ನಮ್ಮ ಉಪಾಧ್ಯಾಯರುಗಳಲ್ಲಿ ಒಬ್ಬರು ರಾಮರಾಯರು. ಅವರು ಇಂಗ್ಲಿಷ್ ಪಾಠಕ್ಕೆ ಬರುತ್ತಿದ್ದರು. ಬಿಳಿಯ ಪೇಟ, ಕೋಟು, ಕಚ್ಚೆ ಹಾಕಿ ನೀಟಾಗಿರುತ್ತಿದ್ದರು. ಇತರ ಕೆಲವರಂತೆ ಅವರು ಹೊಡೆಯುತ್ತಲೂ ಇರಲಿಲ್ಲ; ಹೆದರಿಸುತ್ತಿದ್ದರೂ ತುಂಬ ಸೌಮ್ಯವಾಗಿ ನಾಗರಿಕವಾಗಿ ನಗುತ್ತಲೆ ಇರುತ್ತಿದ್ದರು. ಆದ್ದರಿಂದ ನಮಗೆಲ್ಲ ಅವರಲ್ಲಿ ಹೆಚ್ಚು ಗೌರವ, ವಿಶ್ವಾಸ. ಅವರದ್ದು ಒಂದು ಹಟ: ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ಜಾತಿಯ ಲಲಾಟಚಿಹ್ನೆಯನ್ನು, ಅವರು ಹೇಳುತ್ತಿದ್ದಂತೆ ‘ಕ್ಯಾಸ್ಟ್‌ಮಾರ್ಕ್‌’ ಅನ್ನು, ಇಟ್ಟುಕೊಂಡೇ ಕ್ಲಾಸಿಗೆ ಬರಬೇಕು ಎಂದು. ಬ್ರಾಹ್ಮಣರು, ಕೊಂಕಣಿಗಳು ತಪ್ಪದೆ ಹಾಗೆ ತಪ್ಪದೆ ಹಾಗೆ ತಿಲಕ ಧರಿಸಿಯೆ ಬರುತ್ತಿದ್ದರು. ನಾನು, ಹೆಸರಿಗೆ ನಾಮಧಾರಿ. ಒಕ್ಕಲಿಗ ಜಾತಿಗೆ ಸೇರಿದ್ದರೂ, ಲಾಂಛನಗಳ ವಿಚಾರದಲ್ಲಿ ಅಷ್ಟೇನೂ ಆಸಕ್ತನಾಗಿರಲಿಲ್ಲ. ಮನೆಯಲ್ಲಿ ಇನ್ನೂ ಚಿಕ್ಕವನಾಗಿದ್ದಾಗ, ನಾಮದ ಪೆಟ್ಟಿಗೆಯ ಮುಂದೆ ಕುಳಿತು ಅಪ್ಪಯ್ಯ ಅಜ್ಜಯ್ಯ ಯಾರಾದರೂ ಹಿರಿಯರು ನಾಮ ಧರಿಸಿಕೊಳ್ಳುತ್ತಿದ್ದಾಗ, ನಾನೂ ಮುಖ ಚಾಚಿ ನಾಮ ಇಡಿಸಿಕೊಳ್ಳುತ್ತಿದ್ದೆ. ಅಷ್ಟೆ ಹೊರತೂ ಅದನ್ನು ಧಾರ್ಮಿಕಶ್ರದ್ಧೆಯನ್ನಾಗಿ ಗೌರವಿಸುತ್ತಿರಲಿಲ್ಲ. ತೀರ್ಥಹಳ್ಳಿಯಲ್ಲಂತೂ ನಾಮ ಇಟ್ಟುಕೊಳ್ಳುವುದೆಲ್ಲಿ ಬಂತು? ಆದರೆ ರಾಮರಾಯರ ಪೀಡೆ ತಡೆಯಲಾರದೆ ಒಂದು ಉಪಾಯ ಹೂಡಿದ್ದೆ. ಅವರ ಕ್ಲಾಸು ಇರುವಾಗ, ಯಾರಾದರೂ ಹಣೆಗೆ ನಾಮ ಇಟ್ಟುಕೊಂಡು ಬಂದ ಗೆಳೆಯನನ್ನು ಹಿಡಿದು, ಅವನ ಹಣೆಗೆ ನೇರವಾಗಿ ನನ್ನ ಹಣೆಯನ್ನು ಒತ್ತಿ, ಬಲವಾಗಿ ಒತ್ತಿ, ನನ್ನ ಹಣೆಗೂ ನಾಮದ ಗುರುತು ಬೀಳುವಂತೆ ಮಾಡಿಕೊಂಡು ರಾಮರಾಯರ ತರಗತಿಗೆ ಧೈರ್ಯವಾಗಿ ಹೋಗುತ್ತಿದ್ದೆ. ಒಮ್ಮೊಮ್ಮೆ, ಒಂದೆ ನಾಮ ಇಟ್ಟುಕೊಂಡ ಗೆಳೆಯ ಸಿಕ್ಕದಿದ್ದರೆ, ಮೂರು ನಾಮದ ಐಯ್ಯಂಗಾರ್ ಗೆಳೆಯನನ್ನೆ ಹಿಡಿದು, ಅವನ ಹಣೆಗೆ ನನ್ನ ಹಣೆ ಡಿಕ್ಕಿ ಹೊಡೆಸುತ್ತಿದ್ದೆ. ಆದರೆ ಒಕ್ಕಲಿಗರ ಹುಡುಗ ಎರಡು ಬಿಳಿನಾಮಗಳ ನಡುವೆ ಒಂದು ಕೆಂಪುನಾಮ ಇಟ್ಟುಕೊಳ್ಳುತ್ತಿದ್ದುದು ಅಪೂರ್ವ. ರಾಮರಾಯರು ಇದೇನು ಐಯ್ಯಂಗಾರ್ ನಾಮ ಹಾಕಿಕೊಂಡಿದ್ದೀಯಾ ಎಂದು ಕೇಳಿದರೆ, ಒಮ್ಮೊಮ್ಮೆ ವಿಶೇಷ ದಿನಗಳಲ್ಲಿ ಗೌಡರೂ ಮೂರುನಾಮ ಹಾಕಿಕೊಳ್ಳುತ್ತಾರೆ, ದಾಸಯ್ಯಗಳಂತೆ, ಎಂದು ಹೇಳಿ ತಪ್ಪಿಸಿಕೊಳ್ಳುತ್ತಿದ್ದೆ. ಆದರೆ ಒಮ್ಮೆ ಇಂತಹ ಘಟನೆ ಸಂಭವಿಸಿದ ತರುವಾಯ, ಸ್ನೇಹಿತನ ಹಣೆಯ ಮೂರು ನಾಮ ನನ್ನ ಹಣೆಗೆ ಬಂದಿದ್ದರೂ, ಅವನ ಕೈಯಿಂದಲೆ ಅಕ್ಕಪಕ್ಕದ ಎರಡು ಬಿಳಿನಾಮಗಳನ್ನು ಎಚ್ಚರಿಕೆಯಿಂದ ಒರಸಿಹಾಕುವಂತೆ ಮಾಡುತ್ತಿದ್ದೆ.

