ಬದುಕು ಹೀಗೆ ಹೊರೆಹೊಣೆ ಇಲ್ಲದೆ ಕಾಲವಾಹಿನಿಯ ನಿಸ್ತರಂಗಸ್ರೋತದಲ್ಲಿ ಮುಗ್ಧ ಹರ್ಷದಿಂದ ತೇಲುತ್ತಿದ್ದಾಗ ಬಂತು, ನನ್ನ ಜೀವಮಾನದ ಪ್ರಪ್ರಥಮ ರುದ್ರ ಅಪಘಾತ, ನನ್ನ ಚೇತನದ ಸುಖ ನಿಮೀಲಿತ ಪ್ರಜ್ಞೆಗೆ ಎವೆದೆರೆಸಿದ ದುಃಖದ ಆಘಾತ-ಸಾವು.

ಸುವಿಶಾಲ ಜಗತ್ತಿನಲ್ಲಿ ದೂರದೂರಕ್ಕೆ ಸಂಭವಿಸುವ ಘಟನೆಗಳಂತಿರಲಿ, ನಿಕಟ ನಿಕಟವೆ ಒದಗುವ ಸಂಗತಿಗೂ ಎಷ್ಟೋವೇಳೆ ಪರಸ್ಪರ ಸಂಬಂಧವಿರುವಂತೆ ತೋರುವುದಿಲ್ಲ, ನಮ್ಮ ಖಂಡ ಅಥವಾ ಅಂಶದೃಷ್ಟಿಗೆ. ಆದರೆ ವಿಶ್ವದಲ್ಲಿ ನಡೆಯುವ ಯಾವ ಘಟನೆಯಾಗಲಿ ಇತರ ಎಲ್ಲ ಘಟನೆಗಳಿಗೂ ಸಂಬಂಧಿಸಿದಂತೆಯೆ ನಡೆಯುತ್ತದೆ ಎಂಬುದು ಪೂರ್ಣ ಅಥವಾ ಅಖಂಡ ದೃಷ್ಟಿಗೆ ಸುಸಂವೇದ್ಯ. ಹಾಗಿಲ್ಲದಿದ್ದರೆ ಜರ್ಮನಿಯ ಕೈಸರ್‌ಚಕ್ರವರ್ತಿಯ ತಲೆಯಲ್ಲಿ ಜರುಗಿದ ಒಂದು ಆಸುರೀ ವ್ಯಾಪಾರ ಸಹ್ಯಾದ್ರಿಯ ಅರಣ್ಯಶ್ರೇಣಿಯ ಒಂದು ಕೊಂಪೆಯಲ್ಲಿರುವ ಏಕಗೃಹಗ್ರಾಮವಾದ ಕುಪ್ಪಳಿಯ ಬದುಕನ್ನೇ ಬಿರಿದು ಪಾಳುಗೈಯಲು ಸಾಧ್ಯವಾಗುತ್ತಿತ್ತೇ?

೧೯೧೪-೧೯೧೮ರ ಅವಧಿಯಲ್ಲಿ ನಡೆದ ಪ್ರಪಂಚದ ಮೊದಲನೆಯ ಮಹಾಯುದ್ಧದ ಕಾಲದಲ್ಲಿ ನಾವು ತೀರ್ಥಹಳ್ಳಿಯಲ್ಲಿ ವಿದ್ಯಾರ್ಥಿಗಳಾಗಿದ್ದೆವು. ನಮಗೆ ಆ ಯುದ್ಧದ ವಾರ್ತೆ ಒಂದು ರೌಚಕವಿನೋದ ಮಾತ್ರವಾಗಿತ್ತು. ಅದರ ರೌದ್ರ, ಘೋರ, ಕ್ರೂರ ಮತ್ತು ವಿನಾಶಕರ ರಾಕ್ಷಸೀಯ ಕರಿಯೆಗಳೆಲ್ಲ ಮಗೆ ಎಂದೋ ನಡೆದ ಒಂದು ಪೌರಾಣಿಕ ಕಥೆಯ ವಸ್ತುವಿನಂತೆ ಸ್ವಾರಸ್ಯ ಸಂಗತಿಗಳಾಗಿದ್ದುವು. ಈಗಿನಂತೆ ಆಗ ಪತ್ರಿಕೆಗಳೂ ಇರಲಿಲ್ಲ; ಇದ್ದವೂ ಬರುತ್ತಿರಲಿಲ್ಲ. ಮಿಷನರಿಗಳು ಹೊರಡಿಸುತ್ತಿದ್ದ ವೃತ್ತಾಂತ ಪತ್ರಿಕೆಯೂ ಅಂಚೆಯ ಆಮೆಯ ಮೇಲೆ ಸವಾರಿಮಾಡಿ ಹಳ್ಳಿಮನೆಗಳನ್ನು ತಲುಪುವ ಹೊತ್ತಿಗೆ ಆ ಪತ್ರಿಕಾವಾರ್ತೆಗೆ ವಿಷಯವಾಗಿರಬಹುದಾಗಿದ್ದ ಸಂಗತಿಗಳು ಚರಿತ್ರೆಗೇ ಮೀಸಲಾಗಿ ಸೇರಿಬಿಟ್ಟಿರುತ್ತಿದ್ದುವೇನೊ! ನಮ್ಮಂತಹ ಮಕ್ಕಳಂತೂ, ಈಗಿನ ಮಕ್ಕಳಂತಲ್ಲದೆ, ಆಗ ಪತ್ರಿಕೆ ಓದುವ ತಂಟೆಗೇ ಹೋಗುತ್ತಿರಲಿಲ್ಲ. ಪಾಠ ಓದುಕೊಳ್ಳುವುದೇ ಹೆರ್ಮಾಗಾಲವಾಗಿರುವಾಗ ಪತ್ರಿಕೆ ಓದುವ ವ್ಯರ್ಥ ಸಾಹಸಕ್ಕೆ ಯಾರು ಹೋಗುತ್ತಾರೆ? ಆಟಕ್ಕೆ ಸಮಯ ಸಾಲದಿರುವಾಗ! ಆದರೂ ಇಸ್ಕೂಲಿನ ಮಕ್ಕಳಾಗಿದ್ದ ನಮಗೆ ಜರ್ಮನಿಗೂ ಇಂಗ್ಲೀಷರಿಗೂ ಯುದ್ಧ ನಡೆಯುತ್ತಿದೆ ಎಂಬುದು ಗೊತ್ತಾಗಿತ್ತು. ಏಕೆ ಎಂದು ಈಗ ನಾನು ಹೇಳಲಾರೆ, ನಾವೆಲ್ಲ-ನಮ್ಮಲ್ಲಿ ಅನೇಕರು ಜರ್ಮನಿಯ ಪರವಾಗಿರುತ್ತಿದ್ದೆವು. ಇಂಗ್ಲಿಷರಿಗೆ ಅಪಜಯವಾಯಿತೆಂದು ಸುದ್ಧಿ ಹಬ್ಬಿದಾಗ, ನಮ್ಮ ಕಡೆಯವರಿಗೆ ಗೆಲುವೆಂದು ಭಾವಿಸಿ ಹಿಗ್ಗುತ್ತಿದ್ದೆವು. ಗೆಳೆಯರೆಲ್ಲ ಎರಡು ಗುಂಪಾಗಿ, ಒಂದು ಗುಂಪು ಜರ್ಮನಿಯವರೆಂದೂ ಮತ್ತೊಂದು ಇಂಗ್ಲೀಷಿನವರೆಂದೂ ಪೆಟ್ಲುಗಳನ್ನೇ ಕೋವಿಗಳನ್ನಾಗಿ ಮಾಡಿಕೊಂಡು ಯುದ್ಧದ ಆಟವಾಡುತ್ತಿದ್ದೆವು. ಆಗ ಬೀಳುತ್ತಿದ್ದ ಬಲವಾದ ಹೊಡೆತಗಳನ್ನೆಲ್ಲ ‘ಜರ್ಮನ್ ಹೊಡೆತ’ ಎಂದೇ ಕೂಗಿ ಜಯಘೋಷ ಮಾಡುತ್ತಿದ್ದೆವು. ಗೋಲಿಯಾಡುವಾಗಲೂ ಎದುರಾಳಿಯ ಒಂದು ಗೋಲಿಗೆ ಯಾವ ವಿಧದ ತನ್ನ ಗೋಲಿಯಿಂದ ಬಲವಾಗಿ ಹೊಡೆದನೆಂದರೆ “ಬಿತ್ತು ಜರ್ಮನ್ ಹೊಡೆತಾ!” ಎಂದು ಕೇಕೆ ಹಾಕುತ್ತಿದ್ದೆವು. ಬಹುಶಃ ರಾಷ್ಟ್ರದಲ್ಲಿ ಆಗ ನಡೆಯುತ್ತಿದ್ದ ಕಾಂಗ್ರೆಸ್ ಚಳವಳಿಯ ದೂರ ಪ್ರಭಾವ ನಮ್ಮ ಮೇಲೆಯೂ ಆಗಿತ್ತೊ ಏನೊ! ನನಗೆ ಈಗ ನೆನಪಿಗೆ ಬರುವ ಮಟ್ಟಿಗೆ ಆಗಿನ ರೇಷನ್ ಪದ್ಧತಿ ಸೀಮೆಯೆಣ್ಣೆ ಹಂಚಿಕೆಗೆ ಮಾತ್ರ ಸೀಮಿತವಾಗಿ ನಮ್ಮ ನಿತ್ಯ ಜೀವನಕ್ಕೆ ಹೆಚ್ಚಿಗೆ ತೊಂದರೆ ಕೊಡದಿದ್ದುದರಿಂದ ಈಗಿನಂತೆ ಯುದ್ಧ ಮನೆಬಾಗಿಲಿಗೆ-ಅಡುಗೆಮನೆಗೂ-ಬಂದ ಅನುಭವವಾಗುತ್ತಿರಲಿಲ್ಲ. ಏನು ವಿಡಂಬನೆ! ತೀರ್ಥಹಳ್ಳಿಯ ಎ.ವಿ. ಸ್ಕೂಲಿನ ಮಕ್ಕಳು, ನಾವು ಷೇಕ್ಸ್ಪಿಯರ್‌ಮಹಾಕವಿಯ ‘ದಿ ಮರ್ಚೆಂಟ್ ಆಫ್ ವೆನಿಸ್’ ನಾಟಕವನ್ನು ಮೂಲ ಇಂಗ್ಲಿಷಿನಲ್ಲಿಯೆ ಆಡಿ, ಬಂದ ಹಣವನ್ನು ಯುದ್ಧನಿಧಿಗೆ ಕಳುಹಿಸಿದ್ದೆವಲ್ಲ! ಆ ನಾಟಕದ ಮುಖ್ಯಪಾತ್ರ ಷೈಲಾಕ್‌ನ ಪಾತ್ರವನ್ನು ನನ್ನ ಮೇಲೆಯೆ ಹೊರಿಸಬೇಕೆ? ಆ ನಾಟಕದಲ್ಲೆಲ್ಲ ಅತಿದೀರ್ಘ ಸಂವಾದವಸ್ತು ಷೈಲಾಕನದೇ|! ಅರ್ತವಾಗದೆ ಅದನ್ನು ಬಾಯಿಪಾಠ ಮಾಡಲಾರದೆ ಅತ್ತು ಅತ್ತು, ಯಾಂತ್ರಿಕವಾಗಿ ಮಕ್ಕೀಕಾಮಕ್ಕಿಯಾಗಿ ಒಪ್ಪಿಸಿದುದೆ ನನ್ನ ಈಗಿನ ‘ಇಂಗ್ಲಿಷ್‌’ ವಿರೋಧಕ್ಕೆ ಗುಪ್ತ ಕಾರಣವಾಗಿರಬಹುದೇನೊ!

