ಒಮ್ಮೆ ಹತ್ತು ತಲೆಯ ರಾವಣನಿಗೆ ನೆಗಡಿಯಾಯಿತಂತೆ. ಆತ ಅಂತಃಪುರಕ್ಕೆ ತೆರಳಿ ಮಂಡೋದರಿಯನ್ನು ಕರೆದು ವೈದ್ಯರನ್ನು ಕರೆಸಲು ಹೇಳಿದ. ನೆಗಡಿ ತಾನೇ, ತಾನಾಗೇ ಕಡಿಮೆಯಾಗುತ್ತದೆ ಎಂದುಕೊಂಡು ಮಂಡೋದರಿ ಸುಮ್ಮನಾದಳು. ಎರಡು ಘಳಿಗೆ ಕಳೆಯುತ್ತಿದ್ದಂತೆ ನೆಗಡಿ ರಾವಣನ ಹತ್ತು ತಲೆಗಳಿಗೂ ಆವರಿಸಿತು. ನೆಗಡಿ ಎಂದರೆ ಕೇಳಬೇಕೆ? ಆತ ಇಡೀ ಅಂತಃಪುರ ಹಾರಿಹೋಗುವಂತೆ ಸೀನತೊಡಗಿದ. ಮಂಡೋದರಿಗೆ ಭಯವಾಯಿತು. ವೈದ್ಯರು ಈಗೆಲ್ಲಾದರೂ ಬಂದರೆ ಅವರಿಗೆ ಮರಣದಂಡನೆ ಖಚಿತ. ಜೊತೆಗೆ ಇನ್ನೂ ಏನೇನು ಅನಾಹುತಗಳಾಗುವುದೋ ಎನ್ನುವ ಯೋಚನೆಯಿಂದ ತತ್ತರಿಸಿದ ಅವಳಿಗೆ ಒಂದು ಉಪಾಯ ಹೊಳೆಯಿತು. ಅಡುಗೆಮನೆಯತ್ತ ಧಾವಿಸಿದಳು.

ಒಂದಿಷ್ಟು ದಾಲ್ಚಿನ್ನಿ ಚಕ್ಕೆ ಪುಡಿ ಮಾಡಿ, ಅದನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ, ಕಾಳುಮೆಣಸಿನ ಪುಡಿ ಬೆರೆಸಿದಳು. ಅದಕ್ಕೊಂದಿಷ್ಟು ಜೇನುತುಪ್ಪ ಬೆರೆಸಿ ಚೆನ್ನಾಗಿ ಗೊಟಾಯಿಸಿ ಬಿಸಿ ಬಿಸಿ ಮಿಶ್ರಣವನ್ನು ರಾವಣನ ಒಂದೊಂದೇ ಬಾಯಿಗೆ ಕುಡಿಸಿದಳು. ಸ್ವಲ್ಪ ಸಮಯದಲ್ಲೇ ನೆಗಡಿ ಹೇಳಹೆಸರಿಲ್ಲದಂತೆ ಮಾಯ. ಇದು ಅಂದು-ಇಂದು-ಮುಂದೂ ನೆಗಡಿ ತಡೆಯುವ ಸರಳ ಔಷಧಿ. ಆದರೆ ಶೇ.೮೦ರಷ್ಟು ಜನ ನೆಗಡಿಯಾದರೆ ಮಾತ್ರೆ, ಸಿರಪ್‌ಗಳ ಮೊರೆ ಹೋಗುತ್ತಾರೆ. ನೆಗಡಿ ಕಡಿಮೆ ಆಗುತ್ತಿದ್ದಂತೆ ಅದರ ಹಿಂದೆ ಕೆಮ್ಮು ಧಾವಿಸುತ್ತದೆ. ಮತ್ತೆ ಮಾತ್ರೆ, ಸಿರಪ್. ಈ ಮಾತ್ರೆ-ಸಿರಪ್ ನೆಗಡಿ/ಕೆಮ್ಮು ವಾಸಿ ಮಾಡುತ್ತಲೇ ತನ್ನ ಕರಾಳಹಸ್ತವನ್ನು ದೇಹದ ಇತರ ಅಂಗಗಳಿಗೂ ಚಾಚುತ್ತದೆ.

