ನೃತ್ಯ ನಾಟಕ ಎಂದರೆ ಹೆಸರೇ ಹೇಳುವಂತೆ ನೃತ್ಯ ಪ್ರಧಾನವಾದ ನಾಟಕ. ಇಲ್ಲಿ ಸಂಗೀತ, ಕಾವ್ಯ, ಹಾಡು, ನೃತ್ಯ ಎಲ್ಲವೂ ಮಿಳಿತವಾಗಿರುತ್ತದೆ. ಆಂಗಿಕ, ವಾಚಿಕ, ಆಹಾರ್ಯ ಹಾಗೂ ಸ್ವಾತಿಕಾದಿ ಅಭಿನಯಗಳ ಹದವರಿತ ರಸಪಾಕ ಇಲ್ಲಿರುತ್ತದೆ. ರಸಾನುಭವವನ್ನು ಉಂಟು ಮಾಡುವುದೇ ನಾಟ್ಯ ಅಥವಾ ನಾಟಕದ ಉದ್ದೇಶ. ಒಂದು ಕಾವ್ಯವನ್ನು ಓದುವಾಗ ಅಥವಾ ನಾಟಕವನ್ನು ನೋಡುವಾಗ ನೋಡುಗನಿಗೆ ಉಂಟಾಗುವ ಆನಂದರೂಪವಾದ ವೈವಿಧ್ಯಮಯ ಅನುಭವನೇ ರಸ. ಈ ಸವಿಯನ್ನು ಅರ್ಥಮಾಡಿಕೊಳ್ಳುವವರು ಅನುಭವಿಸಿ ಆಸ್ವಾದಿಸುವವರೇ ರಸಿಕರು. ದೃಶ್ಯರೂಪದಲ್ಲಿ ಇರುವ ಸನ್ನಿವೇಶವೊಂದರಲ್ಲಿ ಅಂತರ್ಗತವಾಗಿರುವ ಭಾವಾವಸ್ಥೆ ರಸಿಕರ ಮನಸ್ಸನ್ನು ಮುಟ್ಟಿ, ತಟ್ಟಿ ಅವರು ಆ ಸನ್ನಿವೇಶದಲ್ಲಿ ತನ್ಮಯತೆ ಹೊಂದಿ ರಸಾನುಭವ ಹೊಂದಬೇಕಾದರೆ ಕವಿಯಾಗಲಿ ನಟನಾಗಲೀ ನರ್ತಕ / ನರ್ತಕಿಯೇ ಆಗಲಿ ಅವಲಂಬಿಸುವ ವಾಹಕವೇ ಅಭಿನಯ. ಈ ಅಭಿನಯದಲ್ಲಿ ನಾಲ್ಕು ವಿಧ. ಅದೇ ಆಂಗಿಕ, ವಾಚಿಕ, ಆಹಾರ್ಯ ಮತ್ತು ಸಾತ್ವಿಕ. ಒಂದು ಕಪ್‌ಚಹಾ ಸಿದ್ಧಪಡಿಸಲು ಹಾಲು, ಟೀ ಪುಡಿ, ಸಕ್ಕರೆ ಇತ್ಯಾದಿ ಪರಿಕರಗಳನ್ನು ಹದವರಿತು ಬಳಸಿದಂತೆ ಈ ನಾಲ್ಕು ವಿಧದ ಅಭಿನಯ ಸಾಮಗ್ರಿಗಳ ಹದವರಿತ ಮಿಶ್ರಣದಿಂದ ಮಾಡುವ ಕಥಾರೂಪದ ಪ್ರದರ್ಶನವೇ ನೃತ್ಯನಾಟಕ ಎನ್ನಬಹುದು.

ಆಂಗಿಕಾಭಿನಯ ಎಂದರೆ ಅಂಗಾಂಗಳಗಳ ಸಹಾಯವನ್ನು ಉಪಯೋಗಿಸಿ ಅರ್ಥವನ್ನು ನಿರೂಪಿಸುವ ಕ್ರಮ. ಇದು ಮುಖ, ಶರೀರ ಮತ್ತು ಚೇಷ್ಟಾಕೃತ ದೈಹಿಕ ಮಾಧ್ಯಮದಿಂದ ಅಭಿವ್ಯಕ್ತವಾಗುವಂತಾದ್ದು. ಮಾನವ ಶರೀರವನ್ನು ಅಂಗ, ಪತ್ಯಂಗ ಮತ್ತು ಉಪಾಂಗಗಳೆಂದು ವಿಂಗಡಿಸಲಾಗಿದೆ. ಈ ಒಂದೊಂದು ಅಂಗದ ಮೂಲಕ ಕಲಾವಿದರು ಅರ್ಥಪೂರ್ಣವಾದ ಭಾವಾವಸ್ಥೆಯನ್ನು ಹೊರಗೆಡಹುತ್ತಾರೆ. ಚಿತ್ತದಲ್ಲಿ ಉದ್ಭವಿಸಬಹುದಾದ ಅತಿ ಸೂಕ್ಷ್ಮ ವಿಕಾರವೂ ದೇಹದ ಯಾವುದಾದರೊಂದು ಅಂಗದಲ್ಲಿ ಅಭಿವ್ಯಕ್ತವಾಗದಿರುವುದಿಲ್ಲ. ಭಾವದ ತೀವ್ರತೆ ಹೆಚ್ಚಿದಂತೆ ಅಂಗಚಲನೆಯೂ ಅಷ್ಟೇ ವೇಗದಲ್ಲಿ ಪ್ರತಿಫಲಿಸುವುದನ್ನು ನಾವು ನಿಜ ಜೀವನದಲ್ಲಿ ಹೇಗೆ ಕಾಣುತ್ತೇವೆಯೋ ಹಾಗೆಯೇ ನಾಟಕಗಳಲ್ಲಿ ಇದರ ರೀತಿ ಒಂದು ತೆರನಾದದ್ದಾದರೆ ನೃತ್ಯ ನಾಟಕಗಳಲ್ಲಿ ಇದರ ಪರಿ ಮಾತಿನ ನೆರವಿನಿಂದ ರಸಿಕರಿಗೆ ಅರ್ಥವನ್ನು ಸಂವಹಿಸುವ ಪ್ರವೃತ್ತಿ ವಾಚಿಕಾಭಿನಯ. ನಾಟಕಗಳಲ್ಲಿ ಸಂಭಾಷಣೆಗಳೆ ಇದ್ದರೆ ನೃತ್ಯ ನಾಟಕಗಳಲ್ಲಿ ಇದು ಸಂಗೀತದ ರೂಪದಲ್ಲಿರುತ್ತದೆ. ಸಂತೋಷ, ಸಂತಾಪ ಮುಂತಾದ ಅನುಭಾವಗಳನ್ನು ಮಾನವ ಶರೀರ ಹೊಂದಿದಾಗ ಅದು ರೋಮಾಂಚ ಅಶ್ರು ಮುಂತಾದ ಪ್ರತಿಕ್ರಿಯೆಗಳಲ್ಲಿ ಸ್ಪಂದಿಸುತ್ತದೆ. ಕಾವ್ಯದಲ್ಲಿ ಅಂತರ್ಗತವಾಗಿರುವ ಭಾವಗಳನ್ನು ಕಲಾವಿದರು ಸನ್ನಿವೇಶಗಳ ಸೂಕ್ಷ್ಮತೆಯನ್ನು ಅರಿತು ಹೊರಹೊಮ್ಮಿಸುವುದನ್ನು ಸ್ವಾತಿಭಿನಯ ಎನ್ನುತ್ತೇವೆ.

