ಶಿವನ ನಾಟ್ಯ ಶಿಲ್ಪಗಳು:

ನಾನಾ ವಿಧವಾದ ನೃತ್ಯ ಭಂಗಿಗಳಲ್ಲಿರುವ ದೇವತಾಮೂರ್ತಿಗಳ ಶಿಲ್ಪಗಳೆಂದರೆ ಶಿವ, ವಿಷ್ಣು, ಸರಸ್ವತಿ, ಲಕ್ಷ್ಮೀ, ಪಾರ್ವತಿ ಮತ್ತು ಗಣಪತಿ. ಅಲ್ಲದೆ ಅಪ್ಸರೆಯರು, ವಿದ್ಯಾಧರರು, ಗಂಧರ್ವರು, ಮದನಿಕಾ, ದ್ವಾರಪಾಲ ಮತ್ತು ನರ್ತನ ಗಣಗಳು ನೃತ್ಯ ಭಂಗಿಗಳಲ್ಲಿ ನಿರೂಪಿತವಾಗಿರುತ್ತವೆ. ಇವಲ್ಲದೆ ಬೇಟೆಗಾರರ ನೃತ್ಯ, ವಸಂತೋತ್ಸವ, ಕೋಲಾಟ, ಖಡ್ಗ ನೃತ್ಯ ಮುಂತಾದವುಗಳನ್ನೂ ಶಿಲ್ಪಕಲಾ ಮಾಧ್ಯಮದಲ್ಲಿ ರೂಪಿಸಿರುವುದನ್ನು ಕಾಣುತ್ತೇವೆ.

ನೃತ್ಯ ಭಂಗಿಯಲ್ಲಿ ಅಭಿವ್ಯಕ್ತವಾಗಿರುವ ಸಮಗ್ರ ದೇವತಾ ಮೂರ್ತಿಗಳಲ್ಲಿ ಪರಶಿವನ ನಾಟ್ಯ ಭಂಗಿಗಳು ಬಹುಮುಖ್ಯ ಸ್ಥಾನವನ್ನು ಪಡೆದಿವೆ. ನೃತ್ಯ ಶಿವನನ್ನು ಪ್ರತಿಪಾದಿಸುವಾಗ ಧಾರ್ಮಿಕ, ಆಧ್ಮಾತ್ಮಿಕ, ಕಲಾತ್ಮಕ ಮತ್ತು ತಾತ್ವಿಕಾಂಶಗಳು ಹೃದ್ಯವಾಗಿರುತ್ತವೆ. ಅನೇಕ ಸಂಖ್ಯೆಯಲ್ಲಿ ಲಭ್ಯವಾಗಿರುವ ನೃತ್ಯ ಶಿವನನ್ನು ನೋಡುತ್ತಿದ್ದರೆ ಶವನು ನಾನಾ ಕಾರಣಕ್ಕಾಗಿ ನರ್ತನ ಗೈಯುತ್ತಲೇ ಇದ್ದಾನೆಂದು ವೇದ್ಯವಾಗುತ್ತದೆ. ಪೌರಾಣಿಕ ಕಥೆಗಳನ್ನಾಧರಿಸಿ ರೂಪಿತವಾಗಿರುವ ಪರಶಿವನ ವಿವಿಧ ರೂಪಗಳ ಪರಿಕಲ್ಪನೆಗಳು ಸೃಜನಶೀಲ ಶಿಲ್ಪಗಳ ಕೈಚಳಕದಲ್ಲಿ ಅವು ಕಲಾತ್ಮಕ ಪ್ರಪಂಚವನ್ನೇ ಸೃಷ್ಟಿಸಿವೆ. ಈ ರೀತಿಯ ನೃತ್ಯ ಶಿವನ ಪ್ರತಿರೂಪ ಮುಂದೆ ಭಾರತಾದ್ಯಂತ ಪ್ರಚಲಿತವಾಗಿ ಆ ಭಂಗಿಗಳಿಂದಲೇ ಶಿಲ್ಪಕಲಾ ಶೈಲಿಯನ್ನು ಗುರುತಿಸುವ ಮಟ್ಟಕ್ಕೆ ಶಿವನ ನೃತ್ಯ ಭಂಗಿಗಳು ಮುಖ್ಯವಾಗುತ್ತವೆ. ಒಂದೊಂದು ಘಟ್ಟದಲ್ಲಿಯೂ ಒಂದೊಂದು ಪ್ರಮಾಣದಲ್ಲಿಯೂ ಒಂದೊಂದು ವಿನೂತನ ಭಂಗಿಯಲ್ಲಿಯೂ ರಚಿತವಾದ ಶಿವನ ನಾಟ್ಯ ಭಂಗಿಗಳು ಭಾರತೀಯ ಶಿಲ್ಪ ಕಲಾರಂಗದ ಮೇರು ಕೃತಿಗಳ ಶ್ರೇಣಿಗೆ ಸೇರಿ ಭಾರತೀಯ ಸಂಸ್ಕೃತಿಯ ಸಂಕೇತಗಳಾಗಿ ಬೆಳೆದು ನಿಂತಿವೆ. ಶಿವನನ್ನು ದಿವ್ಯ ನರ್ತಕನಂತೆ ಶಿಲ್ಪಿಯು ಕಲ್ಪಿಸಿಕೊಂಡಾಗ ಸತ್ವಯುತ ಚಲನಾ ಮಾಧ್ಯಮದ ಮಾರ್ದನಿಗೆ ಒತ್ತು ನೀಡಿ ತನ್ನ ಮನದಾಳದ ಭಾವನೆಗಳನ್ನು ಕೈಚಳಕದ ಮೂಲಕ ಶಿಲೆಯಲ್ಲಿ ಮಾರ್ದನಿಸುತ್ತಾನೆ. ಶಿವನ ನರ್ತನವು ವ್ಯೋಮಾತ್ಮಕ ಚಟುವಟಿಕೆಗಳಲ್ಲಿ ಪ್ರತಿಧ್ವನಿತವಾಗಿದೆ. ಈ ಚಿರಂತನ ನರ್ತನದಲ್ಲಿ ದುಷ್ಟ ಶಕ್ತಿಗಳ ಮೇಲೆ ಜಯದ ಸಾಧನೆ, ಮಾಯೆಯ ನಿರ್ಮೂಲನೆ, ಅನಂತದಲ್ಲಿ ಜೀವ ಲೀನವಾಗುವಿಕೆ ಮುಂತಾದ ಸಂದೇಶಗಳು ಮಾರ್ಧನಿಗೊಳ್ಳುತ್ತವೆ. ಜೀವನದ ಸುಖದುಃಖಗಳನ್ನು ನಿಯಂತ್ರಿಸುತ್ತಾ ಸೃಷ್ಟಿ ಲಯಗಳ ಸಾಮರಸ್ಯವನ್ನು ಬೆಳೆಯುತ್ತಾ ಶಿವನು ತನ್ನ ಈ ಅಗೋಚರ ನರ್ತನ ಪ್ರಕ್ರಿಯೆಯಲ್ಲಿ ಇಡಿಯ ಸಂಸಾರವನ್ನೇ ಲೀನಗೊಳಿಸುತ್ತಾನೆ. ಪುರಾಣಗಳ ದಾರ್ಶನಿಕ ರೂಪಗಳು ಶಿವನ ಇಂತಹ ಪರಿಕಲ್ಪನೆಗಳ ಸುತ್ತಾ ಹೆಣೆದ ಲಯಬದ್ಧ ದಿವ್ಯ ರಚನೆಗಳು.

ಇಂತಹ ನೂರಾರು ಕಥಾನಕಗಳು ಕರ್ನಾಟಕ ದೇವಾಲಯಗಳ ವಿವಿಧ ಭಾಗಗಳಲ್ಲಿ ಸಾಂದರ್ಭಿಕವಾಗಿ ಸಾದೃಶ್ಯಗೊಂಡಿವೆ. ಭಾರತದ ಇನ್ಯಾವ ಪ್ರಾಂತ್ಯಗಳಲ್ಲೂ ಕರ್ನಾಟಕ ದೇವಾಲಯ ನೃತ್ಯ ಶಿಲ್ಪಗಳಲ್ಲಿ ಕಾಣುವಷ್ಟು ಶಿವನ ನೃತ್ಯ ಭಂಗಿಗಳ ಸಂಖ್ಯಾ ಬಾಹುಳ್ಯ ಮತ್ತು ವೈವಿಧ್ಯತೆ ಕಂಡುಬರುವುದಿಲ್ಲ. ಕರ್ನಾಟಕದ ರೂವಾರಿಗಳ ಕಲಾತ್ಮಕ ದೃಷ್ಟಿ ಅವರ ರಚನಾ ಕೌಶಲ್ಯ, ಅವರಿಗೆ ದೊರೆತ ಧಾರ್ಮಿಕ ಪರಿಸರ ಮತ್ತು ಚಿತ್ರಿಸುವ ಸ್ವಾತಂತ್ರ್ಯ ಈ ಅಂಶಗಳು ಶಿವನ ನೃತ್ಯ ಶಿಲ್ಪಗಳ ಸಂಯೋಜನೆಯಲ್ಲಿ ಅರ್ಧವಾಗಿ ಹರಿದುಬಂದಿದೆ.

ಚಾಲುಕ್ಯ ಶಿಲ್ಪಶೈಲಿಯ ಮೇರುಕೃತಿಗಳ ಅಗ್ರ ಪಂಕ್ತಿಯಲ್ಲಿ ಬಾದಾಮಿ ಗುಹಾಂತರ ಶಿವಾಲಯದ ನಳೇಶ ಶಿಲ್ಪವು ಮೆರೆಯುತ್ತದೆ. ಬಾದಾಮಿಯ ನಾಲ್ಕು ಗುಹಾಂತರ ರಚನೆಗಳಲ್ಲಿ ಮೊತ್ತಮೊದಲ ಶಿಲ್ಪ ಇದಾಗಿದೆ. ಭಾರತೀಯ ಚಾರಿತ್ರಿಕ ಆಧಾರಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ನಾಟ್ಯಾಗಮನವನ್ನು ಸಮಗ್ರವಾಗಿ ರೂಪಿಸಿರುವ ಪೂರ್ಣ ಪ್ರಮಾಣದ ನಳೇಶನ ಶಿಲ್ಪವು ಪ್ರಪ್ರಥಮ ಉದಾಹರಣೆಯಾಗಿ ನಿಲ್ಲುತ್ತದೆ. ಚೋಳರ ಕಾಲದ ಲೋಹದ ನಟರಾಜ ಶಿಲ್ಪವು ಹನ್ನೊಂದನೆಯ ಶತಮಾನದ್ದು ನಾದಾಂತ ಭಂಗಿಯಲ್ಲಿ ಆನಂದ ತಾಂಡವವಾಡುತ್ತಾ ಇರುವಂತೆ ರೂಪಿತಗೊಂಡ ಈ ಶಿಲ್ಪ ನಾಟ್ಯಶಾಸ್ತ್ರದ ಹಲವು ಕರಣಗಳ ಸಂಯೋಜಿತ ಶಿಲ್ಪ. ಇದಕ್ಕೂ ಹಿಂದೆಯೇ ಆರನೇ ಶತಮಾನದಲ್ಲಿಯೇ ಬಾದಾಮಿಯಲ್ಲಿ ನಟೇಶನ ಶಿಲ್ಪ ಸೃಜಿತಗೊಂಡಿದೆ. ಕಲಾವಿಶ್ಲೇಷಣದ ಎಲ್ಲ ಭೌತಿಕ ಅಂಶಗಳನ್ನು ಈ ಶಿಲ್ಪವು ಒಳಗೊಂಡಿದೆ. ರಚನಾ ತಂತ್ರದ ಅಂಶಗಳೂ ಪ್ರಮಾಣ ಬದ್ಧತೆಯ ನೈಪುಣ್ಯದೆಡೆಗೆ ಬೆರಳು ಮಾಡಿ ತೋರಿಸುತ್ತದೆ. ಸಂಯೋಜನಾ ತಂತ್ರದ ವಾಸ್ತವಿಕಾಂಶಗಳಾದ ರೇಖಾ ವಿನ್ಯಾಸ, ಅಂಗಾಂಗಗಳ ಸಮತೋಲನ, ಅವುಗಳ ಪ್ರಮಾಣದಲ್ಲಿ ೧೮ ಕೈಗಳನ್ನು ಸಂಯೋಜಿಸಿರುವ ರೀತಿ, ಬಲಭಾಗದಲ್ಲಿ ಹಸ್ತಗಳೆಲ್ಲವೂ ನೃತ್ಯ ಹಸ್ತಗಳಲ್ಲಿ – ಪತಾಕ, ಮುಷ್ಠಿ, ಶುಕತುಂಡ, ಕಪಿತ್ಥ ಮುಂತಾದವು ಇದೆ ಎಡಭಾಗದ ಹಸ್ತಗಳಲ್ಲಿ ವಿವಿಧ ಆಯುಧಗಳು, ರುದ್ರವೀಣೆ ಹಾಗೂ ಅಡ್ಡವಾಗಿ ಚಾಚಿರುವ ಗಜಹಸ್ತವು ಗಮನಕ್ಕೆ ಬರುತ್ತದೆ. ಚತುಕರಣದ ಸಮಸ್ತ ಲಕ್ಷಣಗಳನ್ನು ಪಾದಭೇದಗಳನ್ನೂ ಸೂಚಿಸುತ್ತಾ ಕೆಳಭಾಗದಲ್ಲಿ ಅಡ್ಡವಿನ್ಯಾಸದಲ್ಲಿ ಗಣೇಶ ಮತ್ತು ವಾದ್ಯಗಾರನ ಚಿತ್ರಣ ಮುಂತಾದ ಅಂಶಗಳು ಮುಖ್ಯವಾಗುತ್ತದೆ. ಅರ್ಧ ಉಬ್ಬು ತಂತ್ರವನ್ನು ಶಿಲ್ಪರಚನೆಗಾಗಿ ಬಳಸುವುದರಿಂದ ಈ ಶಿಲ್ಪ ಗುಹಾಂತರ ವಾಸ್ತುವಿನ ತಂತ್ರತೆಯ ಚೌಕಟ್ಟಿನಲ್ಲಿ ಸಮರ್ಪಕವಾಗಿ ನಿಲ್ಲುತ್ತದೆ.

ಮುಂದೆ ಪಟ್ಟದಕಲ್ಲಿನ ವಿರೂಪಾಕ್ಷ ದೇವಾಲಯದ ಭಿತ್ತಿ ಶಿಲ್ಪಗಳಿಗೆ ಶಿವನ ನಾಟ್ಯವನ್ನು ಪೂರ್ಣಪ್ರಮಾಣದಲ್ಲಿ ಚಿತ್ರಿಸಲು ಅವಕಾಶವನ್ನು ಒದಗಿಸಿದೆ. ಊರ್ಧ್ವಜಾನುಚಾರಿಯಲ್ಲಿ ಧೀರೋದಾತ್ತ ನಾಯಕನ ಗತಿಯಲ್ಲಿ ಚಲಿಸುವ ಅನೇಕ ಅಪೂರ್ವ ಶಿವನ ರೂಪಗಳನ್ನು ಇಲ್ಲಿ ನೋಡಬಹುದು. ಪೃಷ್ಠಸ್ವಸ್ತಿಕ, ಪರಿವೃತ್ತ ಕರಣ, ಭುಜಂಗಾಂಚಿತ, ಚಿನ್ನ, ಮುಂತಾದ ಕರಣಗಳಲ್ಲೂ ಶಿವನ ನರ್ತಿಸುವ ಭಂಗಿಗಳಿವೆ. ಒಂದು ಕರಣದಿಂದ ಇನ್ನೊಂದು ಕರಣಕ್ಕೆ ಸಾಗುವ ಮಧ್ಯವರ್ತಿ ಚಲನೆಗಳನ್ನು ಈ ಕಾಲದ ಶಿಲ್ಪಿಗಳು ಸತ್ವಯುತ ಚಲನೆಯೊಂದಿಗೆ ಮೂಡಿಸಿದ್ದಾರೆ. ಅಂಧಕಾಸುರ ಸಂಹಾರಿ, ತ್ರಿಪುರಾರಿ ರೂಪದ ಶಿವನ ಶಿಲ್ಪಗಳು ಅಲೀಢ ಮತ್ತು ಪ್ರತ್ಯಾಲೀಢ ಸ್ಥಾನಗಳನ್ನು ಸಮರ್ಪಕವಾಗಿ ಬಿಂಬಿಸುತ್ತವೆ. ಮುಂದೆ ಹೊಯ್ಸಳರ ಕಾಲದ ಶಿವನ ಶಿಲ್ಪಗಳು ಹೆಚ್ಚಾಗಿ ಉರ್ಧ್ವಜಾನುಚಾರಿಯನ್ನೇ ಪ್ರತಿಬಿಂಬಿಸುತ್ತವೆ. ಇಲ್ಲಿ ಬಾದಾಮಿ ಚಾಲುಕ್ಯ ಮತ್ತು ಕಲ್ಯಾಣ ಚಾಲಕ್ಯ ಶಿವನ ಶಿಲ್ಪಗಳಲ್ಲಿದ್ದ ಸತ್ವತೆ ಕಡಿಮೆಯಾಗಿ ಭಂಗಿಗಳು ಚಲನಶೀಲತೆಯನ್ನು ಕಳೆದುಕೊಂಡಂತೆ ತೋರುತ್ತವೆ. ಶಿವನ ಮಾದರಿಯನ್ನೇ ಅನಸರಿಸಿ ವಿಷ್ಣು, ಕೃಷ್ಣ, ಲಕ್ಷ್ಮಿ, ಸರಸ್ವತಿ, ಗಣಪತಿ ಮುಂತಾದ ಶಿಲ್ಪಗಳು ಹೆಚ್ಚಾಗಿ ಊರ್ಧ್ವಜಾನುಚಾರಿಯಲ್ಲೇ ಮೂಡಿವೆ.

ಸಾಲಭಂಜಿಕಾನರ್ತಕಿಯರ ಶಿಲ್ಪಗಳು:

ಕ್ರಿ.ಶ. ಆರರಿಂದ ಎಂಟನೆಯ ಶತಮಾನದ ಸಮಯದಲ್ಲಿ ಆದ ವಾಸ್ತುರಚನಾ ಬೆಳವಣಿಗೆ ದೇವಾಲಯ ಕಟ್ಟುವ ಕ್ರಮದಲ್ಲಿ ಒಂದು ಪ್ರಬಲವಾದ ಕ್ರಾಂತಿಯನ್ನೇ ಎಬ್ಬಿಸಿತು. ಆ ಸಮಯದಲ್ಲಿ ಕಟ್ಟಿದ ಚಾಲುಕ್ಯ ಮತ್ತು ಪಲ್ಲವ ಶೈಲಿಯ ದೇವಾಲಯಗಳು ಮೈಲಿಗಲ್ಲು ರೂಪದಲ್ಲಿ ಉಳಿದುಕೊಂಡಿವೆ. ದೇವಾಲಯದ ವಿಶಾಲವಾದ ಪ್ರಕಾರದಲ್ಲಿ ಬಿಡಿಪೂರ್ಣ ಪ್ರಮಾಣದ ನಂದಿ ಮಂಟಪದ ಪ್ರಯೋಗವನ್ನು ಕಾಂಚಿಪುರಂನ ಕೈಲಾಸನಾಥ ದೇವಾಲಯದಲ್ಲಿ ಮತ್ತು ಪಟ್ಟದಕಲ್ಲಿನ ವಿರೂಪಾಕ್ಷ ದೇವಾಲಯದಲ್ಲಿ ಮೊದಲ ಬಾರಿಗೆ ಗುರುತಿಸಲು ಸಾಧ್ಯ. ಪಟ್ಟದ ಕಲ್ಲಿನ ನಂದಿಮಂಟಪ ವೈಶಿಷ್ಟ್ಯಪೂರ್ಣವಾಗಿದೆ. ಎತ್ತರದ ಅಧಿಷ್ಠಾನವಿರುವ ಈ ಮಂಟಪ ಅರ್ಧ ತೆರೆದ ರಚನೆಯಲ್ಲಿದ್ದು ಇಲ್ಲಿ ಅನೇಕ ಸಾಲಭಂಜಿಕಾ ಶಿಲ್ಪಗಳನ್ನು ಅಳವಡಿಸಲಾಗಿದೆ. ಇಲ್ಲಿ ಬೇಲೂರಿನ ಮದನಿಕಾ ಶಿಲ್ಪಗಳಂತೆ ರಜಸವಿದ್ದರೂ ಮಂಟಪದ ಮೂರು ದ್ವಾರಗಳ ಪಕ್ಕಗಳಲ್ಲಿ ವಿವಿಧ ರೀತಿಯ ವೃಕ್ಷಗಳ ಕೆಳಗೆ ವಿವಿಧ ಭಂಗಿಗಳಲ್ಲಿ ನಿಂತಿರುವ ಸ್ತ್ರೀ ಶಿಲ್ಪಗಳಿಗೆ. ಸಮಾನ ಸ್ತರದ ಪಟ್ಟಿಕೆಗಳಲ್ಲಿ ಹಲವು ಸ್ತ್ರೀ ಶಿಲ್ಪಗಳು ಸಹಜ ಸ್ಥಾನಕಗಳಲ್ಲಿ ನಿಂತಿರುವ ರೀತಿ ಈ ದೇವಾಲಯದಲ್ಲಿ ಸೇವೆ ಸಲ್ಲಿಸುತ್ತಿದ್ದ ದೇವದಾಸಿ ಹಾಗೂ ಚಲ್ಲಬೈಯಂತಹ ರಾಜನರ್ತಕಿಯರನ್ನು ನೆನಪಿಸುತ್ತದೆ. ದೇವಾಲಯದ ಪ್ರಮುಖ ಭಾಗದಲ್ಲಿ ಹೆಚ್ಚಾಗಿ ಶಿವನ, ವಿಷ್ಣುವಿನ ಇತರ ದೇವತೆಗಳ ಶಿಲ್ಪಗಳೇ ಇರುವುದರಿಂದ ಈ ನಂದಿ ಮಂಟಪವನ್ನು ಪ್ರಾಯಶಃ ಮಾನುಷ ಚಿತ್ರಣಕ್ಕೆ ಬಿಟ್ಟುಕೊಟ್ಟಿರುವಂತೆ ತೋರುತ್ತದೆ. ನಂದಿ ಮಂಟಪದ ಒಳ ಬಲಭಾಗದಲ್ಲಿ ಶಿವ ಪಾವರ್ತಿಯರ ಚಿಕ್ಕ ಪ್ರಮಾಣದ ನರ್ತನ ಚಿತ್ರಣವೂ ಕಂಡುಬರುತ್ತದೆ. ಇದನ್ನೇ ಆಧರಿಸಿ ಮುಂದೆ ಎಲ್ಲೋರಾದ ಕೈಲಾಸ ದೇವಾಲಯದಲ್ಲೂ ವಿಶಾಲವಾದ ನಂದಿ ಮಂಟಪವನ್ನು ರಚಿಸಲಾಗಿದೆ. ಆದರೆ ವಿರೂಪಾಕ್ಷ ಮಂಟಪದಲ್ಲಿ ಕಂಡುಬರುವ  ದೇವದಾಸಿಯರ ಚಿತ್ರಣವು ಬೇರಾವ ನಂದಿಮಂಟಪ ರಚನೆಯಲ್ಲೂ ಕಾಣುವುದಿಲ್ಲ. ಸೂಕ್ಷ್ಮವಾಗಿ ಅವಲೋಕಿಸಿದಾಗ ಈ ರಚನೆಯು ಚಾಲುಕ್ಯ ವಾಸ್ತುಶಿಲ್ಪದ ಒಂದು ಹೆಗ್ಗಳಿಕೆಯಾಗಿದೆ.

