ಈ ಮನೆಯಲ್ಲಿಯೂ ಮೋಸಸ್ ಮೇಷ್ಟರು ನಮಗೆ ಮನೆಪಾಠ ಹೇಳಿಕೊಡುತ್ತಿದ್ದರು. ಹಾಗೆಯೆ ಯಾವುದೊ ಒಂದು ಪ್ರಾಥಮಿಕ ಶಾಲೆಯಲ್ಲಿ ಸರ್ಕಾರಿಹುದ್ದೆಯ ಉಪಾಧ್ಯಾಯರಾಗಿಯೂ ಅವರು ಕೆಲಸ ಮಾಡುತ್ತಿದ್ದರು. ಆದರೆ ಈಗ ಅವರು ಮದುವೆಯಾಗಿದ್ದರು. ಅವರ ಹೆಂಡತಿ ನರ್ಸ್‌ಕೆಲಸ ಮಾಡುತ್ತಿದ್ದರು ಆಸ್ಪತ್ರೆಯಲ್ಲಿ. ದಂಪತಿಗಳು ನಮ್ಮ ಹುಲ್ಲಿನ ಮನೆಯ ಒಂದು ಪ್ರತ್ಯೇಕ ಕೊಠಡಿಯಲ್ಲಿ ಮನೆಮಾಡಿದ್ದರು. ಆ ಒಂದೆ ಕೊಠಡಿಯಲ್ಲಿ ಅಡುಗೆ ಊಟ ಮಲಗುವುದು ಸ್ನಾನ ಎಲ್ಲವೂ ಹೇಗೆ ಆಗುತ್ತಿತ್ತೊ ನಾನರಿಯೆ! ಆದರೆ ನಾವೂ-ಏಳೆಂಟು ಜನ ಹುಡುಗರು ನಮ್ಮನ್ನು ನೋಡಿಕೊಳ್ಳಲಿದ್ದ ಒಬ್ಬ ಅಮ್ಮ, ಒಬ್ಬ ಆಳು ಎಲ್ಲರೂ ಉಳಿದ ಎರಡು ಕೋಣೆಗಳಲ್ಲಿಯೆ ‘ಮನೆ’ ಮಾಡಿದ್ದೆವಾದ್ದರಿಂದ ಆಗ ನಮಗೆ ಅಂತಹ ಸಮಸ್ಯೆಗಳೊಂದೂ ಪ್ರಜ್ಞೆಗೆ ಬರುತ್ತಲೆ ಇರಲಿಲ್ಲ!

ಸ್ಕೂಲಿಗೆ ಹೋಗುವುದು, ಐದು ಗಂಟೆಗೆ ಮನೆಗೆ ಬರುವುದು, ಏನಾದರೂ ತಿಂಡಿ ಕಾಫಿ ಮಾಡುವುದು, ಆಟದ ಬದಲಿಗೆ-ಫುಟ್ ಬಾಲ್ ಬ್ಯಾಡ್ ಮೆಂಟನ್ನೋ ಕ್ರಿಕೆಟ್ಟೋ ಯಾವುದಾದರೂ ಆಟದಲ್ಲಿ ಮಗ್ನವಾಗುವುದು, ಕತ್ತಲಾದ ಮೇಲೆ ಬಳಲಿ ಬೆವರುತ್ತಾ ಮನೆಗೆಬಂದು, ಕೈಕಾಲು ಮುಖ ತೊಳೆದುಕೊಂಡು, ಲ್ಯಾಂಪಿನ ಬೆಳಕಿನಲ್ಲಿ ಓದುವ ಶಾಸ್ತ್ರಮಾಡುವುದು, ಉಂಡು ಮಲಗುವುದು-ಹೀಗೆ ದಿನದ ಮೇಲೆ ದಿನ ಕಳೆಯುತ್ತಿದ್ದುವು. ರಜಾದಿನಗಳಲ್ಲಿ ಊರಿನ ಹುಡುಗರ ಜೊತೆಗೆ ವಿಶೇಷ ಕಾರ್ಯಕ್ರಮಗಳೂ ಇರುತ್ತಿದ್ದವು. ಚಕ್ರ ಬಿಟ್ಟುಕೊಂಡು ಭಾರತಿಪುರದ ಉಬ್ಬಿನ ಕಡೆಗೆ ತೀರ್ಥಹಳ್ಳಿ-ಶಿವಮೊಗ್ಗ ರಸ್ತೆಯಲ್ಲಿ ಜಿದ್ದಾಜಿದ್ದಿನಿಂದ ಧಾವಿಸುತ್ತಿದ್ದೆವು. ಅಥವಾ ಗುಂಪು ಕಟ್ಟಿಕೊಂಡು ಕಳ್ಳ ಪೋಲಿಸು ಆಟವಾಡುತ್ತಾ ಸುತ್ತಮುತ್ತಣ ಕಾಡು ಮಲೆಗಳಲ್ಲಿ ತೊಳಲುತ್ತಿದ್ದೆವು. ಅಥವಾ ಚೀಲಕ್ಕೆ ಕಲ್ಲು ತುಂಬಿ ಹೆಗಲಿಗೆ ಹಾಕಿಕೊಂಡು ರಬ್ಬರ್ ಬಿಲ್ಲು ಹಿಡಿದು ಹೊಳೆಯ ಪಕ್ಕದ ಕಾಡುಗಳಲ್ಲಿ ಅಲೆಯುತ್ತಿದ್ದೆವು. ಕೆಲವೊಮ್ಮೆ ಗೋಲಿಯಾಟದ ಸ್ಪರ್ಧೆ ಏರ್ಪಡಿಸಿ, ಹಗಲು ಮುಗಿದರೂ ಆಟ ಮುಗಿಯದೆ, ತುಂಬ ಕತ್ತಲಾದ ಮೇಲೆ ಮನೆಗೆ ಬಂದು ಹೊತ್ತಾಗಿ ಬಂದುದಕ್ಕೆ ಬೈಸಿಕೊಳ್ಳುತ್ತಿದ್ದೆವು. ಬೇಸಗೆ ರಜಾ ಕ್ರಿಸ್‌ಮಸ್ ರಜಾಗಳಲ್ಲಿ ಮನೆಗೆ ಹೋಗಿ ಕಾಡು ಸುತ್ತುವ ಬೇಟೆಯಾಡುವ ಕೆರೆಗಳಲ್ಲಿ ಬಲೆಹಾಕಿ ಮೀನು ಹಿಡಿಯುವ ನಾನಾ ಕ್ರೀಡೆಗಳಲ್ಲಿ ಕಾಲ ಕಳೆಯುತ್ತಿದ್ದೆವು.

ಶಾಲೆಯ ಚಟುವಟಿಕೆಗಳನ್ನು ಬಿಟ್ಟರೆ ನಾವು ಪೇಟೆಯ ಯಾವ ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ಭಾಗವಹಿಸಿದ್ದು ನೆನಪಿಲ್ಲ. ಅಂತಹ ಸಾಂಸ್ಕೃತಿಕ ಚಟುವಟಿಕೆಗಳು ಇದ್ದುದೂ ಅಷ್ಟಕಷ್ಟೇ ಎಂದು ತೋರುತ್ತದೆ. ಇದ್ದರೂ ಅವೆಲ್ಲ ಬ್ರಾಹ್ಮಣ ವರ್ಗಕ್ಕೇ ಮೀಸಲಾಗಿದ್ದುದರಿಂದ ನಮಗೆ ಅಲ್ಲಿ ಪ್ರವೇಶವಿರುತ್ತಿರಲಿಲ್ಲ. ಎಳ್ಳಮಾವಾಸ್ಯೆಯಂತಹ ವರ್ಷಕ್ಕೊಮ್ಮೆ ನಡೆಯುತ್ತಿದ್ದ ದೊಡ್ಡ ಜಾತ್ರೆಯಲ್ಲಿಯೂ ನಾವು ಜನ ಸಂದಣಿಯ ನಡುವೆ ಬೀದಿಗಳಲ್ಲಿ ಅಲೆದು, ಹಾದಿಯ ಬದಿ ಮಾರುತ್ತಿದ್ದ ಬತ್ತಾಸು ಮಿಠಾಯಿ ಕಡಲೆ ಕಾರದಕಡ್ಡಿ ಇತ್ಯಾದಿಗಳನ್ನು ಕೊಂಡು ತಿನ್ನುವುದರಲ್ಲಿಯೆ ನಮ್ಮ ಜಾತ್ರೆಯ ಉತ್ಸಾಹ ಪರ್ಯವಸಾನವಾಗುತ್ತಿತ್ತು. ತೇರು ಎಳೆಯುವುದನ್ನು ದೂರದಿಂದಲೆ ಹೆದರಿ ಹೆದರಿ ನೋಡುತ್ತಿದ್ದೆವು. ದೇವಸ್ಥಾನಕ್ಕಂತೂ ಒಮ್ಮೆಯೂ ಬಳಿಸಾರಿದ ನೆನಪಿಲ್ಲ. ಶೂದ್ರರಾದ ನಮ್ಮನ್ನು ಹತ್ತಿರಕ್ಕೆ ಸೇರಿಸದಿದ್ದ ಆ ಬ್ರಾಹ್ಮಣರಲ್ಲಿ ನಮಗೆ ತಿರಸ್ಕಾರವಿದ್ದಿತೆ ಹೊರತೂ ಭಯ ಇರಲಿಲ್ಲ. ಅವರ ಉಡುಗೆ ತೊಡುಗೆ ಜನಿವಾರ ಹೊಟ್ಟೆ ‘ಅರೆನಗ್ನತೆ’ ಇವುಗಳನ್ನು ಕ್ರೈಸ್ತ ಉಪಾಧ್ಯಾರಿಂದ ಕಲಿತಿದ್ದ ರೀತಿಯಲ್ಲಿ ಪರಿಹಾಸ್ಯವನ್ನೂ ಮಾಡುತ್ತಿದ್ದೆವು.