ಹಣತೆ ಹಚ್ಚುತ್ತೇನೆ ನಾನೂ.
ಈ ಕತ್ತಲನು ಗೆದ್ದು ನಿಲ್ಲುತ್ತೇನೆಂಬ ಜಿದ್ದಿನಿಂದಲ್ಲ;
ಲೆಕ್ಕವೇ ಇರದ ದೀಪಾವಳಿಯ ಹಡಗುಗಳೆ
ಇದರಲ್ಲಿ ಮುಳುಗಿ ಕರಗಿರುವಾಗ
ನಾನು ಹಚ್ಚುವ ಹಣತೆ ಶಾಶ್ವತವೆಂಬ ಭ್ರಾಂತಿ ನನಗಿಲ್ಲ.

ಹಣತೆ ಹಚ್ಚುತ್ತೇನೆ ನಾನೂ;
ಈ ಕತ್ತಲಿನಿಂದ ಬೆಳಕಿನ ಕಡೆಗೆ
ನಡೆದೇನೆಂಬ
ಆಸೆಯಿಂದಲ್ಲ.
ಕತ್ತಲಿನಿಂದ ಕತ್ತಲಿಗೇ ತಡಕಾಡಿಕೊಂಡು ಬಂದಿವೆ ಹೆಜ್ಜೆ
ಶತಮಾನದಿಂದಲೂ.
ನಡು ನಡುವೆ ಒಂದಷ್ಟು ಬೆಳಕು ಬೇಕೆಂದು
ಆಗಾಗ ಕಡ್ಡಿ ಗೀಚಿದ್ದೇವೆ,
ದೀಪ ಮುಡಿಸಿದ್ದೇವೆ,
ವೇದ, ಶಾಸ್ತ್ರ, ಪುರಾಣ, ಇತಿಹಾಸ, ಕಾವ್ಯ, ವಿಜ್ಞಾನಗಳ
ಮತಾಪು-ಪಟಾಕಿ-ಸುರುಸುರುಬತ್ತಿ-ಹೂಬಾಣ
ಸುಟ್ಟಿದ್ದೇವೆ.
’ತಮಸೋಮಾ ಜ್ಯೋತಿರ್ಗಮಯಾ’ ಎನ್ನುತ್ತ ಬರೀ
ಬೂದಿಯನ್ನೇ ಕೊನೆಗೆ ಕಂಡಿದ್ದೇವೆ.

ನನಗೂ ಹೊತ್ತು, ಈ ಕತ್ತಲೆಗೆ
ಕೊನೆಯಿರದ ಬಾಯಾರಿಕೆ.
ಎಷ್ಟೊಂದು ಬೆಳಕನ್ನು ಇದು ಉಟ್ಟರೂ, ತೊಟ್ಟರೂ
ತಿಂದರೂ, ಕುಡಿದರೂ ಇದಕ್ಕೆ ಇನ್ನೂ ಬೇಕು
ಇನ್ನೂಬೇಕು ಎನ್ನುವ ಬಯಕೆ.

ಆದರೂ ಹಣತೆ ಹಚ್ಚುತ್ತೇನೆ ನಾನು;
ಕತ್ತಲೆಯನ್ನು ದಾಟುತ್ತೇನೆಂಬ ಭ್ರಮೆಯಿಂದಲ್ಲ,
ಇರುವಷ್ಟು ಹೊತ್ತು ನಿನ್ನ ಮುಖ ನಾನು, ನನ್ನ ಮುಖ ನೀನು
ನೋಡಬಹುದೆಂಬ ಒಂದೇ ಒಣ್ದು ಆಸೆಯಿಂದ;
ಹಣತೆ ಆರಿದ ಮೇಲೆ, ನೀನು ಯಾರೋ, ಮತ್ತೆ
ನಾನು ಯಾರೋ.