ಕರ್ನಾಟಕದಲ್ಲಿ ಅದ್ವೀತಿಯ ಪಂಕ್ತಿಗೆ ಸೇರಿರುವಂತಹ ಸಾಲಭಂಜಿಕಾ ಶಿಲ್ಪದ ಆದಿ ಕಲ್ಪನೆಯನ್ನು ಸಾಂಚಿಯ ತೋರಣದ ಅಲಂಕರಣ ಪಟ್ಟಿಕೆಗಳಲ್ಲಿ ಕಾಣಬಹುದು. ನಂತರ ಭಾರ್ಹೂತ್‌ ಚಂದ್ರಯಷಿ ಪೂರ್ಣ ಪ್ರಮಾಣದ ಸಾಲಭಂಜಿಕೆ, ಸಾಲವೃಕ್ಷದ ಕೆಳಗೆ ಕೊಂಬೆಯನ್ನು ಹಿಡಿದೋ ಅಥವಾ ಕಾಲಿನಿಂದ ಮೃದುವಾಗಿ ಮರವನ್ನು ತಟ್ಟುತ್ತಲೋ, ಇಲ್ಲ ವೃಕ್ಷಕ್ಕೆ ಒರಗಿಕೊಂಡೋ ನಿಂತಿರುವ ಸ್ತ್ರೀಯರ ಚಿತ್ರಣವನ್ನು ಶಿಲ್ಪಿಗಳು ನಾನಾ ಬಗೆಯಾಗಿ ಭಾರತದ ಎಲ್ಲಾ ಶಿಲ್ಪ ಶೈಲಿಗಳಲ್ಲೂ ಪರಿಕಲ್ಪಿಸಿದ್ದಾರೆ. ಪದ್ಮಿನಿ ಜಾತಿಗೆ (ಅತ್ಯಂತ ಶ್ರೇಷ್ಠ ಗುಣದ ಸ್ತ್ರೀ) ಸೇರಿದ ಸ್ತ್ರೀಯ ಅಂಗಗಳೂ ಸಾಲವೃಕ್ಷಕ್ಕೆ ತಗಲುವುದರಿಂದ ವೃಕ್ಷವು ಚಿಗುರಿ ಫಲಭರಿತವಾಗುವುದೆಂಬ ನಂಬಿಕೆಯ ಸುತ್ತ ಹೆಣೆದಿರುವ ಕಲ್ಪನೆಯೇ ಸಾಲಭಂಜಿಕಾ ಶಿಲ್ಪಗಳು. ಕರ್ನಾಟಕದಲ್ಲಿಯೂ ಚಾಲುಕ್ಯ ಶೈಲಿಯ ರಚನೆಗಳಲ್ಲಿ ಈ ಶಿಲ್ಪಗಳನ್ನು ಮೊದಲು ಕಾಣುತ್ತೇವೆ. ವಿರೂಪಾಕ್ಷ ದೇವಾಲಯದ ನಂದಿ ಮಂಟಪ ಹಾಗೂ ಬಾದಾಮಿ ವೈಷ್ಣವ ಗುಹೆ, ಪಟ್ಟದ ಕಲ್ಲಿನ ವಿರೂಪಾಕ್ಷ ದೇವಾಲಯ, ಪಾಪನಾಥ ದೇವಾಲಯಗಳ ರಂಗ ಮಂಟಪಗಳಲ್ಲಿ ಸಾಲಭಂಜಿಕೆಯೊಡನೆ ಪತಿಯನ್ನೂ ಕಾಣುತ್ತೇವೆ. ಪೂರ್ಣ ಪ್ರಮಾಣದ ಈ ಗಂಧರ್ವ ದಂಪತಿಗಳ ಶಿಲ್ಪಗಳು ವಾದ್ಯಗಳನ್ನು ಹಿಡಿದು ನುಡಿಸುತ್ತಾ ಆಕರ್ಷಕ ಭಂಗಿಗಳಲ್ಲಿ ನರ್ತಿಸುವುದನ್ನು ಇಲ್ಲಿ ಗಮನಿಸಬಹುದು. ಮುಂದೆ ಕಲ್ಯಾಣ ಚಾಲುಕ್ಯ ಶೈಲಿಗೆ ಸೇರಿದ ಕೆಲವೇ ಲಭ್ಯ ಸಾಲಭಂಜಿಕ ಶಿಲ್ಪಗಳು ಕರ್ನಾಟಕ ಶಿಲ್ಪ ಕಲಾ ರಚನೆಯಲ್ಲಿ ಮೇರುಕೃತಿಗಳು, ಹೊಯ್ಸಳ ಸಾಲಭಂಜಿಕಾ ಅಥವಾ ಮದನಿಕೆಯರೆಂದೂ ಗುರುತಿಸಲಾಗುವ ಶಿಲ್ಪಗಳು ಕರ್ನಾಟಕ ಕಲೆ ಸಂಸ್ಕೃತಿಯ ಪ್ರತೀಕಗಳೆನಿಸಿವೆ. ಕಲ್ಯಾಣ ಚಾಲುಕ್ಯ ಮತ್ತು ಹೊಯ್ಸಳರ ಕಾಲದಲ್ಲಿ ಕಟ್ಟಿದ ಅನೇಕ ದೇವಾಲಯಗಳ ನವರಂಗಗಳ ಕಂಭಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಈ ಶಿಲ್ಪಗಳನ್ನು ಕಂಭಗಳ ಮೇಲೆ ನಿಲ್ಲಿಸುವ ವ್ಯವಸ್ಥೆಯನ್ನು ಯಾವ ರೀತಿ ಮಾಡಿಕೊಂಡಿದ್ದರು ಎಂಬುದು ಅರಿವಿಗೆ ಬರುತ್ತದೆ. ಇಂದು ಆ ಸ್ಥಳದಲ್ಲಿ ಪುತ್ಥಳಿಗಳಿಲ್ಲ. ಸಾವಿರಾರು ಸಂಖ್ಯೆಯಲ್ಲಿ ಸಾಲಭಂಜಿಕಾ ಶಿಲ್ಪಗಳನ್ನು ಸೃಷ್ಟಿಸಿ ಇಂತಹ ಮಂಟಪಗಳ ಸೌಂದರ್ಯಗಳನ್ನು ಹೆಚ್ಚಿಸಲು ಕಂಭಗಳ ಮೇಲೆ ಇಡಲು ಸ್ಥಳಾವಕಾಶ ಮಾಡಲಾಗಿತ್ತು. ಆದರೆ ಇಂದು ಬೇಲೂರಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಾವು ನೋಡುತ್ತೇವೆ. ಹಳೇಬೀಡು ಮತ್ತು ಕುರುವತ್ತಿಗಳಲ್ಲಿ ಕೇವಲ ಎರಡು ಮತ್ತು ಮೂರು ಶಿಲ್ಪಗಳನ್ನು ಬಿಟ್ಟರೆ ಉಳಿದೆಲ್ಲಾ ನವರಂಗಗಳು ಮದನಿಕಾ ಪುತ್ಥಳಿಗಳಿಲ್ಲದೆ ಖಾಲಿಯಾಗಿದೆ. ಲಂಡನ್ನಿನ ಬ್ರಿಟಿಷ್ ಮ್ಯೂಜಿಯಂ ಮತ್ತು ಅಮೆರಿಕೆಯ ಲಾಸ್‌ಎಂಜಲೀಸ್‌ನ ಕೌಂಟೀ ಮ್ಯೂಸಿಯಂ ಸಂಗ್ರಹಗಳಲ್ಲಿ ಹಳೇಬೀಡಿನಲ್ಲಿ ದೊರೆತೆ ಮದನಿಕೆಯರ ಶಿಲ್ಪಗಳು ಗ್ಯಾಲರಿಯಲ್ಲಿ ಪ್ರದರ್ಶಿಸಲ್ಪಟ್ಟಿವೆ. ಮುಂಬಯಿನ ಪ್ರಿನ್ಸ್‌ಆಪ್‌ವೆಲ್ಸ್‌ಮ್ಯೂಜಿಯಂ ಮತ್ತು ದೆಹಲಿಯ ರಾಷ್ಟ್ರೀಯ ಸಂಗ್ರಹಾಲಯಗಳಲ್ಲಿ ಕಲ್ಯಾಣ ಚಾಲುಕ್ಯರ ಶೈಲಿಗೆ ಸೇರಿದ ಸಾಲಭಂಜಿಕಾ ಶಿಲ್ಪಗಳಿವೆ.

ಲಾಸ್ಯಾಂಗ ಪ್ರತಿಪಾದನೆಯ ಕಲಾತ್ಮಕ ಸಕಾರತೆಯನ್ನು ಕುರುವತ್ತಿಯ ಮಲ್ಲಿಕಾರ್ಜುನ ದೇವಾಲಯದ ಈ ಎರಡು ಸಾಲಭಂಜಿಕೆ ಶಿಲ್ಪಗಳು ನಿದರ್ಶಿಸುತ್ತವೆ. ರಸಾಬಿಜ್ಞಾನ ತತ್ವಗಳಲ್ಲಿ ಮೈತಳೆದಂತಿರುವ ಈ ಕಲಾಕೃತಿಗಳು ರೂಪದರ್ಶಿಸತ್ವದಲ್ಲಿ, ಸೊಗಸಿನಲ್ಲಿ ಬೇಲೂರಿನ ಮದನಿಕೆಯರನ್ನು ಮೀರಿ ನಿಂತಿವೆ. ಇವು ಆರಂಭಗಳ ಭಾರದಿಂದ ಕುಬ್ಜರಾಗಿಲ್ಲ. ಹಿತಮಿತವಾದ ಆಭರಣಗಳಿಂದ ಅಲೃಂಕತವಾಗಿದ್ದು ದೇಹದ ಅಂಗಾಂಗಗಳು, ನಿಲುವು ಸೌಂದರ್ಯವನ್ನೂ ಸೌಷ್ಠವವನ್ನೂ ಬಿತ್ತರಿಸುತ್ತವೆ. ಸುಕುಮಾರ ಭಾವನೆಗಳನ್ನು ಸೂಸುವ ಈ ಪುತ್ಥಳಿಗಳು ಸಮಪಾದದಲ್ಲಿದ್ದರೂ ಕಟೆಯ ವಲಿತ ತ್ರಿಭಂಗದ ನಿಲುವನ್ನು ತಂದುಕೊಟ್ಟಿವೆ. ಮಂದಸ್ಮಿತ ಬೀರುತ್ತಾ, ಕುತ್ತಿಗೆಯನ್ನು ವಾಲಿಸಿ, ಹುಬ್ಬನ್ನು ಏರಿಸಿ ಕುಂಚಿತ ಕಣ್ಣು ರೆಪ್ಪೆಯಿಂದ ವಿಶೇಷ ಭಾವನೆಯನ್ನು ತೋರ್ಪಡಿಸುತ್ತಿರುವ ಈ ಸಾಲಭಂಜಿಕೆಗಳು ಅಪರೂಪದ ಕಲಾಕೃತಿಗಳಾಗಿವೆ. ಇವರ ದೈವೀ ಅಭಿನಯಕ್ಕೆ ವಂಶಿವಾದಕರೂ ತದೇಕ ಚಿತ್ತರಾಗಿ ಹಿನ್ನೆಲೆ ಸಂಗೀತವನ್ನು ಒದಗಿಸುತ್ತಿದ್ದರು.

ಕಲ್ಯಾಣ ಚಾಲುಕ್ಯರ ಕಾಲಕ್ಕೆ ಸೇರಿರುವ ಇನ್ನೊಂದು ಶಿಲ್ಪ, ದರ್ಪಣ, ಸುಂದರಿ ದೆಹಲಿಯ ರಾಷ್ಟ್ರೀಯ ಸಂಗ್ರಹಾಲಯದಲ್ಲಿದೆ. ಸ್ವಾಸ್ತಿಕ ಕರಣದಲ್ಲಿದ್ದು ತ್ರಿಭಂಗದಲ್ಲಿ ನಿಂತು ಕನ್ನಡಿ ನೋಡುತ್ತಾ ಸಿಂಗರಿಸಿಕೊಳ್ಳುತ್ತಿರುವ ಈ ಶಿಲ್ಪದಲ್ಲಿ ವೃಕ್ಷದ ನವಿರಾದ ಚಿತ್ರಣವು ಇದೆ. ಕಪ್ಪು ಮಿಶ್ರಿತ ಶಿಲೆಯಲ್ಲಿ ಕಂಡರಿಸಿರುವ ಈ ಶಿಲ್ಪ ಲೋಹದ ವಿಗ್ರಹದಂತೆ ಸುಂದರವಾಗಿ ರೂಪಗೊಂಡಿದೆ.

ಬೇಲೂರಿನ ಚನ್ನಕೇಶವ ದೇವಾಲಯದ ೪೨ ಮದನಿಕೆ ಶಿಲ್ಪಗಳ ಪೈಕಿ ದರ್ಪಣ ಸುಂದರಿಯ ಪುತ್ಥಳೀಯು ವಿಶೇಷವಾಗಿದೆ. ದರ್ಪಣವನ್ನು ನೋಡುತ್ತಾ ತನ್ನನ್ನು ತಾನೇ ಮರೆತಿರುವಂತೆ ಕಾಣುವ ಈ ಶಿಲ್ಪವನ್ನು ರೂವಾರಿಯು ಹೆಚ್ಚಿನ ಆಸಕ್ತಿ ತಳೆದು ರೂಪಿಸಿದಂತಿದೆ. ವೃಕ್ಷವನ್ನು ಹಿನ್ನೆಲೆಯಲ್ಲಿ ಅಲಂಕಾರ ಮಾಧ್ಯಮದಂತೆ ಚಿತ್ರಿಸಲಾಗಿದೆ. ಸಮಭಂಗದಲ್ಲಿ ನಿಂತಿದ್ದು ಕಲೆಯ ವಿಶೇಷ ಚಾಲನೆಯಿಂದ ತ್ರಿಭಂಗದಂತೆ ಕಾಣುವ ಈ ಶಿಲ್ಪ ಹೊಯ್ಸಳ ಶೈಲಿಯ ಶಿಲ್ಪಗಳಲ್ಲಿ ಮೇರು ಕೃತಿಯಾಗಿದೆ.

ಭಾರತೀಯ ಶಾಸ್ತ್ರೀಯ ನೃತ್ಯ ಪ್ರಕಾರಗಳಲ್ಲಿ ಶೃಂಗಾರ ವರ್ಣನೆಗೆ ಆದ್ಯತೆ ಇದ್ದೇ ಇದೆ.  ಕನ್ನಡಿಯನ್ನು ವೀಕ್ಷಿಸುತ್ತಾ ಅಲಂಕರಿಸಿಕೊಳ್ಳುವ ಪ್ರಾಸಂಗಗಳನ್ನು  ಪದಾಭಿನಯಗಳಲ್ಲಿ ಇಂದಿಗೂ ರಂಗದಲ್ಲಿ ಪ್ರದರ್ಶಿಸುವುದನ್ನು ನಾವು ಕಾಣುತ್ತೇವೆ. ಚಿತ್ರ, ಶಿಲ್ಪ, ಕಾವ್ಯ ಮತ್ತು ನೃತ್ಯ ಪ್ರತಿಪಾದನೆಗೆ ಇನ್ನೊಂದು ಸಾಮಾನ್ಯ ವಿಷಯ ವಸ್ತುವಿನಂತೆ ಅಭಿವ್ಯಕ್ತ ಗೊಳ್ಳುತ್ತದೆ.

