ಸಂಗೀತ  ಕಛೇರಿ ಕರ್ಣಾನಂದವನ್ನುಂಟು ಮಾಡಿದರೆ, ನೃತ್ಯ ಕಛೇರಿ ನಯಾನಾನಂದ ಮತ್ತು ಕರ್ಣಾನಂದವನ್ನುಂಟು ಮಾಡುತ್ತದೆ. ಕಣ್ಣು ಮತ್ತು ಕಿವಿಯ ಮೂಲಕ ಆನಂದಾನುಭವ ಹೃದ್ಗೋಚರವಾಗುತ್ತದೆ. ನರ್ತನ ಗಾಂಧರ್ವ ವೇದ ಆಧಾರಿತ. ಭರತನ ನಾಟ್ಯ ಶಾಸ್ತ್ರದ ಪ್ರಕಾರ ಸ್ವರ, ತಾಳ ಮತ್ತು ಪದಗಳ ಸಹಿತವಾಗಿ ಬೇರೆ ಬೇರೆ ವಾದ್ಯಗಳ ಮೇಳೈಸುವಿಕೆಯಿಂದ ಉಂಟಾಗುವ ಸಂಗೀತಕ್ಕೆ “ಗಂಧರ್ವ ಸಂಗೀತ” ಎನ್ನುತ್ತಾರೆ. ಇದು ದೇವರಿಗೆ ಅತ್ಯಂತ ಪ್ರಿಯವಾದದ್ದು.

ದೃಶ್ಯ ಮಾಧ್ಯಮದಲ್ಲಿ ಒಂದು ಪೂರ್ಣ ಸಿದ್ಧಿಯನ್ನು ಪಡೆಯಬಯಸುವಾಗ ಪ್ರಯೋಗದ ಎರಡು ಭಾಗಗಳಾದ ದೃಶ್ಯ ಹಾಗೂ ಶ್ರವ್ಯ ಒಂದಕ್ಕೊಂದು ಪರಸ್ಪರ ಹೊಂದಾಣಿಕೆಯಿಂದ ಇರಬೇಕಾದದ್ದು ಅತ್ಯವಶ್ಯಕ. ಎರಡೂ ಕೈ ತಟ್ಟಿದಾಗ ಚಪ್ಪಾಳೆಯ ಶಬ್ದ ವಿಧಿತವಾಗುವಂತೆ ದೃಶ್ಯ ಶ್ರವ್ಯಗಳ ಸಮರ್ಪಕ ಮಿಲನದಿಂದ ನರ್ತನ ಕಛೇರಿಯ ಸಂಪೂರ್ಣ ಸಿದ್ಧಿ ಸಾಧ್ಯ.

ರಸೋಸ್ಪತ್ತಿಯೇ ನರ್ತನದ ಸಿದ್ಧಿ. ಈ ಸಿದ್ಧಿಗೆ ಪೂರಕ ಸಂಗೀತ. ಆಯಾ ಅಪೇಕ್ಷಿತ ರಸಗಳಿಗೆ ಅನುಗುಣವಾಗಿ ರಾಗ ಮತ್ತು ರಾಗದ ಸಂಚಾರಗಳನ್ನು ನಿಯೋಜಿಸಿದಾಗ ಮಾತ್ರ ಅಪೇಕ್ಷಿತ  ರಸದಲ್ಲಿ ತನ್ಮಯತೆ ಬರುತ್ತದೆ. ಪ್ರೇಕ್ಷಕರಿಗೆ ಮಾತ್ರವಲ್ಲದೆ ನರ್ತನ ಮಾಡುವವರಿಗೂ ಕಾವ್ಯ ರಸದಲ್ಲಿ ತನ್ಮಯತೆ ಉಂಟು ಮಾಡುತ್ತದೆ – ನೃತ್ಯ ಸಂಗೀತ. ಸ್ವತಃ ಕಾವ್ಯರಸವನ್ನು ಹೊಮ್ಮಿಸಿ ಪ್ರೇಕ್ಷಕರಿಗೆ ಆ ರಸದ ಅನುಭವ ಉಂಟಾಗುವಂತೆ ಮಾಡಬಲ್ಲರು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದಾಗ ನರ್ತನ ಕಛೇರಿಗೆ ನರ್ತನ ಸಂಗೀತ ಎಷ್ಟು ಅವಶ್ಯಕ ಎಂಬುದು ಗೋಚರವಾಗುತ್ತದೆ.

ಒಂದು ನಾಣ್ಯದ ಎರಡು ಮುಖಗಳು ಚೆನ್ನಾಗಿದ್ದಾಗಲೇ ಅದಕ್ಕೆ ಬೆಳೆ. ಒಂದು ಕಡೆ ಸವಕಲಾದರೂ ಅದು ಸವಕಲು ನಾಣ್ಯವೆನ್ನಿಸಿಕೊಳ್ಳುತ್ತದೆಯೇ ಹೊರತು ಹೊಸ ನಾಣ್ಯವೆನ್ನಿಸಿಕೊಳ್ಳುವುದಿಲ್ಲ. ಅಂತೆಯೇ ನರ್ತನ ಮತ್ತು ನರ್ತನ ಸಂಗೀತ ಎರಡೂ ಸಾಹಿತ್ಯಾರ್ಥ, ಭಾವ, ತಾಳ ಮತ್ತು ಲಕ್ಷಣಗಳಿಗೆ ಅನುಗುಣವಾಗಿದ್ದಾಗ ಮಾತ್ರ ಚೆತೋಹಾರಿಯಾಗಿ ಉನ್ನತ ಮಟ್ಟದಲ್ಲಿರುತ್ತದೆ.

