ಬೆಳಗ್ಗೆ ಸ್ವಲ್ಪ ನಿಧಾನವಾಗಿ ಎದ್ದಿದ್ದೆವು. ’ಎಂಟು ಗಂಟೆಗೆ ಟೂರಿಸ್ಟ್ ಕಛೇರಿ ತೆರೆಯುವುದು’ ಎಂದಿದ್ದರು. ನಮಗೀಗ ಅಮೆಜಾನಿನ ಕಾಡುಗಳಲ್ಲಿ ಅಲೆಯಬೇಕಿತ್ತು, ಸಾಧ್ಯವಾದರೆ ಅಮೆಜಾನ್ ನೇಟಿವ್ಸ್ ನೋಡುವ ಆಸೆ. ಮಾಲತಿಗೆ ನಿಜವಾದ ಅನಕೊಂಡ ತೋರಿಸಬೇಕು, “ಮೀಟರಗಲ ಎಲೆಯ ವಾಟರ್ ಲಿಲಿ ನೋಡಬೇಕು; ಎಂದಿದ್ದರು. ಇಲ್ಲಿ ಟೂರಿಸ್ಟ್ ಕಛೇರಿಯಾಕೆಗೆ ಒಂದಿಷ್ಟು ಇಂಗ್ಲಿಷ್ ಬರುತ್ತಿತ್ತು. ಈಕೆ ನಮಗೆ ಇಕಿಟಸ್ ನ ನಕಾಶೆ ಕೊಟ್ಟು, ’ಇಲ್ಲಿ ಸರಕಾರ ಗುರುತಿಸಿರುವ ಕೆಲವು ಟೂರ್ ಆಪರೇಟರ್ಸ್ ಇದ್ದಾರೆ, ಅಲ್ಲಿಗೆ ಹೋಗಿ’ ಎಂದು ಉದ್ದನೆಯ ವಿಳಾಸದ ಪಟ್ಟಿ ಕೊಟ್ಟಳು. ಅದನ್ನು ಹಿಡಿದು ಈಗ ಹುಡುಕಿ ಹೊರಟೆವು.

ಮೊದಲು ’ಎಕ್ಸಪ್ಲೊರಾಮಾ’ ಎಂಬ ತಾಣಕ್ಕೆ ಬಂದೆವು. ’ನಾವು ಅಮೆಜಾನ್ ಕಾಡುಗಳಲ್ಲಿ ಅಲೆಯಬೇಕು, ಕಾಡಿನಲ್ಲಿ ಒಂದು ರಾತ್ರಿ ಕಳೆಯಬೇಕು’ ಎಂದಾಗ ಆತ ಒಬ್ಬೊಬ್ಬರಿಗೆ ೨೦೦ ಡಾಲರ್ ಎಂದ. ’ತೀರಾ ದುಬಾರಿಯಾಯಿತು, ನಾವು ಭಾರತದಿಂದ ಬಂದವರು, ರಿಯಾಯಿತಿ ಕೊಡಿ’ ಎಂದು ” ಚೌಕಾಸಿ ಮಾಡಿದಾಗ, ೧೬೮ ಡಾಲರ್ ಎಂದ. ಅದೂ ಕೂಡಾ ನನಗೆ ಹೆಚ್ಚೆನಿಸಿತು. ಇನ್ನೊಂದು ನಾಲ್ಕು ಕಡೆ ವಿಚಾರಿಸೋಣ ಎಂದು ಹೊರಟೆ. ಮಾಲತಿಗೆ ಅಷ್ಟೆಲ್ಲ ಸಹನೆ ಇಲ್ಲ. ’ಏನ್ ಮಾಡೋಕೆ ಆಗುತ್ತೆ ಕೊಂಚ ತಡೆಯಿರಿ’ ಎಂದು ಅಲ್ಲಿಂದ ಹೊರಡಿಸಿದೆ. ’ನಮ್ಮ ಕನಸುಗಳನ್ನು ಕೊಳ್ಳಲು ಭಾರೀ ಮೊತ್ತದ ಹಣ ಬೇಕಿಲ್ಲ’ ಎಂದು ನನಗಾಗಲೆ ಅನುಭವಕ್ಕೆ ಬಂದಿತ್ತು. ’ಬನ್ನಿ ನೋಡೋಣ’ ಎಂದು ಎಬ್ಬಿಸಿ ಮತ್ತೊಬ್ಬ ಟೂರ್ ಆಪರೇಟರ್ ಅನ್ನು ಹುಡುಕಿ ಬಂದೆವು.

ಈ ಟೂರಿಸ್ಟ್ ಕೇಂದ್ರದ ಹೆಸರು ’ಪಾಸೆಯಸ್ ಅಮೆಜಾನಿಕಾ’. ಈತನಿಗೆ ಮತ್ತೆ ನಮ್ಮ ಬೇಕುಗಳನ್ನು ವಿವರಿಸಿದೆ. “ಒಂದು ರಾತ್ರಿ ಅಮೆಜಾನ್ ಕಾಡಿನಲ್ಲಿ ಕಳೆಯಬೇಕು, ಅಮೆಜಾನ್ ಕಾಡಿನಲ್ಲಿ ಅಲೆಯಬೇಕು. ನೇಟಿವ್ಸ್ ನೋಡಬೇಕು, ಅನಕೊಂಡಾ, ವಾಟರ್ ಲಿಲಿ…. ಮುಂತಾಗಿ ಪಟ್ಟಿ ಇಳಿಸಿದೆ. “ನಾವು ಭಾರತದಿಂದ ಬಂದವರು. ಅಮೆರಿಕ ಯೂರೋಪಿನವರಿಗೆ ಚಾರ್ಜ್ ಮಾಡಿದ ಹಾಗೆ ಮಾಡಬೇಡಿ” ಎಂದೆ. ನಮಗೆಲ್ಲೂ ಒಬ್ಬನೇ ಒಬ್ಬ ಭಾರತೀಯನೂ ಈ ಖಂಡದಲ್ಲಿ ಕಣ್ಣಿಗೆ ಬಿದಿರಲಿಲ್ಲ. ಆತ ಒಂದಿಷ್ಟು ಯೋಚಿಸಿ ’೮೦ ಡಾಲರ್ ’ಎಂದ. ಮತ್ತಷ್ಟು ಮಾತನಾಡಿದ ಮೇಲೆ ಇರಲಿ ೭೦ ಡಾಲರ್ ಕೊಡಿ ಎಂದ ಕ್ಷಣದಲ್ಲಿ ನಾವು ತಲಾ ನೂರು ಡಾಲರ್ ಉಳಿಸಿದ್ದೆವು. ಈ ಪ್ರವಾಸ ನಮ್ಮ ’ಬೇಕು’ ಗಳನ್ನೆಲ್ಲ ಒಳಗೊಂಡಿತ್ತು. ಆತ ಬಿಲ್  ಬರೆದು ಕೊಡಲು ಒಳಹೋಗುತ್ತಿದ್ದಂತೆ ತಟ್ಟನೆ ಏನೋ ಅನುಮಾನ ಬಂದು, “ಒಬ್ಬೊಬ್ಬರಿಗೆ ೭೦ ಡಾಲರ್ ಎಂದ. ನಾನೆಷ್ಟು ಚೌಕಾಸಿ ಮಾಡಿದ್ದೆ ಎಂದರೆ, ಆತ ನಾನು ಇಬ್ಬರಿಗೂ ಸೇರಿ ೭೦ ಡಾಲರ್ ಎಂದ ಕೊಡಲಿದ್ದೇನೆ ಎಂದು ಭಾವಿಸಿದ್ದ! ’ಆಗಲಪ್ಪ ಎಪ್ಪತ್ತು ಡಾಲರ್ ಕೊಡುತ್ತೇವೆ’ ಎಂದೆ.

ನಾವಿಬ್ಬರು, ಮತ್ತಿಬ್ಬರು, ಒಟ್ಟು ನಾಲ್ಕೇ ಜನಕ್ಕಾಗಿ ಆತ ಒಂದು ಪ್ರವಾಸ ಸಿದ್ಧಪಡಿಸಿದ. ನಾವು ಬಯಸಿದ್ದಕ್ಕಿಂತ ಹೆಚ್ಚು ತೋರಿಸುವುದು ಹೇಳಿದ. ಅದಷ್ಟು ಅರಸಿ ಹೋದವರಿಗೆ ದಕ್ಕುತ್ತದೆ. ಅಮೆಜಾನ್ ಕಾಡು ಅಲೆಸುವುದಾಗಿ, ಕಾಡಿನ ನಟ್ಟ ನಡುವಿನಲ್ಲಿ ರಾತ್ರಿ ಉಳಿಸುವುದಾಗಿ, ರಾತ್ರಿಯ ಕಾಡು ಕತ್ತಲಲ್ಲಿ ಅಮೆಜಾನ್ ನದಿಯ ಮೇಲೆ ದೋಣಿಯಲ್ಲಿ ಕರೆದೊಯ್ದು ಕಾಡಿನ ಸದ್ದುಗಳನ್ನು ಕೇಳಿಸುವುದಾಗಿ ಹೇಳಿದ. ’ಅನಕೊಂಡಾ, ವಾಟರ್ ಲಿಲಿ, ಪಿರಾನಾ ಮೀನುಗಳನ್ನು, ಅಮೆಜಾನಿನ ಪ್ರಸಿದ್ಧ ಗುಲಾಬಿ ಬಣ್ಣದ ಡಾಲ್ಫಿನ್ಗಳನ್ನು ತೋರಿಸುವುದಲ್ಲದೆ, ನೇಟಿವ್ಸ್ ಇರುವೆಡೆಗೂ ಕರೆದೊಯ್ಯುತ್ತೇವೆ’ ಎಂದ. ನನ್ನ ಖುಷಿಗೆ ಪಾರವೇ ಇರಲಿಲ್ಲ. ಆತನಿಗೆ ಹೇಳಿದೆ, “ನಾವು ಇರುವುದು ಹೋಟೆಲ್ ಹುಲ್ಲಗ ಎಂಬಲ್ಲಿ ಅವರಿಗೆ ಇಂಗ್ಲಿಷ್ ಬರುವುದಿಲ್ಲ. ’ನಾವು ಅಮೆಜಾನ್ ಕಾಡು ನೋಡಲು ಹೋಗುತಿದ್ದೇವೆ, ರಾತ್ರಿ ಬರುವುದಿಲ್ಲ, ನಾಳೆ ಬರುತ್ತೇವೆ’ ಎಂದು ಸ್ಪಾನಿಷ್ ಭಾಷೆಯಲ್ಲಿ ಬರೆದುಕೊಡಿ’ ಎಂದೆ. ಆತ ’ಇಲ್ಲೇ ಹೋಟೆಲ್ ಇದೆ, ಬಂದಾಗ ನೀವು ನಮ್ಮಲ್ಲೇ ಇರಬಹುದು’ ಎಂದ. ’ಅಲ್ಲಿ ನಮ್ಮಿಬ್ಬರಿಗೂ ಸೇರಿಸಿ ಕೊಡುತ್ತಿರುವುದು ೧೫ ಡಾಲರ್ ಮಾತ್ರ’ ಎಂದಾಗ, ಆತ ಹದಿನೈದು ಡಾಲರಿಗೆ ನಮಗೆ ಎಲ್ಲ ಅನುಕೂಲಗಳಿರುವ ಕೋಣೆಯನ್ನು ಕೊಡುವುದಾಗಿ ಹೇಳಿದ. ’ಸರಿ ಹಾಗಾದರೆ ಅಲ್ಲಿಯ ರೂಮು ಖಾಲಿ ಮಾಡಿಕೊಂಡು ಬಂದುಬಿಡೋಣ’ ಎಂದು ಓಡಿದೆವು.

ಇದೀಗ ಬೆಳಗಿನ ಉಪಹಾರಕ್ಕೆ ತಡಕಾಡಿದೆವು. ಒಂದೆಡೆ ’ಪಾವ್’ ತರಹದ ಬನ್ನು ನೋಡಿ ಕೇಳಿದೆವು. ಅರ್ಧ ಸೋಲೆಗೆ ೮ ತುಂಡು ಕೊಟ್ಟರು. ಕೆಫೆ ಎಂದು ಬರೆದಿರುವ ಸಣ್ಣ ’ಡಬ್ಬ ಹೊಟೆಲಿ’ ನಲ್ಲಿ ಕುಳಿತು, ಕಾಫಿ ತೆಗೆದುಕೊಂಡು ಬನ್ನು ಅದ್ದಿ ತಿಂದೆವು. ಮತ್ತೆ ನಮ್ಮ ಹೋಟೆಲಿಗೆ ಹೋಗಿ ಆ ಹೆಂಗಸಿಗೆ ನಾವು ಹೋಗುತ್ತಿರುವುದಾಗಿ ತಿಳಿಸಿ, ಬರೆದದ್ದನ್ನು ತೋರಿಸಿದೆವು. ಆಕೆ ಅಪ್ಪಿ ಮುತ್ತಿಕ್ಕಿ, ನಮ್ಮನ್ನು ಬೀಳ್ಕೊಡುತ್ತಿರುವುದು ಆಕೆಗೆ ದುಃಖದ ವಿಷಯವಾಗಿದೆ ಎಂದು ಕಣ್ಣುಜ್ಜುವಂತೆ ಅಭಿನಯಿಸಿ ತೋರಿಸಿದಳು.

ಟೂರ್ ಆಪರೇಟರ್ ಕಛೇರಿಗೆ ಪಟಪಟಿಯಂತಹ ಟ್ಯಾಕ್ಸಿ ಹಿಡಿದು ಬಂದೆವು. ಬೇಕಿಲ್ಲದ ಸಾಮಾನೆಲ್ಲ ನನ್ನ ದೊಡ್ಡ ಪ್ಲಾಸ್ಟಿಕ್ ಚೀಲದಲ್ಲಿ ಇಬ್ಬರೂ ತುರುಕಿಟ್ಟು, ನಮಗೆ ಅಮೆಜಾನ್ ನಲ್ಲಿ ರಾತ್ರಿ ಕಳೆಯಲುಬೇಕಾದ ಕನಿಷ್ಠ ಸಾಮಗ್ರಿ ಮಾತ್ರ ಹೊತ್ತು ಸಿದ್ಧವಾದೆವು. ಕೇವಲ ನಾಲ್ಕು ಜನಕ್ಕೆ ಇಡೀ ಟೂರ್ ವ್ಯವಸ್ಥೆ ಮಾಡಿದ್ದ. ನಾನು, ಮಾಲತಿ ಮತ್ತು ಅಣ್ಣತಂಗಿಯರ ಒಂದು ಜೋಡಿ. ಪೆರುವಿನ ಮೂಲದವರಾದ ಆ ಅಣ್ಣತಂಗಿಯರು ಇಂದು ಅಮೆರಿಕದಲ್ಲಿ ನೆಲೆಸಿದ್ದಾರೆ. ಅವರ ತಾಯಿ ಪೆರುವಿನಾಕೆಯಂತೆ. ಇಬ್ಬರ ಮುಖದಲ್ಲೂ ಪೆರುವಿಗರ ರೂಪುರೇಷೆಗಳು ಪ್ರಧಾನವಾಗಿ ಕಾಣುತ್ತಿತ್ತು. ಉದ್ದಕೋಲು ಮುಖ, ಕೊಂಚ ಚಪ್ಪಟೆ ಮೂಗು. ಗೋಧಿ ಬಣ್ಣ.

ನಮ್ಮನ್ನು ಅಮೆಜಾನ್ ತೀರಕ್ಕೆ ಕರೆದೊಯ್ದರು, ಅಲ್ಲಿ ಒಂದು ಸ್ಟೀಡ್ ಬೋಟಿಗೆ ಹತ್ತಿಸಿದರು. “ಇತಾಯತ್” ನದಿಯಿಂದ ಹೊರಟ ಬೋಟು, ಕೊಂಚ ಸಮಯದಲ್ಲಿ ಅಮೆಜಾನ್ ನದಿಯನ್ನು ಕೂಡಿ ಸೇರಿತು. ಬೀಸಿದ ಗಾಳಿ ಹಿತವಿತ್ತು. ಅರ್ಧ ಗಂಟೆ ನದಿಯ ಮೇಲೆ ಸಾಗಿರಬೇಕು. ಮತ್ತೊಂದು ಉಪನದಿಯ ಕಿರುಹಾದಿಗೆ ಬೋಟು ತಿರುಗಿತು. ಇದೀಗ ಕಿರಿದು ಇಕ್ಕಟ್ಟು ಹಾದಿಯಲ್ಲಿ ದೋಣಿ ಸಾಗಿ ದಟ್ಟ ಕಾಡಿನ ನಡುವಿನ ’ಜಂಗಲ್ ಲಾಡ್ಜ್’ ತಲುಪಿತು. ಇಲ್ಲಿ ನಾವು ದಡಕ್ಕೆ ಕಾಲಿಡುತ್ತಿದ್ದಂತೆ ನಮ್ಮನ್ನು ಸ್ವಾಗತಿಸಿದ್ದು ಅಮೆಜಾನ್ ಕಾಡಿನ ವಿಶೇಷವಾದ ’ವೂಲಿ ಮಂಕಿ’. ಈ ಕೋತಿಗಳಿಗೆ ಮೈಯೆಲ್ಲ ಕುರಿಯ ತುಪ್ಪಟದಂತೆ ನುಣುಪು. ಈ ಲಾಡ್ಜ್ ಇರುವ ತಾಣದಲ್ಲಿ ಎರಡು ಕೋತಿಗಳು ಬಲು ಹೊಂದಿಕೊಂಡಿದ್ದವು. ಒಂದು ಗಂಡು ದೊಡ್ಡದು, ಇನ್ನೊಂದು ಹೆಣ್ಣು ಪುಟ್ಟದು. ಅವುಗಳಿಗೆ ಹೆಸರಿಟ್ಟು ಮುದ್ದಿಸಿದ್ದರು.  ’ಮರೂಹ’ ’ಮರುಕೀಟ’ ಅವುಗಳ ಹೆಸರು. ಈ ಹೆಸರು ನಮ್ಮ ’ಮಾರುತಿ’ ಹೆಸರಿಗೆ ಎಷ್ಟು ಹತ್ತಿರ ಇದೆಯಲ್ಲ ಎಂದು ಅಚ್ಚರಿಪಡುತ್ತಾ ಲಾಡ್ಜ್ ನೆಡೆಗೆ ಹೊರಟೆವು.

