ತುಂಟ ಪುಟಾಣಿ ಹುಡುಗ ದಿನವೂ ನೋಡುತ್ತಿದ್ದ. ಅವನ ಆಟದ ಕೋಣೆಯ ಬಾಗಿಲು ತೆರೆದ ಕೂಡಲೆ ಎರಡು ಗುಬ್ಬಚ್ಚಿಗಳು ಕಿಚಕಿಚ ಮಾತಾಡಿಕೊಳ್ಳುತ್ತ ಹಾರಿ ಬಂದು ಕೋಣೆಯ ಚಾವಣಿಯ ಟೀರುಗಳ ನಡುವೆ ಹುಲ್ಲು ಕಡ್ಡಿಗಳನ್ನು ಇಡುತ್ತಿದ್ದವು. ಇಂದು ದಿನ ’ಏನು ಮಾಡ್ತೀದೀರಿ?’ ಎಂದು ಕುತೂಹಲ ತಾಳಲಾರದೆ ಕೇಳಿದೆ. ’ಮನೆ ಕಟ್ಟಿಕೊಳ್ತೀದ್ದೇವೆ’ ಎಂದು ಹೆಣ್ಣು ಗುಬ್ಬಚ್ಚಿ ಹೇಳಿತು. ಕೂಡಲೇ ಗಂಡು ಹಕ್ಕಿ ಅವಳನ್ನು ತಿದ್ದಿತು. ’ಮನೆಯಲ್ಲಪ್ಪ, ಗೂಡು.’ ಗಂಡು ಹಕ್ಕಿಯ ಆತಂಕ ಏನೆಂದರೆ, ಈ ಹುಡುಗನ ಮನೆಯೊಳಗೆ ಇನ್ನೊಂದು ಮನೆ ಕಟ್ಟಿಕೊಳ್ಳುತ್ತಿದ್ಡೇವೆ ಅಂದರೆ ಆತ ಹೆತ್ತವರಿಗೆ ಚಾಡಿಹೇಳಿ ತಮ್ಮನ್ನು ಅಲ್ಲಿಂದ ಓಡಿಸಬಹುದು ಎನ್ನುವುದು. ಅದನ್ನು ಗಂಡುಹಕ್ಕಿ ಹೆಂಡತಿಗೆ ಪಿಸುಮಾತಿನಲ್ಲಿ ವಿವರಿಸಿತು. ಅವರ ಪಿಸುಮಾತನ್ನು ಕೂಡ ಕೇಳಿಸಿಕೊಂಡ ಹುಡುಗ ನಕ್ಕ. “ನಿಮ್ಮನ್ನು ಓಡಿಸುವಷ್ಟು ಕೆಟ್ಟವನಲ್ಲ ನಾನು. ಒಂದಿಲ್ಲದಿದ್ದರೆ ಎರಡು ಗೂಡು ಕಟ್ಟಿಕೊಳ್ಳಿ. ಆದರೆ ನಿಮ್ಮನ್ನು ಒಂದು ಪ್ರಶ್ನೆ ಕೇಳ್ತೀನಿ, ಬೇಸರ ಪಡಬೇಡಿ” ಅಂದ. ’ಕೇಳು’ ಎಂದು ಎರಡು ಗುಬ್ಬಚ್ಚಿಗಳೂ ಹೇಳಿದವು. ಅವರಿಗೆ ಅವನು ತುಂಬ ಒಳ್ಳೆಯವನು ಎಂಬುದು ಗೊತ್ತಾಗಿತ್ತು. “ನನ್ನ ಕೋಣೇಲೇ ಇರಬಹುದಲ್ಲ, ನಿಮಗಾಗಿ ಬೇರೆ ಮನೆ ಯಾಕೆ ಬೇಕು? ನನ್ನೊಂದಿಗೆ ಆಟ ಆಡಿಕೊಂಡು ಇರಬಹುದು” ಅಂದ.

ಗುಬ್ಬಚ್ಚಿಗಳಿಗೆ ಈ ಪ್ರಶ್ನೆ ತುಂಬ ಕಷ್ಟದ್ದಾಗಿ ಕಂಡಿತು. ಒಂದರ ಮುಖ ಇನ್ನೊಂದು ನೋಡಿಕೊಂಡು ಮೌನವಾದವು. ಉತ್ತರಿಸಬೇಕೆಂಬ ಕಾತರ ಇಬ್ಬರಲ್ಲೂ ಇತ್ತು. ಗಂಡು ಗುಬ್ಬಚ್ಚಿ ಹೆಂಡತಿಯ ಹೊಟ್ಟೆಯ ಕಡೆಗೆ ನೋಡಿತು. ಇದರಿಂದ ಲಜ್ಜೆಗೊಂಡ ಹೆಣ್ಣು ಗುಬ್ಬಚ್ಚಿ, “ನಮಗೊಬ್ಬ ಪಾಪ ಬರ್ತಾನೆ-ಅವನಿಗೆ ನಮ್ಮ ಮನೆಯೇ ಇಷ್ಟ” ಅಂದಿತು. ಆಗ ಹುಡುಗನಿಗೆ ಹೊಳೆಯಿತು. ಚಿಕ್ಕವನಾದ ತಾನು ವಯಸ್ಕರಾದ ಗುಬ್ಬಚ್ಚಿಗಳ ಜೊತೆಗೆ ಮಾತಾಡುತ್ತಿರುವೆನೆಂದು ಆತನಿಗೆ ಆಗದಿರುವ ಲೈಂಗಿಕ, ಪ್ರಾಪಂಚಿಕ ಅನುಭವಗಳೆಲ್ಲ ಆ ಗುಬ್ಬಚ್ಚಿಗೆ ಆಗಿರುವುದು ತಿಳಿಯಿತು. ಜೊತೆಗೆ ಅವನ ಔದಾರ್ಯ ತೀವ್ರವಾಯಿತು. ಅವನು ಪ್ರೀತಿಯಿಂದ, ಗೌರವದಿಂದ ಹೇಳಿದ, “ನೀವು ನನ್ನ ಸ್ನೇಹಿತರು, ನಿಮ್ಮನ್ನು ಕಂಡರೆ ನಂಗೆ ತುಂಬ ಇಷ್ಟ, ಹುಲ್ಲಿನ ಮನೆ ಯಾಕೆ ಕಟ್ಟಿಕೊಳ್ತೀರಿ-ನನ್ನಪ್ಪ ಕಂಟ್ರಾಕ್ಟರು. ನಾನು ನಿಮಗೆ ಸಿಮೆಂಟು, ಇಟ್ಟಿಗೆ ಎಲ್ಲ ಕೊಡಬಲ್ಲೇ, ಬಾಗಿಲು, ಕಿಟಕಿಗೆ ಮರಮುಟ್ಟು ಎಲ್ಲ ಕೊಡಬಲ್ಲೆ, ನನ್ನ ಕೋಣೆ ದೊಡ್ಡದಾಗಿದೆ ಅಲ್ಲ. ಈ ಮೂಲೇಲಿ ಒಂದು ಮನೆ ಕಟ್ಟಿಕೊಳ್ಳಿ, ನಿಮ್ಮ ಪಾಪನಿಗೆ ಇಷ್ಟವಾಗ ಬಹುದು” ಎಂದ.