ಆ ಮೊದಲನೆಯ ಮಹಾಯುದ್ಧದ ಪರಿಣಾಮವಾಗಿ, ಪ್ರತ್ಯಕ್ಷವಾಗಿಯೂ ಪರೋಕ್ಷವಾಗಿಯೂ, ಲೋಕದ ಜನ ಹೇಗೆ, ಯಾವ ಯಾವ ರೀತಿಗಳಲ್ಲಿ, ಸಂಕಟಪಟ್ಟು ಜಜ್ಜರಿತರಾದರೆಂಬುದು ಈಗ ಇತಿಹಾಸ ಪ್ರಸಿದ್ಧವಾಗಿದೆ. ನಮಗೀಗ ಪ್ರಕೃತವಾದುದು ಆ ಇತಿಹಾಸದಿಂದ ಸಂಪೂರ್ಣ ಅಲಕ್ಷಿತವಾಗಿ, ಅತ್ಯಂತ ಯಃಕಶ್ಚಿತವಾಗಿ, ಯಾರೂ ಗಮನಿಸದೆ ವಿಸ್ಮೃತವಾಗಿರುವ ಒಂದು ಸಂಗತಿ ಕುಪ್ಪಳಿ ಮನೆತನಕ್ಕೆ ಒದಗಿದ ಆರ್ಥಿಕ ಅಪಘಾತ, ಮತ್ತು ತತ್ಪರಿಣಾಮವಾಗಿ ಸಂಭವಿಸಿದ ಕೌಟುಂಬಿಕ ದುರಂತ ಘಟನಾವಳಿ!

ಸಾಹಸಪ್ರಿಯರಾದ ನಮ್ಮ ದೊಡ್ಡ ಚಿಕ್ಕಪ್ಪಯ್ಯ ರಾಮಣ್ಣಗೌಡರು ಲಾಭ ಸಂಪಾದಿಸಿ ಶ್ರೀಮಂತರಾಗುವ ಆಶೆಯಿಂದ ಅಡಕೆಮಾರಾಟದ ಸಾಹುಕಾರ ಉದ್ಯಮಕ್ಕೆ ಕೈಯಿಟ್ಟಿದ್ದರು. ತಾವೇ ಸಾಲಮಾಡಿ ಹಣತಂದು, ಇತರೆ ಬೆಳೆಗಾರರಿಗೆ ಮುಂಗಡವಾಗಿ ಸಾಲಕೊಟ್ಟು, ಅಡಕೆ ತುಂಬಿ, ಮೂಟೆಗಳನ್ನು ಬೀರೂರಿಗೆ ಸಾಗಿಸಿ (ಆಗ ಶಿವಮೊಗ್ಗಕ್ಕೆ ರೈಲು ಬಂದಿರಲಿಲ್ಲವಂತೆ.) ಮಂಡಿಗಳ ಮುಖಾಂತರ ಮಾರುತ್ತಿದ್ದರು. ಆ ಕ್ರಮದ ವ್ಯಾಪಾರದಿಂದ ಬರುತ್ತಿದ್ದ ಲಾಭ ಸಾಲದೆಂದು ತೋರಿ, ಇನ್ನೂ ಹೆಚ್ಚು ಹಣ ಸಂಪಾದಿಸುವ ಉಪಾಯ ಕಂಡುಹಿಡಿದರು. ಬೀರೂರಿಗಂತೂ ಅಡಕೆ ಮೂಟೆಗಳನ್ನು ಗಾಡಿಗಳಲ್ಲಿ ಸಾಗಿಸುತ್ತಿದ್ದರಷ್ಟೆ? ಅಲ್ಲಿಂದ ಮದರಾಸಿಗೆ ರೈಲು ರಸ್ತೆ ಏರ್ಪಟ್ಟಿತು. ರೈಲಿನಲ್ಲಿ ಮದರಾಸಿಗೇ ತಾನೇ ಸಾಗಿಸಿ ಮಾರಿದರೆ ಹೆಚ್ಚಿನ ಬೆಲೆಯ ದಳ್ಳಾಳಿಯ ಜೊತೆಗೆ ಲಾಭವೂ ತಮಗೇ ದೊರೆಯುವುದೆಂದು ತರ್ಕಿಸಿದರು. ಮೂಟೆಗಳನ್ನೆಲ್ಲ ರೈಲಿನಲ್ಲಿ ಮದರಾಸಿಗೆ ಸಾಮಾನು ಗಾಡಿಯಲ್ಲಿ ಕಳುಹಿಸಿ, ತಾವೂ ಹೊರಟರು, ಆಗ ಅವರಿಗೆ ಆಪ್ತರಾಗಿದ್ದು ಅವರ ಉದ್ಯಮಕ್ಕೆ ಸಹಾಯವಾಗಿರುತ್ತಿದ್ದ ವಾಟಗಾರು ಮಂಜಪ್ಪಗೌಡರನ್ನು ಜೊತೆಗೆ ಕೂಡಿಕೊಂಡು. ಮದರಾಸಿನಲ್ಲಿ ಮೂಟೆಗಳನ್ನು ಇಳಿಸಿ, ಮಾರಾಟಕ್ಕೆ ಏರ್ಪಾಡು ಮಾಡುವ ಕಾಯ್ಯದಲ್ಲಿ ವ್ಯಾಪಾರಿಗಳೊಡನೆ ವ್ಯವಹಾರದಲ್ಲಿ ತೊಡಗಿ, ಒಂದು ಹೋಟಲಿನಲ್ಲಿ ಇಳಿದುಕೊಂಡರು.

ಅದೇ ರಾತ್ರಿ ಜರ್ಮನಿಯ ಸಮರನೌಕೆ, ಜಲಾಂತರ್ಗಾಮಿಯಾದ ಸಬ್‌ಮೇರಿನ್-‘ಎಮ್‌ಡನ್’ ಹೆಸರಿನಿಂದ ಮುಂದೆ ಜಗದ್ ವಿಖ್ಯಾತವಾಯಿತು!-ಮದರಾಸಿನ ಲೈಟ್ ಹೌಸಿಗೆ ಗುರಿಯಿಟ್ಟು ಬಂಗಾಳಕೊಲ್ಲಿಯಿಂದ ಭಯಂಕರವಾಗಿ ಫಿರಂಗಿ ಗುಂಡುಗಳ ದಾಳಿ ನಡೆಸಿಬಿಟ್ಟಿತು!

ಹಕ್ಕಿ ಹಿಂಡಿಗೆ ಕವಣೆಕಲ್ಲು ಬಿದ್ದಂತಾಯಿತು! ಬ್ರಿಟಿಷರ ಕೃಪೆಯಿಂದ ಬಹುಕಾಲ ಪ್ರತ್ಯಕ್ಷ ಯುದ್ಧದ ಕೋಟಲೆಯಿಂದ ಪಾರಾಗಿ ಪ್ರಶಾಂತ ದಾಸ್ಯಜೀವನ ನಡೆಸುತ್ತಿದ್ದ ಪುಕ್ಕಲೆದೆಯ ಜನರು, ವ್ಯಾಪಾರಿಗಳು, ಚಾಕರರು, ನೌಕರರು, ಇಂಗ್ಲಿಷ್ ವಿದ್ಯಾಭ್ಯಾಸ ಮಾಡಿ ಲಾಯರಿಗೀಯರಿ ಮಾಡಿಕೊಂಡಿದ್ದ ಬಿಳಿಕಾಲರಿನ ನಾಗರಿಕರು-ಊರುಬಿಟ್ಟು ಓಡಲು ತೊಡಗಿದರು, ಹೇಗಾದರೂ ತಮ್ಮ ಪ್ರಾಣ ಉಳಿಸಿಕೊಂಡರೆ ಸಾಕು ಎಂದು. ಎಲ್ಲೆಲ್ಲಿಯೂ ಹಾಹಾಕಾರ ಗಡಿಬಿಡಿ! ಇನ್ನು, ಆ ಷಹರಿಗೆ ತಮ್ಮ ಜೀವಮಾನದಲ್ಲೇ ಮೊತ್ತಮೊದಲಾಗಿ ಹೋಗಿದ್ದು, ದೂರದ ಸಹ್ಯಾದ್ರಿಯ ನಿಃಶಬ್ದ ಕೊಂಪೆಹಳ್ಳಿಯ ನಿರಾತಂಕ ನಿರುದ್ವಿಗ್ನ ವಾತಾವರಣದಲ್ಲಿಯೆ ಹುಟ್ಟಿ ಬೆಳೆದು ಬದುಕಿದ್ದ ಕುಪ್ಪಳಿ ರಾಮಣ್ಣಗೌಡರು ಮತ್ತು ವಾಟಗಾರು ಮಂಜಪ್ಪಗೌಡರು ಇವರ ಪಾಡು? ಅಡಕೆಯನ್ನೆಲ್ಲ ಯಾವನೊ ಒಬ್ಬ ಶೆಟ್ಟಿ ವ್ಯಾಪಾರಿಗೆ ಅವನು ಕೇಳಿದ ಬೆಲೆಗೆ ಒಪ್ಪಿಸಿ, ಬದುಕಿದೆಯಾ ಬಡಜೀವ ಎಂದು ಮದರಾಸಿನಿಂದ ಕಾಲುಕಿತ್ತರು! ಪರಿಣಾಮ ಕುಪ್ಪಳಿ ಮನೆತನಕ್ಕೆ ಕೆಲವು ಸಹಸ್ರ ರೂಪಾಯಿಗಳ ನಷ್ಟವಾಯಿತು.

ಅಡಕೆ ತುಂಬಿ ಸಾಹುಕಾರಿಕೆ ಮಾಡುತ್ತಿದ್ದವರು ಚಿಕ್ಕಪ್ಪ ರಾಮಣ್ಣ ಗೌಡರಾದರೂ ಮನೆಯ ಯಜಮಾನಿಕೆ ನೋಡಿಕೊಳ್ಳುತ್ತಿದ್ದವರು ನನ್ನ ತಂದೆ ವೆಂಕಟಪ್ಪಗೌಡರು. ಅಡಕೆ ವ್ಯಾಪಾರದಲ್ಲಿ ಬಂದ ಲಾಭಕ್ಕೆ ವಿಶೇಷವಾಗಿ ಭಾದ್ಯರಾಗುತ್ತಿದ್ದವರು ರಾಮಣ್ಣಗೌಡರಾದರೂ ಅದರಿಂದ ಈಗ ಒದಗಿದ್ದ ಮಹಾನಷ್ಟಕ್ಕೆ ಅವರೊಬ್ಬರೆ ಹೊಣೆಯಾಗಲು ಸಿದ್ಧರಿರಲಿಲ್ಲ. ಮನೆತನವೆ ಆ ಹೊರೆಯನ್ನು ಹೊರಬೇಕಾಗಿ ಬಂದಿತು.