ಲಾಡ್ಜ್ ಎಂದರೇನು, ಮಳೆ ಬಂದರೆ ತಡೆಯುವಂತಹ ಮರದ ತಾರಸಿಯ ಒಂದು ಕೋಣೆ. ಉಳಿದಂತೆ, ಮೂರು ಕಡೆಗೂ ಸೊಳ್ಳೆಯ ಪರದೆಯ ಪಾರದರ್ಶಕ ಗೋಡೆಗಳು. ನಮ್ಮನ್ನು ಕಾಡಿನಿಂದ ಬೇರ್ಪಡಿಸಿದ್ದು ಈ ಸೊಳ್ಳೆ ಪರದೆ ಮಾತ್ರ. ಕಾಡಿನ ನಡುವಿನ ದಟ್ಟ ಅನುಭವ, ಆದರೆ ರಕ್ಷಣೆಗೆ ಪರದೆ. ಇಲ್ಲಿ ವಿದ್ಯುತ್ ದೀಪ, ಆಧುನಿಕ ಸವಲತ್ತು ಯಾವುದೂ ಇರಲಿಲ್ಲ. ಕಾಡಿನ ಪರಿಸರವನ್ನು, ಕಾನನ ಮೌನವನ್ನು ಕಲಕದಂತೆ ಕಟ್ಟಿದ ಅತ್ಯಂತ ಸರಳ ಲಾಡ್ಜ್.

ನಾವಿಲ್ಲಿಗೆ ಬರುತ್ತಿದ್ದಂತೆ ಬರುತ್ತಿದ್ದಂತೆ ವಿಶಾಲವಾದ ಹಜಾರದಲ್ಲಿ ನಮ್ಮನ್ನು ಕುಳ್ಳಿರಿಸಿ ಕೊಕೊಮಾ ಹಣ್ಣಿನ ರಸ ತಂದಿಟ್ಟರು. ಇಲ್ಲಿಯ ಕುರ್ಚಿ, ಮೇಜು ಎಲ್ಲವೂ ಮರದ ಅತಿ ಸರಳ ಉಪಕರಣಗಳು. ಆಗಷ್ಟೆ ತಯಾರಿಸಿದ ರುಚಿಕರ ಹಣ್ಣಿನ ರಸವನ್ನು ಸವಿಯುತ್ತಿದ್ದಂತೆ, ಹೆಣ್ಣು ಕೋತಿ ಮರೂಹ, ಮಾಲತಿಯ ತೊಡೆಯೇರಿ ಆಕೆಯ ಕೈಯಿಂದ ಆರಾಮಾಗಿ ರಸ ಹೀರ ತೊಡಗಿತು. ಉತ್ಸಾಹದಿಂದ ನಾನು ಪೋಟೋ ತೆಗೆದುಕೊಂಡೆ. ಹಣ್ಣಿನ ರಸ ಹೀರಿ, ನಮಗೆ ತೋರಿಸಿದ ಸೊಳ್ಳೆಯ ಪರದೆಯ ಕೋಣೆಗೆ ಬಂದೆವು. ಪ್ರಕೃತಿಯ ನಡುವೆ ರಾತ್ರಿ ಕಳೆಯಲಿದ್ದೆವು.

ನದಿಯ ದಂಡೆಯಲ್ಲಿ ಎರಡು ಹ್ಯಾಮಕ್ ತೂಗು ಬಿಟ್ಟಿರುವುದು ಕಂಡಿತು. ಖುಷಿಯಿಂದ ಹ್ಯಾಮಕ್ ನಲ್ಲಿ ಮಲಗಿ ಜೊತೆಗೆ ತಂದ ’ರೀಡರ್ಸ್ ಡೈಜೆಸ್ಟ್’ ಬಿಡಿಸಿ ಓದ ತೊಡಗಿದೆ. ಓದ ಹೊರಟ ಕತೆಯಾದರೂ ಯಾವುದು, ಅಮೆರಿಕದ ಕಪ್ಪು ಹುಡುಗನೊಬ್ಬನ ಕತೆ. ನಾವು ಕಂಡ ಅಮೆರಿಕ ಕೇವಲ ಶ್ರೀಮಂತರ ಅಮೆರಿಕವಾಗಿತ್ತು. ಈ ಶ್ರೀಮಂತಿಕೆಯ ಹಿಂದುಗಡೆಗಿದ್ದ ಮತ್ತೊಂದು ಅಮೆರಿಕಾ ಕಂಡೇ ಇರಲಿಲ್ಲ. ಬಡವರ, ಕರಿಯರ ದಿನದಿನದ ಬದುಕು ದುರ್ಭರವಾದ ಜನರ ದ್ವೀಪಗಳಿವೆ. ಈ ಶ್ರೀಮಂತ ದೇಶದಲ್ಲಿ. ಲೆಸ್ಟ್ ಮಾರ್ಟಿನ್ ಕತೆ ಓದುತ್ತಿದ್ದೆ. ನ್ಯೂಯಾರ್ಕಿನ ಬುಷ್ಟಿಕ್ ಸಬರ್ಬಿನ ಈ ಹುಡುಗನಿಗೆ ಅಮೆರಿಕದಲ್ಲಿ ಯಾವ ಅವಕಾಶವೂ ಇರಲಿಲ್ಲ. ದಿನಬೆಳಗಾದರೆ ಗುಂಡು ಹಾರುವ, ಯುದ್ಧಭೂಮಿಯಂತಹ ಬುಷಿಕ್ನಲ್ಲಿ ಆತನ ಬದುಕು. ಒಂದು ಕಾಲದಲ್ಲಿ ಉತ್ತಮ ಸಬರ್ಬಿನಲ್ಲಿದ್ದ ಸ್ಥಿತಿವಂತ ಕುಟುಂಬ ತಟ್ಟನೆ ಬಡತನಕ್ಕಿಳಿದು ಇಲ್ಲಿಗೆ ಬಂದು ಬಿದ್ದಿತು. ಅಮೆರಿಕದಲ್ಲಿ ಶ್ರೀಮಂತಿಕೆಯ ತುತ್ತತುದಿಯಿಂದ ದಾರಿದ್ರಕ್ಕೆ ಉರುಳಲು ಒಂದೇ ಮಜಲು. ಬದುಕೆಲ್ಲ ಸಾಲದ ಮೇಲೆ, ಕ್ರೆಡಿಟ್ ಬಲದ ಮೇಲೆ ನಿಂತಿರುತ್ತದೆ. ಹನ್ನೊಂದನೇ ತರಗತಿ ಪಾಸಾದ ಲೆಸ್ಸಿಗೆ ಓದಲು ಬರೆಯಲೂ ಬಾರದು! ಕರಿಯ ಎಂಬ ಕಾರಣಕ್ಕೆ ದಿನಸಿ ಅಂಗಡಿಯಲ್ಲಿ, ಮಾಲ್ ಗಳಲ್ಲಿ ಕೆಲಸ ಸಿಗದು. ’ನ್ಯೂಯಾರ್ಕ್ ಒಂದು ದೇಶ’ ಎಂದು ಭಾವಿಸಿದ್ದ ಹುಡುಗ, ಎಂದೂ ಮೆಟ್ರೋ ಹಿಡಿದು ಒಳ ಬಂದವನಲ್ಲ. ನಂಬಲು ಸಾಧ್ಯವೆ, ಮ್ಯಾನ್ ಹಾಟನ್ ವೈಭವ ನೋಡಿ ಬರುವ ನಮ್ಮಂತಹ ಜನಕ್ಕೆ ಒಂದು ಮೆಟ್ರೋ ಹಿಡಿದು ಯಾವ ನರಕ ಮುಟ್ಟಬಹುದೆಂದು ಗೊತ್ತೆ? ನ್ಯೂಯಾರ್ಕ್ ಗ್ರಂಥಾಲಯದ ಹಿಂಬದಿಯ ಪಾರ್ಕಿನಲ್ಲಿ ಕಸದ ತೊಟ್ಟಿಯಲ್ಲಿ ತಡಕಾಡುವ ಬಡವರನ್ನು ಕಂಡಿದ್ದೆ. ’ಅವರ ಬಡತನಕ್ಕೆ ಕಾರಣ ಅವರು ಸೋಮಾರಿಗಳಾಗಿರೋದೆ. ಇದು ಅವಕಾಶಗಳ ದೇಶ, ಬೇಕಷ್ಟು ಕೆಲಸ ಇದೆ’ಎನ್ನುವ ಸಂತೃಪ್ತ ಭಾರತೀಯರಿಗೆ ಈ ಮುಖದ ಪರಿಚಯವೇ ಇರಲಿಲ್ಲ. ಸುರಕ್ಷಿತ ಸಬರ್ಬ್ ಗಳಲ್ಲಿ, ಓದು ವಿದ್ಯಾಭ್ಯಾಸದ ಸವಲತ್ತಿನಲ್ಲಿ ಬೆಳೆಯುವ ಭಾರತೀಯರಿಗೆ, ಕರಿಯರಿಗಿಂತ ಮೇಲಿನ ಸಾಮಾಜಿಕ ಸ್ಥಾನಮಾನವಿದ್ದು, ಸುಲಭವಾಗಿ ಮಾಲ್‌ಗಳಲ್ಲಿ, ಮ್ಯಾಗ್ ಡೊನಾಲ್ಡ್ ಗಳಲ್ಲಿ ಕೆಲಸ ಸಿಗುತ್ತದೆ. ತಮ್ಮ ಮನೆ, ಕಛೇರಿ, ವಾರಾಂತ್ಯಗಳ ರಜೆಯ ತಾಣ ಇಷ್ಟೆ ಕಂಡ, ಮತ್ತೇನೂ ಕಾಣದ, ’ರೈಲು ನಿಲ್ದಾಣ ಡೌನ್ ಟೌನ್ ನಲ್ಲಿದೆ. ಕರಿಯರ ಜಾಗ ಅದು’ ಎಂದು ಇಪ್ಪತ್ತು ವರ್ಷ ಇದ್ದರೂ ನೋಡದ ಇವರ ಪಾಲಿಗೆ, ಅಮೆರಿಕ ಶ್ರೀಮಂತರ ಸ್ವರ್ಗ. ಇಲ್ಲಿ ಬಡವರಿಲ್ಲ, ಇರುವವರು ಸೋಮಾರಿಗಳು ಮಾತ್ರ. ಈ ಅಮೆರಿಕದಲ್ಲಿ ನಿಜಕ್ಕೂ ಎಲ್ಲರಿಗೂ ಅವಕಾಶವಿದೆಯೇ? ಲೆಸ್ಸಿಗೆ ಬದುಕುವ ಅವಕಾಶ ಮಾಡಿಕೊಟ್ಟದ್ದು ಕೆನಡಾದವರು.

ಓದುತ್ತಾ ಮಲಗಿದಂತೆ, ಕೊಂಚವೇ ಸಮಯ ಗಡವಾ ಗಂಡು ಕೋತಿ ಬಂದು ನನ್ನ ತಲೆ ಕೂದಲನ್ನು ಭದ್ರ ಹಿಡಿಯಿತು. ನಾನು ’ಬಿಡು ಬಿಡು’ ಎಂದು ಬಡಕೊಂಡರೂ ಬಿಡವೊಲ್ಲದು. ಅಷ್ಟರಲ್ಲಿ ನಮ್ಮೊಡನೆ ಬಂದಿದ್ದ ಆ ಅಣ್ಣ ಬಂದು ’ಬಾ ಬಾ’ ಎಂದು ಕರೆದರೂ ಅಲುಗಾಡಲಿಲ್ಲ. ನಾನು ಹೇಗೋ ಬಿಡಿಸಿಕೊಂಡು, ಕೋತಿಯನ್ನು ಕೊಡವಿ ಹ್ಯಾಮಕ್ ನಿಂದ ಎದ್ದು ನಿಂತೆ. ಕೋತಿ ಉದ್ದಕ್ಕೆ ಜೋತುಬಿದ್ದ ನನ್ನ ಕಮೀಸಿನ ತುದಿಯನ್ನು ಹಿಡಿದು ಜೋತಾಡತೊಡಗಿತು. ಜೋಲಿ ತೂಗತೊಡಗಿದ ಈ ಉಣ್ಣೆ ಕೋತಿಯಿಂದ ಬಿಡಿಸಿಕೊಳ್ಳಲು ಹೋದರೆ, ಅದಕ್ಕೆ ಎಲ್ಲಿಲ್ಲದ ಸಿಟ್ಟು. ಇಷ್ಟಗಲ ಹಲ್ಲು ಕಿಸಿದು ಹೆದರಿಸಿತು. ಅದನ್ನು ಅಂತೂ ನೂಕಿದಾಗ, ಅದು ಹಾರಿ ಹ್ಯಾಮಕ್ ಮೇಲೆ ಅರಾಮ ಕುಳಿತು ಹಲ್ಲು ಕಿರಿಯಿತು. ಅದರ  ಒಂದು ಫೋಟೋ ತೆಗೆದುಕೊಂಡು, ಪುಸ್ತಕ ಓದಲು ಕೋಣೆಯೇ ಸುರಕ್ಷಿತ ತಾಣ ಎಂದು ಓಡಿ ಬಂದೆ.

ಊಟಕ್ಕೆ ಕರೆ ಬಂತು. ನಾವು ಸಸ್ಯಹಾರಿಗಳು ಎಂದು ನಮಗೆ ಬಿಳಿ ಅನ್ನ ರಾಜಮಾ ಹುರುಳಿ, ಸಲಾಡ್ ತಯಾರಿಸಿದ್ದು. ಸಲಾಡ್ ನಲ್ಲಿ ಹಾಕಿದ್ದು ಉದ್ದುದ್ದನೆ ಎಲೆಕೋಸಿನಂತಹ ರುಚಿಯ ಚಪ್ಪಟೆ ನಾರು. ಇದು ಪಾಮ್ ವೃಕ್ಷಗಳ ಕಾಂಡದಿಂದ ತೆಗೆದದ್ದು. ಹೊಟ್ಟೆಯ ತುಂಬಾ ಉಂಡೆವು. ಮೂರು ಗಂಟೆಯವರೆಗೂ ವಿಶ್ರಾಂತಿ, ನಂತರ ಅಮೆಜಾನ್ ಕಾಡುಗಳ ಟ್ರೆಕಿಂಗ್.

ಅಮೆಜಾನ್ ಮಳೆಕಾಡುಗಳಲ್ಲಿ ೩೦೦ ಬಗೆಯ ಸಸ್ತನಿಗಳಿಗೆ, ಸಾವಿರಾರು ಬಗೆಯ ಮೀನುಗಳಿಗೆ, ಲಕ್ಷಾಂತರ ಬಗೆಯ ಗಿಡಮರಗಳಿಗೆ ಅಮೆಜಾನ್ ನೆಲೆಯಾಗಿದೆ. ಇಲ್ಲಿ ಅದೆಷ್ಟು ಬಗೆಯ ಕ್ರಿಮಿಕೀಟಗಳಿವೆ ಎಂದರೆ ಅವನ್ನೆಲ್ಲವನ್ನೂ ಯಾವ ಕಾಲಕ್ಕೂ ಸಂಪೂರ್ಣವಾಗಿ ದಾಖಲು ಮಾಡಲು ಸಾಧ್ಯವಾಗದೆ ಹೋಗಬಹುದು. ಈ ಕಾಡಿನಲ್ಲಿ ’ಮಕವಾಸ್’ ಎಂದ ವರ್ಣರಂಜಿತ ಬೃಹತ್ ಗಾತ್ರದ ಗಿಳಿಗಳಿವೆ. ಪ್ರತಿದಿನ ಬೆಳಗ್ಗೆ ಬೆಂಗಳೂರಿನ ಮನೆಯ ಬಾಲ್ಕನಿಯಲ್ಲಿ ನಿಂತಂತೆ ಪುಟ್ಟ ಹಸಿರು ಗಿಳಿಗಳ ತಂಡ ಹಾರಿಬಂದು, ಎದುರಿನ ಆಲದ ಮರದಲ್ಲಿ ಕೂರುವುದನ್ನು ನೋಡುತ್ತೇನೆ. ಗಿಳಿಗಳು ಎಂದರೆ ನನ್ನ ಕಲ್ಪನೆ ಅಷ್ಟೇ ಇದ್ದದ್ದು. ಅಮೆಜಾನ್ ಕಾಡುಗಳ ಗಿಣಿಗಳದ್ದು ಅದ್ಭುತ ಗಾತ್ರ. ಪ್ರಖರ ಬಣ್ಣ. ಈ ಎರಡು ದಿನಗಳ ಅಮೆಜಾನ್ ಕಾಡಿನ ಅನುಭವದಲ್ಲಿ ನಾವು ಕಾಣಲಿದ್ದದ್ದು ಅಂತಹ ಎರಡೇ ಎರಡು ಗಿಣಿಗಳನ್ನು, ಗಾಢ ಕೆಂಪು, ನೀಲಿ, ಹಸಿರು, ಹಳದಿ ಬಣ್ಣಗಳಿದ್ದ ಸೊಗಸಿನ ಎರಡು ಗಿಣಿಗಳವು.

