ರಾಗಿ ಬೆಳೆಯೋದ್ರಿಂದ ಆದಾಯಕ್ಕಿಂತ ಕಚೆð ಹೆಚ್ಚು. ಹಾಗಾಗಿ ಬೆಳೆಯೋದಕ್ಕಿಂತ ಕೊಂಡು ತಿನ್ನೋದೆ ಲೇಸು ಎನ್ನುವ ಈ ಕಾಲದಲ್ಲಿ ಕಡಿಮೆ ಕಚಿðನಲ್ಲಿ ಉತ್ತಮ ಇಳುವರಿ ನೀಡಬಲ್ಲ ವಿಧಾನವೊಂದು ರೈತರಿಗೆ ತಿಳಿದರೆ ಬಹುಷಃ ಸಂತೋಷವಾಗಬಹುದು. ಇಂತಹ ಪದ್ಧತಿಯೊಂದು ಚಿಕ್ಕಮಗಳೂರು ತಾಲ್ಲೂಕಿನ ನರಸೀಪುರ ಗ್ರಾಮದಲ್ಲಿ ಹೆಚ್ಚು ಪ್ರಚಲಿತದಲ್ಲಿದೆ. ಬಿತ್ತನೆ ಪ್ರಮಾಣ, ಶ್ರಮ, ಕರ್ಚು ಎಲ್ಲವೂ ಕಡಿಮೆಯಿರುವ ಈ ಪದ್ಧತಿಯಲ್ಲಿ ಇಳುವರಿ ಹೆಚ್ಚಿದೆ ಎನ್ನುತ್ತಾರೆ ನರಸೀಪುರದ ರೈತರು.

ಗುಳಿ ಮಾಡಲು ಸಾಲು ಹೊಡೆಯುತ್ತಿರುವುದು

ನಿಮಗೆ ಆಶ್ಚರ್ಯವಾಗಬಹುದು, ಚಿಕ್ಕಮಗಳೂರು ತಾಲ್ಲೂಕಿನ ನರಸೀಪುರ ಗ್ರಾಮದಿಂದ ಪ್ರತೀ ವರ್ಷ ಐದಾರು ಕ್ವಿಂಟಾಲ್ ರಾಗಿಯನ್ನು ಬಿತ್ತನೆ ಬೀಜಕ್ಕಾಗಿ ಹೊರಗಿನ ರೈತರು ಕೊಂಡೊಯ್ಯುತ್ತಾರೆ. ಇಲ್ಲಿನ ರೈತರು ರಾಗಿ ಬೆಳೆಯುವಲ್ಲಿ ನಿಪುಣರು, ಉತ್ತಮ ರಾಗಿ ಬೀಜ ಆಯ್ಕೆ ಮಾಡುವಲ್ಲಿ ಹೆಸರುವಾಸಿಯಾಗಿದ್ದಾರೆ.

ನರಸೀಪುರದಲ್ಲಿ ಮೂರ್ನಾಲ್ಕು ಬಗೆಯ ರಾಗಿ ಬಿತ್ತನೆ ಪದ್ಧತಿಗಳು ಬಳಕೆಯಲ್ಲಿವೆ. ಕೂರಿಗೆ ಬಿತ್ತನೆ, ರಾಗಿ ಚೆಲ್ಲುವುದು, ನೆಟ್ಟಿ ರಾಗಿ, ಗುಳಿ ರಾಗಿ ಹೀಗೆ ರೈತರ ಅನುಭವದ ಮೂಸೆಯಲ್ಲಿರುವ ಈ ಪದ್ಧತಿಗಳು ಇಂದಿಗೂ ಚಾಲ್ತಿಯಲ್ಲಿವೆ. ಕಳೆದ ಎರಡು ದಶಕಗಳ ಹಿಂದೆ ಆರಂಭವಾದ ಗುಳಿ ರಾಗಿ ಪದ್ಧತಿ, ಈ ಪ್ರದೇಶದ ರಾಗಿ ಬೆಳೆಯ ಶೇ.30ರಷ್ಟು ವಿಸ್ತೀರ್ಣದಲ್ಲಿ ತನ್ನ ಛಾಪು ಮೂಡಿಸಿದೆ.

