“ನೃತ್ಯ – ಯೋಗ ಸಮನ್ವಯ – ಈ ಎರಡು ಪ್ರಾಚೀನ ಜ್ಞಾನ ಪರಂಪರೆಗಳನ್ನು ಸಮಾನ ವೇದಿಕೆಯಲ್ಲಿ ಇಟ್ಟು ತುಲನಾತ್ಮಕವಾಗಿ ಅಧ್ಯಯನ ಮಾಡುವದೇ ಯೋಗ- ನೃತ್ಯ ಸಮನ್ವಯದ ಏಕೈಕ ಉದ್ದೇಶ. ಈ ದೃಷ್ಟಿಕೋನವನ್ನು ಅರ್ಥೈಸಲು ಬಳಸಿರುವ ಆಧಾರ ಎರಡು ಗ್ರಂಥಗಳು. ಮೊದಲನೆಯದು ಭರತ ಮುನಿಯ ನಾಟ್ಯಶಾಸ್ತ್ರ; ಅದಕ್ಕೆ ಪೂರಕವಾಗಿ, ಆತ್ಮಾಸಾಕ್ಷಾತ್ಕಾರದ ಅನನ್ಯ ಮಾರ್ಗದರ್ಶಿಯಾಗಿ, ಸಾಧನಾ ಪಥವನ್ನಾಗಿ ಅರಳಿಸಿದ ಮಹಾನ್‌ಋಷಿ ಪತಂಜಲಿ ಮಹರ್ಷಿಯ “ಯೋಗದರ್ಶನ,” ಎರಡನೆಯ ಗ್ರಂಥ. ಹೀಗೆ ಸಮಾನ ಭೂಮಿಕೆಯಲ್ಲಿರುವ “ನಾಟ್ಯ ಶಾಸ್ತ್ರ” ಮತ್ತು “ಯೋಗ ದರ್ಶನ” ಗಳ ಹಿನ್ನೆಲೆಯಲ್ಲಿ. ನೃತ್ಯ- ಯೋಗಗಳ ಸಮಾನ ಅಂಶಗಳನ್ನು ಗಮನಿಸೋಣ.

ನಾಟ್ಯ ಅಥವಾ ನರ್ತನಕ್ಕೆ “ಪಂಚಮ ವೇದ” ವೆಂದು ಪ್ರಾಚೀನರು ನೀಡಿದ ಉನ್ನತ ಸ್ಥಾನ; ನಾಟ್ಯದ ಅಧಿದೇವತೆ “ನಟರಾಜ”ನ ಸಾಂಕೇತಿಕ ಅರ್ಥ – ಇವೆಲ್ಲ ನೃತ್ಯದ ಆಧ್ಯಾತ್ಮಿಕ ಆಯಾಮ, ಪಾರಮಾರ್ಥದ ಸಮಗ್ರ ಸಾಧನೆಯ ಗುರಿಯನ್ನು ಎತ್ತಿ ಹಿಡಿಯುತ್ತದೆ. “ನಾಟ್ಯವು ದೇವತೆಗಳನ್ನು ತೃಪ್ತಿಪಡಿಸುವ ಯಾಗ, ಪರಮೇಶ್ವರನೇ ಇದಕ್ಕೆ ಮೂಲ ಪುರುಷ; ಇದು ವಿವಿಧ ರಸಗಳಿಂದ ಕೂಡಿದೆ ” ಎಂದು ಮಹಾಕವಿ ಕಾಳಿದಾಸ ವರ್ಣಿಸಿದ್ದಾನೆ. ನಾಟ್ಯವು ವೇದ ಶಾಸ್ತ್ರಗಳಷ್ಟೇ ಪವಿತ್ರವಾದ ಉಪಾಸನೆಯ ಮಾರ್ಗ, ಸಾಧನೆಯ ಜೀವನಾಡಿ, ಸಿದ್ದಿಯ ಸಂಕೇತ ಎಂದರೆ ಉತ್ಪ್ರೇಕ್ಷೆಯಲ್ಲ.

