ಮೊದಲು ಮಾತು

ಯಾವುದೇ ಒಂದು ಶಾಸ್ತ್ರೀಯವಾದ ಕಲೆಯನ್ನು ನೋಡಿ ಅಥವಾ ಕೇಳಿ ಅನುಭವಿಸಿ ಆನಂದಿಸಬೇಕಾದರೆ ಆಯಾಯ ಕಲೆಯ ಬಗೆಗಿನ ತಕ್ಕಮಟ್ಟಿನ ಜ್ಞಾನ ನೋಡುಗನಿಗೆ ಅಥವಾ ಕೇಳುಗನಿಗೆ ಅಗತ್ಯವೆನಿಸುತ್ತದೆ. ಈ ನಿಯಮದಿಂದ ಶಾಸ್ತ್ರೀಯ ನೃತ್ಯ ಕಲೆಯೂ ಹೊರತಾಗಿಲ್ಲ. ಕ್ರಿಕೆಟ್ಟಿನಂತಹ ಒಂದು ಕಿಡೆಯನ್ನು ನೋಡು ನೋಡುತ್ತಲೇ ಅರಿತುಕೊಂಡು ಆನಂದಿಸಬಹುದು. ಜಾದು, ಸರ್ಕಸ್, ಮುಂತಾದ ಕೌತುಕಮಯ ಕಲೆಗಳನ್ನು ಅದರ ಕೌತುಕತೆಯ ಆಕರ್ಷಣೆಯೊಂದಿಗೆ ಆನಂದಿಸಬಹುದು. ಅಲ್ಲಿ ಅದ್ಭುತವೇ ಪ್ರಧಾನ. ಆದರೆ ನವರಸಭರಿತ ಸಂಕೀರ್ಣ ಕಲೆಯಾದ ಶಾಸ್ತ್ರೀಯ ನೃತ್ಯವನ್ನು ಸರಿಯಾಗಿ ಗರಿಷ್ಠ ಮಟ್ಟದಲ್ಲಿ ಆಸ್ವಾದಿಸಬೇಕಾದರೆ ನೋಡುಗನಿಗೆ ನೃತ್ಯಕಲೆಯ ಬಗೆಗೆ ಸ್ವಲ್ಪಮಟ್ಟಿಗಿನ ವಿಚಾರ ಜ್ಞಾನವಿದ್ದಲ್ಲಿ ಅನುಕೂಲ. ನರ್ತನ ಕಲೆಯ ವಿವಿಧ ಆಯಾಮಗಳ ಬಗ್ಗೆ, ಅದರ ಕಲಿಕೆ, ಪಾಠ್ಯಕ್ರಮ, ಶೈಲಿ, ವೈಶಿಷ್ಟ್ಯತೆ, ಅದರಲ್ಲಿನ ಆಧ್ಮಾತ್ಮಿಕತೆ ಮುಂತಾದವುಗಳ ಬಗ್ಗೆ ತಕ್ಕಮಟ್ಟಿಗಿನ ಅರಿವು ಪ್ರೇಕ್ಷಕನಿಗಿದ್ದರೆ ಈ ಕಲೆಯ ಪ್ರದರ್ಶನದ ಮಹತ್ವವನ್ನು ಹೆಚ್ಚು ಅರ್ಥಮಾಡಿಕೊಂಡು ಅನುಭವಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಒಂದು ಪ್ರಮಾಣದ ಪ್ರಯತ್ನವಾಗಿ ಈಗ ಈ ‘ನೃತ್ಯ ದರ್ಪಣ’ ಎಂಬ ಲೇಖನಗಳ ಸಂಗ್ರಹವನ್ನು ತಮ್ಮ ಕೈಯಲ್ಲಿರಿಸುತ್ತಿದ್ದೇನೆ.

‘ನೃತ್ಯ ದರ್ಪಣ’ – ಇದು ನೃತ್ಯಕಲೆಗೆ ಸಂಬಂಧಿಸಿದ ವಿವಿಧ, ವಿಶಿಷ್ಟ ವಿಚಾರಗಳ ಬಗೆಗೆ ಬೆಳಕುಚೆಲ್ಲುವ ೩೩ ಲೇಖನಗಳ ಒಂದು ಗುಚ್ಛ. ಪಂಡಿತರಿಂದ ಪಾಮರರವರೆಗೆ, ಕಿರಿಯರಿಂದ ಹಿರಿಯರವರೆಗೆ, ಕಲಾವಿದರಿಂದ ಪ್ರೇPಕರವರೆಗೆ ಎಲ್ಲರಿಗೂ ಎಲ್ಲ ಸಂದರ್ಭದಲ್ಲೂ ಶಾಸ್ತ್ರೀಯ ನೃತ್ಯದ ಬಗೆಗಿನ ಒಳಹೊರಗುಗಳನ್ನು ತೆರೆದಿಡುವ ನಮ್ಮ ಪ್ರಯತ್ನ ಇದಾಗಿದೆ.