ಏನಿದು ಗುಳಿ ರಾಗಿ ಪದ್ಧತಿ?
ರಾಗಿಯನ್ನು ಗುಣಿಗೆ ನೇರವಾಗಿ ಬಿತ್ತುವುದು. ಇದರಿಂದ ಹೆಚ್ಚು ಶ್ರಮ, ಕೂಲಿಗಳು ಬೇಕಾಗುವುದಿಲ್ಲ. ಬಿತ್ತನೆ ಬೀಜದ ಪ್ರಮಾಣವೂ ಇತರೆ ಪದ್ಧತಿಗಿಂತ ಅರ್ಧದಷ್ಟು ಕಡಿಮೆಯಾಗುತ್ತದೆ. ಜೊತೆಗೆ ಉತ್ತಮ ಇಳುವರಿಯೂ ಬರುತ್ತದೆ. ಸ್ವಲ್ಪ ಹೆಚ್ಚು ನಿಗಾವಹಿಸಿ ಬೆಳೆದರೆ ಅತ್ಯುತ್ತಮ ಇಳುವರಿ ಪಡೆಯಬಹುದು.

ರಾಗಿಯನ್ನು ಸಸಿ ಮಡಿಯಲ್ಲಿ ಬೆಳೆದು ನಾಟಿ ಮಾಡುವುದರಿಂದ ಇದಕ್ಕಿಂತ ತುಸು ಹೆಚ್ಚು ಇಳುವರಿ ಪಡೆಯಬಹುದು. ಆದರೆ, ಇಲ್ಲಿ ವಿಪರೀತ ಶ್ರಮ ಹಾಗೂ ಹೆಚ್ಚು ಜನ ಬೇಕಾಗುವುದು. ಅದೇ ಕೂರಿಗೆಯಿಂದ ಬಿತ್ತುವುದಾದರೆ ಹೆಚ್ಚು ಕೂಲಿಯಾಳು, ಶ್ರಮ ಬೇಕಾಗುವುದಿಲ್ಲ. ಆದರೆ, ಇಳುವರಿ ಕಡಿಮೆಯಾಗುತ್ತದೆ. ಗುಳಿ ಪದ್ಧತಿಗೆ ನೆಲ ಹಸನು ಮಾಡಿಕೊಳ್ಳಲು ತುಸು ಹೆಚ್ಚು ಶ್ರಮವಹಿಸಬೇಕಾಗುತ್ತದೆ ಅಷ್ಟೆ.

ನರಸೀಪುರದ ರೈತ ಸಣ್ಣೇಗೌಡರ ಹೊಲದಲ್ಲಿ ಬೆಳೆದು ನಿಂತಿದ್ದ ರಾಗಿಯನ್ನು ನೋಡಿ ಅನೇಕ ರೈತರು ಇದ್ಯಾವ ತಳಿ, ಏನ್ ಗೊಬ್ಬರ ಹಾಕಿದ್ದೆ ಅಂತೆಲ್ಲಾ ಕೇಳ್ತಿದ್ರು. ಬರೀ ರಾಗಿ ತಳಿ, ಗೊಬ್ಬರ ಹಾಕೋದ್ರಿಂದ ಮಾತ್ರ ಬೆಳೆ ಹುಲುಸಾಗಿ ಬರೋಲ್ಲ, ನಾವು ಮಾಡೋ ಪದ್ಧತಿಯ ಆಧಾರದ ಮೇಲೆ ಇಳುವರಿ ಅವಲಂಬಿಸಿರುತ್ತೆ ಅನ್ನೋದು ಸಣ್ಣೇಗೌಡರ ವಾದ.

ಆರಂಭವಾಗಿದ್ದು ಹೀಗೆ
ಸುಮಾರು ಎರಡು ದಶಕಗಳ ಹಿಂದಿನ ಮಾತು. ಮಳೆ ಬರುವ ದಿನಗಳು ಕಡಿಮೆಯಾಗಿ ಬರಗಾಲ ಬಂದಂತ್ತಿದ್ದ ದಿನಗಳವು. ಇಂತಹ ಹೊತ್ತಲ್ಲಿ ರಾಗಿ ಸಸಿ ಮಡಿ ಸಿದ್ಧ ಮಾಡಿ ನಾಟಿ ಮಾಡಬೇಕೆನ್ನುವಷ್ಟರಲ್ಲಿ ಮಳೆ ಕೈ ಕೊಡುತ್ತಿತ್ತು. ಹಾಗಾಗಿ ನೆಟ್ಟಿ ರಾಗಿ ಬೆಳೆಯುವುದು ಬಲು ಕಷ್ಟ ಎಂದು ರೈತರು ಬಿತ್ತನೆಗೆ ಮುಂದಾಗಿದ್ದರು. ಇದರಿಂದ ಇಳುವರಿ ಕಡಿಮೆಯಾಗುವುದೆಂದು ಚಿಂತಿಸಿದ ಕೆಲವೇ ರೈತರು ರಾಗಿ ಸಸಿ ನೆಡುವ ಬದಲಾಗಿ ನೇರ ರಾಗಿಯನ್ನೇಕೆ ಗುಳಿಗೆ ಬಿತ್ತಬಾರದೆಂದು ಆಲೋಚಿಸಿ ಗುಳಿ ರಾಗಿ ಪದ್ಧತಿಗೆ ಮುಂದಾದರು.

