ಸ್ವಾತಂತ್ರ್ಯೋತ್ತರ ಕಾಲ ಬಹು ವೇಗದ ಬದಲಾವಣೆಗಳನ್ನು ಕಂಡಿದೆ. ಈ ಶತಮಾನದ ಪ್ರಾರಂಭದ ದಶಕಗಳಲ್ಲಿನ ಮಂದಗತಿ ಐವತ್ತು, ಅರವತ್ತರ ದಶಕದ ನಂತರ ವೇಗವಾಯಿತು. ಕರ್ನಾಟಕದಲ್ಲಿ ಚಿತ್ರಕಲಾ ರಂಗದಲ್ಲಿ ಹೊಸ ನೋಟಗಳನ್ನು ನೀಡಿ, ಪರಿಸರವನ್ನೇ ಬದಲಿಸಿದ ಕಲಾವಿದ ಆರ್.ಎಂ. ಹಡಪದ್. ಕಲೆ ಬದುಕಿನ ಒಂದು ಭಾಗ; ಸಮಾಜ ಮತ್ತು ಬದುಕು ಬದಲಾದಂತೆ ಅದೂ ಬದಲಾಗಬೇಕು. ಅದಕ್ಕೆ ಒಂದು ನೆಪ, ಪ್ರೇರಣೆ, ಚಾಲನ ಶಕ್ತಿ ಬೇಕು. ಆ ಕಾರ್ಯವನ್ನು ಹಡಪದರ ಕಲಾಪ್ರತಿಭೆ ಮಾಡಿತು. ಎಲ್ಲ ಕಲೆಯೂ ತನ್ನ ಗತಕಾಲದ ಸತ್ವವನ್ನು ಹೀರಿ ಬೆಳೆಯುತ್ತದೆ. ಹಿಂದಿನ ತಲೆಮಾರು ಮುಟ್ಟಿದ ಘಟ್ಟ ಮುಂದಿನ ತಲೆಮಾರಿಗೆ ಆರಂಭದ ಮೆಟ್ಟಿಲಾಗುತ್ತದೆ. ಆದ್ದರಿಂದ ಕಲಾವಿದನೊಬ್ಬನ ಬದುಕು ಸಾಧನೆಗಳ ಪರಿಶೀಲನೆಯಲ್ಲಿ ವರ್ತಮಾನದ ಸ್ಥಿತಿಗೆ ಗತಕಾಲದ ವಿಕಾಸದ ಕೊಡುಗೆಯೂ ಗಮನಾರ್ಹವಾಗುತ್ತದೆ. ಸಾಂಸ್ಕೃತಿಕ ಪರಿಸರದಲ್ಲಿ ಬದಲಾಗುತ್ತಿರುವ ಕಲೆಯ ಸ್ಥಿತಿಗತಿಗಳೂ ಮುಖ್ಯವಾಗಿತ್ತವೆ. ಏಕೆಂದರೆ ಕಲಾವಿದ ಪರಿಸರದ ಮಗು.

ಬಾದಾಮಿ ಹಡಪದ್ ಅವರು ಹುಟ್ಟಿದ ಊರು. ಬಾಲ್ಯ ಕಳೆದದ್ದು ಅಲ್ಲಿ. ಮೊದಲು ಶಾಲೆ ಕಲಿತದ್ದು ಅಲ್ಲಿ. ಮೂಲ್ಕಿ ಪರೀಕ್ಷೆವರೆಗೆ. ಅನಂತರ ಗುಳೇದದುಡ್ಡ, ಮತ್ತೆ ಬಾಗಲಕೋಟೆ ಬಸವೇಶ್ವರ ಹೈಸ್ಕೂಲ್‌ನಲ್ಲಿ  ವಿದ್ಯಾಭ್ಯಾಸ. ಎಸ್.ಎಲ್.ಸಿ.ಗೆ ಒಂದು ಐಚ್ಛಿಕ ವಿಷಯವಾಗಿ ಚಿತ್ರಕಲೆ ತೆಗೆದುಕೊಂಡಿದ್ದರು. ಎಸ್.ಎಲ್.ಸಿ.ಯಲ್ಲಿ ಉತ್ತೀರ್ಣರಾಗುವ ಮೊದಲೇ ಖಾಸಗಿಯಾಗಿ, ಟಿ.ಪಿ. ಅಕ್ಕಿಯವರ ಗದಗದ ವಿಜಯಾ ಕಲಾ ಮಂದಿರದಿಂದ ಮುಂಬಯಿಯ ಜೆ.ಜೆ. ಕಲಾ ಶಾಲೆಯ ಒಂದು ಪರೀಕ್ಷೆಗೆ ಕಟ್ಟಿ ಉತ್ತೀರ್ಣರಾಗಿದ್ದರು. ಎಸ್.ಎಲ್.ಸಿ.ಯ ನಂತರ ಮಿಣಜಿಗಿಯವರ ಹುಬ್ಬಳ್ಳಿ ಕಲಾಮಂದಿರದಿಂದ ಇಂಟರ್ ಮಿಡಿಯೇಟ್ ಮತ್ತು ಅಡ್ವಾನ್ಸ್ಡ್ ಪೇಂಟಿಂಗ್ ಮಾಡಿ, ಜೆ.ಜೆ ಕಲಾ ಶಾಲೆಯ ಡಿಪ್ಲೋಮಾ ಮುಗಿಸಿದರು. ಅಲ್ಲಿಂದಲೇ ಡಿ.ಟಿ.ಸಿ. ಮತ್ತು ಎ.ಎಂ. ಮಾಡಿದರು. ಇದು ಔಪಚಾರಿಕ ಶಿಕ್ಷಣದ ಚೌಕಟ್ಟು ಮಾತ್ರ. ಅವರು ಶಾಲೆಯಲ್ಲಿ ಕಲಿತದ್ದು ಅಲ್ಪ. ಅದೂ ಅಕಾಡೆಮಿಕ್ ವಾತಾವರಣದ್ದು. ಅವರ ಕಲಾಭ್ಯಾಸದ ಜೀವಂತ ಶಾಲೆ ಬಾದಾಮಿ, ಬಾಲ್ಯದ ದಿನಗಳು. ಅಲ್ಲಿನ ಆಟ, ನೋಟ, ಉತ್ಸಾಹದ ಸಾಹಸಗಳು, ಪಡೆದ ಅನುಭವಗಳು ಕಲಾವಿದ ಹಡಪದರನ್ನು ರೂಪಿಸಿದವು. ಒಳಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರಿದವು. ಅಂದಿನಿಂದ ಇಂದಿನವರೆಗೂ ಪ್ರಭಾವ ಬೀರುತ್ತಲೇ ಬಂದಿವೆ. ಪ್ರಪಂಚದ ಬಹುತೇಕ ಕಲಾವಿದರ ಮೇಲಾದ ಬಾಲ್ಯದ ದಿನಗಳ ಪ್ರಭಾವವನ್ನು, ಒಂದಲ್ಲ ಒಂದು ಬಗೆಯಲ್ಲಿ ಕಾಣಬಹುದು. ಅವರ ಕಲಾ ರಚನೆಗಳ ವಿಶ್ಲೇಷಣೆಗೆ ಈ ಮೂಲ ಸೆಲೆಯ ಅರಿವು ನೆರವಾಗುತ್ತದೆ. ಮಕ್ಕಳ ಮನಸ್ಸಿಗೆ ಅನುಭವಗಳೆಲ್ಲ ಜೀವಂತ. ಜಡ, ಜೀವ ಎಂಬ ಭೇದ ಇರುವುದಿಲ್ಲ. ಮರ ಗಿಡ ಬಂಡೆ ಕೋಲು ಎಲ್ಲ ಚೈತನ್ಯಶೀಲ. ಎಳೆಯ ಮನಸ್ಸಿಗೆ ಜ್ಞಾನೇಂದ್ರಿಯಗಳ ಭೇದವಿಲ್ಲ. ಇಡಿಯಾಗಿ ಅನುಭವಿಸುವ ಶಕ್ತಿ ಇರುತ್ತದೆ. ನೋಡಿದ್ದನ್ನು, ಅನುಭವಿಸಿದ್ದನ್ನು ಇಡಿಯಾಗಿ ಅದರ ಸತ್ವವನ್ನು ಹೀರಿ ಸುಪ್ತ ಪ್ರಜ್ಞೆಯಲ್ಲಿ ಹಿಡಿದಿಡುತ್ತದೆ. ಅದರಲ್ಲೂ ದೃಶ್ಯಾನುಭವಗಳು. ದೊಡ್ಡವರಲ್ಲಿ ಕಲಾವಿದರಲ್ಲಿ ಮಾತ್ರ ಇಂಥ ಗುಣ ಕಾಣಬಹುದು. ಮಕ್ಕಳ ಮನಸ್ಸು ಆ ಬಗೆಯದು. ಅವರಲ್ಲಿ ಯಾರಲ್ಲಿ ದೃಶ್ಯ ಶಕ್ತಿ ಪ್ರಬಲವಾಗಿದೆಯೋ ಅವರು ಮುಂದೆ ಕಲಾ ರಚನೆಗಳಲ್ಲಿ ಅವನ್ನು ಬಳಸಿಕೊಳ್ಳಬಹುದು. ಅದು ಅಪ್ರಜ್ಞಾಪೂರ್ವಕವಾಗಿಯೂ ಪ್ರಭಾವ ಬೀರಬಹುದು. ಹಡಪದರ ಮೇಲೆ ಬಾದಾಮಿಯ ಬಾಲ್ಯದ ದಿನಗಳ ಪ್ರಭಾವ ಅಂತಹುದು.