ಮೂರು ಗಂಟೆಗೆ ಕಾಡಿನ ’ಟ್ರೆಕಿಂಗ್’ ಗೆ ಹೊರಟೆವು. ಉದ್ದನೆಯ ಮೊಣಕಾಲವರೆಗೆ ಬರುವ ಬೂಟ್ಸ್ ಧರಿಸಲು ಹೇಳಿದರು. ಶುರುವಾಯಿತು ಮಾಲತಿಯವರ ರಾಗ, ’ಗಮ್ ಬೂಟ್ಸ್’ ಹಾಕಿದರೆ ನಡೆಯೋಕೆ ಆಗೋಲ್ಲ, ಎಷ್ಟು ಹೊತ್ತು ನಡೆಯಬೇಕು, ಎಷ್ಟು ದೂರ ನಡೆಯಬೇಕು?’ ನಾನೋ ಮಾಲತಿಯವರನ್ನು ಕಿಚಾಯಿಸಲು, “ಮಾಲತಿ ಅಮೆಜಾನ್ ನಿಮ್ಮ ಕನಸು. ಅಮೆಜಾನ್ ನೋಡಬೇಕು ಅಂತ ಬಂದು ಇನ್ನೂ ಹೊರಡೋಕಿಲ್ಲ ಎಷ್ಟು ನಡೆಯಬೇಕು ಅಂತೀರಾ, ಆದಷ್ಟು ದೂರಕ್ಕೆ ನಡೆಸಿ” ಎಂದು ಟೂರ್ ಆಪರೇಟರ್ ಗೆ ಹೇಳಿದೆ. ಮಾಲತಿಯವರದು ’ಸ್ಟಾರ್ಟಿಂಗ್ ಟ್ರಬಲ್’ ಅಷ್ಟೆ. ಒಮ್ಮೆ ಸ್ಟಾರ್ಟ್ ಆಯಿತು ಎಂದರೆ ಗಾಡಿ ಅರಾಮ ಓಡುತ್ತೆ. ’ಆಗೋಲ್ಲ, ಸಾಧ್ಯವಿಲ್ಲ’ ಎಂಬ ಅನುಮಾನ ಅವರದು, ’ಆಗುತ್ತೆ, ನೀವು ಪ್ರಯತ್ನಿಸೋಲ್ಲ’ ಎಂಬ ವಾದ ನನ್ನದು ಸದಾ ನನ್ನ ವಾದವೇ ಗೆಲ್ಲುತ್ತಿತ್ತು.

ಕೊನೆಗೂ ಮಾಲತಿ ಗಮ್ ಬೂಟ್ ಹಾಕಲಿಲ್ಲ. ಸೀರೆ ಉಟ್ಟು ಹರಕಲು ಶೂನಲ್ಲೇ ಬಂದರು. ದಟ್ಟ ಕಾಡು, ಸೂರ್ಯನ ಕಿರಣಗಳನ್ನೂ ತಡೆದ ಕತ್ತಲು ಕತ್ತಲು ಕಾಡು. ಕೆಳಗೆ ಬಿದ್ದ ಎಲೆಗಳು ಕೆಸರಲ್ಲಿ ಕೊಳೆತು ಕಚಕಚ ಕೊಚ್ಚೆ, ಅದೆಂತಹ ಮರಗಳು, ಏರಿ ಏರಿ ಮುಗಿಲಿಗೆ ಮುತ್ತಿಟ್ಟು ತಲೆ ಕೆದರಿ ಬೆಳಕನ್ನೂ ತಡೆ ಹಿಡಿದು ನಿಂತ ವೃಕ್ಷಗಳು. ಮರದಲ್ಲಿ ಅತಿ ಎತ್ತರದಲ್ಲಿ ಅರಳಿ ನಿಂತ ಹೊಳೆವ ಕೆಂಪು ಬಣ್ಣದ, ಅರ್ಕಿಡ್ ಗಳು. ಇಲ್ಲಿ ನದಿಯ ಜನರ ಗುಡಿಸಲು ಮನೆಗಳ ಛಾವಣಿಗಳೆಲ್ಲ ಪಾಮ್ ವೃಕ್ಷದ್ದು. ಒಂದು ಜಾತಿಯ ಪಾಮ್ ಗಿಡವನ್ನು ತೋರಿಸಿ ಅದಕ್ಕೆ ’ಮೂವಿಂಗ್ ಪಾಮ್’ ಎನ್ನುತ್ತಾರೆ ಎಂದ. ಇದರ ಕಾಂಡದಿಂದ ಹೊರಬಿದ್ದ ಭಾರೀ ಬಿಳಲುಗಳು ಭೂಮಿಗಿಳಿದಿದ್ದವು. ಹೊಸ ಹೊಸ ಬಿಳಲುಗಳು ವರ್ಷ ವರ್ಷ ನೆಲಕ್ಕಿಳಿದು ಹಳೆಯವು ಕೊಳೆತು, ಈ ಬಿಳಲುಗಳು ಮರಗಳನ್ನು ನೆಲದಲ್ಲಿ ಒಂದಿಷ್ಟು ಅಂಗುಲ ಆಚೆ ಈಚೆಗೆ ಚಲಿಸುತ್ತವೆ. ಕಾಡಿನ ಒಳಗೆಲ್ಲ ಸುತ್ತಿ ಸುತ್ತಿ ಹೊರಟೆವು. ಅಮೆಜಾನಿನ ಸಣ್ಣ ಸಣ್ಣ ಕೀಟಗಳೂ, ನಮಗೆ ದೊಡ್ಡ ದೊಡ್ಡವಾಗಿ ಕಂಡು ’ಹಾ ಹೋ’ ಎಂದು ಅರಚಿಕೊಂಡು ಕಾಡಿನಲ್ಲಿ ಅಲೆದೆವು. ಗೈಡ್ ಮುರಿದು ಬಿದ್ದ  ಟೊಂಗೆಯೊಂದಕ್ಕೆ ಕಿವಿ ಇಡಲು ಹೇಳಿದ. ಒಳಗೆ ಕಚ ಕಚ ಕೊರೆದು ತಿನ್ನುತ್ತಿದ್ದ ಕೀಟದ ಸದ್ದು! ಅಮೆಜಾನ್ ಕಾಡಿನ ಯಾವುದೋ ಕೀಟ ಮಾಲತಿಯವರನ್ನು ಕಚ್ಚಿತ್ತು. ಎರಡೂ ಕೈಗಳ ಮೇಲೆ ಎದ್ದದದ್ದುಗಳು ಎರಡು ತಿಂಗಳ ಕಾಲ ಕಾಡಲಿದ್ದವು!

ಗೈಡ್ ನಮ್ಮನ್ನು ಒಬ್ಬ ’ಶಾಮಾ’ ಹತ್ತಿರ ಕರೆದೊಯ್ದ. ಸಣ್ಣ ಈಚಲು ಎಲೆಯ ಹೊದಿಕೆಯ ಕೆಳಗೆ ಮರದ ಹಲಗೆಯ ಎರಡು ಬೆಂಚುಗಳಿದ್ದವು. ನಾವು ಹೋಗಿ ಕುಳಿತೆವು. ’ಶಾಮಾ’ ನದಿ ಜನರ ವೈದ್ಯ. ಈತ ಚಿಕ್ಕವನಿದ್ದ. ’ನೂರಾ ಇಪ್ಪತ್ತು ವರ್ಷ ಬದುಕಿದ ತನ್ನ ತಾತನಿಂದ ವೈದ್ಯ ಕಲೆತೆನೆಂದು’ ಶಾಮಾ ತನ್ನ ಭಾಷೆಯಲ್ಲಿ ಹೇಳಿದ್ದನ್ನು ಗೈಡ್ ನಮಗೆ ಅನುವಾದಿಸಿ ತಿಳಿಸಿದ. ಇಂತಹ ಒಳ ಕಾಡುಗಳಲ್ಲಿ ಜನರಿನ್ನೂ ಕೆಚುವಾ ಭಾಷೆ ಮಾತನಾಡುವುಂಟು. ’ಶಾಮಾ ಆಗುವುದು ಸುಲಭವಲ್ಲ. ಕಾಡಿನಲ್ಲಿ ಆರು ತಿಂಗಳು ಮೌನದಲ್ಲಿ ಬ್ರಹ್ಮಚರ್ಯದಲ್ಲಿರಬೇಕು. ನಂತರ ಪುರಾತನ ಆತ್ಮಗಳನ್ನು ಆಹ್ವಾನಿಸಬೇಕು. ಎಲ್ಲಕ್ಕೂ ವಿಧಿವಿಧಾನಗಳುಂಟು’ ನಮಗೆ ವಿವರಿಸಿ ಹೇಳಿದರು. ಶಾಮಾ ಬಹಳಷ್ಟು ಔಷಧೀಯ ಸಸ್ಯಗಳನ್ನು ತೋರಿಸಿದ. ಅದರಲ್ಲಿ ದಾಲ್ಚಿನಿ ಗಿಡವಿತ್ತು. ನಮ್ಮ ’ನೆಲನಲ್ಲಿ’ ಗಿಡವನ್ನು ಇಲ್ಲಿ ನೋಡಿ ಅಚ್ಚರಿಯಾಯಿತು. ಈ ಗಿಡದ ಔಷಧೀಯ ಗುಣದ ಬಗ್ಗೆ ಬಹಳಷ್ಟು ಓದಿದ್ದೆ, ಇದನ್ನು ನಮ್ಮ ಆಯುರ್ವೇದದಲ್ಲಿ ಬಹಳಷ್ಟು ಬಳಸುತ್ತಾರೆ. ಎಲ್ಲಿಯ ಭಾರತ, ಎಲ್ಲಿಯ ಅಮೆಜಾನ್, ಅದೇ ಗಿಡದ ಔಷಧೀಯ ಗುಣಗಳ ಬಗ್ಗೆ ಈ ಶಾಮಾ ವಿವರಿಸುತ್ತಿದ್ದ. ಈ ಸಸ್ಯದಿಂದ ತಯಾರಿಸಿದ ಒಂದೆರಡು ಕಷಾಯಗಳನ್ನು ನಮಗೆ ನೀಡಿದ. ಕುಡಿದರೆ ಕಫಕ್ಕೆ ನೀಡುವ ’ವಾಟರ್ ಬರೀಸ್ ಕಾಂಪೌಂಡ್’ ನಂತಹ ಸಾಕಷ್ಟು ಘಾಟಿನ ರುಚಿ. ಕುಡಿದೊಡನೆ ಗಂಟಲು ಎದೆಯಲ್ಲೆಲ್ಲಾ ಬಿಸಿಯಾದ ಅನುಭವ.

ಶತಮಾನಗಳ ಹಿಂದೆ ಈ ನೆಲಕ್ಕೆ ಸ್ಪೇನಿನ ಜನ ಸಾಂಬಾರು ಪದಾರ್ಥಗಳಲ್ಲ, ಅವುಗಳ ಔಷಧೀಯ ಗುಣಗಳನ್ನು ಅರಸಿ ಬಂದಿದ್ದರು. ದಾಲ್ಚಿನಿಯಲ್ಲಿ “ಅಂಟಿಸೆಫ್ಟಿಕ್” ಗುಣ, ಜೀರ್ಣಕಾರಿ ಶಕ್ತಿ ಇರುವುದು ತಿಳಿದಿತ್ತು. ಬಂದವರು ಸುಮ್ಮನೆ ಬರಲಿಲ್ಲ, ಈ ನೆಲದ ಬೆಲೆಯನ್ನು ಅರಿಯಲಿಲ್ಲ. ಈ ನೆಲದ ನಾಗರಿಕತೆ, ಸಂಸ್ಕೃತಿ, ಸಂಪನ್ಮೊಲಗಳನ್ನೆಲ್ಲ ನಾಶ ಮಾಡಿದರು.

ಇಂದು ಅಮೆಜಾನ್ ಕಾಡುಗಳ ಸಂಪನ್ಮೊಲಗಳ ಲೂಟಿಯಷ್ಟೇ ಅಲ್ಲ, ಈ ಜನರ ಸಾವಿರ ಸಾವಿರ ವರ್ಷಗಳ ಜ್ಞಾನವನ್ನೂ ತಮ್ಮದೆಂದು ಪೇಟೆಂಟ್ ಮಾಡಿ ಕುಳಿತ ಶ್ರೀಮಂತ ದೇಶಗಳಿವೆ. ಸ್ಪಾನಿಷರು ಈ ನೆಲದ ಚಿನ್ನವನ್ನು ಕೊಳ್ಳೆ ಹೊಡೆದರೆ, ಅಮೆರಿಕ ಈ ನೆಲದ ಚಿನ್ನವಷ್ಟೆ ಅಲ್ಲ. ಈ ನೆಲದ ಜನರ ಶತಶತಮಾನದ ಜ್ಞಾನವನ್ನೂ ತನ್ನ ಲಾಭಕ್ಕೆ ಕೊಳ್ಳೆ ಹೊಡೆದಿದೆ. ನಮ್ಮ ಅರಿಶಿನ, ಬೇವಿನ ಔಷಧೀಯ ಗುಣಗಳನ್ನು ಪೇಟೆಂಟ್ ಮಾಡಲು ಹೊರಟದ್ದು ನೆನಪಿರಬೇಕು. ಈ ಪುರಾತನ ಪೆರುವಿಗರ, ಅಮೆಜಾನ್ ಅರಣ್ಯಗಳ ಶಾಮಾಗಳ ನೂರಾರೂ ವರ್ಷಗಳ ಅವಲೋಕನ, ಅನುಭವದಿಂದ ಕೂಡಿಟ್ಟ ಅದ್ಭುತದ ಔಷಧೀಯ ಜ್ಞಾನವನ್ನು ಅಮೆರಿಕ ತನ್ನ ಲಾಭಕ್ಕೆ ಬಳಸಿಕೊಳ್ಳುತ್ತಿದೆ. ಈ ಕಾಡಿನಲ್ಲಿ ಒಂದು ಮರವಿದೆ. ಅದರ ತೊಗಟೆಯನ್ನು ಸೀಳಿದರೆ, ಕೆಂಪನೆಯ ರಸ ದ್ರವಿಸುತ್ತದೆ. ಇದನ್ನು “ಡ್ರಾಗನ್ ರಕ್ತ” ಎಂದು ಕರೆಯುತ್ತಾರೆ. ಇದರ ಪವಾಡದಂತಹ ಔಷಧೀಯ ಗುಣ ಮಿಸೊರಿಯ ಸೇಂಟ್ ಲೂಯಿಯ ಔಷಧ ಕಂಪನಿಯೊಂದರ ಕಣ್ಣಿಗೆ ಬಿದ್ದಿತು. ೧೯೯೫ರಲ್ಲಿ ಇಲ್ಲಿಯ ಸ್ಥಳೀಯ ಜನ ಸೇಂಟ್ ಲೂಯಿಯಿಂದ ಬಂದ ವಿಜ್ಞಾನಿ ವಾಲ್ಟರ್ ಲೆವಿಯನ್ನು ಆಚೆಗೆ ಹೊರದೂಡಿದ್ದರು. ಆತ ಗುಟ್ಟಾಗಿ ಕಂಪನಿಯೊಡನೆ ಒಡಂಬಡಿಕೆ ಮಾಡಿಕೊಂಡು, ಇಲ್ಲಿಂದ ಅಮೆರಿಕಕ್ಕೆ ಔಷಧವನ್ನು ರವಾನಿಸಲು ನೋಡುತ್ತಿದ್ದ. ಆದರೆ ೧೯೯೬ರಲ್ಲಿ ಮತ್ತೊಂದು ಕಾಂಟ್ರಾಕ್ಟ್ ಹಿಡಿದುಕೊಂಡು ಲೆವಿ ಮತ್ತೆ ಬಂದ. ಇದೀಗ ಅಮೆರಿಕದ ಔಷಧದ ಕಂಪನಿಗಳು ಅತಿ ಸುಲಭವಾಗಿ ಸಾವಿರ ಸಾವಿರ ವರ್ಷಗಳ ಈ ನೆಲದ ಜನರ ಔಷಧಿಯ ಜ್ಞಾನವನ್ನು ಲೂಟಿ ಹೊಡೆದು ಹೋಗುತ್ತಿವೆ. ಸ್ಥಳೀಯರಿಗೆ ಸರಿಯಾದ ಪರಿಹಾರವೂ ಇಲ್ಲ. ಅಮೆಜಾನ್ ಕಾಡುಗಳ ಸಂಪತ್ತು ಸೋರಿ ಹೋಗುತ್ತಿದೆ.

