ನಾವಿಬ್ಬರೂ ಅಂದು
ಹೊಳೆಯ ದಡದಲಿ ನಿಂದು
ಮರಳುಮನೆಗಳ ಕಟ್ಟಿ
ಆಟವಾಡಿದ ದಿವಸ
ನೆನಪಿದೆಯೆ ನಿನಗೆ ?

ಮುಂಗಾರುಮಳೆ ಹೊಯ್ದು
ನಾವಿಬ್ಬರೂ ತೊಯ್ದು-
ನಿಂತಾಗ ಮರಳಮನೆ
ಕೊಚ್ಚಿಹೋದಾ ದಿವಸ
ನೆನಪಿದೆಯೆ ನಿನಗೆ ?

ಈ ಮರಳು ನನಗೆಂದು
ಆ ಮರಳು ತನಗೆಂದು
ಹೊಡೆದಾಡಿ ‘ಜತೆ’ ಬಿಟ್ಟು
ಆಟವಾಡಿದ ದಿವಸ
ನೆನಪಿದೆಯೆ ನಿನಗೆ ?

ಮರುದಿವಸ ಒಂದಾಗಿ
ಮರಳುಮನೆಗಳ ಕಟ್ಟಿ
ಕೈಯ್ಯ ಚಪ್ಪಳೆ ತಟ್ಟಿ
ಹಾಡಿ ಕುಣಿದಾ ದಿವಸ
ನೆನಪಿದೆಯೆ ನಿನಗೆ ?

ಅಂದು ಹರಿದಾ ಹೊಳೆಯೆ
ಇಂದಿಗೂ ಹರಿಯುತಿದೆ ;
ಬಾ ಗೆಳತಿ ಮತ್ತೊಮ್ಮೆ ಆಟವಾಡೋಣ,
ಬಾಲ್ಯದುದ್ಯಾನವನು ಮರಳಿ ಕಟ್ಟೋಣ !