ಒಂದು ಸಂಜೆ ಶಾಲೆ ಮುಗಿಯುವ ಘಂಟೆ ಹೊಡೆದೊಡನೆಯೆ ಕಟ್ಟೆಯೊಡೆದು ಕೆರೆಯ ನೀರು ಭೋರೆಂದು ಹೊರಗೆ ಧುಮುಕಿ ಹರಿದು ನುಗ್ಗುವಂತೆ ಬಾಲಕರೆಲ್ಲ ಸಂತೋಷ ಘೋಷಗೈಯುತ್ತಾ ತಂತಮ್ಮ ಮನೆಯ ಕಡೆಗೆ ಧಾವಿಸತೊಡಗಿದ್ದರು. ಅಷ್ಟರಲ್ಲಿ ಎರಡು ದೊಡ್ಡ ಹಾವುಗಳು ಹಾದಿಯಲ್ಲಿ ದಾಟಿ ಬಂಗಲೆಯ ಬಯಲಿನತ್ತ ಹೋಗುತ್ತಿದ್ದುದು ಕಣ್ಣಿಗೆ ಬಿದ್ದು ಪೇಟೆಯ ಹುಡುಗರೆಲ್ಲ ಹೆದರಿ ಕೂಗಿಕೊಂಡು ಓಡಿದರು. ಆದರೆ ನಾವು-ನಾನು, ಕಡೆಮಕ್ಕಿ ಸುಬ್ಬಣ್ಣ, ಕುಪ್ಪಳಿ ಮಾನಪ್ಪ-ದೊಡ್ಡ ದೊಡ್ಡ ಕಲ್ಲುಗಳನ್ನು ಕೈಗೆ ತೆಗೆದುಕೊಂಡು ಅವುಗಳನ್ನು ಅಡ್ಡಗಟ್ಟಿ ಹೊಡೆಯತೊಡಗಿದೆವು. ಅವು ಭಯದಿಂದ ಅತ್ತ ಇತ್ತ ನುಗ್ಗಿದುವು. ದೂರನಿಂತು ನೋಡುತ್ತಿದ್ದ ಹುಡುಗರು ನಮ್ಮನ್ನು ಕೂಗಿ ಕರೆದು ಅಪಾಯದಿಂದ ಪಾರುಮಾಡಲು ಬೊಬ್ಬೆಹಾಕುತ್ತಿದ್ದರು. ಈ ಗಲಭೆ ಶಾಲೆಗೂ ಮುಟ್ಟಿ ಉಪಾಧ್ಯಾಯರುಗಳೆಲ್ಲ ಹೊರ ಅಂಗಳದಲ್ಲಿ ನೆರೆದು ನಮ್ಮನ್ನು ಕರೆಯತೊಡಗಿದರು. ನಾವು ಕಾಡುಹಳ್ಳಿಯ ಬಾಲಕರಾದುದರಿಂದ ನಮಗೆ ಆ ಹಾವುಗಳು ಅಪರಿಚಿತವೂ ಆಗಿರಲಿಲ್ಲ, ಭಯಂಕರವೂ ಆಗಿರಲಿಲ್ಲ. ಅದರೂ ಒಂದು ಬಗೆಯ ಬೇಟೆಯಂತಾಗಿ ನಮಗೆ ಉಲ್ಲಾಸವೋ ಉಲ್ಲಾಸ. ಅದೂ ಅಲ್ಲದೆ ನಮಗೆ ಅವು ಗಾತ್ರದಲ್ಲಿ ಬಹುದೊಡ್ಡದಾಗಿ ಕಂಡರೂ ಅವು ನಾಗರಹಾವುಗಳಲ್ಲ ಕೇರೆ ಹಾವುಗಳು ಎಂಬುದೂ ಗೊತ್ತಾಗಿತ್ತು. ಆದ್ದರಿಂದ ನಾವು ಹೆದರದೆ ನುಗ್ಗಿ ಕಲ್ಲು ಹೊಡೆದೇ ಹೊಡೆದೆವು. ಉಪಾಧ್ಯಾಯರ ಕೂಗಿಗೂ ಮನ್ನಣೆ ಕೊಡಲಿಲ್ಲ. ಕ್ಲಾಸಿನ ಹೊರಗೂ ಇವರದೇನು ಅಧಿಕಾರ? ಎಂಬುದು ನಮ್ಮ ಬುದ್ಧಿ. ಅಂತೂ ಆ ಹಾವುಗಳು ಏಟು ತಿಂತರೂ ಪೊದೆಗಳಲ್ಲಿ ನುಗ್ಗಿ ತಪ್ಪಿಸಿಕೊಂಡು ಕಣ್ಮರೆಯಾಗಿಬಿಟ್ಟುವು. ನಾವು ‘ಅಜುಬುರುಕ ಪೇಟೆಯ ಮಕ್ಕಳು’ ಎಂದು ಇತರ ಬಾಲಕರನ್ನು ಅಣಕಿಸಿ, ಉಪಾಧ್ಯಾಯರುಗಳ ಕಡೆ ತಿರುಗಿಯೂ ನೋಡದೆ ಮನೆಗೆ ಹೋದೆವು. ಅದು ನಮಗೆ ಅತ್ಯಂತ ಸಾಮಾನ್ಯ ವಿಷಯವಾಗಿದ್ದುದರಿಂದ ಅದನ್ನು ಮರೆತೂಬಿಟ್ಟೆವು.

ಆದರೆ ಇತರ ಹುಡುಗರಿಗೊ, ಬಹುಮಟ್ಟಿಗೆ ಹಾರುವರೇ ಆಗಿದ್ದ ಉಪಾಧ್ಯಾಯವರ್ಗದವರಿಗೊ ಅದು ಅದ್ಭುತಸಾಹಸದ ವಿಷಯವಾಗಿ ತೋರಿತ್ತು! ನಮ್ಮ ಮನಸ್ಸಿನಿಂದ ಅದು ಸಂಪೂರ್ಣವಾಗಿ ಅಳಿಸಿಹೋಗಿದ್ದರೂ ಅವರೆಲ್ಲ ಅದರ ವಿಚಾರವಾಗಿಯೆ ಪ್ರಸ್ತಾಪಿಸುತ್ತಾ ಶ್ಲಾಘಿಸುತ್ತಾ ಟೀಕಿಸುತ್ತಾ ‘ಶೂದ್ರರ ಮಕ್ಕಳೆ ಹಾಗೆ’ ಎಂದು ಮಾತಾಡಿಕೊಳ್ಳುತ್ತಾ ಮನೆ ಸೇರಿದ್ದರು.

ಮರುದಿನ ಕ್ಲಾಸಿನಲ್ಲಿ ‘ಯಾರು ನಿನ್ನೆ ಹಾವುಗಳನ್ನು ಹೊಡೆಯುವುತ್ತಿದ್ದವರು ಎದ್ದು ನಿಂತುಕೊಳ್ಳಿ’ ಎಂದರು, ನಮ್ಮ ತರಗತಿಯ ಉಪಾಧ್ಯಾಯರು, ಬೆತ್ತದ ರಾಘವಾಚಾರ್ಯರು!

ನಮ್ಮ ಧೈರ್ಯವನ್ನು ಪ್ರಶಂಸಿಸುತ್ತಾರೋ ಏನೋ ಎಂದು ಭಾವಿಸಿ ನಾವು ಮೂವರೂ ಎದ್ದು ನಿಂತೆವು. ಆದರೆ ಪ್ರಶಂಸೆಗೆ ಬದಲಾಗಿ ನಮಗೆ ಕಾದಿದ್ದುದು ಬೆತ್ತದೇಟು.

ಏತಕ್ಕಾಗಿ ನಮ್ಮನ್ನು ಬಯ್ದು, ಎಚ್ಚರಿಕೆ ಹೇಳಿ, ಸಾದಾಶಿಕ್ಷೆ ಕೊಟ್ಟರೋ ನನಗಿನ್ನೂ ಅರ್ಥವಾಗಿಲ್ಲ. (‘ಸಾದಾಶಿಕ್ಷೆ’ ಎಂದರೆ, ಅಷ್ಟು ಬಲವಾಗಿ ಅಲ್ಲದೆ, ಮೆಲ್ಲನೆ, ಚಾಚಿದ ಅಂಗೈಗೆ ತುಸು ಬಿಸಿ ಮುಟ್ಟಿಸುವುದು. ‘ಕಠಿನ ಶಿಕ್ಷೆ’ ಎಂದರೆ ಬಾಸುಂಡೆ ಏಳುವಂತೆ ಬಡಿಯುವುದು).

ಹುಡುಗರು ಅಪಾಯಕ್ಕೆ ಒಳಗಾಗುವ  ಸಂಭವವಿರುವುದರಿಂದ ಅಂಥ ಕೆಲಸಕ್ಕೆ ಇನ್ನು ಮುಂದೆ ಹೋಗಬಾರದು ಎಂದೋ? ಉಪಾಧ್ಯಾಯರೆಲ್ಲ ಕೂಗಿ ಬೊಬ್ಬೆಯಿಟ್ಟು ಕರೆದರೂ ಲೆಕ್ಕಿಸದೆ ಹೋದುದು ‘ಅವಿಧೇಯತೆ’ ಎಂದೋ? ಹಾವು ಪೂಜಾಯೋಗ್ಯವಾದ ಪವಿತ್ರ ಪ್ರಾಣಿ; ಹುತ್ತಕ್ಕೆ ಹತ್ತಿ ಹೂಮುಡಿಸಿ ಹಾಲೆರೆದು ಪೂಜಿಸುತ್ತಾರೆ; ಅಂಥ ನಾಗದೇವರುಗಳನ್ನು ಕೊಲ್ಲುವುದಕ್ಕೆ ಹೋದದ್ದು ಪಾಪವಾದ್ದರಿಂದ ಅಂತಹ ಪಾಪಕಾರ್ಯಗಳಿಂದ ನಮ್ಮನ್ನು ವಿಮುಖಗೊಳಿಸಲೆಂದೋ? ದೇವರೆ ಬಲ್ಲ!

