ದೊರೆತಿದ್ದ ಗುಡಮರಗಳೇ ಇಲ್ಲಿಯೂ ಬೆಳೆಯುತ್ತಿದ್ದುವಾದ್ದರಿಂದ ಹೆಚ್ಚಿನ ಸಂಗ್ರಹಕ್ಕೆ ಅವಕಾಶವಿರಲಿಲ್ಲ. ಮುಂದೆ ಮುಂದೆ ಹೋಗುತ್ತಲೇ ಇದ್ದೆವು. ರೇಂಜರು ತಟ್ಟಕ್ಕನೆ ನಿಂತು ಅತ್ತಿತ್ತ ನೋಡಲಾರಂಭಿಸಿದ. ಹಾದಿ ಗೊತ್ತು ಮಾಡುವುದು ಸ್ವಲ್ಪ ಕಷ್ಟವಾಯಿತು. ಫಾರೆಸ್ಟರು ಕೊಂಚ ದೂರ ಮುಂದೆ ಹೋಗಿ ಹುಡುಕಾಡಿ ರೇಂಜರಿಗೆ ಅದೇನನೋ ಮಲೆಯಾಳ ಭಾಷೆಯಲ್ಲಿ ವರದಿ ಒಪ್ಪಿಸಿದ. ಸ್ವಲ್ಪ ದೂರ ಹೋದರೆ ನಾವು ಬಂದ ದಾರಿ ಮೂರಾಗಿ ಕವಲೊಡೆಯುತ್ತದೆಯಂತೆ. ಅವುಗಳೊಂದರಲ್ಲಿ ಮಾತ್ರ ನಾವು ಮುಂಬರಿಯಬೇಕು; ಮಿಕ್ಕ ಎರಡೂ ಆನೆ ಹಿಂಡಿನ ನಿವಾಸ ಸ್ಥಾನವನ್ನು ಕುರಿತು ಸೇರುತ್ತವೆಯಂತೆ. ಅರಣ್ಯಾಧಿಕಾರಿಗಳ ಹಿಂದೆಯೇ ಒಂದು ಮೈಲೆ ನಡೆದೆವು. ವಿದ್ಯಾರ್ಥಿಗಳಲ್ಲಿ ಕೆಲವರಂತೂ ಬಹಳ ದಣಿದುಹೋಗಿದ್ದಿರಬೇಕು. ಕಿಸೆಯಲ್ಲಿ ತುಂಬಿಕೊಂಡು ಬಂದಿದ್ದ ಪೆಪ್ಪರ್ ಮಿಂಟುಗಳನ್ನೂ ಬಿಸ್ಕತ್ತು ಚಾಕಲೇಟುಗಳನ್ನೂ ತಿಂದುಬಿಟ್ಟಿದ್ದರು. ಹಾದಿಯಲ್ಲಿ ಪೈಪೋಟಿಯಿಂದ ಶೇಖರಿಸಿಕೊಂಡಿದ್ದ ನೆಲ್ಲಿಕಾಯಿ ಹುಣಸೆಕಾಯಿಗಳನ್ನೂ ಮುಗಿಸಿಬಿಟ್ಟಿದ್ದರು. ಹಸಿವೂ ಬಾಯಾರಿಕೆಯೂ ಕಾಲ್ನಡಗೆಯ ಬಾಧೆಯೂ ಪೀಡಿಸುತ್ತಿದ್ದರೂ ಕಾಡಾನೆಯ ಹಿಂಡನ್ನು ನೋಡಲಿರುವ ಭವಿಷ್ಯದಲ್ಲಿ ಹುರುಪುಗೊಂಡಿದ್ದರು. ಬರಿಯ ಹುರುಪೂ ಮನೋಬಲವೂ ಇದ್ದರೆ ಸಾಕೆ? ಇವಕ್ಕೆ ಸರಿದೂಗುವ ದೇಹಶಕ್ತಿಯೂ ಇದ್ದರಲ್ಲವೆ ಆಸೆ ನೆರೆವೇರುವುದು? ವಿದ್ಯಾರ್ಥಿಗಳು ಅವರವರ ಶಕ್ತಿಸಾಮರ್ಥ್ಯಗಳಿಗನುಸಾರವಾಗಿ ಸಣ್ಣಸಣ್ಣ ಗುಂಪುಗಳಾಗಿ ಒಡೆದು ಹಿಂದೆ ಹಿಂದೆ ಉಳಿಯುವುದು ಅನಿವಾರ್ಯವೇ ಆಯಿತು. ನಾವು ಈ ಒಂದು ಮೈಲಿಯನ್ನು ದಾಟಿದ್ದು ಈ ರೀತಿಯಲ್ಲಿ ರೇಂಜರು ತಿರುಗಿಯೂ ದಾರಿ ಹುಡುಕುವುದಕ್ಕೆಂದು ನಿಂತು ನೋಡಿದ. ನಾವೂ ಹಿಂದೆ ನೋಡಿ ವಿದ್ಯಾರ್ಥಿಗಳನ್ನು ಏಣಿಕೆ ಮಾಡಿದೆವು. ವರದರಾಜ ಹತ್ತು ಸಲ ಎಣಿಸಿ “ಐವರು ಹುಡುಗಿಯರು ನಾಪತ್ತೆ” ಎಂದ. ನಮಗೆ ವಿಪರೀತ ದಿಗಿಲಾಯಿತು. ಗೋವಿಂದ್ ಅವರೂ ಇನ್ನೊಂದು ಸಲ ಎಣಿಕೆ ಮಾಡಿ ನಾಪತ್ತೆಯಾಗಿದ್ದ ಹುಡುಗಿಯರ ಹೆಸರುಗಳನ್ನು ಗುರುತು ಮಾಡಿಕೊಂಡರು- ಜಾನಕಿ, ಕಲ್ಪಕಂ, ಶಾಮಲ, ರಾಧಿಕಾ, ವನಜ. ಸ್ವಲ್ಪದೂರ ಅತ್ತಿತ್ತ ಹುಡುಕಿ ಬನ್ನಿರೆಂದು ಸುಂದರಂ ಅವರನ್ನು ಫಾರೆಸ್ಟರು ಅಟೆಂಡರುಗಳೊಡನೆ ಜತೆ ಮಾಡಿ ಕಳುಹಿಸಿದ್ದಾಯಿತು. ಇಪ್ಪತ್ತು ನಿಮಿಷಗಳಾದ ನಂತರ ಬಂದು ತಲೆ ಅಲ್ಲಾಡಿಸಿದರು. ವರದರಾಜ ನಮ್ಮೊಂದಿಗೆ ಉಳಿದಿದ್ದ ಹುಡುಗಿಯರನ್ನು ತನಿಖೆ ಮಾಡಿ ಕೂಗಾಡುತ್ತಿದ್ದ. ಅಂದಿನ ಪ್ರವಾಸವನ್ನು ಅಲ್ಲಿಗೇ ಮುಕ್ತಾಯ ಮಾಡಿ ಮೂರು ದಾರಿ ಸೇರುವ ಎಡೆಗೆ ತಿರುಗಿ ಬಂದು ಆನೆ ನಿವಾಸವನ್ನು ಸೂಚಿಸುವ ದಾರಿಯಲ್ಲಿ ಎರಡು ಗುಂಪುಗಳಾಗಿ ಹುಡುಕಿ ನೋಡುವುದೆಂದು ತೀರ್ಮಾನ  ಮಾಡಿದೆವು. ನಾನು, ಗೋವಿಂದ್, ರೇಂಜರು, ವರದರಾಜು, ತಂಗವೇಲು ಒಬ್ಬ ಅಟೆಂಡರು ಮೊದಲನೆಯ ಗುಂಪು; ಎಡಪಕ್ಕದ ಹಾದಿಯಲ್ಲಿ ಹೋಗಬೇಕಾದವರು. ಫಾರೆಸ್ಟರು, ಇನ್ನೊಬ್ಬ ರೇಂಜರು, ರಾಮಮೂರ್ತಿ ಎರಡನೆಯ ಗುಂಪು; ಬಲಪಕ್ಕದ ಹಾದಿಯಲ್ಲಿ ಹೋಗಬೇಕಾದವರು. ಉಳಿದವರು (ಸುಸ್ತು ಬಿದ್ದಿದ್ದವರು) ಮೂರನೆ ಗುಂಪು; ಸುಂದರಂ ಅವರೊಡನೆ ಅಲ್ಲಿಯೇ ನಮಗಾಗಿ ಕುಳಿತು ಕಾಯುತ್ತಿರ ಬೇಕಾದವರು. ಒಂದರ್ಧ ಫರ್ಲಾಂಗು ದೂರ ದಾರಿ ಮಾಡಿಕೊಳ್ಳುತ್ತ ಕೊರಲು ಕೊಟ್ಟುಕೊಂಡೇ ಹೋದೆವು. ವರದರಾಜ ನಾಪತ್ತೆಯಾಗಿದ್ದ ಹುಡುಗಿಯರ ಹೆಸರುಗಳನ್ನು ಒಂದೊಂದಾಗಿ ಕೂಗುತ್ತಲೇ ಬಂದದ್ದರಿಂದ ಗಂಟಲು ಒಣಗಿ ಹೋಗಿ ಸುಮ್ಮನಾದ. ಅಂತರಾಳದಿಂದ “ಏಲ್ಪ್, ಏಲ್ಪ್” ಎಂಬ ದನಿಯೊಂದು ಕೇಳಿದ ಹಾಗಾಯಿತು. ಕಿವಿಗೊಟ್ಟು ಕೇಳಿದೆವು. ಎರಡು ನಿಮಿಷ ಬಿಟ್ಟು ತಿರುಗಿಯೂ “ಏಲ್ಪ್ ಏಲ್ಪ್”. ಯಾವುದಾದರೂ ಮೃಗದ ಉಲಿಯಿತಬಹುದೆ ಎಂದು ಗೋವಿಂದ್ ವಿಚಾರಿಸಿದ್ದಕ್ಕೆ ರೇಂಜರು “ಇಲ್ಲ. ನಮಗೆ ಪರಿಚಿತವಾದ ಕಾಡುಮೃಗದ ಕೊರಲಾವುದೂ ಇದಲ್ಲ” ಎಂದ ಒಡನೆಯೆ ವರದರಾಜನ ಇತ್ಯರ್ಥ: “ಹಾಗಾದರೆ ನಮ್ಮ ಊರು ಮೃಗಗಳದ್ದೇ ಆಗಿರಬೇಕು!” ಅಳುಕಿನಿಂದ ಮುಂದುವರಿದೆವು, ಆಕ್ಲಾಂಡ ಕೆದರಿ ಬಾಗಿದ್ದ ಸಣ್ಣ ಚದುರ ಭೂಮಿಯನ್ನು ಸಮೀಪಿಸಿದೆವು, ಬತ್ತಿಹೋದ ಕೊರಲಿನ “ಏಲ್ಪ್ ಏಲ್ಪ್” ದನಿ ಹತ್ತಿರವಾಯಿತು “ಅಯ್ಯಯ್ಯೋ” ಎಂದ ರೇಂಜರು. ಕಾಡಾನೆಯನ್ನು ಹಿಡಿಯುವುದಕ್ಕಾಗಿ ತೋಡಿದ್ದ ಹಳ್ಳ ಅದೆಂದು ಅವನಿಗೆ ತಟ್ಟನೆ ಹೊಳೆಯಿತು. ಹನ್ನೆರಡಡಿ ಆಳ ಹತ್ತು ಅಡಿ ಅಗಲವಿರುವ ಹಳ್ಳವನ್ನು ಬಾವಿಯ ರೀತಿಯಲ್ಲಿ ತೋಡಿ ಅದು ಇರುವ ಜಾಗ ತಟ್ಟನೆ ತಿಳಿಯಬಾರದೆಂಬ ಉದ್ದೇಶದಿಂದ ನೆಲಮಟ್ಟದ ಮೇಲೆ ಸಣ್ಣ ಸಣ್ಣ ಗುಳುಗಳನ್ನು ಅಡ್ಡಕ್ಕೂ ಉದ್ದಕ್ಕೂ ಹಾಸಿ ಅದರ ಮೇಲೆ ತರಗೆಲೆಗಳನ್ನೂ ಎಲೆಗುತ್ತಿಗಳನ್ನೂ ಆಕ್ಲೇಂಡ್ರ ಕಾಂಡಗಳನ್ನೂ ಸಿಕ್ಕಿಸಿ ಮರೆಮಾಡಿದ್ದರು. ಹತ್ತಿರ ಧಾವಿಸಿ ಇಣುಕಿ ನೋಡುತ್ತೇವೆ: ನಾಪತ್ತೆಯಾಗಿದ್ದ ಪಂಚ ಕನ್ಯೆಯರೇ! ತಳದಲ್ಲಿ ಹಾಸಿದ್ದ ಒಣಹುಲ್ಲಿನಲ್ಲಿ ಅರ್ಧ ಹುದುಗಿ ಹೋಗಿದ್ದರು.