ಗುಬ್ಬಚ್ಚಿಗಳು ಅವನ ಪ್ರೀತಿಯಿಂದ ಮೂಕವಾದವು. ಕಣ್ಣೀರು ಸುರಿಸತೊಡಗಿದವು. ’ದಯವಿಟ್ಟು ಕ್ಷಮಿಸು, ನಾವು ಕಟ್ಟುವ ಹುಲ್ಲಿನ ಮನೆಯೇ ನಮಗೆ, ನಮ್ಮ ಪಾಪುವಿಗೆ ಇಷ್ಟ’ ಅಂದವು. ಹುಡುಗನಿಗೆ ಬೇಸರವಾಯಿತು. ಅವರನ್ನು ಬೈಯಲಿಲ್ಲ, ಅಲ್ಲಿಂದ ಓಡಿಸಲಿಲ್ಲ, ಅವುಗಳೊಂದಿಗೆ ಮಾತಾಡುವುದನ್ನು ನಿಲ್ಲಿಸಿದ. ಅವು ಕಟ್ಟುತ್ತಿದ್ದ ಗೂಡನ್ನು ತಾತ್ಸಾರದಿಂದ ಗಮನಿಸುತ್ತಲೇ ಇದ್ದ. ಗೂಡು ಸಿದ್ಧವಾಯಿತು. ಒಂದು ದಿನ ತಾಯಿ ಮೊಟ್ಟೆ ಇಟ್ಟಿತು. ಹಕ್ಕಿಯ ಪಾಪು ಓಡಾಡುವುದಿಲ್ಲ. ಗೋಲಿಯಂತೆ ಸುಮ್ಮನೇ ಬಿದ್ದಿವೆ! ಬೇಸರದಿಂದ ಮೊಟ್ಟೆಗಳಿಗೆ ಹೇಳಿದ, “ನಿಮ್ಮ ತಂದೆತಾಯಿ ವಕ್ರಬುದ್ಧಿಯ ಬಡವರು, ನೀವಾದರೂ ಚೆನ್ನಾಗಿ ಬದುಕುವುದನ್ನು ಕಲಿಯಿರಿ”. ತನಗಿರುವ ಆಟದ ಸಾಮಾನು, ಗೊಂಬೆಗಳ ಬಗ್ಗೆ ಹೇಳಿದ. ಆ ಮೊಟ್ಟೆಗಳ ತಂದೆತಾಯಿಗಳಾದರೂ ಮಾತಾಡುತ್ತಿದ್ದರು, ಈ ಮೊಟ್ಟೆಗಳು ಕಟುವ್ಯಂಗ್ಯದಿಂದ ಎನ್ನುವಂತೆ ಸುಮ್ಮನಿದ್ದವು. ಹುಡುಗನಿಗೆ ಕೋಪ ಬಂದು ಅವುಗಳನ್ನು ಹೆತ್ತವರಲ್ಲಿ ದೂರಿದ. ಗಂಡ ಹೆಂಡತಿ ಸುಮ್ಮನಿದ್ದರು. ಕೆಲವೇ ದಿನಗಳಲ್ಲಿ ಹುಡುಗ ನೋಡಿದರೆ ಅಲ್ಲಿ ಹಕ್ಕಿಗಳೂ ಇರಲಿಲ್ಲ, ಮೊಟ್ಟೆಯೂ ಇರಲಿಲ್ಲ. ಗೂಡು ಮಾತ್ರ ಇತ್ತು. ಹಕ್ಕಿಗಳು ಮತ್ತೆ ಬರಬಹುದೆಂದು ತುಂಬ ದಿನ ಕಾದ. ಅವು ಬರಲೇ ಇಲ್ಲ. ಇಡೀ ಪ್ರಕರಣ ಅವನಲ್ಲಿ ಒಬ್ಬಂಟಿತನ, ಅಳುಕು ಉಂಟುಮಾಡಿತು. ಗೂಡನ್ನು ತೆಗೆದುಕೊಂಡು ನೋಡಿದ. ಅದು ತೀರಾ ಸಾಮಾನ್ಯವಾಗಿ ಕಾಣುತ್ತಿತ್ತು. ಹುಲ್ಲುಕಡ್ಡಿಗಳನ್ನು ತಂದು ಅದರಂತೆ ಕಟ್ಟಲು ಯತ್ನಿಸಿದ. ಸಾಧ್ಯವಾಗಲಿಲ್ಲ. ಆಗ ಅವನಿಗೆ ಇನ್ನೂ ನಿರಾಶೆಯಾಯಿತು. ಬೆಳೆದಂತೆಲ್ಲ ಈ ನಿರಾಶೆ ಪ್ರಾಣಿಪಕ್ಷಿಗಳ ಬಗ್ಗೆ ಮೆಚ್ಚಿಗೆಯನ್ನೇ ಉಂಟುಮಾಡಿತು. ಗುಬ್ಬಚ್ಚಿಗಳು ಹಾರಾಡುವುದನ್ನು, ಕಿಚಕಿಚ ಮಾತಾಡಿಕೊಂಡು ಖುಷಿಯಾಗಿರುವುದನ್ನು ಕಂಡಾಗಲೆಲ್ಲ ಅವುಗಳ ನೆಲೆಯಿಲ್ಲದ ಬದುಕು, ಬಡತನ, ಸ್ವಾತಂತ್ರ್ಯ ಇವೆಲ್ಲವುಗಳ ಜೊತೆಗೆ ಅವುಗಳ ಸ್ವಾಭಿಮಾನ ಅವನನ್ನು ಅಚ್ಚರಿಗೊಳಿಸುತ್ತಿತ್ತು.

