ನೃತ್ಯವೆಂದಾಕ್ಷಣ ಮನಃ ಪಟಲದ ಮೇಲೆ ಗೋಚರಿಸುವುದು ನಟರಾಜನ ದಿವ್ಯಮೂರ್ತಿ. ಆನಂದ ತಾಂಡವದಲ್ಲಿ ತನ್ನ ಎಡಗಾಲನ್ನೆತ್ತಿ ಅಭಯ ಹಸ್ತದಲ್ಲಿ ಸೃಷ್ಟಿ ಸ್ಥಿತಿ, ಸಂಹಾರಗಳ – ವಿಶ್ವ ನಾಟ್ಯಮೂರ್ತಿಯಾಗಿ ವಿಜೃಂಭಿಸುವ ಶಿವನ ಭವ್ಯ ರೂಪ. ಹೀಗಿರುವಾಗ ನೃತ್ಯ ಗಣಪತಿಗೆ ಪ್ರಾಶಸ್ತ್ಯ ವಿರಳವೇ ಸರಿ. ವಿಘ್ನವಿನಾಯಕನಾಗಿ ವಿದ್ಯಾಗಣಪತಿಯಾಗಿ ಸಿದ್ದಿ – ಬುದ್ದಿ ಪ್ರದಾಯಕನಾಗಿ, ಭಕ್ತನ ಕಾಮನೆಗಳನ್ನು ಈಡೇರಿಸುತ್ತ, ಎಲ್ಲಾ ಸಂದರ್ಭಗಳಲ್ಲೂ ಪ್ರಥಮ ಪೂಜೆ ಸ್ವೀಕರಿಸುವ ಗಣಪನು ನೃತ್ಯ ಸಂಬಂಧಿಯಾಗಿ, ನಟರಾಜನಂತೆ ಹೆಗ್ಗಳಿಕೆ ಪಡೆದಿಲ್ಲ. ಕಾರಣ ಬಹುಷಃ ಅವನ ವಿಕಟ ಸ್ವರೂಪವೇ ಇರಬಹುದು. ವಾಮನ ರೂಪಿ, ಲಂಭೋದರ ಗಜವದನ ಗಣಪತಿಯು ನಾಟ್ಯಶಾಸ್ತ್ರಕಾರರು ಸೂಚಿಸುವ ನಾಯಕ ಲಕ್ಷಣಗಳ ಹತ್ತಿರವೂ ಸುಳಿಯಲಾರ! ಹೀಗಿರುವಾಗ, ನರ್ತಕರ ಪಾಲಿಗೆ ಆರಾಧ್ಯ ದೈವವಾಗಿ ಉಪಾಸನೆಗೆ “ಉಪಾಧ್ಯ” ಮೂರ್ತಿಯಾಗಿ, ಸಲ್ಲುವ ಸದವಕಾಶ ಎಲ್ಲಿಯದು? ನಟರಾಜ, ಶ್ರೀಕೃಷ್ಣ, ದೇವಿಯರಿಗೆ ಸಲ್ಲುವ ಅಗ್ರಸ್ಥಾನ ನಾಟ್ಯಗಣಪತಿಗೆ ಎಲ್ಲಿದೆ? ಹೀಗಿದ್ದಾಗ್ಯೂ, ನೃತ್ಯಗಣಪತಿಯ ಮಹತ್ವ ಏನು? ಭಾರತೀಯ ಪರಂಪರೆಯಲ್ಲಿ ವೈದಿಕಧರ್ಮದ ಹಿನ್ನೆಲೆಯಲ್ಲಿ ಹಿಂದೂ ಧರ್ಮ-ಸಂಸ್ಕೃತಿಯಲ್ಲಿ ಹಾಸು ಹೊಕ್ಕಾಗಿರುವ ಗಣಪ ನೃತ್ಯಗಣಪತಿಯಾಗಿ ಹೇಗೆ ಸಲ್ಲುತ್ತಾನೆ? ನರ್ತಕರ ಪಾಲಿಗೆ ಇವನು ಹೇಗೆ ಉಪಾಸ್ಯನು? ಇವೆಲ್ಲ ಕೊಂಚ ವಿವೇಚಿಸಬೇಕಾದ ಅಂಶಗಳೇ ಆಗಿವೆ. ಮೊಟ್ಟ ಮೊದಲನೆಯದಾಗಿ, ನೃತ್ಯ ಗಣಪತಿ ಯ ಕಲ್ಪನೆ ಎಂತಹುದು? ಇರುವ ೩೩೦ ಕೋಟಿ ಹಿಂದೂ ದೇವತೆಗಳಲ್ಲಿ ಇವರ ಪ್ರಾಶಸ್ತ್ಯ ಏನು ? ಈ ಪ್ರಶ್ನೆಗಳು ನಮ್ಮನ್ನು ಶೋಧನೆಗೆ ಹಚ್ಚುತ್ತವಲ್ಲವೇ? ವಿಶ್ವವೇ ಒಂದು ಚೈತನ್ಯದ ಅಭಿವ್ಯಕ್ತಿಯಾದರೆ, ಇಲ್ಲಿರುವ ಸಮಸ್ತ ಚರಾಚರಗಳೂ ಚೈತನ್ಯದ ಕಣಗಳೇ ಸರಿ! ಈ ಪ್ರತಿಯೊಂದು ಚೈತನ್ಯದ ಕಣವು ವಿಭಿನ್ನ ತರಂಗಗಳನ್ನು ಹೊಂದಿರುವುದು ಅನುಭವಕ್ಕೆ ಬರುತ್ತದೆ. ಇಡೀ ಪ್ರಕೃತಿಯು ಸತ್ವ ರಜ, ತಮೋಗುಣಗಳ ಚಿರಂತನ ನರ್ತನವಾಗಿದೆ. ಸ್ಥೂಲವಾಗಿ ಕಾಣುವ ಈ ತ್ರಿಗುಣಗಳಲ್ಲೂ ವಿಭಿನ್ನ ಚೈತನ್ಯ ತರಂಗಗಳಿವೆ. ಈ ವಿಭಿನ್ನ ತರಂಗಗಳ ಸಂಯೋಜನೆ ಬೇರೆ ಬೇರೆ ರೀತಿಯಲ್ಲಿ ಏರ್ಪಟ್ಟಾಗ, ವೈವಿದ್ಯಮಯ ಸೃಷ್ಟಿ ಉಂಟಾಗುತ್ತಲೇ ಇರುತ್ತದೆ. ಈ ವಿವಿಧ ಶಕ್ತಿಗಳ ತರಂಗಗಳನ್ನು ಸಂಕೇತವಾಗಿ, ನಾನಾ ದೇವತೆಗಳಲ್ಲಿ ಇಟ್ಟು ಭಗವಂತನ ಏಕಸ್ವರೂಪವನ್ನು ಅನೇಕತೆಯಲ್ಲಿ ಕಾಣುವುದು ಮಾನವ ಸಂಸ್ಕೃತಿ-ಸ್ವಭಾವವಾಗಿದೆ. ಇದೇ ರೀತಿ ಗಣಪತಿಯೂ ವಿಭಿನ್ನ ತರಂಗಗಳ ದ್ಯೋತಕವಾಗಿ ಹಲವು ರೂಪಾಂತರಗಳನ್ನು ಹೊಂದಿದ್ದಾನೆ. ವಿಶೇಷವಾಗಿ ಶಿಲ್ಪಶಾಸ್ತ್ರಕ್ಕಾಗಿ ಹಾಗೂ ಉಪಾಸನೆ ಪೂಜೆಗಳಿಗಾಗಿ ರೂಪಿಸಿರುವ ಲಭ್ಯ ೩೨ ಧ್ಯಾನ ಶ್ಲೋಕಗಳಲ್ಲಿ ಒಂದು