ವೈದೇಹೀದೂತ ಹನುಮಂತ

ವಾಲ್ಮೀಕಿಯ ರಾಮಾಯಣದ ಅಂತರ್ಯದಲ್ಲಿ ರಾಮ ಆತ್ಮನನ್ನು ಪ್ರತಿನಿಧಿಸಿದರೆ ಸೀತೆಯು ಭಾವ ಶಕ್ತಿಯಾಗಿ ಭಕ್ತಿಯ ರೂಪವಾಗಿ ನಿಲ್ಲುವಳು. ಹನುಮಂತ ಕಾರ್ಯಕುಶಲ ಜೀವನಾಗಿ ನಿಲ್ಲುತ್ತಾನೆ. ಹನುಮನ ಗುಣಸಂಪತ್ತು, ದೈಹಿಕಶಕ್ತಿ, ಚಿತ್ತ ದೃಢತೆಯೆಲ್ಲವೂ ಸೀತಾನ್ವೇಷಣೆಗಾಗಿ-ಸಾಗರ, ಪರ್ವತ, ಜಲಚರ, ರಾಕ್ಷಸ, ರಾತ್ರಿ, ಸಂಶಯ, ಭಯ, ತವಕ, ಜುಗುಪ್ಸೆ, ಕ್ರೋಧ ಇವುಗಳ ರೂಪದಲ್ಲಿ ಎದುರಾದ ಭವದ ಎಲ್ಲ ಅಡ್ಡಿ ಆತಂಕಗಳನ್ನು ಎದುರಿಸಿ ನಿವಾರಿಸಿ ಸಕಾಲಕ್ಕೆ ಸೀತೆಯನ್ನು ಕಾಣುವುದು ಮನನ ಯೋಗ್ಯ. ತನ್ನಲ್ಲಿಡಗಿರುವ ಸೀತಾರೂಪಿ ಭಾವಶಕ್ತಿಯನ್ನು ಆತ್ಮದ ಕಡೆಗೆ ವಾಲುವ ಭಕ್ತಿಯನ್ನು ಗುರುತಿಸುವುದು. ಸೀತೆಯ ಹರಿಕಾರನಾಗಿ ರಾಮನನ್ನು ಆತ್ಮಾರಾಮನನ್ನು ತಲುಪುವುದು ಹನುಮರೂಪಿ ಜೀವದ ಏಕೈಕ ಗುರಿ. ಅದನ್ನು ಸಾಧಿಸಿದ ಭಾಗವೇ ರಾಮಾಯಣದ ಸುಂದರಕಾಂಡ ಸುಂದರವಾದ ಕಾಂಡ-ನಿರಂತರ ಪಾರಾಯಣದ ಕಾಂಡ. ಇದುವೇ ಈ ನೃತ್ಯರೂಪಕದ “ದರ್ಶನ”.

ಒಂದೇ ಪಾತ್ರವು ಒಂದು ಉದ್ದೇಶಕ್ಕಾಗಿ ನಡೆಸಿದ ಪ್ರಯತ್ನದ ಅನುಭವಗಳನ್ನು ಅನುಕ್ರಮದಲ್ಲಿ ಹೇಳುವ ಕಥೆಯ ಸೂತ್ರದಲ್ಲಿ ನವರಸಗಳನ್ನು ಪೋಣಿಸಲಾಗಿದೆ. ವೈದೇಹಿಯಿತ್ತ ಚೂಡಾಮಣಿಯನ್ನು ರಾಮನಲ್ಲಿಗೆ ಒಯ್ದು ವರದಿಯೊಪ್ಪಿಸಿದ ಹನುಮನಲ್ಲಿ ರಾಮನ ಕೋರಿಕೆಯೆಂದರೆ ಸೀತಾನ್ವೇಷಣೆಯಲ್ಲಿ ಹನುಮನಿಗಾದ ಅನುಭವಗಳನ್ನು ಮತ್ತೊಮ್ಮೆ ವಿಷದವಾಗಿ ನಿಧಾನದಲ್ಲಿ ಹೇಳಬೇಕೆಂದು ಕೇಳಿ ತನ್ನ ವಿರಹ ಜೀವಕ್ಕೆ ಕೊಂಚ ನೆಮ್ಮದಿ ಸಿಗಲೆಂದು ಈ ಕೋರಿಕೆ. ರಾಮಭಂಟ ಹನುಮನಿಗಾದರೋ ಇದಕ್ಕಿಂತ ಮಿಗಿಲಾದ ಕಾರ್ಯ ಮತ್ತೊಂದಿಲ್ಲ. ಸ್ವಾಮಿ ಕಾರ್ಯವಾಗಿ ರಾಮನಿಗೆ ಸಾಂತ್ವನ ಸಿಕ್ಕುವುದಲ್ಲದೆ ಸ್ವಕಾರ್ಯವಾಗಿ ಅನುಭವವೆಲ್ಲವನ್ನೂ ರಸವಾಗಿಸಿ ಮತ್ತೊಮ್ಮೆ ಆಸ್ವಾದಿಸುವ ಆನಂದ.

ವೈದೇಹೀದೂತ ಹನುಮಂತ

ಬಂದಿಹೆನು ಕೃತಕೃತ್ಯ ದೊರೆನಿನ್ನ ಸನ್ನಿಧಿಗೆ
ನಿನ್ನ ಮನ ಸಂತಯಿಸೆ ಹಿರಿಮೆಯದು ಉಜ್ಜುಗವು
ನಿನ್ನಾಸೆ ಪೂರಯಿಸೆ ಮತ್ತೊಮ್ಮೆ ಅಭಿನಯಿಸಿ
ಸವಿಯುವೆನು ಎಲ್ಲ ಪರಿ ರಸಗಳನ್ನು ಸೊಗದಲ್ಲಿ
ದರ್ಶಿಸಲಿ ಪರಿಜನವು ಸೀತೆಯಾ ತಪವನ್ನು

 

 

 

ವೀರ

ಜಾಂಬವನು ಬೆನ್ನಟ್ಟಿ ಹುರುಪಿಸಲು ವೀರ‍್ಯವನ್ನು
ಕೈಂಕರ್ಯ ನೆನೆದುಬ್ಬಿ ಬೆಲೆಯಿತೀ ಕಪಿದೇಹ
ವಾರಿಧಿಯ ಅಳೆಯುವನು ಶ್ರೀರಾಮ ಕಿಂಕರನು
ವೀರರಸ ತುಂಬಿರಲು ಕೆಚ್ಚೆದೆಯ ಬಂಟನಲಿ
ಹಾರಿದನು ಹನುಮಂತ ಉಗ್ಗಡಿಸಿ ಜಯರಾಮ