ನಂದಿಕೇಶ್ವರ ತನ್ನ ಅಭಿನಯ ದರ್ಪಣದಲ್ಲಿ ನರ್ತನ ಸಂಗೀತವನ್ನು ನೃತ್ಯ ಕಾರ್ಯಕ್ರಮದ ಬಹಿರ್ ಪ್ರಾಣವೆಂದು ಪರಿಗಣಿಸಿದ್ದಾನೆ. ಕಲಾವಿದನ ಸ್ವಯಂ ಅರ್ಜಿತ ಗುಣಗಳು ಅತಃಪ್ರಾಣವಾದರೆ ಕಲಾವಿದರಿಗೆ ರಂಗದ ಮೇಲೆ ಸಹಕಾರ ನೀಡುವ ಸಂಗೀತ ಕಲಾವಿದರು, ಕಲಾವಿರದ ಬಹಿರ‍್ಪ್ರಾಣವಾಗಿರುತ್ತಾರೆ.

” ಮೃದಂಗಶ್ಚ ಸುತಾಳೌಚ ವೇಣುರ್ಗೀತಾ ತತಃ ಶೃತಿಃ
ಏಕವೀಣ ಕಿಂಕಿಣಿ ಚ ಗಾಯಕ ಸುನಿಶ್ರುತ: ”

 

ಭರತನ ನಾಣ್ಯ ಶಾಸ್ತ್ರದ ಪ್ರಕಾರ ವೀಣೆ ಮತ್ತು ಗಾಯಕನ ಶಾರೀರ (ಕಂಠದ ನಾದ) ಸರಿಯಾಗಿ ಜೊತೆಯಾದಾಗ, ಕೊಳಲಿನ ಸ್ವರಗಳಿಗೆ ಸಿದ್ಧಿ ಉಂಟಾಗುತ್ತದೆ. ಗಾಯಕನ ಸ್ವರ ವೀಣೆಯ ಸ್ವರಕ್ಕೆ ಸೇರಿ ಸದರ ಜೊತೆ ಕೊಳಲಿನ ಸ್ವರವೂ ಮೇಳೈಸಿದಾಗ ಶ್ರೋತೃಗಳಲ್ಲಿ ಮೆಚ್ಚುಗೆ ಮನೆ ಮಾಡುತ್ತದೆ. ಗಾಯನದಲ್ಲಿ ಹಿತವಿದ್ದಾಗ ಮಾತ್ರ ದೃಶ್ಯ ಮಾಧ್ಯಮವಾದ ನರ್ತನದಲ್ಲಿ ಕಲಾವಂತಿಕೆ ಮೇಲೇಳುತ್ತದೆ. ವೇಣುವಿನ ಆಧಾರ ಬೇಕು. ಕೃಷ್ಣನ ಕೊಳಲಿನ ನಾದಕ್ಕೆ ಗೋಪಿಯರು, ಗೋಪಾಲಕರು, ವೃದ್ಧರು ಅಲ್ಲದೆ ಪಶುಪಕ್ಷಿಗಳೂ ನರ್ತಿಸುತ್ತಿರಲಿಲ್ಲವೆ! ನರ್ತನದ ಇನ್ನೊಂದು ಪ್ರಮುಖ ಅಂಗ ತಾಳ. ತಾಳಕ್ಕೆ ಪುಷ್ಟಿ ನೀಡುವ ಸಾಧನಗಳು ಪುಷ್ಕರವಾದ್ಯಗಳು ಹಾಗೂ ಕಂಚಿನತಾಳ ಮತ್ತು ಒಳ್ಳೆಯ ನಾದಭರಿತವಾದ ಗೆಜ್ಜೆಗಳು. ನರ್ತನ ಕಛೇರಿಯಲ್ಲಿ ಸಂಗೀತದ ಸ್ವರಗಳನ್ನು ವೀಣೆ, ವೇಣು ಮತ್ತು ಗಾಯನ ಪ್ರತಿಪಾದಿಸಿದರೆ, ತಾಳವಾದ್ಯಗಳು ಪಾದಚಲನೆಯನ್ನು ಅನುಸರಿಸುತ್ತವೆ. ಅಭಿನಯದ ಒತ್ತುಗಳನ್ನು ತಾಳವಾದ್ಯಗಳು ಎತ್ತಿಹಿಡಿಯುತ್ತವೆ. ಶಾರೀತಿಕ ಚಲನೆಗಳೇ ಆಗಿರಲಿ, ಅಭಿನಯದ ತೀವ್ರತೆಯೇ ಆಗಿರಲಿ- ಇವು ತಾಳನಿಯಾಮಕದಲ್ಲಿ ಸಂಚರಿಸುತ್ತವೆ. ಹೀಗೆ ನಂದಿಕೇಶ್ವರ ನರ್ತನದ ಬಹಿರ್ ಪ್ರಾಣ-ನೃತ್ಯ ಸಂಗೀತ- ಒಂದು ನರ್ತನ ಕಛೇರಿಗೆ ಜೀವಾಳದ ಅರ್ಧಭಾಗ ಎಂದಿದ್ದಾರೆ.

ಪ್ರೊಫೆಸರ್ ಸಾಂಬಮೂರ್ತಿಯವರು ಕರ್ನಾಟಕ ಸಂಗೀತಾಶಾಸ್ತ್ರದ ಪ್ರಕಾರ ಕಲ್ಪಿತ ಸಂಗೀತವನ್ನು ಕಲಾತ್ಮಕ ಸಂಗೀತ, ದೇವಸಂಗೀತ, ನೃತ್ಯ ಸಂಗೀತ, ಗೇಯ ಸಂಗೀತ, ಯುದ್ಧ ಸಂಗೀತ, ಜಾನಪದ ಸಂಗೀತ ಎಂದು ವಿಭಾಗಿಸುತ್ತಾರೆ. ಈ ರಸಾನುಭವದ ಸಂಗೀತಗಳು ಚಿತ್ತವೃತ್ತಿಯ ಭಾಷೆ ಎನ್ನುತ್ತಾರೆ. ಕಲಾವಿದನ ಸಾಹಿತ್ಯ ರಸಾನುಭವಕ್ಕು ಮತ್ತು ಪ್ರೇಕ್ಷಕರ ನೃತ್ಯ ರಸಾನುಭವಕ್ಕೂ ನೃತ್ಯ ಸಂಗೀತ ಒಂದು ಸೇತುವೆ. ಈ ಸೇತುವೆ ಸ್ವತಯುತವಾಗಿದ್ದಷ್ಟೂ ದೃಶ್ಯರಸ ಇಮ್ಮಡಿಯಾಗಿ ಅನುಭವಕ್ಕೆ ಬರುತ್ತದೆ.

ಸಾಹಿತ್ಯರಸ – ಶಬ್ದಗಳಿಂದಲೂ

ನಾಟ್ಯರಸ – ಶಬ್ದ ಮತ್ತು ಅಭಿನಯಗಳಿಂದಲೂ

ಗೇಯರಸ – ಶಬ್ದಾ – ಭಿನಯ, ಸಂಗೀತದಿಂದ ಹೃದ್ಗೋಚರವಾಗುತ್ತದೆ.

ನಾಟ್ಯಶಾಸ್ತ್ರದಲ್ಲಿ ಸ್ವರಗಳ ಪ್ರಯೋಗ ವಿಧಾನವನ್ನು “ವರ್ಣ” ಎಂದು ಕರೆಯುತ್ತಾರೆ. ವರ್ಣದಲ್ಲಿ ೪ ವಿಧ.

ಆರೋಹಿ – ಸ್ವರಗಳು ಏರುತ್ತ ಹೋಗುವುದು

ಅವರೋಹಿ – ಸ್ವರಗಳು ಇಳಿಯುತ್ತ ಬರುವುದು

ಸ್ಥಾಯಿ – ಒಂದೇ ಸ್ವರದಲ್ಲಿ ನಿಲ್ಲುವುದು

ಸಂಚಾರಿ – ಒಂದು ಸ್ವರಕ್ಕೆ ಮತ್ತೊಂದು ಸ್ವರವನ್ನೂ ಜೋಡಿಸುವುದು.

ಒಂದು ರಸವನ್ನು ಪ್ರತಿಪಾದಿಸುವಾಗ ಕನಿಷ್ಠ ಎರಡು ವರ್ಣಗಳ ಪ್ರಯೋಗವಾದರೂ ಇರಬೇಕು. ಉದಾಹರಣೆಗೆ ವಿರಹದ ಹೆಚ್ಚಳಿಕೆಯನ್ನು ತೋರಿಸುವಾಗ ಸ್ವರಗಳನ್ನು ಏರಿಸುತ್ತ (ಆರೋಹಿ) ಮಧ್ಯಮಧ್ಯದಲ್ಲಿ ಒಂದೇ ಸ್ವರದಲ್ಲಿ ನಿಲ್ಲಿಸುತ್ತ (ಸ್ಥಾಯಿ) ಹೋಗಬೇಕು. ಆಗಲೇ ಕಲಾವಿದರು ವಿರಹದ ಹಂತ ಹಂತ ಹೆಚ್ಚಳವನ್ನು ಸಮರ್ಪಕವಾಗಿ ತೋರಿಸಬಹುದು. ಅಂದರೆ ನೃತ್ಯ ಸಂಗೀತದಲ್ಲಿ ಆರೋಹಿ ಮತ್ತು ಸ್ಥಾಯಿ ವರ್ಣಗಳ ಪ್ರಯೋಗ ನಡೆದಿರುತ್ತದೆ.

ಶೃಂಗಾರ ಮತ್ತು ಹಾಸ್ಯರಸದಲ್ಲಿ – ಮಧ್ಯಮ ಮತ್ತು ಪಂಚಮಗಳು, ವೀರರೌದ್ರ ಮತ್ತು ಅದ್ಭುತಕ್ಕೆ – ಷಡ್ಜ ಮತ್ತು ರಿಷಭಗಳು, ಕರುಣಕ್ಕೆ – ಗಾಂಧಾರ, ವಿಷಾಧಗಳೂ, ಭೀಭಿತ್ಸ್ಯ ಮತ್ತು ಭಯಾನಕಗಳಿಗೆ ಧೈವತ ಬಲಯುತವಾಗಿ ಪ್ರಯೋಗಿಸಬೇಕೆಂದಿದ್ದಾನೆ ಭರತ.

ನೃತ್ಯ ಮಾಡುವಾಗ ಕಾವ್ಯಾರ್ಥವನ್ನು ಮೂರು ರೀತಿಯಾಗಿ ಪರಿಗಣಿಸಲ್ಪಡುತ್ತದೆ. ಮೊದಲು ಪದ ಅರ್ಥ, ಎರಡನೆಯದು ವಾಕ್ಯಾರ್ಥ ಮತ್ತು ಮೂರನೆಯದು ಒಳತಾತ್ಪರ್ಯ ಅರ್ಥ. ಪದಶಃ ಅರ್ಥವನ್ನು ತಿಳಿಯಪಡಿಸಿವಾಗ ಗಾಯನ ಸ್ವಭಾವಿಕವಾಗಿತ್ತದೆ. ವ್ಯಕ್ಯಾರ್ಥವನ್ನು ಪ್ರದರ್ಶಿಸುವಾಗ ಸಂಗತಿಗಳನ್ನು ಒಳಗೊಂಡಿರುತ್ತದೆ. ತಾತ್ಪರ್ಯವನ್ನು ತಿಳಿಸಲು ನೆರವಲ್‌ಅನ್ನು ಭಾವಕ್ಕೆ ತಕ್ಕಂತೆ ಪ್ರಯೋಗಿಸಿ, ಕಾವ್ಯಾರ್ಥವನ್ನು ಬಿಡಿಸಿ ಹೇಳಲು ಅದಕ್ಕೆ ಸಂಬಂಧಪಟ್ಟ ಕಥೆ ಅಥವಾ ಉಪಮಾನ-ಉಪಮೇಯಗಳ ಮೂಲಕ ರಸವನ್ನು ಹೊರಗೆಡಹಲಾಗುತ್ತದೆ.  ಇದು ನೃತ್ಯ ಸಂಗೀತದ ಕ್ರಮ.

