ಮಾನ್ಯಖೇಟದ ಅರಮನೆಯಲ್ಲಿ ಗಂಭೀರವಾದ ವಾತಾವರಣವೇರ್ಪಟ್ಟಿತ್ತು. ಸಾಮ್ರಾಟನಿಂದ ತೊಡಗಿ ದಾಸದಾಸಿ ಪರಿಜನರವರೆಗೆ ಯಾರ ಮುಖದಲ್ಲೂ ಸಂತೋಷವಿರಲಿಲ್ಲ. ಎಲ್ಲರೂ ಬರಲಿರುವ ವಿಪತ್ತನ್ನು ನೆನೆದು ಕಳವಳಗೊಂಡಿದ್ದರು. ರಾಷ್ಟ್ರಕೂಟ ವಂಶದ ಒಂದೇ ಮೊಳಕೆಯು ಕಮರಿಹೋಗುವ ಪ್ರಸಂಗ ಬಂದಿತ್ತು. ಸಾಮ್ರಾಜ್ಯದ ವಿರುದ್ಧ ದಂಗೆ ಎದ್ದು, ಸೋತು ಸೆರೆಸಿಕ್ಕಿ, ಈಗ ರಾಜದ್ರೋಹದ ಅಪರಾಧಿ ಎಂದು ಯುವರಾಜ ಆಸ್ಥಾನದಲ್ಲಿ ನಿಲ್ಲಬೇಕಾಗಿತ್ತು.

ಅರಮನೆಯ ರಾಜಾಂತಃಪುರದಲ್ಲಿ ಹಂಸತೂಲಿಕಾ ಕಲ್ಪದ ಮೇಲೆ ಮಲಗಿದ್ದ ನೃಪತುಂಗನಿಗೂ ನಿದ್ರೆ ಬರಲಿಲ್ಲ. ಮಗ ಕೃಷ್ಣನು ಮಾಡಿದ ರಾಜದ್ರೋಹದ ಒಂದೊಂದು ಘಟನೆಯೂ ಮೂದಲಿಸುತ್ತಿತ್ತು. ಕುಮಾರನು ರಾಜ್ಯಲೋಭದಿಂದ ಎಂಥ ದುಷ್ಕೃತ್ಯ ಮಾಡಿದ? ತನ್ನನ್ನಾಗಲಿ ಸಾಮ್ರಾಜ್ಯದ ಘನತೆ-ಗೌರವವನ್ನಾಗಲೀ ಜನತೆಯ ಹಿತಾಕಾಂಕ್ಷೆಯನ್ನಾಗಲೀ ಅವನು ಅರ್ಥಮಾಡಿಕೊಳ್ಳದೆ ಹೋದನಲ್ಲ ಎಂಬ ದುಃಖ ಒಂದು ಕಡೆ, ಸ್ವಾರ್ಥಿಗಳ ಹಾಗೂ ದ್ರೋಹಿಗಳ ಸವಿಮಾತುಗಳಿಗೆ ಕಿವಿಗೊಟ್ಟು ರಾಜ್ಯಕ್ಕೆ ಅಪಚಾರವೆಸಗಿದನಲ್ಲ ಎಂದು ವಿಷಾದ ಇನ್ನೊಂದು ಕಡೆ. ಕುಮಾರನು ಇನ್ನೂ ಚಿಕ್ಕವನು, ದುಡುಕಿ ತಪ್ಪು ಮಾಡಿದ. ಅವನನ್ನು ಕ್ಷಮಿಸಬೇಕು ಎಂಬ ದಂಡನಾಯಕ ಬಂಕೇಯನ ಆಪ್ತವಚನ ಮತ್ತೊಂದು ಕಡೆ. ಹೀಗೆ ನೃಪತುಂಗನ ಮನಸ್ಸು ಅಶಾಂತಗೊಂಡಿತ್ತು.

ಕುಮಾರನ ವಯಸ್ಸಿನಲ್ಲಿ ತಾನು ಹೇಗೆ ನಡೆದುಕೊಂಡೆ? ರಾಷ್ಟ್ರಕೂಟ ಸಿಂಹಾಸನದ ಘನತೆ-ಗೌರವಗಳನ್ನು ಕಾಪಾಡಲು ಎಷ್ಟು ಶ್ರಮಿಸಬೇಕಾಯಿತು? ಇಡೀ ರಾತ್ರಿ ನೃಪತುಂಗನಿಗೆ ನಿದ್ರೆ ಹತ್ತಿರ ಸುಳಿಯಲಿಲ್ಲ.

ರಾಜದ್ರೋಹಿಗೆ ಶಿಕ್ಷೆ

ವಿಶಾಲವಾದ ರಾಜಸಭಾಂಗಣದ ನಡುವೆ ಎತ್ತರವಾದ ವೇದಿಕೆಯ ಮೇಲೆ ರತ್ನಖಚಿತವಾದ ಮಯೂರ ಸಿಂಹಾಸನ. ಅದರ ಹಿನ್ನೆಲೆಯ ಭಿತ್ತಿಯಲ್ಲಿ ಪಾಲಿಧ್ವಜ, ಗರುಡ, ಹಲಾಯುಧಗಳ ರಾಜಲಾಂಛನ ರಾರಾಜಿಸುತ್ತಿತ್ತು. ಸಭಾ ಮಂದಿರದಲ್ಲಿ ಅನೇಕ ಸುಂದರ ಕಲಾಕೃತಿಗಳನ್ನು ಬೋದಿಗೆಯಲ್ಲಿ ಹೊತ್ತ ಕಂಚಿನ ಕಂಬಗಳು, ಸಿಂಹಾಸನದ ಅತ್ತ ಇತ್ತ ಛತ್ರ ಚಾಮರಗಳುಳ್ಳ ಅಧಿಕಾರ ಲಾಂಛನಗಳನ್ನು ಹಿಡಿದ ಸೇವಕರು, ವೇದಿಕೆಗಳನ್ನು ಬಳಸಿ ಅರ್ಧ ವೃತ್ತಾಕಾರದಲ್ಲಿ ಕುಳಿತ ಮಾಂಡಲೀಕರು, ಮನ್ನೆಯರು, ಸಚಿವರು, ಪುರಪ್ರಮುಖರು, ಪುರೋಹಿತರು ಮುಂತಾದ ಗಣ್ಯರ ಆಸನಗಳು. ಎತ್ತರವಾದ ವೇದಿಕೆಯ ಅಡಿಯಲ್ಲ ಧರ್ಮಾವತಾರರಿಗೆಂದೇ ವ್ಯವಸ್ಥೆ ಮಾಡಿದ ಆಸನಗಳು. ನೆಲಕ್ಕೆ ಪರ್ಷಿಯಾ ದೇಶದ ರತ್ನಗಂಬಳಿಗಳು.

ನಿಶ್ಚಿತ ವೇಳೆಗೆ ಸರಿಯಾಗಿ ಪ್ರಭುಗಳು ಬಿಜಯ ಮಾಡಿಸಿದರು. ವಂದಿಮಾಗಧರು ಸ್ತುತಿಪಾಠಕರು ಮಧುರವಾದ ಶಂಖಧ್ವನಿ ಮಾಡಿ, ಪಂಚ ಮಹಾಶಬ್ದಗಳನ್ನು ನುಡಿಸಿ, ಪರಾಕು ಹೇಳಿ ಸ್ವಸ್ತಿವಾಚನ ಮಾಡಿದರು.

ಬಂಕೇಯನಿಂದ ಆಜ್ಞಪ್ತನಾದ ಹಿರಿಯ ಅಧಿಕಾರಿಯೊಬ್ಬನು ಕೃಷ್ಣನ ಮೇಲಿದ್ದ ಅಪರಾಧಗಳ ಪಟ್ಟಿಯನ್ನು ಒಂದೊಂದಾಗಿ ಹೇಳಿದನು. ಅದಕ್ಕೆ ಉತ್ತರ ನೀಡಬೇಕೆಂದು ಪ್ರಭುಗಳು ಕೃಷ್ಣನಿಗೆ ಆಜ್ಞೆ ಮಾಡಿದರು.

ಕೃಷ್ಣನು ತಾನು ರಾಜದ್ರೋಹ ಮಾಡಿದ್ದು ಉಂಟೆಂದೂ ಅದಕ್ಕೆ ತಕ್ಕ ಶಿಕ್ಷೆಯನ್ನು ಅನುಭವಿಸಲು ಸಿದ್ಧನಾಗಿರುವುದಾಗಿಯೂ ತಿಳಿಸಿದನು. ಅವನಿಗೆ ತನ್ನ ಅಕೃತ್ಯಕ್ಕಾಗಿ ಪಶ್ಚಾತ್ತಾಪವಾಗಿತ್ತು.

ನ್ಯಾಯ ಪೀಠದಲ್ಲಿ ಕುಳಿತ ನೃಪತುಂಗನು ತೀರ್ಪು ಕೊಟ್ಟನು.

“ರಾಜದ್ರೋಹಿಗೆ ಶಿಕ್ಷೆ – ಮರಣದಂಡನೆ!”

ರಾಜಸಭೆ ಅಲ್ಲೋಲ ಕಲ್ಲೋಲವಾಯಿತು.

ಅಷ್ಟರಲ್ಲಿ ಮುಖಕ್ಕೆ ಪರದೆ ಧರಿಸಿದ ಹೆಣ್ಣುಮಗಳೊಬ್ಬಳು ಸಭಾ ಪ್ರವೇಶ ಮಾಡಿ ಸಾಮ್ರಾಟರಿಗೆ ವಂದಿಸಿ ತಲೆಬಾಗಿ ನಿಂತಳು.

“ಯಾರು ತಾಯಿ ನೀನು?” ಸಾಮ್ರಾಟನು ಪ್ರಶ್ನಿಸಿದನು.

“ನಾನು ಶ್ರೀಲೇಖೆ. ಅಪರಾಧಿಯ ಧರ್ಮಪತ್ನಿ. ನನಗೂ ನನ್ನ ಪತಿಯೊಡನೆ ಮರಣದಂಡನೆ ವಿಧಿಸಬೇಕು” ಎಂದು ಅವಳು ಬಿನ್ನೈಸಿಕೊಂಡಳು.

“ಇದು ನಿಜವೇ?” ಎಂದು ಸಾಮ್ರಾಟರು ಕೃಷ್ಣನನ್ನು ಕೇಳಿದರು.

“ಹೌದು. ಈಕೆ ನನ್ನ ಧರ್ಮಪತ್ನಿ. ಚೇದಿಯ ರಾಜಪುತ್ರಿ, ಶಂಕರಗಣನ ಸೋದರಿ. ಆಕೆ ನುಡಿಯುತ್ತಿರುವ ಮಾತು ಸತ್ಯ.”

ನಿರ್ವಿಕಾರವಾಗಿ ರಾಜಕುಮಾರ ಕೃಷ್ಣನು ಉತ್ತರಕೊಟ್ಟನು. ಶ್ರೀಲೇಖಾದೇವಿಯನ್ನು ವಿವಾಹವಾಗಬೇಕಾಗಿ ಬಂದ ಸಂದರ್ಭವನ್ನು ಮನಕರಗುವಂತೆ ನಿವೇದಿಸಿ ಕೊಂಡನು.

ಇದನ್ನು ಆಲಿಸಿದ ಸಭಾಸದರು ಅಚ್ಚರಿಗೊಂಡರು. ಅವರು ಯುವರಾಜನನ್ನು ಈ ಬಾರಿ ಕ್ಷಮಿಸುವಂತೆ ಸಾಮ್ರಾಟರಲ್ಲಿ ಪ್ರಾರ್ಥನೆ ಮಾಡಿದರು. ಅವರ ಒತ್ತಾಯಕ್ಕೆ ಮಣಿದು ನೃಪತುಂಗನು ಪಶ್ಚಾತ್ತಾಪದಗ್ಧನಾದ ಕೃಷ್ಣನನ್ನು ಕ್ಷಮಿಸಿದನು. ಪ್ರಾಪ್ತನಾದ ಪುನರ್ಜನ್ಮವನ್ನು ಕುಮಾರನು ಪ್ರಜಾಕೋಟಿಯ ಸೇವೆಗೆ ಮೀಸಲಿಡಲು ಆಜ್ಞಾಪಿಸಿದನು.