ನಷ್ಟ ತುಂಬುವ ಮತ್ತು ಸಾಲ ತೀರಿಸುವ ವಿಚಾರವಾಗಿ ಅಣ್ಣತಮ್ಮಂದಿರಲ್ಲಿ ಭಿನ್ನಾಭಿಪ್ರಾಯ ಉಂಟಾಗಿ ಮನಸ್ತಾಪಕ್ಕೂ ತಿರುಗಿತಂತೆ, ಮನೆತನದ ಕೆಲವು ಜಮೀನುಗಳನ್ನು ಮಾರಿ ಸಾಲ ತೀರಿಸಬಹುದು ಎಂದು ಅಡಿಕೆ ಸಾಹುಕಾರ ತಮ್ಮನೂ; ಹಿರಿಯರಿಂದ ಬಂದ ಆಸ್ತಿಯನ್ನು ಮಾರುವುದು ಬೇಡ, ಹೇಗಾದರೂ ಮಾಡಿ ಆ ಜಮೀನಿನಲ್ಲಿಯೆ ದುಡಿದು ಸಂಪಾದಿಸಿ ಸಾಲ ತೀರಿಸಬಹುದು ಎಂದು ಮನೆ ಯಜಮಾನ ಅಣ್ಣನೂ ವಾದಿಸಿ ಹಟಹಿಡಿದರಂತೆ. ಅಂತೆ ಏಕೆಂದರೆ, ಮಕ್ಕಳಾಗಿದ್ದ ನಮಗೆ ಆ ವಿಚಾರಗಳೊಂದೂ ತಿಳಿಯುತ್ತಲೂ ಇರಲಿಲ್ಲ; ಯಾರೂ ತಿಳಿಸುತ್ತಲೂ ಇರಲಿಲ್ಲ; ಆಟ ಅಲೆದಾಟಗಳಲ್ಲಿಯೆ ಮುಳುಗಿರುತ್ತಿದ್ದ ನಮಗೆ ಅದೊಂದೂ ಬೇಕಾಗಿಯೂ ಇರಲಿಲ್ಲ.

‘ಅಪ್ಪಯ್ಯ’ ಮನೆಯ ಯಜಮಾನರಾಗಿದ್ದರೂ ಮನೆಯ ಖರ್ಚಿಗೆ ಬೇಕಾಗುತ್ತಿದ್ದ ಹಣ ಅಡಿಕೆ ವ್ಯಾಪಾರದ ಲೇವಾದೇವಿ ಮಾಡುತ್ತಿದ್ದ ‘ದೊಡ್ಡ ಚಿಕ್ಕಪ್ಪಯ್ಯ’ನ ಮುಖಾಂತರವೆ ಬರುತ್ತಿತ್ತು. ಮನೆ ಖರ್ಚಿಗೆ ಹಣ ಬೇಕೆಂದು ‘ಅಪ್ಪಯ್ಯ’ ಕೇಳಲು ‘ದೊಡ್ಡ ಚಿಕ್ಕಪ್ಪಯ್ಯ, ಬಹುಶಃ ಅಡಕೆ ವ್ಯಾಪಾರದಲ್ಲಿ ಬಹಳ ನಷ್ಟವಾದುದರಿಂದ ಕೈಯಲ್ಲಿ ಹಣದ ಕೊರತೆ ಇದ್ದುದರಿಂದಲೂ ಇರಬಹುದು, ‘ಕೊಡಲು ಸಾಧ್ಯವಿಲ್ಲ’ ಎಂದು ಹೇಳಿದುದರ ಜೊತೆಗೆ ಮನೆಯ ಜಮಾಖರ್ಚಿನ ಲೆಖ್ಖ ತೋರಿಸಲು ಕೇಳಿದರೆಂದು ತೋರುತ್ತದೆ. ಏಕೆಂದರೆ, ನನಗೇ ನೆನಪಿರುವಂತೆ, ‘ಕೊಮಾರೇಗೌಡರು’ ಎಂಬುವರನ್ನ ಕುಪ್ಪಳಿಗೆ ಕರೆತಂದು ಅವರಿಂದ ‘ಅಪ್ಪಯ್ಯ’ ಲೆಖ್ಖ ಬರೆಯಿಸಲು ಪ್ರಯತ್ನಿಸುತಿದ್ದುದನ್ನು ನೋಡಿದ್ದೇನೆ. ಆತ ‘ದೊಡ್ಡ ಚಿಕ್ಕಪ್ಪಯ್ಯ’ನ ಪರವಾಗಿದ್ದು, ಅವರಿಗೂ ಕರಣಿಕ ಕಾರ್ಯದಲ್ಲಿ ನೆರವಾಗಿದ್ದನಾದ್ದರಿಂದ, ಆತ ನಿಜವಾಗಿಯೂ ಮನೆಯ ಲೆಖ್ಖ ಬರೆದು ಮುಗಿಸಬೇಕೆಂದು ಬಂದಿರಲಿಲ್ಲ ಎಂದು ತೋರುತ್ತದೆ. ಆತ ಹೇಗಾದರೂ ದಿನಗಳನ್ನು ಕಳೆದು ಮನೆಯ ಲೆಖ್ಖದ ಅವ್ಯವಸ್ಥೆಯನ್ನೆಲ್ಲ ಅರಿತುಕೊಂಡು ‘ದೊಡ್ಡ ಚಿಕ್ಕಪ್ಪಯ್ಯ’ಗೆ (ಆಗ ಅವರು ಕುಪ್ಪಳಿಗೆ ಎರಡು ಮೈಲಿ ದೂರದಲ್ಲಿದ್ದ ‘ಹೀಲಿಕೇರಿ’ಯ ಗದ್ದೆ ತೋಟಗಳನ್ನು ನೋಡಿಕೊಂಡು ಅಲ್ಲಿಯೆ ಹೊಸದಾಗಿ ಕಟ್ಟಿದ್ದ ಮನೆಯಲ್ಲಿ ಇರುತ್ತಿದ್ದರು.) ತಿಳಿಸಲೆಂದೇ ಬಂದಿದ್ದರೂ ಇರಬಹುದು. ತನಗೆ ಕಜ್ಜಿ ಎಂದೂ ಮೈ ಸ್ವಸ್ಥವಿಲ್ಲೆಂದೂ ಹೇಳಿ ಅಗಾಗ್ಗೆಗ ಊರಿಗೆ ಹೋಗಿಬರುತ್ತೇನೆ  ಎಂದು ಹೋತ್ತಿದ್ದುದೂ ಉಂಟು. ಪಾಪ! ಸ್ವಲ್ಪಮಟ್ಟಿಗೆ ಮುಗ್ಧಜೀವಿಯಾಗಿ, ಅಷ್ಟೇನೂ ಲೌಕಿಕತೆ ಇರದಿದ್ದ ‘ಅಪ್ಪಯ್ಯ’ ಆ ಕರಣಿಕಗೆ ಕಜ್ಜಿ ಹೋಗಲು ಔಷಧಿಹಚ್ಚಿ ಅಭ್ಯಂಜನ ಮಾಡಿಸಿದುದೂ ಎಲ್ಲ ವ್ಯರ್ಥವಾಯಿತು! ಮನೆಯ ಆದಾಯದ ಹಣವನ್ನು ಮುಚ್ಚಿಟ್ಟು, ಲೆಖ್ಖವನ್ನು ಸರಿಯಾಗಿ ತೋರಿಸದೆ, ಮನೆ ಖರ್ಚಿಗೆ, ದುಡ್ಡುಕೊಡು ಎಂಬುದಾಗಿ ‘ದೊಡ್ಡ ಚಿಕ್ಕಪ್ಪಯ’ನನ್ನು ಪೀಡಿಸುತ್ತಿದ್ದಾರೆ ಎಂಬರ್ಥದ ಆಪಾದನೆಗೆ ‘ಅಪ್ಪಯ್ಯ’ ಒಳಗಾಗಬೇಕಾಯಿತೆಂದು ಊಹಿಸುತ್ತೇನೆ. ಮನೆ ಖರ್ಚಿಗೆ ಹಣವಿಲ್ಲದೆ ಮನೆಯ ಯಜಮಾನಿಕೆ ಮಾಡುವುದು ಹೇಗೆ? ಕಡೆಗೆ ಉಪ್ಪು, ಬೇಳೆ, ಮೆಣಸಿನಕಾಯಿ, ಕೊಬ್ಬರಿ, ಬೆಲ್ಲ, ಕಾಫಿ ಬೀಜ ಇತ್ಯಾದಿ ದಿನದಿನದ ಸಾಮಾನುಗಳನ್ನಾದರೂ ತರಬೇಕಲ್ಲ? ಕೆಲಸದವರಿಗೆ ಖರ್ಚಿಗೆ ದುಡ್ಡು ಕೊಡಬೇಕಲ್ಲ? ಕಡೆಗೆ ಮನೆಯ ಹೆಗ್ಗಡಿತಮ್ಮಗಳಿಗೆ (ಆಗ ಎಂಟು ಹತ್ತು ಜನರಿದ್ದರು!) ವರ್ಷಕ್ಕೆ ಕೊಡುವ ಸೀರೆ ಕೊಡಬೇಕಲ್ಲ? ಮಳೆಗಾಲಕ್ಕೆ ಆಳುಕಾಳುಗಳಿಗೆ ಕಂಬಳಿ ಕೊಂಡು ತರಬೇಕಲ್ಲ?-ಇದನ್ನೆಲ್ಲ ನಿರ್ವಹಿಸುವುದು ಹೇಗೆ? ಮಾನಮರ್ಯಾದೆ ಉಳಿಸಿಕೊಳ್ಳುವುದು ಹೇಗೆ? ಕೈಯಲ್ಲಿ ಕಾಸಿಲ್ಲದ ಯಜಮಾನಿಕೆಯಿಂದ ಪಾರಾಗಲು ‘ಅಪ್ಪಯ್ಯ’ ಮನೆಬಿಟ್ಟು ಹೊರಡಲು ಅನಿವಾರ್ಯವಾಗಿ ನಿಶ್ಚಯಿಸಿದರು ಎಂದು ತೋರುತ್ತದೆ. ಹಾ ವಿಧಿಯೆ! ಹೊರಟವರು ಮತ್ತೆ ಹಿಂತಿರುಗಲಿಲ್ಲ!

ಬೇಸಿಗೆ ರಜಕ್ಕೆ ನಾವೆಲ್ಲ ಮನೆಗೆ ಬಂದಿದ್ದೆವು. ಇನ್ನೇನು ರಜ ಮುಗಿಯುವುದರಲ್ಲಿದೆ. ನಮ್ಮ ಮನಸ್ಸು, ರಜ ಮುಗಿದು ಒಂದೆರಡು ದಿನಗಳಾದ ಮೇಲೆಯೆ ಹೊದರಾಯಿತು ಎಂದು. ಆದರೆ ಒಂದು ದಿನ ‘ಅಪ್ಪಯ್ಯ’ ಹೇಳಿದರು “ಹುಡುಗರಿರಾ, ನಾಳೆ ತೀರ್ಥಹಳ್ಳಿಗೆ ಹೋರಡೋಣರೊ ನಾನೂ ಬರ್ತೀನಿ.”