ಬಾದಾಮಿಯ ಬಂಡೆಗಳಲ್ಲಿ ಕರ್ನಾಟಕದ ಕಲೆ ಅರಳಿದೆ. ಅದೇ ಮಣ್ಣಿನಿಂದ ಹಡಪದ ಅವರೂ ಬಂದವರು ಎಂದಾಗ ಒಂದು ಪರಂಪರೆಯ ನಿರಂತರತೆಯ, ಮುಂದುವರಿಕೆಯ, ಚಾಲುಕ್ಯ ಶೈಲಿಯಿಂದ ಆಧುನಿಕ ಅಮೂರ್ತ ಕಲೆಯವರೆಗಿನ ಒಂದು ಅವರ್ತನದ ಅರಿವಾಗುತ್ತದೆ. ಬಾದಾಮಿಯ ಬಂಡೆಗಳು, ಸುತ್ತಲ ಪರಿಸರ ನಿಸರ್ಗದ ಕಲಾ ಸೃಷ್ಟಿಯಾದರೆ, ಬಾದಾಮಿ ಗುಹೆಗಳಲ್ಲಿ ಅದ್ಭುತ ಶಿಲ್ಪಗಳು ಮಾನವ ಸೃಷ್ಟಿ. ಬಂಡೆ, ಗುಹಾಶಿಲ್ಪ, ಬದುಕಿನ ಅನುಭವಗಳ ಸಾಂಸ್ಕೃತಿಕ ಪರಿಸರ ಹಡಪದರ ಕಲಾ ರಚನೆಗಳ ಮೂಲ ಸೆಲೆಯಾಗಿವೆ.

ಕರ್ನಾಟಕದ ಕಲಾ ಪರಂಪರೆಯ ಮತ್ತು ಬದುಕಿನ ಸತ್ವ ಭಾರತೀಯತೆಯ ಭಾಗವೆ. ಹಡಪದರಿಗೆ ಆಧುನಿಕತೆ, ನವ್ಯತೆ ಎಂಬುದು ಒಂದು ಬೆಳವಣಿಗೆ. ಬಾದಾಮಿಯ ಬೇರಿನ ಬೆಳವಣಿಗೆ, ಕೃತಕ ಪಾಶ್ಚಾತ್ಯ ಅನುಕರಣ ಅಲ್ಲ.

ಬಾದಾಮಿ ಒಂದು ಕಾಲಕ್ಕೆ ಚಾಲುಕ್ಯರ ರಾಜಧಾನಿಯಾಗಿದ್ದ ಇತಿಹಾಸ ಪ್ರಸಿದ್ಧ ಸ್ಥಳ. ಅರ್ಧವರ್ತುಲಾಕಾರದ ಕೆರೆಯ ಬದಿಗೆ ಊರು, ಆಚೆಗೆ ಮೂರು ಕಡೆಗೆ ಕಡಿದಾದ ಬೆಟ್ಟಗಳು, ನೈಸರ್ಗಿಕವಾದ ಗೋಡೆಗಳಂತೆ. ಹಿಂದೆ ಕೋಟೆ, ಊರಿನ ಕೋಟೆ. ಕಂದಕ ಎಲ್ಲವನ್ನೂ ಈಗ ಕೆಡವಲಾಗಿದೆ. ಬಗೆ ಬಗೆಯ ಗಾತ್ರದ, ಆಕಾರದ ಬಂಡೆಗಳು ಒಂದಕ್ಕೊಂದು ಒತ್ತಾಗಿ ಕೂಡಿ, ಕೆಲವೆಡೆ ಸಂದುಗಳಲ್ಲಿ ಗಿಡಗಳು ಬೆಳೆದು, ಒತ್ತಾಗಿ ಕೂಡಿ ನಿಂತು ನೈಸರ್ಗಿಕ ಗೋಡೆ ನಿರ್ಮಾಣಗೊಂಡಿರುವಂತೆ ಅನಿಭವ. ಈ ಬಂಡೆಗಳ ದೃಶ್ಯ ಅನಂತ, ವೈವಿಧ್ಯಮಯ. ಋತು ಋತುವಿಗೂ ಬದಲಾಗುವ ದೃಶ್ಯಗಳು. ಬಂಡೆಗಳ ಮೇಲೆ ಮಳೆ ಬಿದ್ದು, ನೀರು ಸೇರಿ, ಪಾಚಿ, ಕಲ್ಲುಹೂ ಬೆಳೆದು ಉಂಟಾಗುವ ಬಿಡಿ ಬಿಡಿ ತಾಣಗಳ ಬಣ್ಣಗಳ ಬೆಡಗು. ಮುಂಜಾನೆ, ಮಧ್ಯಾಹ್ನ, ಸಂಜೆ, ಮಳೆಗಾಲ, ಮುಂಜು ಸುರಿದಾಗ ಮುಂತಾಗಿ, ಜೀವಂತವಾಗಿ ನಿಮಿಷ ನಿಮಿಷಕ್ಕೂ ಬದಲಾಗುವ ಅವುಗಳ ಸ್ವರೂಪ. ಸೂರ್ಯೋದಯ ಒಂದು ದಿನದಂತೆ ಮುತ್ತೊಂದು ದಿನ ಇಲ್ಲ. ಏಕೆಂದರೆ ಪ್ರಕೃತಿಯ ಸಂಬಂಧಗಳು ಭಿನ್ನ ಭಿನ್ನವಾಗಿರುತ್ತವೆ. ಮೇಲೆ ಆಕಾಶದಲ್ಲಿ ಬಿಳಿ ಮೋಡಗಳು ತೇಲುವಾಗಿನ ಕೆಳಗಿನ ಬಂಡೆಗಳು, ಮಳೆಗಾಲದ ಕಪ್ಪು ಮೋಡಗಳು ಕೆಳಕೆಳಗೆ ಇಳಿದು ಮಳೆ ಸುರಿಯುವಾಗಿನ ದೃಶ್ಯ. ಮಂಜು, ಮಂಜಿನ ಮೇಲೆ ಬಿದ್ದಿರುವ ಬಿಸಿಲು ಮೂಡಿಸುವ ದೃಶ್ಯ. ಬಂಡೆಗಳು ಸ್ಥಿರವಾಗಿ ನಿಂತಿರುತ್ತವೆ. ಮೋಡಗಳು ಚಲಿಸುತ್ತಿರುತ್ತವೆ. ಬಂಡೆಗಳ ಕಂದು, ಕೆಂಪು ಹಾಗೂ ಮೋಡಗಳ ಬಿಳಿ, ಕಪ್ಪು, ನೀಲಿ ವರ್ಣಛಾಯೆಗಳು ಎಲ್ಲವೂ ನಮ್ಯ, ಜಡವಲ್ಲ, ಚಲಿಸುತ್ತಿರುವಂತೆ ಎನಿಸುತ್ತೆ; ಜೀವಂತಿಕೆಯ, ನಿಸರ್ಗ ಚೈತನ್ಯದ ಅನುಭವ. ಬಂಡೆಗಳ ವರ್ಣಛಾಯೆಗಳು ಅನಂತ. ಕಂದು, ತಿಳಿಕೆಂಪು, ಕಿತ್ತಳೆ. ನೆರಳು ಬೀಳುವ ಕಡೆ ನೇರಳೆ. ಜೊತೆಗೆ ಒಣ ಎಲೆಹಸಿರು ಬಣ್ಣ. ಋತು ಬದಲಾದಂತೆ ಹಸಿರಿನಲ್ಲೂ ಹಲವೂ ಬಗೆ. ಚಿಗುರು ಹಸಿರು, ಗಾಢ ಹಸಿರು, ಕೊಂಚ ಕಂದು ಬಣ್ಣಕ್ಕೆ ತಿರುಗಿದಾಗ ಇಡೀ ದೃಶ್ಯ ಹೊಸ ಸಂಯೋಜನೆಯ ಅನುಭವ ಕೊಡುತ್ತದೆ. ಕೆರೆ ನೀರಿನ ಬಣ್ಣವೂ ಹಸಿರಾಗಿ ಕಾಣುತ್ತದೆ. ಇದಕ್ಕೆ ವನಸ್ಪತಿಗಳು ಕಾರಣ. ಆಕಾಶ, ಬಂಡೆಗಳು, ಕೆರೆ ಇವು ಒಂದಕ್ಕಂದು ವೈದೃಶ್ಯ ಸೃಷ್ಟಿಸಿ ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರುತ್ತವೆ, ಆಳ ಮನಸ್ಸಿಗೆ ಇಳಿದು ನಿಲ್ಲುತ್ತವೆ.

