ಶ್ರುತಿ ಮಾತಾಲಯ ಪಿತಃ ಎಂಬ ನಾಣ್ಣುಡಿಯಂತೆ ಮಾತಾಪಿತರ ಸ್ಥಾನದಲ್ಲಿ ಶ್ರುತಿ ಲಯಗಳು ಪರಸ್ಪರ ಸಮನ್ವಯಗೊಂಡಿವೆ ಎಂಬ ಉಲ್ಲೇಖವು ಭರತಶಾಸ್ತ್ರದಲ್ಲಿ ಅಡಕವಾಗಿದೆ. ಶ್ರುತಿಯು ನಾದೋಪಾಸನೆ ಯಾಗಿದ್ದು, ಲಯವು ಗತಿಯ ಅನುಸರಣೆಯೊಂದಿಗೆ ನೃತ್ಯ ಸಂಗೀತಗಳಲ್ಲಿ ಬೆಸೆದುಕೊಂಡಿದೆ. ” ಗೀತಂಚ ವಾದ್ಯಂಚ ನೃತ್ಯಂಚ ತಾಳಹೀನಂ ರಾಜತೇ” ಎಂಬ ಭರತ ವಾಕ್ಯವು ತಾಳದ ಪ್ರಾಶಸ್ತ್ಯಕ್ಕೆ ಪ್ರಾಧ್ಯಾನ್ಯ ನೀಡಿದೆ. ನೃತ್ಯ ಸಂಗೀತಗಳಲ್ಲಿ ಶಾಸ್ತ್ರ ಬದ್ಧವಾದ ತಾಳಕ್ಕೆ ಮುಖ್ಯಪಾತ್ರ ನೀಡಿದೆ. ತಾಳದ ಬುನಾದಿಯಲ್ಲಿ ಕಟ್ಟಲ್ಪಟ್ಟ ನೃತ್ಯಕ್ಕೆ ತಾಳಧಾರಿಯೇ ಸೂತ್ರಧಾರನೆನಿಸುವನು. ನೃತ್ಯ ಭಾಷೆಯಲ್ಲಿ ಇವನು ನಟ್ಟುವಾಂಗದವನೆಂದು ಸಂಭೋದಿಸಲ್ಪಡುವನು.

ನಾಟ್ಯದ ವಿಸ್ತೃತ ರೂಪವೇ ನಟುವರರು. ನಟುವರರೆಂದರೆ, ನಟಿಸಲ್ಪಡುವವರು, ಅಭಿನಯಕಾರರು ಎಂಬ ಅನ್ವರ್ಥನಾಮಕ್ಕೆ ಒಳಪಡುವವರು. ನಾಟ್ಯವೇ ನಟುವರರ ಜೀವಾಳವೂ, ಜೀವನವೂ ಆಗಿದೆ. ಈ ಪಂಗಡದ ಎಲ್ಲಾ ಹಿಮ್ಮೇಳ ವಿದ್ವಾಂಸರಿಗೂ ಈ ಹೆಸರು ಅನ್ವಯವಾಗಿ ಬಂದಿದೆ. ಈ ನಟುವ ಪಂಗಡದ ಸಾಂಸ್ಕೃತಿಕ ಅಧ್ಯಯನ ಮಾಡಲು ಪುರಾಣಗಳ ಇತಿಹಾಸಗಳ ಮನನ ಮಾತ್ರದಿಂದಲೇ ಸಾಧ್ಯ. ಇವರು ನೃತ್ಯ ಸಂಗೀತಗಳಲ್ಲಿ ಮಹತ್ತರವಾದ ಸಾಧನೆ ಗೈದು ಕೊಡುಗೆ ನೀಡಿದ ದಾರ್ಶನಿಕರು ಎಂದರೆ ಹೆಚ್ಚಾಗಲಾರದು. ನೃತ್ಯ ವೃತ್ತಿಯನ್ನು ಅವಲಂಬಿಸಿರುವ ನಟುವ ಪಂಗಡಗಳಿಗೆ ನಟುವ ಜನಾಂಗವೆಂಬ ಹೆಸರು ವೃತ್ತಿಪೂರ್ವಕವಾಗಿ ಅಥವಾ ಜಾತಿ ಸೂಚಕವಾಗಿ ಬಂದಿರಬಹುದೋ ಎಂಬ ಜಿಜ್ಞಾಸೆಯು ಪ್ರಶ್ನಾತೀತವಾಗಿಯೇ ಉಳಿದುಕೊಂಡಿದೆ. ಆರಂಭದಲ್ಲಿ ಈ ಪಂಗಡಗಳು ಪ್ರದರ್ಶನಗಳಿಗೆ ರಾಜ ಮಹಾರಾಜರಿಂದ ಆಮಂತ್ರಿತರಾದಾಗ ಬೇರೆ ಬೇರೆ ಸ್ಥಳಗಳಿಂದ ಆಗಮಿಸಿ ಪ್ರದರ್ಶನ ನೀಡಿದ ಬಳಿಕ ತಂತಮ್ಮ ಊರುಗಳಿಗೆ ಚದರಬೇಕಾದ ಪರಿಸ್ಥಿತಿ ಆಗಾಗ ಅನಿವಾರ್ಯವಾಗಿ ಉಂಟಾಗುತ್ತಿತ್ತು. ಈ  ಸಮಸ್ಯೆಯ ನಿವಾರಣೆಗಾಗಿ ಮಹಾರಾಜರಾದಿಯಾಗಿ ಕಲೋಪಾಸಕರು ಚಿಂತನೆ ಮಾಡಿದರು. ದೇವಸ್ಥಾನಗಳ ರಾಜರ ಆಸ್ಥಾನಗಳ ಆಸುಪಾಸುಗಳಲ್ಲಿ ಇವರಿಗೆ ನಿರ್ದಿಷ್ಟವಾದ ವಸತಿ ಸೌಕರ್ಯದ ಏರ್ಪಾಡು ಮಾಡಿದರು. ಅವರ ಜೀವನೋಪಾಯಕ್ಕೆ ಆಧಾರವಾಗುವಂತೆ ಜಮೀನನ್ನು ಉಂಬಳಿ ಬಿಟ್ಟು ಆಶ್ರಯ ನೀಡಿದರು ಎಂದು ಇತಿಹಾಸಗಳ ಅಧ್ಯಯನದಿಂದ ತಿಳಿದು ಬರುವುದು. ಈ ಪಂಗಡಗಳ ಮುಂದಕ್ಕೆ ನಟುವ ಜನಾಂಗವಾಗಿ ಪರಿವರ್ತನೆಗೊಂಡಿರಬಹುದೆಂದು ಉಹನಾತೀತವಾಗಿದೆ.

ಶಾಸ್ತ್ರ ಪಾರಂಗತರಾದ ಕೆಲವು ವೈದಿಕ ವಿದ್ವಾಂಸರು ಕುಲ ಕ್ರಮಾಗತವಾಗಿ ಭರತ ಶಾಸ್ತ್ರ ಅಧ್ಯಯನದಿಂದ ಮಾಡಿ ಅದನ್ನು ಜೋಪಾನವಾಗಿಟ್ಟುಕೊಂಡರು. ನಟುವರರು ಅವರಿಂದ ನೃತ್ಯ ಶಾಸ್ತ್ರದ ಲಕ್ಷ್ಯ ಲಕ್ಷಣಗಳ ಪರಿಪೂರ್ಣವಾದ ಅನುಭವ ಪಡೆದುಕೊಂಡರು. ನೃತ್ಯವನ್ನು ಶಾಸ್ತ್ರದ ಚೌಕಟ್ಟಿನಲ್ಲಿ ಉಳಿಸಿಕೊಂಡು ಬೆಳೆಸುವ ಕಾರ್ಯವನ್ನು ಮಾಡಿದರು. ನಟುವ ಪಂಗಡದ ಮಹಿಳೆಯರು ನೃತ್ಯಾಂಗನೆಯರಾಗಿ ತಮ್ಮ ಬದುಕನ್ನು ನೃತ್ಯಕ್ಕೆ ಸಮರ್ಪಿಸಿ ಕೊಂಡರು. ಅವರ ಪಂಗಡದ ಪುರುಷರು ನೃತ್ಯದ ಪ್ರಾಮುಖ್ಯ ಅಂಗವಾದ ನಟ್ಟುವಾಂಗ ವೃತ್ತಿಯಲ್ಲಿ ಅಪೂರ್ವ ಸಾಧನೆ ಮಾಡಿ ನೃತ್ಯವನ್ನು ತಮ್ಮ ಮನೆತನದ ಸೊತ್ತಾಗಿ ಪರಿವರ್ತಿಸಿಕೊಂಡರು.