ಸಾಮಾನ್ಯವಾಗಿ ಕಲಾವಿದರು ತಮ್ಮ ಕಲಾಮಾಧ್ಯಮಗಳ ಮೂಲಕ ತಮ್ಮ ನೈಪುಣ್ಯವನ್ನು ಸಾಬೀತುಪಡಿಸುವವರಾಗಿರುತ್ತಾರೆ. ಕಲಾವಿದರೇ ಬರಹಗಾರರೂ ಆಗಿರುವ ಸಂದರ್ಭಗಳು ಬಹಳ ಕಡಿಮೆ. ಆದರೆ ಇಲ್ಲಿ ಹೆಚ್ಚಿನ ಸಂಖ್ಯೆಯ ನೃತ್ಯಕಲಾವಿದರಿಂದಲೇ ಲೇಖನಗಳನ್ನು ಬರೆಸಿ ಪ್ರಕಟಿಸುವ ಪ್ರಯತ್ನ ಮಾಡಲಾಗಿದೆ. ಸುಮಾರು ೨೫ ಮಂದಿ ನೃತ್ಯಕಲಾವಿದರು, ವಿದ್ವಾಂಸರು ಅಕಾಡೆಮಿಯ  ಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ಇಲ್ಲಿ ತಮ್ಮ ಜ್ಞಾನದ ಮಹತ್ವವನ್ನು ದಾಖಲಿಸಿದ್ದಾರೆ. ಜನಸಾಮಾನ್ಯರಿಂದ ಹಿಡಿದು ನೃತ್ಯ ಅಭ್ಯಾಸಿಗಳ ಹಾಗೂ ಕಲಾರಸಿಕರ ಚಿಂತನೆಗೆ ಗ್ರಾಸ ಒದಗಿಸುವಂತಹ ಈ ಎಲ್ಲಾ ಲೇಖನಗಳೂ ಸರ್ವಕಾಲಿಕ ಮೌಲ್ಯವುಳ್ಳದ್ದೆಂದು ಹೇಳಬಹುದಾಗಿದೆ.

ನೃತ್ಯಗಣಪತಿಯ ವಿಶಿಷ್ಠತೆ, ನಟರಾಜ ಮೂರ್ತಿಯ ಅಧ್ಮಾತ್ಮಿಕ ಹಿನ್ನಲೆ, ವೇದಗಳ ಮತ್ತು ನಾಟ್ಯ ಶಾಸ್ತ್ರದ ಸಂಬಂಧ, ನೃತ್ಯ-ಶಿಲ್ಪ-ಯೋಗ ಸಮನ್ವಯ, ಶಾಸ್ತ್ರ-ಪ್ರಯೋಗ ಸಮನ್ವಯ, ನೃತ್ಯದಲ್ಲಿ ಸೌಂದರ್ಯಪ್ರಜ್ಞೆ, ನೃತ್ಯ ಶಿಕ್ಷಣದ ಪ್ರಯೋಜನಗಳು ಹೀಗೆ ಅನೇಕ ಉಪಯುಕ್ತ ಅಂಶಗಳು ಈ ಪುಸ್ತಕದಲ್ಲಿ ಅಡಕಗೊಂಡಿವೆ. ಹಾಗೆಯೇ ನೃತ್ಯ ರಂಗದಲ್ಲಿ ಎಲ್ಲರೂ ಆಗಿಂದಾಗ್ಗೆ ಮಾತನಾಡುವ ವಿಚಾರಗಳಾದ ನಟುವಾಂಗ, ಕಲಾಸಿದ್ಧಿ, ನೃತ್ಯ ಪರಂಪರೆ, ನೃತ್ಯ ಸಂಗೀತ, ನಾಟ್ಯಕ್ಕೆ ಸಂಬಂಧಿಸಿದ ಶಾಸ್ತ್ರಗ್ರಂಥಗಳ ಬಗೆಗೂ ಮಾಹಿತಿ ಈ ಗ್ರಂಥದಲ್ಲಿ ದೊರಕಿಸುವ ಪ್ರಯತ್ನ ಮಾಡಲಾಗಿದೆ.

ಈ ಪುಸ್ತಕವನ್ನು ಯಾವುದೇ ನೃತ್ಯ ಪರೀಕ್ಷೆಗಳ ಪಾಠಪಟ್ಟಿಯನ್ನು ದೃಷ್ಠಿಯಲ್ಲಿಟ್ಟುಕೊಂಡು ತಯಾರಿಸಿಲ್ಲ. ಶಾಸ್ತ್ರ ಸಂಬಂಧೀ ತಾಂತ್ರಿಕ ಅಂಶಗಳಿಗಿಂತ ನೃತ್ಯಕಲೆಯ ಬಗೆಗೆ ಸಾಮಾನ್ಯ ಜ್ಞಾನ ಮೂಡಿಸಲು ಸಹಕಾರಿಯಾಗಿರುವ ಈ ಗ್ರಂಥ ಎಲ್ಲ ತಲೆಮಾರಿನ ಕಲಾಪ್ರೇಮಿಗಳನ್ನು ಸ್ಪಂದಿಸಬಲ್ಲುದೆಂಬ ನಂಬಿಕೆ ನಮ್ಮದು.

