ಹಿಂದೆಯೇ ಹೇಳಬೇಕಾಗಿತ್ತು ಮರೆತಿದ್ದೆ. ನಡೆದ ಒಂದು ಸಂಗತಿ ನೆನಪಿಗೆ ಬಂದಿದೆ. ಹೇಳಿಬಿಡುತ್ತೇನೆ. ಅದು ನನ್ನ ಸ್ವಭಾವದ ಮೇಲೆ ಬೆಳಕು ಬೀರುವ ಸಂಬವವುಂಟು.

ಕುಪ್ಪಳಿಯ ನಮ್ಮ ಉಪ್ಪರಿಗೆಯ ಶಾಲೆಯಲ್ಲಿ ಮೋಸಸ್ ಅವರು ಮೇಷ್ಟರಾಗಿದ್ದಾಗ ನಡೆದದ್ದು.

ಅವರು ತೀರ್ಥಹಳ್ಳಿಗೆ ಪ್ರತಿ ಭಾನುವಾರವೂ ಪ್ರಾರ್ಥನೆಗೆ ಅವರ ಪ್ರಾಟೆಸ್ಟೆಂಟ್ ಚರ್ಚಿಗೆ ಹೋಗುತ್ತಿದ್ದರು. ಚರ್ಚು ಎಂದರೆ ಆಗ ಇದ್ದದ್ದು ಉಪದೇಶಿ ಜ್ಞಾನ ಮಿತ್ರಯ್ಯನವರ ಮನೆಗೆ ಸೇರಿದಂತಿದ್ದ ಒಂದು ಉದ್ದ ಕೋಣೆಯಷ್ಟೆ. ಪೇಟೆಗೆ ಹೋದಾಗಲೆಲ್ಲ ಅವರು ತಮ್ಮ ಸ್ವಂತ ಉಪಯೋಗಕ್ಕೆಂದು ಏನನ್ನಾದರೂ ತಿಂಡಿ ಸಾಮಾನು ತಂದಿಟ್ಟುಕೊಳ್ಳುತ್ತಿದ್ದರು. ಅದನ್ನರಿತಿದ್ದು, ನಮ್ಮ ಮನೆಯಲ್ಲಿ ಓದುವುದಕ್ಕಿದ್ದ ನಮ್ಮ ನೆಂಟರ ಮಕ್ಕಳು, ನನಗಿಂತಲೂ ಅವರೆಲ್ಲ ತುಸು ದೊಡ್ಡವರೆ, ಒಮ್ಮೆ ಅವರು ತಂದಿಟ್ಟಿದ್ದ ಬಿಸ್ಕತ್ತಿನ ಇಡೀ ಡಬ್ಬವನ್ನೆ ಎಗರಿಸಿಬಿಟ್ಟರು. ಯಾರನ್ನು ವಿಚಾರಿಸಿದರೂ ನಾನಲ್ಲ ನಾನಲ್ಲ ಎಂದುಬಿಟ್ಟರು. ಬಹುಶಃ ನನಗೆ ಅರಿವಾಗದಂತೆ ಅವರಲ್ಲಿ ಕೆಲವರಿಗೆ ಹೆದರಿಸಿ ಬೆದರಿಸಿ ಶಿಕ್ಷೆ ವಿಧಿಸಿದರೆಂದು ತೋರುತ್ತದೆ. ಆದರೂ ಯಾರು ಹಾರಿಸಿದವರೆಂಬುದು ಪತ್ತೆಯಾಗಲಿಲ್ಲ.