ಸಂದಿಗೊಂದಿಗಳಲ್ಲಿ ಓಡಾಡುತ್ತಾ, ಬಂಡೆ ಕಾಡುಗಳಲ್ಲಿ ಚಿಟ್ಟೆ ಜೇನು ಸಂಗ್ರಹಿಸುತ್ತಿದ್ದ, ಗೂಡುಗಳಲ್ಲಿ ಕೈಹಾಕಿ ಹಿಂಡಿ ಜೇನು ನೆಕ್ಕುತ್ತಿದ್ದ ಬಾಲ್ಯದ ಸಾಹಸಗಳು. ಮಳೆ ಬಂದಾಗ ಬಂಡೆಗಳ ನಡುವಿನ ವನಸ್ಪತಿಗಳಿಂದ ಒಂದು ಬಗೆಯ ಎಣ್ಣೆಯಂತಹ ದ್ರವ ಹರಿದು ಚಿನ್ನದ ಬಣ್ಣದಿಂದ ಹೊಳೆಯುವುದು.  ಬಂಡೆಗಳ ಮೇಲೆ ಅಲ್ಲಲ್ಲಿ ಮರಳು, ಅಲ್ಲಲ್ಲಿ ನೀರಿನ ಕುಂಡಗಳು. ಆಟವಾಡುವ ಹುಡುಗರು ಹೊರಳಾಡಿದಾಗ ಮೈಯೆಲ್ಲ ಬಂಗಾರದ ಬಣ್ಣ. ಇವೆಲ್ಲ ಹಡಪದರ ಸ್ಮೃತಿ ಪಟಲಗಳಲ್ಲಿ ನಿಚ್ಚಳವಾಗಿ ಈಗಲೂ ಉಳಿದಿವೆ.

ಬಾಲ್ಯದಿಂದಲೂ ಹಡಪದರ ದೃಕ್ ಗ್ರಹಣಶಕ್ತಿ ಪ್ರಬಲವಾದದು. ಸಣ್ಣ ಬಾಲಕ. ಅಕ್ಷರ ಕಲಿಸಲು ತಂದೆ ಬಾಳಾಚಾರ್ ಮಾಸ್ತರರ ಬಳಿ ಕರೆದೊಯ್ದರು. ಕಲಿಕೆಯ ಪ್ರಾರಂಭ ಸಾಂಪ್ರದಾಯಿಕವಾಗಿ ಆಗಬೇಕೆಂದು ತಂದೆಯ ಬಯಕೆ. ಮಾಸ್ತರರು ಶಿಷ್ಯ ನನ್ನು ಎದುರಿಗೆ ಕೂರಿಸಿ ವಿಧಿವತ್ತಾಗಿ ವಿದ್ಯಾಭ್ಯಾಸಕ್ಕೆ ನಾಂದಿ ಹಾಕಿದರು. ಸೆಗಣಿ ಸಾರಿಸಿದ ಹಸಿರು ನೆಲದ ಮೇಲೆ ಕೆಂಪು ಸುಣ್ಣದಿಂದ ಒಂದು ವೃತ್ತ ಬರೆದರು. ನಡುವೆ ಆ ಬರೆದರು. ಬಾಲಕನಿಗೆ ಕಂಡದ್ದು ಅಕ್ಷರವಲ್ಲ. ಹಸಿರುಬಣ್ಣ ಕೆಂಪು ವೃತ್ತ, ಅಕ್ಷರದ ಆಕಾರಗಳು. ಆ ವಯಸ್ಸಿಗೆ ಬಾಲಕನಿಗೆ ಬಣ್ಣ, ಆಕಾರಗಳ ಸೂಕ್ಮ ಸಂವೇದನೆ. ಅದು ಸಹಜವಾಗಿ ಬಂದಿತ್ತು. ವಂಶದಿಂದ ಬಂದದ್ದೆ ಎಂದರೆ ಮನೆಯಲ್ಲಿ ಸಂಗೀತದಲ್ಲಿ ಎಲ್ಲ ಆಸಕ್ತರು. ಕಲೆಯ ಸಂಸ್ಕಾರಕ್ಕೆ ಅಲ್ಲಿನ ಸಾಂಸ್ಕೃತಿಕ ಪರಿಸರ ಕಾರಣ ಎನಿಸುತ್ತದೆ.