ಈಗ, ಈ ನೃತ್ಯದ ಸಮನ್ವಯ ಯೋಗದ ಜೊತೆಗೆ ಹೇಗೆ ಏರ್ಪಡುತ್ತದೆ ಎಂದು ಗಮನಿಸೋಣ. ನೃತ್ಯದಲ್ಲಿ ಅಷ್ಟರಸಗಳಾದ ಶೃಂಗಾರ-ಹಾಸ್ಯ-ಕರುಣ-ವೀರ-ರೌದ್ರ-ಭಯಾನಕ, ಭೀಮತ್ಸ ಮತ್ತು ಅದ್ಭುತ- ಇವೆಲ್ಲ ಮನುಷ್ಯನ ಮನಸ್ಸಿನ ಭಾವನೆ- ಆಲೋಚನೆಗಳ ಅಭಿವ್ಯಕ್ತಿ. ಈ ಮಾನಸಿಕ ವ್ಯಾಪಾರಗಳನ್ನು ಕಲಾತ್ಮಕವಾಗಿ ವ್ಯಕ್ತ ಪಡಿಸುವುದೇ ಅಭಿನಯ ಹಾಗೂ ಇದು ಕಲೆಯಲ್ಲಿ ರಸಾನುಭವವಾಗಿ ಹೊರಹೊಮ್ಮುವುದೇ ಪರಮ ಗುರಿ. ಈ ಎಲ್ಲ ರಸಗಳ ಮೂಲ- ಸ್ಥಾಯೀ ಶಾಂತ; ಈ ಅಷ್ಟರಸಗಳೂ ಶಾಂತರಸದಲ್ಲಿ ಲಯವಾದಾಗ ಅಥವಾ ಕರಗಿದಾಗ ದೊರೆಯುವುದೇ ಆನಂದ. ಇದೇ ರಸಾನುಭವ ಕೂಡ. ಈ ಆನಂದದ ಸ್ಥಾಯೀಯಲ್ಲಿ ನಿಂತು ಉಳಿದ ಎಂಟು ರಸಗಳನ್ನು ವಾಹಕವಾಗಿ ಹೊಂದಿ, ಸಂಚಾರಿ ಭಾವಗಳನ್ನು ಸೃಜನಾತ್ಮಕವಾಗಿ ರಸಿಕರ ಮುಂದೆ ಹೊರ ಹೊಮ್ಮಿಸಿ, ಮತ್ತೆ ಅದೇ ಸ್ಥಾಯೀ ಆನಂದದಲ್ಲಿ ನೆಲೆಗೊಳ್ಳುವುದು ನೃತ್ಯದ ಗುರಿ. ಭರತ ಮುನಿಯು ನಾಟ್ಯಶಾಸ್ತ್ರದಲ್ಲಿ ಇದನ್ನು ಈ ರೀತಿ ಸೃಷ್ಟೀಕರಿಸುತ್ತಾರೆ – “ಸಮಾಹಿತ ಮನಸ್ತ್ವಾತ್‌ಮನಃ ಸಮಾಧಾನ ಚ ಸತ್ವ ನಿಷ್ಟಪತ್ತಿರುದ್ದತೇ” ಅಂದರೆ ಮನಸ್ಸು ಸಮಾಧಾನ ಸ್ಥಿತಿಯಲ್ಲಿ ನಿಂತಾಗ ಮಾತ್ರ ಸಾತ್ವಿಕ ಭಾವವು ಜಾಗೃತವಾಗುತ್ತದೆ. ಕಲಕಿದ ಮನ ಬೇರೆ ಬೇರೆ ಭಾವಗಳನ್ನು ಸಾಧಿಸಲಾರದು. “ಶಾಂತ; ಅಥವಾ “ಸಮಾಧಾನ” – ಸಮಾಹಿತದ ಸ್ಥಾಯಿಯಲ್ಲಿ ಮಾತ್ರವೇ ಇತರ ರಸಗಳ ಪರಿಣಾಮಕಾರಿ ಅಭಿವ್ಯಕ್ತಿ  ಸಾಧ್ಯ. ಯೋಗದ ಪರಮ ಗುರಿಯೂ ಸಹ ” ಮನಃ ಪ್ರಶಮನ ಉಪಾಯ:” ಅಂದರೆ ಮನಸ್ಸನ್ನು ಶಾಂತಗೊಳಿಸುವ ಉಪಾಯವೇ ಯೋಗ. ಈ ಶಾಂತ ಸ್ಥಿತಿಯಲ್ಲಿ ಭಾವನೆಗಳು ಶುದ್ಧವಾಗಿ ಅರಳುತ್ತವೆಯೇ ವಿನಃ ಕೆರಳಿ ಸಹೃದಯರ ಭಾವನೆಗಳನ್ನು ವಿಕಾರಗೊಳಿಸುವದಿಲ್ಲ. ಈ ದೃಷ್ಟಿಯಿಂದ ನೃತ್ಯವು ಒಂದು ಸಾಧನಾ ತಂತ್ರವೇ ಹೊರತು ಕೇವಲ ಪರದರ್ಶನ ಕಲೆ ಅಲ್ಲ ಎಂಬುದು ಸ್ಪಷ್ಟಗೊಳ್ಳುತ್ತದೆ. ನಮ್ಮ ಪ್ರಾಚೀನ ಯೋಗ-ವೇದಾಂತವೂ ಇದೇ ಸತ್ಯವನ್ನು ಪ್ರತಿಪಾದಿಸುತ್ತದೆ. ತೈತ್ತರೀಯ ಉಪನಿಷತ್ತು ಮನುಷ್ಯನನ್ನು “ರಸೋ ವೈ ಸಃ” ಎಂದು ಕರೆದಿದೆ – ಅಂದರೆ ” ನೀನು ರಸವೇ ಆಗಿದ್ದೀಯ” ಎಂದರ್ಥ. ಇದೇ ಆನಂದ, “ಸತ್‌-ಚಿತ್‌-ಆನಂದ.” ವ್ಯಕ್ತಿಯ ನಿಜ ಸ್ವರೂಪ- ಮೂಲದಲ್ಲಿ ಆನಂದ: ಎಲ್ಲವೂ ಆನಂದದಿಂದ ಹೊರ ಹೊಮ್ಮುತ್ತದೆ. ಆದ್ದರಿಂದ ಸುಪ್ತವಾಗಿರುವ ಈ ಚೇತನವೇ ಆನಂದ ಎಂದು ಋಷಿಗಳ ಅಭಿಮತ.