ರಕ್ಷಿಸುವ ಕೈ, ಬೆಳೆಸುವ ಕೈ

ನ್ಯಾಯ ಸಿಂಹಾಸನದ ಮುಂದೆ ಯುವರಾಜನೂ ಸಾಮಾನ್ಯ ಪ್ರಜೆಯೂ ಒಂದೇ ಎಂಬುದನ್ನು ಆಚರಣೆಯಲ್ಲಿ ತೋರಿದ ನೃಪತುಂಗ ದೊಡ್ಡ ಚಕ್ರವರ್ತಿ. ಸುಮಾರು ಒಂದು ಸಾವಿರದ ಒಂದು ನೂರು ವರ್ಷಗಳ ಹಿಂದೆ ಕನ್ನಡ ನಾಡಿನಲ್ಲಿ ಆಳಿದನು. ಅವನ ಬಾಳಿನಲ್ಲಿ ಬಂದ ಕಷ್ಟಗಳು ಒಂದೊಂದಲ್ಲ, ಎಲ್ಲವನ್ನೂ ಎದುರಿಸಿ, ಎಲ್ಲ ಶತ್ರುಗಳನ್ನೂ ಜಯಿಸಿ ಚಕ್ರವರ್ತಿ ಎನಿಸಿಕೊಂಡ. ಜನರಿಗೆ ಶಾಂತಿಯನ್ನು ತಂದುಕೊಟ್ಟ, ಅವರು ಸುಖ ಸಮೃದ್ಧಿಗಳಲ್ಲಿ ಬಾಳುವಂತೆ ಆಳಿದ. ಸಾಹಿತ್ಯ, ಸಂಗೀತಗಳಿಗೆ ಪ್ರೋತ್ಸಾಹ ಕೊಟ್ಟ. ಈಗ ಕನ್ನಡದಲ್ಲಿ ದೊರೆತಿರುವ ಮೊಟ್ಟಮೊದಲ ಗ್ರಂಥ ‘ಕವಿರಾಜಮಾರ್ಗ’ ಎಂಬುದು. ಪ್ರತಿ ಪರಿಚ್ಛೇದದ ಕೊನೆಯಲ್ಲಿ ‘ನೃಪತುಂಗ ದೇವಾನುಮತವಪ್ಪ ಕವಿರಾಜಮಾರ್ಗದೊಳ್’ ಎಂಬ ಹೇಳಿಕೆ ಬರುತ್ತದೆ. ಇದನ್ನು ನೃಪತುಂಗನೇ ಬರೆದ ಎಂದು ಕೆಲವರ ಅಭಿಪ್ರಾಯ. ಪ್ರಾಯಶಃ ಆತನ ಆಸ್ಥಾನದ ವಿದ್ವಾಂಸನೊಬ್ಬ ಬರೆದಿರಬೇಕು. ಅಂತೂ ಈ ಗ್ರಂಥ ಇವನ ಕಾಲದಲ್ಲಿ ಇವನ ಸ್ಫೂರ್ತಿಯಿಂದ ರಚಿತವಾಯಿತು ಎಂಬುದರಲ್ಲಿ ಸಂದೇಹವಿಲ್ಲ. ಖಡ್ಗ ಹಿಡಿದ ಕೈಯೇ ಜನಕ್ಕೆ ಸಮೃದ್ಧಿಯನ್ನು ತಂದಿತು, ಸಾಹಿತ್ಯವನ್ನು ಬೆಳೆಸಿತು.

ವೀರನಾದ ತಂದೆ

ನೃಪತುಂಗನು ರಾಷ್ಟ್ರಕೂಟ ಸಿಂಹಾಸನವನ್ನು ಏರಿದಾಗ ಅವನಿಗಿನ್ನೂ ಹದಿನಾರು ವರ್ಷ ವಯಸ್ಸು.

ರಾಷ್ಟ್ರಕೂಟರು ಅಚ್ಚಕನ್ನಡ ರಾಜಮನೆತನದವರು. ಈ ವಂಶದಲ್ಲಿ ಬಂದ ಚಕ್ರವರ್ತಿ ಜಗತ್ತುಂಗ ಗೋವಿಂದ ಹಾಗೂ ಗಾಮುಂಡಬ್ಬೆಯರ ಒಬ್ಬನೇ ಮಗ ನೃಪತುಂಗ. ಮುಮ್ಮಡಿ ಗೋವಿಂದನು ತನ್ನ ಬಾಹುಬಲ, ಶೌರ್ಯ-ಸಾಹಸ, ಕಾರ್ಯದಕ್ಷತೆ, ಚತುರ ರಾಜನೀತಿಗಳಿಂದ ಉತ್ತರದಲ್ಲಿ ಗುಜರಾತಿನಿಂದ ದಕ್ಷಿಣದಲ್ಲಿ ಸಿಂಹಳದವರೆಗೆ ಇಡೀ ಭಾರತ ವರ್ಷದ ಸಾಮ್ರಾಟನಾಗಿ ಮೆರೆದಿದ್ದನು.

ಅವನು ಅನೇಕ ಮಂದಿ ರಾಜರನ್ನು ಸೋಲಿಸಿದನು; ಹಲವರು ಹೆದರಿ ತಾವೇ ಶರಣಾಗಿ ಸಾಮಂತರಾಗಿರಲು ಒಪ್ಪಿಕೊಂಡರು. ಅವನು ಹಿಮಾಲಯದ ಗಂಗಾನದಿಯವರೆಗೂ ಜಯಭೇರಿ ಹೊಡೆಸಿದನು.

ನೃಪತುಂಗ ಕ್ರಿ.ಶ. ೮೦೦ ರಲ್ಲಿ ಹುಟ್ಟಿದನು.

ಗೋವಿಂದನು ಬಹು ಪರಾಕ್ರಮಶಾಲಿ. ವಿಶಾಲವಾದ ಸಾಮ್ರಾಜ್ಯವನ್ನು ಸ್ಥಾಪಿಸಿದ. ಆದರೆ ಮಕ್ಕಳು ಇನ್ನೂ ಚಿಕ್ಕವರಾಗಿರುವಾಗಲೇ ತೀರಿಕೊಂಡ.

ಕವಿದು ಬಂದ ವಿಪತ್ತು

ತಂದೆ ತೀರಿಕೊಂಡ ಕೆಲವು ದಿನಗಳಿಗೆ ನೃಪತುಂಗನು ಸಿಂಹಾಸನವನ್ನು ಏರಿದನು. ಆಗಲೇ ‘ಅಮೋಘವರ್ಷ’ ಎಂಬ ಬಿರುದನ್ನು ತಳೆದನು.

ನೃಪತುಂಗನು ಪಟ್ಟಕ್ಕೆ ಬಂದಾಗ ಇನ್ನೂ ಬಾಲಕನಾಗಿದ್ದುದರಿಂದ ಅವನ ಪರವಾಗಿ ಅವನ ತಾಯಿಯು ರಾಜ ಪ್ರತಿನಿಧಿಯಾಗಿ ರಾಜ್ಯಾಡಳಿತ ಸೂತ್ರವನ್ನು ಕೈಗೊಂಡಳು. ಜೈನ ಆಚಾರ್ಯರೂ ಉದ್ದಾಮ ಪಂಡಿತರೂ ಆಗಿದ್ದ ಭಗವತ್ ಜಿನಸೇನಾಚಾರ್ಯರೂ ಅವರ ಶಿಷ್ಯ ಗುಣಭದ್ರಾಚಾರ್ಯರೂ ರಾಜಮಾತೆಗೆ ಬೆಂಬಲವಾಗಿ ನಿಂತರು. ಬನವಾಸಿಯ ಬಂಕೆಯರಸನು ನೃಪತುಂಗನ ಒಡನಾಡಿಯಾಗಿ ಅವನನ್ನು ಅನುಸರಿಸುತ್ತಿದ್ದನು.

ಹೀಗಿರಲು ಇದ್ದಕ್ಕಿದ್ದಂತೆ ಸಾಮ್ರಾಜ್ಯದಿಂತದಲ್ಲಿ ಕಾರ್ಮೋಡಗಳು ಕಾಣಿಸಿಕೊಂಡವು. ಗೋವಿಂದ ಸಾಮ್ರಾಟನು ಮಡಿದ ಕೂಡಲೇ ವಿದ್ರೋಹಿಗಳಾದ ಸಾಮಂತರೂ ಮಾಂಡಲೇಶ್ವರರೂ ದಂಗೆ ಎದ್ದರು. ಇವರಿಗೆ ಸಾಮ್ರಾಟನ ಬಂಧುಗಳಲ್ಲಿ ಕೆಲವರು ಪರೋಕ್ಷವಾಗಿ ನೆರವಾದರು. ಇದೇ ಸಮಯದಲ್ಲಿ ಗಂಗರ ಶಿವಕುಮಾರನು ಸಮಯ ಸಾಧಿಸಿ ನೃಪತುಂಗನ ರಾಜಧಾನಿ ಹೇಲಾಪುರದ ಮೇಲೆ ದಾಳಿ ಇಟ್ಟನು. ಇಂತಹ ಪರಿಸ್ಥಿತಿಯಲ್ಲಿ ಏನು ಮಾಡಬೇಕೆಂದು ತಿಳಿಯದೆ ಬಾಲಕ ನೃಪತುಂಗನು ಕಂಗೆಟ್ಟನು.

ರಾಜಮಾತೆಯು ಗುರುಗಳಾದ ಜಿನಸೇನಾಚಾರ್ಯರನ್ನು ಬರಮಾಡಿಕೊಂಡಳು.

“ಗುರುಗಳೇ, ಈಗ ನಮ್ಮ ಪುಟ್ಟರಸು ರಾಜಧಾನಿಯನ್ನು ರಕ್ಷಿಸಬೇಕೆಂದು ಹಠಹಿಡಿದಿದ್ದಾನೆ. ಅವನಿಗೆ ಈ ಬಂಕೇಯನು ಒತ್ತಾಸೆ ನೀಡುತ್ತಿದ್ದಾನೆ. ಈಗ ಏನು ಮಾಡಬೇಕೆಂಬುದನ್ನು ತಾವು ಅಪ್ಪಣೆ ಕೊಡಿಸಬೇಕು” ಎಂದು ರಾಜಮಾತೆ ಗಾಮುಂಡಬ್ಬೆ ಕೇಳಿದಳು.

ಜ್ಞಾನವೃದ್ಧರೂ ವಯೋವೃದ್ಧರು ತಪಸ್ವಿಗಳೂ ಆಗಿದ್ದ ಜಿನಸೇನಾಚಾರ್ಯರು ಪರಿಸ್ಥಿತಿಯ ಗಂಭೀರತೆಯನ್ನೂ ಅಪಾಯವನ್ನೂ ತಿಳಿದಿದ್ದರು. ಶಾಂತರಾಗಿ “ಕುಮಾರ, ಯುದ್ಧವೆಂದರೆ ಹಿಂಸೆ, ವೃಥಾ ರಕ್ತಪಾತ, ಇದನ್ನು ತಪ್ಪಿಸುವ ದಾರಿ ಇದ್ದರೆ ನಾವೇಕೆ ಪ್ರಯತ್ನಿಸಬಾರದು?”

“ಅಂದರೆ ನಾವು ಶತ್ರುಗಳಿಗೆ ನಮ್ಮ ನಗರವನ್ನು ಒಪ್ಪಿಸಿ ಶರಣಾಗಬೇಕೆಂದು ಹೇಳುವಿರಾ?” ನೃಪತುಂಗ ಕೇಳಿದ.

“ಹಾಗಲ್ಲ ಕುಮಾರ, ನಾವು ಈಗ ಈ ರಾಜಧಾನಿಯನ್ನು ಈ ಇಬ್ಬರು ಬಲಾಢ್ಯ ದೊರೆಗಳಿಂದ ರಕ್ಷಿಸಲು ಸಾಧ್ಯವೇ ಎಂಬುದನ್ನು ಪರ್ಯಾಲೋಚಿಸಿ ತೀರ್ಮಾನ ಕೈಗೊಳ್ಳಬೇಕಾಗಿದೆ. ನನಗೆ ತಿಳಿದಂತೆ ನಗರದಲ್ಲಿರುವ ನಮ್ಮ ಸೈನ್ಯವು ಈ ದಾಳಿಯನ್ನು ಎದುರಿಸಲು ಅಸಮರ್ಥವಾಗಿದೆ. ಅಲ್ಲದೆ ಇಲ್ಲಿನ ಜನತೆ ಶತ್ರುಗಳ ವಿರುದ್ಧ ಹೋರಾಟಕ್ಕೆ ಸಿದ್ಧರಾಗಿಲ್ಲ”.

ಬೇರೆ ಮಾರ್ಗವಿಲ್ಲದೆ ನೃಪತುಂಗನು ರಾಜಧಾನಿಯನ್ನು ಬಿಡಲು ಒಪ್ಪಿಕೊಂಡರು.

 

‘ನಾವು ಶತ್ರುಗಳಿಗೆ ನಗರವನ್ನು ಒಪ್ಪಿಸಿ ಶರಣಾಗಬೇಕೆಂದು ಹೇಳುವಿರಾ?’

