ನೆನಪನ್ನು ನಿದ್ರೆ ಇನ್ನಷ್ಟು ಭದ್ರಗೊಳಿಸುತ್ತದಂತೆ. ರಾತ್ರಿ ಬೇಗನೆ ಹಾಸಿಗೆ ಹಿಡಿಯುವ ನನಗೆ ಇನ್ನೊಂದು ಕಾರಣ ಸಿಕ್ಕಿತು ಅನ್ನಿ. ನಿದ್ರೆಗೂ ನನಗೂ ಭಾರಿ ನಂಟು ಅಂತ ಗೆಳೆಯರು ಹೇಳುತ್ತಲೇ ಇರುತ್ತಾರೆ. ಕಾಲೇಜಿನ ದಿನಗಳಲ್ಲಿ ಕಂಬೈಂಡ್ ಸ್ಟಡಿ ಅಂತ ಎಲ್ಲರೂ ಕೂಡಿ ರಾತ್ರೋ ರಾತ್ರಿ ಜಾಗರಣೆ ಮಾಡುವಾಗಲೂ ನಾನು ಎಲ್ಲರಿಗಿಂತಲೂ ಮೊದಲೇ ನಿದ್ರೆಗೆ ಜಾರಿರುತ್ತಿದ್ದೆನಂತೆ. ಕಪಾಪ, ಓದಿಕೊಳ್ಳಲಿ,ಕಿ ಅಂತ ನಿದ್ರೆಯಿಂದ ಎಬ್ಬಿಸಿ ಬಿಸಿ, ಬಿಸಿ ಚಹಾ ಕೊಟ್ಟರೆ, ಚಹಾ ಕುಡಿದು ಇನ್ನೂ ಗಡದ್ದಾಗಿ ನಿದ್ರೆ ಮಾಡುತ್ತಿದ್ದೆ ಎಂದು ಗೆಳೆಯರು ನೆನಪಿಸುತ್ತಾರೆ. ಸೈನ್ಸ್ ಪತ್ರಿಕೆಯಲ್ಲಿ ಪ್ರಕಟವಾಗಿರುವ ಸುದ್ದಿ ಈಗ ರೋಗಿ ಬಯಸಿದ್ದನ್ನೇ ವೈದ್ಯ ನೀಡಿದ ಹಾಗಿದೆ. ನಿದ್ರೆಯ ವೇಳೆಯಲ್ಲಿ ನೆನಪು ಇನ್ನಷ್ಟು ಧೃಢವಾಗುತ್ತದೆಂದು ಅಮೆರಿಕೆಯ ನಾರ್ಥ್ವೆಸ್ಟರ್ನ್ ವಿಶ್ವವಿದ್ಯಾನಿಲಯದ ವಿಜ್ಞಾನಿ ಕೆನ್ ಪಾಲರ್ ಮತ್ತು ಸಂಗಡಿಗರು ಸೈನ್ಸ್ ಪತ್ರಿಕೆಯಲ್ಲಿ ವರದಿ ಮಾಡಿದ್ದಾರೆ.

