ನುಡಿದೀಪ ೨ ಕಲಾಮೂಲ ಎರಡನೇ ವರ್ಷದ ಪದವಿ ತರಗತಿಗಾಗಿ ಸಿದ್ಧಪಡಿಸಿದ ಕನ್ನಡ ಪಠ್ಯಪುಸ್ತಕ, ವಿದ್ಯಾರ್ಥಿಗಳಿಗೆ ಆರಂಭದಿಂದ ಮತ್ತು ಪದವಿಪೂರ್ವ, ಪದವಿ ತರಗತಿಗಳವರೆಗೆ ಕನ್ನಡ ಪಠ್ಯಪುಸ್ತಕಗಳನ್ನು ಶೈಕ್ಷಣಿಕವಾಗಿ ಕಲಿಸುವ ಬೋಧಿಸುವ ಪರಿಪಾಟವಿದೆ. ಪದವಿಗಳಿಗೆ ಅನುಗುಣವಾಗಿ ಪಾಠಗಳನ್ನು ಆಯ್ದು ಸಿದ್ಧಪಡಿಸಲಾಗುತ್ತದೆ. ಸಾಮಾನ್ಯವಾಗಿ ಪ್ರಾಚೀನ, ಮಧ್ಯಕಾಲೀನ ಮತ್ತು ಆಥುನಿಕ ಎಂದು ಗುರುತಿಸಲಾಗುವ ಕಾಲಾವಧಿಯಲ್ಲಿ ರಚನೆಯಾದ ಸಾಹಿತ್ಯವನ್ನು ಪರಿಗಣಿಸಲಾಗುತ್ತದೆ. ಇದರ ಜೊತೆಗೆ ಜಾನಪದ ಸಾಹಿತ್ಯವೂ ಸೇರಿರುತ್ತದೆ. ಸಾಹಿತ್ಯಿಕವಾಗಿ ಮುಖ್ಯ ಎಂದು ಕಾಣುವ ಮತ್ತು ಶೈಕ್ಷಣಿಕವಾಗಿ ಕಲಿಸುವ ಕಲಿಯಲು ಯೋಗ್ಯವಾದ ಕಾವ್ಯಗಳ ಭಾಗಗಳನ್ನೊ, ವಚನ, ದಾಸ, ತತ್ವಪದ ಸಾಹಿತ್ಯದ ರಚನೆಗಳನ್ನೊ, ಜಾನಪದ ಹಾಡುಗಳನ್ನೊ, ಆಧುನಿಕ ಸಾಹಿತ್ಯ ಪ್ರಕಾರಗಳಾದ ಕವಿತೆ, ಕಥೆ, ಪ್ರಬಂಧ, ನಾಟಕ ಮುಂತಾದವುಗಳನ್ನೊ ಆಯ್ದು ಸಂಕಲಿಸಿ ಪಠ್ಯಪುಸ್ತಕಗಳನ್ನು ಸಿದ್ಧಪಡಿಸಲಾಗುತ್ತಿದೆ.