ಪೆರಿವಿನಲ್ಲಿ ೧೨೫ ಬಗೆಯ ಆಲೂಗಡ್ಡೆಗಳಿವೆ! ಮೆಕ್ಕೆಜೋಳಗಳ ವೈವಿಧ್ಯಕ್ಕಂತೂ ಕೊನೆಯೇ ಇರಲಿಲ್ಲ. ಅದೆಷ್ಟು ಬಣ್ಣ- ಬಿಳಿ, ಹಳದಿ, ನೇರಳೆ ಬಗೆಬಗೆಯ ಬಣ್ಣ ಮತ್ತು ಗಾತ್ರದ ಮೆಕ್ಕೆ ಜೋಳ. ಇವು ಸಾಂಪ್ರದಾಯಿಕವಾಗಿ ಬೆಳೆದ ಮೆಕ್ಕೆಜೋಳಗಳು. ಈ ನೆಲದ ಈ ಬಗೆಯ ಮೆಕ್ಕೆಜೋಳವನ್ನು ಐದು ಸಾವಿರ ವರ್ಷಗಳಿಂದ ಬೆಳೆಯುತ್ತಾ ಬಂದಿದ್ದಾರೆ. ಇದನ್ನು ಅಮೆರಿಕ ’ಸೂಪರ್ ಮೇಜ್’ ಹೆಸರಿನಲ್ಲಿ ತಾನು ಪೇಟೆಂಟ್ ಹಿಡಿದು ಕುಳಿತಿದೆ.

ಈ ನೆಲದಲ್ಲಿ ಕಂಡ ಅದೆಷ್ಟೋ ಗಿಡಮರಗಳು ನಮ್ಮ ಭಾರತದಲ್ಲಿ ಸಾಮಾನ್ಯವಾಗಿ ಕಾಣಸಿಗುವವೆ ಆಗಿದ್ದವು. ಕಾಡಿನಲ್ಲಿ ನಡೆದಂತೆ ನಮಗೆ ಚಿರಪರಿಚಿತ ಗಿಡಗಳು ಎಲ್ಲೆಲ್ಲೂ ಕಾಣುತ್ತಿದ್ದವು. ಅದರಲ್ಲಿ ಸಂಜೆಮಲ್ಲಿಗೆಯೂ ಒಂದು. ಇದನ್ನು ಪೆರುವಿಗರು ’ಪವಾಡದ ಗಿಡ’ ಎನ್ನುತ್ತಾರೆ. ನಮ್ಮಲ್ಲಿ ಖಾಲಿ ಸೈಟಿನಲ್ಲೂ ಎಲ್ಲೆಂದರಲ್ಲಿ ಬೆಳೆವ ಗಿಡ ಇದು. ಇಲ್ಲಿಯೂ ಸಾಮಾನ್ಯವಾಗಿ ಕಂಡಿತು. ಈ ಗಿಡವನ್ನು ಫಂಗಲ್ ಇನ್ಫೆಕ್ಷನ್” ಗೆ ಔಷಧವಾಗಿ ಬಳಸುತ್ತಾರೆ. ಈ ಗಿಡ ಪೆರುವಿನಲ್ಲಿ ದಿನ ಪ್ರತಿದಿನ ಔಷಧದ ರೂಪದಲ್ಲಿ ಬಳಕೆಯಲ್ಲಿದೆ. ಈ ಗಿಡದ ಔಷಧೀಯ ಗುಣಗಳನ್ನು ಪತ್ತೆ ಹಚ್ಚಿ ನೂರಾರು ವರ್ಷದಿಂದ ಬಳಸುತ್ತಾ ಬಂದ ಪೆರುವಿಗರ ಈ ಜ್ಞಾನವನ್ನು ದೇಶಗಳು ಪೇಟೆಂಟ್ ಮಾಡುತ್ತಿವೆ.

ಶಾಮಾನಿಂದ ಬೀಳ್ಕೊಟ್ಟು ಕಾಡಿನಂಚಿನಲ್ಲಿ ಒಂದಿಷ್ಟು ಕಬ್ಬು ಬೆಳೆದು ತಾಣಕ್ಕೆ ಬಂದೆವು. ಇಲ್ಲಿ ಈಚಲ ನೆರಳಲ್ಲಿ ನಮ್ಮನ್ನು ಕುಳ್ಳಿರಿಸಿ ಕಬ್ಬಿನ ರಸ ತೆಗೆವ ಬಗೆಯನ್ನು ಸ್ಥಳೀಯನೊಬ್ಬ ತೋರಿಸಿದ. ಅದೆಷ್ಟು ಸರಳವಾದ ಉಪಕರಣ. ಒಂದು ಮರದ ಗೂಟ. ಅದಕ್ಕೊಂದು ತೂತು ಕೊರೆದು ತೂರಿಸಿದ ಉದ್ದನೆಯ ಕೋಲು. ಅದರಡಿಯಲ್ಲಿ ಸಣ್ಣದೊಂದು ತಗಡಿನ ತೆರೆದ ಬಾಯಿ, ಕೆಳಗೆ ರಸ ಸೋರಿ ಹಿಡಿಯಲು ಒಂದು ಅಗಲ ಬಾಯಿಯ ಬಟ್ಟಲು. ಈ ಮನುಷ್ಯ ಕಬ್ಬಿನ ಜಲ್ಲೆಯನ್ನು ತೆಗೆದುಕೊಂಡು ಮೊದಲು ಅದನ್ನು ಕೋಲಿನಡಿಯ ರಂಧ್ರಕ್ಕೆ ತೂರಿಸಿ, ಕೋಲಿನಿಂದ ಚೆನ್ನಾಗಿ ಜಜ್ಜಿದ. ಸೋರಿದ ರಸ ಕೆಲಗೆ ಕೊಂಚ ಸಂಗ್ರಹವಾಯಿತು. ಇದೀಗ, ಜಜ್ಜಿ ಮೆದುವಾದ ಜಲ್ಲೆಯನ್ನು ಆ ಕೋಲಿಗೆ ತಿರುಚಿ ತಿರುಚಿ ಸುತ್ತಿ ಕೋಲಿನ ಮೇಲೇ ಎಗರಿ ಕುಳಿತು ಜಲ್ಲೆಯನ್ನು ಎರಡೂ ಕೈಯಲ್ಲಿ ಹಿಂದುತ್ತಿದ್ದಂತೆ, ರಸ ಧಾರಾಕಾರವಾಗಿ ಸೋರಿ ಕೆಳಗಿಳಿಯಿತು. ’ಅಲ್ಲ ಎಷ್ಟು ಒದ್ದಾಡ್ತಾರೆ, ಒಂದು ರಸ ತೆಗೆಯುವ ಯಂತ್ರ ಕೊಂಡರೆ ಸುಲಭವಲ್ಲವೇ?’ ಮಾಲತಿಯ ಬಾಯಿಂದ ಮಾತು ಜಾರಿತು. ಕ್ಷಣಕಾಲ ನಾವಿನ್ನೂ ನಮ್ಮ ’ಹೈಟ್ ಕ್ ಪ್ರಪಂಚ’ ದಿಂದ ವಾಸ್ತವಕ್ಕೆ ಬಂದಿರಲಿಲ್ಲ. ನಮ್ಮಲ್ಲಿ ಎರಡು ಕಬ್ಬಿಣದ ಚಕ್ರ ಇಟ್ಟುಕೊಂಡು ಕೈಯಲ್ಲೇ ಎಷ್ಟು ಬೇಗ ಮಾಡುತ್ತಾರಲ್ಲ ಅನಿಸಿತ್ತು. ಆಮೇಲೆ ಹೊಳೆಯಿತು ಅಂತಹುದನ್ನು ಕೊಳ್ಳಲು ತಾನೆ ಇವರಿಗೆ ಹಣ ಎಲ್ಲಿಂದ ಬರಬೇಕು. ಇದಾದರೆ ಎರಡು ತುಂಡು ಮರದಿಂದ ಕೈಯಲ್ಲೇ ತಯಾರಿಸಿದ ದೇಶೀಯ ಸಲಕರಣೆ. ಮೂರು ಜಲ್ಲೆ ಸಾಕಷ್ಟು ರಸ ಕೊಟ್ಟಿತ್ತು. ನಮ್ಮೆದುರೇ ತೆಗೆದ ಕಬ್ಬಿನ ರಸ, ಆದರೆ ನಮ್ಮಲ್ಲಿಯಂತೆ ಬಂಗಾರದ ಬಣ್ಣದ ಆಕರ್ಷಕ ದ್ರವವಾಗಿರಲಿಲ್ಲ, ಇದಕ್ಕೆ ಮಂಕು ಕಂದು ಬಣ್ಣವಿತ್ತು. ಆತ ಒಂದು ದಪ್ಪ ನಿಂಬೆಯನ್ನು ಕತ್ತರಿಸಿ ಹಿಂಡಿದಾಗ, ನನಗಂತೂ ಇಲ್ಲೇ ಬೆಂಗಳೂರಿನಲ್ಲಿ ಎಲ್ಲೋ ಕಬ್ಬಿನ ರಸ ಕುಡಿಯುತ್ತಿದ್ದೇವೆ ಎನಿಸಿಬಿಟ್ಟಿತು. ಎರಡೂವರೆ ಕಪ್ ಕುಡಿದು ಎದ್ದೆವು. ನಮ್ಮೊಡನೆ ಬಂದ ಅಣ್ಣತಂಗಿ ಪೆರುವಿನ ಮೂಲದವರಾದರೇನು, ಸದಾ ಮಿನರಲ್ ವಾಟರ್ ಕುಡಿದು ಬೆಳೆದ ಅವರು, ಪಕ್ಕಾ ಅಮೆರಿಕನ್ನರಂತೆ ’ಕುಡಿದರೆ ಹೇಗೋ ಏನೋ’ ಎಂದು ನಾಜೂಕಾಗಿ ಕಪ್ ತುಟಿಗೆ ತಗುಲಿಸಿ ಕೆಳಗಿರಿಸಿಬಿಟ್ಟರು. ಬೀದಿತುದಿಯ ಕಬ್ಬಿನ ರಸ ಹೀರಿ, ಪಾನಿಪುರಿ ತಿಂದು ಬೆಳೆದ ನನಗೂ ಮಾಲತಿಗೂ ಅಂತಹ ಭಯವಿರಲಿಲ್ಲ. ಆದರೆ ಗಮನಿಸಿದ್ದು, ಈ ಕಬ್ಬಿಗೆ ನಮ್ಮ ಮಂಡ್ಯದ ಕಬ್ಬಿನ ಆ ಅದ್ಭುತ ಸಿಹಿ ಇರಲಿಲ್ಲ. ನಮ್ಮ ಭಾರತದ ಸಸ್ಯ ಸಂಪತ್ತನ್ನು ಕ್ಷಣಕ್ಷಣಕ್ಕೆ ಅಮೆಜಾನ್ ನಲ್ಲಿ ಜ್ಞಾಪಿಸಿಕೊಂಡು ಹೆಮ್ಮೆಪಟ್ಟುಕೊಂಡೆವು.

ಕಾಡಿನಿಂದ ಹೊರಬಿದ್ದು ನದಿಯ ಬದಿಯ ’ಸಂತ ಮರಿಯ’ ಎಂಬ ಹಳ್ಳಿ ತಲುಪಿದೆವು. ಇಲ್ಲೊಂದು ಸಣ್ಣ ಶಾಲೆ ಮರದ ಹಲಗೆಗಳಿಂದ ಕಟ್ಟಿದ್ದು, ಒಳಗೆ ಒರಟು ಹಲಗೆಯ ಬೆಂಚುಗಳು. ಹೊರಗೆ ಸಂಜೆಯಾಗಿತ್ತು ಹುಡುಗ ಹುಡುಗಿಯರು ಬರಿಗಾಲಿನಲ್ಲಿ ಚೆಂಡೊಂದನ್ನು ಎಸೆದು ಆಟ ಆಡುತ್ತಿದ್ದರು. ಮನೆಯವರೆಲ್ಲ ಮಕ್ಕಳು ಮರಿಯನ್ನು ಕಟ್ಟಿಕೊಂಡು ಹೊರಗೆ ಕುಳಿತು ಈ ಆಡುವ ಮಕ್ಕಳ ಆಟಪಾಠವನ್ನು ನೋಡುತ್ತಾ ಆನಂದಿಸುತ್ತಿದ್ದರು. ಪುಟ್ಟ ಮಕ್ಕಳು ಕೆಸರಿನ ಲೆಕ್ಕವಿಲ್ಲದೆ ಓಡಿ ಕುಣಿಯುತ್ತಿದ್ದರು. ಇಂತಹ ಸುಂದರ ಸಂಜೆಯ ಪುರಸತ್ತಿನ ಕ್ಷಣ ಬಾಲ್ಯದ ಯಾವುದೋ ನೆನಪನ್ನು ಕೆದಕಿತು. ’ದಿಲ್ ಢೂಂಢತಾ ಹೈ, ಫಿರ್ ವಹೀ ಪುರಸತ್ ಕೆ ರಾತ್ ದಿನ್’ ಹಾಡು ಗುಣ ಗುಣಿಸಿದೆ. ಟಿವಿ ಕಂಪ್ಯೂಟರಗಳು ಮನುಷ್ಯನನ್ನ ಮನುಷ್ಯ ಸಂಪರ್ಕದಿಂದ ದೂರ ಕೊಂಡೊಯ್ದು ಬಿಟ್ಟಿವೆ. ಪುಣ್ಯಕ್ಕಿನ್ನೂ ಬೆಂಗಳೂರಿನ ಗಲ್ಲಿಗಳಲ್ಲಿ ಮಕ್ಕಳಾಡುತ್ತವೆ. ನಮ್ಮ ಫ್ಲಾಟ್ ತುಂಬಾ ಕುಣಿದಾಡುತ್ತವೆ. ತಾಯಿಯರು, ಅಜ್ಜ ಅಜ್ಜಿಯರು ನೋಡುತ್ತಾ ಹರಟುತ್ತಾ ಕುಳಿತುಕೊಳ್ಳುತ್ತಾರೆ. ಕೊನೆಗೆ ಬದುಕು ಹುಡುಕುವುದು ನೆಮ್ಮದಿಯ ಇಂತಹ ಸುಂದರ ಸಂಜೆಗಳನ್ನಲ್ಲವೆ. ದುಡಿದು ದಣಿದ ದಿನದಂಚಿಗೆ ಕುಟುಂಬದೊಡನೆ, ನೆರೆಹೊರೆಯವರೊಡನೆ ಕಳೆವ ಈ ಕ್ಷಣಗಳು ಅಪ್ಯಾಯಮಾನವಾಗಿ ಕಂಡವು. ನಮ್ಮ ನರಗಳ ವೇಗದ ಓಟದಲ್ಲಿ ಕಳೆದು ಹೋಗಲಿವೆ ’ಪುರಸತ್ತಿನ ಸಂಜೆಗಳು’.

ಅಮೆಜಾನ್ ನದಿ ಜನರ ಬಡತನ ಅವರು ಉಟ್ಟ ಬಟ್ಟೆಯಲ್ಲಿ ಕಾಣುತ್ತಿತ್ತು. ಹಲಗೆಯ ತುಂಡು, ಈಚಲು ಹೊದಿಕೆಯ ಮನೆಗಳಲ್ಲಿ ದಾರಿದ್ರ್ಯವಿತ್ತು. ಅದರ ನಡುವೆಯೇ ಮುಖದ ತುಂಬಾ ಹಿಗ್ಗಿದ ಮುಗುಳ್ನಗೆ, ಪ್ರಸನ್ನತೆ, ಜೀವನೋತ್ಸಾಹ. ಇಲ್ಲಿಯ ಬದುಕು ಬೆಳಗ್ಗೆ ನಾಲ್ಕು ಗಂಟೆಗೆ ಸೀಮೆಎಣ್ಣೆ ದೀಪದ ಬೆಳಕಿನಲ್ಲಿ ಆರಂಭವಾಗುತ್ತದೆ. ಹೆಂಗಸರು ಮಾಡಿಕೊಟ್ಟ ಗಂಜಿಯಂತಹ ಪೇಯ ಕುಡಿದು ಗಂಡಸರು ಮೀನು ಹಿಡಿಯಲು, ಬೇಟೆಯಾಡಲು ಹೋಗುತ್ತಾರೆ. ಬೇಟೆಗೆ ಹಲವು ದಿನ, ವಾರಹಿಡಿಯುವುದೂ ಉಂಟು. ದಟ್ಟ ಅಮೆಜಾನ್ ಕಾಡಿನೊಳಗೆ ಹೋಗುವುದುಂಟು. ಇಗ್ವಾನಾ, ಜಿಂಕೆ ಮುಂತಾದ ಪ್ರಾಣಿಗಳನ್ನು ಬೇಟೆಯಾಡಿ, ಕಾಡಿನಲ್ಲೇ ಮಾಂಸ ಕೆಡದಂತೆ, ’ಸ್ಕೋಕ್’ ಮಾಡಿ ತರುತ್ತಾರೆ. ನಮಗೆ ಅಂತಹ ಜಿಂಕೆಯ ’ಸ್ಕೋಕ್ ಮಾಂಸ’ ತೋರಿಸಿದ. ’ನೋಡಿ ಇದೆಷ್ಟೋ ದಿನದ್ದು, ಕೊಂಚವೂ ವಾಸನೆ ಇಲ್ಲ’ ಎಂದ, ನಿಜವಿತ್ತು. ನದಿಯಲ್ಲಿ ಪಿರಾನಾಗಳನ್ನು ಹಿಡಿದು ಅವನ್ನು ಉದ್ದುದ್ದ ಸೀಳಿ ಉಪ್ಪು ಹಾಕಿ ಒಣಗಿಸಿಡುತ್ತಾರೆ. ರಾಶಿ ರಾಶಿ ಮೀನುಗಳ ಅಂಗಡಿಗಳಿದ್ದವು. ಆದರೆ ಕಿಂಚಿತ್ತೂ ವಾಸನೆ ಇರಲಿಲ್ಲ. ಪೂರಾ ಸುತ್ತಿ ನದಿಯ ತೀರಕ್ಕೆ ಬಂದಾಗ ನಮಗಾಗಿ ಒಂದು ದೋಣಿ ಕಾದಿತ್ತು. ಅಲ್ಲೆಲ್ಲೋ ಅದ್ಯಾವುದೋ ಕಾಡಿನ ಮೂಲೆಯಲ್ಲಿ ಇಳಿದು, ಎಲ್ಲೆಲ್ಲೋ ಅಲೆದು ಇತ್ತ ಬಂದರೆ ನಮಗೆ ಕಾದ ದೋಣಿ!