ಕವಿಗಳ ಬಗ್ಗೆ ಯೋಚಿಸಿದಾಗ ನನಗೆ ಮೇಲಿನ ಕತೆಯ ಸ್ವಾರಸ್ಯ ಬೆಳೆಯುತ್ತಾ ಹೋಗುತ್ತದೆ. ’ನಿಮ್ಮ ಪ್ರಕಾರ ಕವನ ಎಂದರೇನು?’ ಎಂದು ಗೆಳೆಯರೊಬ್ಬರು ಕೇಳಿದರು. ಆ ವಸ್ತುವನ್ನು ಅವರು ಅನೇಕರಿಗೆ ಹಂಚಿ ಪುಸ್ತಕವೊಂದನ್ನು ಹೊರತರಲು ಹವಣಿಸುತ್ತಿದ್ದರು. ’ಅದಕ್ಕೇನು, ಉತ್ತರ ಸುಲಭ!’ ಎಂದು ಹೇಳಿದೆ. ಆದರೆ ಉತ್ತರ ಗೊತ್ತಿದ್ದರೂ ಅವಸರದಿಂದ ಹೇಳಿದರೆ ಸರಳವಾಗುತ್ತದೆ, ತಪ್ಪಾಗುತ್ತದೆ ಅನ್ನಿಸಿತು. “ಕವನ ಅಂದರೆ? ಗುಬ್ಬಚ್ಚಿಯ ಗೂಡು!” ಎಂದು ಹೇಳಿದ್ದರೆ ಮಾತ್ರ ಉತ್ತರಕ್ಕೆ ಹತ್ತಿರವಾಗುತ್ತಿದ್ದೆ.

ಕವಿಗಳ ಕವನದಂತೆಯೇ ಗುಬ್ಬಚ್ಚಿಯ ಗೂಡು, ಅನನ್ಯವಾದದ್ದು, ಮನುಷ್ಯ ಕಟ್ಟಲು ಆಗದಂಥದು, ಗೂಡಿನ ಹುಲ್ಲುಕಡ್ಡಿಗಳಂತೆಯೇ ಕವಿಯ ಮಾತುಗಳು ಮತ್ತು ಅನುಭವ ಸರಳವಾದವು, ಬದುಕಿನ ಅತ್ಯಂತ ಕೆಳಸ್ತರದಿಂದ ಸಂಗ್ರಹಿತವಾದವು. ಜನರ ಹೃದಯದ ಮಾತುಗಳಿಗೆ ಬದಲು ಪುಸ್ತಕಗಳ ಮಾತುಗಳನ್ನೇ ಬಳಸಿದವರು, ಕಡುಬಡವನ ಅಳಲಿಗೆ ಬದಲು ರಾಜಮಹಾರಾಜರ ಪ್ರತಾಪಗಳನ್ನು ವರ್ಣಿಸುವವರು, ಆಪ್ತ ದನಿಗೆ ಬದಲು ಡಂಗುರದ ವರಸೆಗೆ ಬಲಿಯಾದವರು ಕವಿಗಳಾಗಿ ವಿಫಲರಾಗಿದ್ದಾರೆ; ಅಥವಾ ಸತ್ಯಕ್ಕೆ ಹೆಚ್ಚು ಹತ್ತಿರವಾಗಬೇಕೆಂದರೆ, ಪುಸ್ತಕಗಳ ದೊಡ್ಡ ದೊಡ್ಡ ಮಾತುಗಳ ಹಿಂದಿನ ಅಪಸ್ವರವನ್ನು, ರಾಜ ಮಹಾರಾಜರ ಮೂಲಭೂತ ತಬ್ಬಲಿ ದನಿಯನ್ನು, ಡಂಗುರದ ಬೊಬ್ಬೆಯ ನಿರರ್ಥಕತೆಯನ್ನು ಹಿಡಿದವರು ಮಾತ್ರ ಕವಿಗಳಾಗಿದ್ದಾರೆ. ಕವಿಯೊಬ್ಬ ವಿಚಿತ್ರ ವ್ಯಕ್ತಿ: ಹುಡುಗ ಮನೆ ಕಟ್ಟಿಕೊಳ್ಳಲು ಗುಬ್ಬಚ್ಚಿಗೆ ಹೇಳಿದಾಗ ಗುಬ್ಬಚ್ಚಿಯ ದಿಗ್ಭ್ರಮೆಯಲ್ಲಿ ಕವಿಯ ಆಳದ ದಿಗಿಲಿದೆ. “ನಾನು ಬಡವಿ, ಆತ ಬಡವ, ಒಲವೆ ನಮ್ಮ ಬದುಕು” ಎಂದು ಹೇಳುವ ಬೇಂದ್ರೆಯ ಪ್ರೇಯಸಿಗೆ ಅವನ ರಂಗಸಾಲೆ, ಅವನ ಮೆಚ್ಚಿನೋಲೆ.

