ಭಾರತೀಯ ಸಂಸ್ಕೃತಿಯಲ್ಲಿ ನೃತ್ಯವು ತನ್ನದೇ ಆದ ಶಾಶ್ವತಸ್ಥಾನವನ್ನು ಪಡೆದಿದೆ. ಭಾರತೀಯ ನೃತ್ಯ ಕಲೆಗಳಲ್ಲಿ ಮುಖ್ಯವಾಗಿ ಆರು ಪ್ರಕಾರದ ಶಾಸ್ತ್ರೀಯ ನೃತ್ಯಗಳಿವೆ.ಅವುಗಳಲ್ಲಿ ಯಾವುವೆಂದರೆ

ಭರತನಾಟ್ಯ, ಕಥಕಳಿ, ಮಣಿಪುರಿ, ಕಥಕ್, ಕೂಚುಪುಡಿ ಮತ್ತು ಒಡಿಸ್ಸಿ

1.   ಭರತನಾಟ್ಯವು ದಕ್ಷಿಣ ಭಾರತದಲ್ಲಿ ಉಗಮವಾಯಿತು. ಮೊಟ್ಟಮೊದಲಿಗೆ ತಾಂಜಾವೂರು ಪ್ರಾಂತ್ಯದಲ್ಲಿ ಪ್ರಾರಂಭವಾಯಿತು. ನಂತರ ಕೇರಳ, ಕರ್ನಾಟಕ, ಆಂಧ್ರಪ್ರದೇಶಗಳಲ್ಲಿ ಪ್ರಚಲಿತಗೊಂಡಿತು.

2.    ಕಥಕಳಿಯು ಕೇರಳದಲ್ಲಿ ಜನ್ಮತಾಳಿತು. ಇದರಲ್ಲಿ ಕಥಾರೂಪದ ಅಭಿನಯವೇ ಪ್ರಧಾನ ವಸ್ತು. ಇದು ಯಕ್ಷಗಾನದಿಂದ ಪ್ರೇರಿತವಾದ ನೃತ್ಯವೆಂದು        ಪರಿಗಣಿಸಲ್ಪಟ್ಟಿದೆ.

3.   ಮಣಿಪುರಿ ನೃತ್ಯವು ಪೂರ್ವ ಅಸ್ಸಾಂ ಭಾಗದ ಮಣಿಪುರಿ ಎಂಬಲ್ಲಿ ಉದಯವಾಯಿತು. ಇದು ಭಗವಂತನ ಲೀಲಾ ವಿನೋದಗಳನ್ನು ನರ್ತಿಸುವುದರಲ್ಲಿ        ಖ್ಯಾತಿಗೊಂಡಿದೆ.

4.    ಕಥಕ್‌ನೃತ್ಯ ಪ್ರಕಾರವು ಉತ್ತರ ಹಿಂದೂ ಸ್ಥಾನದಲ್ಲಿ ಆವತರಿಸಿತು. ಇದೂ ಸಹ ದೇವಾನುದೇವತೆಗಳ ಲೀಲೆಗಳನ್ನು ಪ್ರತಿಬಿಂಬಿಸುವ ನೃತ್ಯ.

5.    ಕೂಚುಪುಡಿ ನೃತ್ಯವು ಆಂಧ್ರಪ್ರದೇಶದಲ್ಲಿ ಹುಟ್ಟಿತು. ಈ ನೃತ್ಯ ಪ್ರಕಾರಕ್ಕೂ ಭರತನಾಟ್ಯಕ್ಕೂ ಬಹಳ ಸೂಕ್ಷ್ಮವಾದ ಹೋಲಿಕೆಗಳಿವೆ.

6.   ಒಡಿಸ್ಸಿ ನೃತ್ಯವು ಒರಿಸ್ಸಾ ಪ್ರಾಂತ್ಯದಲ್ಲಿ ಆರಂಭವಾಯಿತು. ಪುರಿ ಮತ್ತು ಭುವನೇಶ್ವರಗಳಲ್ಲಿ ಈ ನೃತ್ಯದ ಕಲಾಕೇಂದ್ರಗಳಿವೆ.

ಆಯಾಯಾ ಪ್ರಾಂತ್ಯದಲ್ಲಿರುವ ದೇಗುಲಗಳಲ್ಲಿರುವ ಶಿಲ್ಪಕಲಾಕೃತಿಗಳು ಆಯಾಯಾ ಪ್ರಾಂತ್ಯದ ನಾಟ್ಯಭಂಗಿಗಳನ್ನು ಸಾದರ ಪಡಿಸುತ್ತದೆ.

ಸಂಸ್ಕೃತದ ಲಕ್ಷಣ ಗ್ರಂಥಗಳಲ್ಲೆಲ್ಲಾ ಅತ್ಯಂತ ಪ್ರಾಚೀನವಾದುದು ನಾಟ್ಯಶಾಸ್ತ್ರ ಇದರ ಕರ್ತ್ರು ಭರತಮುನಿ, ಭಾವ,ರಾಗ, ತಾಳಗಳ ಸಮ್ಮೇಳನದಿಂದ ಕೂಡಿರುವ ಈ ನಾಟ್ಯವು ಭ.ರ.ತ ಎಂಬ ಮೂರು ಅಕ್ಷರಗಳಿಂದ ಕೂಡಿ ವಿಶೇಷವೆನಿಸಿದೆ. ನೃತ್ಯದಲ್ಲಿ ರಸಭಾವಗಳು ಸಂಗೀತದ ಸ್ವರರಾಗಗಳು ಜತಿಗತಿಗಳಿಂದ ಕೂಡಿದತಾಳ ವಿಶೇಷಗಳು. ಮೈಳೈಸಿದಾಗ ಮತ್ತು ಹಸನಾದ ಸಾಹಿತ್ಯವೂ ಕೂಡಿಕೊಂಡಾಗ ನೃತ್ಯವು ಪರಿಪೂರ್ಣವಾಗುತ್ತದೆ. ಸಾಕ್ಷಾತ್ ಪರಮಶಿವ ಮತ್ತು ಪಾರ್ವತಿ ದೇವಿಯು ತಾಂಡವ ಮತ್ತು ಲಾಸ್ಯ ನೃತ್ಯವಾಡಲು, ತುಂಬುರು ನಾರದರು ಹಾಡಿದರು. ನಂದಿಯು ಚೆಂದದಿ ಮದ್ದಲೆ ಹಾಕಿದನು ಎಂದು ಪುರಾಣ ಕಾಲದಿಂದಲೂ ತಿಳಿದು ಬಂದಿರುವ ಸಂಗತಿ.