ನಮ್ಮನ್ನು ಕಂಡೊಡನೆಯ ಹುಡುಗಿಯರಿಗೆ ನಾಚಿಕೆ, ನಂಬಿಕೆ, ಅಂಜಿಕೆ, ಆಳು ನಾಲ್ಕೂ ಒಟ್ಟಿಗೆ ಬಂದವು. ಗಾಬರಿಯಿಂದ ಪೆಚ್ಚುಬಿದ್ದಿದ್ದರು, ನಿರಾಶೆಯಿಂದ ನಚ್ಚುಗೊಂಡಿದ್ದರು. “ನಮ್ಮನ್ನು ಊರಿಗೆ ಕಳುಹಿಸಿಬಿಡಿ” ಎಂದು ಬಿಕ್ಕಿ ಬಿಕ್ಕಿ ಅತ್ತರು. “ಊರಿಗೆ ರವಾನೆ ಹಾಕುವುದಕ್ಕೆ ಮೊದಲು ನಿಮ್ಮನ್ನು ಮೇಲೆತ್ತುವ ಸಾಹಸ ಮಾಡಬೇಕಾಗಿದೆ. ಮೊದಲಿನ ಕಾರ್ಯ ಮೊದಲಾಗಲಿ” ಎನ್ನುವಷ್ಟರಲ್ಲಿಯೇ ವರದರಾಜ “ಖಂಡಿತ ನೀವೇ ಹೋಗಿ, ತಿರುಗಿ ಬರಬೇಡಿ, ನೀವಿರುವ ಕಂದರಲ್ಲಿಯೇ ಗುಪ್ತ ಮಾರ್ಗವಿದ್ದರೆ ಹುಡುಕಿನೋಡಿ, ಅಷ್ಟು ಅವಸರವಾದರೆ ಅದರೊಳಕ್ಕೆ ನುಸುಳಿ ನಿಮ್ಮ ಮನೆಗಳನ್ನು ಸೇರಿಕೊಂಡುಬಿಡಿ” ಎಂದ ಇತ್ತ ವರದರಾಜನ ಬಡಾಯಿ ಬಾಯನ್ನು ಮುಚ್ಚಿಸಿ ಅತ್ತ ಹಳ್ಳದ ಹುಡುಗಿಯರ ಅಳುಬಾಯನ್ನೂ ಮುಚ್ಚಿಸುವ ಹೊತ್ತಿಗೆ ನನಗೆ ಸಾಕುಸಾಕಾಗಿ ಹೋಯಿತು. ಇನ್ನೊಂದು ದಿಕ್ಕಿನಲ್ಲಿ ಹುಡುಕಹೋಗಿದ್ದ ಗುಂಪಿನವರನ್ನೂ ಕಾದು ಕುಳಿತಿದ್ದ ಗುಂಪಿನವರನ್ನೂ ಕರೆದುಕೊಂಡು ಬರಲು ಗೋವಿಂದ್ ಅವರನ್ನೂ ಅಟೆಂಡರನ್ನೂ ಕಳುಹಿಸಿದೆ.