’ನುಡಿದೀಪ ೨’ ಕನ್ನಡ ಪಠ್ಯಪುಸ್ತಕದಲ್ಲಿ ಆಧುನಿಕಪೂರ್ವ ಸಾಹಿತ್ಯವನ್ನು ಆಯ್ದುಕೊಳ್ಳಲಾಗಿಲ್ಲ. ಆಧುನಿಕ ಸಾಹಿತ್ಯವನ್ನು ಮಾತ್ರ ಪರಿಗಣಿಸಲಾಗಿದೆ. ಯಾಕೆಂದರೆ ಈ ಪಠ್ಯವನ್ನು ಕಲಾಮೂಲ ವಿದ್ಯಾರ್ಥಿಗಳಿಗಾಗಿ ಮಾತ್ರ ಸಿದ್ಧಪಡಿಸಲಾಗಿದೆ. ಸಂಗೀತ, ನೃತ್ಯ, ಚಿತ್ರಕಲೆ, ಶಿಲ್ಪಕಲೆ ಮುಂತಾದ ಪದವಿ ತರಗತಿಗಳಿಗೆ ಸಿದ್ಧಪಡಿಸುವ ಪಠ್ಯಪುಸ್ತಕಗಳು ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಓದುವ ಹವ್ಯಾಸವನ್ನು ಹೆಚ್ಚಿಸುವಂತಿರಬೇಕು. ಲಲಿತಕಲಾ ಪ್ರಕಾರಗಳನ್ನು ಶೈಕ್ಷಣಿಕವಾಗಿ ಕಲಿಯುವ ವಿದ್ಯಾರ್ಥಿಗಳು ಸಾಹಿತ್ಯವನ್ನು ಒಳಗೊಂಡ ಕನ್ನಡ ಪಠ್ಯಪುಸ್ತಕಗಳನ್ನು ಓದುವುದು ಎಂದರೆ ಅದು ಹವ್ಯಾಸದ ರೀತಿಯಲ್ಲಿಯೇ ಓದುವಂತಿರಬೇಕು. ಹೀಗೆ ಓದುವುದರಿಂದ ಪ್ರಯೋಜನವಿದೆ. ಶೈಕ್ಷಣಿಕವಾಗಿ ಲಲಿತಕಲೆಗಳನ್ನು ಕಲಿಯುವಾಗ ’ ಆಯಾಸ’ ಕಾಣಿಸಿಕೊಳ್ಳಬಹುದು. ಆ ಆಯಾಸ ಸಾಹಿತ್ಯದ ಓದಿನ ಮೂಲಕ ಪರಿಹಾರವಾಗಬಹುದು. ಹಾಗೆಯೇ ಸಾಹಿತ್ಯ, ವಿಜ್ಞಾನ, ಮಾನವಿಕಗಳನ್ನು ಶೈಕ್ಷಣಿಕವಾಗಿ ಕಲಿಯುವಾಗ ’ಆಯಾಸ’ ಆಗಬಹುದು. ಈ ಆಯಾಸವನ್ನು ಲಲಿತಕಲೆಗಳನ್ನು ಕಲಿಯುವಿಕೆಯಿಂದ ದೂರ ಮಾಡಿಕೊಳ್ಳಬಹುದು. ಯಾವುದೇ ವಿಷಯವನ್ನು ಶೈಕ್ಷಣಿಕವಾಗಿ ಕಲಿಯುವಾಗ ’ಆಯಾಸ’ ಕಾಣಿಸಿಕೊಳ್ಳುತ್ತದೆ. ಅದನ್ನು ಪರಿಹರಿಸಿಕೊಳ್ಳಲು ಹವ್ಯಾಸದ ಓದು ಅಥವಾ ಕಲಿಕೆ ವಿದ್ಯಾರ್ಥಿಗಳಿಗೆ ಬೇಕೆಂದು ಕಾಣುತ್ತದೆ. ಒಟ್ಟಿನಲ್ಲಿ ಶೈಕ್ಷಣಿಕ ಕಲಿಕೆ ಮತ್ತು ಹವ್ಯಾಸದ ಕಲಿಕೆ ಒಂದಕ್ಕೊಂದು ಪೂರಕ ಎಂದು ಭಾವಿಸಬೇಕು. ಒಂದರ ಆಯಾಸ ಇನ್ನೊಂದರಲ್ಲಿ ಬಿಡುಗಡೆಯಂತೆ ಕಾಣಬಹುದೆಂದು ತೋರುತ್ತದೆ.

ಈ ಕಾರಣದಿಂದ ಕಲಾಮೂಲ ತರಗತಿಗೆ ’ನುಡಿದೀಪ ೨’ ರಲ್ಲಿ ಕವಿತೆ, ಕಥೆ, ಪ್ರಬಂಧ, ಪ್ರವಾಸ, ವೈಚಾರಿಕ, ವ್ಯಕ್ತಿಚಿತ್ರ ಮುಂತಾದ ಆಧುನಿಕ ಸಾಹಿತ್ಯ ಪ್ರಕಾರಗಳಲ್ಲಿ ರಚನೆಯಾದ ಸಾಹಿತ್ಯವನ್ನು ಆಯ್ದುಕೊಳ್ಳಲಾಗಿದೆ. ಈ ರಚನೆಗಳೆಲ್ಲವೂ ಅತ್ಯುತ್ತಮವಾಗಿವೆ. ಈ ರಚನೆಗಳ ಲೇಖಕರಲ್ಲಿ ಹಲವರು ಈಗ ನಮ್ಮ ಜತೆಗಿಲ್ಲ. ಆದರೆ ಅವರು ರಚಿಸಿದ ಸಾಹಿತ್ಯವಿದೆ. ಈ ಹಿರಿಯರ ಸಾಹಿತ್ಯವನ್ನು ಶೈಕ್ಷಣಿಕ ಚಟುವಟಿಕೆಯ ಮೂಲಕವಾಗಿಯೂ ಓದುತ್ತ, ಕನ್ನಡ ಸಾಹಿತ್ಯ ಸಂಸ್ಕೃತಿಯನ್ನು ಅರಿವಿಗೆ ತಂದುಕೊಳ್ಳುವುದು ವಿದ್ಯಾರ್ಥಿಗಳ ಹವ್ಯಾಸವಾಗಬೇಕಿದೆ. ಕಲಾಮೂಲ ವಿದ್ಯಾರ್ಥಿಗಳು ಈ ನುಡಿಬೆಳಕನ್ನು ತಮ್ಮ ಬಣ್ಣದ ಬೆಳಕಿಗೆ ತಂದುಕೊಳ್ಳುವ ಮೂಲಕ ತಮ್ಮ ಸಂವೇದನೆಯನ್ನು ಸೂಕ್ಷ್ಮಗೊಳಿಸುವಂತಾಗಬೇಕೆಂದು ಈ ಪಠ್ಯವನ್ನು ಸಿದ್ಧಪಡಿಸಲಾಗಿದೆ. ಈ ಪಠ್ಯವನ್ನು ಕಲಾಮೂಲ ವಿದ್ಯಾರ್ಥಿಗಳು ಪ್ರೀತಿಯಿಂದ ಸ್ವಾಗತಿಸುತ್ತಾರೆಂದು ಆಶಿಸುತ್ತೇವೆ.