ನಾನು ಅವರೆಲ್ಲರಿಗೂ ಚಿಕ್ಕವನಾಗಿದ್ದುದರಿಂದಲೂ ಬಹುಶಃ ನನ್ನ ನೇರ ನಡೆಯ ಮುಗ್ಧತೆಯ ಅರಿವು ಇದ್ದುದರಿಂದಲೂ ಆ ಕೆಲಸ ಮಾಡಿದವನು ಎಂದಿಗೂ ನಾನು ಆಗಿರಲಾರನೆಂದು ನನ್ನನ್ನು ವಿಚಾರಿಸಲೇ ಇಲ್ಲವೆಂದು ತೋರುತ್ತದೆ. ಆದರೆ ನಾನು ಆ ಕೆಲಸ ಮಾಡಿರದಿದ್ದರೂ ಯಾರು ಮಾಡಿದವರು ಎಂಬುದು ಗೊತ್ತಿರಬಹುದಲ್ಲ. ಹುಡುಗರು ನಮ್ಮತಮ್ಮಲ್ಲಿಯೆ ಗುಟ್ಟನ್ನು ಹಂಚಿಕೊಂಡಿರುವುದು ಸಂಭವ! ಅಥವಾ ಅಷ್ಟೊಂದು ಬಿಸ್ಕತ್ತನ್ನು ಕಬಳಿಸುವಾಗ ನನಗೂ ಒಂದು ಒಂದು ಬಿಸ್ಕತ್ತು ಕೊಟ್ಟಿರಬಾರದೇಕೆ? ಆದ್ದರಿಂದ ನನ್ನನ್ನು ಕೇಳಿದರೆ-ನಾನು ಯಾವುದನ್ನೂ ಮುಚ್ಚುಮರೆ ಮಾಡುವುದಿಲ್ಲ, ಸುಳ್ಳು ಹೇಳುವುದಿಲ್ಲ ಎಂದು ನಂಬಿ-ವಿಷಯದ ಪತ್ತೆಗೆ ಸುಳಿವು ದೊರೆಯಬಹುದು ಎಂದು ನಮ್ಮ ಐಯಪ್ಪ ಚಿಕ್ಕಯ್ಯ-ಮೈಸೂರಿನಲ್ಲಿ ಓದು ಪೂರೈಸಿ ಹಿಂತಿರುಗಿದ್ದ ತರುಣರು-ನನ್ನನ್ನು ‘ಅಪ್ರೂವರ್’ ಆಗಿ ತೆಗೆದುಕೊಳ್ಳುವ ಉದ್ದೇಶದಿಂದ ವಿಚಾರಿಸಿದರು. ನನಗೆ ಏನೂ ಗೊತ್ತಿರಲಿಲ್ಲವಾದ್ದರಿಂದ ಹಾಗೆಂದೇ ತಿಳಿಸಿದೆ. ಆದರೆ ಅವರು ಮತ್ತೆ ಮತ್ತೆ ಪುಸಲಾಯಿಸುವಂತೆ ಕೇಳತೊಡಗಿದರು. ನನಗೆ ಗೊತ್ತಿದ್ದೂ ಮರೆಮಾಚುತ್ತಿದ್ದೇನೆ ಎಂದು ಊಹಿಸಿ, ನನ್ನನ್ನು ಮುದ್ದು ಮಾಡುವಂತೆ ಎತ್ತಿಕೊಂಡು ಹೋಗಿ ಸ್ನಾನದ ಮನೆಯ ಅರೆಗೋಡೆಯ ಮೇಲೆ ಕೂರಿಸಿಕೊಂಡು, ಪುಸಲಾಯಿಸಿ ಕೇಳತೊಡಗಿದರು. ಅಲ್ಲಿ ಇತರರು ಯಾರೂ ಇರಲಿಲ್ಲ. ಮೊದಮೊದಲು ನಾನು ನಿಜವನ್ನೆ ಹೇಳಿದೆ, ನನಗೆ ಗೊತ್ತಿಲ್ಲ ಎಂದು. ಯಾರು ಕದ್ದರೋ? ಯಾವಾಗ ಕದ್ದರೋ? ಯಾರುಯಾರು ಹಂಚಿಕೊಂಡು ತಿಂದರೋ? ಯಾವುದೂ ತಿಳಿಯದು ಎಂದೆ. ಆದರೆ ಅವರು ನನ್ನನ್ನು ಇನ್ನೂ ಮುದ್ದಾಗಿ ಮಾತಾಡಿಸುತ್ತಾ ಮತ್ತೇ ಮತ್ತೇ ಹೇಳತೊಡಗಿದರು.

