ಕವಿ ಚಿತ್ರಕೋವಿದನು ಪರತತ್ವಶೋಧಕನು |
ವಿವಿಧ ವದನ ಗೀತ ನೃತ್ಯ ಕುಶಲಿಗಳು ||
ನವನವತೆಯಂ ಮನಸೀಗಿವೆಲ್ಲ ಕಲೆಗಾರ |
ರವರಿಂದೆ ಸುಂದರತೆ- ಮಂಕುತಿಮ್ಮ ||
– ಡಿ.ವಿ.ಜಿ

ಮನುಷ್ಯನ ಅಂತರಂಗ ದ್ರವ್ಯವು ಮನಸ್ಸಿನ ಮೂಲಕ ಪ್ರವಹಿಸಿದಾಗ ಕಾವ್ಯ ಸಂಗೀತಾದಿ ಕಲೆಗಳಾಗಿಯೂ, ಬುದ್ದಿಯ ಮೂಲಕ ಪ್ರವಹಿಸಿದಾಗ ತರ್ಕ ವಿಜ್ಞಾನಾದಿ ಶಾಸ್ತ್ರಗಳಾಗಿಯೂ, ಪರಿಣಮಿಸುತ್ತದೆ. ಶಾಸ್ತ್ರದಲ್ಲಿ ದುರ್ಗಾಹ್ಯಗಳಾಗಿ ಬೇಸರ ತರುವ ಸಂಗತಿಗಳೇ ಕಲೆಯ ಮಾಧ್ಯಮದಿಂದ ರಸಭರಿತವಾಗಿ ರಂಜಕವೆನಿಸುತ್ತವೆ.

ಪ್ರಸಿದ್ಧ ಅಲಂಕಾರಿಕ ರಾಜಶೇಕರನ”ತರ್ಕಕ್ಲೇಶಗಳಿಂದ ಕೂಡಿದ ಯಾವ ಸಂಗತಿಗಳನ್ನು ಕವಿಯು ತನ್ನ ಕಾವ್ಯ ಕ್ರಿಯೆಯಲ್ಲಿ ಬಳಸಿಕೊಳ್ಳುತ್ತಾನೋ ಅವು ಚಂದ್ರಮಂಡಲದ ಮೇಲೆ ಬಿದ್ದ ಸೂರ್ಯ ರಶ್ಮಿಗಳಂತೆ ಒಂದಾನೊಂದು ರಮಣೀಯತೆಯನ್ನು ಹೊಂದುತ್ತವೆ” ಎಂಬ ಉಕ್ತಿ ಇಲ್ಲಿ ಸ್ಮರಣೀಯ. ಅಂತೆಯೇ ನೀಲಕಂಠ ದೀಕ್ಷಿತರ “ಮನಸ್ಸಿಗೆ ಸುಖವಲ್ಲದ ನಿರ್ವೇದ ಅಥವಾ ವಿಮುಖತೆ, ಭಯ, ದುಃಖ, ಬೇಸರ- ಈ ವಿಕಾರ ದಶೆಗಳಿಗೂ ಸಾಹಿತ್ಯ ಮಾಧ್ಯಮದಿಂದ ರಸತ್ವವುಂಟಾಗುತ್ತದೆ” ಎಂಬ ಮಾತೂ ಇದೇ ಅಭಿಪ್ರಾಯವನ್ನು ಸೂಚಿಸುತ್ತದೆ. ಈ ಕಾರಣದಿಂದಲೇ ನಿತ್ಯ ಎನ್ನಬಹುದಾದ ಸುಖಸಂತೊಷಗಳನ್ನು ಲಲಿತಕಲೆಗಳು ನೀಡುತ್ತವೆ ಮತ್ತು ಅವು ಮನುಷ್ಯ ಜೀವನದಲ್ಲಿ ಪ್ರಾಮುಖ್ಯತೆಯನ್ನು ಪಡೆದುಕೊಂಡಿರುತ್ತವೆ. ದೃಶ್ಯವಾಗಲೀ, ಶ್ರವ್ಯವಾಗಲೀ ಎಲ್ಲ ಕಲೆಗಳೂ ಸೌಂದರ್ಯದ ಮೂಲಗಳು, ಸೌಂದರ್ಯೋಪಾಸನೆಯ ಮಾರ್ಗಗಳು. ಅವು ಸೌಂದರ್ಯ ಗ್ರಹಣ ಸಾಧನಗಳೂ ಹೌದು. “ಕ” ಕಾರವು ಪರಬ್ರಹ್ಮವಾಚಕ, “ಲ” ಕಾರವು ಲಯಸೂಚಕ, ಹೀಗೆ ಕಲೆಯೆಂಬುದು ವಿಶ್ವ ಸೃಷ್ಟಿ ಸ್ತಿತಿ ಸಂಹಾರ ರೂಪವಾದದ್ದು, ಜೊತೆಗೇ ತ್ರಿಪುರ ಸುಂದರಿ ಲಲಿತಾದೇವಿಯ ಪ್ರತೀಕವೆಂಬ ನಿರ್ವಚನವೂ ತಂತ್ರಶಾಸ್ತ್ರದಲ್ಲಿ ಹೇಳಲ್ಪಟ್ಟಿದೆ. ಇವಿಷ್ಟೂ ಲಲಿತಕಲೆಗಳ ಹಿನ್ನೆಲೆ.

ನಾಟ್ಯ ಮನುಷ್ಯನ ಆದಿ ಮಾನವ ನೆಲೆಯಿಂದಲೇ ಬಂದಿದ್ದು. ಭಾವದ ಆವೇಗ ಮಿತಿ ಮೀರಿದಾಗ ಮೈ ಮರೆತು ಕುಣಿಯುವುದು ಮನುಷ್ಯನಿಗೆ ಸಹಜ ಪ್ರವೃತ್ತಿಯೆ. ಲಯಬದ್ಧವಾದ ಅಂಗವಿನ್ಯಾಸ. ಪಾದಚಲನೆ, ಭಂಗಿ ನಿರ್ದೇಶನ ಇವು ಶಾಸ್ತ್ರ ವಿವರಗಳಾಗಿ ಕಾಣಿಸಿಕೊಳ್ಳುವ ಮೊದಲೇ ಇದ್ದವು. ಆಟದಲ್ಲಿ ಬೇಟೆಯಲ್ಲಿ ಪ್ರೀತಿಯಲ್ಲಿ, ಕೋಪದಲ್ಲಿ, ಕಾಮದಲ್ಲಿ ಕೇಳಿಯಲ್ಲಿ ನೃತ್ಯದ ಪಾಲು ಇದ್ದದ್ದೇ. ಭರತಮುನಿಯ ನಾಟ್ಯಶಾಸ್ತ್ರ ಮನುಷ್ಯನಿಗೆ ಸಹಜವಾಗಿ ಮತ್ತು ಸಾಮೂಹಿಕವಾಗಿ ಒದಗುವ ಭಾವನೆಗಳಿಗೆಲ್ಲಾ ಅಭಿವ್ಯಕ್ತಿ ಅಪಾತ ಮಧುರವಾಗಿಯೂ, ಅಲೋಚನಾಮೃತವಾಗಿಯೂ ಇರುವಂತೆ ಒಂದು ಹಂದರವನ್ನು ಸೃಷ್ಟಿಸುವಂತದ್ದು, ಇವಿಷ್ಟು ನಾಟ್ಯದ ಹಿನ್ನೆಲೆ. ನೃತ್ಯದಲ್ಲಿ ಸೌಂದರ್ಯದ ಬಗ್ಗೆ ಚರ್ಚಿಸುವ ಮುನ್ನ “ಸೌಂದರ್ಯ” ಎಂಬ ಪದದ ಒಟ್ಟೂ ಅರ್ಥವನ್ನು, ವಿಶೇಷಾರ್ಥವನ್ನು ತಿಳಿದುಕೊಳ್ಳುವುದು ನೃತ್ಯ ಸಾಧನೆಯ ದೃಷ್ಟಿಯಿಂದ ಅತ್ಯಗತ್ಯ.