ಭರತಮುನಿಯಿಂದ ಈ ನಾಟ್ಯವು ಪ್ರಚಲಿತವಾದುದರಿಂದ ಈ ನಾಟ್ಯಕ್ಕೆ ಭರತನಾಟ್ಯವೆಂದು ಕರೆದಿರುವುದು ಅನ್ವರ್ಥನಾಮವಾಗಿದೆ. ನಾಟ್ಯ ಶಾಸ್ತ್ರವನ್ನು ಪಂಚಮವೇದಕ್ಕೆ ಅಪಾರವಾದ ಮನ್ನಣೆ ಹಾಗೂ ಶ್ರೇಷ್ಠತೆ ದೊರಕಿದೆ. ಭಗವಂತನ ರೂಪುರೇಷೆಗಳನ್ನು ಸ್ವತಃ ಅನುಭವಿಸಿ ಅಭಿನಯಿಸುವಾಗ ತಾದತ್ಮ್ಯಭಾವ, ತಲ್ಲೀನತೆ ಉಂಟಾಗಿ ಭಗವಂತನನ್ನು ಅತ್ಯಂತ ಸುಲಭವಾಗಿ ಹೊಂದುವ ವಿಶಿಷ್ಟ ಮಾರ್ಗ ಇದಾಗಿದೆ. ಹರಿದಾಸರುಗಳಂತೆಯೇ ಭಕ್ತಪಥದಲ್ಲಿ ಸಾಗಲು ಸುಲಭೋಪಾಯವೂ ಹೌದು. ಇಂತಹ ಅದ್ಭುತವಾದ ನಾಟ್ಯ ಶಾಸ್ತ್ರದಲ್ಲಿ ಅನೇಕ ದಿಗ್ಗಜಗಳಂತಿರುವ ವಾಗ್ಗೇಯಕಾರರು ಮೂಡಿ ಬಂದಿದ್ದಾರೆ. ಹಿಂದೆಯೇ ತಿಳಿಸಿರುವಂತೆ ಭರತನಾಟ್ಯವು ದಕ್ಷಿಣಭಾರತದಲ್ಲಿ ಪ್ರಚಲಿತವಿದ್ದು, ತಮಿಳುನಾಡು ಮತ್ತು ಕರ್ನಾಟಕದಲ್ಲಿ ಪ್ರಮುಖ ನಾಟ್ಯವಾಗಿದೆ.

ತಮಿಳುನಾಡಿನಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಉತ್ತಮ ವಾಗ್ಗೇಯಕಾರರು ಕಂಡು ಬರುತ್ತಾರೆ. ವಾಕ್‌ಮತ್ತು ಗೇಯಕಾರರನ್ನು ವಾಗ್ಗೇಯಕಾರರೆಂದು ಕರೆಯುತ್ತೇವೆ. ಅಂತೆಯೇ ಶ್ರಾವ್ಯ ಮತ್ತು ದೃಶ್ಯ ಇವುಗಳ ರಚನಾಕಾರರನ್ನು ವಾಗ್ಗೇಯಕಾರರೆಂದು ಕರೆಯುತ್ತೇವೆ. ಮನೋಜ್ಞವಾದ ಸಾಹಿತ್ಯ, ಕರ್ಣಾನಂದಕರವಾದ ಶಾಸ್ತ್ರೀಯವಾದ ಸಂಗೀತ ಮತ್ತು ನಯನ ಮನೋಹರವಾದ ನಾಟ್ಯಶಾಸ್ತ್ರದ ಚೌಕಟ್ಟಿನಲ್ಲಿಯೇ ಬರುವ ನಾಟ್ಯ ಇವುಗಳ ರಚನಾಕಾರರನ್ನು ಉತ್ತಮ ವಾಗ್ಗೇಯಕಾರರು ಎಂದು ಗುರುತಿಸುತ್ತಾರೆ. ಭರತ ನಾಟ್ಯವು ಮೊದಲಿಗೆ ತಮಿಳು ನಾಡಿನಲ್ಲಿ ಉಗಮವಾದುದರಿಂದ ಅನೇಕ ವಾಗ್ಗೇಯಕಾರರು ತಮಿಳು ಭಾಷಾಮೂಲದವರಾಗಿದ್ದು, ಅವರು ಅವರ ಮಾತೃಭಾಷೆಯಾದ ತಮಿಳಿನಲ್ಲಿ ಅನೇಕ ನೃತ್ಯಬಂಧಗಳನ್ನು ರಚಿಸಿದ್ದಾರೆ.

ಭರತನಾಟ್ಯದಲ್ಲಿ ಅಡವುಗಳು, ಪುಷ್ಪಾಂಜಲಿ, ಕೌತುವಂಅಲರಿಪು, ಜತಿಸ್ವರಂ, ಶಬ್ಧಂ, ದರು, ವರ್ಣರಂ, ಪದಂ, ಜಾವಳಿ ಚೂರ್ಣಿಕೆ, ಶೋಕ್ಲ, ದೇವರನಾಮ, ಅಷ್ಟಪದಿ, ತಿಲ್ಲಾನ ಹೀಗೆ ಅನೇಕ ನೃತ್ಯ ಬಂಧಗಳಿವೆ. ಮೊದಲ ನಾಲ್ಕು ಬಂಧಗಳು ಪ್ರಾರಂಭಿಕ ಬಂಧಗಳು.

ನಂತರದಲ್ಲಿ ಬರುವ ಜತಿಸ್ವರ ಎಂಬ ಬಂಧವನ್ನು ರಚಿಸಿದವರಲ್ಲಿ ಶ್ರೀಮುತ್ತುಸ್ವಾಮಿ ದೀಕ್ಷಿತರ ಶಿಷ್ಯರಾಗಿದ್ದ, ತಂಜಾವೂರು ಸಹೋದರರೆಂದೇ ಖ್ಯಾತರಾದ ಚಿನ್ನಯ್ಯ, ಪೊನ್ನಯ್ಯ ವೇಡಿವೇಲು ಮತ್ತು ಶಿವಾನಂದಂ ಎಂಬುವರು ಮತ್ತು ಸ್ವಾತಿ ತಿರುನಾಳ್‌ಮಹಾರಾಜ ಇವರುಗಳು ಪ್ರಮುಖರು. ಜತಿಸ್ವರದಲ್ಲಿ ಸ್ವರ ಮತ್ತು ಜತಿಗಳ ಜೋಡಣೆಯಿದ್ದು, ಇದರಲ್ಲಿ ಸಾಹಿತ್ಯವಿಲ್ಲದೆ ಇರುವುದರಿಂದ ಇದರಲ್ಲಿ ಭಾಷೆಯ ಅಗತ್ಯ ಇರುವುದಿಲ್ಲ. ಮೇಲೆ ಹೇಳಿರುವಂತೆ ತಂಜಾವೂರು ಸಹೋದರರ ಅನೇಕ ರಚನೆಗಳಲ್ಲಿ ತಮ್ಮ ಪ್ರತ್ಯೇಕವಾದ ನಾಮಧೇಯಗಳನ್ನು ಬರೆಯದೆ ತಂಜಾವೂರು ಸಹೋದರರು ಎಂದೇ ಗುರುತಿಸಿಕೊಂಡಿರುವುದು, ಅವರ ಊರಿನ ಅಭಿಮಾನ ಮತ್ತು ಭಾತೃಪ್ರೇಮ ಎದ್ದು ಕಾಣುತ್ತದೆ. ಇವರ ರಚನೆಗಳು ತುಂಬಾ ಸೊಗಸಾಗಿದ್ದು, ಅಂದಿನಿಂದ ಇಂದಿನವರೆಗೂ ನಿತ್ಯ ನೂತನವಾಗಿ ಕಂಡು ಬರುತ್ತದೆ. ಇವರು ರಾಗಮಾಲಿಕೆಯಲ್ಲೂ ಜತಿಸ್ವರಗಳನ್ನು ರಚಿಸಿದ್ದಾರೆ. ಶ್ರೀ ಶಿವಾನಂದಂ ಎಂಬುವರು ಉತ್ತಮ ವೀಣಾವಾದಕರೂ ಆಗಿದ್ದರು.

