ಕನ್ನಡ ವಿಶ್ವವಿದ್ಯಾಲಯ ಕನ್ನಡ ಸಂಸ್ಕೃತಿಯ ಬಹುತ್ವದ ನೆಲೆಗಳನ್ನು ಹುಡುಕುವ. ಗಟ್ಟಿಗೊಳಿಸುವ ಹರಡುವ ಕಾಯಕವನ್ನು ಕಳೆದ ಹನ್ನೆರಡು ವರುಷಗಳಲ್ಲಿ ನೋಂಪಿಯಂತೆ ನಡೆಸಿಕೊಂಡು ಬಂದಿದೆ. ಕನ್ನಡ ಸಂಸ್ಕೃತಿಯನ್ನು ಮತ್ತೆ ಮತ್ತೆ ನಿರ್ವಚನ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ಕನ್ನಡ ವಿಶ್ವವಿದ್ಯಾಲಯವು ಒಂದು ಆಡುಂಬೊಲವಾಗಿ ಕಾರ್ಯ ನಿರ್ವಹಿಸಿದೆ. ನಮಗೆ ಗೊತ್ತಿರುವ ಸಂಸ್ಕೃತಿಯ ಅರ್ಥಗಳ ಆಚೆಗೆ ಅನೂಹ್ಯ ಲೋಕಗಳ ಕಡೆಗೆ ತನ್ನನ್ನು ಮತ್ತು ಕನ್ನಡಿಗರನ್ನು ಒಯ್ಯುವ ಪಯಣದ ದಾರಿಗಳನ್ನು ರೂಪಿಸುವ ಮಹತ್ವದ ಸಾಹಸದ ಹೆಜ್ಜೆಗಳು ಮೂಡಿ ಬಂದಿವೆ. ಇದು ನಿರಂತರ ನಡೆಯಬೇಕಾದ ಬಹುದಾರಿಗಳ ಮಹಾಯಾನ.

ಕನ್ನಡ ವಿಶ್ವವಿದ್ಯಾಲಯವು ಕರ್ನಾಟಕ ರಾಜ್ಯದ ಕಲಾಶಾಲೆಗಳನ್ನು ತನ್ನ ತೆಕ್ಕೆಗೆ ಒಗ್ಗಿಸಿಕೊಂಡದ್ದು ಅಂತಹ ಒಂದು ಮಹತ್ವದ ಹೆಜ್ಜೆ. ಬಣ್ಣಗಳಲ್ಲಿ ಮತ್ತು ಕುಂಚಗಳಲ್ಲಿ ಮಾತನಾಡುವ ಈ ಕಲೆ ಅಷ್ಟಕ್ಕೆ ತೃಪ್ತವಾಗದೆ ಸಂವಹನದ ಇತರ ಸಾಧ್ಯತೆಗಳನ್ನು ಸೂರೆಗೊಂಡಾಗ ಮಾತ್ರ ಹೊಸ ಆಯಾಮಗಳನ್ನು ಪಡೆಯಬಲ್ಲುದು, ಹೊಸ ಅರ್ಥದ ಬಣ್ಣಗಳು ಮೂಡಬಲ್ಲವು. ಈ ದೃಷ್ಟಿಯಿಂದಲೇ ಕಲಾಶಾಲೆಯ ವಿದ್ಯಾರ್ಥಿಗಳಿಗೆ ಕನ್ನಡ ವಿಶ್ವವಿದ್ಯಾಲಯ ರೂಪಿಸಿದ ಕನ್ನಡ ಪಠ್ಯ ನುಡಿದೀಪ-೨ ಮಹತ್ವದ ಸಂಕಲನ. ಬಣ್ಣಗಳ ಜೊತೆಗೆ ಭಾಷೆಯಲ್ಲಿ ಮಾತನಾಡಲು ಕಲಿತಾಗ ಬಣ್ಣಗಳಿಗೆ ಮಾತು ಬರುತ್ತದೆ. ಮಾತುಗಳು ಹೊಸ ಬಣ್ಣವನ್ನು ತಾಳುತ್ತವೆ.