ನೃತ್ಯಗಣಪತಿಗೂ ಸಲ್ಲುತ್ತದೆ. “ಪಾಶಾಂಕುಶಾಪೂಪ ಕುಠಾರದಂತ ಚಂಚತ್ಕರಾಕ್ಲಪ್ತ ವರಾಂಗುಲೀಯಂ | ಪೀತಪ್ರಭಂ ಕಲ್ಪದರೋರಧಸ್ಮಂ ಭಜಾಮಿ ನೃತ್ತೋಪ ಪದಂ ಗಣೇಶಂ ||” ಕ್ರಮವಾಗಿ ಪಾಶ, ಅಂಕುಶ, ಕುಠಾರ (ಸಣ್ಣ ಕೊಡಲಿ) ದಂತಗಳನ್ನು ನಾಲ್ಕು ಕೈಗಳಲ್ಲಿ ಹಿಡಿದು, ಅಪೂಪವನ್ನು ಮತ್ತೊಂದು ಕೈಯಲ್ಲಿ ಇಟ್ಟುಕೊಂಡು, ಹಳದಿ ಬಣ್ಣದ ಪ್ರಭೆಯುಳ್ಳ, ಕಲ್ಪವೃಕ್ಷದ ಕೆಳಗೆ, ನೃತ್ಯ ಮಾಡುವ ಗಣೇಶನನ್ನು ಭಜಿಸುತ್ತೇನೆ. ಧ್ಯಾನ ಶ್ಲೋಕದನ್ವಯ, ಗಣೇಶ ತನ್ನ ಎಡಗಾಲನ್ನೆತ್ತಿ ನರ್ತಿಸುವ ಪ್ರಕ್ರಿಯೆಯಲ್ಲಿದ್ದಾನೆ. ಸುಮಾರು ಆರನೆಯ ಶತಮಾನದಲ್ಲಿ ಕಟ್ಟಿದ ಬಾದಾಮಿಯ ಶಿವಾಲಯದ ತಾಂಡವ ಶಿಲ್ಪದಲ್ಲಿ “ಸ್ಥಾನಕ ಗಣಪತಿ” ಪರಿವಾರ ದೇವತೆಯಾಗಿ ಸೇರಿ, ನಾಲ್ಕು ಕೈಗಳನ್ನು ಹೊಂದಿ, ಶಿವ ತಾಂಡವ ಲಯಕ್ಕೆ ಅನುಗುಣವಾಗಿ ಬೀಸುತ್ತಿರುವ ಕೈಗಳಿವೆ. ನೃತ್ಯ ಗಣಪತಿಯಲ್ಲದಿದ್ದರೂ ಭಂಗಿ ಅದನ್ನು ಸೂಚಿಸುತ್ತದೆ. ಐಹೊಳೆಯ ಪ್ರಾಚೀನ ಶಿಲ್ಪದಲ್ಲೂ ಸ್ಥಾನಕ, ಆಸೀನ, ಶಯಾನ, ಯಾನಕ ಎಂಬ ಪ್ರಭೇದಗಳಲ್ಲಿ ನೃತ್ಯಮೂರ್ತಿಯೂ ಒಂದು ಸ್ಥಾನಕ ಪ್ರಭೇದವಷ್ಟೇ, ಸ್ಥಾನಕ ಎಂದರೆ, ನಾಟ್ಯಶಾಸ್ತ್ರದ ಅನ್ವಯ ನಿಂತಿರುವ ಭಂಗಿ – ಇದರಲ್ಲಿ ಸಮಭಂಗಿ, ದ್ವಿಭಂಗ, ತ್ರಿಭಂಗಗಳೂ ಇವೆ. ನೃತ್ಯಭಂಗಿಯೂ ಇದರಲ್ಲಿ ಒಂದು ಭೇದವಾಗಿದೆ. ಸಾಮಾನ್ಯವಾಗಿ ನಾವು ಕಾಣುವುದು ಗಣಪತಿಯು ಆಸೀನ ಮೂರ್ತಿ, ಅವನ ದೊಡ್ಡ ಹೊಟ್ಟೆ ಕೊಬ್ಬು ಶರೀರದ ಭಾರಕ್ಕೆ ಆಸೀನ ರೂಪ ಸಮಂಜಸವೇ ಹೌದು ಈ ಹಿನ್ನೆಲೆಯಲ್ಲಿ ನೃತ್ಯ ಗಣಪತಿಯ ಭಂಗಿ ವಿಶೇಷವೇ ಸರಿ. ನೃತ್ಯ ಗಣಪತಿಯ ಹಸ್ತಮುದ್ರೆ, ಆಯುಧ ಇತ್ಯಾದಿಗಳನ್ನು ಕುರಿತು ಕೆಲವು ಮಾತುಗಳಿವೆ. ಮುದ್ರೆ ಒಂದು ಸಾಂಕೇತಿಕ ಭಾಷೆ. ಅಷ್ಟೆ ಅಲ್ಲದೆ, ಒಂದೊಂದು ಶಕ್ತಿಯ ಸ್ವರೂಪ, ನಾಟ್ಯ, ದೇವತಾ ಶಿಲ್ಪ ಹಾಗೂ ಪೂಜಾ ಪದ್ಧತಿಯಲ್ಲಿ ಮದ್ರೆಯ ಪಾತ್ರ ಹಿರಿದು. ನೃತ್ಯದಲ್ಲಿಯೂ ಸಂಯುತ, ಅಸಂಯುತ, ದೇವತಾ ಹಸ್ತ ಇತ್ಯಾದಿ ಒಂದು ವಿಪುಲ ಶಾಸ್ತ್ರವೇ ಬೆಳೆದಿದೆ. ತಂತ್ರದ ನೆಲೆಯಲ್ಲಿ ಮೈದಳೆದ ಮುದ್ರೆ ಮುಂದೆ ನೃತ್ಯಕ್ಕೂ, ಶಿಲ್ಪಕ್ಕೂ ಹರಡಿತು. ಅಭಯ, ವರದ, ಕಟಕ, ಸೂಚಿ, ಕಪಿತ್ಥ ಅಲಪಲ್ಲವ, ತರ್ಜನೀ, ದಂಡ ಇತ್ಯಾದಿ ದೇವತಾ ಮೂರ್ತಿಗಳಲ್ಲಿ ಲಭ್ಯ. ದಂಡಹಸ್ತ ವಿಶೇಷವಾಗಿ ನಾಟ್ಯ ಭಂಗಿಯಲ್ಲಿರುವ ಮೂರ್ತಿಗಳಲ್ಲಿ ಮಾತ್ರ ನೋಡಬಹುದು. ನೃತ್ಯ ಗಣಪತಿಯು ಎಡತೋಳು ಪಕ್ಕಕ್ಕೆ ಚಾಚಿ ನಾಟ್ಯ ಭಂಗಿಯಲ್ಲಿ ದಂಡಹಸ್ತದಲ್ಲಿ ಪಾಶವನ್ನು ಹಿಡಿದಿರುತ್ತಾನೆ. ಪಾದಗಳು. ಕುಂಚಿತ, ಅಂಚಿತ, ಉತ್ಥಿತ ಭೇದಗಳಲ್ಲಿ ಇರುತ್ತವೆ. ಮೋದಕಕ್ಕೆ, ಜಂಬೂಫಲಕ್ಕೆ ಕಾಂಗೂಲ ಹಸ್ತ, ಅಭಯ ವರದಗಳಿಗೆ ಅರ್ಧಚಂದ್ರ ಹಸ್ತ ವಿನಿಯೋಗಗಳು ಸಾಮಾನ್ಯವಾಗಿ ಸಿಗುತ್ತವೆ. ತಾತ್ವಿಕ ಹಿನ್ನೆಲೆಯಲ್ಲಿ ಇವುಗಳ ವಿವೇಚನೆಯನ್ನು