ಯಾವುದೇ ನಾಟಕದಲ್ಲಿ ನಿಯೋಜಿತ ಕಥಾವಸ್ತುವಿನಲ್ಲಿ ಬರುವ ಪಾತ್ರಗಳಿಗೆ ತಕ್ಕುದಾದ ಮುಖವರ್ಣಿಕೆ, ಕಿರೀಟ, ಹಾರ ಕೇಯೂರಾಧಿ ವೇಶಭೂಷಣಗಳು, ಆಯುಧಗಳು, ಧ್ವಜ, ರಥಾದಿ ವಾಹನಗಳು ಇತ್ಯಾದಿಗಳೆಲ್ಲ ಆಹಾರ್ಯಭಿನಯವೆನ್ನಿಸುವುದು.

ಈ ಮೇಲೆ ಹೇಳಿದ ನಾಲ್ಕು ರೀತಿಯ ಅಭಿನಯವನ್ನು ಸಮರ್ಥ ರೀತಿಯಲ್ಲಿ ರೂಢಿಸಿಕೊಂಡು ನರ್ತನವನ್ನೇ ಪ್ರಧಾನವಾಗಿಟ್ಟುಕೊಂಡು ಯಾವುದಾದರೂ ಕಥಾನಕವನ್ನು ರಂಗದ ಮೇಲೆ ಪ್ರಯೋಗಿಸಿದಾಗ ಅದು ನೃತ್ಯ ನಾಟಕವೆನಿಸುತ್ತದೆ. ಯಕ್ಷಗಾನ, ಕೂಚುಪುಡಿ, ಭಾಗವತ ಮೇಳ ಇಂತಹವುಗಳು ನೃತ್ಯ ನಾಟಕಗಳಿಗೆ ಒಳ್ಳೆಯ ಉದಾಹರಣೆ. ಕರ್ನಾಟಕದಲ್ಲಿ ಜನಪ್ರಿಯತೆ ಗಳಿಸಿರುವ ಯಕ್ಷಗಾನ ಬಯಲಾಟ ಪದ್ಧತಿಯಲ್ಲಿ ಕುಣಿತ, ಸಂಭಾಷಣೆ, ಸಂಗೀತ, ಕಥಾವಸ್ತು ಎಲ್ಲವೂ ಇದ್ದು ಅದನ್ನು ಒಂದು ನೃತ್ಯನಾಟಕ ಎಂದು ಪರಿಗಣಿಸಬಹುದಾಗಿದೆ. ಆಂಧ್ರಪ್ರದೇಶದಲ್ಲಿ ಪ್ರಚಲಿತವಿರುವ ಕೂಚುಪುಡಿ, ಭಾಗವತ ಮೇಳಗಳಂತಹ ನೃತ್ಯ ನಾಟಕ ಪ್ರಕಾರಗಳಿಗೆ ಅದರದೇ ಆದ ಸಿದ್ಧ ಸಾಹಿತ್ಯ ಲಭ್ಯವಿದೆ. ಶ್ರೀ ಕೃಷ್ಣಲೀಲಾ ತರಂಗಿಣಿ, ಭೂಮಾಕಲಾಪ ಮುಂತಾದ ನೃತ್ಯ ನಾಟಕಗಳಲ್ಲಿ  ಚತುರ್ವಿಧ ಅಭಿನಯದ ಸಾರ ಸರ‍್ವಸ್ವವೂ ಅಡಕವಾಗಿದ್ದು ನೋಡುಗರ ಮನ ಸೆಳೆಯುತ್ತದೆ.

