ಸರ್ವಭಾಷಾಮಯೀ ಭಗವತೀ ಸರಸ್ವತಿಯ ಕೃಪೆಗೆ ಪಾತ್ರರಾಗಿರುವ ತಮ್ಮೆಲ್ಲರಲ್ಲೂ ವಿಶ್ವ ಕನ್ನಡ ಸಮ್ಮೇಲನದ ಪರವಾಗಿ ವಿಜ್ಞಾಪನೆ.

ಕನ್ನಡ ಪ್ರಜ್ಞೆ ವಿಶ್ವಪ್ರಜ್ಞೆಯಾಗುವುದಕ್ಕಾಗಿಯೂ ವಿಶ್ವಪ್ರಜ್ಞೆ ಕನ್ನಡ ಪ್ರಜ್ಞೆಯಲ್ಲಿ ಅವತರಿಸುವುದಕ್ಕಾಗಿಯೂ ಈ ವಿಶ್ವಕನ್ನಡ ಸಮ್ಮೇಲನ ಇಲ್ಲಿ ನೆರೆದಿದೆ. ಈ ಸಮ್ಮೇಳನದ ವ್ಯವಸ್ಥಾಪಕರು ಇದನ್ನು ಉದ್ಘಾಟಿಸುವ ಹಿರಿಯ ಗೌರವಕ್ಕೆ ನನ್ನನ್ನು ನಿಯೋಜಿಸಿ ಋಣಿಯನ್ನಾಗಿ ಮಾಡಿದ್ದಾರೆ. ವಿನಯ ಪೂರ್ವಕವಾಗಿ ಅದನ್ನು ನೆರವೇರಿಸುತ್ತಿದ್ದೇನೆ.

ಅನೇಕ ಹಿರಿಯ ಚೇತನಗಳು ಸಂತತವಾಗಿ ಏಳೆಂಟು ದಶಕಗಳ ಕಾಲ ಶ್ರಮಿಸಿದ್ದರ ಫಲವಾಗಿ ಕರ್ನಾಟಕದ ಜನರ ಚೇತನದ ಸಮಸ್ತ ಅಭೀಪ್ಸೆಗಳೂ ಕನ್ನಡದ ಮೂಲಕವಾಗಿಯೇ ನೆರವೇರುವ ಕಾಲ ಸಮೀಪವಾಗಿದೆ. ಎಂದು ತಿಳಿದು ಹಿಗ್ಗುತ್ತಿದ್ದೇನೆ ಭಗವತಿ ಸರಸ್ವತಿ ಸರ್ವಭಾಷಾಮಯೀ ಎಂದು ಹೇಳಿದ್ದೇನೆ ಕನ್ನಡಿಗರು ತಮ್ಮ  ಶಕ್ತಿಗೆ ಸಾಧ್ಯವಿರುವಷ್ಟೂ ಭಾಷೆಗಳನ್ನು ಕಲಿತು ತನ್ಮೂಲಕ ಜಗತ್ತಿನ ಜ್ಞಾನ ಭಂಡಾರವನ್ನು ತಮ್ಮದನ್ನಾಗಿ ಮಾಡಿಕೊಳ್ಳಲಿ ಎಂದೂ ಕನ್ನಡದ ಶ್ರೇಷ್ಠ ಕೃತಿಗಳನ್ನು ಸಾಧ್ಯವಾದಷ್ಟೂ ಇತರ ಭಾಷೆಗಳಿಗೆ ಅನುವಾದಿಸಿ ಕನ್ನಡದ ಹಿರಿಮೆಯನ್ನು ಜಗತ್ತಿನ ಇತರ ಸಾಹಿತ್ಯಾಸಕ್ತರಿಗೆ ತಿಳಿಸಲಿ ಎಂದೂ ಹೃತ್ಪೂರ್ವಕವಾಗಿ ಹಾರೈಸುತ್ತೇನೆ. ಅಂಥ ವ್ರತವನ್ನು ಇಲ್ಲಿ ಸ್ವೀಕರಿದರೆ ಮಾತ್ರ ವಿಶ್ವಕನ್ನಡ ಸಮ್ಮೇಳನದ ಎಂಬ ಹೆಸರಿಗೆ ಇದು ಅರ್ಹವಾಗುತ್ತದೆ.

