ಭಗವಂತನಿಂದ ವಿವಿಧ ರೀತಿಯ ಕಲೆಗಳು ಪ್ರಪಂಚದಲ್ಲಿ ಸೃಷ್ಠಿಸಲ್ಪಟ್ಟಿವೆ. ಪ್ರತಿಯೊಂದು ಕಲೆಯಲ್ಲೂ ಒಂದೊಂದು ರೀತಿಯ ವಿಶಿಷ್ಟ ರೀತಿಯ ಗುಣಗಳಿವೆ. ಚಿತ್ರಕಲೆ, ಶಿಲ್ಪಕಲೆ, ಸಂಗೀತ ಕಲೆ ಮತ್ತು ನೃತ್ಯ ಕಲೆ. ಹೀಗೆ ಹಲವಾರು ಲಲಿತ ಕಲೆಗಳು ಲೋಕದಲ್ಲಿ ಪ್ರಚಲಿತವಾಗಿವೆ. ಎಲ್ಲಾ ಕಲೆಗಳನ್ನು ಎಲ್ಲರೂ ಅಭ್ಯಾಸ ಮಾಡಲಸಾಧ್ಯ. “ಭಿನ್ನರುಚಿರ್ಹಿ ಲೋಕ” ಎಂಬಂತೆ ಒಬ್ಬೊಬ್ಬರ ಅಭಿರುಚಿಯು ವ್ಯತ್ಯಾಸವಾಗಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಆಯಾಯ ಕಲೆಯಲ್ಲಿ ಪರಿಣತರಾದವರು ತಂತಮ್ಮ ಮನಸ್ಸಿನ ಕಲ್ಪನೆಗಳನ್ನು ತತ್ತತ್ಸಾಧನೆಯ ಮೂಲಕವಾಗಿ ನಿರೂಪಿಸಿ ಪ್ರೇಕ್ಷಕರ ಮನಸ್ಸನ್ನು ತೃಪ್ತಿಗೊಳಿಸುತ್ತಾರೆ. ಆದರೆ ನೃತ್ಯ ಕಲೆಯಲ್ಲಿ ಮಾತ್ರ ವಿಶೇಷ ಗುಣವೇನೆಂದರೆ, ಸಾಧಾರಣವಾಗಿ ಇತರ ಕಲೆಗಳು ನಿಶ್ಚಲ ರೂಪುವುಳ್ಳವುಗಳಾದರೆ, ನೃತ್ಯವು ಮಾತ್ರ ಚಲನಾತ್ಮಕವಾಗಿ ಪ್ರೇಕ್ಷಕರನ್ನು ಮುಗದ್ಧಗೊಳಿಸುತ್ತದೆ. ಚಿತ್ರಕಲೆ, ಶಿಲ್ಪ ಕಲೆ, ಸಂಗೀತ ಕಲೆಗಳಲ್ಲಿ ತದ್ರೂಪವಾದ ಗುಣಗಳಿದ್ದರೆ, ನೃತ್ಯ ಕಲೆಯಲ್ಲಿ ಮಾತ್ರ ಈ ಎಲ್ಲಾ ಕಲೆಗಳ ಮಿಲನವೂ ಮತ್ತು ಅದರ ವಿಶಿಷ್ಠ ಗುಣಗಳು ಹೊರಹೊಮ್ಮುವವು. ಈ ಅಭಿಪ್ರಾಯವನ್ನೇ ಭರತ ಮುನಿಯ ನಾಟ್ಯ ಶಾಸ್ತ್ರದಲ್ಲಿ

“ಸರ್ವ ಶಾಸ್ತ್ರಣಿ ಶಿಲ್ಪಾನಿ ಕರ್ಮಾಣಿ ವಿವಿಧಾನಿ ಚ ಅಸ್ಮಿನ್ನಾಟ್ಯೋ ಸಮೇತಾನಿ ತಸ್ಮಾ ದೇತನ್ಯ ಯಾ ಕೃತಂ” ಎಂದು ವಿವರಿಸಿದ್ದಾರೆ.

ಒಂದು ಕಡೆಯಲ್ಲಿ ಸಾಹಿತ್ಯಕ್ಕೆ ಪ್ರಾಧಾನ್ಯವಿದ್ದರೆ, ಇನ್ನೊಂದು ಕಡೆ ಸಂಗೀತಕ್ಕೆ ಪ್ರಾಧಾನ್ಯವಿರುವುದು. ಆದರೆ ನೃತ್ಯದಲ್ಲಿ ಮಾತ್ರ ಸಾಹಿತ್ಯ, ಸಂಗೀತ ಮತ್ತು ಇತರ ಕಲೆಗಳೂ ಹಾವಭಾವಗಳ ಜೊತೆಗೆ ಸೇರಿಕೊಂಡು ಮನೋರಂಜಕವಾಗಿದೆ. ಕೆಲವೊಂದು ಕಲೆ, ದೃಶ್ಯ, ಕೆಲವೊಂದು ಕಲೆ ಶ್ರವ್ಯ ಮಾತ್ರ. ಆದರೆ ನೃತ್ಯದಲ್ಲಿ ದೃಶ್ಯವೂ ಶ್ರವ್ಯವೂ ಸಮನ್ವಯವಾಗಿ ಪರಿಮಳಿಸುವುದು. ಆದುದರಿಂದಲೇ ಪ್ರಪಂಚದಲ್ಲಿ ಇದು ತುಂಬಾ ಮಹತ್ವಪೂರ್ಣವಾಗಿದೆ. ಅಲ್ಲದೆ ನೋಡಲೂ ಆಸೆ ಪಡುತ್ತಾರೆ.

“ನಾಟ್ಯಂ ಭಿನ್ನರುಚೇಃ ಜನಸ್ಯ ಬಹುಧಾವ್ಯೇಕಂ ಸಮಾರಾಧನಂ” ಎಂದು ಮಹಾಕವಿ ಕಾಳಿದಾಸನು ಹೇಳುತ್ತಾನೆ.

ಲೋಕದಲ್ಲಿ ಹಲವಾರು ವಿಧದ ಐಶ್ವರ್ಯಗಳಿದ್ದರೂ “ಆರೋಗ್ಯವೇ ಭಾಗ್ಯವು” ಎಂದು ಹಿರಿಯರ ವಚನ. ಮನುಷ್ಯನು ಯಾವಾಗಲೂ ಆರೋಗ್ಯವಂತನಾಗಿಯೂ, ಸುಖಿಯಾಗಿಯೂ ಬಾಳಬೇಕೆಂಬ ಇಚ್ಛೆಯು ಪ್ರತಿಯೊಬ್ಬನಿಗೂ ಇರುವುದರಲ್ಲಿ ಸಂದೇಹವಿಲ್ಲ. ಆದರೆ ಅದು ಹೇಗೆ ಸಾಧ್ಯ? ಅದರ ವಿಚಾರವಾಗಿ ಆಳವಾಗಿ ಯೋಚಿಸುವವರು ಬಹಳ ವಿರಳ. ಯೋಗಾಭ್ಯಾಸದಿಂದಲೋ, ಪ್ರಾಣಾಯಾಮದಿಂದಲೋ ಮತ್ತು ಮಿತಾಹಾರಗಳಿಂದಲೋ ದೇಹಾರೋಗ್ಯ ಮತ್ತು ಮನಸ್ಸಿನ ಸ್ಥಿಮಿತವು ಪ್ರಾಪ್ತವಾಗುವುದೆಂದು ಸಾಮಾನ್ಯವಾಗಿ ಸರ್ವರಿಗೂ ತಿಳಿದ ವಿಷಯ. ಆದರೆ ಈ ಗುಣಗಳೆಲ್ಲವೂ ಸರಿಯಾದ ಅಂದರೆ ಶಾಸ್ತ್ರೀಯವಾದ ನೃತ್ಯಾಭ್ಯಾಸದಿಂದಲೇ ಪ್ರಾಪ್ತವಾಗುವುದರಿಂದ ಸಕಲ ಗುಣ ಸಂಪನ್ನತೆಯೂ ಇದರಲ್ಲಿ ತೋರಿಬರುವುದು. ಮಾತ್ರವಲ್ಲದೆ ಈ ಕಲೆಗೆ ಪಾವಿತ್ರ್ಯತೆ ಕೂಡ ಇದೆ. ಋಗ್ವೇದ, ಯರ್ಜುರ್ವೇದ, ಸಾಮವೇದ ಮತ್ತು ಅಥರ್ವಣ ವೇದಗಳೆಂಬ ನಾಲ್ಕು ವೇದಗಳು. ಈ ವೇದಗಳ ಸಾರಗಳನ್ನು ತಿಳಕೊಳ್ಳಬೇಕೆಂದರೆ ಯಾವ ಮಾನವನಿಂದಲೂ ಸಾಧ್ಯ. ಇತರ ತತ್ವಗಳನ್ನು ಮಾತ್ರ ಪ್ರತಿಯೊಬ್ಬ ವ್ಯಕ್ತಿಯೂ ತಿಳಿದುಕೊಳ್ಳುವುದು ಅತ್ಯವಶ್ಯವೆಂಬ ಸದುದ್ದೇಶದಿಂದ ಈ ನಾಲ್ಕೂ ವೇದಗಳ ಸಾರಗಳನ್ನು ಶೇಖರಿಸಿ ಪಂಚಮ ವೇದವನ್ನು ನಿರ್ಮಿಸಿದ್ದಾನೆ.