ಪತಂಜಲಿ ಮಹರ್ಷಿಗಳು “ಯೋಗ ದರ್ಶನ” ಗ್ರಂಥದಲ್ಲಿ “ಯೋಗಃ ಚಿತ್ತ ವೃತ್ತಿ ನಿರೋಧಃ ಎನ್ನುತ್ತಾರೆ. ಚಿತ್ತ ವ್ಯಾಪಾರಗಳು ಇಲ್ಲದ ಸ್ಥಿತಿಯೇ ಯೋಗ; ಆನಂದ; ಮನಸ್ಸಿನ ಭಾವನೆ- ವಿಚಾರಗಳ ಏರುಪೇರು, ಆಗು ಹೋಗುಗಳು ನಿಶ್ಚಲವಾಗಿ, ಶಾಂತವಾದಾಗ ಸಿಗುವ ದರ್ಶನವೇ ಅವನ ನಿಜಸ್ವರೂಪ; ಅದು ಆನಂದವಲ್ಲದೆ ಮತ್ತೇನೂ ಅಲ್ಲ.

ಹಾಗಾದರೆ, ಮನಸ್ಸು ಪ್ರಶಾಂತಗೊಂಡು, ಸಂಸ್ಕಾರಗಳು ಶುದ್ಧವಾಗಿ, ನಮ್ಮ ಯೋಗ-ವೇದಾಂತ೦-ನಾಟ್ಯ ಶಾಸ್ತ್ರಗಳು ಸಾರಿ ಸಾರಿ ಹೇಳುವ ಆ ಸತ್‌-ಚಿತ್‌- ಆನಂದವನ್ನು ಪಡೆಯುವ ಕ್ರಮ ಅಥವಾ ಸಾಧನಾ ಮಾರ್ಗ ಯಾವುದು? ಈ ಪ್ರಶ್ನೆಗೆ ಕೊಂಚ ದಾರಿಯನ್ನು ಹುಡುಕೋಣ.