ಇಳುವರಿ ಹೆಚ್ಚಿಸುವ ಸಲುವಾಗಿ ನೆಲವನ್ನು ಚೆನ್ನಾಗಿ ಹಸನು ಮಾಡಿದರು. ಪೈರುಗಳ ನಡುವಿನ ಅಂತರ ಜಾಸ್ತಿಯಿರುವುದರಿಂದ ಮಳೆ ಕಡಿಮೆಯಿದ್ದರೂ ಸಹ ಸಸಿ ಬಾಡಲಿಲ್ಲ. ಜೊತೆಗೆ ಕೊಟ್ಟಿಗೆ ಗೊಬ್ಬರ ಹೆಚ್ಚಾಗಿ ಬಳಸಿದ್ದರು. ಇದರಿಂದ ಬೆಳೆ ಹುಲುಸಾಗಿ ಬೆಳೆದು 18-20 ಕ್ವಿಂಟಾಲ್ ಇಳುವರಿ ಬಂದಿತು. ಇದನ್ನು ಗಮನಿಸಿದ ಅನೇಕ ರೈತರು ಅಂದಿನಿಂದ ಇಂದಿನವರೆಗೂ ಗುಳಿ ರಾಗಿ ಪದ್ಧತಿಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ.

ಗುಳಿಗೆ ರಾಗಿ ಬಿತ್ತುತ್ತಿರುವುದು

ಭೂಮಿ ಸಿದ್ಧತೆ ಮತ್ತು ಬಿತ್ತನೆ
“ನೆಲ ಹದ ಮಾಡ್ಕೊಂಡ್ರೆ ಮಾತ್ರ ಒಳ್ಳೆಯ ಇಳುವರಿ ಪಡೆಯಬಹುದು” ಎನ್ನುವ ರೈತ ಸಣ್ಣೇಗೌಡರು, ತಮ್ಮ ಹೊಲದಲ್ಲಿ ಅನುಸರಿಸುತ್ತಿರುವ ವಿಧಾನಗಳನ್ನು ವಿವರಿಸಿದರು. ಮಾರ್ಚಿ- ಏಪ್ರಿಲ್ ಸಮಯದಲ್ಲಿ ಒಂದು ಬಾರಿ ಮಾಗಿ ಉಳುಮೆ ಮಾಡಬೇಕು. ಇದರಿಂದ ಮಣ್ಣಿನಲ್ಲಿರುವ ಹಾನಿಕಾರಕ ಜೀವಿಗಳು, ಅವುಗಳ ಮೊಟ್ಟೆ ನಾಶವಾಗುವುವು. ನಂತರ ಉತ್ತಮ ಮಳೆಯಾದಾಗ ಒಂದು ಬಾರಿ ಉಳುಮೆ, ಒಂದು ಸಾಲು ದೊಡ್ಡ ಕುಂಟೆ ಹೊಡೆಯಬೇಕು.