ಸರ್ವ ಶಾಸ್ತ್ರರ್ಥ ಸಂಪನ್ನಂ ಸರ್ವ ಶಿಲ್ಪ ಪ್ರವರ್ತಕಂ ||
ನಾಟ್ಯವೇದಂ ತತಶ್ಚಕ್ರೇ ಚತುರ್ವೇದಾಂಗ ಸಂಭವಂ ||
(ನಾಟ್ಯಶಾಸ್ತ್ರ)
ಋಗ್ಯಜಂ ಸಾಮವೇದೇಭ್ಯೋವೇದಾಶ್ಚಾಥರ್ವಣಾತ್ ಕ್ರಮಾತ್ |
ಪಾಠ್ಯಂ ಚಾಭಿನಯಂ ಗೀತಂ ರಸಾನ್ ಸಂಗ್ರಹ್ಯ ಪದ್ಮಜಃ ||

ವೇದಾಭ್ಯಾಸವನ್ನು ಮಾಡಬೇಕಾದರೆ ಪಠನಾಧಿಕಾರವನ್ನು ಹೊಂದಿದವರಾಗಿರಬೇಕು. ಆದರೆ ಈ ನಾಟ್ಯ ಶಾಸ್ತ್ರವನ್ನು ಯಾರು ಬೇಕಾದರೂ ಅಭ್ಯಾಸ ಮಾಡಬಹುದು. ವರ್ಣಾಶ್ರಮ ಧರ್ಮಗಳ ನಿಯಮವು ಇದಕ್ಕಿರದೆ ಇದು ಸಾರ್ವಜನಿಕವಾಗಿದೆ. ಹೀಗಿದ್ದರು ಇದನ್ನು ಎಲ್ಲರೂ ಅಭ್ಯಾಸ ಮಾಡಲಾರರು ಕಾರಣ, “ಶ್ರುತಿರ್ಮಾತಾ ಲಯಃ ಪಿತಾ” ಅಂದರೆ ಶ್ರುತಿ ಜ್ಞಾನ ಮತ್ತು ಲಯ ಜ್ಞಾನವೂ, ತಾಯಿಗೆ ಸಮಾನವಾದ ಸಂಗೀತ ಜ್ಞಾನವೂ ತಂದೆಗೆ ಸಮಾನವಾದ ಲಯಜ್ಞಾನವೂ ಇದ್ದವರು ಮಾತ್ರ ಇದನ್ನು ಕಲಿತುಕೊಳ್ಳಲು ಸಾಧ್ಯ. ಈ ಜ್ಞಾನವು ಮಾತ್ರ ಕೇವಲ ದೈವದತ್ತವಾದುದೇ ಸರಿ. ಜನ್ಮಾಂತರದಲ್ಲಿ ಆಧ್ಯಾತ್ಮಿಕ ಜ್ಞಾನಕ್ಕಾಗಿ ಭಗವಂತನ ನಾಮಸ್ಮರಣೆಗಳನ್ನು ಸಂಕೀರ್ತನೆಯ ಮೂಲಕ ಭಕ್ತಿಪುರಃ ಸ್ಸರವಾಗಿ ಧ್ಯಾನ ಮಾಡಿದವನಾಗಿದ್ದರೆ ಅಂಥವನಿಗೆ ಈ ನಾಟ್ಯ ಕಲೆಯು ಬೇಗನೇ ಒಲಿಯುವುದರಲ್ಲಿ ಸಂದೇಹವಿಲ್ಲ. ಅದರಿಂದಲೇ ಪ್ರಪಂಚದಲ್ಲಿ ಅವನು ಖ್ಯಾತಿಯನು ಹೊಂದವನು. ಈ ರೀತಿಯಾಗಿ ನಾಟ್ಯ ಕಲೆಯ ವೇದ ಸಾರವೆಂದಾದ ಮೇಲೆ, ದೈವಭಕ್ತಿಯು ತಾನಾಗಿಯೇ ಬಂದು ಸೇರುವುದು. ಇದು ಭಗವಂತನಿಗೆ ಅತಿ ಪ್ರಿಯವಾದದ್ದು.