ಬಾವಿಯೊಳಗಿಂದಲೇ ಕಲ್ಪಕಂ: “ಮತ್ತಾರೂ ಇಲ್ಲಿ ಬರುವುದು ಬೇಡ, ಸರ್.”

ವರದ: “ನಮಗೇನು ಹುಚ್ಚೆ ನೀವಿರುವಲ್ಲಿಗೆ ಬರುವುದಕ್ಕೆ!”

ವರದರಾಜನ ಬಾಯನ್ನು ನನ್ನ ಬಲಗೈಯಿಂದ ಗಟ್ಟಿಯಾಗಿ ಮುಚ್ಚಿ ಹೇಳಿದೆ: “ನೀವು ಹೀಗೆಲ್ಲ ಸವಾಲು ಹಾಕುವುದು ಒಳಿತಲ್ಲ. ನಿಮ್ಮನ್ನು ಈಗ ಮೇಲಕ್ಕೆ ಎತ್ತುವ ಕೆಲಸ ಮಾಡಬೇಕಾಗಿದೆ. ನಮಗೆ ಜನ ಸಹಾಯ ಬೇಕು. ನಾವು ಹೇಳಿದಂತೆ ನೀವು ಕೇಳುವುದು ಒಳಿತು.

ಜಾನಕಿ: “ಅವರೆಲ್ಲ ಬಂದು ನೋಡಿ ಹಾಸ್ಯ ಮಾಡುತ್ತಾರೆ, ಸರ್.”

ನನ್ನ ಕೈಹಿಡಿತದಿಂದ ತಪ್ಪಿಸಿಕೊಳ್ಳುತ್ತಿದ್ದ ವರದರಾಜನನ್ನು ತಡೆಯುತ್ತ: “ಅವರು ನಕ್ಕರೆ ನಗಲಿ, ನೀವೂ ವಿನೋದದಲ್ಲಿ ಕಲೆಯಿರಿ.”

ಶಾಮಲ: “ನಾವು ಹಿಂತಿರುಗಿ ಮದರಾಸಿಗೆ ಹೋದ ಮೇಲೆ ಅಲ್ಲಿನವರಿಗೆಲ್ಲ ಹೇಳಿ ಬಿಡುತ್ತಾರೆ, ಸರ್.”

ವನಜ: “ಹಾಸ್ಟಲಿನಲ್ಲೆಲ್ಲ ಡಂಗುರ ಹುಯ್ಯುತ್ತಾರೆ, ಸಾರ್.”

ರಾಮ ರಾಮ! ಸಾಕುಸಾಕಾಗಿ ಹೋಯಿತು ನನಗೆ. ಹಲ್ಲು ಕಚ್ಚಿಕೊಂಡು ಬದಲು ಕೊಡದೆ ಸುಮ್ಮನಿದ್ದೆ. ನಿಶ್ಶಬ್ದವನ್ನು ಕಂಡು ಅವರಿಗೆ ಏನನ್ನಿಸಿತೋ ಎನೋ “ಸಾರ್ ಸಾರ್, ಹೋಗಿಬಿಟ್ಟಿರಾ! ಹೋಗಬೇಡಿ, ಸಾರ್. ಇಲ್ಲಿಯೇ ಇರಿ. ಹೆದರಿಕೆಯಾಗಿತ್ತೆ.” ತಲೆ ಚಚ್ಚಿಕೊಂಡೆ. “ಎಲ್ಲಿಯೂ ಹೋಗಲಿಲ್ಲ, ಇಲ್ಲಿಯೇ ಇದ್ದೇವೆ. ಸ್ವಲ್ಪ ಸುಮ್ಮನಿರುತ್ತೀರೋ ಇಲ್ಲವೋ?” ಎಂದೆ. ವರದರಾಜನ ಬಾಯನ್ನು ಎಷ್ಟು ಹೊತ್ತು ಅದುಮಿಟ್ಟಿರಲು ಸಾದ್ಯ? ಹಿರಿಯ ಕೊರಲಿನಲ್ಲಿ ಕಿರುಚಿದ: “ಪ್ರಾರಬ್ಧಗಳೇ, ನಿಮಗೆ ಸಹಾಯ ಮಾಡುವುದಕ್ಕೆ ನಮಗೆ ಅವಕಾಶ ಕೊಡುತ್ತೀರೋ ಇಲ್ಲವೋ? ದೂರ ಸರಿದರೆ ಬಾ ಎನ್ನುತ್ತೀರಿ. ಹತ್ತಿರ ಬಂದರೆ ಹೋಗು ಎನ್ನುತ್ತೀರಿ. ನಿಮಗೇನಾದರೂ ಮರ್ಯಾದೆ ಇದೆಯೆ? ಬಿದ್ದಿರಿ, ಅಲ್ಲಿಯೇ ಬಿದ್ದಿರಿ. ರಾತ್ರಿ ನಿಮ್ಮೊಂದಿಗೆ ಇನ್ನೊಂದೆರಡು ಆನೆಗಳೂ ಬಂದು ಬೇಳುತ್ತವೆ. ಅವುಗಳ ಜತೆಯಲ್ಲಿರಿ, ಯಾರಿಗೂ ಗೊತ್ತಾಗುವುದಿಲ್ಲ” ಎಂದ. ಬಾವಿಯಲ್ಲಿ ನಿಶಬ್ದವಾಯಿತು, ಮಿಕ್ಕವರೂ ಹತ್ತಿರದಲ್ಲಿಯೇ ಬರುತ್ತಿರುವ ಕೊರಲೂ ಕೇಳಿಸಿತು:-

“ಆನೆ ಇವರನ್ನು ಕಚ್ಚಿಕೊಂಡು ಹೋಗಿಬಿಟ್ಟಿತಾ?”

“ಎಷ್ಟು ಆನೆಗಳು ಬಂದಿದ್ದವೋ?”

“ಒಂದೇ ಆನೆ ಐವರನ್ನೂ ಹೆಗಲ ಮೇಲೆ ಕೂಡಿಸಿಕೊಂಡು ಹೋಗಿರಬೇಕು.”

“ಇಲ್ಲ, ಹಳ್ಳದಲ್ಲಿದ್ದ ಆನೆ ಇವರನ್ನು ಸೆಳೆದುಕೊಂಡಿರಬೇಕು.”

“ಆನೆಗೆ ತೋಡಿದ್ದ ಹಳ್ಳ ಇವರ ಕಣ್ಣಿಗೆ ಬೀಳಲಿಲ್ಲವೆ?”

“ಆನೆ ಇವರನ್ನು ಕಂಡು ಹೆದರಿರಬೇಕು ಪ್ರೊಫೆಸರು ಹೇಳಿರಲಿಲ್ಲವೆ, ಉಗ್ರ ಬಣ್ಣಗಳ ಉಡುಗೆ ಬೇಡವೆಂದು?”

“ಅಥವಾ ಆನೆಯನ್ನು ನೋಡಿ ಇವರೇ ಹೆದರಿರಬೇಕು.”

“ಅದು ಹೋಗಲಿ, ಇವರು ನಮ್ಮ ಗುಂಪನ್ನು ಬಿಟ್ಟು ಬೇರೆಯಾಗಬೇಕಾಗಿದ್ದ ಪ್ರಮೇಯವೇನಿತ್ತು? ಶುದ್ಧ ತಲೆಹರಟೆಗಳು.”

ಈ ಶೈಲಿಯ ಪ್ರಶ್ನೆಗಳು, ಊಹೆಗಳು, ಮರುಪ್ರಶ್ನೆಗಳು, ಹೊಸ ಊಹೆಗಳು ಕೇಳಿಬಂದವು. ರೇಂಜರು ಫಾರೆಸ್ಟರನ್ನು ಕರೆದು “ಎರಡು ದೊಡ್ಡ ಬಿದಿರುಗಳನ್ನು ಕಡಿದುಕೊಂಡು ಬಾ” ಎಂದ. ಬಿದಿರುಮಳೆ ಪಕ್ಕದಲ್ಲಿಯೇ ಇತ್ತು, ಎರಡು ಗಳುಗಳಿಗೆ ಅಡ್ಡ ಪಟ್ಟಿಗಳನ್ನು ಕಟ್ಟಿ ಏಣಿಯಂತೆ ಹವಣಿಸಿ ಹಳ್ಳದೊಳಕ್ಕೆ ಇಳಿಬಿಟ್ಟಾಗ ಮೇಲಿನ ಮೆಟ್ಟಲಿಗೂ ನೆಲದ ಸಮಕ್ಕೂ ಎರಡು ಅಡಿಗಳ ಅಂತರ ಬಿಟ್ಟಿತ್ತು. ಈಗಾಗಲೇ ಹೊತ್ತಾಗಿ ಬಿಟ್ಟಿರುವುದರಿಂದ ನೆಲಸಮವನ್ನು ಮುಟ್ಟುವ ಇನ್ನೊಂದು ಏಣಿಯನ್ನು ತಯಾರಿಸುವುದು ಬೇಡವೆಂದೂ ಹುಡುಗಿಯರು ಏಣಿಯ ಕೊನೆ ಕೈಕೊಟ್ಟು ಅವರನ್ನು ನೆಲದ ಮೇಲಕ್ಕೆ ಸೆಳೆದುಕೊಳ್ಳುವುದೆಂದೂ ತೀರ್ಮಾನಿಸಿದೆವು. ಮೊದಲು ಹತ್ತಿದವಳು ಶಾಮಲ; ಕೊನೆಯ ಮೆಟ್ಟಲಿಗೆ ಬಂದಾಗ ನನೇ ಕೈಚಾಚಿದೆ, ಅವಳು ಹಿಡಿದುಕೊಳ್ಳಲೆಂದು. ನಾಚಿಕೊಂಡು ನಿಂತಳು. ಹೋಗಲಿ, ನಾನು ಬೇಡ, ಗೋವಿಂದ್ ಅವರು ಕೈಚಾಚಿದರು. ನಾಚಿಕೆ ಅಧಿಕವಾಯಿತು. ವರದರಾಜನಿಗೆ ಹೇಳಿದೆ, ಅವನು ಕೈಚಾಚಿದ್ದಕ್ಕೆ ಸೊಟ್ಟಮೊರೆ ಹಾಕಿಕೊಂಡು ಸಿಡುಗುಟ್ಟಿದಳು. ಒಳಗಿನಿಂದ ಇತರರೂ ಇವಳ ನಿಲುವನ್ನೇ ಸಮರ್ಥಿಸುತ್ತಿದ್ದರು. ನನಗಂತೂ ಕೋಪ ಉಕ್ಕಿಬಂದಿತು. ಇವರ ಪಾತಿವ್ರತ್ಯ ಧರ್ಮ ರೀತಿಯನ್ನು ಕಂಡು. ಹಲ್ಲು ಕಚ್ಚಿಕೊಂಡು ನಮ್ಮೊಂದಿಗಿದ್ದ ಹುಡುಗಿಯರಿಬ್ಬರನ್ನು ಕಳುಹಿಸಿದೆ. ಅವರು  ತಮ್ಮ ಕೈ ಚಾಚಿ ಶಾಮಲಳ ಕೈ ಹಿಡಿದುಕೊಂಡರು. ಶಾಮಲ ನೆಲದ ಮೇಲೆ ಹೆಜ್ಜೆಯಿಡುವುದಕ್ಕೆ ಬದಲಾಗಿ ಇವರಿಬ್ಬರೂ ಒಳಕ್ಕೆ ಬೇಳುವ ಸ್ಥಿತಿ ಏರ್ಪಟ್ಟಿತು. ರೇಂಜರು ಎರಡು ಹೆಜ್ಜೆ ಮುಂದೆ ಧಾವಿಸಿ ಒಳ ಬೀಳಲಿದ್ದ ಹುಡುಗಿಯರ ರಟ್ಟೆಗಳನ್ನು ಬಲವಾಗಿ ಹಿಡಿದು ಹಿಂದಕ್ಕೆ ಸೆಳೆದದ್ದರಿಂದ ಇನ್ನೊಂದು ಅನಾಹುತ ತಪ್ಪಿತು. ನಾವು ಸೋತೆವೆಂದು ಒಪ್ಪಿಕೊಂಡೆವು. ಆದರೆ ಜವಾಬ್ದಾರಿ ನನ್ನದು ತಾನೆ? ಅವರನ್ನು ಅಲ್ಲಿಯೇ ಬಿಟ್ಟು ಹೋಗುವುದು ಸಾಧ್ಯವೆ? ಹಾಗೆ ಮಾಡುವುದಕ್ಕೆ ಧೈರ್ಯತಾನೆ ಎಲ್ಲಿಂದ ಬರಬೇಕು? ಹಸ್ತಸ್ಪರ್ಶ ಅವರಿಗೆ ಮೈಲಿಗೆಯಾಗುವುದಾಗಿದ್ದ ಪಕ್ಷಕ್ಕೆ ಬಿದಿರಿನಲ್ಲಿಯೇ ಮೂರು ಅಡಿಯ ಕೋಲೊಂದನ್ನು ತೆಗೆದುಕೊಂಡು, ನಾನು ಅದರ ಒಂದು ತುದಿಯನ್ನು ಬಲವಾಗಿ ಹಿಡಿದುಕೊಂಡು ಇನ್ನೊಂದು ತುದಿಯನ್ನು ಮೇಲೇರಿ ಬರುವವರಿಗೆ ನೀಟುವುದೆಂದೂ, ಅವರು ಬರಿತುದಿಯನ್ನು ಹಿಡಿದುಕೊಂಡು ನೆಲದ ಮೇಲಕ್ಕೆ ಬರುವುದೆಂದೂ ಯೋಚಿಸಿ ಹಾಗೆಯೇ ಮಾಡಿದೆ. ಒಬ್ಬೊಬ್ಬರಾಗಿ ಹತ್ತಿಬಂದರು. ಮೇಲಕ್ಕೆ ಬಂದವರಿಗೆ ಸುತ್ತಲಿನ ಸುಳಿವೇ ಇಲ್ಲ! ಐವರೂ ಒಬ್ಬರನ್ನೊಬ್ಬರು ವಿಧವಿಧವಾಗಿ ತಬ್ಬಿಕೊಂಡು ತಮತಮಗೇ ವಂದನಾ ಸಮರ್ಪಣೆ ಮಾಡಿಕೊಳ್ಳುತ್ತಿದ್ದುದನ್ನು ನೋಡಿ ನಮಗೆಲ್ಲರಿಗೂ ವಿಪರೀತ ನಗು ಬಂದಿತು. ಈ ಆಲಿಂಗನಾ ಮಹೋತ್ಸವ ಮುಗಿದೊಡೆನೆಯೆ ನಾವು ಹಲ್ಲು ಬಿಟ್ಟಿದನ್ನು ಗಮನಿಸಿದರು. ನೀರುಜಡೆ ಜಾನಕಿ ಸಿಟ್ಟೆದ್ದು ಹುಡುಗರನ್ನು ನೋಡಿ “ಯಾಕ್ರೋ ಹಲ್ಲು ಕಿರಿಯುತ್ತಿದ್ದೀರ?” ಎಂದು ಗದರಿಸಿದಳು. ಮಿಕ್ಕ ನಾಲ್ವರು “ನಮ್ಮ ಚೀಲಗಳನ್ನು ಯಾರೋ ತೆಗೆದುಕೊಂಡುಬಿಟ್ಟಿದ್ದಾರೆ! ನಮ್ಮ ಸಸ್ಯಕರಂಡಗಳನ್ನು ಯಾರೋ ಕದ್ದು ಬಿಟ್ಟಿದ್ದಾರೆ! ಎಂದು ಕೂಗಾಡ ಹತ್ತಿದರು. ಯಾರೂ ಯಾವುದನ್ನೂ ತೆಗೆದುಕೊಳ್ಳಲಿಲ್ಲ. ಹಳ್ಳಕ್ಕೆ ಜಾರಿಬಿದ್ದಾಗ ಹೊತ್ತಿದ್ದ ಸಾಮಾನುಗಳ ಸಮೇತ ಒಳಕ್ಕೆ ಕುಸಿದಿದ್ದರು. ಹತ್ತಿಬಂದಾಗ ಅವನ್ನು ಅಲ್ಲಿಯೇ ಮರೆತಿದ್ದರು. ಅಟೆಂಡರಿಗಳು ಹಳ್ಳದಲ್ಲಿ ಇಳಿದು ಸಾಮಾನುಗಳನ್ನು ತೆಗೆದುಕೊಂಡು ಬಂದರು. ಬಿಡದಿಗೆ ವಾಪಸು ಬಂದೆವು.

