ಅಧ್ಯಕ್ಷರ ಮಾತು

ಸಂಗೀತ ನೃತ್ಯ, ಮುಂತಾದ ಶಾಸ್ತ್ರೀಯ ಕಲೆಗಳ ಬಗ್ಗೆ ಆ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಹಿರಿಯರ ಜ್ಞಾನ ಸಂಪತ್ತನ್ನು ಮುಂದಿನ ತಲೆಮಾರಿನವರಿಗೂ ತಲುಪಿಸಬೇಕಾದದ್ದು ಅತ್ಯಗತ್ಯ. ಈ ನಿಟ್ಟಿನಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ಸ್ಥಾಪನೆ ಆದಾಗಿನಿಂದಲೂ ಒಳ್ಳೆಯ ಪ್ರಯತ್ನವನ್ನು ನಡೆಸಿಕೊಂಡು ಬಂದಿದೆ. ಹಿರಿಯರ ಶಾಸ್ತ್ರಜ್ಞಾನ ಹಾಗೂ ಪ್ರಾಯೋಗಿಕ ನೈಪುಣ್ಯತೆಯನ್ನು ಪುಸ್ತಕದಲ್ಲಿ ಲೇಖನಗಳ ಮೂಲಕ ದಾಖಲಿಸುವ ಕಾರ್ಯ ಅಕಾಡೆಮಿಗಳ ಆದ್ಯ ಕರ್ತವ್ಯ. ಇಂತಹ ಗ್ರಂಥಗಳ ಪ್ರಕಟಣೆ ಸಾರ್ವಕಾಲಿಕ ಸಂಪತ್ತು. ಇಂತಹ ಪುಸ್ತಕ ಸಂಪತ್ತನ್ನು ಬೆಳೆಸುವ ಕಾರ್ಯ ಮಾಡುವಲ್ಲಿ ಈಗಿನ ಅಕಾಡೆಮಿಯೂ ಹಿಂದೆ ಬಿದ್ದಿಲ್ಲ. ಹಿಂದುಸ್ತಾನಿ ಸಂಗೀತರಂಗದ ಬಗೆಗಿನ ಗ್ರಂಥ ಕರ್ನಾಟಕ ಸಂಗೀತ ಕಲಾವಿದರ ಪರಿಚಯ ಪುಸ್ತಕ. ಅಕಾಡೆಮಿಯ ಆರಂಭದಿಂದ ಇಲ್ಲಿಯವರೆಗಿನ ವಿವಿಧ ಅಧ್ಯಕ್ಷರುಗಳ ಕಾರ್ಯಸಾಧನೆಗಳ ವಿವರಗಳಿರುವ ದಾಖಲೆಗಳನ್ನೊಳಗೊಂಡ ಪುಸ್ತಕ ಹೀಗೆ ಸುಮಾರು ಒಂಭತ್ತು ಮೌಲಿಕ ಗ್ರಂಥಗಳನ್ನು ಈ ಸಾಲಿನಲ್ಲಿ ನಾವು ಪ್ರಕಟಸಿದ್ದೇವೆನ್ನಲು ನನಗೆ ಹೆಮ್ಮೆ ಎನಿಸುತ್ತದೆ.

ಇದೀಗ ‘ನೃತ್ಯದರ್ಪಣ’ ಎಂಬ ಈ ಗ್ರಂಥದಲ್ಲಿ ನಾಡಿನ ಸುಮಾರು ೨೫ ಮಂದಿ ನೃತ್ಯಕ್ಷೇತ್ರದ ತಜ್ಞಕಲಾವಿದರು ನೃತ್ಯಕಲೆಯ ಬಗ್ಗೆ ಬರೆದಿರುವ ಲೇಖನಗಳನ್ನು ಸಂಗ್ರಹಿಸಿ ಪ್ರಕಟಿಸಲಾಗಿದೆ. ನೃತ್ಯಕಲಾಲೋಕಕ್ಕೆ ನಿಜಕ್ಕೂ ಇದೊಂದು ವಿಶಿಷ್ಟ ಕೊಡುಗೆ ಎಂದರೆ ತಪ್ಪಾಗಲಾರದು.

ಈ ಪುಸ್ತಕವನ್ನು ಹೊರತರಲು ಸಾಕಷ್ಟು ಶ್ರಮವಹಿಸಿ ಶ್ರದ್ಧೆಯಿಂದ ಕಾರ್ಯನಿರ್ವಹಿಸಿರುವ ಸಂಪಾದಕ ಮಂಡಳಿಗೆ ನಾನು ಋಣಿಯಾಗಿದ್ದೇನೆ. ಅಕಾಡೆಮಿಯ ಕೋರಿಕೆಯನ್ನು ಮನ್ನಿಸಿ ಸಕಾಲಕ್ಕೆ ಮೌಲಿಕ ಲೇಖನಗಳನ್ನು ಬರೆದು ಕಳುಹಿಸಿರುವ ಲೇಖಕರೆಲ್ಲರೂ ಅಭಿನಂದಾರ್ಹರು.

ಈ ಗ್ರಂಥ ಪ್ರಕಾಶನ ಕಾರ್ಯದಲ್ಲಿ ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಅಕಾಡೆಮಿಯ ರಿಜಿಸ್ಟಾರ್ ಬಲವಂತರಾವ್ ಪಾಟೀಲ್ ಹಾಗೂ ಪ್ರಕಟಣಾ ಸಮಿತಿಯ ಸದಸ್ಯರು ಹಾಗೂ ಅಕಾಡೆಮಿಯ ಎಲ್ಲ ಸದಸ್ಯರನ್ನೂ ನಾನು ಕೃತಜ್ಞತೆಯಿಂದ ಸ್ಮರಿಸುತ್ತೇನೆ.

ಪುಸ್ತಕವನ್ನು ಅಂದವಾಗಿ ಮುದ್ರಿಸಿಕೊಟ್ಟ ಕೃತಿಕ ಪ್ರಿಂಟ್ಸ್-ಅಡ್ ಪ್ರೆಸ್‌ರವರಿಗೂ ಅಕಾಡೆಮಿಯ ಪರವಾಗಿ ಕೃತಜ್ಞತೆಗಳು ಸಲ್ಲುತ್ತವೆ.

ಈ ಪುಸ್ತಕ ಪ್ರಯೋಜನವನ್ನು ಕಲಾವಿದರು, ಕಲಾಭ್ಯಾಸಿಗಳು ಹಾಗೂ ಕಲಾಪ್ರೇಮಿಗಳು ಗರಿಷ್ಠ ಪ್ರಮಾಣದಲ್ಲಿ ಪಡೆದುಕೊಳ್ಳುವಂತಾದರೆ ನಮ್ಮೆಲ್ಲರ ಶ್ರಮ ಸಾರ್ಥಕವೆಂದು ಭಾವಿಸುತ್ತೇನೆ.

ಪಂ. ರಾಜಶೇಖರ ಮಾನ್ಸೂರ್
ಅಧ್ಯಕ್ಷರು