ತೈತ್ತರೀಯ ಉಪನಿಷತ್ತು “ಪಂಚ ಕೋಶ ವಿವೇಕ” ಎಂಬ ಸುಂದರ ಅರ್ಥಪೂರ್ಣವಾದ ಒಂದು ಮಾದರಿಯಿಂದ ಮಾನವನ ವ್ಯಕ್ತಿತ್ವವನ್ನು ವಿವರಿಸುತ್ತದೆ. ನಮ್ಮ ವ್ಯಕ್ತಿತ್ವ ಐದು ಕೋಶ ಅಥವಾ ಪದರಗಳಿಂದ ಕೂಡಿದೆ; ಅವೆಂದರೆ ಅನ್ನಮಯ ಕೋಶ-ಪ್ರಾಣಮಯ ಕೋಶ-ಮನೋಮಯ ಕೋಶ-ವಿಜ್ಞಾನಮಯ ಕೋಶ ಹಾಗೂ ಐದನೆಯದು ಆನಂದಮಯ ಕೋಶ. ಆನಂದವು ವ್ಯಕ್ತಿಯ ನಿಜ ಸ್ವರೂಪವಾದರೂ, ಉಳಿದ ನಾಲ್ಕು ಕೋಶಗಳು, ಅಹಂಕಾರದಿಂದ ತುಂಬಿ, ಮಾನಸಿಕ ಕ್ಲೇಶಗಳಿಂದ ಕಲುಷಿತವಾಗಿ, ಆನಂದದ ಅನುಭವ- ದರ್ಶನ ಅವನಿಗೆ ಸಾಧ್ಯವಾಗುತ್ತಿಲ್ಲ. ರಾಗ -ದ್ವೇಷ, ಭಯ, ಅಜ್ಞಾನಗಳು ಅವನ ಎಲ್ಲ ದುಃಖ ನೋವುಗಳಿಗೆ ಕಾರಣವಾಗಿದೆ. ಆದ್ದರಿಂದ ಸ್ಪಟಿಕದಂತೆ ಹೊಳೆಯುವ ಆನಂದಮಯ ಕೋಶವನ್ನು ತಲುಪುವುದೇ ಸಾಧನೆಯ ಪರಮಗುರಿ ಎಂದು ತಿಳಿಯುತ್ತದೆ. ಯೋಗಶಾಸ್ತ್ರವು ಇದಕ್ಕೆ ಅಷ್ಠಾಂಗ ಯೋಗ ಮಾರ್ಗವನ್ನು ಸೂಚಿಸಿದೆ. ಅವೆಂದರೆ -ಯಮ-ನಿಯಮ-ಆಸನ-ಪ್ರಾಣಾಯಾಮ. ಪ್ರಾತ್ಯಾಹಾರ-ಧಾರಣ-ಧ್ಯಾನ-ಸಮಾಧಿ. ಇದರ ಕ್ರಮಬದ್ಧ ಸಾಧನೆಯಿಂದ ವ್ಯಕ್ತಿತ್ವವು ಶುದ್ಧಗೊಂಡು ಆನಂದಮಯ ಚೈತನ್ಯದ ಅನುಭವ ಸಾಧ್ಯ.