ಕಲಾಮೂಲ ವಿದ್ಯಾರ್ಥಿಗಳು ಪರೀಕ್ಷೆಗಾಗಿ ಈ ಪಠ್ಯಪುಸ್ತಕದ ಜೊತೆಗೆ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ’ಕರ್ವಾಲೊ’ ಕಾದಂಬರಿಯನ್ನು ಓದಬೇಕು.

ಈ ಪುಠ್ಯಪುಸ್ತಕವನ್ನು ಸಿದ್ಧಪಡಿಸಿಕೊಡಲು ಪ್ರಭಾರ ಕುಲಪತಿಗಳಾದ ಡಾ.ಕೆ.ವಿ. ನಾರಾಯಣ ಅವರು ನಮಗೆ ಒಪ್ಪಿಸಿದ್ದರು ಮತ್ತು ಇದನ್ನು ಪರಿಶೀಲಿಸಿ ಸೂಕ್ತ ಸಲಹೆಗಳನ್ನು ನೀಡಿದ್ದರು. ಡಾ.ಬಿ.ಎ. ವಿವೇಕ ರೈ ಅವರು ನೂತನ ಕುಲಪತಿಗಳಾಗಿ ಅಧಿಕಾರ ವಹಿಸಿಕೊಂಡ ಕೂಡಲೇ ಈ ಪಠ್ಯಪುಸ್ತಕವನ್ನು ಗಮನಿಸಿ, ಓದಿ ಬೆಲೆಯುಳ್ಳ ಮಾತುಗಳನ್ನು ಬರೆದುಕೊಟ್ಟು ಪ್ರಕಟಣೆಗೆ ಅನುಮತಿ ನೀಡಿದರು. ಕನ್ನಡ ವಿಶ್ವವಿದ್ಯಾಲಯದ ಪಠ್ಯಪುಸ್ತಕ ರಚನಾಕೇಂದ್ರದ ನಿರ್ದೇಶಕರಾದ ಡಾ.ಟಿ. ಆರ್. ಚಂದ್ರಶೇಖರ ಮತ್ತು ಪ್ರಸಾರಾಂಗದ ನಿರ್ದೇಶಕರಾದ ಡಾ. ಹಿ.ಚಿ. ಬೋರಲಿಂಗಯ್ಯ ಅವರು ಈ ಪಠ್ಯಪುಸ್ತಕವನ್ನು ಪ್ರೀತಿಯಿಂದ ಪ್ರಕಟಿಸಿರುವರು.

ಪ್ರಸಾರಾಂಗದ ಸಹಾಯಕ ನಿರ್ದೇಶಕ ಶ್ರೀ ಬಿ. ಸುಜ್ಞನಮೂರ್ತಿ, ಪಠ್ಯಪುಸ್ತಕ ರಚನಾ ಕೇಂದ್ರದ ಸಹಾಯಕ ನಿರ್ದೇಶಕ ಶ್ರೀ ಜೈನುಲ್ಲಾ ಬಳ್ಳಾರಿ, ಕಲಾವಿದ ಶ್ರೀ ಕೆ.ಕೆ. ಮಕಾಳಿ, ಡಿ.ಟಿ.ಪಿ. ಮಾಡಿದ ಶ್ರೀ ವೈ. ಎಂ. ಶರಣಬಸವ, ಡಿ.ಟಿ.ಪಿ. ಪ್ರತಿಯಲ್ಲಿನ ಅಕ್ಷರ ತಪ್ಪುಗಳನ್ನು ಸರಿಪಡಿಸಿದ ಎಂ.ಎ., ಪಿ.ಹೆಚ್.ಡಿ. ಸಂಯುಕ್ತ ಪದವಿ ವಿದ್ಯಾರ್ಥಿನಿಯರಾದ ಕು.ಟಿ.ಎಂ. ಉಷಾರಾಣಿ, ಕು.ಎಂ.ಎ. ರೂಪ, ಈ ಕೆಲಸದಲ್ಲಿ ನೆರವಾದ ಶ್ರೀ ಕೋಳೂರು ಶಿವಪ್ಪ ಎಲ್ಲರೂ ದುಡಿದು ಈ ಪಠ್ಯಪುಸ್ತಕವನ್ನು ಚಂದ ಮಾಡಿರುವರು.

ಎಲ್ಲ ಮಹನೀಯರಿಗೆ ತುಂಬು ಹೃದಯದ ಕೃತಜ್ಞತೆಗಳು.

ಡಾ. ಕರೀಗೌಡ ಬೀಚನಹಳ್ಳಿ
ಡಾ. ಅಮರೇಶ ನುಗಡೋಣಿ