ಸಾಮಾನ್ಯವಾಗಿ ವ್ಯಕ್ತಿಗಳನ್ನು, ವಸ್ತುಗಳನ್ನು ನಾವು “ಸುಂದರ” ಅಥವಾ “ಕುರೂಪಿ” ಎಂದು ಗುರುತಿಸುತ್ತೇವೆ. ಆದರೂ ಸೌಂದರ್ಯಕ್ಕೆ ಅಳತೆಗೋಲಿಲ್ಲ. ಅಂದರೆ ಒಬ್ಬರಿಗೆ ಸುಂದರವಾಗಿ ಕಂಡ “ವ್ಯಕ್ತಿ” ಅಥವಾ ವಸ್ತು ಇನ್ನೊಬ್ಬರಿಗೆ ಚೆಲುವೆನ್ನಸಿಸಬಹುದಷ್ಟೆ. ಹಾಗೆಯೇ ಕಲಾವಿದರಲ್ಲೂ ಬೇರೆ ಬೇರೆ ರೀತಿಯ ಸೌಂದರ್ಯಗಳಿಂದ ಕಲಾಸ್ಫೂರ್ತಿ ಉಂಟಾಗಲು ಸಾಧ್ಯವಿದೆ. ಅಂತೆಯೇ ಬೇರೆ ಬೇರೆ ರೀತಿಯ ಕಲಾಕೃತಿಗಳಲ್ಲಿ ನೃತ್ಯಭಾಗಗಳಲ್ಲಿ ರಾಗಗಳಲ್ಲಿ ಸೌಂದರ್ಯವನ್ನು ಅನುಭವಿಸಲು ಸಾಧ್ಯವಿದೆ. ಆದರೆ “ಸೌಂದರ್ಯ ಪ್ರಜ್ಞೆ” ಎಂಬ ಪದವನ್ನು ತಾತ್ವಿಕವಾಗಿ ವಿಶ್ಲೇಷಿಸಿದಾಗ ಅದರ ಸ್ವರೂಪ ಈ ಮೇಲಿನ “ಬಾಹ್ಯ” ಸೌಂದರ್ಯಕ್ಕಿಂತ ಭಿನ್ನವಾದದ್ದು. ಸೌಂದರ್ಯ ಪ್ರಜ್ಞೆ ಕಲಾವಿದ-ಸಹೃದಯ ಇಬ್ಬರಿಗೂ ಸಮಾನವಾಗಿ ಸಂಬಂಧಿಸಿದ್ದು. ಅಂದರೆ ತತ್ವಶಾಸ್ತ್ರದ ದೃಷ್ಟಿಯಿಂದ ಪರಮ ಸತ್ಯ. ಪರಬ್ರಹ್ಮರಂತೆಯೇ “ಪರಮ” ಸೌಂದರ್ಯ ಅಥವಾ “ರಸ” ದ ಅಸ್ತಿತ್ವ. ಅಂದರೆ “ಸುಂದರ” ಯುವತಿಗೂ, ಸುಂದರ ಅಥವಾ ರಸಯುಕ್ತ ಕಲೆಗೂ ವ್ಯತ್ಯಾಸವಿದೆ. ಆದರೆ ಈ ವಿಚಾರ ಇಷ್ಟಕ್ಕೇ ನಿಲ್ಲುವುದಿಲ್ಲ. ಸೌಂದರ್ಯಾನುಭವದಲ್ಲಿ ರಸಾನ್ವೇಷಣೆ ಸಿದ್ದ. ಭೋಗ, ಚರ್ವಣ, ಅನುಭವಗಳ ಸ್ವರೂಪವನ್ನು ತಾತ್ವಿಕವಾಗಿ ವಿವರಿಸುವದರಲ್ಲಿ ಪಾಶ್ಚಾತ್ಯರು “Literary and Art Criticism” ಎಂಬ ವಿದ್ಯಾ ಪ್ರಕಾರವನ್ನೇ ಬೆಳೆಸಿದರು. ಸೌಂದರ್ಯವೆಂದರೇನು? ಎಂಬ ಪ್ರಶ್ನೆಗೆ ಪಾಶ್ಚಾತ್ಯ ತತ್ವಜ್ಞರಲಿ ಒಬ್ಬೊಬ್ಬರು ಒಂದೊಂದು ವಿಧವಾಗಿ ಉತ್ತರ ಕೊಟ್ಟಿದ್ದಾರೆ. ಇದು ವಸ್ತುವಿನಲ್ಲಿಯೇ, ಅದನ್ನು ಗ್ರಹಿಸುವ ಚಿತ್ತದಲ್ಲಿಯೇ? ಅಥವಾ ಎರಡರಲ್ಲೂ ಇದೆಯೇ? ಇದು ದೊಡ್ಡ ಸಮಸ್ಯೆ. ಈ ಪ್ರಶ್ನೆಗೆ ಭಾರತೀಯ ಕಾವ್ಯ ಮೀಮಾಂಸೆಯ ಉತ್ತರ ಇಷ್ಟೆ- ಲಲಿತಕಲೆಗಳ ಸಾರ ರಸ. ಇದು ಆನಂದಮಯವಾದ ಅನುಭವ ವಿಶೇಷ. ಸಹೃದಯನಿಗೆ ಈ ರಸಾನುಭವವನ್ನು ಯಾವುವು ಕೊಡಬಲ್ಲವೋ ಅದೆಲ್ಲವೋ ಸುಂದರ. ಈ ಆಹ್ಲಾದಕ್ಕೆ ಭಂಗ ತರತಕ್ಕದ್ದೇ ದೋಷ, ದೋಷವೂ ಕೂಡ ಸ್ಥಾನ ತಪ್ಪಿ ಬಂದಾಗ ದೋಷವೇ ಹೊರತು ನಿತ್ಯವಾಗಿ ದೋಷವಲ್ಲ. ರಸಗಂಗಾಧರಕಾರನ ಪ್ರಕಾರ “ಸೌಂದರ್ಯವೆಂದರೆ ಚಮತ್ಕಾರಜನಕವಾದ ಗುಣ; ಚಮತ್ಕಾರವೆಂದರೆ ಆನಂದ ವಿಶೇಷ. ಇದಕ್ಕೆ ಸಹೃದಯರ ಹೃದಯವೇ ಪ್ರಮಾಣ.”

ಅಂದರೆ ಬೆಳದಿಂಗಳು, ಅರುಳುಮಲ್ಲಿಗೆ, ನಗೆಮೊಗ, ಶೃಂಗಾರ ರಸಗಳಷ್ಟೇ ಭೀಷಣ ಸನ್ನಿವೇಶ, ಶೋಕ, ರೌದ್ರ, ಅಸಹ್ಯ, ಕ್ಲಿಷ್ಟ, ವಿಕೃತ ಇವುಗಳಲ್ಲೂ ರಸಾನುಭವ ಸಾಧ್ಯ. ಕವಿ/ನರ್ತಕಿ/ಕಲಾಕಾರ ಯಾವುದರಿಂದಲಾದರೂ ಅಥವಾ ಏನೂ ಇಲ್ಲದೆಯೂ ತನ್ನ ಭಾವನೆಗಳನ್ನು- ಸೃಜನಶೀಲತೆಯನ್ನು ಉಪಯೋಗಿಸಿ, ತನ್ಮಯತೆಯಿಂದ ಪರಿಭಾವಿಸಿದಾಗ ಸೌಂದರ್ಯೋತ್ಪತ್ತಿ. ಅವನು ಹೀಗೆ ಸಾಧಿಸಿದ ಸೌಂದರ್ಯವನ್ನು ಸಹೃದಯ ಅನುಭವಿಸಿ “ರಸಿಕ”ನಾಗುತ್ತಾನೆ.

ಮಹೋನ್ನತವಾದ ರಸತತ್ತ್ವ ಮತ್ತು ಪ್ರೇಕ್ಷಕ ಅಥವಾ ಸಹೃದಯ ಹೇಗೆ ಪರಸ್ಪರ ಸಂಬಂಧಿತವೆಂಬುದನ್ನು ನೋಡುವುದು ಇಲ್ಲಿ ಪ್ರಸ್ತುತ. ಅಂದರೆ ಸರಳವಾಗಿ ಹೇಳುವುದಾದರೆ ಕಲಾಸೃಷ್ಟಿಗೂ, ನಮ್ಮ ಶ್ರೀಸಾಮಾನ್ಯನಿಗೂ ಏನು ಸಂಬಂಧ. ಕಲೆಗೆ ಲೋಕ ವ್ಯವಹಾರದ ಅವಶ್ಯಕತೆಯೇನು ಎಂಬುದರತ್ತ ಕಣ್ಣು ಹಾಯಿಸುವುದು ಅತ್ಯಗತ್ಯ. ಅದು ನಾವು ಈಗ ಚರ್ಚಿಸುತ್ತಿರುವ ಸೌಂದರ್ಯ ಪ್ರಜ್ಞೆ ಇಂದಿನ ನೃತ್ಯ ಕಲಾವಿದರಲ್ಲೂ, ಆ ನೃತ್ಯವನ್ನು ಆಸ್ವಾದಿಸುವಂಥ ಪ್ರೇಕ್ಷಕ-ವಿಮರ್ಶಕರಲ್ಲೂ ಏಕಿರಬೇಕೆಂಬ ಪ್ರಶ್ನೆಗೆ ಉತ್ತರ ಕೊಟ್ಟಿತು.