ಕಾಲವನ್ನು ಪಕ್ಷಿಗೆ ಹೋಲಿಸುತ್ತಾರೆ. ಪ್ರಾಣವನ್ನು ಪಕ್ಷಿಗೆ ಹೋಲಿಸುತ್ತಾರೆ. ಇದೆಲ್ಲ ಮಾಡುವವರು ಕವಿಗಳೇ. ಆದರೆ ಇಲ್ಲಿ ಒಂದು ಅರ್ಥಪೂರ್ಣ ವ್ಯತ್ಯಾಸ ಗುರುತಿಸಬೇಕು. ಗುಬ್ಬಚ್ಚಿಯ ಗೂಡನ್ನು ತನ್ನೆಲ್ಲ ಜಾಣತನ ಬಳಸಿ ಕಟ್ಟಿಬಿಟ್ಟಾನು, ಆದರೆ ಆತ ಇದರಲ್ಲಿ ಜೀವಿಸಲಾರ. ಹಕ್ಕಿಗಳ ಹಾಡು ಇಂಪಾಗಿರಬಹುದು, ಆದರೆ ಮನುಷ್ಯ ಅದನ್ನು ಅನುಕರಿಸಿದರೆ ಅದು ಹಾಡಾಗಲಾರದು. ಹಕ್ಕಿಗಳಂತೆ ಈತ ವಿಮಾನದಲ್ಲಿ ಹಾರಬಹುದು, ಆದರೆ ಅದು ಹಕ್ಕಿಯ ಹಾರಾಟ ಅನ್ನಿಸಿಕೊಳ್ಳುವುದಿಲ್ಲ. ಆದ್ದರಿಂದಲೇ ಮನುಷ್ಯನೊಂದು ನಿಗೂಢ ರಹಸ್ಯ! ಆತನ ದೇಹದ ರಚನೆಯನ್ನು ನೋಡಿದರೆ ಅವನು ಹಾರಲಾರ; ಹಾಡಲಾರ, ಹಕ್ಕಿಗಳ ಚಾಕಚಕ್ಯತೆಯಿಂದ, ಅಷ್ಟೇ ವೇಳೆಯಲ್ಲಿ ಗೂಡಕಟ್ಟಲಾರ. ಆದರೂ ಆತ ಇವೆಲ್ಲವುಗಳನ್ನು ಮಾಡಿಬಿಟ್ಟು ಹಕ್ಕಿಯ ಸರಳತೆಯ ಬಗ್ಗೆ ನಿಬ್ಬೆರಗಾಗುತ್ತಾನೆ. ಕ್ರೌಂಚಪಕ್ಷಿಯ ಧ್ವನಿ ಕೇಳಿದ ವಾಲ್ಮೀಕಿ ಮಾತ್ರ ರಾಮಾಯಣ ರಚಿಸಬಲ್ಲ, ರಾಮಾಯಣದ ಅಗತ್ಯವೇ ಇಲ್ಲದ ಹಕ್ಕಿಗಳು ದ್ವೇಷ, ಸ್ನೇಹ, ಸಂಭೋಗ, ವಂಶದ ಬೆಳವಣಿಗೆ ಎಲ್ಲದರಲ್ಲಿ ತೊಡಗಿ ಸುಮ್ಮನಿರುತ್ತವೆ. ರಾಮಾಯಣ ರಚಿಸಲು ಬೇಕಾದ ಮಾತು, ಛಂದಸ್ಸು, ಮೌನ, ಏಕಾಗ್ರತೆಯನ್ನು ಬೆಳೆಸಿಕೊಂಡು ಕವಿ ಮನುಕುಲಕ್ಕೆ ಒಂದು ಕತೆಯನ್ನೇ, ಪರಂಪರೆಯನ್ನೇ ನೀಡುತ್ತಾನೆ.

ಮೌನ ಮುಖ್ಯವೆ? ಸಂಗೀತದಲ್ಲಿ, ನಾಟಕದಲ್ಲಿ ಮೌನ ಸದ್ದಿನಷ್ಟೇ ಮುಖ್ಯ. ಆದರೆ ಕವನದಲ್ಲಿ? ಅರೇ ಪದಗಳ ಮೂರು ಸಾಲಿನಲ್ಲಿ ಜಪಾನಿನ ಹಯಕು ಕವನ ರೂಪುಗೊಳ್ಳುತ್ತದೆ. ಕುಮಾರವ್ಯಾಸನ ಷಟ್ಪದಿಯ ಒಂದು ಪದ್ಯವನ್ನು ವಿವರಿಸಹೋದರೆ ಅನೇಕ ಪುಟಗಳೇ ಬೇಕಾಗುತ್ತವೆ; ಶೇಕ್ಸ್ ಪಿಯರ್ ನ “ಕಿಂಗ್ ಲಿಯರ್” ನ ಎಂಟು ನುಡಿ ಸಂಪುಟಗಳನ್ನೇ ಹೇಳುತ್ತದೆ. ಮೊನ್ನೆ ನಾನು ನೋಡಿದ ಒಂದು ನಾಟಕದಲ್ಲಿ ಹಲವು ಜನ ಮುಖ್ಯ ಪಾತ್ರಧಾರಿಯ ಮಾತುಗಳಿಗಾಗಿ ಕಾಯುತ್ತಿದ್ದರು. ಪಾತ್ರಗಳು ಮಾತಾಡುತ್ತಿದ್ದವು. ಆದರೆ ಅಲ್ಲೊಂದು ಆಶ್ಚರ್ಯ ಕಾದಿತ್ತು. ಮುಖ್ಯ ಪಾತ್ರಧಾರಿ ಸುಮ್ಮನೆ ಹೋಗಿ ಮೌನದಲ್ಲಿ ಗಂಟೆ ಬಾರಿಸಿದ. ಆ ಗಂಟೆಯ ಧ್ವನಿ ಪ್ರೇಕ್ಷಕರಲ್ಲಿ ರೋಮಾಂಚನವನ್ನೇ ಮೂಡಿಸಿತು.