“ದೇವಾನಾಮಿದ ಮಾಮನಂತಿ ಮುನಿಯಃ ಕಾಂತಂ ಕ್ರತುಂ ಚಾಕ್ಷುಷಂ” ಎಂದು ಕಾಳಿದಾಸನೂ ಇದರ ಪಾವಿತ್ರ್ಯತೆಯನ್ನು ಪ್ರತಿಪಾದಿಸಿದ್ದಾನೆ. ಆದುದರಿಂದಲೇ ಭಗವಂತನ ಪೂಜಾವಸಾನದಲ್ಲಿ. ಛತ್ರಿ ಚಾಮರಾದ್ಯುಪಚಾರಗಳ ನಂತರ ನೃತ್ಯಂ ಸಮರ್ಪಯಾಮಿ, ಗೀತಂ ಸಮರ್ಪಯಾಮಿ ಎಂದು ಹೇಳುವ ಪದ್ಧತಿಯು ಇವತ್ತಿಗೂ ಆಚರಣೆಯಲ್ಲಿದೆ. ಪ್ರಾಚೀನ ದೇವಾಲಯಗಳಲ್ಲಿ ಪ್ರತಿನಿತ್ಯವು ನೃತ್ಯ ಸೇವೆಯು ನಡೆಯುತ್ತಿತ್ತೆಂದೂ, ಉತ್ಸವಾದಿ ಕಾಲಗಳಲ್ಲಿ ಉತ್ಸವ ಮೂರ್ತಿಯು ಹೊರ ಹೊರಟಾಗ ಸಂಗೀತ ಸೇವೆಯು ಹೇಗೆ ನಡೆಯುವುದೋ, ಅಂತೆಯೇ ನೃತ್ಯ ಸೇವೆಯೂ ನಡೆಯುತ್ತಿತ್ತೆಂದು ಹಿರಿಯರಿಂದ ಕೇಳಿದ್ದೇವೆ. ಕಾಲ ಕ್ರಮೇಣ ಅದು ಯಾವ ಕಾರಣದಿಂದಲೋ ತುಚ್ಛವೆಂದು ಪರಿಗಣಿಸಲ್ಪಟ್ಟು ಈಗಿನ ಜನಾಂಗಕ್ಕೆ ಆ ಕಾಲದಲ್ಲಿ ಹೇಗಿತ್ತೆಂಬ ಕಲ್ಪನೆಯೂ ಬರದಂತಾಗಿದೆ. ಇಂಥಾ ಅನೇಕ ಒಳ್ಳೇ ಸಂಪ್ರದಾಯಗಳು ಈಗಿನ ನಾಗರೀಕತೆಯಿಂದಾಗಿ ಅದೆಲ್ಲೋ ಮಾಯವಾದಂತಿವೆ. ಈಗ ದೇವಾಲಯದಲ್ಲಿ ನಿಂತು ಹೋದರೂ, ಪ್ರತಿಯೊಂದು ಆಲಯಗಳಲ್ಲೂ ಸಂಗೀತ ಮತ್ತು ನೃತ್ಯಾಭ್ಯಾಸದ ಝೇಂಕಾರವು ಕೇಳಿ ಬರುತ್ತಿರುವುದು ಸ್ತುತ್ಯರ್ಹವಾಗಿದೆ. ಅದನ್ನೇ ಉತ್ತಮ ರೀತಿಯಲ್ಲಿ ಭಕ್ತಿ ಶ್ರದ್ಧೆಯಿಂದ ಅಭ್ಯಾಸ ಮಾಡಿದರೆ ನಮ್ಮ ಆಲಯವೇ ದೇವಾಲಯವಾಗುವುದರಲ್ಲಿ ಸಂದೇಹವಿಲ್ಲ. ಕೇವಲ ಮನೋರಂಜನೆಗಾಗಿ ಮಾತ್ರ ನೃತ್ಯವೆಂದು ಪರಿಗಣಿಸದೆ, ಮೋಕ್ಷ ಸಾಧನೆಗೂ ಇದೇ ಸುಗಮ ಮಾರ್ಗವೆಂದು ನಮ್ಮಲ್ಲಿ ದೃಢ ಸಂಕಲ್ಪವಿರಬೇಕು. ದೇವರು ಒಲಿದರೆ ಮಾತ್ರ ಮೋಕ್ಷ ಸಿದ್ದಿ. ಆ ವಿಧಾನವೆಂತು? ದೇವರನ್ನು ಹೂ ಮಾಲೆಗಳಿಂದ ಅಲಂಕರಿಸಿ ಪೂಜಿಸುವುದರಿಂದಲೋ, ಯಜ್ಞಯಾಗಾದಿಗಳನ್ನು ಮಾಡಿಸುವುದರಿಂದಲೋ ದೇವರನ್ನು ತೃಪ್ತಿಪಡಿಸುವುದಕ್ಕಿಂತಲೂ, ಭಕ್ತಿ ಶ್ರದ್ಧೋಪೇತವಾದ ನೃತ್ಯ  ಸೇವೆಯಿಂದಾಗಿ ಭಗವಂತನನ್ನು ಬೇಗನೇ ಒಲಿಸಿಕೊಳ್ಳಬಹುದೆಂದಿದ್ದಾರೆ.

“ನತಥಾ ಗಂಧಮಾಲ್ಯೇನ ದೇವಾಸ್ತು ಪ್ಯಂತಿ ಪೂಜಿತಾಃ||
ಯಥಾ ನಾಟ್ಯ ಪ್ರಯೋಗಜ್ಯ ಸೈಃ ತುಷ್ಯಂತಿ ಸ್ತುತಿ ಮಾಂಗಲ್ಯೆ||
(ನಾಟ್ಯಶಾಸ್ತ್ರ)

ಯತಿಶ್ರೇಷ್ಠರಾದ – ಮಧ್ವಮತ ಸ್ಥಾಪಕರಾದ ಶ್ರೀ ಮನ್ಮಧ್ವಾಚಾರ್ಯರು ಸಮುದ್ರ ತೀರದಿಂದ ಕೃಷ್ಣನ ವಿಗ್ರಹವನ್ನು ಹೊತ್ತುಕೊಂಡು ಉಡುಪಿಗೆ ಬರುವ ತನಕವೂ ಭಕ್ತಿಯಿಂದ ಹಾಡಿಕೊಂಡು ಬಂದಿರುವರೆಂದು ಅವರ ದ್ವಾದಶ ಸ್ತೋತ್ರದ ಶ್ಲೋಕಗಳ ತಾಳ ಕಟ್ಟನ್ನು ನೋಡಿದರೇನೇ ಸ್ಪಷ್ಟವಾಗುವುದು. ಆಚಾರ್ಯರು ಆಂಜನೇಯರ ಅವತಾರವಾದುದರಿಂದ ಸಂಗೀತ ಮತ್ತು ನೃತ್ಯವು ಅವಶ್ಯವಾಗಿ ತಿಳಿದಿರಲೇಬೇಕು. ಭಕ್ತಿ ಶಿರೋಮಣಿ ಪುರಂದರ ದಾಸರು, ಕನಕದಾಸರು ಮತ್ತಿತರ ದಾಸ ವರ್ಗದವರು, ತ್ಯಾಗರಾಜ ಸ್ವಾಮಿಗಳು, ಸಂತ ತುಕಾರಾಮ್, ಕಬೀರ ದಾಸ್, ಮೀರಾಬಾಯಿ ಇತ್ಯಾದಿ ಹಲವಾರು ಭಕ್ತರುಗಳು ಕಾಲಿಗೆ ಗೆಜ್ಜೆಯನ್ನು ಕಟ್ಟಿಕೊಂಡು, ನೃತ್ಯದೊಂದಿಗೆ ಭಗನ್ನಾಮ ಸಂಕೀರ್ತನೆಯಿಂದಲೇ ಮುಕ್ತಿಯನ್ನು ಹೊಂದಿರುವರೆಂದು ಇತಿಹಾಸ ಪ್ರಸಿದ್ಧ. ಅಂತೂ-ಇಲ್ಲಿ ಒಂದು ಮಾತನ್ನು ಮುಖ್ಯವಾಗಿ ಹೇಳುವುದೇನೆಂದರೆ ನಮ್ಮ ಪೂರ್ವಿಕರು ಭಕ್ತಿಯಿಂದ ಭಗವನ್ನಾಮ ಸಂಕೀರ್ತನೆಗಳನ್ನು ಮಾಡಿರುವುದಾದರೆ, ಅಂಥವರ ಪೀಳಿಗೆಯಲ್ಲಿ ಈ ನೃತ್ಯ ಕಲೆಯು ವಿಶೇಷ ಸಾನ್ನಿಧ್ಯದೊಂದಿಗೆ ಪ್ರಕಾಶಿಸಲು ಸಂದರ್ಭವಿರುತ್ತದೆ.

