ಕಲೆ, ಕಲಾವಿದ, ವಿಮರ್ಶೆ, ಪ್ರಚಾರ, ಮಾಧ್ಯಮ ಹೀಗೆ ಒಂದಕ್ಕೊಂದು ಬೆಸೆದುಕೊಂಡಿರುವ ಅಂಶಗಳು. ೧೨ನೇ ಶತಮಾನದಲ್ಲಿರುವ ನಾವು ಅಂಗೈಯಲ್ಲಿ ವಿಶ್ವವನ್ನು ನೋಡಲು ಹೊರಟ ಐಟಿ, ಬಿಟಿ ಯುಗದ ನಾಗರಿಕರು. ಎಲೆಕ್ಟ್ರಾನಿಕ್ಸ್‌, ಕಂಪ್ಯೂಟರ್, ಜೆಟ್‌, ಮೊಬೈಲ್ ಯುಗದಲ್ಲಿ ಪ್ರಪಂಚವನ್ನು ಒಂದು ಹಳ್ಳಿ ಗ್ಲೋಬಲ್‌ವಿಲೇಜ್‌ಎಂದು ಭಾವಿಸಿದ್ದೇವೆ. ಇಂತಹ ಸಂದರ್ಭದಲ್ಲಿ ನೃತ್ಯಕಲೆ ಮತ್ತು ಪ್ರಚಾರ ಮಾಧ್ಯಮ ಎಂಬ ವಿಚಾರವನ್ನು ಆಲೋಕಿಸಿ ಪರಾಮರ್ಶಿಸುವ ಪ್ರಯತ್ನವೇ ಈ ಲೇಖನ.

ಸಮಾಜ ಮತ್ತು ಕಲೆ ಒಂದೇ ನಾಣ್ಯದ ಎರಡು ಮುಖಗಳು. ಅದೇ ರೀತಿ ಕಲೆ ಮತ್ತು ಮಾಧ್ಯಮ ಕೂಡ. ಈ ದಿಶೆಯಲ್ಲಿ ನೃತ್ಯಕಲಾವಿದೆಯಾಗಿ, ವಿದ್ಯಾರ್ಥಿನಿಯಾಗಿ, ಗುರುವಾಗಿ, ಸಂಘಟಕಿಯಾಗಿ ಕಳೆದ ಸುಮಾರು ೨೫ ವರ್ಷಗಳ ಸ್ವಂತ ಅನುಭವವನ್ನು, ಅಭಿಪ್ರಾಯವನ್ನು ಎಲ್ಲಾ ಕಲಾವಿದರು ಸಾಮಾನ್ಯವಾಗಿ ಎದುರಿಸುವ ವಿಚಾರಗಳನ್ನು ವ್ಯಕ್ತಪಡಿಸುವ ವಿಚಾರವೇ ಈ ಲೇಖನದ ಹೂರಣ.

ಐದನೆಯ ವೇದವೆಂದು ಪುರಸ್ಕೃತಗೊಂಡ ನಾಟ್ಯವೇದ ಅಥವಾ ನತ್ಯಕಲೆಯು ರಾಜಮಹಾರಾಜರಿಂದ ಪೋಷಿಸಲ್ಪಟ್ಟಿತು. ಆದರೆ ಇತ್ತೀಚಿನ ದಿನಗಳಲ್ಲಿ ಪಾರಂಪರಿಕ ನಗರ ಅಥವಾ ಹೆರಿಟೇಜ್‌ಸಿಟಿ ಎಂದು ಕರೆಸಿಕೊಳ್ಳುವ ಕಲೆಗಳ ತವರೂರಾದ ನಮ್ಮ ನಾಡಿನಲ್ಲಿಯೇ ಬೇರೆ ನಗರಗಳಂತೆ ಶಾಸ್ತ್ರೀಯ ಕಲೆಗೆ ಪ್ರೋತ್ಸಾಹ ತಗ್ಗಿದೆ. ಕಲಾರಂಗ ಕೂಡ ವಾಣಿಜ್ಯ ರೂಪ ತಾಳಿದೆ ಎಂಬುದು ನಿಸ್ಸಂದೇಹ, ಶೋಚನೀಯ. ಶಾಸ್ತ್ರೀಯ ನೃತ್ಯಕ್ಕೆ ಇತ್ತೀಚಿನ ನೃತ್ಯ ಗುರುಗಳು ಹೊಸ ಹೊಸ ಆಯಾಮಗಳನ್ನು ನೀಡುವ ಪ್ರಯತ್ನದಲ್ಲಿದ್ದಾರೆ. ಅಂತಹ ವಿಶೇಷ ವ್ಯಕ್ತಿಗಳಿಗೆ ಮಾಧ್ಯಮದ ಸಹಕಾರ ಅತ್ಯಗತ್ಯ. ಈ ಅಪಾರ ಜನಸಂಖ್ಯೆಯ ನಡುವೆ ಪ್ರಚಾರ ಇಲ್ಲದೇ ಹೋದರೆ ಕಲೆ, ಕಲಾವಿದ ನಲುಗಿ, ಸೊರಗಿ ನಿರ್ನಾಮವೇ ಆಗುವುದ ಸಹಜ. ಎಷ್ಟೋ ಕಲಾವಿದರು ಸ್ವಪ್ರತಿಷ್ಠೆಯಿಂದ ಮಾಧ್ಯಮದ ಸಂಪರ್ಕವನ್ನೇ ಇಟ್ಟುಕೊಳ್ಳುವುದಿಲ್ಲ. ಅವರು ಎಷ್ಟೇ ಬುದ್ಧಿವಂತ, ಪ್ರಮಾಣಿಕ ಕಲಾವಿದರಿರಬಹುದು. ಆದರೆ ಈ ಸ್ಪರ್ಧಾತ್ಮಕ ಯುಗದಲ್ಲಿ ಎಂಬಂತೆ ಮಾಧ್ಯಮದವರಿಗೆ ಇಂಟರನೆಟ್‌ಮೂಲಕ ವೆಬ್‌ಸೈಟ್ ಮೂಲಕ ಅಥವಾ ಪ್ರದರ್ಶನ ನೀಡಲು ಅವಕಾಶ ಸಿಕ್ಕಿದಾಗ ನಮ್ಮ ತುತ್ತೂರಿಯನ್ನು ನಾವೇ ಊದಿಕೊಳ್ಳಬೇಕಾಗುತ್ತದೆ. ನೃತ್ಯಕಲೆ ಮಾಧ್ಯಮದವರ ಜೊತೆ ಹೊಂದಿಕೊಂಡು ಹೋಗಲೇಬೇಕಾಗುತ್ತದೆ. ಶಾಸ್ತ್ರೀಯ ಆರ್ಷೇಯ ಕಲೆಯಾದ ನೃತ್ಯಕಲೆ ಪ್ರಚಾರವಿಲ್ಲದಿದ್ದರೆ ಸೊರಗುವುದು ನಿಶ್ಚಯ. ಮಾಧ್ಯಮಗಳೆಂದರೆ ಹೆಚ್ಚು ಜನರಿಗೆ ತಲುಪುವಂತಹದು. ದೂರದರ್ಶನದ ಚಾನಲ್‌ಗಳು, ವೃತ್ತಪತ್ರಿಕೆಗಳು, ನಿಯತಕಾಲಿಕೆಗಳು, ಆಕಾಶವಾಣಿ, ಕೇಬಲ್ ನೆಟವರ್ಕ್‌‌ಗಳು, ವೀಡಿಯೋ, ಕ್ಯಾಸೆಟ್‌ಗಳು, ವೆಬ್‌ಸೈಟ್‌, ಕಂಪ್ಯೂಟರ್ ಮತ್ತು  ಮೊಬೈಲ್‌ಗಳು, ಇದ್ದಲದೆ ಕೆಲವು ಸಂಘ ಸಂಸ್ಥೆಗಳು, ಕೇಂದ್ರ ಮತ್ತು ರಾಜ್ಯದ ಸಂಸ್ಕೃತಿ ಇಲಾಖೆಗಳು, ಅಕಾಡೆಮಿಗಳು, ಕಾರ್ಯಕ್ರಮ ಸಂಯೋಜನಕರು ಮತ್ತು ಮಧ್ಯವರ್ತಿಗಳೂ ಕೂಡ ಮಾಧ್ಯಮಗಳಾಗಿ ಕಲಾವಿದರನ್ನು ಪೋಷಿಸಲು ಸಾಧ್ಯ.

ಕಲೆಯೊಂದಿಗೆ ಮಾಧ್ಯಮದ ಪಾತ್ರ ಏನೆಂದು ಹುಡುಕ ಹೊರಟರೆ ಆಗಾಧವಾದ, ವಿಸ್ತಾರವಾದ ಅಧ್ಯಯನವನ್ನು ಮಾಡಬೇಕಾಗುತ್ತದೆ. ಇಲ್ಲಿ ಕಲೆ, ಕಲಾವಿದ, ಮಾಧ್ಯಮ ಎಂಬ ವಿಭಾಗಳಲ್ಲೂ ಸೂಕ್ಷ್ಮವಾಗಿ ಗಮನಿಸುತ್ತಾ ಹೋಗುವಾಗ ಮಾಧ್ಯಮ ಮತ್ತು ಕಲೆಯ ನಂಟು ಅಷ್ಟು ಆಳವಾಗಿದೆ ಎಂದು ತಿಳಿಯುತ್ತದೆ. ಮೊದಲಿಗೆ ಕಲೆಯ ಬಗ್ಗೆ ನಮ್ಮ ನಮ್ಮಲ್ಲೇ ವಿಮರ್ಶಿಸುತ್ತಾ ಹೋದರೆ ಕಲೆ ಎಂಬುದು ಒಂದು ಬಿಂದು. ಈ ಒಂದು ಬಿಂದು ಮುಂದೆ ವಿಶಾಲವಾಗಿ ಕುಶಲಕಲೆ, ಲಲಿತಕಲೆ ಮತ್ತು ಪ್ರದರ್ಶನ ಕಲೆ ಎಂಬ ಅಗಾಧ ರೂಪವನ್ನು ತಾಳುತ್ತದೆ. ನೃತ್ಯಕಲೆಯು ಪ್ರದರ್ಶನ ಕಲೆಗೆ ಸೇರುತ್ತದೆ. ಭಿನ್ನರುಚಿಯ ಜನರೆಲ್ಲರಿಗೂ ( ನಾಟಕ, ಸಂಗೀತ, ನೃತ್ಯ, ವಾದನ ….) ಏಕಕಾಲದಲ್ಲಿ ಸಂತೋಷವನ್ನು ನೀಡುವಂತಹ ಕಲೆ. ಭಾರತೀಯ ನೃತ್ಯ ಸಂಗೀತಕ್ಕೆ ಆಧ್ಯಾತ್ಮಿಕ ಮೌಲ್ಯದ ಮತ್ತು ಅಲೌಕಿಕವಾದ ಆಯಾಮವೊಂದಿದೆ. ಇದು ಕಲಾವಿದನಿಗೆ ಕಲೋಪಾಸನೆಯಿಂದ ಮೋಕ್ಷ ಪ್ರಾಪ್ತಿ ಎಂದು ತಿಳಿಸುತ್ತದೆ. ಮೋಕ್ಷ ಎಂದರೆ ಬಿಡುಗಡೆ ಎಂದಲ್ಲ, ಕಲಾವಿದನ ಕಲೋಪಾಸನೆಯಿಂದ ಕಲಾವಿದ ಮತ್ತು ಪ್ರೇಕ್ಷಕರಿಗೆ ದಿನಿನಿತ್ಯದ ಜಂಜಾಟದಿಂದ ಸ್ವಲ್ಪ ಸಮಯ ಬಿಡುಗಡೆ ಎಂದು. ಇದಕ್ಕೆ ಕಲಾವಿದನಿಗೆ ಸಂಸ್ಕಾರ ಅತ್ಯಗತ್ಯ. ಇದಕ್ಕಾಗಿ ಕಲಾವಿದನಿಗೆ ಬೇಕಾಗುವುದು ಸೂಕ್ಷ್ಮಗ್ರಹಣ, ಶ್ರದ್ಧೆ ಮತ್ತು ಪರಿಶ್ರಮ. ಇಂತಹ ಕಲಾವಿದ ಆ ದೇಶದ ಸ್ವತ್ತಾಗುತ್ತಾನೆ, ಸಾವಿರಾರು ಜನರಲ್ಲಿ ಒಬ್ಬ ಕಲಾವಿದನಾಗುತ್ತಾನೆ, ಅವರಲ್ಲೊಬ್ಬ ಮೌಲ್ಯಪೂರ್ಣ ಕಲೆಗಾರರಲ್ಲಿ ಪ್ರಭಾವಶಾಲಿ ಕಲೆಗಾರ ಎನಿಸಿಕೊಳ್ಳುತ್ತಾನೆ. ಅವರಲ್ಲಿ ಒಬ್ಬ ಪೂಜ್ಯತೆಯನ್ನು ಪಡೆಯುತ್ತಾನೆ. ಇಂತಹ ಕಲಾವಿದನಿಗೆ ಅನೇಕ ಜವಾಬ್ದಾರಿಗಳು ಇರುತ್ತವೆ. ಮುಖ್ಯವಾಗಿ ಸಮಾಜದಲ್ಲಿ ಉನ್ನತ ಮೌಲ್ಯಗಳನ್ನು ತನ್ನ ಕಲೆಯ ಮೂಲಕ ಭದ್ರವಾಗಿ ಉಳಿಯುವುದಕ್ಕೆಶ್ರಮಿಸುವುದು. ನಿತ್ಯ ಜೀವನದಲ್ಲಿ ವೈಯಕ್ತಿಕವಾಗಿ ನೈತಿಕ, ಸಾಮಾಜಿಕ, ಆಧ್ಯಾತ್ಮಿಕ ಮೌಲ್ಯಗಳನ್ನು ಅನುಷ್ಠಾನದಲ್ಲಿಟ್ಟುಕೊಂಡು ಇತರರಿಗೆ  ಮಾದರಿಯಾಗಬೇಕಾಗಿದೆ. ಈ ನಿಟ್ಟಿನಲ್ಲಿ ಕಲಾವಿದನಿಗೆ ಮಾಧ್ಯಮಗಳ ಅವಶ್ಯಕತೆ ಅನಿವಾರ್ಯ.

ನೃತ್ಯಕಲೆಯ ಪ್ರಚಾರಕ್ಕೆ, ಜನರನ್ನು ಸಂಪರ್ಕಿಸುವುದಕ್ಕೆ ಮಾಧ್ಯಮಗಳು ಈ ರೀತಿ ಸಹಾಯ ಮಾಡಬಹುದಾಗಿದೆ.

 • ನೃತ್ಯಕಲೆಯಲ್ಲಿ ಪರಿಣಿತಿ ಇರುವ ಕಲಾವಿದರ ಹೆಸರನ್ನು ಪಟ್ಟಿ ಮಾಡುವುದು ಮತ್ತು ಪರಿಚಯ ಲೇಖನ ಸಂದರ್ಶನಗಳನ್ನು ತಮ್ಮ ಮಾಧ್ಯಮದಲ್ಲಿ ನಡೆಸುವುದು.
 • ಕಾರ್ಯಕ್ರಮಗಳನ್ನು ಆಯೋಜಿಸುವ ಸಂಘ ಸಂಸ್ಥೆಗಳ ಹೆಸರು ಮತ್ತು ಸಂದರ್ಭಗಳನ್ನು ತಮ್ಮ ಮಾಧ್ಯಮಗಳಲ್ಲಿ ತಿಳಿಸುವುದು.
 • ಆಯಾ ಊರುಗಳಲ್ಲಿನ ವಿಶಿಷ್ಟವಾದ ಕಲಾ ಪ್ರಕಾರಗಳನ್ನು ತಿಳಿಯಪಡಿಸುವುದು, ಅಂತಹ ಕಲಾತಂಡಗಳ ವಿವರ ನೀಡುವುದು.