ಇಂಥ ಸಮಯ ಬಂದರೆ ಏನು ಮಾಡಬೇಕೆಂದು ಗಾಮುಂಡಬ್ಬೆ ನಿರ್ಧರಿಸಿದ್ದಳು. ತನ್ನ ನಂಬಿಕೆಯ ಸೇವಕರೊಂದಿಗೆ ಶ್ರೀಭವನದಿಂದ ರಹಸ್ಯವಾಗಿ ಪಾರಾಗುವ ಹಂಚಿಕೆ ನಡೆಸಿದ್ದಳು. ಅವರಿಗೆ ಬೇಕಾಗಿದ್ದ ಕುದುರೆಗಳು, ಧನಕನಕ ವಸ್ತುಗಳು, ರಾಜಚಿಹ್ನೆಗಳು ಈಗಾಗಲೇ ಸಾಗಿಸಲ್ಪಟ್ಟಿದ್ದವು. ಜಿನಸೇನಾಚಾರ್ಯರೂ ಗುಣಭದ್ರಾಚಾರ್ಯರೂ ನಗರವನ್ನು ಬಿಟ್ಟಿದ್ದರು. ಅವರು ನಗರದ ಹೊರವಲಯದಲ್ಲಿ ಮಹಾರಾಣಿ ಹಾಗೂ ರಾಜಕುಮಾರನ ಸಲುವಾಗಿ ಕಾಯುತ್ತಿದ್ದರು.

ಒಲ್ಲದ ಮನಸ್ಸಿನಿಂದ ರಾಜಕುಮಾರ, ಮಹಾರಾಣಿ, ಬಂಕೇಯ ಹಾಗೂ ರಾಜಪರಿವಾರದವರು ರಹಸ್ಯ ಮಾರ್ಗದಿಂದ ತಪ್ಪಿಸಿಕೊಂಡು ನಗರದ ಹೊರವಲಯಕ್ಕೆ ಬಂದರು. ವಿಪತ್ತಿನಿಂದ ಪಾರಾದ ಮೇಲೆ ಅವರು ಮುಂದಿನ ಕ್ರಮವನ್ನು ಕುರಿತು ಆಲೋಚಿಸಿದರು.

“ನಮ್ಮೆಲ್ಲರಿಗೆ ಹಿರಿಯರಾದ ಗುಜರಾತಿನ ಕರ್ಕ ಸುವರ್ಣವರ್ಷ ದೊರೆಗಳಿಗೆ ಈ ವಾರ್ತೆಯನ್ನು ತಿಳಿಸಲು ದೂತರನ್ನು ಕಳುಹಿಸಿಕೊಡೋಣ. ಅವರು ಸೈನ್ಯ ಸಮೇತ ಬರುವವರೆಗೆ ತಲೆಮರೆಸಿಕೊಂಡು ಇರೋಣ. ಅವರ ನೆರವಿನಿಂದ ಕೈಬಿಟ್ಟ ರಾಜಧಾನಿಯನ್ನು ಮುಂದೆ ಮರಳಿ ಸ್ವಾಧೀನಕ್ಕೆ ತೆಗೆದುಕೊಳ್ಳೋಣ” ಎಂದು ಗುಣಭದ್ರಾಚಾರ್ಯರು ಸಲಹೆ ಇತ್ತರು. ಅದರಂತೆ ನಡೆಯಲು ನೃಪತುಂಗ ಒಪ್ಪಿದ.

ಆದರೆ ಅವರ ಪಾಲಿನ ದುರ್ದೈವ ಇಲ್ಲಿಗೇ ಪರಿಹಾರಗೊಳ್ಳಲಿಲ್ಲ. ಶತ್ರುಗಳಿಗೆ ನಗರದಲ್ಲಿದ್ದ ಕೆಲವು ದ್ರೋಹಿಗಳು ನೆರವಾಗಿದ್ದರು. ಹೀಗಾಗಿ ಹೆಚ್ಚಿನ ಹೋರಾಟ ರಕ್ತಪಾತವಿಲ್ಲದೆ ಅದು ಶತ್ರುಗಳ ವಶವಾಯಿತು. ಗಂಗದೊರೆ ಶಿವಮಾರನೂ ವೆಂಗಿಯ ದೊರೆ ವಿಜಯಾದಿತ್ಯನೂ ರಾಜಧಾನಿಯನ್ನು ವಶಪಡಿಸಿಕೊಂಡರು. ತಲೆತಪ್ಪಿಸಿ ಕೊಂಡಿದ್ದ ನೃಪತುಂಗನನ್ನು ಹಿಡಿಯಲು ಕ್ರಮ ಕೈಗೊಂಡರು.

ಸಹಾಯ ಒದಗಿತು

ಕಷ್ಟಗಳು ಬಂದರೆ ಹಿಂಡು ಕಟ್ಟಿಕೊಂಡು ಬರುತ್ತವೆ. ದೈವಾನುಗ್ರಹ ಒದಗಿದರೆ ಅವು ಮಂಜಿನಂತೆ ಕರಗಿ ಹೋಗುತ್ತವೆ. ನೃಪತುಂಗನ ವಿಷಯದಲ್ಲಿ ಹೀಗೆಯೇ ಆಯಿತು.

ಈಗ ಶತ್ರುಗಳು ಮಾಡಿದ್ದ ವಿದ್ರೋಹದ ಹಂಚಿಕೆಯಲ್ಲಿ ಅರ್ಧಭಾಗ ಮಾತ್ರ ಯಶಸ್ವಿಯಾಗಿತ್ತು. ನೃಪತುಂಗನೂ ರಾಜಮಾತೆಯೂ ಸೆರೆ ಸಿಕ್ಕಿರಲಿಲ್ಲ. ಅವರು ರಾಜಮನೆತನದವರನ್ನು ಹುಡುಕಲು ಬೇಹುಗಾರರನ್ನು ಎಲ್ಲೆಡೆ ಕಳುಹಿಸಿದರು.

ಇಷ್ಟರಲ್ಲಿ ನೃಪತುಂಗನ ಚಿಕ್ಕಪ್ಪನಾದ ಗುರ್ಜರ ದೇಶದ ಕರ್ಕ ಸುವರ್ಣವರ್ಷನು ತನ್ನ ಸೈನ್ಯದೊಡನೆ ಮಿಂಚಿನ ವೇಗದಲ್ಲಿ ಹೇಲಾನಗರಿಯ ಕಡೆಗೆ ಬರುತ್ತಿರುವ ವಾರ್ತೆಯನ್ನು ಬೇಹುಗಾರರು ತಂದರು.

ನಿರೀಕ್ಷೆಗೆ ಮೊದಲೇ ಸುವರ್ಣವರ್ಷನ ಸೈನ್ಯ ರಾಜಧಾನಿಯನ್ನು ಮುತ್ತಿತ್ತು. ಆತ್ಮರಕ್ಷಣೆಗಾಗಿ ಶಿವಮಾರ ಹಾಗೂ ವಿಜಯಾದಿತ್ಯರು ಯುದ್ಧ ಹೂಡಬೇಕಾಯಿತು. ಈ ಸುದ್ದಿ ಕೇಳಿದ ಕೂಡಲೇ ಕೋಟೆಯ ಒಳಗಿದ್ದ ನೃಪತುಂಗನ ಪಕ್ಷಪಾತಿಗಳಾದ ಪ್ರಜಾಕೋಟಿ ಶತ್ರುಗಳ ವಿರುದ್ಧ ನಿಂತಿತು.

ಇದರಿಂದ ಒಳಗೆ ಸೇರಿಕೊಂಡಿದ್ದ ಶತ್ರು ಸೈನಿಕರು ಬೋನಿಗೆ ಬಿದ್ದ ಇಲಿಗಳಂತಾಗಿ ಚಡಪಡಿಸತೊಡಗಿದರು.

ಶಿವರಮಾರನೂ ವಿಜಯಾದಿತ್ಯನೂ ವ್ಯಾಪಾರಿಗಳಂತೆ ವೇಷ ಧರಿಸಿಕೊಂಡು ಬಹಳ ಕಷ್ಟಪಟ್ಟು ಕೋಟೆಯ ರಹಸ್ಯ ದ್ವಾರದಿಂದ ತಪ್ಪಿಸಿಕೊಂಡು ಪಾರಾದರು. ಆದರೆ ತುಮಕೂರಿನ ಬಳಿಯ ಹಿರೇಗುಂಡಿಗಲ್ಲಿನ ಬಳಿಗೆ ಬಂದಾಗ ಸುವರ್ಣವರ್ಷನ ಸೈನಿಕರಿಗೆ ಸಿಕ್ಕಿಬಿದ್ದರು. ಆತ್ಮರಕ್ಷಣೆಗಾಗಿ ಕತ್ತಿ ಹಿಡಿದು ಹೋರಾಡಿ ವೀರಮರಣವನ್ನು ಸ್ವಾಗತಿಸಿದರು. ಹೀಗೆ ಅವರ ಕಥೆ ಮುಗಿಯಿತು.

ಕರ್ಕ ಸುವರ್ಣವರ್ಷನ ಸಮಯೋಚಿತ ಸಹಾಯದಿಂದ ರಾಷ್ಟ್ರಕೂಟ ಸಿಂಹಾಸನಕ್ಕೆ ಒದಗಿದ್ದ ದೊಡ್ಡ ವಿಪತ್ತು ಪರಿಹಾರವಾಗಿತ್ತು.

ನಿಮ್ಮ ಕಷ್ಟಗಳು ಮುಗಿದವು

ಇಷ್ಟರಿಂದಲೇ ಸಾಮ್ರಾಜ್ಯ ಸುರಕ್ಷಿತವೂ ಸುಭದ್ರವೂ ಆಗಿರಲಿಲ್ಲ. ಈಗ ಸುವರ್ಣವರ್ಷನ ಮುಂದೆ ಎರಡು ಸಮಸ್ಯೆಗಳಿದ್ದವು. ತಲೆತಪ್ಪಿಸಿಕೊಂಡಿದ್ದ ನೃಪತುಂಗ ಹಾಗೂ ಅವನ ಪರಿವಾರದವರನ್ನು ಪತ್ತೆ ಮಾಡುವುದು, ಸಾಮ್ರಾಜ್ಯವನ್ನು ಒಳಗಿನ ದ್ರೋಹಿಗಳಿಂದ ಉಳಿಸಿ ಅದನ್ನು ಸುಭದ್ರ ಗೊಳಿಸುವುದು ಅವನ ಮುಂದಿದ್ದ ಸಮಸ್ಯೆಗಳಾಗಿದ್ದವು.

ಅವನು ಬಳ್ಳಿಗಾವಿಯ ಅಸುಪಾಸಿನ ಗ್ರಾಮಗಳಲ್ಲಿ ನೃಪತುಂಗನಿಗಾಗಿ ಶೋಧಿಸುತ್ತಿರಲು ಗೂಢಾಚಾರರು ಸಂತೋಷದ ವಾರ್ತೆಯನ್ನೇ ತಂದರು.

ನೃಪತುಂಗನೂ ರಾಜಮಾತೆ ಗಾಮುಂಡಬ್ಬೆಯೂ ಯಾತ್ರಿಕರಂತೆ ವೇಷ ಧರಿಸಿ ಬನವಾಸಿ ನಾಡಿನ ಒಂದು ಜೈನ ಕ್ಷೇತ್ರದ ಛತ್ರವೊಂದರಲ್ಲಿ ತಂಗಿದ್ದರು. ಅವರು ಶ್ರವಣಬೆಳಗೊಳಕ್ಕೆ ಹೋಗುವ ಸಿದ್ಧತೆಯಲ್ಲಿದ್ದಾಗ ಸುವರ್ಣ ವರ್ಷನ ನಂಬಿಕೆಯ ಸೇವಕ ರಾಚಮಲ್ಲನು ಆ ತಾಯಿ ಮಕ್ಕಳನ್ನು ಪತ್ತೆ ಹಚ್ಚಿದನು.

“ತಾಯಿ ನೀವಾರೆಂದು ನಾನು ಬಲ್ಲೆ. ಆದರೆ ನನ್ನ ಪರಿಚಯ ನಿಮಗಿಲ್ಲ. ನಾನು ಕರ್ಕ ಸುವರ್ಣವರ್ಷ ಮಹಾರಾಜನ ಪಾದಸೇವಕ. ನಿಮ್ಮನ್ನು ಶೋಧಿಸಲೆಂದೇ ಬಂದವನು. ದೈವಯೋಗದಿಂದ ತಮ್ಮನ್ನು ಇಲ್ಲಿ ಕಂಡೆ. ತಮಗೆ ದ್ರೋಹ ಬಗೆದ ಶತ್ರುಗಳೆಲ್ಲ ನಿಶ್ಯೇಷರಾದರು. ತಾವು ಇನ್ನು ರಾಜಧಾನಿಗೆ ಹಿಂದಿರುಗಬಹುದು” ಎಂದು ತಿಳಿಸಿದನು.