ಆದರಿಂದಲೇ ಕವಿ ಕೆಲವೇ ಮಾತುಗಳನ್ನು ಬಳಸಿಕೊಂಡು ಮಾತುಮಾತಿನ ನಡುವೆ ಮೌನಿಯಾಗುತ್ತಾನೆ. ಅದೇ ಛಂದಸ್ಸು, ’ವಾರಿನೋಟ ಹಾರುತಿತ್ತೊ ಹೊಳೀಮ್ಯಾಗ! ಹೊಸಾ ಹರೆ ಈಸತಿತ್ತೊ ಹೋಳಿಯಾಗ!’ ಎನ್ನುವ ಬೇಂದ್ರೆಯವರ ಕವನವನ್ನು ಹಾಡಬಹುದು, ಈ ಹಾಡಿನಲ್ಲಿ ಮೌನವಿದೆ. ಯಾರ ವಾರಿನೋಟ, ಯಾಕೆ ಹಾರುತ್ತಿತ್ತು, ಎಂಬುದೆಲ್ಲ ಇಲ್ಲಿ ಮೌನ. ಹರಯದ ಜನರ ಆಕಾರ ಕೂಡ ಇಲ್ಲಿ ನಿಶ್ಯಬ್ದ. ಮೂರು ಒತ್ತುಗಳುಳ್ಳ ಈ ಸಾಲುಗಳ ಸದ್ದಿನಲ್ಲಿ ಕೂಡ ನಿಶ್ಯಬ್ದ ಕೆಲಸ ಮಾಡುತ್ತದೆ.

’ಹಕ್ಕಿ ಹಾರಿತಿದೆ ನೋಡಿದಿರಾ?’ ಎಂದು ಕೇಳುವ ಬೇಂದ್ರೆಯವರಾಗಲಿ, ’ಮನೆಯೊಳಗೆ ಮನೆಯೊಡೆಯನಿಲ್ಲ’ ಎನ್ನುವ ಬಸವಣ್ಣನಾಗಲಿ, ’ಎಲ್ಲರಂಥವನಲ್ಲ ನನ ಗಂಡ’ ಎನ್ನುವ ಶಿಶುನಾಳರಾಗಲಿ ಹಕ್ಕಿ ಮನೆ, ಗಂಡಂದಿರನ್ನು ನೋಡಿದವರು; ಅವರ ವಹಿವಾಟನ್ನು, ಗುಣಧರ್ಮವನ್ನು ಸೂಕ್ಷ್ಮವಾಗಿ ಗಮನಿಸಿದವರು; ಈ ಹುಲ್ಲನ್ನು ಬಳಸಿಕೊಂಡು ತಮ್ಮ ಕವನದ ಗೂಡನ್ನು ಕಟ್ಟುವವರು, ಈ ಕವನದ ಗೂಡಿನಲ್ಲಿ ಗುಬ್ಬಚ್ಚಿಯ ಹೃದಯ ಸ್ಪಂದನವನ್ನು ಗುರುತಿಸಿದರು.

ಅದಕ್ಕೇ ನಾನು ಹೇಳಿದ್ದು, ಮನುಷ್ಯ ನಿಗೂಢ ಎಂದು. ಈತನಿಗೆ ಹಾರುವಿಕೆ, ಓಡುವಿಕೆ, ಮನೆ ಕಟ್ಟುವಿಕೆ ಸಾಲದು. “ದೇಹರಚನೆಯ ದೌರ್ಬಲ್ಯದಿಂದಾಗಿಯೇ ಇವೆಲ್ಲ ಕ್ರಿಯೆಗಳನ್ನು ರೂಢಿಸಿಕೊಂಡು ಮನುಷ್ಯ ಒಟ್ಟಾಗಿ ಬಾಳುವುದನ್ನು ಕಲಿತವನು ಒಟ್ಟಾಗಿ ಬಾಳುವುದರ ಬೇಸರ, ನೋವು, ಪ್ರೇಮ, ಕಾಮ, ಘರ್ಷಣೆಗಳ ಬಲೆಯಲ್ಲಿ ಬಿದ್ದವನು. ನೆಮ್ಮದಿಯಾಗಿರುವ ಹೆಲೆನ್ ಮತ್ತು ಮೆನಿಲಾಸ್ ಬದುಕಿಗೆ ಪ್ಯಾರಿಸ್ ಪ್ರವೇಶಿಸಬೇಕು. ಹೆಲೆನ್ಳ ಅವಿವೇಕಿ ಪ್ರೇಮಕ್ಕಾಗಿ ಎರಡು ದೇಶಗಳ ಯುದ್ಧ, ರಕ್ತಪಾತವಾಗಿ ಎಲ್ಲ ದಾಂಪತ್ಯದ ಏಕತಾನತೆಯಂತೆಯೇ ಎಲ್ಲ ಪ್ರೇಮದ ಮಿತಿ ಕೂಡ ಗೊತ್ತಾಗಲು ಹೋಮರನ ಮಹಾಕಾವ್ಯ ಹುಟ್ಟಬೇಕು. ಕೈಕೇಯಿಯ ಅಸೂಯೆ, ಸಣ್ಣತನದಿಂದ ಶುರುವಾಗಿ ದಶಕಂಠನ ದಿಕ್ಕೆಟ್ಟ ಕಾಮದ, ಪ್ರೇಮದ ವ್ಯಾಖ್ಯಾನವಾಗಲು ರಾಮಾಯಣ ಮೂಡಬೇಕು. ಮನುಷ್ಯನ ಬದುಕುವ ಹೋರಾಟದ ಅಂಗವಾಗಿ ಆತ ಬದುಕಲು ಕಾವ್ಯ ಕೊಡಬೇಕು.