ಅದ್ಭುತ

ಅಸ್ತರವಿ ಕಿರಣದಲ್ಲಿ ಮಿಂದ ಸಿರಿ ಲಂಕೆ
ಕನಕಮಯ ಸೌಧಗಳು ಉಪವನಗಳೆನಿತು
ಇಂದ್ರಧನು ದೀಪಗಳು ಕಾರಂಜಿ ನೂರು
ಭಾಪುರೆ ! ಅದ್ಭುತವು ಪುರದ ವಿನ್ಯಾಸ
ವೀಥಿಯಲಿ ನಡೆಯುತಿರೆ ಸಂಭ್ರಮದ ಭ್ರಮೆಯು

ಭೀಭತ್ಸ

ನಿನ್ನರಸಿ ಸೀತೆಯನು ಲಂಕೆಯಲಿ ಹುಡುಕಿದೆನು
ಇರುಳಿನಲಿ ನಗರಿಯಿದು ಭೋಗಗಳ ಹುತ್ತವು
ತಲೆದೆದರಿ ಉಡೆಜಾರಿ ಮತ್ತಿನಲಿ ಓಲಾಡಿ
ವಿಕರಾಳ ದೇಹಗಳು ಬೆವರಿಂದೆ ನಾರಿತ್ತು
ಭೀಭತ್ಸ ದೃಶ್ಯವದು ಓಕರಿಕೆ ತಂದಿತ್ತು.

ಶಾಂತ

ಶೀಲವತಿ ಸೀತೆಯನು ಬನದಲ್ಲಿ ಅರಸಿದೆನು
ಮರದಡಿಯೆ ರಾಮಸತಿ! ಏಕಾಕಿನೀತಪಸಿ
ರಾವಣನ ಬೆದರಿಕೆಗೆ ಧಿಕ್ಕಾರ ಸಾಧ್ವಿಯದು
ಶಾಂತಮನ ವಿಹುದಲ್ಲೆ ಜಾನಕೀ ಪದ ತಳದಿ
ಶ್ರೀರಾಮ ಸೀತೆಯರ ಮಿಲನವದು ಶುಭಸನಿಹ

 

ಭಯಾನಕ

ಮಾತೆಯಾ ಕೊರಳಲ್ಲಿ ನೀಳಮುಡಿಯ ಕುಣಿಕೆಯೇ!
ಕಂಡೊಡನೆ ಬಾಯಿಗೆ ಬಂದಿತ್ತು ಎನ ಜೀವ
ಮುಗಿಸದಿರು ಹರಣವದು ರಾಮನದು ಮಾತಾಯಿ
ಭಯದಿರಿತ ಮನಗಂಡೆ ಮೊದಲಸಲ ಎನತಂದೆ
ತತ್ತರಿಸಿ ಕುಸಿದೆನಾ ನಿನ್ನ ನೇ ಜಪಿಸುತ್ತ

ಕರುಣ

ಶ್ರೀರಾಮ ಜಪಕೇಳಿ ತಿರುಗಿದಳು ತಾಯೀ
ಕೈಗಿತ್ತ ಉಂಗುರವ ಕಂಡೊಡನೆ ಸುಯ್ದಳು
ಮತ್ತಾವ ಮಾಯೇ ನೀ ಕೊಲಲೆನ್ನ ಈ ಪರೀ
ಕರುಣೆಯೇ ಮೈವೆತ್ತು ನಿಂತಿತ್ತು ಮರದಡಿಯೆ
ಕೈ ಬೆರಳು ಸವರಿತ್ತು ಕಾಂತನಾ ಉಂಗುರವ

ಶೃಂಗಾರ

ಉಂಗುರವ ಮುತ್ತಿಕ್ಕಿ ಎದೆಗೊತ್ತಿ ಕಣ್ಣೊತ್ತಿ
ದೊರೆಕುವರಿ ನೆನೆಸಿದಳು ನೀನಿಟ್ಟ ತಿಲಕವನು
ದೈವೀಕ ಶೃಂಗಾರ ರಸಛಾಯೆ ಕಂಡೆನಕೊ !
ಜೊತೆಯಲ್ಲೆ ತಿಳಿಸಿದಳು ಕಾಕವೃತ್ತಾಂತವನು
ಕೊಟ್ಟಳಿದ ಕುರುಹಾಗಿ ನಿನಗೆಂದು ಚೂಡಾಮಣಿ

ಹಾಸ್ಯ

ಶಿಂಶುವನ ಪಾಳ್ಗೆಡವಿ ಕಾಯ್ತರಿದು ತಿರುಚಾಡಿ
ಮರದಿಂದ ಜಿಗಿಯುತ್ತೆ ಬಾಲದಿಂ ನೇತಾಡಿ
ಕುಪ್ಪಳಿಸಿ ತಲೆಕೆರೆದು ಗಿಂಜುತ್ತ ಬಳಿಸಾರೆ
ಮಿದು ಹಾಸ್ಯ ಕಣ್ತುಳುರೆ ತುಟಿಯಂಚು ಸೇರಿತ್ತು
ಕೋಡಂಗಿ ಎಂದು ಸುರಿ ತಲೆ ಸವರಿ ಮುದಿಸಿದಳು

 

ವ್ಯಂಗ್ಯ

ಕಿರಿಕಪಿಯ ಹಿಡಿಯಲ್ಕೆ ಪಿರಿಸೇನೆ ಹೆಣಗಿತ್ತು
ದೂತನನು ಬಂಧಿಸಲು ಬ್ರಹ್ಮಾಸ್ತ್ರಬೇಕಾಯ್ತು
ಕಪಿಬಾಲ ಉರುಹಿದರು ಶತಮೂರ್ಖ ಸೈನಿಕರು
ವ್ಯಂಗವಿದು ಕಪಿಗೊಂದು ಅಗ್ನ್ಯಸ್ತದೊರೆತ್ತಿತ್ತು

ರೌದ್ರ

ಬಾಲದುರಿ ಲಂಕೆಯನು ಹೊತ್ತಿಸುತ ಮೆರೆದಿತ್ತು
ದುರ್ನೀತ ರಾವಣನ ಬೀಡಿದನು ಸುಟ್ಟುರುಹೆ
ಆಕಾಶಕೆಂಪಾಯ್ತು ಕರ್ಬೊಗೆಯು ಅಡರಿತ್ತು
ಕಾಮುಕರ ಚೀತ್ಕಾರ ದಳ್ಳುರಿಯ ಪೂತ್ಕಾರ
ರುದ್ರನಾ ತಾಂಡವವೆ ಆಡಿದನು ಆಗ್ನಿಯು
ಧರ್ಮದಾ ಕೋಪಕ್ಕೆ ಸಿರಿಲಂಕೆ ಬಲಿಯಾಯ್ತು

ಶಾಂತ

ವೈದೀಹಿ ದೂತನದು ಬಿನ್ನಪವು ಸನ್ನಿಧಿಗೆ
ತಳು ಹದಿರು ಕಾಲಗಡು ಇನ್ನೆರಡು ಮಾಸಗಳು
ಸೀತೆಯನ್ವೇಷಣೆಯೆ ಅಂತರ್ಯದೀಕ್ಷಣಿಯು
ರಾಮಕಥೆ ಬೆಳೆಸಿಹೆನು ಭವಪಾರ ದಾಟಿಹೆನು
ಊರದಲ್ಲಿ ನೆಲೆರಾಮ ರಾಮನಡಿ ನೆಲೆಯಾಳು.

ಹೀಗೆಯೇ, ಎರಡು ರೂಪಕಗಳ ದರ್ಶನವನ್ನು ನೋಡಿ ರಸಾಭಿನಯದ ಉದ್ದೇಶ ತಿಳಿಯಬಹುದು.

ಶಿವಶಕ್ತಿಸಮಾಗಮ:

ಶಿವ-ಶಕ್ತಿ ಅಥವಾ ಪುರುಷ ಪ್ರಕೃತಿ ಒಂದೇ “ತತ್ವ”ದ ಎರಡು ಮುಖಗಳು ಶಿವ ಅಥವಾ ಪುರುಷ ಆತ್ಮ ಸ್ವರೂಪಿಯಾಗಿ ಸಾಕ್ಷೀರೂಪನಾಗಿ ಶಮೆಯಲ್ಲಿ ನೆಲೆ ನಿಂತು ಬ್ರಹ್ಮಾನಂದ ಪಡೆದರೆ, ಆ ನೆಲೆಯನ್ನು ಆಧರಿಸಿ ಇತರ ಭಾವಗಳನ್ನು ಸಂಚಾರಿಗಳಾಗಿ ಅನುಭವಿಸಿ ಆನಂದ ಪಡೆವ ಮುಖವೇ ಶಕ್ತಿ ಅಥವಾ ಜೀವಸ್ವರೂಪ. ತತ್ವ ಒಂದೇ ಬ್ರಹ್ಮಾನಂದ. ಶಕ್ತಿ ಅಥವಾ ಪಾರ್ವತಿಯ ಒಳಗೆಲ್ಲ ತುಂಬಿರುವುದು ಶಿವ ಪ್ರೇಮ. ಪುರುಷ ಪ್ರಕೃತಿಯರ ಅವಿನಾ ಸಂಬಂಧ, ಯಾವುದೇ ಭಾವವಿರಲೀ, ಪಾರ್ವತಿಯು ಪ್ರತಿಕ್ರಿಯಿಸುವುದು ಭವರೂಪಿ ಶಿವನಿಗೇ ! ಬಾಲೆ ಪಾರ್ವತಿಯು ಶಿವನ ಸೇವೆಗೆ ನಿಂತಾಗ ಶೃಂಗಾರ ಭಾವ ತುಂಬಿರುತ್ತದೆ. ಅವನು ಯೋಗದಲ್ಲಿರುವುದರಿಂದ ಭಯದ ಭಾವವೂ ಪಾರ್ವತಿಯ ಚಿತ್ತದಲ್ಲಿ ಸುಳಿದಾಡುತ್ತದೆ. ಬಳಿ ಸಾರಿದಕ್ಷಣವೇ ಕಾಮದೇವನ ಶರಸಂಧಾನವೂ ಆಗಿ ಶಿವ ಹಣೆಗಣ್ಣು ತೆರೆದಾಗ ಪಾರ್ವತಿಯು ವಿಸ್ಮಯ ಪಡುತ್ತಾಳೆ. ನಿರಾಶಳಾಗಿ ದೇಹ ಸೌಂದರ್ಯದ ನಿಷ್ಪ್ರಯೋಜನವನ್ನು ಕಂಡು ಕೊಂಡವಳಲ್ಲಿ ದೇಹದ ಬಗ್ಗೆ ಜುಗುಪ್ಸಾಭಾವ ಶಿವನನ್ನು ಪಡೆಯಲು ತಪಸ್ಸಿಗೆ ನಿಂತಾಗ ತಾಪಸಿಯ ವೇಷದಲ್ಲಿ ಶಿವನಾಗಮನ, ತಾಪಸಿಯ ಶಿವವರ್ಣನೆ ಕೇಳಿದ ಪಾರ್ವತಿಯಲ್ಲಿ ಮೃದು ಹಾಸ್ಯದ ಭಾವ. ಶಿವವರ್ಣನೆ ಶಿವನಿಂದನೆಗೆ ತಿರುಗಿದಾಗ ಶಿವನ ವರಿಷ್ಠತೆಯನ್ನು ವಿವರಿಸುವ ಉತ್ಸಾಹ ವೀರರಸ ಪಾರ್ವತಿಯಲ್ಲಿ ಆದರೂ ಮುಂದುವರಿದ ಶಿವನಿಂದೆಗೆ ಕುಪಿತಳಾಗಿ ರೌದ್ರಭಾವದಿಂದ ಮೊಗದಿರುವಿ ನಿಂತ ಪಾರ್ವತಿಯ ಕೈಹಿಡಿವನು ತಾಪಸಿ, ತನ್ನ ಕೈಹಿಡಿದೆಳೆದವನ ದೃಷ್ಟತೆಗೆ ಬೆದರಿ, ಕೋಪಗೊಂಡು ವೀರಾವೇಶದಿಂದ ಹೋರಾಡಲು ಅಣಿಯಾಗಿ ತಿರುಗಿ ನೋಡಿದರೆ – ತನ್ನಾರಾಧ್ಯದೈವ ! ವಿಸ್ಮಯ – ಶೃಂಗಾರ ಕರುಣಗಳನ್ನು ಏರಿಳಿದು ಶಿವನೆದೆಯಲ್ಲಿ – ಶಾಂತದಲ್ಲಿ ವಿಶ್ರಮಿಸಿದ ಶಕ್ತಿ ಪಾರ್ವತಿ.