ನೆನಪು ಎನ್ನುವುದು ಒಂದು ನಿಗೂಢ ಮಾನಸಿಕ ವಿದ್ಯಮಾನ. ಜಾಣಕಿವುಡಿನ ತರಹ ಕೆಲವರಿಗೆ ಇರುವ ಜಾಣಮರೆವಿನ ಕುರಿತು ಈ ಮಾತು ಹೇಳಿದ್ದಲ್ಲ. ನೂರಾರು ವರ್ಷಗಳಿಂದ ಇದರ ಬಗ್ಗೆ ಅಧ್ಯಯನ ನಡೆದಿದ್ದರೂ, ನೆನಪು ಹೇಗುಂಟಾಗುತ್ತದೆ, ಎಲ್ಲಿ ನೆಲೆಯಾಗಿರುತ್ತದೆ, ಹೇಗೆ ಮರುಕಳಿಸುತ್ತದೆ ಎನ್ನುವ ವಿಷಯದ ಬಗ್ಗೆ ಇದಮಿತ್ಥಂ ಎಂದು ಹೇಳಲಾಗಿಲ್ಲ. ಆದರೆ ಒಂದು ಮಾತಂತೂ ಸತ್ಯ. ನೆನಪಿಲ್ಲದೆ ಕಲಿಕೆ ಇಲ್ಲ. ಕಲಿಕೆ ಇಲ್ಲದೆ ಜ್ಞಾನವೂ ಇಲ್ಲ. ಮಾನವನ ಬದುಕಿನಲ್ಲಿ ಜ್ಞಾನಕ್ಕೆ ವಿಶೇಷ ಸ್ಥಾನವಿದೆಯಷ್ಟೆ. ಹಾಗಾಗಿಯೇ ನೆನಪು ಎನ್ನುವ ವಿದ್ಯಮಾನದ ಬಗ್ಗೆ ವಿಜ್ಞಾನಿಗಳಿಗೆ ಕುತೂಹಲ. ನೆನಪಿನಲ್ಲೂ ವಿವಿಧ ಬಗೆಗಳಿವೆ. ಅವಿವರಣಾತ್ಮಕ ನೆನಪುಗಳು ಹಾಗೂ ವಿವರಣಾತ್ಮಕ ನೆನಪುಗಳು ಎಂದು ಎರಡು ಪ್ರಮುಖ ವಿಭಾಗವನ್ನು ಮನಶ್ಶಾಸ್ತ್ರಜ್ಞರು ಗುರುತಿಸಿದ್ದಾರೆ.

ವಿವಿಧ ರಾಷ್ಟ್ರಗಳು ಅವುಗಳ ರಾಜಧಾನಿಗಳ ಹೆಸರುಗಳು, ತರಗತಿಯಲ್ಲಿ ಹೇಳಿಕೊಟ್ಟ ಪಾಠ, ಅಂಕೆ-ಸಂಖ್ಯೆಗಳು ಇತ್ಯಾದಿಗಳನ್ನು ನೆನಪು ವಿವರಣಾತ್ಮಕವೆನ್ನಿಸುತ್ತದೆ. ಸೈಕಲ್ ಓಡಿಸುವುದು, ಟೈಪಿಂಗ್ ಮುಂತಾದವುಗಳು ಅವಿವರಣಾತ್ಮಕ ನೆನಪಿಗೆ ಉದಾಹರಣೆಗಳು. ವಿವರಣಾತ್ಮಕ ನೆನಪನ್ನು ಪ್ರಯತ್ನಪೂರ್ವಕವಾಗಿ ನೆನಪಿಸಿಕೊಳ್ಳಬೇಕು. ಆದರೆ ಅವಿವರಣಾತ್ಮಕ ನೆನಪು ಯಾವ ಶ್ರಮವೂ ಇಲ್ಲದೆ ಅವಶ್ಯವಿದ್ದಾಗ ಮರುಕಳಿಸುತ್ತದೆ. ನಮ್ಮ ನಿತ್ಯ ಚಟುವಟಿಕೆಗೆ ಎರಡೂ ಬಗೆಯ ನೆನಪುಗಳೂ ಅವಶ್ಯಕ. ಇವೆರಡೂ ಬಗೆಗಳಲ್ಲೂ ಇನ್ನೂ ಹಲವು ಉಪಬಗೆಗಳಿವೆ. ಉದಾಹರಣೆಗೆ: ಅಕ್ಷರಗಳ ನೆನಪು, ಸಂಖ್ಯೆಗಳ ನೆನಪು ಮತ್ತು ಸ್ಥಾನಗಳ ನೆನಪು. ನೆನಪಿನ ವಿಧವೇನೇ ಇರಲಿ, ಮೊದಲಿಗೆ ನೆನಪು ರೂಪುಗೊಳ್ಳುವ ಟನೆ ಸಂಭವಿಸಬೇಕು. ಆ ಟನೆಯ ವಿವರಗಳು ಮೆದುಳಿನಲ್ಲೆಲ್ಲೋ ದಾಖಲಾಗುತ್ತವೆ. ದಾಖಲಾದ ವಿವರಗಳು ಇನ್ಯಾವಾಗಲೋ ಮರುಕಳಿಸಿದಾಗ ಕನೆನಪು ಬಂತುಕಿ ಎನ್ನುತ್ತೇವೆ. ಮರೆವು ನೆನಪಿಗೆ ವಿರುದ್ಧವಾದ ಕ್ರಿಯೆ.  ದಾಖಲಾದ ವಿವರಗಳು ಮರುಕಳಿಸದಿದ್ದಾಗ ಅದನ್ನು ಮರೆವು ಎನ್ನುತ್ತೇವೆ.