ಕೆಲವೊಮ್ಮೆ ನೃತ್ಯ ನಾಟಕಗಳಲ್ಲಿ ಸಂಗೀತಕ್ಕೂ ಹೆಚ್ಚಿನ ಪ್ರಾಧಾನ್ಯತೆ ಕೊಟ್ಟಾಗ ಅದನ್ನು ನಾವು ಗೇಯ ನಾಟಕವೆಂದೂ ಕರೆಯುತ್ತವೆ. ಇಂತಹ ಸಂಗೀತಮಯ ನಾಟಕಗಳಲ್ಲಿ ಎಲ್ಲಾ ಪಾತ್ರಗಳು ಹಾಡುವ ಮೂಲಕ ಕಥೆಗೆ ರೂಪು ನೀಡುತ್ತವೆ. ಇಂತಹ ಗೇಯ ನಾಟಕಗಳು ಅಥವಾ “ಒಪೆರಾ” ಪಾಶ್ಚಾತ್ಯ ದೇಶಗಳಲ್ಲೂ ಜನಪ್ರಿಯವಾಗಿ ರೂಢಿಯಲ್ಲಿವೆ. ೧೭ನೇ ಶತಮಾನದ ಕೊನೆಯಲ್ಲಿ ಇಟಲಿಯ ನೇಡಲ್ಸ್ ಎಂಬ ಪಟ್ಟಣವು ಸಂಗೀತ ನಾಟಕಗಳ ಕೇಂದ್ರವಾಗಿತ್ತಂತೆ. ಕ್ರಿಸ್ಟೋಫರ್ ವಿಲಿಬಾಲ್ಡ್ ಗ್ಲುಕ್‌ಮತ್ತು ಜರ್ಮನಿಯ ಮೊತ್ಸಾರ್ಟ್‌ಎಂಬುವರು ಇಟಲಿಯ ಭಾಷೆಯಲ್ಲಿ ಅನೇಕ ಒಪೆರಾಗಳನ್ನು ರಚಿಸಿದ್ದರೆಂಬ ಬಗ್ಗೆ ಇತಿಹಾಸ ತಿಳಿಸುತ್ತದೆ. ಹಾಗೇಯೇ ನಮ್ಮ ನಾಡಿನ ಅನೇಕ ಜಾನಪದ ಗೇಯ ನಾಟಕಗಳು ಇವೆ. ಇವುಗಳ ಪಕಿ ನಮ್ಮ ಯಕ್ಷಗಾನವೂ ಒಂದೆಂದು ಹೆಮ್ಮೆಯಿಂದಲೇ ಹೇಳಿಕೊಳ್ಳಬಹುದಾಗಿದೆ.

ಆದರೆ ಭರತನಾಟ್ಯ ಶೈಲಿಯ ನೃ‌ತ್ಯ ನಾಟಕಗಳಿಗೆ ಒದಗುವಂತಹ ಸಿದ್ಧ ಸಾಹಿತಿಗಳು ನಮ್ಮಲ್ಲಿ ಲಭ್ಯವಿಲ್ಲ. ನಮ್ಮ ಪ್ರಾಚೀನ ಕವಿಗಳ ಕಾವ್ಯಗಳನ್ನೋ ಅಥವಾ ಆಧುನಿಕ ಕಾವ್ಯಗಳನ್ನೋ ಭರತನಾಟ್ಯ ಕಲಾವಿದರು ಆರಿಸಿಕೊಂಡು ನೃತ್ಯ ಮಾಧ್ಯಮಕ್ಕೆ ಅದನ್ನು ಅಳವಡಿಸಿಕೊಳ್ಳುತ್ತಾರೆ. ಹೀಗೆ ಆರಿಸಿಕೊಳ್ಳುವಾಗ ಸ್ವಾರಸ್ಯಕರವೂ, ರಂಜನೀಯವೂ ಆಕರ್ಷಕವೂ ಆದ ಕಥಾ ಪ್ರಸಂಗವನ್ನು ಆರಿಸಿಕೊಂಡರೆ ಮಾತ್ರ ನೃತ್ಯನಾಟಕದ ಪ್ರಯೋಗ ಯಶಸ್ವಿಯೆಸನಿಸುತ್ತದೆ. ನಾಟ್ಯಾಂಶಗಳಿಗೆ ಸಾಕಷ್ಟು ಅವಕಾಶ ಇರುವ, ತಾಳ ವೈವಿಧ್ಯತೆಗೆ ಆಸ್ಪದವಿರುವ ನೃತ್ಯದ ವಿವಿಧ ಅಂಗಗಳನ್ನು ಪ್ರಕಾಶಿಸಿಲು ಹೆಚ್ಚು ಸಾಧ್ಯತೆಗಳಿರುವ ಕಥಾಭಾಗವನ್ನೇ ಆಯ್ದುಕೊಂಡರೆ ಆಗ ಮಾತ್ರ ನೃತ್ಯ ನಾಟಕ ರಸಿಕರನ್ನು ರಂಜಿಸುತ್ತದೆ. ಇಲ್ಲವಾದಲ್ಲಿ ಪರಿಣಾಮ ತೆಳುವಾಗುತ್ತದೆ. ಉದಾಹರಣೆಗೆ ಹೇಳಬೇಕೆಂದರೆ ಭಸ್ಮಾಸುರ ಮೋಹಿನಿ, ಕಾಮದಹನ, ಶಾಕುಂತಲ, ಸೀತಾಸ್ವಯಂವರ, ಚಿತ್ರಾಂಗದಾ, ಮುಂತಾದ ಸನ್ನಿವೇಶಗಳನ್ನು ನೃತ್ಯ ನಾಟಕದ ರೂಪದಲ್ಲಿ ಅಲ್ಲಿ ಇಲ್ಲಿ ಆಗೀಗ ನಾವು ಕಾಣುತ್ತಿರುತ್ತೇವೆ. ಇಂತಹವುಗಳು ಹೆಚ್ಚು ಜನಮನ ಸೆಳೆಯುತ್ತವೆ.