ಬಿತ್ತನೆಗೆ 15 ದಿನ ಮುಂಚೆ ಎರಡು ಟ್ರ್ಯಾಕ್ಟರ್ ಲೋಡು ಕೊಟ್ಟಿಗೆ ಗೊಬ್ಬರವನ್ನು(ಎರಡು ವರ್ಷಕ್ಕೊಮ್ಮೆ) ಚೆಲ್ಲಿ ಬೇಸಾಯ ಮಾಡಿ, ಒಂದು ಸಾಲು ದೊಡ್ಡ ಕುಂಟೆಯಿಂದ ನೆಲವನ್ನು ಹರಗಬೇಕು. ಇದರಿಂದ ಮಣ್ಣು ಹುದುರು ಹುದುರಾಗಿ ಬಿತ್ತನೆಗೆ ಸುಲಭವಾಗುವುದು. ರಾಗಿ ಬಿತ್ತನೆಯ ದಿನ ದೊಡ್ಡ ಕುಂಟೆ ಹೊಡೆಯುವುದರಿಂದ ನೆಲೆದಲ್ಲಿ ಬೆಳೆದ ಕಳೆ ನಾಶವಾಗಿ ಮಣ್ಣು ಸಡಿಲವಾಗುವುದು. ನಂತರ ಮರವನ್ನು(ಕೊರಡು) ಹೊಡೆಯುವುದರಿಂದ ನೆಲ ಸಮತಟ್ಟಾಗುವುದು. ಹೀಗೆ ಒಟ್ಟು ಮೂರು ಬಾರಿ ಬೇಸಾಯ, ಮೂರು ಸಾಲು ದೊಡ್ಡ ಕುಂಟೆ ಬೇಸಾಯ ಮಾಡಬೇಕಾಗುತ್ತದೆ.

ಸಾಲು ಮರದಿಂದ ಎರಡು ಮುಖವಾಗಿ ಸಾಲು ಹೊಡೆದು ರಾಗಿಯನ್ನು ಗುಣಿಗೆ ಬಿತ್ತಲು ಅಣಿ ಮಾಡಿಕೊಳ್ಳಲಾಗುವುದು. ಇದರಿಂದ ಎರಡು ಇಂಚು ಆಳ ಹಾಗೂ 15 ಇಂಚು ಅಂತರದಲ್ಲಿ ಗುಣಿಗಳು ನಿರ್ಮಾಣವಾಗುವುವು. ಪ್ರತಿ ಗುಣಿಗೆ 8-10 ರಾಗಿ ಬೀಜಗಳನ್ನು ಕೈಯಿಂದ ಉದುರಿಸಿ ನಂತರ ಮರ ಹೊಡೆದು ಗುಣಿ ಮುಚ್ಚಲಾಗುವುದು. ಹೀಗೆ ಮಾಡುವುದರಿಂದ ಎಕರೆಗೆ ಕೇವಲ ಮೂರು ಕೆ.ಜಿ ಬೀಜ ಬಿತ್ತನೆಗೆ ಸಾಕಾಗುತ್ತದೆ. ಬಿತ್ತುವಾಗ ಪ್ರತಿ ಕೆ.ಜಿ ಬಿತ್ತನೆ ಬೀಜಕ್ಕೆ ಎರಡು ಕೆ.ಜಿ ಗೊಬ್ಬರವನ್ನು ಬೆರೆಸಿ ಬಿತ್ತುತ್ತಾರೆ.

ಮೂರು ದಿನಗಳೊಳಗೆ ಮಳೆ ಬಾರದಿದ್ದರೆ, ನೆಲ ಸಡಿಲವಾಗಿ ಮೊಳೆತ ಬಿತ್ತನೆ ಹುಸಿಯಾಗುವುದು. ಅಲ್ಲದೆ ಇರುವೆಗಳು ಬಿತ್ತನೆಯನ್ನು ಆಹಾರಕ್ಕಾಗಿ ಸಾಗಿಸುತ್ತವೆ. ಇದನ್ನು ತಪ್ಪಿಸಲು ಮರವನ್ನು ಹೊಡೆದು ನೆಲವನ್ನು ಅಡವು(ಬಿಗಿ) ಮಾಡುತ್ತಾರೆ. 20 ದಿನಗಳ ನಂತರ ಸಾಲು ಹಿಡಿದು ಓಡಾಡಿ ಹೆಚ್ಚು ಪೈರು ಹುಟ್ಟಿದ ಗುಣಿಗಳಿಂದ ಪೈರನ್ನು ತೆಗೆದು, ಕಡಿಮೆ ಅಥವಾ ಹುಟ್ಟದಿರುವ ಗುಣಿಗೆ ಪೈರನ್ನು ನೆಟ್ಟಿ ಮಾಡಬೇಕು. ಇದರಿಂದ ಪ್ರತಿ ಗುಣಿಯೂ ಒಂದೇ ಸಮನಾಗಿ ಬೆಳೆಯಲು ಅನುಕೂಲವಾಗುವುದು.

ದೊಡ್ಡಕುಂಟೆಯು ಮೂರೂವರೆ ಅಡಿ ಅಗಲವಿರುವ ಒಂದು ಮರದ ಕೊರಡು. ಇದರ ತಳಭಾಗದಲ್ಲಿ ಒಂದೂವರೆ ಅಡಿ ಉದ್ದವಿರುವ ಎರಡು ಕಬ್ಬಿಣದ ಬ್ಲೇಡುಗಳನ್ನು ಎರಡು ಕಡೆಗಳಿಂದ ಜೋಡಿಸಿರುತ್ತಾರೆ. ಇದರಿಂದ ನೆಲವನ್ನು ಸಡಿಲಗೊಳಿಸುವ ಜೊತೆಗೆ ಕಳೆಯನ್ನು ತೆಗೆಯಬಹುದು. ಅದೇ ರೀತಿ ಮರವು 6 ಅಡಿ ಉದ್ದ, ಒಂದು ಅಡಿ ಅಗಲ ಹಾಗೂ ಎರಡು ಇಂಚು ದಪ್ಪದ ಮರದ ಹಲಗೆ. ಮಣ್ಣನ್ನು ಸಮ ಮಾಡಲು ಬಳಸುವುದರಿಂದ ಹೆಚ್ಚು ಗಡುಸಾಗಿರುವ ಮರ ಬೇಕು. ಹಾಗಾಗಿ ಹುಣುಸೆ, ಜಾಲಿ, ಆಲದ ಮರದ ಹಲಗೆಗಳನ್ನು ಇದಕ್ಕಾಗಿ ಬಳಸುತ್ತಾರೆ. ಮರಕ್ಕೆ ಎರಡು ರಂಧ್ರ ಮಾಡಿ ಬಿದಿರಿನ ಈಚುಗಳನ್ನು ಜೋಡಿಸಿ ಮಣ್ಣನ್ನು ಎಳೆಯಲು ಸಹಾಯಕವಾಗುವಂತೆ ಮರವನ್ನು ಎತ್ತುಗಳಿಗೆ ಹೂಡುತ್ತಾರೆ.

ಸೂಕ್ತ ತಳಿಗಳು
ಈ ಪ್ರದೇಶದಲ್ಲಿ ಮೂರು ತಳಿಗಳು ಜನಪ್ರಿಯವಾಗಿವೆ. ಅಲ್ಪಾವಧಿ ತಳಿಯಾಗಿ ಸ್ಥಳೀಯ ಕುಳ್ಳನ ರಾಗಿ, ಮಧ್ಯಮಾವಧಿ ತಳಿಯಾಗಿ ಜಿ ಪಿ ಯು- 28, ದೀರ್ಘಾವಧಿ ತಳಿಯಾಗಿ ಎಂಆರ್-1 ತಳಿಗಳಿವೆ. ಇಲ್ಲಿನ ರೈತರು ಮಳೆಯ ಸಮಯವನ್ನಾಧರಿಸಿ ತಳಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅಂದರೆ ಮಳೆ ಜೂನ್ ಆರಂಭದಲ್ಲಿ ಪ್ರಾರಂಭವಾದರೆ ದೀರ್ಘಾವಧಿ; ಅಂದರೆ 125-130 ದಿನಗಳ ತಳಿ, ಜುಲೈನಲ್ಲಿ ಆರಂಭವಾದರೆ ಮಧ್ಯಮಾವಧಿ, ಅಂದರೆ; 110-115 ದಿನಗಳ ತಳಿ, ಜುಲೈ ಕೊನೆ ವಾರ ಅಥವಾ ಆಗಸ್ಟ್ ನಲ್ಲಿ ಮಳೆ ಬಂದರೆ ಅಲ್ಪಾವಧಿ, ಅಂದರೆ; 100-105 ದಿನಗಳ ತಳಿಯನ್ನು ಬಿತ್ತನೆಗೆ ಆಯ್ಕೆ ಮಾಡಿಕೊಳ್ಳುತ್ತಾರೆ.

ಕೆಲವೇ ರೈತರು ಈ ತಿಳಿವಳಿಕೆಯಿಂದ ಉತ್ತಮ ಇಳುವರಿ ಪಡೆಯುತ್ತಿದ್ದಾರೆ. ಹಾಗಾಗಿ ಸೂಕ್ತ ತಳಿ, ಬೇಸಾಯ ಕ್ರಮ, ಆರೈಕೆ ಎಲ್ಲವೂ ಇಳುವರಿಯ ಮೇಲೆ ಪರಿಣಾಮ ಬೀರುತ್ತವೆ ಎಂಬುದು ನರಸೀಪುರದ ರೈತರ ಅಭಿಪ್ರಾಯ.