ವಾಪಸು ಬರುವ ದಾರಿಯಲ್ಲಿ ಎಲ್ಲರಿಗೂ ಏನೋ ಒಂದು “ಥರ” ಮಾತಿಲ್ಲ ಕತೆಯಿಲ್ಲ, ಗೆಲುವಿಲ್ಲ. ಕಾಡಾನೆಗಳನ್ನೂ, ಕಾಡೆಮ್ಮೆಗಳನ್ನೂ ಕಣ್ಣಾರ ಕಾಣುವ ಅವಕಾಶ ಅತಿ ಅಪರೂಪವಾದ ಅವಕಾಶ-ಹೋಯಿತಲ್ಲಾ ಎಂಬ ಉತ್ಸಾಹಭಂಗ ಕೆಲವರಿಗೆ. ಪಂಚಕನ್ಯೆಯರಿಂದ ತಪ್ಪಿಹೋಯಿತಲ್ಲಾ ಎಂಬ ರೋಷ ಕೆಲವರಿಗೆ. ಸಂಜೆ ನಾಲ್ಕು ಗಂಟೆಯಾಗಿ ಬಿಟ್ಟಿದ್ದರಿಂದ ಹಸಿವು ಬಾಯಾರಿಕೆಗಳು ಅನೇಕರಿಗೆ. ಹಿಂದೆ ನಮಗೆ ಮಹದಾನಂದವನ್ನು ಕೊಟ್ಟಿದ್ದ ಅಶೋಕಮರಗಳ ಹತ್ತಿರ ಬಂದಾಗ ಕೂಡ “ಇವಕ್ಕೆ ಕಾಡಿನಲ್ಲೇಕೆ ಇಷ್ಟು ಶೃಂಗಾರ?” ಎಂದು ತಾತ್ಸಾರಗೊಳ್ಳುವಂತಾಯಿತೇ ಹೊರತು ಉತ್ಸಾಹ ತರಲಿಲ್ಲ. ವರದರಾಜನಂತೂ “ಕಾಡಾನೆಗಳನ್ನು ಕಾಣುವ ಬದಲು ಊರಾನೆಗಳನ್ನು ಕಂಡದ್ದಾಯಿತು” ಎಂದು ಗೊಣಗುತ್ತಲೇ ಇದ್ದ. ಹುಡುಗಿಯರೂ ಮೌನತಾಳಿದ್ದರು; ತಾವಾಡಿದ್ದ ಮಾತುಗಳೂ ನಡೆದುಕೊಂಡಿದ್ದ ರೀತಿಯೂ ನೆನಪಿಗೆ ಬಂದು ತಮ್ಮನ್ನು ತಾವೇ ಹಳಿದುಕೊಳ್ಳುತ್ತಿದ್ದರೋ ಏನೋ! ಆದರೂ ಒಂದು ಸಲ ಜಾನಕಿ ” ಆ ಹಳ್ಳದಲ್ಲಿ ಆನೆಯೊಂದು ಬಿದ್ದುಬಿಟ್ಟಿದ್ದರೆ, ಪಾಪ…!” ಎನ್ನುವಷ್ಟರಲ್ಲಿಯೇ ವರದರಾಜ “ನಮಗೆ ಕಷ್ಟವಾಗುತ್ತಿರಲಿಲ್ಲ! ಅದು ಬೇಟೆಗಾರರ ಪಾಡಾಗುತ್ತಿತ್ತು. ನೀವು ಬಿದ್ದದ್ದರಿಂದ ನಮ್ಮದು ನಾಯಿಪಾಡಾಯಿತು!” ಎಂದು ಬಾಯಿ ಮುಚ್ಚಿಸಿದ.

 