ಅಪಸ್ಮಾರ, ಮೂತ್ರಜನಕಾಂಗಗಳ ವಿಫಲತೆ, ಹೃದಯದ ತೊಂದರೆಗಳು, ಹೈಪರ್ ಟೆನ್‌ಶನ್ ಕಾಯಿಲೆಗಳು ಈ ಔಷಧಿಗಳಿಂದ ಬರುತ್ತವೆ. ಮಧುಮೇಹಿಗಳಿಗೆ, ಅಧಿಕ ರಕ್ತದೊತ್ತಡ ಇದ್ದವರಿಗೆ, ಪ್ರಾಸ್ಫೇಟ್ ಗ್ರಂಥಿಯ ತೊಂದರೆ ಇದ್ದವರಿಗೆ ಈ ಔಷಧಿಗಳ ಸೇವನೆ ಕುರಿತು ವೈದ್ಯರು ಎಚ್ಚರಿಕೆ ನೀಡುತ್ತಾರೆ. ಈ ಔಷಧಿಗಳಲ್ಲಿರುವ ಪಿಪಿಎ-ಫೀನೈಲ್ ಪ್ರೊಪೆನಾಲ್ ಅಮೈನ್ ಎನ್ನುವ ಸಿಹಿ ರಾಸಾಯನಿಕ ಈ ಎಲ್ಲ ಕುಕೃತ್ಯಗಳಿಗೆ ಕಾರಣವೆಂದು ಅಮೆರಿಕ ಇಸವಿ ೨೦೦೦ದ ಮೇನಲ್ಲಿ ನಿರ್ಧರಿಸಿ ಪಿಪಿಎ ಇರುವ ಎಲ್ಲಾ ಔಷಧಗಳ ವ್ಯಾಪಾರ ನಿಲ್ಲಿಸುವ ನಿರ್ಧಾರ ಮಾಡಿದೆ.

ಅಮೆರಿಕಾದ ಯೂಲ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ೧೮ರಿಂದ ೪೯ ವರ್ಷ ವಯಸ್ಸಿನವರ ಮೇಲೆ ಇದನ್ನು ಪ್ರಯೋಗಿಸಿ, ಪಿಪಿಎಯಿಂದ ಆಂತರಿಕ ರಕ್ತಸ್ರಾವ ಆಗುವ ಸಾಧ್ಯತೆಯನ್ನು ದಾಖಲಿಸಿದರು. ಇಂದು ಅಮೆರಿಕ ಪಿಪಿಎ ಬಳಸುವುದನ್ನು ನಿಷೇಧಿಸಿದೆ. ಭಾರತದಲ್ಲಿ ಗ್ರಾಹಕ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ (ಸಿಇಆರ್‌ಸಿ) ವೈದ್ಯರ ಶಿಫಾರಸಿಲ್ಲದೆ ನೆಗಡಿ/ಕೆಮ್ಮು ನಿವಾರಣಾ ಔಷಧಿಗಳನ್ನು ತೆಗೆದುಕೊಳ್ಳಬಾರದೆಂದು ಎಚ್ಚರಿಕೆ ನೀಡಿದೆ. ಜೊತೆಗೆ ಭಾರತದ ಡ್ರಗ್ ಕಂಟ್ರೋಲ್ ಜನರಲ್‌ರನ್ನು ಸಂಪರ್ಕಿಸಿ, ವೈದ್ಯರು ಪಿಪಿಎ ಹೊಂದಿದ ಔಷಧಿ ಬರೆಯುವುದನ್ನು ಹಾಗೂ ಮೆಡಿಕಲ್ ಸ್ಟೋರ್‌ಗಳಲ್ಲಿ ಬಿಡಿಯಾಗಿ ಮಾರಾಟ ಮಾಡುವುದನ್ನು ನಿಷೇಧಿಸಲು ಒತ್ತಾಯಿಸಿದೆ.

ಭಾರತದಲ್ಲಿ ೫೦ಕ್ಕೂ ಹೆಚ್ಚು ಕೆಮ್ಮು ನೆಗಡಿ ನಿವಾರಣಾ ಔಷಧಿಗಳ ತಯಾರಿಕರಿದ್ದಾರೆ. ೪೦ಕ್ಕೂ ಹೆಚ್ಚು ಮಾತ್ರೆಗಳು, ೨೯ಕ್ಕೂ ಹೆಚ್ಚು ಸಿರಪ್‌ಗಳು ಪಿಪಿಎ ಆಧರಿಸಿವೆ. ಅದರಲ್ಲೂ ೩ ಔಷಧಗಳಲ್ಲಿ ೧೦ ಮಿಲಿಲೀಟರ್‌ನಲ್ಲಿ ೨೫ ಮಿಲಿಗ್ರಾಮ್ ಪಿಪಿಎ ಇದೆ ! ಸಿಇಆರ್‌ಸಿ ಆಹಾರ ಮತ್ತು ಔಷಧಿ ವಿಭಾಗದ (ಗುಜರಾತ್) ಮುಖ್ಯಸ್ಥರಿಗೆ ಬರೆದ ಪತ್ರದಂತೆ ಪಿಪಿಎ ಹೊಂದಿದ ಔಷಧಿ ಕುರಿತು ಎಚ್ಚರಿಕೆ ವಾಕ್ಯಗಳನ್ನು ಔಷಧಿಯ ಮೇಲ್ಭಾಗದಲ್ಲೇ ಬರೆದಿರಬೇಕು. ಏಕೆಂದರೆ ಜನರು ಔಷಧಿಗಳನ್ನು ವೈದ್ಯರ ಸಲಹೆ ಇಲ್ಲದೆ ತೆಗೆದುಕೊಳ್ಳುತ್ತಾರೆ ಮತ್ತು ಅದಕ್ಕೆ ಯಾವುದೇ ಇತಿಮಿತಿಗಳಿಲ್ಲ.