ನೃತ್ಯ ನಾಟಕಗಳಿಗೆ ಕಥಾವಸ್ತುವಿನ ಆಯ್ಕೆ, ಕಾವ್ಯಕ್ಕೆ ರಾಗ ಸಂಯೋಜನೆ, ನೃತ್ಯ ಸಂಯೋಜನೆ, ಪಾತ್ರಗಳ ಸೃಷ್ಟಿ, ಪಾತ್ರಗಳನ್ನು ಬೆಳೆಸುವ ಕ್ರಮ, ಸಂದರ್ಭೋಚಿತವಾಗಿ ನೃತ್ಯವನ್ನು ಅಳವಡಿಸಿಕೊಳ್ಳುವ ರೀತಿ, ದೃಶ್ಯಗಳ ಅಳವಡಿಕೆ, ರಂಗಸಜ್ಜಿಗೆ, ಬೆಳಕಿನ ನಿರ್ವಹಣೆ, ಪಕ್ಕವಾದ್ಯಗಳ ಬಳಕೆ ಈ ಎಲ್ಲದರಲ್ಲೂ ನಿರ್ದೇಶಕ ತನ್ನ ಜಾಣ್ಮೆಯನ್ನು ಮೆರೆಸಬೇಕಾಗುತ್ತದೆ. ಇಲ್ಲವಾದಲ್ಲಿ ನೃತ್ಯನಾಟಕ ಸತ್ವಹೀನವೆನಿಸಿ ಸೊರಗುತ್ತದೆ. ಕಥಾವಸ್ತುವಿನಲ್ಲಿ ಬರುವ ಎಲ್ಲಾ ಪಾತ್ರಗಳೂ ವೇದಿಕೆಯಲ್ಲಿ ಯಾವ ರೀತಿ ತಮ್ಮ ಪಾತ್ರ ಪೋಷಣೆ ಮಾಡಬೇಕು. ಯಾವ ಯಾವ ಪಾತ್ರಗಳಿಗೆ ನರ್ತನಕ್ಕೆ ಆದ್ಯತೆ ಕೊಡಬೇಕು. ಯಾವ ಪಾತ್ರಗಳನ್ನು ಸ್ವಾತಿಕಾಭಿನಯಕ್ಕೆ ಮಾತ್ರ ಸೀಮಿತಗೊಳಿಸಬೇಕು ಎಂಬಿತ್ಯಾದಿ ಸೂಕ್ಷ್ಮ ಅಂಶಗಳೂ ನೃತ್ಯ ನಾಟಕದ ಯಶಸ್ಸಿಗೆ ಒಳ್ಳೆಯ ಕಾಣ್ಕೆ ನೀಡಬಲ್ಲದು.

ಜಯದೇವ ಕವಿ ವಿರಚಿತ “ಗೀತ ಗೋವಿಂದ” ಅತಿ ಮನೋಹರವಾದ ಕಲಾಕೃತಿ. ಅನೇಕರು ಜಯದೇವನ ಅಷ್ಟಪದಿಗಳ ಆಧಾರಿತ ನೃತ್ಯ ನಾಟಕಗಳನ್ನು ಗೇಯ ನಾಟಕಗಳನ್ನೂ ಪ್ರದರ್ಶಿಸಿ ಯಶಸ್ವಿಯಾಗಿದ್ದಾರೆ. ರಾಧಾಕೃಷ್ಣ ಪ್ರಣಯ, ಸರಸ-ವಿರಸಗಳ ಶೃಂಗಾರ ಕಥೆ ಇಲ್ಲಿನ ಸರ್ವಸ್ವ ಇದನ್ನು ನೃತ್ಯ ನಾಟಕದ ರೂಪದಲ್ಲಿ ಆಕರ್ಷಕವಾಗಿ ಪ್ರದರ್ಶಿಸಲು ಸಾಕಷ್ಟು ಅವಕಾಶ ಇಲ್ಲದೆ. ಹಾಗೆಯೇ ಅರುಣಾಚಲ ಕವಿ ರಚಿಸಿರುವ “ರಾಮನಾಟಕಂ”, ಗೋಪಾಲಕೃಷ್ಣ ಭಾರತಿಯವರು ರಚಿಸಿ “ನಂದರಾರ್ ಚರಿತ್ರೆ” ಎಂಬ ನೃತ್ಯ ನಾಟಕಗಳನ್ನು ದೇಶದ ಹಲವು ಶ್ರೇಷ್ಠ ಕಲಾವಿದರು ಸಂಯೋಜಿಸಿ ಪ್ರದರ್ಶಿಸಿ ಯಶಸ್ವಿಯಾಗಿದ್ದಾರೆ. ಕನ್ನಡದ ಪ್ರಸಿದ್ಧ ಸಾಹಿತಿ ಡಾ.ಶಿವರಾಮ ಕಾರಂತರು ಕೂಡಾ “ಕಿಸಗೌತಮಿ”, “ಮುಕದ್ವಾರ”, “ಸೋಮಿಯ ಸೌಭಾಗ್ಯ”, ” ಯಾರೋ ಅಂದರು” ಮುಂತಾದ ಗೇಯ ನಾಟಕಗಳನ್ನು ರಚಿಸಿ ಕಾರಂತರೇ ಅಭಿನಯಿಸಿ ಪ್ರದರ್ಶಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಾರೆ. ಶ್ರೇಷ್ಠ ಕವಿ ಪು.ತಿ.ನ. ಅವರೂ ಅನೇಕ ಗೇಯ ನಾಟಕಗಳನ್ನು “ಹಂಸದಮಯಂತಿ” ಎಂಬ ಪುಸ್ತಕದಲ್ಲಿ ಪ್ರಕಟಿಸಿದ್ದಾರೆ. ಅವರ “ಹರಿಣಾಭಿಸರಣ”, “ಗೋಕುಲ ನಿರ್ಗಮನ” ಮುಂತಾದವುಗಳನ್ನೂ ಹಲವು ಕಲಾವಿದರೂ ನೃತ್ಯ ನಾಟಕಗಳ ರೂಪದಲ್ಲಿ ಪ್ರಯೋಗಿಸಿದ್ದಾರೆ. ಇಂತಹ ಹಲವು ಹತ್ತು ಉದಾಹರಣೆಗಳು ನಮ್ಮ ಕಣ್ಣ ಮುಂದೆ ಸಾಕಷ್ಟಿವೆ.