 • ಕಲಾವಿದರಿಗೆ, ತಂಡಗಳಿಗೆ, ಸಂಘ ಸಂಸ್ಥೆಗಳಿಗೆ ಸರ್ಕಾರ, ಅಕಾಡೆಮಿಗಳಿಂದ ದೊರಕುವ ಸೌಲಭ್ಯಗಳ ಬಗ್ಗೆ ವಿವರಣೆಯನ್ನು ತಿಳಿಸುವುದು.
 • ಸರ್ಕಾರದ ಸೌಲಭ್ಯಗಳನ್ನು ಮಧ್ಯವರ್ತಿಗಳಿಲ್ಲದೆ ಕಲಾವಿದರೇ ನೇರವಾಗಿ ಪಡೆಯುವ ಬಗ್ಗೆ ಮಾಹಿತಿಯನ್ನು ತಿಳಿಸುವುದು.
 • ಸೌಲಭ್ಯಗಳು ದುರುಪಯೋಗವಾದಾಗ ಪೂರ್ವಾಗ್ರಹಗಳಿಲ್ಲದೆ  ಖಂಡಿಸಿ ಪ್ರಚಾರ ಮಾಧ್ಯಮಗಳಲ್ಲಿ ಸೂಕ್ತ ಸಲಹೆಗಳಿಂದ ಲೇಖನ ಬರೆಯುವುದು.
 • ಅರ್ಹತೆಯುಳ್ಳವರಿಗೆ ಮಾತ್ರ ಸೌಲಭ್ಯಗಳು ದೊರೆಕುವಂತೆ ಮಾಡುವ ಸಾಮರ್ಥ್ಯ ಮಾಧ್ಯಮಗಳಿಗಿದೆ.
 • ನೃತ್ಯಕಲೆಯನ್ನು ಬೆಳೆಗಿಸಿ ಪೋಷಿಸುತ್ತಿರುವ ಸಂಘ ಸಂಸ್ಥೆಗಳು ಮತ್ತು ಚುಕ್ಕಾಣಿ ಹಿಡಿದಿರುವ ವ್ಯಕ್ತಿಗಳ ಪರಿಚಯ ಲೇಖನವನ್ನು ಬರೆಯುವುದು.
 • ಅಂತಹ ಸಂಸ್ಥೆಗಳನ್ನು ಆಸಕ್ತರು ಹೇಗೆ ಸಂಪರ್ಕಿಸಬೇಕು ? ಸೌಲಭ್ಯಗಳೇನು? ಎಂಬುವುದರ ವಿವರ ನೀಡಬೇಕು.
 • ಸರ್ಕಾರ ಸಂಘ ಸಂಸ್ಥೆಗಳ ಸಹಾಯವನ್ನು ಪ್ರಭಾವಿ ವ್ಯಕ್ತಿಗಳು ಪಡೆದಾಗ ಎಲೆಮರೆ ಕಾಯಿಗಳಂತೆ ಇರುವ ನಿಜವಾದ ಯೋಗ್ಯ ಕಲಾವಿದರನ್ನು ಹುಡುಕಿ ಪ್ರಚಾರ ಮಾಡಬೇಕು.
 • ದೂರದರ್ಶನದಲ್ಲಿ ನಿಗದಿತ ಸಮಯದಲ್ಲಿ ನೃತ್ಯ ಕಾರ್ಯಕ್ರಮ ಸ್ಪರ್ಧೆ, ಉಪನ್ಯಾಸಗಳನ್ನು ಏರ್ಪಡಿಸಬೇಕು.
 • ಪ್ರತಿವಾರ ವೃತ್ತ ಪತ್ರಿಕೆಗಳಲ್ಲಿ ಕಲಾವಿದರ ವಿಶೇಷ ಅಂಕಣವನ್ನು ಪ್ರಾರಂಭಿಸುವುದು.
 • ರಾಷ್ಟ್ರೀಯ ಉತ್ಸವಗಳಲ್ಲಿ ಕಲಾವಿದರ ಪಟ್ಟಿಯನ್ನು ಯೋಗ್ಯ ರೀತಿಯಲ್ಲಿ ( ಪ್ರಭಾವಗಳಿಲ್ಲದೆ) ತಯಾರಿಸುವುದು.
 • ನೃತ್ಯ ಕಲಾವಿದರಿಗೆ ಸರ್ಕಾರ ಅಥವಾ ಅರೆ ಸರ್ಕಾರದಿಂದ ಯೋಗ್ಯ ಅವಕಾಶ ಇದ್ದಾಗ ವರದಿ ಮಾಡುವುದು.
 • ನೃತ್ಯ ಕಲೆಯು ಮಾನಸಿಕ, ಶಾರೀರಿಕ ರೋಗಗಳನ್ನು ಶಮನ ಮಾಡಲು ಎಷ್ಟು ಉಪಯುಕ್ತ ಎನ್ನುವುದರ ಬಗ್ಗೆ ತಿಳುವಳಿಕೆ ಮೂಡಿಸುವ ಲೇಖನಗಳನ್ನು ಬರೆಯುವುದು.