ಸಾಧಾರಣವಾಗಿ ನಾವೆಲ್ಲ ತೀರ್ಥಹಳ್ಳಿಗೆ ಹೋಗುವಾಗ ನಮ್ಮ ಕಮಾನು ಗಾಡಿ ಸಿದ್ಧವಾಗುತ್ತಿತ್ತು. ಆದರೆ ಆವೊತ್ತು ಗಾಡಿ ಕಟ್ಟಿಸಲಿಲ್ಲ. ‘ಅಪ್ಪಯ್ಯ’ನ ಜೊತೆ ಆ ದಿನ ತೀರ್ಥಹಳ್ಳಿಗೆ ಹೊರಟವರು ನಾವು ಮೂವರು. ನಾನು, ಮಾನಪ್ಪ, (ಬಸಪ್ಪಗೌಡರ ಎರಡನೆಯ ಮಗ) ಕಡೇಮಕ್ಕಿ ಸುಬ್ಬಣ್ಣ. ‘ಅಪ್ಪಯ್ಯ’ನೊಡನೆ ಕಾಲು ನಡಿಗೆಯಲ್ಲಿಯೆ ತುಂಬ ಉಲ್ಲಾಸದಿಂದ ಹೊರಟೆವು. ‘ಅಪ್ಪಯ್ಯ’’ನೂ ನಗುತ್ತಾ ಹಾಸ್ಯಮಾಡುತ್ತಾ, ‘ಬೆಲ್ಲಾ ಕದ್ದವರಾರಯ್ಯ?’ ಎಂದು ರಾಗವಾಗಿ ಹಾಡಿ ನಮ್ಮನ್ನು ನಗಿಸುತ್ತಾ, (ತೀರ್ಥಹಳ್ಳಿಯ ನಮ್ಮ ಹುಲ್ಲುಗುಡಿಸಿಲಿನ ಮನೆಯಲ್ಲಿ, ಅಟ್ಟದ ಮೇಲೆ ಡಬ್ಬದಲ್ಲಿಟ್ಟಿರುತ್ತಿದ್ದ ಬೆಲ್ಲವನ್ನು ನಾವೆಲ್ಲ ಕದಿಯಲು ಮಸಲತ್ತು ಮಾಡಿದೆವು. ಆ ಸಾಹಸಕ್ಕೆ ಮುಂದಾಳಾಗಿ ಅಲ್ಲ ಏರಿದನು ಮಾನಪ್ಪ. ಅಂಗಿ ಜೇಬುಗಳೆಲ್ಲ ಭರ್ತಿಯಾದ ಮೇಲೆಯೂ ಕದ್ದ ಇನ್ನಷ್ಟನ್ನು ಎಲ್ಲಿ ಬಚ್ಚಿಟ್ಟುಕೊಳ್ಳುವುದು ಎಂಬುದು ಅವನಿಗೆ ತೋರದೆ, ಗಾಬರಿಯಲ್ಲಿ ಕಟ್ಟಿದ್ದ ಕೌಪೀನದೊಳಗೆ ಅದನ್ನೆಲ್ಲ ತೂರಿಸಿಕಬಿಟ್ಟನು! ಅಟ್ಟದಿಂದ ಇಳಿಯುವಾಗ ಸದ್ದಾಗಿ ಕಳ್ಳ ಸಿಕ್ಕಿಬಿದ್ದನು! ಜೇಬಿನಲ್ಲಿಟ್ಟಿದ್ದ ಬೆಲ್ಲವನ್ನೇನೊ ಕಿತ್ತುಕೊಂಡರು. ಆದರೆ ಲಂಗೋಟಿಯ ಒಳಗಿದ್ದುದನ್ನು ಥೂ ಎಂದು ಬಿಟ್ಟುಬಿಟ್ಟರು. ಅದನ್ನು ಉಳಿದ ಹುಡುಗರೂ ಅಸಹ್ಯಪಟ್ಟುಕೊಂಡು ತೆಗೆದುಕೊಳ್ಳಲೊಪ್ಪಲಿಲ್ಲ. ಕಡೆಗೆ ಅದಷ್ಟಾದರೂ ಕಳ್ಳನಿಗೇ ದಕ್ಕಿಬಿಟ್ಟಿತು! ಆ ಸಂದರ್ಭವನ್ನೇ ‘ಅಪ್ಪಯ್ಯ’ ಗುರಿಮಾಡಿ ಮಾನಪ್ಪನನ್ನು ಲೇವಡಿ ಮಾಡಿ ನಮ್ಮನ್ನೆಲ್ಲ ನಗಿಸಿದ್ದು!) ಒಂಬತ್ತು ಮೈಲಿಗಳ ಕಾಡುರಸ್ತೆಯನ್ನು ನಮಗೆ ದಣಿವಾಗದ ರೀತಿಯಲ್ಲಿ ಸಾಗಿಸಿಬಿಟ್ಟರು. ಅವರ ಮನಸ್ಸಿನ ಒಳತೋಟಿಯನ್ನಾಗಲಿ, ಅವರ ಹೃದಯದಲ್ಲಿದ್ದ ಬೆಂಕಿಕಾಡುತ್ತಿದ್ದ ಜ್ವಾಲಾಮುಖಿಯ ತಾಪವನ್ನಾಗಲಿ ಒಂದಿನಿತೂ ಸುಳಿವುದೋರಲಿಲ್ಲ. ನಮ್ಮಷ್ಟೇ ಹುಡುಗಾಟಿಕೆಯಾಡುತ್ತಿದ್ದ ಅವರೊಡನೆ ತುಂಗಾನದಿಯ ದೋಣಿಗುಂಡಿಯನ್ನು ತಲುಪಿದೆವು. (ಆಗತಾನೆ ಮಳೆ ಪ್ರಾರಂಭವಾಗಿ ಕಲ್ಲುಸಾರ ಮುಚ್ಚಿತ್ತು. ಈಗಿನ ಸೇತುವೆ ಇರಲಿಲ್ಲ.) ಸಣ್ಣ ತುಂತುರು ಮಳೆಯಲ್ಲಿ ತುಸು ನೆನೆಯಲೂ ಬೇಕಾಯಿತು, ದೋಣಿ ಈ ದಡಕ್ಕೆ ಬರುವವರೆಎಗೆ. ಅಂತೂ ಹೊಳೆ ದಾಟಿ ಕತ್ತಲಾಗುವುದಕ್ಕೆ ಮೊದಲೆ ನಮ್ಮ ‘ಮನೆ’ (ಹುಲ್ಲು ಗುಡಿಸಲು)ಯ್ನನು ಸೇರಿಕೊಂಡೆವು. (ರಜಾಕಾಲದಲ್ಲಿ ಒಬ್ಬ ಆಳು ಮಾತ್ರ ಅಲ್ಲಿ ಇರುತ್ತಿದ್ದ. ಅಡುಗೆ ಮಾಡಿಹಾಕಿ ನಮ್ಮನ್ನು ನೋಡಿಕೊಳ್ಳುತ್ತಿದ್ದ. ‘ಅಮ್ಮ’ ಮನೆಗೆ ಬಂದುಬಿಟ್ಟಿದ್ದರು. ಕುಪ್ಪಳಿ ಮನೆಯಲ್ಲಿ ಹೆತ್ತ ತಾಯಿಯನ್ನು ‘ಅವ್ವ’ ಎಂದೂ ಉಳಿದವರನ್ನು ‘ಅಮ್ಮ’ ಎಂದು ಕರೆಯುತ್ತಿದ್ದದು ರೂಢಿ.)

ನಾವೆಲ್ಲ ತೀರ್ಥಹಳ್ಳಿಗೆ ಹೋಗಿ ನಾಲ್ಕಾರು ದಿನ ಕಳೆದಿರಬಹುದು. ನಮ್ಮ ತಂದೆ ಏನು ಮಾಡುತ್ತಿದ್ದರು? ಏಕೆ ನಮ್ಮನ್ನು ತೀರ್ಥಹಳ್ಳಿಗೆ ಬಿಟ್ಟಮೇಲೆ ಎಂದಿನಂತೆ ಹಿಂದಕ್ಕೆ ಕುಪ್ಪಳಿಗೆ ಹೋಗದೆ ಅಲ್ಲಿಯೆ ಇರುತ್ತಿದ್ದರು? ಇದೊಂದನ್ನೂ ನಾನು ಗಮನಿಸಲಿಲ್ಲ, ಇತರ ಹುಡುಗರಂತೆ. ನಾವು ನಮ್ಮದೇ ಪ್ರಪಂಚದಲ್ಲಿ ನಿಶ್ಚಿಂತರಾಗಿ ಇರುತ್ತಿದ್ದೆವು. ಆಗ ತಿಳಿಯದಿದ್ದರೂ ಆಮೇಲೆ ತಿಳಿದುಬಂದುದನ್ನು ಹೇಳುತ್ತೇನೆ: ಅಪ್ಪಯ್ಯ ಮನೆಬಿಟ್ಟು ಧುಡುಮ್ಮನೆ ಹೊರಟಿರಲಿಲ್ಲ. ಆಪ್ತರು ನಂಟರಿಷ್ಟರೊಡನೆ ಆಲೋಚನೆಮಾಡಿ, ಯಾವ ಉಪಾಯವೂ ತೋರದೆ, ಮನೆಯನ್ನು ತೊರೆಯುವ ನಿರ್ಣಯವನ್ನು ಕೈಕೊಂಡಿದ್ದರು. ಆಗ ನನ್ನ ತಾಯಿಯವರು ನನ್ನ ಇಬ್ಬರು ತಂಗಿಯರೊಡನೆ ಅವರ ತವರು ಮನೆಗೆ ಹಿರಿಕೊಡಿಗೆಗೆ ಹೋಗಿದ್ದರು. ಆದ್ದರಿಂದ ಅವರ ಸಾಂತ್ವನದ ಮತ್ತು ಹಿತವಚನದ ಬೆಂಬಲವೂ ತಂದೆಯವರಿಗೆ ಲಭಿಸಲಿಲ್ಲ.

ಇನ್ನೂ ಜೀವಿಸಿರುವ ವಾಟಗಾರು ಮಂಜಪ್ಪಗೌಡರು ಹೇಳಿದಂತೆ, ನಮ್ಮ ತಂದೆಯನ್ನು ಅವರು, ಒಂದೆರಡು ಸಾರಿ, ಮನೆಬಿಟ್ಟು ಹೊರಟವರನ್ನು ಹಡಗಿನ ಮಕ್ಕಿ ಹಾಡ್ಯದಲ್ಲಿ ತಡೆದು ಏನೇನೊ ಸಮಾಧಾನ ಹೇಳಿ ಮನೆಗೆ ಹಿಂದಿರುಗಿಸಿದ್ದರಂತೆ! ಹೀಗೆ ತುಂಬ ಕರ್ಕಶವಾಗಿದ್ದ ಮನಸ್ಸಿನ ಒಳತೋಟಿಯ ಅನಂತರವೆ ಅವರು ಮನೆಬಿಟ್ಟಿದ್ದರು. ನಾನು ಹಿಂದೆಯೆ ತಿಳಿಸಿರುವಂತೆ ನನ್ನ ತಂದೆ ತುಂಬ ಕೃಶಕಾಯರಾಗಿದ್ದರು. ಇನ್ನಾರಲ್ಲಿಯೂ ನಾನು ಕಾಣದಿರುತ್ತಿದ್ದ ಅವರ ಕುತ್ತಿಗೆಯ ಸಪುರವನ್ನೂ ಗಂಟಲಿನಿಂದ ದೀರ್ಘವಾಗಿ ಹೊರಚಾಚಿರುತ್ತಿದ್ದ ಗೋಮಾಳೆಯನ್ನೂ ಕಂಡು ಹುಡುಗನಾಗಿದ್ದ ನಾನು ‘ಏಕೆ ಹೀಗಿದೆ?’ ಎಂದು ಏನೋ ಒಂದು ತರಹದ ದುಃಖಮಿಶ್ರಿತವಾದ ಬೆರಗನ್ನು ಅನುಭವಿಸುತ್ತಿದ್ದುದು ಈಗಲೂ ನೆನಪಿಗೆ ಬರುತ್ತದೆ. ನಮ್ಮ ಮನೆಯಲ್ಲಿ ಅವರಷ್ಟು ಬಡಕಲಾಗಿ ಯಾರೂ ಇರಲಿಲ್ಲ.

