ಕೆ. ಮಾರಪ್ಪ

ವೃತ್ತಿಯಲ್ಲಿ ಕೃಷಿಕರಾದರೂ ಜಾನಪದ ಕಲೆಯಲ್ಲಿ ಗಾಢವಾದ ಆಸಕ್ತಿಯನ್ನು ಬೆಳೆಸಿಕೊಂಡು, ಈ ಕಲೆಯ ಶ್ರೇಯಸ್ಸಿಗೆ ಪಾತ್ರರಾದ ಕೀರ್ತಿ, ಅತ್ತಿಬೆಲೆ ತಾಲ್ಲೂಕಿನ ಅರೆಹಳ್ಳಿ ಗ್ರಾಮದ ಮಾರಪ್ಪನವರಿಗೆ ಸಲ್ಲುತ್ತದೆ.

ಬಾಲ್ಯದಲ್ಲೆ ಹಳ್ಳಿಯ ನಾಟಕಗಳಲ್ಲಿ ಬಾಲ ಪಾತ್ರಗಳಲ್ಲದೇ “ಕೇಳಿಕೆ” ಕಾರ್ಯಕ್ರಮಗಳಲ್ಲಿ ಹೆಣ್ಣು ಪಾತ್ರಗಳನ್ನು ನಿರ್ವಹಿಸಿ ಹೆಸರು ಗಳಿಸಿದರು. ಹಳ್ಳಿಯ ಗುರುಗಳಾದ ಪಾತಣ್ಣ, ಕೃಷ್ಣಪ್ಪ ಅವರುಗಳ ಬಳಿ ” ಕೀಲು ಕುದುರೆ”, “ನವಿಲು” ನೃತ್ಯ ಪ್ರಕಾರಗಳಲ್ಲೂ ಪರಿಣತಿಗಳಿಸಿಕೊಂಡಿದ್ದರು.

ಮುಂದೆ ತನ್ನದೇ ಆದ ತಂಡ ಒಂದನ್ನು ಕಟ್ಟಿ ಊರೂರುಗಳಲ್ಲೂ “ಕೇಳಿಕೆ”, “ಬಯಲಾಟ” ಪ್ರದರ್ಶನಗಳನ್ನಿತ್ತು, ಜನಪ್ರಿಯರಾದರು. ಹೀಗೆ ನಲವತ್ತು ವರ್ಷಗಳಿಗೂ ಮೀರಿ ತಮ್ಮ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು, ರಾಜ್ಯದ ಸಂಗೀತ ನಾಟಕ ಅಕಾಡೆಮಿಯ ಪರವಾಗಿ ಅಂತರ ರಾಜ್ಯ ಸಾಂಸ್ಕೃತಿಕ ತಂಡದಲ್ಲಿ ಸದಸ್ಯರಾಗಿ ದೇಶದ ನಾನಾ ಭಾಗಗಳಲ್ಲಿ ತಮ್ಮ ಕಾರ್ಯಕ್ರಮಗಳನ್ನಿತ್ತು, ರಾಷ್ಟ್ರನಾಯಕರುಗಳ ಮೆಚ್ಚುಗೆ ಗಳಿಸಿದ ಕೀರ್ತಿ ಮಾರಪ್ಪನವರದ್ದು. ಇವರ ಕಲಾ ಪ್ರತಿಭೆಯನ್ನು ಇವರ ವರ್ಣರಂಜಿತವಾದ ನವಿಲು ಮತ್ತು ಕೀಲು ಕುದುರೆ ನೃತ್ಯಗಳನ್ನು ವೀಕ್ಷಿಸಿಯೇ ಸವಿಯಬೇಕು ಎಂತಲೇ ಇವರನ್ನು ನ್ಮಮ ರಾಜ್ಯದ ಪ್ರಮುಖ ಜಾನಪದ ಕಲಾವಿದರಲ್ಲೊಬ್ಬರೆಂದು ಗೌರವಿಸಲಾಗಿದೆ.