ಹಡಪದ್ ಅವರು ರಚಿಸಿದ ನಿಸರ್ಗ ದೃಶ್ಯಗಳಲ್ಲಿ ಬಾಲ್ಯದ ಅನುಭವಗಳ ಪ್ರಭಾವ ಬಗೆ ಬಗೆಯಾಗಿ ಸೇರಿ ಮೂಡಿಬಂದಿದೆ. ಬಂಡಿಗಳ ಗಾತ್ರದ ದೃಢತೆ, ಘನತೆ solidity, ಹಿಂದೆ ವಿವರಿಸಿದಂತಹ ಬದಲಾಗುವ ನಮ್ಮ ಗುಣ, plasticity, ಬಣ್ಣದ ತುಣುಕು ತಾಣಗಳು, patches, ಆಕಾರಗಳ ರೇಖಾತ್ಮಕತೆ, ಒಂದಕ್ಕೊಂದು ಒತ್ತಿನಿಲ್ಲುವ ಬಗೆಗಳು ಇವೆಲ್ಲಾ ನಿಸರ್ಗ ದೃಶ್ಯಗಳಲ್ಲಿ ಅಲ್ಲದೆ, ಅವರ ಅಮೂರ್ತ ಚಿತ್ರಗಳಲ್ಲೂ ಕಾಣಿಸಿ ಕೊಳ್ಳುತ್ತವೆ. ವಿದ್ಯಾರ್ಥಿಯಾಗಿದ್ದ ಕಾಲದಲ್ಲೇ ನಿಸರ್ಗ ಚಿತ್ರಗಳನ್ನು ರಚಿಸುತ್ತಿದ್ದರು, ಆನಂತರವೂ ರಚಿಸಿದ್ದಾರೆ. ಬಾದಾಮಿ ಮಾತ್ರವಲ್ಲ, ಹಂಪಿ, ರಾಮನಗರ ಬಂಡೆಗಳ ದೃಶ್ಯಗಳನ್ನೂ ರಚಿಸಿದ್ದಾರೆ. ಅವುಗಳ ಬೇರೆ ಬೇರೆ ಸರಣಿ ಚಿತ್ರಗಳಿವೆ. ಮೊದ ಮೊದಲ ರಚನೆಗಳು ಅಭ್ಯಾಸ ಚಿತ್ರಗಳು. ಆನಂತರದಲ್ಲಿ ಬಾದಾಮಿಯ ಬಗೆಬಗೆಯ ವಾತಾವರಣವನ್ನು, ಭಾವನೆಗಳನ್ನು ಹಿಡಿದಿರುವುದನ್ನು, ತಂದಿರುವುದನ್ನು ಕಾಣಬಹುದು. ವಸ್ತುನಿಷ್ಠ ವಾಸ್ತವವಾದೀ ರೀತಿಯವು ಕಡಿಮೆ. ಭಾವನಾತ್ಮಕವಾಗಿ ರಚಿಸಿದಾಗ ದೃಶ್ಯದ ಬಿಡಿ ಬಿಡಿ ಭಾಗಕ್ಕಿಂತ ಒಟ್ಟು ಪರಿಣಾಮದ ಕಡೆ ಗಮನ. ಮುರಿದು, ತೆಗೆದು ಪುನರ್ ಸೃಷ್ಟಿಸುವ ವಿಧಾನ. ಬಂಡೆ ಮುಂತಾದ ಆಕಾರಗಳ ರಚನೆಯಲ್ಲಿ ಅಂಚುಗಳ ರೇಖೆ ಪ್ರಧಾನವಾಗುವುದೂ, ಮನೆ ರಸ್ತೆ ತೋರುವಲ್ಲಿ ತುಂಡು ರೇಖೆಗಳ ಬಳಕೆಯೂ ಕಣ್ನೆಲೆ ದೃಷ್ಟಿಯಿಂದ ಮಾತ್ರವಲ್ಲದೆ ಭಾವಾಭಿವ್ಯಕ್ತಿ ದೃಷ್ಟಿಯಿಂದಲೂ ಮುಖ್ಯವಾಗುತ್ತವೆ. ಕೆಲವು ರಚನೆಗಳಲ್ಲಿ ರೇಖೆಗೆ ಒತ್ತಿದ್ದರೆ, ಕೆಲದಲ್ಲಿ ಬಣ್ಣಕ್ಕೆ ಒತ್ತು ಇರುತ್ತೆ. ಭಾಗಗಳು, ಬಣ್ಣಗಳು ಪರಸ್ಪರ ಸಂಬಂಧ ಹೊಂದಿ ಬೆಳೆಯುತ್ತವೆ. ಒಂದು ರಚನೆಯಲ್ಲಿ ಬಾದಾಮಿಯ ಕೆರೆ, ಊರು ಇದ್ದು ಅದರಾಚೆಯ ಗುಡ್ಡ ಬೆಟ್ಟಗಳನ್ನೇ ಕೈ ಬಿಟ್ಟಿದ್ದಾರೆ, ಸಂಯೋಜನೆಯ ದೃಷ್ಟಿಯಿಂದ. ಅಪರೂಪಕ್ಕೆ ಶುದ್ಧ ಅಕಾಡೆಮಿಕ್ ಪದ್ಧತಿಯಲ್ಲಿ ಮಾಡಿದ ಲ್ಯಾಂಡ್ ಸ್ಕೇಪ್ ಒಂದಿದೆ. ಆದರೆ ಅದು ಹಡಪದ್ ಶೈಲಿ ಅಲ್ಲ. ದೃಶ್ಯದ ವಿವರಗಳನ್ನು ಬಿಡಿಸುವುದು ಅವರ ಸ್ವಭಾವ ಅಲ್ಲ. ಸರಳೀಕರಣ, ಕನಿಷ್ಠ ರೇಖೆಗಳಿಗೆ ಇಳಿಸುವುದು, ಅಮೂರ್ತತೆಯತ್ತ ವಾಲುವುದು ಅವರ ರೀತಿ. ನಯಗಾರಿಕೆಗಿಂತ ಭಾವಸ್ಪಂದಿಸುವ ಬಿರುಸುಗಾರಿಕೆ, ಸಮತೋಲ ಸಾಧಿಸಿದ, ತುಷ್ಟಿ ನೀಡುವ ವಿಶಾಲ ದೃಶ್ಯಗಳ ಅನುಭವ ಅವರ ನಿಸರ್ಗ ದೃಶ್ಯಗಳಿಂದ ಆಗುತ್ತದೆ. ರಾಮನಗರದ ಒಮ್ದು ಬಂಡೆಯೇ ಚಿತ್ರದ ವಸ್ತುವಾಗಿರುವುದುಂಟು. ಚಿತ್ರವನ್ನೂ ಕಾವ್ಯವಾಗಿಸಿರುವುದುಂಟು. ಬೆಂಗಳೂರಿಗೆ ಬಂದನಂತರ ನೆನಪಿನಿಂದ ಬಾದಾಮಿ ದೃಶ್ಯಗಳನ್ನು ಬಿಡಿಸಿದ್ದಾರೆ. ಅಚ್ಚೊತ್ತಿದ್ದ ನೆನಪುಗಳು. ಅಲ್ಲೆಲ್ಲಾ ಒಂದು ಚಿತ್ತ ಸ್ಥಿತಿಯ ಭಾವಾಭಿವ್ಯಕ್ತಿ, ಅಥವಾ ರೂಪಕ್ಕೆ ಸಂಬಂಧಿಸಿದ ಚಿಂತನೆ ಮೂಡಿರುತ್ತದೆ.

ಹಡಪದರು ಬೆಂಗಳೂರಿಗೆ ಬಂದ ನಂತರವೂ ಹಲವು ವರ್ಷಗಳು ಬಾದಾಮಿಯ ಶಿಲ್ಪಶೈಲಿಯ ಪ್ರಭಾವದಿಂದ ಬಿಡಿಸಿಕೊಳ್ಳಲಾಗಲಿಲ್ಲ. ಅವರ ರಚನೆಗಳಲ್ಲಿ ಪರೋಕ್ಷವಾಗಿ ಪ್ರಭಾವವಿದೆ. “ಸಮುದಾಯ” ಪ್ರಾರಂಭಕ್ಕೂ ವರ್ಷಗಳ ಮೊದಲು ಪ್ರಸನ್ನ ಅವರ ಸಂಪರ್ಕ ಆದ ನಂತರವೇ ಉದ್ದೇಶ ಪೂರ್ವಕವಾಗಿ ಆಕೃತಿಗಳನ್ನು ವಿರೂಪಗೊಳಿಸಿ ಹಿಂದಿನ ರೀತಿ, ಶೈಲಿಗಿಂತ ಭಿನ್ನತೆ ಸಾಧಿಸುವ ಪ್ರಯತ್ನ ಮಾಡಿದುದು. ಕಂಡ, ಗ್ರಹಿಸಿದ ಯಾವುದೇ ಆಕಾರಗಳನ್ನು ಪರಿವರ್ತಿಸಿ ಪುನರ್ ಸೃಷ್ಟಿಸುವ ಪ್ರಯತ್ನಗಳೂ ಅನಂತರದ್ದೇ.

ಆ ಕಾಲದಲ್ಲಿ ವಿದೇಶೀ ಕಲಾವಿದರು, ಕೆಲವೊಮ್ಮೆ ಕಲಾ ಇತಿಹಾಸಕಾರರು ಇವರಿಂದ ಶಿಲ್ಪಗಳ, ರೂಪಿಕೆಗಳ ರೇಖಾಚಿತ್ರ ಬರೆಸಿಕೊಳ್ಳುತ್ತಿದ್ದರು. ಇವರ ಕೌಶಲ, ಖಚಿತತೆ, ರೇಖೆಗಳ ದೃಢತೆ, ಪರಿಪೂರ್ಣತೆ ಅವರ ಉದ್ದೇಶಕ್ಕೆ ಅನುಗುಣವಾಗಿದ್ದವು. ಆ ಕಲಾವಿದರೂ ಕರಡು ಚಿತ್ರಗಳನ್ನು ಮಾಡಿಕೊಳ್ಳುತ್ತಿದ್ದರು, ಬಹು ಶೀಘ್ರವಾಗಿ. ಈ ಪ್ರತಿಕೃತಿಗಳನ್ನು  ತೆಗೆಯುವದಕ್ಕೆ ಹಡಪದರಿಗೆ ಹೆಚ್ಚು ಕಾಲಾವಕಾಶ ಇರುತ್ತಿರಲಿಲ್ಲ. ಬೇಗ ಬೇಗ ಬಿಡಿಸುವುದೇ ಅಭ್ಯಾಸವಾಯಿತು. ಹಡಪದರ ಈ ಸ್ವಭಾವಕ್ಕೆ, ಬಾಲ್ಯದಿಂದ ರೂಢಿಯಾದ ಈ ರಚನಾ ವಿಧಾನಕ್ಕೆ ಇನ್ನೂ ಒಂದು ಹಿನ್ನೆಲೆ, ಕಾರಣವಿದೆ. ಊರಿನಲ್ಲಿ ಒಕ್ಕಲುತನ ಎಲ್ಲರದು. ಶ್ರೀಮಂತರ ಮನೆಯ ಹೆಂಗಸರು, ಬಿಡುವಿರುತ್ತಿದ್ದ ಕಾಲದಲ್ಲಿ ಬಟ್ಟೆ ಚಿತ್ತಾರಗಳಿಗೆ, ರಂಗವಲ್ಲಿಗೆ ಬಗೆ ಬಗೆಯ ವಿನ್ಯಾಸಗಳನ್ನು ಬರೆಸಿಕೊಳ್ಳಲು ಇವರ ಬಳಿ ಬರುತ್ತಿದ್ದರು. ಅವರಿಗೆಲ್ಲಾ ಎದುರಿಗೇ ವಿನ್ಯಾಸ ರಚಿಸಿ ಕೊಡಬೇಕಿತ್ತು. ಒಂದಾದ ಮೇಲೆ ಮತ್ತೊಂದು ಬಗೆ, ಭಿನ್ನವಾಗಿರಬೇಕು. ಹೊಸ ಹೊಸದಾಗಿ ಆಲೋಚನೆ ಮಾಡಿ ರಚಿಸಿ ಕೊಡಬೇಕು. ಅಲ್ಲದೆ ಎಷ್ಟೋ ವೇಳೆ, ರಸ್ತೆಯಲ್ಲೇ ನಿಂತು ಬರೆದು ಕೊಡಬೇಕಿತ್ತು. ಹೀಗಾಗಿ ರೇಖಾಚಿತ್ರವಾಗಲಿ, ವರ್ಣಚಿತ್ರವಾಗಲಿ ವೇಗವಾಗಿ ರಚಿಸುವ ಅಭ್ಯಾಸ ಹಡಪದರಿಗೆ ಬಾಲ್ಯದಿಂದಲೇ ಬಂದದ್ದು. ಇದು ಮುಂದೆ ಅವರಿಗೆ ನಿಸರ್ಗ ದೃಶ್ಯ ರಚನೆಗೆ ಮಾತ್ರ ಸೀಮಿತವಾಗದೆ ಭಾವಚಿತ್ರ, ಸಂಯೋಜನಾ ಚಿತ್ರ ಎಲ್ಲದಕ್ಕೂ ರೂಢಿಯಾಯಿತು.