ಕಲಾಸೃಷ್ಟಿಯ ಮುಂದೆ ನಮ್ಮ ಬಳಕೆಯ ಜಗತ್ತು ಅಪ್ರಸ್ತುತವೆನಿಸಿದರೂ, ಇವೆರಡಕ್ಕೂ ಸಂಬಂಧವಿಲ್ಲದಿಲ್ಲ. ಕಲಾಪ್ರತಿಭೆಯ ಲೀಲಾ ವ್ಯಾಪಾರಕ್ಕೆ ಲೋಕ ವ್ಯವಹಾರವೇ ಆಧಾರ. ಭರತ ತನ್ನ ನಾಟ್ಯಶಾಸ್ತ್ರದ ಮೊದಲನೆಯ ಅಧ್ಯಾಯದಲ್ಲಿಯೇ ನಾಟ್ಯದ ವಸ್ತು ಏನೆಂಬುದನ್ನು ಹೀಗೆ ಸೂಚಿಸಿದ್ದಾನೆ.

“ಈ ತ್ರೈಲೋಕ್ಯವೆಲ್ಲದರ ಭಾವದ ಅನುಕೀರ್ತನವೇ ನಾಟ್ಯ. ಒಂದು ಕಡೆ ಧರ್ಮ, ಒಂದು ಕಡೆ ಆಟ, ಒಂದು ಕಡೆ ಅರ್ಥ, ಇನ್ನೊಂದೆಡೆ ಶಾಂತಿ, ಮತ್ತೊಂದೆಡೆ ಹಾಸ್ಯ, ಇನ್ನೊಂದು ಕಡೆ ಯುದ್ಧ, ಕಾಮ ಕೊಲೆ, ಧರ್ಮತತ್ಪರದ ಧರ್ಮ, ಕಾಮಾಸಕ್ತರ ಕಾಮ, ಉದ್ದತರ ನಿಗ್ರಹ, ವಿನಯಶಾಲಿಗಳ ಇಂದ್ರಿಯ ನಿಗ್ರಹ, ಹೇಡಿಗಳ ದಿಟ್ಟತನ, ಶೂರರ ಉತ್ಸಾಹ, ಅಜ್ಞರ ಪ್ರಬೋಧ, ವಿದ್ವಾಂಸರ ಪಾಂಡಿತ್ಯ. ಶ್ರೀಮಂತರ ವಿಲಾಸ, ದುಃಖಪೀಡಿತರ ಮನಸ್ಥೈರ್ಯ, ಅರ್ಥಪರರ ಅರ್ಥ ಸಂಗ್ರಹ, ಕದಡು ಮನಸ್ಸಿನವರ ಧೈರ್ಯ ಹೀಗೆ ಅನೇಕ ಭಾವಗಳಿಂದ ಸಂಪನ್ನವಾಗಿ, ಅನೇಕ ಅವಸ್ಥೆಗಳನ್ನು ಒಳಗೊಂಡು, ಲೋಕದ ನಡವಳಿಕೆಯನ್ನು ಅನುಕರಿಸುವ ಈ ನಾಟ್ಯವನ್ನು ಈ ನಾಟ್ಯವನ್ನು ನಾನು ನಿರ್ಮಿಸಿದೆವು. ಇದಕ್ಕೆ ಉತ್ತಮ, ಮದ್ಯಮ, ಅಧಮ ಈ ಎಲ್ಲರ ಕಾರ್ಯಗಳು ಆಧಾರ. ಈ ನಾಟ್ಯದಲ್ಲಿ ಕಾಣಬಾರದ ಜ್ಞಾನವಿಲ್ಲ. ಶಿಲ್ಪವಿಲ್ಲ. ವಿದ್ಯೆಯಿಲ್ಲ ಕಲೆಯಿಲ್ಲ. ಯೋಗ-ಕಾರ್ಯಗಳಿಲ್ಲ. ಸುಖ-ದುಃಖಗಳಿಂದ ಕೂಡಿದ ಲೋಕಸ್ವಭಾವವೇನುಂಟೋ ಅದೆಲ್ಲವೂ ಆಂಗಿಕವೇ ಮೊದಲಾದ ಅಭಿನಯಗಳಿಂದ ಕೂಡಿ ನಾಟ್ಯವೆಂದು ಕರೆಯಿಸಿಕೊಳ್ಳುತ್ತದೆ.”

ಅಂದರೆ ಕಲೆಗೆ, ಸೌಂದರ್ಯ ಪ್ರಜ್ಞೆಗೆ ಸಮಾಜಕ್ಕೆ ಇರುವ ಸಂಬಂಧ ಸುಸ್ಪಷ್ಟ, ಸುಭದ್ರ.

ಸೌಂದರ್ಯಪ್ರಜ್ಞೆಯ ಬಗ್ಗೆ ಚರ್ಚಿಸುವಾಗ ಇದರ ಮೂಲವಾದ ರಸೋತ್ಪತ್ತಿಯ ಬಗ್ಗೆ, ನವರಸಗಳ ಬಗ್ಗೆ ಸಂಕ್ಷಿಪ್ತವಾಗಿಯಾದರೂ ಗಮನ ಹರಿಸುವುದು ಉಚಿತ. “ವಿಭಾವಾನುಭಾವ ವ್ಯಭಿಚಾರಿ ಸಂಯೋಗಾದ್ರಸನಿಷ್ಪತ್ತಿಃ, ವಿಭಾವಗಳು, ಅನುಭಾವಗಳು, ಸಂಚಾರಿ ಭಾವಗಳ ಸಂಯೋಗದಿಂದ ರಸದ ಉತ್ಪತ್ತಿ-ಇದು ಭರತನ ಪ್ರಖ್ಯಾತವಾದ ಸೂತ್ರ. ಆಸ್ವಾದ್ಯವಾಗುವುದರಿಂದ ಅದು ರಸ. ಬಗೆ ಬಗೆಯ ವ್ಯಂಜನಗಳೊಡನೆ ಕಲಿಸಿದ ಅನ್ನವನ್ನು ಊಟ ಮಾಡುತ್ತಾ ಪ್ರಸನ್ನಮನಸ್ಕರಾದ ಪುರುಷರು ಹೇಗೆ ರಸಗಳನ್ನು ಆಸ್ವಾದಿಸಿ, ಹರ್ಷಾದಿಗಳನ್ನು ಹೊಂದುತ್ತಾರೆಯೋ, ಅದೇ ರೀತಿ ಬಗೆ ಬಗೆಯ ಭಾವಾಭಿನಯಗಳಿಂದ ವ್ಯಂಜಿತವಾಗಿ ವಾಚಿಕಾಭಿನಯ, ಅಂಗಿಕಾಭಿನಯ, ಸಾತ್ವ್ತಿಕಾಭಿನಯಗಳಿಂದ ಕೂಡಿದ ಸ್ಥಾಯಿಭಾವಗಳನ್ನು ಪ್ರಸನ್ನಮನಸ್ಕರಾದ ಪ್ರೇಕ್ಷಕರು ಆಸ್ವಾದಿಸಿ, ಹರ್ಷಾದಿಗಳನ್ನು ಹೊಂದುತ್ತಾರೆ. ಆದಕಾರಣ ಇವು ನಾಟ್ಯರಸಗಳು.

