ಪ್ರಾಥಮಿಕ ಶಾಲೆಯ ತೀರ್ಥಹಳ್ಳಿಯ ಜೀವನ ನನಗೆ ಅಷ್ಟಾಗಿ ನನಪಿಗೆ ಬರುವುದಿಲ್ಲ. ಆದರೆ ಮಾಧ್ಯಮಿಕ ಶಾಲೆಯ ಜೀವನದ ಅನೇಕ ಚಿತ್ರಗಳೂ ಘಟನೆಗಳೂ ವ್ಯಕ್ತಿಗಳೂ ಚೆನ್ನಾಗಿ ಜ್ಞಾಪಕಕ್ಕೆ ಬರುತ್ತವೆ. ಅದನ್ನು ಎ.ವಿ. ಸ್ಕೂಲ್ ಎಂದು ಕರೆಯುತ್ತಿದ್ದರು: ಅಂದರೆ, ಆಂಗ್ಲೋ ವರ್ನಾಕ್ಯುಲರ್ ಸ್ಕೂಲ್. ಅಲ್ಲೇ ‘ಲೋಆರ್ ಸೆಕೆಂಡರಿ’ವರೆಗಲ್ಲದೆ ‘ಅಪ್ಪರ್ ಸೆಕೆಂಡರಿ’ಯೂ ಇತ್ತು. ಅಪ್ಪರ್ ಸೆಕೆಂಡರಿಯವರಿಗೆ ಇಂಗ್ಲಿಷ್ ಇರುತ್ತಿರಲಿಲ್ಲ. ಅವರು ಕನ್ನಡ ಪಂಡಿತರಾಗಿ ಹೈಸ್ಕೂಲು ಮಟ್ಟಕ್ಕೆ ಪಾಠ ಹೇಳಿಕೊಡಲು ಸಾಮರ್ಥ್ಯ ಪಡೆಯುತ್ತಿದ್ದರು ಎಂದು ನನ್ನ ಭಾವನೆ.

ಬೇಸಗೆಯ ರಜದಲ್ಲಿ ನನಗೆ ಯಾವುದೊ ಒಂದು ಇಂಗ್ಲಿಷ್ ‘ಡಾಗೆರಲ್’ ಪದ್ಯವೊಂದನ್ನು (‘ಒಂದು ಎರಡು ಬಾಳೆಲೆ ಹರಡು’ ಎಂಬ ಜಾತಿಯದು) ಬಾಯಿಪಾಠ ಮಾಡಿಸಿದ್ದರು, ಉಳಿದೆಲ್ಲ ಮಕ್ಕಳಿಗಿಂತ ನಾನು ಸ್ವಲ್ಪ ಸೂಟಿ ಎಂದು! ವಾಟಗಾರು ವೆಂಕಟಣ್ಣಯ್ಯ (ಕುಪ್ಪಳಿ ಐಯಪ್ಪಗೌಡರಂತೆ ಅವರೂ ಮೈಸೂರಿಗೆ ಹಾರ್ಡ್ವಿಕ್ ಹಾಸ್ಟೆಲಿಗೆ ಓದಲು ಹೋಗಿ, ಬಹುಶಃ ಲೋಅರ್ ಸೆಕೆಂಡರಿಯಲ್ಲಿ ಪಾಸಾಗಿ, ಹಿಂತಿರುಗಿದವರು. ಅವರನ್ನು ವಾಟಗಾರು ವೆಂಕಟಪ್ಪಗೌಡರು ಎಂದೆಲ್ಲರೂ ಗೌರವಿಸುತ್ತಿದ್ದರು. ಚೆನ್ನಾಗಿ ಒಗೆದು ಬೆಳ್ಳಗೆ ಮಾಡಿದ್ದ ಪಂಚೆಯನ್ನು ಕಚ್ಚೆ ಹಾಕಿ, ಹೊಳೆಯುವ ಗುಂಡಿಗಳ ಷರ್ಟನ್ನು ಧರಿಸಿ, ನಶ್ಯ ಬಣ್ಣದ ಜಬರ್‌ದಸ್ತಿನ ಕೋಟನ್ನು ಹಾಕಿಕೊಂಡು ಮುಂದಲೆಯನ್ನು ಲಾಳಾಕಾರವಾಗಿ ಕ್ರೌರಮಾಡಿಸಿ ಹಿಂದಲೆ ಜುಟ್ಟನ್ನು ಹೊರಗಿಣುಕದಂತೆ ಒಳಕ್ಕೆ ತಳ್ಳಿ ತಲೆಗೊಂದು ಫೆಲ್ಟ್‌ಕ್ಯಾಪ್ ತೊಟ್ಟು, ನಮ್ಮ ಮನೆಗೆ ಬರುತ್ತಿದ್ದ ಅವರನ್ನು ಕಂಡರೆ ನನಗೆ ತುಂಬ ವಿಶ್ವಾಪೂರ್ವಕವಾದ ಗೌರವವಿರುತ್ತಿತ್ತು. ಅವರು ಇಂಗ್ಲಿಷ್ ಅಕ್ಷರವಂತೂ ಕವಾತಿಗೆ ನಿಂತ ಸೈನಿಕರಂತೆ ಅಚ್ಚುಕಟ್ಟಾಗಿ ಲಕ್ಷಣವಾಗಿ ತೋರುತ್ತಿದ್ದು ನನ್ನ ವಿಶೇಷ ಮೆಚ್ಚುಗೆಗೆ ಪಾತ್ರವಾಗಿತ್ತು.)