ಭಾರತದಲ್ಲಿ ಪ್ರತಿದಿನ ಬಿಕರಿಯಾಗುವ ಪಿಪಿಎ ಪ್ರಮಾಣ ೧೦೦ ಮಿಲಿಗ್ರಾಮ್‌ನಿಂದ ೧೫೦ ಮಿಲಿಗ್ರಾಮ್ ಹೊಂದಿದ ಔಷಧಿಗಳು ಎಂದು ಪ್ರಾಕ್ಟರ್ ಮತ್ತು ಗ್ಯಾಂಬಲ್ ತಂತ್ರಜ್ಞಾನ ಮುಖ್ಯಸ್ಥ ಡಾ| ಸುಮನ್ ಮುಜುಂದಾರ್ ಹೇಳುತ್ತಾರೆ. ಇಲ್ಲಿ ಪಿಪಿಎ ಆಧಾರಿತ ಔಷಧಿಗಳಿಗೆ ಯಾವ ಧನಸಹಾಯವೂ ಇಲ್ಲವಂತೆ. ಅಮೆರಿಕದಲ್ಲಿ ಪಿಪಿಎ ಇಲ್ಲದ ಔಷಧಿಗಳ ಬೆಲೆ ಶ್ರೀಸಾಮಾನ್ಯನಿಗೆ ಗಗನಕುಸುಮವಾಗಿದೆ. ಹಾಗಿದ್ದಾಗ ಭಾರತದ ಬಡ ಬೋರೇಗೌಡನ ಪಾಡು ಯಾರು ಕೇಳುತ್ತಾರೆ.

ಸಿಇಆರ್ಸಿ ಸಲಹೆಗಳು

  • ಕೆಮ್ಮು ನಿವಾರಣೆಗೆ ಪಿಪಿಎ ಇರುವ ಔಷಧಿಗಳನ್ನು ಬಳಸಬೇಡಿ.
  • ಔಷಧಿ ಮೇಲಿನ ಚೀಟಿಗಳನ್ನು ಓದಿ, ಅನುಮಾನ ಬಂದರೆ ವೈದ್ಯರನ್ನು ವಿಚಾರಿಸಿ ಬದಲೀ ಔಷಧಿ ಬರೆದುಕೊಡಲು ಕೇಳಿಕೊಳ್ಳಿ.
  • ನೆಗಡಿ/ಕೆಮ್ಮು ನಿವಾರಣಾ ಔಷಧಿ ಸೇರಿಸುತ್ತಿರುವಾಗ ಕಾಫಿ-ಚಹಾ ಸೇವನೆ ನಿಲ್ಲಿಸಿ.
  • ಹೈ ಡೋಸ್, ಡಬಲ್‌ಡೋಸ್ ಸೇವಿಸಬೇಡಿ. ಅರ್ಧ ಮಾತ್ರೆಗಳನ್ನು ಸೇವಿಸಿ.
  • ಪಿಪಿಎ ಸೇವನೆಯಿಂದ ತಾತ್ಕಾಲಿಕ ನಪುಂಸಕತೆ ಬರುವ ಸಾಧ್ಯತೆ ಬಗ್ಗೆ ಸಂಶೋಧನೆ ನಡೆಯುತ್ತಿದೆ. ಹಾಗಾಗಿ ಪಿಪಿಎ ಸೇವಿಸುವಾಗ ಇದನ್ನು ನೆನಪಿಡಿ.
  • ಔಷಧಿ ತೆಗೆದುಕೊಳ್ಳುವ ಮೊದಲು ಹಾಗೂ ನಂತರ ಏನೇ ಅನುಮಾನ ಬಂದರೂ ನಿಮ್ಮ ಮನೆವೈದ್ಯರನ್ನು ಸಂಪರ್ಕಿಸಿ.
  • ಪಿಪಿಎ ನಿಷೇಧಿಸುವಂತೆ ಡ್ರಗ್ಸ್ ಕಂಟ್ರೋಲರ್‌ಗೆ ಪತ್ರ ಬರೆಯಿರಿ.

– ಈ ಲೇಖನ ವಿವಿಧ ಪತ್ರಿಕೆಗಳ ವರದಿಯನ್ನು ಆಧರಿಸಿದೆ. ಹೆಚ್ಚುವರಿ ಮಾಹಿತಿಗಾಗಿ ತಜ್ಞ ವೈದ್ಯರನ್ನು ಸಹ ಸಂಪರ್ಕಿಸಲಾಗಿದೆ.