ಮನುಷ್ಯನ ಚಿತ್ತವೃತ್ತಿಗಳು ಅನೇಕ. ಹುಟ್ಟಿದಂದಿನಿಂದಲೂ ಅವನಲ್ಲಿ ಕೆಲವು ಭಾವಗಳು ವಾಸನಾತ್ಮಕವಾಗಿ ನೆಲೆಗೊಂಡಿರುತ್ತದೆ. ಮಾನವನ ಜೀವತಕ್ಕೇ ಅಂಟಿಕೊಂಡು ನೆಲೆಯಾಗಿ ನಿಲ್ಲತಕ್ಕ ಭಾವಗಳಿಗೆ ಸ್ಥಾಯಿಭಾವಗಳೆಂದು ಹೆಸರು. ಭರತನ ಮತದಂತೆ ಇವು ಎಂಟು. ಸ್ಥಾಯಿಭಾವವನ್ನು ಒಂದು ಸೂತ್ರಕ್ಕೂ ಸಂಚಾರೀ ಭಾವಗಳನ್ನು ಅದರಲ್ಲಿ ಪೋಣಿಸಿರುವ ಬಣ್ಣಬಣ್ಣದ ಮಣಿಗಳಿಗೂ ಅಭಿನವಗುಪ್ತ ಹೋಲಿಸುತ್ತಾನೆ. ಈ ಮಣಿಗಳು ನಿಲ್ಲುವುದಕ್ಕೆ ಸೂತ್ರವೇ ಆಧಾರ. ಇವುಗಳ ಬಣ್ಣದಿಂದ ಸೂತ್ರಕ್ಕೂ ವರ್ಣವೈಚಿತ್ರ್ಯ ಒದಗುತ್ತದೆ. ಸ್ಥಾಯಿಯನ್ನು ಸಮುದ್ರಕ್ಕೂ ಸಂಚಾರಿ ಭಾವಗಳನ್ನು ಅದರಲ್ಲಿ ಏಳುತ್ತಾ ಬೀಳುತ್ತಾ ಇರುವ ತರಂಗಗಳಿಗೂ ಹೋಲಿಸುವುದೂ ಉಂಟು. ಸಂಚಾರೀ ಭಾವಗಳು ಭರತನ ಪ್ರಕಾರ ೩೩.

ಈ ಚಿತ್ರವೃತ್ತಿಯ ಸ್ವರೂಪವನ್ನು ಒಂದೆರಡು ಉದಾಹರಣೆಗಳ ಮೂಲಕ ನೋಡೋಣ. ಒಂದು ಸಂಜೆ ಸಂಚಾರ ಹೊರಟು ಯಾವುದೋ ಧ್ಯಾನದಲ್ಲಿ ನಡೆಯುತ್ತಿರುವಾಗ ದಾರಿಯಲ್ಲಿ ಇದ್ದಕ್ಕಿದ್ದ ಹಾಗೆ ಒಂದು ಹಾವು ಕಾಣಸಿಕೊಂಡರೆ ಏನಾಗುತ್ತದೆ? ಮನಸ್ಸಿನಲ್ಲಿ ಭಯ ತೋರುತ್ತದೆ. ಅದರ ಪರಿಣಾಮವಾಗಿ ನಾವು ಬೆಚ್ಚುತ್ತೇವೆ. ಥಟ್ಟನೆ ಹಿಂದಕ್ಕೋ, ಪಕ್ಕಕ್ಕೋ ಸರಿಯುತ್ತೇವೆ. ಹಾಗೆಯೇ ತಂದೆ ಪೇಟೆಯಿಂದ ಮನೆಗೆ ಬರುವಾಗ ಮಗಳಿಗೆ ಒಂದು ಬೊಂಬೆ ತಂದುಕೊಡುವುದಾಗಿ ಹೇಳಿದ್ದಾನೆ. ಅವನು ಬರುವ ವೇಳೆಗಿಂತಲೂ ಮೊದಲೇ ಇವಳಿಗೆ ಔತ್ಯುಕ್ಯ ಪ್ರಾರಂಭವಾಗುತ್ತದೆ. ಎಷ್ಟು ಬೇಗ ಬಂದಾನು; ಎಂಥಾ ಬೊಂಬೆಯನ್ನು ತಂದಾನು ಎಂಬ ನಿರೀಕ್ಷೆಯಲ್ಲಿ ಅವಳಿಗೆ ಹೊತ್ತು ಹೋಗುವುದು ಬಲು ನಿಧಾನವಾಗಿ ತೋರುತ್ತದೆ. ಬಾಗಿಲಲ್ಲಿ ನಿಂತು ರಸ್ತೆಯ ಕೊನೆಯ ತನಕ ನಿಟ್ಟಿಸಿ ನೋಡುತ್ತಾಳೆ. ದೂರದಲ್ಲಿ ಅವನನ್ನು ಕಂಡ ಕೂಡಲೆ ಏಳುವುದು. ಬೀಳುವುದನ್ನೂ ಅರಿಯದೆ ಹತ್ತರಕ್ಕೆ ಓಡಿಹೋಗುತ್ತಾಳೆ.

ಈ ಎರಡೂ ಸಂದರ್ಭಗಳಲ್ಲಿ ಕ್ರಮವಾಗಿ ಭಯವೂ, ಔತ್ಯುಕ್ಯವೂ ಭಾವಗಳು. ಒಂದು ಭಾವ ಉದಿಸಬೇಕಾದರೆ ಅದಕ್ಕೇನಾದರೂ ಕಾರಣವಿರಬೇಕು. ಮೊದಲಿನ ಉದಾಹರಣೆಯಲ್ಲಿ ಸರ್ಪವೇ ಭಯಕ್ಕೆ ಕಾರಣ. ಅದನ್ನು ನೋಡಿದ ಕೂಡಲೇ ಚಿತ್ತವು ಕಲಕಿ ಭಯ ಉಕ್ಕುತ್ತದೆ. ಇದು ಚಿತ್ತವೃತ್ತಿ, ಮಾನಸಿಕ ವ್ಯಾಪಾರ, ಬೇರೊಬ್ಬರಿಗೆ ಅಗೋಚರ. ಆದರೆ ಅದರ ಪರಿಣಾಮ ಬೆಚ್ಚುವುದು, ಸರಿಯುವುದು, ಮುಖ ಬಿಳುಪೇರುವುದು ಇವುಗಳಿಂದ ಇಂಥ ಭಾವ ಈ ವ್ಯಕ್ತಿಯಲ್ಲಿ ಉದಿಸಿದೆಯೆಂಬುದನ್ನು ಸೂಚಿಸುತ್ತದೆ. ಈ ಭಾವಗಳಿಂದ ರಸಗಳು ಹುಟ್ಟುತ್ತವೆ. ಈ ರಸೋತ್ಪತ್ತಿಯಲ್ಲಿ ಗೀತ ಸಾಹಿತ್ಯ, ವಾದ್ಯ ಪ್ರಯೋಗಾದಿಗಳ ಪ್ರಭಾವ ನರ್ತಕನ ಸಾಮರ್ಥ್ಯ, ಪ್ರೇಕ್ಷಕನ ಸಾಮರ್ಥ್ಯ, ಇವೆಲ್ಲವೂ ಪ್ರಮುಖವೆ.