* * *

ತೀರ್ಥಹಳ್ಳಿಗೆ ಓದಲು ಬಂದಮೇಲೆ ನನ್ನ ಬದುಕಿನಲ್ಲಿ ಪರಿಣಾಮಕಾರಿಯಾಗಿ ಪ್ರಭಾವಬೀರುವಂತೆ ಪ್ರವೇಶಿಸಿದ ಒಂದು ಹೊಸ ವಸ್ತು ಎಂದರೆ-ಹೊಳೆ! ತುಂಗಾ ಮತ್ತು ಅದರ ಸಣ್ಣ ಉಪನದಿ ಕುಶಾವತಿ. ತೀರ್ಥಹಳ್ಳಿಗೆ ಒಂಬತ್ತು ಮೈಲಿ ದೂರದಲ್ಲಿರುವ ಕುಪ್ಪಳಿಯಲ್ಲಿ ಕೆರೆಯಿದೆ, ತೊರೆಯಿದೆ; ಆದರೆ ನಾವು ಈಸಾಡಬಹುದಾದ ಹೊಳೆ ಇಲ್ಲ. ಮನೆಯ ಬಳಿಯ ಕೆರೆ ಆಳವಾಗಿದ್ದುದರಿಂದ ಹುಡುಗರಿ ಅತ್ತ ಕಡೆ ಸುಳಿಯಬಾರದೆಂದು ಹಿರಿಯರ ಕಟ್ಟಪ್ಪಣೆ; ಅಲ್ಲದೆ ಅದರ ನೀರೇ ಮನೆಯೆಡೆಯ ಬಾವಿಗೆ ಬರುತ್ತಿದ್ದು, ಅದನ್ನು ಕುಡಿಯಲು ಉಪಯೋಗಿಸುತ್ತಿದ್ದುದು, ಕೆರೆಯ ನೀರನ್ನು ಕಲುಷಗೈವುದು ನಿಷಿದ್ಧವಾಗಿತ್ತು. ಇನ್ನು ಹತ್ತಿರದ ಹಳ್ಳಗಳೊ? ಬೇಸಗೆಯಲ್ಲಿ ಕಪ್ಪೆಗಳಿಗೂ ಈಜಲು ಸಾಕಾಗುವಷ್ಟು ನೀರು ಇರುತ್ತಿರಲಿಲ್ಲ, ಮಳೆಗಾಲದಲ್ಲಿ ತುಂಬಿ ಭೋರ್ಗರೆದು ರಭಸದಿಂದ ಹರಿಯುತ್ತಿದ್ದುದರಿಂದ ಹತ್ತಿರ ಹೋಗಲು ಹೆದರಿಕೆಯಾಗುತ್ತಿತ್ತು. ಆದ್ದರಿಂದ ತೀರ್ಥಹಳ್ಳಿಗೆ ಬಂದಮೇಲೆ ಹೊಳೆ ಒಂದು ಮನಮೋಹಕ ಆಕರ್ಷಣೀಯ ಕೆಳೆ ಆಗಿತ್ತು.

ಆದರೆ ಆ ಆಕರ್ಷಣೆಯಲ್ಲಿಯೂ ಒಂದು ಭಯದ ಅಂಶಹುದುಗಿರುತ್ತಿತ್ತು. ಹೊಳೆಯಲ್ಲಿ ಮೊಸಳೆಗಳಿದ್ದು, ಆಗೊಮ್ಮೆ ಈಗೊಮ್ಮೆ ಮೀಯಲು ಹೋದ ಮನುಷ್ಯರನ್ನೊ ನೀರು ಕುಡಿಯಲು ಹೋದ ದನಗಳನ್ನೊ ಎಳೆದುಕೊಂಡು ಹೋಗುತ್ತಿದ್ದ ವಾರ್ತೆ ಕಿವಿಗೆ ಬೀಳುತ್ತಿತ್ತು. ಹಗಲುಹೊತ್ತು ಹತ್ತು ಹದಿನೈದು ಅಡಿಗಳಿಗೂ ಉದ್ದವಾಗಿದ್ದ ಕರ್ಕಶಕಾಯದ ಹೆಮ್ಮೊಸಳೆಗಳು ಹೊಳೆಯಂಚಿನ ವಿಸ್ತಾರವಾದ ಮಳಲ ಹರಹಿನ ಮೇಲೆಯೂ ಅಲ್ಲಲ್ಲಿ ಎದ್ದಿರುತ್ತಿದ್ದು ಬಂಡೆಗಳ ಮೇಲೆಯೂ ಬಿಸಿಲು ಕಾಯಿಸುತ್ತಾ ಮಲಗಿರುತ್ತಿದ್ದ ಭೀಕರ ದೃಶ್ಯದ ವಿಚಾರವಾಗಿ ಪ್ರತ್ಯಕ್ಷದರ್ಶಿಗಳೆಂದು ಹೇಳಿಕೊಳ್ಳುತ್ತಿದ್ದ ಹುಡುಗರು ವರ್ಣಿಸುತ್ತಿದ್ದರು. ಆದರೆ ಅದೆಲ್ಲಕ್ಕಿಂತಲೂ ಹೆಚ್ಚಾಗಿ, ನಾನು ಓದುವುದಕ್ಕೆ ಹೋದ ಮೊದಲನೆಯದೊ ಅಥವಾ ಎರಡನೆಯದೊ ವರ್ಷದಲ್ಲಿ ನಡೆದ ಒಂದು ದುರ್ಘಟನೆ ನಮ್ಮ ಶಾಲೆಯಗೆಳೆಯರ ಮನದಲ್ಲಿ ಹೃದಯ ವಿದ್ರಾವಕವಾದ ದಿಗಿಲನ್ನೆಬ್ಬಿಸಿತ್ತು.

ಕೃಷ್ಣಮೂರ್ತಿ ಮತ್ತು ಶ್ರೀನಿವಾಸಯ್ಯ-ಯಾವಾಗಲೂ ನನ್ನ ಆ ಪಕ್ಕ ಈ ಪಕ್ಕಗಳಲ್ಲಿಯೆ ಕುಳಿತು ತುಂಬ ಆತ್ಮೀಯತೆಯಿಂದ ಹರಟೆ ಹೊಡೆಯುತ್ತಿದ್ದರು, ಹಳ್ಳಿಯ ಮುಗ್ಧನಾದ ನನ್ನ ಕೂಡೆ. ಅವರು ಪೇಟೆಯಲ್ಲಿ ಹುಟ್ಟಿ ಬೆಳೆದ ಹಾರುವರ ಮಕ್ಕಳಾದುದರಿಂದ ಅವರಿಗೆ ಕೋವಿ, ಕಾಡು, ಬೇಟೆ ಇತ್ಯಾದಿಗಳೆಂದರೆ ಅಗೋಚರವಾದ ಬಹುದೂರದ ಅದ್ಭುತ ವಿಷಯಗಳಾಗಿದ್ದುವು. ಆ ವಿಚಾರವಾಗಿದ್ದ ಅವರ ಅಜ್ಞಾನವನ್ನು ಕುತೂಹಲವನ್ನು ನಾನು ಚೆನ್ನಾಗಿ ಉಪಯೋಗಿಸಿಕೊಂಡು, ನನ್ನ ಸ್ವಂತ ಅನುಭವವೊ ಎಂಬಂತೆ ಹುಲಿಯ, ಹಂದಿಯ, ಮಿಗದ, ಕಾಡಿನ, ಕೋವಿಯ ಕಥೆಗಳನ್ನು ಹುಟ್ಟಿಸಿಕೊಂಡು ಹೇಳುತ್ತಿದ್ದೆ, ಅವರು ಬಾಯಿಬಿಟ್ಟುಕೊಂಡು ಕಣ್ಣರಳಿಸಿ ಕಿವಿ ನಿಮಿರಿ ಪುಲಕಿತರಾಗಿ ಆಲಿಸುತ್ತಿದ್ದರು!

