿದುಕೊಂಡು ಬಂದು, ಅಸ್ವಸ್ಥರಾಗಿ ತಂದೆಯ ಹಾದಿ ನೋಡುತ್ತ ನಿಂತಿದ್ದರು.

“ಆಗಲಿ. ಹಾಗಾದರೆ ಮತ್ತೆ ಭೆಟ್ಟಿಯಾಗೋಣ. ಉತ್ಸವದವರೆಗೆ ಇರಬೇಕೋ ಏನು ಬೇಗ ಸೇವೆ ಮುಗಿಸಿ ಹೊರಟು ಬಿಡುವವರೋ?”

“ರಾಯರು ಹೇಗೆ ಅನುಕೂಲ ಮಾಡಿಕೊಡುತ್ತಾರೆಯೋ  ನೋಡಬೇಕು. ಇರುವ ಸಂಕಲ್ಪವನ್ನಂತೂ ಮಾಡಿಕೊಂಡಿದ್ದೇನೆ. ಅದು ಸಾಧಿಸಬೇಕು, ಅಷ್ಟೇ.”

ಮಠದ ಗಂಟೆ ಕೇಳಿಸುತ್ತಿದೆ. ನದಿಯ ದಂಡೆಯ ಮೇಲೆಲ್ಲ ಅರಿಷಿಣ, ಕುಂಕುಮ, ಗೋಪಿಚಂದನದ ವಾಸನೆ ಇಡುಗಿದೆ. ತಂದೆ ಹೊರಟು ಹೋದ ಮೇಲೆ ಕಪ್ಪು ಮುದುಕರು ಸಂಗಡಿಗರಿಗೆ ಹೇಳಿದರು:

“ಒಂದು ಲಕ್ಷದ ಕುಳ ಅಪಾ, ಇದು. ಗುಡ್ಸ ಮಾಸ್ತರಾಗಿ ರಿಟಾಯರ್ ಆದರು. ಬಹಳ ರೊಕ್ಕ ಮಾಡ್ಯಾರ. ಆದರೇನು, ಬರೀ ರೊಕ್ಕದ ಸುಖ ಸುರೀಲಿಕ್ಕೆ ಆಗತದ? ಇವರ ಹೆಂಡತಿ ರಾಕ್ಷಸಿ ಇದ್ಹಾಂಗ ಇದ್ದಾಳ. ಅವರಿಬ್ಬರದೂ ಕಡೆಯವರೆಗೂ ಕೂಡಿ ನಡೀಲಿಲ್ಲ. ಮಾಸ್ತರರ ಮನಸ್ಸಿನ ವಿರುದ್ಧ ತೌರುಮನೀ ಕಡೀದು ಒಂದು ಹುಡಿಗಿನ್ನ ತಂದು. ಮಗನಿಗೆ ಲಗ್ನ ಮಾಡಿದಳು. ಆ ಹುಡಿಗಿನ್ನ ಸಹಿತ ಒಳ್ಳೇ ರೀತಿಯಿಂದ ಇಟ್ಟುಕೋಳಿಕ್ಕೆ ಆಗಲಿಲ್ಲ ಆಕೀ ಕಡಿಂದ. ಇಕೀ ಕಾಟ ತಾಳಲಾರದಕ್ಕ ಹುಡಿಗಿ ಗಾಡೀ ತೆಳಗ ಬಿದ್ದು ಪ್ರಾಣ ಕೊಟ್ಟಿತು. ಮೊನ್ನೆ ಮೊನ್ನೆಯ ಕಥೀ ಇದು. ಮುಂದೆ ಮೂರೇ ತಿಂಗಳಾದಾಗ ಮಗಳಿಗೆ ಹುಚ್ಚು ಹಿಡೀತು. ಸೊಸೀನೇ ಬಡಕೊಂಡಾಳ ಅಂತ ಮಂದಿ ಆಡಕೋತಾರ. ವಿಸ್ಮ್ರುತಿ-ಗಿಸ್ಮ್ರುತಿ ಎಲ್ಲಾ ಸುಳ್ಳು. ಆ ಹುಡಿಗೀಗೇ ಹುಚ್ಚೇ ಹಿಡಿದದ.”

ತಂದೆಯ ತಲೆಯ ಮೇಲೆ ಒದ್ದೆಯಾಗಿದ್ದ ಪಂಚೆ ಇದೆ. ತಾಯಿಯು ಸೀರೆಯ ಕಚ್ಚೆಯನ್ನು ಬಹಳ ಮೇಲೆ ಮಾಡಿ ಉಟ್ಟುಕೊಂಡಿದ್ದಾರೆ. ತೊಯ್ದು ಹೋಗಿದ್ದ ತಲೆಗೂದಲನ್ನು ಪುನಃ ಪುನಃ ಹರವಿಕೊಳ್ಳುತ್ತ ತಂಗಿಯು ಝಾಪುಗಾಲಿಟ್ಟು ಓಡುವವರಂತೆ ನಡೆಯುತ್ತಿದ್ದಾಳೆ.

ಮಠದ ಗಂಟೆಯ ಸಪ್ಪಳ ಕೇಳಿಸುತ್ತಿದೆ.

***