ಮರಣಾವಸ್ಥೆ ಅಥವಾ ಮನಸ್ಸಿನ ಅತೀವ ಸಂಕಷ್ಟವನ್ನು ತಿಳಿಯಪಡಿಸಿವಾಗ, ಸ್ವರಗಳನ್ನು ಕರುಣರಸಭರಿತ ರಾಗದಲ್ಲಿ ಎಳೆದು ಹಾಡಲ್ಪಡುತ್ತದೆ. ಚಿಂತೆಯಲ್ಲಿದ್ದಾಗ ಅದೇ ಸ್ವರಗಳು ದೃತಲಯದಲ್ಲಿ ಹಾಡಲ್ಪಡುತ್ತದೆ. ಇನ್ನೊಬ್ಬರನ್ನು ಸಂತೈಸುವಾಗ ಮಧ್ಯಲಯದಲ್ಲಿ ಸ್ವರಗಳನ್ನು ಹಾಡಲಾಗತ್ತದೆ. ಹೀಗೆ ನೃತ್ಯಸಂಗೀತ ಭಾವನೆಗಳ ತಳಹದಿಯ ಮೇಲೆ ನಿಂತಿರುತ್ತದೆ.

ನೃತ್ಯ ಸಂಗೀತದಲ್ಲಿ ಸಾಹಿತ್ಯ ಭಾಗದಲ್ಲಿ ಹೊಮ್ಮುವ ರಸವನ್ನು ಅನುಸರಿಸಿ, ರಾಗರಸದ ಕಡೆ ಗಮನವಿಟ್ಟು, ನೃತ್ಯಗೀತಗಳಿಗೆ ರಾಗ ಸಂಯೋಜಿಸಲಾಗುತ್ತದೆ. ದೃಶ್ಯರಸ ಶ್ರವ್ಯರಸದಿಂದ ಪುಷ್ಟಿಗೊಳ್ಳುತ್ತದೆ.

ಉದಾಹರಣೆಗೆ – ಕರುಣರಸಪೂರಿತ ಸಾಹಿತ್ಯಕ್ಕೆ – ಶಹನ, ತೋಡಿ, ರೇವತಿ, ಶುಭಪಂತುವರಾಳಿ, ವೀರರಸಕ್ಕೆ – ಅಠಾಣ, ಕೇದಾರಗೌಳ, ಹಂಸಧ್ವನಿ ಮುಂತಾದ ರಾಗಗಳು ಹೆಚ್ಚು ಉಚಿತವಾಗಿರುತ್ತವೆ. ಶೃಂಗಾರರಸ ಸಾಹಿತ್ಯಕ್ಕೆ ಹಮೀರ್ ಕಲ್ಯಾಣಿ, ಅಮೃತವರ್ಷಿಣಿ, ಬೇಹಾಗ್‌ಮುಂತಾದ ರಾಗಗಳನ್ನು ಬಿಟ್ಟು ಶುಭಪಂತುವರಾಳಿ ಪ್ರಯೋಗಿಸಿದರೆ ಹೇಗಿರಬಹುದು !

ಏನೂ ಅರಿಯದ ಪುಟ್ಟಮಕ್ಕಳು ಸಹಿತ ನೀಲಾಂಬರಿ ಅಥವಾ ಕುರಂಜಿಯಲ್ಲಿ ಹಾಡಲ್ಪಡುವ ಲಾಲಿಯನ್ನು ಮನಃಪೂರ್ವಕವಾಗಿ ಅನುಭವಿಸುತ್ತವೆ. ಆದ್ದರಿಂದ ನೃತ್ಯಕ್ಕೆ ಸಂಗೀತವನ್ನು ಅಳವಡಿಸುವಾಗ ರಸದ ಬಗ್ಗೆ ಬಹಳ ಗಮನವಿಡಬೇಕಾಗುತ್ತದೆ.

ಹಿತವಾದ ಮಧುರ ನೃತ್ಯ ಸಂಗೀತಕ್ಕೆ ಈ ಗುಣಗಳು ಮುಖ್ಯ:

೧.    ಜನಜನಿತವಾದ ರಕ್ತಿರಾಗಗಳನ್ನು ಬಳಸಬೇಕು.

೨.    ಸಂಗೀತ, ಪಾತ್ರ ಪ್ರಕೃತಿಗೆ ಅನುಗುಣವಾಗಿರಬೇಕು.

೩.   ಬಹಳ ಚಿಕ್ಕ ಸಾಹಿತ್ಯವನ್ನು ಅಳವಡಿಸಬಾರದು. ಏಕೆಂದರೆ ಶಬ್ದಗಳ ದೂರಕ್ಕೆ ಚದುರುತ್ತವೆ.

೪.   ಜನಜನಿತವಾಗದಿರುವ ಕ್ಲಿಷ್ಟ ತಾಳ ಪ್ರಯೋಗವನ್ನು ಸೀಮಿತಗೊಳಿಸಬೇಕು.

೫.   ಸಾಹಿತ್ಯ ಭಾಗಗಳಿಗೆ ತಾಳದ ಕ್ಲಿಷ್ಟತೆಯನ್ನು ಅಳವಡಿಸಬಾರದು.

೬.   ಅತಿಯಾದ ಗಮಕ, ವಿಚಿತ್ರ ಸಂಚಾರಗಳನ್ನು ಪ್ರಯೋಗಿಸಬಾರದು.

೭.   ಅತಿಯಾದ ಸಂಗತಿ ಪ್ರಯೋಗಿಸಿ ಗಾಯಕರ ಬುದ್ಧಿಶಕ್ರಿಯ ಪ್ರಯೋಗ ಪ್ರದರ್ಶನ ಇರಬಾರದು.

೮.    ಭಾವಪೂರ್ಣವಾಗಿರಬೇಕು.

೯.   ಸಂಗೀತ ಸಂಯೋಜನೆಯಲ್ಲಿ ಸಹಜತೆ ಇರಬೇಕು.

೧೦. ಶಬ್ದಗಳನ್ನು ಎಳೆದು ಹಾಡುವಾಗ ಅಕಾರ, ಇಕಾರ, ಉಕಾರಗಳ ಪ್ರಯೋಗವನ್ನು ಸೀಮಿತಗೊಳಿಸಬೇಕು.