ನಿಜವೊ ಅಲ್ಲವೊ ನನಗೆ ತಿಳಿಯದು. ನಿಜವಲ್ಲ ಎಂದು ಭಾವಿಸುವುದು ನನಗೆ ಹಿತಕರವಾಗಿದೆ. ಏಕೆಂದರೆ ಕುಪ್ಪಳಿಯಂತಹ ದೊಡ್ಡ ಮನೆಯಲ್ಲಿ ಯಜಮಾನಿಕೆ ಮಾಡುತ್ತಿದ್ದು, ಎಲ್ಲರ ಗೌರವಕ್ಕೆ ಭಾಜನವಾಗಿದ್ದು, ಪಟೇಲರೂ ಆಗಿದ್ದ ವೆಂಕಪ್ಪಗೌಡರು ತೀರ್ಥಹಳ್ಳಿಯಲ್ಲಿ ಹೋಟಲಿಟ್ಟು ಜೀವನಯಾಪನೆ ಮಾಡಲು ನಿಶ್ಚಯಿಸಿದ್ದರು ಎಂದರೆ ನನಗೆ ನಂಬಲಿಕ್ಕಾಗುವುದಿಲ್ಲ. ಮಾತ್ರವಲ್ಲ, ಅವಮಾನಕರವಾಗಿ ಜುಗುಪ್ಸೆಯನ್ನು ಅನುಭವಿಸುವಂತಾಗುತ್ತದೆ. ಬಂದ ಬಂದ ಎಂಥವರಿಗೆಲ್ಲ ತಿಂಡಿತಟ್ಟೆ ತಂದುಕೊಡುವ, ಎಲೆಹಾಕಿ ಊಟಕ್ಕೆ ಬಡಿಸುವ ನನ್ನ ತಂದೆಯನ್ನು ಊಹಿಸುವುದೂ ನನಗೆ ಅಸಾಧ್ಯ! ಅದರಲ್ಲಿಯೂ ಮುಖ್ಯವಾಗಿ ನನಗೋಸ್ಕರವಾಗಿಯೆ ಹಾಗೆ ಮಾಡಲು ನಿಶ್ಚಯಿಸಿದ್ದರು ಎಂಬುದನ್ನು ನೆನೆದರಂತೂ ನನಗೆ ಅಳು ಬರುತ್ತದೆ.

ಅವರು ಪದೇ ಪದೇ ಹೇಳುತ್ತಿದ್ದರಂತೆ “ನನ್ನ ಮಗನ್ನ ಚೆನ್ನಾಗಿ ಓದಿಸ್ತೀನಿ” ಎಂದು. ಆ ಗುರಿ ಸಾಧಿಸಬೇಕಾದರೆ ಅವರು ಪೇಟೆಯಲ್ಲಿ ಇರಬೇಕಾಗುತ್ತಿತ್ತು. ಆಗ ಆ ಪ್ರಾಂತಕ್ಕೆಲ್ಲ ಸ್ಕೂಲು ಇದ್ದುದು ತೀರ್ಥಹಳ್ಳಿಯಲ್ಲಿಯೆ. ಪೇಟೆಯಲ್ಲಿದ್ದು ಏನಾದರೂ ಒಂದು ಜೀವನೋಪಾಯದ ಕಸುಬುಮಾಡಲೇಬೇಕಷ್ಟೆ? ಅವರಿಗೆ ಅತ್ಯಂತ ಸುಲಭವಾಗಿ ಕಂಡದ್ದು ‘ಹೋಟಲು’, ಏಕೆಂದರೆ ಅದಕ್ಕೆ ಬೇಕಾದ ಮುಖ್ಯ ಸಾಮಗ್ರಿ ಅಕ್ಕಿ, ಅದನ್ನು ಊರಿಂದ ತರಿಸಿಕೊಳ್ಳಬಹುದು ಎಂದು! ಅಂತೂ ಭಗವಂತ ಬಹುಶಃ ಒಂದು ದುರಂತವನ್ನು ಮತ್ತೊಂದು ದುರಂತದಿಂದಲೆ ನಿವಾರಿಸಿದನೋ ಏನೊ?

ತೀರ್ಥಹಳ್ಳಿಗೆ ಬಂದ ಒಂದೆರಡು ದಿನಗಳಲ್ಲಿಯೆ ಅಪ್ಪಯ್ಯಗೆ ಸಣ್ಣಗೆ ಶೀತ ಕೆಮ್ಮು ಶುರುವಾಯಿತು. ಜ್ವರವೂ ಬರುತ್ತಿತ್ತೊ ಏನೊ, ಆದರೆ ಅವರು ಅದನ್ನು ಅಷ್ಟಾಗಿ ಮನಸ್ಸಿಗೆ ಹಾಕಿಕೊಳ್ಳದೆ ಮನೆಗೆ ಸಾಮಾನು ತಂದುಹಾಕಲೂ ಮತ್ತು ತಮ್ಮ ಮುಂದಿನ ಜೀವನೋಪಾಯದ ಕಾರ್ಯಕ್ರಮಕ್ಕೆ ಸಹಾಯ ಸಲಕರಣೆಗಳನ್ನು ಒದಗಿಸಿಕೊಳ್ಳಲೂ ತಿರುಗುತ್ತಿದ್ದರು, ತುಂತುರು ಮಳೆಯನ್ನೂ ಲೆಕ್ಕಿಸದೆ. ಆಗ ದೇವಂಗಿ ರಾಮಣ್ಣಗೌಡರು ತಮ್ಮ ಮನೆಯ ಮಕ್ಕಳನ್ನು ಓದಿಸಲು ತೀರ್ಥಹಳ್ಳಿಯಲ್ಲಿ ಒಂದು ಸ್ವಂತದ ಮಂಗಳೂರು ಹೆಂಚಿನ ಮನೆಯನ್ನು ಕಟ್ಟಿಸಿದ್ದರು. ಮುಂದೆ ನನಗೆ ತುಂಬ ಹತ್ತಿರದ ಬಾಲ್ಯ ಸ್ನೇಹಿತರಾಗಿ ಪರಿಣಮಿಸಿದ ವೆಂಕಟಯ್ಯ, ಹಿರಿಯಣ್ಣ  ಮೊದಲಾದವರು ಅಲ್ಲಿ ಓದಲಿಕ್ಕಿದ್ದರು. ರಾಮಣ್ಣಗೌಡರೂ ಆಗಾಗ ತೀರ್ಥಹಳ್ಳಿಗೆ ಬಂದು ಎರಡು ಮೂರು ದಿವಸ ಇದ್ದು ಹೋಗುತ್ತಿದ್ದರು. ನನ್ನ ತಂದೆ ಅವರೊಡನೆ ಕೌಟುಂಬಿಕ ಸಮಸ್ಯೆಗಳನ್ನು ಕುರಿತು ವಿಚಾರ ವಿನಿಮಯಕ್ಕೆ ಹೋಗುತ್ತಿದ್ದರೆಂದು ತೋರುತ್ತದೆ. ಬಹುಶಃ ಧನಸಹಾಯವನ್ನೂ ಕೇಳಿರಬಹುದು. ಸಫಲವಾಗಿತ್ತೊ ಇಲ್ಲವೊ ನಾನು ಹೇಳಲಾರೆ! (ದೇವಂಗಿ ರಾಮಣ್ಣಗೌಡರ ತಂಗಿಯನ್ನು ಕುಪ್ಪಳಿ ರಾಮಣ್ಣಗೌಡರೂ, ಕುಪ್ಪಳಿ ರಾಮಣ್ಣಗೌಡರ ತಂಗಿಯನ್ನು ದೇವಂಗಿಗೌಡರೂ ಮದುವೆಯಾಗಿದ್ದರು.)

ಒಂದು ಸಂಗತಿ ನನಗೆ ಚೆನ್ನಾಗಿ ನೆನಪಿಗೆ ಬರುತ್ತದೆ. ನನ್ನ ತಂದೆಗೆ ಕಾಯಿಲೆ ಪ್ರಾರಂಭವಾಗಿತ್ತು. ತಾವೇ ಹೋಗಲು ಸಾಧ್ಯವಾಗದೆ ನನಗೆ ಹೇಳಿದರು ದೇವಂಗಿಯವರ ಮನೆಗೆ ಹೋಗಿಬರಲು ಏನೋ ಕೆಲಸಕ್ಕಾಗಿ, ನಾನು ಸಂಕೋಚ ಪ್ರದರ್ಶನ ಮಾಡಿ ಹಿಂಜರಿದೆ, ಆಗ ಅವರು ತುಸು ವಿರಕ್ತಭಾವದಿಂದ ಮುನಿದು “ಓಹೋಹೋ! ಇವನಿಗೆ ಅಲ್ಲಿಗೆ ಹೋಗಲು ಬಹಳ ನಾಚಿಗೆ ಬಂತೇನೋ? ನಿನ್ನ ಈ ಬೂಲ ನೋಡಿದರೇ ಸಾಕು! ನಿನಗೆ ಹೆಣ್ಣು ಕೊಟ್ಟು ಬಿಡ್ತಾರೆ ಅಂತಾ ಮಾಡೀಯೇನೋ?” ಎಂದು ಮೂದಲಿಸಿದರು. ಬಹುಶಃ ಅವರ ಭಾವನೆ ಹೀಗಿತ್ತು ಎಂದು ತೋರುತ್ತದೆ: ದೇವಂಗಿಯವರಂತಹ ಶ್ರೀಮಂತರಾದ ದೊಡ್ಡ ಮನೆತನದವರು ವೇಷಭೂಷಣಗಳಲ್ಲಿ ಮುಂದುವರಿದವರು, ಬಗ್ಗಿ ಸಾರೋಟಿನಲ್ಲಿ ಸಂಚರಿಸುತ್ತಿದ್ದರು, ತಮ್ಮ ಮಗನಂತಹ ಸಾಧಾರಣ ಕಾಡುಕಾಡು ಹುಡುಗನಿಗೆ ಎಂದಿಗಾದರೂ ಹೆಣ್ಣು ಕೊಡುತ್ತಾರೆಯೇ? ಅವರ ಹೆಣ್ಣುಮಕ್ಕಳು ಓದಲಿಕ್ಕೆಂದು ಆ ಮನೆಯಲ್ಲಿದ್ದಾರೆ ಎಂದ ಮಾತ್ರಕ್ಕೆ ಇವನು ಹೋಗಲು  ಸಂಕೋಚಪಟ್ಟುಕೊಳ್ಳುತ್ತಿದ್ದಾನಲ್ಲಾ? ಅವರು ಬರಿಯ ಬಾಂಧವ್ಯದ ದೃಷ್ಟಿಯಿಂದ ನಂಟರಾಗಿರಬಹುದು. ಆದರೆ ಯೋಗ್ಯತೆಯ ದೃಷ್ಟಿಯಿಂದ? ಅವರೆಲ್ಲಿ? ನಾವೆಲ್ಲಿ?