ಒಂದು ದಿನ ಸ್ಕೂಲಿಗೆ ಹೋದಾಗ ನಮ್ಮ ಕ್ಲಾಸಿನ ಹುಡುಗರು ಸ್ವಲ್ಪ ಭಯಭೀತರಾದಂತೆ ಕೆಳದನಿಯಲ್ಲಿ ಮಾತಾಡಿಕೊಳ್ಳುತ್ತಿರುತ್ತಿದ್ದುದನ್ನು ಕಂಡು ವಿಚಾರಿಸಲಾಗಿ ಕೃಷ್ಣಮೂರ್ತಿ ಶ್ರೀನಿವಾಸಯ್ಯ ಇಬ್ಬರೂ ಹೊಳೆಯಲ್ಲಿ ಮುಳುಗಿಹೋದರಂತೆ ಎಂದರು! ಕಳೆದ ದಿನ ಸಾಯಂಕಾಲ ಸ್ಕೂಲು ಬಿಟ್ಟಾಗ ಒಟ್ಟಿಗೆ ಮಾತಾಡುತ್ತಾ ವಿನೋದ ಮಾಡುತ್ತಾ ನನ್ನನ್ನು ಬೀಳುಕೊಂಡಿದ್ದ ಅವರ ಮುರುದಿನವೆ ಇಲ್ಲವಾಗಿದ್ದಾರೆ ಎಂಬುದನ್ನು ಕೇಳಿ ನನಗೆ ಆ ಸುದ್ಧಿಯನ್ನು ನಂಬಲಾರದ ಮತ್ತು ನಂಬಲೊಲ್ಲದ ಒಂದು ತರಹದ ದಿಗಿಲಿನ ಮನಃಸ್ಥಿತಿಯುಂಟಾಯಿತು. ದುಃಖಕ್ಕಿಂತಲೂ ಹೆಚ್ಚಾಗಿ ಏನೊ ಒಂದು ಪ್ರಾಣದ ತಲ್ಲಣಿಕೆ! ಜನರು ಸಾಯುತ್ತಾರೆ ಎನ್ನುವುದು ಹೊಸ ವಿಷಯವಾಗಿಲ್ಲದಿದ್ದರೂ ಸಾವು ನಮ್ಮ ಹೃದಯಕ್ಕೆ ಸಮೀಪವೆ ಬಂದು ನಿಂತಾಗ ಅದರ ಪರಿಣಾಮವೇ ಬೇರೆ. ನಿನ್ನೆ ಇದ್ದ ನನ್ನ ಎಳೆಯ ಗೆಳೆಯರು ಇದ್ದಕ್ಕಿದ್ದಂತೆ ಇಲ್ಲವಾಗಿದ್ದಾರೆ! ಬುದ್ಧಿ ತುಸು ತತ್ತರಿಸಿಕೊಂಡಿತೆಂದೆ ಹೇಳಬೇಕು. ಮೃತ್ಯವನ್ನು ಕುರಿತು ಯಾವ ಸ್ವಸ್ಟ ಆಲೋಚನೆಯೂ ಸಾಧ್ಯವಲ್ಲದ ಆ ಬಾಲ ವಯಸ್ಸಿನಲ್ಲಿ ಮನಸ್ಸು ಏನೋ ಒಂದು ಮೂಕ ಭೀಷೆಯನ್ನನುಭವಿಸಿತ್ತು.

ಬಹುಶಃ ನನಗಾದಂತೆಯೆ ನನ್ನ ಇತರ ಗೆಳೆಯರಿಗೂ ಆಗಿತ್ತೆಂದು ಊಹಿಸುತ್ತೇನೆ. ಆದರೆ ನನ್ನಂತೆಯೆ ಅವರೂ ಅದನ್ನು ಮರೆಯಿಕ್ಕಿ-ಏಕೆ? ಹೇಗೆ? ಎಲ್ಲಿ? ಎಂತು? ಎಂದು ವಿಚಾರವಾಗಿ ಮಾತನಾಡುವ ಸೋಗಿನಲ್ಲಿ ಅದನ್ನು ಮುಚ್ಚಿಕೊಂಡರೆಂದು ಭಾವಿಸುತ್ತೇನೆ.

ಶಾಲೆ ಬಿಟ್ಟ ಮೇಲೆ ಅವರಿಬ್ಬರೂ ತಮ್ಮತಮ್ಮ ಮನೆಗಳಿಗೆ ಹೋಗಿ, ತಿಂಡಿ ತಿಂದು, ಹೊಳೆಯಾಚೆಯಲ್ಲಿದ್ದ ಬಂಧುಗಳನ್ನು ನೋಡಲು ಹೋಗುತ್ತಿದ್ದರಂತೆ. ಮಳೆಗಾಲ ಮುಗಿದು ರಾಮತೀರ್ಥದೆಡೆ ಕಲ್ಲುಸಾರ ಆಗತಾನೆ ಬಿಟ್ಟಿತ್ತು.ಸಾರಗಳ ಮೇಲೆ ಕೆಲವೆಡೆ ಹಾಸುಂಬೆ ಹಬ್ಬಿ ಜಾರುತ್ತಿತ್ತು. ಹೊಳೆಯ ದಾಟುಗಂಡಿಯಲ್ಲಿ ಇನ್ನು ದೋಣಿ ನಡಸಿದ್ದರಾದರೂ ಈ ಸಾಹಸೀ ಮಕ್ಕಳು ಕಲ್ಲುಸಾರದ ಮೇಳೆ ದಾಟುವ ಸ್ವಾರಸ್ಯಕ್ಕೆ ಒಳಗಾಗಿ ಹೊರಟರು. ಯಾವುದೊ ಒಂದೆಡೆಯ ಸಾರದಲ್ಲಿ ಇನ್ನೂ ತುಸು ತೆಳ್ಳೆನೀರು ಹರಿಯುತ್ತಿತ್ತಂತೆ. ಒಬ್ಬನು ಜಾರಿ ಹೊಳೆಗೆ ಬೀಳಲು ಇನ್ನೊಬ್ಬನು ಅವನನ್ನು ಹಿಡಿಯಲು ಹೋಗಿ ಇಬ್ಬರೂ ರಭಸದ ಹೊನಲಿನಲ್ಲಿ ಕೊಚ್ಚಿ ಹೋದರಂತೆ, ಹೆಣಗಳಳೂ ಇನ್ನೂ ಸಿಕ್ಕಿರಲಿಲ್ಲವಂತೆ!

ಗೆಳೆಯರು ನಾನಾ ರೀತಿಯಾಗಿ ಅವರಿಬ್ಬರ ಧೈರ್ಯವನ್ನು ಸ್ನೇಹಿತನಿಗಾಗಿ ತನ್ನ ಪ್ರಾಣವನ್ನೇ ಲಕ್ಷಿಸದೆ ತೆತ್ತಮಿತ್ರನ ತ್ಯಾಗಮಹಿಮೆಯನ್ನು ತಮ್ಮದೇ ಆದ ರೀತಿಯಲ್ಲಿ ವರ್ಣಿಸಿ ಮಾತನಾಡಿಕೊಂಡರು.

ಸೃಷ್ಟಿ, ಜೀವ, ಜಗತ್ತು, ದೇವರು, ಸಾವು, ಹುಟ್ಟು, ಪಾಪಪುಣ್ಯ, ಸ್ವರ್ಗ, ನರಕ ಇತ್ಯಾದಿ ವಿಷಯಗಳಲ್ಲಿ ಆಗಲೇ ತಡಕಾಡತೊಡಗಿದ್ದ ನನ್ನ ಚೇತನದ ಮೇಲೆ ಇಬ್ಬರು ಬಾಲಮಿತ್ರರ ಅಕಾಲಮರಣ ನನ್ನ ಸುಪ್ತಚಿತ್ತದಲ್ಲಿ ತನ್ನ ಗಂಭೀರಗುಪ್ತ ಪ್ರಭಾವವನ್ನು ಬೀರಿತೆಂದು ಬೇರೆ ಹೇಳಬೇಕಾಗಿಲ್ಲ.

ಹೊಳೆಯ ವಿಚಾರವಾಗಿಯೂ ಹಿಂದಿದ್ದ ಲಘುಭಾವನೆ ತೊಲಗಿತು. ಅದರೊಡನೆ ತುಂಬ ಎಚ್ಚರಿಕೆಯಿಂದಲೆ ವರ್ತಿಸಬೇಕೆಂಬ ಬುದ್ದಿ ಬೆಳೆಯಿತು.

* * *

ನಮ್ಮನ್ನು ಓದಿಸುವುದಕ್ಕಾಗಿ ಬಾಡಿಗೆಗೆ ತೆಗೆದುಕೊಂಡಿದ್ದ ಆ ಹುಲ್ಲು ಮನೆಯಲ್ಲಿ ಮೂರೇ ಅಂಕಣಗಳಿದ್ದುವೆಂದು ಹಿಂದೆ ಹೇಳಿದ್ದೆಯಷ್ಟೆ. ಒಂದು ಅಂಕಣದಲ್ಲಿ ನಾವು ಏಳೆಂಟು ಹುಡುಗರು ಮಲಗುತ್ತಿದ್ದೆವು. ಇನ್ನೊಂದು ಅಂಕಣ ಅಡುಗೆ ಮನೆಯಾಗಿತ್ತು. ಅಲ್ಲಿ ನಮಗೆ ಅಡುಗೆಮಾಡಿ ಹಾಕಿ, ನಮ್ಮನ್ನು ನೋಡಿಕೊಳ್ಳಲು ಇರುತ್ತಿದ್ದ ಕೆರೆಕೇರಿ ಅಮ್ಮ ಮಲಗುತ್ತಿದ್ದರು. ನಡುವಣ ಅಂಕಣವೇ ಸಾರ್ವಜನಿಕ ಜಗಲಿಯಾಗಿತ್ತು. ಸ್ನಾನಕ್ಕೆಂದು ಒಂದು ತಟ್ಟಿ ಮರೆಕಟ್ಟಿದ್ದ ಚಪ್ಪರವಿರುತ್ತಿತತು. ಅಲ್ಲಿ ಒಲೆ; ಹಂಡೆ, ವಾರಕ್ಕೊಮ್ಮೆ ಭಾನುವಾರದಲ್ಲಿ ಸ್ನಾನ! ಬಾವಿಯಲ್ಲಿ ಸೇದಿ ಹಾಕುತ್ತಿದ್ದ ನೀರು, ನಾವೇ ಬಟ್ಟೆ ಒಗೆದುಕೊಳ್ಳುವ ಶಾಸ್ತ್ರವೂ ನಡೆಯುತ್ತಿತ್ತು!