ಮರೆವು ಹಾಗೂ ನೆನಪುಗಳೆರಡೂ ಮಿದುಳಿನಲ್ಲಿ ಜರುಗುವ ಕ್ರಿಯೆಗಳು ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಆದರೆ ಇವು ಹೇಗುಂಟಾಗುತ್ತವೆ ಎನ್ನುವ ಬಗ್ಗೆ ಹಲವು ಊಹೆಗಳಿವೆ. ನೆನಪು ಗಟ್ಟಿಯಾಗುವ ಮುನ್ನವೇ ಬೇರೊಂದು ಅನುಭವ ಉಂಟಾದಾಗ ನೆನಪು ಕಮಾಸಿಕಿ ಮರೆವುಂಟಾಗಬಹುದು. ಮಿದುಳಿನ ಭಾಗಗಳು ನಷ್ಟವಾದಾಗ ಅದರೊಟ್ಟಿಗೆ ನೆನಪೂ ನಷ್ಟವಾಗುತ್ತದೆ. ನೆನಪು ರೂಪುಗೊಂಡರೂ ಗಟ್ಟಿಯಾಗದಿದ್ದರೂ ಮರೆವುಂಟಾಗುತ್ತದೆ. ನೆನಪು ಗಟ್ಟಿಯಾಗುವುದಕ್ಕೆ ನಿದ್ರೆ ನೆರವಾಗುತ್ತದೆ ಎನ್ನುವುದು ಹೊಸ ಸಂಗತಿಯೇನಲ್ಲ. ನಿದ್ರೆಗೆಟ್ಟವರು ಹೊಸ ಸಂಗತಿಗಳನ್ನು ನೆನಪಿಟ್ಟುಕೊಳ್ಳಲು ಹೆಣಗುತ್ತಾರೆ. ಎರಡು, ಮೂರು ದಿನ ನಿದ್ರೆಗೆಟ್ಟವರಿಗೆ ಎಷ್ಟು ತಿಳಿ ಹೇಳಿದರೂ ತಲೆಗೆ ಹತ್ತುವುದೇ ಇಲ್ಲ. ಪರೀಕ್ಷೆಯ ಸಮಯದಲ್ಲಿ ನಿದ್ರೆಗೆಟ್ಟು ಉರು ಹೊಡೆದವರಿಗೆ ಪ್ರಶ್ನೆ ಪತ್ರಿಕೆ ನೋಡಿದ ಕೂಡಲೇ ಖಾಲಿ, ಖಾಲಿ ಎನ್ನಿಸುವುದಕ್ಕೆ ಇದುವೇ ಕಾರಣ. ಎಚ್ಚರವಿದ್ದಾಗ ಕಲಿತ ವಿಷಯವೆಲ್ಲವನ್ನೂ ಮಿದುಳು ನಿದ್ರೆಯ ಹೊತ್ತು ಮೆಲುಕು ಹಾಕಿ ಭದ್ರಗೊಳಿಸುತ್ತದೆ ಎನ್ನುತ್ತಾರೆ ಮನಶ್ಶಾಸ್ತ್ರಜ್ಞರು.