ಹಲವು ಭಾಷೆಗಳಿಗೆ ಅನುವಾದಿತವಾಗಿರುವ “ವಿಶ್ವಮಾನವ ಸಂದೇಶ”ದ ಪ್ರತಿಗಳನ್ನು ಈಗಾಗಲೇ ತಮ್ಮೆಲ್ಲರಿಗೂ ಹಂಚಿದ್ದಾರೆ ಎಂದು ಭಾವಿಸಿದ್ದೇನೆ. ಆ “ವಿಶ್ವಮಾನವ ಸಂದೇಶ”ವೇ ವಾಸ್ತವವಾಗಿಯೂ ನನ್ನ ಉದ್ಘಾಟನಾ ಭಾಷಣ ಎಂದು ತಮಗೆ ಅರ್ಪಿಸುತ್ತಿದ್ದೇನೆ.

ಆ ಸಂದೇಶದ ಹೃದಯ “ಅಧ್ಯಾತ್ಮದ ವೈಯಕ್ತೀಕರಣ” ಅದರಲ್ಲಿ ಮೂರು ಮುಖ್ಯ ಅಂಗಗಳಿವೆ. ಒಂದನೆಯದು ಪಂಚಮಂತ್ರ. ಎರಡನೆಯದು ಸಪ್ತ ಸೂತ್ರ. ಮೂರನೆಯದು ವಿಶ್ವಮಾನವಗೀತೆ-ಅನಿಕೇತನ.

ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ ಮತ್ತು ಪೂರ್ಣ ದೃಷ್ಟಿ ಇವು ಪಂಚಮಂತ್ರಗಳು.

ಸಪ್ತಸೂತ್ರಗಳಲ್ಲಿ ಮೊದಲನೆಯ ಸೂತ್ರ “ಮನುಷ್ಯಜಾತಿ ತಾನೊಂದೆವಲಂ” ಎಂಬುದು. ನಮ್ಮ ಆದಿಕವಿ ಪಂಪನ ವೇದೋಕ್ತಿ. ಉಳಿದ ಆರು ಸೂತ್ರಗಳು ಆ ಮೂಲಸೂತ್ರದ ಶಾಖೇಗಳಷ್ಟೆ.

“ವಿಶ್ವಮಾನ ಸಂದೇಶ”ದ ಕೊನೆಯ ಅಂಗ “ಅನಿಕೇತನ” ಎಂಬ ವಿಶ್ವಮಾನವ ಗೀತೆಯು ‘ಅಲ್ಪ ಮಾನವ’ನನ್ನು ವಿಶ್ವಮಾನವನನ್ನಾಗಿ ಮಾಡುವ ಕೊನೆಯಿಲ್ಲದ ಉದ್ದಾರದ ಗುರಿಯನ್ನು ಸಾರಿ, ಮುಂದಿನ ನಮ್ಮ ಸಾಹಿತಿಗಳು ಏರಬೇಕಾದ ಉತ್ತುಂಗ ಶಿಖರದತ್ತ ಕೈ ಬೀಸುತ್ತದೆ.

ಈ ವಿಶ್ವಕನ್ನಡ ಸಮ್ಮೇಳನವು ಆ ಮಹೋನ್ನತ ಧ್ಯೇಯದತ್ತ ಜಗತ್ತಿನ ಎಲ್ಲ ಜನರನ್ನೂ ಕೊಂಡೊಯ್ಯಲಿ ಎಂದು ಪ್ರಾರ್ಥಿಸಿ, ಸಮ್ಮೇಳನವು ಯಶಸ್ವಿಯಾಗಲಿ, ಇದರಲ್ಲಿ ಭಾಗಿಯಾಗುವ ಎಲ್ಲ ಚೇತನಗಳೂ ಉದ್‌ಬೋಧನಗೊಳ್ಳಲಿ, ವಿಶ್ವಮಾನವರಾಗಲಿ ಎಂದು ಮತ್ತೊಮ್ಮೆ ಪ್ರಾರ್ಥಿಸುತ್ತೇನೆ.

ನಮಸ್ಕಾರ.
ಕುವೆಂಪು
ಮೈಸೂರು
೧೫ನೇ ಡಿಸೆಂಬರ್ ೧೯೮೫