ಈ ವಾರ್ತೆ ಕೇಳಿ ರಾಜಮಾತೆ ತನ್ನ ಕಿವಿಯನ್ನು ನಂಬಲಿಲ್ಲ. ತನ್ನ ಮಗನನ್ನು ಅಪ್ಪಿಕೊಂಡು ಆನಂದ ಬಾಷ್ಪ ಸುರಿಸಿದಳು.

ಮುಂದೆ ರಾಜಪರಿವಾರವು ರಾಜಧಾನಿ ಹೇಲಾ-ನಗರಿಯ ಕಡೆಗೆ ಹೊರಟಿತು. ಈ ಕೆಲವು ತಿಂಗಳುಗಳಲ್ಲಿ ಅಕಾರಣವಾಗಿ ನಡೆದ ರಕ್ಷಪಾತದಿಂದ ಕಂಗೆಟ್ಟಿದ್ದ ರಾಜಧಾನಿಯ ಜನತೆಯನ್ನು ನೋಡಿ ಗಾಮುಂಡಬ್ಬೆ ಹೌಹಾರಿದಳು. ಈ ಪೆಟ್ಟಿನಿಂದ ಅವಳು ಚೇತರಿಸಿಕೊಳ್ಳಲಿಲ್ಲ. ವ್ಯಥೆಯಿಂದ ಹಾಸಿಗೆ ಹಿಡಿದ ಅವಳು ಕಡೆಗೊಂದು ದಿನ ಕಣ್ಮುಚ್ಚಿಕೊಂಡಳು.

ಪ್ರಜಾಕೋಟಿಗೆ ರಕ್ಷೆಯಾಗು

ಹೀಗೆ ತನ್ನ ಹದಿನಾರನೆಯ ವಯಸ್ಸಿಗೇ ನೃಪತುಂಗನು ತಂದೆ ತಾಯಿಗಳನ್ನು ಕಳೆದುಕೊಂಡ ತಬ್ಬಲಿಯಾದನು. ಅವನ ದುಃಖಕ್ಕೆ ಕೊನೆಯೇ ಇಲ್ಲವಾಯಿತು. ಇದನ್ನು ನೋಡಿ ಗುರುಗಳಾದ ಜಿನಸೇನಾಚಾರ್ಯರು, “ಮಗೂ ಮನುಷ್ಯಮಾತ್ರನಾದವನು ಪರಿಹರಿಸಿಕೊಳ್ಳಲಾಗದಿರುವ ಘಟನೆ ಎಂದರೆ ಸಾವು. ಈ ಮೃತ್ಯವನ್ನು ನಾವು ಗೆಲ್ಲ ಬೇಕಾದರೆ ಕರ್ಮಬಂಧನದಿಂದ ಅಂದರೆ ಪಾಪಪುಣ್ಯಗಳ ಫಲದಿಂದ ಬಿಡುಗಡೆಯಾಗಬೇಕು. ಅಂಥವನಿಗೆ ಮಾತ್ರ ಪುನರ್ಜನ್ಮವಿರದು. ಅಲ್ಲಿಯವರೆಗೆ ಹುಟ್ಟು ಸಾವಿನ ಈ ಚಕ್ರದಿಂದ ಯಾವ ಜೀವಿಯೂ ಮುಕ್ತನಲ್ಲ ಎಂದು ಸಮಾಧಾನಪಡಿಸಿದರು.

ಇತ್ತೀಚೆಗೆ ಜಿನಸೇನಾಚಾರ್ಯರ ಆರೋಗ್ಯ ಅಷ್ಟು ಚೆನ್ನಾಗಿರಲಿಲ್ಲ. ಅವರು ತಮ್ಮ ಇಹಬಾಳಿನ ಕೊನೆಯ ಅಂಕಕ್ಕೆ ಸಿದ್ಧರಾಗುತ್ತಿದ್ದರು. ಅವರು ತಾವು ಬರೆಯಲು ಆರಂಭಿಸಿದ್ದ ಆದಿಪುರಾಣವನ್ನು ಮುಗಿಸಲು ತಮ್ಮ ಶಿಷ್ಯರಾದ ಗುಣಭದ್ರಾಚಾರ್ಯರಿಗೆ ಅಪ್ಪಣೆ ಮಾಡಿ, ರಾಜಕುಮಾರ ನೃಪತುಂಗನ ವಿದ್ಯಾಭ್ಯಾಸ ಹಾಗೂ ರಕ್ಷಣೆಯ ಹೊಣೆಯನ್ನು ಒಪ್ಪಿಸಿ ನಿಶ್ಚಿಂತೆಯಿಂದ ಸಲ್ಲೇಖನ ವ್ರತ ಮಾಡಿ ದೇಹದಿಂದ ಬಿಡುಗಡೆ ಹೊಂದಬೇಕೆಂದು ಬಯಸಿದ್ದರು.

ಈ ವಾರ್ತೆ ಕೇಳಿ ನೃಪತುಂಗನಿಗೆ ಸಿಡಿಲು ಬಡಿದಮತೆ ಆಯಿತು.

ಕರ್ಕ ಸುವರ್ಣವರ್ಷನು ನೃಪತುಂಗನಿಗೆ ಧೈರ್ಯದ ಮಾತುಗಳನ್ನು ಹೇಳಿ ಹುರಿದುಂಬಿಸಬೇಕಾಯಿತು.

“ಮಗೂ, ಸಿಂಹಾಸನ ಎಂಬುದು ಮುಳ್ಳಿನ ಹಾಸಿಗೆ. ಅಲ್ಲಿ ಕುಳಿತ ಯಾವನಿಗೂ ನೆಮ್ಮದಿ ಎಂಬುದಿರುವುದಿಲ್ಲ. ನಿನ್ನ ತೀರ್ಥರೂಪದ ಆದರ್ಶ ನಿನ್ನ ಮುಂದಿರಲಿ. ನೀನು ಅವರಿಗೆ ತಕ್ಕ ಮಗನಾಗಬೇಕು. ಯುದ್ಧವೆಂಬುದು ವೀರನಿಗೆ ಪರೀಕ್ಷೆಯ ಸಮಯ. ಅವನ ಸತ್ವಪರೀಕ್ಷೆಗೆ ಇರುವ ಅಗ್ನಿಪರೀಕ್ಷೆ. ಸಾಮ್ರಾಟ ಪದವಿ ಎಂಬುದು ಲೋಲುಪ ಜೀವನಕ್ಕೆ ಕೊಟ್ಟ ಆಹ್ವಾನವಲ್ಲ. ಅದೊಂದು ಕತ್ತಿಯ ಮೇಲೆ ನಡೆಯುವ ಅಸಿಧಾರಾವ್ರತ. ಮೈಯೆಲ್ಲಾ ಕಣ್ಣಾಗಿಸಿ ಎಚ್ಚರದಿಂದ ನಡೆದರೆ ಮಾತ್ರ ಬಾಳು. ನಿನ್ನ ಈ ಖಡ್ಗ ಪ್ರಜಾಕೋಟಿಯ ರಕ್ಷಣಾ ಸಾಧನವಾಗಲಿ. ಇದರ ಸಲುವಾಗಿ ನಿನ್ನ ಬಾಹು ಮೀಸಲಾಗಲಿ.”

ಆಸ್ಥಾನದಲ್ಲಿ ನ್ರುಪತುಂಗ

ಈ ಮಾತು ಕೇಳಿ ನೃಪತುಂಗನ ಮೈ ರೋಮಾಂಚನವಾಯಿತು. ಎಷ್ಟೆಂದರೂ ನೃಪತುಂಗ ಸಿಂಹದ ಹೊಟ್ಟೆಯಲ್ಲಿ ಹುಟ್ಟಿದ ಮರಿಸಿಂಹವಲ್ಲವೇ?

ರಾಷ್ಟ್ರಕೂಟ ಸಿಂಹಾಸನಕ್ಕೆ ಯೋಗ್ಯನಾದ ಸಾಮ್ರಾಟನಾಗಲು ನಿಶ್ಚಯಿಸಿದನು.

ಸಮೃದ್ಧಿಯ ರಾಜಧಾನಿ

ತಾತ್ಕಾಲಿಕವಾಗಿ ರಾಷ್ಟ್ರಕೂಟ ಯಶೋಚಂದ್ರನಿಗೆ ಬಂದಿದ್ದ ರಾಹು ತೊಲಗಿದಂತೆ ಆಗಿತ್ತು.

ನರ್ಮದೆಯ ತಡಿಯ ಹೇಲಾನಗರಿಯನ್ನು ಶತ್ರುಗಳಿಗೆ ಒಪ್ಪಿಸಿ ಹೋಗಬೇಕಾಗಿ ಬಂದ ಸಂದರ್ಭ, ಅದನ್ನು ಚಿಕ್ಕಪ್ಪನ ನೆರವಿನಿಂದ ಮತ್ತೆ ದೊರಕಿಸಿಕೊಂಡಿದ್ದು ನೃಪತುಂಗನ ಪಾಲಿಗೆ ಮರೆಯಲಾಗದ ಪಾಠ ಕಲಿಸಿತ್ತು. ಈ ನಗರವು ಎಲ್ಲ ರೀತಿಯಿಂದ ರಾಷ್ಟ್ರಕೂಟ ಸಾಮ್ರಾಜ್ಯಕ್ಕೆ ರಾಜಧಾನಿಯಾಗಲು ಅರ್ಹತೆ ಪಡೆದಿದ್ದರೂ ರಕ್ಷಣೆಯ ದೃಷ್ಟಿಯಿಂದ ದುರ್ಬಲವಾಗಿತ್ತು. ಹೀಗಾಗಿ ಅದಕ್ಕಿಂತೂ ಪ್ರಶಸ್ತವಾದ ಸ್ಥಳವನ್ನು ರಾಜಧಾನಿಗೆ ಆರಿಸಲು ನೃಪತುಂಗನು ಆಲೋಚಿಸಿದನು.

ಅದರಂತೆ ಅವನು ಅನೇಕ ಪ್ರದೇಶಗಳನ್ನು ನೋಡುತ್ತಾ ಬಂದನು. ಕೊನೆಗೆ ಅವನ ಮನಸೆಳೆದ ಪ್ರದೇಶವೆಂದರೆ ಕಾಗಿನಿ ನದಿಯ ದಡದಲ್ಲಿದ್ದ ಮಾನ್ಯಖೇಟ (ಮಳಖೇಡ)ವೆಂಬ ಹಳ್ಳಿ. ಈ ಪ್ರದೇಶದಲ್ಲಿ ನೃಪತುಂಗನು ಒಂದು ಸುಭದ್ರವಾದ ಕೋಟೆಯನ್ನು ಕಲ್ಲಿನಿಂದ ನಿರ್ಮಿಸಿದ. ಪೇಟೆ, ಅರಮನೆ, ಉದ್ಯಾನ, ರಾಜಭವನಗಳು ಬೆಳಗಿದವು. ಆಡಳಿತದ ವಿವಿಧ ವಿಭಾಗಗಳಿಗೂ ವಿಸ್ತಾರವಾದ ಭವನಗಳನ್ನು ನಿರ್ಮಿಸಲಾಯಿತು. ದಂಡೋತಿಯಲ್ಲಿ ಸೈನ್ಯ ಶಿಬಿರಕ್ಕೆ ಬೇಕಾದ ಬಿಡಾರಗಳನ್ನು ಕಲ್ಪಿಸಿಕೊಡಲಾಯಿತು. ಇಂದಿನ ಗುಲ್ಬರ್ಗಾ ಜಿಲ್ಲೆಯಲ್ಲಿರುವ ಸೇಡಂನಲ್ಲಿ ಸಚಿವಾಲಯ ನಿರ್ಮಾಣವಾಯಿತು. ನೆಲ್ಲಹಳ್ಳಿ ಮತ್ತು ಕೊಂಕನಹಳ್ಳಿಗಳ ನಡುವೆ ರಾಜಬೊಕ್ಕಸಕ್ಕೆ ಸುಭದ್ರವಾದ ಕಟ್ಟಡಗಳನ್ನು ಕಟ್ಟಲಾಯಿತು.