ಪ್ರಭಾವತೀ ದರ್ಬಾರು

ಬಿಡದಿಯನ್ನು ಸೇರಿದೊಡನೆಯೆ ಊಟಮಾಡಿ, ಸಂಜೆ ಆರು ಗಂಟೆಯ ಹೊತ್ತಿಗೆ ಬೆಳಕು ಹೊತ್ತಿಸಿಕೊಂಡು ನಾವು ತಂದಿದ್ದ ಸಂಗ್ರಹಣ ಚೀಲಗಳನ್ನೂ ಕರಂಡಗಳನ್ನೂ ಬಿಚ್ಚಿ, ಗಿಡಸಾಮಾಗ್ರಿಗಳ ಅಧ್ಯಯನಕ್ಕೆ ಕುಳಿತುಕೊಂಡೆವು. ದೊಡ್ಡ ಕೈಸಾಲೆ, ವಿದ್ಯಾರ್ಥಿಗಳಿಗೆ ಹೇಳಬೇಕಾದುದನ್ನು ಕಲಿಸಲು ಅನುಕೂಲವಾಗಿತ್ತು. ಈ ದಿನ ಹುಡುಗರು ಬಂದರು; ಅರ್ಧಗಂಟೆಯಾದರೂ ಹುಡುಗಿಯರು ಬರಲಿಲ್ಲ. ಯೂಜಿನೀಷಿಯ ಮೊಳಕೆಯನ್ನು ಮೈಕ್ರಾಸ್ಕೋಪಿನಲ್ಲಿಟ್ಟು ಪರಾವಲಂಬಿಯ ಬೇರು ಆತಿಥೇಯ ಬೇರನ್ನು ಹೊಕ್ಕಿರುವ ರೀತಿಯನ್ನು ಕಾಣಿರೆಂದು ಎಲ್ಲರನ್ನೂ ಕರೆದೆ. ಹುಡುಗರೆಲ್ಲ ಬಂದು ನೋಡಿದರು. ಹುಡುಗಿಯರಾರೂ ಕೋಣೆಯಿಂದ ಹೊರ ಬರಲಿಲ್ಲ. ನನ್ನ ಕರೆ ಕೇಳಿಸಿತೊ ಇಲ್ಲವೋ ಎಂಬ ಸಂದೇಹದಿಂದ ಏರುಕೊರಲು ಕೊಟ್ಟೆ. ಸುಳಿವಿಲ್ಲ. ಬೇರೊಂದು ಸಾಮಗ್ರಿಯನ್ನಿಟ್ಟು ಹುಡುಗರಿಗೆ ತೋರಿಸಬೇಕೆಂದುಕೊಂಡೆ. ಒಡನೆಯೇ ಹುಡುಗಿಯರ ವಿಷಯದಲ್ಲಿ ಕನಿಕರ ಹುಟ್ಟಿತು. ಸರಾಸರಿ ಪ್ರಕಾರ ಹುಡುಗಿಯರು ಹುಡುಗರಿಗಿಂತಲೂ ಓದಿನಲ್ಲಿ, ಕುಳಿತು ಕೊಳ್ಳುವುದರಲ್ಲಿ, ಪಾಠ-ಗಿಣಿಪಾಠವೇ ಆದರೂ ಒಪ್ಪಿಸುವುದರಲ್ಲಿ ಉತ್ಸಾಹಿಗಳು. ಹುಡುಗರಿಗೆ ಕೊಟ್ಟ ಅವಕಾಶಗಳನೇ ಅವರಿಗೂ ಕೊಡುವುದು ನನ್ನ ಧರ್ಮವಲ್ಲವೆ? ಹೀಗೆಂದುಕೊಂಡು ವರದರಾಜನನ್ನು ನೋಡಿ ಬಾ ಎಂದೆ. ಅವನು ಹೋಗಿ ಮೆಲಗೆ ಬಾಗಿಲು ತಟ್ಟಿದ; ಬರಲಿಲ್ಲ. ದಬ್ಬಿದ, ಒಳಗೆ ಅಗುಳಿ ಹಾಕಿತ್ತು; ಬೀಗದಕ್ಕೆ ತೂತಿನಲ್ಲಿ ನೋಡಿದ, ನೆಗೆದುಬಿದ್ದು ನಕ್ಕ, ಹತ್ತಿರ ಬಂದು, “ಸರ್, ನೀವೇ ಬಂದು ನೋಡಿ, ನೋಡಬೇಕಾದ ದೃಶ್ಯ” ಎಂದ. ಇವನ ಆಸೆಯಾಯಿತು. ಹೋಗಿ ಬಾಗಿಲು ತಟ್ಟಿದೆ. ಅಗಿಳಿ ಬಿದ್ದು ಕದ ಸ್ವಲ್ಪ ತೆರೆಯಿತು, “ಪ್ರಭಾವತಿ ದರ್ಬಾರು” ದೃಶ್ಯ: ಕಲ್ಪಕಂ ಮಂಚದ ಮೇಲೆ ಸುತ್ತಿದ ಹಾಸಿಗೆಯನ್ನೊರಗಿಕೊಂಡು ಕಾಲುಚಾಚಿ ಪವಡಿಸಿದ್ದಾಳೆ. ಬಿರಿಹಾಕಿದ ತಲೆಕೂದಲನ್ನು ವನಜ ಬಾಚುತ್ತಿದ್ದಾಳೆ, ಜಾನಕಿ ಅವಳ ಭುಜದ ಹತ್ತಿರ ಟ್ರಂಕೊಂದರ ಮೇಲೆ ಕುಳಿತು ಕಾಗದದ ಚೀಲದಿಂದ ಬಿಸ್ಕತ್ತುಗಳನ್ನು ತೆಗೆದು ಕಲ್ಪಕಂನ ಬಾಯಲ್ಲಿ ಇರಿಸುತ್ತಿದ್ದಾಳೆ, ಮಧ್ಯೆಮಧ್ಯೆ ತಾನೂ ತಿನ್ನುತ್ತಿದ್ದಾಳೆ. ಇನ್ನಿಬ್ಬರು ಎಡಬಲದಲ್ಲಿ ಕುಳಿತು ಕಲ್ಪಕಂನ ಕಾಲುಗಳನ್ನು ಒತ್ತುತ್ತಿದ್ದಾರೆ. ಮಿಕ್ಕವರು ಕಲ್ಪಕಂಗೆ ಎದುರಾಗಿ ಕುಳಿತಿದ್ದಾರೆ; ಅವರ ಪೈಕಿ ಒಂದಿಬ್ಬರು ಯಾವುದೊ ತಮಿಳು ಸಿನಿಮಾ ಹಾಡೊಂದನ್ನು ಕುಂಞಯೆನ್ನುತ್ತಿದ್ದಾರೆ. ನನಗೆ ವಿಪರೀತ ನಗು ಬಂದಿತು. ಅವರು ದಣಿವಾರಿಸಿಕೊಳ್ಳಲು ಸುಖಪಡುತ್ತಿದ್ದ ವೈಖರಿಯನ್ನು ಕಂಡು ಅಸೂಯೆಯ ಸುಳಿವೂ ಹರಿದು ಮಾಯಾವಾಯಿತು. ಕದವನ್ನು ಪೂರ್ತಿ ತೆಗೆದು ಕೃತಕ ಕೋಪದಿಂದ “ಏನು ಬರುತ್ತೀರೋ, ಇಲ್ಲ ಹೀಗೆಯೇ ದರ್ಬಾರಿನಲ್ಲಿ ಕುಳಿತಿರುತ್ತೀರೋ?” ಎಂದು ಗದರಿಸಿದೆ. ನಾನಲ್ಲಿದ್ದ ಅರಿವಾದೊಡನೆಯೆ ಎಲ್ಲರೂ ಚಿಮ್ಮನೆ ನೆಗೆದು ಎದ್ದು ಬಂದರು. ಅಷ್ಟರಲ್ಲಿ ವರದರಾಜ ತಾನು ಕಂಡಿದ್ದ ನೋಟಕ್ಕೆ ಬಣ್ಣವನ್ನೂ, ಮೆರುಗನ್ನೂ ಕೊಟ್ಟು ಗೆಳೆಯರಿಗೆಲ್ಲಾ ಹೇಳಿಬಿಟ್ಟಿದ್ದ. ತಮಗೆ ಆ ದೃಶ್ಯವನ್ನು ಕಾಣುವ ಅವಕಾಶ ಒದಗಲಿಲ್ಲವೆಂದು ಹುಡುಗರು ನಿರುತ್ಸಾಹಗೊಂಡಿದ್ದರೂ, ಹುಡುಗಿಯರು ಬಂದು ಮೈಕ್ರಾಸ್ಕೋಪಿನೊಳಗೆ ನೋಡುತ್ತಿದ್ದಾಗ ಮುಳುಮುಳು ನಗುತ್ತಿದ್ದರು. ಜಾನಕಿ:”ಯಾಕ್ರೋ, ಈ ಮುಸಿನಗೆ? ಗಟ್ಟಿಯಾಗಿ ನಗುವುದಕ್ಕೆ ಧೈರ್ಯವಿಲ್ಲವೆ?” ಎಂದು ಮೂದಲಿಸಿದಳು. ರಮಮೂರ್ತಿ ಎಂದ; “ಧೈರ್ಯವಿಲ್ಲದೇ ಇಲ್ಲ. ನಾವು ಯಥೋಚಿತವನ್ನು ಅರಿತವರು. ಪ್ರಕೃತಕ್ಕೆ ಮುಸಿನಗು ಉಚಿತ. ಇನ್ನೊಂದು ಸಂದೇಹ ನಿವಾರಣೆಯಾದ ಮೇಲೆ ಹುಚ್ಚುನಗೆ ಉಚಿತ. ಆಗ ಅದನ್ನೂ ಧೈರ್ಯವಾಗಿಯೇ ಪ್ರದರ್ಶಿಸುತ್ತೇವೆ.” ವರದರಾಜ ಜಾನಕಿಯನ್ನು ಕುರಿತು, “ಆ ಸಂದೇಹ ಏನು ಎಂದು ಕೇಳೆ” ಎಂದ. ಇವನು ತನ್ನ ಪರ ಇರುವನೆಂಬ ನಂಬಿಕೆಯಿಂದ “ನನ್ನನ್ನು ಕೇಳೊ, ಹೇಳುತ್ತೇನೆ” ಎಂದಳು. ರಾಮಮೂರ್ತಿ: “ಹಗಲಲ್ಲಿ ಹಳ್ಳಕ್ಕೆ ಬಿದ್ದ ಎಂಬ ಸಾಮತಿಯನ್ನು ಮಾತ್ರ ಕೇಳಿದ್ದೆವು. ಅದು ಉತ್ತ್ಪ್ರೇಕ್ಷಾಲಂಕಾರ ಎಂದುಕೊಂಡಿದ್ದೆವು. ಆದರೆ ನೀವು ಸಾಮತಿಗೆ ಲಕ್ಷ್ಯವಾಗಿ ಶೋಭಿಸುತ್ತಿದ್ದೀರ. ಅದು ಹೇಗೆ ತಾನೆ ಅಷ್ಟು ದೊಡ್ಡ ಹಳ್ಳ-ಆನೆಗಳನ್ನು ಹಿಡಿಯುವುದಕ್ಕಾಗಿ ತೋಡಿದ್ದ ಹಳ್ಳ, ಹತ್ತಡಿ ಅಗಲ ಹನ್ನೆರಡಡಿ ಆಳ ಅಗೆದಿದ್ದ ಹಳ್ಳ. ಕೃತ್ರಿಮ ಸಸ್ಯವಳಿಯಿಂದ ಹೊಂದಿಕೆಗೊಂಡಿದ್ದ ಹಳ್ಳವನ್ನು ಸಸ್ಯಶಸ್ತ್ರ ಓದಿಯೂ ತಾನಾಗಿ ಬೆಳೆದ ಬೆಳೆ ಯಾವುದು. ಕೃತಕವಾಗಿ ನೆಟ್ಟು ಸಿಕ್ಕಿಸಿದ ಬೆಳೆ ಯಾವುದು ಎಂಬುದರ ವಿವೇಚನೆಯಿಂದ ಕೃತ್ರಿಮವನ್ನು ಅರಿಯಬಹುದಾಗಿದ್ದ ಹಳ್ಳವನ್ನು ಹುಡುಕಿಕೊಂಡು ಹೋಗಿ ಬಿದ್ದಿರಲ್ಲಾ, ಅದು ಹೇಗೆ ಹುಡುಕಿದಿರಿ?” ಜಾನಕಿ ಅಣಕಿಸುತ್ತ ಅದನ್ನು “ನಾವೇನೂ ಹುಡುಕಿಕೊಂಡು ಹೋಗಲಿಲ್ಲ” ಎಂದು ಸರ್ರನೆ ನನ್ನ ಕಡೆ ತಿರುಗಿ, “ಇಲ್ಲ ಸರ್. ನಮಗೆ ಹಿಂದೆ ಸಿಕ್ಕಿದ್ದ ಯೂಜಿನೀಷಿಯ ಗಿಡಗಳನ್ನು ಕಂಡೆವು, ಸರ್. ಇನ್ನೊಂದೆರಡು ಗಿಡಗಳನ್ನು ಅಗೆಯೋಣವೆಂದುಕೊಂಡು ಐವರೂ ಒಟ್ಟಾಗಿ ನುಗ್ಗಿದೆವು, ಸರ್. ನಾನು ಮುಂದು ತಾನು ಮುಂದು ಎಂದು ನುಗ್ಗಿದಾಗ ಈ ಕೃತ್ರಿಮ ನಮಗೆ ಗೊತ್ತಾಗಲಿಲ್ಲ, ಸರ್.” ವರದರಾಜ: “ಆದರೂ ಹಳ್ಳದೊಳಕ್ಕೆ ಇವರಾಗಿಯೇ ಬೀಳಲಿಲ್ಲ, ಸರ್. ಹಳ್ಳವೇ ಇವರನ್ನು ತನ್ನೊಳಕ್ಕೆ ಸೆಳೆದುಕೊಂಡು ಬಿಟ್ಟಿತು, ಸರ್. ಪಾಪ ಹಳ್ಳ ಸರ್!! ಪಾಪ ಎಂದೆನ್ನಿಸಿದರೂ, ಯಾರಿಗೆ ತಾನು ನಗು ಬರುವುದಿಲ್ಲ ಈ ಸಂದರ್ಭದಲ್ಲಿ? ಹುಡುಗರು ಕೇಕೆ ಹಾಕಿಕೊಂಡೇ ನಕ್ಕರು.