ಪಂಚ ಕೋಶ ವಿವೇಕ

೧.    ಅನ್ನಮಯ ಕೋಶ

೨.    ಪ್ರಾಣಮಯ ಕೋಶ

೩.    ಮನೋಮಯ ಕೋಶ

೪.   ವಿಜ್ಞಾನಮಯ ಕೋಶ

೫.   ಆನಂದಮಯ ಕೋಶ

ಮಾನವ ವ್ಯಕ್ತಿತ್ವದ ಐದು ಕೋಶಗಳು

ಇದೇ ರೀತಿ ನಾಟ್ಯಶಾಸ್ತ್ರದಲ್ಲಿ ಚತುರ್ವಿಧ ಅಭಿನಯದ ಸಾಧನಾ ಸೂಚಿಯನ್ನು ಭರತ ಮುನಿ ನೀಡಿದ್ದಾರೆ. ಅವೆಂದರೆ ಅಂಗಿಕಾಭನಯ, ವಾಚಿಕಾಭಿನಯ, ಆಹಾರ್ಯಾಭಿನಯ, ನಾಲ್ಕನೆಯದು ಸಾತ್ವಿಕಾಭಿನಯ. ನೃತ್ಯ ಸಾಧನೆಯ ಆರಂಭ ಅನ್ನಮಯ, ಪ್ರಾಣಮಯ ಕೋಶಗಳ ಶುದ್ಧೀಕರಣಕ್ಕೆ ಮೀಸಲು. ತಾಳಲಯ ಬದ್ಧವಾದ ಅಂಗಾಂಗ ಚಲನೆಗಳು ನೃತ್ಯದಲ್ಲಿ ಏರ್ಪಟ್ಟು ಶಿಸ್ತು ಬದ್ಧ ಶರೀರ -ಪ್ರಾಣ-ಉಸಿರಾಟಗಳ ನಿಯಂತ್ರಣ ಸಾಧ್ಯವಾಗಿಸುತ್ತದೆ. ಎಲ್ಲ ಜೈವಿಕ, ಮಾನಸಿಕ, ಬೌದ್ಧಿಕ ಚಟುವಟಿಕೆಗಳ ಶಕ್ತಿಯೇ ಪ್ರಾಣ. ಈ ಪ್ರಾಣ ಸುಮಾರು ೭,೨೦,೦೦೦ ನಾಡಿಗಳಲ್ಲಿ ಹರಿಯುತ್ತಿದ್ದರೂ, ಮಲದಿಂದ ಕುಡಿ, ಕಲುಷಿತವಾಗಿ, ಪ್ರಾಣ ಶಕ್ತಿಯ ಸಂಚಾರ ಸುಗಮವಾಗಿಲ್ಲ. ನೃತ್ಯ ಸಾಧನೆಯ ಮೂಲಕ ಈ ನಾಡಿಗಳು ಶುದ್ಧವಾದಾಗ, ಪ್ರಾಣದ ಹತೋಟಿಯಿಂದ ಅಂತರ್ಯದ ಚೈತನ್ಯ ಪ್ರಕಾಶಮಾನವಾಗಿರುತ್ತದೆ. ನೃತ್ಯದಲ್ಲಿ ಅಂಗಾಂಗ ಚಲನೆ ಕೇವಲ ಶಾರೀರಿಕ ಚಟುವಟಿಕೆಯಲ್ಲ. ನರನಾಡಿ, ಮಾಂಸ ಖಂಡ, ಮನಸ್ಸು – ಬುದ್ದಿಗಳ ಸಮರ್ಪಕ ಜೋಡಣೆಯಿಂದ ಉಂಟಾಗುವ ಕಲಾತ್ಮಕ ಅಭಿವ್ಯಕ್ತಿ; ಒಂದು ರಸಾನುಭವ. ಇದರ ಸಂಯೋಜಕ ಶಕ್ತಿಯೇ ಪ್ರಾಣ.

ಮುಂದಿನ ಎರಡು ಕೋಶಗಳು – “ಮನೋಮಯ”, ಮತ್ತು “ವಿಜ್ಞಾನಮಯ” ಮನೋಮಯವೆಂದರೆ – ಭಾವನೆ, ಕಲ್ಪನೆ, ನೆನಪು, ಅನುಭವಗಳ ಒಟ್ಟು ಮೊತ್ತ. ವಿಜ್ಞಾನಮಯ ಎಂದರೆ – ವಿಚಾರದ ಮೂಲಕ ಸರಿ -ತಪ್ಪುಗಳನ್ನು ವಿಶ್ಲೇಷಣೆ ಮಾಡಿ, ತರ್ಕ – ವಿವೇಕಗಳ ರೂಢಿಗೊಳಿಸುವಿಕೆ. ಆದರೆ ಬುದ್ಧಿ- ಅಹಂಕಾರಗಳು ಸ್ವಾರ್ಥ ಕೇಂದ್ರವಾಗಿ, ಈ ಕೋಶವು ಕಲುಷಿತಗೊಂಡಿದೆ. ನೃತ್ಯ-ಯೋಗ ಸಾಧನೆ ಈ ಕೋಶಗಳ ಶುದ್ಧೀಕರಣದಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.