ದ್ರೌಪದೀ ಉದ್ಧಾರ:

ಜೀವನದ ವಿಷಯ ಪರಿಸ್ಥಿತಿಯಲ್ಲಿ ನಾನಾರೀತಿಯ ಒತ್ತಡಗಳಿಗೆ ಸಿಲುಕಿಕೊಂಡ ಜೀವ ತನ್ನ ಆಪತ್ತಿನ ಸ್ಥಿತಿಯನ್ನು ಅರಿತುಕೊಳ್ಳುವ ವೇಳೆಗೆ ಆಪತ್ತು ತೀರ ತೀರ ಸನಿಹಕ್ಕೆ ಬಂದಿರುತ್ತದೆ. ಆಗ ಹೊರಗಿನ ಸಹಾಯ ಸಕಾಲಕ್ಕೆ ಒದಗದೆ, ಅಂತರ್ಯದ- ಆತ್ಮಶಕ್ತಿಯನ್ನೇ ವೃದ್ಧಿಗೊಳಿಸಿ ಕುತ್ತಿನಿಂದ ಪಾರಾಗುವುದೊಂದೇ ಮಾರ್ಗ. ಈ ಅಂತರ್ಶಕ್ತಿಯ ಮಹತ್ವದ “ದರ್ಶನ” ವೇ ರೂಪದಕದ ವಸ್ತು.

ಅಂತಃಪುರದಲ್ಲಿದ್ದ ದ್ರೌಪದಿಯಲ್ಲಿ ಐವರು ಪತಿಯರಲ್ಲಿನ ಶೃಂಗಾರಭಾವ ಸಖಿಯರಲ್ಲಿ ಹೇಳಿಕೊಳ್ಳುವಂತೆ ಸುಖದಾಯಿ. ನಿಂತಂತೆ ಬಾರೆಂಬ ಆದೇಶದಿಂದ ಸೋಜಿಗದ ಭಾವ ಒಂದು ಜೊತೆಯಲ್ಲೇ ಆತಂಕವನ್ನು ತರುತ್ತದೆ. ಹಿಂದೆಯೇ ದುಃಶಾಸನನ ಮುಡಿಹಿಡಿದೆಳೆವ ದುರ್ನಡೆತೆ, ಅವಳಲ್ಲಿ ಕ್ರೋಧವನ್ನು ತಂದರೆ, ಸಭೆಯಲ್ಲಿ ವೀರಾವೇಶದಿಂದ ತನ್ನ ಸ್ವಾತಂತ್ರ್ಯಕ್ಕೆ ಹೋರಾಡುವ ದ್ರೌಪದಿಯಲ್ಲಿ ಷಂಡರಂತೆ ಕೈಕಟ್ಟಿ ಕುಳಿತ ಪತಿಗಳ ಬಗ್ಗೆ ಅಪಹಾಸ್ಯದ ಭಾವ, ಸೆರಗಿಗೇ ಕೈಹಾಕಿ ಎಳೆದಾಗ ಧೃತರಾಷ್ಟ್ರನ ಮಕ್ಕಳಲ್ಲಿ ಕುರುಕುಲದ ಬಗ್ಗೆ – ಪುರಷರ ಬಗೆಗೇ ತಿರಸ್ಕಾರಭಾವ- ಜುಗುಪ್ಸೆ, ಇನ್ನೂ ಮುಂದುವರೆದ ವಸ್ತ್ರಾಪಹರಣದಿಂದ ಭಯಾನ್ವಿತಳಾಗಿ ವಿಹ್ವಲತೆಯಿಂದ ತೊಳಲಿದ ದ್ರೌಪದಿ ನಿಸ್ಸಹಾಯಕಳಾಗಿ ಕರುಣಾರ್ದ್ರಳಾಗಿ ಮೊರೆಯಿಡುವ ಸ್ಥಿತಿ, ಮೊರೆಯಿಟ್ಟ ತನ್ನ ಆತ್ಮಸಖ ಕೃಷ್ಣರೂಪದಲ್ಲಿ ಸಹಾಯ ಮಾಡಿದಾಗ ವಿಸ್ಮಯದಿಂದ ಆನಂದ ತುಂದಿಲಳಾಗಿ, ಆ ಶಕ್ತಿಯಲ್ಲೇ ನೆಲೆನಿಂತು ಶಾಂತಿ ಸಮಾಧಾನ ನೆಮ್ಮದಿ ಕ್ಷೇಮ ಅನುಭವಿಸುವ ಜೀವವೇ ದ್ರೌಪದಿ, ಈ ರೂಪಕದಲ್ಲಿ ಒಂದೇ ಘಟನೆಯಲ್ಲಿ (ವಸ್ತ್ರಾಪಹರಣ) ವಿವಿಧ ರಸಗಳನ್ನು ಕೊಡಲಾಗಿದೆ.

(ಈ ರೂಪಕಗಳ ಕಾವ್ಯಭಾಗವನ್ನು ಅನುಬಂಧದಲ್ಲಿ ಕಾಣಬಹುದು.)

ಲೌಕಿಕ ಜಗತ್ತಿನಲ್ಲಿ ಮನಸ್ಸಾನ್ನಾವರಿಸಿರುವ ರಾಗ ದ್ವೇಷಗಳ ಭಾವಗಳನ್ನು ಸಂಪೂರ್ಣ ತೊಡೆದುಹಾಕಲಾಗದೆ ಕಲಾ ಪ್ರಪಂಚಕ್ಕೆ ಬಂದು, ಈ ಭಾವಗಳ ಜಂಜಾಟದಿಂದ ಕೆಲಕಾಲಕ್ಕೆ ಸದ್ಯಃಪರ ನಿವೃತ್ತಿ ಪಡೆದರೆ ಸಾಕೇ? ಇದು ಭಾರತೀಯ ಸಂಸ್ಕೃತಿಯ ಪ್ರಜ್ಞೆಗೆ ಒಪ್ಪಿಗೆಯಾಗದು. ನಮ್ಮ ಸಂಸ್ಕೃತಿಯ ಉನ್ನತ ಧ್ಯೇಯ ಭವಭಾವಗಳನ್ನು ಎದುರಿಸಿ ಬದುಕನ್ನು ಬಾಳಿ (ಬದುಕನ್ನು ಕಳೆಯದೆ) ಆನಂದಿಸುವುದು. ಮಾನವ ಜನ್ಮವನ್ನು ಸಾರ್ಥಕಗೊಳಿಸುವಂತೆ, ಬದುಕಿನ ಎಲ್ಲಾ ಸಿಹಿ ಕಹಿ ಕ್ಷಣಗಳನ್ನು ಆಸ್ವಾದಿಸಿ ಆನಂದಿಸುವ ಬಗೆಯನ್ನು ಕಲೆಯು ಕಲಿಸಲು ಸಾಧ್ಯವೇ?, ಹೌದೆನ್ನುತ್ತವೆ ಉಪನಿಷತ್ತುಗಳು “ಬದುಕುವುದನ್ನೇ ಒಂದು ಕಲೆಯಾಗಿಸಿ, “ಜೀವನ ಕಲೆಯಾಗಿಸಿ” ತುಂಬು ಬಾಳನ್ನು ಶತಸಂವತ್ಸರ ಆನಂದಿಸಿ” ಎಂದು ಆಹ್ವಾನಿಸುತ್ತವೆ.