ನನ್ನನ್ನು-ಹಾಸನದ ತೋಪಿ, ದಗಲೆಕೋಟು, ಲಳಬಳ ಅಡ್ಡ ಪಂಚೆ ಸುತ್ತಿದ್ದ ನನ್ನನ್ನು-ಕೈ ಹಿಡಿದು ಹೆಡ್‌ಮಾಸ್ಟರ್ ಕೊಠಡಿಯೊಳಗೆ ಕರೆದೊಯ್ದು ನಿಲ್ಲಿಸಿದರು. ಹೆಡ್‌ಮಾಸ್ಟರೊಡನೆ ನನ್ನ ಕಡೆ ತಿರುಗಿ ನಾನು ಬಾಯಿ ಪಾಠಮಾಡಿದ್ದ ಇಂಗ್ಲಿಷ್ ಮಕ್ಕಳ ಪದ್ಯವನ್ನು ಒಪ್ಪಿಸುವಂತೆ ಹೇಳಿದರು. ನಾನು ಎದೆಯ ಮೇಲೆ ಕೈಕಟ್ಟಿಕೊಂಡು, ಕಾಲುಗಳೆರಡನ್ನೂ ಜೋಡಿಸಿ, ನೆಟ್ಟರೆ ನಿಮಿರಿ ನಿಂತು, ಎತ್ತು ಉಚ್ಚೆಹೊಯ್ದಂತೆ ಎನ್ನುತ್ತಾರಲ್ಲಾ ಹಾಗೆ, ಒದರಿಬಿಟ್ಟೆ. ಇಬ್ಬರೂ ಶಿಫಾರಸು ಕೊಟ್ಟರು. ಮತ್ತೆ, ಕಟ್ಟಿಕೊಂಡಿದ್ದ ಕೈಸಡಿಲಿಸಿ ಇಳಿಬಿಟ್ಟು ಜೋರಿಸಿದ್ದ ಕಾಲುಗಳನ್ನು ಸಹಜಸ್ಥಿತಿಗೆ ತಂದುಕೊಂಡು ಉಸಿರೆಳೆದು ಗೆದ್ದೆನಪ್ಪಾ ಎಂದು ನಿಂತೆ! ಅಂತೂ ನನ್ನ ಯೋಗ್ಯತಾಪರೀಕ್ಷೆಯಾದ ತರುವಾಯ ನಾನು ತೀರ್ಥಹಳ್ಳಿಯ ಎ.ವಿ.ಸ್ಕೂಲಿನ ವಿದ್ಯಾರ್ಥಿಯಾದೆ.

ಈ ಸಾರಿ ನಾವು ಪೇಟೆಯ ಬೀದಿಯಲ್ಲಿದ್ದ ಮಳಿಗೆಯಂತಹ ಮನೆಯಲ್ಲಿತರದೆ, ಅಂದಿನ ತೀರ್ಥಹಳ್ಳಿಗೆ ಪೇಟೆಯಾಚೆ ಎಂಬಂತೆ ದೂರವಾಗಿದ್ದು ಶಿವಮೊಗ್ಗ ಕಡೆ ಹೋಗುವ ಹೆದ್ದಾರಿಯ ಎಡಪಕ್ಕದ ಒಂದು ಬಾಡಿಕೆ ‘ಮನೆ’ಯಲ್ಲಿದ್ದೆವು. ನಾವು ಅದನ್ನು ‘ಮನೆ’ ಎಂದು ಕರೆಯುತ್ತಿದ್ದೆವಾದರೂ ವಾಸ್ತವವಾಗಿ ಅದೊಂದು ಹುಲ್ಲು ಗುಡಿಸಲು, ಸಾಲಾಗಿದ್ದ ಮೂರು ಅಂಕಣದಲ್ಲಿ ಅಂಕಣಕ್ಕೊಂದು ಕೋಣೆ. ನಡುವಣ ಕೋನೆಯ ‘ಜಗಲಿ!’ ಬಲಪಕ್ಕದ ಕೋಣೆ ಅಡುಗೆ ಮನೆ! ಎಡದ ಕೋಣೆಯೆ ನಾವು ಐದಾರು ಹುಡುಗರು ಇದ್ದು, ಓದಿಕೊಳ್ಳುತ್ತಿದ್ದು, ಮಲಗುತ್ತಿದ್ದು, ನಮ್ಮೆಲ್ಲರ ಹಾಸಗೆ ಪೆಟ್ಟಿಗೆ ಸಾಮಾನುಗಳನ್ನು ಒಳಕೊಳ್ಳುತ್ತಿದ್ದ ಗಡಂಗು ಅಥವಾ ಕೂಡು ಹಟ್ಟಿ! ಆ ಕೋಣೆಗಳಿಗೆ ಅಕ್ಷರಶಃ ‘ಗವಾಕ್ಷ’ ಎನ್ನಬಹುದಾದ ಸಣ್ಣ ಬೆಳಕಂಡಿಗಳಿದ್ದುವು. ‘ಇದ್ದುವು’ ಎಂಬ ಬಹುವಚನ ಔಪಚಾರಿಕ ಮತ್ತು ಸಮಷ್ಟಿಸೂಚಕ. ವಾಸ್ತವವಾಗಿ ಒಂದೆರಡು ಕೋಣೆಗೆ ಇದ್ದುದು ಏಕೈಕ ಗವಾಕ್ಷ! ಆ ಕಂಡಿಗಳಿಗೊ ಕಳ್ಳರು ಪ್ರವೇಶಿಸದಂತೆ ತಡೆಯಲೆಂದು ತೋಳುದಪ್ಪದ ಮರದ ಸರಳುಗಳು! ಕಳ್ಳರ ಮಾತೇಕೆ? ಗಾಳಿ ಬೆಳಕುಗಳಿಗೂ ಕಷ್ಟವೆ ಆಗುತ್ತಿತ್ತು, ಪ್ರವೇಶ ದೊರೆಯುವುದಕ್ಕೆ! ಕತ್ತಲೆ ಮಾತ್ರ ಅಲ್ಲಿ ನಿತ್ಯ ನಿವಾಸಿ!