ನೃತ್ಯದಲ್ಲಿ ಸಾತ್ವಿಕಭಿನಯವು ಮುಖ್ಯವಾಗಿ ಮನೋಮಯ ಹಾಗೂ ವಿಜ್ಞಾನಮಯ ಕೋಶಗಳ ಶುದ್ಧೀಕರಣಕ್ಕೆ ಮೀಸಲು, ಪ್ರೀತಿ-ದ್ವೇಷ, ಕೋಪ-ತಾಪ, ಆಸೆ-ನಿರಾಸೆ, ವಿಶ್ವಾಸ, ವಿಷಾದ ಇತ್ಯಾದಿ ಭಾವನೆಗಳ ಕಾರ್ಯ-ಕಾರಣ ಸಂಬಂಧ, ನವರಸಗಳನ್ನು ವ್ಯಕ್ತಿತ್ವ ನಿರ್ವಹಣೆ, ಕಲ್ಪನೆ, ವಿಚಾರ, ಅನುಭವದ ಆಳಕ್ಕೆ ಇಳಿಯುವ ತಾದಾತ್ಮ್ಯ ಭಾವನೆ ಇವುಗಳ ಪರಿಪಕ್ವತೆ – ಇವೆಲ್ಲಾ ಈ ಎರಡು ಕೋಶಗಳ ಶಿಕ್ಷಣದಿಂದ ಸಾಧ್ಯ. ಇದೇ ಸಾತ್ವಿಕ ಅಭಿನಯದ ತಾತ್ವಿಕ ನೆಲೆ, ಈ ಭೂಮಿಕೆಯಲ್ಲಿ ನಿಂತಾಗ ಮಾತ್ರವೇ ಶಾಂತದ, ಆನಂದದ ಸೆಲೆ ಚಿಮ್ಮುತ್ತದೆ. ನೃತ್ಯಕ್ಕೆ ಶರೀರದಷ್ಟೇ ಮನಸ್ಸು ಮುಖ್ಯ. ಮನಸ್ಸು ರಾಗ, ದ್ವೇಷಗಳ ಬಂಧನಕ್ಕೆ ಸಿಲುಕಿ, ಒತ್ತಡದಲ್ಲಿ ಪಂಚಕೋಶಗಳು ಕಲುಷಿತವಾಗಿ ಸಮಗ್ರ ವ್ಯಕ್ತಿತ್ವದ ಆನಂದ ತತ್ವ ಮರೆಯಾಗುತ್ತದೆ. ಇದೇ ಮನಸ್ಸು ಸಂಸ್ಕಾರ – ಸಾಧನೆಗಳ ಬಲದಿಂದ, ದೈವಾನುಗ್ರಹದಿಂದ ಸಾತ್ವಿಕವಾಗಿ ಏರ್ಪಟ್ಟು ಆನಂದಮಯವಾದಾಗ, ಎಲ್ಲಾ ವೃತ್ತಗಳೂ ಬಂಧಮುಕ್ತರಾಗಿ ರಸಗಳಾಗಿ ಅಭಿವ್ಯಕ್ತಿಯ ಮಾಧ್ಯಮವಾಗಿ ಪರಿಣಮಿಸುತ್ತದೆ. ಇದನ್ನೇ ಭರತ ಮುನಿ ನಾಟ್ಯ ಶಾಸ್ತ್ರದಲ್ಲಿ ಸಾತ್ವಿಕಾಭಿನಯದ ರೂಪದಲ್ಲಿ ಪ್ರತಿಪಾದಿಸಿರುವುದು.

ಪಂಚಕೋಶ ನೃತ್ಯ ಯೋಗ ಸಾಧನೆ

ಕೋಶ

ಕೋಶ

ಕೋಶ

ಅನ್ವಮಯ ಪ್ರಾಣಮಯ ಕೋಶ ಅಡವು ಹಾಗೂ ನೃತ್ಯದಲ್ಲಿ ತಾಳಲಯ ಬದ್ಧ ಅಂಗಾಂಗ ಚಲನೆ ಆಸನ ಪ್ರಾಣಯಾಮ
ಮನೋಮಯ ವಿಜ್ಞಾಮಯ ಕೋಶ ಅಷ್ಟರಸಗಳು ಮೂಲ ಸ್ಥಾಯೀ ಶಾಂತರಸದ ಪರಿವಾರದ ಸಿದ್ಧಿ ಭಾವಲಯವಾಗಿ  
ಆನಂದಮಯ ಕೋಶ ಸಾತ್ವಕರಸ ಸಿದ್ಧಿ ಬೆತ್ತವೃತಿಗಳ ನಿರೋಧ ಸ್ಥಿತಿ

“ನೃತ್ಯಕ್ಕೆ ಶರೀರದಷ್ಟೇ ಮನಸ್ಸು ಮುಖ್ಯ, ಮನಸ್ಸು ರಾಗ ದ್ವೇಷಗಳ ಬಂಧನಗಳಿಂದ ಕಲುಷಿತವಾದಾಗ ಸಮಗ್ರ ವ್ಯಕ್ತಿತ್ವದ ಆನಂದ ತತ್ವ ನಾಶವಾಗುತ್ತದೆ”.