ಮೇಲಿನ ಅಷ್ಟು ವಿಷಯಗಳನ್ನು ಕಲಾವಿದರು ಬಯಸುವಾಗ ಸ್ವತಃ ಕಲಾವಿದರಿಗೆ ಕೆಲವು ಜವಾಬ್ದಾರಿಗಳು ಇರುತ್ತವೆ. ನಮ್ಮ ಯುವಜನತೆ ಪಾಶ್ಚಮಾತ್ಯ, ಸಾಂಸ್ಕೃತಿಯತ್ತ ಒಲಿಯುತ್ತಿರುವ ಈ ದಿನಗಳಲ್ಲಿ ನೃತ್ಯಕಲೆಯಿಂದ ಯುವಜನರನ್ನು ಸ್ವಲ್ಪಮಟ್ಟಿಗೆ ತಡೆಹಿಡಿಯಲು ಸಾಧ್ಯ. ಅಂದರೆ ಕಲೆಯಲ್ಲಿ ಇಂದಿಗೂ ಗುರುಶಿಷ್ಯ ಸಂಬಂಧವು ಉಳಿದುಕೊಂಡಿದೆ. ಅದರಲ್ಲಿಯೂ ನೃತ್ಯ ಕಲೆಯಲ್ಲಿ ಗುರುಗಳ ಸಹಾಯ (ನಟುವಾಂಗದಲ್ಲಿ ಮುಖ್ಯವಾಗಿ) ಅತ್ಯಗತ್ಯ. ಆ ಸ್ಥಾನವನ್ನು ತುಂಬಿದರೂ ಅದು ಶೋಭಿಸುವುದು ಗುರುಗಳು ಇದ್ದಾಗ ಮಾತ್ರ. ಇಂತಹ ಸಮಯದಲ್ಲಿ ಸರಿಯಾಗಿ ಪಕ್ವವಾಗದೇ ಇರುವ ಯುವ ಕಲಾವಿದರನ್ನು ಅವರಸವಾಗಿ ತಯಾರು ಮಾಡಿ ಪ್ರಭಾವಿಗಳಿಂದ ಹೆಚ್ಚಿನ ಮಾಧ್ಯಮದ ಪ್ರಚಾರವನ್ನು ಕೊಟ್ಟರೆ ಯುವಜನತೆ ಆಳವಾದ ಅಧ್ಯಯನ ನಡೆಸದೆ ಕೇವಲ ಪ್ರಚಾರದಿಂದಲೇ ಮೆರೆಯುವ ಅಪಾಯವಿದೆ. ಆದ್ದರಿಂದ ಗುರುಗಳಿಗೆ ಮಾಧ್ಯಮದ ಹುಚ್ಚು ಹಿಡಿಯಬಾರದು. ಕೇವಲ ಟಿವಿ ಚಾನಲ್‌ಗಳಿಗಾಗಿ ಮಕ್ಕಳನ್ನು ತಯಾರು ಮಾಡಬಾರದು.

ಬಾಲಿವುಡ್‌ ಡ್ಯಾನ್ಸ್‌ಹೆಚ್ಚುತ್ತಿರುವ ಈ ಕಾಲದಲ್ಲಿ ತಮ್ಮ ಮಕ್ಕಳಿಗೆ ಶಾಸ್ತ್ರೀಯ ಕಲೆಯ ರುಚಿಯನ್ನು ಕೊಡಬೇಕಾಗಿರುವುದು ಪೋಷಕರ ಕರ್ತವ್ಯ. ನೃತ್ಯ ಕಲೆಯನ್ನು ನಂಬಿದರೆ ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿ ಎಂಬುವುದು ಬಹಳ ಹಿಂದಿನ ನಂಬಿಕೆ. ಆದರೆ ಕಾಲ ಹಿಂದಿನಂತಿಲ್ಲ. ಪರಿಶ್ರಮ ಪ್ರತಿಭೆ ಇದ್ದ ಕಲಾವಿದ ಯೋಗ್ಯರೀತಿಯಲ್ಲಿ ಬಾಳಲು ಸಾಧ್ಯ. ಮತ್ತೊಂದು ವಿಪರ್ಯಾಸ ಎಂದರೆ ಎಷ್ಟೋ ಸಂಘ ಸಂಸ್ಥೆಗಳು ಕಲಾವಿದರಿಂದಲೇ ಹಣ ಪಡೆದು ವೇದಿಕೆ ನೀಡುವಂತಹ ಸಂದರ್ಭಗಳು ಕೇಳಿಬಂದಿವೆ. ಇವುಗಳಿಗೆ ಕಡಿವಾಣ ಹಾಕಲು ಕಲಾವಿದರುಗಳಿಂದ ಮಾಧ್ಯಮದ ಮಿತ್ರರು ಹೇಗೋ ವಿಚಾರ ಸಂಗ್ರಹಿಸಿ ಪ್ರಚಾರ ನೀಡಿ ಆ ಪರಿಸ್ಥಿತಿಗೆ ಕಡಿವಾಣ ಹಾಕಬಹುದು. ನೃತ್ಯ ಮಾಧ್ಯಮದಲ್ಲಿ ಇಂದು ಕಲೆ, ವಿಕ್ಷಕ ಮತ್ತು ವಿಮರ್ಶಕ ಯಾರು ಪರಿಶುದ್ಧರಲ್ಲ. ಇವರನ್ನೆಲ್ಲಾ ಮಾರುಕಟ್ಟೆಯ ಶಕ್ತಿ ನಿಯಂತ್ರಿಸುತ್ತದೆ ಎಂಬ ಒಂದು ಕೂಗು ಕೆಲವರ ಅಭಿಪ್ರಾಯವಾಗಿದೆ. ನೃತ್ಯ ಕಲೆ ಇದಕ್ಕೆ ಹೊರತಾಗಿಲ್ಲ. ನಗರಗಳಲ್ಲಿ ಯುವ ಕಲಾವಿದರಲ್ಲಿ ಸ್ಪರ್ಧೆ ಹೆಚ್ಚಿರುವುದರಿಂದ  ಪ್ರಮೋಟರ‍್ಸ  ಈವೆಂಟ್‌ಮ್ಯಾನೇಜರ‍್ಸ್‌ ಸಾರ್ವಜನಿಕ ಸಂಪರ್ಕ ಅಧಿಕಾರಿಗಳನ್ನು ಮೊರೆಹೋಗಬೇಕಾಗಿದೆ. ಇಂತಹ ಘಟನೆಗಳನ್ನು ಮಾಧ್ಯಮದ ಗಮನಕ್ಕೆ ಕಲಾವಿದರು ನೀಡಿದಾಗ ಅವುಗಳಲ್ಲಿ ವ್ಯವಸ್ಥಿತವಾಗಿರುವುದನ್ನು ಶ್ಲಾಘಿಸಿ ಅಕ್ರಮವಾದುದನ್ನು ಬಯಲು ಮಾಡಬಹುದು.