ಮಾರನೆ ದಿನ ಹುಡುಗಿಯರಿಗೆ ರಜ ಕೊಟ್ಟೆ. ಅವರು ಒಡನೆಯೇ ಒಪ್ಪಿಕೊಳ್ಳುತ್ತಾರೆಯೇ? ಪ್ರಶ್ನೆಗಳು, ವಾಗ್ವಾದಗಳು ನಡೆಯಬೇಕಲ್ಲ!

ಜಾನಕಿ: “ನಮಗೇನೂ ದಣಿವಾಗಿಲ್ಲ”

ಗೋವಿಂದ್: “ಅದನ್ನು ನಿರ್ಣಯಿಸುವವರು ನೀವಲ್ಲ, ನಾವು.”

“ನಿನ್ನೆಯೂ ನಮಗೆ ದಣಿವಾಗಿರಲಿಲ್ಲ……”

“ನಿನ್ನೆಯ ಮಾತನ್ನು ನಿನ್ನೇಗೇ ಬಿಟ್ಟುಬಿಡಿ; ಅದರ ವಿಷಯ ನಮಗೆ ಗೊತ್ತು.”

“ನಾವೆಲ್ಲ ರೆಡಿ ಆಗಿಬಿಟ್ಟಿದ್ದೇವೆ.”

“ಅದು ಸರಿಯೆ. ಅಟೆಂಡರೊಂದಿಗೆ ನಿಮ್ಮನ್ನು ಬೇರೆ ಕಡೆ ಕಳುಹಿಸುತ್ತೇವೆ. ಅಲ್ಲಿಗೆ ಹೋಗಿ ಬನ್ನಿ.”

“ಹುಡುಗರಿಗೆ ಮಾತ್ರ ಬೇರೆ, ನಮಗೆ ಬೇರೆ, ಏಕೆ ಸಾರ್ ಈ ಪಕ್ಷಪಾತ?”

“ಬೇರೆ ಏಕೂ ಅಲ್ಲ. ಅವರು ಹುಡುಗರು, ನೀವು ಹುಡುಗಿಯರು ಅಷ್ಟೆ. ಅದಕ್ಕೇ ಪಕ್ಷಪಾತ.”

ನಾನು ಬಾಯಿ ಹಾಕಿದೆ: “ಇಲ್ಲಿ ನೋಡಿ ಈ ದಿನ ತೆಗೆದುಕೊಂಡು ಬಿಡದಿಯಲ್ಲಿಯೇ ಉಳಿದುಕೊಂಡು ವಿಶ್ರಾಂತಿ ತೆಗೆದುಕೊಳ್ಳಿ. ನಾಳೆ ಪೀರಮೇಡಿಗೆ ನಿಮ್ಮನ್ನೂ ಕರೆದುಕೊಂಡು ಹೋಗುತ್ತೇವೆ. ಇಲ್ಲದಿದ್ದರೆ ಈ ದಿನ ಬನ್ನಿ, ನಾಳೆ ಬೇಡ.”

ಅವರವರಲ್ಲಿಯೇ ಗುಸುಗುಸು ಮಾತನಾಡಿಕೊಂಡು ವನಜ ಮುಂದೆ ಬಂದಳು;

“ಈ ದಿನ ಬರುತ್ತೇವೆ. ನಾಳೆ…” ಎನ್ನುವಷ್ಟರಲ್ಲಿಯೇ ಜಾನಕಿ ಅವಳನ್ನು ಜಿಗುಟಿ “ಅಲ್ಲ ಸಾರ್, ಈ ದಿನ ಇಲ್ಲಿಯೇ ಉಳಿಯುತ್ತೇವೆ; ನಾಳೆ ಕರೆದುಕೊಂಡು ಹೋಗುವುದಾದರೆ.” ಸದ್ಯ ಇಂದಿನ ಇತ್ಯರ್ಥ ಕೈಗೂಡಿತೆಂಬ ಸಂತೋಷದಿಂದ ಹೊರಟೆವು.

ವರದರಾಜನೂ ತಂಗವೇಲುವೂ ಅವರನ್ನು ರೇಗಿಸುವ ಉದ್ದೇಶದಿಂದ ಹೆಜ್ಜೆಹೆಜ್ಜೆಗೂ ಹಿಂತಿರುಗಿ ’ಟಾ ಟಾ’ ಎಂದು ಕೈಯಾಡಿಸುತ್ತ  ಬಂದರು. ಹುಡುಗಿಯರು ಸೆರಗುಗಳನ್ನು ಬಿಗಿಸುತ್ತ ಏನೋ ಶಪಿಸಿದರು. ವರದರಾಜ “ಹೋಗಿ, ನಿನ್ನೆಯ ದರ್ಬಾರು ನಡೆಸಿ, ಹೋಗಿ ಹೊತ್ತಾಗುತ್ತದೆ” ಎಂದು ಇನ್ನಷ್ಟು ರೇಗಿಸಿದ.