ಚಿಕ್ಕಂದಿನಲ್ಲಿ ಹಡಪದರು ಗರಡಿ ಮನೆಗಳಲ್ಲಿ, ಗುಡಿಗಳಲ್ಲಿ, ಮನೆಗಳ ಗೋಡೆಗಳ ಮೇಲೆ ಚಿತ್ರ ಬಿಡುಸುತ್ತಿದ್ದುದುಂಟು. ಅಲ್ಲಿ ಸರಳೀಕರಣ, ಚಪ್ಪಟೆ ವರ್ಣಲೇಪ ವಿಧಾನ ಇರುತ್ತಿತ್ತು. ಆಗಿನ ಹಳ್ಳಿಗಳಲ್ಲಿ ರೂಢಿಯಲ್ಲಿದ್ದ ಜಾನಪದ ಕಲೆಯನ್ನು ನೋಡಿದ್ದರು. ಜಾನಪದ ಕಲೆಯೇ ಕಾಲ ಕ್ರಮೇಣ  ಪರಿಷ್ಕಾರಗೊಂಡು ಶಿಷ್ಟಕಲೆಯಾಗುತ್ತದೆ. ಹಾಗೆ ಪರಿಷ್ಕಾರಗೊಂಡು, ತಾಂತ್ರಿಕವಾಗಿ ಉನ್ನತ ಮಟ್ಟ ಸಾಧಿಸಿದ್ದು ಚಾಲುಕ್ಯ ಕಲೆ. ಬಾದಾಮಿಯಲ್ಲೆ ಮಣ್ಣೆತ್ತಿನ ಅಮಾವಾಸ್ಯೆ ಹಬ್ಬ ಬರುತ್ತೆ. ಆಗೆಲ್ಲಾ ಹುತ್ತದ ಮಣ್ಣಿನಿಂದ ಐದು ಅಂತಸ್ತುಗಳ ಮನೆ ಮಾಡುವುದು, ಬಸವಣ್ಣನನ್ನು ಮಾಡುವುದು ಪರಂಪರೆ. ಈ ಎಲ್ಲದಕ್ಕಿಂತ ಚಾಲುಕ್ಯ ಶಿಷ್ಟಕಲೆ ಅವರ ಮೇಲೆ ಪ್ರಭಾವ ಬೀರಿದ್ದು. ಆದರೆ ಅತ್ತ ಜಾನಪದ, ಇತ್ತ ಶಿಷ್ಟ ಎರಡು ಕಲೆಗಳಲ್ಲೂ ಬರುವ ನಾಗ, ಸೂರ್ಯ, ಚಂದ್ರ ಮುಂತಾದ ರೂಪಿಕೆಗಳನ್ನು, motif ಗಳನ್ನು ಹಡಪದರ ಕಲಾಕೃತಿಗಳಲ್ಲಿ ಕಾಣಬಹುದು. ಇವುಗಳಲ್ಲದೆ ಪ್ರತ್ಯೇಕ ಜಾನಪದ ಪ್ರಭಾವ ಅವರಲ್ಲಿ ಕಾಣಬರುವುದಿಲ್ಲ.

ಬೆಂಗಳೂರಿಗೆ ಹಡಪದ್ ಅವರು ಬಂದದ್ದು ೧೯೬೧ರಲ್ಲಿ. ೧೯೫೮-೫೯ರಲ್ಲಿ ಎ.ಎಂ. ಮುಗಿಸಿ ಮಿಣಜಿಗಿಯವರ ಕಲಾಮಂದಿರದಲ್ಲಿ ಕಲಾಶಿಕ್ಷಕರಾಗಿ ಎರಡು ವರ್ಷ ಇದ್ದರು. ಹೈಸ್ಕೂಲಿನಲ್ಲಿ ಸೇವೆಯಲ್ಲಿರುವ ಅಧ್ಯಾಪಕರಿಗಾಗಿ ಬೆಂಗಳೂರಿನಲ್ಲಿ ಮಿಣಜಿಗಿಯವರು ಒಂದು ಶಾಖೆ ತೆರೆದರು. ಒಬ್ಬಿಬ್ಬರು ಅಲ್ಲಿ ಬಂದು ನಿಭಾಯಿಸಲಾಗದಾಗ ಹಡಪದ್ ಅವರನ್ನು ಬೆಂಗಳೂರಿಗೆ ಕಳಿಸಿದರು. ಹೀಗೆ ಹಡಪದ್ ಕಲಾ ಶಿಕ್ಷಕರಾಗಿಯೇ ಬೆಂಗಳೂರಿಗೆ ಬಂದದ್ದು. ಬಾದಾಮಿಯ ನಂತರ ಬೆಂಗಳೂರು ಅವರ ಎಲ್ಲ ಚಿಂತನ, ಪ್ರಯೋಗ, ಸಾಧನೆಗಳ, ಬದುಕಿನ ಕಹಿಸಿಹಿಗಳ ತವರಾಯಿತು.