ಯಾರಾದರೊಬ್ಬರ ಹೆಸರನ್ನು ಹೇಳಿ ಪೀಡೆ ತಪ್ಪಿಸಿಕೊಳ್ಳಬಹುದಾಗಿತ್ತು. ನಾನು ಅವರೂ ನನ್ನಿಂದ ಅಷ್ಟನ್ನೇ ನಿರೀಕ್ಷಿಸುತ್ತಿದ್ದರು. ಆದರೆ ಯಾರ ಹೆಸರನ್ನು ಹೇಳುವುದು? ನಿಜವಾಗಿಯೂ ಕದ್ದಿದ್ದವರ ಹೆಸರನ್ನು ಹೇಳಿದರೆ ಸರಿಹೋಯ್ತು. ಆದರೆ ನಿರಪರಾಧಿಯಾದವನ ಹೆಸರನ್ನು ಹೇಳಿ, ಅವನಿಗೆ ಬಾಸುಂಡೆ ಬರುವಂತೆ ಹೊಡೆಸಿದರೆ!? ನನಗಂತೂ ಯಾರು ಏನು ಒಂದೂ ಗೊತ್ತಿಲ್ಲ. ಆದರೆ ಚಿಕ್ಕಯ್ಯ ಇಷ್ಟು ವಿಶ್ವಾಸದಿಂದ ನನ್ನಿಂದ ಅವರು ಅನ್ವೇಷಿಸುತ್ತಿದ್ದ ವಿಷಯ ಸಿಕ್ಕುತ್ತದೆ ಎಂದು ಪ್ರಶ್ನಿಸುತ್ತಿದ್ದಾರಲ್ಲಾ. ಅವರನ್ನು ನಿರಾಶೆಗೊಳಿಸುವುದು ಹೇಗೆ?

ಕಡೆಗೆ ಬಹಳ ಹೊತ್ತು ಅವರು ಪುಸಲಾಯಿಸಿದ ಮೇಲೆ ನನಗೂ ಬೇಸರವಾಗಿ ಒಂದು ನಿರ್ಧಾರಕ್ಕೆ ಬಂದೆ. ಅವರಿವರ ಹೆಸರನ್ನು ಹೇಳಿ, ಯಾರು ಯಾರನ್ನೊ ತಪ್ಪು ಮಾಡದವರನ್ನು ಕಷ್ಟಕ್ಕೆ ಸಿಕ್ಕಿಸುವುದೇಕೆ? ಚಿಕ್ಕಯ್ಯನನ್ನೂ ನಿರಾಶೆಗೊಳಿಸಬಾರದು; ಇತರರನ್ನೂ ತೊಂದರೆಗೆ ಸಿಕ್ಕಿಸಬಾರದು; ಎಂದು, ಕಡೆಗೆ ‘ನಾನೇ ಅದನ್ನು ಕದ್ದು ತಿಂದವನು’ ಎಂದುಬಿಟ್ಟೆ!

ಅವರು ಕೇಳಿದ ಕೆಲವು ಪ್ರಶ್ನೆಗಳಿಗೆ-‘ಅದು ಎಲ್ಲಿತ್ತು’ ‘ಹೇಗೆ ತೆಗೆದೆ?’ ‘ಕಾಗದದ ಡಬ್ಬಿಯೋ ಟಿನ್ನಿನ ಡಬ್ಬಿಯೋ?’ ‘ನೀನೊಬ್ಬನೆ ತಿಂದೆಯೊ’ ‘ಯಾರು ಯಾರಿಗೆ ಕೊಟ್ಟೆ?’-ನಾನು ಹೇಳುತ್ತಿದ್ದ ಉತ್ತರಗಳೆಲ್ಲ ಬರಿಯ ಸುಳ್ಳಿಯ ಕಂತೆಯೆಂಬುದು ಅರಿವಾಗಲು ಅವರಿಗೆ ಹೆಚ್ಚು ಕಾಲ ಬೇಕಾಗಲಿಲ್ಲ.

ಅಂತೂ ಅವರು ಎಂದೂ ನಿರೀಕ್ಷಿಸದೆ ಇದ್ದ ನಿರಾಶೆಯಿಂದ ನನ್ನನ್ನು ಗೋಡೆಯಿಂದಿಳಿಸಿದರು! ನನಗಂತೂ ಆ ಕೇಸು ಹೇಗೆ ಇತ್ಯರ್ಥವಾಯಿತು? ಹೇಗೆ ಕೊನೆಗೊಂಡಿತು? ಒಂದೂ ಗೊತ್ತಾಗಲಿಲ್ಲ. ಗೊತ್ತಾಗಲಿಕ್ಕೆ ಆ ವಿಚಾರ ಮತ್ತೆ ನನ್ನ ತಲೆಗೆ ಬಂದಿದ್ದರೆ ತಾನೆ!