ನಾವು ‘ಮನೆ’ ಎಂದು ಕರೆದುಕೊಳ್ಳುತ್ತಿದ್ದ ಆ ಹುಲ್ಲು ಗುಡಿಸಲಿಗೆ ನಾನು ಪ್ರವೇಶಿಸಿದಂದು ಆ ಕ್ಷುದ್ರ ಕಿಟೀರವೂ ನನ್ನ ಜೀವನವನ್ನು ಎಷ್ಟು ರುದ್ರ ಭಯಂಕರವಾಗಿ ಪ್ರವೇಶಿಸಿತ್ತು! ಮುಂದೆ ಗೃಹಕಲಹ ನಿಮಿತ್ತ ಮನೆಬಿಟ್ಟು ಹೊರಟು ಬರುವ ನನ್ನ ತಂದೆಗೆ ಅದು ಮರಣಸ್ಥಾನವಾಗುತ್ತದೆ ಎಂಬ ಘೋರ ಭವಿಷ್ಯ ಅವರ ಗೂಬೆಗತ್ತಲಲ್ಲಿ ಅಡಗಿ ನಮ್ಮ ಬಾಲಕಪ್ರಜ್ಞೆಗೆ ಅಗೋಚರವಾಗಿತ್ತು!

ತೀರ್ಥಹಳ್ಳಿಯಲ್ಲಿ ನಮ್ಮ ವಿದ್ಯಾರ್ಥಿ ಜೀವನ ಅಷ್ಟೇನೂ ಅತಿಶಯವಾಗಿ ವಿದ್ಯೆಗೆ ಸಂಬಂಧಪಟ್ಟುದಾಗಿರಲಿಲ್ಲ. ದಿನವೂ ಗೊತ್ತಾದ ಕಾಲಕ್ಕೆ ಕ್ಲುಪ್ತವಾಗಿಯೋ ಅಕ್ಲುಪ್ತವಾಗಿಯೋ ಸ್ಕೂಲಿಗೆ ಹೋಗುವುದು. ಬೆಂಚುಗಳ ಮೇಲೆ ಕುಳಿತು ಮೇಷ್ಟರು ಬರುವ ತನಕಿತರ ಹುಡುಗರೊಡನೆ ಸ್ನೇಹವೋ ಜಗಳವೋ ಆಟವೋ ತಂಟೆಯೋ ಏನಾದರೊಂದರಲ್ಲಿ ಮೈಮರೆತಿರುವುದು. ಉಪಾಧ್ಯಾಯರು ಬಂದೊಡನೆ ಆಜ್ಞಾಪ್ರಕಾರ ಪದ್ಧತಿಯಂತೆ ಎದ್ದುನಿಂತು ಅವರು ಕುರ್ಚಿಯ ಮೇಲೆ ಕೂತೊಡನೆ ಕೂರುವುದು. ‘ಬೆಲ್’ ಹೊಡೆದಕೂಡಲೆ ಹೋ ಎಂದು ಉದ್‌ಘೋಷಿಸುತ್ತಾ ಗುಂಪಿನಲ್ಲಿ ನೂಕು ನುಗ್ಗಲು ನುಗ್ಗಿ ಮನೆಯ ಕಡೆಗೆ ಧಾವಿಸುವುದು. ಅಲ್ಲಿ ಕೊಡುವ ತಿಂಡಿ ತಿಂದು, ಕಾಫಿ ಕುಡಿದು, ಮತ್ತೆ ಚೆಂಡಾಟಕ್ಕೊ, ಬುಗುರಿ ಗೋಲಿ ಚಿನ್ನಿಗಳ ಆಟಕ್ಕೊ, ‘ಚಾಟರ ಬಿಲ್ಲು’ (ಕ್ಯಾಟಪುಲ್ಟ್ ಎಂಬ ರಬ್ಬರ್‌ಬಿಲ್ಲಿಗೆ ತದ್ಭವವಂತೆ!) ತೆಗೆದುಕೊಂಡು ಕಾಡಿನ ಕಡೆಗೆ ಹಕ್ಕಿಗಿಕ್ಕಿ ಬೇಟೆಗೋ ಹೊರಡುವುದು. ಆಗಾಗ ವಿಶೇಷವಾಗಿ ರಜಾದಿನಗಳಲ್ಲಿ, ಹತ್ತಿರದಲ್ಲಿದ್ದ ಕುಶಾಲವತಿಗೆ ಬಟ್ಟೆ ಒಗೆದುಕೊಳ್ಳುವ ನೆವ ಹೇಳಿ, ಈಜಲೂ ನೀರಾಟವಾಡಲೂ ಹೋಗುವುದು. ಕತ್ತಲಾಗುವವರೆಗೆ, ಅಂದರೆ ಸಾಧ್ಯವಾದಷ್ಟು ಕಣ್ಣಿಗೆ ಪದಾರ್ಥಗಳು ಕಾಣುವ ಸಾಧ್ಯತೆ ಇರುವವರೆಗೆ, ಹೊರಗಡೆಯೆ ಅಲೆಯುತ್ತಿದ್ದು ಮನೆಗೆಹಿಂತಿರುಗುವುದು. ಹೀಗೆ ಸಾಗಿತ್ತು ನಮ್ಮ ದೈನಂದಿನ ಸಾಮಾನ್ಯ ಜೀವನ. ಆದರೆ ಕಾಲವೆಲ್ಲವೂ ಸಾಮಾನ್ಯ ಜೀವನದ ದಿನಗಳಾಗುವುದಿಲ್ಲವಷ್ಟೆ? ಬಾಲಕರ ದೃಷ್ಟಿಯಿಂದ ‘ವಿಶೇಷ ಘಟನೆ’ಯ ದಿನಗಳೂ ಸಾಕಷ್ಟಿರುತ್ತಿದ್ದುವು!