ಡಿಪ್ಲೋಮಾ ನಂತರದ ಮೂರು ವರ್ಷಗಳ ಕಲಾ ಶಿಕ್ಷಣವನ್ನು ಅವರು ಮುಂಬಯಿ ಜೆ.ಜೆ.ಕಲಾಶಾಲೆಯಲ್ಲಿ ಪಡೆದರು. ಅದು ಆ ಕಾಲಕ್ಕೆ ಉನ್ನತ ಶಿಕ್ಷಣವೆ. ಆ ದೃಷ್ಟಿಯಿಂದ ಅವರು ಜೆ.ಜೆ. ಕಲಾಶಾಲೆಯ ವಿದ್ಯಾರ್ಥಿ. ವಾಸ್ತವವಾಗಿ ಅಲ್ಲಿಯ ಕಲಾ ಪದ್ಧತಿ ಶೈಲಿಯ ಪರಂಪರೆ ಅವರ ಮೈ ಮನಗೂಡಬೇಕಿತ್ತು. ಹಾಗಾಗಲಿಲ್ಲ. ಅವರು ಶಾಲೆಯಲ್ಲಿ ಕಲಿತದ್ದಕಿಂತ ಹೊರಗಡೆ ಕಲಿತದ್ದೆ ಹೆಚ್ಚು. ಪರೀಕ್ಷಾ ದೃಷ್ಟಿಯಿಂದ ವಾಸ್ತವವಾದೀ ಹಾಗೂ ಆಲಂಕಾರಿಕ ಪದ್ಧತಿಯಲ್ಲಿ ಕಲಿಕೆ. ಭಾರತೀಯ ಪದ್ಧತಿ ಎಂದು ಕರೆಯುತ್ತಿದ್ದರೂ ತಾಂತ್ರಿಕ ದೃಷ್ಟಿಯಿಂದ ಸಾವಿರಾರು ವರ್ಷಗಳು ನಡೆದು ಬಂದ ಭಾರತೀಯ ಕಲೆಯ ಬೆಳವಣಿಗೆ ವಿಶ್ಲೇಷಣೆ ಇತ್ಯಾದಿಗಳ ಅರಿವು ಮೂಡಿಸುತ್ತಿರಲಿಲ್ಲ. ಹೀಗಾಗಿ ನಿಖರವಾದ ಲಕ್ಷಣಗಳ ಅರಿವಾಗಲಿಲ್ಲ. ಕಥೆಗಳು, ಪುರಾಣಗಳು ಇತ್ಯಾದಿ. ಒಂದು ಕಲಾ ಶೈಲಿ ಹೊಸ ಆವಿಷ್ಕಾರವಾಗಿ ಕಾಣಿಸಿಕೊಳ್ಳುವುದಿಲ್ಲ. ಪರಂಪರೆಯಲ್ಲಿ ಸಂಸ್ಕಾರಗೊಳ್ಳುತ್ತ, ಪರಿಷ್ಕಾರಗೊಳ್ಳುತ್ತಾ ಬದಲಾಗುತ್ತದೆ. ಪ್ರಮುಖ ಕಾಲಾವಧಿಯಲ್ಲಿ ಭಿನ್ನ ಲಕ್ಷಣಗಳು ಸ್ಪಷ್ಟ ಗೋಚರವಾಗುತ್ತವೆ. ಮುಂಬಯಿಯ ಶಾಲೆಯಲ್ಲಿ ವಸ್ತುವನ್ನು ಕಾವ್ಯಮಯವಾಗಿ ಗೀತಾತ್ಮಕವಾಗಿ ಚಿತ್ರಿಸಿದರೆ ಬೆಲೆ, ಗೌರವ. ಮಳೆಗಾಲ ಎಂದರೆ ಹೊಲ, ಎತ್ತುಗಳು, ಮೋಡ, ಮಳೆಗಳು. ಕಾವ್ಯಮಯವೆಂದರೆ ಮದ್ದಾನೆಯಂತೆ ಇಳಿದು ಬರುವ ಮೋಡಗಳು, ಹಿಂದೊಬ್ಬ ಭರ್ಜಿ ಖಡ್ಗ ಗುರಾಣಿ ಹಿಡಿದು ಬರುವ ವ್ಯಕ್ತಿ. ಇದು ಕಲ್ಪನೆ, ಇದು ಸಂಯೋಜನೆ. ಇದಕ್ಕೆ ಮೆಚ್ಚುಗೆ. ಸಾಹಿತ್ಯದಂತೆ ಕಲೆಗೂ ಒಂದು ಭಾಷೆಯಿದೆ, ಶಬ್ಧಗಳಿವೆ, ವಾಕ್ಯಗಳಿವೆ. ಅವುಗಳ ಅರಿವು ಹಡಪದರಿಗೆ ಅಲ್ಲಾಗಲಿಲ್ಲ. ವಾಣಿಜ್ಯ ಕಲೆಗೆ ಬೇಡಿಕೆ ಇತ್ತು. ಇವರ ಮನಸ್ಸು ಒಪ್ಪಲಿಲ್ಲ. ತಲೆ ತುಂಬ ಪ್ರಶ್ನೆಗಳನ್ನು ತುಂಬಿಕೊಂಡಿದ್ದ ಇವರಿಗೆ ಉತ್ತರ, ವಿವರ, ಸಮಾಧಾನ ನೀಡುವವರು ಬೇಕಿತ್ತು. ಶಾಲೆಯ ಹೊರಗೆ ದಂಡಾವತಿ ಮಠದ ನೂತನ ಕಲಾ ಶಾಲೆಯಲ್ಲಿ ಪರೀಕ್ಷಾ ದೃಷ್ಟಿಯಿಂದ ಅನುಕೂಲವಾದ ಅನೇಕ ಸೂಕ್ಷ್ಮಗಳು ತಿಳಿಯುತ್ತಿದ್ದವು. ಕಿರ್ಲೋಸ್ಕರ್ ಮ್ಯಾಗಜೀನ್ ಗೆ ಕೆಲಸ ಮಾಡುತ್ತಿದ್ದ ಗುಜ್ಜಾರ್ ಸ್ಟುಡಿಯೋ. ಹೀಗೆ ಹೊರಗಡೆ ಅವರ ರಚನಾ ವಿಧಾನಗಳನ್ನು ನೋಡಿ ತಿಳಿಯುವುದು. ಕೆಲವೊಮ್ಮೆ ಶಾಲೆಯ ವಿಶೇಷ ಉಪನ್ಯಾಸಗಳು ವರದಾನವಾಗುತ್ತಿದ್ದವು, ಇವರ ಹಸಿವಿಗೆ. ಉತ್ತಮ ಮಟ್ಟದವಾಗಿದ್ದವು. ಹೀಗಾಗಿ ಜೆ.ಜೆ. ಕಲಾಶಾಲೆಯದು ಒಂದು ಬಗೆಯ ಅಕಾಡೆಮಿಕ್ ವಾತಾವರಣವೆ, ಓಲ್ಡ್ ಮಾಸ್ಟರ್ ಗಳ ಪರಂಪರೆಯ ದೃಷ್ಟಿಯೆ.

ಬೆಂಗಳೂರಿಗೆ ಬಂದ ಮೇಲೆ ಹಡಪದರನ್ನು ರೂಪಿಸಿದ ಇನ್ನೊಂದು ಸ್ಥಳ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್. ಅಲ್ಲಿ ಉತ್ತಮ ಪುಸ್ತಕ ಭಂಡಾರವಿತ್ತು. ಅಮೂಲ್ಯ ಕಲಾಗ್ರಂಥಗಳಿದ್ದವು. ಯಾರೂ ಬಳಸದೆ ಧೂಳು ತುಂಬಿದ್ದವು. ಆ ಗ್ರಂಥಗಳ ಅಧ್ಯಯನಕ್ಕೆ ತೊಡಗಿದರು. ಒಬ್ಬೊಬ್ಬ ಕಲಾವಿದನ ಬಗೆಗೂ ಸಮಗ್ರ ಅಧ್ಯಯನ. ಮತ್ತೊಬ್ಬ ಕಲಾವಿದನನ್ನು ಅರಿತುಕೊಳ್ಳುವುದೆಂದರೆ ಕೇವಲ ನಕಲು ಮಾಡುವುದಿಲ್ಲ. ಅವನ ಆಲೋಚನಾ ಕ್ರಮ, ಅಭಿವ್ಯಕ್ತಿ ರೀತಿ, ಸಂಯಮಗಳ ಅರಿವು. ಅವರ ಬಗ್ಗೆ ತಿಳಿಯುತ್ತಲೇ ತಾನು ಹೇಗೆ ಭಿನ್ನ ಅವರು ಅರಸಿದ ಸಾಧ್ಯತೆಗಳಲ್ಲಿ, ತನ್ನತನ ಉಳಿಸಿಕೊಂಡು ಯಾವ ಅಂಶಗಳನ್ನು ಸ್ವೀಕರಿಸಬಹುದು ಎಂಬ ವಿಚಾರ ವಿಮರ್ಶೆ, ಆತ್ಮಾವಲೋಕನಕ್ಕೆ ತೊಡಗಿದ್ದು ವರ್ಲ್ಡ್ ಕಲ್ಚರ್ ಸಂಸ್ಥೆಯಲ್ಲಿ. ಅಲ್ಲಿಯ ವೆಂಕಟರಾಮನ್ ತುಂಬ ಪ್ರೋತ್ಸಾಹವಿತ್ತು. ಯುವ ಕಲಾವಿದನ ಗಂಭೀರ ಆಸಕ್ತಿ ಕಂಡು ಅಲ್ಲೇ ಸ್ಕೆಚ್ ಮಾಡಲು, ಚಿತ್ರ ರಚಿಸಲು ಅವಕಾಶ ಮಾಡಿಕೊಟ್ಟರು.