ಮುಂದಿನ ನೃತ್ಯಬಂಧ ಶಬ್ದಂ, ಮೊಟ್ಟಮೊದಲಿಗೆ ಎಲ್ಲ ಶಬ್ದಂಗಳು ತೆಲುಗು ಭಾಷೆಯಲ್ಲಿ ಪ್ರಚಲಿತವಾಗಿದ್ದವು. ತಂಜಾವೂರಿನ ವೇಲವತ್ತೂರಿನ ವಾಗ್ಗೇಯಕಾರರು ತೆಲುಗು ಭಾಷೆಯಲ್ಲಿ ಅನೇಕ ಶಬ್ದಂಗಳನ್ನು ರಚಿಸಿದ್ದಾರೆ. ಇತ್ತೀಚೆಗೆ ಹಲವು ವಾಗ್ಗೇಯಕಾರರು ತಮಿಳಿನಲ್ಲೂ ರಚಿಸಿದ್ದಾರೆ. ಮೊದಲಿಗೆ ಶಬ್ದಂಗಗಳನ್ನು ಕಾಂಭೋಜಿ ರಾಗದಲ್ಲಿಯೇ ಹಾಡುವ ಪರಿಪಾಠವಿತು. ಇತ್ತೀಚೆಗೆ ಕಾಂಭೋಜಿಯಲ್ಲಿ ಪ್ರಾರಂಭಿಸಿ ನಂತರ ರಾಗಮಾಲಿಕೆಯಲ್ಲಿ ಹಾಡುವ ಪದ್ಧತಿ ರೂಢಿಯಲ್ಲಿದೆ. ಈ ನೃತ್ಯ ಬಂಧದಲ್ಲಿ ಕಥಾ ವಸ್ತುಗಳು, ಭಗವಂತನ ವರ್ಣನೆ ಮುಂತಾದವು ಅಡಕವಾಗಿರುತ್ತದೆ. ಕೆ. ಪೊನ್ನಯ್ಯಪಿಳ್ಳೈ ಎಂಬ ವಾಗ್ಗೇಯಕಾರರು ತೆಲುಗಿನಲ್ಲಿ ಅನೇಕ ಶಬ್ದಂಗಳನ್ನು ರಚಿಸಿದ್ದಾರೆ. ತಂಜಾವೂರಿನ ಚತುಷ್ಪಯ ವಾಗ್ಗೇಯಕಾರರು ನೃತ್ಯ ಸಂಗೀತಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ. ಅವರ ತಾತಂದಿರ ಕಾಲದಿಂದಲೂ ಕೈ ಬರಹದಲ್ಲಿಯೇ ಉಳಿದಿದ್ದ ಹಲವಾರು ನೃತ್ಯ ಬಂಧಗಳನ್ನು ಪುಸ್ತಕ ರೂಪದಲ್ಲಿ 1961ರಲ್ಲಿ ಹೊರತಂದಿದ್ದಾರೆ. ಇದರಿಂದ ಪ್ರಕಾಶಕ್ಕೆ ಬಾರದಿದ್ದ ಅನೇಕ ಕೃತಿಗಳನ್ನು ಪ್ರಸ್ತುತಪಡಿಸಿ, ನೃತ್ಯ ಪಟುಗಳಿಗೆ ನೃತ್ಯಾಭಿಲಾಷಿಗಳಿಗೆ, ನೃತ್ಯ ಗುರುಗಳಿಗೆ, ಪುರಾತನವೂ, ಶಾಶ್ವತವೂ, ಶಾಸ್ತ್ರ ಸಮ್ಮತವಾದ ಈ ನಾಟ್ಯ ಕಲೆಯನ್ನು ವಿಸ್ತಾರಗೊಳಿಸಿ ಮಹದುಪಕಾರ ಮಾಡಿದ್ದಾರೆ. ಈ ಪುಸ್ತಕದ ಹೆಸರು “ಪೊನ್ನಯ್ಯ ಮಣಿಮಾಲೈ” ಎಂದು ಈ ಪುಸ್ತಕದ ಬಗ್ಗೆ ಅನೇಕ ಹಿರಿಯ ಸಂಗೀತ ವಿದ್ವಾಂಸರುಗಳಾದ, ಶ್ರೀ ಅರಿಯ ಕುಡಿರಾಮಾನುಜ ಅಯ್ಯಂಗಾರ್, ಸಂಗೀತ ವಿದ್ಯಾಲಯದ ನಿರ್ದೇಶಕರಾದ ಶ್ರೀ ಪಿ.ಸಾಂಬಮೂರ್ತಿ ಗಾನಕಲಾಸೇವಕ, ಇಸೈಮನ್ನರ್, ಸಂಗೀತ ಕಲಾನಿಧಿ, ಸಂಗೀತಾವರ್ಣವ ಮುಂತಾದ ಬಿರುದುಗಳನ್ನು ಪಡೆದಿರುವ ಶ್ರೀ ಚಿತ್ತೂರು ಸುಬ್ರಮಣ್ಯಪಿಳೈ (ಇವರು ತಿರುಪತಿಯ S.N. College of Music and dance ಕಾಲೇಜಿನಲ್ಲಿ ಪ್ರಾಧ್ಯಾಪಕರು) ಮತ್ತು ವಿದುಷಿಯರಾದ ಇಸೈಮೇದೈ ವೀಣಾಧನಮ್ಮಾಳ್ ಅವರ ಮೊಮ್ಮಗಳಾದ ನಾಟ್ಯ ಮೇದ್ಯೆ ಟಿ. ಬಾಲಸರಸ್ವತಿ, ಶ್ರೀಯುತ ಮೀನಾಕ್ಷಿ ಸುಂದರಂ ಪಿಳ್ಳೈಯವರ ಶಿಷ್ಯೆಯಾದ ಪ್ರಸಿದ್ಧ ನೃತ್ಯಗಾರ್ತಿ ಮೃಣಾಲಿನಿ ಸಾರಾಭಾಯಿ ಇವರುಗಳು ಈ ಪುಸ್ತಕವನ್ನು ಮೆಚ್ಚಿ ಮುಕ್ತ ಕಂಠದಿಂದ ಹೊಗಳಿದ್ದಾರೆ. ಅಂದು ತಂಜಾವೂರು ಸಂಸ್ಥಾನವು ಸಂಗೀತ ವಾಗ್ಗೇಯಕಾರರಿಂದಲೂ ನೃತ್ಯ ಸಂಗೀತ ವಾಗ್ಗೇಯಕಾರರಿಂದಲೂ ತುಂಬಿ ವಿಜೃಂಭಿಸತ್ತಿತ್ತು.

ನೃತ್ಯ ಬಂಧುಗಳಲ್ಲಿ “ದರು” ಎಂಬುದೂ ಒಂದು ಬಂಧ, ಇದು ತೋರಿಕೆಗೆ ವರ್ಣದಂತೆ ಕಂಡರೂ ಅಲ್ಪಸ್ವಲ್ಪ ಭಿನ್ನವಾಗಿದೆ. ಈ ಬಂಧದಲ್ಲಿ ಕೃತಿಗಳು ಹೆಚ್ಚಾಗಿ ಕಂಡುಬರುವುದಿಲ್ಲ. ಪ್ರಚಲಿತದಲ್ಲಿರುವದರುಗಳೆಂದರೆ ಕಮಾಚ್‌ರಾಗ ಮತ್ತು ಆದಿತಾಳದಲ್ಲಿ ಶ್ರೀ ಮುತ್ತಯ್ಯ ಭಾಗವಂತರಿಂದ ರಚಿತವಾದ “ಮಾತೇ ಮಲಯಧ್ವಜ ಪಾಂಡ್ಯ ಸಂಜಾತೇ ಎಂಬುದು. ಈ ಕೃತಿಯು ಸೊಗಸಾಗಿದ್ದು, ಮೈಸೂರಿನ ದೇವತೆಯಾದ ಚಾಮುಂಡೇಶ್ವರಿ ಮಾತೆಯ ವರ್ಣನೆ ಹಾಗೂ ಮೈಸೂರು ಅರಸರಾಗಿದ್ದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರವರನ್ನು ಆಶ್ರಯದಾತಾ ಎಂದು ಸ್ಮರಿಸಿ ಅರಸರನ್ನು ಕಾಪಾಡಬೇಕೆಂಬ ಕೋರಿಕೆಯಿಂದ ಕೂಡಿದೆ. ಹಿಂದಿನ ಕಾಲದಲ್ಲಿ ಅರಸರನ್ನು ಪ್ರತ್ಯಕ್ಷ ದೇವರೆಂದೇ ಭಾವಿಸುತ್ತಿದ್ದರು. ಕಲಾಕಾರರಿಗೆ ರಾಜನ ಆಶ್ರಯವೇ ಜೀವನಮಾರ್ಗ. ಸರ್ವರಿಗೂ ಆಶ್ರಯದಾತನಾದ ಮಹಾರಾಜರನ್ನು ಆ ಮಹಾತಾಯಿಯು ಕಾಪಾಡಿದರೆ ಸಮಸ್ತ ಲೋಕವೂ ಕ್ಷೇಮವಾಗಿರಬಹುದೆಂಬ ನಂಬಿಕೆ ಅವರಲ್ಲಿತ್ತು.

ಮತ್ತೊಂದು ದರುವನ್ನು ಬಾಲಸ್ವಾಮಿ ದೀಕ್ಷಿತರು ರುದ್ರಪ್ರಿಯರಾಗ ಮತ್ತು ಆದಿತಾಳದಲ್ಲಿ ರಚಿಸಿದ್ದಾರೆ. ಇವರೂ ಸಹ ಪುದುಕೋಟೆ ಮಹಾರಾಜರಾದ ಯಟ್ಟೀಂದ್ರ ಮಹಾರಾಜರ ಗುಣಗಾನ ಮಾಡಿ ದಾನಶೂರ ಕರ್ಣನೆಂದು ಕರೆದಿದ್ದಾರೆ. ಬಾಲಸ್ವಾಮಿ ದೀಕ್ಷಿತರು ಯಟ್ಟ್ಯಾಪುರ ಎಂಬ ಊರಿನವರೆಂತಲೂ ಮುತ್ತುಸ್ವಾಮಿ ದೀಕ್ಷಿತರ ಸಹೋದರರೆಂದೂ ತಿಳಿದು ಬರುತ್ತದೆ.

ನೃತ್ಯ ಬಂಧಗಳಲ್ಲಿ ವರ್ಣವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ತಾನವರ್ಣ ಮತ್ತು ಪದವರ್ಣಗಳೆಂಬ ಎರಡು ಬಗೆಯ ವರ್ಣಗಳನ್ನು ಹಾಡುವುದು ರೂಢಿಯಲ್ಲಿದೆ. ತಾನವರ್ಣವನ್ನು ಸಂಗೀತಗಾರರೂ, ಪದವರ್ಣವನ್ನು ನೃತ್ಯಪಟುಗಳೂ ಸಾಮಾನ್ಯವಾಗಿ ಬಳಸುತ್ತಾರೆ. ಈ ಪದವರ್ಣಗಳನ್ನು ಅನೇಕ ನೃತ್ಯ ಸಂಗೀತ ವಾಗ್ಗೇಯಕಾರರು ತುಂಬಾ ಸುಂದರವಾಗಿ ರಚಿಸಿದ್ದಾರೆ. ಅವರಲ್ಲಿ ಮೈಸೂರಿನವರೇ ಆದ ವಿದ್ವಾನ್‌ಸಿ. ರಂಗಯ್ಯನವರು ಅಚ್ಚ ಕನ್ನಡದಲ್ಲಿ ಎರಡು ಪದವರ್ಣಗಳನ್ನು ರಚಿಸಿದ್ದಾರೆ. ಈ ಎರಡು ವರ್ಣಗಳೂ ಶ್ರೀಕೃಷ್ಣನನ್ನು ಕುರಿತಾದುದು. ಒಂದು ಮೋಹನರಾಗ, ಆದಿತಾಳದಲ್ಲಿ ಬಾರೋಬೇಗನೇ ಶ್ರೀಕೃಷ್ಣನೇ ಎಂದು ಇದರಲ್ಲಿ ಸೊಲ್ಲುಕಟ್ಟುಗಳನ್ನೂ ಸಹ ಬರೆದಿದ್ದಾರೆ. ಮತ್ತೊಂದು ಕೇದಾರಗೌಳರಾಗ ಆದಿತಾಳದಲ್ಲಿ ಮಂದರಗಿರಿಧರ ನೇತಕೆ ಬಾರನೆ ಎಂದು ಇದರಲ್ಲೂ ಸಹ ಸೊಲ್ಲುಕಟ್ಟುಗಳಿದ್ದು ನರ್ತಿಸಲು ಮುತ್ತು ಅಭಿನಯಿಸಲು ಒಳ್ಳೆಯ ಅವಕಾಶವಿರುತ್ತದೆ. ಶ್ರೀಯುತರು ಸಂಗೀತವಾಗ್ಗೇಯಕಾರರು. ಮೈಸೂರು ವಾಸುದೇವಾಚಾರ್ಯರ ಶಿಷ್ಯರು. ಇವರು 24 ಹೊಸರಾಗಗಳನ್ನು ಅವುಗಳಲ್ಲಿ ಕೃತಿರಚನೆ ಮಾಡಿ ಸಂಗೀತ ಸಾಮ್ರಾಜ್ಯವನ್ನು ವಿಸ್ತರಿಸಿದ್ದಾರೆ. ಇವರು ಗೇಯರೂಪಕಗಳಾದ ನರಸಿಂಹಾವತಾರ, ಧ್ರುವಚರಿತ್ರೆ, ದೈವರಕ್ಷಿತ ಚಂದ್ರಹಾಸ ಇವುಗಳನ್ನು ರಚಿಸಿದ್ದಾರೆ. ಇವು ನೃತ್ಯ ಮಾಡಲು, ನೃತ್ಯ ನಾಟಕವಾಡಲು, ನೃತ್ಯ ರೂಪಕ ಮಾಡಲು ತುಂಬಾ ಸುಂದರವಾಗಿದೆ. ಇವರು ರಚಿಸಿರುವ ಸಂಪೂರ್ಣ ರಾಮಾಯಣ ಕೃತಿ ಹಾಗೂ ನೃಸಿಂಹಾವತಾರ ನೃತ್ಯರೂಪಕಗಳನ್ನು ಹಲವಾರು ನೃತ್ಯಪಟುಗಳು ವೇದಿಕೆಯಲ್ಲಿ ನರ್ತಿಸಿ ಅಪಾರ ಜನಮೆಚ್ಚುಗೆ ಪಡೆದಿದ್ದಾರೆ. ಸಿ. ರಂಗಯ್ಯನವರು ನೃತ್ಯಪಟುಗಳಿಗಾಗಿಯೇ ಅನೇಕ ತಿಲ್ಲಾನ ಹಾಗೂ ದೇವರ ನಾಮಗಳನ್ನು ರಚಿಸಿದ್ದಾರೆ.