ನೆನಪಿನಷ್ಟೆ ನಿಗೂಢವಾದ ಮಿದುಳಿನ ಮತ್ತೊಂದು ವಿದ್ಯಮಾನ ನಿದ್ರೆ ನೆನಪಿಗೆ ಅತ್ಯಂತ ಅವಶ್ಯಕ ಎನ್ನುವುದರಲ್ಲಿ ಎರಡು ಮಾತಿಲ್ಲ. ನಿದ್ರೆಗೆಟ್ಟ ಪ್ರಾಣಿಗಳ ಕಲಿಕೆಯ ಸಾಮಥ್ರ್ಯ ಕುಂದುತ್ತದೆ ಎನ್ನುವುದು ಇಲಿಗಳಲ್ಲಿ ನಡೆದ ಪ್ರಯೋಗಗಳಿಂದ ಸಾಬೀತಾಗಿದೆ. ನಿದ್ರೆ ಕೇವಲ ಬಳಲಿದ ಸ್ನಾಯುಗಳಿಗೆ ಹುರುಪು ತುಂಬುವ ವಿದ್ಯಮಾನವಷ್ಟೆ ಅಲ್ಲ.  ನೆನಪನ್ನು ನೆಲೆಗೊಳಿಸಲೂ ನಿದ್ರೆ ಅಗತ್ಯ.  ನಿರ್ದಿಷ್ಟ ಕೆಲಸ ಮಾಡಲು ಕಲಿತ ಇಲಿಗಳು ನಿದ್ರೆ ಮಾಡಿದ ಅನಂತರ ಕಲಿತ ಕೆಲಸಗಳನ್ನು ಸುಲಭವಾಗಿ ನೆನಪಿಸಿಕೊಳ್ಳುತ್ತವೆ. ಆದರೆ ನಿದ್ರೆಯೂ ಸರಳ ವಿಷಯವಲ್ಲವಷ್ಟೆ. ಅದರಲ್ಲೂ ಹಲವು ಹಂತಗಳಿವೆ. ಉದಾಹರಣೆಗೆ, ಒಂದೂವರೆ ಗಂಟೆಗೊಮ್ಮೆ ನಿದ್ರೆಯ ಸ್ಥಿತಿ ಬದಲಾಗುತ್ತಿರುತ್ತದೆ. ಈ ಒಂದೂವರೆ ಗಂಟೆಯಲ್ಲೂ ಕೆಲವು ಸಮಯ ಗಾಢನಿದ್ರೆಯ ಸ್ಥಿತಿ ಗ ಜೀವವಿಜ್ಞಾನಿಗಳು ಇದನ್ನು ಸ್ಲೋ ವೇವ್ ನಿದ್ರೆ ಅಥವಾ ಆರ್ಇಎಂ ನಿದ್ರೆ ಎಂದು ಗುರುತಿಸುತ್ತಾರೆ ಗ ಇರುತ್ತದೆ. ಹಾಗಿದ್ದರೆ ನಾವು ಕಲಿತ ವಿಷಯಗಳು ಯಾವ ನಿದ್ರಾಸ್ಥಿತಿಯಲ್ಲಿ ಮಿದುಳಿನಲ್ಲಿ ಅಚ್ಚಾಗುತ್ತವೆ, ನೆನಪಾಗಿ ನೆಲೆಯಾಗುತ್ತವೆ? ಪ್ರಯೋಗಗಳ ಪ್ರಕಾರ ನೆನಪುಗಳು ಗಟ್ಟಿಯಾಗುವುದು ಸ್ಲೋವೇವ್ ನಿದ್ರಾಸ್ಥಿತಿಯಲ್ಲಿಯಂತೆ.