ಮನುಷ್ಯನ ಸಾಧನೆಯೇ ಆತ ನಡೆದ ದಾರಿಯಲ್ಲಿ ನೀಚತನದ ಹೆಜ್ಜೆ ಗುರುತುಗಳನ್ನು ಬಿಡುತ್ತಾ ಹೋಗುತ್ತದೆ. ಸದ್ದು, ಮೌನವನ್ನು ಸಾಧಿಸಲು ಇರುವ ಛಂದಸ್ಸೇ ಆತನ ಪಂಜರವಾಗುತ್ತದೆ; ಮಾನಸಿಕ, ಸಾಮಾಜಿಕ ನೆಮ್ಮದಿಗಾಗಿ ರೂಪಿಸಿಕೊಂಡ ಧರ್ಮವೇ ಜಾತಿಯ ಗೋಡೆಗಳಾಗಿ ಬೆಳೆಯುತ್ತದೆ; ಹಕ್ಕಿಯಂತೆ ಉಂಡು, ಪ್ರೇಮಿಸಿ ಹಾರಿಹೋಗಲಾರದ ಮನುಷ್ಯ ತನ್ನ ಮಹಾಕಾವ್ಯ, ಛಂದಸ್ಸು, ಜಾತೀಯತೆ, ಮೂಢ ನಂಬಿಕೆಗಳ ಜಾಲದಲ್ಲಿ ಬಿದ್ದುಹೋಗುತ್ತಾನೆ> ತನ್ನ ದೈಹಿಕದೌರ್ಬಲ್ಯಕ್ಕೆ ಪರ್ಯಾಯವಾಗಿ ಬೆಳೆಸಿಕೊಂಡ ಸರ್ವಸ್ವವೂ ಮನುಷ್ಯನನ್ನು ಅಣಕಿಸತೊಡಗುತ್ತದೆ.

ಒಲೆ ಹತ್ತಿ ಉರಿದರೆ ನಿಲಬಹುದಲ್ಲದೆ
ಧರೆಹತ್ತಿ ಉರಿದರೆ ನಿಲಬಾರದು
ಏರಿ ನೀರುಂಬಡೆ, ಬೇಲಿ ಹೊಲವ
ನಾರಿ ತನ್ನ ಮನೆಯಲ್ಲಿ ಕಳುವಡೆ
ತಾಯ ಮೊಲೆಹಾಲು ನಂಜಾಗಿ ಕೊಲುವೊಡೆ
ಇನ್ನಾರಿಗೆ ದೂರವೆ
ತಂದೆ ಕೂಡಲ ಸಂಗಮದೇವ

ಎಂದು ಬಸವಣ್ಣ ನಿಟ್ಟುಸಿರು ಬಿಡುತ್ತಾರೆ. ಕೂಡಲ ಸಂಗಮನ ಹೆಸರು ಹೇಳುವ ಬಸವಣ್ಣನವರಿಗೇ ಅನುಮಾನವಿದೆ    – “ಮನೆಯೊಳಗೆ ಮನೆಯೊಡೆಯನಿದ್ದಾನೊ ಇಲ್ಲವೋ?” ಎಂದು. ಇಷ್ಟೊಂದು ಕಾವ್ಯ, ಧರ್ಮ, ಪವಾಡಗಳು, ಸಾಧನೆಗಳೆಲ್ಲ ಆದರೂ ಬಸವಣ್ಣನವರಿಗೆ ದೇವರ ಅಸ್ತಿತ್ವದ ಬಗ್ಗೆಯೇ ಅನುಮಾನವಿದೆ. ಹಾಗೆಯೇ ಛಂದಸ್ಸಿನ ಅಸ್ತಿತ್ವದ ಬಗ್ಗೆ. ಅವರ್ ಮೇಲಿನ ಮಾತುಗಳನ್ನು ಗಮನಿಸಿ. ಅದು ಗದ್ಯ ಆದರೆ ಈ ಗದ್ಯ ಅಚ್ಚಕನ್ನಡದಲ್ಲಿ, ವಾಸ್ತವಕ್ಕೆ ಕಟ್ಟಿಕೊಂಡ ನುಡಿಕಟ್ಟಿನಲ್ಲಿ, ಮಾತಿನಂತೆಯೇ ಮೌನದ ಬಳಕೆಯಲ್ಲಿ, ಪಾಂಡಿತ್ಯಕ್ಕೆ ಬದಲು ಹೃದಯದ ಚಿಂತನೆಯ ಗ್ರಹಿಕೆಯಲ್ಲಿ ಕಾವ್ಯವಾಗುತ್ತದೆ. ಹತ್ತು ಮಾತುಗಳಲ್ಲಿ ಗಾಢ ಅನುಭವವನ್ನು ಹೇಳಿ ಕವನವಾಗುತ್ತದೆ.

ಆದ್ದರಿಂದಲೇ ಎಲ್ಲ ಕವನಗಳಲ್ಲಿನ ಸಿದ್ಧಾಂತ, ಬದ್ಧತೆ ಮುಖ್ಯವಾಗಿ ಬದುಕಿಗೆ, ಪ್ರೀತಿಗೆ ಮಾತ್ರ ಬದ್ಧ. ಈ ಸಿದ್ಧಾಂತಗಳು ಒಳ್ಳೊಳ್ಳೆಯ ಯೋಚನೆಗಳೆಲ್ಲ ಕವಿಯ ಆಟದ ಸಾಮಾನುಗಳು ಮಾತ್ರ. ನೆರೂಡ, ಬ್ರೆಕ್ಟ್ ತಮ್ಮ ಸಮತಾವಾದದ ಬಗ್ಗೆ ಎಷ್ಟು ಹೇಳಿಕೊಂಡರೂ ಅವರ ಕವನಗಳು ಕೆಟ್ಟುಹೋಗಿರುವ ಭಾಷೆಯನ್ನು ಹೃದಯ ಸ್ಪಂದನದ ಭಾಷೆಯ ಹತ್ತಿರ ತರುವುದಕ್ಕಾಗಿ, ಅಸಮಾನತೆ, ಅನ್ಯಾಯಗಳಿಂದ ಕೊಳೆತು ಹೋಗಿರುವ ಸಮಾಜಕ್ಕೆ ಗುಬ್ಬಚ್ಚಿಯ ಮುಗ್ಧ ನಿಸ್ವಾರ್ಥತೆ, ಸ್ವಾಭಿಮಾನದ ನಿಲುವು ತರುವುದಕ್ಕಾಗಿ, ಸಂಕೀರ್ಣಗೊಂಡ ಮನುಷ್ಯನನ್ನು ತನ್ನ ಅರಮನೆಯಲ್ಲಿ, ಗುಡಿಸಿಲಲ್ಲಿ ತಬ್ಬಲಿಯನ್ನಾಗಿ ಮಾಡುವ ಪರಿಸರಕ್ಕೆ ಮಾತು ಮೀರಿದ ಪ್ರೀತಿ ತರುವುದಕ್ಕಾಗಿ ನಡೆಸುವ ಪ್ರಯತ್ನಗಳು.