ಜೀವನ ಕಲೆಯನ್ನು ಆನಂದಿಸಲು ಬೇಕಾಗಿರುವುದೆಂದರೆ “ಪೂರ್ಣದೃಷ್ಟಿ” ಈ ದೃಷ್ಟಿ ಹಿಂದಾದುದನ್ನು ಮುಂದಾಗುವುದನ್ನು ಈಗಿರುವುದನ್ನು ಏಕಕಾಲದಲ್ಲಿ ಅಥವಾ ನೆನ್ನೆ ನಾಳೆ ಇಂದುಗಳ “ಕಾಲ” ಕ್ಕೆ ಮೀರಿದ ನಿತ್ಯದಲ್ಲಿ ಅಖಂಡವಾಗಿ ಗ್ರಹಿಸಬಲ್ಲುದು. ಈ ಪೂರ್ಣದೃಷ್ಟಿಗೆ ಎಲ್ಲದರ ಕಾರಣ, ಎಲ್ಲದರ ಉದ್ದೇಶ. ಎಲ್ಲದರ ಪರಿಣಾಮಗಳು ಒಟ್ಟಾಗಿ ಗೋಚರಿಸುವುದು. ಎಲ್ಲ ಸೃಷ್ಟಿಗೂ ಆನಂದವೇ ಕಾರಣ, ಆನಂದವೇ ಉದ್ದೇಶ, ಆನಂದವೇ ಪರಿಣಾಮ ಎಂಬ ಅರಿವು ಈ ಪೂರ್ಣದೃಷ್ಟಿಗೆ ಮಾತ್ರ ಸಂವೇದ್ಯ.

ಲೌಕಿಕ ಜಗತ್ತಿನಲ್ಲಿ, ಸಿದ್ಧನೂ ಸ್ಥಿತಪ್ರಜ್ಞನೂ ಆದ ಪೂರ್ಣಯೋಗಿಗೆ ಮಾತ್ರ ಪೂರ್ಣದೃಷ್ಟಿ ಸಾಧ್ಯ. ಅವನಿಗೆ ಅಂಶದೃಷ್ಟಿಯ ಕುಂದು ಕೊರತೆಗಳಿರುವುದಿಲ್ಲ. ನಮಗೆ ದುಃಖ ತರುವ ಸಂಗತಿ ಅವನಿಗೆ ಆನಂದದ ಅಂಗವಾಗುತ್ತದೆ. ನಮಗೆ ತೋರುವ “ವಿಕಾರ”ವು ಅವನು ಪೂರ್ಣದೃಷ್ಟಿಯಲ್ಲಿ ವಿಕಾಸದ ಒಂದು ಹಂತವಾಗಿ ಸೌಂದರ್ಯದ ಅನಿವಾರ‍್ಯ ಅಂಗವಾಗಿ ಅರ್ಥ ಪಡೆಯುತ್ತದೆ. ಅಂಶದೃಷ್ಟಿಯಿಂದ ನಮಗೆ ರೋಗ, ಮರಣ, ಅಮಂಗಳ, ಕಷ್ಟ ಮುಂತಾದ ನಕಾರಾತ್ಮಕವೆನಿಸುವ ಸಂಗತಿಗಳ ಹಿಂದುಮುಂದುಗಳು ಪೂರ್ಣದೃಷ್ಟಿಯ ಯೋಗಿಗೆ ಗೋಚರಿಸಿ ಅಲ್ಲಿ ಸೃಷ್ಟಿಕಾರ್ಯ ನಡೆದಿರುವುದು ವೇದ್ಯವಾಗುತ್ತಿರುತ್ತದೆ. ಸಕಲವೂ ಆನಂದದ ಅಂಗಗಳೆಂಬ ಅರಿವಿರುತ್ತದೆ. ತನ್ನ ಆನಂದಕ್ಕಾಗಿ ವಿಶ್ವವನ್ನು ಸೃಷ್ಟಿಸುವ ಬ್ರಹ್ಮನ ಈ ವಿಶ್ವಕ್ಕೂ ಅದನ್ನು ಪೂರ್ಣದೃಷ್ಟಿಯಿಂದ ನೋಡಬಲ್ಲ ಪೂರ್ಣಯೋಗಿಗೂ ಇರುವ ಸಂಬಂಧದಂತೆಯೇ ಕಲಾಕಾರನ ಸೃಷ್ಟಿಗೂ ಸಮರ್ಥ ಸಹೃದಯನಿಗೂ ಇರುವ ಸಂಬಂಧ. ಕಲಾಕಾರನ “ದರ್ಶನ” ಶಕ್ತಿ ವೃದ್ದಿಸಿದಂತೆಲ್ಲ ಅವನ ಕೃತಿಯೂ ಶಕ್ತಿಪೂತವಾಗುವುದು. ಸತ್ವಶಾಲಿಯಾಗಿ ಮೌಲಿಕತೆ ಪಡೆಯುವುದು. ಸಹೃದಯನ “ದೃಷ್ಟಿ” ಶಕ್ತಿ ಬೆಳೆದಂತೆಲ್ಲ ಅವನ ಸಹೃದಯತೆ ವಿಕಾಸವಾಗಿ ಪೂರ್ಣತೆಯ ಹಾದಿ ಹಿಡಿಯುತ್ತದೆ. ಕಲಾಕಾರ ಮತ್ತು ಸಹೃದಯರ ಕಲಾವ್ಯವಸಾಯ ಒಂದು ಬಗೆಯಲ್ಲಿ ಜೀವನಕಲೆಯನ್ನು ಕರಗತ ಮಾಡಿಕೊಳ್ಳುವಲ್ಲಿನ ಪೂರ್ವಾಭ್ಯಾಸವೆನ್ನಬಹದು.