ಈ ನಾಮದ ದೆಸೆಯಿಂದ ಒಮ್ಮೆ ಕೇಡಿರಿಜಿಸ್ಟರಿಗೆ ನನ್ನ ಹೆಸರು ದಾಖಲಾಗಿದ್ದುದೂ ಉಂಟು. ಕೆಲವು ಐಯ್ಯಂಗಾರ ಹುಡುಗರು ಶೂದ್ರನ ಹಣೆಗೆ ಹಣೆಯೊತ್ತಿದರೆ ತಮ್ಮಜಾತಿ ಕೆಟ್ಟು ಹೋಗುತ್ತದೆ. ಮಡಿಕೆಟ್ಟು ಮೈಲಿಗೆಯಾಗುತ್ತದೆ ಎಂದು ಹಣೆ ಮುದ್ರಣಕ್ಕೆ ಒಪ್ಪುತ್ತಿರಲಿಲ್ಲ. ಒಮ್ಮೆ ಜಾತಿಭೇದ ಇಲ್ಲದ ಸ್ನೇಹಿತರಾರೂ ಸಿಕ್ಕಲಿಲ್ಲ, ಹಣೆಗೆ ನಾಮ ಒತ್ತಿಸಿಕೊಳ್ಳುವುದಕ್ಕೆ. ಆದರೆ ರಾಮರಾಯರ ಕ್ಲಾಸಿಗೆ ಹೋಗಲೇಬಾಕಾಯಿತು. ಯಾರಾದರೇನಂತೆ? ಹಣೆಗೆ ನಾಮದ ಚಿಹ್ನೆ ಬಿದ್ದರಾಯಿತು ಎಂದು, ಹತ್ತಿರದ ಗೆಳೆಯನಲ್ಲದ, ಫಕ್ಕನೆ ಎದುರಾಗಿ ಕಣ್ಣಿಗೆ ಬಿದ್ದ ಹುಡುಗನೊಬ್ಬನನ್ನು ಹಣೆಗೆ ಹಣೆಯೊತ್ತಿ, ನಾನು ಬೆಂಚಿನ ಮೇಲೆ ನಿಲ್ಲಬೇಕಾದ ಶಿಕ್ಷಾಪ್ರಸಂಗದಿಂದ ಪಾರುಮಾಡುವಂತೆ ಕೇಳಿಕೊಂಡೆ. ಅವನು ತುಂಬ ಮಡಿ ಹಾರುವ, ನನ್ನ ಬೇಡಿಕೆಯನ್ನು ತಿರಸ್ಕರಿಸಿದ್ದು ಮಾತ್ರವಲ್ಲದೆ ‘ಶೂದ್ರ’, ‘ಮುಟ್ಟಾಳು’ ಎಂದು ಏನೇನೊ ಹೇಳಿಬಿಟ್ಟ. ನನಗೆ ಸಿಟ್ಟು ಏರಿ ‘ನಿನ್ನ ಜನಿವಾರ ಕಿತ್ತುಹಾಕಿ, ಮುಖದ ಮೇಲೆ ಉಗುಳಿ ಜಾತಿ ಕೆಡಿಸುತ್ತೇನೆ’ ಎಂದೆ. ಆ ಕಾಲದಲ್ಲಿ ಬ್ರಾಹ್ಮಣರ ಹುಡುಗರು ಎಷ್ಟೇ ಬಲಿಷ್ಠರಾಗಿರಲಿ ಚಿಕ್ಕ ಚಿಕ್ಕ ಸಾಬರ ಹುಡುಗರಿಗೂ ಶೂದ್ರ ಮಕ್ಕಳಿಗೂ ಹೆದರಿಕೊಳ್ಳುತ್ತಿದ್ದರು, ಎಲ್ಲಿ ಉಗುಳಿ ಜಾತಿ ಕೆಡಿಸುತ್ತಾರೊ ಎಂದು! ಅಂತೂ ಆ ಹುಡುಗ ಹೆಡ್ಮಾಸ್ಟರಿಗೆ ದೂರುಕೊಟ್ಟ. ಸರಿ, ಹೆಡ್ಮಾಸ್ಟರೂ ಬ್ರಾಹ್ಮಣರು. ಶೂದ್ರ ಮಕ್ಕಳೆಲ್ಲಾ ಬ್ರಾಹ್ಮಣ ಬಾಲಕರೊಡನೆ ಒಂದೇ ಬೆಂಚಿನಮೇಲೆ ಮೈಗೆ ಮೈ ಮುಟ್ಟುವಂತೆ ಕುಳಿತುಕೊಂಡು ಬ್ರಾಹ್ಮಣತ್ವವೆಲ್ಲ ಹಾಳಾಗಿ ಹೋಗುತ್ತಿದೆ ಎಂದು ಮೊದಲೇ ಈರ್ಷ್ಯೆಯಲ್ಲಿದ್ದ ಆ ಪುಣ್ಯಾತ್ಮ ನನ್ನನ್ನು ಆಫೀಸು ರೂಮಿಗೆ ಕರೆಸಿ, ವಿಚಾರಣೆ ಮಾಡಿದ. ಆ ಹುಡುಗ ನಾನು ಉಗುಳುತ್ತೇನೆ ಎಂಬುದನ್ನು ‘ಉಗುಳಿಯೆ ಬಿಟ್ಟ’ ಎಂದು ವರದಿ ಮಾಡಿದ್ದ. ನಾನು ‘ಉಗುಳಲಿಲ್ಲ, ಉಗುಳುತ್ತೇನೆ ಎಂದು ಹೆದರಿಸಿದೆನಷ್ಟೆ’ ಎಂದು ಹೇಳಿದರೂ ‘ಉಗುಳುತ್ತೇನೆ ಎಂದದ್ದು ಉಗುಳಿದ್ದಕ್ಕಿಂತಲೂ ಕಡುಪಾಪ!’ ಎಂದು ಶಿಕ್ಷೆ ವಿಧಿಸಿಯೆ ಬಿಟ್ಟ: ಬೆತ್ತದಿಂದ ಅಂಗೈಗಳಿಗೆ ಏಟು ಬಿಗಿದು, ಕೇಡಿರಿಜಿಸ್ಟರಿಗೆ ನನ್ನ ಹೆಸರನ್ನು ಸೇರಿಸಿಬಿಟ್ಟ! ಕೇಡಿರಿಜಿಸ್ಟರಿಗೆ ಹೆಸರು ಸೇರುವುದೆಂದರೆ ಬಹಳ ಕೆಟ್ಟದ್ದು! ತರುಆಯದ ಬದುಕಿನಲ್ಲಿ ಹುಡುಗನ ಜೀವನೋಪಾಯಕ್ಕೆ ಧಕ್ಕೆ ತರುತ್ತದೆ! ಅವನು ಮುಂದೆ ಯಾವ ಕೆಲಸಕ್ಕೆ ಅರ್ಜಿ ಹಾಕಿಕೊಳ್ಳಲಿ ಅವನ ಮುಖದಲ್ಲಿರುವ ಈ ಕರೀಗೀಟು-ಬ್ಲಾಕ್‌ಮಾರ್ಕ್‌-ಅವನಿಗೆ ಕಂಟಕಪ್ರಾಯವಾಗಿ ನಿಲ್ಲುತ್ತದೆ!-ಎಂದೆಲ್ಲ ಹೆದರಿಸಿದರು. ಆದರೆ ನನಗಿದ್ದದ್ದು ಆ ಭವಿಷ್ಯ ಜೀವನದ ಅಪಾಯ ಭಯವಲ್ಲ; ಅಂಗೈಗೆ ಬಿದ್ದ ಬೆತ್ತದೇಟಿನ ನೋವು!