ಕವನವೆಂದರೆ ಏನೆಂದು ಈಗ ಗೊತ್ತಾಯಿತೆ? ಗುಬ್ಬಚ್ಚಿಯಂತೆ ಹಾಡಲಾರದ, ಬದುಕಲಾರದ ಮನುಷ್ಯ ತನ್ನದೇ ಆದ ರೀತಿಯಲ್ಲಿ ಆಡುವ, ಮಾತಾಡುವ, ಮೌನವಾಗಿರುವ ಪ್ರಯತ್ನ.

ಲೇಖಕರು

ಪಿ.ಲಂಕೇಶ್ (೧೯೩೫-೨೦೦೦) ಅವರು ಕನ್ನಡದ ನವ್ಯ ಲೇಖಕರೆಂದು ಹೆಸರಾದವರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿದ್ದ ಲಂಕೇಶ್ ತಮ್ಮ ಕೆಲಸಕ್ಕೆ ರಾಜಿನಾಮೆ ಕೊಟ್ಟು ಸಿನಿಮಾ ಮಾಡಲು ಆರಂಭಿಸಿದರು. ಪಲ್ಲವಿ, ಎಲ್ಲಿಂದಲೋ ಬಂದವರು ಅವರು  ನಿರ್ದೇಶಿಸಿದ ಸಿನಿಮಾಗಳು. ೧೯೮೦ರಲ್ಲಿ ಅವರು ಲಂಕೇಶ್ ಪತ್ರಿಕೆ ಶುರುಮಾಡಿ, ಸುಮಾರು ಎರಡು ದಶಕಗಳ ಕಾಲ ಅವರು ಕನ್ನಡ ಪತ್ರಿಕೋದ್ಯಮದಲ್ಲಿ ಪ್ರಭಾವಶಾಲಿಯಾಗಿದ್ದರು. ಅವರು ಪ್ರತಿವಾರವೂ ಟೀಕೆ ಟಿಪ್ಪಣಿ ಎಂಬ ಹೆಸರಲ್ಲಿ ಬರೆಯುತ್ತಿದ್ದ ಅಂಕಣ ತುಂಬ ಓದುಗರನ್ನು ಪಡೆದಿತ್ತು. ಉಮಾಪತಿಯ ಸ್ಕಾಲರ್ ಶಿಪ್ ಯಾತ್ರೆ, ಕಲ್ಲುಕರಗುವ ಸಮಯ, ಮೊದಲಾದ ಕಥಾಸಂಕಲನಗಳು, ಬಿರುಕು, ಮುಸ್ಸಂಜೆಯ ಕಥಾಪ್ರಸಂಗ ಎಂಬ ಕಾದಂಬರಿಗಳು ಸಂಕ್ರಾಂತಿ, ಗುಣಮುಖ ಮುಂತಾದ ನಾಟಕಗಳು ಅವರ ಪ್ರಮುಖ ಕೃತಿಗಳು. ಕಲ್ಲುಕರಗುವ ಸಮಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೧೯೯೩) ಬಂದಿತು.

ಆಶಯ

ಪ್ರಸ್ತುತ ಅಂಕಣ ಬರೆಹವನ್ನು ಅವರ ಟೀಕೆಟಿಪ್ಪಣಿ ಸಂಪುಟ ೧ ರಿಂದ ಆರಿಸಿ ಕೊಳ್ಳಲಾಗಿದೆ. ಇಲ್ಲಿ ಲೇಖಕರು ಗುಬ್ಬಚ್ಚಿಯ ಗೂಡಿನ ಸಂಕೇತವನ್ನು ಇಟ್ಟುಕೊಂಡು, ಚಿಂತನೆ ಮಾಡಿದ್ದಾರೆ. ಗುಬ್ಬಚ್ಚಿಗಳು ಎಷ್ಟೇ ಪುಟ್ಟ ಹಕ್ಕಿಗಳಾದರೂ ತಮಗೆ ಬೇಕಾದ ಗೂಡನ್ನು ತಾವೇ ಕಟ್ಟಿಕೊಳ್ಳುತ್ತವೆ. ಈ ಗೂಡು ಅವಕ್ಕೆ ವಿಶಿಷ್ಟವಾಗಿರಿತ್ತದೆ. ಸ್ವಂತಿಕೆ ಇರುವ ಎಲ್ಲರೂ ತಮ್ಮ ವ್ಯಕ್ತಿತ್ವಕ್ಕೆ ತಕ್ಕನಾದ ಬದುಕನ್ನು ಬದುಕಲು ಹವಣಿಸುತ್ತಾರೆ. ಕವನ ಕೂಡ ಆಯಾ ಕವಿಯ ವಿಶಿಷ್ಟತೆಗೆ ತಕ್ಕಂತೆ ಇರಬೇಕು. ಮನುಷ್ಯರಿಗೆ ಪಕ್ಷಿಗಳಿಗಿರುವ ಕೆಲವು ಸ್ವಾತಂತ್ರ್ಯ ಅನುಕೂಲ ಇಲ್ಲ. ಆದರೆ ಪ್ರಾಣಿ ಪಕ್ಷಿಗಳಿಗಿಲ್ಲದ ಕೆಲವು ಸಾಮರ್ಥ್ಯಗಳು ಇವೆ. ತಮ್ಮ ಮಿತಿಗಳನ್ನು ಮೀರಲು ಅವರು ಅನೇಕ ಬಗೆಯಲ್ಲಿ ತೊಡಗುತ್ತಾರೆ. ಇದೇ ಅವರ ಅನೇಕ ಸಾಧನೆಗಳಿಗೆ ಕಾರಣವಾಗುತ್ತದೆ ಎಂದು ಲೇಖನ ಸೂಚಿಸುತ್ತಿದೆ.