‘ಮನೆ’ಯಲ್ಲಿ, ಅಜ್ಜಯ್ಯನ ಅಭ್ಯಂಜನಗಳೇ ಸಾಗುತ್ತಿದ್ದ ಮಹಾ ಬಚ್ಚಲುಮನೆಯಲ್ಲಿ, ಚೆನ್ನಾಗಿ ಕೆತ್ತಿ ಜೋಡಿಸಿರುತ್ತಿದ್ದ ಹಾಸುಗಲ್ಲಿನ ‘ಕೊಣ’ದಲ್ಲಿ ಎರಡು ದೊಡ್ಡ ಹಂಡೆಗಳಲ್ಲಿ ಕುದಿಯುತ್ತಿದ್ದ ಎಷ್ಟು ನೀರೆರದರೆ ಅಷ್ಟನ್ನೂ ಸುರಿದುಕೊಂಡು ಮೀಯುತ್ತಿದ್ದ ನಮಗೆ ತೀರ್ಥಹಳ್ಳಿಯ ತಟ್ಟೆಮರೆಯ ಬಚ್ಚಲು ಮನೆಯ ಮೀಹದ ಕಾರ್ಪಣ್ಯ ನಾಚಿಕೆ ತರುವಂತಹದಾಗಿತ್ತು!

ಅದನ್ನೇ ನೆವವಾಗಿಟ್ಟುಕೊಂಡು ನಾವು “ಹೊಳೆಗೆ ಹೋಗಿ ಮಿಂದು ಬಟ್ಟೆ ಒಗೆದುಕೊಂಡು ಬರುತ್ತೇವೆ” ಎಂದು ಅಮ್ಮಗೆ ಹೇಳಿದೆವು. ಅವರು ಅದಕ್ಕೆ ಒಪ್ಪಲಿಲ್ಲ. ಕಾರಣ; ಹುಡುಗರು ಹೊಳೆಗೆಹೋದರೆ ನೀರಿನ ಪಾಲಾಗುತ್ತಾರೆ; ಆದ್ದರಿಂದ ಅವರನ್ನು ಹೊಳೆಯ ಕಡೆ ಇಣುಕಲೂ ಬಿಡಬಾರದು ಎಂದು ಹಿರಿಯರ ಕಟ್ಟಪ್ಪಣೆಯಾಗಿತ್ತಂತೆ! ನಾವು “ದೊಡ್ಡ ಹೊಳೆಗೆ (ತುಂಗೆ) ಹೋಗುವುದಿಲ್ಲ; ಸಣ್ಣ ಹೊಳೆಗೆ (ಕುಶಾವತಿ) ಹೋಗುತ್ತೇವೆ. ಅಲ್ಲಿ ಬೇಸಗೆಯಲ್ಲಿ ಮುಳುಗುವಷ್ಟು ನೀರಿರುವುದಿಲ್ಲ. ಅಲ್ಲದೆ ಒಗೆದುಕೊಳ್ಳಲೂ ಸೊಗಸಾದ ಹಾಸುಬಂಡೆಗಳು ನೀರಿಗೆ ಚಾಚಿರುತ್ತವೆ. ಅಲ್ಲಿಗೂ ಅನೇಕರು ಬಟ್ಟೆ ಒಗೆಯಲೂ ಮೀಯಲೂ ಬರುತ್ತಿರುತ್ತಾರೆ. ಆದ್ದರಿಂದ ನಾವು ಯಾವ ಅಪಾಯಕ್ಕೂ ಒಳಗಾಗದಂತೆ ಎಚ್ಚರಿಕೆಯಿಂದ ಕೆಲಸ ಪೂರೈಸಿಕೊಂಡು ಬರುತ್ತೇವೆ” ಎಂದು ಗೋಗರೆದೆವು! ಅಂತೂ ಕೊನೆಗೆ ಎಷ್ಟೋ ದಿನಗಳ ಮೇಲೆ ಒಪ್ಪಿಗೆ ಲಭಿಸಿತು!

ನಮ್ಮ ಒಳ ಉದ್ದೇಶ ಬೇರೆಯಾಗಿತ್ತು. ಸ್ನಾನ ಮಾಡುವುದು ಬಟ್ಟೆ ಒಗೆದುಕೊಳ್ಳುವುದು ಬರಿಯ ನೆಪವಾಗಿತ್ತು. ಮೈಯನ್ನಾಗಲಿ ಬಟ್ಟೆಯನ್ನಾಗಲಿ ಶುಚಿಯಾಗಿಟ್ಟುಕೊಳ್ಳಬೇಕು ಎನ್ನುವುದರಲ್ಲಿಯೂ ನಮಗೆ ನಿಜವಾದ ಶ್ರದ್ಧೆಯಿರಲಿಲ್ಲ. ಇತರರಿಗಾಗಿ, ಮನೆಯಲ್ಲಿ ಬೈಯುತ್ತಾರೆಂದು ಮಾತ್ರ ಆ ಕೆಲಸ ಮಾಡುತ್ತಿದ್ದೆವು, ಕಾಟಾಚಾರಕ್ಕಾಗಿ. ಆದ್ದರಿಂದಲೆ ನಾವು ಒಗೆದುಕೊಂಡ ಬಟ್ಟೆಗಳು ಒದ್ದೆಮಾಡಿ ಒಣಗಿಸಿದವಾಗಿರುತ್ತಿದ್ದುವೆ ಹೊರತು ಮಡಿಮಾಡಿದವಾಗಿರುತ್ತಿರಲಿಲ್ಲ!

ತೀರ್ಥಹಳ್ಳಿಗೆ ಓದಲು ಬಂದಮೇಲೆ ನಮಗೆ ಈಜು ಕಲಿಯಬೇಕೆಂಬ ಮಹದಾಶೆ. ಹೊಳೆಗೆ ಹೋದಹೊರತು ಈಜನ್ನು ಅಭ್ಯಾಸ ಮಾಡುವಂತಿರಲಿಲ್ಲ. ನಾವಿದ್ದ ಗುಡಿಸಲು ಮನೆಗೆ, ಹಿಂದೆ ತುಸು ದೂರದಲ್ಲಿ ಒಂದು ಕೆರೆಯಿತ್ತು. ಅದೂ ಪಾಚಿ ಬೆಳೆದು ಈಜುವಂತಿರಲಿಲ್ಲ. ಗಾಣಹಾಕಿ ಮೀನು ಹಿಡಿಯುವವರೂ ಅಲ್ಲಿರುತ್ತಿದ್ದುದರಿಂದ ಅವರು ಹುಡುಗರನ್ನು ಹೆದರಿಸಿ ಓಡಿಸುತ್ತಿದ್ದರು, ನಮ್ಮ ಬೇಟೆಗೆ ಅಡಚಣೆಯಾಗುತ್ತದೆ ಎಂದು.

ಆದ್ದರಿಂದ ಹೊಣೆಗೆ (ಸಣ್ಣ ಹೊಳೆ ಕುಶಾವತಿಯಾದರೂ ಚಿಂತೆಯಿಲ್ಲ!) ಹೋಗಲು ಅನುಮತಿ ದೊರೆತಾಗ ನಮಗೆಲ್ಲ ಹಿಗ್ಗೋಹಿಗ್ಗು! ಮೀಯಬೇಕು ಒಗೆಯಬೇಕು ಎಂಬ ಮಾತೆ ಇಲ್ಲ! ಹಾಗೆ ಈಜಬೇಕು; ಹೀಗೆ ಈಜಬೇಕು, ಮೊದಲು ಗುಂಡಿಗೆ ಎಂದರೆ ಆಳವಾದ ನೀರಿಗೆ, ಹೋಗದೆ, ತೆಳ್ಳೆಯಲ್ಲಿಯೆ ಬಂಡೆ ಹಿಡಿದುಕೊಂಡೇ ಕಾಲು ಹೊಡೆಯುವುದನ್ನು ಕಲಿಯಬೇಕು; ಆಮೇಲೆ ಕೈಯನ್ನು ಬೀಸುವುದನ್ನು ಅಭ್ಯಾಸ ಮಾಡಬೇಕು; ಹೀಗೆಲ್ಲ ಈಜು ಕಲಿಯುವುದರ ವೈಜ್ಞಾನಿಕ ವಿಧಾನವನ್ನೇ ಕುರಿತು ಒಬ್ಬರಿಗೊಬ್ಬರು ಸಾಭಿನಯ ಉಪನ್ಯಾಸ ಕೊಡುತ್ತಾ ಕುಶಾವತಿಗೆ ಹೊರಟೆವು.

