ಪದ್ಧತಿಯಂತೆ ನಡೆಯಬೇಕಾದ ಅಪರಕರ್ಮಗಳೆಲ್ಲ ಪೂರೈಸಿದ ಮೇಲೆ ಮತ್ತೆ ಹುಡುಗರನ್ನೆಲ್ಲ ತೀರ್ಥಹಳ್ಳಿಗೆ ಓದಲು ಕಳಿಸಿದರು. ಈ ಸಾರಿ ನಮ್ಮ ತಂದೆ ತೀರಿಕೊಂಡ ಗುಡಿಸಲಿಗೆ ಬದಲಾಗಿ ನಮಗಾಗಿಯೆ ಕೊಂಡುಕೊಂಡ ಮತ್ತೊಂದು ಮನೆಗೆ-ಅದೂ ಹುಲ್ಲಿನದೆ, ತುಸು ದೊಡ್ಡದಷ್ಟೆ-ಹೋಗಿದ್ದೆವು. ಆ ಮನೆಗೆ ಸುತ್ತಲೂ ಸ್ವಲ್ಪ ವಿಶಾಲವಾದ ಜಾಗವಿದ್ದು, ಅದರ ಒಂದು ಭಾಗದಲ್ಲಿ ಸಣ್ಣದೊಂದು ಕಾಫಿತೋಟವೂ ಇತ್ತು. ಎಂದಿನಂತೆ ವಿದ್ಯಾರ್ಥಿ ಜೀವನ ಪ್ರಾರಂಭವಾಯಿತು.

ಹತ್ತಾರು ಮಂದಿ ಗಂಡಸರೂ ಹೆಂಗಸರೂ ಇರುವ ಒಟ್ಟು ಕುಟುಂಬದಲ್ಲಿ ಯಾರಾದರೂ ಸತ್ತರೆ, ಸಾವಿನ ‘ದುಃಖ’ವಲ್ಲದೆ ಬೇರೆಯ ತರಹದ ‘ಕಷ್ಟ’ಗಳು ಹೆಚ್ಚಾಗಿ ಗಮನಕ್ಕೆ ಬರುವುದಿಲ್ಲ. ಮನೆಯ ಒಳಗಿನ ಮತ್ತು ಹೊರಗಿನ ಕೆಲಸ ಕಾರ್ಯಗಳು ಹಿಂದಿನಂತೆಯೆ ನಡೆದುಕೊಂಡು ಹೋಗುತ್ತಿರುತ್ತವೆ. ಗಂಡ ಹೆಂಡತಿ ಮಕ್ಕಳು ಪ್ರತ್ಯೇಕವಾಗಿರುವ ಕುಟುಂಬದಲ್ಲಿ ದುಡಿಯುತ್ತಿದ್ದ ಒಬ್ಬನೆ ವ್ಯಕ್ತಿ ಹೋದುದರಿಂದ ಉಂಟಾಗುವ ಹೊಟ್ಟೆಬಟ್ಟೆಯ ಬದುಕಿನ ಕಷ್ಟ ಕಾರ್ಪಣ್ಯಗಳು ಅಷ್ಟಾಗಿ ಗಮನಕ್ಕೆ ಬರುವುದಿಲ್ಲ. ಮಕ್ಕಳಿಗಾದರೂ ಅಷ್ಟೆ. ಅಪ್ಪಯ್ಯ ಹೋದುದರಿಂದ ನಿಜವಾಗಿಯೂ ಪರಿಹಾರವಾಗಲಾರದ ಭಯಂಕರ ವೈಧವ್ಯದುಃಖಕ್ಕೆ ಒಳಗಾದವರು ಅವ್ವ ಒಬ್ಬಳೆ. ಅವ್ವನ ದುಃಖಕ್ಕೆ ಮಕ್ಕಳಾಗಿದ್ದ ನಾವೂ ಸ್ವಲ್ಪಕಾಲ ದುಃಖಿಗಳಾಗಿದ್ದೆವು. ಆದರೆ ತೀರ್ಥಹಳ್ಳಿಗೆ ಮತ್ತೆ ಓದಲು ಬಂದು, ಮನೆಯ ಮತ್ತು ಇತರ ಹುಡುಗರೊಂದಿಗೆ ಸೇರಿ, ಆಟಪಾಠಗಳಲ್ಲಿ ತೊಡಗಿದ ಮೇಲೆ ಅಪ್ಪಯ್ಯನ ಸಾವಿನ ನೋವು ಕ್ರಮೇಣ ವಿಸ್ಮೃತಿ ಹೊಂದಿತು. ಆದರೆ ಜಾಗ್ರದವಸ್ಥೆಯಲ್ಲಿ ಆಟಪಾಟಾದಿಗಳಲ್ಲಿ ತೊಡಗಿದ್ದಾಗ ಅಪ್ಪಯ್ಯನ ನೆನಪು ಅಳಿಸಿಹೋಗಿರುತ್ತಿದ್ದರೂ ನಿದ್ದೆಯಲ್ಲಿ ಕನಸಿನ ರೂಪದಲ್ಲಿ ಮತ್ತೆ ಮತ್ತೆ ಬರುತ್ತಿತ್ತು. ಆ ಕನಸುಗಳಲ್ಲಿಯೂ ತಕ್ಕಮಟ್ಟಿನ ವೈವಿಧ್ಯಗಳಿರುತ್ತಿದ್ದರೂ ಒಂದು ಸಂಗತಿ ಮಾತ್ರ ಅನಿವಾಐðವಾಗಿ ಧ್ವನಿಸುತ್ತಿತ್ತು. ಅಪ್ಪಯ್ಯ ನಮ್ಮನ್ನೆಲ್ಲ ತೊರೆದು ಎಲ್ಲಿಗೊ ಹೋಗಿಬಿಟ್ಟಿದ್ದಾರೆ; ಮತ್ತೆ ಬರುತ್ತಾರೆ. ಅದಕ್ಕಾಗಿ ನಾವೆಲ್ಲ ಅಳುತ್ತಾ ಕಾಯುತ್ತಿದ್ದೇವೆ. ಒಂದೊಂದು ಸಾರಿ ಕನಸಿನಲ್ಲಿ-ಅಪ್ಪಯ್ಯ ಬಂದುಬಿಟ್ಟಿದ್ದಾರೆ! ನಾನು ಅವರನ್ನು ತಬ್ಬಿಕೊಂಡು “ಇಷ್ಟು ದಿನ ಏಕೆ ನಮ್ಮನ್ನು ಬಿಟ್ಟು ಹೋದಿರಿ? ಎಲ್ಲಿಗೂ ಹೋಗಬೇಡಿ ಇನ್ನು ಮೇಲೆ ನಾವೇನೂ ಮಾಡುವುದಿಲ್ಲ, ನಿಮಗೆ ಸಿಟ್ಟು ಬರುವಂತೆ!” ಎಂದು ಅಂಗಲಾಚುತ್ತಿರುವಂತೆ! ಇನ್ನೊಮ್ಮೆ-ಕಣ್ಮರೆಯಾಗಿದ್ದ ಅಪ್ಪಯ್ಯ ಯಾವುದೊ ಜಾತೆಯಲ್ಲಿ ದೂರದಲ್ಲಿ ಹೋಗುತ್ತಿರುವಂತೆಯೂ, ಕಂಡ ನಾನೂ ಕರೆಯುತ್ತಾ ಅವರೆಡೆಗೆ ಓಡುತ್ತಿರುವಂತೆಯೂ, ಆದರೆ ಜನಸಂದಣಿಯಲ್ಲಿ ನಮ್ಮನ್ನು ವಂಚಿಸಿ ಹೋದಂತೆಯೂ ಕನಸು ಬೀಳುತ್ತಿತ್ತು. ಮತ್ತೊಮ್ಮೆ-ಅಪ್ಪಯ್ಯ ಹಿಂದಕ್ಕೆ ಬಂದಿದ್ದಾರೆ. ಆದರೆ ಕಾಯಿಲೆಯಿಂದ ಕೃಶವಾಗಿ ಬಡಕಲಾಗಿ ದೈನ್ಯಾವಸ್ಥೆಯಲ್ಲಿದ್ದಾರೆ ಎಂಬಂತೆ ಕನಸು. ಈ ಕನಸುಗಳಿಂದ ಎಚ್ಚತ್ತು ಸಂಕಟಪಡುತ್ತಿತ್ತು ನನ್ನ ಮನಸ್ಸು.