ನಾಟ್ಯ ಶಾಸ್ತ್ರದಲ್ಲಿ, ನೃತ್ಯ, ನಾಟ್ಯ, ಅಭಿನಯಗಳೆಂಬ ನಾಲ್ಕೂ ಪ್ರಭೇದಗಳಿದ್ದರೂ ನಾಟ್ಯವನ್ನು ಮಾತ್ರ ವೃಂದದ ಜೊತೆಗೆ ಪ್ರದರ್ಶಿಸಲಾಗುವುದು. ಕಾರಣ, ಕಥಾಪಾತ್ರಗಳನ್ನು ಪ್ರತ್ಯೇಕವಾಗಿ ಚಿತ್ರಿಸಿ, ಪುರಾಣ ಕಥೆಗಳನ್ನೋ ಅಥವಾ ಐತಿಹಾಸಿಕ ಕಥೆಗಳನ್ನೋ ಆಧಾರವಾಗಿಟ್ಟುಕೊಂಡು ಆಯಾಯ ಪಾತ್ರಗಳ ವೇಷ ಭೂಷಣಾಧಿಗಳನ್ನು ಧರಿಸಿ ಅಭಿನಯಿಸುವುದೇ ನಾಟ್ಯ.

“ನಾಟ್ಯಂ ತನ್ನಾಟಕಂಚೈವ ಯೋಜ್ಯಂ ಪೂರ್ವ ಕಥಾಯುತಂ” ಎಂದು ಅಭಿನಯ ದರ್ಪಣದಲ್ಲಿ ಸ್ಪಷ್ಟವಾಗಿ ವಿಧಿಸಿದ್ದಾರೆ. ಈ ಕಥಾ ಪಾತ್ರಗಳನ್ನು ಸೃಷ್ಟಿಸಬೇಕಾದರೆ ಹಲವಾರು ಪುರಾಣ ಕಥೆಗಳನ್ನೋ ಅಥವಾ ಸಾಮಾಜಿಕ ಕಥೆಗಳನ್ನೋ ಚೆನ್ನಾಗಿ ಪರಿಶೀಲಿಸಿ, ಆಯಾಯ ಪಾತ್ರದ ವಿಶೇಷ ಗುಣಗಳಿಗೆ ಧಕ್ಕೆಯುಂಟಾಗದಂತೆ ನೋಡಿಕೊಂಡು, ಈ ಕಥಾ ಪಾತ್ರದ ಜೊತೆಗೆ ನಾವೂ ಚೆನ್ನಾಗಿ ಬೆರೆತು, ಮೈಮರೆತು ಅಭಿನಯಿಸುವುದರಿಂದ ಪ್ರೇಕ್ಷಕರ ಮನಸ್ಸನ್ನು ಸೂರೆಗೊಂಡು ಅವರ ವಿಶೇಷ ವರ್ಣನೆಗೆ ಪಾತ್ರರಾಗಿ ಕೀರ್ತಿಶಾಲಿಗಳಾಗುವುದರಲ್ಲಿ ಸಂದೇಹವೇ ಇಲ್ಲ. ಒಂದು ನೃತ್ಯ ನಾಟಕವನ್ನು ಜೋಡಿಸಬೇಕಾದರೆ ಹಲವಾರು ಸಂಕಷ್ಟಗಳನ್ನನುಭವಿಸಿ, ರಂಗಮಂಟಪದಲ್ಲಿ ಪ್ರದರ್ಶಿಸಬೇಕಾಗಿದೆ. ಇದಕ್ಕೆ ಹಲವಾರು ಕಲಾವಿದರ, ಕರ್ಮಯೋಗಿಗಳ ಸಹಕಾರವಿದ್ದು, ಶಾಸ್ತ್ರದಲ್ಲಿ ನಿರೂಪಿಸಿದಂತೆ ಪಾತ್ರ ಲಕ್ಷಣಗಳನ್ನನುಸರಿಸಿದೆವೆಂದರೆ ನಾಟ್ಯ ಪ್ರಯೋಗವು ಯಶಸ್ವಿಯಾಗಲು ಸಾಧ್ಯ. ಇದರಲ್ಲಿ ಬರುವ ಕಥಾ ಪಾತ್ರಗಳನ್ನೆಲ್ಲಾ ಯಾವ ಯಾವ ಶೈಲಿಯಲ್ಲಿ ಉಪಯೋಗಿಸತಕ್ಕದೆಂಬ ಪ್ರಶ್ನೆಯುಂಟಾಗಬಹುದು. ಇದು ನಾಟಕವಾದುದರಿಂದ ಒಂದೇ ಶೈಲಿಯನ್ನನುಸರಿಬೇಕಾಗಿಲ್ಲ. ಅಪಾರ ಪಾತ್ರಗಳ ಗುಣ ನಡತೆಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡು ಅದಕ್ಕೆ ಯೋಗ್ಯವಾದ ಶೈಲಿಯನ್ನಾಧರಿಸಿ, ನೃತ್ಯವನ್ನಳವಡಿಸುವುದರಿಂದ ಮತ್ತಷ್ಟು ಮೆರುಗೇರುವುದು. ಇದನ್ನು ನೋಡಿ ಪ್ರೇಕ್ಷಕರಿಗೂ ಉತ್ಸಾಹವುಂಟಾಗುವುದರಲ್ಲಿ ಸಂದೇಹವಿಲ್ಲ. ನೃತ್ಯ ಮತ್ತು ನೃತ್ಯಗಳಲ್ಲಿ ಹಾವಭಾವಗಳಿಗೆ ಮಾತ್ರ ಮುಖ್ಯತ್ವವನ್ನು ಕೊಡುವುದು ಸಹಜ. ಆದರೆ ನಾಟ್ಯದಲ್ಲಿ ಹಾವ-ಭಾವಗಳಿರಬೇಕಾದರೂ ಪಾತ್ರ ರಚನೆಯೆಂಬುದು ಅತಿ ಮುಖ್ಯವಾದುದು. ಉದಾಹರಣೆಗಾಗಿ ರುಕ್ಮಿಣಿ ಮತ್ತು ಕೃಷ್ಣರ ಪಾತ್ರವೆಂದಿಟ್ಟುಕೊಳ್ಳೋಣ. ಪುರಾಣಗಳಿಂದಲೋ ಹಿರಿಯರ ಕೃತಿಗಳಿಂದಲೋ, ತತ್ತಾತ್ಪಾತ್ರ ಲಕ್ಷಣಗಳು ಹೇಗಿರಬಹುದೆಂದು ಪ್ರತಿಯೊಬ್ಬನಿಗೂ ಕಾಲ್ಪನಿಕವಾಗಿ ತಿಳಿದಿರುವುದು. ತದ್ವಿರುದ್ಧವಾದ ಅಂಗ ಲಕ್ಷಣಗಳುಳ್ಳ ವ್ಯಕ್ತಿಯನ್ನಾರಿಸಿದರೆ ಹಾಸ್ಯಕ್ಕೀಡಾಗಬಹುದು. ರುಕ್ಮಿಣಿ ಕೃಷ್ಣರಲ್ಲಿದ್ದ ನಮ್ಮ ಕಲ್ಪನೆಯು ಹಾರಿ ಹೋದಂತಾಗುವುದು. ಆದುದರಿಂದ ನಾಟ್ಯದಲ್ಲಿ ಮುಖ್ಯವಾಗಿ ಗಮನಿಸಬೇಕಾದದ್ದು ಪಾತ್ರ ರಚನೆ. ಸರಿಯಾದ ಪಾತ್ರ ರಚನೆಯಾದರೆ ಇದರ ಸಂಪೂರ್ಣತೆಯು ಬಂತೆಂದರ್ಥವೂ ಅಲ್ಲ. ಇದಕ್ಕೆ ರಂಜಕವಾದ ಸಂಗೀತದ ಹಿನ್ನೆಲೆಯೂ ಬೇಕು.