ನನಗೆ ಗುಡ್ಡ ಕಾಡುಗಳಲ್ಲಿ ಗದ್ದೆ ತೋಟಗಳಲ್ಲಿ ಹೊಳೆತೊರೆಗಳೆಡೆ ಅಲೆಯುವುದೆಂದರೆ ಚಿಕ್ಕಂದಿನಿಂದಲೂ ಇಷ್ಟ. ಬೇಟೆ ಅದಕ್ಕೊಂದು ನೆಪವಾಗಿರುತ್ತಿತ್ತು. ಕುಪ್ಪಳಿಯಲ್ಲಿ ಕೋವಿ ತೆಗೆದುಕೊಂಡು ಕಾಡಿಗೆ ಹೋಗುವ ದೊಡ್ಡವರೊಡನೆ ಗೋಗರೆದು ಕಾಡಿಸಿ ಪೀಡಿಸಿ, ಷಿಕಾರಿಗೆ ಹೋಗುತ್ತದ್ದೆ. ಆದರೆ ತೀರ್ಥಗಳ್ಳಿಯಲ್ಲಿ? ರಬ್ಬರ್ ಬಿಲ್ಲು ಹಿಡಿದು, ಜೊತೆಗೆ ಯಾರಾದರೂ ಸಹಪಾಠಿಗಳು ಬಂದರೆ ಒಟ್ಟಾಗಿ, ಇಲ್ಲದಿದ್ದರೆ ಒಬ್ಬೊಂಟಿಗನಾಗಿ ಊರನ್ನು ಸುತ್ತುವರಿದಿದ್ದ ಸಮೀಪದ ಬನಗಳಲ್ಲಿ ಹಕ್ಕಿಗೋ ಅಳಿಲಿಗೋ ಮಂಗನಿಗೋ ಹಾವಿಗೋ ಗುರಿಯಿಡುತ್ತಾ, ಬೇಟೆಯ ಸಾಹಸವನ್ನು ಅನುಭವಿಸುತ್ತಾ ಅಲೆಯುತ್ತಿದ್ದೆ. ಆದರೆ ಬೆಟ್ಟ ಕಾಡುಗಳಲ್ಲಿ ತಿರುಗಾಡುವ ನನ್ನ ಆಜನ್ಮ ಚಪಲತೆಗೆ ‘ಪ್ರಕೃತಿ ಪ್ರೇಮ’ ‘ನಿಸರ್ಗಸೌಂದರ್ಯಾಭಿರುಚಿ’ ಎಂದು ನಾಮಕರಣ ಮಾಡಿಸಿಕೊಳ್ಳುವಷ್ಟು ಯೋಗ್ಯತೆಗೆ ಅರ್ಹವಾಗಿತ್ತೆಂದು ನಾನು ನಂಬಲಾರೆ. ಅದು ಒಂದು ತರಹ ಐಂದ್ರಿಯ ಸುಖಾನುವವಾಗಿತ್ತೆ ಹೊರತು ಬುದ್ದಿ ಪೂರ್ವಕವಾದ ಸೌಂದರ್ಯ ಪ್ರಜ್ಞೆಯ ಆಸ್ವಾದವಾಗಿರಲಿಲ್ಲ. ಹಸಿದ ಪ್ರಾಣಿಗೆ ಹಸುರು ಮೇಯುವಾಗ ಒಂದು ಸುಖಾನುಭವವಾಗುತ್ತದೆ; ಅದಕ್ಕೆ ಹಸುರಿನ ಬಣ್ಣದ ಚೆಲುವಾಗಲಿ ಅದರ ಕೋಮಲತೆಯಾಗಲಿ ಬುದ್ಧಿಗಮ್ಯವಲ್ಲ. ಹಸುರಿನ ಚೆಲುವೂ ಕೋಮಲತೆಯೂ ಹುಲ್ಲು ಮೇಯುವ ಪ್ರಾಣಿಯ ಅಂತಃಪ್ರಜ್ಞೆಗೆ ಸಂಪೂರ್ಣ ಅಗಮ್ಯವೇನಲ್ಲ. ಸಂವೇದನೆ ಸಂಪೂರ್ಣ ಅಗಮ್ಯವಾಗಿ ಇದ್ದಿದ್ದರೆ ಅದು ಹುಲ್ಲು ಅಷ್ಟು ಹಸನಾಗಿ ಬೆಳೆದಿರದಿದ್ದ ಸ್ಥಳವನ್ನು ತಿರಸ್ಕರಿಸಿ ಈ ‘ಸುಂದರ ಕೋಮಲ’ ಸ್ಥಾನಕ್ಕೇ ನುಗ್ಗಿ ಬರುತ್ತಿರಲಿಲ್ಲ. ಆದರೆ  ಈ ಸೌಂದರ್ಯ ಈ ಕೋಮಲತೆಗಳು ಆ ಪ್ರಾಣಿಗೆ ತನ್ನ ಆಹಾರದ ಸಾರದ ಮತ್ತು ಸ್ವಾದುತ್ವದ ಅಂಗಗಳಾಗಿ ಇಂದ್ರಿಯಗೋಚರವಾಗಿ ಅದನ್ನು ಆಹ್ವಾನಿಸುತ್ತವೆ. ಅದು ‘ಅಭಿರುಚಿ’ಗಿಂತಲೂ ಹೆಚ್ಚಾಗಿ ‘ರುಚಿ’ಯಾಗಿರುತ್ತದೆ. ಅಂತಹ ಅಬುದ್ಧಿಪೂರ್ವಕವಾದ ಜೀವಪೌಷ್ಟಿಕ ಸಾಮಗ್ರಿಯಾಗಿತ್ತೆಂದು ತೋರುತ್ತದೆ, ನನಗೆ ಅಂದು ಆ ‘ಪ್ರಕೃತಿ ಸೌಂದರ್ಯ’! ನಾನು ‘ಪ್ರಕೃತಿ’ಯನ್ನು ಸವಿಯುತ್ತಿದ್ದೆ ಎನ್ನುವುದಕ್ಕೆ ಬದಲಾಗಿ ‘ಪ್ರಕೃತಿ’ಯೆ ನನ್ನನ್ನು ಸವಿಯುತ್ತಿದ್ದಳು ಎನ್ನಬಹುದಾಗಿತ್ತೇನೋ?! ಎಂತೂ ಸಹ್ಯಾದ್ರಿಯ ನೈಸರ್ಗಿಕ ರಮಣೀಯತೆಯ ಸುವಿಶಾಲ ಸರೋವರದಲ್ಲಿ ನನ್ನ ಬಾಲಚೇತನ ಮರಿ ಮೀನಾಗಿ ಓಲಾಡಿ ತೇಲಾಡುತ್ತಿತ್ತು.