ಇಲ್ಲಿಗೆ ವ್ಯಾಪಾರದ ನಿಮಿತ್ತವಾಗಿ ದೇಶವಿದೇಶಗಳಿಂದ ವರ್ತಕರು ಬರುತ್ತಿದ್ದರು. ವಜ್ರಕೆರೂರ ಗೋಲ್ಕಂಡಗಳ ವ್ರಜಗಳ ಸಲುವಾಗಿಯೂ ಮುತ್ತು ರತ್ನಗಳ ಸಲುವಾಗಿಯೂ ಅರಬ್ಬಿದೇಶದಿಂದ ಬಂದ ವ್ಯಾಪಾರಿಗಳು ಕುದುರೆಗಳನ್ನು, ಚಿನ್ನ ಬೆಳ್ಳಿ ಲೋಹಗಳನ್ನು ತಂದು ಒಪ್ಪಿಸಿ ಹೋಗುತ್ತಿದ್ದರು.

ಈ ವ್ಯವಹಾರಗಳನ್ನು ಪಟ್ಟಣ ಶೆಟ್ಟಿಗಳೂ ಬಣಜಿಗರೂ ನೋಡಿಕೊಂಡು ಹೋಗುತ್ತಿದ್ದರು.

ಹೀಗೆ ರಾಜಬೀದಿಗಳಿಂದಲೂ ಭವ್ಯವಾದ ಶ್ರೀಮಂತ ಮಂದಿರಗಳಿಂದಲೂ ಗುಡಿ ಗೋಪುರಗಳಿಂದಲೂ ಎತ್ತರವಾದ ದುರ್ಗ, ಕೋಟೆಗಳಿಂದಲು ಮಾನ್ಯ ಖೇಟವು ಭಾರತದ ಆಕರ್ಷಕ ನಗರಗಳಲ್ಲಿ ಒಂದೆಂಬ ಕೀರ್ತಿಗೆ ಭಾಜನವಾಯಿತು.

ಹಿರಿಯರ ಸಲಹೆ

ಕೆಲವು ವರ್ಷಗಳು ಸುವರ್ಣವರ್ಷನೇ ನಿಂತು ರಾಜ್ಯವನ್ನು ಸುವ್ಯವಸ್ಥೆಗೆ ತಂದನು. ಗುರುಗಳಾದ ಗುಣಭದ್ರಾಚಾರ್ಯರ ಮಾರ್ಗದರ್ಶನ, ಮಿತ್ರನೂ ವೀರನೂ ಒಳ್ಳೆಯ ಆಡಳಿತಗಾರನೆಂದು ಹೆಸರು ಪಡೆದವನೂ ಆಗಿದ್ದ ವೀರಬಂಕೆಯನ ಸಲಹೆ, ಸಮಾಲೋಚನೆಗಳು ನೃಪತುಂಗನಿಗೆ ಎರಡು ತೋಳುಗಳೆಂಬಂತೆ ರಕ್ಷಣೆ ಕೊಡಬಲ್ಲವಾಗಿದ್ದವು. ಅವನು ಇಪ್ಪತ್ತರ ಪ್ರಾಯವನ್ನು ಸಮೀಪಿಸುತ್ತಿದ್ದಂತೆ ಒಂದು ದಿನ ಸುವರ್ಣವರ್ಷನು ಗುಣಭದ್ರಾಚಾರ್ಯರಲ್ಲಿ ತಾನು ಗುಜರಾತಿಗೆ ಹಿಂದಿರುಗುವ ಮಾತು ತೆಗೆದನು. ಈಗ ಅವನ ಸಿಂಹಾಸನಕ್ಕೇ ಅಪಾಯ ಬಂದಿತ್ತು. ಬೇರೆ ದಾರಿಯಿಲ್ಲದೆ ನೃಪತುಂಗನೂ ಗುಣಭದ್ರಾಚಾರ್ಯರೂ ಇದಕ್ಕೆ ಸಮ್ಮತಿಸಬೇಕಾಯಿತು.

ಹಿರಿಯರೂ ಪ್ರಾಜ್ಞರೂ ಆದ ಆಚಾರ್ಯರು ಸುವರ್ಣ-ವರ್ಷನನ್ನು ತಮ್ಮ ಅಂತರಂಗಕ್ಕೆ ಕರೆಸಿಕೊಂಡು ಬಹಳ ಹೊತ್ತೇ ಮಾತನಾಡಿದರು. ಅವನನ್ನು ಬೀಳ್ಕೊಡುವ ಮುನ್ನ,

“ಮಹಾರಾಜರೇ, ರಾಜಕುಮಾರರ ವಿದ್ಯಾಭ್ಯಾಸವೆಲ್ಲ ಮುಗಿದಿದೆ. ಇನ್ನು ಅವನಿಗೆ ಶ್ರೇಷ್ಠ ವಂಶದ ಒಂದು ರಾಜಕನ್ಯೆಯನ್ನು ಆರಿಸಿ, ವಿವಾಹ ನಡೆಸಿ ನಿಮ್ಮ ಜವಾಬ್ದಾರಿಯಿಂದ ನಿವೃತ್ತರಾಗಬೇಕು” ಎಂದರು.

“ಗುರುದೇವ, ನನ್ನ ಮನಸ್ಸಿನಲ್ಲಿದ್ದ ವಿಚಾರವನ್ನೇ ತಾವೂ ಅಪ್ಪಣೆ ಕೊಡಿಸಿದಿರಿ. ಸಾಮ್ರಾಟರ ಸಂಬಂಧದಲ್ಲೇ ಸೋದರಸೊಸೆ ಮಹಾಲಕ್ಷ್ಮಿ ಎಂಬ ಕನ್ಯೆ ಇದೆ. ಅವಳನ್ನು ಮಾಚಿಕಬ್ಬೆ ಎಂದು ಕರೆಯುತ್ತಾರೆ. ತಾವು ಪರಾಂಬರಿಸುವಿರಾದರೆ ಸಮ್ಮುಖಕ್ಕೆ ಕರೆಸುತ್ತೇನೆ” ಎಂದು ಸಂತೋಷದಿಂದ ನುಡಿದ ಸುವರ್ಣವರ್ಷ.

ತಿಂಗಳೊಪ್ಪತ್ತಿನಲ್ಲಿ ನೃಪತುಂಗ ಮಾಚಿಕಬ್ಬೆಯರ ವಿವಾಹ ನೆರವೇರಿತು. ಕರ್ಕ ಸುವರ್ಣವರ್ಷನು ಹಗುರವಾದ ಮನಸ್ಸಿನಿಂದ ಬೃಗುಕಚ್ಛಕ್ಕೆ ತೆರಳಿದನು.

ಮಾನ್ಯಖೇಟದ ಜನತೆಯ ಪಾಲಿಗೆ ನೃಪತುಂಗನ ವಿವಾಹ ಸಂತೋಷದ ಉತ್ಸವವಾಯಿತು. ಅದು ಹೊಸ ಅಧ್ಯಾಯವನ್ನು ಆರಂಭಿಸಿದಂತೆ ಅವರು ಹರ್ಷಿಸಿದರು.

ಸುವರ್ಣವರ್ಷನ ನೆರವಿಗೆ

ಮಾಚಿಕಬ್ಬೆಯು ಪತಿಗೃಹವನ್ನು ಸೇರಿದ ಒಂದೆರಡು ವರ್ಷಗಳಲ್ಲಿ ಒಂದು ಮುದ್ದು ಹೆಣ್ಣುಮಗುವಾಯಿತು. ಈ ಮಗುವಿಗೆ ಚಂದ್ರಲಬ್ಬೆ ಎಂದು ಹೆಸರಿಟ್ಟರು. ಇಡೀ ಸಾಮ್ರಾಜ್ಯವು ಹರ್ಷದಿಂದ ನಲಿಯಿತು.

ಆದರೆ ಈ ನಲಿವು ಹೆಚ್ಚು ಕಾಲ ಉಳಿಯಲಿಲ್ಲ. ಗುರ್ಜರದ ರಾಷ್ಟ್ರಕೂಟ ಮನೆತನಕ್ಕೆ ಮಿಹಿರ ಭೋಜನೆಂಬ ದುಷ್ಟನಿಂದ ವಿಪತ್ತು ಬಂದಿತ್ತು. ವೃದ್ಧಾಪ್ಯದಿಂದ ಹಾಸಿಗೆ ಹಿಡಿದು ಮಲಗಿದ್ದ ಸುವರ್ಣವರ್ಷನಿಗೆ ಇವನನ್ನು ಎದುರಿಸುವುದು ದುಸ್ತರವಾಯಿತು. ರಾಷ್ಟ್ರಕೂಟ ಚಕ್ರವರ್ತಿ ನೃಪತುಂಗನು ತಮ್ಮ ಚಿಕ್ಕಪ್ಪನ ನೆರವಿಗೆ ಹೋಗಲು ನಿಶ್ಚಯಿಸಿದನು. ಸಾಮಂತರ ರಾಜರಿಂದ ಸೈನ್ಯಗಳನ್ನು ಕರೆಸಿಕೊಂಡನು. ಬಂಕರಸನ ಮಗ ಲೋಕಾದಿತ್ಯನೊಡನೆ ಸೈನ್ಯವನ್ನು ಕಳುಹಿಸಿಕೊಟ್ಟನು.

ಈ ಕಾರ್ಯಕ್ಕೆ ಬಂಕರಸನ ಮಗ ಲೋಕಾದಿತ್ಯನನ್ನು ಮಹಾದಂಡನಾಯಕನನ್ನಾಗಿ ಆರಿಸಿದುದು ಅನೇಕರಿಗೆ ಸಹಿಸದಾಯಿತು. ಅವರು ನೃಪತುಂಗನ ವಿರುದ್ಧ ದಂಗೆ ಎದ್ದರು. ಆದರೆ ರಾಷ್ಟ್ರಕೂಟ ಸೈನಿಕರೊಡನೆ ಬಹಳ ದಿನ ಸೆಣೆಸಲಾಗಲಿಲ್ಲ. ನೃಪತುಂಗನು ಎಲ್ಲ ವಿರೋಧಿಗಳನ್ನು ಸೋಲಿಸಿದನು. ಅನಂತರ ಅವರನ್ನು ಉದಾರವಾಗಿ ಕ್ಷಮಿಸಿದನು.

ಸಂಭ್ರಮದ ದಿನಗಳು

ಈ ವಿಜಯೋತ್ಸವವನ್ನು ಆಚರಿಸುತ್ತಿದ್ದಂತೆ ಮಹಾರಾಣಿ ಮಾಚಿಕಬ್ಬೆಯು ರಾಜ್ಯಕ್ಕೆ ಉತ್ತರಾಧಿಕಾರಿ ಎನಿಸುವ ಗಂಡುಮಗುವಿಗೆ ಜನ್ಮವಿತ್ತಳು. ಆ ಮಗುವಿಗೆ ಕೃಷ್ಣನೆಂದು ಹೆಸರಿಟ್ಟರು. ಅನಂತರ ಹುಟ್ಟಿದ್ದ ಹೆಣ್ಣು ಮಗುವಿಗೆ ಶಂಖಾದೇವಿ ಎಂದು ಹೆಸರಿಟ್ಟರು.

ನೃಪತುಂಗನು ತನ್ನ ಇಚ್ಛೆಯಂತೆ ನಡೆಯುವ ಅಧಿಕಾರಿಗಳು, ಮುದ್ದಾದ ಮೂರು ಮಕ್ಕಳು, ತನಗೆ ನೆರವಾಗುವ ಮಹಾರಾಣಿ, ಬಂಕೇಯನಂಥ ಸ್ವಾಮಿನಿಷ್ಠ ಸೇವಕರು, ಗುಣಭದ್ರಾಚಾರ್ಯರಂಥ ಗುರುಗಳು ಹೀಗೆ ತನ್ನ ಭಾಗ್ಯಕ್ಕೆ ಎಣೆಯಿಲ್ಲವೆಂದು ಸಂತೃಪ್ತಿ ತಳೆದನು.

ಯುದ್ಧಗಳಲ್ಲಿ ಗೆದ್ದು ಪ್ರಜೆಗಳು ಶಾಂತಿಯಿಂದ ಜೀವನ ನಡೆಸುವುದು ಸಾಧ್ಯವಾಗುವಂತೆ ರಕ್ಷಣೆ ನೀಡುವುದು ಹಿರಿಯ ರಾಜನ ಅರ್ಧ ಕೆಲಸ. ಜನಗಳು ನೆಮ್ಮದಿಯಾಗಿ ಬಾಳುವಂತೆ ನೋಡಿಕೊಳ್ಳುವುದು, ಸಂಗೀತ ಸಾಹಿತ್ಯ ಮತ್ತು ಇತರ ಲಲಿತಕಲೆಗಳಿಗೆ ಪ್ರೋತ್ಸಾಹ ಕೊಡುವುದು ಇನ್ನರ್ಧ ಕೆಲಸ. ನೃಪತಂಗ ಶತ್ರುಗಳನ್ನು ಅಡಗಿಸಿದ್ದ, ಜನರು ನೆಮ್ಮದಿಯಲ್ಲಿ ಬಾಳುತ್ತಿದ್ದರು.