ರಾಮರಾಯರು ನಮಗೆ ಲೋವರ್ ಸೆಕೆಂಡರಿ ತರಗತಿಗೆ ಇಟ್ಟಿದ್ದ ಇಂಗ್ಲಿಷ್ ಪಠ್ಯಪುಸ್ತಕದ ಪಾಠಕ್ಕೆ ಬರುತ್ತಿದ್ದರು. ಅದರಲ್ಲಿ ಕಾಲಿ ಸಿಬ್ಬರ್ ಎಂಬ ಕವಿಯ ‘ದಿ ಬ್ಲೈಂಡ್ ಬಾಯ್-(ಕುರುಡು ಹುಡುಗ)-ಎಂಬ ಒಂದು ಕಿರುಕವನ ಇತ್ತು. ಅದನ್ನು ಪಾಠ ಹೇಳುವಾಗ ಅವರು ನನ್ನನ್ನು ಆ ಕವಿಗೆ ಹೋಲಿಸಿ ಕಾಲಿ ಸಿಬ್ಬರ್ ಎಂದು ಕರೆಯುತ್ತಿದ್ದರು. ಬಹುಶಃ ನಾನು, ಆ ಕವನದ ಮೇಲುಭಾಗದಲ್ಲಿದ್ದು, ಅಂದಿನ ಇಂಗ್ಲಿಷರ ಪದ್ಧತಿಯಂತೆ ಉದ್ದ ಕೂದಲಿನ ವ್ಹಿಗ್ ಧರಿಸಿದ್ದ ಕಾಲಿ ಸಿಬ್ಬರ್ ಕವಿಯ ಚಿತ್ರದಲ್ಲಿದ್ದಂತೆ ಉದ್ದವಾಗಿ ಹೆಗಲು ಮುಟ್ಟುವಂತೆ ಗುಂಗುರು ಕೂದಲು ಬಿಟ್ಟು ಮಧ್ಯೆ ಬೈತಲೆ ತೆಗೆದು ಬಾಚುತ್ತಿದ್ದುದರಿಂದ ನನ್ನನ್ನು ಅವನಿಗೆ ವಿನೋದಕ್ಕಾಗಿ ಹೋಲಿಸುತ್ತಿದ್ದರು ಎಂದು ಭಾವಿಸುತ್ತೇನೆ.

ಅದೇ ಪಠ್ಯಪುಸ್ತಕದಲ್ಲಿ ವರ್ಡ್ಸ್ ವರ್ತ್‌ಕವಿಯ ‘ವಿ ಆರ್ ಸೆವನ್’-‘ನಾವು ಏಳು ಮಕ್ಕಳು’-ಎಂಬುದೂ ಇತ್ತು. ನಮ್ಮ ಕೈಯಲ್ಲಿ ಅದನ್ನು ಬಾಯಿಪಾಠ ಮಾಡಿಸಿ ಅವರಿಗೆ ತಿಳಿದ ಮಟ್ಟಿಗೆ ಅರ್ಥ ಹೇಳುತ್ತಿದ್ದರೆಂದು ನನ್ನ ಭಾವನೆ. ಆದರೆ ನಮಗೆ ಆ ವಯಸ್ಸಿನಲ್ಲಿ ಆ ಕವನದ ಧ್ವನಿಯಾಗಲಿ ಅದರ ಹಿರಿಮೆಯಾಗಲಿ ಒಂದಿನಿತೂ ಗ್ರಾಹ್ಯವಾಗುತ್ತಿತ್ತೆಂದು ನನಗೆ ಅನ್ನಿಸುವುದಿಲ್ಲ. ಆ ಕವನದಲ್ಲಿಯೆ ಬರುವ ಬಾಲಕನಿಗೆ ಮೃತ್ಯು ಅರ್ಥವಾಗದಂತೆ ಉಪಾಧ್ಯಾಯರಿಗೂ ಆಗಿತ್ತೆಂದು ನಾನು ಹೇಳಲಾರೆ. ಎಷ್ಟೋ ವರ್ಷಗಳ ತರುವಾಯ ನಾನು ಮೈಸೂರಿಗೆ ಹೋದಮೇಲೆ, ನನ್ನಲ್ಲಿಯೂ ಕವಿತಾ ಸ್ಫೂರ್ತಿ ಸೆಲೆಯೊಡೆದ ಮೇಲೆ, ಆ ವಿಚಾರವಾದ ಕಾವ್ಯವಿಮರ್ಶೆಯನ್ನೂ ಓದಿ ಕೇಳಿಯಾದ ಮೇಲೆ, ಆ ಸಣ್ಣ ಕವನದ ಮಹಾಧ್ವನಿಸಂಪತ್ತಿಗೆ ನನ್ನ ಹೃದಯ ಕಣ್ಣು ತೆರೆದದ್ದು!