ಕಲಾಕಾರ ಯಾವ ಪ್ರತಿಭೆಯಿಂದ ಲೋಕರಂಗದಲ್ಲಿರುವುದನ್ನು ಆಸ್ವಾದಿಸುವನೋ ಅದೇ ಪ್ರತಿಭೆಯಿಂದ ಸಹೃದಯನೂ ಲೋಕರಂಗದಲ್ಲಿಯೇ ರಸಾನುಭವ ಪಡೆಯಬಲ್ಲ. ಕಲೆಯ ವಿಶೇಷತೆಯೆಂದರೆ ಸಾಮಾನ್ಯನಲ್ಲಿನ ಈ ಪ್ರತಿಭೆಯನ್ನು ಜಾಗೃತಗೊಳಿಸಿ ಸಹೃದಯನನ್ನಾಗಿಸುವುದು. ಕಲೆಯ ಉಪಾಸನೆಯಿಂದ ಬೆಳಗಿನ ಕಲಾಕಾರನ ಮತ್ತು ಸಹೃದಯನ ಪ್ರಜ್ಞೆಯು ಕಲೆಯೊಳಗಿನ ದರ್ಶನಶಕ್ತಿ. ಆನಂದ ರಸಗಳಿಂದ ಪುಷ್ಟಿಪಡೆದು ಕ್ರಮೇಣ ಲೋಕರಂಗದಲ್ಲಿಯೂ ಬ್ರಹ್ಮರಸವನ್ನು ಆಸ್ವಾದಿಸಲು ಕಲಿಯುತ್ತದೆ. ಸ್ಥಿತ ಪ್ರಜ್ಞತೆಯನ್ನು ಕಲೆಯ ಮೂಲಕ ರೂಢಿಸಿ ಸಾಧಿಸಿ ರಸ ಋಷಿ ಪ್ರಜ್ಞೆ ಪಡೆಯುತ್ತದೆ. “ರಸೋ ವೈಸಃ”- ಈ ಸೃಷ್ಟಿಯೇ ರಸ- ಜಗತ್ತೆಲ್ಲ ಬ್ರಹ್ಮನೇ ಎಂದು ಅನಂದಿಸುತ್ತದೆ. ಶ್ರೀಕೃಷ್ಣನು ಗೀತೆಯಲ್ಲಿ ಹೇಳಿರುವಂತೆ ಎಲ್ಲೊ ಕೆಲವರು ಈ ದೃಷ್ಟಿಯನ್ನು ಪಡೆಯುತ್ತಾರೆ ಎಂದರೂ ಅದು ಸಾಧ್ಯ ಎಂಬ ಅರಿವೇ ಅದನ್ನು ಸಾಧಿಸಲು ನಮ್ಮನ್ನು ಪ್ರೇರೇಪಿಸುತ್ತದೆ.

ಸಹಾಯಕ ಗ್ರಂಥಗಳು:

೧. “ತೌಲನಿಕ ಕಾವ್ಯ ಮೀಮಾಂಸೆ”- ಹೆಚ್‌. ತಪ್ಪೇರುದ್ರಸ್ವಾಮಿ

೨. “ರಸೋವೈ ಸಃ ” ಕುವೆಂಪು

೩. “ತಪೋನಂದನ”. ಕುವೆಂಪು

೪. ತೈತ್ತರೀಯೋಪನಿಷತ್‌” ಶ್ರೀರಾಮಕೃಷ್ಣಾಶ್ರಮ

೫. “ಕನ್ನಡ ಕಾಳಿದಾಸ ಮಹಾಸಂಪುಟ” ಎಸ್.ವಿ. ಪರಮೇಶ್ವರಭಟ್ಟ

 

ಅನುಭಂದ

ಶಿವಶಕ್ತಿ ಸಮಾಗಮ

ಶೃಂಗಾರ

ಮುದಿತಮನಗೌರಾಂಗ ಶಶಿಧರನ ಸೇವಿಸಿರೆ
ತಪಿಸಿಹುದು ಅಂಗಾಂಗ ಓಂಕಾರನೋಲೈಸೆ
ನರ್ತಿಸಿಹುದೀತನುವು ಶಿತಿಕಂಠ ನರ್ಚಿಸಲು
ನನ್ನೀಶಗೋಸುಗವೆ ಸಕಲವೀ ಶೃಂಗಾರ
ಸೇರುವೆನೆ ಮಂಗಳನ ಸರ್ವಾಂಗ ಸುಂದರನ

ಭಯ

ಮಹಯೋಗಿ ಸನ್ನಿಧಿಯು ಸೇವೆಯಲಿ ತಪ್ಪಿದರೆ
ಮುನಿದಾನು ಎಂಬಳುಕು ಕೈ ನಡುಕ ಎದೆ ಡಮರು
ಓ ಮನವೆ ಅಂಜದಿರು ಹಿರಿಯರನುಮತಿಯಿಹುದು
ಪರಮಶಾಂತನು ಶಿವನು ಅವನ ಬಳಿಸಾರು
ಶಂಕರನೆ ಪೂಜೆಗೊಳು ಧರಿಸುತೀ ಮಾಲೆಯನು

ಅದ್ಭುತ

ಏನ್‌ಬೆಳಕು ಕೋರೈಸೆ ಜ್ಞಾಲಾಗ್ನಿ ಮುಖದಲ್ಲಿ!
ಹಣೆಗಣ್ಣು ಉರಿಗಣ್ಣು ಕುಪಿತನದೊ ಈಶ್ವರನು
ಸುಡುತಿಹನು ಮದನನನು ಚಂಡನದೊ ಭೈರವನು
ಕಾಲಾಗ್ನಿ ಭೀಕರನು ಏನಿದೀ ವಿಸ್ಮಯವು
ನಡುಗುತಿದೆ ಅಚಲಾದ್ರಿ ಕೈಮುಗಿದ ಸುರಗಣವು