ಮಾತು ಬಲ್ಲವರೆಲ್ಲರೂ ಉತ್ತಮ ಭಾಷಣಕಾರರಾಗಲು ಸಾಧ್ಯವಿಲ್ಲ. ಯಾವುದೇ ಒಂದು ಭಾಷೆಯಲ್ಲಿ ಓದು ಬರಹ ಚೆನ್ನಾಗಿ ತಿಳಿದಿದ್ದರೂ ಅಂತಹವರೆಲ್ಲರೂ ಬರಹಗಾರರು ಆಗಲು ಸಾಧ್ಯವಿಲ್ಲ. ಹಾಗೆಯೇ ನೃತ್ಯ ತಿಳಿದವರೆಲ್ಲರೂ ನೃತ್ಯ ನಾಟಕಗಳಿಗೆ ನೃತ್ಯ ಸಂಯೋಜನೆ ಮಾಡಲು ಸಾಧ್ಯವಾಗಲಿಕ್ಕಿಲ್ಲ. ಇದಕ್ಕೆ ಸಾಕಷ್ಟು ಅನುಭವ, ಅಭ್ಯಾಸ, ಸಿದ್ಧತೆ, ಪರಿಶ್ರಮ, ಆಸ್ಥೆ, ಆಸಕ್ತಿ, ಉತ್ಸಾಹ ಎಲ್ಲವೂ ಬೇಕಾಗುತ್ತದೆ. ಒಬ್ಬ ನೃತ್ಯ ಕಲಾವಿದ ಅಥವಾ ಕಲಾವಿದೆಗೆ ಪಾಂಡಿತ್ಯ ಎಷ್ಟೇ ಇದ್ದರೂ ಕಥಾ ಸಾಹಿತ್ಯಕ್ಕೆ ತಕ್ಕಂತೆ ನೃತ್ಯ ಸಂಯೋಜನೆ ಮಾಡಲು ವಿಶೇಷವಾದ ಸಾಮರ್ಥ್ಯ, ಸೃಜನಶೀಲತೆ, ಕಲ್ಪನಾಶಕ್ತಿ, ನೈಪುಣ್ಯತೆ ಎಲ್ಲವೂ ಅತ್ಯಾವಶ್ಯಕ.

ಒಬ್ಬ ಒಳ್ಳೆಯ ನೃತ್ಯ ಕಲಾವಿದ ಅಥವಾ ಕಲಾವಿದೆ ತನ್ನ ಏಕವ್ಯಕ್ತ ನೃತ್ಯ ಪ್ರದರ್ಶನ ಕಾರ್ಯಕ್ರಮದಲ್ಲಿ ಯಶಸ್ಸು ಗಳಿಸಬಹುದು. ಒಳ್ಳೆಯ ಗುರುವಾಗಿ ಕೂಡಾ ಮನ್ನಣೆ ಗಳಿಸಬಹುದು. ಆದರೆ ಒಳ್ಳೆಯ ಸಮರ್ಥ ನೃತ್ಯ ನಾಟಕ ನಿರ್ದೇಶಕಿಯಾಗಿ ಹಿಂದೆ ಬೀಳಬಹುದು. ಇದಕ್ಕೆ ಹಲವಾರು ಕಾರಣಗಳಿರಬಹುದು. ಮೊದಲನೆಯದಾಗಿ ಆಯ್ದುಕೊಂಡ ಕಥಾಭಾಗದ ಒಳಹೊಕ್ಕು ಅದನ್ನು ಅರ್ಥಮಾಡಿಕೊಳ್ಳದಿರುವುದು. ಎರಡನೆಯದಾಗಿ ಗೇಯ ಸಾಹಿತ್ಯಕ್ಕೆ ತಕ್ಕ ರಾಗ ಸಂಯೋಜನೆ ಮಾಡುವ ಸಾಮರ್ಥ್ಯ ಇಲ್ಲದಿರುವುದು, ಮೂರನೆಯದಾಗಿ ಕಥಾ ಹಂದರವನ್ನು ನೃತ್ಯ ಮಾಧ್ಯಮದ ಮೂಲಕ ಆಕರ್ಷಕಗೊಳಿಸಿ ಬೆಳೆಸುವ ಸಾಮರ್ಥ್ಯ ಇಲ್ಲದಿರುವುದು. ವಿವಿಧ ಪಾತ್ರಗಳಿಗೆ ಸರಿಹೊಂದುವ ಸೂಕ್ತ ಪಾತ್ರಧಾರಿಗಳು ಸಿಗದೆ ಇರುವುದು. ನಾಲ್ಕನೆಯದಾಗಿ ನೃತ್ಯ ನಾಟಕಕ್ಕೆ ಬೇಕಾದ ಉತ್ತಮ ಮಟ್ಟದ ಸಂಗೀತಗಾರರು ವಾದ್ಯ ಸಹಕಾರ ನೀಡುವ ಕಲಾವಿದರು ದೊರಕದಿರುವುದು. ನೃತ್ಯ ನಾಟಕದ ವರ್ಚಸ್ಸನ್ನು ಹೆಚ್ಚಿಸಬಲ್ಲ ರಂಗಪರಿಕರಗಳನ್ನು ಒದಗಿಸಲು ಸಾಧ್ಯವಾಗದಿರುವುದು. ಐದನೆಯದಾಗಿ ವಸ್ತ್ರಾಲಂಕಾರ ವರ್ಣಾಲಂಕಾರಗಳ ಗುಣಮಟ್ಟ ಕಡಿಮೆ ಇರುವುದು, ಹೀಗೆ ಹಲವು ಹತ್ತು ಕಾರಣಗಳನ್ನು ಇಲ್ಲಿ ಪಟ್ಟಿ ಮಾಡಬಹುದು. ಇಲ್ಲಿನ ಎಲ್ಲಾ ತೊಡಕುಗಳನ್ನು ನಿವಾರಿಸಿ ಒಂದು ಉನ್ನತ ಮಟ್ಟದ ನೃತ್ಯ ನಾಟಕ ಪ್ರಯೋಗಿಸಬೇಕಾದರೆ ನೃತ್ಯ ಕಲಾವಿದರು ಸಾಕಷ್ಟು ಕಾಲ, ಶ್ರಮ, ಹಣ, ಸಾಮರ್ಥ್ಯ ಎಲ್ಲವನ್ನೂ ವಿನಿಯೋಗಿಸಬೇಕಾಗುತ್ತದೆ. ಆದರೆ ಇಂದಿನ ಸಂದರ್ಭದಲ್ಲಿ ತೊಡಗಿಸಿದ ಶ್ರಮಕ್ಕೆ ತಕ್ಕ ಪ್ರತಿಫಲ, ಪ್ರೇಕ್ಷಕರ ಪ್ರತಿಸ್ಪಂದನೆ ನಿರಾಶಾದಾಯಕವೆನಿಸುತ್ತದೆ. ಹೀಗಾಗಿ ನೃತ್ಯ ನಾಟಕಗಳ ಕಡೆಗೆ ಕಲಾವಿದರ ಗಮನ ಕಡಿಮೆಯಾಗುತ್ತಿದೆ ಎಂದರೂ ತಪ್ಪಿಲ್ಲ.

ಆದರೆ ಒಬ್ಬ ಕಲಾವಿದ ನೃತ್ಯ ನಾಟಕದ ನಿರ್ವಹಣೆಯಲ್ಲಿ ಯಶಸ್ವಿಯಾಗಬೇಕಾದರೆ ಹಲವು ಅಂಶಗಳನ್ನು ಗಮನಿಸಬೇಕಾಗುತ್ತದೆ. ಸಾಮಾನ್ಯವಾಗಿ ನೃತ್ಯ ನಾಟಕದಲ್ಲಿ ನೃತ್ಯ ರಚನೆಗೆ ಯಾವುದೇ ಭಾಗವನ್ನು ಆಯ್ದುಕೊಂಡಾಗ ಕಥಾವಸ್ತು ಅಥವಾ ಕಾವ್ಯದ ಸಾಹಿತ್ಯದ ಪ್ರತಿ ಪದಾರ್ಥಕ್ಕೆ ಮಾತ್ರ ಅಭಿನಯ ಹೆಣೆಯದೆ ಕವಿಯ ಕೃತಿಯ ಅಂತಃಸತ್ವವನ್ನು ಹೊರಹೊಮ್ಮಿಸಲು ಅದರೊಳಗೆ ಹೊಕ್ಕು ಪ್ರಯತ್ನಿಸಬೇಕು. ಸಾಮಾನ್ಯವಾಗಿ ನಾವು ಸಾಹಿತ್ಯದಲ್ಲಿ ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಯಾವುದಾದರೂ ಕಥೆ ಅಥವಾ ಕವನವನ್ನು ಅನುವಾದ ಮಾಡುವ ರೀತಿಯಲ್ಲೇ ನೃತ್ಯ ಕಲಾವಿದರೂ ತಾವು ಆಯ್ದುಕೊಂಡ ಕೃತಿಗೆ ನೃತ್ಯ ಸಂಯೋಜಿಸಬೇಕಾಗುತ್ತದೆ. ಅಂದರೆ ನೃತ್ಯವೇ ಒಂದು ಭಾಷೆ ಇದ್ದಂತೆ. ಒಂದು ಭಾಷೆಯ ಕೃತಿಯನ್ನು ನೃತ್ಯದ ಭಾಷೆಗೆ ಅನುವಾದ ಮಾಡುವಾಗ ನಾವು ನೃತ್ಯದ ಪರಿಭಾಷೆ, ವ್ಯಾಕರಣವನ್ನು ಸಮರ್ಪಕವಾಗಿ ರೂಡಿಸಿಕೊಳ್ಳಬೇಕಾಗುತ್ತದೆ. ಶಬ್ದಕ್ಕೆ ಶಬ್ದ ಇಡುವ ಕ್ರಿಯೆ ಹೇಗೆ ಅನುವಾದ ಎನಿಸಿಕೊಳ್ಳಲಾರದೋ ಹಾಗೆಯೇ ಆಯ್ದುಕೊಂಡ ಕಾವ್ಯ ಅಥವಾ ಹಾಡಿನ ಪ್ರತಿ ಪದದ ಅರ್ಥಕ್ಕೆತಕ್ಕಂತೆ ನೃತ್ಯದ ಸಂಕೇತಗಳನ್ನಷ್ಟೇ ಬಳಸಿ ನೃತ್ಯ ಸಂಯೋಜಿಸಿದರೆ ಕವಿಯ ಭಾವ ಪರಿಣಾಮಕಾರಿಯಾಗಿ ಪ್ರೇಕ್ಷಕರಿಗೆ ಸಂವಹನ ಆಗಲಾರದು.

ಒಬ್ಬ ಕೋರಿಯೋಗ್ರಾಪರ್ ಅಥವಾ ನೃತ್ಯ ಸಂಯೋಜಕ ಮೂಲ ಕೃತಿಯ ಆತ್ಮವನ್ನು ಹೊಕ್ಕು ಅದರಲ್ಲಿ ಅಡಕವಾಗಿರುವ ಸಾರ ಸರ್ವಸ್ವವನ್ನು ತನ್ನೊಳಗೆ ಆವಾಹಿಸಿಕೊಂಡು ಅದನ್ನು ತನ್ನ ನೃತ್ಯ ಮಾಧ್ಯಮಕ್ಕೆ ಅದರ ಲಕ್ಷಣ ಮತ್ತು ಸಂಪ್ರದಾಯಕ್ಕೆ ತಕ್ಕಂತೆ ಕೃತಿಯನ್ನು ಪುನರ್ ಸೃಷ್ಟಿಸುವ ಕಾರ್ಯವನ್ನು ಮಾಡಬೇಕಾಗುತ್ತದೆ. ಈ ಕ್ರಿಯೆ ಸಹಜವಾಗಬೇಕಾದರೆ ಒಂದು ರೀತಿಯಲ್ಲಿ ನೃತ್ಯ ನಿರ್ದೇಶಕ ಕೂಡಾ ಕೃತಿಯ ರಚನಾಕಾರನಷ್ಟೇ ಪ್ರತಿಭಾನ್ವಿತನಾಗಿರಬೇಕಾಗುತ್ತದೆ. ಈ ಕ್ರಿಯೆಯನ್ನೇ ನಾವು ಸೃಜನಶೀಲತೆ ಎನ್ನುವುದು. ಆದ್ದರಿಂದ ನೃತ್ಯ ನಾಟಕಗಳಲ್ಲಿ ನೃತ್ಯ ಸಂಯೋಜನೆ ಮಾಡುವವನಿಗೆ ಭಾಷೆ, ಸಾಹಿತ್ಯಗಳ ತೆಳುವಾದ ಪರಿಚಯವಲ್ಲ; ನಿಕಟವಾದ, ಗಾಢವಾದ ಪರಿಚಯ ಅತ್ಯಗತ್ಯ. ಸಾಹಿತ್ಯ ಹಾಗೂ ನರ್ತನ ಕಲೆ ಈ ಎರಡರಲ್ಲೂ ಆತನಿಗೆ ಪ್ರೌಢಿಮೆ ಇರಬೇಕಾದದ್ದು ಅತ್ಯಗತ್ಯವೆನಿಸುತ್ತದೆ. ಅಂತಹವರಿಂದ ನಿರ್ದೇಶಿಸಲ್ಪಟ್ಟ ನೃತ್ಯ ನಾಟಕಗಳು ಮಾತ್ರ ಜನಮನ ಸೆಳೆಯುತ್ತವೆ.