ನಿದ್ರೆ ಮಾಡಿದಾಗ ಎಲ್ಲ ನೆನಪುಗಳೂ ಈ ಸ್ಥಿತಿಯಲ್ಲಿ ಗಟ್ಟಿಯಾಗುತ್ತವೆಯೋ ಅಥವಾ ಕಲಿತ ವಿಷಯಗಳಲ್ಲಿ ಕೆಲವಷ್ಟೆ ಗಟ್ಟಿಯಾಗುತ್ತವೆಯೋ ಎನ್ನುವುದು ಇನ್ನೂ ಬಗೆಹರಿಯದ ಪ್ರಶ್ನೆ. ಈ ಪ್ರಶ್ನೆಗೆ ಉತ್ತರ ಹುಡುಕುವ ನಿಟ್ಟಿನಲ್ಲಿ ಕೆನ್ ಪಾಲರ್ ತಂಡ ಕೆಲವು ಪ್ರಯೋಗಗಳನ್ನು ನಡೆಸಿತು. ಕಂಪ್ಯೂಟರ್ ಪರದೆಯ ಮೇಲೆ ಕೆಲವು ಚಿತ್ರಗಳನ್ನು ಪ್ರದರ್ಶಿಸಿ ಅವುಗಳಿರುವ ಸ್ಥಾನವನ್ನು ನೆನಪಿಟ್ಟುಕೊಳ್ಳಲು ಹೇಳಿದರು. ಚಿತ್ರ ಕಾಣಿಸಿದ ಸಮಯದಲ್ಲೇ ಒಂದು ನಿರ್ದಿಷ್ಟ ಶಬ್ದವನ್ನು ಕೇಳಿಸುತ್ತಿದ್ದರು. ಕೆಲವು ಸಮಯದ ಅನಂತರ ಪರದೆಯ ಮೇಲೆ ಮೂಡಿದ ಚಿತ್ರಗಳನ್ನು ಮೊದಲು ಅವುಗಳು ಕಾಣಿಸಿದ್ದ ಸ್ಥಳಕ್ಕೆ ದೂಡಬೇಕಿತ್ತು. ಹೀಗೆ ಚಿತ್ರ ಕಂಡ ಸ್ಥಳದ ನೆಲೆಯನ್ನು ಅವರಿಗೆ ಕಲಿಸಲಾಯಿತು. ಅನಂತರ ಒಂದು ಗಂಟೆ ಕಾಲ ನಿದ್ರೆ ಮಾಡಲು ಅವಕಾಶ ಕಲ್ಪಿಸಿದರು. ನಿದ್ರೆ ಮಾಡುವಾಗ ಹಿನ್ನೆಲೆಯಲ್ಲಿ ಒಂದೇ ಗತಿಯ ಸದ್ದು ಕೇಳಿಸುತ್ತಿತ್ತು. ಅದೇ ವೇಳೆ ಮಿದುಳಿನ ವಿದ್ಯುತ್ಚಟುವಟಿಕೆಯ ಚಿತ್ರವನ್ನೂ (ಇಇಜಿ) ಗಮನಿಸಲಾಯಿತು. ಇಇಜಿಯಲ್ಲಿ ಸ್ಲೋವೇವ್ ನಿದ್ರಾ ಸ್ಥಿತಿಯನ್ನು ಗುರುತಿಸಬಹುದು. ನಿದ್ರಿಸಿದವರು ಸ್ಲೋವೇವ್ ಸ್ಥಿತಿಯನ್ನು ತಲುಪಿದಾಗ ಕೆಲವು ಕ್ಷಣಗಳ ಕಾಲ ಅವರಿಗೆ ಚಿತ್ರ ಕಂಡಾಗ ಕೇಳಿಸಿದ್ದ ಶಬ್ದವನ್ನು ಕೆಲವರಿಗೂ, ಬೇರೊಂದು ಶಬ್ದವನ್ನು ಇನ್ನು ಕೆಲವರಿಗೂ ಕೇಳಿಸಲಾಯಿತು.