೧೧. ಸಂಗೀತದ ಗತಿ ರಸವನ್ನು ಅವಲಂಬಿಸಿರಬೇಕು. ಉದಾಹರಣೆಗೆ- ಕರುಣ, ಭಕ್ತಿರಸಗಳಿಗೆ ವಿಲಂಬಿತ ಗತಿ, ವೀರ ರೌದ್ರರಸಗಳಿಗೆ ಧೃತಗತಿ ಪ್ರಯೋಗಿಸಬೇಕು.

೧೨. ಸಂಗೀತದ ಗಮಕ ಪ್ರಯೋಗ ನೃತ್ಯದ ಚಲನೆಗಳಿಗೆ ಪೂರಕವಾಗಿರಬೇಕು.

೧೩.  ಪುನ್ನಾಗವರಾಳಿ ರಾಗದಲ್ಲಿ ಕರುಣರಸ ಪ್ರಧಾನವಾದರೂ ” ಕನಕಶೈಲ ವಿಹಾರಿಣಿ” ಕೃತಿಯನ್ನು ಕೇಳಿದಾಗ ಭಕ್ತಿರಸ ವಿದಿತವಾಗುತ್ತದೆ.

ಆದ್ದರಿಂದ ನೃತ್ಯ ಸಂಗೀತದಲ್ಲಿ ಸಾಹಿತ್ಯ ರಸ ಮತ್ತು ರಾಗರಸ ಒಂದಕ್ಕೊಂದು ಪೂರಕವಾಗಿರಬೇಕು.

ನೃತ್ಯ ಸಂಗೀತಕ್ಕೂ ಸಂಗೀತ ಕಛೇರಿಯ ಸಂಗೀತಕ್ಕೂ ಬಹಳಷ್ಟು ವ್ಯತ್ಯಾಸಗಳಿವೆ. ಸಂಗೀತ ಕಛೇರಿಯಲ್ಲಿ ಕಾಣುವ ಸಾಹಿತ್ಯಕ್ಕೂ ನೃತ್ಯ ಕಛೇರಿಯಲ್ಲಿ ಕಾಣುವ ಸಾಹಿತ್ಯಕ್ಕೂ ಬಹಳ ವ್ಯತ್ಯಾಸವಿರುತ್ತದೆ.

ನೃತ್ಯ ಸಂಗೀತದಲ್ಲಿ ಜರಿಸ್ವರ, ಪದಂ, ಪದವರ್ಣ, ಶಬ್ದಂ, ಜಾವಳಿ, ಅಷ್ಟಪದಿ, ದೇವರನಾಮಗಳು ಪ್ರಧಾನ. ಆದರೆ ಸಂಗೀತದಲ್ಲಿ ತಾನವರ್ಣ ಕೀರ್ತನೆಗಳೂ, ಪಲ್ಲವಿಗಳು ಮುಖ್ಯ. ಸಂಗೀತ ಸಾಹಿತ್ಯದಲ್ಲಿ ಭಕ್ತಿರಸ ಪ್ರಧಾನವಾದರೆ ನೃತ್ಯ ಸಾಹಿತ್ಯದಲ್ಲಿ ನವರಸ ಪ್ರಧಾನವಾಗಿರುತ್ತದೆ. ನೃತ್ಯದ ಜತಿಸ್ವರದಲ್ಲಿ ತಾಳವೈವಿದ್ಯತೆ, ಪಾದ, ಅಂಗಚಲನೆಗಳಿಗೆ ಸ್ವರ ಜೋಡಣೆ ಇದ್ದರೆ, ಸಂಗೀತ ಸ್ವರಜತಿಯಲ್ಲಿ ಸ್ವರ ಜೋಡಣೆ ರಾಗ ಸಂಚಾರವನ್ನು ಎತ್ತಿ ಹಿಡಿಯುತ್ತದೆ. ಆದ್ದರಿಂದ ನೃತ್ಯ ಸಂಗೀತದಲ್ಲಿ ರಕ್ತಿರಾಗಗಳ ಪ್ರಯೋಗ ಹೆಚ್ಚಾಗಿರುತ್ತದೆ.

ನೃತ್ಯ ಸಂಗೀತ ಚೇತೋಹಾರಿಯಾಗಿರಬೇಕಾದ ಕಾರಣ ಮಂದ್ರಸ್ಥಾಯಿ ಸಂಚಾರಗಳನ್ನು ಬಹುವಿರಳವಾಗಿ ಉಪಯೋಗಿಸುತ್ತಾರೆ. ನೃತ್ಯಕ್ಕೆ ಲಯ, ಪ್ರಧಾನವಾದ್ದರಿಂದ ರಾಗದ ಆಲಾಪನೆಯ ಪ್ರಯೋಗದಲ್ಲೂ ಅಭಿನಯಕ್ಕೆ ತಕ್ಕಂತೆ ಲಯವನ್ನು ಕಾಣಬಹುದು. ನೃತ್ಯ ಸಂಗೀತದಲ್ಲಿ ಪಲ್ಲವಿಯನ್ನು ಬಹಳ ಸಲ ಹಾಡಬೇಕಾಗಿ ಬರುತ್ತದೆ. ಆಗ ನರ್ತನದ ಸೊಲ್ಲೂ ಕಟ್ಟುಗಳನ್ನೂ ಸ್ವರದೊಂದಿಗೆ ಹೇಳಲ್ಪಡುತ್ತದೆ. “ಕೊನೆಗೋಲು” “ಸಂಗೀತ” ಮೇಳೈಸಿ ಆದರ್ಶವಾಗಿ ಕಾಣುತ್ತದೆ. ಸಂಗೀತದ ಜೊತೆ ಜತಿಗಳ ಸಂಯೋಜನೆ ನೃತ್ಯ ಸಂಗೀತದ ರಂಜಕತ್ವಕ್ಕೆ ಹೆಸರಾದುದು. ಜತಿಯನ್ನೂ ಹಲವು ಸಲ ಗಮಕದ ಜೊತೆ ಅಭಿನಯಕ್ಕೆ ತಕ್ಕಂತೆ ಹೇಳಲಾಗುತ್ತದೆ. ಪಾತ್ರ ಪ್ರವೇಶದ ಜತಿ ಪಾತ್ರದ ಅಂತಃಸತ್ವಕ್ಕೆ ಅನುಗುಣವಾಗಿ ಇರುತ್ತದೆ.