ಯಾವುದೇ ಒಂದು ನೃತ್ಯ ನಾಟಕವನ್ನು ಸಂಯೋಜಿಸುವ ಮುನ್ನ ನಾಟ್ಯ ಕಲಾವಿದ ತಾನು ಆಯ್ದುಕೊಂಡ ಕೃತಿಯ ಒಟ್ಟಾರೆ ಅಭಿಪ್ರಾಯವನ್ನು ಮೊಟ್ಟಮೊದಲಿಗೆ ಆಳವಾಗಿ ಅಭ್ಯಸಿಸಿ ಗ್ರಹಿಸಿಕೊಂಡು ನಂತರವೇ ಅದಕ್ಕೆ ನೃತ್ಯ ಮಾಧ್ಯಮದ ಮೂಲಕ ರೂಪಕೊಡಬೇಕಾಗುತ್ತದೆ. ಅದು ಬಿಟ್ಟು ಕೃತಿಯ ಒಂದೊಂದು ಭಾಗದ ಭಾವವನ್ನು ಮಾತ್ರ ಗ್ರಹಿಸುತ್ತಾ ಅದಕ್ಕೆ ನೃತ್ಯ ಸಂಯೋಜಿಸಿಕೊಂಡು ಹೋಗುವ ಪರಿಪಾಠ ಇಟ್ಟುಕೊಂಡರೆ ಪೂರ್ಣಕೃತಿಯ ಅಂತಃಸತ್ವವನ್ನು ಪರಿಣಾಮಕಾರಿಯಾಗಿ ಬಿಂಬಿಸಲು ಸಾಧ್ಯವಾಗದೇ ಹೋಗಬಹುದು. ಆದ್ದರಿಂದ ಕೃತಿಯ ಮುಖ್ಯವಸ್ತುವನ್ನು ಸ್ಥಾಯಿಯಾಗಿಟ್ಟುಕೊಂಡು ಮಿಕ್ಕ ಕಥಾ ಭಾಗಗಳನ್ನು ಸಂಚಾರಿ ಭಾವ ಭಾಗಗಳಾಗಿ ಅಭಿನಯಿಸುವಂತೆ ಮಾಡುವುದು ಸಮಂಜಸವಾಗಿ ಕಾಣುತ್ತದೆ.

ನೃತ್ಯ ಸಂಯೋಜನೆ, ವ್ಯಕ್ತಿಯ ಭಾವ ಕಲ್ಪನೆಗೆ ಸಂಬಂಧಿಸಿದ ವಿಚಾರ. ಇದು ಹೀಗೆಯೇ ಇರಬೇಕೆಂದು ಸೂತ್ರಿಕರೀಸುವುದು ಸರಿಯೆನಿಸಲಾರದು. ಒಂದು ಕವಿತೆಯನ್ನು ಓದಿದಾಗ ಕವಿಯ ಭಾವವನ್ನು ಅರ್ಥಮಾಡಿಕೊಳ್ಳುವ ರೀತಿ ಒಬ್ಬೊಬ್ಬರದ್ದೂ ಒಂದೊಂದು ತೆರನಾಗಿರಬಹುದು. ಆದರೆ ಅದರೆ ಸ್ಥಾಯೀ ಭಾವ ಅರ್ಥಮಾಡಿಕೊಂಡೇ ನೃತ್ಯ ಸಂಯೋಜಿಸಬೇಕಾಗುತ್ತದೆ. ನಾಟ್ಯ ಸಂಯೋಜಕನೂ ಒಂದು ರೀತಿಯಲ್ಲಿ ಇಲ್ಲಿ ಕವಿಯಂತೆ ಕಲ್ಪನೆಯನ್ನಿಟ್ಟು ಕೊಳ್ಳಬೇಕಾಗುತ್ತದೆ. ತನ್ನ ಭಾವತೀವ್ರತೆಗೆ ಆತ ಅಭಿವ್ಯಕ್ತಿ ಕೊಡುವಾಗ ಮೂರ್ತ ಪ್ರಪಂಚದಲ್ಲಿ ಕಾಣುವ ವಿಷಯಗಳನ್ನು ಆಶ್ರಯಿಸುತ್ತಾನೆ. ಅದು ಅವನ ಲೋಕಾನುಭವ ಸಂಗ್ರಹವಾಗಿ ಅವನ ಮನಸದ್ಸು ಅಸಂಖ್ಯಾತ ಸ್ಮೃತಿ ಚಿತ್ರಗಳ ಒಂದು ಮಹಾಕೋಶವಾಗಿರುತ್ತದೆ. ನೆನಪಿನ ಒಂದು ಕೋಶದಿಂದ ಆತ ತನ್ನ ಭಾವಕ್ಕೆ ನೃತ್ಯರೂಪದಲ್ಲಿ ಚಿತ್ರ ಬರೆಯುತ್ತಾನೆ. ಹೇಗೆ ಎಂದರೆ ಅಚು ಅವರವರ ಸಾಮರ್ಥ್ಯ, ಸತ್ವಕ್ಕೆ ಸಂಬಂಧಿಸಿದ್ದಾಗಿರುತ್ತದೆ. ಇದೇ ಸಂಯೋಜನಾಕಲೆ ಅಥವಾ ಕೋರಿಯೋಗ್ರಫಿ.