ಹಿಂತಿರುಗಿ ಲಾಡ್ಜ್ ಗೆ ಬಂದೆವು. ಅರೂವರೆಯ ಹೊತ್ತಿಗೆ ಕತ್ತಲಾಯಿತು. ಹಜಾರಕ್ಕೂ ನಮ್ಮ ಕೋಣೆಗಳಿಗೂ ನಡುವೆ ಅಲ್ಲಲ್ಲಿ ಬುಡ್ಡಿ ದೀಪಗಳು ತೂಗುತ್ತಿದ್ದವು. ಅಮೆಜಾನಿನ ಕಾಡು ರಾತ್ರಿಯ ಕಗ್ಗತ್ತಲು.  ಹೊಳೆವ ನಕ್ಷತ್ರಗಳ ರಾತ್ರಿ. ಕಾಡಿನ ಸದ್ದುಗಳು ಮಾತ್ರ ಇಲ್ಲಿಯ ನೀರವತೆಯನ್ನು ಒಡೆಯುತ್ತಿದ್ದವು. ಈಗ ಹೊರಟೆವು ನದಿಯ ಮೇಲೆ ರಾತ್ರಿ ಪಯಣಕ್ಕೆ. ರಾತ್ರಿಯ ಕತ್ತಲಲ್ಲಿ ದೋಣಿ ಅತಿ ಕಿರಿದು ಉಪನದಿಯ ಹಾದಿಯಲ್ಲಿ ಹೊರಟಿತು. ಎರೆಡೂ ಕಡೆಯಲ್ಲಿ ನೀರಲ್ಲೇ ನಿಂತ ದಟ್ಟ ಮರಗಳು ನಮ್ಮ ದೋಣಿಯ ಮೇಲೆ ಮುಗಿಬಿದ್ದವು. ಅಂಬಿಗ ನೀರಿನಲ್ಲಿ ಸದ್ದಿಲ್ಲದಂತೆ ಹಾಯಿ ಮೀಟಿ ನಿಧಾನವಾಗಿ ಸುತ್ತಲ ಪರಿಸರವನ್ನು ಕಲಕದೆ ನಮ್ಮನ್ನು ನಡು ನೀರಿಗೆ ಕರೆದೊಯ್ದು ದೋಣಿಯನ್ನು ನಿಲ್ಲಿಸಿದ. ಮುಗಿ ಬಿದ್ದ ಗಿಡಗಳು ನಮ್ಮನ್ನು ಸವರಿ ಹೋದಂತೆ ನಾನು ಒಂದಿಷ್ಟು ಎಲೆಗಳನ್ನು ಕಿತ್ತುಕೊಂಡೆ, ಅಮೆಜಾನಿನ ಕತ್ತಲ ರೋಮಾಂಚನ ರಾತ್ರಿಯ ನೆನಪಿಗೆ. ಇಲ್ಲಿ ದೋಣಿ ನಿಂತಂತೆ ರಾತ್ರಿಯ ಸದ್ದುಗಳು ಕೇಳಿ ಬಂದವು. ನೀರಿನಲ್ಲಿ ಬುಳಕ್ ಬುಳಕ್ ಎಂದ ಕಪ್ಪೆಯ ಸದ್ದು. ಒಂದು ಕಪ್ಪೆ ಇತ್ತ ಕಡೆಯಿಂದ ಕೂಗುತ್ತಿದ್ದರೆ, ಅತ್ತ ಕಡೆಯಿಂದ ಅದಕ್ಕೆ ಉತ್ತರ. ನೀರಿನಲ್ಲಿ ಮುಳುಗಿದ ಗುಳುಂ ಗುಳುಂ ಸದ್ದು. ಜೀರುಂಡೆಯ ನಿನಾದ. ಕೀಟಗಳ ಸದ್ದು. ಕಗ್ಗತ್ತಲ ಅರೆಚಂದ್ರನ ಅರೆಬೆಳದಿಂಗಳ ಮಂಕು ಬೆಳಕೂ ಮುಗಿಬಿದ್ದ ಕಾಡುಮರಗಳ ನಡುವೆ ಇಣುಕದಾಗಿದೆ. ಈ ಶಾಂತ ನೀರವ ರಾತ್ರಿಯಲ್ಲಿ ಅದೆಷ್ಟು ಜೀರುಂಡೆಗಳು ಝೇಂಕರಿಸುತ್ತಿವೆ! ಎಂತಹ ಮೋಹಕ ರಾತ್ರಿ. ಇಂತಹ ಅನುಭವ ಮತ್ತೆಲ್ಲಿ ದೊರಕಲಿತ್ತು. ಬಹಳ ಹೊತ್ತು ದೋಣಿಯನ್ನು ಅಲ್ಲೆ ನಿಲ್ಲಿಸಿದ. ಕೊಂಚ ಕೊಂಚ ಮುಂದಕ್ಕೆ ಮೀಟಿ ಮತ್ತೆ ನಿಲ್ಲಿಸಿದ. ಕಿರಿದಾದ ನೀರು ಹಾದಿಯಲ್ಲಿ ಒಂದು ಸುತ್ತು ಹೀಗೆಯೇ ಸದ್ದಿಲ್ಲದೆ ಕರೆದೊಯ್ದು ಕರೆತಂದ.

ಹಿಂತಿರುಗಿ ಬಂದಾಗ ರಾತ್ರಿಯ ಊಟ ಸಿದ್ಧವಾಗಿತ್ತು. ಬುಡ್ಡಿ ದೀಪದ ಬೆಳಕಲ್ಲಿ ತಟ್ಟೆ ತುಂಬಿಕೊಂಡೆವು. ಬಿಳಿ ಅನ್ನ, ಸಲಾಡ್, ರಾಜಮಾ ಹುರುಳಿ, ಕಿತ್ತಳೆ ಹಣ್ಣು ತಿಂದು ಕೋಣೆಗೆ ಬಂದೆವು. ಸೊಳ್ಳೆ ಪರದೆಯಾಚಿನ ಅಮೆಜಾನ್ ಕಾಡಿನ ಸದ್ದುಗಳನ್ನು ಕೇಳುತ್ತಾ ರಾತ್ರಿ ನನಗೆ ಬಹಳ ಹೊತ್ತು ನಿದ್ರೆ ಬರಲಿಲ್ಲ. ಇದೆಲ್ಲ ಕನಸ್ಸು, ನಾನು ಖಂಡಗಳನ್ನು ದಾಟಿ ಅಮೆಜಾನ್ ನದಿಯ ದಂಡೆಯ ಅಮೆಜಾನ್ ಕಾಡಿನಲ್ಲಿ ಈ ರಾತ್ರಿ ಕಳೆಯುತ್ತಿರುವುದು ದಿಟವೆ ಎಂಬ ಅಚ್ಚರಿಯ ಭಾವ. ಇಂತಹ ಅದ್ಭುತ ರಾತ್ರಿಗಳು ನನಗೆ ಅರೆ ನಿದ್ರೆ. ಅರೆ ಕನಸುಗಳು. ಅವೆಲ್ಲವೂ ಲ್ಯೂಸಿಡ್ ಡ್ರೀಮ್ಸ್ ಎಂಬ ಅನುಮಾನ ನನ್ನದು. ಈ ನದಿ, ಈ ಕಾಡು, ಈ ರಾತ್ರಿ ಎಲ್ಲವೂ ಮೋಹಕವಾಗಿ, ಚರಿತ್ರೆಯ ಒಂದು ಪುಟದಲ್ಲಿ ಜಾರಿ ಹೋದಂತೆ, ಯಾವುದೋ ಜನುಮದ ಕತೆಯಲ್ಲಿ ನಾನು ಪಾತ್ರವಾದಂತೆ ಭಾಸವಾಗಿತ್ತು. ಅಮೆಜಾನ್ ಕಾಡಿನ ಅದೆಷ್ಟೋ ಕೀಟಗಳ ಸುನಾದದ ಜೋಗುಳದಲ್ಲಿ ನಿಧಾನವಾಗಿ ಕಣ್ಣುಮುಚ್ಚಿತ್ತು.

ಎದ್ದು ಬೆಳಗ್ಗೆ ಆರು ಗಂಟೆಗೆಲ್ಲ ಸಿದ್ಧವಾಗಿ ಹಜಾರಕ್ಕೆ ಬಂದೆವು. ಬ್ರೆಡ್, ಕಾಫಿ, ಹಣ್ಣಿನ ರಸ, ಮೊಟ್ಟೆ ಒಡೆದು ಹಾಕಿದ್ದ ಆಮ್ಲೆಟ್ ತಿಂದು ಬೇಗನೆ ಹೊರಟೆವು. ’ಬೆಳ್ಳಂ ಬೆಳಗ್ಗೆ ಹೋಗೋಣ. ಅಮೆಜಾನ್ ನದಿಯ ಪಿಂಕ್ ಡಾಲ್ಫಿನ್ ತೋರಿಸುತ್ತೇನೆ’ ಎಂದು ಗೈಡ್ ಹೇಳಿದ್ದ. ದೋಣಿಯಲ್ಲಿ ’ಫದ್ರೆ ದ್ವೀಪ ದ  ಬಳಿಗೆ ಬಂದೆವು. ತೀರದ ಹತ್ತಿರ ದೋಣಿ ನಿಲ್ಲಿಸಿ, ಗೈಡ್ ಮಿಷಿಲ್ ಹೊಡೆಯ ತೊಡಗಿದ. ಅತ್ಯಂತ ಸಹನೆಯಿಂದ ಕಾದೆವು. ಅದೋ ಗುಲಾಬಿ ಬಣ್ಣದ ಡಾಲ್ಫಿನ್ ಗಳು ನೀರಿನ ಮೇಲಕ್ಕೆ ಒಂದಿಷ್ಟೇ ಜಿಗಿದು ಮಿಂಚಿ, ನೀರಲ್ಲಿ ಮಾಯವಾದವು. ಅಮೆಜಾನ್ ನದಿಯ ಈ ಡಾಲ್ಫಿನ್ ಗಳು ಅಂಚಿನಲ್ಲಿವೆ. ಇವು ಇತರೆ ಡಾಲ್ಫಿನ್ ಗಳಿಗಿಂತ ಅನೇಕ ರೀತಿಯಲ್ಲಿ ಬೇರೆ. ಇವು ಬಲು ನಿಧಾನವಾಗಿ ಚಲಿಸುತ್ತವೆ. ಇವುಗಳಿಗೆ ನೀರಿನಲ್ಲಿ ಹಾಯ್ದು ವೇಗವಾಗಿ ಹೋಗಲು ಬಾಲದಲ್ಲಿ ಈಜುರೆಕ್ಕೆಗಳಿಲ್ಲ. ’ಇನಿಯ’ ಎಂದು ಕರೆಯುವ ಈ ಡಾಲ್ಫಿನ್ ಗಳ ಮೂತಿಯಲ್ಲಿ, ಅವುಗಳ ವಯಸ್ಸನ್ನು ಅವಲಂಬಿಸಿ, ನೂರರಿಂದ ಇನ್ನೂರು ಹಲ್ಲುಗಳಿರುತ್ತವೆ! ಈ ’ಇನಿಯ’ ತನ್ನ ಕುತ್ತಿಗೆಯನ್ನು ಎಡಕ್ಕೂ ಬಲಕ್ಕೂ ೧೮೦ ಡಿಗ್ರಿಯಷ್ಟು ತಿರುಗಿಸಬಲ್ಲದು. ಅಮೆಜಾನಿನ ಪ್ರವಾಹ ತುಂಬಿದ ಕಾಡುಗಳಲ್ಲಿ, ಹೆಚ್ಚು ಆಳವಿಲ್ಲದ ಉಪನದಿಗಳ ನೀರಿನಲ್ಲಿ ಬೇಟೆಯಾಡಲೂ, ’ಎತ್ತ ಬೇಕಾದರೂ ತಿರುಗಬಲ್ಲ ಕತ್ತು’ ಬಹು ಉಪಯೋಗಿ. ಒಂದೊಂದು ಪ್ರಾಣಿಯೂ ತನ್ನ ಪರಿಸರಕ್ಕೆ ತಕ್ಕಂತೆ ವಿಕಾಸಗೊಂಡಿದೆ. ಈ ಇನಿಯಾಗಳು ಏಕಾಂಗಿ ಪ್ರಾಣಿಗಳು. ಗುಂಪು ಗುಂಪಾಗಿ ಚಲಿಸುವವಲ್ಲ. ಮರಿ ಒಂದಿಷ್ಟು ದೊಡ್ಡದಾದೊಡನೆ ತಾನೂ ಏಕಾಂಗಿಯಾಗಿ ಅಲೆದಾಡುತ್ತದೆ. ಇದಕ್ಕೆ ಮುಖ್ಯ ಕಾರಣ ಇನಿಯಾಗಳಿಗೆ ಪ್ರಕೃತಿದತ್ತ ವೈರಿಗಳಾರೂ ಇಲ್ಲದೆ ಇರುವುದು. ಗುಂಪಿನ ಸಂರಕ್ಷಣೆಯ ಅವಶ್ಯಕತೆ ಇವಕ್ಕಿಲ್ಲ. ಆದರೆ ಇಂದು ಇನಿಯಾಗಳ ಅತಿ ದೊಡ್ಡ ವೈರಿ ಮನುಷ್ಯ ಮತ್ತು ಮನುಷ್ಯನ ಅತಿಯಾಸೆ. ಅಮೆಜಾನ್ ಮಳೆಕಾಡಿನ ನಾಶ ಈ ಡಾಲ್ಫಿನ್ ಗಳ ಬದುಕನ್ನು ನೇರವಾಗಿ ತಟ್ಟಿದೆ. ಈ ಇನಿಯಾಗಳು ಅಮೆಜಾನ್ ನದಿಯಲ್ಲದೆ ಬೇರೆಲ್ಲೂ ಇಲ್ಲ. ಒಂದೇ ಒಂದು ಇನಿಯಾ ಉತ್ತರ ಅಮೆರಿಕದ ಪಿಟ್ಸ್ ಬರ್ಗ್ ಮೃಗಾಲಯದಲ್ಲಿದೆಯಂತೆ.