ಅಂತೂ ಅಪ್ಪಯ್ಯಗೆ ಜ್ವರ ಏರಿ ಹಾಸಿಗೆ ಹಿಡಿಯುವಂತಾಯಿತು. ಮಳೆಗಾಲವೂ ಪ್ರಾರಂಭವಾಗಿತ್ತು. ತೀರ್ಥಹಳ್ಳಿಗೆ ಬಂದಿದ್ದ ಯಾರೋ ಒಬ್ಬರ ಕೈಲಿ ಕುಪ್ಪಳಿಗೆ ಹೇಳಿ ಕಳಿಸಿದರು, ಹಿರಿಕೊಡಿಗೆಯಲ್ಲಿದ್ದ ನನ್ನ ತಾಯಿಯನ್ನು ಕರೆದುಕೊಂಡು ಬರಲು. ಐಯ್ಯಪ್ಪಗೌಡರು (ಬಸಪ್ಪಗೌಡರ ಹಿರಿಯ ಮಗ. ಮೈಸೂರಿಗೆ ಓದಲು ಹೋಗಿದ್ದ ಹಿಂತಿರುಗಿದ್ದವರು.) ಹಿರಿಕೊಡಿಗೆಗೆ ವರ್ತಮಾನ ಕಳಿಸಲು, ಅವ್ವ ಇಬ್ಬರು ಹೆಣ್ಣು ಮಕ್ಕಳನ್ನೂ ಕರೆದುಕೊಂಡು ಕುಪ್ಪಳಿಗೆ ಧಾವಿಸಿದರು. ನೋಡುತ್ತಾರೆ, ಗಂಡ ಮನೆತೊರೆದು ಹೋಗಿದ್ದಾರೆ! ಆ ತಾಯಿಯ ಹೃದಯ ನನ್ನ ಬರವಣಿಗೆಗೆ ಎಟುಕುತ್ತದೆಯೆ? ಈ ನಡುವೆ ಸುದ್ದಿಯೊಂದು ಹಬ್ಬಿತ್ತಂತೆ: ಹೀಲಿಕೇರಿಯ ಮನೆಯಲ್ಲಿದ್ದ ಕುಪ್ಪಳಿ ರಾಮಣ್ಣಗೌಡರು ತೀರ್ಥಹಳ್ಳಿಗೆ ನನ್ನ ತಾಯಿತಂಗಿಯರನ್ನು ಕರೆದೊಯ್ಯಲಿದ್ದ ಗಾಡಿಯನ್ನು ಪಡೆಯುತ್ತಾರಂತೆ ಎಂದು. ಅದಕ್ಕೆ ಐಯ್ಯಪ್ಪಗೌಡರು “ಯಾರು ತಡೆಯುತ್ತಾರೋ ಬರಲಿ, ನೋಡುತ್ತೇನೆ! ಬಾರುಮಾಡಿ ಕೋವಿ ಹಿಡಿದುಕೊಂಡೇ ನಾನೂ ಗಾಡಿಯ ಹಿಂದೂಗಡೆ ಕಾವಲು ಇರುತ್ತೇನೆ” ಎಂದರಂತೆ. ಗಾಡಿ ತಡೆಯುವುದಕ್ಕೆ ಕಾರಣ ಇಷ್ಟೆ. ನನ್ನ ತಂದೆ ಮನೆಯ ಯಾಜಮಾನ್ಯ ವಹಿಸಿದ್ದವರು. ಆ ದೃಷ್ಟಿಯಿಂದ ಮನೆತನಕ್ಕೆ ಸೇರಿದ್ದ ಬೆಳ್ಳಿಬಂಗಾರದ ಡಾಗೀನು ಅವರ ವಶದಲ್ಲಿತ್ತು. ಅವರ ಹೆಂಡತಿಯ ಕೈಲಿ ಆ ಡಾಗೀನುಗಳನ್ನೆಲ್ಲ ಗಾಡಿಯಲ್ಲಿ ತೀರ್ಥಹಳ್ಳಿಗೆ ಸಾಗಿಸುತ್ತಾರೆ ಎಂಬ ಅನುಮಾನ! ಆದರೆ ವಾಸ್ತವವಾಗಿ ಅಂಥಾದ್ದೇನೂ ನಡೆಯಲಿಲ್ಲ.

ಆದರೆ ಆ ಸುದ್ದಿ ಇನ್ನೊಂದು ತರಹದ ದುರಂತಕ್ಕೆ ಪರಿಣಾಮಕಾರಿಯಾಯಿತು. ಅಪ್ಪಯ್ಯನ ಕಿವಿಗೆ ಆ ಸುದ್ದಿ ಬಿದ್ದು ಅವರು ಅಸ್ಥಿರರಾದರು. ಮನೆಯ ಡಾಗೀನು ಯಾವುದನ್ನೂ ಸಾಗಿಸುತ್ತಿರಲಿಲ್ಲವಾದ್ದರಿಂದ ಆ ವಿಚಾರವಾಗಿ ಅವರಿಗೆ ದಿಗಿಲಾಗಲಿಲ್ಲ. ಆದರೆ ಒಬ್ಬರು ಗಾಡಿ ತಡೆದು, ಇನ್ನೊಬ್ಬರು ಕೋವಿ ಹಾರಿಸಿ, ಏನು ಅನಾಹುತವಾಗುತ್ತದೆಯೊ ಎಂದು ಹೆದರಿ ಅಶಂಕೆಯಿಂದ ಉದ್ವಿಗ್ನರಾದ ಅವರು ಜ್ವರದಲ್ಲಿಯೆ ಕೊಡೆಹಿಡಿದುಕೊಂಡು ದೋಣಿ ಗಂಡಿಗೆ ಹೋಗಿ ಅಲ್ಲಿಯ ಅಶ್ವತ್ಥಕಟ್ಟೆಯ ಮೇಲೆ ಕುಪ್ಪಳಿಯಿಂದ ಬರುವ ಗಾಡಿಯನ್ನು ನಿರೀಕ್ಷಿಸುತ್ತಾ ಕುಳಿತರು. ಆಗಾಗ ಮಳೆ ಬೀಳುತ್ತಿತ್ತು; ಶೀತಗಾಳಿ ಭರ್ರನೆ ಹೊಳೆಯಕಡೆಯಿಂದ ಬೀಸುತ್ತಿತ್ತು. ಇವರಿಗೆ ಜ್ವರ ಏರಿತ್ತು. ಬೆಳಿಗ್ಗೆ ಹನ್ನೊಂದು ಹನ್ನೆರಡು ಗಂಡೆಯವರೆಗೆ ಕಾದು ನಿರಾಶರಾಗಿ ಹಿಂತಿರುಗಿ ಬಂದು, ತುಸು ಪಥ್ಯ ಸ್ವೀಕರಿಸ ಮಲಗಿದರು. ಅವರ ಮನಸ್ಸು ಅಶಂಕೆಯ ತಾಂಡವರಂಗವಾಗಿತ್ತು. ಮತ್ತೆ ಎದ್ದು ಸುಮಾರು ಎರಡು ಗಂಟೆಯ ಹೊತ್ತಿಗೆ ದೋಣಿಗಂಡಿಗೆ ಹೋಗಿ ಕೂತು ಬೈಗಿನವರೆಗೂ ಕಾದರು ಗಾಡಿ ಬರಲಿಲ್ಲ. ಅವರಿಗೆ ಅದುವರೆಗೂ ಯಾವುದು ಗಾಳಿ ಸುದ್ಧಿಯಾಗಿತ್ತೋ ಅದು ಈಗ ನಿಜವಾಗಿ ತೋರತೊಡಗಿ ತುಂಬ ಅಧೀರರಾದರು. ಯಾರ ಕೈಲಿ ಹೇಳುವುದು? ಯಾರನ್ನು ಕಳಿಸುವುದು ನೋಡಿಬರಲು? ನಾವೆಲ್ಲ ಚಿಕ್ಕಮಕ್ಕಳು! ಅಂತೂ ತುಂಬ ನಿಃಶಕ್ತರಾಗಿ ಆಯಾಸದಿಂದಲೂ ಹತಾಶೆಯಿಂದಲೂ ಕುಗ್ಗಿ ಕತ್ತಲಾದ ಮೇಲೆ ಮಳೆಗಾಳಿಗಳ ಮಧ್ಯೆ ಮನೆಗೆ ಬಂದರು!

ಮತ್ತೆ ಮರುದಿನವೂ ದೋಣಿಗುಂಡಿಗೆ ಗಾಡಿಗಾಗಿ ಕಾಯಲು ಹೋಗುತ್ತಿದ್ದರೋ ಏನೊ? ಆದರೆ ಜ್ವರ ಏರಿ, ಕೆಮ್ಮು, ಕಫ ಹೆಚ್ಚಿ, ನಿತ್ರಾಣವಾಗಿ, ಹಾಸಗೆಯಿಂದ ಏಳಲಾರದೆ ಮಲಗಿಬಿಟ್ಟರು.

ಅಂತೂ ಮರುದಿನ ಐಯ್ಯಪ್ಪ ಚಿಕ್ಕಪ್ಪಯ್ಯ ನನ್ನ ತಾಯಿತಂಗಿಯರನ್ನು ತೀರ್ಥಹಳ್ಳಿಗೆ ಕರೆತಂದುಬಿಟ್ಟರು. ಅಪ್ಪಯ್ಯಗೆ ಕಾಯಿಲೆ ವಿಷಮಿಸಿದ್ದನ್ನು ನೋಡಿ ಔಷಧಿ ಪಥ್ಯಗಳ ಏರ್ಪಾಡನ್ನೂ, ನಮ್ಮ ಮನೆಮೇಷ್ಟರಾಗಿದ್ದ ಶ್ರೀಯುತ ಮೋಸಸ್‌ಅವರೊಡಗೂಡಿ, ಮಾಡತೊಡಗಿದರು. ಕಾಯಿಲೆ ದಿನದಿನಕ್ಕು ವಿಷಮಿಸುತ್ತಾ ಹೋಯಿತು. ಆಮೇಲೆ ಮಾತನಾಡುವ ಶಕ್ತಿ ಕುಂದುತ್ತಾ ಹೋಗಿ, ನಾಲಗೆಯೆ ಬಿದ್ದುಹೋಯಿತು. ಪ್ರಜ್ಞೆಬಂದಾಗ ಏನನ್ನಾದರೂ ಹೇಳಲು ಪ್ರಯತ್ನಿಸಿ ಸನ್ನೆಮಾಡುತ್ತಿದ್ದರಷ್ಟೆ!