ಬೇಲೂರಿನ ಚನ್ನಕೇಶವ ದೇವಾಲಯ ಸಾಲಭಂಜಿಕಾ ಶಿಲ್ಪಗಳು ಭಾರತೀಯ ದೃಶ್ಯ ಕಲಾರಂಗದ ಅದ್ವೀತಿಯ ಕಲಾಕೃತಿಗಳೆಂಬ ಹೆಗ್ಗಳಿಕೆ ಪಡೆದಿವೆ. ಒಟ್ಟು ೪೨ ಮದನಿಕಾ ಶಿಲ್ಪಗಳಲ್ಲಿ ಎರಡು ಪುರುಷ ಶಿಲ್ಪಗಳೂ ಇವೆ. ಡಿ.ವಿ.ಗುಂಡಪ್ಪ ಅವರಂತಹ ಶ್ರೇಷ್ಠ ಕವಿಗಳಿಗೆ ಈ ಶಿಲ್ಪಗಳು ಮಹಾನ್‌ಸ್ಫೂರ್ತಿ. ಅಂತಃಪುರ ಗೀತೆಗಳೆಂಬ ಅವರ ಈ ಕಾವ್ಯಮಯ ರಚನೆಯಲ್ಲಿ ಒಂದೊಂದು ಪುತ್ಥಳಿಯನ್ನು ತಮ್ಮ ಕಲ್ಪನಾ ದೃಷ್ಟಿಯಲ್ಲಿ ಅಳವಡಿಸಿ ವರ್ತಿಸುವ ರೀತಿ ಕನ್ನಡಿಗನಿಗೆ ಹೆಮ್ಮೆ ತರಿಸುತ್ತದೆ. ಅಂತಃಪುರ ಗೀತೆಗಳ ಪರಿಚಯ ಇರುವವರು ಬೇಲೂರು ಚನ್ನಕೇಶನ ದೇವಾಲಯಕ್ಕೆ ಕಲ್ಲಿಟ್ಟಂತೆ ಅದೇ ಹಿನ್ನೆಲೆಯಿಂದ ಈ ಶಿಲ್ಪಗಳನ್ನು ಅರಿಸಿಕೊಂಡು ಹೋಗಿ ಸಂಗೀತವು ಬಲ್ಲವರಾದರೆ ಆ ಸಾಲುಗಳನ್ನು ಗುನುಗುತ್ತಾ ಈ ಕಲಾಕೃತಿಗಳನ್ನು ನೋಡುವ ಪರಿ ಡಿ.ವಿ.ಗುಂಡಪ್ಪನವರ ಪರಿಶ್ರಮಕ್ಕೆ ನಮನವಿದ್ದಂತೆ.

ಈ ಶಿಲ್ಪವು ಕಲಾಸೌಂದರ್ಯಕ್ಕೆ ಒಂದು ಕೈಗನ್ನಡಿ ಇದ್ದಂತೆ. ನಾಟ್ಯ ಕೋವಿದೆಯಾಗಿದ್ದು, ವಿಷ್ಣುವರ್ಧನನ ಅರಸಿರಾಣಿ ಶಾಂತಲೆಯ ಪುತ್ಥಳಿದೆಂಬ ನಂಬಿಕೆ ಸಾವಿರ ವರ್ಷಗಳಿಂದಲೂ ಜನಜನೀತ. ಈ ಶಿಲ್ಪದ ಕೆಳಗಿನ ಪಟ್ಟಿಕೆಯಲ್ಲಿ ” ನಾಟ್ಯ ಸರಸ್ವತಿ” ಎಂದು ಇದನ್ನು ರಚಿಸಿದವನು ಬೆಳ್ಳೆಗಾಂವೆಯ ದಾಸೋಜನೆಂಬ ಮುದ್ರಿಕೆಯಿದೆ. ದೇವಾಲಯದ ಒಳಗಿನ ಭುವನೇಶ್ವರಿಯ ನಾಲ್ಕು ಮದನಿಕಾ ಶಿಲ್ಪಗಳನ್ನು ಎತ್ತರಕ್ಕೆ ನಿಲ್ಲಿಸಲಾಗಿದೆ. ಶಾಂತಲೆಯನ್ನು ಅನೇಕ ಶಾಸನಗಳು “ನಾಟ್ಯ ಸರಸ್ವತಿ” ಎಂದು ವರ್ಣಿಸುತ್ತವೆ. ಈ ಎಲ್ಲ ವಿಷಯಗಳ ಆಧಾರದಿಂದ ಶಿಲ್ಪವು ಶಾಂತಲೆಯೆಂದೇ ತಿಳಿಯಲಾಗಿದೆ. ಎರಡು ಹಸ್ತಗಳನ್ನು ಮೇಲ್ಮುಖವಾಗಿ ಅಲಪಲ್ಲವ ಹಸ್ತದಲ್ಲಿ ಹಿಡಿದು ಒಂದು ಕಾಲನ್ನು ಊರ್ಧ್ವಜಾನು ಜಾರಿಯಲ್ಲಿ ನಿಲ್ಲಿಸಿ ಇನ್ನೊಂದು ಪಾದವನ್ನು ಕ್ಷಿಪ್ತ ಮಂಡಿಯಲ್ಲಿ ಬಗ್ಗಿಸಿ ದೃಢವಾಗಿ ನಿಂತಿರುವ ಈ ಭಂಗಿ ಅಪರಗಳನ್ನು ಅಭಿನಯಿಸುವ ರೀತಿಯಲ್ಲಿದ್ದಂತೆ ತೋರುತ್ತದೆ. ಕಾಲ ಬಳಿ ಚಿಕ್ಕ ಶಿಲ್ಪಗಳ ಮರ್ದಲೆ, ತಾಳ ಮತ್ತು ಹಿನ್ನೆಲೆ ಸಂಗೀತವನ್ನು ನೀಡುತ್ತಿವೆ. ಮರ್ದಲೆಯ ಮೇಲೆ ಕಟ್ಟಿರುವ ಛಾಪು, ತಾಳದಲ್ಲಿ ತಟ್ಟಿರುವ ಏಟು ಹಾಗೂ ಗಾಯಕಿಯ ಭಾವ ನರ್ತಿಕಿಯೊಂದಿಗೆ ಸಮೀಕರಿಸಿರುವಂತೆ ಸ್ಪಷ್ಟವಾಗಿದೆ. ಮುಖದಲ್ಲಿ ದಿವ್ಯವಾದ ಭಾವನೆ ಒಂದು ರೀತಿಯ ಪ್ರೌಢತೆಯನ್ನು ಸೂಚಿಸುತ್ತದೆ. ನಾಟ್ಯ ಸರಸ್ವತಿ ಎಂಬ ಕಲ್ಪನೆ ಈ ಶಿಲ್ಪಕ್ಕೆ ಹೆಚ್ಚಿನ ಗಾಂಭೀರ್ಯವನ್ನು ತಂದಿದೆ.

ಇದೇ ಗುಂಪಿಗೆ ಸೇರಿದ ಇನ್ನೊಂದು ಸುಂದರ ಕಲಾಕೃತಿ ಶುಕಸುಂದರಿ. ಸಾಲಭಂಜಿಕಾ ಶಿಲ್ಪಗಳಲ್ಲಿ ಶುಕದೊಡನಿರುವ ಅನೇಕ ಶಿಲ್ಪಗಳನ್ನು ನಾವು ವಿವಿಧ ಶೈಲಿಗಳಲ್ಲಿ ನೋಡುತ್ತೇವೆ. ಕಲ್ಯಾಣ ಚಾಲುಕ್ಯರ ಆಳ್ವಿಕೆಯಲ್ಲಿದ್ದ ಗುಲ್ಬರ್ಗಾ ಬಳಿಯ ಜಲಸಿಂಗ್ವಿ ಮಹದೇವ ದೇವಾಲಯ, ಖಿದ್ರಾಪುರ ದೇವಾಲಯಗಳಲ್ಲಿ ಶುಕದೊಡನೆ ಸಂಭಾಷಿಸುತ್ತಾ ನೃತ್ಯ ಭಂಗಿಯಲ್ಲಿರುವ ಕೆಲವು ಉತ್ತಮ ಶಿಲ್ಪಗಳನ್ನು ಕಾಣಬಹುದು. ಹೊಯ್ಸಳ ಶಿಲ್ಪಿಗಳಂತೂ ಇದು ತುಂಬಾ ಇಷ್ಟವಾದ ಪರಿಕಲ್ಪನೆಯಂತಿದೆ. ಚೆನ್ನಕೇಶವ ದೇವಾಲಯದ ರಂಗಮಂಟಪದ ಒಳಗಿರುವ ಈ ಶಿಲ್ಪದಲ್ಲಿ ನರ್ತಕಿಯ ಅಭಂಗದಲ್ಲಿದ್ದು ಕಟಿಬಾಗಿರುವ ರೀತಿ ವಿಶೇಷ ಮೆರಗನ್ನು ಈ ಭಂಗಿಗೆ ನೀಡಿದೆ. ಎಡ ಹಸ್ತವು ಲತಾಹಸ್ತದಲ್ಲಿ ಚಾಚಿದೆ. ಅಲ್ಲಿ ಶುಕ ಕುಳಿತು ಆಲಿಸುತ್ತದೆ. ಬಲಹಸ್ತ ಶುಕತಂಡದಲ್ಲಿರುವುದು ಸ್ಪಷ್ಟವಾಗಿ ಗೋಚರವಾಗಿದೆ.

ರಂಗಮಂಟಪದ ಇನ್ನೊಂದು ಕಂಭದ ಮೇಲ್ಭಾಗದಲ್ಲಿ ಗಂಧರ್ವ ಕನ್ನೆಯ ಚಿತ್ರಣವಿದೆ. ದೇವಾಲಯದಲ್ಲಿ ಈ ನರ್ತಕಿಯರ ನಾಟ್ಯವನ್ನು ನೋಡಲು ಸ್ವರ್ಗದಿಂದ ಇಳಿದು ಬಂದಂತೆ ಕಾಣುವ ಈಕೆ ತನಗರಿಯದಂತೆ ಅವರನ್ನು ನೋಡುತ್ತಾ ತಾನೂ ನರ್ತನಗೈಯುತ್ತಿರುವಂತೆ ಭಾಸವಾಗುತ್ತದೆ. ಬಲಹಸ್ತವು ಅಧೋಮುಖ ಅರಾಲದಲ್ಲಿ  ಹಿಡಿಯಲಾಗಿದೆ ಹಾಗೂ ಎಡಹಸ್ತವನ್ನು ಲತಾಹಸ್ತದಲ್ಲಿ ನೀಡಲಾಗಿದೆ. ಪಾದಭೇದವು ರೇಚಿತ ನಿಕುಟ್ಟಿತ ಕರಣಕ್ಕೆ ಬರುವ ಚಲನೆಯನ್ನು ಸೂಚಿಸುತ್ತಿದೆ. ಕಟಿಯ ವಲಿತವು ನರ್ತಕಿಗೆ ವಿಶೇಷ ಶೈಲಿಯನ್ನು ನೀಡಿದೆ. ಭಾರವಾದ ಕಿರೀಟ, ಮಣಿಕಟ್ಟುಗಳು, ನಡುಪಟ್ಟಿ, ಮೇಖಲಾ, ಕಿರೀಟದ ಹಿಂದೆ ಇಳಿಬಿಟ್ಟಿರುವ ಜಾಲಿಯಂತೆ ಇರುವ ಸೆರಗು, ಈ ಗಂಧರ್ವಕನ್ಯೆಯನ್ನು ಇತರ ಮದನಿಕೆಯರಿಗಿಂತ ಭಿನ್ನವಾಗಿ ಕಾಣುವಂತೆ ಮಾಡಿವೆ.