ಒಂದು ಬೈಗು. ಸ್ಕೂಲಿನಿಂದ ಮನೆಗೆ ಬಂದು ಇತರರೊಡನೆ ತಿಂಡಿ ತಿಂದೆ. ಹೊರಗೆ ಅಲೆಯಲು ಹೋಗುವ ಮನಸ್ಸು ಕುದಿಯತೊಡಗಿತು. ಜೊತೆಗೆ ಸಹಪಾಠಿಗಳು ಯಾರೊಬ್ಬರೂ ನನ್ನೊಡನೆ ಬರಲೊಪ್ಪಲಿಲ್ಲ. ನಾನೊಬ್ಬನೆ ಹೊರಟೆ ರಬ್ಬರು ಬಿಲ್ಲನ್ನು ಕೈಯಲ್ಲಿ ಹಿಡಿದು, ಕಲ್ಲಿಲ ಚೀಲವನ್ನು ಬಗಲಿಗೆ ಸಿಕ್ಕಿಸಿಕೊಂಡು, (ಆ ಕಲ್ಲಿನ ಚೀಲ ಅದರ ಹಿಂದಿನ ಅವತಾರದಲ್ಲಿ ನನ್ನದೆ ಇಜಾರದ ಒಂದು ಕಾಲಾಗಿತ್ತು. ಇಜಾರ ಮಂಡಿಯ ಹತ್ತಿರ ಸವೆದು ತೂತುಬೀಳಲು ಅದನ್ನು ಅಲ್ಲಿಗೇ, ಹರಿದು ಚಡ್ಡಿಯನ್ನಾಗಿ ಮಾಡಿ ಹಾಕಿಕೊಂಡಿದ್ದೆ. ಉಳಿದ ಕತ್ತರಿಸಿದ ಎರಡು ಕಾಲಿನ ಎರಡು ಅರ್ಧ ಭಾಗಗಳನ್ನು ಒಂದು ತುದಿ ಹೊಲಿದು ‘ಚಾಟರ್‌ಬಿಲ್ಲಿ’ಗೆ ಉಪಯೋಗಿಸಲು ಹರಳುಕಲ್ಲು ತುಂಬುವ ಚೀಲಗಳನ್ನಾಗಿಸಿದ್ದೆ. ಭಾರವಾಗಿದ್ದ ಚೀಲವನ್ನು ಬಗಲಿಗೆ ಸಿಕ್ಕಿಸಿಕೊಳ್ಳಲು ಅನುಕೂಲವಾಗುವಂತೆ ನೇಲುಹಗ್ಗಗಳನ್ನು ಪಟ್ಟಿಯಾಗಿ ಹೊಲಿದಿದ್ದೆ.)