ಬುಡಕ್ಕೆ ಮಣ್ಣೇರಿಸುವುದು
ಬಿತ್ತನೆ ಮುಗಿದ 12ನೇ ದಿನದಿಂದ ಸಾಲುಗಳ ನಡುವೆ ಹರತೆ(ಕುಂಟೆ) ಹೊಡೆಯಲಾಗುತ್ತದೆ. ಈ ವಿಧಾನದಲ್ಲಿ ಎರಡು ಮುಖವಾಗಿ ಕುಂಟೆ ಹೊಡೆಯುವುದರಿಂದ ಕಳೆ ಸಂಪೂರ್ಣವಾಗಿ ಹತೋಟಿಗೆ ಬರುತ್ತದೆ. ಹಾಗಾಗಿ ಕೈಯ್ಯಿಂದ ಕಳೆ ತೆಗೆಯುವ ಅಗತ್ಯವಿಲ್ಲ. ಜೊತೆಗೆ ಪೈರಿನ ಬುಡಕ್ಕೆ ಮಣ್ಣು ಹೆಚ್ಚುತ್ತದೆ. ಇದನ್ನು ಬುಡಕ್ಕೆ ಮಣ್ಣೇರಿಸುವುದು ಎನ್ನುವರು.

ಹೀಗೆ ಒಂದು ತಿಂಗಳೊಳಗೆ ಮೂರು ಬಾರಿ ಎರಡು ಮುಖವಾಗಿ ಹರಗುವುದರಿಂದ ನೆಲವನ್ನು ಸಡಿಲಗೊಳಿಸಲು, ಕಳೆ ನಿಯಂತ್ರಿಸಲು, ಪೋಷಕಾಂಶಗಳನ್ನು ಪೈರಿನ ಬುಡಕ್ಕೆ ಒದಗಿಸಲು, ತೆಂಡೆಯೊಡೆಯಲು ಅನುಕೂಲವಾಗುವುದು. ಮೂರನೇ ಬಾರಿ ಕುಂಟೆ ಹೊಡೆಯುವ ಮುನ್ನ ಎಕರೆಗೆ 50 ಕೆ.ಜಿ ರಾಸಾಯನಿಕ ಗೊಬ್ಬರ ಹಾಗೂ 50 ಕೆ.ಜಿ ಸಾರಜನಕವನ್ನು ನೀಡಲಾಗುವುದು. ಕೊಟ್ಟಿಗೆ ಗೊಬ್ಬರ ಹಾಗೂ ಹಸಿರೆಲೆ ಗೊಬ್ಬರಗಳನ್ನು ಬಳಸಿದ ರೈತರು ಕೇವಲ ಸಾರಜನಕವನ್ನಷ್ಟೆ ಒದಗಿಸುತ್ತಾರೆ.

ಸೊಂಪಾಗಿ ಬೆಳೆದ ರಾಗಿ

ಗರಿ ಮೇಯಿಸೋದು
ಕೆಲವು ರೈತರು ಬಿತ್ತಿದ 40-45 ದಿನಗಳಲ್ಲಿ ದನ- ಕರುಗಳಿಂದ ಪೈರುಗಳನ್ನು ಮೇಯಿಸುತ್ತಾರೆ. ದನ- ಕರುಗಳು ಹುಲುಸಾಗಿ ಬೆಳೆದಿರುವ ಗರಿಗಳನ್ನು ತಿಂದು ಕಾಂಡವನ್ನು ಹಾಗೆಯೇ ಬಿಡುತ್ತವೆ. ಇದರಿಂದಾಗಿ ಅನೇಕ ಅನುಕೂಲಗಳಿವೆ ಎಂಬುದು ನರಸೀಪುರದ ರೈತ ನಿಂಗೇಗೌಡರ ಅಭಿಪ್ರಾಯ. ಅದೇನೆಂದರೆ ಗರಿಗಳು ಜೋತು ಬೀಳುವುದಿಲ್ಲ. ತೆನೆ ಕುಸುರಿನ ಮೇಲೆ ಗರಿಯ ನೀರು ತಾಕುವುದಿಲ್ಲ. ತೆನೆಗೆ ಪರಿಪೂರ್ಣ ಬಿಸಿಲು ಬೀಳುವುದರಿಂದ ಚೆನ್ನಾಗಿ ಕಾಳು ಕಟ್ಟುತ್ತದೆ. ಹೀಗೆ ಪ್ರಾಣಿಗಳು ಪೈರನ್ನು ಕಚ್ಚುವುದರಿಂದ, ಬಿಸಿಲು ಬೀಳುವುದರಿಂದ, ಗರಿಯ ನೀರು ತೆನೆಗೆ ತಾಕದಿರುವುದರಿಂದ ತೆನೆ ಸದೃಢವಾಗುತ್ತದೆ.