ಬೇಲೂರು ಚೆನ್ನಕೇಶವನ ದೇವಾಲಯ ಅನೇಕ ಅವಿಷ್ಕಾರಗಳ ಗಣಿಯಂತಿವೆ. ವಾಸ್ತು ಶಿಲ್ಪ, ಶಿಲ್ಪ ಹಾಗೂ ಅಲಂಕರಣ ಕಲೆಗಳಲ್ಲಿ ಅದ್ವಿತೀಯ ಸ್ಥಾನ ಹೊಂದಿರುವುದರಿಂದಲೇ ಎಷ್ಟು ಬಾರಿ ಸಂದರ್ಶಿಸಿದರೂ ಅನೇಕ ಹೊಸ ವಿಚಾರಗಳು ಗೋಚರಕ್ಕೆ ಬರುತ್ತವೆ. ಸೂಕ್ಷ್ಮಾವಲೋಕನದಿಂದ ಹೆಚ್ಚಿನ ಜ್ಞಾನಾರ್ಜನೆ ಇಲ್ಲಿ ಸಾಧ್ಯ. ಅಂತಹ ಅವಿಷ್ಕಾರಗಳಲ್ಲಿ ಕಂಭನ್ನೇ ಒಂದು ಸುಂದರ ಶಿಲ್ಪ ಆಕಾರದಲ್ಲಿ  ಅಳವಡಿಸುವ ರೀತಿ ಗಮನಾರ್ಹ. ಈ ಶಿಲ್ಪವನ್ನು ಮೋಹಿನಿಯೆಂದು ಗುರುತಿಸಲಾಗಿದೆ. ಎಲ್ಲಾ ಮದಿನಿಕಾ ಶಿಲ್ಪಗಳಿಗೆ ಹೋಲಿಸಿ ನೋಡಿದಾಗ ಮೋಹಿನಿಯ ಈ ಶಿಲ್ಪವು ವಿಭಿನ್ನವಾಗಿದೆ. ಸ್ತ್ರೀತ್ವದ ಪರಿಪೂರ್ಣತೆಯ ಚಿತ್ರಣವೇ ಈ ಮೋಹಿನಿ ಶಿಲ್ಪ. ಸ್ತ್ರೀಯರ ಮಾನಸಿಕ ಹಾಗೂ ಚಿತ್ತದ ಗತಿ ಪ್ರಬೇಧಗಳ ದೃಷ್ಟಿಯಿಂದ ನಾಲ್ಕು ಜಾತಿಯ ಸ್ತ್ರೀಯರನ್ನು ಪದ್ಮಿನಿ, ಚಿತ್ರಿಣಿ, ಹಸ್ತಿನಿ ಮತ್ತು ಶಂಕಿನಿ ಎಂಬುದಾಗಿ ಶಾಸ್ತ್ರಗಳು ಗುರುತಿಸಿವೆ. ಅವರ ಈ ಸ್ವಭಾವಗಳು ಅವರ ನಿಲುವಿನಲ್ಲಿ, ಹಾವಭಾವಗಳಲ್ಲಿಯೂ ವ್ಯಕ್ತವಾಗುತ್ತವೆ. ಈ ಮೋಹಿನಿ ಶಿಲ್ಪವು ದೇಹ, ಮನಸ್ಸು, ಬುದ್ಧಿಗಳ ಪತಿಪಕ್ವತೆಯನ್ನು ಹೊಂದಿರುವ ಪದ್ಮಿನಿ ಜಾತಿಯ ಸ್ತ್ರೀಯನ್ನು ಪ್ರತಿಪಾದಿಸುತ್ತದೆ. ಶಿಲ್ಪಶಾಸ್ತ್ರದಲ್ಲಿದ್ದಂತೆ ತಲೆಯ ಮೇಲೆ ನೀರು ತೊಟ್ಟುಹಾಕಿದರೆ ಅದು ನಾಸಿಕ, ಸ್ತನ, ಹೊಕ್ಕಳಿನಿಂದ ಇಳಿದು ಉಂಗುಷ್ಟಕ್ಕೆ ಬೀಳಬೇಕು. ಆ ರೀತಿ ಪರಿಪೂರ್ಣತೆಯ ಅಂಗಸೌಷ್ಟವ ಪದ್ಮಿನಿ ಜಾತಿ ಸ್ತ್ರೀ ಹೊಂದಿರುತ್ತಾಳೆ, ಈ ಮೋಹಿನಿ ಶಿಲ್ಪವು ಅಂತಹ ಒಂದು ಅಪರೂಪದ ರಚನೆ. ನಿಂತಿರುವ ಭಂಗಿ ನೃತ್ಯದ ಪ್ರಾರಂಭದಲ್ಲಿ ಒಬ್ಬ ಸುಂದರ, ಪ್ರೌಢ ನರ್ತಕಿ ಹೆಮ್ಮೆಯಿಂದ ರಂಗಪ್ರವೇಶಿಸುವಂತಿದೆ.

ಇನ್ನೊಂದು ಶುಕಭಾಷಿಣಿ ಮದನಿಕೆಯ ಬೇಲೂರು ದೇವಾಲಯದ ರಂಗಮಂಟಪದ ಹೊರಭಾಗದಲ್ಲಿದೆ. ದರ್ಪಣ ಸುಂದರಿಯಂತೆಯೇ ಈ ಶುಕ ಭಾಷಿಣಿ ಶಿಲ್ಪವೂ ಹೊಯ್ಸಳ ಶೈಲಿಯ ಮೇರುಕೃತಿ. ಶುಕವನ್ನು ತನ್ನ ಮುಖದ ನೇರಕ್ಕೆ ಹಿಡಿದು ತನ್ನ ಮನದಿಂಗಿತವನ್ನು ಗುಟ್ಟಾಗಿ ಹೇಳುವ ಭಾವ ಇಲ್ಲಿ ನೋಡಬಹುದು. ಒಂದು ಪಾದವು ಸಮಪಾದದಲ್ಲಿದ್ದು ಇನ್ನೊಂದು ಹಿಂದೆ ಸ್ವಸ್ತಿಕದಲ್ಲಿ ಬಾಗಿದೆ. ಸಮಪಾದದಲ್ಲಿರುವ ಕಾಲನ್ನು ಕಟೆಯಿಂದಲೇ ತಿರುಗಿಸಿ ನಿಲ್ಲಿಸಿರುವುದರಿಂದ ವಿಶೇಷ ವಲನವನ್ನು ಈ ಭಂಗಿಯಲ್ಲಿ ಕಾಣಲು ಸಾಧ್ಯ. ತನ್ನ ಶರೀತದ ಸಂಪೂರ್ಣ ಬಲವನ್ನು ಈ ಕಾಲಿನಲ್ಲಿಯೇ ಕೇಂದ್ರೀಕರಿಸುವುದು ಇಲ್ಲಿ ಶಿಲ್ಪಿಯು ತೋರಿರುವ ಒಂದು ಹೊಸ ರೀತಿ. ಬಲಗೈ ಪಕ್ಕದಲ್ಲಿ ಸ್ವಭಾವಿಕವಾಗಿಯೇ ಲತಾ ಹಸ್ತದಲ್ಲಿ ಚಾಚಿದೆ. ಅರ್ಧ ಪಕ್ಕಕ್ಕೆ ತಿರುಗಿರುವ ಮುಖ ಅರೆ ಬಿರಿದ ತುಟಿ, ಭಾವಪರವಶವಾಗಿರುವ ಕಣ್ಣುಗಳು ಶುಕಭಾಷಣಿಯ ಇತರ ಪ್ರಮುಖ ಲಕ್ಷಗಳು.

ಬೇಲೂರಿನ ಒಟ್ಟು ಮದನಿಕಾ ಶಿಲ್ಪಗಳಲ್ಲಿ ನಾಟ್ಯಮೋಹಿನಿಯ ರೂಪದಲ್ಲಿ ಎರಡು ಶಿಲ್ಪಗಳನ್ನು ರೂಪಿಸಲಾಗಿದೆ. ಈ ಶಿಲ್ಪದ ಎದುರು ನಿಂತು ನೋಡುತ್ತಿದ್ದರೆ ಶಿವಪುರಾಣದ ಮೋಹಿನಿ ಭಸ್ಮಾಸುರನ ಕಥಾಪ್ರಸಂಗವು ಜ್ಞಾಪಕಕ್ಕೆ ಬರುವುದು. ತಾನು ಯಾರ ತಲೆಯ ಮೇಲೆ ಕೈಯಿಟ್ಟರೂ ಭಸ್ಮವಾಗಬೇಕೆಂದ ಮಹಾವರವನ್ನು ಪರಶಿವನಿಂದ ಪಡೆದ ಭಸ್ಮಾಸುರ ಕಂಡ ಕಂಡದ್ದನ್ನೆಲ್ಲಾ ಬೂದಿಪಾಲು ಮಾಡತೊಡಗಿದ. ಈ ಕಾಟದಿಂದ ಸಜ್ಜನರನ್ನು ರಕ್ಷಿಸಲು ಹಾಗೂ ಭಸ್ಮಾಸುರನಿಗೆ ಅಂತ್ಯ ಕಾಣಿಸಲು ಮಹಾವಿಷ್ಣುವು ಮೋಹಿನಿಯ ರೂಪವನ್ನು ಧರಿಸಬೇಕಾಯಿತು. ಭಸ್ಮಾಸುರನು ಸುಂದರಿಯಾದ ಮೋಹಿನಿಯ ಹಿಂದೆ ಬಿದ್ದನು. ಮೋಹಿನಿಯು ಅವನನ್ನು ನಾಟ್ಯಸ್ಪರ್ಧೆಗೆ ಆಹ್ವಾನಿಸುತ್ತಾಳೆ. ಭಸ್ಮಾಸುರನೂ ಈ ಸವಾಲನ್ನು ಎದರಿಸಲು ಸಿದ್ಧನಾಗುತ್ತಾನೆ. ತಾನು ಮಾಡಿದಂತೆಯೇ ಭಸ್ಮಾಸುರನೂ ಮಾಡಬೇಕೆಂದು ವಿನಂತಿಸಿಕೊಂಡು ನರ್ತಿಸತೊಡಗುತ್ತಾಳೆ. ಅವಳನ್ನೇ ಚಾಚು ತಪ್ಪದೆ ಅನುಸರಿಸಿ ಅವಳನ್ನು ಗೆಲ್ಲಬೇಕೆಂಬ ಹಂಬಲದಲ್ಲಿ ಭಸ್ಮಾಸುರನು ತನ್ನ ಮನಸ್ಸಿನ ಮೇಲಿನ ಹಿಡಿತವನ್ನು ಕಳೆದುಕೊಳ್ಳುತ್ತಾನೆ. ಮೋಹಿನಿಯು ವಿವಿಧ ರೂಪದ ವೇಗಗತಿಯ ಚಲನೆಗಳನ್ನು ಮಾಡುತ್ತ ಕೊನೆಗೆ ತನ್ನ ತಲೆಯ ಮೇಲೆ ಕೈಯಿಟ್ಟು ಒಂದು ಕಾಲಿನಿಂದಲೇ ನರ್ತಿಸತೊಡಗುತ್ತಾಳೆ. ಭಸ್ಮಾಸುರನೂ ಅದೇ ರೀತಿ ಅನುಕರಿಸಿದಾಗ ಅವನ ಕೈ ಅವನ ತಲೆಯ ಮೇಲೆ ಅವನಿಗರಿವಿಲ್ಲದಂತೆ ಹೋಗುತ್ತದೆ. ಆಗ ಉರಿದು ಭಸ್ಮವಾಗುತ್ತಾನೆ. ಇದನ್ನು ಸೂಚಿಸುವಂತೆ ಶಿಲ್ಪದಲ್ಲಿ ಮೋಹಿನಿಯು ಒಂದು ಕಾಲನ್ನು ಊರ್ಧ್ವಜಾನುಚಾರಿಯಲ್ಲಿ ನಿಂತು, ಬಲಗೈಯನ್ನು ತಲೆಯ ಮೇಲ್ಬಾಗಕ್ಕೆ ಹಿಡಿದು ಎಡಗೈಯನ್ನು ವಕ್ಷದ ಬಳಿ ಇರಿಸಿರುವ ಸುಂದರ ಭಂಗಿಯನ್ನು ಎರಡೂ ಮೋಹಿನಿ ಶಿಲ್ಪಗಳಿಗೆ ಅನ್ವಯಿಸಲಾಗಿದೆ. ತಲೆಯ ಮೇಲಿರುವ ಹಸ್ತವು ಅರಾಲದ್ಲಲಿದ್ದು ಎಡಗೈ ಅರ್ಧಚಂದ್ರದಲ್ಲಿದೆ. ಲಾಸ್ಯರಂಜನ ಗ್ರಂಥದಲ್ಲಿ ತಿಳಿಸಿರುವ ದೇಶಿ ಸ್ಥಾನಕವಾದ ಏಕ ಪಾದದಲ್ಲಿ ಈ ಭಂಗಿಯನ್ನು ಚಿತ್ರಿಸಲಾಗಿದೆ. ಸ್ವಲ್ವ ಬಾಗಿರುವ ಇಡೀ ದೇಹಕ್ಕೆ ಸಮತೋಲನವನ್ನು ನೀಡಿದೆ. ಮೊದಲನೆಯ ಶಿಲ್ಪದಲ್ಲಿ ಕಟಿಯು ಹೆಚ್ಚಾಗಿ ಬಾಗಿಲ್ಲ. ಮೋಹಿನಿಯ ಮುಖದಲ್ಲಿ ಗೆಲುವಿನ ನಗೆಯನ್ನು ಸೂಚಿಸಲಾಗಿದೆ. ಮೃದಂಗವಾದಕ, ವಂಶಿವಾದಕ, ತಾಳಧಾರಿ, ನಾಟ್ಯಚಾರ್ಯ ಈ ನಾಟ್ಯ ಪ್ರಸಂಗಕ್ಕೆ ಹಿನ್ನೆಲೆ ಒದಗಿಸುತ್ತಿರುವುದನ್ನು ಕಾಲಬಳಿಯಿಂದ ಚಿಕ್ಕ ಪ್ರಮಾಣದ ಶಿಲ್ಪಗಳಲ್ಲಿ ಕಾಣಬಹುದು.

ಎರಡನೇ ಮೋಹಿನಿ ಶಿಲ್ಪವು ಇನ್ನೂ ಹೆಚ್ಚಿನ ನಾಜೂಕಾದ ಕೆತ್ತನೆಗಳಿಂದ ಕಂಗೊಳಿಸುವುದೇ ಅಲ್ಲದೇ ಅದು “S” ಆಕಾರದಲ್ಲಿ ನಿರ್ಮಿತವಾಗಿದೆ. ಮೊದಲಿನ ಮೋಹಿನಿ ಶಿಲ್ಪಕ್ಕಿಂತ ಈ ಶಿಲ್ಪವು ನಾಟ್ಯಮೋಹಿನಿಯ ಎಲ್ಲಾ ಲಕ್ಷಣಗಳನ್ನು ಹೊಂದಿವೆ. ಇಡೀ ದೇಹದ ಅಂಗಗಳನ್ನು ಸುಂದರವಾದ ತ್ರಿಭಂಗದಲ್ಲಿ ಸೃಜಿಸಿ ಲಾಸ್ಯದಿಂದ ನರ್ತಿಸುತ್ತಿರುವ ಮೋಹಿನಿ ಮುಗುಳ್ನಗುತ್ತಾ ನಿಂತಿರುವ ರೀತಿ ರಮಣೀಯವಾಗಿದೆ.