ಕನ್ನಡದ ಮೂರು ಶ್ರೇಷ್ಠ ಕವಿಗಳಾದ ಬೇಂದ್ರೆ, ಪುತಿನ ಮತ್ತು ಜಿ.ಎಸ್. ಶಿವರುದ್ರಪ್ಪನವರ ಕವನಗಳು ಆಧುನಿಕ ಕನ್ನಡ ಕಾವ್ಯದ ಮೂರು ನೆಲೆಗಳನ್ನು ಅನಾವರಣ ಮಾಡುತ್ತವೆ. ಬೇಂದ್ರೆಯವರ ’ಶ್ರಾವಣ’ ಕವನ ಒಂದು ವರ್ಣ ಚಿತ್ರದಂತೆ ಕಣ್ಣಿಗೆ ಕಟ್ಟುವ ನುಡಿಚಿತ್ರವನ್ನು ಉಳ್ಳದ್ದು. ನಿಸರ್ಗದ ವರ್ಣರಂಜಿತ ಚಿತ್ರವನ್ನು ಕನ್ನಡದ ಗ್ರಾಮೀಣ ಭಾಷೆಯಲ್ಲಿ ವರ್ಣರಂಜಿತವಾಗಿ ರಾಗಧ್ವನಿ ಸಹಿತ ಚಿತ್ರಿಸುವ ಕವನ ’ಶ್ರಾವಣ’. ಪುತಿನ ಅವರ ’ರಂಗವಲ್ಲಿ’ ಚಿತ್ರ ಕಲಾವಿದರಿಗೆ ಭಾಷೆಯಲ್ಲಿ ಕಟ್ಟಿಕೊಟ್ಟ ಇನ್ನೊಂದು ಬಗೆಯ ವರ್ಣ ಚಿತ್ರ. ಕಲಾವಿದರಿಗೆ ’ರಂಗವಲ್ಲಿ’ ಗೆರೆಗಳ ಮಾಂತ್ರಿಕ ಲೋಕವಾಗಿ ಕಂಡು ಬಂದರೆ ಕವಿ ಪುತಿನರವರಿಗೆ ನರಸಿಂಹದೇವರ ಮುಂದೆ ರಂಗವಲ್ಲಿ ಬರೆಯುವ ಮುದುಕಿ ನಿಸ್ವಾರ್ಥ ಭಕ್ತಿಯ ರೂಪಕವಾಗಿ ಕಾಣಿಸುತ್ತಾಳೆ. ಜಿ.ಎಸ್. ಎಸ್. ಅವರ ಜನಪ್ರಿಯ ಸುಂದರ ಕವನ ’ನನ್ನ ಹಣತೆ’ ನುಡಿ ಚಿತ್ರದ ಇನ್ನೊಂದು ಅದ್ಭುತ ರಚನೆ. ಹಣತೆ ಹಚ್ಚುವ ಚಟುವಟಿಕೆ ಒಂದು ದಾರ್ಶನಿಕ ಧ್ವನಿಯಲ್ಲಿ ಕೊನೆಯಾಗುವವರೆಗೆ ಹಣತೆ ಹಚ್ಚುವ ಚಿತ್ರ ಚಲಿಸುತ್ತ ಹೋಗುತ್ತದೆ. ಕತ್ತಲೆ ನಿವಾರಿಸುವ, ಬೆಳಕು ಚೆಲ್ಲುವ, ಮಾತು ಮುಖ ಕಾಣುವ ಅಗತ್ಯ ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿದೆ. ಕನ್ನಡದ ಸಂಸ್ಕೃತಿ ಪ್ರಿಯ ಮಹತ್ವದ ಕತೆಗಾರರಾದ ಮಾಸ್ತಿ ಅವರ ’ಜ್ಯೋಗ್ಯೇರ ಅಂಜಪ್ಪನ ಕೋಳಿಕಥೆ’ ಗ್ರಾಮೀಣ ಬದುಕಿನ ಒಳಗಿನ ನ್ಯಾಯ ವ್ಯವಸ್ಥೆಯ ಕುರಿತು ವಿಮರ್ಶೆ ಮಾಡುತ್ತದೆ. ನಮ್ಮ ಬದುಕಿನ ಅನೇಕ ನಿರ್ಣಯಗಳನ್ನು ಒಟ್ಟು ವ್ಯವಸ್ಥೆಯ ದೌರ್ಬಲ್ಯವನ್ನು ಮತ್ತೆ ಮತ್ತೆ ಸಾಬೀತುಗೊಳಿಸುವ ಚಿತ್ರಗಳು ಎನ್ನುವುದನ್ನು ನೈತಿಕ ಹಾಗೂ ಸಾಮಾಜಿಕ ನೆಲೆಗಳಲ್ಲಿ ಮಾಸ್ತಿ ವಿವರಿಸಲು ಪ್ರಯತ್ನಿಸಿದ್ದಾರೆ. ಸೇಡಿಯಾಪು ಕೃಷ್ಣಭಟ್ಟರ ’ನಾಗರಬೆತ್ತ’ ವಸಾಹತುಶಾಹಿ ವ್ಯವಸ್ಥೆಯ ತೀಕ್ಷ್ಣ ವಿಮರ್ಶೆಯಾಗಿ ಜೊತೆಗೆ ಬ್ರಿಟಿಷರ ಆಳ್ವಿಕೆಯ ದೌರ್ಜನ್ಯದ ರೂಪಕವಾಗಿ ಕಾಣಿಸುತ್ತದೆ. ಹಿಂಸೆ ಮತ್ತು ಪ್ರಭುತ್ವ ಎಲ್ಲ ಕಾಲಕ್ಕೂ ಜೊತೆಗೇ ಇರುತ್ತದೆ ಎನ್ನುವುದು ಈ ಕತೆಯ ನವ್ಯಚಿರಸತ್ಯ. ನಮ್ಮ ಕತೆಗಳ ಕಾಲಘಟ್ಟದಲ್ಲಿ ಕಾಣಿಸಿಕೊಂಡ ರಾಘವೇಂದ್ರ ಖಾಸನೀಸರ ’ತಬ್ಬಲಿಗಳು’ ಕುಟುಂಬವನ್ನು ಒಂದು ಘಟಕವನ್ನಾಗಿಟ್ಟುಕೊಂಡು ಅದರೊಳಗಿನ ವಿಕ್ಷಿಪ್ತತೆ ಮತ್ತು ಛಿದ್ರತೆಗಳ ಮೂಲಕ ಒಟು ವ್ಯವಸ್ಥೆಯ ದುರಂತದ ಚಿತ್ರಣವನ್ನು ಕೊಡುತ್ತದೆ. ಬಿ.ಜಿ.ಎಲ್. ಸ್ವಾಮಿಯವರ ’ಹಸುರು ಹೊನ್ನು’ ಪುಸ್ತಕವು ಪ್ರವಾಸ ಸಾಹಿತ್ಯ, ಸಸ್ಯಶಾಸ್ತ, ಪ್ರಬಂಧ, ಹಾಸ್ಯಬರಹ ಎಲ್ಲವುಗಳ ಲಕ್ಷಣಗಳನ್ನೊಳಗೊಂಡ ಒಂದು ಆಹ್ಲಾದಕರ ಶೈಕ್ಷಣಿಕ ಬರವಣಿಗೆ. ಅದರ ಒಂದು ಭಾಗ ’ಆನೆಹಳ್ಳದಲ್ಲಿ ಹುಡುಗಿಯರು’. ಶೈಕ್ಷಣಿಕ ಪ್ರವಾಸ ಕಥನದ ಒಂದು ಅಪೂರ್ವ ರಮ್ಯ ಮಾದರಿ ಈ ಬರಹ. ಶಾಸ್ತ್ರ ಮತ್ತು ಶಿಷ್ಟ ತಿಳುವಳಿಕೆಯನ್ನು ಒಂದು ಕಥನವಾಗಿಸುವುದರ ಮೂಲಕವೇ ಸಮರ್ಪಕವಾಗಿ ಸಂವಹನ ಮಾಡಬಹುದು ಎಂಬುದಕ್ಕೆ ಇದು ಉತ್ತಮ ನಿರ್ದಶನ. ಸಮಕಾಲೀನ ಕನ್ನಡ ಸಾಹಿತ್ಯದ ಮಹತ್ವದ ಸಂಸ್ಕೃತಿ ಚಿಂತಕ ಪಿ. ಲಂಕೇಶ್ ಅವರ ’ಗುಬ್ಬಚ್ಚಿಯ ಗೂಡು’ ಒಂದು ಪುಟ್ಟ ಅನುಭವದ ಬೆನ್ನು ಹಿಡಿದು ಅದನ್ನು ಒಂದು ತಾತ್ವಿಕ ಪ್ರಬಂಧವನ್ನಾಗಿಸುವ ಲಲಿತ ವೈಚಾರಿಕ ಲೇಖನ. ಲಲಿತ ಪ್ರಬಂಧದ ವ್ಯಾಕರಣವನ್ನು ಬದಲಾಯಿಸುವ ದೃಷ್ಟಿಯಿಂದ ಇದು ವಿಶಿಷ್ಟವಾದುದು. ಕಟ್ಟುವ ಕ್ರಿಯೆಯ ಕಲಾವಂತಿಕೆ ಸೃಜನಶೀಲತೆಯ ನೆಲೆಗಳು ಎಲ್ಲವೂ ಇಲ್ಲಿ ಚೊಕ್ಕವಾಗಿ ಚಿತ್ರಕ ಶೈಲಿಯಲ್ಲಿ ಮೂಡುಬಂದವೆ. ಆಧುನಿಕ ಕನ್ನಡ ಸಾಹಿತ್ಯದ  ಸಂದರ್ಭದಲ್ಲಿ ವಿಜ್ಞಾನ, ಸ್ತ್ರೀವಾದ ಮತ್ತು ಸಾಂಸ್ಕೃತಿಕ ನೋಟಗಳನ್ನು ಒಂದುಗೂಡಿಸಿರುವ ನೇಮಿಚಂದ್ರ ಅವರ ’ಪೆರುವಿನ ಕಣಿವೆಯಲ್ಲಿ’ ಪ್ರವಾಸ ಕಥನದ ಭಾಗ ’ಅಮೇಜಾನ್ ಕಾಡಿನಲ್ಲಿ’ ಈ ಬರಹದಲ್ಲಿ ಉದ್ದಕ್ಕೂ ಅನ್ಯ ಸಂಸ್ಕೃತಿಗೆ ತಮ್ಮ ವೈಚಾರಿಕ ನೆಲೆಯಿಂದ ನಿರಂತರವಾಗಿ ಪ್ರತಿಕ್ರಿಯೆ ಕೊಡುವ ಮಾದರಿಗಳನ್ನು ಕಾಣುತ್ತೇವೆ. ಪ್ರವಾಸ ಕಥನವೆನ್ನುವುದು ನಾವು ನೋಡಿದ ಸಂಗತಿಗಳ ಕಥನವಲ್ಲ, ನಾವು ನೋಡಬಯಸುವ ವಿಷಯಗಳ ಪ್ರತಿಫಲನ ಎನ್ನುವ ದೃಷ್ಟಿಯಿಂದಲೂ ಈ ಬರಹ ಅಪರಿಚಿತ ಬದುಕನ್ನು ಪರಿಚಿತಗೊಳಿಸುತ್ತಲೇ ಪ್ರತಿಕ್ರಿಯೆ ನೀಡುತ್ತದೆ. ಕುವೆಂಪು ಅವರ ವೈಚಾರಿಕತೆಯ ಐತಿಹಾಸಿಕ ಮಹತ್ವದ ಲೇಖನ ’ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ ಉದ್ಧೀಪಿಸಲು ಯುವಕರಲ್ಲಿ ಆತ್ಮಾಭಿಮಾನವನ್ನು ನಿರಂಕುಶಮತಿಗಳನ್ನಾಗಿಸಲು ಮಾಡಿದ ಈ ಭಾಷಣ ಅವರ ವಿಶ್ವ ಮಾನವತತ್ವದ ಅಡಿಗಲ್ಲು. ಆದ್ಯಾತ್ಮಿಕ ಪರಿಭಾಷೆಯಲ್ಲಿ ವೈಚಾರಿಕ ಚಿಂತನೆಯನ್ನು ಹೇಳುವ ತುಂಬಾ ಅಪೂರ್ವವಾದ ಮಾರ್ಗವನ್ನು ಕುವೆಂಪು ಇಲ್ಲಿ ಅನುಸರಿಸಿದ್ದಾರೆ. ಹೀಗಾಗಿ ಮತರಾಹಿತ್ಯದ ಮತಿಸಂಪನ್ನ ಆಧುನಿಕ ಬದುಕಿಗೆ ಈ ಲೇಖನ ಒಂದು ಪ್ರಣಾಳಿಕೆ ಇದ್ದಂತೆ. ಕಲಾವಿದ ಆರ್. ಎಂ. ಹಡಪದ್ ಅವರನ್ನು ಕುರಿತ ಎಂ.ಎಚ್. ಕೃಷ್ಣಯ್ಯ ಅವರ ನುಡಿಚಿತ್ರ ಕಲಾ ವಿದ್ಯಾರ್ಥಿಗಳಿಗೆ ಪ್ರೇರಣಯನ್ನು ಕೊಡಬಲ್ಲ ಒಂದು ಆದರ್ಶ ಬರಹ. ಇದು ಕಲಾವಿದ ಹಡಪದ್ ಅವರ ಲೌಕಿಕ ವ್ಯಕ್ತಿ ವಿವರಗಳಿಗೆ ಸೀಮಿತವಾಗದೆ ಕಲೆಯ ನಿರ್ಮಾಣ ಮತ್ತು ಪ್ರಸರಣ ಕುರಿತು ಹೊಸ ನೋಟಗಳನ್ನು ನೀಡುತ್ತದೆ. ಕಲಾವಿದರ ಸ್ಪೂರ್ತಿಯ ಹಲವು ಚಿಲುಮೆಗಳಿಂದ ಹೊರಹೊಮ್ಮಬಹುದು ಎನ್ನುವುದನ್ನು ಬೋಧಿಸುವ ಬರಹವಿದು.

ಇಂತಹ ಸಂಸ್ಕೃತಿನಿಷ್ಠ ಮತ್ತು ವಿಶಿಷ್ಟ ನುಡಿದೀಪವನ್ನು ಕನ್ನಡದ ಮಹತ್ವದ ಕಥೆಗಾರರಾದ ಕನ್ನಡ ವಿಶ್ವವಿದ್ಯಾಲಯದ ಡಾ. ಕರೀಗೌಡ ಬೀಚನಹಳ್ಳಿ ಮತ್ತು ಡಾ. ಅಮರೇಶ ನುಗಡೋಣಿ ಅವರು ತಮ್ಮ ಸೃಜನಶೀಲ ಮನಸ್ಸಿನಿಂದ ಆಯ್ಕೆ ಮಾಡಿ ಸಂಪಾದಿಸಿ ಕೊಟ್ಟಿದ್ದಾರೆ. ಅವರಿಗೆ ಕನ್ನಡ ವಿಶ್ವವಿದ್ಯಾಲಯದ ಪ್ರೀತಿಯ ಕೃತಜ್ಞತೆಗಳು. ಈ ಕನ್ನಡ ಪಠ್ಯವನ್ನು ಅಂದವಾಗಿ ಕಲಾತ್ಮಕವಾಗಿ ಮುದ್ರಿಸಿ ಪ್ರಕಟಿಸಿರುವ ಪ್ರಸಾರಾಂಗದ ನಿರ್ದೇಶಕ ಡಾ. ಹಿ.ಚಿ. ಬೋರಲಿಂಗಯ್ಯ, ಸಹಾಯಕ ನಿರ್ದೇಶಕ ಸುಜ್ಞಾನಮೂರ್ತಿ ಅವರಿಗೆ ಮತ್ತು ಕಲಾವಿದ ಕೆ.ಕೆ. ಮಕಾಳಿ ಅವರಿಗೆ ಅಭಿನಂದನೆಗಳು.

ಬಿ.ಎ. ವಿವೇಕ ರೈ
ಕುಲಪತಿ