ಜನರ ಸಂಚಾರ ಕ್ಲಿಷ್ಟವಾಗಿ, ವಾಹನ ಸೌಕರ್ಯಗಳೂ ಅಭಾವವಾಗಿದ್ದು ಅದರಲ್ಲಿಯೂ ಮಳೆಗಾಲ ಹಿಡಿದಿದ್ದ ಆ ಸಮಯದಲ್ಲಿ ನಮ್ಮ ತಂದೆಯ ಕಾಯಿಲೆಯ ಸುದ್ಧಿ ದೂರ ದೂರದ ಹಳ್ಳಿಗಳಲ್ಲಿ ಬೇಸಾಯದಲ್ಲಿ ತೊಡಗಿದ್ದ ಬಂಧುವರ್ಗಕ್ಕೆ ತಲುಪುವುದು ಬಹಳ ತಡವೇ ಆಯಿತೆಂದು ತೋರುತ್ತದೆ. ಅಂತೂ ಕುಪ್ಪಳಿ ವೆಂಕಟಪ್ಪಗೌಡರು ತೀರ್ಥಹಳ್ಳಿಯಲ್ಲಿ ಈಗಲೊ ಆಗಲೊ ಎಂಬಂತೆ ಕಾಯಿಲೆ ಬಿದ್ದಿದ್ದಾರಂತೆ ಎಂಬ ವಾರ್ತೆ ಇತರರಿಗೆಂತೊ ಅಂತೆಯೆ ಹೀಲಿಕೇರಿಗೂ ತಲುಪಿ, ದೊಡ್ಡ ಚಿಕ್ಕಪ್ಪಯ್ಯನೂ ಬಂದರು. ಬಂದವರು ತುಂಬ ದಿಗಿಲುಗೊಂಡು ಪಶ್ಚಾತ್ತಾಪ್ತರಾದರು. ಇಷ್ಟು ವಿಷಮಕ್ಕೆ ಏರಿದೆ ಎಂದು ಅವರು ಎಣಿಸಿರಲಿಲ್ಲ. ಡಾಕ್ಟರುಗಳನ್ನು ಕರೆತಂದರು. ಆಗ ತೀರ್ಥಹಳ್ಳಿಯಲ್ಲಿ, ಔಷಧಿ ಮಾರಾಟಮಾಡುವವರನ್ನೂ ಡಾಕ್ಟರುಗಳೆಂದೆ ಭಾವಿಸಿದ್ದರು ಜನ. ಷರಾಯಿ ಬೂಟು, ಹ್ಯಾಟು ಹಾಕಿ, ಕೊರಳಿಗೆ ಸ್ಟೆಥಾಸ್ಕೋಪನ್ನು ತಗುಲಿಸಿಕೊಂಡಿದ್ದವರೊಬ್ಬರು ಬಂದು ಏನೇನೊ ಮಾಡಿಹೋದರು. ಹುಡುಗನಾಗಿದ್ದ ನಾನು ಕಾಯಿಲೆ ಸಾವಿನಲ್ಲಿ ಪರಿಣಮಿಸುತ್ತದೆ, ಎಂದು ನಂಬಿರಲಿಲ್ಲ. ಅದರಲ್ಲಿಯೂ ದೊಡ್ಡ ಚಿಕ್ಕಪ್ಪಯ್ಯ, ಡಾಕ್ಟರು, ಐಯಪ್ಪ ಚಿಕ್ಕಪ್ಪಯ್ಯ, ಸ್ವತಃ ನಮ್ಮ ಭಯಕ್ಕೇ ಕಾರಣರಾಗಿದ್ದ ನಮ್ಮ ಮೋಸಸ್ ಮೇಷ್ಟರು ಇವರೆಲ್ಲ ಇರುವಾಗ ಕಾಯಿಲೆ ಗುಣವಾಗದೆ ಇರುತ್ತದೆಯೆ ಎಂಬ ಅಣುಗುಕೆಚ್ಚು. ಜೊತೆಗೆ, ಬೇರೆ ಯಾರೂ ಇರದಿರುವಾಗ, ಶೋಕಾಕುಲೆಯಾಗಿದ್ದ ನನ್ನ ತಾಯಿ ನಾಲಗೆ ಬಿದ್ದು ಹೋಗಿ ಮಾತಾಡಲಾರದಿದ್ದ ತನ್ನ ಸ್ವಾಮಿಯ ಬಳಿ ಕುಳಿತು ಪರಿತಪಿಸುತ್ತಾ, ಧರ್ಮಸ್ಥಳ ತಿರುಪತಿ ಇತ್ಯಾದಿ ದೇವರುಗಳಿಗೆ ತನ್ನ ದೈನ್ಯವನ್ನು ಹೇಳಿಕೊಂಡು, ಮೂರುಕಾಸು ಆರುಕಾಸುಗಳನ್ನು ನಮ್ಮ ತಂದೆಗೆ ‘ಸುಳಿಸಿ’ ಅಂದರೆ ಪ್ರದಕ್ಷಿಣೆ ಬರಿಸಿ, ತನ್ನ ಜೀವನದೇವತೆಗೆ ಗುಣವಾದರೆ ಬೆಳ್ಳಿಸರಿಗೆ ಮಾಡಿಸಿ ಹಾಕುವುದಾಗಿ ಹೇಳಿಕೊಳ್ಳುತ್ತಿದ್ದುದನ್ನು ಕಂಡಾಗ ನನಗೂ ಧೈರ್ಯವಾಗುತ್ತಿತ್ತು, ಇಂಥಾ ಭಕ್ತೆಯಾಗಿರುವ ನನ್ನ ಅವ್ವನ ಅಹವಾಲನ್ನು ದೇವರುಗಳು ಮನ್ನಿಸದೆ ಇರುತ್ತಾರೆಯೆ ಎಂದು!

ಒಂದು ಸಾಯಂಕಾಲ ಆ ಮೂರಂಕಣದ ಗುಡಿಸಲಿನ ಜಗಲಿ ಎಂಬ ಹೆಸರು ಹೊತ್ತಿದ್ದ ನಡುವಣ ಅಂಕಣದಲ್ಲಿ ಅಪ್ಪಯ್ಯನನ್ನು ಮಲಗಿಸಿದ್ದರು. ಅಲ್ಲಿ ಬೇರೆ ಯಾರೂ ಇರಲಿಲ್ಲ. ಅವರ ಪಾದಗಳೆಡೆ ಕುಳಿತು ದುಃಖಾರ್ತೆಯಾಗಿದ್ದ ನನ್ನ ಅವ್ವ ಏನೇನನ್ನೊ ಮೆಲ್ಲಗೆ ಹೇಳಿತ್ತಾ ಕುಳಿತಿದ್ದರು. ತಾಯಿ ಹೇಳುತ್ತಿದ್ದುದು ಅಪ್ಪಯ್ಯನಿಗೆ ಹೇಳಿಸುತ್ತಿತ್ತು. ಆದರೆ ಮಾತು ನಿಂತುಹೋಗಿದ್ದುದರಿಂದ ಯಾವ ಪ್ರತ್ಯುತ್ತರದ ಪ್ರತಿಕ್ರಿಯೆಯನ್ನು ತೋರಿಸಲಾಗುತ್ತಿರಲಿಲ್ಲ. ಆದರೂ ಅವರು ಪ್ರಜ್ಞಾವಂತರಾಗಿ ಕಣ್ಣು ತೆರೆದು ನೋಡುತ್ತಿದ್ದರು. ನಾನು ಬಹುಶಃ ಹೊರಗೆ ಆಟಕ್ಕೆ ಹೋಗುವವನು, ಅವ್ವ ಕರೆದುದರಿಂದಲೊ ಏನೊ ಸರಿಯಾಗಿ ನೆನಪಿಲ್ಲ, ಅವ್ವನ ಪಕ್ಕದಲ್ಲಿ ಅಪ್ಪಯ್ಯನ ಪಾದದೆಡೆ ನಿಂತು, ಜ್ವರತಪ್ತವಾಗಿ ಶೀರ್ಣವಾಗಿ ಮೂಕವಾಗಿದ್ದ ಅಪ್ಪಯ್ಯನ ಮುಖದ ಕಡೆ ನೋಡುತ್ತಾ ಇದ್ದೆ. ಅಪ್ಪಯ್ಯ ನನ್ನನ್ನೇ ನೋಡುತ್ತಾ ಮೌನವಾಗಿ ಮಲಗಿದ್ದರು. ಇದ್ದಕ್ಕಿದ್ದ ಹಾಗೆ ಅವರ ಮುಖ ಪ್ರಸನ್ನವಾಯಿತು; ಮುಗುಳು ನಗೆಯ ಅಲೆ ತುಟಿಗಳೆಡೆ ಸಂಚರಿಸಿತು. ಯಾವುದೋ ಅತ್ಯಂತ ಸುಖದ, ಸಂತೋಷದ, ಮಂಗಳಮಯ ದೃಶ್ಯವನ್ನು ಅವಲೋಕಿಸಿದವರಂತೆ ಅವರ ಮುಖ ಹರ್ಷಕಾಂತಿಯಿಂದ ದೀಪ್ತವಾಯಿತು. ಅದುವರೆಗೂ ನಾಲಗೆ ಬಿದ್ದುಹೋಗಿ ಮೂಕರಾಗಿದ್ದವರು ಆನಂದ ತಾಡಿತರಾದವರಂತೆ ನಗತೊಡಗಿದರು. ಆ ನಗೆಗೆ ದುರ್ಬಲವಾಗಿ ಎಲುಬುಚರ್ಮವಾಗಿದ್ದ ಅವರ ಮೈ ಕುಲುಕುತ್ತಿತ್ತು! ಯಾತಕ್ಕೆ ನಕ್ಕರೋ ಏನೋ ನಮಗೆ ತಿಳಿಯದಿದ್ದರೂ ಅದು ಸಂತೋಷದಿಂದ ಉಂಟಾದುದು ಎಂದು ಅವ್ವನಿಗೂ ಆಸೆ ಅಂಕುರಿಸಿತು, ಬಹುಶಃ ರೋಗ ವಿಮುಖವಾಗುವ ಸೂಚನೆ ಇರಬಹುದು ಎಂದು!

ಆದರೆ ಆ ನಗೆ, ಆ ಹರ್ಷ ಅವ್ವ ಊಹಿಸಿದಂತೆ ರೋಗವಿಮುಖತೆಗೆ ಮುನ್ಸೂಚನೆಯಾಗಿರಲಿಲ್ಲವೆಂಬುದು ಆ ರಾತ್ರಿಯೆ ಗೊತ್ತಾಯಿತು:

ನಮ್ಮ ತಂದೆ ತಾವು ಸಾಯುವ ಮುನ್ನ ನನ್ನ ಕಡೆ ನೋಡುತ್ತಾ ಏನೋ ತುಂಬ ಹರ್ಷದಾಯಕವಾದುದನ್ನು ಕಂಡಂತೆ ಸಂತೋಷಾತಿಶಯದಿಂದ ನಕ್ಕ ಆ ಚಿತ್ರ ನನ್ನ ಜೀವಮಾನವನ್ನೆಲ್ಲ ಬೆಂಬತ್ತಿ ಬಂದಿದೆ. ಏಕೆ ನಕ್ಕರು? ನನ್ನ ಮುಖದಲ್ಲಿ ಅವರಿಗೆ ಹರ್ಷದಾಯಕವಾಗುವಂತೆ ಯಾವ ‘ದರ್ಶನ’ ಮಿಂಚಿತು, ಶಾರೀರಿಕವಾಗಿ ಮಾನಸಿಕವಾಗಿ ಅವರಿದ್ದ ದುಃಸ್ಥಿತಿಯಲ್ಲಿ ಹಾಗೆ ನಗಲು ಸಾಧ್ಯವೇ ಇರಲಿಲ್ಲ. ಹಾಸ್ಯ ಪ್ರಚೋದನೆಗೂ ಅಲ್ಲಿ ಯಾವ ಕಾರಣವೂ ಇರಲಿಲ್ಲ; ತಮ್ಮ ಮಗನ ಮಂಗಲಮಯ ಭವಿಷ್ಯತ್ತಿನ, ಲೋಕೋತ್ತರ ಅಭ್ಯುದಯ ನಿಃಶ್ರೇಯಸಗಳ ಸಕೃದ್ದರ್ಶನವೇನಾದರೂ ಆಯಿತೆ? ಅಥವಾ ತಾವು ತಮ್ಮ ಮರಣಾನಂತರ ಆ ಮಗನಿಗೇ ಮಗನಾಗಿ ಹುಟ್ಟಿ, ಆ ಅವನ ಅಭ್ಯುದಯ ನಿಃಶ್ರೇಯಸಗಳಲ್ಲಿ ಪಾಲುಗೊಂಡು, ದೇಶವಿದೇಶಗಳಲ್ಲಿ ಉದ್ಯಮಿಯಾಗಿ ಸಂಚರಿಸುವ ಚಿತ್ರವೇನಾದರೂ ಗೋಚರವಾಯಿತೆ? ಅಂತಹುದೇ ಆದ ಒಂದು ದುರಂತ ಸನ್ನಿವೇಶದಲ್ಲಿ ಸುಮಾರು ಹನ್ನೆರಡು ವರ್ಷಗಳ ತರುವಾಯ, ಪ್ರಾಣತ್ಯಾಗ ಮಾಡುವ ಮುನ್ನ ನಮ್ಮ ದೊಡ್ಡ ಚಿಕ್ಕಪ್ಪಯ್ಯ ರಾಮಣ್ಣಗೌಡರೂ ಮೈಲಿಯಾಗಿ ಆಗತಾನೆ ಗುಣಗೊಳ್ಳುತ್ತಿದ್ದ ನನ್ನನ್ನು ಕುರಿತು ಆಡಿದ ಮಾತುಗಳೂ ನಮ್ಮ ತಂದೆಯ ನಗೆಯಷ್ಟೇ ರಹಸ್ಯಾರ್ಥಪೂರ್ಣವಾಗಿದ್ದು, ಮುಂದೆ ಸಾರ್ಥಕಗೊಂಡುದನ್ನು ನೆನೆದರೆ, ಸಾಯುವ ಮುನ್ನ ನಮ್ಮ ತಂದೆಗೆ ಕಂಡದ್ದು ‘ಭವಿಷ್ಯದ್ದರ್ಶನ’ವೆಂದೇ ನಂಬಬೇಕಾಗುತ್ತದೆ. ಆ ಮಟ್ಟಿಗಾದರೂ ಅವ್ವ ತಿರುಪತಿ ದೇವರಿಗೆ ಮುಡಿಪು ಕಟ್ಟಿ ಬೇಡಿಕೊಂಡದ್ದು ಸಾರ್ಥಕವಾಯಿತೊ ಏನೊ!

ಮಧ್ಯರಾತ್ರಿಯಾಗಿತ್ತೆಂದು ತೋರುತ್ತದೆ. ಹುಡುಗರು ನಾವೆಲ್ಲ ಮಲಗಿ ನಿದ್ದೆ ಹೋಗಿದ್ದೆವು. ಇದ್ದಕ್ಕಿದ್ದ ಹಾಗೆ ಏನೋ ಆದಂತಾಗಿ ಬೆಚ್ಚಿಬಿದ್ದು ಎಚ್ಚರಗೊಂಡೆ; ಅಳು, ರೋದನ, ಗೋಳಾಟದಿಂದ ಮನೆ ತುಂಬಿಹೋಗಿತ್ತು! ಜೊತೆ ಮಲಗಿದ್ದ ಹುಡುಗರೂ ಎದ್ದರು! ಅವರೂ ಅಳುತ್ತಾ ನನ್ನಂತೆಯೆ ಬಾಗಿಲೆಡೆಗೆ ನುಗ್ಗಿದರು. ಗುಡಿಸಲಿನ ನಡುವಣ ಅಂಕಣದಲ್ಲಿ ನನ್ನ ತಾಯಿ ಗೋಳಾಡುತ್ತಿದ್ದರು, ಏನೇನನ್ನೊ ಹೇಳಿಕೊಳ್ಳುತ್ತಾ. ನಮ್ಮ ದೊಡ್ಡ ಚಿಕ್ಕಪ್ಪಯ್ಯನವರೂ ಅಯ್ಯೋ ಎಂದು ಅಳುತ್ತಿದ್ದರು. ನಡೆದ ಸಂಗತಿಯ ಅರಿವೂ ಸ್ಪಷ್ಟವಾಗಿರದಿದ್ದರೂ, ಬಾಯಿಗೆ ನೀರು ಬಿಡುವುದೇ ಮುಂತಾದವುಗಳಿಂದ ನನಗೆ ಹೊಳೆಯಿತು, ಅಪ್ಪಯ್ಯ ನಮ್ಮನ್ನಗಲಿ ಹೋಗುತ್ತಿದ್ದಾರೆ ಎಂದು. ಅಷ್ಟರಲ್ಲಿ ಮೋಸಸ್ ಮೇಷ್ಟರು ತಮ್ಮ ಅಧಿಕಾರವಾಣಿಯಿಂದ ಗದರಿಸಿ ನಮ್ಮನ್ನೆಲ್ಲ ಕೋಣೆಗೆ ಹಿಂತಿರುಗಿ ಹಾಸಿಗೆಯಲ್ಲಿ ಮಲಗುವಂತೆ ಮಾಡಿದರು. ನಾನು ಅಳುತ್ತಲೇ ಇದ್ದೆ. ತಂದೆಯ ಸಾವಿನ ಪೂರ್ಣ ಅರ್ಥವಾಗಿ ನಾನು ಅಳುತ್ತಿದ್ದೆನೋ ಅಥವಾ ನನ್ನ ತಾಯಿ ಗೋಳಾಡುತ್ತಿದ್ದುದರಿಂದ ಅಳುತ್ತಿದ್ದೆನೋ ಈಗ ಸರಿಯಾಗಿ ಹೇಳಲಾರೆ.

ದೊಡ್ಡ ಚಿಕ್ಕಪ್ಪಯ್ಯ ರೋದಿಸುತ್ತಿದ್ದುದನ್ನು ನೋಡಿ ಮೋಸಸ್ ಮೇಷ್ಟರು “ಏನು ಗೌಡರೆ? ನೀವೆ ಹೀಗೆ ರೋದಿಸಿದರೆ ಹೇಗೆ?” ಎಂಬರ್ಥದ ಮಾತುಗಳನ್ನಾಡಿ ಸಮಾಧಾನ ಮಾಡಲು ಹೋದಾಗ ಅವರು “ಅಯ್ಯೋ, ಮೇಷ್ಟರೆ, ಇದ್ದೊಬ್ಬ ಅಣ್ಣನನ್ನು ಕಳಕೊಂಡೆನಲ್ಲಾ ಇನ್ನು ಎಲ್ಲಿಂದ ತರಲಿ ಅಂಥಾ ಅಣ್ಣನನ್ನು?” ಎಂಬರ್ಥದ ಮಾತುಗಳನ್ನಾಡಿದುದೂ ನನಗೆ ಕೇಳಿಸಿತ್ತು.

ಮರುದಿನ ಬೆಳಿಗ್ಗೆ, ಕಾಯಿಲೆ ಸುದ್ದಿಯನ್ನು ಕೇಳಿ, ನೋಡಿ ಹೋಗಲು ತೀರ್ಥಹಳ್ಳಿಗೆ ಬಂದಿದ್ದ ನಾಲ್ಕಾರು ನಂಟರು ನೆರೆದರು. ದೇವಂಗಿ ರಾಮಣ್ಣಗೌಡರೂ ಬಂದಿದ್ದರು. ಕಳೇಬರವನ್ನು ಗಾಡಿಯಲ್ಲಿ ದೋಣಿಗಂಡಿಗೆ ಸಾಗಿಸಿ, ದೋಣಿಯಲ್ಲಿ ಆಚೆಗೆ ಕೊಂಡೊಯ್ದರು. ತಂದೆಯ ಶವವಿದ್ದ ಗಾಡಿಯಲ್ಲಿಯೆ ಅವರ ಪಾದದೆಡೆ ಕುಳಿತು ತಾಯಿ ದುಃಖಿಸುತ್ತಿದ್ದರು. ನಾನೂ ನನ್ನ ತಂಗಿಯರಿಬ್ಬರೂ ಇತರ ಹುಡುಗರೊಡನೆ ಮತ್ತೊಂದು ಗಾಡಿಯಲ್ಲಿ ಹಿಂಬಾಲಿಸಿದೆವು. ದೊಡ್ಡವರೆಲ್ಲ, ದೇವಂಗಿ ರಮಣ್ಣಗೌಡರೂ ಸೇರಿ, ನಡೆದೇ ಬಂದರು ಕುಪ್ಪಳಿಗೆ. ಗಾಡಿ ಸುಡುಗಾಡಿನ ಬಳಿಯ ಕೂಡುಹಟ್ಟಿಯ ಹತ್ತಿರ ರಸ್ತೆಯಲ್ಲಿ ನಿಂತಿತು. ಅಷ್ಟರಲ್ಲಿ ಮನೆಯ ಅಮ್ಮದಿರೆಲ್ಲ ಅಲ್ಲಿ ನೆರೆದಿದ್ದರು. (ಹೆಣವನ್ನು ಮನೆಗೆ ಕೊಂಡೊಯ್ಯಲಿಲ್ಲ.) ಒಬ್ಬೊಬ್ಬರಾಗಿ ಬಂದು ಅಪ್ಪಯ್ಯನ ಕಳೇಬರವನ್ನು ನೋಡಿ ಗೋಳಿಟ್ಟರು. ಅವ್ವನನ್ನೂ ಸಂತೈಸಲು ಯತ್ನಿಸಿದರು. ಹುಡುಗರಾಗಿದ್ದ ನಮ್ಮನ್ನೆಲ್ಲ ಮನೆಗೆ ಹೋಗಿ ಎಂದು ಕಳುಹಿಸಿಬಿಟ್ಟರು. ನಾನೂ ನನ್ನ ತಂಗಿಯರಿಬ್ಬರೂ ಅಳುತ್ತಲೆ ಮನೆಯನ್ನು ಸೇರಿ, ಜಗಲಿಯ ಕೆಸರು ಹಲಗೆಯ ಮೇಲೆ ಕುಳಿತು ಬಿಕ್ಕಿ ಬಿಕ್ಕಿ ಅತ್ತೆವು. ಅಂಗಳದಲ್ಲಿದ್ದ ತುಳಸೀಕಟ್ಟೆಯ ಕಲ್ಲಿನ ದೇವರು ಕಲ್ಲಾಗಿಯೆ ಕುಳಿತಿತ್ತು.

ಅಪ್ಪಯ್ಯನ ದೇಹಕ್ಕೆ ಅಗ್ನಿಸಂಸ್ಕಾರವಾದುದನ್ನು ನಾನು ಪ್ರತ್ಯಕ್ಷವಾಗಿ ನೋಡದಿರುವಂತೆ ಮಾಡಿದ ಅಂದಿನ ನನ್ನ ವಿಧಿ ಇಂದಿನವರೆಗೂ ನನ್ನ ಮೇಲೆ ತನ್ನ ಅದೇ ಕರುಣಾಕಟಾಕ್ಷವನ್ನು ಬೀರಿದೆ ಎಂದರೆ ಆಶ್ಚರ್ಯವಾಗುತ್ತದೆ! ಉಳಿದವರಿರಲಿ ಎಷ್ಟು ಜನ ಹತ್ತಿರದ ಬಂಧುಗಳು ತೀರಿಹೋಗಿದ್ದಾರೆ. ಆದರೆ ಯಾರೊಬ್ಬರ ಅಗ್ನಿ ಸಂಸ್ಕಾರದ ಸಮಯದಲ್ಲೂ ನಾನು ಇರದಿರುವಂತೆ ವ್ಯೂಹವೊಡ್ಡಿದೆಯಲ್ಲಾ!