ಮಾಗಿ ಬಂದು, ಗಿರಿಗೆ ಹಗಲು
ಹಿತದ ಬಿಸಿಲ ಹೊದಿಸಿದಂದು,
ಹಸುಳೆಗೂಡಿ ಬೆಟ್ಟ ತುದಿಯ
ಗುಡಿಗೆ ನಡೆದೆನು.
ಬಾಲ ಕೊಳಕೆ ಕಲ್ಲನೆಸೆದು
ಸುಳಿಯ ರಚಿಸಿ, ನಲಿವ ತೆರದಿ,
ಹಗಲ ಮೌನಕೆಸೆಯುತಿತ್ತು
ಹಕ್ಕಿ ಹಾಡನು.

ಗಿರಿಯ ತುದಿಯ ಗುಡಿಯ ಸೇರಿ
ಹಸುಳೆಗೂಡಿ ನಿಂತೆನಂದು
ಮಂದಿಯೊಬ್ಬರಿಲ್ಲವಲ್ಲಿ
ಮೌನವಾಳಿತು.
ಹೃದಯದಲ್ಲಿ ಭಕ್ತಿ ಮೂಡಿ
ಮನದೊಳುಚ್ಚಭಾವ ಹೂಡೆ.
ಗುಡಿಯನೊಂದು ಬಳಸು ಬಂದು
ಒಳಗೆ ಹೊಕ್ಕೆನು.

ಅಲ್ಲಿ ವೇದಘೋಷವಿಲ್ಲ.
ತಮಿಳು ಪದ್ಯವೊರೆವರಿಲ್ಲ.
ಮಾನ ಸಲಿಸಲಿಲ್ಲ ವೆಂಬ
ಜಗಳವಿಲ್ಲವು.
ಇರವಿನಳಲನೆಲ್ಲ ಮರೆಸಿ
ಮನಕದೊಂದು ತಂಪನೀವ
ದಿವ್ಯಶಾಂತಿಯಂದು ಕಂಡೆ
ಗಿರಿಯ ಗುಡಿಯೊಳು.

ಗರ್ಭಗುಡಿಯ ಹೊಸಿಲ ಮುಂದೆ
ಭಕ್ತಿನಮ್ರವಾಗಿ ನಿಂತೆ;
ಹಸುಳೆ ನನ್ನ ಸೆರಗ ಜಗ್ಗಿ
ಬೆರಲ ತೋರಿತು
ಅಲ್ಲಿ ಮುಸುಕು ಬೆಳಕಿನೊಳಗೆ
ಬಾಗಿದೊಂದು ವ್ಯಕ್ತಿ ಕಂಡೆ:
ಹಣ್ಣು ಹಣ್ಣು ಮುದುಕಿಯಲ್ಲಿ!
ಬೆಟ್ಟ ತುದಿಯೊಳು!

ಮುದುಕಿಯುಟ್ಟ ಬಟ್ಟೆ ಚಿಂದಿ,
ನರೆತ ಹೆರಳು, ಸುಕ್ಕುಮೋರೆ,
ಮುಪ್ಪು ತನ್ನ ಮುದ್ರೆಯೊತ್ತಿ-
ದಂಗವವಳದು;
ಆದರವಳ ಕಂಗಳೆರಡು
ಜರೆಯನಣಕಿಸುತ್ತ ಹೊಳೆದು
ಮುಖಕೆ ಕೊಡುತಲಿದ್ದುವೊಂದು
ಬಗೆಯ ಠೀವಿಯ.

ಬೆಟ್ಟ ಹತ್ತಿಬಂದಳೆಂತು?
ಚಿಂದಿಯುಟ್ಟ ತೀರ ಬಡವೆ
ಮಲೆಯ ನಾರಸಿಂಹಗೀವ
ಳಾವ ಕಾಣಿಕೆ?
“ಎಲ್ಲರೆದೆಯ ಹೋಗುವ ದೇವ
ಹೊನ್ನು ಹಣ್ಣೊಳಳೆಯನೊಲವ”
ಎನ್ನುವರಿವು ಆಕೆಗಿತ್ತೊ?-
ಎನೆಗೆ ತಿಳಿಯದು.

ಸೆರಗಿನಿಂದ ನೆಲವ ಗುಡಿಸಿ
ಮಡಿಲೊಳಿಟ್ಟು ಮುಚ್ಚಿ ತಂದ
ರಂಗವಲ್ಲಿಯಿಂದ ಹಸೆಯ
ಮುದುಕಿ ಬರೆದಳು
ಮೊದಲು ನೂರುದಳದ ಪದ್ಯ,
ಅದರ ಸುತ್ತ ಬಳ್ಳಿಹೆಣಿಗೆ,
ಬಳ್ಳಿಯೆಲೆಯ ಮೇಲೆ ಪಕ್ಷಿ
ಯುಗದ ಬೇಟವು.

