ಕನ್ನಡ ವಿಶ್ವವಿದ್ಯಾಲಯದಲ್ಲಿ ಪಠ್ಯಪುಸ್ತಕ ರಚನಾ ಕೇಂದ್ರವು ಕರ್ನಾಟಕದಲ್ಲಿ ಶಿಕ್ಷಣದ ಎಲ್ಲ ಹಂತಗಳಲ್ಲಿ ಎಲ್ಲ ವಿಷಯಗಳಿಗೆ ಸಂಬಂಧಿಸಿದಂತೆ ಪಠ್ಯಪುಸ್ತಕಗಳನ್ನು ಆಕರ ಗ್ರಂಥಗಳು, ಪರಾಮರ್ಶನ ಕೃತಿಗಳು, ಅಧ್ಯಾಪಕರ ಕೈಪಿಡಿಗಳು ಮುಂತಾದವುಗಳನ್ನು ಸಿದ್ಧಪಡಿಸುವ ಗುರುತರ ಜವಾಭ್ದಾರಿಯನ್ನು ನಿರ್ವಹಿಸುತ್ತಿದೆ. ಕೇಂದ್ರವು ಸಿದ್ಧ ಮಾಡಿದ ಪಠ್ಯಗಳನ್ನು ವಿಶ್ವವಿದ್ಯಾಲಯದ ಪ್ರಸಾರಾಂಗವು ಆಕರ್ಷಕವಾಗಿ ಪ್ರಕಟಿಸುತ್ತಿದೆ.

ಕರ್ನಾಟಕದ ದೃಶ್ಯಕಲಾ ವಿದ್ಯಾಲಯಗಳನ್ನು ಸರ್ಕಾರವು ಕನ್ನಡ ವಿಶ್ವವಿದ್ಯಾಲಯದ ವ್ಯಾಪ್ತಿಗೆ ನೀಡಿತು. ದೃಶ್ಯಕಲಾ ವಿದ್ಯಾಲಯದ ಕಲಾಮೂಲ ತರಗತಿಗಳಿಗೆ ಈ ಪಠ್ಯವನ್ನು ರೂಪಿಸಿದೆ. ಈ ತರಗತಿಗಳಿಗೆ ಅಗತ್ಯವಾದ ಕನ್ನಡ ಭಾಷಾ ಪಠ್ಯಗಳನ್ನು ’ನುಡಿದೀಪ ೨’ ಎಂಬ ಹೆಸರಿನಲ್ಲಿ ಕೇಂದ್ರವು ಸಿದ್ಧಪಡಿಸಿದೆ.

ಈ ಪಠ್ಯಪುಸ್ತಕವನ್ನು ಅಚ್ಚುಕಟ್ಟಾಗಿ ಸಿದ್ಧ ಮಾಡಿ ಕೊಟ್ಟಿರುವ ಸಂಪಾದಕರಾದ ಡಾ. ಕರೀಗೌಡ ಬೀಚನಹಳ್ಳಿ ಮತ್ತು ಡಾ. ಅಮರೇಶ ನುಗಡೋಣಿ ಅವರಿಗೆ ಕೇಂದ್ರದ ಪರವಾಗಿ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಕರ್ನಾಟಕ ಸಂಸ್ಕೃತಿಯನ್ನು ಸೃಜನಶೀಲವಾಗಿ ಈ ಪಠ್ಯವು ಪರಿಚಯಿಸುತ್ತಿದೆ.

ಪಠ್ಯಪುಸ್ತಕ ರಚನಾ ಕೇಂದ್ರದ ಹಿಂದಿನ ರೂವಾರಿಯಾದ ಡಾ. ಕೆ.ವಿ. ನಾರಾಯಣ ಅವರಿಗೆ, ಕೇಂದ್ರದ ಸಲಹಾ ಮಂಡಳಿ ಸದಸ್ಯರಿಗೆ,  ಕೇಂದ್ರದ ಸಿಬ್ಬಂದಿಗೆ, ಪುಸ್ತಕಗಳನ್ನು ಹೊರತರುತ್ತಿರುವ ಪ್ರಸಾರಾಂಗದ ನಿರ್ದೇಶಕರಿಗೆ ಮತ್ತು ಸಿಬ್ಬಂದಿಗೆ ನನ್ನ ವಂದನೆಗಳು ಸಲ್ಲುತ್ತವೆ. ನಮ್ಮ ಕುಲಪತಿಗಳಾದ ಡಾ. ಬಿ.ಎ. ವಿವೇಕ ರೈ ಅವರು ಕೇಂದ್ರದ ಕಾರ್ಯವನ್ನು ಮೆಚ್ಚಿಕೊಂಡಿದ್ದಾರೆ ಮತ್ತು ಪ್ರಸ್ತುತ ಕೃತಿಗೆ ಮುನ್ನುಡಿಯನ್ನು ಬರೆದು ಹರಸಿದ್ದಾರೆ. ಅವರಿಗೆ ನಾನು ಋಣಿಯಾಗಿದ್ದೇನೆ. ತಮ್ಮ ಬರಹಗಳನ್ನು ಈ ಪಠ್ಯದಲ್ಲಿ ಬಳಸಿಕೊಳ್ಳಲು ಅನುಮತಿ ನೀಡಿರುವ ನಾಡಿನ ಖ್ಯಾತ ಬರಹಗಾರರಿಗೆ ತುಂಬು ಹೃದಯದ ಕೃತಜ್ಞತೆಗಳು.