ಲೇಖಕರು

ಕನ್ನಡ ಸಾಹಿತ್ಯಿಕ ವಿದ್ವತ್ ಪರಂಪರೆಯನ್ನು ಹೆಚ್ಚಿಸಿದ ಜಿ.ಎಸ್. ಶಿವರುದ್ರಪ್ಪ (ಜ.೧೯೨೬) ನವರು ಶಿವಮೊಗ್ಗ ಜಿಲ್ಲೆಯ ಈಸೂರಿನಲ್ಲಿ ಹುಟ್ಟಿದರು. ಮೈಸೂರಿನಲ್ಲಿ ವ್ಯಾಸಂಗ ಮಾಡಿದ ಅವರು ಕನ್ನಡದಲ್ಲಿ ಎಂ.ಎ. ಮತ್ತು ಪಿಎಚ್.ಡಿ ಪದವಿಗಳನ್ನು ಪಡೆದರು. ದಾವಣಗೆರೆ, ಶಿವಮೊಗ್ಗ, ಮೈಸೂರು ಹಾಗೂ ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಕೆಲಕಾಲ ಉಪನ್ಯಾಸಕರಾಗಿ ದುಡಿದು, ೧೯೭೦ರಿಂದ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಮುಖ್ಯಸ್ಥರಾಗಿ ದುಡಿದು ನಿವೃತ್ತರಾದರು. ಕವಿಯಾಗಿ, ವಿಮರ್ಶಕಾರರಾಗಿ, ಮೀಮಾಂಸಕರಾಗಿ ಕನ್ನಡ ಸಾಹಿತ್ಯವನ್ನು ಬಲಪಡಿಸಿದ ಜಿ.ಎಸ್.ಎಸ್. ಅವರು ಸುಮಾರು ೧೫ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ವಿಮರ್ಶೆಯ ಪೂರ್ವ-ಪಶ್ಚಿಮ, ಪರಿಶೀಲನೆ, ಕನ್ನಡ ಸಾಹಿತ್ಯ ಸಮೀಕ್ಷೆ, ಕಾವ್ಯಾರ್ಥ ಚಿಂತನ ಮುಂತಾದ ಕೃತಿಗಳನ್ನು ಬರೆದಿರುವರು. ಪ್ರವಾಸ ಪ್ರಿಯರಾದ ಅವರು ಮಾಸ್ಕೊದಲ್ಲಿ ೨೨ ದಿನ, ಗಂಗೆಯ ಶಿಖರಗಳಲ್ಲಿ, ಅಮೆರಿಕದಲ್ಲಿ ಕನ್ನಡಿಗ ಎಂಬ ಪ್ರವಾಸ ಕಥನಗಳನ್ನು ಪ್ರಕಟಿಸಿದ್ದಾರೆ. ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ನಾಡೋಜ ಗೌರವ ಹಾಗೂ ಪಂಪ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಆಶಯ

ಈ ಕವಿತೆಯನ್ನು ಗೋಡೆ ಎಂಬ ಸಂಕಲನದಿಂದ ಆಯ್ದುಕೊಳ್ಳಲಾಗಿದೆ. ಪ್ರತಿಯೊಬ್ಬ ವ್ಯಕ್ತಿ ಜ್ಞಾನ ಸಂಪಾದಿಸಬೇಕು. ಈ ಜ್ಞಾನದ ಬಲದಿಂದ ಸಮಾಜವನ್ನು ಮುಕ್ತವಾಗಿ ಪ್ರೀತಿಯಿಂದ ನೋಡಲು ಸಾಧ್ಯವಾಗುತ್ತದೆ. ಮನುಷ್ಯ ಮನುಷ್ಯರ ನಡುವಿನ ಕಂದರವನ್ನು ಮುಚ್ಚಲು ಇರುವ ಒಂದು ಎಂದರೆ ಪರಸ್ಪರ ತಿಳುವಳಿಕೆಯಿಂದ ಮಾತ್ರ ಎಂಬುದು ಇಲ್ಲಿ ವ್ಯಕ್ತವಾಗಿದೆ.

ಶಬ್ದಕೋಶ

ಹಚ್ಚು = ಹೊತ್ತಿಸು, ಮುಡಿಸು. ಹಣತೆ = ದೀಪ. ಜಿದ್ದು = ಛಲ, ಪಣ. ಕರಗು = ಇಲ್ಲದಂತಾಗು. ಭ್ರಾಂತಿ = ಹುಚ್ಚುತನ. ತಡಕಾಡಿ = ಹುಡುಕಾಡಿ. ಮುಡಿಸು = ಹಚ್ಚು. ಹೊತ್ತು = ಸಮಯ.

ಪ್ರಶ್ನೆಗಳು

೧.ಕವಿ “ಹಣತೆ ಹಚ್ಚುತ್ತೇನೆ ನಾನೂ” ಎಂದು ಏಕೆ ಹೇಳುತ್ತಾರೆ?

೨. ಕವಿ “ಬರೀ ಬೂದಿಯನ್ನೇ ಕೊನೆಗೆ ಕಂಡಿದ್ದೇನೆ” ಎಂದು ಯಾಕೆ ಹೇಳುತ್ತಾರೆ?

೩. ಕವಿ “ಈ ಕತ್ತಲೆಗೆ ಕೊನೆಯಿರದ ಬಾಯಾರಿಕೆ” ಎಂದು ಹೇಳುವುದರ ಅರ್ಥವೇನು?

೪. ಕತ್ತಲೆಯನ್ನು ಓಡಿಸುತ್ತೇನೆಂಬ ಭ್ರಾಂತಿ ತನಗಿಲ್ಲವೆಂದು ಕವಿ ಹೇಳುವುದರ ಅರ್ಥವೇನು?

೫. “ಹಣತೆ” ಕವಿತೆಯ ತಾತ್ಪರ್ಯವನ್ನು ವಿವರಿಸಿರಿ.