ಶ್ರೀಯುತರಾದ ಮೈಸೂರು ಸದಾಶಿವರಾಯರು, ರಾಮಸ್ವಾಮಿ ದೀಕ್ಷಿತರು ಶ್ಯಾಮಶಾಸ್ತ್ರಿಗಳು, ಸುಬ್ಬರಾಮದೀಕ್ಷಿತರು, ತಂಜಾವೂರು ಶಿವಾನಂದಂ ಮಹಾವೈದ್ಯನಾಥ ಶಿವನ್, ರಂಗಸ್ವಾಮಿ ನಟ್ಟುವನಾರ್, ಶೊಂಠಿ ವೆಂಕಟಸುಬ್ಬಯ್ಯ, ಪಾಪನಾಶಂಶಿವನ್, ದಂಡಾಯುಧ ಪಾಣಿಪಿಳ್ಳೈ ಮುಂತಾದವರು ಅನೇಕ ವರ್ಣಗಳನ್ನು ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ರಚಿಸಿದ್ದಾರೆ.

ಶ್ರೀ ದಂಡಾಯುಧ ಪಾಣಿಪಿಳ್ಳೈ ಎಂಬ ನೃತ್ಯ ಸಂಗೀತ ವಾಗ್ಗೇಯಕಾರರು 1974ರಲ್ಲಿ “ಆಡಲಿಸೈಲಿಮುದಂ” ಎಂಬ ನೃತ್ಯದ ನಾನಾ ಬಂಧಗಳನ್ನೊಳಗೊಂಡ ಪುಸ್ತಕವನ್ನು ಹೊರತಂದಿದ್ದಾರೆ. ಹಲವಾರು ಜತಿಸ್ವರಗಳು, ಪದವರ್ಣಗಳು, ಪದಂಗಳು, ತಿಲ್ಲಾನಗಳು ಸ್ವರಪ್ರಸ್ತಾರದೊಂದಿಗೆ ಹೃದಯಂಗಮವಾಗಿ ಮೂಡಿಬಂದಿದೆ. ಶ್ರೀಯುತರಿಂದ ರಚಿತವಾದ ನವರಾಗಮೂಲಿಕಾವರ್ಣವೂ ಅಮೋಘವಾಗಿದೆ. ಇದರಲ್ಲಿ ತೋಡಿಯಲ್ಲಿ ಸ್ವಾಮಿಯೈ ಅಳೈತ್ತೋಡಿವಾಸಖಿಯೆ ಎಂದು ಆರಂಭವಾಗಿ ಮೋಹನ, ವಸಂತ, ದೇವಮನೋಹರಿ, ಶಂಕರಾಭರಣ ಸಾರಂಗ, ಕಾನಡ, ಆರಭಿ, ಭೈರವಿ ರಾಗಗಳಲ್ಲಿ ಮುಂದುವರೆದು ರಾಗಗಳ ಹೆಸರೂ ಸಹ ಸಾಹಿತ್ಯಕ್ಕೆ ಹೊಂದಿಕೊಂಡು ಸುಮಧುರವಾದ ಭಾವನೆಯನ್ನು ಹೊರಹೊಮ್ಮಿಸುವಂತಿದೆ.

ನಾಟ್ಯ ಕಲಾಚಕ್ರವರ್ತಿ ಪದ್ಮಶ್ರೀ ದಂಡಾಯುಧ ಪಾಣಿಪಿಳ್ಳೈಯವರನ್ನು, ಸಂಗೀತ ದಿಗ್ಗಜಗಳೆನಿಸಿದ ಶ್ರೀಮುಸರಿಸುಬ್ರಮಣ್ಯ ಅಯ್ಯರ್, ಚಿತ್ರಾ ಸುಬ್ರಹ್ಮಣ್ಯ ಪಿಳೈ, ಶ್ರೀ ಕುತ್ತಾಲಂ, ಎಸ್‌.ಗಣೇಶಂ ಪಿಳ್ನೈ ಮುಂತಾದವರು ಮುಕ್ತಕಂಠದಿಂದ ಶ್ಲಾಘಿಸಿ ನೃತ್ಯ ಸಾಮ್ರಾಜ್ಯಕ್ಕೆ ಇವರು ಕೊಟ್ಟಿರುವ ಕೊಡುಗೆಗಾಗಿ ಧನ್ಯತೆಯನ್ನು ಸೂಚಿಸಿದ್ದಾರೆ. ನಿಜಕ್ಕೂ ನೃತ್ಯ ಪಟುಗಳೆಲ್ಲರೂ ಇಂತಹ ವಾಗ್ಗೇಯಕಾರರಿಗೆ ಚಿರಋಣಿಗಳಾಗಿರಬೇಕಾದು ಅತ್ಯವಶ್ಯಕ. ಮೈಸೂರಿನ ಲಕ್ಷ್ಮೀಪತಿ ಭಾಗವತರು ಐವತ್ತಕ್ಕೂ ಹೆಚ್ಚು ಕೃತಿಗಳನ್ನೂ ಪದವರ್ಣಗಳನ್ನೂ ತಿಲ್ಣಾಗಳನ್ನೂ ರಚಿಸಿದ್ದಾರೆ. ಅದರಲ್ಲಿ ಮುಖ್ಯವಾಗಿ ತೋಡಿರಾಗದ ಪದವರ್ಣ ಬಾರೇಸಖಿ ಕರೆದು ತಾರೆ, ನೃತ್ಯ ಕಾರ್ಯಕ್ರಮಗಳಲ್ಲಿ ಮೂಡಿಬಂದಿದೆ.

ಪದಂಗಳನ್ನು ಸಾಮಾನ್ಯವಾಗಿ ಮೂರು ವಿಧಗಳಾಗಿ ವಿಂಗಡಿಸಬಹುದು. ಶೃಂಗಾರಪೂರಿತವಾದವು, ಭಕ್ತಿ ಪೂರಿತವಾದವು ಮತ್ತು ವರ್ಣನಾರೂಪವಾದವು. ಕ್ಷೇತ್ರಜ್ಞನ ಪದಗಳಲ್ಲಿ ಸಾಮಾನ್ಯವಾಗಿ ಶೃಂಗಾರಸವನ್ನೇ ಪ್ರಧಾನವಾಗಿ ಕಾಣಬಹುದು. ಮುವ್ವ ಗೋಪಾಲ ಎಂಬ ಅಂಕಿತದಿಂದ ಅನೇಕ ಪದಗಳನ್ನು ರಚಿಸಿದ್ದಾರೆ. ಕಾಲಿಗೆ ಗೆಜ್ಜೆ ಕಟ್ಟಿ ಗೋಪಕನ್ನಿಕೆಯರೊಡನೆ ನರ್ತಿಸಿ, ವಿಹರಿಸಿ ವಿರಾಜಿಸಿದ ಸುಮಧುರ ಸನ್ನಿವೇಶಗಳನ್ನು ಬಹಳ ಚೆನ್ನಾಗಿ ಪ್ರತಿಬಿಂಬಿಸಿದ್ದಾರೆ. ಅಂತೆಯೇ ಶೃಂಗಾರಪದಗಳ ರಚನೆಯಲ್ಲಿ ಶ್ರೀಯುತರಾದ ಮುವ್ವಲೂರು ಸಭಾಪತಿ ಅಯ್ಯರ್, ಸುಬ್ಬರಾಮಯ್ಯರ್ ಮುಂತಾದವರು ಪ್ರಸಿದ್ಧರು.