ಹೀಗೆ ನೃತ್ಯ ನಾಟಕಗಳನ್ನು ರಂಗದ ಮೇಲೆ ತರುವ ನಿರ್ದೇಶಕ ತನ್ನ ನೃತ್ಯಕಲಾ ಚತುರತೆಯ ಜತೆಗೆ ಕಾವ್ಯದ ಆಯ್ಕೆಯ ಕಡೆಗೂ ತನ್ನ ಬುದ್ಧಿಶಕ್ತಿ ಕೌಶಲ್ಯವನ್ನು ಉಪಯೋಗಿಸಬೇಕಾಗುತ್ತದೆ. ಕನ್ನಡ ಸಾಹಿತ್ಯದ ಕವಿಪರಂಪರೆಯಲ್ಲಿ ಅಂದಿನ ಪಂಪನಿಂದ ಕುವೆಂಪು ಅವರ ವರೆಗೆ ಹಲವಾರು ಉತ್ತಮವಾದ ನೃತ್ಯ ನಾಟಕ ರಚನೆಗೆ ಹೊಂದುವ ಸ್ವಾರಸ್ಯಕರ ಪ್ರಸಂಗಗಳಿಗೆ ಕೊರತೆ ಏನಿಲ್ಲ. ಪಂಪನ ಆದಿಪುರಾಣದಲ್ಲಿನ “ಭರತ- ಬಾಹುಬಲಿ”, ನೀಲಾಂಜನೆಯ ನೃತ್ಯ, ಜನ್ನನ ಯಶೋಧರ ಚರಿತ್ರೆಯ ಅಮೃತಮತಿಯ ಪ್ರಸಂಗ, ನಾಗಚಂದ್ರನ ರಾಮಚರಿತ ಪುರಾಣದ ಭಾಗಗಳು, ಚಾಮರಸನ ಪ್ರಭುಲಿಂಗಲೀಲೆ, ರತ್ನಾಕರವರ್ಣಿಯ ಭರತೇಶ ವೈಭವದ ನೃತ್ಯ ಪ್ರಸಂಗಗಳು ಕುಮಾರವಾಸ್ಯನ ಭಾರತದ ಊರ್ವಸಿ ಪ್ರಸಂಗ ಹೀಗೆ ನಮ್ಮ ಕಾವ್ಯವನ್ನು ಗಂಭೀರವಾಗಿ ಅಧ್ಯಯನ ಮಾಡಿದಲ್ಲಿ ಅಂತಹ ಹಲವಾರು ಉತ್ತಮ ವಸ್ತುಗಳು ವಿಫುಲವಾಗಿ ದೊರೆಯುತ್ತವೆ. ಆದರೆ ಅವುಗಳನ್ನು ನೃತ್ಯ ಮಾಧ್ಯಮಕ್ಕೆ ಒಪ್ಪುವಂತೆ ರೂಪಾಂತರಗೊಳಿಸುವ ಕಲೆ ಕರಗತವಾಗಿರಬೇಕು ಅಷ್ಟೇ. ಒಂದು ಕಾದಂಬರಿಯನ್ನು ನಾಟಕವಾಗಿ ರೂಪಾಂತರಿಸುವಷ್ಟೇ ಶ್ರಮ, ಕಾವ್ಯವನ್ನು ನೃತ್ಯಕ್ಕೆ ಅಳವಡಿಸುವಲ್ಲೂ ಇದೆ. ಏಕೆಂದರೆ ಕೆಲವೊಮ್ಮೆ ಕವಿಯು ಬರೆದಿರುವ ಪದ್ಯಗಳಲ್ಲಿ ಸೂಕ್ಷ್ಮ ಮಾರ್ಪಾಡುಗಳನ್ನು ಸಮಯೋಚಿತವಾಗಿ ಮಾಡಿಕೊಳ್ಳಬೇಕಾಗಬಹುದು. ಶ್ರವ್ಯ ಕಾವ್ಯವು ನೃತ್ಯ ನಾಟಕಗಳಲ್ಲಿ ದೃಶ್ಯಕಾವ್ಯವಾಗಿ ಮಾರ್ಪಾಡಾಗಬೇಕಾಗಿರುವುದರಿಂದ ನೇತ್ರಾಕರ್ಷಕವಾದ ವೇಷಭೂಷಣ ಸಮರ್ಥ ನಟನಟಿಯರ ಆಯ್ಕೆ ಪ್ರಭಾವಶಾಲೀ ನರ್ತನ ಎಲ್ಲವೂ ಮುಖ್ಯವಾಗುತ್ತದೆ.

ಕವಿಯ ಭಾವ, ಕಥೆಯ ಹಂದರವನ್ನು ನೋಡಿಕೊಂಡು ಅದರ ಓಟವನ್ನು ನಿರ್ಧರಿಸಿ ಆಕರ್ಷಣೆಗೆ ಬೇಕಾದ ರಂಗತಂತ್ರಗಳನ್ನು ನೃತ್ಯ ತಂತ್ರಗಳನ್ನು ಹದವಾಗಿ ಬೆರೆಸಿ ಉತ್ತಮ ಹಿನ್ನೆಲೆ ಗಾಯನ ವಾದ್ಯ ಸಂಗೀತದ ಪೋಷಣೆಯೊಂದಿಗೆ ಜಾಣ್ಮೆಯಿಂದ ನೃತ್ಯ ನಾಟಕಗಳನ್ನು ಹೆಣೆದು ಪ್ರದರ್ಶಿಸಿದಾಗ ಅವು ಜನಮನ ತಲುಪುವುದರಲ್ಲಿ ಸಂದೇಹವೇನಿಲ್ಲ.