ನಮ್ಮ ಆರೇಳು ಜನರ ಬಟ್ಟೆ ಒಗೆದುಕೊಳ್ಳುವುದಕ್ಕೆಂದು ಸಾಬೂನು ಕೊಂಡುಕೊಳ್ಳಲು ಮೂರು ಕಾಸು ಕೊಟ್ಟಿದ್ದರು! ಚಿಲ್ಲರೆ ಅಂಗಡಿಗೆ ಅದನ್ನು ಕೊಳ್ಳಲು ನಮ್ಮಲ್ಲಿಯೆ ಒಬ್ಬನನ್ನು ಕಳಿಸಿ, ಉಳಿದವರು ಮುಂದೆ ಹೋದೆವು. ಅವನು ಸಾಬೂನು ತರುವಷ್ಟು ಹೊತ್ತೂ ಸಮಯ ಹಾಳುಮಾಡಿಕೊಳ್ಳಲು ನಮಗೆ ಮನಸ್ಸಿರಲಿಲ್ಲ. ನಾವೆಲ್ಲ ಕುಶಾವತಿ ಹೊಳೆಯ ದಡದಲ್ಲಿದ್ದ ದೊಡ್ಡ ಕಾಡುಮಾವಿನ ಮರದ ಬುಡದ ಹಾಸು ಬಂಡೆಗೆ ತಲುಪಿದೆವು. ಮೊದಲು ಬಟ್ಟೆ ಒಗೆಯುವ ಕೆಲಸ ಮುಗಿಸಿಬಿಡಬೇಕೆಂದೂ ತರುವಾಯ ನೀರಿಗೆ ಇಳಿಯಬೇಕೆಂದೂ, ಎಲ್ಲರದೂ ಬಟ್ಟೆ ಒಗೆದಾಗುವವರೆಗೆ ಯಾರೂ ನೀರಿಗೆ ಇಳಿಯಕೂಡದೆಂದೂ ನಮ್ಮ ಮುಂದಾಳು ಕಡೆಮಕ್ಕಿ ಸುಬ್ಬಣ್ಣಯ್ಯನ ತಾಕೀತಾಯಿತು. ಏಕೆಂದರೆ ಯಾರಾದರೊಬ್ಬನು ಬೇಗನೆ ಬಟ್ಟೆ ಒಗೆದು, ನೀರಿಗಿಳಿದುಬಿಟ್ಟನೆಂದರೆ, ಉಳಿದೆಲ್ಲರೂ ಬಟ್ಟೆ ಒಗೆಯುವ ಕೆಲಸವನ್ನು ಅಲ್ಲಿಗೇ ಮುಕ್ತಾಯ ಮಾಡಿ, ಒದ್ದೆ ಬಟ್ಟೆಯನ್ನು ಹರಡುವ ಗೋಜಿಗೂ ಹೋಗದೆ ಹಾಗೆಯೆ ಮರಳಿನ ಮೇಲೆ, ಹರಡುವ ಹೆಸರಿನಲ್ಲಿ, ಎಸೆದುಬಿಡುತ್ತಾರೆ ಎಂದು! ಅಂತೂ ಮುಂದಾಳಿನ ಮಾತಿಗೆ ಎಲ್ಲರೂ ಒಪ್ಪಿಗೆ ಕೊಟ್ಟು ಬಟ್ಟೆ ಬಿಚ್ಚಿದೆವು. ಲಂಗೋಟಿಧಾರಿಗಳಾಗಿ ಬಟ್ಟೆಗಳನ್ನು ಹೊಳೆಯ ನೀರಿಗೆ ಅದ್ದಿ ತೆಗೆದು ಕಾದೆವು. ಎಷ್ಟು ಹಾದಿ ನೋಡಿದರೂ ಸಾಬೂನು ತರುವವನ ಸುಳಿವೇ ಇಲ್ಲ! ಅವನಿಗೆ ಶಾಪ ಹಾಕುತ್ತಿರುವಷ್ಟರಲ್ಲಿಯೆ ಪೊದೆಗಳ ನಡುವೆ ಕಾಣಿಸಿಕೊಂಡು ಹತ್ತಿರಕ್ಕೆ ಬಂದ. ಕೈಯಲ್ಲಿ ಸಾಬೂನು ಇರಲಿಲ್ಲ!  ಬಹುಶಃ ಜೇಬಿಗೆ ಹಾಕಿಕೊಂಡಿರಬೇಕು? ಮೂರು ಕಾಸಿಗೆ ದೊರೆಯುತ್ತಿದ್ದ ಬಾರು ಸೋಪಿನ ತುಂಡು ಅರ್ಧ ಅಂಗುಲ ಕೂಡ ದಪ್ಪವಿರುತ್ತಿರಲಿಲ್ಲ!

“ನಿನ್ನ ಹಾಳಾಗಿ ಹೋಗ! ಬೇಗ ಕೊಡೋ ಸಾಬೂನ್ನ” ಎಂದು ನಾಲ್ಕಾರು ಕೀಚಲು ದನಿಗಳು ಏಕಕಾಲದಲ್ಲಿ ಕೂಗಿಕೊಂಡವು.

ಅವನು ಜೇಬಿಗೆ ಕೈಹಾಕಿ ತೆಗೆದನು: ಸಾಬೂನನ್ನಲ್ಲ! ಹುರಿದ ನೆಲಗಡಲೆ ಕಾಯಿಯನ್ನು!

ನಮಗೆಲ್ಲರಿಗೂ ಖುಷಿಯೋ ಖುಷಿ! ಆದರೂ ಕೇಳಿದೆವು “ಸಾಬೂನು ಎಲ್ಲಿ?” ಎಂದು.

ಅವನು ಹಲ್ಲುಬಿಟ್ಟನಷ್ಟೆ! ನಮಗೂ ವೇದ್ಯವಾಯಿತು!

ಸಾಬೂನು ಕೊಂಡುಕೊಳ್ಳುವ ಏಕಮಾತ್ರ ದೃಢನಿಶ್ಚಯದ ಉದ್ದೇಶದಿಂದಲೆ ಅವನು ಅಂಗಡಿಗೆ ಹೋದನಂತೆ. ಆದರೆ ಅಲ್ಲಿ ದಾರ್ಢ್ಯ ವಿಚ್ಛಿದ್ರಕಾರಿಗಳಾದ ಅನೇಕ ವಸ್ತುಗಳು ಸಾಬೂನಿನೊಡನೆ ಸ್ಪರ್ಧೆ ಹೂಡಿದುವಂತೆ, ಪೆಪ್ಪರಮೆಂಟು, ಖರ್ಜೂರ, ರಸಬಾಳೆಹಣ್ಣು, ಕರಿಬಾಳೆಹಣ್ಣು, ಮಿಠಾಯಿ, ನೆಲಗಡಲೆ, ಮಂಡಕ್ಕಿ, ಹುರಿಗಡಲೆ, ಉತ್ತತ್ತೆ, ಬೆಂಡು ಇತ್ಯಾದಿ! ಪಾಪ, ಮಾನು ಅಪ್ಸರೆಯರ ಹಿಂಡಿಗೇ ಹೊಕ್ಕ ಅನಾಘ್ರಾತ ನವಯೌವನದ ರಸಿಕವೃಕನಂತಾಗಿ ದಿಗ್‌ಬ್ರಾಂತನಾದನಂತೆ! ಸಾಬೂನಿನಂಥ ಕಃಪದಾರ್ಥವನ್ನು ಆರಿಸುವುದೇ? ಅಂಥ ಅರಸಿಕ ಪೆಚ್ಚನೇನಲ್ಲ ಅವನು! ಮೂರು ಕಾಸಿಗೆ ಎಂಥ ಅಪ್ಸರೆ ಎಷ್ಟು ದಕ್ಕೀತು? ಮನಸ್ಸಿನಲ್ಲೇನೊ ಹೋರಾಟವೊ ನಡೆಯಿತಂತೆ: ‘ಛೆ! ಬಟ್ಟೆ ಮಡಿಯಾಗಿ ಒಗೆದುಕೊಳ್ಳಲಿ ಎಂದು ಒಂದಲ್ಲ ಎರಡಲ್ಲ ಮೂರು ಕಾಸು ಕೊಟ್ಟಿದ್ದಾರೆ! ಸಾಬೂನು ಕೊಂಡೊಯ್ಯದಿದ್ದರೆ ಅವರೆಲ್ಲ ಏನಂತಾರೆ?’ ಆದರೆ ಮಾನುವಿನ ವಿವೇಕ ವಿಚಾರಸಾಮರ್ಥ್ಯ ನೆಲಗಡಲೆಯ ಪರವಾಗಿಯೆ ವಾದಿಸಿತಂತೆ: ‘ಆರೇಳು ಜನರ ಬಟ್ಟೆ ಒಗೆಯಲು ಮೂರು ಕಾಸಿನ ಸಾಬೂನು ಎಲ್ಲಿ ಸಾಕಾಗುತ್ತದೆ: ಭೀಮನ ಹೊಟ್ಟೆಗೆ ಕಾಸಿನ ಮಜ್ಜಿಗೆ! ಆ ಬಟ್ಟೆಗಳ ಎಲ್ಲ ಕೊಳೆಯನ್ನು ನಿಜವಾಗಿ ತೆಗೆಯಬೇಕಾದರೆ ಕಡೆಯಪಕ್ಷ ಒಂದು ರೂಪಾಯಿನ ಸಾಬೂನಾದರೂ ಬೇಕಾಗುತ್ತದೆ. ಹೀಗಿರುವಾಗ ಒಂದು ಬಿಲ್ಲೆಯ ಸಾಬೂನು ಯಾವ ಧೂಪಕ್ಕೆ! ಅದನ್ನು ಹಾಕಿದರೂ ಒಂದೇ ಬಿಟ್ಟರೂ ಒಂದೇ! ಪರಿಣಾಮದಲ್ಲಿ ಏನೂ ವ್ಯತ್ಯಾಸವಾಗುವುದಿಲ್ಲ; ಯಾರೂ ಕಂಡುಹಿಡಿಯುವುದೂ ಇಲ್ಲ. ಅದಕ್ಕೆ ಬದಲಾಗಿ ನೆಲಗಡಲೆ ತೆಗೆದುಕೊಂಡರೆ, ಸ್ವಲ್ಪಸ್ವಲ್ಪವಾದರೂ ಎಲ್ಲರಿಗೂ ತಿನ್ನುವುದಕ್ಕೆ ಸಿಗುತ್ತದೆ. ತಿನ್ನುವುದಕ್ಕೂ ಕಮ್ಮಗೆ ಇರುತ್ತದೆ’ ಸರಿ, ನೆಲಗಡಲೆಗೆ ಹಾರಹಾಕಿ ಸ್ವಯಂವರಿಸಿ ಜೇಬಿಗೆ ಇಳಿಬಿಟ್ಟು ದೌಡಾಯಿಸುತ್ತಲೆ ಹೊರಟ, ಹೊಳೆಯ ಕಡೆಗೆ. ಆದರೆ ದಾರಿಯಲ್ಲಿ ಒಂದೆ ಕಾಳನ್ನು ಬಿಡಿಸಿ ತಿಂದ! ತುಂಬ ರುಚಿಯಾಗಿತ್ತು. ಮತ್ತೆ ದೌಡಾಯಿಸಲೇ ಇಲ್ಲ: ಆದಷ್ಟು ಪ್ರಯತ್ನಪೂರ್ವಕ ಸಾವಧಾನದಿಂದಲೇ ಕಾಲು ಹಾಕಿದ! ಪರಿಣಾಮ! ಜೇಬು ಅರ್ಧ ಖಾಲಿಯಾಗಿ, ಸಾಕ್ಷಿ ಹೇಳುವಮಟ್ಟಿಗೆ ನೆಲಗಡಲೆಯ ಮಟ್ಟ ಇಳಿದಿತ್ತು ಅವಶೇಷಾಂಶಕ್ಕೆ! ಅದನ್ನೆ ಅವನು ಜೇಬಿನಿಂದ ತೆಗೆದೆತ್ತಿ ತೋರಿಸಿದ್ದು!!

ಸರಿ ಎಲ್ಲರೂ ನುಗ್ಗಿದರು. ಲೂಟಿಯನ್ನು ಹಂಚಿಕೊಳ್ಳಲೆಂಬಂತೆ.

ಆದರೆ ನಮಗೆಲ್ಲ ತುಂಬ ನಿರಾಶೆಯಾಯಿತು: ಅವನ ಮುಷ್ಟಿಯಲ್ಲಿದ್ದುದೇ ಸರ್ವಸ್ವವಾಗಿತ್ತು; ಜೇಬೆಲ್ಲ ಖಾಲಿ! ‘ಏನೋ? ಮೂರು ಕಾಸಿಗೆ ಇಷ್ಟೇ ನೆಲಗಡಲೆ ಏನೋ?’ ಎಂದು ಕೇಳಿದರೆ ಅವನೂ ಅಚ್ಚರಿಗೊಂಡಂತೆ ಬಾಯಿಬಿಟ್ಟು ನೋಡುತ್ತಾ ‘ಹೊತ್ತಾಗುತ್ತೆ ಅಂತಾ ಓಡಿ ಬರ್ತಾ ಇರೋವಾಗ ಎಲ್ಲ ಬಿದ್ದು ಹೋಯ್ತ್ರೋ’ ಇಲಾತ್‌ಸೀಗೇಲಿ ಹುಡುಕಿದ್ರೆ ಸಿಕ್ಲೇ ಇಲ್ಲ!’ ಎಂದುಬಿಟ್ಟ.

“ಸುಳ್ಳು ಹೇಳ್ತೀಯಲ್ಲಾ! ಎಲ್ಲೋ ಮುಚ್ಚಿ ಇಟ್ಟು ಬಂದಿದ್ದೀಯಾ?”

“ಇಲ್ಲ, ಖಂಡಿತಾ ಇಲ್ಲ, ದೇವರಾಣೆಗೂ ಇಲ್ಲ!”

“ತಿನ್ತಾ ಬಂದಿದಾನೋ ಅದ್ಕೇ ಇಷ್ಟೊತ್ತಾಗಿದ್ದು”

“ಅವನ ಬಾಯಿ ಮೂಸಿ ನೋಡ್ರೋ ಗೊತ್ತಾಗ್ತದೆ”

ಸರಿ, ಒಬ್ಬರಾದ ಮೇಲೊಬ್ಬರು ಬಾಯಿ ಮೂಸಿದರು. ನೆಲಗಡಲೆಯ ವಾಸನೆಯನ್ನು ಬಚ್ಚಿಡಲು ಸಾಧ್ಯವೇ? ಆದರೂ ಮಾನು ದೃಢವಾಗಿ ಹೇಳಿದನು “ಒಂದೆರಡು ಕಾಲು ತಿಂದಿದ್ದು ಹೌದ್ರೋ, ಬಾಕಿದ್ದೆಲ್ಲ ಬಿದ್ದು ಹೋಯ್ತ್ರೋ!”

ಅಂತೂ ಅವನ ಮುಷ್ಟಿಯಲ್ಲಿ ಇದ್ದಷ್ಟನ್ನು ಉಳಿದೆಲ್ಲರೂ ಹಂಚಿಕೊಂಡೆವು. ಮಾನು ತನಗೂ ಪಾಲು ಬೇಕೆಂದು ಕೇಳುವುದಕ್ಕೆ ಹೋಗಲಿಲ್ಲ!

ಕಡೆಗೂ ಬಟ್ಟೆ ಒಗೆದೆವು, ನೀರಿಗೆ ಅದ್ದಿ, ಒಂದೆಡೆ ರಪ್ಪರಪ್ಪನೆ ಬಡಿದು ಮತ್ತೆ ನೀರಿಗೆ ಅದ್ದಿ ಅಲುಬಿದಂತೆ ಮಾಡಿ, ಹರಡಿ, ಮಳಲು ಗುಡ್ಡೆಯ ಮೇಲೆ ಅರಹಾಕಿದೆವು. ಆದಷ್ಟು ಬೇಗ ಆ ಅನಿಷ್ಟ ಕರ್ತವ್ಯದಿಂದ ಪಾರಾಗಲು ಒಬ್ಬರೊಡನೆ ಒಬ್ಬರು ಸ್ಪರ್ಧೆ ಹೂಡಿ, ಐದೇ ನಿಮಿಷಗಳಲ್ಲಿ ಬಟ್ಟೆ ಒಗೆಯುವ ಅಧ್ಯಾಯ ಪೂರೈಸಿ, ಈಜು ಕಲಿಯುವ ಅಧ್ಯಾಯಕ್ಕೆ ಧುಮ್ಮಿಕ್ಕಿದೆವು.

ಹರಿಯುವ ನೀರಿನಲ್ಲಿ ಅದೇನು ಮೋಹಕಶಕ್ತಿ ಇದೆಯೊ! ಶಬ್ದವಲನೆ, ತರಂಗ ಚಾಂಚಲ್ಯ, ಬಿಸಿಲನ್ನು ಪ್ರತಿಬಿಂಬಿಸುವ ಕಿಡಿಕಿಡಿ ಮಿರುಗುನಗು ಸುಳಿಸುಳಿ ನೊರೆ ನೊರೆಯಾಗಿ ಕಲ್ಲಿಗೆ ಬಡಿದು ತುಂತುರೆದ್ದು ಮುನ್ನಡೆವ ಶೋಭೆ-ಈ ಇಂದ್ರಿಯ ಗೋಚರವಾಗುವ ಲಕ್ಷಣಗಳಿಗೆ ಮಾತ್ರವೇ ಅಲ್ಲ; ಹೊಳೆಯ ಹರಿಯುವ ನೀರಿನಲ್ಲಿ ಏನೋ ಒಂದು ಅತೀಂದ್ರಿಯವಾದ ಆಹ್ವಾನವಿರುವಂತೆ ತೋರುತ್ತದೆ, ಅತೀತದತ್ತಣ್ಗೆ! ಅದಕ್ಕೇ ಎಂದು ತೋರುತ್ತದೆ, ಅದನ್ನು ‘ಜಿವನ’ ಎಂದೂ ಹೆಸರಿಸಿದ್ದಾರೆ; ನಮ್ಮ ಜೀವ ಕಾಲದಲ್ಲಿ ಪ್ರವಹಿಸುತ್ತಿರುವುದನ್ನು ಪ್ರತಿಮಿಸುತ್ತದೆ ನಿರಂತರವಾಗಿ ಹರಿಯುವ ನೀರು-‘ಜೀವನ’!

ಕುಶಾವತಿಯಲ್ಲಿ, ಬೇಸಗೆಯಲ್ಲಿ ಚಿಕ್ಕವರಾಗಿದ್ದ ನಮಗೂ ಕೂಡ ಎದೆಯೆತ್ತರ, ಹೆಚ್ಚು ಎಂದರೆ ಕುತ್ತಿಗೆಯೆತ್ತರ ನೀರಿದ್ದರೆ ಹೆಚ್ಚು, ಅದರ ಅತ್ಯಂತ ಆಳವಾದ ಜಾಗದಲ್ಲಿ. ಆದ್ದರಿಂದ ನಾವು ಮುಳುಗಿ ಸಾಯುವ ಹೆದರಿಕೆ ಇರಲಿಲ್ಲ.

ಈಜು ಕಲಿಯಲು, ಮೊದಲು ಕಾಲು ಬಡಿಯುವುದನ್ನು ಚೆನ್ನಾಗಿ ಅಭ್ಯಾಸ ಮಾಡಬೇಕೆಂದು, ನಮ್ಮಲ್ಲಿಯೆ ಒಬ್ಬ ಆಚಾರ್ಯನ ಸಲಹೆಯಂತೆ, ಎಲ್ಲರೂ ಸಾಲಾಗಿ ಬಂಡೆಯನ್ನು ಕೈಯಲ್ಲಿ ಹಿಡಿದುಕೊಂಡು ಕಾಲು ಬಡಿಯಲು ತೊಡಗಿದೆವು. ನೀರು ಕಡೆದಂತಾಗಿ ಹಾಕಿ ಬೆಳ್ಳಗೆ ಚಿಮ್ಮುವುದೇ ನಮಗೊಂದು ಆಟವಾಗಿತ್ತು.

ಅಷ್ಟರಲ್ಲಿ ಅಲ್ಲಿಯೆ ಬಟ್ಟೆ ಒಗೆಯುತ್ತಿದ್ದ ಯಾವನೊ ದೊಡ್ಡವನೊಬ್ಬನು ‘ಬಂಡೆಯನ್ನು ಹಿಡಿದು ಒದೆ ಕಾಲುಬಡಿಯುವುದರಿಂದ ಈಜಲು ಬರುವುದಿಲ್ಲ. ಆಗಾಗ ಬಂಡೆಯನ್ನು ಬಿಟ್ಟು ಕೈಹುಟ್ಟು ಹಾಕಲು ಪ್ರಯತ್ನಿಸುತ್ತಿರಬೇಕು’ ಎಂದು ಬುದ್ದಿ ಹೇಳಿದನು.

ಅವನ ಬುದ್ಧಿವಾದದ ಸತ್ಯಾಂಶ ಏನೇ ಇರಲಿ, ಅದರ ಪರಿಣಾಮವಾಗಿ ನಾವು ಅನೇಕ ಸಲ ‘ನೀರು ಕುಡಿಯುವಂತಾಯಿತು! ಮೂಗಿಗೆ ನೀರು ಹೋಗಿ ಸೀನಿ, ಕೆಮ್ಮಿ, ದಡಕ್ಕೆ ಹತ್ತಿ ಸುಧಾರಿಸಿಕೊಳ್ಳಬೇಕಾಯಿತು!’

ಅಂತೂ ಆ ದಿನ ನಮ್ಮ ಚೀರಾಟ, ಮಳಲಾಟ, ಕಲ್ಲಾಟ ಇವುಗಳಲ್ಲಿ ಹೊತ್ತು ಹೋದದ್ದೆ ನಮಗೆ ಗೊತ್ತಾಗಲಿಲ್ಲ. ನೀರಿನೊಳಗೆ ಕಣ್ಣುಬಿಟ್ಟು, ಬಿಸಿಲಿನ ಗುಳ್ಳೆಗಳ ನೆಳಲು ನಾಲ್ಕಾಣೆ ಎಂಟಾಣೆ ರೂಪಾಯಿಗಳಂತೆ ತಳದ ಮಳಲಿನ ಮೇಲೆ ಕಾಣಿಸುತ್ತಿದ್ದುದರಿಂದ ಅವುಗಳನ್ನು ಹಿಡಿಯುವ ವೃಥಾಸಾಹಸದಲ್ಲಿ, ನೋಡಿ ನೋಡಿ, ಕಣ್ಣೆಲ್ಲ ಕೆಂಪಗಾಗಿ ಹೋಗಿತ್ತು. ನಮ್ಮಲ್ಲಿ ಒಬ್ಬರಿಬ್ಬರು ನೆನಪು ಕೊಟ್ಟೆವು-ಮನೆಯಲ್ಲಿ ಕೆರೆಕೇರಿ ಅಮ್ಮ ನಮಗಾಗಿ ಕಾಯುತ್ತಾ ಊಟಮಾಡದೆ ಕುಳಿತಿರುತ್ತಾರೆ; ಆಮೇಲೆ ನಮಗೆಲ್ಲ ಬೈಗುಳವಾಗುತ್ತದೆ ಎಂದು. ಆದರೆ ಆಟದ ಮಜಾದಲ್ಲಿ ಹಿತವಚನ ಗಮನಕ್ಕೇ ಬರಲಿಲ್ಲ. ಅಂತೂ ನಾವೆಲ್ಲ ದಣಿದು ಸೋತು ದಡಕ್ಕೆ ಏರುವ ಹೊತ್ತಿಗೆ ಅಪರಾಹ್ನ ಒಂದೂವರೆ ಎರಡು ಗಂಟೆಯಾಗಿತ್ತು! ನಾವು ಒಡೆಯುವ ಶಾಸ್ತ್ರ ಮಾಡಿ ಮರಳ ಮೇಲೆ ಹರಡುವ ಶಾಸ್ತ್ರ ಮಾಡಿ ಎಸೆದಿದ್ದ ಬಟ್ಟೆಗಳೆಲ್ಲ ಒಣಗಿ ಗರಿಗರಿಯಾಗಿ ಸುಡುತ್ತಿದ್ದುವು, ಉರಿ ಬಿಸಿಲಿನಲ್ಲಿ! ‘ಹೊತ್ತಾಯಿತು ಕಣ್ರೋ! ಮನೇಮೇಷ್ಟರಿಗೆ ಹೇಳಿ ಛಡೀ ಶಿಕ್ಷೆ ಕೊಡಿಸ್ತಾರೆ’ ಎಂದು ಬೇಗಬೇಗ ಬಟ್ಟೆ ಹಾಕಿಕೊಂಡು ದೌಡಾಯಿಸುತ್ತಲೇ ಮನೆ ಸೇರಿದೆವು.

ಊಟವನ್ನೇನೊ ಹಾಕಿದರು. ಚೆನ್ನಾಗಿ ಅನ್ನಿಸಿಕೊಂಡೆವು. ಸಾಲದ್ದಕ್ಕೆ ಮನೆ ಮೇಷ್ಟರೂ ತಮಗೆ ದೊರೆತ ಅವಕಾಶವನ್ನು ಬಿಟ್ಟುಕೊಡಲು ಇಷ್ಟವಿಲ್ಲದೆ ನಮ್ಮ ಕೈ ಬೆಚ್ಚಗೆ ಮಾಡಿಯೇ ಮಾಡಿದರು!

* * *

ತೀರ್ಥಹಳ್ಳಿಯಲ್ಲಿ ಓದಲು ಬಂದಿದ್ದ ನಮ್ಮ ಗುಂಪು ತಕ್ಕಮಟ್ಟಿಗೆ ಕುಪ್ರಸಿದ್ಧವೆ ಆಗಿತ್ತು. ನಮ್ಮ ಹಳ್ಳಿಯ ಮನೆಯಲ್ಲಿ ಊರಿಗೆಲ್ಲ ನಾವೇ ಯಜಮಾನರು. ಸುತ್ತಮುತ್ತಣ ಗದ್ದೆ, ಅಡಕೆ ತೋಟ, ಕಾಡು, ಬಯಲು, ಗುಡ್ಡ ಎಲ್ಲವೂ ನಮ್ಮದೇ! ಪರರು ಮತ್ತು ಪರರಿಗೆ ಸೇರಿದ್ದು ಎಂಬುದು ನಮ್ಮ ಅನುಭವಕ್ಕೆ ಬಂದೇ ಇರಲಿಲ್ಲ, ಎಲ್ಲಿ ಹೋದರೂ ಎಲ್ಲಿ ಅಲೆದರೂ ಅನ್ಯರದ್ದು ಎಂಬುದಿರಲಿಲ್ಲ. ಆಗಿನ್ನೂ ನಮ್ಮದು ಅವಿಭಕ್ತ ಕುಟುಂಬವಾಗಿದ್ದರಿಂದ ಹಿಸ್ಸೆಯಾದ ಮನೆಗಳಲ್ಲಿ ನಡೆಯುತ್ತಿದ್ದ ಕಲಹಗಳಿಗೂ ಅವಕಾಶವಿರಲಿಲ್ಲ. ಯಾವ ಹಣ್ಣಿನ ಮರದ ಯಾವ ಹಣ್ಣಾದರೂ ನಮ್ಮದೇ ಆಗಿರುತ್ತಿತ್ತು. ‘ಇದು ಅವರಿಗೆ ಸೇರಿದ್ದು; ನಾವು ಮುಟ್ಟಬಾರದು. ನಾವು ತೆಗೆದುಕೊಂಡರೆ ಕದ್ದಾಂತಾಗುತ್ತದೆ; ಜಗಳಕ್ಕೆ ಬರುತ್ತಾರೆ’ ಎಂಬ ಕೋಟಲೆಯನ್ನೇ ಅರಿಯದಾಗಿದ್ದೆವು. ಆದರೆ ತೀರ್ಥಹಳ್ಳಿಗೆ ಬಂದಮೇಲೆ ಹೆಜ್ಜೆಹೆಜ್ಜೆಗೆ ‘ಇದು ಅವರ ಮನೆ’ ‘ಇದು ಅವರ ಹಿತ್ತಲು’ ‘ಈ ಮಾವಿನ ಮರ ಅವರಿಗೆ ಸೇರಿದ್ದು!’ ‘ಚಕ್ಕೋತ ಮರವಿರುವ ಆ ಜಾಗಕ್ಕೆ ಅವರು ವಾರಸುದಾರರು!’ ‘ಈ ಗೋಡೆ ಅವರ ಕಾಂಪೌಂಡು, ಅದರ ಮೇಲೆ ನೀವು ಹತ್ತಿ ಕೂರಬಾರದು!’ ಇತ್ಯಾದಿ ಅನುಲ್ಲಂಘನೀಯಗಳಿಗೆ ಒಳಗಾಗಬೇಕಾಯಿತು. ಆದರೆ ನಮ್ಮ ಹುಡುಗುಚಾಳಿ ಅದನ್ನೆಲ್ಲ ಅಷ್ಟೊಂದು ಮನಸ್ಸಿಗೆ ಹಾಕಿಕೊಳ್ಳಲೆ ಇಲ್ಲ. ಯಾವುದಾದರೊಂದು ಮರದಲ್ಲಿ ಹಣ್ಣು ಬಿಟ್ಟಿದ್ದರೆ, ನೇರವಾಗಿ, ಯಾವ ಅಪರಾಧ ಭಾವನೆಯೂ ಇಲ್ಲದೆ, ಹತ್ತಿ ಕೀಳುತ್ತಿದ್ದೆವು. ಒಂದು ವೇಳೆ ವಾರಸುದಾರರು ಕಂಡು ಅಟ್ಟಿಕೊಂಡು ಬಂದರೆ ಕಾಲಿಗೆ ಬುದ್ಧಿ ಹೇಳುತ್ತಿದ್ದೆವು. ಮೊದಮೊದಲು ಯಾರೋ ಹುಡುಗರು ಎಂದು ಶಾಪಹಾಕಿ ಸುಮ್ಮನಾಗುತ್ತಿದ್ದರು. ಆದರೆ ಕ್ರಮೇಣ ನಮ್ಮ ಖ್ಯಾತಿ ಹಚ್ಚಿತು: ‘ಕುಪ್ಪಳಿ ಮನೆ ಹುಡುಗರು’ ಎಂದು ಗೊತ್ತಾದ ಮೇಲೆ, ನಾವು ಜಯಪ್ರದವಾಗಿ ಲೂಟಿಮಾಡಿ, ತಿಂದು ಬಾಯಿ ಒರೆಸಿಕೊಂಡು ಮನೆಗೆ ಬರುವಷ್ಟರಲ್ಲಿ, ದೂರು ನಮಗಿಂತಲೂ ಮೊದಲೆ ನಮ್ಮ ಮನೆಗೆ ಸೇರಿರುತ್ತಿತ್ತು. ಸರಿ, ಮೋಸಸ್‌ಮೇಷ್ಟರ ಛಡಿ ಏಟು ಅಂಗೈ ಊದಿಕೊಳ್ಳುವಂತೆ ಬೀಳುತ್ತಿತ್ತು. ಆದರೇನು? ಛಡಿ ಏಟಿನ ಭಯಕ್ಕಿಂತಲೂ ಕೊಳ್ಳೆಹೊಡೆಯುವ ಸಾಹಸದ ಆಕರ್ಷಣೆಯೆ ಅದಮ್ಯವಾಗಿ ಇರುತ್ತಿತ್ತು!