ಹೀಗೆ ಮಾಡಬಹುದು. ಕೈಯಲ್ಲಿ ಹಿಡಿದ ಮೋದಕ-ಮಹಾಬುದ್ದಿಯ ಆನಂದದ ಜ್ಞಾನ, ಜಂಬೂಫಲವೂ ಲೌಕಿಕ ಸಂಪತ್ಸಮೃದ್ಧಿಗೆ ಸಂಕೇತ. ಪಾರ ಸಂಸಾರ ಬಂಧನ ” ಕಾರ್ಮಣ ಮಾಯಾ ಮಲ”ದ ಸಂಕೇತವಾದರೆ ಅಂಕುಶ (ಆನೆ ಸಂಬಂಧಿತ) ಜ್ಞಾನಾಂಕುಶವು ಅಜ್ಞಾನವೆಂಬ ಮದದಾನೆಯನ್ನು ನಿಗ್ರಹಿಸುತ್ತದೆ. ಗಣೇಶನು ಸರ್ಪಯಜ್ಞೋಪವೀತಿ-ತಂತ್ರ ಹಾಗೂ ಯೋಗದಲ್ಲಿ ಚಕ್ರಸ್ಥಿತನಾಗಿ, ಮೆರೆಯುತ್ತಾನೆ. ಕುಠಾರ, ದುಷ್ಟ ಶಕ್ತಿಗಳ ನಿಗ್ರಹಕ್ಕಾಗಿ ಎಂದೆಣಿಸಬಹುದು. ಕುಂಡಲಿನೀ ಯೋಗದಲ್ಲಿ ವಿವರಿಸಿರುವ ಷಟ್‌ಚಕ್ರಗಳಲ್ಲಿ ಮೂಲಾಧಾರ ಚಕ್ರಕ್ಕೆ ಗಣಪತಿಯು ಅಧಿದೇವತೆ. ಈ ಚಕ್ರ ಪೃಥ್ವೀತತ್ವದ ಪ್ರತಿನಿಧಿಯಾಗಿ ಕೆಂಪು ಬಣ್ಣವಾಗಿದೆ. ಆದರೆ ಧ್ಯಾನಶ್ಲೋಕದ ವರ್ಣನೆಯಲ್ಲಿ ಗಣಪತಿ ಹಳದಿ ಬಣ್ಣದ ಪ್ರಭೆಯುಳ್ಳವನಾಗಿದ್ದಾನೆ. ಇದು ಮಣಿಪುರ ಚಕ್ರದ ಸಂಕೇತ. ಇದೊಂದು ವಿಶ್ಲೇಷಣಾರ್ಹ ವಿಚಾರವಾಗಿದೆ. ಕೊನೆಯದಾಗಿ ನೃತ್ಯಗಣಪತಿಯ ಆಧ್ಯಾತ್ಮಿಕ, ಧಾರ್ಮಿಕ ಮಹತ್ವದ ವಿವೇಚನೆ ಅರ್ಥಪೂರ್ಣ, ಧರ್ಮ, ಅರ್ಥ, ಕಾಮ, ಮೋಕ್ಷಗಳ ಚತುರ್ವಿಧ ಪುರುಷಾರ್ಥಗಳ ಸಾಧನೆಗೆ ನಮ್ಮ ಸಂಸ್ಕೃತಿ ಒತ್ತುಕೊಟ್ಟು, ಪೂಜೆ ಉಪಾಸನೆಗಳಲ್ಲಿ ಗಣಪತಿಗೆ ಅಗ್ರಸ್ಥಾನ ನೀಡಿರುವುದು ಸರ್ವವೇದ್ಯ. ಈ ಲೇಖನದ ಸಂದರ್ಭದಲ್ಲಿ ನೃತ್ಯಗಣಪತಿ ಉಪಾಸನೆಗೆ ಹೇಗೆ ಪ್ರಸ್ತುತ ಎಂಬುದು ಅವಶ್ಯಕ. ಉಪಾಸನೆ ಎಂದರೆ ಒಂದು ವಸ್ತುವಿನಲ್ಲಿ ಅಥವಾ ಉಪಾಸ್ಯ. ದೇವತೆಯಲ್ಲಿ ಚಿತ್ತವನ್ನು ಏಕಾಗ್ರಗೊಳಿಸುವುದು. ಸದಾ ಹರಿದಾಡುವ ಗುಣವುಳ್ಳ ಈ ಚಿತ್ರವನ್ನು ಒಂದೆಡೆ ನಿಲ್ಲಿಸಲು, ಧ್ಯಾನವೊಂದೇ ವಿಧಿ. ಧ್ಯಾನದಲ್ಲಿ ಮನಸ್ಸು ತೈಲಧಾರೆಯಂತೆ, ಅಖಂಡವಾಗಿ, ಚಿತ್ತವೃತ್ತಿ ವಿಕಾರಗಳಿಲ್ಲದೆ ಹರಿದಾಗ ಉಪಾಸನೆ ಸಾಧ್ಯ. ಮನಕ್ಕೊಂದು ಆಲಂಬನೆಯಾಗಿ ದೇವತಾ ಮೂರ್ತಿ, ಸಂಬಂಧಿತ ಧ್ಯಾನಶ್ಲೋಕ ರೂಪಗೊಂಡಿವೆ. ಕಾರಣ, ಸಗುಣೋಪಾಸನೆಯಲ್ಲಿ ಮನಸ್ಸು ಕೂಡಲೇ ಗ್ರಹಿಸಬಹುದಾದ ರೂಪವಿದೆ; ಆಭರಣ, ಆಯುಧಗಳ ಅಳವಡಿಕೆಯಿದೆ. ಧ್ಯಾನಶ್ಲೋಕದಿಂದಲೇ, ದೇವತೆಯ ಆಕಾರ ಚಿತ್ರಿಸಿಕೊಳ್ಳುವ ಭಾವ ಪ್ರತಿಮೋಪಾಸನೆಯ ಅನುಕೂಲವಿದೆ. ಉಪಾಸ್ಯ ದೇವತೆಗೆ ಸಂಬಂಧಿತ ಧ್ಯಾನ ಶ್ಲೋಕವನ್ನು ಪಠಿಸುತ್ತಾ. ಆ ದೇವತೆಗೆ ವಿಶಿಷ್ಟವಾದ ಬೀಜಮಂತ್ರವನ್ನು ಪುರಸ್ಕರಣೆ ಮಾಡುತ್ತಿದ್ದರೆ, ಮನಸ್ಸಿನಲ್ಲಿ ಆ ದೇವತಾ ಮೂರ್ತಿ ಕ್ರಮಕ್ರಮವಾಗಿ ಮೈದಳೆದು ಮಂತ್ರ ಮೂರ್ತಿಯಾಗುತ್ತದೆ. “ಧ್ಯಾನನೈವ” “ಪಶ್ಯಂತಿ ತದ್ರೂಪಂ” ಅಂದರೆ ಧ್ಯಾನದಿಂದಲೇ ಈ ರೂಪವನ್ನು ಉಪಾಸಕ ಕಾಣುತ್ತಾನೆ. ಧ್ಯಾನದ ಫಲವಾಗಿ, ದೇವತಾ ಮೂರ್ತಿಯೊಳಗೆ ಉಪಾಸಕ, ಉಪಾಸಕನೊಡನೆ ದೇವತಾಮೂರ್ತಿ ಎಂಬ ತನ್ಮಯತೆ, ಅವಿನಾಭಾವ ಸಂಬಂಧ ಏರ್ಪಡುತ್ತದೆ. ಈ ಭಾವುಕತೆ ಇಲ್ಲದೆ ಉಪಾಸನೆ ವ್ಯರ್ಥಸಿದ್ಧಿ. ಕಲಾ ಸಂಬಂಧಿ ನೃತ್ಯಗಣಪತಿ ಉಪಾಸನೆಯಲ್ಲೂ ಇದು ಅನುಭವ ವೇದ್ಯ. ಶಾಸ್ತ್ರ ನಿರ್ದೇಶಿತ ನೃತ್ಯವು, ಅನುಭವ, ಪರಿಶ್ರಮ, ಉತ್ತಮ ತಾಂತ್ರಿಕ-ನೈಪುಣ್ಯತೆ, ಬುದ್ದಿಮತ್ತೆಗಳಿಂದ ಶೋಭಿಸಿದರೂ, ಕಳೆ ಕಟ್ಟಲಾರದು! ನರ್ತಕ-ನರ್ತಕಿಯರ ನೃತ್ಯ ಸಾಧನೆಯಲ್ಲಿ ಆಧ್ಯಾತ್ಮಿಕ, ತಾಂತ್ರಿಕ ಸಾಧನಗಳ ಮೇಳೈಸುವಿಕೆಯ ತತ್ವವು ಇನ್ನು ಮುಂದೆ ಪ್ರಯೋಗಕ್ಕೆ ಬರಬೇಕಾದ ಅಂಶಗಳಾಗಿವೆ. ತಂತ್ರದಲ್ಲಿ ಷಟ್‌ಚಕ್ರ ನಿರೂಪಣೆಯ ಪ್ರಕಾರ ಚತುಷ್ಕೋಣವಾಗಿರುವುದು. ಮೂಲಾಧಾರ ಚಕ್ರ. ಇದೇ ಗಣಪತಿಯ ಸ್ಥಾನ: ಆದ್ದರಿಂದ ಅವನು “ಮೂಲಾಧಾರ ಸ್ಥಿತ”ನು ಮೂಲಾಧಾರವೂ ಭೂತತ್ವದ ಕೇಂದ್ರ. ಈ ಕಾರಣಕ್ಕಾಗಿ, ಗಣಪತಿಯನ್ನು ಮಣ್ಣಿನಲ್ಲಿ ಮಾಡಿ ಪೂಜಿಸುವ ಸಂಪ್ರದಾಯ ಬಂದಿದೆ. ಗಣಪತಿಯು ಪಂಚಭೂತಗಳನ್ನೊಳಗೊಂಡ ವಿಶಿಷ್ಟ ಶಕ್ತಿಯೂ ಹೌದು. ತಂತ್ರ ಸಾಧನೆಯಲ್ಲಿ ಮೂಲಾಧಾರವು ತೆರೆದುಕೊಳ್ಳಲು ಗಣಪತಿಯ ಉಪಾಸನೆ ಅವಶ್ಯಕ. ಇದು ನೃತ್ಯ ಸಾಧನೆಯಲ್ಲಿ ನವೀನ ಆಯಾಮಗಳನ್ನು ದರ್ಶನವನ್ನು ನೀಡಿ, ಸಾಧನೆ ಉತ್ಕೃಷ್ಟವಾಗುವುದರಲ್ಲಿ ಸಂದೇಹವಿಲ್ಲ. ಪಾರಂಪರಿಕವಾಗಿ ಇದ್ದಿರಬಹುದಾದ, ಈಗ ಪ್ರಚಲಿತವಾಗಿಲ್ಲದಿರಬಹುದಾದ ನೃತ್ಯ ಗಣಪತಿ ಉಪಾಸನೆ ಕ್ರಮ ಬೆಳಕಿಗೆ ಬಂದರೆ ನೃತ್ಯ ಕಲೆ ಮತ್ತು ನೃತ್ಯ ಕಲಾವಿದ ಹೊಸದರ್ಶನ ಪಡೆಯುವ ಸಾಧ್ಯತೆಗಳು ಉಂಟಾಗಬಹುದು ಎಂಬ ಆಶಯದೊಂದಿಗೆ ಈ ಲೇಖನ ಮುಕ್ತಾಯವಾಗುತ್ತಿದೆ.