ಲೇಖಕರು

ಬೆಂಗಳೂರು ಗುಂಡಪ್ಪ ಲಕ್ಷ್ಮಣಸ್ವಾಮಿ (೧೯೧೬-೧೯೮೦) ಅವರು ಕರ್ನಾಟಕ ಕಂಡ ಪ್ರತಿಭಾವಂತ ಸಸ್ಯಶಾಸ್ತ್ರಜ್ಞರಲ್ಲಿ ಒಬ್ಬರು. ಅವರು ಹಸುರು ಹೊನ್ನು, ಸಾಕ್ಷಾತ್ಕಾರದ ಹಾದಿಯಲ್ಲಿ ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕಾ ಮುಂತಾದವು ಸಸ್ಯಶಾಸ್ತ್ರಕ್ಕೆ ಸಂಬಂಧಪಟ್ಟ ಪುಸ್ತಕಗಳು. ಹಾಸ್ಯಮಯವಾಗಿ ಬರೆಯುವುದು, ವಿಡಂಬನೆ ಮಾಡುವುದು ಸ್ವಾಮಿಯವರ ಬರೆಹದ ವಿಶೇಷವಾಗಿದೆ, ಜಗತ್ ಪ್ರಸಿದ್ಧ ಸಸ್ಯಶಾಸ್ತ್ರಜ್ಞನಾದ ಅಮೆರಿಕದ ಇರ್ವಿಂಗ್ ಬೈಲಿಯವರ ಶಿಷ್ಯನಾಗಿ ಅಮೆರಿಕೆಯ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಕಲಿತ ಸ್ವಾಮಿ, ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸಸ್ಯಶಾಸ್ತ್ರದ ಪ್ರೊಫೆಸರ್ ಆಗಿದ್ದರು. ಕಾಲೇಜು ರಂಗ, ತಮಿಳುತಲೆಗಳ ನಡುವೆ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಅವರ ಹಸುರುಹೊನ್ನು ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೧೯೭೮) ಬಂದಿದೆ.

ಆಶಯ

ಪ್ರಸ್ತುತ ಬರೆಹವನ್ನು ಅವರ ಹಸುರು ಹೊನ್ನು ಪುಸ್ತಕದಿಂದ ಆರಿಸಿಕೊಳ್ಳಲಾಗಿದೆ. ಸಸ್ಯಶಾಸ್ತ್ರದ ವಿದ್ಯಾರ್ಥಿಗಳನ್ನು ಸಸ್ಯವೀಕ್ಷಣೆ ಹಾಗೂ ಸಸ್ಯಸಂಗ್ರಹಕ್ಕೆಂದು ಕಾಡಿಗೆ ಕರೆದುಕೊಂಡು ಹೋಗಿದ್ದಾಗ, ಲೇಖಕರಿಗಾದ ಅನುಭವಗಳನ್ನು ಇದು ವರ್ಣಿಸುತ್ತದೆ. ನಗರ ವಾತಾವರಣದಲ್ಲಿ ಬೆಳೆದ ವಿದ್ಯಾರ್ಥಿಗಳು, ಕಾಡಿನ ಪರಿಸರದಲ್ಲಿ ಪಡುವ ಚಿತ್ರಣ ಇಲ್ಲಿದೆ. ಕಾಲೇಜು ಹುಡುಗ ಹುಡುಗಿಯರಲ್ಲಿ ಇರುವ ಪರಸ್ಪರ ಛೇಡಿಸುವ ಸ್ವಭಾವವನ್ನು ವಿನೋದಮಯ ರೀತಿಯಲ್ಲಿ ಚಿತ್ರಿಸಲಾಗಿದೆ.

ಪದಕೋಶ

ಎಲೆಗುತ್ತಿ = ಎಲೆಗುಚ್ಛ, ನೀಟುವುದು = ಚಾಚುವುದು, ಬಿದದಿ = ತಾತ್ಕಾಲಿಕವಾಗಿ ಮಾಡಿದ ವಸತಿ, ಪ್ರಕೃತಕ್ಕೆ = ಸದ್ಯಕ್ಕೆ, ಯಥೋಚಿತ = ಎಷ್ಟು ಬೇಕೋ ಅಷ್ಟು, ಸಾಮತಿ = ಗಾದೆಮಾತು, ಕೃತ್ರಿಮ = ಮೋಸ

 

ಟಿಪ್ಪಣಿ

ರೇಂಜರು = ಅರಣ್ಯದ ಬೇರೆಬೇರೆ ವಲಯಗಳ ರಕ್ಷಣೆಯ ಅಧಿಕಾರಿ, ಫಾರೆಸ್ಟರು =  ರೇಂಜರಿನ ಕೆಳಗಿನ ಅರಣ್ಯರಕ್ಷಕ ಅಧಿಕಾರಿ, ಸಸ್ಯಕರಂಡ = ಸಂಗ್ರಹಿಸಿದ ಸಸ್ಯಗಳನ್ನು ಬಾಡದಂತೆ ರಕ್ಷಿಸಿಡುವ ತಗಡಿನ ಪೆಟ್ಟಿಗೆ, (vasculum), ಯೂಜಿನೀಷಿಯ = ಒಂದು ಬಗೆಯ ಸಸ್ಯ, ಉತ್ಪ್ರೇಕ್ಷಾಲಂಕಾರ = ಇರುವುದನ್ನು ಕೊಂಚ ಅತಿಮಾಡಿ ವರ್ಣಿಸುವ ಒಂದು ಕಾವ್ಯವಿಧಾನ.

ಪ್ರಶ್ನೆಗಳು

೧. ಐವರು ಹುಡುಗಿಯರು ಇದ್ದಕ್ಕಿದ್ದಂತೆ ಹೇಗೆ ನಾಪತ್ತೆಯಾಗುತ್ತಾರೆ?

೨. ಆನೆಹಳ್ಳದಲ್ಲಿ ಹುಡುಗಿಯರನ್ನು ಪತ್ತೆ ಮಾಡಿದ ರೀತಿ ಯಾವುದು?

೩. ಆನೆಹಳ್ಳದಲ್ಲಿ ಬಿದ್ದಿದ್ದ ಹುಡುಗಿಯರ ಮೊದಲ ಪ್ರತಿಕ್ರಿಯೆ ಏನಾಗಿತ್ತು?

೪. ವರದರಾಜ ಹಳ್ಳದೊಳಗೆ ಬಿದ್ದಿದ್ದ ಹುಡುಗಿಯರನ್ನು ಹೇಗೆ ಛೇಡಿಸಿದನು?

೫. ಆನೆಹಳ್ಳದಲ್ಲಿದ್ದ ಹುಡುಗಿಯರನ್ನು ಹೊರಗೆ ತಂದ ವಿಧಾನದ ಸ್ವಾರಸ್ಯ ಚಿತ್ರಿಸಿರಿ.

೬. ಹಳ್ಳದಿಂದ ಹೊರಬಂದ ಮೇಲೆ ತಂಡದವರ ವರ್ತನೆಯಲ್ಲಿ ಉಂಟಾದ ಬದಲಾವಣೆಗಳು ಯಾವುವು?

೭. ಪ್ರಭಾವತಿ ದರ್ಬಾರಿನಲ್ಲಿ ಯಾರ್ಯಾರು ಸೇವೆ ಮಾಡುತ್ತಿದ್ದರು?

೮. ರಾಮಮೂರ್ತಿ ಪಂಚಕನ್ಯೆಯರನ್ನು ಹೇಗೆ ಟೇಕಿಸಿದನು?

೯. ಮಾರನೆ ದಿನ ಸಸ್ಯಸಂಗ್ರಹಕ್ಕೆ ಹೋಗುವ ಮುನ್ನ ನಡೆದ ಸಂಭಾಷಣೆಯ ಸ್ವಾರಸ್ಯವೇನು?

೧೦. ವರದರಾಜನ ತಮಾಶೆ ಸ್ವಭಾವ ಕುರಿತು ಬರೆಯಿರಿ.

ಹೆಚ್ಚಿನ ಓದು

ಬಿ.ಜಿ.ಎಲ್.ಸ್ವಾಮಿ: ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕ-ಪ್ರಬಂಧ

ಪೂರ್ಣಚಂದ್ರ ತೇಜಸ್ವಿ: ಕರ್ವಾಲೋ ಹಾಗೂ ಜುಗಾರಿ ಕ್ರಾಸ್-ಕಾದಂಬರಿ

ಚಂದ್ರಶೇಖರ ನಂಗಲಿ: ಕಾಡು ಮತ್ತು ತೋಪು – ಪ್ರಬಂಧ