ಜಾಗತೀಕರಣ ನೃತ್ಯ ಮಾಧ್ಯಮದ ಮೇಲೆ ಮಹತ್ತರ ಪರಿಣಾಮ ಬೀರಿ ಅನುಕೂಲ, ಪ್ರತಿಕೂಲವೂ ಆಗಿದೆ. ನೃತ್ಯ ಸಂಗೀತವನ್ನು ಸಭೆಗಳಿಗೆ ಹೋಗಿ ನೋಡಿ ಕೇಳುವುದಕ್ಕಿಂತ ಪತ್ರಿಕಾ ವರದಿ ಮತ್ತು ದೂರದರ್ಶನ ಮಾಧ್ಯಮದಲ್ಲಿ ವೀಕ್ಷಿಸುವರು ಲಕ್ಷಾಂತರ ಜನ. ಆದ್ದರಿಂದ ಆ ವರದಿ ಹಾಗೂ ಚಿತ್ರ ನೋಡುವವರಿಗೆ ಒಳ್ಳೆಯ ಸಂಸ್ಕೃತಿ, ಸಂದೇಶ ನೀಡುವಂತಿರಬೇಕು.

ಇತ್ತೀಚಿನ ಕೆಲ ದಿನಗಳಲ್ಲಿ ದಿನಪತ್ರಿಕೆಯವರು ನೃತ್ಯ ಸಂಗೀತಕ್ಕೆ ಮುಖ್ಯ ಅಂಕಣಗಳನ್ನು ಪ್ರಾರಂಭಿಸಿದ್ದಾರೆ. ಇದು ನಿಜಕ್ಕೂ ಕಲಾವಿದರ ಪಾಲಿಗೆ ಸಂತೋಷವನ್ನು ಉಂಟು ಮಾಡಿದೆ. ಆದರೆ ಇದು ಪ್ರಭಾವಿಗಳಿಗೆ ಮಾತ್ರ ಮೀಸಲಾಗಬಾರದು. ಮತ್ತು ನಿಜವಾಗಿಯೂ ಸತ್ವಯುತವಾದ ಕಾರ್ಯಕ್ರಮಗಳ ಫೋಟೊ ಮತ್ತು ವಿವರಗಳನ್ನು ಒಳಗೊಂಡಿರಬೇಕು. ಇಲ್ಲಿ ಒಂದು ಮುಖ್ಯವಾದ ವಿಷಯವಿದೆ. ಅದೇನೆಂದರೆ, ಪತ್ರಿಕೆ ಪ್ರಾದೇಶಿಕವಾಗಿ ಬರುತ್ತಿರುವುದು ಕಲಾವಿದನ ವಿಮರ್ಶೆ ಲೇಖನಗಳು ಬಂದಾಗ ಪ್ರಾದೇಶಿಕತೆಗಿಂತೆ ಹೆಚ್ಚು ಊರು, ಜನರನ್ನು ತಲುಪಿ ಪ್ರಸಿದ್ಧಿಯಾಗುವುದು ಮುಖ್ಯವಲ್ಲವೇ ?. ಕಲೆ, ದೇಶ, ಭಾಷೆ, ಗಡಿಯನ್ನು ಮೀರಿದ್ದಲ್ಲವೇ? ಕಲೆಯ ವಿಷಯದಲ್ಲಿ ದಿನಪತ್ರಿಕೆಗಳು ಲೋಕಲ್‌ಎಡಿಶನ್‌, ಆಗಿ ಹೊರಬರುತ್ತಿರುವುದು ಒಂದು ರೀತಿಯಲ್ಲಿ ಕಲಾವಿದನಿಗೆ ನಷ್ಟವೇ ಆಗುತ್ತದೆ. ಮೈಸೂರಿನ ಕಲಾವಿದ ಮೈಸೂರಿನಲ್ಲಿಯೇ ಪ್ರಚಾರ ಪಡೆಯುತ್ತಾನೆ. ಪಕ್ಕದ ಮಂಡ್ಯ, ಚಾಮರಾಜನಗರ, ಮಡಿಕೇರಿಗೂ ಪರಿಚಯವಾಗುವುದಿಲ್ಲ. ಆದ್ದರಿಂದ ಕಲಾ ವಿಮರ್ಶೆಗಳು ಕೊನೆ ಪಕ್ಷ ೧೫ ದಿನಗಳಿಗೊಮ್ಮೆ ರಾಜ್ಯಮಟ್ಟದಲ್ಲಿ ಬರಬೇಕಾಗಿದೆ.