ನೆಟ್ಟಿರಾಗಿ v/s ಗುಳಿರಾಗಿ
“ಗುಳಿರಾಗಿಗೆ ಹೋಲಿಸಿದ್ರೆ ನೆಟ್ಟಿ ರಾಗಿಯಲ್ಲಿ ತುಸು ಹೆಚ್ಚು ಇಳುವರಿ ಬರುವ ಸಾಧ್ಯತೆಗಳಿರಬಹುದು. ಆದರೆ, ಕಡಿಮೆ ಶ್ರಮ ಹಾಗೂ ಕರ್ಚು ಎನ್ನುವಾಗ ಗುಳಿರಾಗಿ ಸೈ ಎನಿಸಿಕೊಳ್ಳುತ್ತದೆ” ಎನ್ನುತ್ತಾರೆ ಸಣ್ಣೇಗೌಡರು.
ನೆಟ್ಟಿ ರಾಗಿಯಲ್ಲಿ ಸಸಿ ಮಡಿಯಿಂದ ಪೈರನ್ನು ಕಿತ್ತು ನಾಟಿ ಮಾಡುವಾಗ 15 ಜನ ಬೇಕಾಗುತ್ತಾರೆ. ಆದರೆ, ಗುಳಿ ರಾಗಿಯಲ್ಲಿ ಗುಣಿಗೆ ಬಿತ್ತಲು ಕೇವಲ ಇಬ್ಬರು ಸಾಕು. ಜೊತೆಗೆ ಸಮಯಕ್ಕೆ ಸರಿಯಾಗಿ ಕೆಲಸಗಾರರು ಸಿಗುವುದಿಲ್ಲ.

ಸಸಿ ಮಡಿ ಸಿದ್ಧಪಡಿಸಿ ನೆಟ್ಟಿ ಮಾಡಬೇಕೆನ್ನುವಷ್ಟರಲ್ಲಿ ಮಳೆ ಬಾರದಿದ್ದರೆ ಪೈರು ಬಲಿತು ಇಳುವರಿ ಕಡಿಮೆಯಾಗುತ್ತದೆ. ಇದನ್ನು ತಪ್ಪಿಸಲು ಕೆಲವೊಮ್ಮೆ ಎರಡ್ಮೂರು ಸಸಿ ಮಡಿಗಳನ್ನು ಒಂದು ವಾರದ ಅಂತರದಲ್ಲಿ ಸಿದ್ಧಪಡಿಸಿಕೊಳ್ಳಬೇಕಾಗುತ್ತದೆ. ಇದು ತುಸು ಶ್ರಮವಾಗುತ್ತದೆ.

ನೆಟ್ಟಿ ರಾಗಿಯ ಪ್ರತಿ ಗುಣಿಯಲ್ಲಿ 20- 25 ತೆಂಡೆಗಳಿರುತ್ತವೆ. ಗುಳಿ ರಾಗಿಯಲ್ಲಿ 30-35 ತೆಂಡೆಗಳಿರುತ್ತವೆ. ಹಾಗಾಗಿ ಕೊಯ್ಲಿಗೆ ನೆಟ್ಟಿ ರಾಗಿಗಿಂತಲೂ ಎರಡು ಜನ ಹೆಚ್ಚು ಬೇಕಾಗುತ್ತದೆ. ಆದರೂ, ನೆಟ್ಟಿ ರಾಗಿಯಲ್ಲಿ ತುಸು ಹೆಚ್ಚು ಇಳುವರಿ ಬರುತ್ತದೆ. ಯಾಕಂದ್ರೆ ತೆನೆಗಳ ಗಾತ್ರ ಗುಳಿ ರಾಗಿಗೆ ಹೋಲಿಸಿದ್ರೆ ಸ್ವಲ್ಪ ದೊಡ್ಡದಿರುತ್ತದೆ. ಅಂದರೆ ಗುಳಿ ರಾಗಿಯಲ್ಲಿ ಸರಾಸರಿ 16 ಕ್ವಿಂಟಾಲ್ ಇಳುವರಿ ಬಂದರೆ ನೆಟ್ಟಿ ರಾಗಿಯಲ್ಲಿ 18 ಕ್ವಿಂಟಾಲ್ ಇಳುವರಿ ಪ್ರತಿ ಎಕರೆಗೆ ಈ ಪ್ರದೇಶದಲ್ಲಿದೆ.