ನಿದ್ರೆಯಿಂದ ಎಚ್ಚರಗೊಂಡ ಅನಂತರ ಕಂಪ್ಯೂಟರ್ ಪರದೆಯ ಮೇಲೆ ಮರಳಿ ಚಿತ್ರಗಳನ್ನು ಅವುಗಳಿದ್ದ ಸ್ಥಳಕ್ಕೆ ಮರಳಿಸುವ ಕೆಲಸ ಮಾಡಬೇಕಿತ್ತು. ಈ ಪರೀಕ್ಷೆಯಲ್ಲಿ ಉತ್ತಮ ಪ್ರತಿಕ್ರಿಯೆಯನ್ನು ನೀಡಿದವರೆಲ್ಲರೂ ನಿದ್ರೆಯ ಸಮಯದಲ್ಲಿ ತಾವು ಕಂಪ್ಯೂಟರ್ ಪರದೆಯ ಮೇಲೆ ಚಿತ್ರ ಕಂಡಾಗ ಕೇಳಿದ್ದ ಶಬ್ದವನ್ನೇ ಕೇಳಿದ್ದರು ಎನ್ನುವುದು ವಿಶೇಷ. ಪರದೆಯ ಮೇಲೆ ಚಿತ್ರ ಕಂಡಾಗ ಕೇಳಿದ್ದ ಶಬ್ದದಿಂದ ಭಿನ್ನವಾದ ಶಬ್ದವನ್ನು ನಿದ್ರೆಯ ವೇಳೆ ಕೇಳಿದ್ದವರು ನಿದ್ರೆಯ ಅನಂತರದ ಈ ಪರೀಕ್ಷೆಯ ಸಮಯದ ಚಿತ್ರಗಳನ್ನು ಸ್ವಸ್ಥಾನಕ್ಕೆ ಸೇರಿಸಲು ತಪ್ಪುತ್ತಿದ್ದರು. ಅರ್ಥಾತ್, ಇವರಿಗೆ ಮರೆವು ಹೆಚ್ಚಿತ್ತು. ವಿಶೇಷವೆಂದರೆ ಇವರ್ಯಾರಿಗೂ ನಿದ್ರೆಯ ವೇಳೆ ತಾವು ಶಬ್ದವನ್ನು ಕೇಳಿದ್ದು ಗೊತ್ತೇ ಇರಲಿಲ್ಲ! ನಿದ್ರೆಯ ವೇಳೆ ಏನಾಯಿತೆಂದು ತಿಳಿಯದಿದ್ದರೂ, ಪರೀಕ್ಷೆಯ ವೇಳೆ ಚಿತ್ರದ ಜೊತೆಗೆ ಕೇಳಿದ ಸದ್ದನ್ನೇ ಕೇಳಿದಾಗ ಮಿದುಳಿನಲ್ಲಿ ನೆನಪು ಹೆಚ್ಚು ಗಾಢವಾಯಿತು. ಅರ್ಥಾತ್ ಸ್ಲೋವೇವ್ ನಿದ್ರೆಯ ಸಂದರ್ಭದಲ್ಲಿ ನಿರ್ದಿಷ್ಟ ನೆನಪುಗಳನ್ನು ಚೇತರಿಸಿದಾಗ ಅವು ಇನ್ನಷ್ಟು ಗಾಢವಾಗಿ ಉಳಿಯುತ್ತವೆ ಎನ್ನುತ್ತಾರೆ ಪಾಲರ್.

1. John D. Rudoy et al., Strengthening Individual Memories by Reactivating Them During Sleep, Science, Vol. 326, Pp 1079, (20.11.2009) 2009 (doi:10.1126/science.1179013).

2. Mathew P. Walker and Robert Stickgold, Sleep, Memory and Plasticity, Annual Review of Psychology, Vol 57 Pp 139-166, 2006