‘ನೃತ್ಯ ದರ್ಮಣ’ ಪುಸ್ತಕದ ಸಂಪಾದಕನನ್ನಾಗಿ ಅಕಾಡೆಮಿಯ ಅಧ್ಯಕ್ಷರು ಹಾಗೂ ಸದಸ್ಯರು ನನ್ನನ್ನು ಆರಿಸಿದ್ದಕ್ಕಾಗಿ ಅವರೆಲ್ಲರಿಗೂ ನಾನು ಋಣಿ. ಈ ನನ್ನ ಜವಾಬ್ದಾರಿಯನ್ನು ನಾನು ಎಷ್ಟರ ಮಟ್ಟಿಗೆ ನಿರ್ವಹಿಸಿದ್ದೇನೋ ತಿಳಿಯದು. ಈ ಗ್ರಂಥ ನಿಜಕ್ಕೂ ಉಪಯುಕ್ತವಾಗಿ ಹೊರಬಂದಿದ್ದರೆ ಅದು ರೂಪುಗೊಳ್ಳುವ ನೆರವಿಗೆ ಎಲ್ಲಾ ಲೇಖಕರೇ ಕಾರಣ ಎಂದು ಪ್ರತೆಕವಾಗಿ ಹೇಳಬೇಕಾಗಿಲ್ಲ ಅಲ್ಲವೆ?

ಅಕಾಡೆಮಿಯ ಅಧ್ಯಕ್ಷರಾದ ಪಂಡಿತ ರಾಜಶೇಖರ ಮನ್ಸೂರ್ ಅವರು ಈ ಗ್ರಂಥದ ಪ್ರಕಟಣೆಯ ಬಗ್ಗೆ ವಿಶೇಷ ಆಸಕ್ತಿ ವಹಿಸಿ ಎಲ್ಲಾ ಸೌಲಭ್ಯಗಳನ್ನು ಸಕಾಲಕ್ಕೆ ಒದಗಿಸಿಕೊಟ್ಟು ನೆರವು ನೀಡಿದ್ದಾರೆ. ರಿಜಿಸ್ಟ್ರಾರ್ ಬಲವಂತರಾವ್ ಪಾಟೀಲ್ ಇದು ಸರ್ವಾಂಗೀಣ ಸುಂದರವಾಗಿ ಹೊರಬರಲು ಸಾಕಷ್ಟು ಶ್ರಮ ವಹಿಸಿದ್ದಾರೆ. ಈ ಪ್ರಕಟಣೆಯ ಯೋಜನೆಯನ್ನು ಉತ್ಸಾಹದೊಂದಿಗೆ ಕಾರ‍್ಯರೂಪಕ್ಕೆ ತಂದ ಅಕಾಡೆಮಿಯ ಪ್ರಕಟಣಾ ಸಮಿತಿಯ ಗೌರವಾನ್ವಿತ ಸದಸ್ಯರೆಲ್ಲರಿಗೆ ನಾನು ಆಭಾರಿಯಾಗಿದೆನೆ.

ಹಾಗೆಯೇ ಸಂಪಾದಕ ಮಂಡಳಿಯಲ್ಲಿದ್ದುಕೊಂಡು ಆಗಿಂದಾಗ್ಗೆ ಅಮೂಲ್ಯವಾದ ಸಲಹೆ ಸೂಚನೆ ನೀಡುವ ಮೂಲಕ ಮಾರ್ಗದರ್ಶನ ನೀಡಿರುವ ಪದ್ಮಿನಿರಾವ್ (ಈಗ ಅವರು ನಮ್ಮೊಂದಿಗಿಲ್ಲ), ನಂದಿನಿ ಈಶ್ವರ, ಸುಗ್ಗನಹಳ್ಳಿ ಷಡPರಿ ಇವರುಗಳಿಗೂ ನನ್ನ ವೈಯಕ್ತಿಕ ಕೃತಜ್ಞತೆಗಳು ಸಲ್ಲುತ್ತವೆ. ಮುದ್ರಣ ಕಾರ್ಯದಲ್ಲಿ ಹೆಚ್ಚಿನ ಆಸಕ್ತಿ ಶ್ರದ್ಧೆವಹಿಸಿ ಪುಸ್ತಕ ಅಂದವಾಗಿ ಹೊರಬರಲು ಶ್ರಮಿಸಿದ ಕೃತಿಕ ಪ್ರಿಂಟ್-ಆಡ್ ಮತ್ತು ಅವರ ಸಿಬ್ಬಂದಿವರ್ಗಕ್ಕೆ ಹಾಗೂ ‘ನೃತ್ಯದರ್ಪಣ’ವನ್ನು ಹೊರತರಲು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲರಗೂ ಅಕಾಡೆಮಿಯ ಹಾಗೂ ನನ್ನ ಪರವಾಗಿ ಕೃತಜ್ಞತಾಪೂರ್ವಕ ವಂದನೆಗಳನ್ನು ಈ ಮೂಲಕ ಸಲ್ಲಿಸುತ್ತಿದ್ದೇನೆ.

ಕೆ. ರಾಮಮೂರ್ತಿರಾವ್
ಸಂಪಾದಕರು