ಪೈರಿನ ಇಳುವರಿ ಸಮೀಕ್ಷೆ

ಇಳುವರಿ ಸಮೀಕ್ಷೆಯಲ್ಲೂ ಪಾಸ್
ನೆಟ್ಟಿ ರಾಗಿಯಿಂದ ಉತ್ತಮ ಇಳುವರಿ ಎಂಬುದು ಎಲ್ಲರಿಗೂ ಗೊತ್ತು. ಆದರೆ, ಗುಳಿ ರಾಗಿಯಿಂದ ಹೆಚ್ಚು ಇಳುವರಿ ಬರುತ್ತದೆಯೇ ಎಂಬುದನ್ನು ಪರೀಕ್ಷಿಸಲು ಒಂದು ಪ್ರಯೋಗ ಮಾಡಲಾಯ್ತು. ನರಸೀಪುರದ ರೈತರು ಹೇಳಿದ ಅನುಭವದ ಮಾತುಗಳನ್ನು ವೈಜ್ಞಾನಿಕವಾಗಿ ಒರೆಗೆ ಹಚ್ಚಿ ನೋಡಲಾಯ್ತು. ಇದಕ್ಕಾಗಿ ಭೂಮಿ ಸುಸ್ಥಿರ ಅಭಿವೃದ್ಧಿ ಸಂಸ್ಥೆಯು ನಬಾರ್ಡ್ ಸಹಯೋಗದೊಂದಿಗೆ ಅನುಷ್ಠಾನಗೊಳಿಸುತ್ತಿರುವ ಸುಸ್ಥಿರ ಕೃಷಿ ಯೋಜನೆಯ ವತಿಯಿಂದ ರಾಗಿ ಬೆಳೆಯ ವಿವಿಧ ತಳಿಗಳ ಪ್ರಾತ್ಯಕ್ಷಿಕೆ ಮಾಡಿ ಇಳುವರಿ ಸಮೀಕ್ಷೆ ನಡೆಸಲಾಯ್ತು. ಇದರಿಂದ ಎಲ್ಲಾ ತಳಿಗಳಲ್ಲಿಯೂ ಉತ್ತಮ ಇಳುವರಿ ಹೊರಹೊಮ್ಮಿರುವುದು ದೃಢಪಟ್ಟಿದೆ. ಅಂದರೆ ಎಂ ಆರ್-1 ತಳಿಯಲ್ಲಿ 16.4 ಕ್ವಿಂಟಾಲ್, ಜಿ ಪಿ ಯು 28 ತಳಿಯಲ್ಲಿ 12.8 ಕ್ವಿಂಟಾಲ್ ಹಾಗೂ ಸ್ಥಳೀಯ ಕುಳ್ಳನರಾಗಿಯಲ್ಲಿ 11.1 ಕ್ವಿಂಟಾಲ್ ಪ್ರತಿ ಎಕರೆಗೆ ಇಳುವರಿ ಬಂದಿರುವುದು ದೃಢಪಟ್ಟಿದೆ.

ಗುಳಿ ರಾಗಿಯಿಂದ ಉತ್ತಮ ಇಳುವರಿ ಸಾಧ್ಯ ಎಂಬುದನ್ನು ತಿಳಿದ ಅನೇಕ ರೈತರು ತಮ್ಮ ರಾಗಿ ಹೊಲದಲ್ಲಿ ಈ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ. ನರಸೀಪುರ ಗ್ರಾಮದ ಸುತ್ತಮುತ್ತಲ ಅನೇಕ ಹಳ್ಳಿಗಳಲ್ಲೀಗ ಗುಳಿ ರಾಗಿ ಪ್ರಚಲಿತದಲ್ಲಿದೆ.