ವರ್ಣಂ ಅನ್ನೋ ದೇವರನಾಮವನ್ನೋ ಅಥವಾ ಯಾವುದಾದರೊಂದು ನೃತ್ಯವನ್ನು ಅಭಿನಯಿಸುತ್ತಿರುವ ಕಲಾವಿದನಲ್ಲಿ/ನಟನಲ್ಲಿ ರಸೋತ್ಪತ್ತಿಯ ಅನುಭವವಾಗುವುದನ್ನು ಸುಲಭವಾಗಿ ಗ್ರಹಿಸಬಹುದು. ಆದರೆ ಇದನ್ನು ನೋಡುತ್ತಾ ದೂರದಲ್ಲಿ ಸುಮ್ಮನೆ ಕುಳಿತಿರುವ ಸಾಮಾಜಿಕನಿಗೆ ಈ ರಸದ ಅನುಭವ ಹೇಗೆ? ಇದಕ್ಕೆ ಉತ್ತರವನ್ನು ಶಾಸ್ತ್ರಗಳಿಂದ ತಿಳಿಯುವುದು ಸಾಧ್ಯ. ನಟ ಅಥವಾ ನರ್ತಕ ಕಾವ್ಯಾನುಶೀಲನ, ಗುರೂಪದೇಶ, ಸ್ವಂತ ಅಭ್ಯಾಸ; ಸ್ವಂತ ಕ್ರಿಯಾಶೀಲತೆ ಇವೆಲ್ಲದರ ಬಲದಿಂದ ಕಥಾವಸ್ತುವಿನ/ನಾಯಕ/ನಾಯಕಿಯ ವಿಭಾನುಭಾವಾದಿಗಳನ್ನು ಚೆನ್ನಾಗಿ ಅನುಕರಣ ಮಾಡಿ ತೋರ್ಪಡಿಸುತ್ತಾನೆ. ರಂಗದ ಮೇಲೆ ಅಭಿನಯಿಸುವ ವಿರಹ/ಶೃಂಗಾರ ದಿಟವಾದುದಲ್ಲ. ಸುಳಿಯುವ ನಗೆಯಾಗಲೀ, ನಿಟ್ಟುಸಿರಾಗಲೀ ಹೃದಯದ ನೈಜಭಾವದಿಂದ ಹೊಮ್ಮಿದವುಗಳಲ್ಲ. ಆದರೆ ಅವನು ಎಷ್ಟು ಕೌಶಲದಿಂದ ಅವುಗಳನ್ನು ಅನುಕರಣ ಮಾಡುತ್ತಾನೆಂದರೆ, ಅವು ಕೃತಕವೆಂದು ಸಾಮಾಜಿಕರಿಗೆ ತೋರುವುದಿಲ್ಲ. ಬಾಲಕೃಷ್ಣನನ್ನು ಸಂತೈಸುವ ತಾಯಿಯನ್ನು ಅಭಿನಯಿಸುತ್ತಿರುವ ನತ್ಕಿ “ತಾಯಿಯಂತೆಯೇ ಪ್ರೇಕ್ಷಕರಿಗೆ ತೋರುತ್ತಾಳೆ. ನಟನಿಂದ ಅನುಕೃತವಾಗಿ ಸಾಮಾಜಿಕರಿಂದ ಅನುಮಿತವಾದ ಸ್ಥಾಯಿಭಾವಕ್ಕೇ “ರಸ” ಎಂದು ಹೆಸರು. ವಿಭಾವನುಭಾವಗಳು ಲೋಕ ವಿಲಕ್ಷಣವಾಗಿ ಸುಂದರವಾಗಿರುವುದರಿಂದ ಇವುಗಳ ಮೂಲಕ ಗಮ್ಯವಾಗುವ ಸ್ಥಾಯಿಬಾವವೂ ಚಮತ್ಕಾರಕಾರಿಯಾಗಿ ಆಸ್ವಾದವನ್ನುಂಟು ಮಾಡುತ್ತದೆ. ಆದ್ದರಿಂದಲೇ ರಸವೆನಿಸಿಕೊಳ್ಳುತ್ತದೆ. ಈ ರಸೋತ್ಪತ್ತಿಯಾಗುವ “ಹೃದಯ ಸಂವಾದ”(Repport) ವನ್ನು ಕಲಾವಿದ ತನ್ನ ಮತ್ತು ಪ್ರೇಕ್ಷಕನ ಮದ್ಯೆ ಬೆಳೆಸಬೇಕಾಗುತ್ತದೆ. ರಸವನ್ನು ಸವಿಯುವ ಕಾಲದಲ್ಲಿ ಸಾಮಾಜಿಕನ ಮನಸ್ಸು ಮಿಕ್ಕೆಲ್ಲವನ್ನೂ, ತನ್ನನ್ನೂ ಮರೆತು ತನ್ನ ಸ್ವಭಾವವಾದ ಚಾಂಚಲ್ಯವನ್ನು ಕಳೆದುಕೊಂಡು ರಸದಲ್ಲೇ ಏಕಾಗ್ರವಾಗಿ ನೆಲೆಗೊಂಡಿರುತ್ತದೆ. ಈ ಅನುಭವಕ್ಕೆ ಚರ್ವಣಾ, ಚಮತ್ಕಾರ, ಆಸ್ವಾದ, ಆನಂದ, ವಿಶ್ರಾಂತಿ, ಸೌಂದರ್ಯ ಎಂದು ಬೇರೆ ಬೇರೆ ಹೆಸರುಗಳು ಎಲ್ಲದರ ತಾತ್ಪರ್ಯವೂ ಒಂದೇ.

ಈಗ ಇಂದಿನ ನೃತ್ಯ ಪ್ರದರ್ಶನಗಳಲ್ಲಿ ಇಂಥ ಸೌಂದರ್ಯ ಪ್ರಜ್ಞೆ ಅಥವಾ ರಸದ ಉತ್ಪತ್ತಿ ಎಷ್ಟರ ಮಟ್ಟಿಗಿದೆ. ನಮಗೆ ಕಲಾವಿದರೂ, ಸಹೃದಯರಾದ ಪ್ರೇಕ್ಷಕರೂ ರಸೋತ್ಪತ್ತಿಯ ಅನುಭವವನ್ನು ಪಡೆಯುವಲ್ಲಿ ಯಶಸ್ವಿಗಳೇ ಎಂಬುದು ಚರ್ಚಿಸಬೇಕಾದ ವಿಷಯ.

ರಸನಿಷ್ಪತ್ತಿಗೆ ಶಾಸ್ತ್ರಬದ್ಧವಾಗಿ ಇರುವ ಅಡತಡೆಗಳು ಏಳು. ಸಂಭಾವನಾ ವಿರಹ. ದೇಶಕಾಲ ವಿಶೇಷಾವೇಶ, ನಿಜಸುಖಾದಿ ವಿವಶೀಭಾವ, ಪ್ರತೀತ್ಯುಪಾಯ ವೈಕಲ್ಯ, ಸ್ಥುಟತ್ವಾಭಾವ, ಅಪ್ರಧನತಾ, ಸಂಶಯಯೋಗ ಇವುಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿದುಕೊಳ್ಳುವುದು ಸೂಕ್ತ.

ಮೊದಲನೆಯದು ಅಸಂಭಾವ್ಯತೆ. ನಾಟ್ಯದಲ್ಲಿ ಪ್ರದರ್ಶಿಸುವ ಕಥಾವಸ್ತು, ನಡೆ, ನುಡಿ ನಂಬಲರ್ಹವಾಗಿರಬೇಕು. ಎರಡನೆಯದು ದೇಶಕಾಲವಿಶೇಷಾವೇಶ ಸಾಮಾಜಿಕನು ನಾಟ್ಯಮಂದಿರವನ್ನು ಪ್ರವೇಶಿಸಿದಾಗ ಅದನ್ನು ವ್ಯವಹಾರಿಕ ಪ್ರಪಂಚದಂತೆಯೇ ಪರಿಗಣಿಸಿದರೆ ಅವನ ಭಾವವು ಸಾಂಸಾರಿಕ ಭಾವವಾಗಿಯೇ ಉಳಿಯುತ್ತದೆ. ರಂಗಸ್ಥಳದಲ್ಲಿ ನಡೆಯುವ ಒಂದೊಂದು ಸಂಗತಿಯನ್ನು ತನ್ನ ಸ್ವಂತಕ್ಕೆ ಅನ್ವಯಿಸುತ್ತಾನೆ. ರಮ್ಯವಾಗಿ ಇರುವದನ್ನು ತನಗಾಗಿ ಬಯಸುತ್ತಾನೆ. ಅನಿಷ್ಟವಾದದನ್ನು ದೂಷಿಸುತ್ತಾನೆ. ಗೋಳಾಡುತ್ತಾನೆ. ಇದು ರಸಾನುಭವವಲ್ಲ. ಕಥಾವಸ್ತುವಾದರೂ ಅಷ್ಟೆ ಸಾಮಾಜಿಕರನ್ನು ಕೆರಳಿಸುವಂತಿರಬಾರದಷ್ಟೆ. ತನ್ನ ಕಾಲದ ಸಂಗತಿಗಳನ್ನು ಕುರಿತು ನಾಟ್ಯ ರಚನೆ ಮಾಡಿದಾಗ ಸಮಾಜ ಸುಧಾರಣೆಯಾಗಬಹುದು, ಕ್ರಾಂತಿಯಾಗಬಹುದು. ಆದರೆ ಪ್ರೇಕ್ಷಕರಲ್ಲಿ ಹಲವರಾದರೂ ಅದನ್ನು ಸ್ವಂತ ವಿಷಯಕ್ಕೆ ಅನ್ವಯಸಿಕೊಂಡು ರಾಗದ್ವೇಷಗ್ರಸ್ತರಾಗಬಹುದು.