ಭಕ್ತಿಪ್ರಧಾನವಾದ ಪದಗಳು ಮತ್ತು ವರ್ಣನಾ ರೂಪವಾದ ಪದಗಳಲ್ಲಿ ಶ್ರೀಯುತರಾದ ಕವಿಕುಂಜರಭಾರತಿ, ಘನಂಕೃಷ್ಣಅಯ್ಯರ್, ಅರುಣಾಚಲ ಕವಿರಾಯರ್, ಪಾಪನಾಶಂಶಿವನ್‌, ಗೋಪಾಲಕೃಷ್ಣಭಾರತಿ, ಮಾರಿಮುತ್ತು ಪಿಳ್ಳೈ, ಅಂಬುಜಕೃಷ್ಣ,ನೀಲಕಂಠನ್ ಶಿವನ್, ರಾಮಲಿಂಗಸ್ವಾಮಿ, ಕೋಟೇಶ್ವರ ಅಯ್ಯರ್, ದುರೈಸ್ವಾಮಿ ಕವಿರಾಯ್, ತಿರುವಳ್ಳವರ್, ಪಂಚನಾಥ ಅಯ್ಯರ್, ತಂಜಾವೂರು ಶಂಕರ ಅಯ್ಯರ್, ಶ್ರದ್ಧಾನಂದ ಭಾರತಿಯಾರ್, ಪಾಪವಿನಾಶ ಮೊದಲಿಯಾರ, ತಿರುವಾರೂರು ರಾಮಸ್ವಾಮಿ ಪಿಳ್ಳೈನ ಮುಂತಾದ ಮಹನೀಯರು ಅತ್ಯುತ್ತಮ ಪದಗಳನ್ನು ರಚಿಸಿದ್ದಾರೆ.

ನೃತ್ಯಬಂಧುಗಳಲ್ಲಿ ಜಾವಳಿಯೂ ಸಹ ಮುಖ್ಯಪಾತ್ರವನ್ನು ವಹಿಸುತ್ತದೆ. ಜಾವಳಿಗಳಲ್ಲಿ ಶೃಂಗಾರವೇ ಪ್ರಧಾನ. ಜಾವಳಿಗಳು ಕರ್ನಾಟಕದಲ್ಲಿ ಸಂಗೀತ ಮತ್ತು ನೃತ್ಯ ಕ್ಷೇತ್ರಗಳಲ್ಲಿ ಸುಂದರವಾದ ರಚನೆಗಳಲ್ಲಿ ಮೂಡಿ ಬಂದಿದೆ. ಜಾವಳಿಗಳ ವಿಷಯದಲ್ಲಿ “ಮೈಸೂರು” ಅಗ್ರಸ್ಥಾನಪಡೆದಿದೆ. ಮೈಸೂರು ಸಂಸ್ಥಾನವನ್ನು ಆಳಿದ ಅರಸರಲ್ಲಿ ಅನೇಕರು ಸ್ವತಃ ವಾಗ್ಗೇಯಕಾರರು, ಇನ್ನು ಕೆಲವರು ಕಲಾ ಆರಾಧಕರೂ ಮತ್ತೂ ಕೆಲವರು ಕಲಾಪೋಷಕರೂ ಆಗಿ ನಾಡಿನ ಮತ್ತು ಹೊರನಾಡಿನ ಕಲಾವಿದರಿಗೆ ಆಶ್ರಯದಾತರಾಗಿ ಸಾಂಸ್ಕೃತಿಕ ಪರಂಪರೆಯನ್ನು ಪೋಷಿಸಿ, ಪ್ರೋತ್ಸಾಹಿಸಿ, ಉಳಿಸಿ, ಬೆಳೆಸಿ, ಕಲಾ ಪ್ರಚಾರಕರಾಗಿ ಮೆರೆದಿದ್ದಾರೆ. ಈ ನಿಟ್ಟಿನಲ್ಲಿ ಜಾವಳಿ ಎಂಬ ಪ್ರಕಾರಕ್ಕೆ ಒತ್ತು ನೀಡಿದವರು “ಮುಮ್ಮಡಿಕೃಷ್ಣರಾಜ ಒಡೆಯರ್ ಅವರು. ಇವರು ತಮ್ಮ ಆರಾಧ್ಯ ದೈವರಾದ ಚಾಮುಂಡಾಬಾ ಎಂಬ ಅಂಕಿತದಲ್ಲಿ ಶೃಂಗಾರ ಮತ್ತು ವೈರಾಗ್ಯ ಭಾವದ ಜಾವಳಿಗಳನ್ನು ರಚಿಸಿದ್ದಾರೆ. ಜಾವಳಿ ಪ್ರಿಯರಾದ ಚಾಮರಾಜ ಒಡೆಯರವರ ಕಾಲವು ಜಾವಳಿಗಳಿಗೆ ಪರ್ವಕಾಲವೆನಿಸಿತು.

ಜಾವಳಿಗಳ ರಚನೆಯಲ್ಲಿ ಶ್ರೀಯುತರಾದ ಸಂಗೀತ ವೆಂಕಟನಾರಾಯಣ, ವೆಂಕಟರಮಣಶಾಸ್ತ್ರಿ, ಬೆಂಗಳೂರು ನಾಗರತ್ನಮ್ಮ ಇವರುಗಳು ಕನ್ನಡ ಭಾಷೆಯಲ್ಲಿಯೂ, ಶ್ರೀಯುತರಾದ ಧರ್ಮಪುರಿಸುಬ್ಬರಾಯರು, ವೆಂಕಟರಮಣಯ್ಯ, ಪಟ್ಟಾಭಿರಾಮಯ್ಯ, ಪಟ್ನಂಸುಬ್ರಹ್ಮಣ್ಯ ಅಯ್ಯರ್, ತಂಜಾವೂರು ಚಿನ್ನಯ್ಯ ಇವರೆಲ್ಲರೂ ತೆಲುಗು ಭಾಷೆಯಲ್ಲಿಯೂ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ.

ನೃತ್ಯಬಂಧಗಳಲ್ಲಿ ಚೂರ್ಣಿಕೆಯೂ ಸಹ ಒಂದು ಪ್ರಕಾರ ಹಿಂದಿನ ಕಾಲದಲ್ಲಿ ರಾಜಾಶ್ರಯದಲ್ಲಿ ಜೀವನ ಸಾಗಿಸುತ್ತಿದ್ದ ನೃತ್ಯ, ಸಂಗೀತವಾಗ್ಗೇಯಕಾರರು ರಾಜನೇ ದೇವರ ಪ್ರತೀಕವೆಂಬ ನಂಬಿಕೆಯಿಂದ ಆಶ್ರಯದಾತರಾದ ರಾಜರ ಗುಣಗಾನಗಳನ್ನು ಪ್ರಾಸಬದ್ಧವಾದ ಚೂರ್ಣಿಕೆಗಳ ಮೂಲಕ ಹಾಡಿ ಹೊಗಳಿ ನರ್ತಿಸುತ್ತಿದ್ದರು. ಹೀಗಾಗಿ ಆಯಾ ದೇಶದ ರಾಜರುಗಳು ವಂಶಪಾರಂಪರ್ಯ ಗುಣಾತಿಶಯಗಳು ಚೂರ್ಣಿಕೆಯಲ್ಲಿ ಕಂಡು ಬರುತ್ತದೆ. ಭಗವಂತನನ್ನು ಕುರಿತಾದ ಚೂರ್ಣಿಕೆಗಳೂ ವಾಗ್ಗೇಯಕಾರರಿಂದ ರಚಿಸಲ್ಪಟ್ಟಿದೆ.