ಈಗ ರಾಜನ ಮನಸ್ಸು ಸಾಹಿತ್ಯ, ಸಂಗೀತ, ಕಲೆಗಳ ಕಡೆಗೆ ಹರಿದಿತ್ತು. ಪೂಜ್ಯ ಜಿನಸೇನಾಚಾರ್ಯರು ಅರ್ಧ ಬರೆದು ಮುಗಿಸಿದ್ದ ಆದಿಪುರಾಣವನ್ನು ಪೂರ್ಣಗೊಳಿಸಲು ಗುರಯಗಳಾದ ಗುಣಭದ್ರಾಚಾರ್ಯರಲ್ಲಿ ಬಿನ್ನವಿಸಿ ಕೊಂಡಿದ್ದನು.

ಕೃಷ್ಣ ಯುವರಾಜನಾದ

ಕೃಷ್ಣನು ಇನ್ನೂ ಬಾಲಕನಾಗಿರುವಾಗಲೇ ಅವನ ತಾಯಿ ಮಹಾರಾಣಿಯು ಮೃತ ಹೊಂದಿದಳು. ಇದರಿಂದ ನೃಪತುಂಗನ ಬಾಳು ಬರಡಾದಂತೆ ಕಂಡಿತು. ಆದರೂ ತಾಯಿಯಿಲ್ಲದ ಮಕ್ಕಳನ್ನು ಬಹು ಅಕ್ಕರೆಯಿಂದ ನೋಡಿಕೊಂಡನು. ಕುಮಾರ ಕೃಷ್ಣನ್ನು ಗುಣಭದ್ರಾಚಾರ್ಯರಿಗೆ ಒಪ್ಪಿಸಿ ಅವರಿಂದ ಸಾಮ್ರಾಟನಿಗೆ ಬೇಕಾಗುವ ವಿದ್ಯೆಗಳನ್ನು ಕಲಿಸಿದನು. ರಣವಿದ್ಯೆಗಳನ್ನು ಸ್ವಯಂ ಬಂಕೇಯನೇ ನಿಂತು ಕಲಿಸಿಕೊಟ್ಟನು.

ಕೃಷ್ಣನು ಸಾಮಾನ್ಯ ಬಾಲಕನಂತಾಗದೆ, ರಾಷ್ಟ್ರಕೂಟ ಸಿಂಹಾಸನದ ಘನತೆ ಗೌರವಗಳನ್ನು ಎತ್ತಿ ಹಿಡಿಯುವ ಪುರುಷಸಿಂಹ ಆಗಬೇಕೆಂದು ಸಾಮ್ರಾಟನ ಹಂಬಲ.

ಆದರೆ ವಸ್ತುಸ್ಥಿತಿ ಬೇರೆಯಾಗಿತ್ತು. ಕೃಷ್ಣನಿಗೆ ರಣವಿದ್ಯೆಗಳಲ್ಲಿ ಆಸಕ್ತಿ ಇರಲಿಲ್ಲ. ಅವನಿಗೆ ಲೋಲುಪ ಜೀವನದ ಕಡೆ ಮನಸ್ಸು ಹರಿದಿತ್ತು. ಸುಖ ಪಡಬೇಕು ಎಂಬುದೊಂದೇ ಅವನ ಆಸೆ.

ಇದನ್ನು ಗುರುತಿಸಿದ ಬಂಕೇಯನು ಸಾಮ್ರಾಟನೊಂದಿಗೆ ಮಾತು ತೆಗೆದನು.

“ಪ್ರಭೂ, ಕುಮಾರರಲ್ಲಿ ಏನೋ ಒಂದು ಬಗೆಯ ಪರಿವರ್ತನೆ ಕಾಣಿಸುತ್ತಿದೆ. ಅವರಿಗೆ ಆಟಪಾಟಗಳಲ್ಲಿ ಇವರು ಆಸಕ್ತಿ ಖಡ್ಗವಿದ್ಯೆ, ಕುದುರೆ ಸವಾರಿಗಳಲ್ಲಿಲ್ಲ. ಸ್ನೇಹಿತರೂ ಕೂಡ ಅವರಿಗೆ ತಕ್ಕಂತೆಯೇ ಇದ್ದಾರೆ. ಅವರು ತಮ್ಮ ಮಿತ್ರರೊಡನೆ ಸದಾ ಮನರಂಜನೆ, ಭಾವಜೀವನವನ್ನು ಉದ್ದೀಪನಗೊಳಿಸುವ ನೃತ್ಯ, ನಾಟಕ, ಬೇಟೆಗಳಲ್ಲಿ ತೊಡಗಿದ್ದಾರೆ. ಈಗಲೇ ಅವರನ್ನು ಸರಿಯಾದ ಮಾರ್ಗಕ್ಕೆ ಹಚ್ಚಬೇಕು”.

“ಹೌದು ಬಂಕರಸರೇ, ನಾವೂ ಇದನ್ನು ಗಮನಿಸಿದ್ದೇವೆ. ಕುಮಾರರಿಗೆ ಯಾಕೋ ಹೋರಾಟದ ಕಷ್ಟದ ಬದುಕು ಹಿಡಿಸುತ್ತಿಲ್ಲ. ಸಿಂಹಾಸನದ ಉತ್ತರಾಧಿಕಾರಿ ಹೀಗೆ ಸುಖಕ್ಕೆ ಬಾಯಿಬಿಡುವುದನ್ನು ಕಂಡು ಮೈ ಉರಿಯುತ್ತದೆ. ಅವನೊಡನೆ ನಿಷ್ಠುರವಾಗಿ ನುಡಿಯಬೇಕೆಂದರೆ ಅವನ ತಾಯಿ ಬಂದು, ‘ಕೃಷ್ಣ ಇನ್ನೂ ಹುಡುಗ. ಅವನನ್ನು ದಂಡಿಸಬೇಡಿ’ ಎಂದು ಹೇಳಿದಂತಾಗುತ್ತದೆ. ಇತ್ತೀಚೆಗೆ ಹಗಲೂ ರಾತ್ರಿ ನಮಗೆ ಇದೇ ಯೋಚನೆ ಆಗಿದೆ” ಎಂದ ನೃಪತುಂಗ.

“ಕುಮಾರರಿಗೆ ಯುವರಾಜ ಪದವಿ ಕೊಟ್ಟರೆ ತಮ್ಮ ಜವಾಬ್ದಾರಿ ತಿಳಿದು ತಾವೇ ಸರಿಹೋಗಬಹುದು. ಇದಕ್ಕಾಗಿ ಯೋಚನೆ ಏಕೆ ಪ್ರಭು?”

ಬಂಕರಸನ ಮಾತಿಗೆ ಸಾಮ್ರಾಟನು ತಲೆದೂಗಿದನು.

ಕೃಷ್ಣ ಶತ್ರುಗಳ ಕೈಗೊಂಬೆ

ಅದರಂತೆ ನೃಪತುಂಗನು ಒಂದು ಶುಭಮುಹೂರ್ತದಲ್ಲಿ ಮಗನಿಗೆ ಯುವರಾಜ ಅಭಿಷೇಕಮಾಡಿ ಸಾಮ್ರಾಜ್ಯದ ಹೊಣೆಗಾರಿಕೆಯನ್ನು ಒಪ್ಪಿಸಿದನು.

ಇದರಿಂದ ಅವನು ನಿರೀಕ್ಷಿಸಿದ ಫಲ ಮಾತ್ರ ದೊರೆಯಲಿಲ್ಲ. ಕುಮಾರ ಕೃಷ್ಣನ ಜೀವನ ಈಗ ಮತ್ತಷ್ಟು ವಿಷಯ ಸುಖಗಳ ಕಡೆಗೆ ಕಟ್ಟಿಲ್ಲದೆ ಹರಿಯತೊಡಗಿತು. ಅವನ ಸಖ್ಯವನ್ನು ಕೆಲವು ದುಷ್ಟರು ಬಯಸಿ ಸಾಮ್ರಾಜ್ಯಕ್ಕೆ ಕುಠಾರಪ್ರಾಯರಾಗಿದ್ದರು.

ಇಂಥವರಲ್ಲಿ ಚೇದಿಯ ಶಂಕರಗಣ, ನೊಳಂಬ ವಾಡಿಯ ವಂಗಿಯರಸರು ಮುಖ್ಯರು. ಅವರು ಕಪ್ಪಕಾಣಿಕೆಗಳನ್ನು ಒಪ್ಪಿಸುವ ಸಲುವಾಗಿಯೂ ಇತರ ರಾಜಕಾರ್ಯದ ಸಲುವಾಗಿಯೂ ರಾಜಧಾನಿ ಮಾನ್ಯಖೇಟಕ್ಕೆ ಬರುತ್ತಿದ್ದರು. ಅವರು ಕುಮಾರ ಕೃಷ್ಣನ ಸಖ್ಯ ಬೆಳೆಸಿ, ತಮ್ಮ ಬಿಡಾರಗಳಿಗೆ ಕರೆದುಕೊಂಡು ಹೋಗಿ, ನೃತ್ಯ ಪಾನಕೂಟಗಳಿಂದ ಅವನನ್ನು ಸಂತೋಷಪಡಿಸಿ ಉಪಾಯವಾಗಿ ಅವನ ಮೇಲೆ ತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಳ್ಳುತ್ತಾ ಬಂದಿದ್ದರು.

ಚೇದಿಯ ಶಂಕರಗಣನಿಗೆ ಬಂಕೇಯನ ಮಗ ಲೋಕಾದಿತ್ಯನ ಏಳಿಗೆ ಸಹಿಸದಾಗಿತ್ತು. ನೊಳಂಬರಸ ವಂಗಿಯ ಮನಸ್ಸು ರಾಷ್ಟ್ರಕೂಟರ ಬಗ್ಗೆ ಕಹಿಯಾಗಲು ಅವನದೇ ಕಾರಣವಿತ್ತು. ರಾಷ್ಟ್ರಕೂರು ಸಾಮ್ರಾಟರೆನಿಸಿಕೊಳ್ಳುವುದು ಅವನಿಗೆ ಸಂಕಟವಾಗಿತ್ತು.

ಅವರಿಬ್ಬರೂ ಸ್ವಾರ್ಥ ಸಾಧಿಸಲು ಹೆಣ್ಣು, ಮದ್ಯದ ಆಕರ್ಷಣೆ ಒಡ್ಡಿ ಕುಮಾರ ಕೃಷ್ಣನ ದುರ್ಬಲ ಮನಸ್ಸನ್ನು ತಮ್ಮ ಕಡೆ ಒಲಿಸಿಕೊಂಡಿದ್ದರು. ಇದರಲ್ಲಿ ಚೇದಿಯ ಶಂಕರಗಣನಿಗೆ ತನ್ನದೇ ಆದ ಒಂದು ಸ್ವಾರ್ಥವಿತ್ತು. ಅವನು ತನ್ನ ಸೋದರಿ ಶ್ರೀಲೇಖೆಯನ್ನು ಕೃಷ್ಣನಿಗೆ ಮದುವೆ ಮಾಡಿಕೊಟ್ಟು, ಆ ಮೂಲಕ ಕೃಷ್ಣನನ್ನು ತನ್ನ ಕೈಗೊಂಬೆಯನ್ನಾಗಿ ಮಾಡಿಕೊಳ್ಳಬೇಕೆಂದು ಯೋಚಿಸಿದ್ದನು.

ಅವರು ರಾಜಕುಮಾರ ಕೃಷ್ಣನ ತಲೆಯಲ್ಲಿ ಬಂಕೇಯ ಹಾಗೂ ಲೋಕಾದಿತ್ಯರ ವಿರುದ್ಧ ವಿಷಬಿತ್ತಿದ್ದರು: “ಬಂಕೇಯನು ಅವನ ಮಗ ಲೋಕಾದಿತ್ಯನು ನೃಪತುಂಗನಿಂದ ಅಧಿಕಾರ ಕಸಿದುಕೊಳ್ಳಬೇಕೆಂದಿದ್ದಾರೆ. ಹಾಗಾದರೆ ನೀನು ಮೂಲೆಗೆ ಸೇರಿದಂತೆಯೇ, ಈಗಲೇ ಎಚ್ಚರವಹಿಸು. ಸಿಂಹಾಸನ ನಿನ್ನದನ್ನಾಗಿಮಾಡಿಕೊ” ಎಂದು ಹೇಳುತ್ತ ಬಂದರು. ಅವನಿಗೆ ಬೇಕಾದಂತೆ ಸುಖದ ವಸ್ತುಗಳನ್ನೂ ಮದ್ಯವನ್ನೂ ಅವರು ಕೃಷ್ಣನಿಗೆ ಒದಗಿಸುತ್ತಿದ್ದರು. ಸಿಹಿಯಾಗಿ ಮಾತನಾಡುತ್ತಿದ್ದರು, ಅವನನ್ನು ಹೊಗಳುತ್ತಿದ್ದರು. ಚಿಕ್ಕ ವಯಸ್ಸಿನ ಕೃಷ್ಣ ಅವನು ತನ್ನ ಹಿತಚಿಂತಕರು ಎಂದೇ ನಂಬಿದ. ತಂದೆಗೆ ಬುದ್ಧಿ ಇಲ್ಲ, ಅವನನ್ನು ನೆಚ್ಚಿದರೆ ತನಗೆ ಏಳಿಗೆ ಇಲ್ಲ ಎಂದೇ ಭಾವಿಸಿದ. ಹೀಗೆ ಅವನನ್ನು ವಂಚಿಸಿ ತಮ್ಮ ಹಸ್ತಕನನ್ನಾಗಿ ಮಾಡಿಕೊಳ್ಳುವುದರಲ್ಲಿ ದುಷ್ಟರು ಸಫಲರಾಗಿದ್ದರು.