ಇನ್ನು ಕೆಲವರಿಗೆ ರಂಗಸ್ಥಳದ್ದೆಲ್ಲಾ ಪರಕೀಯ ವ್ಯವಹಾರ. ಇದಕ್ಕೂ ನನಗೂ ಸಂಬಂಧವಿಲ್ಲ ಎನಿಸಿ ತನ್ಮಯತೆಯೇ ಹುಟ್ಟದೆ ಅವರು ಉದಾಸೀನರಾಗಿದ್ದಾಗ ಭಾವವೂ ಇಲ್ಲ. ರಸವೂ ಇಲ್ಲ. ಹಾಗೆಯೇ ಇನ್ನೊಂದು ವಿಘ್ನನಿಜಸುಖಾದಿವಿವಶೀಭಾವ. ಸ್ವಂತ ಸುಖ-ದುಃಖಗಳೇ ಮನಸೆಲ್ಲಾ ಆವರಿಸಿ ಬೇರೊಂದರ ಕಡೆಗೆ ತಿರುಗಲು ಅವಕಾಶವನ್ನೇ ಕೊಡದಿರಬಹುದು. ಹೀಗಾಗದಿರಲು ನಾಟ್ಯಮಂದಿರದ ಅಲಂಕಾರ, ಗೀತವಾದ್ಯದಿಗಳೇ ಸಹಾಯಕ. ಇವನ್ನು ನೋಡುತ್ತಾ ಸ್ವಂತ ಸುಖದುಃಖಗಳನ್ನು ಮರೆತು, ಕದಡಿದ್ದ ಮನಸ್ಸು ತಿಳಿಯಾಗುತ್ತದೆ. “ಪ್ರತೀತ್ಯುಪಾಯ ವೈಕಲ್ಯ” ಎಂದರೆ ಭಾವವನ್ನು ಥಟ್ಟನೆ ಗ್ರಹಿಸಲು ಕಾರ್ಯ ಕಾರಣ ಸಾಮಗ್ರಿ ಸಾಲದಿರುವುದು. “ಸ್ಫುಟತ್ವಾಭಾವ” ಎಂದರೆ ಈ ಸಾಮಗ್ರಿ ಇದ್ದರೂ ಎದುರಿಗಿದ್ದಂತೆ, ಎದುರಿಗೆ ನಡೆದಂತೆ ಸಾಕ್ಷಾತ್ಕಾರವಾಗದಿರುವುದು. ನಂತರ, ಯಾವುದು ನಿಜವಾಗಿಯೂ ಪ್ರಧಾನತೆಯ ದೋಷ ಔಚಿತ್ಯವನ್ನು ಮೀರದಂತೆ ಶೃಂಗಾರ-ಹಾಸ್ಯ ಮೊದಲಾದ ರಸಗಳನ್ನು ಹೊರತರಬೇಕು. ಕೊನೆಯದು “ಸಂಶಯ ಯೋಗ.” ಒಂದು ಭಾವಕ್ಕೆ ಇಂಥಿಂಥವೇ ವಿಭಾವಾನುಭಾವ ಸಂಚಾರಿಗಳೆಂದಾಗಲೀ, ಯಾವುದಾದರೂ ಒಂದು ವಿಭಾಗ ನಿರ್ಧಿಷವಾದ ಒಂದು ಭಾವಕ್ಕೆ ಮಾತ್ರ ಸೇರದ್ದೆಂದಾಗಲೀ ಯಾವ ನಿಯಮವೂ ಇಲ್ಲ. ಉದಾಹರಣೆಗೆ ಒಂದೇ ವಸ್ತು ಭಯಕ್ಕೂ ಕ್ರೋಧಕ್ಕೂ ಕಾರಣವಾಗಬಹುದು. ಕಣ್ಣೀರು ಶೋಕವನ್ನು ತೋರಿಸಬಹುದು. ಹರ್ಷವನ್ನು ತೋರಿಸಬಹುದು.

ಆದ್ದರಿಂದ ವಿಭಾವಾನುಭಾವಾದಿಗಳನ್ನು ಅಭಿನಯಿಸುವಾಗ ಪ್ರಕೃತವಾದ ಭಾವವನ್ನು ಇವು ಸಂದೇಹಕ್ಕೆ ಅವಕಾಶವಿಲ್ಲದಂತೆ ಸೂಚಿಸುತ್ತವೆಯೇ ಎಂಬುದನ್ನು ಕಲಾವಿದ ಎಚ್ಚರಿಕೆಯಿಂದ ಗಮನಿಸಬೇಕು.

ಈ ವಿಘ್ನಗಳಿಲ್ಲದಾಗ ಭಾವವು ಶುದ್ಧ ಸ್ವರೂಪದಲ್ಲಿ ಗೋಚರವಾಗಿ ಆನಂದವನ್ನು ನೀಡುತ್ತದೆ. ಕಲಾವಿದನೂ, ಸಹೃದಯನೂ ತಾತ್ಕಾಲಿಕವಾಗಿಯಾದರೂ ಜೀವನ ಸಂಸಾರದ ಕ್ಷೇಶಚಾಂಚಲ್ಯಾದಿಗಳಿಂದ ಬಿಡುಗಡೆ ಹೊಂದಿ ಅಪೂರ್ವವಾದ ವಿಶ್ರಾಂತಿಯನ್ನು ಅನುಭವಿಸುತ್ತಾರೆ. ರಸಾಸ್ವಾದವೂ ಒಂದು ಬಗೆಯ ಸಮಾಧಿ ಸ್ಥಿತಿ. ಹೀಗಿರುವದರಿಂದ ಅದು “ಬ್ರಹ್ಮಾಸ್ವಾದ ಸದೃಶ”. ಹಾಗಾದರೆ ನೃತ್ಯದಲ್ಲಿ ಶೋಕದ, ರೌದ್ರದ ಉದಾಹರಣೆಗೆ ಸೀತೆಯ ಸಂಕಟದ ಅಥವಾ ಹಿರಣ್ಯಕಶಿಪುವಿನ ಮರಣವನ್ನು ನೋಡಿ ನಾವು ಉಲ್ಲಾಸದಿಂದ ಕುಣಿದಾಡುತ್ತೇವೆಯೇ ಎಂಬ ಪ್ರಶ್ನೆ ಸಹಜ. ಇಲ್ಲಿ ಆನಂದವೆಂದರೆ ಉಪಭೋಗದಿಂದ, ಇಷ್ಟ ಸಾಧನೆಯಿಂದ, ಲೋಕ ವ್ಯವಹಾರದಲ್ಲಿ ಒದಗುವ ಸುಖವಲ್ಲ. ಮಧ್ಯಪಾನ ಮಾಡಿದವನು ಪಡೆಯುವ, ಸುಖದಿಂದ ಬ್ರಹ್ಮಜ್ಞಾನಿ ಪಡೆಯುವ ಸುಖದವರೆಗೆ ಇಲ್ಲ ಸುಖದ ತಿರುಳು ಒಂದೇ ಎಂಬುದನ್ನು ಒಪ್ಪಿಕೊಂಡರೂ, ಸುಖದ ಸಾಧನ ಸಾಮಗ್ರಿ, ಸುಖಾನುಭವದ ಕಾಲ ಪರಿಮಾಣ, ಅದರಿಂದ ಮನಸ್ಸಿಗಾಗುವ ಸಂಸ್ಕಾರ, ಮುಂದಿನ ಪರಿಣಾಮ ಈ ಮೊದಲಾದವುಗಳನ್ನು ಅನುಸರಿಸಿ ಸುಖವು ನೀಚ/ಉತ್ತಮ, ಗ್ರಾಹ್ಯ/ತ್ಯಾಜ್ಯವಾಗುತ್ತದೆ. ಲಲಿತಕಲೆಗಳಿಂದ ದೊರೆಯುವ ಸುಖವು ವಿಷಯ ಸುಖವಲ್ಲ. ಅದು ಭಾವನಾಲಭ್ಯ. ಚಿತ್ತ ವಿಶ್ರಾಂತಿಯೇ ಅದರ ಮುಖ್ಯ ಲಕ್ಷಣ.