ಕರುಣ

ಸಂಹರಿಸು ಕ್ರೋಧವನು ಕರುಣೆತೋರ್ ಹೇ ಶಂಭು
ನನ್ನಾತ್ಮಮೊರೆ ಕೇಳು ಪತಿನೀನು ಗತಿ ನೀನು
ನನ್ನ ತಪ್ಪಿಹುದೆಲ್ಲಿ ಮಂಗಳನೆ ವಿಶ್ವಾತ್ಮ
ಮಲ್ಲೇಶ ತೊರೆಯದಿರು ಹೋಗದಿರು ಬಿಟ್ಟೆನ್ನ
ನಡೆದನಹೋ ವೈರಾಗಿ ಹೋದುದಗೊ ಮಮ ಪ್ರಾಣ

ಜಿಗುಪ್ಸೆ

ಅಕ್ಷರನು ಹೋದಂತೆ ಕ್ಷರವಿಲ್ಲಿ ಬೀಳುವುದು
ಮದನನಿಗೆ ಗುರಿಯಾಗೆ ಕ್ಷಣದಲ್ಲೇ ಬೂದಿಯಿದು
ತನುವಂದ ಧಿಕ್ಕಾರ ರೋಸಿಹುದು ಎನ್ನಮನ
ಗುರುವಾಯ್ತು ಪರಿಭವವೇ, ಪರಮಗುರು ಶುದ್ಧನನು
ನಿತ್ಯನನು ಪಡೆಯುವುದು ತಪಮಾತ್ರಕಿದು ಸಾಧ್ಯ

ಶಾಂತ

ಶಾಂತಗೊಳು ಓ ಮನವೆ ಶಿವಧ್ಯಾನ ಒಂದೆಗತಿ
ಇಬ್ಬಗೆಯ ತೊಡರಿಲ್ಲ ಇಡು ಚಿತ್ತ ಹರನಲ್ಲಿ
ಓಂಕಾರ ನುಡಿಯಿನ್ನು ಉಸಿರಾಗಿ ಒಳ ಹೊರೆಗೆ
ಓ ನಮಃ ಶಿವಾಯ ಓಂ ನಮಃ ಶಿವಾಯ
ಯಾರೆ ಸಖಿ! ತಾಪಸಿಯು ಶಂಕರನ ಗಳಹುತಿಹ

ಹಾಸ್ಯ 

ತೇಜಸ್ವಿ ತಾಪಸಿಯೆ ಅತಿಥನೀ ಅಂತೆ ಇರು
ಮುಕ್ಕಣ್ಣ ಮಸಣಿಗನು ಮದಿ ಎತ್ತನೇರಿದವ
ಭಸ್ಮ ಬಳಿದಿಹ ದೇಹ ಜೋಲಾಡುತಹನಾಗ
ನೀ ಕಂಡ ಶಿವಗುಣವು ನಿನ್ನ ಮಿತಿ ಸಾರಿಹುದು

ವೀರ

ಶಿವ ತತ್ವ ಅರಿಯದವ ನೀನೊಂದು ಪರಿಹಾಸ್ಯ
ಶೂಲಧರ ವಿಷಕಂಠ ವಿಭುವಗೆಣೆ ಇನ್ನಾರು
ದಕ್ಷಹರ ತ್ರಿಪುರಾರಿ ಜಿತಚಿತ್ತ ಪಶುಪತಿಯು
ಭೀಮರೂಪನು ಹರನು ವ್ಯೋಮಕೇಶಿಯೆ ಅವನ್‌
ವಿಶ್ವತನು ಮೃತ್ಯುಜಯನ್‌ಅವನಿಗೆಣಿ ಅವನೆತಾನ್‌

ರೌದ್ರ

ಶಿವನೆನ್ನ ವರಸಿದರೆ ವಿಶ್ವವಂದಿತೆ ನಾನು
ಮತ್ತೇನ ಗಳಹುತಿಹ ಮೂಢಮತಿ ಶಿವವೈರಿ
ನತದೃಷ್ಟ ಪಾಪಿಗಳು ಶಿವನಿಂದೆ ಮಾಡುವರು
ಅದನಿಂತು ಕೇಳುವರು ಸಾಕು ನಿನ್ನುಪದೇಶ
ನಿನಗಿಲ್ಲಿ ಮಣಿಯಿಲ್ಲ ಹೊರಹೊರಡು ನಿಲ್ಲದಿರು

ತೊಲಗಿಸೀಗಲೇ ಸಖಿಯೆ ಇಲ್ಲದಿರೆ ಹೊರಟೆನಾ
ಏನಿದೇನ್‌ಬಿಡುಕೈಯ-ಓದೇವ ಶಂಕರನೆ!
ಅಶುತೋಷನೆ ನೀನು ಶಶಿಮೌಳಿ ರಸಶರಧಿ
ಕರುಣಾಬ್ಧಿ ಆನಂದಿ ಧನ್ಸೆನಾ ಶಾಂತರಸ
ಆತ್ಮಸಖ ಪರಮಾತ್ಮ ಪಡೆದೆನಾ ಪರಮಪದ
ಓಂ ನಮಃ ಶಿವಾಯ ಓಂ ನಮಃ ಶಿವಾಯ

 

ದ್ರೌಪದಿಯ ಉದ್ದಾರ

ಶೃಂಗಾರ

ಏನಹೇಳಲೀ ಸಖೀ ವೀರರಾ ಸಹವಾಸ
ಗಜಯುಗಲ ನೀರಾಟ ಶೃಂಗಾರ ರಸದೂಟ
ವರ್ಣಿಸಲು ನಾಚಿಹೆನು ಅನುಭವಿಸೆ ತಕ್ಕುದಿದು
ನಿಮಗೆಲ್ಲ ಹಗಲ್ಲಸು ಪಾಂಡವರ ಒಡನಾಟ
ನಿಜವಾಂತು ಬಂದಿಹುದು ಎನಗಿಂತು ಐಪಟ್ಟು

ಸೋಜಿಗ

ತಂದಿಹನು ಹರಿಕಾರ ದೊರೆಯಿಂದೆ ಕರೆಯೆನಗೆ
ನಿಂತಂತೆ ಬಾರೆಂಬ ಆಗ್ರಹದ ಆದೇಶ
ಸೋಜಿಗದೆ ರಾಜಸಭೆ ದ್ಯೂತವದು ಮುಗಿದಿಹುದೆ?
ಮಿಂದಿರದೆ ತರುಣಿಯಲಿ ಅವಸರವು ಏಕಿನಿತು
ಈ ಪರಿಯ ತ್ವರೆಯಲ್ಲಿ ಹಾನಿಯನೆ ಕಾಣುತಿಹೆ