ಸೂರ್ಯ ಆಗತಾನೆ ಪಶ್ಚಿಮದಿಕ್ಕಿನ ಕಾಡುಗಳಲ್ಲಿ ಕಣ್ಮರೆಯಾಗಿದ್ದ ಸಂಧ್ಯಾರಾಗ ಹಸುರನ್ನೆಲ್ಲ ಮೀಯಿಸಿತ್ತು. ಗೂಡುಗೊತ್ತುಗಳಿಗೆ ಹಿಂತಿರುಗುತ್ತಿದ್ದ ಹಕ್ಕಿಗಳ ತರತರಹ ಉಲಿ ಬನದ ನೀರವತೆಗೆ ರಾಗರೋಮಾಂಚನವೀಯುತ್ತಿತ್ತು. ಅದು ಹೊರತು ಬೇರೆ ಯಾವ ಸದ್ದೂ ಇರಲಿಲ್ಲ. ನಾನು ಹೋಗುತ್ತಿದ್ದ ಕಾಡು ಒಂದು ಪ್ರಶಾಂತ ವಾತಾವರಣದಿಂದ ಧ್ಯಾನಮಯವಾಗಿತ್ತು. ನನ್ನ ಕೈ ಬಿಲ್ಲನ್ನು ಹಿಡಿದಿದ್ದರೂ, ಕಣ್ಣು ಗುರಿಯನ್ನು ಹುಡುಕುವ ಕಾರ್ಯದಲ್ಲಿ ಮಗ್ನವಾದಂತಿದ್ದರೂ ಮನಸ್ಸು ಏನೇನನ್ನೂ ಮೆಲುಕುಹಾಕುತ್ತಿತ್ತು. ಒಮ್ಮೊಮ್ಮೆ ಅದು ತುಂಬ ಗಹನವೂ ಉನ್ನತವೂ ಆದ ವಿಚಾರಗಳ ಕಡೆಗೂ ಏರಿ ಇಳಿಯುತ್ತಿತ್ತು. ಪಾಪ, ಪುಣ್ಯ, ದೇವರು, ಜಗತ್ತು, ಸೃಷ್ಟಿ, ವಿಧಿ, ಕಾಡು, ಬೆಟ್ಟ, ಸೂರ್ಯ, ಚಂದ್ರ-ಹೀಗೆಲ್ಲ ಅಲೆಯುತ್ತಿತ್ತು ಆಲೋಚನೆ, ಅಥವಾ ಅದರ ಅಂಬೆಗಾಲಿಕ್ಕುವ ಒಂದು ಮನಃಸ್ಥಿತಿ!

ಅಷ್ಟರಲ್ಲಿ ಬಾಯಲ್ಲಿದ್ದ ಪೆಪ್ಪರಮೆಂಟು ಕರಗಿ ಖರ್ಚಾಗಿತ್ತು. ಮತ್ತೆ ಕೈ ತನಗೆ ತಾನೆ ಸ್ವಯಂಚಾಲಿತವಾಗಿ ಜೇಬಿನೊಳಗೆ ತೂರಿ ಹುಡುಕಿತು. ಇಲ್ಲ, ಪೆಪ್ಪರಮೆಂಟೆಲ್ಲ ಮುಗಿದು ಹೋಗಿವೆ! ಆದರೆ, ತಿಂಡಿಯ ಕೊಸರಾಗಿ ಬಂದಿದ್ದ ಒಂದು ಬಾಳೆಯ ಹಣ್ಣು ಜೇಬಿನ ಆಶ್ರಯ ಪಡೆದಿತ್ತು. ಕೈ ಅದನ್ನು ಈಚೆಗೆ ಎಳೆಯಿತು. ಸಿಪ್ಪೆಯನ್ನು ಸ್ವಲ್ಪಸ್ವಲ್ಪವಾಗಿ ಸುಲಿಯುತ್ತಾ ಅಷ್ಟಷ್ಟೆ ಭಾಗವನ್ನು ಕಚ್ಚಿಕಚ್ಚಿ ತಿನ್ನತೊಡಗಿತು ಬಾಯಿ. ಇಷ್ಟೆಲ್ಲ ಅನೈಚ್ಛಿಕವೊ ಎಂಬಂತಹ ಕ್ರಿಯೆ ನಡೆಯುತ್ತಿದ್ದಾಗ ಕಾಲುಗಳು ನಡೆಯುವ ತಮ್ಮ ಕೆಲಸವನ್ನು ಮಾಡುತ್ತಲೆ ಇದ್ದವು; ಕಣ್ಣುಗಳು ಪೊದೆ ಮರಗಳಲ್ಲಿ ದಿಟ್ಟಿನಟ್ಟು ಹುಡುಕುತ್ತಲೆ ಇದ್ದುವು; ಮನಸ್ಸೂ ತನ್ನ ಪಾಡಿಗೆ ತಾನು ಚಿಂತನ ಕಾರ್ಯದಲ್ಲಿ ತೊಡಗಿಯೆ ಇತ್ತು;

ಈ ಕಾಡು, ಈ ಗುಡ್ಡ ಸಾಲು, ಈ ಮೋಡ, ಈ ಆಕಾಶ ಇದನ್ನೆಲ್ಲ ಮಾಡಿದ್ದಾನಲ್ಲಾ ದೇವರು, ಅವನು ಎಂತಹ ಅದ್ಭುತ ಶಕ್ತಿಶಾಲಿಯಾಗಿರಬೇಕು? ಭಾವಿಸುತ್ತೇನೆ. ಎಲ್ಲ ಅವನ ಇಚ್ಛೆಯಂತೆಯೆ ಆಗದೆ. ಅವನ ಇಚ್ಛೆಗೆ ಎಲ್ಲವೂ ಅಧೀನ. ಈ ಪೊದೆಯ ಬಳಿ ಹಸುರಿನ ಮೇಲೆ ಅರ್ಧ ಕಾಣಿಸಿಕೊಂಡು ಇಲ್ಲಿ ಬಿದ್ದಿರುವ ಈ ಕಲ್ಲು ಗುಂಡು ಇಲ್ಲಿಯೇ ಹೀಗೆಯೇ ಬಿದ್ದಿರಬೇಕೆಂದು ದೇವರು ನಿಯಮಿಸಿದ್ದಾನೆ. ಆದ್ದರಿಂದಲೆ ಅದು ಇಲ್ಲಿಯೇ ಬಿದ್ದಿದೆ, ಇಲ್ಲಿಂದ ಹಂದುವುದಿಲ್ಲ. ಎಲ್ಲ ಭಗವಂತನ ವಜ್ರನಿಯಮಕ್ಕೆ ಅಧೀನ. ಸ್ವತಂತ್ರೇಚ್ಛೆ ಎಲ್ಲಿಯೂ ಇಲ್ಲ. ಯಾರಿಗೂ ಇಲ್ಲ-ಇದ್ದಕ್ಕಿದ್ದ ಹಾಗೆ ಹುಡುಗನ ಮನಸ್ಸು ಸೆರೆಯಲ್ಲಿ ಸಿಕ್ಕಿಬಿದ್ದ ಸಿಂಹದಂತಾಗಿ ಕಂಬಿಗಳನ್ನೆಲ್ಲ ಕಿತ್ತು ಬಿಡುವಂತೆ ನುಗ್ಗತೊಡಗಿತು. ಛೆಃ ಇದೆಂತಹ ದಾಸ್ಯ?