ಟಿಪ್ಪಣಿ

ಹಾಯಕು = ಜಪಾನಿ ಭಾಷೆಯ ಕಿರುಗವನ, ಹೆಲೆನ್ = ಗ್ರೀಕ್ ಪುರಾಣಗಳಲ್ಲಿ ಬರುವ ಒಬ್ಬ ಸುಂದರಿ, ಮೆನಿಲಾಸ್ = ಹೆಲೆನಳ ಗಂಡ, ಪ್ಯಾರಿಸ್ = ಟ್ರಾಯ್ ದ್ವೀಪದ ರಾಜಕುಮಾರ, ಮೆನಿಲಾಸನ ಅತಿಥಿಯಾಗಿ ಬಂದು ಹೆಲೆನಳನ್ನು ಅಪಹರಿಸಿಕೊಂಡು ಹೋದವನು, ಹೆಲೆನಳನ್ನು ಬಿಡಿಸಿಕೊಂಡು ಬರಲು ೧೨ ವರುಷ ಕಾಲ ಗ್ರೀಕರಿಗೂ ಟ್ರಾಯನರಿಗೂ ನಡೆದ ಯುದ್ದವು ಟ್ರೋಜನ್ ಯುದ್ಧವೆಂದು ಖ್ಯಾತವಾಗಿದೆ. ಹೋಮರ್ ಎಂಬ ಕವಿ ಈ ಯುದ್ಧವನ್ನು ವಸ್ತುವನ್ನಾಗಿ ಮಾಡಿಕೊಂಡು ’ಇಲಿಯಡ್’ ಹಾಗೂ ’ಒಡೆಸ್ಸಿ’ ಎಂಬ ಮಹಾಕಾವ್ಯಗಳನ್ನು ಬರೆದನು. ನೆರೂಡ =  ಚಿಲಿ ದೇಶದ ಪ್ರಖ್ಯಾತ ಕವಿ ಹಾಗೂ ರಾಜಕಾರಣಿ, ಬ್ರೆಕ್ಟ್ =  ಜರ್ಮನಿಯ ಕವಿ, ನಾಟಕಕಾರ.

 

ಪ್ರಶ್ನೆಗಳು

೧. ತುಂಟ ಪುಟಾಣಿ ಹುಡುಗನಿಗೂ ಹಕ್ಕಿಗಳಿಗೂ ನಡೆಯುವ ಸಂಭಾಷಣೆಯನ್ನು ವಿವರಿಸಿರಿ.

೨. ಗುಬ್ಬಚ್ಚಿಗಳಿಗೆ ಹುಡುಗನು ಮಾಡುವ ಸಹಾಯವನ್ನು ಯಾಕೆ ನಿರಾಕರಿಸುತ್ತವೆ?

೩. ಗುಬ್ಬಚ್ಚಿಗಳು ಯಾಕೆ ಗೂಡು ಬಿಟ್ಟು ಹಾರಿ ಹೋಗುತ್ತವೆ?

೪. ಲೇಖಕರು ಹೇಳುವ ಮೌನದ ಮಹತ್ವವೇನು?

೫. ಮನುಷ್ಯನೊಂದು ನಿಗೂಢ ರಹಸ್ಯ ಎಂದು ಲೇಖಕರು ಹೇಗೆ ವಾದಿಸುತ್ತಾರೆ?

೬. ಹಕ್ಕಿಯಂತೆ ಸರಳವಾಗಿ ಬದುಕಲಾರದ ಮನುಷ್ಯರು ತಾವೇ ಕಟ್ಟಿಕೊಂಡ ವ್ಯವಸ್ಥೆಯಲ್ಲಿ ಬಂಧಿಗಳಾಗಿ ಬದುಕುತ್ತಾರೆ ಎಂದು ಲೇಖಕರು ಹೇಗೆ ಹೇಳುತ್ತಾರೆ?

೭. ಗುಬ್ಬಚ್ಚಿಗೂಡಿಗೂ ಕವನ ಕಟ್ಟುವುದಕ್ಕೂ ಇರುವ ಸಂಬಂಧಗಳನ್ನು ಲೇಖನ ಹೇಗೆ ವಿವರಿಸುತ್ತದೆ.?

 

ಹೆಚ್ಚಿನ ಓದು

ಕೃಷ್ಣಕುಮಾರ ಕಲ್ಲೂರ: ಗುಬ್ಬಿಗಳ ಸಂಸಾರ – ಕಥೆ

ಕರೀಗೌಡ ಬೀಚನಹಳ್ಳಿ: ಹಕ್ಕಿ ಬೆಂದೊ ಹಕ್ಕಿ ಮರಿ ಬೆಂದೊ -ಕಥೆ

ಪೂರ್ಣಚಂದ್ರ ತೇಜಸ್ವಿ: ಕನ್ನಡ ನಾಡಿನ ಹಕ್ಕಿಗಳು – ಪರಿಸರ

ಪರಿಸರದ ಕತೆ – ಪರಿಸರ

ವಿಸ್ಮಯ ೧ ಹಾಗೂ ವಿಸ್ಮಯ ೨ – ಪರಿಸರ