ಅವರು ತಮ್ಮ ವಿದ್ರೋಹವನ್ನು ಸಾಧಿಸಲು ದಕ್ಷಿಣದಲ್ಲಿದ್ದ ಗಂಗರ ನೆರವನ್ನು ಪಡೆಯಲು ರಾಜಧಾನಿಯನ್ನು ತೊರೆದು ತಲವನಪುರಕ್ಕೆ ಹೊರಟರು.

ಅವರು ಗಂಗದೊರೆಯ ನೀತಿಮಾರ್ಗವನ್ನು ಕಂಡು, ಯುವರಾಜನು ತಮ್ಮ ಪಕ್ಷದಲ್ಲಿರುವಾಗ ಯುದ್ಧ ಘೊಷಿಸಿದರೆ ತಮಗೆ ಜಯವಾಗುವ ಸಂಭವವಿದೆ ಎಂದು ಅವನ ಮನ ಒಲಿಸಿಕೊಂಡರು.

ಗಂಗದೊರೆಯು ಸುಲಭವಾಗಿ ಈ ಮಾತಿಗೆ ಬಲಿಯಾದನು. ಅವನು ತನ್ನ ಸೈನ್ಯದೊಡನೆ ಹೊರಟು ರಾಷ್ಟ್ರಕೂಟರ ಮೇಲೆ ಯುದ್ಧ ಘೋಷಿಸಿದನು.

ರಾಜರಾಮಡುವಿನಲ್ಲಿ ನೃಪತುಂಗನ ಸಾಮಂತ ದೊರೆ ಬಾಣವಿದ್ಯಾಧರನು ಗಂಗಸೈನ್ಯವನ್ನು ಎದುರಿಸಿದನು. ಅವನು ಸೋತು ಮರಣ ಹೊಂದಿದನು.

ಯುವರಾಜ ಕೃಷ್ಣನಿಗೆ ಚೇದಿಯ ಶಂಕರಗಣನ ಸೋದರಿಯಲ್ಲಿ ಪ್ರೀತಿ. ಇದರಿಂದ ಕುರುಡನಾಗಿ, ಮುಂದಾ ಲೋಚನೆ ಇಲ್ಲದೆ ಕೃಷ್ಣನು ತಾನೇ ರಾಷ್ಟ್ರಕೂಟ ಚಕ್ರವರ್ತಿ ಎಂದು ಘೋಷಿಸಿ, ತಂದೆಯ ವಿರುದ್ಧ ತಿರುಗಿಬಿದ್ದನು.

ತನ್ನ ಪ್ರೀತಿಯ ಮಗ, ತನ್ನ ಅನಂತರ ಚಕ್ರವರ್ತಿಯಾಗಲೆಂದು ತಾನೇ ಶಿಕ್ಷಣ ಕೊಟ್ಟು ಬೆಳೆಸಿದ ಮಗ ಈಗ ತಿರುಗಿಬಿದ್ದಿದ್ದಾನೆ. ತಾನೇ ಚಕ್ರವರ್ತಿ ಎಂದು ಘೋಷಿಸಿಕೊಂಡಿದ್ದಾನೆ!

ಯುವರಾಜ ಈಗ ಸೆರೆಯಾಳು

ಈ ಅನಿರೀಕ್ಷಿತ ಆಘಾತದಿಂದ ನೃಪತುಂಗನು ತತ್ತರಿಸಿಹೋದನು. ದಾರಿ ತಪ್ಪಿದ ಮಗನನ್ನು ಶಿಕ್ಷಿಸಲು ತಾನೆ ಸೈನ್ಯದೊಡನೆ ಹೊರಡಲು ನಿಶ್ಚಯಿಸಿದನು. ಆದರೆ ಬಂಕೇಯನು ರಾಜಕುಮಾರರನ್ನು ಸೆರೆಹಿಡಿದು ತರುವುದಾಗಿ ಚಕ್ರವರ್ತಿಗೆ ಆಶ್ವಾಸನೆ ನೀಡಿ ರಣವೀಳ್ಯವನ್ನು ತೆಗೆದುಕೊಂಡು ಹೊರಟನು. ಕಿರಣಪುರದ ಬಳಿ ನಡೆದ ಭೀಕರ ಹೋರಾಟದಲ್ಲಿ ವಂಗಿಯೂ ಶಂಕರಗಣನೂ ಮರಣ ಹೊಂದಿದರು.

ಹೀಗೆ ದ್ರೋಹಿಗಳಿಬ್ಬರ ಕಥೆ ಮುಗಿದಿತ್ತು. ರಾಜ ಕುಮಾರ ಕೃಷ್ಣನು ತನ್ನ ವಿದ್ರೋಹದ ಮುಖವನ್ನು ತಂದೆಗೆ ತೋರಿಸಲು ಹೇಸಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ. ಆದರೆ ಸಕಾಲದಲ್ಲಿ ಅವನ ಪತ್ನಿಯು ಬಂದು ಅವನನ್ನು ರಕ್ಷಿಸಿದಳು.

ಬಂಕೇಯನ ಪಡೆಯು ಕಿರಣಪುರವನ್ನು ಮುತ್ತಿ ಹೋರಾಟಕ್ಕೆಳೆಸಿದ ಯುವರಾಜನನ್ನು ಸೆರೆಹಿಡಿದು ಬಂಕೇಯನ ವಶಕ್ಕೆ ಒಪ್ಪಿಸಿತು. ಅವನು ರಾಜಕುಮಾರನನ್ನು ಸೆರೆಯಾಳಿನಂತೆ ಬಂಧಿಸಿ, ಸೂಕ್ತವಾದ ರಕ್ಷಣೆಯೊಡನೆ ರಾಜಧಾನಿಗೆ ಕರೆದೊಯ್ದನು. ಅಲ್ಲಿ ಪ್ರಭುಗಳ ಅಪ್ಪಣೆಯಂತೆ ಅವನನ್ನು ರಾಜಬಂದಿಯಾಗಿ ಸೆರೆಯಲ್ಲಿರಿಸಿದನು.

 

‘ರಾಜದೋಹಿಗೆ ಶಿಕ್ಷೆ – ಮರಣದಂಡನೆ.’

ಈ ಸನ್ನಿವೇಶದಲ್ಲಿಯೆ ಪುಸ್ತಕದ ಪ್ರಾರಂಭದಲ್ಲಿ ವಿವರಿಸಿದ ಸಂಗತಿಗಳು ನಡೆದದ್ದು, ನೃಪತುಂಗನು, “ರಾಜ ದ್ರೋಹಿಗೆ ಶಿಕ್ಷೆ-ಮರಣದಂಡನೆ” ಎಂದು ತೀರ್ಮಾನಿಸಿದ್ದು.

ನಾವು ಆಗಲೇ ಕಂಡಂತೆ, ಕೃಷ್ಣನ ಹೆಂಡತಿಯ ಮೊರೆ, ಪ್ರಜಾನಾಯಕರ ಪ್ರಾರ್ಥನೆ ಇವನ್ನು ಆಲಿಸಿ ನೃಪತುಂಗ ಮಗನನ್ನು ಕ್ಷಮಿಸಿದ.

ಶಾಂತಿಪ್ರಿಯಪ್ರಜಾವತ್ಸಲ

ನೃಪತುಂಗನು ಈ ಘಟನೆಯಾದ ಮೇಲೆ ಎಷ್ಟೋ ವರ್ಷಗಳು ಬದುಕಿದ್ದನು. ಕೃಷ್ಣನು ಪ್ರಾಪ್ತವಯಸ್ಸಿಗೆ ಬಂದ ಕೂಡಲೇ ಅವನಿಗೆ ರಾಜ್ಯದ ಹೊಣೆಗಾರಿಕೆಯನ್ನು ಒಪ್ಪಿಸಿದನು. ಯುದ್ಧ, ದ್ವೇಷಾಸೂಯೆಗಳಿಂದ ನೆಮ್ಮದಿ ದೊರಕುವುದಿಲ್ಲವೆಂದು ಮನಗಂಡ. ಯುದ್ಧಗಳನ್ನು ಕೊನೆಗಾಣಿಸುವ ಮಾರ್ಗವನ್ನು ಯೋಚಿಸಿದ, ವಿರೋಧಿಗಳಾಗಿದ್ದವರನ್ನು ಬಂಧುಗಳನ್ನಾಗಿ ಮಾಡಿಕೊಳ್ಳಲು ನಿಶ್ಚಯಿಸಿದ. ಗಂಗರಾಜನ ಮಗನಾದ ಬೂತುಗನಿಗೆ ತನ್ನ ಹಿರಿಯ ಮಗಳಾದ ಚಂದ್ರಲಬ್ಬೆಯನ್ನೂ ಪಲ್ಲವ ರಾಜಕುಮಾರ ನಂದಿವರ್ಮನಿಗೆ ತನ್ನ ಇನ್ನೊಬ್ಬ ಮಗಳು ಶಂಖಾದೇವಿಯನ್ನೂ ವಿವಾಹಮಾಡಿಕೊಟ್ಟು ಶಾಶ್ವತವಾದ ಶಾಂತಿ, ಸೌಹಾರ್ದಗಳನ್ನು ಸಾಮ್ರಾಜ್ಯದಲ್ಲಿ ನೆಲೆಸುವಂತೆ ಮಾಡಿದನು.

ನೃಪತುಂಗನಿಗೆ ಪ್ರಜೆಗಳ ಯೋಗಕ್ಷೇಮದಲ್ಲಿ ಎಷ್ಟು ಶ್ರದ್ಧೆ ಎಂಬುದನ್ನು ತೋರಿಸುವ ಒಂದು ಕಥೆಯನ್ನು ಹೇಳುತ್ತಾರೆ.

ಒಮ್ಮೆ ಭೀಕರ ಕ್ಷಾಮ ರಾಜ್ಯವನ್ನು ಆವರಿಸಿತು. ಜನ ತತ್ತರಿಸಿಹೋದರು. ರಾಜನಿಗೆ ಇದೇ ಹಗಲು ರಾತ್ರಿ ಯಾತನೆಯಾಯಿತು. ಒಂದು ರಾತ್ರಿ ಕೊಲ್ಲಾಪುರದ ಲಕ್ಷ್ಮಿ ಅವನ ಕನಸಿನಲ್ಲಿ ಕಂಡಳಂತೆ. ತನ್ನ ಎಡಗೈ ಬೆರಳೊಂದನ್ನು ತೋರಿಸಿದಳಂತೆ. ತನ್ನ ಬೆರಳನ್ನು ಅರ್ಪಿಸಬೇಕೆಂದು ಇದು ಸೂಚನೆ ಎಂದು ತಿಳಿದು ನೃಪತುಂಗ ತನ್ನ ಎಡಗೈ ಬೆರಳನ್ನೆ ಕತ್ತಿಯಿಂದ ಕತ್ತರಿಸಿ ಮಹಾಲಕ್ಷ್ಮಿಯ ಪಾದದಲ್ಲಿ ಇಟ್ಟನಂತೆ.

ಕ್ಷಾಮ ಹಿಂದಕ್ಕೆ ಸರಿಯಿತಂತೆ.