ಅಷ್ಟು ಹೊತ್ತಿಗೆ ಬಾಳೆಯಹಣ್ಣು ತಿಂದು ಮುಗಿದು, ಸಿಪ್ಪೆ ಮಾತ್ರ ಕೈಯಲ್ಲಿತ್ತು. ಕೈ ಯಾಂತ್ರಿಕವಾಗಿ ಅದನ್ನು ಬಲವಾಗಿ ಎಸೆಯಿತು. ಅದು ತುಸುವೆ ದೂರದಲ್ಲಿದ್ದ ಒಂದು ಮುಳ್ಳುಪೊದೆಯ ಹರೆಗೆ ತಗುಲಿ ಒಂದೆರಡು ಕ್ಷಣ ಅಲ್ಲಿ ನೇತಾಡಿ, ಕೆಳಗೆ ನೆಲದ ಹಸುರಿಗೆ ಬಿತ್ತು. ಕಾಲು ತನ್ನ ಪಾಡಿಗೆ ತಾನು ಮುಂದುವರಿಯಿತು. ಹತ್ತಿಪ್ಪತ್ತು ಮಾರು.

ಭಗವಂತಹ ನಿರುಂಕುಶೇಚ್ಛೆಯ ಪ್ರಭುತ್ವದ ಮೇಲೆ ದಂಗೆಯೆದ್ದಿದ್ದ ನನ್ನ ಮನಸ್ಸು, ಒಡೆನೆಯೆ, ಆಗತಾನೆ ನಡೆದಿದ್ದ ಘಟನೆಯ ನಿದರ್ಶನವನ್ನು ಆಶ್ಯಯಿಸಿ ಪ್ರತಿಭಟಿಸಲು ಹೆಡೆಯೆತ್ತಿ ನಿಂತಿತು.

ನೋಡಿದೆಯಾ ದೇವರ ಇಚ್ಛೆಯನ್ನು ಉಲ್ಲಂಘಿಸಲು ಯಾರಿಗೂ ಎಂದಿಗೂ ಸಾಧ್ಯವಿಲ್ಲ. ಈ ಬಾಳೆಹಣ್ಣಿನ ಸಿಪ್ಪೆ ಇಲ್ಲಿಯೇ ಇಂಥ ಜಾಗದಲ್ಲಿಯೆ ಬೀಳಬೇಕೆಂದು ಅವನು ನಿಯಮಿಸಿಬಿಟ್ಟಿದ್ದ. ಆದ್ದರಿಂದ ಅದು ಅಲ್ಲಿಯೇ ಬೀಳಬೇಕಾಯಿತು. ಅದು ಯಾರ ತೋಟದ್ದೊ? ಯಾರು ಯಾರಿಗೆ ಮಾರಿದ್ದೊ? ಅದನ್ನು ನಮ್ಮ ಮನೆಯವರು ತಂದು, ನೀನು ತಿಂದು, ಅದರ ಸಿಪ್ಪೆಯನ್ನು ಇಲ್ಲಿಗೇ ತಂದು ಹಾಕಭೇಕಾಯಿತು. ಆ ವಿಧಿಯ ಇಚ್ಛೆಗೆ ನೀನೆ ವಾಹಕ ಗುಲಾಮ! ನೀನು ಮನೆಯಲ್ಲಿಯೇ ಅದನ್ನು ತಿಂದು ಅಲ್ಲಿಯೆ ಎಸೆಯಬಹುದಾಗಿತ್ತು. ಆದರೆ ಅದರ, ಆ ನೂರಾರು ಗೊನೆಗಳಲ್ಲಿ ಒಂದು ಗೊನೆಯ ನೂರಾರು ಹಣ್ಣುಗಳಲ್ಲಿ ಒಂದು ಯಃಕಶ್ಚಿತ ಹಣ್ಣಿನ ಆ ಸಿಪ್ಪೆ ಇಲ್ಲಿಯೇ ಬೀಳಬೇಕೆಂದು ವಿಧಿ ಇಚ್ಛಿಸಿದ್ದುದರಿಂದ ನೀನು ಇಂದು ಸಂಜೆ ಶಾಲೆಯಿಂದ ಬಂದು ತಿಂಡಿಯ ನೆವದಿಂದ ಅದನ್ನು ಇಲ್ಲಿಗೆ ತಂದು ಇಲ್ಲಯೆ ಹಾಕಬೇಕಾಯಿತು. ಹಾಗಿದೆ ಭಗವಂತನ ಅಲುಗಾಡದ ಕಟ್ಟಳೆ.