ಇಲ್ಲಿಂದ ಹೊರಟ ದೋಣಿ ನದಿ ಜನರ ಕೆಲವು ಗುಡಿಸಲುಗಳಿದ್ದ ತಾಣಕ್ಕೆ ಬಂದಿತು. ಇಲ್ಲಿ ಮರದ ತುದಿಯಲ್ಲಿ ಮಲಗಿದ್ದ ಇಗ್ವಾನಾ ಎಂಬ ದೊಡ್ಡ ಹಲ್ಲಿಯನ್ನು ತೋರಿಸಿದರು. ಇಂದು ಮಾಲತಿ ಪ್ರತಿಭಟಿಸದೆ ಗಮ್ ಬೂಟ್ ಹಾಕಿ ಬಂದಿದ್ದರು. ಕೆಸರು ಕೊಚ್ಚೆಯ ನಡುವೆ ಆಧಾರಕ್ಕೆಂದು, ಕೈಯಲ್ಲಿ ಇಬ್ಬರೂ ಒಂದೊಂದು ಕೋಲು ಹಿಡಿದು ಹೊರಟಿದ್ದೆವು. ಈ ಪುಟ್ಟ ದ್ವೀಪದಲ್ಲಿ ಒಳಗೆ ಹೊಕ್ಕಾಗ ಮೂರು ಮನೆಗಳಿದ್ದವು. ಒಂದು ಮನೆ ಪೂರಾ ನದಿಯ ಮೇಲೆ. ಮನೆ ಅಂದರೇನು, ಒಂದಿಷ್ಟು ಎತ್ತರದ ಗಳುಗಳ ಮೇಲೆ ನಿಲ್ಲಿಸಿದ ಹಲಗೆಯ ಹಾಸು, ಮೇಲೆ ಈಚಲಿನಂತಹ ಎಲೆಗಳ ಹೊದಿಕೆ. ಅರೆ ಬರೆ ನಿಂತ ಒಂದಿಷ್ಟು ಹಲಗೆಯ ಗೋಡೆ ಇಷ್ಟೆ. ನದಿಯ ನೀರು ಮಳೆಗಾಲದಲ್ಲಿ ಎಷ್ಟು ಎತ್ತರಕ್ಕೆ ಬರುತ್ತದೆಯೋ, ಅಷ್ಟು ಎತ್ತರವನ್ನು ಮೀರಿ ನಿಲ್ಲಿಸಿದ ಮನೆಗಳು. ರಕ್ಷಣೆಯ ಗೋಡೆ ಇಲ್ಲದೆ, ಕೇವಲ ಗಳು ಅಡ್ಡ ನಿಂತ ಆ ಮನೆಯಲ್ಲಿ ಮೂರ್ನಾಲ್ಕು ಮಕ್ಕಳುಗಳು. ಅದರಲ್ಲಿ ಒಂದು ಪುಟ್ಟ ಕೂಸು ಗಳುವಿಗೆ ಒರಗಿ ಆರಾಮ ಕೂತಿತ್ತು. ನೆಲದ ಮೇಲಿದ್ದ ಮನೆಯೂ ಗಳುಗಳ ಮೇಲೆ ಸಾಕಷ್ಟು ಎತ್ತರದಲ್ಲಿ ನಿಂತಿತ್ತು. ಅಮೆಜಾನ್ ಉಕ್ಕಿ ಬಂದಾಗ, ನೀರು ಒಳನುಗ್ಗಿ ಬರುವುದು. ಆ ಎತ್ತರದ ಬಾಗಿಲಿನಲ್ಲೂ ಒಂದು ಪುಟ್ಟ ಕೂಸು, ತೀರಾ ಪುಟ್ಟದು ಕೂತಿದೆ. ’ಬಿದ್ದರೆ…?’ ಎಂಬ ಭೀತಿ ನನಗೆ ಮಾತ್ರ. ಈ ನೆಲಕ್ಕೆ ಪರಿಸರಕ್ಕೆ ಒಗ್ಗಿಹೋದ ಆ ಮಗುವಿನ ಫೋಟೋ ತೆಗೆದುಕೊಂಡೆ.

ಆ ಮನೆಯಾತ ತಾನು ಕಾಡಿನಿಂದ ರಕ್ಷಿಸಿ ತಂದಿಟ್ಟುಕೊಂಡ ಒಂದು ವಿಚಿತ್ರ ಪ್ರಾಣಿಯನ್ನು ನಮಗೆ ತಂದು ತೋರಿಸಿದ. ಕೋತಿ ಅಲ್ಲ, ಕರಡಿಯ ಮರಿಯೂ ಅಲ್ಲ. ಒರಟು ತುಪ್ಪಟದ ದಪ್ಪ ಉಗುರಿನ, ಮುಖದ ಮೇಲೆ ಶಾಶ್ವತ ಮುಗುಳ್ನಗೆಯನ್ನು ಹೊತ್ತ ವಿಚಿತ್ರ ಪ್ರಾಣಿ ಅದು. ಅಬ್ಬ ನಿಧಾನ ಎಂದರೆ ಅದೆಂಥ ನಿಧಾನದ ಪ್ರಾಣಿ ಇದು. ಇಂದು ಕೈಯನ್ನು ಎತ್ತಿ ಗಳು ಹಿಡಿಯಲು ಇದಕ್ಕೆ ಅದೆಷ್ಟು ಹೊತ್ತು ಬೇಕು. ಇದು ’ಸ್ಲಾತ್’ ಎಂದಾಗ, ಮೊದಲ ಬಾರಿಗೆ ಸ್ಲಾತ್ ಎಂಬುದು ಎಷ್ಟು ನಿಧಾನದ ಪ್ರಾಣಿ ಎಂದು ಅರಿವಾಗಿತ್ತು. ಇಂದು ಮುಂದುವರೆದ ದೇಶಗಳಲ್ಲಿ ’ಬುಷ್ ಮೀಟ್’ ಜನಪ್ರಿಯವಾಗಿದೆ. ಸದಾ ಹೊಸತನ್ನು ಹುಡುಕುವ, ನಾಲಗೆಯ ಚಪಲಕ್ಕೆ ತೆತ್ತುಕೊಂಡ ಶ್ರೀಮಂತ ದೇಶಗಳಲ್ಲಿ ’ಬುಷ್ ಮೀಟ್’ಗೆ ಎಲ್ಲಿಲ್ಲದ ಬೇಡಿಕೆ. ಹಣದ ಆಸೆಗೆ ಈ ಕಾಡುಗಳ ವನ್ಯ ಸಂಪತ್ತು ಬೇಟೆಯಾಗುತ್ತಿದೆ. ಕೋತಿಗಳನ್ನು, ಸ್ಲಾತ್ ಗಳನ್ನೂ ಕೊಂದು ಸಾಗಿಸುತ್ತಾರೆ. ಈ ’ಸ್ಲಾತ್’ ಅನ್ನು ಕಾಪಾಡಿ ಈ ಮನುಷ್ಯ ತಂದಿಟ್ಟುಕೊಂಡಿದ್ದ. ಇಂತಹ ನಿಧಾನದ ಪ್ರಾಣಿಯನ್ನು ಹಿಡಿಯುವುದು ಅತಿ ಸುಲಭ.

ದಟ್ಟ ಮರಗಿಡಗಳ ನಡುವಿನಿಂದ ದೋಣಿ ಹಾಯಿಸಿ ಸಾಕಷ್ಟು ದೂರ ಬಂದಾಗ, ಯಮಯಾಕು ನದಿಯ ಮೇಲೆ ಹಾದು ಅಲ್ಲಿದ್ದ ಒಂದು ಹಜಾರಕ್ಕೆ ಕರೆತಂದರು. ಇಲ್ಲಿ ಅಮೆಜಾನ್‌ನ ಕಾಡುಗಳಲ್ಲಿ ಕಾಣುವ ಅದ್ಭುತ ಬಣ್ಣದ ಪ್ರಖರ ನೀಲಿ ಕೆಂಪು ಹಳದಿ ಬಣ್ಣದ ದೊಡ್ಡ ಗಿಣಿಗಳಿದ್ದವು.

ದೋಣಿಯಲ್ಲಿ ಈ ಉಪನದಿಗಳ ಒಳ ಹಾದಿಯಲ್ಲಿ ಹಾದಂತೆ, ಅಲ್ಲಲ್ಲಿ ನದಿಯ ಕಿರುಕಲು ಹಾದಿಯಲ್ಲಿ ಮರಗಳ ಬುಡದಲ್ಲಿ ದೋಣಿ ನಿಲ್ಲಿಸಿ ಮೀನು ಹಿಡಿಯುತ್ತಿರುವುದು ಕಾಣುತ್ತಿತ್ತು. ಈ ದೋಣಿಗಳು ಅತಿ ಚಿಕ್ಕವು. ಒಂದು ಮರದ ಕಾಂಡವನ್ನು ಕೊರೆದು ಮಾಡಿದ ಅತಿ ಸರಳ ದೋಣಿಗಳು. ನದಿ ಜನರ ಬಳಿ ಇರುವ ದೋಣಿಗಳೆಲ್ಲ ಇಂತಹ ಪುಟ್ಟ ಹಾಯಿ ದೋಣಿಗಳೆ. ಮತ್ತೊಂದು ತಾಣಕ್ಕೆ ಕರೆತಂದರು. ಈ ದ್ವೀಪದ ಮೇಲೆ ಒಂದೇ ಒಂದು ಕುಟುಂಬವಿತ್ತು. ಅಮೆಜಾನ್ ಕಾಡುಗಳ “ವಾಟರ್ ಲಿಲಿ” ಬಗ್ಗೆ ಕೇಳಿದ್ದೆವು. ಮಾಲತಿ ವಾಟರ್ ಲಿಲಿ ತೋರಿಸುವೆನೆಂದು ಕರೆತಂದಿದ್ದನಲ್ಲವೆ, ಇದೀಗ ಆ ಅವಕಾಶ ದೊರೆಯಿತು. ಅಮೆಜಾನ್ ಪ್ರದೇಶದಲ್ಲಿ ಅಂತರಗಂಗೆಯ ಕಳೆ ಬೆಳೆದು, ವಾಟರ್ ಲಿಲಿ ಬಹಳಷ್ಟು ನಾಶವಾಗಿದೆ. ವಾಟರ್ ಲಿಲಿಗೆ ಸ್ವಚ್ಛವಾದ ನೀರು ಬೇಕು. ಈ ಕುಟುಂಬ ಅಂತರಗಂಗೆಯನ್ನು ಕಿತ್ತು ಹಾಕುತ್ತ, ಪ್ರಕೃತಿಯ ನಡುವೆ ಸಹಜ ತಾಣದಲ್ಲಿ ಬೆಳೆದು ನಿಂತ ವಾಟರ್ ಲಿಲಿಯನ್ನು ಕಾಪಾಡಿಕೊಂಡು ಬಂದಿದೆ. ಆ ವಾಟರ್ ಲಿಲಿ ಇದ್ದ ಅತಿ ಕಿರಿದಾದ ತಾಣಕ್ಕೆ ಹೋಗಲು, ಬೇರೊಂದು ಸಣ್ಣ ದೋಣಿಯಲ್ಲಿ ತೂರಿ ಕುಳಿತೆವು. ಅಬ್ಬ ಅದೆಷ್ಟು ದೊಡ್ಡ ತಾವರೆಯ ಎಲೆಗಳವು. ಒಂದೂವರೆ ಮೀಟರ್ ವ್ಯಾಸ! ದಪ್ಪ ಎಲೆ, ಕೆಳಗೆ ಮುಳ್ಳು. ಇದರ ಕಾಂಡಗಳು ದಪ್ಪಗಿವೆ, ಅಲ್ಲೂ ಮುಳ್ಳಿದ್ದವು. ಒಂದು ಹೂ ಅರಳಿತ್ತು, ಅಗಲವಾದ ಗುಲಾಬಿ ಬಣ್ಣದ್ದು. ಮತೊಂದು ಇನ್ನೂ ಮೊಗ್ಗು. ಈ ವಾಟರ್ ಲಿಲ್ಲ ಇದ್ದ ಜಾಗಕ್ಕೆ ಓರ್ವ ಹೆಂಗಸು ಹುಟ್ಟುಹಾಕಿ ಪುಟ್ಟ ದೋಣಿಯಲ್ಲಿ ಕರೆ ತಂದಿದ್ದರು. ಈ ನೀರಿನ ಲಿಲ್ಲಿ ಹೆಸರು ’ವಿಕ್ಟೋರಿಯಾ ಅಮೆಜಾನಿಕ’. ಇದು ಈ ನೆಲದ ಜನರಿಟ್ಟ ಹೆಸರಲ್ಲ. ೧೮೩೮ ರಲ್ಲಿ ಪ್ರಸಿದ್ಧ ಸಸ್ಯಶಾಸ್ತ್ರಜ್ಞ ಡಾ. ಲಿಂಗ್ಲೆ ಇದನ್ನು ರಾಣಿ ವಿಕ್ಟೋರಿಯಾ ಗೌರವಾರ್ಥವಾಗಿ ಈ ಹೆಸರಿಟ್ಟು ಕರೆದ. ಇದಕ್ಕೆ ಬಹಳಷ್ಟು ಬಿಸಿಲು ಬೇಕು. ಹೂಗಳು ರಾತ್ರಿ ಅರಳುತ್ತವೆ. ನಾವು ಹೋದಾಗ ಇನ್ನೂ ಮುಂಜಾನೆ. ಅರೆಬಿರಿದ ಹೂಗಳಿನ್ನೂ ಪೂರ್ಣ ಮುಚ್ಚಿರಲ್ಲಿಲ್ಲ. ಈ ಹೂವಿನ ದಳಗಳೆಲ್ಲ ಉದುರಿದ ಮೇಲೆ ಬೆರ್ರಿಯಂತಹ ಕಾಯಿ ಉಳಿಯುತ್ತದೆ. ಈ ಬೀಜದ ತಿರುಳಿಂದ  ಮೆದುವಾದ ಹಿಟ್ಟು  ತಯಾರಿಸಬಹುದು. ಇದನ್ನು ಸ್ಥಳೀಯರು ’ನೀರಿನ ಜೋ’ ಎನ್ನುತ್ತಾರೆ. ಮಾಲತಿ ಈ ಗಿಡವನ್ನು ಲಂಡನ್ನಿನ ಕ್ಯೂ ಗಾರ್ಡನ್ ನಲ್ಲಿ ನೋಡಿದ್ದರು. ನಾನು ಕಂಡದ್ದು ಇದೇ ಮೊದಲು. ಆದರೆ ಕೊಲಕತ್ತಾ ಬೊಟಾನಿಕಲ್ ಗಾರ್ಡನ್ಸ್ ನಲ್ಲಿ ಇವನ್ನು ಸುಂದರವಾಗಿ ಬೆಳಸಿದ್ದಾರೆ. ಮೊನ್ನೆ ಮೊನ್ನೆ ತಾನೆ ಸಣ್ಣ ಮಗುವಲ್ಲ, ಎಂಟು ವರ್ಷದ ಪುಟ್ಟ ಪೋರಿಯನ್ನು ಈ ಎಲೆಗಳ ಮೇಲೆ ಕೂಡಿಸಿ ತೆಗೆದ ಚಿತ್ರವನ್ನು ಪೇಪರಿನಲ್ಲಿ ನೋಡಿದೆ.

ನೀರಿನಲ್ಲಿ ತೇಲುತ್ತಿದ್ದ ದೊಡ್ಡ ದೈತ್ಯ ತಟ್ಟೆಗಳ ಫೋಟೋ ತೆಗೆದುಕೊಂಡೆ. ಎಲೆಯ ತುದಿಯಲ್ಲಿ ಸುಮಾರು ಎರಡಂಗುಲದಷ್ಟು ಮೇಲೆದ್ದ ಅಂಚುಕಟ್ಟು. ಒಂದು ಮಗುವಿನ ಭಾರ ಅರಾಮಾಗಿ ಹೊರಬಲ್ಲವು. ಅಮೆಜಾನ್ ಜನ ಈ ನೀರ ತಾವರೆ ತಟ್ಟೆಗಾಳ ಮೇಲೆ ಕಾಲಿಟ್ಟು ದಾಟುತ್ತಾರೆ ಎಂಬ ಪ್ರತೀತಿ. ಆದರೆ ಹೆಚ್ಚು ಭಾರ ಹಾಕದಂತೆ ಭರ ಭರ ನಡೆಯಬೇಕು. ಇಲ್ಲಿಂದ ಬುಡಕಟ್ಟು ಮಹಿಳೆಯರು ತಿನ್ನಲು ತಾವರೆಯ ಬೀಜಗಳನ್ನು ಆಯ್ದು ಕೊಳ್ಳುವಾಗ, ಮಕ್ಕಳನ್ನು ಈ ಬೃಹತ್ ಎಲೆಯ ಮೇಲೆ ಮಲಗಿಸುತ್ತಾರಂತೆ. “ಆಲದೆಲೆಯ ಮೇಲೆ ಮಲಗಿದ ಕೃಷ್ಣ”, ಆಲದ ಎಲೆ ತೇಲಿತೋ ಇಲ್ಲವೋ, ಕೃಷ್ಣ  ಆರಾಮಾಗಿ ಈ ತಾವರೆ ಎಲೆಯ ಮೇಲೆ ಮಲಗಬಲ್ಲ.

ಈ ಕುಟುಂಬ ಒಂದು “ಬೋವಾ ಕನಸ್ಟ್ರಿಕ್ಟರ್” ಮತ್ತು “ಅನಕೊಂಡಾ” ಗಳನ್ನು ಸಾಕಿ ಕೊಂಡಿತ್ತು! ಮಾಲತಿ ಅಮೆಜಾನ್ ನದಿಯ ಅನಕೊಂಡಾ ನೋಡಬೇಕೆಂದು ಬಂದವರು. ಆತ ಅನಕೊಂಡ ಹಿಡಿದು ತಂದಾಗ ಮುಟ್ಟಲೂ ಹಿಂಜರಿದ ಮಾಲತಿಗೆ “ಇದು ನಿಮ್ಮ ಅಮೆಜಾನ್ ಕನಸು, ಕೈಯಲ್ಲಿ ಹಿಡಿಯಿರಿ ಎಂದು ಕಿಚಾಯಿಸಿದೆ. “ಅನಕೊಂಡ ಹಿಡಿಯಬೇಕೆಂದರೆ ಮೊದಲು ಅದರ ಬಾಯನ್ನು ಗಟ್ಟಿಯಾಗಿ ಮುಚ್ಚಿ ನಂತರ ಹಿಡಿದುಕೊಳ್ಳಿ” ಎಂದು ಆತ ಎಚ್ಚರಿಸಿದ. ಮಾಲತಿ ಅನಕೊಂಡಾ ಹಿಡಿದು ನಿಂತಂತೆ ಫೋಟೊ ತೆಗೆದೆ.