ಕಲಾನಿರ್ಮಾಣ ಅಥವಾ ನೃತ್ಯಕಲೆ ಒಂದು “syntheticact” ಅಖಂಡ ಮನಃಶಾಸ್ತ್ರ ಹೇಳುವಂತೆ ಮನಸ್ಸಿನ ಕಲ್ಪನಾಶಕ್ತಿಯಿಂದ ಕಲಾವಿದ ಲೋಕವನ್ನು ಬಗೆಬಗೆಯಾಗಿ, ಹೊಸಹೊತಾಗಿ ನೋಡಿ, ಕಲೆಯನ್ನು ನಿರ್ಮಿಸುತ್ತದೆ. ಇದು “ಪ್ರತಿಭಾ” ನೃತ್ಯ ದೃಶ್ಯಕಲೆಯಾದ್ದರಿಂದ ಬಾಹ್ಯ ಸೌಂದರ್ಯವೂ, ಬಳಸುವ ವೇಷಭೂಷಣಗಳೂ, ಬಳಸುವ ಗೀತವಾದ್ಯಗಳೂ ಇಲ್ಲಿ ಮುಖ್ಯವೇ. ಅಂತೆಯೇ ಶಾಸ್ತ್ರಗಳು ನಟ-ನಟೀ ಲಕ್ಷಣವನ್ನೂ ಅಪಾತ್ರ ಲಕ್ಷಣವನ್ನೂ ಕಿಂಕಿಣೀ ಲಕ್ಷಣವನ್ನೂ ಬಹಿಃ ಪ್ರಾಣಗಳನ್ನೂ ಚಟುವಟಿಕೆ, ಸ್ಥಿರತೆ, ನಿಲುವು ಸಮತ್ವ, ನೋಟ, ಶ್ರಮವಿಲ್ಲದಿರುವಿಕೆ, ಬುದ್ಧಿ, ಶ್ರದ್ಧೆ, ಸವಿಮಾತು, ಸಂಗೀತ ಜ್ಞಾನ ಇವುಗಳನ್ನೊಳಗೊಂಡ ಅಂಥಃಪ್ರಾಣಗಳನ್ನೂ ಹೆಸರಿಸುತ್ತವೆ. ಗುರು ಹೇಳಿಕೊಟ್ಟದ್ದನ್ನು ಶ್ರದ್ಧೆಯಿಂದ ಅನುಕರಣೆ ಮಾಡಿ, ನಂತರ ತನ್ನ ಸಾಮರ್ಥ್ಯ, ಕ್ರಿಯಾಶೀಲತೆಯಿಂದ ನರ್ತಕ/ನರ್ತಕಿ ಆ ವಿದ್ಯೆಯನ್ನು ಬೆಳೆಸಬೇಕು. ಪ್ರದರ್ಶನದಲ್ಲಿ ತನ್ನೆಲ್ಲಾ ಚಿಂತೆಗಳನ್ನು ಬದಿಗೊತ್ತಿ, ರಸತ್ವವನ್ನು ಸಾಧಿಸುವುದರೆಡೆಗೆ ಗುರಿಯಿಡಬೇಕು.

ಇನ್ನು ಈ ಕಲಾವಿದನ ಕಲೆಯನ್ನು ಅಂದರೆ ಇಲ್ಲಿ ನೃತ್ಯವನ್ನು ಆನಂದಿಸಬೇಕಾದ ಸಹೃದಯ ಪ್ರೇಕ್ಷಕರು. ಕಲಾನುಭವ ಅಥವಾ ಸೌಂದರ್ಯಾನುಭವ ಎನ್ನುವಲ್ಲಿ ಮೂರು ಹಂತಗಳಿವೆಯಷ್ಟೆ, ನಿರ್ಮಿಸಿದವನ ಮನಸ್ಸು ಆಕೃತಿಗೊಂಡು, ಒಂದು ಕ್ರಿಯಾವಿಧಾನವಾಗಿ ಬೆಳೆದು, ಒಂದು ಕೃತಿಯಾದದ್ದು, ಇದರ ಲೋಪದೋಷ ವಿವೇಚನೆ, ಗ್ರಹಣ, ದೃಷ್ಟಿ ಪರಿಶೀಲನೆ, ತೀರ್ಮಾನ ಇವೆಲ್ಲವೂ ಸಹೃದಯನ ಜವಾಬ್ದಾರಿ. ಕಲೆ ಒಂದು ಕಡೆ ಸಂತೋಷಕಾರಕ, ಇನ್ನೊಂದೆಡೆ ಉಪಕಾರಕ. ಇದು ಸಹೃದಯನಿಗೆ ಮನವರಿಕೆಯಾಗಬೇಕು. ಅರಸಿಕನಾದ, ನಿರ್ಲಿಪ್ತನಾದ ಪ್ರೇಕ್ಷಕನ ಮುಂದೆ ನೃತ್ಯ ಪ್ರದರ್ಶಿಸುವ ನೋವು ಕಲಾವಿದನಿಗೆ, ಆತನ ಸೃಜನಶೀಲತೆಗೆ ಕೆಡುಕು. ಪ್ರೇಕ್ಷಕನನ್ನು ಹೇಗಾದರೂ ಮೆಚ್ಚಿಸಬೇಕೆನ್ನುವ ಭರದಲ್ಲಿ ಕಲೆ ಅಧಃಪತನಕ್ಕಿಳಿಯುವ ಸಂಭವವಿದೆ. ಆಗ ಪ್ರೇಕ್ಷಕ-ಕಲಾವಿದ ಇಬ್ಬರಲ್ಲೂ ಸೌಂದರ್ಯಪ್ರಜ್ಞೆ ಕೀಳೂಮಟ್ಟಕ್ಕಿಳಿಯುವುದಷ್ಟೇ ಅಲ್ಲ. ಏಕತಾನತೆಯತ್ತ. ನಾಶದತ್ತಸಾಗುತ್ತದೆ.

“ಲೋಕೋ ಭಿನ್ನರುಚಿಃ” ಒಬ್ಬೊಬರ ಅಭಿರುಚಿ ಒಂದೊಂದು ಬಗೆ. ನೃತ್ಯವನ್ನು ನೋಡುವವರಲ್ಲಿ ಅದರ ಸಮಸ್ತ ಸೌಂದರ್ಯಕ್ಕೆ ಹೃದಯವನ್ನು ತೆರೆದಿಟ್ಟು ಯಾವೊಂದು ಅಂಶವನ್ನೂ ಬಿಡದೆ, ಯಾವುದಕ್ಕೂ ಅದರ ಸ್ಥಾನಕ್ಕೆ ಮೀರಿದ ಬೆಲೆಯನ್ನು ಕೊಡದೆ, ಒಂದೊಂದನ್ನೂ ಎಳೆಬಿಡಿಸಿ ಪರೀಕ್ಷಿಸುತ್ತಾ ಕುಳ್ಳಿರದೆ, ಅಖಂಡವಾಗಿ ಸ್ವಾರಸ್ಯವನ್ನು ಸವಿಯತಕ್ಕವರು ಬಹು ವಿರಳ. ಇಂತಹ ಸೌಂದರ್ಯ ಪ್ರಜ್ಞೆ ಇರುವ ಪ್ರೇಕ್ಷಕರಿದ್ದಲ್ಲಿ ಮಾತ್ರ ನೃತ್ಯ ಮಾಡುತ್ತೇನೆನ್ನುವುದು ಈ ಕಾಲದಲ್ಲಿ ಕಷ್ಟಸಾಧ್ಯ. ಆದರೆ ಇಂತಹ ಪ್ರೇಕ್ಷಕರನ್ನು ಸೃಷ್ಟಿಸುವ, ಪ್ರೇಕ್ಷಕರನ್ನು ಸಹೃದಯರನ್ನಾಗಿ, ನಂತರ ರಸಿಕರನ್ನಾಗಿ ಮಾರ್ಪಡಿಸುವ ಚೈತನ್ಯ ನೃತ್ಯ ಕಲೆಗಿದೆ. ನೃತ್ಯಕಲಾವಿದರು ಕಲೆಯ ಆ ಚೈತನ್ಯವನ್ನು ಉಪಯೋಗಿಸಬೇಕಷ್ಟೇ. ಆದರೆ ಸಮಾಜವೂ ನೃತ್ಯಕಲಾವಿದರು ನಿರಾತಂಕವಾಗಿ ಕಲಾಸೃಷ್ಟಿಗೆ ತೊಡಗಲು ಅವಕಾಶ ನೀಡಬೇಕು. ಅಭಿನಯವು ಸಾಧನ ಮಾತ್ರವೆಂಬುದನ್ನು ನಟನು ಮರೆಯಬಾರದು, ನಾಟ್ಯವು ಸಂಕೇತಭಾಷೆಯೆಂಬುದನ್ನು ಪ್ರೇಕ್ಷಕನು ಮರೆಯಬಾರದು.