 

ಇಂತು ತನ್ನ ಮನಕೆ ಚೆಲುವು
ಹೊಳೆಯುವಂತೆ ರೂಪುಗೊಡುತ
ಹಸೆಯ ಬರೆಯುತಿರುವ ಮರೆತ
ಳಂದು ಮುದುಕಿಯು.
ಅವಳ ಕಲೆಗೆ ಮುಗ್ಧನಾದೆ;
ಒಂದು ಡೊಂಕು ಗೆರೆಯನೆಳೆಯ-
ದವಳ ಕೈಯ ಚಳಕವೆನ್ನ
ಬೆರಗು ಮಾಡಿತು!

ಹಣ್ಣು ಮುದುಕಿ ತೀರ ಬಡವೆ,
’ಅಯ್ಯೊ’ ಎಂಬರಿಲ್ಲವೇನೊ-
ಮಲೆಯ ನಾರಸಿಂಹದೇವ-
ನೊಬ್ಬನಲ್ಲದೆ?
ಅವನು ಮೆಚ್ಚಲೆಂದು ತನ್ನ
ಮುಪ್ಪಿನಳಲ ಮೂಲೆಗೊತ್ತಿ
ಬೆಟ್ಟವೇರಿ ಹಸೆಯ ಬರೆವ
ಭಕ್ತಿ ಎಂಥದು!

ತೆರೆಯ ತೆಗೆಸಿ, ಹಣ್ಣುಕಾಯ
ಪೂಜೆ ಸಲಿಸಿ, ಸೊಡರು ಬೆಳಗ-
ಲವನ ಕಂಡೆ- ಹಸುಳೆ ಇತ್ತ
ಕಡೆಯೆ ತಿರುಗದು!
ಮುದುಕಿ ಬರೆವ ಹಸೆಯ ಮೇಲೆ
ಅದರ ಮನವು, ನೆಟ್ಟ ನೋಟ,
ದೇವಹೊಲಿದು ಕೈಯ ಮುಗಿಯು-
ವರಿವೆ ಇಲ್ಲವು!

“ಕಿಟ್ಟು, ನೋಡು, ತಲೆಯ ಮೇಲೆ
ಹೊಳೆವ ಹೊನ್ನು ರನ್ನದೊಡವೆ,
ದೇವರುಟ್ಟ ಸರಿಗೆ ಪಂಚೆ,
ಕೊರಲ ಪದಕವ;
ಮಲೆಯ ದೇವರೆಷ್ಟು ಚೆಲುವು!”
ಹಸುಳೆ ನೋಡದಿತ್ತ! ಅದಕೆ
ದೇವನಲ್ಲ- ಮುದುಕಿ ಬರೆವ
ಹಸೆಯೆ- ಸೋಜಿಗ!

ಅದರ ನಡತೆ ಹೊಳಿಸಿತಂದು
ಮನಕದೊಂದು ಹೊಸದು ನಿಜವ:
ದೇವನಲ್ಲ- ಬರಿಯ ಬೊಂಬೆ!-
ಹಸೆಯೆ ಸೋಜಿಗ!
ಭಕ್ತಿಮೂರ್ತಿ ಮುದುಕಿಯೊಮ್ಮೆ,
ದೇವನೊಮ್ಮೆ ನೋಡುತೆಂದೆ:
ದೇವ ಬೊಂಬೆ, ಪೂಜೆ ಆಟ,
ಭಕ್ತಿ ಸೋಜಿಗ.

ದೇವನಿರವು ದಿಟವೊ, ಸಟೆಯೊ-
“ಹೆರರು ತಿಳಿಯದಿರಿತಗಳನು,
ಹುದುಗಿ ಇರುವ ಪಾಪಗಳನು,
ಗುಟ್ಟನೆಲ್ಲವ.
ಎದೆಯ ಹೊಗುತ್ತಲೆಲ್ಲ ತಿಳಿದು
ಸಂತವಿಡುವನೊಬ್ಬನುಂಟು”
ಎನ್ನುವಚಲಭಕ್ತಿ ದಿಟವು,
ಮತ್ತು ಸೋಜಿಗ!

ಮುದುಕಿ ಇಹವ ಬಿಟ್ಟಳೇನೊ?
ಮಲೆಯ ದೇವ ಮೆಚ್ಚಲೆಂದು
ಇನ್ನು ಹಸೆಯ ಬರೆಯಳೇನೊ
ಗಿರಿಯ ಗುಡಿಯೊಳು?
ಆದರವನನೊಲಿಸುವುದನೆ
ಬಾಳಿನೊಂದೆ ಗುರುಯ ಮಾಡಿ
ದವಳ ನೆನಪು ಎಂದು ಮನಕೆ
ತಂಪನೀವುದು.