ದಕ್ಷಿಣ ಭಾರತದ ಅನೇಕ ದೇವಾಲಯಗಳಲ್ಲಿ ನಟುವ ಮಹಿಳೆಯರು ನರ್ತನ ಸೇವೆಯನ್ನು ನಿರ್ವಹಿಸಿ ದೇವದಾಸಿಗಳೆಂದು ಹೆಸರು ಪಡೆದರು. ದೇವಾಲಯದ ನೃತ್ಯವಾಗಿ ಆಚರಣೆಯಲ್ಲಿದ್ದ ಈ ನರ್ತನ ಸಂಪ್ರದಾಯವು ಮುಂದಕ್ಕೆ ದಾಸಿ ಆಟ, ಸಾದಿರ್ ನಾಚ್‌ಎಂದು ಸಂಭೋದಿಸಲ್ಪಟ್ಟು, ದೇವಾಲಯಗಳಲ್ಲಿ ಪೂಜಾ ವಿಧಿಯಾಗಿ ಆರಾಧಿಸಲ್ಪಟ್ಟ ಈ ಪದ್ಧತಿಯಲ್ಲಿ ಆಯಾಮ ಪ್ರಾಂತ್ಯಗಳ ಪ್ರಾದೇಶಿಕತೆ, ಆಚಾರ ವಿಚಾರಗಳ ಸಾಂಸ್ಕೃತಿಕ ಕಟ್ಟು ಪಾಡುಗಳಿಗೆ ಅನುಸಾರವಾಗಿ ಭಿನ್ನತೆಗಳು ಕಾಣಿಸಿಕೊಂಡವು. ಆದರೆ ಇದರ ಮೂಲ ಸ್ಥರೂಪವು ಬದಲಾಗದೆ ಭರತ ಶಾಸ್ತ್ರ ಚೌಕಟ್ಟು ಅವಲಂಬಿಸಿಯೇ ಉಳಿದುಕೊಂಡಿತ್ತು. ಕ್ರಮೇಣ ನೃತ್ಯವು ದೇವಸ್ಥಾನ ಗಳಿಂದ ಇಳಿದು ಬಂದು ಕಲೋಪಾಸಕರ ಪ್ರೋತ್ಸಾಹದಿಂದ ರಾಜರ ಆಸ್ಥಾನಗಳಲ್ಲಿ ಇನ್ನಿತರ ಶುಭ ಕಾರ್ಯಗಳ ವೇಳೆ ಪ್ರದರ್ಶನಗೊಂಡು ಜನ ಮನ್ನಣೆ ಗಳಿಸಿತು. ನೃತ್ಯವನ್ನಲಂಬಿಸಿರು ಕೆಲವು ಮನೆತನದವರು ಇದನ್ನು ಉಳಿಸಿ ಬೆಳೆಸಿ ಕಾಪಾಡಿಕೊಂಡು ಬರುವಾಗ ಹಲವಾರು ಎಡರು ತೊಡರುಗಳನ್ನು ಅನುಭವಿಸಬೇಕಾಗಿ ಬಂತು. ಆದರೆ ನೃತ್ಯ ಕಲೆಯು ಭಾರತದ ಸನಾತನ ಸಂಸ್ಕೃತಿಯ ಭದ್ರವಾದ ತಳಹದಿಯ ಮೇಲೆ ರಚಿಸಲ್ಪಟ್ಟಿರುವುದರಿಂದ ಈ ಕಳಂಕವನ್ನು ಧೈರ್ಯವಾಗಿ ಎದುರಿಸುವಲ್ಲಿ ಸಫಲವಾಯಿತು.