ನೃತ್ಯದಲ್ಲಿ ಆಧ್ಯಾತ್ಮಿಕ ಪ್ರವೃತ್ತಿ ಇರಲೇಬೇಕು. ಇದನ್ನು ಪೂರೈಸುವುದು ಭಕ್ತಿಪೂರ್ವಕವಾದ ಸುಮಧುರ ಸಂಗೀತ. ಸಂಗೀತಕ್ಕೆ ತಕ್ಕಂತೆ ಸ್ಪಂದಿಸಲು ನೃತ್ಯ ಕಲಾವಿದರು ಸಂಗೀತದಲ್ಲೂ ನುರಿತವರಾಗಿರಬೇಕು. ಆದಲೇ ನರ್ತನ ಕಲಾವಿದರು ತನ್ಮಯತೆಯಿಂದ ಕಲೆಯನ್ನು ಉಪಾಸಿಸಬಹುದು.

ಭರತ ನಾಟ್ಯಶಾಸ್ತ್ರ ಹಾಗೂ ಪುಂಡರೀಕ ವಿಠಲನ ನರ್ತನ ನಿರ್ಣಯದಲ್ಲಿ ನೃತ್ಯ ಸಂಗೀತ ವೃಂದದಲ್ಲಿರುವವರ ಗುಣ ದೋಷಗಳ ಉಧೃತವಾಗಿವೆ.

ಗಾಯಕ / ಗಾಯಕಿ :-

ಗಾಯಕ ಅಥವಾ ಗಾಯಕಿ ತರುಣರಾಗಿದ್ದು ಕಂಠದಲ್ಲಿ ಚೀರುವಿಕೆ ಇಲ್ಲದೆ ಮಾರ್ಧುಯದಿಂದ ಕೂಡಿರಬೇಕು. ತಾಳಲಯಗಳಲ್ಲಿ ಕುಶಲರಾಗಿರಬೇಕು. ವಾದ್ಯಮೇಳವನ್ನು ನಿಯಂತ್ರಿಸುವಂತಹವರಾಗಿರಬೇಕು. ಸ್ವಭಾವದಿಂದಲೇ ಸ್ತ್ರೀಕಂಠ ಕೋಮಲ ಹಾಗೂ ಪುರುಷಕಂಠ ಗಡಸು ಇರುವುದರಿಂದ ಗಾಯನಕ್ಕೆ ಸ್ತ್ರೀಯರೂ, ಪಾಠ್ಯಕ್ಕೆ ಪುರುಷರೂ ಹೆಚ್ಚು ಸೂಕ್ತರು.

ಗುಣಗಳು:

.   ಶ್ರಾವಕಿ : ಪದಗಳ ಉಚ್ಚಾರಣೆ ಸ್ಷಷ್ಟವಾಗಿರಬೇಕು.

.   ಘನಸ್ನಿಗ್ಥ : ನಿರರ್ಗಳವಾಗಿ ಉಸಿರನ್ನು ನಿಯಂತ್ರಿಣದಲ್ಲಿಟ್ಟು ಹಾಡುವುದು.

.    ಮಧುರ ನಿಯಂತ್ರಿತ : ಸ್ವರ ಏರಿದಾಗ ಚೀರು ಇಲ್ಲವೆ ಕರ್ಕಶವಾಗದಿರುವುದು ಮತ್ತು ಅಪಸ್ವರವಾಗದಿರುವುದು. ಏರು ಇಳಿತಗಳಲ್ಲಿ ಸ್ವರಸ್ಥಾನದಲ್ಲಿ ಖಚಿತತೆ ಇರುವುದು.

ದೋಷಗಳು

೧.    ಅವ್ಯವಸ್ಥಿತ : ಅಸಹಜವಾದ ಕಂಠ ನಾದ

೨.   ಕಪಿಲ : ಕಫದಿಂದ ಕಂಠದಲ್ಲಿ ಗುರುಗುರು ಶಬ್ದ

೩.   ಸಂದಷ್ಟ : ಹಲ್ಲು ಕಚ್ಚಿ ಹಾಡುವುದು

೪.   ಕಾಕೀ : ಯೋಗ್ಯ ಸ್ವರ ಸ್ಥಾನ ಮುಟ್ಟದಿರುವುದು

೫.   ತುಂಬಕೀ : ಮೂಗಿನಿಂದ ಸ್ವರ ಹೊರಡಿಸುವುದು

ವಾದಕರು:-

ಸಂಗೀತ ಕಛೇರಿ ನೀಡುವವರಿಗೂ ನೃತ್ಯ ಸಂಗೀತ ಹಾಡುವವರಿಗೂ ವ್ಯತ್ಯಾಸ ಸ್ಪಷ್ಟ. ವೀಣಾವಾದಕರು ಮಧುರಸ್ವರ ಹೊರಡಿಸುವ ಚುರುಕಾದ ಕೈವುಳ್ಳವರಾಗಿರಬೇಕು. ಕೊಳಲು ವಾದಕರು ಸತತವಾಗಿ ಹೊರಡಿಸುವ ಉಸಿರುವ ತ್ರಾಣ ಹೊಂದಿ ಪ್ರಯೋಗದ ದೋಷಗಳನ್ನು ಮುಚ್ಚುವ ಸಾಮರ್ಥ್ಯವುಳ್ಳವರಾಗಿರಬೇಕು.

ಅವನದ್ಧವಾದ್ಯಗಳು ನೃತ್ಯ ಸಂಗೀತದಲ್ಲಿ ಪ್ರಮುಖ ಸ್ಥಾನ ವಹಿಸುತ್ತವೆ. ರಸಭಾವಳಿಗೆ ಪುಷ್ಕರ ವಾದ್ಯಗಳನ್ನು ನೃತ್ಯದಲ್ಲಿ ಬಳಸಲಾಗುತ್ತದೆ. ನೃತ್ಯ ರಂಜಕವಾಗಲು ಲಯಗಳು ವ್ಯತ್ಯಾಸವಾಗುತ್ತಿರುತ್ತದೆ. ಶಿಶ್ರ, ಚರುತಶ್ರ, ಮಿಶ್ರ, ಖಂಡ ಸಂಕೀರ್ಣ ಜಾತಿಗಳ ವೈವಿಧ್ಯಮಯ ಹೊಂದಾಣಿಕೆ ಇರುತ್ತದೆ. ಗೀತದ ಛಂದಸ್ಸಿಗೆ ಅನುಗುಣವಾಗಿ ವಾದ್ಯವಾದನ ಇರುತ್ತದೆ. ವಿಲಂಬಿತ ಲಯದಲ್ಲಿ ಪ್ರಹಾರಗಳು ಹಗುರವಾಗಿ ನಯವಾಗಿರುತ್ತದೆ. ಮಧ್ಯಲಯದ ಅಕ್ಷರಗಳಿಗೆ ಉಪರಿಪಾಣಿಯನ್ನು ಸ್ಪಷ್ಟತೆಯಿಂದ ಪ್ರಯೋಗಿಸಲಾಗುತ್ತದೆ. ತಾಂಡವ ಪ್ರಯೋಗ ಸಂದರ್ಭದಲ್ಲಿ ಶುದ್ಧ ಪ್ರಹಾರಗಳನ್ನು ಬಳಸಲಾಗುತ್ತದೆ.

ನಟುವಾಂಗದವರು:-

ನಟುವಾಂಗ ನರ್ತನದ ಪ್ರತಿರೂಪವೆನ್ನಬಹುದು. ನಟವಾಂಗ ನುಡಿಸುವವರು ನೃತ್ಯ ಸಂಗೀತ ಮೇಳದವರ ಸೂತ್ರಧಾರರಾಗಿರುತ್ತಾರೆ.

ಗುಣಗಳು

೧.    ನರ್ತನ ಶಾಸ್ತ್ರ ಹಾಗೂ ಪ್ರಯೋಗಗಳಲ್ಲಿ ನಿಪುಣರಾಗಿರಬೇಕು.

೨.    ಉತ್ತಮ ಗುಣವಂತರಾಗಿರಬೇಕು.

೩.    ಅಭಿಜಾತ ಕಲಾವಿದನಾಗಿರಬೇಕು.

೪.   ನೃತ್ಯ ಗಾಯನ, ವಾದ್ಯವೃಂದದಲ್ಲಿ ನಡೆಯುವ ತಾಳ ಪ್ರಮಾಣದಲ್ಲಿ ಅತ್ಯಂತ ಖಚಿತತೆ ಉಳ್ಳವರಾಗಿರಬೇಕು.

೫.   ನಟವಾಂಗದ ಮುಖ್ಯ ಶಬ್ದಗಳನ್ನು ತಿಳಿದಿರಬೇಕು.

೬.    ತಾಳವನ್ನು ಹಿಡಿದು ನುಡಿಸುವ ಕ್ರಮ ಅರಿತಿರಬೇಕು.

೭.    ತಾಳದ ಗ್ರಹ ಮತ್ತು ಸಂಚಾರಗಳನ್ನು ಅರಿತು ಶಬ್ದಗಳನ್ನು ಹಿಡಿತದಿಂದ ಸಮಯವರಿತು ಪ್ರಯೋಗಿಸಬೇಕು.

೮.    ಕೈ ಓಟ ಸುಲಲಿತವಾಗಿರಬೇಕು.

೯.    ತಾಳಗಳನ್ನು ಎಲ್ಲಿ ನುಡಿಸಬೇಕು ಎಲ್ಲಿ ಬಿಡಬೇಕು ಎಂಬ ವಿಷಯವನ್ನು ಖಚಿತವಾಗಿ ತಿಳಿದಿರಬೇಕು.

ಮೃದಂಗ ವಾದಕರು:

ನೃತ್ಯಕ್ಕೆ ಮೃದಂಗ ನುಡಿಸುವವರಿಗೆ “ಮುಖರಿ” ಎನ್ನುತ್ತಾರೆ. ಇವರು ನರ್ತನದ ಪಾಠ್ಯ ಪ್ರಬಂಧಗಳ ರಚನಾಕಾರರಾಗಿರುತ್ತಾರೆ. ಗಾಯನ ಹಾಗೂ ವಾದನದಲ್ಲಿ ನುರಿತವರಾಗಿರುತ್ತಾರೆ. ಆದ್ದರಿಂದಲೇ ಇವರು ನೃತ್ಯ ಕಲಾವಿದರ ಜೀವಾಳವಾಗಿರುತ್ತಾರೆ.

ಗುಣಗಳು :

೧.    ಇವರು ಮೃದಂಗವಲ್ಲದೆ ಇತರ ಎಲ್ಲ ವಾದ್ಯಗಳನ್ನೂ ನುಡಿಸಬಲ್ಲವರಾಗಿರುತ್ತಾರೆ. ಆದ್ದರಿಂದಲೇ ಇವರು ವಾದ್ಯ ಪ್ರಬಂಧಗಳ ಸಂಯೋಜಕರೂ ಆಗಿರುತ್ತಾರೆ.

೨.    ನರ್ತನ ಮಾಡುವವರ ಮನೋಭಾವಗಳನ್ನು ತಕ್ಷಣ ಅರಿಯಬಲ್ಲವರಾಗಿರುತ್ತಾರೆ.

೩.    ಸೌಷ್ಠವಯುತರಾಗಿ, ಅತ್ಯಂತ ಬುದ್ಧಶಾಲಿಗಳಾಗಿ ರಂಗದ ಮೇಲೆ ನಡೆಯುವ ಆಗುಹೋಗುಗಳನ್ನು ಊಹಿಸಬಲ್ಲವರಾಗಿರುತ್ತಾರೆ.