ಮೈಸೂರು ಅರಸರಾದ ಕೃಷ್ಣದೇವರಾಯರನ್ನು ಕುರಿತಾದ ಚೂರ್ಣಿಕೆ

ಅಖಂಡ ಕರ್ನಾಟಕ ಸಾಮ್ರಾಜ್ಯ ಸಾರ್ವಭೌಮ

ಪ್ರಣತ ನರಪತಿಃ ಶತಮುಕುಟ ಕಟ ಘಟಿತ ಮಣಿಪಟಲಃ
ಇದೇ ರೀತಿಯಾಗಿ ಅನೇಕ ಚೂರ್ಣಿಕೆಗಳು ಪ್ರಚಾರದಲ್ಲಿವೆ.

ಶ್ಲೋಕಗಳು ಭಗವಂತನನ್ನು ಸ್ತುತಿಸುವಸ್ತುಗಳು ಎಲ್ಲಾ ಭಾಷೆಗಳಲ್ಲಿಯೂ ಲಭ್ಯವಿರುವ ಕೃತಿಗಳು. ಈ ಶ್ಲೋಕಗಳಿಗೆ ಸಾಮಾನ್ಯವಾಗಿ ಕಟ್ಟುನಿಟ್ಟಾಗಿ ತಾಳದ ನಿಬಂಧನೆಗಳಿರುವುದಿಲ್ಲ. ಆಯಾ ಸನ್ನಿವೇಶಕ್ಕೆ ತಕ್ಕಂತೆ ರಾಗಸಂಯೋಜನೆ ಮಾಡಿ ನೃತ್ಯಪಟುಗಳ ಅಭಿನಯ ಸಾಮರ್ಥ್ಯದಿಂದ ವರ್ತಿಸಬಹುದಾಗಿದೆ. ಇನ್ನು ಶ್ಲೋಕಗಳ ರಚನಾಕಾರರ ಬಗ್ಗೆ ಹೇಳುವುದು ಅಶಕ್ಯ. ಎಷ್ಟೋ ಮಂದಿ ಮಹನೀಯರುಗಳು ವಾಗ್ಗೇಯಕಾರರು ಇದ್ದಾರೆ. ಶ್ರೀ ತ್ಯಾಗರಾಜ ಸ್ವಾಮಿಗಳು ಹೇಳಿರುವಂತೆ ” ಎಂದರೋ ಮಹಾನುಭಾವುಲು ಅಂದರಿಕಿ ವಂದನಮು” ಎಂದು ಅಂಜಲಿ ಬದ್ಧರಾಗಿ ಹೇಳಬಹುದಷ್ಟೆ.

ದೇವರ ನಾಮಗಳು ಪುರಾತನ ಕಾಲದಿಂದಲೂ ಪ್ರಚಲಿತವಾಗಿರುವ ಕೃತಿಗಳು. ಇದನ್ನು ಸಂಗೀತವನ್ನು ಶಾಸ್ತ್ರೋತ್ತವಾಗಿ ಕಲಿಯದೆ ಇದ್ದವರೂ ಸಹ ಬಹಳ ಸುಶ್ರಾವ್ಯವಾಗಿ ಹಾಡುವ ರೂಢಿ ಮೂಲದಿಂದಲೂ ಬಂದಿದೆ. ಇದು ಪರಮಾತ್ಮನ ಗುಣಾತಿಶಯಗಳು, ಭಕ್ತಿ, ವಾತ್ಸಲ್ಯ, ಪ್ರೀತಿ, ಮೋಹ, ನಿಂದೆ ಇವೆಲ್ಲವುಗಳಿಂದ ಕೂಡಿದೆ.

ಎಲ್ಲಾ ಭಾಷೆಗಳಲ್ಲಿಯೂ ದೊರಕುತ್ತದೆ. ಕನ್ನಡದಲ್ಲಿ ಶ್ರೀಪುರಂದರದಾಸರು, ಶ್ರೀ ಕನಕದಾಸರು, ಶ್ರೀ ವಿಜಯವಿಠ್ಠಲದಾಸರು, ಶ್ರೀ ಜಗನ್ನಾಥದಾಸರು, ಶ್ರೀ ರಾಘವೇಂದ್ರಸ್ವಾಮಿಗಳು ಹೀಗೆ ಅನೇಕ ದಾಸರು ಭಕ್ತಿಭಾವ, ತತ್ವ, ವೈರಾಗ್ಯ ಮುಕ್ತಿ ಇವೆಲ್ಲವುಗಳನ್ನು ಸಾರುವ ಸಾವಿರಾರು ಕೃತಿಗಳನ್ನು ರಚಿಸಿ ಮಾನವಕೋಟಿಗೆ ಸನ್ಮಾರ್ಗವನ್ನು ಭೋಧಿಸಿದ್ದಾರೆ. ನೃತ್ಯಪಟುಗಳು ಅಭಿನಯಕ್ಕೆ ಹೇರಳವಾದ ಅವಕಾಶವಿರುವಂತಹ ದೇವರ ನಾಮಗಳನ್ನು ಆರಿಸಿಕೊಂಡು ಅವುಗಳಿಗೆ ಸಂಚಾರಿ ಭಾವಗಳನ್ನು ಅಳವಡಿಸಿಕೊಂಡು ಪುರಾಣದಲ್ಲಿ ಬರುವ ಸನ್ನಿವೇಶಗಳನ್ನು ಕಣ್ಣುಮುಂದೆ ನಿಲ್ಲುವಂತೆ ನರ್ತಿಸಬಹುದಾಗಿದೆ. ಉದಾಃ ಕೃಷ್ಣಾನೀ ಬೇಗನೇ ಬಾರೊ ಎಂಬ ಪುರಂದರದಾಸರ ದೇವರ ನಾಮದಲ್ಲಿ ಬಾಲಕೃಷ್ಣನ ಲೀಲೆಗಳನ್ನು ಅದ್ಭುತವಾಗಿ ಕಾಣಬಹುದಾಗಿದೆ.

ಕನಕದಾಸರು ರಚಿಸಿರುವ ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ ಎಂಬ ದೇವರ ನಾಮದಲ್ಲಿ, ಭಕ್ತನಾದ ಕನಕನ ಆರ್ತನಾದ ಕೇಳಿ ಬರುತ್ತದೆ. ಮತ್ತೊಂದು ಪುರಂದರದಾಸರ ಕೃತಿ “ಆರು ಬದುಕಿದರಯ್ಯ ಹರಿ ನಿನ್ನ ನಂಬಿ”ಯಲ್ಲಿ ಹರಿಯ ನಿಂದಾಸ್ತುತಿ ಮಾಡಿದ್ದಾರೆ.

ಹೀಗೆ ಹೇಗೆ ಬಳಸಿಬಂದರೂ ಭಕ್ತಿಪಥದಲ್ಲಿ ಒಯ್ಯುವ ದೇವರನಾಮಗಳು ಅತ್ಯಮೂಲ್ಯವಾಗಿ ಇಂದಿಗೂ ಎಂದೆಂದಿಗೂ ಕೇಳಿದಷ್ಟೂ ಕೇಳಬೇಕೆಂಬಾಸೆ ನೋಡಿದಷ್ಟೂ ನೋಡಬೇಕೆಂಬಾಸೆಯನ್ನು ಉಂಟು ಮಾಡುವ ವಾಗ್ಗೇಯಕಾರರ ರಚನೆಗಳು ಚಮತ್ಕಾರ ಮಾಡುತ್ತವೆ ಅಲ್ಲವೆ?

ಹಿಂದೆ ನಾಟ್ಯಮಾಡಲು ನೃತ್ಯ ಸಂಗೀತವೇ ಆಧಾರವಾಗಿದ್ದೀತು. ಅಂದರೆ ನೃತ್ಯಕ್ಕೆಂದೇ ರಚಿಸಿದ ನೃತ್ಯ ಸಂಗೀತ ಪ್ರಕಾರಗಳಿಗೆ ಮಾತ್ರ ನರ್ತಿಸುತ್ತಿದ್ದರು. ಇತ್ತೀಚೆಗೆ ಎಲ್ಲ ಕೃತಿಗಳಿಗೂ ನರ್ತನ ಮಾಡುವ ಪರಿಪಾಠ ಕಂಡು ಬರುತ್ತಿದೆ. ಅಂದರೆ ಸಂಗೀತ ವಾಗ್ಗೇಯಕಾರರೂ ನೃತ್ಯ ಸಂಗೀತ ವಾಗ್ಗೇಯಕಾರರಾಗಿ ಕಂಡು ಬರುತ್ತಿದ್ದಾರೆ.

ಜಯದೇವ ಕವಿಯ ಅಷ್ಟಪದಿಗಳು ಶೃಂಗಾರ ರಸಭರಿತವಾದ ಕೃತಿಗಳು ಹೆಸರಿಗೆ ತಕ್ಕಂತೆ ಒಂದೊಂದು ಕೃತಿಯಲ್ಲಿಯೂ ಎಂಟು ಚರಣಗಳಿರುತ್ತದೆ. ರಾಧಾ ಮಾಧವರ ಸರಸ ಸಲ್ಲಾಪಗಳು, ಶೃಂಗಾರ ಭಾವಗಳನ್ನು ಸಾದರಪಡಿಸುವ, ಮೋಹಕವಾದ ಸಂಸ್ಕೃತ ಕಾವ್ಯ, ಶ್ರೀ ಜಯದೇವಕವಿಯು ಆತ್ಮಪರಮಾತ್ಮರ ಸಂಯೋಗವನ್ನು ರಾಧಾ ಮಾಧವರ ಪ್ರಣಯ ಪ್ರಸಂಗವೆಂಬಂತೆ ಚಿತ್ರಿಸಿ, ತಾವೇ ರಾಧಾ ಮಾಧವರಾಗಿ ಹಾಡಿ ನರ್ತಿಸಿ ಬರೆದಿರಬಹುದೇ ಎಂಬ ಸಂಶಯ ಮೂಡುವಂತಿದೆ. ಕವಿಯು ಪ್ರಕೃತಿಯ ವರ್ಣನೆ, ಪ್ರೇಮಾಲಾಪ, ವಿರಹ, ಭಕ್ತಿ, ಮುಗ್ಧತೆ, ನಿಷ್ಠುರತೆ ತಾದ್ಯಾತ್ಮತೆ ಹೀಗೆ ತಾರುಣ್ಯಾವಸ್ಥೆಯ ರೂಪುರೇಶೆಗಳನ್ನು ಕಣ್ಣಮುಂದೆ ತೆರೆದಿಟ್ಟಿದ್ದಾನೆ. ಬದುಕಿನ ಅತ್ಯಂತ ಸುಖಮಯವಾದ ಚಿತ್ರಣ ಇಲ್ಲಿ ಗೋಚರವಾಗುತ್ತದೆ.

ಭರತನಾಟ್ಯ ಕಾರ್ಯಕ್ರಮದಲ್ಲಿ ಮುಕ್ತಾಯವೆಂದರೆ ತಿಲ್ಲಾನ ಆದಿ ಇರುವಂತೆ ಅಂತ್ಯವೂ ಇರಬೇಕಲ್ಲವೇ? ಇದು ಅಂಗಾಂಗಗಳ ಚಲನೆ ಮತ್ತು ಲಯ ಪ್ರಧಾನವಾದ ಪ್ರಕಾರ. ಹೆಚ್ಚಿನ ಸಾಹಿತ್ಯವಿಲ್ಲದೆ ನೃತ್ಯಕ್ಕೆ ಹೆಚ್ಚು ಪ್ರಾಧಾನ್ಯತೆ ಇರುವ ನೃತ್ಯ. ಶ್ರೀಯುತರಾದ ಮಹಾವೈದ್ಯನಾಥ ಅಯ್ಯರ್, ರಾಮ್ನಾಡ್ ಶ್ರೀನಿವಾಸ ಅಯ್ಯಂಗಾರ್, ಪಟ್ನಂ ಸುಬ್ರಮಣ್ಯ ಅಯ್ಯರ್, ಮುತ್ತಯ್ಯ ಭಾಗವತರ್, ಪಲ್ಲವಿ ಶೇಷಯ್ಯರ್, ವೀಣೆಶೇಷಣ್ಣ, ಮೈಸೂರು ಸದಾಶಿವರಾಯರು, ಸ್ವಾತಿ ತಿರುನಾಳ ಮಹಾರಾಜ, ಮೈಸೂರು ವಾಸುದೇವಾಚಾರ್ಯ, ಸಿ.ರಂಗಯ್ಯ, ಬಿ.ಕೆ. ಪದ್ಮನಾಭರಾಯರು ಮುಂತಾದವರು ತಿಲ್ಲಾನಗಳನ್ನು ರಚಿಸಿದ್ದಾರೆ.

ಡಾ|| ಬಾಲಮುರುಳಿಕೃಷ್ಣ, ಲಾಲ್‌ಗುಡಿ ಜಯರಾಮನ್, ವಿ.ರಾಮರತ್ನಂ, ಟಿ.ದ್ವಾರಕಿ ಕೃಷ್ಣಸ್ವಾಮಿ, ಎನ್.ಪದ್ಮಾ, ಆರ್. ವಿಶ್ವೇಶ್ವರನ್ ಮುಂತಾದವರು ಕೂಡಾ ಹಲವಾರು ತಿಲ್ಲಾನಗಳನ್ನು ರಚಿಸಿ ನೃತ್ಯ ಸಂಗೀತ ಕ್ಷೇತ್ರವನ್ನು ಸಂಪದ್ಭರಿತವನ್ನಾಗಿಸಿದ್ದಾರೆ.

ಆಧಾರ ಗ್ರಂಥಗಳು

1.    ನೃತ್ಯಕಲೆ – ಯು. ಎಸ್‌. ಕೃಷ್ಣರಾವ ಆಕ್ಸ್ ಫರ್ಡ್‌- 1979

2.   ಪುನ್ನಯ್ಯ ಮಣಿಮಾಲೈ – ಮ.ಮು.ಅ. ಚೆನ್ನೈ – 1961

3.   ಇಸೈ ಅಮುದಂ – ದಂಡಾಯುಧಪಾಣಿಪಿಳೈ ತ.ಇ.ಸಂ – 1974

4.   ಗೀತಗೋವಿಂದ ಕೆ. ಬಾಲಕೃಷ್ಣ ಸಮಾಜ ಪುಸ್ತಕಾಲಯ – 1956

5.   ಕೀರ್ತನದರ್ಪಣ – ವಿ. ರಾಮರತ್ನಂ, ಮೈಸೂರು. ಧಾರವಾಡ ವಿಶ್ವವಿದ್ಯಾನಿಲಯ – 1976

6.   ನೃತ್ಯ ಸಂಗೀತ ದೀಪಿಕಾ – ಗೊರೂರು ಆರ್. ಶ್ರೀಮತಿ ಭಾರತಿ ಪ್ರಕಾಶನ – 2006

7.   ರಂಗಯ್ಯ ಕೃತಿ ಮಂಜರಿ – ಬಿ.ಜೆ. ರಂಗನಾಥ್, ಗೊರೂರು ಆರ್. ಶ್ರೀಮತಿ ಭಾರತಿ ಪ್ರಕಾಶನ – 2000.