ಹುಡುಗನ ಮನಸ್ಸು ರೇಗಿತು. ನಾನೇನು ವಿಧಿಯ ಗುಲಾಮನಲ್ಲ. ವಿಧಿಯ ಇಚ್ಛೆಗೆ ಭಂಗ ತರಲೇಬೇಕು.

ಸೂರ್ಯಚಂದ್ರ ಪೃಥ್ವಿ ನಕ್ಷತ್ರಾದಿಗಳನ್ನು ಸೃಷ್ಟಿಸಿ ನಿಯಮ ಬಂಧನದಲ್ಲಿಟ್ಟಿರುವ ಆ ದುಷ್ಟವಿಧಿಯನ್ನು ಭಂಗಿಸುವ ದೃಢಛಲದಿಂದ, ಸಿಪ್ಪೆಯನ್ನೆಸೆದು ಅಷ್ಟು ದೂರ ಹೋಗಿದ್ದ ನಾನು, ಮತ್ತೆ ಹಿಂದಕ್ಕೆ ಬಂದೆ! ಸಿಪ್ಪೆ ಬಿದ್ದಿದ್ದ ಸ್ಥಳಕ್ಕೆ ಧಾವಿಸಿ ಹುಡುಕಿದೆ, ಅದು ಹಸುರು ಹುಲ್ಲಿನಲ್ಲಿ ಅಡಗಿ ಬಿದ್ದಿತ್ತು. (ಪಾಪ! ಆ ಸೆರೆಮನೆಯ ಭಯಂಕರ ಶಿಕ್ಷೆಗೆ ಗೋಳಿಡುತ್ತಾ!) ಸೆರೆಬಿಡಿಸುವವನಂತೆ ಅದನ್ನು ಎತ್ತಿಕೊಂಡೆ! ಮತ್ತೆ ಸ್ವಲ್ಪ ದೂರ ನಡೆದು ಅದನ್ನು ಬೇರೊಂದು ಕಡೆಗೆ ಎಸೆದು, ವಿಜಯಿಯ ಹೆಮ್ಮೆಯಿಂದ ಮುಂದುವರಿದೆ.

ಆದರೆ ಆ ಹೆಮ್ಮೆ ಅಲ್ಪಾಯುವಾಗಿ ಬಿಟ್ಟಿತು! ಹಾಳು ವಿಧಿ ಮೂದಲಿಸ ತೊಡಗಿತು. ಆ ಬಾಳೆಹಣ್ಣಿನ ಸಿಪ್ಪೆ ನಾನು ಮತ್ತೆ ಎಸೆದು ಈಗ ಅದು ಬಿದ್ದಿರುವ ಜಾಗದಲ್ಲಿಯೆ ಅದು ಬೀಳಬೇಕೆಂದು ವಿಧಿಯ ಇಚ್ಛೆಯಿದ್ದುದರಿಂದಲೆ ನಾನು ಪುನಃ ಅದರ ದಾಸನಂತೆ ಹಿಂದಕ್ಕೆ ಹೋಗಿ ಅದನ್ನು ತಂದು ಇಲ್ಲಿ ಎಸೆಯಬೇಕಾಯಿತಲ್ಲಾ! ನನಗೆ ತಲೆ ಪರಚಿಕೊಳ್ಳುವಷ್ಟು ಸಿಟ್ಟು ಬಂದಿತು. ನನ್ನ ಅಸಹಾಯಕತೆಗೆ ನಾನೆ ದುಃಖಿಸಿ ಕಣ್ಣು ಹನಿತುಂಬಿತು. ಸೋಲಿಗೂ ಅವಮಾನಕ್ಕೂ ಅಳು ಬರುವಂತಾಯ್ತು. ಈ ಬಿದ್ದಿರುವ ಜಾಗದಿಂದಲೂ ಅದನ್ನು ತೆಗೆದು ಬೇರೆ ಕಡೆಗೆ ಬಿಸಾಡಬೇಕು ಎಂದೆನಿಸಿತು. ಆದರೆ ಏನು ಪ್ರಯೋಜನ? ಮತ್ತೆ ವಿಧಿಯ ದಾಸನಾಗಿಯೆ ಕೆಲಸ ಮಾಡಿದಂತಾಗುತ್ತದೆ. ಥೂ! ಹಾಳು ವಿಧಿಯ ಬಾಯಿಗೆ ಮಣ್ಣು ಹಾಕಲಿ! ಏನಾದರೂ ಸಾಯಲಿ! ನನಗೇಕೆ? ಎಂದೆಲ್ಲ ಶಪಿಸಿಬಿಟ್ಟು, ಮನಸ್ಸಿನಿಂದ ಅದನ್ನು ತಳ್ಳಿ, ರಬ್ಬರುಬಿಲ್ಲಿಗೆ ಕಲ್ಲುಹರಳು ಹಾಕಿಕೊಂಡು, ಬೇಗಬೇಗ ಕತ್ತಲಾಗುವುದರೊಳಗೆ ಮನೆ ಸೇರಿಕೊಳ್ಳಲು ಧಾವಿಸಿದೆ! ಹೊತ್ತುಮೀರಿ ಹೋದರೆ, ಹಾಳುವಿಧಿ, ಮನೆ ಮೇಷ್ಟರ ಕೈಲಿ ಛಡಿ ಏಟು ಹಾಕಿಸುವ ಹುನಾರು ಮಾಡಿದೆಯೋ ಏನೋ ಯಾರು ಬಲ್ಲರು?