ದೋಷಗಳು :

ತಾಳದ ಮೇಲೆ ಹಿಡಿತವಿಲ್ಲದವರು, ಮೃದಂಗದಿಂದ ಸುಮಧುರ ನಾದ ಹೊರಡಿಸದೆ, ಚರ್ಮದ ಮೇಲೆ ಬೆರಳಾಡಿಸುವವರು, ಶಾಸ್ತ್ರವನ್ನು ಅರಿಯದವರು ನೃತ್ಯಕ್ಕೆ ವಾದನ ಮಾಡುವುದರಿಂದ ಹಿಂಜರಿಯಬೇಕು.

ನರ್ತನದ ಅವಿಭಾಜ್ಯ ಅಂಗಗಳಾದ ನಟುವಾಂಗ, ಗಾಯನ, ನರ್ತನ ಕಲಾವಿದ, ಮೃದಂಗ, ಸಾಹಿತ್ಯ, ಇತರ ವಾದ್ಯ – ಇವಿಷ್ಟೂ ಸರಿಯಾದ ಹೊಂದಾಣಿಕೆಯಲ್ಲಿದ್ದಾಗ ಮಾತ್ರ ನರ್ತನದ ಸೊಬಗು, ಸೌಂದರ್ಯ ತತ್ವನೂರ್ಮಡಿಯಾಗಿ ಕಲಾವಿದರಿಗೆ ಹಾಗೂ ಪ್ರೇಕ್ಷಕರಿಗೆ , ಆತ್ಮಾನಂದ ಪ್ರಾಪ್ತಿಯಾಗುತ್ತದೆ.

ಒಂದು ನೃತ್ಯ ನಾಟಕವನ್ನು ರಂಗದ ಮೇಲೆ ಪ್ರಯೋಗಿಸುವಾಗ ನೃತ್ಯ ವೃಂದ, ವಾದ್ಯ ವೃಂದ ಹಾಗೂ ಗಾಯಕ ವೃಂದದಲ್ಲಿ ಸಂಪೂರ್ಣ ಹೊಂದಾಣಿಕೆ ಬಂದಾಗಲೇ ನಾಟಕದ ಕಥಾವಸ್ತು ಮತ್ತು ಪಾತ್ರಗಳ ಅಂತಃಸತ್ವ ಪುಷ್ಠಿಯುತವಾಗಿ ಮೇಲೇಳುತ್ತದೆ.

ನಮ್ಮಸಂಸ್ಕೃತಿಯಲ್ಲಿ ಜನಪದ ಸಂಗೀತ, ನೃತ್ಯ ಮತ್ತು ನಾಟಕಗಳಿಗೆ ವಿಶಿಷ್ಠ ಸ್ಥಾನವಿದೆ. ಇದರಲ್ಲಿ ಕಲೆ ಅಭಿಜಾತವಾಗಿ ಉಕ್ಕುತ್ತದೆ. ಎಲ್ಲ ಜನಸಾಮಾನ್ಯರೂ ಈ ಕಲೆಯಲ್ಲಿ ಭಾಗವಹಿಸುವುದರಿಂದ ಸಂಗೀತ ಮತ್ತು ತಾಳ ಸುಲಭ ರೀತಿಯಲ್ಲಿರುತ್ತದೆ. ಶಾಸ್ತ್ರೀಯ ಕಲೆಗಳು ಇದರ ಆಧಾರದ ಮೇಲೆ ನಿಯಮಗಳ ಚೌಕಟ್ಟಿನಲ್ಲಿ ಬೆಳೆದು ಬಂದಿದೆ. ಜನಪದದಲ್ಲಿ ಮನೋರಂಜನೆ ಮತ್ತು ಮುಗ್ಧ ಭಕ್ತಿಯೇ ಜೀವಾಳ. ಶಾಸ್ತ್ರೀಯತೆಯಲ್ಲಿ ಇದರೊಡನೆ ಬುದ್ಧಿಯ ಕೆಲಸವೂ ಸೇರುತ್ತದೆ.  ನೃತ್ಯ ಕಛೇರಿಗಳಲ್ಲಿ ಬುದ್ಧಿಯು ಕೆಲಸವನ್ನು ತೋರಿಸಿ, ಕೊನೆಯಲ್ಲಿ ಮಾನವನ ಬದುಕಿಗೆ ಹತ್ತಿರವಾಗ ಮುಗ್ಧ ಭಕ್ತಿಯ ಜನಪದ ಸಾಹಿತ್ಯ ಅಥವಾ ಜನಜೀವನವನ್ನು ರೂಪಿಸುವಂತಹ ಒಂದು ನೃತ್ಯಬಂಧವನ್ನು ಕಛೇರಿ ಮಾರ್ಗಕ್ಕೆ ಸೇರಿಸುವ ಸಂಪ್ರದಾಯ ಹಲವೆಡೆ ಇದೆ. ಅದಕ್ಕೆ ತಕ್ಕಂತೆ ನೃತ್ಯ ಸಂಗೀತವು ಸುಗಮ ಲಾಲಿತ್ಯದಿಂದ ಒಡಗೂಡಿ ಅಂತರಾತ್ಮಕ್ಕೆ ಮುಗ್ಧ ಸಂತೋಷ ಒದಗಿಸುತ್ತದೆ. ದೃಶ್ಯ ಆತ್ಮಾನಂದಕ್ಕೆ ಭದ್ರ ಬುನಾದಿ ನೀಡುವ ಶ್ರವ್ಯ “ನೃತ್ಯ ಸಂಗೀತ”ವನ್ನು ಸಂತೃಪ್ತಿಯ ಶಿಖರಕ್ಕೇರಿಸಲು ಶ್ರಮಿಸುವ ಎಲ್ಲ ಕಲಾವಿದರ ಕಲೋಪಾಸನೆ ಸ್ತುತ್ಯಾರ್ಹ.