ನಮ್ಮ ಬಾಲ್ಯಕ್ರಿಡಾಶೀಲತೆಯಂತೂ ನಾನಾ ಕ್ಷೇತ್ರಗಳಲ್ಲಿ ನಾನಾ ರೂಪಗಳಲ್ಲಿ ಪಟ್ಟಣ ಜೀವನ ಪರಿಚಯ ಮುಂದುವರಿದಂತೆಲ್ಲ ಶಾಖೋಪಶಾಖೆಗಳಾಗಿ ಮುಂದುವರಿಯುತ್ತಿತ್ತು. ಸ್ಕೂಲಿನ ಆಟಗಳಲ್ಲಿ ಮುಖ್ಯವಾದುವೆಂದರೆ ಫುಟ್‌ಬಾಲ್, ಕ್ರಿಕೆಟ್, ಬ್ಯಾಡ್‌ಮೆಂಟನ್, ಉಳಿದ ಬೀದಿ ಆಟಗಳೆಂದರೆ ಗೋಲಿ, ಚಿಣ್ಣಿದಾಂಡು, ಬುಗುರಿ, ಜೊತೆಗೆ, ಚಕ್ರಬಿಡುವುದು: ಸಾಮಾನ್ಯವಾಗಿ ತೀರ್ಥಹಳ್ಳಿ-ಶಿವಮೊಗ್ಗ ರಸ್ತೆಯಲ್ಲಿ ಎರಡೊ ಮೂರೊ ಮೈಲಿಗಳೂ ಸ್ಪರ್ಧೆಹೂಡಿ ಚಕ್ರಬಿಡುತ್ತಾ ಓಡುತ್ತಿದ್ದೆವು; ಆದರೆ ಅದು ಬರಿಯ ಖಾಲಿ ಆಟವಾಗಿರಲಿಲ್ಲ; ಅಲ್ಲಲ್ಲಿ ಸಾಧ್ಯವಾದಲ್ಲೆಲ್ಲ ಲೂಟಿಯೂ ನಡೆಯುತ್ತಿತ್ತು; ಕಬ್ಬಿನ ಹಿತ್ತಲು ಕಂಡಾಗ ದಾರಿಪಕ್ಕದ ಕಬ್ಬುಕೋಲುಗಳನ್ನು ಮುರಿಯದೇ ಬಿಡುತ್ತಿರಲಿಲ್ಲ. ಯಾರಾದರೂ ತೋಟದಲ್ಲಿ ಚಕ್ಕೋತದ ಹಣ್ಣು ನೇತಾಡುತ್ತಿರುವುದನ್ನು ಕಂಡರೆ, ಒಬ್ಬನು ಮರಹತ್ತಿ ಕಣ್ಣುಕೊಯ್ದು ಹಾಕಿದರೆ, ಮತ್ತೊಬ್ಬನು ಅದು ಕೆಳಗೆ ಬಿದ್ದು ಸದ್ದಾಗದಂತೆ ಬುತ್ತಿ ಹಿಡಿದು ಬೇಲಿಯಾಚೆಗೆ ಇದ್ದವರ ಕೈಗೆ ಎಸೆಯುತ್ತಿದ್ದು ಮನೆಯವರಿಗೇನಾದರೂ ಸುಳಿವು ಹತ್ತಿ ಕೆಟ್ಟ ಕೆಟ್ಟ ಬೈಗುಳಗಳ ಆಶೀರ್ವಾದ ಮಾಡುತ್ತಾ ಅಟ್ಟಿಸಿಕೊಂಡು ಬಂದರೆ, ಚಂಗನೆ ನೆಗೆದು, ಹಾರಿ, ವೇಗವಾಗಿ ತೀರ್ಥಹಳ್ಳಿ ಕಡೆಗೆ ಚಕ್ರ ಬಿಡುತ್ತಿದ್ದೆವು! ಇನ್ನೂ ಒಂದು ಆಟವೆಂದರೆ, ಕಳ್ಳ-ಪೋಲಿಸ್: ಒಂದು ಕಳ್ಳರ ಗುಂಪು, ಒಂದು ಪೋಲಿಸರ ಗುಂಪು. ಮೊದಲು ಕಳ್ಳರ ಗುಂಪು ಹಕ್ಕಲು ಕುರುಚಲು ಕಾಡು ದಟ್ಟಕಾಡುಗಳಲ್ಲಿ ಅಡಗಿದ ಮೇಲೆ, ಗೊತ್ತಾದ ಹೊತ್ತು ಕಳೆದು ಪೋಲಿಸರ ಗುಂಪು ಬೆನ್ನಟ್ಟುತ್ತಿತ್ತು! ಆ ಆಟವೂ ಕೂಡ ಖಾಲಿ ಆಟವಾಗಿರುತ್ತಿರಲಿಲ್ಲ. ಕಳ್ಳ ಪೋಲಿಸು ಇಬ್ಬರಿಗೂ! ಕಲ್ಲು ಸಂಪಗೆ ಹಣ್ಣು, ಬೆಮ್ಮಾರಲಹಣ್ಣು, ಕರ್ಜಿಹಣ್ಣು, ಕಾರೆಹಣ್ಣು, ಕಾಕಿಹಣ್ಣು, ಹುಳಿಚೊಪ್ಪಿನಹಣ್ಣು, ಇನ್ನೂ ಏನೇನೋ ಹೆಸರಿಲ್ಲದ ಆದರೆ ರುಚಿಯಿರುವ ಹಣ್ಣುಗಳು ಅಂಗಿಜೇಬಿಗೂ ಇಳಿಬೀಳುತ್ತಿದ್ದುವು ಹೊಟ್ಟೆ ತುಂಬಿದ ತರುವಾಯ! ಆಗ ನಮ್ಮ ಬದುಕಿನಲ್ಲಿ ಆಟಕ್ಕೆ ಪ್ರಥಮಸ್ಥಾನ, ಪ್ರಧಾನಸ್ಥಾನ; ಓದುವುದೂ ಮನೆಯವರ ಹೆದರಿಕೆಯಿಂದ; ಅವರಿಂದೊದಗಬಹುದಾದ ಪ್ರಹಾರಗಳಿಂದ ತಪ್ಪಿಸಿಕೊಳ್ಳುವುದಕ್ಕಾಗಿ. ಓದು ಜೀವನೋಪಾಯಕ್ಕಾಗಿ ಎಂಬ ಭಾವನೆಯಂತೂ ನಮ್ಮ ಬಳಿ ಸುಳಿಯುತ್ತಿರಲಿಲ್ಲ. ಕುಪ್ಪಳಿಯಿದೆ, ಗದ್ದೆಯಿದೆ, ತೋಟವಿದೆ, ಅಪ್ಪಯ್ಯ, ಅಜ್ಜಯ್ಯ, ದೊಡ್ಡ ಚಿಕ್ಕಪ್ಪಯ್ಯ ಇದ್ದಾರೆ. ಮತ್ತೆ ನಮಗೇನು ಸಂಪಾದನೆಯ ತೆವಲು? ಬದುಕು ಚಿರಕಾಲವೂ ಹಾಗೆಯೇ ಇರುತ್ತದೆ ಎಂಬಂತೆ: ನಾವು ಯಾವಾಗಲೂ, ಬಾಲಕರಾಗಿ, ಮನೆಯವರ ಬಲಾತ್ಕಾರದಿಂದ ಅವರ ತೃಪ್ತಿಗಾಗಿ ಓದುತ್ತಿರುವುದು, ರಜಾ ಬಂದಾಗ ಮನೆಗೆ ಹೋಗುತ್ತಿರುವುದು, ರಜ ಮುಗಿಯಲು ಮತ್ತೆ ತೀರ್ಥಹಳ್ಳಿಗೆ ಬಂದು ಇಸ್ಕೂಲಿಗೆ ಹೋಗುವುದು! ಇನ್ನು ವಿದ್ಯೆ, ಸಂಸ್ಕೃತಿ, ಹುದ್ದೆ, ಜ್ಞಾನಸಂಪಾದನೆ, ಖ್ಯಾತಿ, ದೊಡ್ಡ ಮನುಷ್ಯರಾಗುವುದು ಅನೇಕರ ಗೌರವ ಸಂಪಾದನೆ ಮುಂತಾದುವು ನಮ್ಮ ಭಾಗಕ್ಕೆ-ಅಂತೂ ನನ್ನ ಭಾಗಕ್ಕೆ-ಮೊಲದ ಕೊಂಬುಗಳಾಗಿದ್ದುವು!