ಅವಹಿತ್ಥಗತಿಯಲ್ಲಿ ಚುರುಕಾಗಿ ಸಾಗಿ ಬರುತ್ತಿರುವ ಇನ್ನೊಂದು ನರ್ತಕಿಯ ನರ್ತನಗತಿಯ ಆಕರ್ಷಣೀಯವಾಗಿದೆ. ಒಂದು ಪಾದದಿಂದ ಇನ್ನೊಂದು ಪಾದದ ಚಲನೆಯಲ್ಲಿ ಬದಲಿಸುವ ಮಧ್ಯದ ಚಲನೆಯನ್ನು ಶಿಲ್ಪಿಯು ಇಲ್ಲಿ ಸೆರೆಹಿಡಿದಿದ್ದಾನೆ. ಅದು ರೇಚಿತ ನಿಕುಟ್ಟಕ ಕರಣದಲ್ಲಿ ಕೊನೆಗೊಂಡಿದೆ. ನಾಟ್ಯಶಾಸ್ತ್ರದಲ್ಲಿ ವಿವರಿಸಿರುವಂತೆ ಉದ್ಘಟಿಕ ಪಾದಸ್ಥಾನವು ಹೆಚ್ಚು ಸ್ಪಷ್ಟವಾಗಿ ಈ ಶಿಲ್ಪದಲ್ಲಿ ಮೂಡಿದೆ. ಚಿದಂಬರ ದೇವಾಲಯ ಭಿತ್ತಿಯಲ್ಲಿರುವ ನೂರೆಂಟು ಕರಣಗಳಲ್ಲಿ ರೇಚಿತ ನಿಕುಟ್ಟಕ ಕರಣವು ಇಷ್ಟು ಸ್ಪಷ್ಟವಾಗಿ ಮೂಡಿಬಂದಿಲ್ಲದಿರುವುದು ಗಮನಾರ್ಹ. ಉತ್ಸಾಹ ಭಾವನೆಯನ್ನು ಪ್ರತಿಪಾದಿಸುವ ದಿಟ್ಟ ನಿಲುವಿನಲ್ಲಿ ಕಣ್ಣು ರೆಪ್ಪೆಗಳನ್ನು ವಿಕೋಶ ಚಲನೆಯಲ್ಲಿ ಸೂಚಿಸಿರುವುದು ಈ ಕೃತಿಯನ್ನು ರಚಿಸಿದ ಶಿಲ್ಪಿಗೆ ನಾಟ್ಯ ಶಾಸ್ತ್ರವನ್ನು ಶಿಲ್ಪಕ್ಕೆಅಳವಡಿಸುವ ಜ್ಞಾನದ ಪರಿಶ್ರಮ ಇದ್ದುದು ಮನವರಿಕೆ ಆಗುವುದು. ಬಲಹಸ್ತವು ಡೋಲದಲ್ಲಿ ಇಳಿಬಿಟ್ಟಿದೆ. ಭಗ್ನವಾಗಿರುವ ಎಡಹಸ್ತವು ಪ್ರಾಯಶಃ ಮಯೂರ ಹಸ್ತವನ್ನೋ ಅಥವಾ ಕಪಿತ್ಥ ಹಸ್ತವನ್ನೋ ಹಿಡಿದು ನರ್ತಿಸುತ್ತಿರಲು ಸಾಧ್ಯ. ಕಿರು ಶಿಲ್ಪಗಳು ಸಂಗೀತ ಹಿನ್ನೆಲೆಯನ್ನು ಮೃದಂಗ, ಮರ್ದಲೆ ಮತ್ತು ನಾಟ್ಯಾಚಾರ್ಯನೇ ತಾಳ ಹಾಕುವುದರ ಮೂಲಕ ಒದಗಿಸುತ್ತಿರುವುದನ್ನು ಗಮನಿಸಬಹುದು.

ನಾಗಲಾಪುರ ದೇವಾಲಯದ ಭಿತ್ತಿಯಲ್ಲಿರುವ ಒಂದು ನರ್ತಕಿಯ ಶಿಲ್ಪ ಚೋಳರ ಶೈಲಿಯ ನಟರಾಜ ಶಿಲ್ಪದಂತೆ ಪ್ರತಿಪಾದಿಸವಾಗಿದೆ. ಸಾಮಾನ್ಯವಾಗಿ ನಟರಾಜನು ಭುಜಂಗತ್ರಾಸಿತ ಪಾದದಲ್ಲಿದ್ದರೆ ನರ್ತಕಿಯ ಶಿಲ್ಪದಲ್ಲಿ ಊರ್ಧ್ವಜಾನುಪಾದಜಾರಿಯಿದೆ. ಎರಡು ಕೈಗಳನ್ನು, ಬಲಗೈ ಪತಾಕ ಮತ್ತು ಎಡಗೈ ಗಜಹಸ್ತದಲ್ಲಿ ಎದೆಯ ಕೆಳಗೆ ಚಾಚಿರುವ ರೀತಿ ಎಲ್ಲ ಹೊಯ್ಸಳ ನೃತ್ಯ ಶಿಲ್ಪಗಳಿಗಿಂತ ಭಿನ್ನವಾಗಿದೆ. ನಾಟ್ಯ ಶಿವನನ್ನು ಬಿಟ್ಟರೆ ನರ್ತಕಿಯ ಈ ರೀತಿ ಹಸ್ತಪ್ರತಿಪಾದನೆ ಮಾಡುತ್ತಿರುವುದು ಬಹಳ ವಿರಳ. ಆ ದೃಷ್ಟಿಯಿಂದ ಈ ಶಿಲ್ಪವು ಮುಖ್ಯವಾಗುತ್ತದೆ.

ಇಂತಹ ಬಿಡಿಯಾದ ನರ್ತಕ, ನರ್ತಕಿಯರ ಶಿಲ್ಪಗಳೇ ಅಲ್ಲದೆ ರಾಜಸಭೆಯಲ್ಲಿ, ರಾಣೀವಾಸದಲ್ಲಿ ಪ್ರದರ್ಶಿಸುವ ನೃತ್ಯಸಂಗೀತ ಪ್ರಸಂಗಗಳನ್ನೂ ದೇವಾಲಯದ ಕಂಭ ಪಟ್ಟಿಕೆಗಳಲ್ಲಿ, ಮೇಲ್ಛಾವಣಿಯಲ್ಲಿ, ಶಿಖರಗಳಲ್ಲಿ, ಭಿತ್ತಿಗಳಲ್ಲಿ, ದ್ವಾರಗಳ ಲಲಾಟ ಬಿಂಗಗಳಲ್ಲಿ ಅಧಿಷ್ಠಾನದ ಪಟ್ಟಿಕೆ ಮುಂತಾದ ಕಡೆಗಳಲ್ಲಿ ಕಾಣಬಹುದು. ಅಂತಹ ಒಂದು ಉತ್ತಮ ಉದಾಹರಣೆ ನಾವು ಮೊದಲಿಗೆ ಪಟ್ಟದಕಲ್ಲಿನ ವಿರೂಪಾಕ್ಷ ದೇವಾಲಯದ ನವರಂಗದೊಳಗೆ ಕಂಭಗಳ ಮೇಲೆ ಚಿತ್ರಿಸಿರುವುದನ್ನು ಕಾಣುತ್ತೇವೆ. ಇಲ್ಲಿ ರಾಜನ ಆಸ್ಥಾನದಲ್ಲಿ ರಾಜನರ್ತಕಿಯು ತನ್ನ ವಾದ್ಯ ವೃಂದದವರೊಂದಿಗೆ ನರ್ತಿಸುವ ದೃಶ್ಯವನ್ನು ಕಾಣಬಹುದು. ಅದರಂತೆ ಬೇಲೂರು ದೇವಾಲಯದ ಕಂಭದ ಅಲಂಕರಣ ಪಟ್ಟಿಕೆಯಲ್ಲಿರುವ ನರ್ತಕಿ ವಿಶೇಷ ಗಮನ ಸೆಳೆಯುತ್ತಾಳೆ. ಅಗ್ರತಲ ಸಂಚರದಲ್ಲಿ ಪಾದ ಭೇದದಿಂದ ಅಡ್ಡಿತ ಜಾರಿಯನ್ನು ಸೂಕ್ತವಾಗಿ ವಲನದಿಂದ ಪ್ರದರ್ಶಿಸುತ್ತಿದ್ದಾಳೆ. ಅವಳ ಬಲಗೈ ಸಂತಸ ಸೂಚಿಸುವ ಅಲಪದ್ಮದಲ್ಲಿ ಮೇಲೆ ಎತ್ತಿದರೆ ಎಡಗೈ ಸಹಜವಾಗಿ ಲತಾಹಸ್ತದಲ್ಲಿ ವಿನಿಯೋಗವಾಗಿದೆ. ಅತಿರೇಕ ಚಲನವಲನಗಳಿಲ್ಲದ ನೃತ್ಯ ಶಿಲ್ಪ ಇದಾಗಿದೆ.

ಬೇಲೂರಿನ ಅಧಿಷ್ಠಾನದ ಪಟ್ಟಿಕೆಗಳು ವಿಶೇಷವಾಗಿದ್ದು, ಅದನ್ನು ರಚಿಸುವ ರೀತಿ ಹೊಯ್ಸಳ ಶೈಲಿಯ ಅತ್ಯಂತ ಮುಖ್ಯವಾದ ಲಕ್ಷಣಗಳಲ್ಲಿ ಒಂದಾಗಿದೆ. ಅದರ ಮೇಲ್ಭಾಗದಲ್ಲಿ ದೇವಾಲಯದ ಬಲಭಾಗದಲ್ಲಿ ಒಂದು ಗುಂಪಿನ ಶಿಲ್ಪಗಳಿವೆ. ಸಾಮಾನ್ಯವಾಗಿ ಇವು ಜನಗಳ ಗಮನಕ್ಕೆ ಬರುವುದಿಲ್ಲ. ಆದರೆ ಇವುಗಳನ್ನು ಗುರುತಿಸಿದಾಗ ಒಂದು ಹೊಸ ವಿಚಾರದೆಡೆಗೆ ಸೆಳೆದುಕೊಂಡು ಹೋಗುತ್ತದೆ. ಇವುಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಚಿಕ್ಕ ಪ್ರಮಾಣದ ಸಾಲಿಭಂಜಿಕೆಗಳಂತಿದ್ದರೂ ವಿವಿಧ ರೀತಿಯ ನಾಯಿಕೆಯರನ್ನು ಪ್ರತಿನಿಧಿಸುತ್ತವೆ. ನಾಟ್ಯಶಾಸ್ತ್ರವು ಅಷ್ಟನಾಯಿಕೆಯರ ಬಗ್ಗೆ ತಿಳಿಸುತ್ತದೆ. ಶಾಸ್ತ್ರೀಯ ನೃತ್ಯ ಸಂಪ್ರದಾಯಗಳಲ್ಲಿ ಅಭಿನಯ ರಚನೆಗಳು ಈ ಅಷ್ಟನಾಯಕಿಯರ ಭಾವಾಭಿನಯದ ಸುತ್ತಲೂ ಹೆಣೆದಿರುತ್ತವೆ. ಅದರಲ್ಲಿಯೂ ಜಾವಳಿಗಳು ನಾಯಿಕಾ ಭೇದಗಳ ಸುಂದರ ಪರಿಕಲ್ಪನೆಗಳು. ಈ ಪಟ್ಟಿಕೆಯಲ್ಲಿರುವ ನಾಯಿಕೆಯರು ಮುಖ್ಯವಾಗಿ ತನ್ನ ಇನಿಯನ ಬರುವನ್ನು ಕಾಯುತ್ತಿರುವ ವಾಸಕಸಜ್ಜಿಕೆ, ತನ್ನ ಇನಿಯನ ಅಗಲಿಕೆಯಿಂದ ಕುಪಿತಗೊಂಡಿರುವ ವಿರಹೋತ್ಕಂಠಿತೆ ನಾಯುಕೆ, ಜಗಳದಿಂದ ಬೇರ್ಪಟ್ಟಿರುವ ಕಲಹೋತ್ಕಟಿತ ನಾಯಿಕೆ ಹಾಗೂ ತನ್ನ ಇನಿಯನು ಪ್ರವಾಸದಲ್ಲಿರುವುದನ್ನು ನೆನೆಯುತ್ತಿರುವ ಪ್ರೋಷಿತ ಭರ್ತೃಕಾ ನಾಯುಕೆಯನ್ನು ಪ್ರತಿನಿಧಿಸುತ್ತದೆ. ಉಳಿದವುಗಳು ವಾದ್ಯಗಳನ್ನು ನುಡಿಸುತ್ತಿವೆ. ಹೀಗೆ ನಾಟ್ಯ ವಿಭಿನ್ನ ಪ್ರಭೇದಗಳನ್ನು ನಾವು ಶಿಲ್ಪಕಲೆಯಲ್ಲಿ ಗುರುತಿಸಲು ಸಾಧ್ಯ.

ಹದಿನಾಲ್ಕು ಮತ್ತು ಹದಿನೈದನೇ ಶತಮಾನಗಳು ಪ್ರಪಂಚದಾದ್ಯಂತ ಅನೇಕ ಹೊಸ ಆವಿಷ್ಕಾರಗಳನ್ನು ತಂದ ಕಾಲ. ಹೊಸ ಭೂಭಾಗಗಳ ಶೋಧನೆಯೊಂದಿಗೆ ದೇಶದಿಂದ ದೇಶಕ್ಕೆ ಪರ್ಯಟನ ಸಾಧನೆಯನ್ನೂ ಕಂಡ ಕಾಲ. ದಕ್ಷಿಣ ಭಾರತದಲ್ಲಿ ಚರಿತ್ರೆಯ ಗತಿ ಬದಲಿಸಿದ ಕಾಲ. ಸಮಗ್ರ ದಕ್ಷಿಣ ಭಾರತ ವಿಜಯನಗರ ಸಾಮ್ರಾಜ್ಯದಲ್ಲಿ ಒಂದಾದ ಕಾಲ. ಹೀಗಾಗಿ ಲಲಿತ ಕಲೆಗಳನ್ನು, ವಿಭಿನ್ನತೆಯಲ್ಲಿ ಏಕೀಕರಣವನ್ನು ತಂದಕಾಲ, ಆದ್ದರಿಂದಲೇ ಹಿಂದೂ ಸಮಾಜದ ಆಶೋತ್ತರಗಳನ್ನು ದೇವಾಲಯ ಸಂಸ್ಕೃತಿಯ ಮೂಲಕ ಜನರಿಗೆ ಸರಿಯಾದ ಸ್ವರೂಪದಲ್ಲಿ ಪರಿಚಯಿಸಿ ಜನರನ್ನು ಧರ್ಮಕ್ಕಾಗಿ, ಧರ್ಮ ಮತ್ತು ಸಮಾಜವನ್ನು ರಕ್ಷಿಸುವುದಕ್ಕಾಗಿ ಒಂದುಗೂಡಿಸಿದ ಕಾಲ. ಈ ಎಲ್ಲಾ ಕಾರಣಗಳಿಂದ  ವಿಜಯನಗರ ಆಳ್ವಿಕೆಯ ಕಾಲ ಭಾರತದೇಶದ ಚರಿತ್ರೆಯಲ್ಲಿ ಬಹು ಮಹತ್ವದ ಸಂಧಿಕಾಲವಾಗುತ್ತದೆ. ಇಂತಹ ಸಮಯದಲ್ಲಿ ಧಾರ್ಮಿಕ ಚಟುವಟಿಕೆಗಳು ಆಡಳಿತದ ಸೂತ್ರದಲ್ಲಿಯೇ ಮಾಯವಾಗಿದ್ದವು. ಕಲಾವಿದರೂ ಅಂದಿನ ಸಮಾಜದ ಮಹೋನ್ನತಿಗೆ ಸ್ಪಂದಿಸಿದರು. ಅವರ ಕೊಡುಗೆಯು ವಿಜಯನಗರ ಕಾಲದ ವಾಸ್ತು ಶಿಲ್ಪದ ರೂಪದಲ್ಲಿ ಅಚ್ಚಳಿಯದೇ ಇಂದು ನಿಂತಿದೆ. ದೇವಾಲಯ ರಚನೆಯಲ್ಲೂ ಹೊಯ್ಸಳ ಶೈಲಿಯನ್ನೇ ಮುಂದುವರಿಸದೆ ಚಿಣಚುಲ್ಲಿನ ಬಳಕೆ, ಗೋಪುರಗಳಿಗೆ ಇಟ್ಟಿಗೆ, ಗಾರೆಗಳ ಬಳಕೆ, ಅಂದಿನ ಅವಶ್ಯಕತೆಗೆ ತಕ್ಕಂತೆ ನೂರಾರು ರಚನೆಗಳನ್ನು ನಿರ್ಮಿಸಲು ಸಾಧ್ಯವಾಯಿತು. ಈ ನಿರ್ಮಾಣಗಳಲ್ಲಿ ಅಂದು ಬಳಕೆಯಲ್ಲಿದ್ದ ಶಾಸ್ತ್ರೀಯ ನೃತ್ಯ ಸಂಪ್ರದಾಯಗಳೇ ಅಲ್ಲದೆ ಅನೇಕ ದೇಶಿ ಪ್ರಕಾರಗಳು, ಜಾನಪದ ನೃತ್ಯಗಳು ಮತ್ತು ಲೋಕನೃತ್ಯಗಳನ್ನೂ ಶಿಲ್ಪಗಳಲ್ಲಿ ಪ್ರತಿಪಾದಿಸಿರುವುದನ್ನು ಕಾಣುತ್ತೇವೆ. ಇವುಗಳನ್ನು ತಿಳಿಯಲು ವಿಜಯನಗರ ಕಾಲದ ಕೆಲವು ನೃತ್ಯಶಿಲ್ಪಗಳ ಕಡೆಗೆ ಗಮನ ಹರಿಸೋಣ.

ಹಂಪಿಯ ವಿಠ್ಠಲ ಸ್ವಾಮಿಯ ದೇವಾಲಯದ ದ್ವಾರಗೋಪುರ ಮಂಟಪದ ಬಲಭಾಗದಲ್ಲಿ ಗಂಗೆಯ ಒಂದು ಸುಂದರ ಚಿತ್ರಣವಿದೆ. ವಿಜಯನಗರ ಮತ್ತು ನಂತರದ ಕಾಲ ಎಲ್ಲ ದೇವಾಲಯಗಳ ದ್ವಾರ ಗೋಪುರದ ಮಂಟಪದ ಬಲ ಮತ್ತು ಎಡ ಭಾಗಗಳಲ್ಲಿ ಗಂಗಾ ಮತ್ತು ಯಮುನೆಯರು ಸ್ವಸ್ತಿಕ ಭಂಗಿಯಲ್ಲಿ ನಿಂತಿರುವ ಶಿಲ್ಪಗಳಿರುತ್ತವೆ. ಶಿಲ್ಪದ ಮೇಲ್ಭಾಗ ವರ್ತುಲಾಕಾರದ ಬಳ್ಳಿಯಂತೆ ಪಟ್ಟಿಕೆಯಲ್ಲಿರುತ್ತವೆ. ಹೀಗಾಗಿ ಈ ಶಿಲ್ಪಗಳನ್ನು ಯಾಳೀ ಸುಂದರಿ ಎಂದೂ ಕರೆಯುವುದುಂಟು. ಇಲ್ಲಿ ಗಂಗೆಯು ಮಕರದ ಮೇಲೆ ನಿಂತು ನರ್ತನ ಭಂಗಿಯನ್ನು ತೋರುತ್ತಿದ್ದಾಳೆ. ತನ್ನ ಬಲಗಾಲನ್ನು ಸ್ವಸ್ತಿಕವಾಗಿ ಅಡ್ಡ ನಿಲ್ಲಿಸಿದ್ದಾಳೆ. ಕಟಿಯ ಭಾಗವು ನಯವಾದ ಚಲನೆಯಿಂದ ಈ ಸ್ಥಾನಕ್ಕೆ ತ್ರಿಭಂಗವನ್ನು ಒದಗಿಸಿ ಸ್ವಾಭಾವಿಕ ಶೋಭೆಯನ್ನಿತ್ತಿದೆ. ಎಡಕಾಲಿನ ಕ್ಷಿಪ್ತ ಮಂಡಿಯು ಬಹಳ ಸ್ಪಷ್ಟವಾಗಿ ತೋರುತ್ತದೆ. ಎಡಗೈತೊಡೆಯ ಮೇಲೆ ಇರಿಸಿದೆ, ಬಲಗೈಯಿಂದ ಬಳ್ಳಿಯನ್ನು ಕಲಾತ್ಮಕವಾಗಿ ಹಿಡಿಯಲಾಗಿದೆ. ಆಕೆಯ ವೇಷಭೂಷಣಗಳು ಸರಳವಾಗಿರುವುದರಿಂದ ಆಕೆಯ ಸುಂದರ ಆಕಾರವು ಸ್ಷಷ್ಟವಾಗಿ ತಲೆದೋರಿದೆ. ಕಂಠಕ್ಕೆ ಧರಿಸಿದ ಹಾರಗಳು ಮತ್ತು ಸೊಂಟದ ಮೇಖಲಾ ಆಭರಣಗಳು ಈ ಶಿಲ್ಪದ ಮೆರಗನ್ನು ಹೆಚ್ಚಿಸಿವೆ. ಯಾವುದೇ ವಿಜಯನಗರ ಶೈಲಿಯ ದೇವಾಲಯಗಳನ್ನು ಸಂದರ್ಶಿಸಿದರೂ ಈ ಗಂಗಾ ಮತ್ತು ಯಮುನಾ ಅಥವಾ ಯಾಳೀ ಸುಂದರಿಯರ ಶಿಲ್ಪಗಳು ಪ್ರಥಮ ಆಕರ್ಷಣೆಯಾಗಿ ಬಿಡುತ್ತವೆ.

ವಿಜಯನಗರ ಕಾಲದ ನರ್ತಕಿಯ ಸುಂದರ ಚಿತ್ರಣವನ್ನು ಪೆನುಗೊಂಡೆಯ ರಾಮಚಂದ್ರ ದೇವಾಲಯದ ಹೊರಭಿತ್ತಿನಲ್ಲಿ ಕಾಣಬಹುದು. ಈ ನರ್ತಕಿಯ ನಾಟ್ಯ ಶಾಸ್ತ್ರದ ೧೦೪ನೇ ಕರಣವಾದ ವೃಷದಭಕ್ರೀಡಿತದಲ್ಲಿದೆ. ಅವಳ ಒಂದು ಕೈ ತೊಡೆಯ ಮೇಲೆ ಇನ್ನೊಂದು ಕೈ ಮೇಲ ಅಲಪಲ್ಲವದಲ್ಲಿ ತಿರುಗಿದೆ. ಪಕ್ಕಕ್ಕೆ ಎತ್ತಿರುವ ಕತ್ತಿನ ಚಲನೆ ಈ ಭಂಗಿಗೆ ವಿಶೇಷ ಅಂದವನ್ನು ನೀಡಿದೆ. ಅವಳು ಧರಿಸಿರುವ ಉಡುಪು ಇಂದಿನ ಭರತನಾಯ ನರ್ತಕಿಯರು ಧರಿಸುವಂತೆಯೇ ಇದೆ. ಅವರ ಸೆರಗು ಕುತ್ತಿಗೆಯ ಎರಡೂ ಪಕ್ಕಗಳಲ್ಲಿ ಹಾರಾಡುತ್ತಿದೆ. ದೊಡ್ಡದಾಗ ಕಿವಿಯ ಆಭರಣ, ಧಮ್ಮಿಲಾ ಕೇಶ ವಿನ್ಯಾಸ, ಇವುಗಳು ಈ ನರ್ತಕಿಯ ವಿಶೇಷ ಲಕ್ಷಣಗಳು ಅವಳಿಗೆ ತಾಳ ಹಾಕುತ್ತಿರುವ ನಾಟ್ಯಾಚಾರ್ಯನೂ ಅಷ್ಟೇ ತದೇಕ ಚಿತ್ತನಾಗಿ ನೃತ್ಯಕ್ಕೆ ಸಹಕರಿಸಿದ್ದಾನೆ. ಇದು ಒಂದು ವಿಶೇಷ ಪ್ರತಿಪಾದನೆ.

ಇನ್ನೊಬ್ಬ ನರ್ತಕಿಯ ಚಿತ್ರಣವು ಹಂಪಿಯ ರಾಮಚಂದ್ರ ದೇವಾಲಯದ ಮಂಟಪದ ಒಂದು ಕಂಭದ ಮೇಲೆ ಮೂಡಿಬಂದಿದೆ. ಇಲ್ಲಿ ನರ್ತಕಿಯು ಮುಗುಳುನಗೆ ಬೀರುತ್ತಾ ವೇಗಗತಿಯ ಚಲನೆಯನ್ನು ಒಂದು ಕಾಲಿನಿಂದ ಇನ್ನೊಂದು ಕಾಲಿಗೆ ವರ್ಗಾಯಿಸುತ್ತಿದ್ದಾಳೆ. ಅವಳ ಬಲಹಸ್ತವು ಮಯೂರದಲ್ಲಿ ಲತಾ ಹಸ್ತದಂತೆ ಚಾಚಿದೆ ಹಾಗೂ ಎಡಹಸ್ತವು ತಲೆಯ ಮೇಲೆ ಅರಾಲದಲ್ಲಿ ಹಿಡಿಯಲಾಗಿದೆ. ಸ್ವಲ್ಪವೇ ವಾಲಿರುವ ಅವಳ ಕುತ್ತಿಗೆ ಪಾರ್ಶ್ವಮುಡಿ ಶಿಲ್ಪಸಂಯೋಜನೆಗೆ ಸಾಮರಸ್ಯವಿತ್ತಿದೆ. ಅವಳ ಪೋಷಾಕಿನ ನಿರಿಗೆಗಳು ಸ್ಪಷ್ಟವಾಗಿದೆ. ಉದ್ದವಾದ ಹಾರ, ಕಂಠಿಗಳಿಂದ, ಕಡಗ ಕಂಕಣಗಳಿಂದ ಅಲಂಕೃತಳಾಗಿ ನರ್ತಿಸುತ್ತಿರುವ ರೀತಿ ಇವಳು ಶಾಸ್ತ್ರೀಯ ನೃತ್ಯದ ಒಂದು ಬಂಧವನ್ನು ತೋರಿಸುವಂತಿದೆ.