ಭರತ ಕಲೆಯು ತನ್ನ ಶೈಲಿಯಲ್ಲಿ ಸೂತ್ರಧಾರನ ಪ್ರಭುತ್ವ ಹೊಂದಿದ ಮಹಾನ್‌ಕಲೆಯಾಗಿದೆ. ದಕ್ಷಿಣೋತ್ತರ ನೃತ್ಯ ಸಂಪ್ರದಾಯದಲ್ಲಿ ನಟ್ಟುವಾಂಗವು ಪ್ರಧಾನ ಪಾತ್ರ ವಹಿಸಿ, ನಟುವನಾರನೇ ಸೂತ್ರಧಾರನಾಗಿ ಕಾರ್ಯನಿರ್ವಹಿಸುವ ಹೊಣೆಗಾರಿಕೆಗೆ ಒಳಪಡುವನು. ನಟ್ಟುವಾಂಗಕ್ಕೆ ಶಿಸ್ತು ಬದ್ಧವಾದ, ಕಲಾತ್ಮಕವಾದ ಒಂದು ನಿಯಮವಿದೆ. ಈ ನಿಯಮಗಳನ್ನು ಪಾಲಿಸಲು ನೃತ್ಯದ ಲಕ್ಷಣಗಳ ಅಪಾರವಾದ ಶಾಸ್ತ್ರ ಜ್ಞಾನವನ್ನು ಹೊಂದಿರಬೇಕಾಗುವುದು. ಗುರುಪರಂಪರೆಯಿಂದ ಪ್ರವಹಿಸಿ ಬಂದ ಈ ಕಲೆಯನ್ನು ಗುರುಮುಖೇನದಿಂದಲೇ ಪಡೆಯುವುದು ಉಚಿತ. ಭಕ್ತಿ, ಗೌರವ, ಸಹನೆಯಿಂದ ಅಭ್ಯಾಸಕ್ಕೆ ತೊಡಗಿ ಮುಂದಕ್ಕೆ ಕಠಿಣ ಪರಿಶ್ರಮದಿಂದ ಸಾಧನೆ ಮಾಡಬೇಕಾಗುವುದು.

ನಟ್ಟುವಾಂಗದ ಪ್ರಾರಂಭಿಕ ಶಿಕ್ಷಣಕ್ಕೆ ಮರದ ತಟ್ಟುಕೋಲು ಮತ್ತು ಮಣೆಯ ಉಪಯೋಗ ಬಹಳವಿದೆ. ತಾಳದಲ್ಲಿ ಹಿಡಿತ ಸಾಧಿಸಲು ಮಣೆಯಲ್ಲಿ ಸಾಧಕ ಮಾಡುವುದೇ ಸಮಂಜಸವಾಗಿದೆ. ನಟ್ಟುವಾಂಗದ ಆರಂಭದ ಪಾಠಾಕ್ಷರಗಳನ್ನು ನುಡಿಸಲು ತಟ್ಟು ಮಣೆಯೇ ಆಧಾರವಾಗಿದೆ. ಮಣೆಯ ಮೇಲೆ ಅಭ್ಯಾಸ ಮಾಡಿದರೆ ತಾಳದಲ್ಲಿ ಹಿಡಿತ ಬುರುವುದು. ಪ್ರಯೋಗದಲ್ಲಿ ಬರುವ ಜತಿಗಳನ್ನು ತಾಳಾವರ್ತಕ್ಕೆ ಸರಿಯಾಗಿ ವಿಳಂಬ, ಮಧ್ಯಮ, ದ್ರುತ ಕಾಲದಲ್ಲಿ ಹೊಂದಿಸುವ ತರಬೇತಿಯು ಮಣೆಯ ಮೇಲೆ ಜರುಗಬೇಕಷ್ಟೆ. ತಟ್ಟು ಮಣೆಯ ತರಬೇತಿಯ ಆಧಾರದಿಂದಲೇ ಕಂಚಿನ ತಾಳ ಪ್ರಯೋಗ ಮಾಡಲು ಸಾಧ್ಯವಾಗುವುದು. ಸಂಗೀತ ಸ್ವರಗಳ ಶೊಲ್ಕಟ್ಟುಗಳ ಪಾದ ಘಾತಗಳನ್ನು ತಾಳದ ಮುಚ್ಚು, ತೆರೆಗಳ ಶಬ್ದಗಳಿಂದ ಸರಿದೂಗಿಸಿಕೊಂಡು ಹೋಗುವ ಸಾಮರ್ಥ್ಯವು ಸತತ ಅಭ್ಯಾಸ ಬಲದಿಂದಲೇ ದೊರಕಬೇಕಷ್ಟೆ. ಭರತನಾಟ್ಯದ ಅತೀ ಪ್ರಮುಖ ಭಾಗವಾದ ನಟ್ಟುವಾಂಗದಲ್ಲಿ ಹಿಡಿತ ಬರಬೇಕಾದರೆ ದೀರ್ಘ ಕಾಲದ ತರಬೇತಿಯ ಅವಶ್ಯಕತೆಯಿದೆ. ಭರತನಾಟ್ಯದಲ್ಲಿ ಗೌರವ ಸ್ಥಾನ ಕೊಡಲ್ಪಟ್ಟಿರುವ ನಟುವಾಂಗದ ಮಹತ್ವ ಅಮೋಘವಾಗಿದೆ. ಇದನ್ನು ಸಾಧನೆ ಮಾಡಿ ಸ್ವಾಧೀನಪಡಿಸಿಕೊಂಡಾಗ ಮಾತ್ರ ಸಾರ್ಥಕವೆನಿಸುವುದು.

ನಟ್ಟುವಾಂಗವು ತಾಳ ಲಯಗಳ ಆಶ್ರಯದಲ್ಲಿ ಬಂಧಿಸಲ್ಪಟ್ಟ ವಿಶಿಷ್ಟವಾದ ಕಲೆ. “ಶಕಾರ ಶ್ಯಂಕರ ಪ್ರೋಕ್ತೋ, ಲಕಾರಶ್ಯಕ್ತಿರುಚ್ಚತೇ ಶಿವಶಕ್ತಿ ಸಮಾಯೋಗ ತಾಳ ಇತ್ಯಭಯತೇ” ಎಂಬ ಶಾಸ್ತ್ರ ಸಮ್ಮತವಾದ ಉಕ್ತಿಯಿಂದ  ತಾಳದಲ್ಲಿಯೂ ಪರಮಾತ್ಮನ ಸಾಕ್ಷಾತ್ಕಾರವಿದೆ ಎಂಬ ತತ್ತ್ವವನ್ನು ಮನವರಿಕೆ ಮಾಡಿಕೊಳ್ಳಬಹುದು. ತಕಾರವೇ ತಾಂಡವ. ಲಕಾರವೇ ಲಾಸ್ಯವಾಗಿದ್ದು, ಇವುಗಳಿಗೆ ಶಿವ ಪಾರ್ವತಿಯರು ಅಧಿ ದೇವತೆಗಳು. ಇವರ ಸಂಯೋಗದಿಂದಲೇ ತಾಳ ಉಂಟಾಗಿದೆ ಎಂಬ ನಂಬಿಕೆ. ಪಾರ್ವತಿಯ ಎಡಹಸ್ತಕ್ಕೆ, ಶಂಕರನ ಬಲ ಹಸ್ತದಿಂದ ಘಾತಿಸಲ್ಪಟ್ಟಾಗ ಉಂಟಾದ ಶಬ್ದವೇ ತಾಳವಾಗಿ ಪರಿಣಮಿಸಿತು. ಅದಕ್ಕೆ ಅನುಸಾರವಾಗಿ ನಟ್ಟುವಾಂಗದಲ್ಲಿ ಎಡಕೈಯಲ್ಲಿ ಅಡಿಭಾಗದಲ್ಲೂ, ಬಲಕೈಯಲ್ಲಿ ಮೇಲ್ಭಾಗದಲ್ಲೂ ಕಂಚಿನ ತಾಳಗಳನನು ಹಿಡಿದು ನುಡಿಸುವ ಸಂಪ್ರದಾಯ ಬಂದಿರಬಹುದೆಂದು ಅಭಿಪ್ರಾಯ ಪಡಲಾಗಿದೆ. ಸಂಗೀತ ನೃತ್ಯಗಳ ಕಾಲವನ್ನಳೆಯಲು ಹಸ್ತವನ್ನು ಉಪಯೋಗಿಸಿ ಬೆರಳೆಣಿಕೆ ಮಾಡುವುದೂ ತಾಳವೇ ಆಗಿದೆ. ಲಯ ಪ್ರಮಾಣಗಳ ಸಂಕಲನದಿಂದಲೇ ತಾಳ ಪ್ರಮಾಣಗಳು ಉಂಟಾಗುವುದು. ತಾಳ ಪ್ರಯೋಗದ ಸೂಚನೆಗಳನ್ನು ಭರತನಾಟ್ಯದ ಹೆಜ್ಜೆ. ವಿನ್ಯಾಸಾದಿ ಅಂಗ ಭಂಗಿಗಳಲಿ ಪ್ರಕಟಗೊಳಿಸಲಾಗುವುದು. ನಾಟ್ಯದಲ್ಲಿ ತಾಳವೆಂಬ ಮಾತನ್ನು ಪ್ರತ್ಯಕ್ಷವಾಗಿ ವ್ಯಕ್ತಪಡಿಸುವುದರಲ್ಲಿ ಜತಿಗಳ ಪಾಲುಗಾರಿಕೆಗೆ ಆದ್ಯತೆಯಿದೆ. ಜತಿಗಳನ್ನು ಪಾಂಡಿತ್ಯಪೂರ್ಣವಾಗಿ, ಅಲಂಕಾರಗೊಳಿಸುವುದರಲ್ಲಿ ನಟ್ಟುವಾಂಗದ ಪಾತ್ರ ಹಿರಿದಾಗಿದೆ.

ನಟ್ಟುವಾಂಗದ ಗುರು ಪರಂಪರೆಯಲ್ಲಿ ಅನೇಕ ವಿದ್ಯಾಂಸರು ಜನ್ಮವೆತ್ತಿ ಈ ಕಲೆಯಲ್ಲಿ ಸಾಧನೆ ಮಾಡಿ ಕಲೆಯ ಉದ್ಧಾರಕ್ಕಾಗಿ ತಮ್ಮನ್ನು ಅರ್ಪಿಸಿಕೊಂಡರು. ಮತ್ತು ಅದರ ಬೆಳವಣಿಗೆಗೆ ಕಾರಣರಾದರು. ತಂಜಾವೂರು ಸಹೋದರರೆಂದು ಪ್ರಖ್ಯಾತರಾದ ಚಿನ್ನಯ್ಯ, ಪೊನ್ನಯ್ಯ, ಶಿವಾನಂದಂ ವಡಿವೇಲು ಇವರು ನೃತ್ಯ ಸಂಗೀತಗಳಲ್ಲಿ ಅಪ್ರತಿಮೆ ಕಲಾವಿದರೆನಿಸಿಕೊಂಡರು. ಇವರು ತಂಜಾವೂರು ಅರಸರ ಆಸ್ಥಾನ ವಿದ್ವಾಂಸರಾಗಿ ಮೆರೆದರು. ರಾಜಾಶ್ರಯ ಹೊಂದಿದ ಇವರು ಶಾಸ್ತ್ರೀಯ ನೃತ್ಯ ಪದ್ಧತಿಯಲ್ಲಿ ವ್ಯವಸ್ಥಿತವಾದ ಒಂದು