ಅನಕೊಂಡಾಗಳು ವಿಪರೀತ ಗಾತ್ರದಲ್ಲಿ ಬೆಳೆಯಬಲ್ಲವು. ಒಬ್ಬ ಮನುಷ್ಯನಷ್ಟು ದಪ್ಪಕ್ಕೆ ಬೆಳೆಯಬಲ್ಲವು, ಅಷ್ಟೇ ಅಲ್ಲ ಇಡೀ ಮನುಷ್ಯನನ್ನೇ ನುಂಗಬಲ್ಲವು. ಅದಕ್ಕಾಗಿಯೇ ಅವನ್ನು ಎತ್ತಿ ಹಿಡಿಯುವಾಗ ಮೊದಲು ಬಿಗಿಯಾಗಿ ಮುಚ್ಚಿ ಹಿಡಿದುಕೊಳ್ಳುತ್ತಾರೆ. ಇವು ಕಾಡಿನಲ್ಲಿ ಬಹಳಷ್ಟು ಬಾರಿ ಏಕಾಂಗಿಗಳಾಗಿ ಕಳೆಯುವ ಜೀವಿಗಳು. ನೂರು ಅಡಿಯಷ್ಟು ಉದ್ದದ ಅನಕೊಂಡಾ ಕಂಡ ಸ್ಥಳೀಯರಿದ್ದಾರೆ. ಅದು ಎಷ್ಟು ಉತ್ಪ್ರೇಕ್ಷೆಯೋ ನಿಜವೋ ತಿಳಿಯದು, ಆದರೆ ನಾವು ಕಂಡ ಅನಕೊಂಡಾ ಹದಿನೈದು ಅಡಿಯಾದರೂ ಉದ್ದವಿತ್ತು.

ಅನಕೊಂಡಾಗಳು ಬೋವಾ ಕನಸ್ಟ್ರೀಕ್ಟರ್ ಕುಟುಂಬಕ್ಕೆ ಸೇರಿದ ಹಾವುಗಳು. ಇವು ತಮ್ಮ ಬೇಟೆಯನ್ನು ಕಚ್ಚಿ ಕೊಲ್ಲುವುದಿಲ್ಲ, ಅವುಗಳ ಸುತ್ತ ಸುತ್ತಿಕೊಂಡು ಗಟ್ಟಿಯಾಗಿ ಬಿಗಿದುಕೊಂಡು ಉಸಿರು ಕಟ್ಟಿಸಿ ಸಾಯಿಸುತ್ತವೆ. ಇಡಿ ಇಡಿಯಾಗಿ ನುಂಗುತ್ತವೆ. ಅನಕೊಂಡಾಗಳು ಒಮ್ಮೆಗೆ ೬೦-೭೦ ಮರಿಗಳನ್ನು ಹಾಕುತ್ತವಂತೆ! ಅನಕೊಂಡಾಗಳು ಹಸಿದಾಗ, ಸುರಳಿ ಬಿಚ್ಚಿಕೊಂಡು, ನೀರಿನಲ್ಲಿ ಕೇವಲ ಕಣ್ಣುಗಳನ್ನಷ್ಟೆ ಹೊರಗಿಟ್ಟುಕೊಂಡು ತಮ್ಮ ಬೇಟೆಗೆ ಕಾಯುತ್ತವೆ. ನೀರು ಕುಡಿಯಲು ಬರುವ ಪ್ರಾಣಿಗಳನ್ನಿರಲಿ, ಮನುಷ್ಯನನ್ನೂ ನುಂಗಬಲ್ಲದು ಈ ಅಗಾಧ ಪ್ರಮಾಣದ ಹಾವು. ನದಿಯಲ್ಲಿ ಅಡ್ಡಾಡುವುದೆಂದರೆ ಅನಕೊಂಡಾಗಳಿಗೆ ಬಲು ಖುಷಿ. ನದಿ ನೀರಿನಲ್ಲಿ ಮುಳುಗಿ, ಒಂದಿಷ್ಟೇ ಮೂತಿ ಹೊರಗಿಟ್ಟು ತೇಲುವ ಅನಕೊಂಡಾಗಳು. ಪಿರಾನಗಳ ಬಗ್ಗೆ, ಅನಕೊಂಡಾಗಳ ಬಗ್ಗೆ ಇಷ್ಟೆಲ್ಲ ಮೊದಲೇ ತಿಳಿದಿದ್ದರೆ ಅಮೆಜಾನ್ ಕಾಡುನದಿ ಎಲ್ಲವೂ ಭಯಂಕರವಾಗಿ ಕಂಡುಬಿಡುತ್ತಿತ್ತು. ನದಿ ನೀರಿಗೆ ಕೈ ಹಾಕಿ ಅಲೆದಾಡಿದ ಖುಷಿ ಎಲ್ಲಿರುತ್ತಿತ್ತು!

ಮತ್ತೆ ದೋಣಿ ಹೊರಟಿತು. ಒಳ ನೀರಿನಲ್ಲಿ ಹಾದು ದಟ್ಟವಾದ ಬೃಹತ್ ಮರಗಳ ತಾಣಕ್ಕೆ ಬಂದಿತು. ನೀರಿನ ಆಳದಲ್ಲಿ ಬೇರೂರಿ ನಿಂತ ಭಾರೀ ಗಾತ್ರದ ಮರಗಳ ನಡುವೆ ಸಂದಿಗೊಂದಿಯಲ್ಲಿ ಹಾದ ದೋಣಿ, ಅಮೆಜಾನ್ ಕಾಡಿನ ಒಳಭಾಗಕ್ಕೆ ಕರೆತಂದು ನಿಲ್ಲಿಸಿತು. ಇಲ್ಲಿ ಅಮೆಜಾನಿನ “ನೇಟಿವ್” ಜನರಿದ್ದರು. ಸ್ತ್ರೀಯರೆಲ್ಲ ಸೊಂಟದ ಮೇಲೆ ನಗ್ನ. ಅದರ ಕೆಳಗೆ ಒಂದು ಕೆಂಪು ವಸ್ತ್ರ ಸುತ್ತಿಕೊಂಡಿದ್ದರು. ಗಂಡಸರು, ಸೊಂಟದ ಕೆಳಗೆ ಹುಲ್ಲಿನ ಲಂಗ ತೊಟ್ಟಿದ್ದರು. ಪುಟ್ಟ ಹುಲ್ಲಿನ ಗುಡಿಸಲು, ಅದರ ಬಗಲಿನಲ್ಲಿ ಸಾಲಾಗಿ ಒಂದಿಷ್ಟು ಈಚಲ ಛಾವಣಿ. ಈ ಛಾವಣಿಯ ಅಡಿಯಲ್ಲಿ ಗಳುಗಳ ಮೇಲೆ ಅದ್ಭುತ ಕರಕುಶಲ ವಸ್ತುಗಳನ್ನು ನೇತು ಹಾಕಿದ್ದರು. ಕೊರಳಿಗೆ ಹಾರ, ಬಳೆಯಂಥದ್ದು, ಕೆವಿಗೆ ನೇತು ಹಾಕಿಕೊಳ್ಳುವ ವಸ್ತುಗಳಿದ್ದವು. ಕೆಲವನ್ನು ಪುಟ್ಟ ಅಮೆಯ ಕವಚದಿಂದ, ಪುಟ್ಟ ಪ್ರಾಣಿಗಳ ಮೂಳೆಗಳಿಂದ ತಯಾರಿಸಿದ್ದರು, ಉಳಿದವನ್ನು ಕಾಡಿನ ಬೀಜ, ಎಲೆ ಕಡ್ಡಿಗಳಿಂದ ತಯಾರಿಸಿದ್ದವು. ಮೂಳೆ ಗೀಳೆ ಮುಟ್ಟಲು ಹೋಗದೆ, ಬೀಜ, ಕಡ್ಡಿಯ ಸುಂದರ ಸರಗಳನ್ನು ಕೊಂಡೆ. ಅವಕ್ಕೆ ಹಚ್ಚಿದ ಬಣ್ಣಗಳ್ಯಾವುದೂ ರಾಸಾಯನಿಕವಲ್ಲ. ಕಾಡಿನಲ್ಲೇ ಸಹಜವಾಗಿ ದೊರತದ್ದು ಎಂದಾಗ ಅಚ್ಚರಿಯಾಯಿತು. ಅವರು ಮೆತ್ತಿಕೊಂಡ ಗಾಢ ಕೇಸರಿ ಬಣ್ಣ ನೋಡಿದೆ. ಅದು ಹೇಗೆ ಬಂತು ಎಂದು ಕೇಳುವಾಗ, ಅವರಲ್ಲಿ ಒಬ್ಬಾಕೆ ನನ್ನನ್ನು ಮೂಲೆಯಲ್ಲಿದ್ದ ಒಂದು ಗಿಡದ ಬಳಿಗೆ ಕರೆದೊಯ್ದಳು. ಥೇಟ್ ನಮ್ಮ ಮೈಸೂರಿನ ಅರಮನೆಯ ಪಕ್ಕದ ಪಾರ್ಕಿನಲ್ಲಿ ನೆಟ್ಟಿರುವ ಗಿಡದಂತೆ ಇದೂ ಇತ್ತು. ಇಲ್ಲಿ ಕಂಡದ್ದು ಗಾಢ ಕೆಂಪಿನ ಕಾಯಿಗಳು. ಮುಳ್ಳು ಮುಳ್ಳು ಕವಚದ ಕಾಯಿಗಳನ್ನು ಬಿಡಿಸಿ ತೋರಿಸಿದಳು. ಒಳಗೆ ಗಾಢ ಕೇಸರಿ ಬೀಜಗಳು. ಅವನ್ನು ಕೈಯಲ್ಲಿ ಹಿಸುಕಿದಾಗ, ಕೈಯೆಲ್ಲಾ ಕೇಸರಿ ಬಣ್ಣ. ಆಕೆ ಅದನ್ನು ನನ್ನ ಕೆನ್ನೆಗೆ, ಹಣೆಗೆ ಗಲ್ಲಕ್ಕೆ ಬಳುದಳು. ಈ ಕೇಸರಿ ಬಣ್ಣ ತೊಳೆದುಕೊಳ್ಳಲು ನಂತರ ಇದ್ದೆಲ್ಲ ಸೋಪು ಹಚ್ಚಿ ತಿಕ್ಕಬೇಕಾಯಿತು. ಇದನ್ನು ಕನ್ನಡದಲ್ಲಿ “ಕುಂಕುಮ ಕಾಯಿ” ಎನ್ನುತ್ತಾರೆ. ಸಸ್ಯಶಾಸ್ತ್ರೀಯ ಹೆಸರು “ಬಿಕ್ಸಾ ಒರಾಂಗ್ಯಲೇಟಾ”. ಗಾಢ ಕುಂಕುಮ ವರ್ಣದ ಕಾಯಿ. ಸುಮಾರು ೧೦-೧೫ ಕಾಯಿಗಳ ಸಮೂಹವಾಗಿದ್ದು, ದ್ರಾಕ್ಷಿಯಂತೆ ಗೊಂಚಲು-ಗೊಂಚಲಾಗಿ ಕಾಣುತ್ತದೆ. ಭಾರತದಲ್ಲೂ ಕೆಲ ಸಂಪ್ರದಾಯಸ್ಥರು ರಾಸಾಯನಿಕ ಮಿಶ್ರಿತ ಕುಂಕುಮ ಅಥವಾ ಬಿಂದಿ ಇಡದೆ, “ಕುಂಕುಮ ಕಾಯಿ” ಬೀಜದಿಂದ ತಯಾರಿಸಿದ ಕುಂಕುಮ ಉಪಯೋಗಿಸುತ್ತಾರೆ ಎಂದು ಕೇಳಿದ್ದೆ. ನಮ್ಮ ನಡುವೆ ಎಷ್ಟು ಸಾಮ್ಯವಿತ್ತು. ಅಷ್ಟೇ ಅಗಾಧವಾದ ಕಂದರವಿತ್ತು. ನಮ್ಮೊಡನೆ ಬಂದ ಇದೇ ನೆಲದ ಮೂಲದ ಈ ಪ್ರವಾಸಿ ಅಣ್ಣತಂಗಿಯರು ಕೂಡಾ ತಮ್ಮ ಬೇರುಗಳಿಂದ ಅದೆಷ್ಟು ವಿಭಿನ್ನವಾಗಿ ಕಾಣುತ್ತಿದ್ದರು.

ನಮ್ಮನ್ನು ಒಂದು ದೊಡ್ಡ ಗುಡಿಸಲ ಒಳಕ್ಕೆ ಕರೆದೊಯ್ದರು. ಮನುಷ್ಯನೊಬ್ಬ ಡೋಲು ಬಾರಿಸತೊಡಗಿದ. ನಮ್ಮನ್ನು ಹಲಗೆಯ ಮೇಲೆ ಕೂರಿಸಿ ಅವರು ಕುಣಿಯ ತೊಡಗಿದರು. ಮುದುಕಿಯರು, ಎಳೆಯರು ತೆರೆದೆದೆಯಲ್ಲಿ ಕುಣಿಯುವಾಗ, ನಮ್ಮೊಡನೆ ಗಂಡಸರಿದ್ದ ಕಾರಣ ಕೊಂಚ ಮುಜುಗರ. ಬದುಕು ಎಷ್ಟೆಲ್ಲ ಕಡೆಯಲ್ಲಿ ತಟಸ್ಥವಾಗಿ ನಿಂತಿದೆ. ನಾಗರಿಕತೆ ಉತ್ತುಂಗವೆಂದುಕೊಂಡ ಅಮೆರಿಕದಲ್ಲಿ ಅರೆ ಎದೆ ಬಿಟ್ಟು ತಿರುಗುವವರು ನೋಡಿದ್ದೆವು. ಮಾಲತಿ ಜೋಕು ಮಾಡುತ್ತಿದ್ದುದುಂಟು ‘ America is the only country which went from barbarinism to decadence, without the in between civilization’. ಸ್ವಲ್ಪ ಹೊತ್ತಿಗೆ ಆ ಹೆಂಗಸರು ಬಂದು ನಮ್ಮ ಕೈ ಹಿಡಿದು ’ನೀವೂ ನೃತ್ಯ ಮಾಡಿ’ ಎಂದ ಸನ್ನೆ ಮಾಡಿದರು. ನಾವೂ ಕುಣಿಯ ತೊಡಗಿದೆವು. ಎಳೆಯ ಹುಡುಗಿಯೊಬ್ಬಳು ಮಾಲತಿಯ ಕಿವಿಯಲ್ಲಿಸ್ಸ ಗಿಲೀಟು ಓಲೆಯನ್ನು ಒಂದೇ ಸಮನೆ ನೋಡುತ್ತಾ ಹತ್ತಿರ ಬಂದು ‘ಕೊಡುತ್ತೀರಾ?’ ಎಂಬಂತೆ ಕೇಳಿದಳು. ಮಾಲತಿ ಬಿಚ್ಚಿಕೊಟ್ಟರು. ಬೆಂಗಳೂರಿನ ಗಲ್ಲಿಯ ಅಂಗಡಿಯ ಓಲೆಗಳು. ಈಗ ಅಮೆಜಾನ್ ಸ್ಥಳೀಯ ಹೆಣ್ಣುಮಗಳ ಕಿವಿಯಲ್ಲಿ ನಳನಳಿಸಿತು.