ಬೆಂಗಳೂರು ಜಯನಗರ ಅಶೋಕ ಪಿಲ್ಲರ್ ಬಳಿಯ ಕನಕನ ಪಾಳ್ಯದಿಂದ ಹಡಪದ್ ಗವಿಪುರಂಗೆ ಮನೆ ಬದಲಾಯಿಸಿದರು. ಅಲ್ಲಿ ಕೆಂಪಾಂಬುಧಿ ಕೆರೆ. ತುಂಬಿದ ನೀರು, ಆಚೆಗೆ ಚಾಮರಾಜಪೇಟೆ. ರಾತ್ರಿ ವೇಳೆ ಪ್ರಶಾಂತ ವಾತಾವರಣದಲ್ಲಿ ನಗರದ ದೀಪಗಳ ಬೆಳಕು ಪ್ರತಿಫಲಿತವಾಗುತ್ತಿದ್ದವು. ತೆರೆಗಳು ಅಲುಗಿದಂತೆ, ಬೆಳಕಿನ ಬಿಂಬಗಳ ಕಂಪನ. ಸುಂದರ, ಶ್ರೀಮಂತ, ಚಿತ್ತಾಕರ್ಷಕ ದೃಶ್ಯಾನುಭವ. ಆ ಅನುಭವಗಳನ್ನು ಆಧರಿಸಿ ಹಡಪದ್ “ನೈಟ್” ಸೀರೀಸ್ ಚಿತ್ರಗಳನ್ನು ರಚಿಸಿದರು. ತೈಲವರ್ಣದ ವಿವಿಧ ಮೈವಳಿಕೆ ತಂತ್ರದ ಚಿತ್ರಗಳು. ಇಲ್ಲಿ ಬ್ಲಾಕ್ ಗಳು, ಘನಾಕಾರಗಳು ಜಿಗ್ ಜಾಗ್ ಆಗಿ ಮೂಡಿಬರುತ್ತವೆ; ಸರ್ಪಗತಿ, ವಕ್ರತೆಗೆ ಬದಲು ಕೋನಗಳು. ಬಾದಾಮಿ ಬಂಡೆಗಳಲ್ಲೆ, ಅವುಗಳ ಮೇಲೆ ಮೂಡುವ ಬಣ್ಣದ ಪ್ಯಾಚ್ ಗಳಂತೆ ಹಡಪದ್ ಅಮೂರ್ತ ವಿನ್ಯಾಸಗಳನ್ನು ಗ್ರಹಿಸಿದ್ದರು.

೧೯೬೭ರಲ್ಲಿ ಮಿಣಜಿಗಿಯವರ ಅಧ್ಯಾಪಕರ ಕಲಾ ತರಾಬೇತಿ ಶಾಲೆಯನ್ನು ಬೆಂಗಳೂರಲ್ಲಿ ಮುಚ್ಚಲಾಯಿತು. ಹಡಪದ್ ಮುಂದೆ ಭವಿಷ್ಯದ ಕವಲು ದಾರಿಗಳು. ಮುಂಬೈಯಲ್ಲಿ ಕಲೆಯ ವಾತಾವರಣವಿತ್ತು, ವಾಣಿಜ್ಯ ದೃಷ್ಟಿಯಿಂದಲೂ ಆಕರ್ಷಣೆಯಿತ್ತು. ಇಲ್ಲಿ ಏಳು ವರ್ಷಗಳಿಂದ ಮಾಡಿದ ಕಾರ್ಯವನ್ನು ಫಲಕಾರಿಯಾಗುವ ಮುನ್ನ ಕೈ ಬಿಡಬೇಕೇ ಎಂಬ ವಿಷಾದ. ಹಡಪದರ ಕಲೆಯ ಗೀಳು ಅವರನ್ನು ಕಲಾ ಶಾಲೆ ತೆಗೆಯುವ ಹೊಸ ಸಾಹಸಕ್ಕೆ ನೂಕಿತು. ಗುರು ದಂಡಾವತಿಮಠ ಅವರು ಆ ಸಾಹಸ ಕಷ್ಟದ್ದು ಎಂದು ಎಚ್ಚರಿಕೆ ನೀಡಿದ್ದರು. ಒಮ್ಮೆ ಪ್ರವೇಶಿಸಿದರೆ ಹೊರಬರುವಂತಿಲ್ಲ. ಸೃಜನಶೀಲ ಕಾರ್ಯಕ್ಕೂ ಅಡ್ಡಿಯಾಗಬಹುದು. ಆದರೆ ಈ ವೇಳೆಗೆ ಅವರು ಗಳಿಸಿದ್ದ ಹಲವು ಶಿಷ್ಯರ ಉತ್ತೇಜನದಿಂದ ೧೯೬೮ರಲ್ಲಿ ಬೆಂಗಳೂರಿನಲ್ಲಿ ken schol of Art ಅನ್ನು ಪ್ರಾರಂಭಿಸಿದರು. ಕೆನ್ ಎಂದರೆ ಜ್ಞಾನ. ಹಡಪದರ ಆದರ್ಶಗಳ ಬಿಂಬ. ಪ್ರಾಚೀನ ಗುರುಕುಲ ಪದ್ಧತಿಯ ವೈಯಕ್ತಿಕ, ಆತ್ಮೀಯ ಗುರುಶಿಷ್ಯ ಸಂಬಂಧಿಸಿದಂತೆ ಶಾಲೆಯ ಸ್ವರೂಪ. ಅವರು ಶಿಕ್ಷಣ ವಿಧಾನವೂ ಇತರ ಶಾಲೆಗಳಿಗಿಂತ ಭಿನ್ನವಾಗಿತ್ತು. ಭಾರತೀಯ ಪದ್ಧತಿಯಲ್ಲಿ, ಏಕೆ ಒಂದು ಕಾಲಕ್ಕೆ ಪಾಶ್ಚಾತ್ಯರಲ್ಲೂ ಸಹ, ಗುರು ತನ್ನ ವಿಧಾನ, ಪದ್ಧತಿ, ಶೈಲಿಯನ್ನೇ ಶಿಷ್ಯರಿಗೆ ಕಲಿಸುವುದು. ಇಂದಿಗೂ ಭಾರತೀಯ ಶಾಸ್ತ್ರೀಯ ಸಂಗೀತ ಪದ್ಧತಿಯಲ್ಲಿ, ಮುಖ್ಯವಾಗಿ ಘರಾಣಾ ಪದ್ಧತಿಯಲ್ಲಿ, ಅದು ಉಳಿದುಬಂದಿದೆ. ಪದ್ಧತಿಯಿಂದಲೇ, ತಂತ್ರವಿಧಾನಗಳಿಂದಲೇ ಕಲಾವಿದರ ಮೂಲ ಗುರುತಿಸಿ ಶೈಲಿಯನ್ನು ಹೆಸರಿಸುವುದು. ಅಲ್ಲಿ ಪರಂಪರೆ ಮುಂದುವರೆಸುವುದೇ ಮುಖ್ಯವಾಗುತ್ತದೆ. ಸಮಕಾಲೀನ ಶಾಲೆಗಳಲ್ಲಿ ರೂಢಿಯಾಗಿದ್ದುದು ಪರೀಕ್ಷಾ ದೃಷ್ಟಿಯ ಅಕಾಡೆಮಿಕ್ ಪದ್ಧತಿ. ಹಡಪದ್ ಅವರದು ಇವೆರಡಕ್ಕಿಂತ ಭಿನ್ನ. ತರುಣರಿಂದ ತೊಡಗಿ ನಿವೃತ್ತಿ ವಯಸ್ಸಿನವರೆಗೆ ವಿದ್ಯಾರ್ಥಿಗಳು (ಅಧ್ಯಾಪಕರು) ತರಬೇತಿ ಶಾಲೆಗೆ ಬರುತ್ತಿದ್ದುದರಿಂದ ಅಲ್ಲಿ ಅವರಿಗೆ ಬೇರೆ ವಿಧಾನದಿಂದಲೇ ಕಲಿಸಿದ ಅನುಭವವಿತ್ತು. ಕೆನ್ ಕಲಾ ಶಾಲೆಯಲ್ಲೂ ಅದನ್ನೆ ಮುಂದುವರೆಸಿದರು. ವಿದ್ಯಾರ್ಥಿಗಳ ಹಿನ್ನೆಲೆ, ಆಸಕ್ತಿ, ದೌರ್ಬಲ್ಯ, ಶಕ್ತಿಗಳನ್ನರಿತು ಒಳಗಿನ ಸತ್ವ ಪ್ರಕಾಶಗೊಳ್ಳುವ ಬಗೆಗೆ ಒತ್ತು ನೀಡುವ ವಿಧಾನ. ಶಿಷ್ಯರ ಮನೋನಾಡಿ ಮಿಡಿಸಿ ಕಲಿಸುವ ವಿಧಾನ ಹಡಪದರದು. ಬಹುಶಃ ಕಳೆದ ಮೂವತ್ತು ವರ್ಷಗಳಲ್ಲಿ ಕೆನ್ ಕಲಾಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ತಮ್ಮದೇ ಸ್ವಂತಿಕೆ ಕಂಡುಕೊಂಡು ಬೆಳೆದು ರಾಷ್ಟ್ರಾದ್ಯಂತ ಕೀರ್ತಿ ಪಡೆದಿರುವಂತೆ ಮತ್ತೊಂದು ಖಾಸಗಿ ಶಾಲೆಯಿಂದ ಆಗಿರಲಾರದು. ಅವರ ಶಿಷ್ಯರಲ್ಲಿ ವಿಶ್ವವಿದ್ಯಾಲಯಗಳಲ್ಲಿ, ವಿದೇಶಗಳಲ್ಲಿ ಉನ್ನತ ಶಿಕ್ಷಣ ಮಾನ್ಯತೆ ಗಳಿಸಿದವರು ಬಹಳಷ್ಟು ಇದ್ದಾರೆ.