ರಂಗದ ಮೇಲಣ ನರ್ತಕನಿಗೂ, ಸಭೆಯೊಳಗಿನ ಪ್ರೇಕ್ಷಕನಿಗೂ, ಸೇತುವೆಯನ್ನುಂಟುಮಾಡುವ ಸಾಧನ ಅಭಿನಯ ಕಲೆ. ಆ ಸೇತುವೆಯನ್ನು ನಿರ್ಮಿಸಲು ನರ್ತಕನು ಬಹಳ ಶ್ರಮಪಡುತ್ತಾನೆ. ಆದರೆ ಸೇತುವೆಯ ಸಾರ್ಥಕತೆ ಪ್ರೇಕ್ಷಕನು ಅದನ್ನು ಬಳಸಿದಾಗ-ನರ್ತಕನೊಂದಿಗೆ ಏಕೀಭವಿಸಿದಾಗ ಕಲೆ ನರ್ತಕ-ಪ್ರೇಕ್ಷಕರಿಬ್ಬರಿಗೆ ಸೌಂದರ್ಯಾನುಭವ – ರಸಾನುಭವಗಳ ಜೊತೆಗೇ ತನ್ನ ಕಥಾ ಸಂವಿಧಾನ ಪಾತ್ರ ವಿನ್ಯಾಸಗಳ ಮೂಲಕ ಒಳ್ಳೆಯ-ಕೆಟ್ಟದ್ದರ ಅರಿವನ್ನು ಅಭಿವ್ಯಕ್ತಿಸಿ, ನೀತಿದೃಷ್ಟಿ ಒದಗುವಂತೆ ಮಾಡುತ್ತದೆ. ಆನಂದ-ಉತ್ಪತ್ತಿ ಎರಡೂ ಕಲಾಪ್ರಯೋಜನಗಳೇ. ಈ ಪರಿಮಿತ ಸನ್ನಿವೇಶದಲ್ಲಿ ಸಂಸಾರದ ಕೋಟಲೆಗಳಿಂದ ಕ್ಷಣ ಕಾಲವಾದರೂ ಪಾರಾಗಿ ಮನುಷ್ಯನ ಆತ್ಮವು ಪರಮಯೋಗಿಗಳಿಗೆ ಲಭ್ಯವಾಗುವ ಬ್ರಹ್ಮಾನಂದದ ಸೌಂದರ್ಯವನ್ನು ಸವಿಯುತ್ತದೆ. ನೃತ್ಯವೂ ಒಂದು ಯೋಗ, ಅದು ಸಂಸಾರಿಯ ಯೋಗ. ನಮ್ಮ ಕಲಾನುಭವದಲ್ಲಿ “ಅಪಾತ ಮಧುರ”, “ಆಲೋಚನಾಮೃತ” ಎಂಬ ಎರಡು ವಿರಗಳು ಎದ್ದು ನಿಲ್ಲುತ್ತವೆ. ಕಲಾ ಸಾಮಗ್ರಿಯನ್ನು ಇಂದ್ರಿಯಗಳ ಮೂಲಕ ಅನುಭವಿಸುವಾಗ ಒಡನೆಯೇ ಸುಖ ಒದಗಿಬರಬೇಕು. ಹಾಗಿಲ್ಲವಾದರೆ ಅದರ ಆಕರ್ಷಣೆಯೇನು? ಆದರೆ ಅನುಭವ ಅಷ್ಟರಲ್ಲೇ ಮುಗಿಯಬಾರದು. ಕಲಾನುಭವದಲ್ಲಿ ಹೆಚ್ಚು ಕಾಲ ಉಳಿಯುವುದು ನಮ್ಮ ಆಲೋಚನೆಗಳಿಗೆ, ಭಾವನೆಗಳಿಗೆ, ಕಲ್ಪನೆಗಳಿಗೆ ಒದಗುವ ಸಾಮಾಗ್ರಿ. ಕಲಾಸಾಮಗ್ರಿಯನ್ನು ಇಂದ್ರಿಯಗಳು ಅನುಭವಿಸಿದ ಮೇಲೆ ಮನಸ್ಸು ಅದನ್ನು ತನ್ನದಾಗಿ ಮಾಡಿಕೊಂಡು, ಅನುಭವ, ಅಂತರಂಗದ ವ್ಯಾಪಾರವಾದಾಗ ಒದಗುವ ಸಂತೊಷ ನಾಲ್ಕು ಕಾಲ ಉಳಿಯುವಂಥದ್ದು. ನಮ್ಮ ಸಂಸ್ಕಾರದೊಳಗೆ ಸೇರಿಕೊಳ್ಳುವಂಥದ್ದು. ನಮ್ಮ ವ್ಯಕ್ತತ್ವದ ಓರೆಕೋರೆಗಳನ್ನು ತಿದ್ದಿ ಬದುಕಿಗೆ ಹೊಸದೊಂದು ಬೆಳಕನ್ನು ನೀಡುವಂಥದ್ದು. ಇದು ಸಾಂಪ್ರಾದಾಯಿಕ ಕಲೆಯ ಉದ್ದೇಶ.

ಈ ವಿಷಯಗಳನ್ನೆಲ್ಲಾ ನರ್ತಕ/ನರ್ತಕಿ ಅರಿತು ಔಚಿತ್ಯವನ್ನು ಗಮನದಲ್ಲಿಟ್ಟು ತನ್ನ ಚಪಲತೆಯನ್ನದುಮಿ ನೃತ್ಯ ರಚನೆ-ಪ್ರದರ್ಶನ ಮಾಡಬೇಕು. ಸಹೃದಯ ಪ್ರೇಕ್ಷಕ ಶುದ್ಧ ಹೃದಯದಿಂದ ನೋಡಬೇಕು. ಟೀಕಾಕಾರ ಉದಾರ ಮನಸ್ಸಿನಿಂದ ವಿಮರ್ಶಿಸಬೇಕು.

ಕಲಾವಿದ-ಸಹೃದಯರನ್ನು ಸ್ತುತಿಸಿ ಅವರವರ ಕಾರ್ಯವೇನೆಂಬುದನ್ನು ವಿಶದಪಡಿಸುವ “ವಕ್ರೋಕ್ತಿ ಜೀವಿತ” ದ ಕೆಳಗಿನ ಮನೋಹರವಾದ ಪದ್ಯದೊಂದಿಗೆ ಸೌಂದರ್ಯ ಪ್ರಜ್ಞೆಯ ಕುರಿತಾದ ನಮ್ಮ ಚರ್ಚೆಯನ್ನು ಮುಗಿಸೋಣ. ಕಲಾಪ್ರತಿಭೆಯ ದೃಷ್ಟಿಕಾರ್ಯ, ಸೃಷ್ಟಿಕಾರ್ಯಗಳು, ಸಹೃದಯ ಪ್ರತಿಭೆಯ ಅನುಸೃಷ್ಟಿ ಕಾರ್ಯ- ಈ ಮೂರನ್ನು ಗ್ರಹಿಸುವ ಕೆಳಗಿನ ಪದ್ಯ ಪ್ರತಿಭಾತತ್ವದ ಸಾರ.

“ಲೀನಂ ವಸ್ತುನಿ ಯೇನ ಸೂಕ್ಷ್ಮ ಸುಭಗಂ ತತ್ತ್ವಂ ಗಿರಾ ಕೃಷ್ಯತೇ
ನಿರ್ಮಾತುಂ ಪ್ರಭವೇನ್ಮನೋಹರಮಿದಂ ವಾಚೇವ ಯೊ ವಾ ಬಹಿಃ |
ವಂದೇ ದ್ವಾವಪಿ ತಾವಹಂ ಕವಿವರೌ ವಂದೇತರಾಂ ರಂ ಪುನಃ
ಯೋ ವಿಜ್ಞಾತಪರಿಶ್ರಮೋಯಮನ ಯೋರ್ಭಾರಾ ವತಾರಕ್ಷಮಃ ||”

“ಒಬ್ಬನು ಪದಾರ್ಥಗಳಲ್ಲಿ ಅಡಗಿರುವ ಸೂಕ್ಷ್ಮ ಸುಂದರವಾದ ತತ್ತ್ವವನ್ನು ಮಾತಿನಿಂದ ನೃತ್ಯದಿಂದ ಹೊರಸೆಳೆಯುವವನು, ಇನ್ನೊಬ್ಬನು ಕೇವಲ ಮಾತಿನಿಂದಲೇ (ನೃತ್ಯದಿಂದಲೇ) ಮನೋಹರ ರೂಪವನ್ನು ನಿರ್ಮಿಸಬಲ್ಲವನು. ಈ ಕವಿವರ್ಯರಿಬ್ಬರನ್ನು (ಕಲಾವಿದರನ್ನು) ನಾನು ವಂದಿಸುತ್ತೇನೆ. ಇವರಿಬ್ಬರ ಶ್ರಮವನ್ನರಿತು ಅವರ ಭಾರವನ್ನು ಇಳಿಸಿಕೊಳ್ಳಬಲ್ಲವನನ್ನು ಇನ್ನೂ ಮಿಗಿಲಾಗಿ ವಂದಿಸುತ್ತೇನೆ.”

|| ರಸೋ ವೈ ಸಃ ||