ಬದಲಾವಣೆ ಮಾಡಿ ಏಕಾರ್ಥ ಪ್ರಯೋಗವೆಂಬ ನೃತ್ಯ ಕಛೇರಿ ಪದ್ಧತಿಯನ್ನು ರೂಢಿಗೆ ತಂದರು. ನೃತ್ಯಕ್ಕಾಗಿ ಅನೇಕ ನೃತ್ಯಬಂಧಗಳನ್ನು ಶೋಲ್ಕಟ್ಟುಗಳನ್ನು ರಚಿಸಿ ಈ ಕ್ಷೇತ್ರಕ್ಕೆ ಸಮರ್ಪಿಸಿದರು. ವ್ಯವಸ್ಥಿತವಾದ ನಟ್ಟುವಾಂಗ ಕ್ರಮವನ್ನು ರೂಪಿಸಿದರು. ಇವರ ರಚನೆಗಳು ನೃತ್ಯ ಕ್ಷೇತ್ರದಲ್ಲಿ ಗಣನೀಯವಾಗಿ ಪ್ರಯೋಗಿಸಲ್ಪಡುತ್ತದೆ. ಇಂದಿನ ಕಲಾವಿದರಿಗೆ ಇವರ ಮಾರ್ಗದರ್ಶನೀಯವಾದ ಕೊಡುಗೆಗಳು ಪ್ರಾತಃಸ್ಮರಣೀಯವಾಗಿದೆ. ಈ ಸಂಪ್ರದಾಯವು ಮುಂದಕ್ಕೆ ಭರತನಾಟ್ಯ ಎಂಬ ಹೆಸರಿನಿಂದ ಕರೆಯಲ್ಪಟ್ಟು ಜಗತ್ ಪ್ರಸಿದ್ಧವಾಯಿತು.

ಮುಂದಕ್ಕೆ ತಮಿಳುನಾಳು, ಕರ್ನಾಟಕಗಳಲ್ಲಿ ಭರತ ನಾಟ್ಯದಲ್ಲಿ ಅನೇಕ ಶೈಲಿಗಳು ಹುಟ್ಟಿಕೊಂಡವು. ತಮಿಳುನಾಡಿನಲ್ಲಿ ಪಂದನಲ್ಲೂರು, ವಳವೂರು, ಕಾಂಚಿಪುರ, ತಂಜಾವೂರು ಮುಂತಾದ ಶೈಲಿಗಳು ಮತ್ತು ಕರ್ನಾಟಕದಲ್ಲಿ ಮೈಸೂರು, ಮೂಗೂರು, ಕೋಲಾರ, ನಂಜನಗೂಡು, ಮುಳಬಾಗಿಲು ಮೊದಲಾದ ಶೈಲಿಗು ಪ್ರಖ್ಯಾತವಾಗಿದ್ದವು. ಈ ಎಲ್ಲಾ ಸಂಪ್ರದಾಯಗಳಲ್ಲಿಯೂ ಅನೇಕ ವಿದ್ವಾಂಸರು ನೃತ್ಯ, ಸಂಗೀತ ನಟ್ಟುವಾಂಗರಲ್ಲ ಪಾಂಡಿತ್ಯ ಹೊಂದಿದ್ದರು. ತಮಿಳುನಾಡಿನಲ್ಲಿ ಪಂದನಲ್ಲೂರು ಮೀನಾಕ್ಷಿ ಸುಂದರಂ ಪಿಳ್ಳೆ, ರಾಮಯ್ಯ, ಪಿಳ್ಳೆ, ಚೊಕ್ಕಲಿಂಗ ಪಿಳ್ಳೆ, ಕಂದಪ್ಪ ಪಿಳ್ಳೆ, ಕುಮಾರ ಪಿಳ್ಳೆ, ಮುತ್ತಯ್ಯ ಪಿಳ್ಳೆ, ದಂಡಾಯುಧ ಪಾಣಿ ಪಿಳ್ಳೆ, ಕುಪ್ಪಯ್ಯ ಪಿಳ್ಳೆ, ಕಿಟ್ಟಪ್ಪ ಪಿಳ್ಳೆ ಅಲ್ಲದೆ ಇನ್ನೂ ಅನೇಕರು ಈ ಕ್ಷೇತ್ರದಲ್ಲಿ ದುಡಿದು ಕೀರ್ತಿ ಪಡೆದರು, ಅಂತೆಯೇ ಕರ್ನಾಟಕದಲ್ಲಿ ಮೂಗೂರು ಸುಬ್ಬಣ್ಣ ಅಮೃತಪ್ಪ, ಕೋಲಾರ ಕಿಟ್ಟಪ್ಪ, ದಾಸಪ್ಪ ನಾಟ್ಯ ಸರಸ್ವತಿ ಜಟ್ಟಿತಾಯಮ್ಮ ಇವರೆಲ್ಲರೂ ನಟ್ಟುವಾಂಗದಲ್ಲಿ ಪರಿಣಿತರಾದ ಮೇರು ಕಲಾವಿದರಾಗಿದ್ದರು. ಈ ಮಹಾನುಭಾವರು ನಟ್ಟುವಾಂಗದ ಕ್ಷೇತ್ರಕ್ಕೆ ಬಳುವಳಿಯಾಗಿ ತಮ್ಮ ಕೊಡುಗೆಯನ್ನು ನೀಡಿ ಚಿರಸ್ಥಾಯಿ ಎನಿಸಿದರು.

ನೃತ್ಯ ಕಲೆಗೆ ಇಂದು ಧಾರಾಳ ಪ್ರೋತ್ಸಾಹ ಮತ್ತು ಅಪಾರ ಬೇಡಿಕೆ ಇದೆ. ಇದಕ್ಕಾನುಸಾರವಾಗಿ ನೃತ್ಯ ಗುರುಗಳೂ, ನೃತ್ಯಾರ್ಥಿಗಳೂ ಗಣನೀಯವಾದ ಸಂಖ್ಯೆಯಲ್ಲಿ ವೃದ್ಧಿಸಲ್ಪಟ್ಟಿರುವರು. ನಮ್ಮ ಪೂರ್ವಜರಿಂದ ಬಳುವಳಿಯಾಗಿ ಪಡೆದಿರುವ ಈ ನೃತ್ಯ ಕಲೆಯನ್ನು ನಮ್ಮ ಮುಂದಿನ ಪೀಳಿಗೆಗೆ ನೀಡುವಲ್ಲಿ ನೃತ್ಯ ಚೌಕಟ್ಟಿನ ಶಾಸ್ತ್ರೀಯ ತಳಹದಿಗೆ ಧಕ್ಕೆ ಉಂಟಾಗದಂತೆ ಕಲಾವಿದರಾದ ನಾವೆಲ್ಲರೂ ಶ್ರಮಿಸಬೇಕಾದುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಪೂಜಾರ್ಹವಾಗಿ ಪವಿತ್ರವಾದ ಭರತನಾಟ್ಯ ಕಲೆಯು ಪಾಂಡಿತ್ಯಮಯವಾದ ನಟ್ಟು ವಾಂಗದ ಸೂತ್ರಧಾರಿಕೆಯಲ್ಲಿ ದೇವರ ಸಾಕ್ಷಾತ್ಕಾರವಿರುವ ಕಲಾ ಮಂದಿರಗಳಲ್ಲಿ ಪ್ರದರ್ಶನಗೊಂಡು ಚಿರಾಯುವಾಗಿ ವಿಜೃಂಭಿಸುತ್ತಿರಲಿ ಎಂದು ನಾವೆಲ್ಲರೂ ಹಾರೈಸೋಣ.