ಹೊರಗೆ ಬಂದಾಗ ಅಮೆಜಾನ್ ಜನರು ಬೇಟೆಯಾಡುವ ರೀತಿಯನ್ನು ತೋರಿಸಿದರು. ಕೊಳವೆಯಂತಹ ಬಿದುರಿನ ಬಂದೂಕು. ಸಣ್ಣಗೆ ಚೂಪಾದ ಕಡ್ಡಿಯಂತಹ ಬಾಣಗಳು, ಅದರ ತುದಿಗೆ ವಿಷ ಸವರಿ ಕೊಳವೆಯಲ್ಲಿಟ್ಟು, ಹಿಂದಿನಿಂದ ಊದಿ ಗುರಿ ಮುಟ್ಟಿಸುತ್ತಿದ್ದರು. ಆತ ಎದುರಿನ ಲಕ್ಷ್ಯಕ್ಕಿಟ್ಟ ಮರದ ಬೊಂಬೆಗೆ ನಿಖರವಾಗಿ ತಲುಪುವಂತೆ ಊದಿ ತೋರಿಸಿದ. ನಾನು ಇದ್ದ ಉಸಿರನ್ನೆಲ್ಲ ಶ್ವಾಸಕೋಶಗಳಿಗೆ ತೆಗೆದುಕೊಂಡು ಊದಿದೆ, ಪುಸ್ ಎಂದು ಇಷ್ಟು ದೂರ ಕೂಡಾ ಕಡ್ಡಿ ಹೋಗಲಿಲ್ಲ. ಮಾಲತಿಯೇ ವಾಸಿ, ಮರದ ಬೊಂಬೆಗೆ ಊದಿ ಗುರಿಯಿಟ್ಟರು. ಈಗೇನೂ ಈ ಸ್ಥಳೀಯರು ಈ ಬಗೆಯಲ್ಲಿ ಬೇಟೆಯಾಡೋಲ್ಲ. ನಾಗರಿಕತೆಯ ಅನುಕೂಲಗಳು ಇವರಿಗೂ ಓಂದಿಷ್ಟು ಒದಗಿವೆ. ಆದರೆ ಇಂತಹ ಉದು ಕೊಳವೆಯನ್ನು ಬಳಸಿ, ಆಗಸದಲ್ಲಿ ಹಾರಿದ ಹಕ್ಕಿಯನ್ನೂ ಕೆಡವಬಲ್ಲ ನಿಪುಣರು ಈಗಲೂ ಇದ್ದಾರೆ. ಮತ್ತೆ ದೋಣಿ ಉಪನದಿಗಳ ಸಂದುಗೊಂದಿನಲಿ ಹೊರಟಿತು. ಹೊಳೆವ ಆಗಸದ ಬಿಸಿಲು, ನೀರಿನಿಂದ ಮೇಲೆದ್ದು ಮುಗಿಲು , ಮುಟ್ಟಿದ ಮರಗಳು. ಅದೆಷ್ಟೋ ತಿರುವುಗಳಲ್ಲಿ ಅಲೆದಾಡಿದ ದೋಣಿ, ಒಂದು ಪೊದೆಯಂತಹ ಜಾಗಕ್ಕೆ ಬಂದು ನಿಂತಿತು. ’ಇಲ್ಲಿ ಪಿರಾನಗಳನ್ನು ಹಿಡಿಯೋಣ’ ಎಂದರು. ಗೈಡ್ ದನದ ಮಾಂಸದ ಚೂರುಗಳನ್ನು ತೆಗೆದು ಫಿಷಿಂಗ್ ಕಡ್ಡಿಗಳ ತುದಿಯ ದಾರದ ಕೊಕ್ಕೆಗೆ ಚುಚ್ಚಿ ನಮ್ಮ ಕೈಗಿಟ್ಟ. ’ಛೀ’ ಆಟಕ್ಕೆಂದು ಮೀನು ಹಿಡಿಯುವುದೇ?” ಅನಿಸಿದರೂ, ’ಮೀನು ಸಿಕ್ಕಿಬಿದ್ದರೆ ವಾಪಾಸು ನದಿಗೆ ಎಸೆದು ಬಿಡುತ್ತೇನೆ’ ಎಂದು ’ಅಹಿಂಸಾ ಪರಮೋಧರ್ಮ’ ಉಚ್ಚರಿಸಿದರು, ಒಳಗೆಲ್ಲೋ ಮೀನು ಹಿಡಿವ ಉತ್ಸಾಹ. ’ಕೊಂದ ಪಾಪ ತಿಂದರೆ ಹೋಯಿತು’ ಎನ್ನುತ್ತಾರೆ. “ಹಸಿವಿಗೆ ಆಹಾರವಾಗಿ ಮೀನು ಹಿಡಿಯೋದು ಸರಿ, ಮೋಜಿಗೆಂತಹ ಜೀವ ಹಿಂಡೋದು” ಒಳಗೊಳಗೇ ಒಳಮನ ಚುಚ್ಚಿದರೂ, ನಾನು ಮೀನು ಕಡ್ಡಿ ಹಿಡಿದು ಕುಳಿತಿದ್ದೆ. ಆ ಹುಡುಗಿ ಹೋ ಎಂದು ಚೀರಿ ದಾರ ಎತ್ತಿದಳು. ಒಂದಿಷ್ಟು ಕೇಸರಿ ಬಣ್ಣವಿದ್ದ ಹೊಳೆವ ಪಿರಾನ ಕೊಕ್ಕೆಯಂಚಿನಲ್ಲಿ ವಿಲ ವಿಲ ಒದ್ದಾಡುತ್ತಿತ್ತು. ಗೈಡ್ ಅದನ್ನು ಎತ್ತಿ ಬಕೆಟ್ ಗೆ ಹಾಕಿಕೊಂಡು, ಮತ್ತೊಂದು ಮಾಂಸದ ಚೂರು ಚುಚ್ಚಿಕೊಟ್ಟ. ನಾನು ನೀರಿನಲ್ಲಿ ಹಿಡುದು ಕುಳಿತಂತೆ ಮೀನುಗಳು ನಿಬಲ್ ಮಾಡುವುದು ತಿಳಿಯುತ್ತಿತ್ತು. ಮೇಲೆತ್ತಿದರೆ ಮಾಂಸ ಮಾಯ! ಪಿರಾನಗಳನ್ನು ಹಿಡಿದ ಬದಲು, ಪಿರಾನಗಳಿಗೆ ಫೀಡ್ ಮಾಡುತ್ತಾ ಕುಳಿತಿದ್ದೆ. ಮಾಲತಿಯೋ ಒಂದಾದ ಮೇಲೊಂದು ನಾಲ್ಕು ಪಿರಾನ ಹಿಡಿದು ಹಾಕಿದರು. “ಅದು ನಿಬಲ್ ಮಾಡುವಾಗ ತಟ್ಟನೆ ಮೇಲಕ್ಕೆ ಎಳೆಯಬೇಕು, ಕೊಕ್ಕೆ ಹೋಗಿ ಬಾಯಿಗೆ ಸಿಕ್ಕಿಕೊಳ್ಳತ್ತದೆ” ಎಂದು ಮೀನು “ಹಿಡಿವ ತಂತ್ರವನ್ನು ವಿವರಿಸಿದರೂ, ನನ್ನಿಂದಂತು ಒಂದು ಮೀನು ಹಿಡಿಯಲಾಗಲಿಲ್ಲ. ’ಪ್ರಾಣಿ ಹಿಂಸೆ ಮಹಾ ಪಾಪ’ ಎಂದು ಬೋಧಿಸಿ ಮೇಲೆದ್ದೆ.

ಈ ಪಾಪದ ಪಿರಾನಗಳನ್ನು ನೋಡಿದರೆ ಅವುಗಳ ರಾಕ್ಷಸ ಕೃತ್ಯ ಕಂಡುಬರುವುದಿಲ್ಲ. ಈ ಅಮೆಜಾನ್ ಜಗತ್ತಿನ ಭಯಂಕರ ಮೀನು-ಪಿರಾನ ಮೀನು. ನೋಡಲು ಸಣ್ಣ ಮೀನೆ, ಹೆಚ್ಚೆಂದರೆ ೫೦-೬೦ ಸೆಂ.ಮೀ. ಉದ್ದ. ಚಪ್ಪಟ್ಟೆ, ಅಗಲ. ಆದರೆ ಇವು ಒಂಟೊಂಟೆ ತಿರುಗುವ ಮೀನುಗಳಲ್ಲ. ಗುಂಪು ಗುಂಪಾಗಿ ತಿರುಗುವ, ಜೊತೆಯಲ್ಲಿ ಬೇಟೆಯಾಡುವ ಪಿರಾನಗಳು ಮನುಷ್ಯನಿರಲಿ, ಎಮ್ಮೆ ಹಸುವಿನಂತಹ ಪ್ರಾಣಿಯಿರಲಿ, ಕ್ಷಣದಲ್ಲಿ ಮಾಂಸವನ್ನು ಕೆರೆದು ತಿಂದು ಮೂಳೆಗಳನ್ನು ಉಳಿಸುತ್ತವೆ.

ಮಧ್ಯಹ್ನದ ಊಟ ಯುಮಯಾಕೋ ಎಂಬ ತಾಣದಲ್ಲಿ ನಡೆಯಿತು. ಇಲ್ಲಿಯೂ ಕಾಡಿನ ಬಿದಿರು ಕೋಲುಗಳಿಂದ ಈಚಲ ಎಲೆಗಳಿಂದ ಮಾಡಿದ ಛಾವಣಿಯ ದೊಡ್ಡ ಹಜಾರ. ಇದರ ಗೋಡೆಗಳೂ ಸೊಳ್ಳೆ ಪರದೆಯವು. ಇನ್ನೂ ಊಟ ಸಿದ್ಧವಾಗಿರಲಿಲ್ಲ. ನದಿಯ ದಂಡೆಯ ಮೇಲೆ ಒಂದು ಎತ್ತರದ ಜಾಗದಲ್ಲಿ ಎರಡು ಹ್ಯಾಮಕ್ ಕಟ್ಟಿದರು. ಬಳಸಿದ ಮೆದು ಬಟ್ಟೆಯ ಹ್ಯಾಮಕ್ ಬಲು ಹಿತವಾಗಿತ್ತು. ಒಂದರಲ್ಲಿ ಒರಗಿದೆ. ತಂಪಾದ ಗಾಳಿ, ಎದುರಿಗೆ ನದಿ, ನದಿಯ ತಟದಲ್ಲಿ ದಟ್ಟ ಮರಗಿಡಗಳು. ತೆರೆದ ಆಕಾಶದಲ್ಲಿ ಬಿಳಿಯ ಮೋಡಗಳು. ಶಾಂತ ನಿಶಬ್ದ ಪರಿಸರ. ಇದೆಲ್ಲ ನಿಜವೆ, ಈ ಕ್ಷಣ ದಿಟವೆ, ಚಿವುಟಿ  ನೋಡಿಕೊಳ್ಳುವ ಬಯಕೆ. ಕಡೆಯ ದಿನ, ಕಡೆಯ ಕ್ಷಣಗಳು. ಇನ್ನೇನು ನಮ್ಮ ಪ್ರವಾಸ ಮುಗಿಯಲಿತ್ತು. ಎರಡು ತಿಂಗಳ ದೀರ್ಘ ಅವಧಿಯ ಪ್ರವಾಸ. ಇದೋ ಮುಗಿದೇ ಹೋಗುತ್ತಿದೆ. ಇಡೀ ವರ್ಷ ಪೆರುವಿನ ಪ್ರವಾಸದ ಬಗ್ಗೆ ಯೋಚಿಸಿದೆ. ಅಂಡೀಸ್ ಪರ್ವತಗಳು, ಪೆರುವಿನ ಪವಿತ್ರ ಕಣಿವೆ, ಅಮೆಜಾನ್ ನದಿ, ಎಲ್ಲವೂ ಕೇವಲ ನನ್ನ ಕನಸಿನಲ್ಲಿದ್ದ ತಾಣಗಳು. ಹೊರಟಂತೆ ದಾರಿ ತೆರೆದಿತ್ತು. ಯೋಜಿಸಿದ್ದಕ್ಕೂ ಹೆಚ್ಚು ಅನುಭವಗಳನ್ನು ಮಡಿಲಲ್ಲಿ ಗಂಟು ಕಟ್ಟಿದ್ದೆ. ಎಷ್ಟು ಹಗುರಾಗಿ ಹಸನಾಗಿ ಬಯಸಿದ್ದಕ್ಕಿಂತ ಹೆಚ್ಚಾಗಿ ನೋಡಿ, ಕಂಡು, ಅನುಭವಿಸಲು ಸಾಧ್ಯವಾಯಿತು.

ಲೇಖಕರು

ಮೈಸೂರಿನಲ್ಲಿ ಹುಟ್ಟಿ ಬೆಳೆದಿರುವ ಲೇಖಕಿ ನೇಮಿಚಂದ್ರ (ಜನನ ೧೯೫೯) ಕನ್ನಡ ಸಾಹಿತ್ಯಿಕ ವಲಯದಲ್ಲಿ ತಮ್ಮ ಸಂವೇದನೆಯ ಕತೆಗಳಿಂದ ಪ್ರಸಿದ್ಧಿಯಾಗಿದ್ದಾರೆ. ಅವರು ಬಿ.ಇ. ಮತ್ತು ಎಂ.ಎಸ್. (ಇಂಜಿನಿಯರಿಂಗ್) ಪದವಿಗಳನ್ನು ಪಡೆದು ಸದ್ಯ ಡಿಸೈನ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ನೇಮಿಚಂದ್ರ ಅವರು ವಿಜ್ಞಾನ ತಂತ್ರಜ್ಞಾನದ ನೀವಿದ್ದೀರಿ, ಮತ್ತೆ ಬರೆದ  ಕಥೆಗಳು, ಒಂದು ಶ್ಯಾಮಲ ಸಂಜೆ  ಎಂಬ ಮೂರು ಕಥಾಸಂಕಲನಗಳನ್ನು ಬರೆದಿದ್ದಾರೆ. ವಿಜ್ಞಾನ, ಕಲೆ, ಪ್ರವಾಸ ಇವರ ಆಸಕ್ತಿಯ ವಿಷಯಗಳಾಗಿವೆ. ನೋವಿಗದ್ದಿದ ಕುಂಚ, ಬೆಳಕಿನೊಂದು ಕಿರಣ, ಮೇರಿ ಕ್ಯೂರಿ, ಥಾಮಸ್ ಆಲ್ವ, ಎಡಿಸನ್ ಇತರ ಪ್ರಮುಖ ಕಥನವನ್ನು ಬರೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದಿರುವರು.

ಆಶಯ

ಈ ಪ್ರವಾಸ ಕಥನದ ಭಾಗವನ್ನು ಅವರ ಪೆರುವಿನ ಕಣಿವೆಯಲ್ಲಿ ಎಂಬ ಕೃತಿಯಿಂದ ಆಯ್ಕೆ ಮಾಡಲಾಗಿದೆ. ಪ್ರವಾಸ ಮಾಡುವುದು ಒಂದು ಹವ್ಯಾಸವಾದರೂ ಕೇವಲ ಸೌಂದರ್ಯದ ದೃಷ್ಟಿ ಮಾತ್ರ ಈ ಕಥನದಲ್ಲಿ ಇಲ್ಲ. ಕುತೂಹಲದ ವಸ್ತು-ವಿಷಯಗಳನ್ನು ವೀಕ್ಷಿಸುತ್ತ ಸಾಪೇಕ್ಷ ದೃಷ್ಟಿಯನ್ನು ಉಳ್ಳವರಾಗಿದ್ದಾರೆ. ಆಧುನಿಕತೆಯಿಂದ ದೂರವಿರುವ ಪೆರುವಿನ ನಾಡು-ನಾಡಿಗರ ಬಗ್ಗೆ ಲೇಖಕಿಗೆ ಅಪಾರ ಪ್ರೀತಿಯಿದೆ ಎಂಬುದನ್ನು ಇಲ್ಲಿ ಕಾಣಬಹುದು.

ಶಬ್ದಕೋಶ

ನೇಟಿವ್ಸ್ = ಸ್ಥಳೀಯ ಜನರು. ಅನಕೊಂಡ = ಒಂದು ಜಾತಿಯ ಹಾವು. ಜೆಲ್ಲೆ = ರಸತೆಗೆದ ಸಿಪ್ಪೆ. ಪಿರಾನ = ಒಂದು ಜಾತಿಯ ಮೀನು. ಹ್ಯಾಮಕ್ = ಜೋಕಾಲಿ, ವಾತರ್ ಲಿಲಿ = ಒಂದು ಜಾತಿಯ ಸಸ್ಯ, ಅಗಲವಾದ ಎಲೆಗಳಿರುವ ಸಸ್ಯ.

ಪ್ರಶ್ನೆಗಳು

೧. ಜಂಗಲ್ ಲಾಡ್ಜಿನಲ್ಲಿ ಲೇಖಕಿಗೆ ಆದ ಅನುಭವಗಳನ್ನು ಬರೆಯಿರಿ.

೨. ಜಂಗಲ್ ಲಾಡ್ಜಿನಲ್ಲಿ ತಂಗಿದ್ದಾಗ ಲೇಖಕಿ ಓದಿದ ಕಥೆಯ ವಿಶೇಷವೇನು?

೩. ಅಮೆಜಾನ್ ಕಾಡಿನಲ್ಲಿ ಅಲೆದ ಲೇಖಕಿಯ ಅನುಭವಗಳನ್ನು ವಿವರಿಸಿರಿ.

೪. ಕಬ್ಬಿನ ರಸ ತೆಗೆಯುವ ಯಂತ್ರವನ್ನು ಸ್ಥಳೀಯರು ಹೇಗೆ ಸಿದ್ಧಪಡಿಸಿದ್ದರು?

೫. “ಸಂತ ಮೆರಿಯ” ಎಂಬ ಹಳ್ಳಿಯಲ್ಲಿ ಲೇಖಕಿಗಾದ ಅನುಭವಗಳನ್ನು ಬರೆಯಿರಿ.

೬. ಅಮೆಜಾನ್ ನೇಟಿವ್ಸ್ ನಡುವೆ ಲೇಖಕಿಗಾದ ಅನಿಭವಗಳ ವಿಶೇಷತೆ ಏನು?

೭. ಅಮೆಜಾನ್ ನದಿ-ಕಾಡಿನಲ್ಲಿ ಪ್ರವಾಸ ಮಾಡುವಾಗ ಲೇಖಕಿಯ ಪ್ರತಿಕ್ರಿಯೆಗಳ ವಿಶೇಷತೆಯೇನು?

 

ಹೆಚ್ಚಿನ ಓದು

ನೇಮಿಚಂದ್ರ : ಪೆರುವಿನ ಕಣಿವೆಯಲ್ಲಿ-ಪ್ರವಾಸ

ರಹಮಾತ್ ತರೀಕೆರೆ : ಅಂಡಮಾನ್ ಕನಸು- ಪ್ರವಾಸ

ಕೆ.ಪಿ. ಪೂರ್ಣಚಂದ್ರ ತೇಜಸ್ವಿ : ಅಲೆಮಾರಿ ಅಂಡಮಾನ್ – ಪ್ರವಾಸ