ಬಹುಶಃ ನನಗೆ ಮದುವೆಯಾಗಿ ಅಪ್ಪನ್ನ ನನಗೆ ಮಗನಾಗಿ ಹುಟ್ಟುವವರೆಗೂ, ಸುಮಾರು ಇಪ್ಪತ್ತೈದು ವರ್ಷಗಳೂ ಈ ತರದ ಕನಸುಗಳು ಬೀಳುತ್ತಲೆ ಇದ್ದುವೆಂದು ತೋರುತ್ತದೆ. ಆಮೇಲೆ ಒಮ್ಮೆಯೂ ಆ ರೀತಿಯ ಅಪ್ಪಯ್ಯನ ಕನಸು ಬಿದ್ದಂತೆ ನೆನಪಿಲ್ಲ.

ಆದರೆ ಅವ್ವ ಮಾತ್ರ ಅಪ್ಪಯ್ಯನ ಸಾವಿನ ಆಘಾತದಿಂದ ತತ್ತರಿಸಿದವರು ಸಂಪೂರ್ಣವಾಗಿ ಚೇತರಿಸಿಕೊಳ್ಳಲೆ ಇಲ್ಲವೆಂದು ತೋರುತ್ತದೆ. ಹುಡುಗರಾಗಿದ್ದು!, ಓದುವುದಕ್ಕೆಂದು ಮನೆ ಬಿಟ್ಟ ವರ್ಷದ ಬಹುಪಾಲೆಲ್ಲ ಹೊರಗಿದ್ದು, ರಜೆಗೆ ಮಾತ್ರ ಮನೆಗೆ ಬಂದರೂ, ವಿಶೇಷವಾಗಿ ಇತರ ಮನೆಮಕ್ಕಳೊಡನೆ ತೋಟ ಗದ್ದೆ ಕಾಡು ಬೇಟೆ ನಂಟರಮನೆ ಮೊದಲಾದ ಹವ್ಯಾಸಗಳಲ್ಲಿಯೆ ಆಸಕ್ತನಾಗಿರುತ್ತದ್ದ ಅಲಕ್ಷ ಮನೋಭಾವದ ನನಗೆ ಅವ್ವನ ಸಂಗಡ ವೈಯಕ್ತಿಕ ವಿಷಯಗಳನ್ನು ಕುರಿತು ಮಾತಾಡುವ ಅವಕಾಶವೂ ಇರುತ್ತಿರಲಿಲ್ಲ; ಆಸಕ್ತಿಯೂ ಇರಲಿಲ್ಲ. ಹೀಗಗಿ ಅವರ ಹೃದಯದ ಬೇಗೆಯಲ್ಲಿ ನಾನು ಸಹಾನುಭೂತಿಯಿಂದ ಪಾಲುಗೊಳ್ಳಲೆ ಇಲ್ಲ. ಅವರನ್ನು ದಹಿಸುತ್ತಿದ್ದ ಅಪ್ಪಯ್ಯನ ಮರಣದ ಬೇಗೆಯ ಜೊತೆಗೆ ಸಂಸಾರದ ಈರ್ಷ್ಯಾದ್ವೇಷ ಅಸೂಯೆ ಕಾರ್ಪಣ್ಯಗಳ ಬೇಗೆಯೂ, ಇದ್ದ ಒಬ್ಬನೆ ಮಗನ ಅಲಕ್ಷದ ಬೇಗೆಯೂ ಸೇರಿ, ಅಪ್ಪಯ್ಯ ತೀರಿಕೊಂಡ ಎಂಟೇ ವರ್ಷಗಳಲ್ಲಿ ಅವರೂ ಸ್ವಾಮಿಯ ಪಾದಾರವಿಂದಕ್ಕೆ ಸೇರಿದರು.