ಲೇಖಕರು

ಆಧುನಿಕ ಕನ್ನಡ ಸಾಹಿತ್ಯವನ್ನು ಬಲಪಡಿಸಿದ ಗಣ್ಯರಲ್ಲಿ ಪು.ತಿ. ನರಸಿಂಹಾಚಾರ್ (೧೯೦೫-೧೯೯೮) ಮುಖ್ಯರು. ಪು.ತಿ.ನ. ಅವರು ಮೈಸೂರು ಜಿಲ್ಲೆಯ ಮೇಲುಕೋಟೆಯಲ್ಲಿ ಜನಿಸಿದರು. ಮೈಸೂರಿನಲ್ಲಿ ವ್ಯಾಸಂಗ ಮಾಡಿ, ಸರಕಾರಿ ನೌಕರಿಗೆ ಸೇರಿಕೊಂಡರು. ಮೈಸೂರು ವಿಶ್ವವಿದ್ಯಾಲಯ ಪ್ರಕಟಿಸಿದ ವಿಶ್ವಕೋಶ, ಇಂಗ್ಲಿಶ್-ಕನ್ನಡ ನಿಘಂಟು ಯೋಜನೆಗಳಲ್ಲಿ ಜವಾಬ್ದಾರಿ ಸ್ಥಾನದಲ್ಲಿದ್ದು ದುಡಿದರು. ಶಾಸ್ತ್ರ ಪರಂಪರೆ ಜತೆಯಲ್ಲಿ ನಿಕಟ ಅನುಸಂಧಾನ ಮಾಡಿದ ಪು.ತಿ.ನ ಅವರು ಮೂಲತಃ ಕವಿಗಳು. ಹಣತೆ ಮೊದಲ ಕವನ ಸಂಕಲನ. ಮಾಂದಳಿರು, ಗಣೇಶ ದರ್ಶನ, ರಸ ಸರಸ್ವತಿ, ಹಳೆಬೇರು ಹೊಸ ಚಿಗುರು ಹೀಗೆ ಅನೇಕ ಸಂಕಲನಗಳು ಪ್ರಕಟವಾಗಿವೆ. ಅವರ ಶ್ರೀಹರಿ ಚರಿತೆ ಎಂಬುದು ಆಧುನಿಕ ಮಹಾಕಾವ್ಯಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕನ್ನಡ ಕಾವ್ಯ ಸಂದರ್ಭದಲ್ಲಿ ಉನ್ನತ ಸಾಧನೆ ಮಾಡಿದ ಪು.ತಿ.ನ ಅವರು ಪಂಪ ಪ್ತಶಸ್ತಿಯನ್ನು ಪಡೆದಿದ್ದಾರೆ. ಚಿಕ್ಕಮಗಳೂರಲ್ಲಿ ನಡೆದ ೫೩ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಆಶಯ

ಈ ಕವಿತೆಯನ್ನು ಪು.ತಿ.ನ. ಅವರ ಸಮಗ್ರಕಾವ್ಯ ಸಂಕಲನದಿಂದ ಆಯ್ಕೆ ಮಾಡಲಾಗಿದೆ. ಬೆಟ್ಟದ ಮೇಲಿರುವ ನರಸಿಂಹ ದೇವರ ಮುಂದೆ ರಂಗವಲ್ಲಿ ಬರೆಯುವ ಮುದುಕಿಯ ನಿರ್ಲಿಪತ್ತೆ, ಫಲಾಪೇಕ್ಷೆಯಿಲ್ಲದ ನಿಸ್ವಾರ್ಥ ಭಕ್ತಿಯನ್ನು ಕವಿ ಇಲ್ಲಿ ವರ್ಣಿಸಿದ್ದಾನೆ.

ಶಬ್ದಕೋಶ

ಮಾಗಿ = ಕಾಲದ ಹೆಸರು. ಹಸುಳೆ = ಚಿಕ್ಕಮಗು. ಕೊಳ = ನೀರಿನ ಹೊಂಡ. ವೇದಘೋಷ = ಮಂತ್ರಗಳ ಧ್ವನಿ, ಬೇಟ = ಪ್ರೀತಿ. ಹಸೆ = ಚಿತ್ರ.

ಪ್ರಶ್ನೆಗಳು

೧. ಗಿರಿಯ ಮೇಲಿದ್ದ ಗುಡಿಯ ವಾತಾವರಣವನ್ನು ಕವಿ ಹೇಗೆ ವರ್ಣಿಸಿದ್ದಾನೆ?

೨. ಗಿರಿಯ ಗುಡಿಯಲ್ಲಿದ್ದ ಮುದುಕಿಯನ್ನು ಕವಿ ಮಾತಿನಲ್ಲಿ ವರ್ಣಿಸಿರಿ?

೩. ಹಣ್ಣು ಮುದುಕಿ ರಂಗವಲ್ಲಿಯನ್ನು ಹೀಗೆ ಬರೆದಿದ್ದಳೆಂದು ಕವಿ ಚಿತ್ರಿಸಿದ್ದಾನೆ?

೪. ಮಗು ಏನನ್ನು ನೋಡುವುದರಲ್ಲಿ ತಲ್ಲಿನನಾಗಿದ್ದನು? ಯಾಕೆ?

೫. ಮುದುಕಿಯ ಭಕ್ತಿಯನ್ನು ನಿಮ್ಮ ಮಾತುಗಳಲ್ಲಿ ವಿವರಿಸಿರಿ.

ಹೆಚ್ಚಿನ ಓದು

ಕುವೆಂಪು:ದೇವರು ರುಜು ಮಾಡಿದನು-ಕವನ

ಕುವೆಂಪು:ಹೂವು-ದೇವರು-ಕವನ

ಪು.ತಿ.ನ:ರಂಗವಲ್ಲಿ-ಕವನ