ಇನ್ನು ಪ್ರಶಸ್ತಿಗಳ ವಿಷಯ ಬಂದಾಗ ಮಾಧ್ಯಮದಲ್ಲಿ ಮುಂದಾಗಿ ಹಿರಿಯ, ನುರಿತ ಪಕ್ವವಾದ ಕಲಾವಿದರ ಹೆಸರನ್ನು ಸೂಚಿಸಬೇಕು. ಇತ್ತೀಚಿನ ದಿನಗಳಲ್ಲಿ ಸಂಘ ಸಂಸ್ಥೆಗಳು, ಸರ್ಕಾರದ ಸಂಸ್ಕೃತಿ ಇಲಾಖೆಯವರು ಪ್ರಶಸ್ತಿಗಾಗಿ ಅರ್ಜಿಯನ್ನು ಆಹ್ವಾನಿಸುತ್ತಾರೆ. ಇದು ಒಂದು ದೃಷ್ಟಿಯಲ್ಲಿ ಸರಿ. ಅಂದರೆ ಅವರಿಗೆ ಗೊತ್ತಿಲ್ಲದೆ ಬೇರೆ ಊರಿನಲ್ಲಿರುವ ಕಲಾವಿದರು ಕೂಡ ಪ್ರಶಸ್ತಿ ಪಡೆಯಲಿ ಎಂದು. ಆದರೆ ಸ್ವಾಭಿಮಾನ ಇರುವ ಯಾವ ಕಲಾವಿದ ತಾನೆ ನಾನು ಹಿರಿಯ, ನುರಿತ ಕಲಾವಿದ, ನನಗೆ ಪ್ರಶಸ್ತಿ ಕೊಡಿ ಎಂದು ಕೇಳುತ್ತಾನೆ. ಪ್ರಶಸ್ತಿಗಳು ಕೇಳಿ ಬರಬಾರದು, ಅವು ಅರಸಿ ಬರಬೇಕು, ಬರುವ ಪ್ರಶಸ್ತಿಗಳಿಂದ ಹುರುಪು ಬರುತ್ತದೆ.

ಈಗ  ರೇಡಿಯೋ ಮಾಧ್ಯಮದ ಬಗ್ಗೆ ಒಂದೇರಡು ಮಾತುಗಳು, ನಿಜವಾಗಿಯೂ ಕಲಾವಿದನ ಅತ್ಯಂತ ಹಳೆಯ ಗೆಳೆಯ, ಪ್ರತಿದಿನ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಬಿತ್ತರಿಸಿ ಬಾಲವೃದ್ಧರಾದಿಯಾಗಿ ಎಲ್ಲರನ್ನು ಸಂತೋಷಗೊಳ್ಳುವಂತೆ ಮಾಡುತ್ತದೆ. ಬೇರೆ ಮಾಧ್ಯಮಗಳಿಗೆ ಹೊಲಿಸಿದರೆ ಇದರ ವ್ಯವಹಾರಿಕ ಜಾಣ್ಮೆ ಕಡಿಮೆ. ಸಾಂಸ್ಕೃತಿಕ ಮೌಲ್ಯ ಜಾಸ್ತಿ, ಅಂದರೆ ರೇಡಿಯೋ ಇನ್ನು ಕಮರ್ಶಿಯಲ್‌ಆಗಿಲ್ಲ, ಆಗುವುದು ಬೇಡ. ತಲೆತಲಾಂತರ ಸಂಗೀತ, ರಸಪ್ರಶ್ನೆ, ಸಂದರ್ಶನಗಳನ್ನು ನಮಗೆ ಕೊಡುತ್ತಲೆ ಬಂದಿದೆ. ಈಗಲೂ ಕೆಲವರ ದಿನಚರಿ ರೇಡಿಯೋದೊಂದಿಗೆ ಪ್ರಾರಂಭವಾಗುತ್ತದೆ. ಬಡವ ಬಲ್ಲಿದ ಎಂಬ ತಾರತಮ್ಯವಿಲ್ಲದೆ ಎಲ್ಲರೊಂದಿಗೆ, ಎಲ್ಲೆಲ್ಲೋ, ಇರುವ ಸಂಗಾತಿ ರೇಡಿಯೋ. ಒಂದಂತು ನಿಜ ಈ ಮಾಧ್ಯಮಗಳಿಂದ ಅನೇಕ ಜನರ ಹೊಟ್ಟೆ ತಣ್ಣಾಗಿದೆ, ಅನೇಕ ಕಲಾವಿದರು ಇಂದು ತಮ್ಮ ಕಲೆಯಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ, ಹೆಚ್ಚಿನ ಚಾನೆಲ್‌ಗಳು, ರೇಡಿಯೋ ಸ್ಟೇಶನ್‌, ಅನೇಕ ಪತ್ರಿಕೆಗಳಿಂದ ಕಲಾವಿದ ಉದ್ಯೋಗ ಕಂಡುಕೊಳ್ಳಲು ಸುಲಭವಾಗಿದೆ. ಟಿವಿ ಮಾಧ್ಯಮದಿಂದ ಪ್ರಪಂಚದ ಕಲಾವಿದರ ಕಾರ್ಯಕ್ರಮ ಸಂದರ್ಶನ, ನೇರ ಮಾತುಕತೆ ಸಾಧ್ಯವಾಗಿದೆ. ಆದರೆ ಇನ್ನು ಕಲಾತ್ಮಕವಾದ ಶಾಸ್ತ್ರೀಯ ನೃತ್ಯದ ಕಾರ್ಯಕಮಗಳು ಬರಬೇಕಾಗಿದೆ, ಮೊಬೈಲ್‌ಗಳಿಂದ ಅಭ್ಯಾಸಕ್ಕೆ ಸ್ವಲ್ಪ ಕಿರಿಕಿರಿಯಾದರೂ ಸಂಪರ್ಕ ಅತಿ ಸುಲಭವಾಗಿದೆ. ಪ್ರತಿಯೊಂದು ವಸ್ತುವಿನ ಇತಿಮಿತಿ ತಿಳಿದಿದ್ದಾರೆ, ಅದರಿಂದ ಒಳ್ಳೆಯದನ್ನು ಮಾತ್ರವೇ ತೆಗೆದುಕೊಳ್ಳಬೇಕು. ಇನ್ನು ಇಂಟರ್ ನೆಟ್‌ವೆಬ್‌ಸೈಟ್ ಗಳ ಆಳ ಅಗಾಧ. ನಮ್ಮ ಮನೆ ಅಂಗಳದಲ್ಲೇ ಪ್ರಪಂಚದಲ್ಲಿರುವ ಗ್ರಂಥಾಲಯ ತೆರೆದುಕೊಳ್ಳುತ್ತದೆ. ಇದನ್ನು ಸರಿಯಾಗಿ ಉಪಯೋಗಿಸಿಕೊಂಡು ಕಲಾವಿದ ನಿಜಕ್ಕೂ ಸ್ಥಾನಮಾನ ಗಳಿಸಿಕೊಳ್ಳುವನು.

ಈ ಎಲ್ಲ ವಿಷಯಗಳೊಂದಿಗೆ ಲೇಖನವು ಕೊನೆಯ ಹಂತಕ್ಕೆ ಬರುತ್ತಿದೆ. ಇಲ್ಲಿ ಮಾಧ್ಯಮ ಮಿತ್ರನ ಬಗ್ಗೆ  ಒಂದೇರಡು ಹೇಳುವುದು ನನ್ನ ಕರ್ತವ್ಯ. ಕೆಲವೊಮ್ಮೆ ನಿಜಕ್ಕೂ ಮಾಧ್ಯಮದ ಮಿತ್ರನ ಬಗ್ಗೆ ( ಮುಖ್ಯವಾಗಿ ಛಾಯಾಚಿತ್ರಗಾರರು) ಅಭಿಮಾನ ಮೂಡುತ್ತದೆ. ಯಾಕೆಂದರೆ ಅವರ ಕೆಲಸದ ವೇಳೆಯಲ್ಲಿ ಅರ್ಧದಷ್ಟು ಸಮಯವನ್ನು ಕಲಾವಿದರಿಗೆ, ರಾಜಕಾರಣಿಗಳಿಗೆ ಗಾಬರಿಗಾಗಿ ಕಾಯುವುದರಲ್ಲೇ ಕಳೆಯಬೇಕಾಗುತ್ತದೆ. ಅವರ ತಾಳ್ಮೆ ನಿಜಕ್ಕೂ ಶ್ಲಾಘನೀಯ. ಮತ್ತೆ ಕೆಲವೊಮ್ಮೆ ಅನೇಕ ಬಗೆಯ ಅಪಾಯಗಳ ಜೊತೆ ಫೋಟೊ ತೆಗೆಯಬೇಕಾಗುತ್ತದೆ. ಉದಾಹರಣೆಗೆ ಲಾಠಿ ಪ್ರಹಾರ, ನೆರೆ ಹಾವಳಿ, ಬೆಂಕಿ ಅನಾಹುತ, ಬಾಂಬ್‌ಸ್ಫೋಟ ಇತ್ಯಾದಿ. ನೋಡಿದಾಗ ಜೇನು ಹುಳುಗಳ ನೆನಪಾಗುತ್ತದೆ. ಇಡೀ ದಿನದ ಫೋಟೊಗಳನ್ನು ಸಂಗ್ರಹಿಸಿ ಮರುದಿನ ಮುಂಜಾನೆ ಸುಂದರ ಪತ್ರಿಕೆಯೊಂದಿಗೆ ನಮ್ಮ ಕೈ ಸೇರುತ್ತದೆ. ಪತ್ರಕರ್ತರೆಲ್ಲಾ ಆ ವೇಳೆಯಲ್ಲಿ ಕೆಲಸ ಮಾಡಿ ಸುದ್ದಿ ಮುಟ್ಟಿಸುತ್ತಾರೆ. ಒಬ್ಬ ಕಲಾವಿದೆಯಾಗಿ ನಾನು ಈ ಸ್ನೇಹಿತರಿಗೆಲ್ಲ ವಂದನೆಗಳನ್ನು ಈ ಮೂಲಕ ಹೇಳುವುದು ಸರಿ ಎಂದೆನಿಸುತ್ತದೆ.