ಲೇಖಕರು

ಎಂ.ಎಚ್. ಕೃಷ್ಣಯ್ಯ ಅವರು ಮೈಸೂರಿನಲ್ಲಿ ಜನಿಸಿದರು. ಬಿ.ಎ. ಮತ್ತು ಎಂ.ಎ. (ಕನ್ನಡ) ಪದವಿಗಳನ್ನು ಮಹಾರಾಜಾ ಕಾಲೇಜು ಮತ್ತು ಮೈಸೂರು ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡಿ ಪಡೆದಿರುವರು. ಕನ್ನಡ ಅಧ್ಯಾಪಕರಾಗಿ ವೃತ್ತಿಯನ್ನು ಆರಂಭಿಸಿ ಬೆಂಗಳೂರು, ಮಂಗಳೂರು, ತುಮಕೂರು, ಮಂಡ್ಯ ಮುಂತಾದ ಕಡೆ ಸರಕಾರಿ ಕಾಲೇಜುಗಳಲ್ಲಿ ಬೋಧನ ಕಾರ್ಯ ನಿರ್ವಹಿಸಿದ್ದಾರೆ. ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಅನೇಕ ಕನ್ನಡ ಸಾಂಸ್ಕೃತಿಕ ಸಂಘಸಂಸ್ಥೆಗಳಲ್ಲಿ ಸದಸ್ಯರಾಗಿ, ಗೌರವ ಸಂಪಾದಕರಾಗಿ, ಪ್ರಧಾನ ಸಂಪಾದಕರಾಗಿ ಮಹತ್ವದ ಕೆಲಸಗಳನ್ನು ಮಾಡಿರುವ ಎಂ.ಎಚ್. ಕೃಷ್ಣಯ್ಯ ಅವರು ಸಂಕ್ಷಿಪ್ತ ಕನ್ನಡ ಭಾಷೆಯ ಚರಿತ್ರೆ, ಕಾವ್ಯ ಭಾಷೆ, ನಾಟಕ ಮತ್ತು ಸೌಂದರ್ಯ ಪ್ರಜ್ಞೆ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಚಿತ್ರಕಲೆ, ಶಿಲ್ಪಕಲೆಗಳಲ್ಲಿ ಆಸಕ್ತಿ ಹೊಂದಿ ಕೆಲವು ಕೃತಿಗಳನ್ನು ಬರೆದಿದ್ದಾರೆ. ಲಲಿತಕಲಾ ಆಕಾಡೆಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದಾರೆ.

ಆಶಯ

ಆರ್.ಎಂ. ಹಡಪದ ಕೃತಿಯಿಂದ ಈ ಭಾಗವನ್ನು ಆಯ್ದುಕೊಳ್ಳಲಾಗಿದೆ. ಈ ಲೇಖನದಲ್ಲಿ ನಾಡಿನ ಪ್ರಸಿದ್ಧ ಚಿತ್ರ ಕಲಾವಿದರಾದ ಆರ್.ಎಂ. ಹಡಪದ ಅವರ ಕಲಾಸಾಧನೆಯನ್ನು ಇಲ್ಲಿ ಪರಿಚಯಿಸಲಾಗಿದೆ. ಈ ಕಲಾವಿದರು ಹುಟ್ಟಿ ಬೆಳದದ್ದು ಇತಿಹಾಸ ಪ್ರಸಿದ್ಧ ಬದಾಮಿ ಎಂಬ ಊರಲ್ಲಿ. ಕಲೆಯ ಮುಖ್ಯ ನೆಲೆಯಾದ ಈ ಬಾದಾಮಿ ಪರಿಸರವು ಈ ಕಲಾವಿದರ ಮೇಲೆ ಪ್ರಭಾವ ಬೀರಿದೆ. ಈ ಕಲಾವಿದರು ಬೆಳೆದ ವಿವಿಧ ಹಂತಗಳನ್ನು, ಅವರ ಕಲಾಕೃತಿಗಳನ್ನು ವಿವರಿಸುತ್ತ ಅವರ ಸಾಧನೆಯನ್ನು ವಿಶ್ಲೇಷಿಸಲಾಗಿದೆ.

ಶಬ್ದಕೋಶ

ದೃಕ್ = ದೃಷ್ಟಿ. ಗ್ರಹಣಶಕ್ತಿ = ಅರಿಯುವ ಸಾಮರ್ಥ್ಯ. ವೈದೃಶ್ಯ = ವಿಭಿನ್ನತೆ. ವರ್ಣಛಾಯೆ = ಬಣ್ಣದ ನೆರಳು. ವಿಧಿವತ್ತಾಗಿ = ಸಂಪ್ರದಾಯ ಪ್ರಕಾರ, ನಿಯಮಗಳ ಪ್ರಕಾರ. ಸೂಕ್ಷ್ಮ ಸಂವೇದನೆ = ವಿಶೇಷವಾದದ್ದನ್ನು ಅರಿಯುವ ಮನಸ್ಸು. ಪ್ರಜ್ಞಾಪೂರ್ವಕ = ಎಚ್ಚರಿಕೆಯಿಂದ. ಪರಿಷ್ಕಾರ = ತಿದ್ದಿ ಬೆಳೆಸುವುದು.

 

ಪ್ರಶ್ನೆಗಳು

೧. ಕಲಾವಿದ ಆರ್.ಎಂ. ಹಡಪದ ಅವರ ಬಾಲ್ಯ ಮತ್ತು ವಿದ್ಯಾಭ್ಯಾಸ ಕುರಿತು ಬರೆಯಿರಿ.

೨. ಬಾದಾಮಿ ಪರಿಸರವು ಆರ್.ಎಂ. ಹಡಪದ ಅವರ ಮೇಲೆ ಹೇಗೆ ಪ್ರಭಾವ ಬೀರಿದೆ? ವಿವರಿಸಿರಿ.

೩. ಆರ್.ಎಂ. ಹಡಪದ ಅವರ ಕಲಾಸಕ್ತಿಗೆ ನೆರವಾದ ಸಂಗತಿಗಳನ್ನು ಬರೆಯಿರಿ.

೪. ಆರ್.ಎಂ. ಹಡಪದ ಅವರ ಚಿತ್ರಗಳ ವಿಶೇಷತೆಯನ್ನು ವಿವರಿಸಿರಿ.

೫. ಕೆನ್ ಸ್ಕೂಲ್ ಆಫ್ ಆರ್ಟ್ ಸಂಸ್ಥೆಯ ವಿಶೇಷತೆಯನ್ನು ಬರೆಯಿರಿ.

 

ಹೆಚ್ಚಿನ ಓದು

ಎನ್. ಮರಿಶಾಮಾಚಾರ್: ದೃಶ್ಯಕಲಾವಿದರು-ವ್ಯಕ್ತಿಚಿತ್ರ

ಎಚ್.ಎ. ಅನಿಲ್ ಕುಮಾರ್: ನೋಟಪಲ್ಲಟ – ಕಲಾವಿಮರ್ಶೆ

ಕೆ.ಎಚ್. ಶ್ರೀನಿವಾಸಮೂರ್ತಿ : ಕಣ್ಣಕಾಣಿಕೆ – ಕಲಾವಿಮರ್ಶೆ

ಎಂ.ಎಚ್. ಕೃಷ್ಣಯ್ಯ : ಆರ್.ಎಂ. ಹಡಪದ – ವ್ಯಕ್ತಿಚಿತ್ರ

ಶಿವಾನಂದ ಬಂಟನೂರು : ವಿ.ಜಿ. ಅಂದಾನಿ – ವ್ಯಕ್ತಿಚಿತ್ರ