ನೃಪತುಂಗ ರಾಜ್ಯವನ್ನು ಬಹು ದಕ್ಷತೆಯಿಂದ ಆಳಿದ. ರಾಷ್ಟ್ರಪತಿ, ವಿಷಯಪತಿ, ಗ್ರಾಮಕೂಟ, ಆಯುಕ್ತಕ ಮತ್ತು ನಿಯುಕ್ತಕ ಎಂಬ ಬೇರೆ ಬೇರೆ ಅಂತಸ್ತಿನ ಅಧಿಕಾರಿಗಳ ಮೂಲಕ ಆಡಳಿತ ನಡೆಸುತ್ತಿದ್ದ. ಒಂದೊಂದು ಹಳ್ಳಿಯ ಊರಿನ ಜನರಿಗೆ ತಮ್ಮ ಸ್ಥಳದ ಆಡಳಿತದಲ್ಲಿ ಪಾಲಿತ್ತು. ಅವರದೇ ಒಂದು ಕೂಟ. ಅದಕ್ಕೆ ‘ಮಹಾಜನ’ ಎಂದು ಹೆಸರು.

ಇದರಲ್ಲಿ ಕೆಲವರು ಸದಸ್ಯರು. ಹಳ್ಳಿಯ ಅಥವಾ ಊರಿನ ಕೆಲಸ ಅವರು ಹೇಳಿದಂತೆ ನಡೆಯುತ್ತಿತ್ತು.

ಕವಿರಾಜ ಮಾರ್ಗ

ನೃಪತುಂಗನು ತನ್ನ ಆಸ್ಥಾನದಲ್ಲಿದ್ದ ಕವಿ ಶ್ರೀವಿಜಯನಿಂದ  ‘ಕವಿರಾಜ ಮಾರ್ಗ’ ಎಂಬ ಗ್ರಂಥವನ್ನು ಬರೆಸಿದನು ಎಂದು ಕಾಣುತ್ತದೆ. ಈ ಗ್ರಂಥದಲ್ಲಿ ಅವನು ಕನ್ನಡನಾಡಿನ ವ್ಯಾಪ್ತಿ, ಕನ್ನಡಿಗರ ಶೌರ್ಯಪ್ರತಾಪ, ಬುದ್ಧಿಶಕ್ತಿಗಳನ್ನು ಮುಕ್ತ ಕಂಠದಿಂದ ಹೊಗಳಿದ್ದಾನೆ.

ಕಾವೇರಿಯಿಂದಮಾಗೋ
ದಾವರಿವರಮಿರ್ಪ ನಾಡದಾ ಕನ್ನಡದೊಳ್ |
ಭಾವಿಸಿದ ಜನಪದಂ ವಸು
ಧಾವಳಯ ವಿಲೀನ ವಿಶದ ವಿಷಯ ವಿಶೇಷಂ ||

(ಕಾವೇರಿಯಿಂದ ಗೋದಾವರಿ ನದಿವರೆಗೆ ಇರುವ ನಾಡೇ ಕನ್ನಡನಾಡು. ಇಲ್ಲಿ ವಾಸಿಸುವ ಜನ ಜಗತ್ತಿನಲ್ಲೇ ವಿಶಿಷ್ಟ ಜನ).

ಈ ಜನರು ಎಂಥವರು?
ಪದನರಿದು ನುಡಿಯಲುಂ ನುಡಿ
ದುದನರಿದಾರಯಲುಮಾರ್ಪರಾ ನಾಡವರ್ಗಳ್‌ |
ಚದುರರ್ ನಿಜದಿಂ ಕುರಿತೋ
ದದೆಯುಂ ಕಾವ್ಯಪ್ರಯೋಗ ಪರಿಣಿತ ಮತಿಗಳ್ ||

(ಇವರು ಮಾತಿನ ಅರ್ಥವನ್ನು ಗ್ರಹಿಸಿ ಆಡುತ್ತಾರೆ. ಇನ್ನೊಬ್ಬರು ಹೇಳಿದುದನ್ನು ಅರ್ಥಮಾಡಿಕೊಳ್ಳಬಲ್ಲರು. ಚತುರರು ಕಾವ್ಯವನ್ನು ಅಭ್ಯಾಸ ಮಾಡದಿದ್ದರೂ ಕಾವ್ಯ ಪ್ರಯೋಗದಲ್ಲಿ ಅಂದರೆ ವಿಮರ್ಶೆಯಲ್ಲಿ ಪರಿಣತಿಯನ್ನು ಹೊಂದಿದವರು.)

ಈ ಜನ ತಮ್ಮ ನುಡಿಯಲ್ಲಿ ಜಾಣರು. ಚಿಕ್ಕ ಮಕ್ಕಳೂ ವಿವೇಕದ ಮಾತನ್ನು ಬಲ್ಲರು, ಅಷ್ಟೆ ಅಲ.

ಸುಭಟರ್ಕಳ್ ಕವಿಗಳ್ ಸು
ಪ್ರಭುಗಳ್ ಚಲ್ವರ್ಕಳೆ ಭಾಜನರ್ಕಳ್ ಗುಣಿಗಳ್‌ |
ಅಭಿಮಾನಿಗಳತ್ಯುಗ್ರರ್
ಗಂಭೀರಚಿತ್ತರ್ ವಿವೇಕಿಗಳ್ ನಾಡವರ್ಗಳ್ ||

(ಈ ಜನರು ಸುಭಟರು, ಕವಿಗಳು, ಸುಪ್ರಭುಗಳು, ಚೆಲುವರು, ಅಭಿಮಾನಿಗಳು, ಗುಣಿಗಳು, ಶತ್ರುಗಳಿಗೆ ಅತ್ಯುಗ್ರರಾದವರು, ಗಂಭೀರ ಚಿತ್ತವುಳ್ಳ ವಿವೇಕಿಗಳು.)

ಸ್ವಯಂ ಕವಿಯೂ ಕವಿಜನಾರ್ಶರಯನೂ ಉದಾರ ಪ್ರಭುವೂ ಆಗಿದ್ದ ನೃಪತುಂಗನ ಕಾಲದಲ್ಲಿ ಕನ್ನಡ, ಸಂಸ್ಕೃತ ಮತ್ತು ಪ್ರಾಕೃತ ಭಾಷೆಗಳು ಹಾಗೂ ಸಾಹಿತ್ಯಗಳು ಬೆಳೆದವು. ಜಿನಸೇನಾಚಾರ್ಯರು ಆದಿ ಪುರಾಣವನ್ನು ಆರಂಭಿಸಿದರು. ಅದನ್ನು ಗುಣಭದ್ರಾಚರ್ಯರು ಮುಗಿಸಿದರು. ಇದಲ್ಲದೆ ಹರಿವಂಶ, ಪಾರ್ಶ್ವಾಭ್ಯುದಯ (ಜೈನ ತೀರ್ಥಂಕರ ಪಾರ್ಶ್ವನಾಥನ ಕುರಿತ ಕಾವ್ಯ) ಗ್ರಂಥಗಳು ಈ ಕಾಲದಲ್ಲಿ ರಚಿತವಾದವು.

ಅವನು ವೈದಿಕ ಧರ್ಮವನ್ನು ಅನುಸರಿಸಿದ್ದರೂ ಶಿವ ವಿಷ್ಣುಗಳ ನಡುವೆ ಭೇದವೆಣಿಸುತ್ತಿರಲಿಲ್ಲ. ಅವನ ಕಾಲದಲ್ಲಿ ಜೈನಧರ್ಮಕ್ಕೆ ಹೆಚ್ಚಿನ ಪ್ರೋತ್ಸಾಹವಿತ್ತು. ಕೊಲುನೂರಿನ ಜಿನಾಲಯಕ್ಕೆ ನೃಪತುಂಗ ಸಹಾಯ ಮಾಡಿದ.

ಆರ್ ಎರಗರ್ ನೃಪತುಂಗಂಗೆ?

ನೃಪತುಂಗನು ಚಿಕ್ಕವಯಸ್ಸಿನಲ್ಲಿ ದೊರೆಯಾದನು. ದೀರ್ಘಕಾಲ ಜೀವಿಸಿದ್ದನು. ಅರವತ್ತಮೂರು ವರ್ಷ ರಾಜ್ಯವಾಳಿದನು. ಇವನ ಕೀರ್ತಿ ದೇಶವಿದೇಶಗಳಿಗೆ ಹಬ್ಬಿತ್ತು. ಚೀನ, ಅರೇಬಿಯಾ ದೇಶಗಳಿಂದ ಇವನ ಆಸ್ಥಾನಕ್ಕೆ ರಾಯಭಾರಿಗಳು ಬರುತ್ತಿದ್ದರು. ಇವನ ಕಾಲದಲ್ಲಿ ಸುಲೇಮಾನನೆಂಬ ಅರಬ್ಬಿ ವರ್ತಕನು ಮಾನ್ಯಖೇಟಕ್ಕೆ ಭೇಟಿ ನೀಡಿದ್ದನು. ಅವನು ರಾಷ್ಟ್ರಕೂಟರ ವೈಭವವನ್ನು ಮುಕ್ತಕಂಠದಿಂದ ಹೊಗಳಿದ್ದಾನೆ. ಆಗಿನ ಕಾಲದಲ್ಲಿ ಬಹು ದೊಡ್ಡವು ಎನಿಸಿಕೊಂಡಿದ್ದ ಚೀನ, ತುರ್ಕಿ ಮೊದಲಾದ ದೇಶಗಳ ಚಕ್ರವರ್ತಿಗಳಿಗೆ ನೃಪತುಂಗ ಸರಿಸಮಾನ ಎಂದಿದ್ದಾನೆ.

ನೃಪತುಂಗನು ತನ್ನ ಎಂಬತ್ತನೆಯ ವಯಸ್ಸಿನಲ್ಲಿ ಅಂದರೆ ಕ್ರಿ.ಶ. ೮೭೮ ರಲ್ಲಿ ಮರಣ ಹೊಂದಿದನು. ಅವನ ಅನಂತರ ಅವನ ಮಗ ಕೃಷ್ಣನು ಅಕಾಲವರ್ಷ ಶುಭತುಂಗನೆಂಬ ಹೆಸರಿನಲ್ಲಿ ರಾಷ್ಟ್ರಕೂಟ ಸಿಂಹಾಸನವನ್ನೇರಿದನು.

ನೃಪತುಂಗನು ರಾಷ್ಟ್ರಕೂಟ ದೊರೆಗಳಲ್ಲೆಲ್ಲಾ ಪ್ರಸಿದ್ಧಿ ಪಡೆದ ದೊರೆ ಮಾತ್ರವಲ್ಲ; ಕನ್ನಡ ಸಾಹಿಯದಲ್ಲೂ ಕೀರ್ತಿ ಪಡೆದ ರಾಜಕವಿಯಾಗಿದ್ದನು. ಶಬ್ದ ಮಣಿದರ್ಪಣವನ್ನು ಬರೆದ ಕೇಶಿರಾಜನು ಅವನನ್ನು ಹೊಗಳಿದ್ದಾನೆ.

ವೀರನುದಾರಂ ಶುಚಿಗಂ
ಭೀರಂ ನಯಶಾಲಿ ಕೈದುವೊತ್ತರ ದೇವಂ |
ಗಾರೆರಗರ್ ನೃಪತುಂಗಂಗೆ

(ವೀರನು ಉದಾರನೂ ನಿರ್ಮಲನೂ ಗಂಭೀರನೂ ನಯಶಾಲಿಯೂ ಸೈನಿಕರ ನಾಯಕನೂ ಆದ ನೃಪತುಂಗನಿಗೆ ಯಾರು ತಾನೆ ನಮಸ್ಕಾರ ಮಾಡುವುದಿಲ್ಲ?) ಎಂದು ಉದ್ಗಾರ ತೆಗಿದಿದ್ದಾನೆ. ಅಂತೆಯೇ ‘ಕಾವ್ಯಾವಲೋಕನ’ ಗ್ರಂಥ ಬರೆದಿರುವ ಕವಿ ನಾಗವರ್ಮನ ಸಹ

ಕರಿವೋಲ್ ಭದ್ರಗುಣಂಕೇ
ಸರಿವೋಲ್ ನಿರ್ವ್ಯಾಜ ಶೌರ್ಯನಂಭೋನಿ ಧಿವೋಲ್ |
ಶರಣಾಗತ ರಕ್ಷಣ ಪಟು
ಗಿರಿವೋಳ್ ನಿಷ್ಕಂಪ ಚಿತ್ತನಾ ನೃಪತುಂಗಂ ||

(ನೃಪತುಂಗನು ಗಾಂಭೀರ್ಯದಲ್ಲಿ ಆನೆಗೆ ಸಮ, ಸಿಂಹದಂತೆ ಸಹಜ ವೀರ. ಆಶ್ರಿತರಾದವರ ಪಾಲಿಗೆ ಸಮುದ್ರದಂತೆ ವಿಶಾಲವಾದ ಮನಸ್ಸುಳ್ಳವನು. ಸ್ಥೈರ್ಯದಲ್ಲಿ ಬೆಟ್ಟದಂತೆ ನಿಶ್ಚಲ) ಎಂದು ಹೊಗಳಿದ್ದಾನೆ.