ಯೋಗದಲ್ಲೂ ಈ ಎರಡು ಕೋಶಗಳ ಶುದ್ಧಿ, ನಿಯಂತ್ರಣಕ್ಕೆ ಆಸನ ಪ್ರಾಣಾಯಾಮಗಳನ್ನು ಪತಂಜಲಿ ಮಹರ್ಷಿಗಳು ಸೂಚಿಸಿದ್ದಾರೆ. ಹೀಗಾಗಿ, ನೃತ್ಯದ ಹಲವು ಅಡವುಗಳು ಮತ್ತು ನೂರೆಂಟು ಕರಣಗಳು ಹಲವು ಆಸನಗಳ ಸಾಮ್ಯ ಹೊಂದಿರುವುದನ್ನು ಗಮನಿಸಬಹುದು.

ಪತಂಜಲಿಗಳ “ಅಷ್ಟಾಂಗ ಯೋಗ”ದ ಉದ್ದೇಶವೂ ಇದೇ ಆಗಿದೆ. ತನ್ಮೂಲಕ ವ್ಯಕ್ತಿಯ ಶರೀರ – ಮನಸ್ಸು ಬುದ್ಧಿಗಳ ಸಮತ್ವದಿಂದ ಸಮಾಧಿಯನ್ನು ಪಡೆಯುವುದೇ ಗುರಿ. “ಅವಿದ್ಯಾ-ಅಸ್ಮಿತಾ-ರಾಗ-ದ್ವೇಷ, ಅಭಿನಿವೇಷ” ಗಳೆಂಬ ಐದು ಕ್ಲೇಶಗಳನ್ನು ಶುದ್ಧಿಕರೀಸಿ, ವಿವೇಕದ ಬೆಳಕಿನಲ್ಲಿ ನಿಲ್ಲುವುದೇ ಸಾಧನೆ. “ಯೋಗಾಂಗಾನುಷ್ಠಾನಾತ್‌ಅಶುದ್ಧಿಕ್ಷಯೇ ಜ್ಞಾನ ದೀಪ್ತಿ ಅವಿವೇಕ ಖ್ಯಾತೆ: !” ಎಂದು ಪತಂಜಲಿಗಳು ತಿಳಿಸುತ್ತಾರೆ.

ವಿವೇಕದ ಬೆಳಕಿನಲ್ಲಿ ಸಮರ್ಪಣಾ ಭಾವದಲ್ಲಿ ಅಹಂ ಮತ್ತು ಕ್ಷೇಷರಹಿತ ಮನಃ ಸ್ಥಿತಿಯಲ್ಲಿ ಎಲ್ಲ ಸಾಧನೆಗಳು ಬೆಳಕಿನಡೆಗೆ ನಮ್ಮನ್ನು ಒಯ್ಯುತ್ತ ಆತ್ಮಸಾಕ್ಷಾತ್ಕಾರದ ದಾರಿ ದೀಪವಾಗಬಲ್ಲವು. ಅದು ನೃತ್ಯವೇ ಆಗಿರಲಿ, ಯೋಗವೇ ಆಗಿರಲಿ, ದಾರಿ ಹಲವು-ಗುರಿಯೊಂದೇ ತತ್ವಕ್ಕೆ ಒಳಪಟ್ಟಿದೆ. “ಏಕಂ ಸತ್‌ವಿಪ್ರಾಃ ಬಹುದಾ ವದಂತಿ” ಹೀಗೆ ಯೋಗ-ನೃತ್ಯ-ಎರಡರ ಭೂಮಿಕೆಯು ಒಂದೇ ಆಗಿದ್ದು ಮನುಷ್ಯನನ್ನು ತನ್ನ ಮೂಲ ಸ್ವರೂಪ ಆನಂದದಲ್ಲಿ ನಿಲ್ಲಿಸಿ, ಬದುಕನ್ನು ಕಲಾತ್ಮಕವಾಗಿಸುವುದೇ ಜೀವನ ಕಲೆ; ಅದುವೇ ಕಲಾ ಜೀವನ. ಇದೇ ಕಲಾಸಂಯೋಗವಲ್ಲವೇ ! ಇದೇ ಯೋಗ-ನೃತ್ಯ-ಸಮನ್ವಯವಲ್ಲವೇ ?