ರೌದ್ರ

ಮುಡಿಹಿಡಿದು ಎಳೆತಂದ ಪಾಪಿ ದುಃಶಾಸನನ
ಧೂರ್ತತೆಗೆ ಕಿಡಿಕಾರಿ ಮಾನಿನಿಯ ಕನಲಿಹಳು
ಹೆಡೆತುಳಿದ ನಾಗಿಣಿಯು ಪೂತ್ಕರಿಸಿ ಸಿಡುಕಿಹಳು
ಕ್ರೋಧದಿಂ ಕುದಿಕುದಿದು ಪಿಸುಮಾತಿನಿಂ ಶಪಿಸಿಹಳು
ಬಿಡು ಎನ್ನ ಸಿರಿ ಮುಡಿಯ ದೂರಸ ದುರ್ನೀತ

ವೀರ

ಸಭೆ ನಡುವೆ ನಿಂತಿಹಳು ವೀರಸತಿ ಧೃತಿಗೆಡದೆ
ಬಯಸಿಹಳು ಉತ್ತರವ ನ್ಯಾಯದಾ ಹಾನಿಯಿದು
ಸೋತ ಮೆಲಂತಿವರು ಎನ್ನ ಪಣವಿಟ್ಟಿಹರು
ಕುಲವಧುವ ಪಶುವಂತೆ ಕೊಳಕೊಡಲು ಸಾಧುವೇ
ಸಮದರ್ಶಿ ಹೇಳಿದುದ ಶಿರವಾಂತು ನಡೆಯುವೆನು

ವ್ಯಂಗ್ಯ

ಭಲೆ! ಭಲೆ! ಕುರುಕುಲಕೆ ಸತಿಯಾಗಿ ಬಂದೆನಾ
ಶಿಲಕೊಲೆ ನೋಡಿಯೂ ಕಟ್ಟಿರುವ ಕೈಗಳಿಗೆ
ಶೋಭಿಸದು ಬಿಲ್‌ಬಾಣ ಖಡ್ಗ ಪಿರಿಗದೆಯು
ಬಳೆಗಳೇ ಒಪ್ಪುವುದು ಜರತಾರಿ ಮೇಲ್ಮುಸುಕು
ಪಣಕಿಡುವ ಅಧಿಕಾರ ನಿನಗಿಹುದೆ ಧರ್ಮಜನೆ?

ಭೀಭತ್ಸ

ನಾಡಾಡಿ ನಾಯಿಗಳು ಎಂಜಲೆಲೆ ಎಳೆವಂತೆ
ತಿಳಿಗೇಡಿ ದೊರೆಕುವರ ಎಳೆದಾಡ ಕುಲಸತಿಯ
ಅದನೋಡಿ ಸುಮ್ಮನಿಹ ಹಿರಿಯರಾ ಬಗೆಯಿಂದು
ತಿರಸ್ಕಾರ ಜಿಗುಪ್ಸೆ ಎನಗೀಗ ಪುರಷರಲಿ
ಧಿಕ್ಕಾರ! ಧಿಕ್ಕಾರ ! ರಕ್ಷಿಸದ ಸಭೆಗೀಗ

ಭಯಾನಕ

ಅಕಟಕಟ! ನಿಲಿಸೀಗ ಕುಚೇಷ್ಟೇ ದುರಾತ್ಮ
ದೂರ ಸರಿ ಬಿಡುಸೆರಗ ಬೆಂಕಿಯಲಿ ಸರಸವೇ
ನೆರೆದಸಭೆ! ಬಟ್ಟೆಯನೆ ಸೆಳೆದಿಹನು ಈ ಪಾಪಿ
ಶಿವಶಿವಾ ಇಲ್ಲಾರು ಇಲ್ಲವೇ ಬಿಡಿಸಲೀ
ಭಯವಾಂತ ತರಳೆಯನು  ಬಂದೀಗ ಕಾಪಾಡಿ

ಕರುಣ

ಈ ದಿನವ ಕಾಣಲ್ಕೆ ವರಿಸಿದೆನೆ ಐವರನು
ಕುಲದವರ ರಕ್ಷಣೆಯು ಇಂದಿಲ್ಲಾ ನತದೃಷ್ಟೆ
ಧರ್ಮಕ್ಕೆ ಆಗುತಿಹ ಅಪಮಾನ ತಿಳಿಯರೇ
ಒಡಲನ್ನು ಸುಡುತಿರುವ ಮಾನದಾ ದಾವಾಗ್ನಿ
ನಂದಿಸಲು ಯಾರಕೈ ಅಳವಲ್ಲ ಹಾ ವಿಧಿಯೇ?

ಅದ್ಭುತ

ಬಾರಯ್ಯ ಆತ್ಮಸಖ ಶ್ರೀ ಕೃಷ್ಟ ಕೃಪೆತೋರು
ಅನಾಥೆ ಬಿಡಿಸೆನ್ನ ಕಷ್ಟದಿಂ ಬಾ ಬೇಗ
ಮಮ ಬಂಧು ಬಂದನಿದೊ ನೆನೆದ ಚಣ ಪ್ರತ್ಯಕ್ಷ
ಅದ್ಭುತವೊ ಅದ್ಭುತವು ಬಂದನಿದೊ ಈಗಿಲ್ಲೆ
ಕೈ ಹಿಡಿದು ಹೊದಿಸಿಹನು ಶ್ರೀರಕ್ಷೆ ದುಕೂಲ

ಶಾಂತ

ರಕ್ಷೆಯಾ ವಸ್ತ್ರವಿರೆ ಇನ್ನಾವ ಭಯವಿಲ್ಲ
ಶಾಂತಿಮಳೆ ತೊಯ್ದೆನ್ನ ತಾಪವಿದೊ ನಂದಿಹುದು
ಕರುಣಾಳು ಬಂದೆಯಾ ಭಗವಂತ ಶ್ರೀಹರಿಯೆ
ಶ್ರೀ ಹಸ್ತ ತಲೆದಡವಿ ಶಾಂತಿಯಿದೊ ಶಾಂತಿಯಿದು
ಆತ್ಮಸಖ ನಪ್ಪುಗೆಯು ಪರಮ ಸುಖಶಾಂತಿಯಿದು
ಕೃಷ್ಣೆಯಾ ಕೃಷ್ಣ ಕೃಷ್ಣಾ ಕೃಷ್ಣಾ!