“ಗೀತೇ ಚ ವಾದ್ಯೇ ಚ ಹಿ ಸುಪ್ರಯುಕ್ತೇ
ನಾಟ್ಯ ಪ್ರಯೋಗೋ ನ ವಿಪತ್ತಿಮೇತಿ” (ನಾಟ್ಯಶಾಸ್ತ್ರ)

ಇದು ಸಂಗೀತದಂತೆ ಸ್ವತಂತ್ರ ಕಲೆಯಲ್ಲ. ಹಿನ್ನೆಲೆಯಲ್ಲಿ ಅನೇಕರ ಸಹಕಾರಗಳು ತುಂಬಾ ಅವಶ್ಯ. ಸಾಹಿತ್ಯ ರಚನೆ, ಸಂಗೀತ ರಚನೆ, ನೃತ್ಯ ರಚನೆ, ರಂಗ ಮಂಟಪ, ವಿದ್ಯುದೀಪಾಲಂಕಾರ, ಧ್ವನಿಯಂತ್ರ, ವರ್ಣಾಲಂಕಾರ, ವೇಷ ಭೂಷಣಾದಿಗಳು. ಇವೆಲ್ಲವೂ ಒಮ್ಮತದಿಂದ ಸಹಕೃತ್ಯವಾದರೆ ಕಾರ್ಯಕ್ರಮ ಯಶಸ್ವಿಯಾಗಿ ಜರುಗುವುದು. ಇಷ್ಟೆಲ್ಲಾ ಸಹಕಾರಗಳಿದ್ದರೂ ಸಾಲದು. ಪತ್ರಿಕಾಕರ್ತರ ಸಹಕಾರವೂ ಮುಖ್ಯವಾಗಿರಬೇಕು. ಇಲ್ಲವಾದರೆ ನೀರಿನಲ್ಲಿ ಹೋಮ ಮಾಡಿದಂತೆಯೇ ಸರಿ. ಈ ಹಿಂದೆ ಹೇಳಿದ ಹಾಗೆ ಇಂಥಾ ಸಂಕಷ್ಟಗಳಿಂದ ಪಾರಾಗಿ, ಎಲ್ಲರ ಸಹಕಾರವನ್ನು ಹೊಂದಿ, ನೃತ್ಯ ಕಾರ್ಯಕ್ರಮವನ್ನಾರಂಭಿಸಿದರೆ, ಪ್ರೇಕ್ಷಕರ ಸಹಕಾರವಂತೂ ಇದ್ದೇ ಇರುವುದು. ಇದರಿಂದಾಗಿ ನಾವು ವಿಜಯಶಾಲಿಗಳಾಗಬಹುದು. ನಮ್ಮ ನಾಟ್ಯ ಪ್ರಯೋಗದಲ್ಲಿ ಒಳ್ಳೇ ಕಥಾ ಭಾಗವಿದ್ದರೆ, ಲೋಕಕ್ಕೆ ನೀತಿ ಬೋಧನೆಯನ್ನು ಮಾಡುವಂಥಾ ಸತ್ಕಾರ್ಯವೂ ಇದರ ಜೊತೆಗೇ ನಡೆಯುವಂತಾಗುವುದು. ಹೀಗೆ ಹಲವಾರು ಕಾರಣಗಳಿಂದ ನೃತ್ಯವು ಪ್ರತಿಯೊಬ್ಬ ಮಾನವನಿಗೂ ಅತ್ಯುಪಯುಕ್ತವಾದ ಒಂದು ವಿಶೇಷ ಕಲೆ. ಇದನ್ನು ಭಕ್ತಿ ಶ್ರದ್ಧೆಯಿಂದ ಅಭ್ಯಾಸ ಮಾಡಿ, ಪ್ರತಿಯೊಬ್ಬ ಮಾನವನು ಲೋಕದಲ್ಲಿ ಸುಖ ಶಾಂತಿಯನ್ನು ಹೊಂದುವಂತಾಗಲೆಂದು ಸಕಲ ಕಲೇಶನಾದ ಸಕಲೇಶನನ್ನು ಅನನ್ಯ ಭಕ್ತಿಯಿಂದ ಪ್ರಾರ್ಥಿಸೋಣ. ಶುಭಂ.