ವಿಜಯನಗರ ಶೈಲಿಯ ಚಿತ್ರಣದಲ್ಲಿ ಹೆಚ್ಚು ಮಟ್ಟಿಗೆ ವೃಶ್ಚಿಕ ಕರಣದಲ್ಲಿ ನರ್ತಿಸುವ ನರ್ತಿಕಿಯರು ಸಿಗುತ್ತಾರೆ. ಹಲವೊಮ್ಮೆ ಮೇಲಕ್ಕೆತ್ತಿದ್ದ ಕಾಲು ತಲೆಯನ್ನೂ ಮುಟ್ಟುತ್ತಿರುತ್ತದೆ. ಅಸಂಖ್ಯಾತ ಸಂಖ್ಯೆಯಲ್ಲಿ ನೆರೆದ ಜನರಲ್ಲಿ ಕೌತುಕವನ್ನು ಮೂಡಿಸುವ ಉತ್ಸಾಹದಲ್ಲಿ ನರ್ತಕಿಯರು ವೃಶ್ಚಿಕ ಕರಣವನ್ನು ಹೆಚ್ಚಾಗಿ ಬಳಸುತ್ತಿದ್ದರೆಂದು ತೋರುತ್ತದೆ. ವೇಗಗತಿಯಲ್ಲಿ ನರ್ತಿಸಲೂ ಸಹ ವೃಶ್ಚಿಕಕರಣದ ಚಲನೆಗಳು ದೇಹವನ್ನು ಚಿಮ್ಮುವಂತೆ ಮಾಡಿ ಹೆಚ್ಚಿನ ಜಾಗವನ್ನು ಕ್ರಮಿಸುವುದಕ್ಕೆ ಸಹಕಾರಿ. ಈ ನರ್ತಕಿಯೂ ವೃಶ್ಚಿಕ ಕರಣದಲ್ಲಿ ತನ್ನ ತಲೆಯನ್ನು ಕಾಲಿನಿಂದ ಮುಟ್ಟಿಸುತ್ತಿದ್ದಾಳೆ. ಅವಳ ಒಂದು ಕೈ ಕರಿಹಸ್ತದಲ್ಲಿ ಅಡ್ಡವಾಗಿ ಚಾಚಿದೆ. ಇದು ಶಾಸ್ತ್ರದಲ್ಲಿರುವಂತೆಯೇ ಪ್ರತಿಪಾದಿತವಾಗಿದೆ. ಇಬ್ಬರು ಮೃದಂಗ ವಾದಕರು ಈ ವೇಗಗತಿಯ ನೃತ್ಯಕ್ಕೆ ವಾದ್ಯ ಸಹಕಾರ ನೀಡುತ್ತಿದ್ದಾರೆ. ಕೊನೆಯಲ್ಲಿರುವ ಗಾಯಕಿಯೂ ಮೃದಂಗ ವಾದಕರಂತೆ ಒಂದು ಕೈ ಎತ್ತಿ ತೋರುತ್ತಿರುವ ಕ್ಲಿಷ್ಟಗತಿಯ ಚಲನೆಗೆ ಉದ್ಗಾರವನ್ನು ತೋರುತ್ತಿದ್ದಾರೆ.

ದಕ್ಷಿಣ ಭಾರತದ ಗ್ರಾಮಗಳಲ್ಲಿ ಕೊರತಿ ಅಥವಾ ಕೊರವಂಜಿಯು ಪರಿಚಿತ. ಭವಿಷ್ಯವನ್ನು ನುಡಿಯುವ ಈಕೆ ಕೈಯಲ್ಲಿ ಒಂದು ಬುಟ್ಟಿ ಹಾಗೂ ಬಣ್ಣದ ಕೋಲನ್ನು ಹಿಡಿದು ತಿರುಗಿಸುತ್ತಾ ಒಂದು ಮನೆಯಿಂದ ಇನ್ನೊಂದು ಮನೆಗೆ ಹೋಗಿ ಜನರಿಗೆ ರಂಜಿಸುವ ರೀತಿಯಲ್ಲಿ ಹಾಡಿ, ಕುಣಿದು ಬರುವ ಎಲ್ಲರಿಗೂ ಬೇಕಾದ ಹೆಂಗಸು. ಮುರುಗನ (ಕಾರ್ತಿಕೇಯ) ಹೆಸರನ್ನು ಹೇಳಿ ಹಾಡಿ ಹೊಗುಳುವ ಒಂದು ಪಂಗಡವಿದ್ದರೆ, ಇನ್ನೊಂದು ತಿರುಪತಿಯ ವೆಂಕಟೇಶನನ್ನು ಹಾಡಿ ಹೊಗುಳುತ್ತದೆ. ವೆಂಕಟೇಶ ಕಲ್ಯಾಣ ನಾಟಕದಲ್ಲಿ ಪದ್ಮಾವತಿಗೆ ವೆಂಕಟೇಶನ ಬಗ್ಗೆ ತಿಳಿಸುವ ಈ ಕೊರವಂಜಿಯ ಪ್ರಸಂಗ ಬಲು ಜನಪ್ರಿಯ. ತಮಿಳುನಾಡಿನಲ್ಲಿ ಕುಟ್ರಾಲ ಕೊರವಂಜಿವೆಂಬ ಒಂದು ನೃತ್ಯ ಸಂಪ್ರದಾಯವೇ ಇದೆ. ಹಂಪಿಯಲ್ಲಿಯೂ ಅಲ್ಲಲ್ಲಿ ಕೊರವಂಜಿಯ ಶಿಲ್ಪಗಳು ಕಾಣುತ್ತವೆ. ಪ್ರಾಯಶಃ ವಿಜಯನಗರದ ದೇವಾಲಯಗಳಲ್ಲಿ, ಉತ್ಸವಗಳಲ್ಲಿ ಮತ್ತು ರಾಜನ ಸಭೆಗಳಲ್ಲಿ ಈ ಕೊರವಂಜಿ ನರ್ತಕಿಯರು ಗುಡ್ಡಗಾಡುಗಳಿಂದ ಬಂದು ಜನರನ್ನು ರಂಜಿಸುತ್ತಿರಬೇಕು. ಈ ಶಿಲ್ಪದಲ್ಲಿ ನರ್ತಕಿಯರು ಶಾಸ್ತ್ರೀಯ ನೃತ್ಯ ಸಂಪ್ರದಾಯದಂತೆ ವೇಷಭೂಷಣಗಳನ್ನು ತೊಟ್ಟಿದ್ದಾಳೆ. ಅವಳ ಪಾದಚಲನೆಯ ಅತಿಕ್ರಾಂತಚಾರಿಯಲ್ಲಿದೆ. ಅವಳ ಮಣಿದ ಕಟಿ ವಿಶಿಷ್ಟ ತ್ರಿಭಂಗವನ್ನು ಅವಳ ದೇಹದ ಮೇಲಿನ ಭಾಗಕ್ಕೆ ಕೊಟ್ಟಿದೆ. ಅವಳು ನಗುತ್ತಾ ಜನರನ್ನು ಸೆಳೆಯುತ್ತಿರುವಂತೆ ಚಿತ್ರಿಸಲಾಗಿದೆ.

ವೀರರಸಭರಿತ ನಾಟ್ಯವನ್ನು ನಾವು ಇಂದಿಗೂ “ವೀರಗಾಸೆ ನೃತ್ಯ” ಸಂಪ್ರದಾಯದಲ್ಲಿ ನೋಡುತ್ತೇವೆ. ವೀರಭದ್ರನನ್ನು ಕುಲದೇವತೆಯಾಗಿ ಹೊಂದಿರುವ ಇವರು ನಿಷ್ಠೆಯಿಂದ ನರ್ತಿಸುತ್ತಾರೆ. ಕರ್ನಾಟಕದ ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ ಮುಂತಾದ ಕಡೆಯಲ್ಲಿ ವೀರಗಾಸೆ ತಂಡಗಳಿವೆ. ಪ್ರಾಯಶಃ ಆ ಕಾಲದಲ್ಲಿ ಯೋಧರನ್ನು ಹುರಿದುಂಬಿಸುವ ಹೊಣೆಗಾರಿಕೆಯೂ ಈ ನರ್ತಕರದಾಗಿದ್ದಿತೆಂದು ತೋರುತ್ತದೆ. ಕೈಯಲ್ಲಿ ಖಡ್ಗವನ್ನು ಹಿಡಿದು ಝಳಪಿಸುತ್ತಾ ಭ್ರಮರಿ ಮತ್ತು ಉತ್ಲವನ ಚಲನೆಗಳಲ್ಲಿ ಅತಿವೇಗ ಗತಿಯಲ್ಲಿ ನರ್ತಿಸುವ ನರ್ತಕರ ಶಿಲ್ಪಗಳಿವೆ. ಈ ಶಿಲ್ಪದಲ್ಲಿ ನರ್ತಕನು ಅಲೀಢಸ್ಥಾನದಲ್ಲಿದ್ದು ಕುತ್ತಿಗೆಯನ್ನು ಒಂದು ಪಕ್ಕಕ್ಕೆಹಾಕಿ ವೀರಾವೇಶ ತೋರುತ್ತಿದ್ದಾನೆ.

ತಮಟೆ ಬಾರಿಸುತ್ತ ನರ್ತಿಸುವ ಹಲವು ಶಿಲ್ಪಗಳನ್ನು ಹಂಪಿಯ ಮಂಟಪದಲ್ಲಿ ಕಾಣುತ್ತೇವೆ. ತಮಟೆ ಇಂದಿಗೂ ಜಾನಪದ ಸಂಪ್ರದಾಯದಲ್ಲಿ ಮುಖ್ಯವಾದ ವಾದ್ಯವಾಗಿರುತ್ತದೆ. ಪುರುಷ ನರ್ತಕರು ತಮಟೆಯನ್ನು ಬಾರಿಸುತ್ತಾ ಹಾಡುತ್ತ, ನೆಗೆಯುವ, ತಿರುಗು ಚಲನೆಗಳಲ್ಲಿ ನರ್ತಿಸುವ ಇವರು ಚಿಕ್ಕದಾದ ಗಡ್ಡ ಚಿಕ್ಕ ಚಲ್ಲಣವನ್ನು ತೊಟ್ಟಿರುತ್ತಾರೆ.

ಇಲ್ಲಿಯವರೆಗೆ ನೀಡಿದ ಈ ವಿವರಣೆಗಳಿಂದ ಮತ್ತು ನಿದರ್ಶನಗಳಿಂದ ಕರ್ನಾಟಕದಲ್ಲಿ ಆರನೇ ಶತಮಾನದಿಂದ ಹದಿನಾರನೇ ಶತಮಾನದವರೆವಿಗೂ ನಾಟ್ಯ ಸಂಪ್ರದಾಯವು ಯಾವ ಸ್ಥಿತಿಯಲ್ಲಿದ್ದಿತೆಂಬ ವಿಷಯದ ಬಗ್ಗೆ ತಿಳಿಯಲು ಸಾಧ್ಯವಾಯಿತು. ಬಾದಾಮಿ ಚಾಲುಕ್ಯರ ಕಾಲದಲ್ಲಿಯ ಶಿಲ್ಪಗಳು ಹೆಚ್ಚು ಮಟ್ಟಿಗೆ ಭರತನ ನಾಟ್ಯ ಶಾಸ್ತ್ರ ಸಂಪ್ರದಾಯವನ್ನೇ ಪ್ರತಿಬಿಂಬಿಸುತ್ತವೆ. ಕಲ್ಯಾಣ ಚಾಲುಕ್ಯರ ಕಾಲದಲ್ಲಿ ವಿಷಯ ನಿರೂಪಣೆಯಲ್ಲಿ ವೈವಿಧ್ಯತೆಯಿದೆ. ಹೊಯ್ಸಳ ನೃತ್ಯಶಿಲ್ಪಗಳು ದೇಶೀ ಪದ್ಧತಿಗೂ ಒತ್ತು ನೀಡುತ್ತವೆ. ಆದರೆ ವಿಜಯನಗರ ಕಾಲದ ನೃತ್ಯ ಶಿಲ್ಪಗಳ ಸಮೀಕ್ಷೆಯು ನೃತ್ಯ ಕಲೆಯನ್ನು ಹೆಚ್ಚು ಜನಪದ ಮನರಂಜನಾ ಮಾಧ್ಯಮದಂತೆ ಬಳಸಿರುವ ಸಂಕೇತವನ್ನು ನೀಡುತ್ತದೆ.